2nd ಜುಲೈ ೨೦೧೮

ಚಿಂತನೆಗೆ, ಚಿಂತೆಗೆ ಈಡುಮಾಡಿತು

ನಮ್ಮ ದೇಶದಲ್ಲಿನ ಉನ್ನತ ಶಿಕ್ಷಣದ ಗತಿಸ್ಥಿತಿ ನಾವೆಲ್ಲ ಬಹಳ ಕಾಳಜಿಯಿಂದ, ಆತಂಕದಿಂದ ಪರಿಭಾವಿಸಬೇಕಾದ ವಿಷಯ. ಅದನ್ನು ಮುಖ್ಯವಾಗಿಟ್ಟುಕೊಂಡು ಸಂಚಿಕೆ ಯೊಂದನ್ನು ಹೊರತಂದದ್ದಕ್ಕೆ ಅಭಿನಂದನೆಗಳು. ಈ ವಿಷಯದಮೇಲೆ ಇನ್ನೂ ಹಲವು ಲೇಖನಗಳನ್ನು ಬರೆಸಬೇಕಿತ್ತು. ಆದರೆ, ಈಗಿರುವಂತೆ ಕೂಡ ಸಂಚಿಕೆಯು ಸಂಗ್ರಹಯೋಗ್ಯ ವಾಗಿದೆ. ವಿಶೇಷವಾಗಿ, ರಾಕೇಶ್ ಬಟಬ್ಯಾಲ್ ಅವರು ಜೆಎನ್‍ಯು ಕುರಿತು ಬರೆದ ಪುಸ್ತಕದ ಉದ್ಧೃತಭಾಗಳು, ಹಾಗೂ ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ ಅವರ ಲೇಖನ ನಮ್ಮಲ್ಲಿನ ಉನ್ನತ ಶಿಕ್ಷಣ ವ್ಯವಸ್ಥೆ ಕುರಿತು ಮುಂದಿಡುವ ಆಲೋಚನೆಗಳು ಹಾಗೂ ಎತ್ತುವ ಪ್ರಶ್ನೆಗಳು ನಮ್ಮನ್ನು ಚಿಂತನೆಗೆ, ಚಿಂತೆಗೆ ಈಡುಮಾಡುವಂಥವು!

ನಾರಾಯಣಸ್ವಾಮಿ ಅವರು ತಮ್ಮ ಲೇಖನದ ಮೊದಲ ಮುಕ್ಕಾಲು ಭಾಗದಲ್ಲಿ ಹೇಳುವುದೆಲ್ಲವೂ ನಾವು ಮನನಮಾಡಿ ಒಪ್ಪತಕ್ಕಂಥ ಮಾತಾಗಿದೆ. ಆದರೆ ಲೇಖನದ ಕಡೆಯ ಭಾಗದಲ್ಲಿ ಅವರು, ಅಮೆರಿಕೆಯಲ್ಲಿ ಆಗುತ್ತಬಂದಿರುವಂತೆ, ಭಾರತದ ವಿಶ್ವವಿದ್ಯಾಲಯಗಳು ಕೂಡ ಸೈನ್ಯ ಮತ್ತು ರಕ್ಷಣೆಗೆ ಸಂಬಂಧಿಸಿದ ಉದ್ಯಮಗಳಿಂದ ಕಲಿಕೆ, ಬೋಧನೆ, ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳಿಗಾಗಿ ದೇಣಿಗೆಯನ್ನು ಪಡೆಯಬೇಕು ಎಂದಿದ್ದಾರೆ. ಆ ಮಾತನ್ನು ಒಪ್ಪುವುದು ತುಂಬ ಕಷ್ಟ. ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಣದ ಹಿನ್ನೆಲೆಮುನ್ನೆಲೆಗಳಲ್ಲಿ ಸೈನ್ಯ ಹಾಗೂ ಸೇನಾ ಸಾಮಗ್ರಿಯನ್ನು ಉತ್ಪಾದಿಸಿ ಮಾರಾಟಮಾಡುವ ಉದ್ಯಮದ ಕೈವಾಡವಿರುವಂಥ ಪರಿಸ್ಥಿತಿಯು ನಮ್ಮನ್ನು ಹಲವು ರೀತಿಯ ಧರ್ಮ ಸಂದಿಗ್ಧತೆ ಮತ್ತು ಧರ್ಮ ಸಂಕಟಗಳಿಗೆ ಒಡ್ಡುತ್ತದೆ; ಒಡ್ಡಬೇಕು.

ಅಮೆರಿಕೆಯಲ್ಲಿ ಸೈನ್ಯ ಮತ್ತು ಯುದ್ಧ ಸಂಬಂಧದ ಉದ್ಯಮಗಳ ಕೂಟ (military- industrial complex) ಅನ್ನುವಂಥದು ಕಳೆದ ಎಪ್ಪತ್ತು-ಎಂಬತ್ತು ವರ್ಷಗಳಿಂದ ಇರುತ್ತ, ಬೆಳೆಯುತ್ತ ಬರುತ್ತಿರುವ ಪರಿ ಅಲ್ಲಿನ ಪ್ರಜಾಸತ್ತೆಗೆ ಮತ್ತು ಜಗತ್ತಿನ ಉಳಿದೆಡೆಯ ಪ್ರಜಾಸತ್ತೆಗೆ ಎಷ್ಟು ಮಾರಕವಾಗಿದೆ ಅನ್ನುವುದು ಎಲ್ಲ ವಿವೇಕವಂತರಿಗೆ ತಿಳಿದಿರುವ ವಿಷಯ, ಅವರನ್ನು ನಿತ್ಯ ಆತಂಕದಲ್ಲಿಟ್ಟಿರುವ ವಿಷಯ. ಆದರೆ ಆ ತಮ್ಮ ಹೊಳಹನ್ನು ಮುಂದಿಡುವಾಗ ನಾರಾಯಣಸ್ವಾಮಿಯವರ ಲೇಖನದಲ್ಲಿ ಆ ತಿಳಿವಳಿಕೆಯಿಲ್ಲ, ಆ ಭಾವದ ಸುಳಿವಿಲ್ಲ.

ಕಂಪ್ಯೂಟರ್ ತಂತ್ರಜ್ಞಾನ, ಅಂತರ್ಜಾಲ, ಮೋಬೈಲು ಮುಂತಾದ ಅನೇಕಾನೇಕ ಆವಿಷ್ಕಾರಗಳಾದದ್ದು ಸೈನ್ಯದ ಬಳಕೆಗಾಗಿ; ಅಲ್ಲದೆ, ಅವು ಸುಧಾರಣೆಗೊಂಡು ಸಾರ್ವಜನಿಕ, ಸಾರ್ವತ್ರಿಕ ಬಳಕೆಗೆ ಸಂದದ್ದು ಕೂಡ ಸೈನ್ಯ ಅವುಗಳನ್ನು ವ್ಯಾಪಕವಾಗಿ, ಸಲೀಸಾಗಿ ಬಳಸುವಂತಾಗಬೇಕು ಎಂಬ ಗುರಿಯಿಂದಾಗಿ ಎಂಬುದೆಲ್ಲ ಗೊತ್ತಿದ್ದೂ ಈ ಮಾತಾಡುತ್ತಿದ್ದೇನೆ. ಪ್ರಸಿದ್ಧ ಚಿಂತಕ ವಾಲ್ಟರ್ ಬೆಂಜಮಿನ್ನನ ಮಾತೊಂದನ್ನು ಕನ್ನಡಿಸಿ ಹೇಳಿಕೊಳ್ಳುವುದಾರೆ: ನಾಗರಿಕತೆ ಮತ್ತು ಸಂಸ್ಕೃತಿಯ ಯಾವುದೇ ಕುರುಹು, ನಮ್ಮ ಭಯಂಕರ ಬರ್ಬರತೆಯ ಕುರುಹು ಕೂಡ ಹೌದು. ಇದಕ್ಕೆ ಅಪವಾದವಿಲ್ಲ.

ಇಂಥ ಇಬ್ಬಗೆಯ ಸ್ಥಿತಿಯು ಮನುಷ್ಯನೆಂಬ ಬುದ್ಧಿವಂತ ಪ್ರಾಣಿಯ ಇತಿಹಾಸದ ಅಳಿಸ ಲಾಗದ ಪಾಡು, ಬಿಡಿಸಲಾಗದ ಒಗಟು. ಆದರೂ, ಪರಾಕ್ರಮಣ, ಬೇಹುಗಾರಿಕೆ ಹಾಗೂ ದಬ್ಬಾಳಿಕೆಯ ತುಡಿತಗಳೇ ಬುನಾದಿಯಾಗುಳ್ಳ ವಿಜ್ಞಾನದಿಂದ ನಾವು ಯಾವ ಬಗೆಯ ನಾಗರಿಕತೆ ಕಟ್ಟಿಕೊಳ್ಳುತ್ತಿದ್ದೇವೆಯಪ್ಪಾ ಎಂಬಂಥ ಸಂಕಟವಾದರೂ ಇರಬೇಕಲ್ಲವೆ ನಮಗೆ?

ರಾಕೇಶ್ ಬಟಬ್ಯಾಲ್ ಅವರ ಲೇಖನದ ಕೆಲವು ಭಾಗಗಳ ಅನುವಾದ ಓದಿದಮೇಲೆ, ಅವರ ಪುಸ್ತಕ ಓದಲೇಬೇಕೆಂದು ಮನಸ್ಸಾಗುತ್ತದೆ. ಅಂಥದೊಂದು ವಿಶ್ವವಿದ್ಯಾಲಯವನ್ನು ಹುಟ್ಟು ಹಾಕುವುದರ ವಿಷಯವಾಗಿ ಅರುವತ್ತರ ದಶಕದ ನಮ್ಮ ಸಂಸತ್ತಿನ ಎರಡೂ ಸದನಗಳಲ್ಲಿ ನಡೆದ ಚರ್ಚೆಯ ತೀವ್ರತೆ, ಪ್ರಾಮಾಣಿಕತೆ ಮತ್ತು ಕಾಳಜಿಗಳ ಅವರ ಕಥನ ಮಾರ್ಮಿಕವಾಗಿದೆ. ಆದರೆ, ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಜೆಎನ್‍ಯು ಆಡಳಿತವರ್ಗ ಮತ್ತು ಅದರ ಹಿಂದಿರುವ ಇಂದಿನ ಕೇಂದ್ರ ಸರಕಾರ ಆ ಸಂಸ್ಥೆಯನ್ನು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡು ಹಿಂಡುತ್ತಿರುವ ಪರಿಯು ಭಾರತದ ಅಸಲಿ ಧೀಮಂತಿಕೆಯಮೇಲೆ ಮಾಡಿದ ದಾಳಿಯಾಗಿದೆ.

ಅಲ್ಲಿನ ಕನ್ನಡ ಪೀಠದ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಹೇಳುವಂತೆ, ‘ಇಲ್ಲಿಯವರೆಗೆ ನೀವೆಲ್ಲ ಪ್ರೀತಿಸಿದ ಜೆಎನ್‍ಯು ಈಗಿಲ್ಲ; ಇನ್ನು ಮುಂದೆ ಇರುವುದಿಲ್ಲ. ಅದರ ಕಥೆ ಮುಗಿಯಿತು. ಈಗ ಹೊಸದಾಗಿ ನೂರಾನಲವತ್ತು ನೇಮಕಾತಿಗಳಾಗಿವೆ. ಹಾಗೆ ನೇಮಕಗೊಂಡವರು ಇಲ್ಲಿ ನಲವತ್ತು ವರ್ಷ ಇರುತ್ತಾರೆ. ಇನ್ನು ಇಲ್ಲಿ, ಈ ವಿಶ್ವವಿದ್ಯಾಲಯನ್ನು ತಮ್ಮ ಅವಿದ್ಯೆಯ ಹಾದಿಗೆ ತಿರುಗಿಸಬೇಕೆಂದು ಮನಸ್ಸುಮಾಡಿರುವ ಶಕ್ತಿಗಳ ಕೈಯೇ ಮೇಲಾಗಿರುತ್ತದೆ.’ ಇಂಥ ಹೊತ್ತಲ್ಲಿ, ಸಮಾಜಮುಖಿ ಪತ್ರಿಕೆಯು ಜೆಎನ್‍ಯು ಹುಟ್ಟಿ ಬೆಳೆದ ಪರಿಯ ನೆನಪು ಮಾಡಿಕೊಟ್ಟು ಉಪಕರಿಸಿದೆ. ಥ್ಯಾಂಕ್ಸ್.

ಕಡೆಯದಾಗಿ, ಪತ್ರಿಕೆಯಲ್ಲಿ ಢಾಳಾದ ಬಣ್ಣದ ಫೋಟೋಗಳು ಅಗತ್ಯಕ್ಕಿಂತ ಹೆಚ್ಚಾಗಿ, ದೊಡ್ಡದಾಗಿ ಇವೆ. ಗಂಭೀರವಾದ ಓದು ಮತ್ತು ಮನನ ಸಾಧ್ಯವಾಗುವಂತೆ, ಫೋಟೋಗಳ ಬಣ್ಣಗಾರಿಕೆ, ಸಂಖ್ಯೆ ಮತ್ತು ಗಾತ್ರಗಳು ಹಿತಮಿತವಾಗಿದ್ದರೆ ಚೆನ್ನು ಮತ್ತು ಅವುಗಳ ಮುದ್ರಣ, ವಿನ್ಯಾಸಗಳಲ್ಲಿ ಸುಧಾರಣೆಯಾದರೆ ಒಳಿತು ಎಂದು ಸ್ನೇಹದಿಂದ ಹೇಳಿಕೊಳ್ಳುತ್ತಿದ್ದೇನೆ.

-ರಘುನಂದನ
ಕವಿ, ನಾಟಕಕಾರ, ರಂಗ ನಿರ್ದೇಶಕ
ಬೆಂಗಳೂರು.

ಸಮಾಜಮುಖಿ ಲೋಕಾರ್ಪಣೆ

ಫೆಬ್ರವರಿ ೨೦೧೮