2nd July 2018

ಹಾಲುಂಡ ತವರೀಗಿ ಏನೆಂದು ಹಾಡಲೆ

ರೇಣುಕಾ ನಿಡಗುಂದಿ

ಪ್ರತಿ ಸಲವೂ ರಮಜಾನ್, ಮೊಹರಮ್ ಹಬ್ಬಗಳು ಬಂದಾಗೆಲ್ಲ ನನ್ನೂರಿನ ಬೂಬುಗಳು ನೆನೆಪಾಗುತ್ತಾರೆ. ಬಾಲ್ಯದಲ್ಲಿ ನಮ್ಮ ಹಬ್ಬಗಳಿಗಿಂತ ಈ ಹಬ್ಬಗಳೇ ನಮ್ಮನ್ನು ಹೆಚ್ಚು ಆಕರ್ಷಿಸುತ್ತಿದ್ದವು. ಬಾಲ್ಯಕ್ಕೆ-ಹಸಿವಿಗೆ ಜಾತಿಮತಗಳ ಹಂಗಿರುವುದಿಲ್ಲ. ಬೂಬು ನಮ್ಮ ಕಟ್ಟೆಯ ಮೇಲೆ ಕೂತು ಮೆಹಂದಿ ಎಲೆಗಳನ್ನು ಅರೆಯತೊಡಗಿದಳೆಂದರೆ ಏನೋ ವಿಶೇಷ ಹಬ್ಬ ಬಂದಿದೆಯಂದರ್ಥ.

ನಮ್ಮ ಮನೆಯ ಒಂದು ಪಾಶ್ರ್ವದಲ್ಲಿ ಬೂಬು ಮನೆಯಿದ್ದದ್ದು. ನಾವು ಅವಳಿಗೆ ಕರೆಯುತ್ತಿದ್ದುದು ’ರಾಜಮ್ಮ’ ಅಂತ. ಆಕೆಯ ಹೆಸರೇನಿತ್ತೋ ಯಾಕೆ ನಾವು ರಾಜಮ್ಮ ಅಂತಿದ್ದೆವೋ ಗೊತ್ತಿಲ್ಲ. ಇನ್ನೊಬ್ಬ ಬೂಬು ಹುಸೇನಬಿ. ಮನೆತುಂಬ ಅರ್ಧ ಡಜನ್ ಮಕ್ಕಳು. ದೊಡ್ಡ ಮಗಳು ಹಜರತ್‍ಗೆ ಮದುವೆಯಾಗಿದ್ದರೂ ಅತ್ತೆಮನೆಯ ಯಾವುದೋ ಜಗಳದಿಂದಾಗಿ ಆಕೆಯೂ ತಾಯಿಯ ಮನೆಯಲ್ಲೇ ಇದ್ದಳು. ರಾಜಮ್ಮನ ಗಂಡ ಅಲ್ಲಾಬಕ್ಷ. ಅಷ್ಟೊಂದು ಜನ ಆ ಪುಟ್ಟ ಎರಡಂಕಣದ ಮನೆಯಲ್ಲಿ ಹೇಗೆ ವಾಸಿಸುತ್ತಿದ್ದರೋ ಏನೊ. ಸಾಲದೆಂಬಂತೆ ನಾಲ್ಕು ಆಡುಗಳು, ಒಂದಿಷ್ಟು ಕೋಳಿ ಹಿಂಡೂ ಇದ್ದವು. ಹೊರಗಡೆಯ ಬಿದಿರಿನ ತಟ್ಟೆಗೋಡೆಯ ಹಟ್ಟಿಯಲ್ಲಿ ಕುದುರೆ ಕಟ್ಟುತ್ತಿದ್ದರು. ಅವರು ಮಾತಾಡಿದ್ದು, ಜಗಳಾಡಿದ್ದು…ಬೈದಾಡಿದ್ದು ಎಲ್ಲವೂ ನಮ್ಮ ಅಡುಗೆ ಮನೆಗೆ ಕೇಳಿಸುತ್ತಿತ್ತು. ನಾವು ದೊಡ್ದವರಾದ ಮೇಲೆಯೇ ಗೊತ್ತಾಗಿದ್ದು ಅದು ನಮ್ಮದೇ ಮನೆಯೆಂದು ಹಾಗೂ ಕಳೆದ ಮೂವತ್ತು ವರ್ಷಗಳಿಂದ ಅವರು ಬಾಡಿಗೆ ಇದ್ದರೆಂದು. ನಮ್ಮ ಅಪ್ಪ ತೀರಿಕೊಂಡ ಮೇಲೆ ನಮ್ಮ ತಾಯಿ ಬಹಳ ಕಷ್ಟಪಟ್ಟು ಆ ಮನೆ ಬಿಡಿಸಿಕೊಳ್ಳಬೇಕಾಯ್ತು. ಅದು ಬೇರೆ ಕಥೆ.

ರಾಜಮ್ಮನ ಗಂಡ ಮಕ್ಕಳು ಟಾಂಗಾ ಓಡಿಸುತ್ತಿದ್ದರು. ಬಾಬಾಜಾನ್ ಆಗಲಿ ಸಯ್ಯದ್ ಆಗಲಿ ಟಾಂಗಾ ಹೂಡಿದಾಗೆಲ್ಲ ಮೊದಲು ನಮಗೆಲ್ಲ ಒಂದು ರವುಂಡು ಸವಾರಿ ಮಾಡಿಸಿಯೇ ಹೋಗಬೇಕು. ಟಾಂಗಾ ಸವಾರಿಯೆಂದರೆ ಸಾಕು ಇನ್ನಿಲ್ಲದ ಹುರುಪು. ಹಿತ್ತಲಿಗೆ ಅಂಟಿಕೊಂಡಿದ್ದ ಓಣಿಯಲ್ಲಿ ಹುಡುಗರು ಕೈಗೆ ಮೆಹಂದಿ ಹಚ್ಚಿಸಿಕೊಂಡು ಚೀಡಿ ಚೀಡಿ ರಂಗ ದೇ (ಹಕ್ಕಿ ಹಕ್ಕಿ ಬಣ್ಣ ಕೊಡು) ಎಂದು ರಾಗವಾಗಿ ಹಾಡಿಕೊಂಡು ಓಡಾಡತೊಡಗಿದರೆ ಸಾಕು ನಾವು ಈ ರಾಜಮ್ಮ ಯಾವಾಗ ನಮ್ಮನ್ನು ಮೆಹಂದಿ ಹಚ್ಚುತ್ತೇನೆ ಬನ್ನಿ ಅಂತ ಕರೆಯುತ್ತಾಳೋ ಎಂದು ಕಾಯುತ್ತಾ... ‘ಮಲಗ್ರಿ ಮಲಗ್ರಿ ಸಾಕಿನ್ನು’ ಎನ್ನುವ ಅವ್ವನ ಬಾಯಿಗೆ ಹೆದರಿ ಹೊದ್ದುಕೊಂಡ ಚಾದರಿನೊಳಗಿಂದಲೇ ಪಿಳಿಪಿಳಿ ಕಣ್ಣು ಬಿಡುತ್ತ ಆಕೆಯ ಕರೆಗಾಗಿ ಕಾಯುತ್ತಿದ್ದೆವು. ಕೊನೆಗೂ ಆಕೆ ಬಾಗಿಲ ಚಿಲಕ ಬಡಿದು, ‘ರೇಣೂ... ಆವೋ ಮಾ...’ ಅನ್ನುವ ಕರೆ ಕಿವಿಗೆ ಬಿದ್ದಿದ್ದೆ ನಾನು, ತಂಗಿಯರೆಲ್ಲ ಹಾಸಿಗೆಯಿಂದ ಜಿಗಿದು ಆ ಮನೆಗೆ ಓಡುತ್ತಿದ್ದೆವು. ಅವ್ವ ಅದಕ್ಕೇನು ಬೈಯುತ್ತಿದ್ದಿಲ್ಲ. ಮೆಹಂದಿ ಹಚ್ಚಿಸಿಕೊಂಡ ಕೈಯನ್ನು ಹಾಸಿಗೆಯಿಂದ ಹೊರಗಿಟ್ಟು... ಗಲೀಜಾಗದಂತೆ ಕೈಯಿಂದ ಉದುರಿಬೀಳದಂತೆ ಮಲಗುವುದೊಂದು ದೊಡ್ದ ಕಸರತ್ತೇ ಆಗಿತ್ತು.

ಹಬ್ಬದ ದಿನ ಬೂಬು ರುಚಿಯಾದ ದ್ರಾಕ್ಷಿ, ಗೋಡಂಬಿ, ಗಸಗಸೆ, ಒಣಕೊಬರಿ ಹಾಕಿದ ಸುರುಕುಂಬಾ (ಸ್ಯಾವಿಗೆಖೀರು) ಕೊಡುತ್ತಿದ್ದಳು ನಮಗಾಗಿ. ಮಡಿಹುಡಿ ಎಂದು ತಲೆಕೆಡಿಸಿಕೊಳ್ಳುತ್ತಿದ್ದ ನಮ್ಮ ಅವ್ವನಿಗೆ ನಾವು ತಿನ್ನುವುದರ ಬಗ್ಗೆ ಯಾವ ತಕರಾರೂ ಇದ್ದಿಲ್ಲ. ಯಾವತ್ತೂ ತಿನ್ನಬೇಡಿ ಅಂದಿಲ್ಲ. ಆದರೆ ಅದಕ್ಕೊಂದು ಅವಳೇ ಕಂಡುಕೊಂಡ ‘ಸುದ್ದ ಮಾಡುವ’ ಪದ್ಧತಿಯಿತ್ತು. ಅದಕ್ಕೆ ಅವಳದೇ ಆದ ತರ್ಕವಿತ್ತು. ಬೂಬು ಕೊಟ್ಟ ಸುರಕುಂಬಾದ ಪಾತ್ರೆಯನ್ನು ಪಡಸಾಲೆಯ ಗಣಪ್ಪನ ಗೂಡಿನಲ್ಲಿಟ್ಟು (ಚೌತಿ ಗಣಪನ ಗೂಡು) ಅಲ್ಲೇ ಕುಂತು ತಿನ್ನಿರಿ, ಒಳಗೆ ಬರಬೇಡಿ ಎಂದು ತಾಕೀದು ಮಾಡುತ್ತಿದ್ದಳು.

ಇದೇ ರೀತಿ ಮೊಹರಮ್ಮಿನ ಚೊಂಗೆ, ಸಿಹಿತಿಂಡಿಗಳು ನಮಗಾಗಿ ಮನೆಗೆ ಬಂದಾಗಲೂ ಇದೇ ಪದ್ಧತಿ ಪುನರಾವರ್ತನೆ ಆಗುತ್ತಿತ್ತು. ಮುಂದಿನ ನಮ್ಮ ‘ಸುದ್ದೀಕರಣದ’ ಪ್ರಕ್ರಿಯೆ ಓದಿ ನಗುತ್ತೀರಿ ನೀವು! ನಾವೆಲ್ಲ ಹೊಟ್ಟೆಬಿರಿಯ ತಿಂದು ತೇಗಿದ ನಂತರ ಅವ್ವ ಒಂದು ಊದಿನಕಡ್ದಿ ಹಚ್ಚಿಕೊಂಡು ಬಂದು ಕೂರುತ್ತಿದ್ದಳು. ನಾವು ಒಬ್ಬೊಬ್ಬರಾಗಿ ಅವಳ ಮುಂದೆ ಕೂತು, ‘ಆಂ’ ಎಂದು ನಾಲಿಗೆ ಹೊರತೆಗಿಬೇಕು, ಆಕೆ ಊದಿನಕಡ್ದಿಯ ತುದಿಯಿಂದ ನಾಲಿಗೆಗೆ ತಾಗಿಸಿ ನಮ್ಮನ್ನು ‘ಸುದ್ದ’ ಗೊಳಿಸುತ್ತಿದ್ದಳು. ಇದನ್ನೆಲ್ಲ ನೆನೆದು ಬರೆಯುತ್ತಲೇ ನಗುತ್ತಿದ್ದೇನೆ. ನಾನು ಚಂಡಿ, ಜಗಮೊಂಡಿ ಮಾತು ಕೇಳುವುದಿಲ್ಲವೆಂದು ಗೊತ್ತಿದ್ದ ಅವ್ವ ನನಗೇನೂ ಅನ್ನುತ್ತಿದ್ದಿಲ್ಲ. ಆದರೆ ನನ್ನ ತಂಗಿಯರಿಗೆ ಸ್ನಾನ ಮಾಡಿಸುತ್ತಿದ್ದಳಂತೆ. ಖೀರು ತಿಂದು, ಚೊಂಗೆ ತಿಂದ ನಾವು ಅಶುದ್ಧರಾಗಿಬಿಟ್ಟೆವೆಂದುಕೊಂಡು ತನ್ನದೇ ವಿಧಾನದಲ್ಲಿ ಸುದ್ದಗೊಳಿಸುತ್ತಿದ್ದಳು ನಮ್ಮನ್ನು! ಅಂಥ ಮುಗ್ಧ ಹೆಂಗಸು ನನ್ನವ್ವ,

ಮೊಹರಮ್ಮಿನ ಆಲಿ ದೇವರುಗಳ ಮೆರವಣಿಗೆ ನಮ್ಮ ಓಣಿಯಿಂದಲೇ ಸಾಗಿ ಹೊಸಯಲ್ಲಾಪುರದ ನುಚ್ಚಂಬಲಿ ಬಾವಿಗೆ ತೆರಳುತ್ತಿದ್ದವು. ನಾವು ಬೇಗ ಬೇಗ ತಯಾರಾಗಿ ಅವರಿವರ ಮಾಳಿಗೆ ಹತ್ತಿ ಕೂರುತ್ತಿದ್ದೆವು. ಮೊಹರಮ್ಮಿನ ವಾದ್ಯ, ಬ್ಯಾಂಡ್ ಬಾಜಾದ ಲಯಬದ್ಧ ನಾದ ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತದೆ. ಇದು ನಮ್ಮ ಉತ್ತರಕರ್ನಾಟಕ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಮಾದರಿಯಾಗಿದೆ. ಮೊಹರಮ್ ದೇವರುಗಳಿಗೆ ನಮ್ಮ ಓಣಿಯ ಎಲ್ಲ ಹಿಂದೂಗಳು ನಡೆದುಕೊಳ್ಳುತ್ತಾರೆ. ನಾವೂ ಪಕ್ಕದ ಪಿಂಡಾರ್ ಓಣಿಯಿಂದ ಹಿಡಿದು ಮುರುಘಾಮಠದ ದಾರಿಯಲ್ಲಿರುವ ಆಲಿದೇವರಿಗೆ ಸಕ್ಕರೆ ಓದಿಸಿಕೊಂಡು ಬರುತ್ತಿದ್ದೆವು. ಅವ್ವನೂ ಬಹುಕಾಲ ಮಕ್ಕಳಾಗಿಲ್ಲವೆಂದು ಧಾರವಾಡ ಕೋರ್ಟ ಹತ್ತಿರದ ಆಲಿದೇವರಿಗೆ ನಡೆದುಕೊಂಡಿದ್ದಳಂತೆ. ಪ್ರತಿ ಆಲಿದೇವರಿಗೂ ಒಂದೊಂದು ಹೆಸರಿವೆ, ನೆನಪಾಗುತ್ತಿಲ್ಲ. ಬಹುತೇಕ ಹಿಂದೂಗಳು ಮುಸ್ಲಿಂ ದೇವರುಗಳಿಗೆ, ಸೂಫಿ ಸಂತರ ದರ್ಗಾಗಳಿಗೆ ನಡೆದುಕೊಳ್ಳುತ್ತಾರೆ, ಈಗಲೂ. ಆಲಿದೇವರುಗಳನ್ನು ಹೊತ್ತವರಿಗೆ ಮೈಮೇಲೆ ‘ದೇವರು’ ಬಂದು ತೂರಾಡುವುದನ್ನೂ, ಹೇಳಿಕೆಯಾಗುವುದನ್ನೂ ನೋಡುವ ಕುತೂಹಲ ನಮಗೆ. ಆಲಿದೇವರುಗಳಿಗೆ ನಡೆದುಕೊಳ್ಳುವ ಪ್ರತಿ ಮನೆಯವರು ಕೊಡಪಾನದಿಂದ ನೀರು ಹೊತ್ತುತಂದು ದೇವರುಗಳ ಕಾಲುತೊಳೆಯುತ್ತಿದ್ದರು. ಕೆಲವರು ಹಚ್ಚಡ ಹಾಸುತ್ತಿದ್ದರು. ಯಾವುದಾದರೂ ಮನೆಗಳಿಂದ ಸರಿಯಾಗಿ ಹರಕೆ ಸಂದಿಲ್ಲವಾದರೆ ಆಯಾ ಮನೆಗಳ ಮುಂದೆ ಹೋಗಿ ನಿಂತುಬಿಡುತ್ತಿದ್ದವು. ಆ ಮನೆಯ ಹರಕೆ ಹೊತ್ತವರು ಕಾಲುಹಿಡಿದು ತಪ್ಪೊಪ್ಪಿಗೆಯಾದ ನಂತರವೇ ಆಲಿದೇವರ ಯಾತ್ರೆ ಮುಂದುವರಿಯುತ್ತಿತ್ತು.

ಎಲ್ಲ ಕಡೆಯಿಂದ ಬಂದು ಸೇರಿದ ಆಲಿದೇವರುಗಳು ಕಾಮನಕಟ್ಟಿ ಕೂಟಿನಲ್ಲಿ ಪರಸ್ಪರ ಸಂಧಿಸಿ ಭೇಟಿಕೊಟ್ಟ ನಂತರವೇ ಮೆರವಣಿಗೆ ನುಚ್ಚಂಬಲಿ ಬಾವಿಗೆ ಹೊರಡುತ್ತಿತ್ತು. ಹೀಗೆ ಒಮ್ಮೆ ನಾನು ನನ್ನ ಗೆಳತಿಯೂ ಸೇರಿ ಈ ಮಾಳಿಗೆಯಿಂದ ಆ ಮಾಳಿಗೆಗೆ ಜಿಗಿಯುತ್ತ, ಕಾಮನಕಟ್ಟಿ ಕೂಟಿನ ದೇವರ ಮಿಲಾಪನ್ನೂ ನೋಡಿಕೊಂಡು ಹೊತ್ತಿನ ಪರಿವೆ, ಮನೆಯಲ್ಲಿ ಬೈದಾರು ಎನ್ನುವ ಖಬರೂ ಇರದೇ ನುಚ್ಚಂಬಲಿ ಬಾವಿಯವರೆಗೂ ಹೋಗಿ, ಇತ್ತ ಅವ್ವ ಗಾಬರಿಯಿಂದ ಹುಡುಕಾಡಿ ಹುಡುಕಾಡಿ ಮನೆ ಸೇರಿದ್ದೇ ತಡ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದು ನೆನಪಿದೆ ಇನ್ನೂ.

ನಮ್ಮ ಓಣಿಯ ರೊಟ್ಟಿ ಬಡಿಯುವ ಯಾವ ಹೆಣ್ಣುಮಗಳೂ ಬಂದವರಿಗೆ ‘ಬರ್ರಿ ಉಣಬರ್ರಿ’ ಎಂದು ಬಾಯ್ತುಂಬಾ ಕರೆಯದೇ ಇರಲಾರಳು.

ನಮ್ಮ ಶೀಲವಂತ ಓಣಿಯ ನೆನಪಾದರೆ ಒಂಥರಾ ಎದೆಯಲ್ಲಿ ಸಂತಸದ ಬುಗ್ಗೆಗಳೇಳುತ್ತವೆ. ನಮ್ಮದೊಂದೇ ಎಲ್ಲರಿಗಿಂತ ಬೇರೆಯಾದ ಮನೆ. ಎದುರಿನ ಸಾಲು ಮನೆಗಳೂ ಒಂದಕ್ಕೊಂದು ಅಂಟಿಕೊಂಡಿದ್ದು ಹೆಚ್ಚುಕಡಿಮೆ ಎಲ್ಲರೂ ಸಂಬಂಧಿಕರಾಗಿದ್ದರು. ಎಲ್ಲರ ಮನೆಹೆಸರು ಒಂದೇ. ಮಲ್ಲಪ್ಪ ಶೀಲವಂತ, ಉಳುವಪ್ಪ ಶೀಲವಂತ ಹೀಗೆ ಎಲ್ಲರೂ ಶೀಲವಂತರೇ. ಹೋಳಿ ಹುಣ್ಣಿಮೆಗೆ ಸಾಲುಮನೆಗಳ ಒಂದು ಕಟ್ಟೆಯ ಮೇಲೆ ಕಾಮಣ್ಣ ರತಿದೇವಿಯರ ಮೂರ್ತಿಯನ್ನು ಕೂರಿಸಲಾಗುತ್ತಿತ್ತು. ಕೂಟಿನಲ್ಲಿ ಉಡಾಳ ಹುಡುಗರು ಕದ್ದ ಕುಳ್ಳು ಕಟ್ಟಿಗೆಗಳನ್ನು ಒಟ್ಟಿ ರಾಶಿ ಹಾಕುತ್ತಿದ್ದರು ಕಾಮನನ್ನು ಸುಡಲು. ಮಕ್ಕಳು ಸಕ್ಕರೆ ಸರ ಹಾಕೊಂಡು ಹಲಗೆ ಬಾರಿಸಿಕೊಂಡು ಲಬಲಬ ಹೊಯ್ಕೊಂಡು, ಆಡುತ್ತಿದ್ದರೆ, ದೊಡ್ಡವರ ಹಬ್ಬವೇ ಬೇರೆ. ಹೋಳಿ ಹಾಡುಗಳೂ ಮಜವಾಗಿರುತ್ತಿದ್ದವು. ಬಣ್ಣದ ಹೋಳಿ ಆಡುವ ದಿನವಂತೂ ಹೆಂಗಸರು ಹೋಳಿಗೆ, ವಡೆ ಮಾಡುವ ಭರದಲ್ಲಿ ಮೈಮರೆತಿದ್ದರೆ ಓಣಿಯ ಗಂಡಸರು ಹೆಂಡ ಕುಡಿದು ಹಳೇ ಜಗಳ, ಹಳೇ ದ್ವೇಷ ಇತ್ಯಾದಿಗಳನ್ನು ಕಾಲುಕೆದರಿ ತೆಗೆದು ಕಿಡಿಹೊತ್ತಿ ಧಗಧಗ ಉರಿದು ಮನೆಯೊಳಗಿನ ಕುಡಗೋಲು, ಕತ್ತಿ, ಹಾರೆ ಎಲ್ಲವೂ ಬೀದಿಗೆ ಬರುತ್ತಿದ್ದವು. ಅವರವರ ಮನೆ ಹೆಂಗಸರು ಮಧ್ಯಸ್ಥಿಕೆ ವಹಿಸಿ ತಾವೂ ಒಂದೊಂದು ಕೈ ಜಗಳಾಡಿ, ಜುಟ್ಟುಜುಟ್ಟು ಜಗ್ಗಾಡಿ ಕೊನೆಗೆ ಯಾರ ತಲೆ ಒಡೆಯದೇ ರಕ್ತ ಹರಿಯದೇ, ಕೈಕಾಲು ಮುರಿದುಕೊಳ್ಳದೇ ಸುಸೂತ್ರವಾಗಿ ಹಬ್ಬ ಕಳೆದರೆ ಸಾಕಪ್ಪ ಅನಿಸುತ್ತಿತ್ತು.

ಇವೆಲ್ಲದರ ಆಚೆಗೂ ನಮ್ಮ ಶಾಲಾದಿನಗಳು ಬದುಕಿನ ಅತ್ಯಂತ ನೆಮ್ಮದಿಯ ದಿನಗಳು. ಬೇಸಿಗೆ ರಜೆ ಬಂತೆಂದರೆ ನಾವು ಅವರೂರಿಗೆ ಅವರು ನಮ್ಮೂರಿಗೆ ಬಂದುಹೋಗುವ ಬಂಧುಬಳಗವಿರುತ್ತಿತ್ತು. ದೊಡ್ದವರು ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ, ಸ್ಯಾವಿಗೆ, ಸವಿತಿಬೀಜ ಅಂತ ನಾಕಾರು ಕಾರುಭಾರುಗಳನ್ನು ಹೂಡಿಕೊಂಡು ನಮ್ಮಂಥ ಮಕ್ಕಳನ್ನೂ ಕೈಕಾಲು ಕಟ್ಟಿ ಕೂಡಿಸುತ್ತಿದ್ದರು. ಹಪ್ಪಳದ ಹಸೀ ಹಿಟ್ಟನ್ನು ಬಕ್ಕರಿಸುವ ಆಸೆಯಿಂದ ನಾವೂ ಲಟ್ಟಿಸಲು ಕೂರುತ್ತಿದ್ದೆವು. ಸಂಡಿಗೆಯಿಡಲೂ ಮುಂದಾಗುತ್ತಿದ್ದೆವು, ಸಂಡಿಗೆ ಹಿಟ್ಟನ್ನು ನೆಕ್ಕಿಕೊಳ್ಳುವ ಆಸೆಯಿಂದ. ಈಗ ಎಲ್ಲವೂ ರೆಡಿಮೇಡ್ ಲಭ್ಯವಿರುವಾಗ ಮೈದಣಿಸಿಕೊಂಡು ಶ್ರಮವಹಿಸಿ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೂಡುಕುಟುಂಬಗಳಲ್ಲಿ ಮಜವಿರು ತ್ತಿತ್ತು. ಬದುಕು ಭಾರವೆನಿಸುತ್ತಿದ್ದಲ್ಲ. ಅಜ್ಜಿಯರ ಕಥೆ, ಚಿಕ್ಕಮ್ಮ, ದೊಡ್ದಮ್ಮ, ಅತ್ತೆಯಂದಿರು ಮಾವಂದಿರು, ಚಿಕ್ಕಪ್ಪಂದಿರು ಎಲ್ಲರ ಸರಸವಾದ ಮಾತು ಹರಟೆ ಚೇಷ್ಟೆಗಳಿಗೆಲ್ಲ ಕಿವಿ ಯಾಗಿ ಕೂತು ಕೇಳುವ ಮಕ್ಕಳೂ ಇದ್ದೆವು. ಈಗ ಮೂರುಜನ ಮನೆ ಯಲ್ಲಿದ್ದರೆ ಮೂವರ ಕೈಯಲ್ಲೂ ಮೊಬೈಲ್. ಅವರ ಗೊಡವೆ ಇವರಿಗಿಲ್ಲ ಇವರ ಗೊಡವೆ ಅವರಿಲ್ಲ. ಅವರ ವರ ಲೋಕದಲ್ಲಿ ಅವರವರೇ ಮುಳುಗಿರುತ್ತಾರೆ. ಆದರೂ ನಾವು ಒಂದು ಕುಟುಂಬವೆಂಬ ಸಾಮಾಜಿಕ ಚೌಕಟ್ಟಿನಲ್ಲಿ ಬದುಕುತ್ತಿದ್ದೇವೆ.

ದಿನವೂ ಶಾಲೆ ಬಿಟ್ಟು ಬಂದಕೂಡಲೇ ಹಸಿವಾಗಿರುತ್ತಿತ್ತು. ಕುರುಕುರೆ, ಮ್ಯಾಗಿಗಳಿಲ್ಲದ ನಮ್ಮ ಶಾಲಾದಿನಗಳಲ್ಲಿ ಅವ್ವ ಪಟ್ಟೆಂದು ಕಲಸಿಕೊಡುತ್ತಿದ್ದ ಅರಳಿಟ್ಟು, ಹಚ್ಚಿಡುತ್ತಿದ್ದ ಚುರುಮುರಿ, ಅವಲಕ್ಕಿ ಎಷ್ಟು ರುಚಿಯಾಗಿರುತ್ತಿದ್ದವು. ಸಾಲು ಮನೆಗಳ ಮಾಳಿಗೆ ಮೇಲೆ ಸಾಲಿಯಿಂದ ಬಂದಕೂಡಲೆ ಮಕ್ಕಳು ರೊಟ್ಟಿಪಲ್ಯೆ, ರಂಜಕ, ಕರಿಂಡಿ ಹಚ್ಚಿಕೊಂಡು ತಿನ್ನುತ್ತಿದ್ದ ನೋಟ, ನಾನೂ ಅವರೊಡನೆ ತಿಂದ ರೊಟ್ಟಿಯ ಸವಿ ಬಾಯಿಯಲ್ಲೇ ಇದೆ ಇನ್ನೂ. ರೊಟ್ಟಿ ಒಂದೇ ಎಲ್ಲರ ಸಾಮಾನ್ಯ ಪದಾರ್ಥವಾಗಿರುತ್ತಿತ್ತು. ಮಲ್ಲಕ್ಕನ ಪಲ್ಯೆಯಿದ್ದರೆ, ಬಸಮ್ಮನ ಹಿಂಡಿ, ಗಂಗಕ್ಕಕ್ಕಿಯ ಕಾರಬ್ಯಾಳಿ, ಎಣಿಗಾಯಿ ಪಲ್ಯೆ ಹೀಗೆ ಅವರಿಂದ ಹಾಕಿಸಿಕೊಂಡು, ಉಣ್ಣಿರಿ ಉಣ್ಣಿರಿ ಎಂದು ಅಕ್ಕರೆಯಿಂದ ಗದರಿಸಿಕೊಂಡು ಉಣ್ಣುವ ಸುಖ ಯಾವತ್ತೂ ಈ ಜನ್ಮದಲ್ಲಿ ಬರಲಿಲ್ಲ. ನಮ್ಮೂರಿನ ಸಂಸ್ಕಾರ ನಮ್ಮೂರಿನ ಸಹಬಾಳ್ವೆ ಈಗಲೂ ನನಗಿಷ್ಟ. ನನ್ನ ಬಾಲ್ಯದಲ್ಲಿ ನನ್ನ ಗೆಳತಿಯರೆಲ್ಲ ಗೌಡರ ಮಕ್ಕಳು. ಶಶಿಕಲಾ ಶ್ಯಾಮನೂರ ಅನ್ನುವ ಗೆಳತಿಯ ಅವ್ವ ಗಂಗಾಳದಲ್ಲಿ ಕಲಸಿ ನೀಡುತ್ತಿದ್ದ ಅನ್ನ, ಕೆನೆಮೊಸರಿನ ಋಣವೂ ನನ್ನ ಮೇಲಿದೆ. ಅವಳಂತೆ ಸದಾ ಹಾಲು ಹೈನು, ಕೆನೆಮೊಸರು, ಗಿಣ್ಣು ಇಕ್ಕಿ ಉಣಿಸಿದ ಎಲ್ಲ ಅವ್ವಂದಿರ ಪ್ರೀತಿಯ ಋಣವನ್ನು ಹೇಗೆ ತೀರಿಸಬಲ್ಲೆ?

ಕಳೆದ ವರ್ಷ ಧಾರವಾಡಕ್ಕೆ ಹೋದಾಗ ಯಲ್ಲಪ್ಪಗೌಡರ ಮನೆಗೆ ಯಾವುದೋ ಕಾರ್ಯಕಾರಣ ಹೋಗಿದ್ದೆ. ಬಾಲ್ಯದಲ್ಲಿ ಜೋಕಾಲಿಯಾಡುತ್ತಿದ್ದ ಮನೆ. ಕೆನೆಮೊಸರುಂಡ ಮನೆ. ವೃದ್ಧಾಪ್ಯದಿಂದ ತೀರಾ ಹೈರಾಣಾದ ಅವರನ್ನು ನಾನು ವಿಚಾರಿಸಿಕೊಂಡು, ಹೇಗಿದ್ದಿಯವ್ವಾ ಎಂದು ಅವರು ನನ್ನನ್ನು ವಿಚಾರಿಸುವಾಗಲೇ ಅವರ ಮಗಳು ತಾಟಿನಲ್ಲಿ ರೊಟ್ಟಿಪಲ್ಯೆ ಮೊಸರು ಹಾಕಿಕೊಂಡೇ ಬಂದಳು, ‘ಬರ್ರೀ ರೊಟ್ಟಿ ಉಣಬರ್ರಿ’ ಎಂದು. ನೆನೆಸಿಕೊಂಡು ಕಣ್ಣು ತೇವವಾಗುತ್ತಿವೆ.

*ಲೇಖಕಿಯ ತವರು ಧಾರವಾಡ. ಕಳೆದ ಮೂರು ದಶಕಗಳಿಂದ ನವದೆಹಲಿಯಲ್ಲಿ ವಾಸ. ಖಾಸಗಿ ಕಂಪನಿಯ ಉದ್ಯೋಗಿ. ಬಹುಮಾನಿತ ಪ್ರಬಂಧಕಾರರು. ಕತೆ, ಕವಿತಾ ಸಂಕಲನ ಪ್ರಕಟಗೊಂಡಿವೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018