2nd ಜುಲೈ ೨೦೧೮

ಉನ್ನತ ಶಿಕ್ಷಣ: ಮುಂದುವರಿದ ಚರ್ಚೆ

ಸಮಾಜಮುಖಿಯು ಉನ್ನತ ಶಿಕ್ಷಣದ ಕುರಿತು ಅನೇಕ ಮಾಹಿತಿಗಳನ್ನು ನೀಡಿದ್ದು ಅವು ಉಪಯುಕ್ತವಾಗಿವೆ. ಅವಕ್ಕೆ ಇನ್ನೊಂದಷ್ಟು ವಿವರಗಳನ್ನು ಸೇರಿಸಬಯಸುತ್ತೇನೆ.

ಉನ್ನತ ಶಿಕ್ಷಣವು ಇದೀಗ ಎತ್ತ ಸಾಗುತ್ತಿದೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳೂ ಅಧ್ಯಾಪಕರೂ ಬಹಳ ಗಂಭೀರವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಉನ್ನತ ಶಿಕ್ಷಣದ ಪಠ್ಯಕ್ರಮ, ಮಾಧ್ಯಮ, ಸಂಶೋಧನೆ/ಅಧ್ಯಯನ, ಬೋಧನೆ, ಮತ್ತು ಮೌಲ್ಯಮಾಪನ ವಿಧಾನಗಳು ತೀವ್ರವಾದ ಬದಲಾವಣೆಗೆ ಒಳಗಾಗುತ್ತಿರುವ ಈ ಕಾಲದಲ್ಲಿ ಒಂದು ಬಗೆಯ ಮುಗ್ಧತೆ ಅಥವಾ ಉದಾಸೀನತೆಯನ್ನು ತೋರುವುದು ನಮ್ಮನ್ನು ಇನ್ನಷ್ಟು ಅಧಃಪತನಕ್ಕೆ ತಳ್ಳಲಿದೆ. ಬೇರೆಯವರಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ವೇತನ ಪಡೆಯುತ್ತಿರುವ ಅಧ್ಯಾಪಕ ವೃಂದವು ತಮ್ಮ ಸುತ್ತಣ ಬೆಳವಣಿಗೆಗೆ, ಅದೂ ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವಾಗ, ಕಣ್ಣು ಮುಚ್ಚಿ ಕುಳಿತಿರುವುದು ಅಪೇಕ್ಷಣೀಯವಲ್ಲ.

ನಾನು ಸುಮಾರು 17 ವರ್ಷಗಳ ಕಾಲ ಅಮೇರಿಕಾದ 70 ಉನ್ನತ ಶಿಕ್ಷಣ ಸಂಸ್ಥೆಗಳೊಡನೆ ನಿಕಟ ಸಂಬಂಧ ಇರಿಸಿಕೊಂಡು ಕೆಲಸ ಮಾಡಿದ್ದೆ. ಇಂಗ್ಲಂಡ್ ಹಾಗೂ ಆಸ್ಟ್ರೇಲಿಯಾದ ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ಆಶೋತ್ತರಗಳಿಗೆ ಕಿವಿಗೊಡುತ್ತಿದ್ದೆ. ಒಂದೇ ಮಾತಿನಲ್ಲಿ ಸರಳವಾಗಿ ಹೇಳಬೇಕೆಂದರೆ, ಅವರೆಲ್ಲರೂ ಸದ್ಯದ ಜಾಗತೀಕರಣದ ಪರಿಣಾಮವಾಗಿ ಕಾಣಿಸಿಕೊಂಡ ಉದಾರೀಕರಣ, ಖಾಸಗೀಕರಣ, ಮತ್ತು ವ್ಯಾಪಾರೀಕರಣದ ಪೂರ್ಣ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಆದರೆ ನಾವು ಯಾವುದೇ ಪ್ರಯೋಜನ ಪಡೆಯುವಲ್ಲಿ ವಿಫಲರಾಗಿದ್ದೇವೆ.

ಉನ್ನತ ಶಿಕ್ಷಣದ ಅಂತಾರಾಷ್ಟ್ರೀಯಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದು. ‘ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ಈ ಅಂತಾರಾಷ್ಟ್ರೀಯಕರಣ ಪ್ರಕ್ರಿಯೆ ಅಗತ್ಯ’ ಎಂದು ಯು.ಜಿ.ಸಿ.ಯೂ ಸೇರಿದಂತೆ ಭಾರತದ ಹೆಚ್ಚಿನ ಶಿಕ್ಷಣ ತಜ್ಞರು ಭಾವಿಸಿದ್ದಾರೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಈ ವಾದದ ಹಿಂದೆ ಸರಕಾರಗಳ ಪಾಲಿಗೆ ‘ಅನುತ್ಪಾದಕ’ ವಸ್ತುವಾಗಿದ್ದ ಉನ್ನತ ಶಿಕ್ಷಣವನ್ನು ‘ಲಾಭದಾಯಕ ಉದ್ದಿಮೆಯಾಗಿ’ ಮಾರ್ಪಡಿಸುವ ಹಠವಿದೆ. 1990ರ ದಶಕದಿಂದ ಆರಂಭವಾದ ಈ ವಾದದ ಪರಿಣಾಮವೋ ಎಂಬಂತೆ ಸರಕಾರಗಳು ನಿಧಾನವಾಗಿ ಉನ್ನತ ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯತೊಡಗಿದುವು (ಈ ಪ್ರತಿಕ್ರಿಯೆ ಬರೆಯುತ್ತಿದ್ದಂತೆ ಜೆ.ಎನ್.ಯು.ಗೆ ಪೂರ್ಣ ಸ್ವಾಯತ್ತೆ ದೊರೆತು ಅದು ತನಗೆ ಬೇಕಾದ ಹಣವನ್ನು ಸಂಗ್ರಹಿಸಲು ಯು.ಜಿ.ಸಿ. ಅನುಮತಿ ನೀಡಿದೆ. ಇದರ ಪರಿಣಾಮವೋ ಎಂಬಂತೆ ಸ್ಕೂಲ್ ಆಫ್ ಇಂಜಿನೀಯರಿಂಗ್ ಆರಂಭವಾಗಿದೆ). ಹೀಗೆ ಸರಕಾರ ಹಿಂದೆ ಸರಿಯುತ್ತಿದ್ದಂತೆ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ಆರ್ಥಿಕ ಭದ್ರತೆಗಾಗಿ ನಯವಾದ ಬಗೆಯಲ್ಲಿ ‘ತಲೆಗಂದಾಯ’ ವಸೂಲು ಸುರು ಮಾಡಿವೆ. ಇನ್ಸ್ಟಿಟ್ಯೂಟ್ ಆಫ್ ಇಂಟರ್‍ನೇಶನಲ್ ಎಜುಕೇಶನ್ ಎಂಬ ಹೆಸರಿನ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯ ಪ್ರಕಾರ 2001-2002 ರಲ್ಲಿ ಅಮೇರಿಕಾ ದೇಶದಲ್ಲಿ ಹೊರದೇಶದಿಂದ ಆಗಮಿಸಿದ 5,83,000 ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು, ಅದರಿಂದ ಆ ದೇಶಕ್ಕೆ 11.95 ಬಿಲಿಯನ್ ಡಾಲರ್ ಆದಾಯವಾಗಿದ್ದು, ಈ ಆದಾಯವು 2010-11 ರಲ್ಲಿ 32 ಬಿಲಿಯನ್ ಡಾಲರ್‍ಗೆ ಏರಿದೆ. ಆಷ್ಟ್ರೇಲಿಯಾದಲ್ಲಿ 2001-2002ರಲ್ಲಿ ಸುಮಾರು 2 ಲಕ್ಷ ಹೊರದೇಶದ ವಿದ್ಯಾರ್ಥಿಗಳು ಅಭ್ಯಸಿಸಿದ್ದು ಆಗ ಆ ದೇಶದ ಆದಾಯ 4.2 ಬಿಲಿಯನ್ ಆಷ್ಟ್ರೇಲಿಯನ್ ಡಾಲರ್ ಆಗಿತ್ತು. ಜಾಗತೀಕರಣದ ಪರಿಣಾಮವಾಗಿ ಈ ಆದಾಯವು 2010-11 ರಲ್ಲಿ 14 ಬಿಲಿಯನ್ ಡಾಲರ್‍ಗೆ ಏರಿತು. ಸಣ್ಣ ದೇಶ ನ್ಯೂಜಿಲೇಂಡ್ ನಲ್ಲಿ 2001-2012ರಲ್ಲಿ ಸುಮಾರು ಒಂದು ಲಕ್ಷ ವಿದೇಶೀ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು ಆ ದೇಶದ ಬೊಕ್ಕಸಕ್ಕೆ 1.7 ಬಿಲಿಯನ್ ಡಾಲರ್ ಆದಾಯವಾಗಿದ್ದು 2010-11 ರಲ್ಲಿ ಅದು 6 ಬಿಲಿಯನ್ ಡಾಲರ್ ಗಳಿಗೆ ಏರಿತು. ಈ ಬಗೆಯ ಆದಾಯದ ಕುರಿತು ಇತರ ದೇಶಗಳು ಕಣ್ಣುಮುಚ್ಚಿ ಕುಳಿತಿರಲು ಸಾಧ್ಯವಿಲ್ಲ. ಕಾರಣ 21ನೇ ಶತಮಾನದ ಆರಂಭಕ್ಕೆ ಉನ್ನತ ಶಿಕ್ಷಣವು ಬಿಲಿಯನ್ ಡಾಲರ್ ಆದಾಯದ ಪ್ರಶ್ನೆಯಾಗಿ ಮಾರ್ಪಟ್ಟಿದೆ.

ಭಾರತದಲ್ಲಿ ಶಿಕ್ಷಣದ ಅಂತರರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ ಹಾಗೂ ಡಬ್ಲ್ಯುಟಿಒ ಒಪ್ಪಂದದ ಮೇರೆಗೆ ಆರಂಭವಾಗಿದೆ. ಎಪ್ರಿಲ್ 1, 2005 ರಂದು ಜಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, 10ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣವನ್ನು ‘Educational Services as sector of industry under GATS; ಎಂದು ಇತರ 12 ವಿಷಯಗಳೊಂದಿಗೆ ಸೇರಿಸಿ ಘೋಷಿಸಿತು. ಇಂದು ನಾವು ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಆಗಾಗ ಅಸಹನೆ ಪ್ರಕಟಿಸುತ್ತೇವೆ. ಆದರೆ ಅದು ಸರಕಾರದ ಒಂದು ಅಂಗೀಕೃತ ಯೋಜನೆಯಾಗಿದೆ ಎಂಬುದನ್ನು ಮರೆಯಬಾರದು. ಇಂಥದ್ದರ ವಿರುದ್ಧ ನಾವೆಲ್ಲ ಮಾಡಿದ್ದ ಪ್ರತಿಭಟನೆಗೆ ಆಗ ಸಾಕಷ್ಟು ಬೆಂಬಲವೂ ದೊರಕಲಿಲ್ಲ ಮಾತ್ರವಲ್ಲ ಬೀದಿಗಿಳಿದ ನಮ್ಮನ್ನು ಅಪಹಾಸ್ಯ ಮಾಡಲಾಯಿತು. ಇರಲಿ, ಹೀಗೆ ಉನ್ನತ ಶಿಕ್ಷಣವನ್ನು ಕೈಗಾರಿಕೆಗಳ ಭಾಗವಾಗಿ ಪರಿಗಣಿಸಿದ ಆನಂತರ ಭಾರತವೂ ಸೇರಿದಂತೆ ಅನೇಕ ದೇಶಗಳು ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಸಜ್ಜಾದುವು. ಇದಕ್ಕಾಗಿ ಯುಜಿಸಿಯು ಉಪಸಮಿತಿಯೊಂದನ್ನು ಸ್ಥಾಪಿಸಿತು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಲಾರಂಭಿಸಿದ ಈ ಸಮಿತಿಯು ಯುಜಿಸಿಗೆ ಮಾಡಿದ ಶಿಫಾರಸುಗಳಲ್ಲಿ ಈ ಕೆಳಗಿನ ಮೂರನ್ನು ಇದೀಗ ಜಾರಿಗೆ ತರಲು ಸರಕಾರ ತೀವ್ರವಾಗಿ ಪ್ರಯತ್ನಿಸುತ್ತಿದೆ:

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ: ಈ ಶಿಫಾರಸಿನ ಪ್ರಕಾರ 2020ನೇ ಇಸವಿಯ ಹೊತ್ತಿಗೆ ಭಾರತದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿದೇಶೀ ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನಾವು ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ತಯಾರಾಗಬೇಕಾಗಿದೆ. ಜೊತೆಗೆ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ಅಧ್ಯಯನ ಮಾಡಲು ಆಗಮಿಸುವ ವಿದ್ಯಾರ್ಥಿಗಳು ವಿಭಾಗಗಳ ಗೋಡೆಗಳನ್ನು ನಿಧಾನವಾಗಿ ಒಡೆಯಲಿದ್ದಾರೆ. ಒಂದು ಸೆಮೆಸ್ಟರ್‍ನಲ್ಲಿ ಕನ್ನಡ ಜಾನಪದವನ್ನು ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಯು ಇನ್ನೊಂದು ಸೆಮೆಸ್ಟರ್‍ನಲ್ಲಿ ತಮಿಳು ಜಾನಪದವನ್ನು ಅಭ್ಯಸಿಸಲು ತಮಿಳು ನಾಡಿಗೆ ಹೋಗುವ ದಿನ ದೂರವಿಲ್ಲ.

ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು: ಈ ಯೋಜನೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳುತ್ತವೆ. ಆ ಮೂಲಕ ಪರಸ್ಪರ ಮಾಹಿತಿ ಹಾಗೂ ಪರಿಣತರ ವಿನಿಮಯ ಸಾಧ್ಯವಾಗುತ್ತದೆ. ದೆಹಲಿಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ವಿದೇಶೀ ಅಧ್ಯಾಪಕರು ಪಾಠ ಮಾಡುತ್ತಿದ್ದಾರೆ. ಈ ಬಗೆಯ ಸಹಭಾಗಿತ್ವದಿಂದ ಅನಿವಾಸಿ ಭಾರತೀಯರು ಇಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಬಹುದು ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಭಾರತದ ವಿವಿಗಳಲ್ಲಿ ಕಲಿಯಲು ದೊಡ್ಡ ಪ್ರಮಾಣದಲ್ಲಿ ಮುಂದೆ ಬರಬಹುದು. ಇದರಿಂದಾಗಿ ವಿವಿಗಳ ಸಂಪತ್ತಿನ ಸ್ಥಿತಿಗತಿಗಳು ಸುಧಾರಿಸುತ್ತವೆ. ಪರಿಣಾಮವಾಗಿ ಪಾಠಪ್ರಚನಗಳು, ಅಧ್ಯಯನ, ಸಂಶೋಧನಾ ಕಾರ್ಯ, ಮೂಲಭೂತ ಸೌಲಭ್ಯಗಳ ಗುಣಮಟ್ಟ ವರ್ಧಿಸಲಿದೆ. ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದಿಂದಾಗಿ ನಮ್ಮ ವಿಶ್ವವಿದ್ಯಾಲಯಗಳು ತುಲನಾತ್ಮಕವಾಗಿ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗುತ್ತವೆ. ಸರಕಾರದ ಹಸ್ತಕ್ಷೇಪ ಕಡಿಮೆಯಿರುವುದರಿಂದ ನಿರ್ಬಂಧ ನಿಯಮಗಳೂ ಕಡಿಮೆಯಾಗಿ ಖಾಸಗಿ ವಿಶ್ವವಿದ್ಯಾಲಯಗಳು ಹೊಸಹೊಸ ವ್ಯಾಸಂಗ ವಿಭಾಗಗಳನ್ನು ಆರಂಭಿಸಬಹುದು. ಹೆಚ್ಚಿನ ಸ್ವಾಯತ್ತೆಯಿಂದಾಗಿ ತಮ್ಮದೇ ಆದ ರೀತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಕ್ರಮಗಳನ್ನು ಕೈಗೊಳ್ಳಬಹುದು. ಈ ಬದಲಾವಣೆಗಳು ಉನ್ನತ ಶಿಕ್ಷಣಕ್ಷೇತ್ರದಲ್ಲಿ ಹೊಸ ಗುಣಾತ್ಮಕ ಆವಿಷ್ಕಾರ ತಂದಾವೆಯೇ? ಅಥವಾ ವಾಣಿಜ್ಯೀಕರಣದ ತುತ್ತತುದಿಗೆ ಸರಿದು ಇನ್ನಷ್ಟು ಗುಣಮಟ್ಟ ಕುಸಿತ, ಲಾಭಕೋರತನ, ಸ್ವಜನ ಪಕ್ಷಪಾತ ಮತ್ತು ಸ್ವಚ್ಛಂದ ಪ್ರವೃತ್ತಿಗೆ ಹಾದಿ ಮಾಡಿಕೊಟ್ಟೀತೇ? ಎಂದು ಕಾದು ನೋಡಬೇಕು. ಪಾಶ್ಚಾತ್ಯ ಮಾದರಿಯ ವಿಶ್ವವಿದ್ಯಾಲಯಗಳು ಮತ್ತು ಅಲ್ಲಿಯ ಬೋಧನೆಯ ಕಲಿಕೆಯ ಗುಣಮಟ್ಟ ಇತ್ಯಾದಿಗಳು ಮುಂದಿನ ದಿನಗಳಲ್ಲಿ ನಮಗೊಂದು ಸವಾಲಾಗುವುದಂತೂ ನಿರ್ವಿವಾದ.

ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ: ಭಾರತ ದೇಶದ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಆರಂಭವಾಗಲಿರುವ ಈ ವಿಶೇಷ ಶಿಕ್ಷಣ ವಲಯಗಳಲ್ಲಿ ಭಾರತೀಯ ಮತ್ತು ವಿದೇಶೀಯ ವಿಶ್ವವಿದ್ಯಾಲಯಗಳು ಜಂಟಿಯಾಗಿ ಕೆಲಸ ಮಾಡುತ್ತವೆ. ಇಲ್ಲಿನ ಪಠ್ಯಕ್ರಮಗಳನ್ನು ಎರಡೂ ದೇಶಗಳ ವಿಶ್ವವಿದ್ಯಾಲಯಗಳು ಜಂಟಿಯಾಗಿ ರೂಪಿಸುತ್ತವೆ. ಹಾಗೆಯೇ ಎರಡು ದೇಶಗಳ ಅಧ್ಯಾಪಕರು ಈ ವಲಯಗಳಲ್ಲಿ ಜಂಟಿಯಾಗಿ ಕೆಲಸಮಾಡುತ್ತಾರೆ.

ಸದ್ಯಕ್ಕೆ ಈ ಪ್ರಯೋಗಳು ಕಾರ್ಪೋರೇಟ್ ಜಗತ್ತಿಗೆ ಬೇಕಾದ ಗುಲಾಮೀ ಭಾರತೀಯರನ್ನು ಸೃಷ್ಟಿಸಿಕೊಡುವಲ್ಲಿ ಸಫಲವಾಗಿವೆ. ಮುಖ್ಯವಾಗಿ ಗಮನಿಸಬೇಕಾದ್ದರೆಂದರೆ ಭಾರತಕ್ಕೆ ಅತಿ ಮುಖ್ಯವಾದ ಸಾಮಾಜಿಕ ನ್ಯಾಯದ ಪ್ರಶ್ನೆ ಈ ಬೆಳವಣಿಗೆಯೊಂದಿಗೆ ಹಿನ್ನೆಲೆಗೆ ಸರಿದಿರುವುದು. ಇವತ್ತು ಮೀಸಲಾತಿಯ ವಿರುದ್ಧ ಧ್ವನಿ ಎತ್ತುತ್ತಿರುವ ಭಾರತೀಯ ಯುವಕರನೇಕರು ಜಾಗತೀಕರಣದ ಫಲವಾಗಿ ಕಾಣಿಸಿಕೊಂಡ ಉನ್ನತ ಶಿಕ್ಷಣದ ಫಲಾನುಭವಿಗಳೇ ಆಗಿದ್ದಾರೆ ಎಂಬುದನ್ನು ಮರೆಯಬಾರದು.

ಇಂದು ಶಿಕ್ಷಣವು ಒಂದು ರಾಜ್ಯದ, ಒಂದು ವಿಶ್ವವಿದ್ಯಾಲಯದ, ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ ಉಳಿಯುತ್ತಿಲ್ಲ. ಉನ್ನತ ಶಿಕ್ಷಣವು ಇದೀಗ ‘ಸೀಮಾತೀತ’ ವಾಗುತ್ತಿದೆ. ಶಿಕ್ಷಣದ ಅಂತಾರಾಷ್ಟ್ರೀಕರಣದ ಪ್ರಕ್ರಿಯೆಯು ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳೆಲ್ಲ ಮರೆಸಿ, ‘ವಾಸನೆ ಬಣ್ಣ ರಹಿತವಾದ’ ಏಕರೂಪದ ವ್ಯವಸ್ಥೆಯೊಂದನ್ನು ಆಗು ಮಾಡುತ್ತಿದೆ. ಇವುಗಳ ಪರಿಣಾಮವೋ ಎಂಬಂತೆ ನಿಂತ ನೆಲದ ಬಗ್ಗೆ ಗೌರವವಿಲ್ಲದ, ಮಣ್ಣಿನ ವಾಸನೆಯ ಅರಿವಿಲ್ಲದ ಅಂತರರಾಷ್ಟ್ರೀಯ ಪ್ರಜೆಗಳು ನಿರ್ಮಾಣವಾಗುತ್ತಿದ್ದಾರೆ. ಇದರಿಂದಾಗಿ ನಮ್ಮ ರಾಷ್ಟ್ರೀಯ ಪರಿಕಲ್ಪನೆಗಳೇ ಬದಲಾಗುತ್ತಿವೆ.

ಮಾರುಕಟ್ಟೆಯ ಧ್ಯೇಯ ಧೋರಣೆಗಳೇ ಇಂದು ಉನ್ನತ ಶಿಕ್ಷಣವನ್ನು ನಿಯಂತ್ರಿಸುತ್ತಿವೆ. ಯಾರು, ಯಾವ ಪಠ್ಯವನ್ನು ಓದಬೇಕು, ಯಾವ ವ್ಯಾಸಂ ಗಕ್ಕೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದೆ? ಎಂಬುದನ್ನು ಗಮನಿಸಿ ಹೊಸ ಹೊಸ ಕೋರ್ಸುಗಳು ಶರವೇಗದಲ್ಲಿ ಆರಂಭವಾಗುತ್ತಿವೆ. ಮೂಲವಿಜ್ಞಾನದ ಹಾಗೂ ಕಲಾ ವಿಭಾಗದ ಪದವಿ ವ್ಯಾಸಂಗದ ಕಡೆಗೆ ಪ್ರತಿಭಾವಂತ ವಿದ್ಯಾರ್ಥಿಗಳು ಆಗಮಿಸುತ್ತಿಲ್ಲ. ಮಾನವಿಕಗಳು ಅನುತ್ಪಾದಕ ಎಂಬ ಮಾತನ್ನು ಈಗ ಧೈರ್ಯವಾಗಿ ಹೇಳಲಾಗುತ್ತಿದೆ. ಉದಾಹರಣೆಗೆ ದೂರವೇನೂ ಹೋಗಬೇಕಾಗಿಲ್ಲ. ನಮ್ಮ ಕರ್ನಾಟಕವನ್ನೇ ಗಮನಿಸೋಣ:

ಕೆಲವು ಉನ್ನತ ಶಿಕ್ಷಣ ಕೇಂದ್ರಗಳೂ ಸೇರಿದರೆ ಕರ್ನಾಟಕದಲ್ಲಿ ಸುಮಾರು 43 ಪ್ರಮುಖ ಸಂಶೋಧನಾ ಸಂಸ್ಥೆಗಳಿವೆ, ಇಲ್ಲಿ ಸಂಶೋಧನೆ ಮಾಡುತ್ತಿರುವವರ ಸಂಖ್ಯೆ ಸುಮಾರು 5000. ಇದು ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇಕಡಾ 0.008 ಆಗಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಸರಾಸರಿ 0.6 ಆಗಿದ್ದು ಕರ್ನಾಟಕ ರಾಜ್ಯವು ರಾಷ್ಟ್ರೀಯ ಸರಾಸರಿಗಿಂತ ಬಹಳ ಹಿಂದಿದೆ. ಹೀಗೆ ಸಂಖ್ಯಾ ದೃಷ್ಟಿಯಿಂದ ಹಿಂದೆ ಬಿದ್ದಿರುವ ಕರ್ನಾಟಕವು ಸಂಶೋಧನೆಯ ಗುಣಮಟ್ಟದ ದೃಷ್ಟಿಯಿಂದಲೂ ಮಹತ್ವದ್ದೇನನ್ನೂ ಸಾಧಿಸುತ್ತಿಲ್ಲ. ಒಂದೆರಡು ಅಪವಾದಗಳನ್ನು ಹೊರತು ಪಡಿಸಿದರೆ, ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತಾದ ನಮ್ಮ ಸಂಶೋಧನೆಗಳು ರಾಷ್ಟ್ರೀಯ ಮಟ್ಟದಲ್ಲಾಗಲೀ ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಮಹತ್ವದ ಚರ್ಚೆಗಳಿಗೆ ಎಡೆ ಮಾಡಿಕೊಟ್ಟದ್ದನ್ನು ನಾವು ಇತ್ತೀಚಿನ ದಿನಗಳಲ್ಲಿ ಕಂಡಿಲ್ಲ.

ಜೊತೆಗೆ ಸರಕಾರ (ಮುಖ್ಯವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರಿಗಳು) ಮತ್ತು ವಿಶ್ವವಿದ್ಯಾಲಯಗಳ ಆಡಳಿತಾಂಗಗಳು ಜೊತೆ ಸೇರಿಕೊಂಡು ಮಾನವಿಕಗಳನ್ನು ‘ಅನುತ್ಪಾದಕ’ ಎಂದು ಘೋಷಿಸಲು ಸುರುಮಾಡಿವೆ.

ಮಾನವಿಕಗಳನ್ನು ಶುದ್ಧ ವಿಜ್ಞಾನದೊಂದಿಗೆ ಹೋಲಿಸಿ ತಕ್ಷಣದ ಫಲಿತಾಂಶಕ್ಕಾಗಿ ಕಾಯುವ, ಯುವಕರಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋವಕಾಶ ಕಲ್ಪಿಸುವ ಇಲ್ಲವೇ ಅವರನ್ನು ವಿದೇಶಕ್ಕೆ ರಫ್ತು ಮಾಡುವ (12ನೇ ಪಂಚವಾರ್ಷಿಕ ಯೋಜನೆಯು ಕುಶಲಕರ್ಮಿಗಳನ್ನು 2020ನೇ ಇಸವಿಯಲ್ಲಿ ಚೀನಾ ದೇಶಕ್ಕೆ ಕಳಿಸುವ ಬಗ್ಗೆ ಉತ್ಸಾಹದಿಂದ ಮಾತಾಡುತ್ತದೆ) ಬಗ್ಗೆ ಇದೀಗ ಸರಕಾರ ಯೋಚಿಸುತ್ತಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜಗತ್ತಿಗೆ ಇವತ್ತು ಮಾನವಿಕಗಳು ಬೇಡವಾಗಿವೆ. ಇಂಥಲ್ಲಿ ಸಹಜವಾಗಿಯೇ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಮಾನವಿಕಗಳಿಗೆ ಮಹತ್ವ ಕಡಿಮೆಯಾಗುತ್ತದೆ. ಈ ನಡುವೆ, ಇಂಥ ವಿಷಯಗಳ ಕುರಿತು ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಸರಕಾರಗಳೇ ಮರೆತಿವೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈಗ ಅಂಥ ಬೌದ್ಧಿಕತೆ ಕಳೆಗುಂದುತ್ತಿದೆ. ಸಮಕಾಲೀನ ರಾಜಕಾರಣವು ಹೀಗೆ ಮಾನವಿಕಗಳನ್ನು ಗೌಣಗೊಳಿಸುತ್ತಿರುವಾಗ ಅದನ್ನು ದಿಟ್ಟವಾಗಿ ಇದಿರಿಸುವ ಎಚ್ಚರವನ್ನೂ ಮಾನವಿಕಗಳಲ್ಲಿ ಕೆಲಸ ಮಾಡುತ್ತಿರುವ ಸಂಶೋಧಕರು ತೋರಿಸುತ್ತಿಲ್ಲ. ಮಾನವಿಕಗಳೇ ಪ್ರಧಾನವಾಗಿರುವ ಭಾರತದ ಹಲವು ವಿಶ್ವವಿದ್ಯಾಲಯಗಳು ಈಗ ತಮ್ಮ ಗತಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡಲಾಗಿದೆ.

ಇಂಥ ಬೆಳವಣಿಗೆಗೆಳ ನಡುವೆ ಕನ್ನಡದಂಥ ಭಾಷೆ, ದಲಿತರು, ಬಡವರು -ಇವರನ್ನೆಲ್ಲ ಯಾರು ಕೇಳಬೇಕು?

-ಪುರುಷೋತ್ತಮ ಬಿಳಿಮಲೆ
ಮುಖ್ಯಸ್ಥರು, ಕನ್ನಡ ಅಧ್ಯಯನ ಸಂಸ್ಥೆ,
ಜವಾಹರಲಾಲ್ ನೆಹರೂ ವಿ.ವಿ., ನವದೆಹಲಿ.

ಸಮಾಜಮುಖಿ ಲೋಕಾರ್ಪಣೆ

ಫೆಬ್ರವರಿ ೨೦೧೮