2nd ಜುಲೈ ೨೦೧೮

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಪರಮೇಶ್ವರ ಗುರುಸ್ವಾಮಿ

ಗೌರಿ ಲಂಕೇಶ್ ಸಾವು ಅವರ ಹತ್ತಿರದವರಲ್ಲಿ ಹುಟ್ಟು ಹಾಕಿದ ಎರಡು ಪ್ರತಿಕ್ರಿಯೆಗಳು ಬಹಳ ಮುಖ್ಯ: ಒಂದು, ಪ್ರಕಾಶ್ ರೈ ಅವರ ‘ಜಸ್ಟ್ ಆಸ್ಕಿಂಗ್’ ಚಳವಳಿ. ಇನ್ನೊಂದು, ಈ ಪುಸ್ತಕ.

ತಮ್ಮದೇ ಸರಿ ಅಂದುಕೊಳ್ಳುವ ಬಲಪಂಥೀಯರಿಗೆ, ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ. ಮಹಿಳೆಯರು ತಮ್ಮ ಆಯ್ಕೆಗಳನ್ನ ತಾವೇ ಮಾಡಿಕೊಳ್ಳುತ್ತಾರೆ ಅಥವ ಹಾಗೆ ಮಾಡುವ ಸ್ವಾತಂತ್ರ್ಯವನ್ನು ಕೇಳುತ್ತಾರೆ ಅಂದಾಗ ಪ್ರತಿಯೊಂದು ಧರ್ಮದ ಮೂಲ ಹೇತುಗಳಾದ ಪಿತೃಪ್ರಧಾನತ್ವ ಮತ್ತು ಸ್ತ್ರೀ ವಿರುದ್ಧದ ಪೂರ್ವಗ್ರಹಗಳಿಗೆ ಸವಾಲು ಹಾಕಿದಂತಾಗುತ್ತದೆ. -ಇದು ಲೇಖಕ ಚಿದಾನಂದ ರಾಜಘಟ್ಟ ಅವರು ‘ಇಲ್ಲಿಬರಲ್ ಇಂಡಿಯಾ’ ಪುಸ್ತಕದಲ್ಲಿ ಹೇಳುವ ಮಾತು.

ಗೌರಿ ಲಂಕೇಶ್, ಬದುಕಿದ್ದು ಹೀಗೆಯೆ: ತಮ್ಮ ಆಯ್ಕೆಗಳನ್ನು ತಾವೇ ಮಾಡಿಕೊಂಡರು. ತಮ್ಮ ಆಯ್ಕೆಗಳ ಸ್ವಾತಂತ್ರ್ಯವನ್ನು ತಮ್ಮಲ್ಲೇ ಇಟ್ಟುಕೊಂಡರು. ಇಂಥ ವ್ಯಕ್ತಿತ್ವವನ್ನು ತಾವೇ ಸ್ವತಃ ತಿದ್ದಿ ತೀಡಿ ರೂಪಿಸದಿದ್ದರೂ ಅರಳಲು ಅನುವು ಮಾಡಿಕೊಟ್ಟ ಲಂಕೇಶರ ಬಗ್ಗೆ ವಿಸ್ಮಯವೆನಿಸುತ್ತದೆ.

ಗೌರಿಯವರ ಒಡನಾಡಿಯಾಗಿದ್ದೂ ನೆಲದ ಅಗತ್ಯವನ್ನು ಅರಿಯಲಾರದೆ ಜಾಗತಿಕವಾಗಿ ಕಾಲು ಚಾಚಿ ಹೋದ ಚಿದಾನಂದ ಅವರೂ ಮೇಲೆ ಉದ್ಧರಿಸಿದ ಮಾತುಗಳನ್ನು ಬರೆಯಬಹುದಾದ ಅರಿವನ್ನು ಮೂಡಿಸಿದ್ದು ಖುದ್ದು ಗೌರಿಯವರೇ. ಇದಕ್ಕೆ ಕಾರಣ ಅವರೆಡೆಗೆ ಗೌರಿ ಚಾಚಿದ ಮಾತೃತ್ವ. ಬಸವನಗುಡಿಯ ರಸ್ತೆಗಳಲ್ಲಿ ಸೈಕಲ್ ಹೊಡೆದುಕೊಂಡು ಹಕ್ಕಿಯಂತೆ ಹಾರಾಡಿಕೊಂಡಿದ್ದ ಪುಟ್ಟ ಹುಡುಗಿ ಹುತಾತ್ಮೆಯಾದದ್ದು ನಮ್ಮ ಕಾಲದ ದೊಡ್ಡ ಕುತೂಹಲ.

ಐದು ವರ್ಷಗಳ ಕಾಲದ ಹರೆಯದ ಪ್ರೇಮ, ಐದು ವರ್ಷಗಳ ಎಲ್ಲರಂತಲ್ಲದ ದಾಂಪತ್ಯ. ವಿಚ್ಛೇದನಾ ನಂತರದ ಬೌದ್ಧಿಕ ಸಾಂಗತ್ಯ. ವಿಚ್ಛೇದನವಾದ ಮೇಲೂ ಮುರಿಯದ ಸ್ನೇಹದ ಬಗ್ಗೆ ಕೆಲ ಸ್ನೇಹಿತ(ತೆ)ಯರು ಆಶ್ಚರ್ಯ ಪಡುತ್ತಿದ್ದರು ಎಂದು ಚಿದಾನಂದ ತಿಳಿಸುತ್ತಾರೆ. ‘ನಾವು ಸ್ಫೋಟಕ ಕ್ಷಣಗಳನ್ನು ಕಳೆದಿದ್ದೇವೆ, ಆದರೆ ಅವುಗಳನ್ನೆಲ್ಲ ತಕ್ಷಣ ಮೀರಿ ಹೆಚ್ಚಿನ ಆದರ್ಶಗಳಿಂದ ಬೆಸೆದುಕೊಳ್ಳುತ್ತಿದ್ದೆವು’ ಎನ್ನುತ್ತಾರೆ ಚಿದಾನಂದ.

ನ್ಯಾಷನಲ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವರು ಐದು ವರ್ಷ ಪ್ರೀತಿಸಿ ಸರಳ ಮದುವೆಯಾಗಿ ಐದು ವರ್ಷ ಸಂಸಾರ ಮಾಡಿ ವಿಚ್ಛೇದನ ಪಡೆದ ಮೇಲೆ ಗೌರಿ ಹತ್ಯೆಯಾಗುವವರೆಗೂ ಆರೋಗ್ಯಕರ ರೀತಿಯಲ್ಲಿ ಆತ್ಮೀಯರಾಗಿದ್ದವರು. ಬೌದ್ಧಿಕ ಸಾಂಗತ್ಯ ಕಾಪಾಡಿಕೊಂಡಿದ್ದವರು ಇವರಿಬ್ಬರು. ಅದು ಮೂವತ್ತೇಳು ವರ್ಷಗಳ ಕಾಲದ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳು ತುಂಬಿದ್ದ ಸಾಂಗತ್ಯ. ಇಂಗ್ಲಿಷ್ ಮಾಧ್ಯಮದಲ್ಲೇ ಓದು ಬರಹದಲ್ಲಿ ತೊಡಗಿಕೊಂಡು ಚಿದಾನಂದ ಅಮೆರಿಕದೆಡೆಗೆ ಜಾಗತಿಕವಾಗಿ ಚಾಚಿಕೊಂಡರೆ, ಗೌರಿ, ಸ್ಥಳೀಯವಾಗುತ್ತಾ ಕನ್ನಡಲೋಕಕ್ಕೆ ತಮ್ಮನ್ನು ಕೇಂದ್ರೀಕರಿಸಿಕೊಳ್ಳುತ್ತಾರೆ. ಹರೆಯದ ಕಾಲೇಜು ದಿನಗಳಲ್ಲಿ ಚಿದಾನಂದ ಸಿಗರೇಟು ಸೇದುವುದನ್ನು ಗೌರಿ ಸ್ವಲ್ಪವೂ ಇಷ್ಟ ಪಟ್ಟಿರುವುದಿಲ್ಲ. ಭಾರತದಿಂದ ಅಮೆರಿಕಕ್ಕೆ ಉದ್ಯೋಗಸಂಬಂಧ ಹೋಗುವಾಗ ಲಂಡನ್‍ನ ಹೀಥ್ರೊ ವಿಮಾನ ನಿಲ್ದಾಣದಲ್ಲಿ ಸೇದಿದ ಕೊನೆಯ ಸಿಗರೇಟು ತುಂಡನ್ನು ಎಸೆದ ಮೇಲೆ ದೇಹದಾಢ್ರ್ಯ ಬೆಳಸಿಕೊಳ್ಳುತ್ತಾರೆ ಚಿದಾನಂದ. ಆದರೆ, ಇಲ್ಲಿ ಗೌರಿ, ಹೋರಾಟಗಳಲ್ಲಿ ಮುಳುಗಿ ತಮ್ಮ ಅಂದಗಾಣಿಕೆಯನ್ನು ಕಡೆಗಣಿಸಿದರು.

ಇಡೀ ಪುಸ್ತಕದಲ್ಲಿ ಗೌರಿಯವರ ಗಟ್ಟಿಯಾದ ವ್ಯಕ್ತಿತ್ವವನ್ನು, ರಾಜಕೀಯ ಮತ್ತು ಸಾಮಾಜಿಕ ಬದ್ಧತೆಗಳನ್ನು, ಇವುಗಳ ನಡುವೆಯೇ ಅವರಲ್ಲಿದ್ದ ತಾಯ್ತನವನ್ನು ಪ್ರೀತಿಯನ್ನು, ಕಕ್ಕುಲತೆಯನ್ನು ಆಪ್ತವಾಗಿ ಪದರ ಪದರವಾಗಿ ಚಿದಾನಂದರು ಬಿಡಿಸಿಕೊಟ್ಟಿದ್ದಾರೆ. ಕೊನೆಯಲ್ಲಿ ಗೌರಿ ಎಂದರೆ, ‘ನಿಬ್ಬೆರಗಿನ ಸೊಬಗು’ (ಅಮೇಜಿಂಗ್ ಗ್ರೇಸ್) ಎಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ‘ಉಳಿದೆಲ್ಲ ಹಣೆಪಟ್ಟಿಗಳನ್ನು ಮರೆತುಬಿಡಿ: ಎಡಪಂಥೀಯೆ, ತೀವ್ರವಾದಿ, ಹಿಂದುತ್ವವಿರೋಧಿ, ಧರ್ಮಾತೀತೆ, ಇತ್ಯಾದಿ. ನನಗೆ, ಇಷ್ಟೇ: ಆಕೆ ನಿಬ್ಬೆರಗಾಗಿಸುವ ಸೊಬಗಿನ ಸಾರ.’ ಚಿದಾನಂದ ಅವರ ಈಗಿನ ಹೆಂಡತಿ, ಮೇರಿ ಬ್ರೀಡಿಂಗ್ ಬರೆಯುತ್ತಾರೆ: ‘ಆಕೆ(ಗೌರಿ)ಯ ಪರಿಚಯ ಮಾತ್ರವೇ ನಿಮ್ಮಲ್ಲಿ ಹೆಮ್ಮೆ ಹುಟ್ಟಿಸುತ್ತದೆ... ಗೌರಿ, ನನ್ನ ಮಗಳಿಗೆ ಆದರ್ಶ ಮಾದರಿಯಾಗಬೇಕು ಅನಿಸುತ್ತದೆ, ಅವಳ ಗಟ್ಟಿತನ ಮತ್ತು ತೀವ್ರ ಸ್ವಂತಿಕೆ.’

ಚಿದಾನಂದ ಮತ್ತು ಗೌರಿ ಲಿಂಗಾಯತ/ವೀರಶೈವರಾಗಿ ಹುಟ್ಟಿದರೂ ಹರೆಯದಲ್ಲಿ ಹೇಗೆ ಭಾವೋದ್ರೇಕದ ಉದಾರವಾದಿತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೇ ತಮಗೆ ಜಗತ್ತಾಗಿತ್ತು ಎಂಬುದನ್ನು ಚಿದಾನಂದ ಕಟ್ಟಿಕೊಡುತ್ತಾರೆ. ಹಾಗೆ ರೂಪುಗೊಳ್ಳಲು ನ್ಯಾಷನಲ್ ವಿದ್ಯಾ ಸಂಸ್ಥೆ ಮತ್ತು ಅಂದಿನ ಹಲವಾರು ಚಳವಳಿಗಳು ವ್ಯಕ್ತಿಗಳು ಕಾರಣ ಎಂಬುದನ್ನು ಚಾರಿತ್ರಿಕ ಮೂಲಗಳು ಮತ್ತು ವರ್ತಮಾನದ ಆಗುಹೋಗುಗಳ ಮೂಲಕ ಅರ್ಥೈಸುತ್ತಾರೆ. ಶರಣ ಚಳವಳಿ, ಅದರ ಆಶಯಗಳು ಈಗ ಅರ್ಥ ಕಳೆದುಕೊಂಡು ವೈದಿಕ ಆಚರಣೆಗಳಲ್ಲಿ ಮರೆಯಾಗಿರುವುದು, ಈ ರೀತಿಯ ಸಂಪ್ರದಾಯವಾದಿಗಳನ್ನು ‘ಕಲ್ಕಟ್ಟು’ಗಳೆಂದು ಆಡಿಕೊಳ್ಳುತ್ತಿದ್ದುದು, ವೈಚಾರಿಕತೆಯನ್ನು ಪ್ರಚೋದಿಸಿದ ಎಚ್.ನರಸಿಂಹಯ್ಯನವರ ಪ್ರಭಾವ, ಕನ್ನಡಜ್ಞಾನದ ಕೊರತೆಯ ಮಿತಿ, ಕಲಬುರ್ಗಿಯವರ ಮಾರ್ಗ-1 ಲಿಂಗಾಯತ/ವೀರಶೈವ ಸಮಾಜದಲ್ಲಿ ಉಂಟು ಮಾಡಿದ ಅಲ್ಲೋಲಕಲ್ಲೋಲ, ಕಲಬುರ್ಗಿಯವರು ತಮ್ಮ ಬದ್ಧತೆಗೆ, ಸಂಶೋಧನಾ ಸತ್ಯಕ್ಕೆ ವಿರುದ್ಧವಾಗಿ ಕ್ಷಮೆ ಕೇಳ ಬೇಕಾಗಿ ಬಂದಿದ್ದು, ನಂತರ ಅವರು ಲಿಂಗಾಯತವೇ ಬೇರೆ ವೀರಶೈವವೇ ಬೇರೆ ಎಂದು ಸಾಧಿಸಿದ್ದು, ಈ ಎಲ್ಲ ಅಂಶಗಳು ತಮ್ಮಿಬ್ಬರ ವ್ಯಕ್ತಿತ್ವಗಳನ್ನು ರೂಪಿಸಿರುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಇವರಿಬ್ಬರು ಮದುವೆಯಾಗಿ ಮನೆ ಮಾಡಿದಾಗ ಕೊಂಡುಕೊಂಡ ಅಗತ್ಯ ವಸ್ತುಗಳಲ್ಲಿ ಹತ್ತು ಸಾವಿರ ರೂಪಾಯಿಯ ಎನ್‍ಸೈಕ್ಲೋಪೀಡಿಯಾ ಬ್ರಿಟಾನಿಕದ ಮುವ್ವತ್ತೆರಡು ಸಂಪುಟಗಳು ಸೇರಿದ್ದವು. ಇಲ್ಲಿಬರಲ್ ಇಂಡಿಯಾ ಪುಸ್ತಕದುದ್ದಕ್ಕೂ ಗೌರಿಯವರನ್ನು ಅವರು ಹೋರಾಟಗಾರ್ತಿಯಾಗಿ ರೂಪುಗೊಂಡದ್ದನ್ನು ಸನ್ನಿವೇಶಗಳು ಘಟನೆಗಳು ಪ್ರಸಂಗಗಳು ಮಾತುಕತೆಗಳ ಮೂಲಕ, ಅವುಗಳ ಐತಿಹಾಸಿಕ, ಸಾಮಾಜಿಕ, ಸಧ್ಯದ ಭೂತ ಮತ್ತು ವರ್ತಮಾನದ ಎಳೆಗಳ ಮೂಲಕ ನೇಯ್ದು ಕೊಟ್ಟಿದ್ದಾರೆ. ಇವರಿಬ್ಬರ ಸಾಂಗತ್ಯ ಒಂದು ಬೌದ್ಧಿಕ ಪಯಣ ಎನ್ನಬಹುದು. ಇವರಿಬ್ಬರ ಪ್ರೇಮ ಮತ್ತು ದಾಂಪತ್ಯ, ವಿಚ್ಛೇದನ ಅಮುಖ್ಯ. ಗೆಳೆತನವೇ ಇಲ್ಲಿ ಮುಖ್ಯವಾಗುತ್ತದೆ.

ಚಿದಾನಂದ ರಾಜಘಟ್ಟ

ಸಾಮಾನ್ಯವಾಗಿ ಸಹಿಷ್ಣುಗಳಾಗಿದ್ದ ಕನ್ನಡಿಗರು ಅಸಹಿಷ್ಣುಗಳಾದ ಬಗೆ, ಪರಿಣಾಮವಾಗಿ ವೀರಶೈವ ವಲಯದ ಅಸಹಿಷ್ಣುತೆ ಹಾಗೆಯೇ ಹಿಂದು ವಿಸ್ತೃತ ವಲಯದ ಅಸಹಿಷ್ಣುತೆ ಕಲಬುರ್ಗಿಯವರನ್ನು ಬಲಿತೆಗೆದುಕೊಂಢಿದ್ದು, ನಂತರ ಗೌರಿಯವರನ್ನು ಬಲಿ ತೆಗೆದುಕೊಳ್ಳುವಂತೆ ಬೆಳೆದದ್ದನ್ನು ಪುಸ್ತಕ ದುದ್ದಕ್ಕೂ ಹಂತಹಂತವಾಗಿ ಬಿಡಿಸಿಟ್ಟಿದ್ದಾರೆ. ರಾಮಾಯಣ, ಮಹಾ ಭಾರತ ಧಾರಾವಾಹಿಗಳು ದೂರದರ್ಶನ ಒಂದೇ ವಾಹಿನಿಯಿದ್ದಾಗ ಪ್ರಸಾರವಾದದ್ದು, ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆ ಸೀಮಿತವಾಗಿ ಹಿಂದುತ್ವ ಭೋರ್ಗರೆತದ ರಾಮರಾಜ್ಯವಾದದ್ದು, ಅದ್ವಾನಿಯವರ ರಥಯಾತ್ರೆ, ರಾಮಮಂದಿರದ ಕಲ್ಪನೆ, ಹೆಮ್ಮೆಯ ವ್ಯಕ್ತಿಯೆನಿಸಿದ್ದ ಮೈಸೂರು ಹುಲಿ ಟಿಪ್ಪು ಮತಾಂಧ ದಬ್ಬಾಳಿಕೆಯ ಕೊಲೆಗಡುಕ ದ್ರೋಹಿ ಟಿಪ್ಪು ಆದದ್ದು, ಈ ಪ್ರಕ್ರಿಯೆಯಲ್ಲಿ ಸ್ವೋರ್ಡ್ ಆಫ್ ಟಿಪ್ಪು ಧಾರಾವಾಹಿ ಬಳಕೆಯಾದದ್ದು. ಇವೆಲ್ಲದರ ಮೇಳೈಕೆಯಾಗಿ ಉಗ್ರ ಹಿಂದುತ್ವ ತಲೆ ಎತ್ತುತ್ತಿದ್ದಾಗ ಮಂಡಲ್ ಮಸೀದಿ ವಿವಾದಗಳು ಉತ್ತುಂಗದಲ್ಲಿದ್ದಾಗ ಇವರಿಬ್ಬರೂ ರಾಮಾಯಣದಲ್ಲಿ ಇತರ ಹಿಂದುಳಿದ ಜಾತಿಗಳ ಪಾತ್ರಗಳನ್ನು ಹುಡುಕುವ ಆಟ ಆಡುತ್ತಿರುತ್ತಾರೆ!

ಪ್ರಾಸಂಗಿಕವಾಗಿ ಹಲವು ರಾಮಾಯಣಗಳನ್ನು ನೆನಪಿಸುತ್ತಾ ರಾಮಕಥೆ, ಹಿಂದು ಕತೆ ಮಾತ್ರವಲ್ಲ, ಭಾರತದ್ದು ಮಾತ್ರವಲ್ಲ, ಇತರ ಏಶಿಯಾ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ರಾಮಲೀಲಾದ ಹಲವಾರು ರೂಪಗಳನ್ನು ವಿವರಿಸಿ ಮಲಯಾಳದ ‘ಮಾಪಿಳ್ಳೆ ರಾಮಾಯಣ’ದ ಬಗ್ಗೆಯೂ ತಿಳಿಸುತ್ತಾರೆ. ಇದರಲ್ಲಿ ರಾಮ, ಶೂರ್ಪಣಖಿಗೆ, “ಒಬ್ಬ ಗಂಡಸಿಗೆ ಒಬ್ಬಳೇ ಹೆಣ್ಣು, ಒಬ್ಬ ಹೆಂಗಸಿಗೆ ಒಬ್ಬನೇ ಗಂಡು: ಇದು ಶರಿಯತ್ ಕಾನೂನು” ಎನ್ನುತ್ತಾನೆ! ಎಂ.ಎಫ್.ಹುಸೇನರು ದೇಶ ಬಿಟ್ಟು ಹೋದ ಕೆಲ ವರ್ಷಗಳ ನಂತರ ಕೇರಳದ ಮಾತೃಭೂಮಿ ಪತ್ರಿಕೆಯಲ್ಲಿ ಲೇಖಕ ಎಂ.ಎಂ.ಬಷೀರ್ ಅವರು ಬರೆಯುತ್ತಿದ್ದ ರಾಮಾಯಣ ಕುರಿತ ಲೇಖನಮಾಲೆಯನ್ನು ಹಿಂದುತ್ವವಾದಿಗಳು ನಿಲ್ಲಿಸಿದರು. “ಎಪ್ಪತ್ತೈದನೇ ವಯಸ್ಸಿನಲ್ಲಿ ನನ್ನನ್ನು ಕೇವಲ ಮುಸ್ಲಿಂ ಲೇಖಕನಾಗಿ ಇಳಿಸಿಬಿಟ್ಟರು. ನನಗೆ ತಡೆದುಕೊಳ್ಳಲಾಗಲಿಲ್ಲ. ಬರೆಯುವುದನ್ನೇ ನಿಲ್ಲಿಸಿಬಿಟ್ಟೆ.” ಎಂದು ಹೇಳಿದರು.

ಈ ರಾಮಾಯಣಗಳ ನೆವದಲ್ಲೇ ರಾವಣನ ಪಾತ್ರವನ್ನು ಎತ್ತಿಕೊಂಡು ಉತ್ತರ ಭಾರತದ ರಾಮಾಯಣಗಳು ದಕ್ಷಿಣ ಭಾರತದ ರಾಮಾಯಣಗಳ ಗ್ರಹಿಕೆಗಳ ವ್ಯತ್ಯಾಸಗಳನ್ನು ಗುರುತಿಸುತ್ತ ಕುವೆಂಪುರವರ ರಾವಣನನ್ನು ಕಂಬರಾಮಾಯಣದ ರಾವಣನನ್ನು ಪ್ರಸ್ತಾಪಿಸುತ್ತಾ ದಕ್ಷಿಣದ ಪುರಾಣಗಳು ಮುಕ್ತ ಆಶಯಗಳನ್ನು ಹೊಂದಿವೆ ಎನ್ನುತ್ತಾರೆ.

ಗೌರಿಯವರಿಗೆ ಮೂರ್ತಿಭಂಜಕತನ ಅವರ ರಕ್ತ(ಡಿ.ಎನ್.ಎ.)ದಲ್ಲೇ ಇದೆ ಎಂದು ಚಿದಾನಂದ ಗುರುತಿಸುತ್ತಾರೆ. ಲಂಕೇಶರನ್ನು ಇವರೂ ಅಪ್ಪ ಎಂದೇ ಕರೆಯುವುದು. ಇವರ ತಂದೆ ತಾಯಿ ಸಂಪ್ರದಾಯಸ್ಥ ವೀರಶೈವರು. ಅಕ್ಕ, ತನಗಿಷ್ಟವಾದವರನ್ನು ಮದುವೆಯಾಗಿ ಮನೆಗೆ ದೂರಾಗಿದ್ದರು. ಅಣ್ಣ, ತಂದೆತಾಯಿಯ ಇಷ್ಟದಂತೆ ಇಂಜಿನಿಯರ್ ಆಗದೆ ಮರ್ಚೆಂಟ್ ನೇವಿ ನೌಕರಿಗೆ ಸೇರಿ ಅಲೆಮಾರಿಯಾಗಿದ್ದರು. ಆದ್ದರಿಂದ ಮದುವೆ ಆಗಿರಲಿಲ್ಲ. ಅವರಿಗೆ ಸರೀಕರ ಮುಂದೆ ತಲೆ ಎತ್ತಿಕೊಂಡು ಇರುವುದಕ್ಕಾಗಿ ಚಿದಾನಂದರ ಮದುವೆ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ಮೂರು ದಿನದ ಒಂದು ಈವೆಂಟ್ ಮ್ಯಾನೇಜ್ಮೆಂಟ್ ಆಗಬೇಕಿತ್ತು. ಅರೆ ಮನಸ್ಸಿನ ಒಪ್ಪಿಗೆ ಮಾತ್ರ ಸಿಕ್ಕಿತ್ತು. ಇವರ ಮದುವೆಗೆ ನಿರಾತಂಕವಾದ ಒಪ್ಪಿಗೆ ಕೊಟ್ಟವರು ಲಂಕೇಶ್ ಒಬ್ಬರೇ. ನಂತರವೂ ಇವರಿಬ್ಬರ ವಿಚ್ಛೇದನವಾದ ಮೇಲೂ ಆ ವಿಷಯವನ್ನು ತಲೆಗೇ ಹಚ್ಚಿಕೊಳ್ಳದೆ ಮಗಳು ಮತ್ತು ಮಾಜಿ ಅಳಿಯನನ್ನು ಸ್ನೇಹಿತರಂತೇ ನಡೆಸಿಕೊಂಡರು.

ಕನ್ನಡ ಸರಿಯಾಗಿ ಗೊತ್ತಿಲ್ಲದ ಇವರಿಬ್ಬರಿಗೆ ಕನ್ನಡದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕರ್ನಾಟಕದ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಹೆಚ್ಚು ಅರಿವುಂಟಾಗುವುದೇ ಲಂಕೇಶರ ಕಾರಣಕ್ಕೆ. ರಾಜಕೀಯ, ಸಾಂಸ್ಕೃತಿಕ ಲೋಕದ ದೊಡ್ಡ ವ್ಯಕ್ತಿಗಳೆಲ್ಲಾ ಪರಿಚಯವಾಗುತ್ತಾರೆ. ಚಿದಾನಂದರಿಗೆ ಲಂಕೇಶರ ಪ್ರತಿಭೆ ಮತ್ತು ಸಾಮಥ್ರ್ಯದ ಬಗ್ಗೆ ಮಹಾ ಗೌರವ. ಅವರ ವ್ಯಕ್ತಿತ್ವದ ನ್ಯೂನತೆಗಳ ಕುರಿತೂ ಅಷ್ಟೇ ನಿರ್ಮೋಹಿಯಾಗಿ ಬರೆಯುತ್ತಾರೆ. ಲಂಕೇಶರ ಒಡ್ಡೋಲಗ, ಅದರ ಆಸ್ಥಾನಿಕರು ಅವರ ಸ್ವಭಾವಗಳನ್ನು ಚಿತ್ರಿಸಿದ್ದಾರೆ. ಲಂಕೇಶರು ಗುರುತಿಸುವಿಕೆಯನ್ನು ಇಷ್ಟ ಪಡುತ್ತಿದ್ದರು. ಸಾಹಿತ್ಯಿಕ ಖುಷಿಗಳನ್ನು ಸಿಟ್ಟುಗಳನ್ನು ಮುಚ್ಚಿಡುತ್ತಿರಲಿಲ್ಲ. ಅವರ ಕಟಕಿ ಚುಚ್ಚಿ ನೋಯಿಸುವಂಥದ್ದು. ಒಮ್ಮೆ ಅವರ ಕಟಕಿಯಿಂದ ನೊಂದ ಬಹು ಕಾಲದ ಗೆಳೆಯ ನಿಸಾರ್ ಅಹ್ಮದ್ ಅವರು ಬರುವುದನ್ನೇ ಬಿಟ್ಟುಬಿಟ್ಟರಂತೆ. ಕೊನೆಯವರೆಗೂ ಸಹಿಸಿಕೊಂಡು ಖಾಯಂ ಆಗಿದ್ದವರು ರಾಮಚಂದ್ರ ಶರ್ಮ. ಬೆಂಗಳೂರಿಗೆ ಬಂದಾಗಲೆಲ್ಲ ಚಿದಾನಂದ ತಾವು ಅಪ್ಪ ಎಂದೇ ಕರೆಯುತ್ತಿದ್ದ ಲಂಕೇಶರನ್ನು ಭೇಟಿ ಮಾಡುತ್ತಿದ್ದರು. ಅವರ ಒಡ್ಡೋಲಗದಲ್ಲಿ ಭಾಗವಹಿಸುತ್ತಿದ್ದರು.

ಗೌರಿಯವರ ಹತ್ಯೆ ರಾಜ್ಯಾದಾದ್ಯಂತ ಮಿಶ್ರ ಪ್ರತಿಕ್ರಿಯೆ ಮೂಡಿಸಿತು. ಹಿಂದು ಬಲ ಪಂಥೀಯರು ಸಂಭ್ರಮ ಪಡುವುದಲ್ಲದೆ ಬಹಳ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅವರವರ ಪತ್ರಿಕೆಗಳಲ್ಲಿ ಬರೆದುಕೊಂಡರು. ಆದರೆ ಇದು ನಗಣ್ಯ. ಹತ್ಯೆಯನ್ನು ಖಂಡಿಸಿ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆಗಳು ಬಂದವು. ಗೌರಿಯವರ ಸಾವು ಅವರ ಹತ್ತಿರದವರಲ್ಲಿ ಹುಟ್ಟು ಹಾಕಿದ ಎರಡು ಪ್ರತಿಕ್ರಿಯೆಗಳು ಬಹಳ ಮುಖ್ಯ. ಒಂದು, ಪ್ರಕಾಶ್ ರೈ/ರಾಜ್ ಅವರ ‘ಜಸ್ಟ್ ಆಸ್ಕಿಂಗ್’ ಚಳವಳಿ. ಸರಣಿ ಪ್ರಶ್ನೆಗಳನ್ನು ಅವರು ರಾಜ್ಯದಾದ್ಯಂತ ಹಿಂದು ಬಲ ಪಂಥೀಯರಿಗೆ ಕೇಳಿದರು. ಇನ್ನೊಂದು, ಈ ಪುಸ್ತಕ. “ಈ ‘ದಂತ ಕತೆ’ ನಾನು ತಿಳಿದೇ ಇರದ ಗೌರಿ.” ಎಂದು ಬರೆಯುತ್ತಾರೆ.

ನನ್ನ ಮಾತು: ನಾನು ವ್ಯಕ್ತಿಯಾಗಿ ಗೌರಿಯನ್ನು ನೋಡಿಲ್ಲ. ಭೇಟಿಯಾಗಿಲ್ಲ. ಹತ್ತಿರದಿಂದಾಗಲಿ ದೂರದಿಂದಾಗಲಿ ನೋಡಿಲ್ಲ. ಫೋಟೋಗಳಲ್ಲಿ ಮಾತ್ರ ನೋಡಿದ್ದೇನೆ. ಆದರೆ ಮೊದಲಿಂದಲೂ ನನಗೆ ಗೊತ್ತಿರುವುದು, ಲಂಕೇಶರು ಬರೆದುಕೊಂಡಿರುವ ತಮ್ಮ ಪುಟಾಣಿ ಮಗಳು ಗೌರಿಯ ಒಂದು ಚಿತ್ರ, ಲಂಕೇಶರ ಪುಸ್ತಕಗಳ ಮೇಲೆ ಗೀಚುತ್ತಿರುವ ಗೌರಿ. ಈ ಪುಸ್ತಕ ಓದುವಾಗ ಸದಾ ಆ ಚಿತ್ರ ಹಿನ್ನೆಲೆಯಲ್ಲಿತ್ತು.

(ಪುಸ್ತಕ ವಿವರ: ಇಲ್ಲಿಬರಲ್ ಇಂಡಿಯ, ಲೇಖಕರು: ಚಿದಾನಂದ್ ರಾಜಘಟ್ಟ, ಪುಟಸಂಖ್ಯೆ: 15+216, ಬೆಲೆ: ರೂ.499, ಪ್ರಕಾಶಕರು: ಕಾಂಟೆಕ್ಷ್ಟ್, 61, ಎರಡನೇ ಮಹಡಿ, ಸಿಲ್ವರ್ಲೈನ್ ಕಟ್ಟಡ, ಅಳಪಾಕ್ಕಂ ಮುಖ್ಯ ರಸ್ತೆ, ಮದುರವೋಯಲ್, ಚೆನ್ನೈ 600095)

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮