2nd ಜುಲೈ ೨೦೧೮

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಮಂಜುನಾಥ್ ಲತಾ

ಮಾಮೂಲಿ ಸೂತ್ರಗಳನ್ನಿಟ್ಟುಕೊಂಡು ಬಾಕ್ಸ್ ಆಫೀಸ್ ಹಿಟ್ ಕೊಟ್ಟ ಹೊಸಬರ ಚಿತ್ರಗಳಿಗಿಂತ ಸಿದ್ಧಸೂತ್ರಗಳನ್ನು ಹರಿದು ಹೊಸ ಚಿಂತನೆಗಳ ಮೂಲಕ ಕಟ್ಟಿದ ಹೊಸಬರ ಸಿನಿಮಾಗಳ ಚರ್ಚೆ ಕನ್ನಡ ಚಿತ್ರರಂಗದ ಪ್ರಸ್ತುತ ಸಂದರ್ಭದಲ್ಲಿ ಮುಖ್ಯ.

ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ನಿರ್ದೇಶಕರ ದಟ್ಟ ಪ್ರಭಾವವನ್ನು ಗುರುತಿಸಬೇಕೆಂದರೆ ಹತ್ತು ಹನ್ನೆರಡು ವರ್ಷಗಳ ಹಿಂದಕ್ಕೆ ಹೋಗಬೇಕು. 2006-07ರಲ್ಲಿ ತೆರೆಗೆ ಬಂದ ಗುರುಪ್ರಸಾದ್ ಅವರ ‘ಮಠ’, ಯೋಗರಾಜ್ ಭಟ್ ಅವರ ‘ಮುಂಗಾರು ಮಳೆ’ ಹಾಗೂ ಸೂರಿಯವರ ‘ದುನಿಯಾ’ ಚಿತ್ರಗಳ ಹಿನ್ನೆಲೆಯನ್ನೊಮ್ಮೆ ಗಮನಿಸಬೇಕು. ಸರಿಸುಮಾರು ಒಂದೇ ಅವಧಿಯಲ್ಲಿ ಬಿಡುಗಡೆಯಾದ ಈ ಮೂರೂ ಚಿತ್ರಗಳೂ ಆರಂಭದಲ್ಲಿ ಅಬ್ಬರವನ್ನೇನೂ ಸೃಷ್ಟಿಸಲಿಲ್ಲ. ಬದಲಿಗೆ ನಿಧಾನಗತಿಯಲ್ಲಿ ಟೇಕಾಫ್ ಆಗುತ್ತಲೇ ಕನ್ನಡ ಪ್ರೇಕ್ಷಕನಲ್ಲಿ ಹೊಸ ಪರಿಣಾಮಗಳಿಗೆ ಕಾರಣವಾದವು; ಈಗ ಅದು ಇತಿಹಾಸ ಕೂಡ. ಈಗಾಗಲೇ ಈ ಮೂವರೂ ನಿರ್ದೇಶಕರು ಹಿರಿಯ ನಿರ್ದೇಶಕರ ಪಟ್ಟಿಗೆ ಸೇರಿಬಿಟ್ಟಿದ್ದಾರೆ. ಮೂರು ಭಿನ್ನ ಭಿನ್ನ ಸಂವೇದನೆಗಳ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ರಕ್ತ ಸಂಚಾರ ತಂದ ಈ ನಿರ್ದೇಶಕರ ಮಾದರಿಗಳು ಈಗಲೂ ಒಂದಿಲ್ಲೊಂದು ರೀತಿಯಲ್ಲಿ ಮುಂದುವರಿಯುತ್ತಿರುವುದನ್ನು ಕಾಣಬಹುದು.

ಹತ್ತು ವರ್ಷಗಳ ಹಿಂದೆ ಘಟಿಸಿದ ಈ ಚಿತ್ರಗಳ ಯಶಸ್ಸನ್ನು ಕೆಲವರು 70ರ ದಶಕದ ಕನ್ನಡ ಚಿತ್ರರಂಗದ ‘ಹೊಸ ಅಲೆ’ಗೆ ಹೋಲಿಸಿದರು. ಆದರೆ ಎಪ್ಪತ್ತರ ದಶಕದ ಹೊಸ ಅಲೆಯ ಚಿತ್ರಮಾದರಿಗಳ ವಿನ್ಯಾಸ, ಹಿನ್ನೆಲೆಯೇ ಬೇರೆ; ಇತ್ತೀಚಿನ ಹೊಸ ತಲೆಮಾರಿನ ನಿರ್ದೇಶಕರ ಆಯ್ಕೆ, ಅಭಿರುಚಿ, ಸಕ್ಸಸ್‍ನ ಫಾರ್ಮುಲಾಗಳೇ ಬೇರೆ ಎಂಬುದನ್ನು ಗಮನಿಸಬೇಕು. ಪೌರಾಣಿಕ, ಸಾಮಾಜಿಕ, ಜನಪದ ಕಥಾಚಿತ್ರಗಳ ಮೆಲೋಡ್ರಾಮಾ, ರಂಜನೆಗಳೇ ಪ್ರಧಾನವಾಗಿ ಕನ್ನಡ ತೆರೆಯನ್ನು ಆಳುತ್ತಿದ್ದ ಕಾಲಘಟ್ಟದಲ್ಲಿ ‘ಹೊಸ ಅಲೆ’ಯ ನಿರ್ದೇಶಕರು ಆಯ್ದುಕೊಂಡ ಚಿತ್ರಮಾರ್ಗಗಳ ಹಿನ್ನೆಲೆಯಲ್ಲಿ ವಾಸ್ತವಾಧಾರಿತ ಸಾಹಿತ್ಯ ಕೃತಿಗಳಿದ್ದವು. ‘ಸಂಸ್ಕಾರ’, ‘ಅಬಚೂರಿನ ಪೋಸ್ಟಾಫೀಸು’, ‘ಫಣಿಯಮ್ಮ’, ‘ಘಟಶ್ರಾದ್ಧ’, ‘ಪಲ್ಲವಿ’, ‘ಕಾಡು’ ಮುಂತಾದ ಚಿತ್ರಗಳು ತೆರೆದ ಹೊಸ ಮಾರ್ಗಗಳ ಹಿನ್ನೆಲೆ ಬಹುತೇಕರಿಗೆ ಗೊತ್ತೇ ಇದೆ. ಆದರೆ ಇತ್ತೀಚಿನ ದಶಕಗಳಲ್ಲಿ ಹೊಸ ತಲೆಮಾರಿನ ನಿರ್ದೇಶಕರು ಏಕತಾನತೆಯ ಕಮರ್ಷಿಯಲ್ ಚಿತ್ರಗಳ ಮಾದರಿಯನ್ನೂ ತಿರಸ್ಕರಿಸುತ್ತಾ, ಕಲಾತ್ಮಕ ಚಿತ್ರಗಳ ಭಾರದ ಗೋಜಿಗೂ ಹೋಗದೆ ತಮ್ಮದೇ ಫಾರ್ಮುಲಾ ರೂಪಿಸಿಕೊಂಡಿದ್ದು ವಿಶೇಷ ಬೆಳವಣಿಗೆ. ತಮಿಳು ಚಿತ್ರರಂಗದ ಹೊಸ ತಲೆಮಾರು ಕಳೆದ ಎರಡು ದಶಕಗಳಿಂದಲೂ ರೂಪಿಸಿಕೊಳ್ಳುತ್ತಾ ಬಂದಿರುವ ಕಮರ್ಷಿಯಲ್-ಕಲಾತ್ಮಕ ತಂತ್ರಗಳೆರಡನ್ನೂ ಹದಮೀರದಂತೆ ಬೆರೆಸಿದ ‘ಬ್ರಿಡ್ಜ್’ ಮಾದರಿಯಲ್ಲೇ ಕನ್ನಡದ ಹೊಸ ನಿರ್ದೇಶಕರೂ ತಮ್ಮ ಚಿತ್ರಗಳನ್ನು ಕಟ್ಟುತ್ತಾ ಬಂದಿದ್ದಾರೆ.

ಹೀಗೆ ಹೊಸ ತಲೆಮಾರು ಹೊಸ ಆಲೋಚನೆ, ತಂತ್ರ, ನಿರೂಪಣೆ ಮೂಲಕ ಕಂಡ ಯಶಸ್ಸು ಕನ್ನಡದ ಹಿರಿಯ ನಿರ್ದೇಶಕರನ್ನೂ ಬೆರಗುಗೊಳಿಸುವಂತಹುದ್ದು. ಹೀಗೆ ಹೇಳುವಾಗ ಇಂತಹ ನವನಿರ್ದೇಶಕರ ಸಕ್ಸಸ್ ಚಿತ್ರಗಳೆಲ್ಲವೂ ಕನ್ನಡದಲ್ಲಿ ಹೊಸ ಚಿಂತನೆಯನ್ನು ಬೆಳೆಸಿದವು ಎಂದು ಹೇಳಲಿಕ್ಕಾಗದು; ಹಾಗೆಯೇ ಕನ್ನಡ ಚಿತ್ರರಂಗಕ್ಕೆ ಹೊಸ ರಕ್ತಸಂಚಾರ ತಂದ ಚಿತ್ರಗಳನ್ನು ಈ ನಿರ್ದೇಶಕರು ಕೊಟ್ಟಿದ್ದಾರೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಹೊಸಬರ ಚಿತ್ರಗಳ ಬಾಕ್ಸ್ ಆಫೀಸ್ ಸಕ್ಸಸ್ ಮಾತ್ರವೇ ಅವರ ಆತ್ಯಂತಿಕ ಮಾದರಿ ಅಲ್ಲ ಎಂಬುದನ್ನೂ ಗಮನದಲ್ಲಿಟ್ಟುಕೊಂಡೇ ಅವರ ಚಿತ್ರಗಳ ವೈಶಿಷ್ಟ್ಯಗಳನ್ನು ವಿಶ್ಲೇಷಣೆಗೊಳಪಡಿಸಬೇಕಿದೆ.

ಇದನ್ನು ಉದಾಹರಣೆಯೊಂದರ ಮೂಲಕ ಆರಂಭಿಸಬಹುದು. ಸುನಿ ನಿರ್ದೇಶನದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’(2013) ಸಿನಿಮಾ ತನ್ನ ಪೋಲಿ ಮಾತುಗಳಿಂದ, ತಾಜಾ ನಿರೂಪಣೆಯಿಂದ ಹೊಸ ಜನಾಂಗದ ಪ್ರೇಕ್ಷಕರನ್ನು ಆಕರ್ಷಿಸಿತು. ಆದರೆ ಇದೇ ಸಕ್ಸಸ್ ನಂಬಿಕೊಂಡು ಹಿಂದೆಯೇ ಸುನಿ ನಿರ್ದೇಶಿಸಿದ ‘ಬಹುಪರಾಕ್’ ನೆಲ ಕಚ್ಚಿತು. ‘ಸಿಂಪಲ್’ ಸಿನಿಮಾಕ್ಕಿಂತ ಗಟ್ಟಿ ಕಥೆ, ಭಿನ್ನ ನಿರೂಪಣೆ, ಮಹತ್ವಾಕಾಂಕ್ಷಿ ಪ್ರಯತ್ನವಾಗಿದ್ದ ‘ಬಹುಪರಾಕ್’ ಸೋತಿದ್ದರ ಹಿಂದೆ ನಮ್ಮ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸರಿಯಾಗಿ ಸಜ್ಜುಗೊಳಿಸಲಾಗದ ಕನ್ನಡದ ನಿರ್ದೇಶಕರ ಬೇಜವಾಬ್ದಾರಿತನವೂ ಇದೆ ಎಂಬುದನ್ನು ಗಮನಿಸಬೇಕು. ಇದೇ ರೀತಿಯಲ್ಲಿ ‘ಒಲವೇ ಮಂದಾರ’, ‘ಟೋನಿ’ಯಂತಹ ಭಿನ್ನಧಾರೆಯ ಚಿತ್ರಗಳನ್ನು ಕಟ್ಟಿಕೊಟ್ಟ ರಂಗಭೂಮಿ ಹಿನ್ನೆಲೆಯ ನಿರ್ದೇಶಕ ಜಯತೀರ್ಥ ತಮ್ಮ ‘ಟೋನಿ’ಯ ಸೋಲಿನ ನಂತರ ಹತಾಶರಾದವರಂತೆ ‘ಬುಲೆಟ್ ಬಸ್ಯಾ’ ಎಂಬ ಕೆಟ್ಟ ಚಿತ್ರಕ್ಕೂ ನಿರ್ದೇಶನ ಮಾಡುವ ಮಟ್ಟಕ್ಕಿಳಿದರು. ಆ ಸಿನಿಮಾದ ಸೋಲಿನಿಂದ ಎಚ್ಚೆತ್ತವರಂತೆ ‘ಬ್ಯೂಟಿಫುಲ್ ಮನಸುಗಳು’ ಎಂಬ ಬ್ಯೂಟಿಫುಲ್ ಚಿತ್ರ ಕೊಟ್ಟರೂ ಅದು ಅವರ ಕೈಹಿಡಿಯಲಿಲ್ಲ ಎಂಬುದು ಗಾಂಧಿನಗರದ ವಿಚಿತ್ರ ಲೆಕ್ಕಾಚಾರಗಳನ್ನೇ ಹೇಳುತ್ತದೆ.

ಗಲ್ಲಾಪೆಟ್ಟಿಗೆಯ ಯಶಸ್ಸು ಕಂಡ ಹೊಸಬರ ಚಿತ್ರಗಳ ಪೈಕಿ ಶಶಾಂಕ್ ಅವರ ‘ಕೃಷ್ಣಲೀಲಾ’, ‘ಕೃಷ್ಣನ್ ಲವ್ ಸ್ಟೋರಿ’, ನಾಗಶೇಖರ್ ಅವರ ‘ಸಂಜು ವೆಡ್ಸ್ ಗೀತಾ’ ಮತ್ತು ‘ಮೈನಾ’, ಅಶೋಕ್ ಅವರ 6-5=2, ನರೇಶ್‍ಕುಮಾರ್ ಅವರ ‘ರಾಜು ಕನ್ನಡ ಮೀಡಿಯಂ’, ರಿಷಭ್ ಶೆಟ್ಟಿಯ ‘ಕಿರಿಕ್ ಪಾರ್ಟಿ’, ಪ್ರಶಾಂತ್ ನೀಲ್ ಅವರ ‘ಉಗ್ರಂ’, ಚಂದ್ರಶೇಖರ ಬಂಡಿಯಪ್ಪ ಅವರ ‘ರಥಾವರ’, ಎ.ಪಿ.ಅರ್ಜುನ್ ಅವರ ‘ಅದ್ದೂರಿ’, ‘ಅಂಬಾರಿ’, ಶ್ರೀನಿವಾಸರಾಜು ಅವರ ‘ದಂಡುಪಾಳ್ಯ(ಭಾಗ 1 ಮತ್ತು 2)’, ಚೇತನ್‍ಕುಮಾರ್ ಅವರ ‘ಬಹದ್ದೂರ್’, ‘ಭರ್ಜರಿ’, ಅನೂಪ್ ಭಂಡಾರಿಯವರ ‘ರಂಗಿತರಂಗ’, ಇತ್ತೀಚೆಗೆ ಬಂದ ಸಂತೋಷ್ ಆನಂದ್‍ರಾಮ್ ಅವರ ‘ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ’ ಹಾಗೂ ‘ರಾಜ್‍ಕುಮಾರ’, ನರ್ತನ್ ನಿರ್ದೇಶನದ ‘ಮಫ್ತಿ’- ಹೀಗೆ ಪಟ್ಟಿ ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ.

ಇಂತಹ ಚಿತ್ರಗಳೆಲ್ಲವೂ ಬಾಕ್ಸ್ ಆಫೀಸ್‍ನಲ್ಲಿ ಅಪಾರ ಯಶಸ್ಸು ಕಂಡ ಹೊಸಬರ ಚಿತ್ರಗಳು. ಆದರೆ ಈ ಚಿತ್ರಗಳಲ್ಲಿ ಅವೇ ಹಳೆಯ ಸಾಮಾನ್ಯ ಕಮರ್ಷಿಯಲ್ ಅಂಶಗಳಾದ ನಾಯಕನ ವೈಭವೀಕರಣ, ಹಾಡು, ಫೈಟ್, ಲವ್ ಟ್ರ್ಯಾಕ್, ಮಧ್ಯಮವರ್ಗದ ಭಾವುಕತೆ, ಕಾಮಿಡಿ, ಹಾರರ್ ಇತ್ಯಾದಿಗಳನ್ನೇ ಹೊಸದಾಗಿ ಉಣಬಡಿಸಲಾಯಿತು. ಕನ್ನಡ ಚಿತ್ರರಂಗದ ಆರ್ಥಿಕ ಚೇತರಿಕೆಗೆ ಈ ಚಿತ್ರಗಳು ಕಾರಣವಾಗಿದ್ದಲ್ಲದೆ, ಹೊಸ ನಿರ್ದೇಶಕರ ಮೇಲೆ ನಿರ್ಮಾಪಕರು ನಂಬಿಕೆ ಇಡಲು ಕೂಡ ಪ್ರೇರಣೆಯಾಯಿತು. ಆದರೆ ಈ ಸಕ್ಸಸ್ ಸಾಲಿನಲ್ಲಿ ವಿಕೃತತೆಯನ್ನು, ಅಮಾನವೀಯತೆಯನ್ನು ವೈಭವೀಕರಿಸುವ ‘ದಂಡುಪಾಳ್ಯ’ದಂತಹ ಚಿತ್ರಗಳು ಕೂಡ ಸೇರಿಕೊಂಡಿದ್ದು ಅಪಾಯಕಾರಿ ಬೆಳವಣಿಗೆ.

ಎಆದರೆ ಕಮರ್ಷಿಯಲ್ ಸೋಲಿನ ಭಯದ ನಡುವೆ ಕೂಡ ಹೊಸಬರ ಹಲವು ಚಿತ್ರಗಳು ಕನ್ನಡ ತೆರೆಯಲ್ಲಿ ಮಿಂಚಿವೆ. ಮಸಾಲಾ ಫಾರ್ಮುಲಾಗಳನ್ನು ಹೊರಗಿಟ್ಟು ತಮ್ಮದೇ ಚಿಂತನೆ, ತಾತ್ವಿಕ, ತಾಂತ್ರಿಕ ಆಲೋಚನೆಗಳ ಮೂಲಕವೇ ಹೊಸ ತಲೆಮಾರು ಕಟ್ಟಿದ ಕೆಲವಾದರೂ ಚಿತ್ರಗಳು ಕಾಸು ಕೂಡ ಮಾಡಿವೆ; ಕನ್ನಡ ಚಿತ್ರರಂಗಕ್ಕೆ ಹೊಸ ಹೊಳಪನ್ನೂ ನೀಡಿವೆ. ಮಾಮೂಲಿ ಸೂತ್ರಗಳನ್ನಿಟ್ಟುಕೊಂಡು ಬಾಕ್ಸ್ ಆಫೀಸ್ ಹಿಟ್ ಕೊಟ್ಟ ಹೊಸಬರ ಚಿತ್ರಗಳಿಗಿಂತ ಸಿದ್ಧಸೂತ್ರಗಳನ್ನು ಹರಿದು ಹೊಸ ಚಿಂತನೆಗಳ ಮೂಲಕ ಕಟ್ಟಿದ ಹೊಸಬರ ಸಿನಿಮಾಗಳ ಚರ್ಚೆ ಕನ್ನಡ ಚಿತ್ರರಂಗದ ಪ್ರಸ್ತುತ ಸಂದರ್ಭದಲ್ಲಿ ಮುಖ್ಯ.

ಇಂತಹ ಚಿಂತನೆಗಳ ಸ್ವಂತಿಕೆಯಲ್ಲಿ ತಯಾರಾದ ಪವನ್‍ಕುಮಾರ್ ನಿರ್ದೇಶನದ ‘ಲೂಸಿಯಾ(2013) ಹೊಸಬರ ಪ್ರಯತ್ನಗಳಿಗೆ ಸ್ಫೂರ್ತಿ ತಂದ ಸಿನಿಮಾ. ಅದಕ್ಕೂ ಹಿಂದೆ ಪವನ್ ‘ಲೈಫು ಇಷ್ಟೇನೆ’ ಎಂಬ ಸಿನಿಮಾದಲ್ಲಿ ಅಲ್ಪಮಟ್ಟಿಗಿನ ಯಶಸ್ಸು ಕಂಡಿದ್ದರೂ ಅವರನ್ನು ಚಿತ್ರರಂಗ ಗುರುತಿಸುವಂತೆ ಮಾಡಿದ್ದು ‘ಲೂಸಿಯಾ’. ಇಟಾಲಿಯನ್ ಮೂಲದ ‘ಸಿನಿಮಾ ಪ್ಯಾರಾಡಿಸೋ (1988)’ ಚಿತ್ರದಿಂದ ಕೊಂಚ ಪ್ರೇರಣೆ ಪಡೆದಂತಿರುವ ಈ ಚಿತ್ರ ಮನೋವೈಜ್ಞಾನಿಕ ನೆಲೆಯಲ್ಲಿ ಮಧ್ಯಮವರ್ಗದ ಯುವಕನೊಬ್ಬನ ಬದುಕನ್ನು ಹೇಳುವ ಹೊಸ ಪ್ರಯತ್ನವಾಗಿ ಗೆದ್ದಿತು. ಚಿತ್ರದಲ್ಲಿ ಪವನ್ ಅಳವಡಿಸಿಕೊಂಡಿರುವ ನಿರೂಪಣೆ ಕೂಡ ಕನ್ನಡ ಸಿನಿಮಾಕ್ಕೆ ಹೊಸತು. ಈ ಚಿತ್ರದ ಮೂಲಕ ಪವನ್ ‘ಕ್ರೌಡ್ ಫಂಡಿಂಗ್’ ಎಂಬ ಸಿನಿಮಾಕ್ಕೆ ಹಣ ಹೂಡುವ ಹೊಸ ಟ್ರೆಂಡ್‍ಗೆ ಕೂಡ ಕಾರಣರಾದರು. ಇಂತಹ ಗಟ್ಟಿ ಸಿನಿಮಾ ಕೊಟ್ಟ ಪವನ್ ನಂತರ ‘ಯು ಟರ್ನ್’ ಸಿನಿಮಾ ಮಾಡಿ ಗೆದ್ದರೂ ಅದು ಯಾವತ್ತಿನ ಕಮರ್ಷಿಯಲ್ ಜಾಡಿನ ದೆವ್ವದ ಕತೆ ಎನ್ನುವ ಕಾರಣಕ್ಕೆ ಮುಖ್ಯವೆನಿಸದು.

‘ಸರಳ ಫಾರ್ಮುಲಾ’ವನ್ನೇ ನೆಚ್ಚಿಕೊಂಡು ಹೊಸ ಹಾದಿ ತೆರೆದ ಚಿತ್ರ ರಾಮ್‍ರೆಡ್ಡಿ ನಿರ್ದೇಶನದ ‘ತಿಥಿ(2016)’. ಕಡಿಮೆ ಬಜೆಟ್, ಸರಳ, ನೇರ ನಿರೂಪಣೆ, ಹೀರೋಯಿಸಂನ ಅನಗತ್ಯತೆ, ಸಂಗೀತರಾಹಿತ್ಯ, ಕಟುವಾಸ್ತವದ ಚಿತ್ರಿಕೆಗಳ ಮೂಲಕ ರಾಜ್ಯ, ರಾಷ್ಟ್ರಪ್ರಶಸ್ತಿಯೊಂದಿಗೆ ಹಲವಾರು ಪುರಸ್ಕಾರಗಳಿಗೂ ಭಾಜನವಾದ ಸಿನಿಮಾವಿದು. ಪ್ರಶಸ್ತಿಯ ಸೀಮಿತತೆಯನ್ನೂ ಮೀರಿ ‘ತಿಥಿ’ ಕನ್ನಡದ ಸಾಮಾನ್ಯ ಪ್ರೇಕ್ಷಕನಲ್ಲಿ ಹುಟ್ಟುಹಾಕಿದ ರೋಮಾಂಚನ ಹಾಗೂ ಯಶಸ್ಸು ಕೂಡ ಹೊಸಬಗೆಯದು.

ವಿಜಯಪ್ರಸಾದ್ ನಿರ್ದೇಶನದ ‘ಸಿದ್ಲಿಂಗು’ ಹಾಗೂ ‘ನೀರ್‍ದೋಸೆ’ ಚಿತ್ರಗಳು ಕೂಡ ಗೆದ್ದಿದ್ದು ಕೂಡ ಇಂತಹುದೇ ಹೊಸಧಾಟಿಯ ಫಾರ್ಮುಲಾಗಳ ಮೂಲಕ. ‘ಪೋಲಿತನ’ದ ಚಿತ್ರಣವೆಂಬ ಅಪವಾದ ಈ ಚಿತ್ರಗಳ ಬೆನ್ನಿಗಿದ್ದರೂ ವಿಜಯಪ್ರಸಾದ್ ಸಾಂಪ್ರದಾಯಿಕ ಸಂಬಂಧಗಳ ಹುಸಿಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿರೂಪಿಸಿದ್ದು ಕನ್ನಡ ಚಿತ್ರರಂಗಕ್ಕೆ ‘ಬೋಲ್ಡ್‍ನೆಸ್’ ಒಂದರ ಮಾದರಿ ಎನ್ನಬಹುದು.

ಈ ಸಾಲಿನಲ್ಲಿ ಹೆಸರಿಸಬಹುದಾದ ಮತ್ತೆರಡು ಚಿತ್ರಗಳೆಂದರೆ ಡಿ.ಸುಮನಾ ಕಿತ್ತೂರು ಅವರ ‘ಎದೆಗಾರಿಕೆ’ ಹಾಗೂ ‘ಕಿರಗೂರಿನ ಗಯ್ಯಾಳಿಗಳು’. ಅಗ್ನಿ ಶ್ರೀಧರ್ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯಕೃತಿಗಳನ್ನಾಧರಿಸಿದ ಈ ಎರಡೂ ಚಿತ್ರಗಳು ಕನ್ನಡ ಪ್ರೇಕ್ಷಕನಿಗೆ ಹೊಸತನವನ್ನು ಕಾಣಿಸಿದ ಸಿನಿಮಾಗಳು. ಆದರೆ ‘ಗಯ್ಯಾಳಿಗಳು’ ಚಿತ್ರಕ್ಕೆ ಸಿಕ್ಕಿದ ಆರ್ಥಿಕ ಯಶಸ್ಸು ‘ಎದೆಗಾರಿಕೆ’ಗೆ ಸಿಗಲಿಲ್ಲ.

‘ಒಂದು ಮೊಟ್ಟೆಯ ಕಥೆ’ ತನ್ನ ನವಿರು ಶೈಲಿ, ಮಂದಹಾಸದೊಳಗಿನ ವಿಷಾದದ ಕಥೆಯಿಂದಾಗಿ ಗೆದ್ದ ಚಿತ್ರ. ರಾಜ್ ಬಿ.ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿದ ಈ ಚಿತ್ರದ ಹೊಸತನ, ಗೆಲುವು ಕೂಡ ಗಮನಾರ್ಹ. ಬೋಳುತಲೆಯ ಯುವಕನೊಬ್ಬ ಅನುಭವಿಸುವ ಕೀಳರಿಮೆ, ಅಪಮಾನ ಎಲ್ಲವನ್ನೂ ನವಿರು ಹಾಸ್ಯದ ಮೂಲಕ ನಿರೂಪಿಸಿದ ಚಿತ್ರವನ್ನು ಗೆಲ್ಲಿಸಿದ್ದು ಕತೆಯೊಳಗಿನ ಜನಸಾಮಾನ್ಯತನ.

ಡಿ.ಸತ್ಯಪ್ರಕಾಶ್ ನಿರ್ದೇಶಿಸಿದ ‘ರಾಮಾ ರಾಮಾ ರೇ’ ತನ್ನ ಅಪ್ಪಟ ಮಾನವೀಯ ಗುಣ, ತಾಂತ್ರಿಕ ಅಚ್ಚುಕಟ್ಟುತನದಿಂದಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಚಿತ್ರ. ಗಲ್ಲಿಗೇರಬೇಕಿರುವ ಖೈದಿ, ಗಲ್ಲಿಗೇರಿಸಬೇಕಾದವನು-ಇವರಿಬ್ಬರ ಮುಖಾಮುಖಿಯ ನಡುವೆ ಬಿಚ್ಚಿಕೊಳ್ಳುವ ಮಾನವೀಯ ಸಂಬಂಧಗಳನ್ನು ಯಾವುದೇ ಭಾವೋತ್ಕರ್ಷವಿಲ್ಲದೆ ನಿರೂಪಿಸಿದ ಈ ಚಿತ್ರದ ಯಶಸ್ಸು ದೊಡ್ಡದು.

ಮರೆವಿನ ಕಾಯಿಲೆಯಿಂದ ತಂದೆಯೊಬ್ಬ ಅನುಭವಿಸುವ ತೊಳಲಾಟ, ಆತ ಇದ್ದಕ್ಕಿದ್ದಂತೆ ಕಾಣೆಯಾದಾಗ ಆತನ ಮಗ ಅನುಭವಿಸುವ ಯಾತನೆ-ಇಂತಹ ಭಾವುಕ, ಸೂಕ್ಷ್ಮ ಎಳೆ ಇಟ್ಟುಕೊಂಡು ತಯಾರಾದ ಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’(ನಿರ್ದೇಶನ: ಹೇಮಂತ್ ರಾವ್). ಭಾವನಾತ್ಮಕ ಅಂಶಗಳ ಹದವಾದ ಬೆರಕೆ, ಅದರ ನಡುವೆ ಭೂಗತ ಜಗತ್ತಿನ ಕುತೂಹಲಕರ ಕತೆ; ಕ್ರೌರ್ಯದೊಳಗೂ ಇರುವ ಕರುಣೆ-ಇವೆಲ್ಲವನ್ನೂ ಬಿಗಿಯಾಗಿ ಕಟ್ಟಿದ ಕ್ರಮದಿಂದಾಗಿ ತಮ್ಮ ಮೊದಲ ಚಿತ್ರದಲ್ಲೇ ಹೇಮಂತರಾವ್ ಗೆದ್ದ ಸಿನಿಮಾವಿದು. ಅನಂತ್‍ನಾಗ್ ಅವರನ್ನು ಹೊಸತಲೆಮಾರಿನ ನಿರ್ದೇಶಕನೊಬ್ಬ ಸಮರ್ಥವಾಗಿ ದುಡಿಸಿಕೊಂಡ ಚಿತ್ರ.

ತಮ್ಮ ಮೊದಲ ಪ್ರಯತ್ನಗಳಲ್ಲೇ ಯಶಸ್ಸಿನ ಜೊತೆಗೆ, ಚಿತ್ರರಂಗಕ್ಕೆ ಹೊಸ ಚೈತನ್ಯ ತಂದ ಇಂತಹ ನಿರ್ದೇಶಕರು, ಸಿನಿಮಾಗಳ ನಡುವೆಯೇ ಇಷ್ಟೇ ಹೊಳಪಿನ, ಸತ್ವಯುತ ಚಿತ್ರಗಳಾಗಿದ್ದರೂ ಸೋತ ಹೊಸಬರ ಸಿನಿಮಾಗಳೂ ಇವೆ. ಅಂತಹ ಒಳ್ಳೆಯ ಸಿನಿಮಾಗಳಲ್ಲಿ ಎದ್ದು ಕಾಣುವುದೆಂದರೆ ‘ಉಳಿದವರು ಕಂಡಂತೆ’ ಚಿತ್ರ(2014). ರಕ್ಷಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ ಕೂಡ ತನ್ನ ವಿಭಿನ್ನ, ನಿರೂಪಣಾಶೈಲಿ (ಇದಕ್ಕೆ ಬಹುಶಃ ರಕ್ಷಿತ್‍ಗೆ ಜಪಾನಿನ ನಿರ್ದೇಶಕ ಅಕಿರಾ ಕುರಾಸೋವಾನ ‘ರಾಶೋಮನ್’ ಪ್ರೇರಣೆಯಾಗಿದ್ದಿರಬಹುದು)ಯಿಂದ ಗಮನ ಸೆಳೆದ ಈ ಚಿತ್ರ ಪ್ರೇಕ್ಷಕ ಅರಗಿಸಿಕೊಳ್ಳಲಾಗದ ನಿರೂಪಣೆಯಿಂದಾಗಿಯೇ ಸೋತಿತೆನ್ನಬಹುದು. ಆದರೆ ಇಲ್ಲಿ ರಕ್ಷಿತ್ ಬಳಸಿದ ರೂಪಕಗಳು, ಚಹರೆಗಳು ಕನ್ನಡ ಸಿನಿಮಾ ಅಧ್ಯಯನಕ್ಕೆ ಹೊಸ ವಸ್ತು ಎನ್ನಬಹುದು.

ನೊಂದ ಸಮುದಾಯಗಳ ಅಳಲನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ, ವೈಚಾರಿಕ ನೆಲೆಯಲ್ಲಿ ಹೇಳುವ ಮೂಲಕ ಹೊಸಬಗೆಯ ಹರಿವು ಹಾಗೂ ಅರಿವನ್ನು ಕನ್ನಡ ಚಿತ್ರರಂಗಕ್ಕೆ ತಂದ ಯುವ ನಿರ್ದೇಶಕರಲ್ಲಿ ಬಿ.ಎಂ.ಗಿರಿರಾಜ್ ಕೂಡ ಒಬ್ಬರು. ‘ಜಟ್ಟ’ ಚಿತ್ರದ ಮೂಲಕ ಕನ್ನಡದ ಮೊದಲ ಬಾರಿಗೆ ಅಂಬೇಡ್ಕರ್ ವೈಚಾರಿಕತೆಯನ್ನು ಅಳವಡಿಸಲು ಯತ್ನಿಸಿದ ಗಿರಿರಾಜ್ ಈ ಚಿತ್ರಕ್ಕೆ ರಾಜ್ಯಪ್ರಶಸ್ತಿಯನ್ನೂ ಪಡೆದುಕೊಂಡರು. ಪುನೀತ್ ರಾಜ್‍ಕುಮಾರ್‍ರಂತಹ ಜನಪ್ರಿಯ ನಟನನ್ನು ಇಟ್ಟುಕೊಂಡು ತೆರೆಗೆ ತಂದ ‘ಮೈತ್ರಿ’ಯಲ್ಲಿ ಸ್ಲಂ ಬಾಲಕನೊಬ್ಬನ ಬದುಕಿನ ಸಕ್ಸಸ್ ಜರ್ನಿಯ ಕಥೆ ಇತ್ತು. ಇತ್ತೀಚೆಗೆ ಬಂದ ಅವರ ಅದ್ಭುತವೆನ್ನಿಸುವ ಪ್ರಯತ್ನದ ‘ಅಮರಾವತಿ’ ಪೌರಕಾರ್ಮಿಕರ ದಾರುಣತೆಯನ್ನು ಮನಗಾಣಿಸಿದ ಚಿತ್ರ. ರಾಜ್ಯಪ್ರಶಸ್ತಿ ಪಡೆದರೂ ಚಿತ್ರ ಗಲ್ಲಾಪೆಟ್ಟಿಗೆಯನ್ನು ಮುಟ್ಟಲಿಲ್ಲ.

ಇದೇ ಬಗೆಯ ಪ್ರಯೋಗಕ್ಕೆ ಒಡ್ಡಿಕೊಂಡ ಗಡ್ಡ ವಿಜಿ ನಿರ್ದೇಶನದ ‘ದ್ಯಾವ್ರೆ’ ಕೂಡ ಗಮನಾರ್ಹ ಸಿನಿಮಾ. ಶಂಕರ್‍ನಾಗ್ ಅವರ ‘ಮಿಂಚಿನ ಓಟ’ದ ನಂತರ ಜೈಲಿನೊಳಗಿನ ವಾಸ್ತವ, ಖೈದಿಗಳ ಸಂಬಂಧಗಳನ್ನು ನಿರೂಪಣೆಗೆ ಒಳಪಡಿಸಲು ಯತ್ನಿಸಿದ ಚಿತ್ರ. ಮತ್ತೊಬ್ಬಳು ನಿರ್ದೇಶಕಿ ಚಂದ್ರಕಲಾ ಅವರ ‘ಕ್ವಾಟ್ಲೆ’ ಕೂಡ ಹೊಸಬಗೆಯ ಪ್ರಯತ್ನ. ಸೋತರೂ ಚಿತ್ರರಂಗದಲ್ಲಿ ಹೊಸ ಸಂವೇದನೆಯನ್ನು ಚಿಗುರಿಸಲು ಯತ್ನಿಸಿದ ಇಂತಹ ಹಲವಾರು ನಿರ್ದೇಶಕರ ಚಿತ್ರಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು: ‘ಬೊಂಬೆಗಳ ಲವ್(ಸಂತೋಷ್)’, ‘ಗೀತಾ ಬ್ಯಾಂಗಲ್ ಸ್ಟೋರ್(ಮಂಜುಮಿತ್ರ)’, ‘ರಿಕ್ಕಿ(ರಿಷಭ್ ಶೆಟ್ಟಿ)’, ‘ಆಕ್ಟರ್’, ‘ಹಗ್ಗದ ಕೊನೆ( ದಯಾಳ್ ಪದ್ಮನಾಭನ್)’, ‘ಲಾಸ್ಟ್ ಬಸ್(ಅರವಿಂದ್ ಕೌಶಿಕ್)’, ‘ಅಂದರ್ ಬಾಹರ್(ಫಣೀಶ್ ರಾಮನಾಥಪುರ)’, ‘ಮುರಳಿ ಮೀಟ್ಸ್ ಮೀರಾ(ಮಹೇಶ್‍ರಾವ್)’, ‘ಮತ್ತೆ ಮುಂಗಾರು(ದ್ವಾರ್ಕಿ ರಾಘವ್), ‘ನಿರುತ್ತರ(ಅಪೂರ್ವ ಕಾಸರವಳ್ಳಿ)’, ‘ದಯವಿಟ್ಟು ಗಮನಿಸಿ(ರೋಹಿತ್ ಪದಕಿ)...

ಈ ವಿಶ್ಲೇಷಣೆ ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರು ಸೋತರೂ ಗೆದ್ದರೂ ವಿಶ್ವಾಸದಿಂದಲೇ ಸದಾ ಹೊಸತನಕ್ಕೆ ತುಡಿಯುತ್ತಿದೆ ಎಂಬುದನ್ನು ಸೂಚಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇದಕ್ಕೆ ಕಳೆದ ಐದಾರು ವರ್ಷಗಳಿಂದ ಪ್ರವಾಹದಂತೆ ಬರುತ್ತಿರುವ ಹೊಸಬರ ಚಿತ್ರಗಳೇ ಸಾಕ್ಷಿ. ಆದರೆ ಅವುಗಳಲ್ಲಿ ಟೊಳ್ಳೆಷ್ಟು, ಗಟ್ಟಿ ಎಷ್ಟು ಎಂಬುದನ್ನು ಕಾಲವೇ ನಿರ್ಧರಿಸಲಿದೆ.

*ಲೇಖಕರು ಮೈಸೂರು ಜಿಲ್ಲೆ ತಗಡೂರಿನವರು. ಕವಿ, ಕಥೆಗಾರ, ಕಲಾವಿದ ಹಾಗೂ ಹವ್ಯಾಸಿ ಪತ್ರಕರ್ತ. ಮೂರು ಕಥಾಸಂಕಲನ, ಎರಡು ಕವನ ಸಂಕಲನ, ಒಂದು ಕಾದಂಬರಿ ಹೊರತಂದಿದ್ದಾರೆ. ಇವರ ಕಥೆಗಳಿಗೆ ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ ಆರು ಬಾರಿ ಬಹುಮಾನ ಸಂದಿದೆ. ಸಿನಿಮಾ ವೀಕ್ಷಣೆ, ವಿಮರ್ಶೆಯಲ್ಲಿ ವಿಶೇಷ ಒಲವು.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮