2nd ಜುಲೈ ೨೦೧೮

ಪಾಪ ನಿವೇದನೆ

ಫ್ರ್ಯಾಂಕ್ ಓ’ಕಾನರ್
ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

‘ದಿ ಫಸ್ಟ್ ಕನ್ಫೆಶನ್’ ಹೆಸರಿನ ಈ ಕತೆ ಜಾಕಿ ಎನ್ನುವ ಏಳು ವರ್ಷದ ಹುಡುಗನ ಪಾಪ ನಿವೇದನೆ ನಿರೂಪಿಸುತ್ತದೆ. ಎಳೆಯ ಮನಸ್ಸಿನ ತಾಕಲಾಟ, ಧಾರ್ಮಿಕ ಕಟ್ಟಳೆ, ನರಕ-ಸ್ವರ್ಗಗಳ ಕಲ್ಪನೆ, ಮನೆಯೊಳಗಿನ ವ್ಯಕ್ತಿಗತ ಸಂಬಂಧ ಮುಂತಾದ ಎಳೆಗಳನ್ನು ಬಳಸಿ ಕತೆ ಹೆಣೆಯಲಾಗಿದೆ. ಇಲ್ಲಿ ಕತೆಗಾರರ ಸಹಜ ಶೈಲಿಯ ಕುತೂಹಲಕಾರಿ ನಿರೂಪಣೆ ಹಾಗೂ ಕಟು ವ್ಯಂಗ್ಯ ಕಾಣಬಹುದು.

ಅಜ್ಜ ಸತ್ತುಹೋದ ಮೇಲೆ ಅಜ್ಜಿ ನಮ್ಮ ಮನೆಗೆ ಬಂದರು. ಈ ಅಜ್ಜಿ, ಅಂದರೆ ನಮ್ಮ ತಂದೆಯ ತಾಯಿ, ಯಾವಾಗ ನಮ್ಮ ಮನೆಗೆ ಬಂದಳೋ ಆವಾಗಿನಿಂದ ನಮ್ಮ ಮನೆಯ ಎಲ್ಲ ಸಮಸ್ಯೆಗಳು ಆರಂಭವಾದವು ಎನ್ನಬೇಕು. ಎಲ್ಲ ಸುರಳಿತವಾಗಿದ್ದಾಗಲೂ ಕೂಡ ಮನೆಯಲ್ಲಿ ಏನಾದರೂ ವಿಘ್ನ ಇದ್ದೇ ಇರುತ್ತಿತ್ತು. ಅಂತಹುದರಲ್ಲಿ ನಾವು ಮೊದಲಿನಿಂದಲೂ ದ್ವೇಷಿಸುತ್ತಿದ್ದ ಈ ಮುದುಕಿ ಬಂದ ಮೇಲೆ ಕೇಳಬೇಕೆ? ಅದೂ ಅವಳು ಹಳ್ಳಿಯವಳು. ಪಟ್ಟಣದಲ್ಲಿ ಹೇಗೆ ಇರಬೇಕು ಎಂದು ಅವಳಿಗೆ ಸ್ವಲ್ಪವೂ ಗೊತ್ತಿರಲಿಲ್ಲ. ಸುಕ್ಕುಗಟ್ಟಿದ ಅವಳ ದಪ್ಪ ಮುಖವನ್ನು ಕಂಡರೆ ನನಗೆ ಒಂಥರಾ ಹೆದರಿಕೆ. ಅವ್ವನಿಗಂತೂ ಅಜ್ಜಿ ಎಂದರೆ ಚೂರೂ ಆಗಿಬರುತ್ತಿರಲಿಲ್ಲ. ಮನೆಯ ಸುತ್ತಮುತ್ತ ಮತ್ತು ಅಲ್ಲಿ-ಇಲ್ಲಿ ಮುದುಕಿ ಬರಿಗಾಲಲ್ಲಿ ನಡೆಯುತ್ತಿದ್ದರೆ ಅವ್ವ ಕೋಪ ಮಾಡಿಕೊಳ್ಳುವಳು. ಮಂದಿ ಏನೆಂದುಕೊಂಡಾರೆಂದು ಆಕೆಗೆ ತಿಳಿಯಲಾರದು. ಅಜ್ಜಿ ಮಾತ್ರ ತನಗೆ ಚಪ್ಪಲಿ ಹಾಕಿದರೆ ಸುತಾರಾಂ ಆಗುವುದಿಲ್ಲ, ಕಾಲು ಮುಂದಕ್ಕೇ ಹೋಗುವುದಿಲ್ಲ, ಬಿದ್ದು ಬಿಡುತ್ತೇನೆ ಎಂದು ಹೇಳುತ್ತಿದ್ದಳು.

ಊಟ ಮಾಡುವಾಗಲೂ ಅಜ್ಜಿಯದು ಏನಾದರೂ ರಗಳೆ. ಆಕೆ ನಮ್ಮಂತೆ ಚಮಚೆ ಬಳಸುತ್ತಿರಲಿಲ್ಲ. ಕೈಬೆರಳುಗಳಿಂದ ಆಕೆ ಏನನ್ನಾದರೂ ತೆಗೆಯುತ್ತಿದ್ದರೆ ಅವ್ವನಿಗೆ ವಿಪರೀತ ಸಿಟ್ಟುಬರುವುದು. ಅಜ್ಜಿ ಒಮ್ಮೊಮ್ಮೆ ತನಗೆ ಬೇಕಾದಂತೆ ಕೆಲವು ತಿನಿಸುಗಳನ್ನು ತಯಾರಿಸಿಕೊಳ್ಳುವಳು. ಊಟಕ್ಕೆ ಅವಳದೇ ಆದ ಐಟಮ್‍ಗಳಿದ್ದವು. ಕುದಿಸಿದ ಆಲೂಗಡ್ಡೆ, ಒಣಗಿಸಿದ ಮೀನು, ಹಳ್ಳಿಯಲ್ಲಿ ಧಾನ್ಯದಿಂದ ತಯಾರಿಸಿದ ಕಹಿ ಮದ್ಯದ ಗಡಗಿಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟುಕೊಂಡು ಅವಳು ಊಟಕ್ಕೆ ಕುಳಿತಳೆಂದರೆ ಮುಗಿದೇಹೋಯಿತು. ಕೈಬೆರಳುಗಳನ್ನು ಫೋರ್ಕ್ ಚಮಚೆಯನ್ನಾಗಿ ಬಳಸುವ ಅವಳ ಕಲಾತ್ಮಕತೆಗೆ ನಾವು ತಲೆದೂಗುತ್ತಿದ್ದೆವು.

ಎಲ್ಲರ ಮನೆಗಳಲ್ಲಿ ಹುಡುಗಿಯರು ವಿಧೇಯರಾಗಿ, ವಿನಯವಂತರಾಗಿ, ಶಿಸ್ತುಬದ್ಧರಾಗಿ ಇರುವುದು ರೂಢಿ ತಾನೆ? ಆದರೆ ನಮ್ಮ ಮನೆಯಲ್ಲಿ ಅದಕ್ಕೆ ತದ್ವಿರುದ್ಧ ಪರಿಸ್ಥಿತಿ ಇತ್ತು. ಹುಡುಗನಾದ ನಾನು ಹೆದರಿ ನಡೆಯುತ್ತಿದ್ದರೆ ಹುಡುಗಿಯಾದ ನನ್ನ ಅಕ್ಕ ನೋರಾ ಎಲ್ಲರಿಗೂ ಜೋರು ಮಾಡುತ್ತಿದ್ದಳು. ನಾನಂತೂ ಅಪ್ಪ-ಅಮ್ಮನೆಂದರೆ ನಮ್ಮ ಪಾಲಿನ ದೇವರುಗಳು ಎಂದು ನಂಬಿದ್ದೆ. ಆದರೆ ನೋರಾ ಮಾತ್ರ ಬೇಕಾಬಿಟ್ಟಿಯಾಗಿ ಇರುತ್ತಿದ್ದಳು. ಅವಳು ಹೇಳಿದ್ದೇ ಆಗಬೇಕಿತ್ತು. ಮನೆಯಲ್ಲಿ ಹುಡುಗನಾದ ನನಗೆ ಏನೇನೂ ಕಿಮ್ಮತ್ತು ಇರಲಿಲ್ಲ. ಎಲ್ಲ ಅಕ್ಕರೆಯನ್ನು ಅಕ್ಕ ಒಬ್ಬಳೇ ಪಡೆಯುತ್ತಿದ್ದಳು. ನಾಟಕ ಮಾಡುವುದರಲ್ಲಿ ಕೂಡ ಅಕ್ಕ ನಂಬರ್ ಒನ್ ಇದ್ದಳು. ನಾನು ಮತ್ತು ಅವ್ವ ಅಜ್ಜಿಯ ಸ್ವಭಾವವನ್ನು ಟೀಕಿಸುತ್ತಿದ್ದರೆ ನೋರಾ ಮಾತ್ರ ಒಳಗೊಂದು, ಹೊರಗೊಂದು ಮಾಡುತ್ತ ಅಜ್ಜಿಯ ಹತ್ತಿರ ಅವಳ ತರಹವೇ ಇದ್ದು ಆಕೆ ಇಲ್ಲದಾಗ ಹೀಯಾಳಿಸುತ್ತಿದ್ದಳು. ಅಜ್ಜಿ ಹೇಳಿದ ಮಾತನ್ನು ಚಾಚೂ ತಪ್ಪದಂತೆ ಕೇಳುವವಳು ತಾನೊಬ್ಬಳೆ ಎಂಬ ನಟನೆ ಮಾಡುತ್ತಿದ್ದಳು. ಅದಕ್ಕಾಗಿ ಅಜ್ಜಿ ಪ್ರತಿ ಶುಕ್ರವಾರ ಆಕೆಗೆ ಒಂದು ರೂಪಾಯಿ ಕೊಡುತ್ತಿದ್ದಳು. ಅಜ್ಜಿಗೆ ಹೇಗಿದ್ದರೂ ಪೆನಶನ್ ಬರುತ್ತಿತ್ತಲ್ಲ. ಕೊಡದೇ ಏನು ಮಾಡಿಯಾಳು? ಒಳ್ಳೆಯವರನ್ನು ಜನ ಬೇಗ ಗುರುತಿಸುವುದಿಲ್ಲ ಎಂದು ಅವ್ವ ಹೇಳುತ್ತಿದ್ದ ಮಾತು ಬಹಳಷ್ಟು ಸಲ ನಿಜವಾಗುತ್ತಿತ್ತು. ನಾನು ಸೀದಾ, ಸಾದಾ ಇದ್ದುದರಿಂದ ತೊಂದರೆಗಳು ನನ್ನನ್ನೆ ಹುಡುಕಿಕೊಂಡು ಬರುತ್ತಿದ್ದವು ಎಂದು ಕಾಣುತ್ತದೆ.

ನನಗೆ ಈಗಿರುವ ಸಂಕಷ್ಟಗಳು ಸಾಲದೆಂಬಂತೆ ನೋವಿನ ದೊಡ್ಡ ಮೂಟೆಯೊಂದು ನನ್ನ ಕಾಲುಗಳ ಹತ್ತಿರವೆ ಧೊಪ್ಪೆಂದು ಬಿದ್ದುಬಿಡಬೇಕೆ? ಅದನ್ನು ದಾಟಿ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಅದೇನೆಂದರೆ ಚರ್ಚಿನಲ್ಲಿ ನಾನು ನನ್ನ ಮೊದಲ ತಪ್ಪೊಪ್ಪಿಗೆಯನ್ನು ಮಾಡಬೇಕಿತ್ತು.

ಒಂದು ಸಲ ನಾನು ನನ್ನ ಗೆಳೆಯ ಬಿಲ್ ಕಾನೆಲ್‍ನ ಜೊತೆ ನಮ್ಮ ಮನೆಯ ಹತ್ತಿರವೆ ಆಟವಾಡುತ್ತಿದ್ದೆ. ಬಿಲ್ ಕಾನೆಲ್ ಮೊದಲೆ ಪ್ರತಿಷ್ಠಿತ ಮನೆತನದ ಬಾಲಕ. ಅವನ ಅಪ್ಪ ಮಿಲಿಟರಿಯಲ್ಲಿ ಸಾರ್ಜೆಂಟ್-ಮೇಜರ್ ಆಗಿದ್ದಾನೆ. ನಾವಿಬ್ಬರೂ ಆಡುವಾಗ ಅಜ್ಜಿ ನಮ್ಮ ಮನೆಯೆದುರಿನ ದಾರಿಯಲ್ಲಿ ಅಡ್ಡ ಬಂದಳು. ಮದ್ಯದ ಗಡಗಿಯ ಮೇಲೆ ಶಾಲು ಮುಚ್ಚಿಕೊಂಡು ಬರುತ್ತಿದ್ದಳು. ಅದನ್ನು ನೋಡಿ ನನಗೆ ಒಂಥರಾ ಅವಮಾನವಾಯಿತು. ಯಾರಾದರೂ ನೋಡಿದರೆ ಏನು ತಿಳಿದುಕೊಂಡಾರು? ಅಜ್ಜಿಗೆ ಅಷ್ಟೂ ಜ್ಞಾನ ಇಲ್ಲವೆ? ಗೆಳೆಯನನ್ನು ನಮ್ಮ ಮನೆಗೆ ಕರೆದುಕೊಂಡು ಹೊರಟಿದ್ದೆ. ಏನೋ ಉಪಾಯ ಮಾಡಿ ಅವನನ್ನು ತಪ್ಪಿಸಿದೆ. ಯಾಕೆಂದರೆ ಅಕಸ್ಮಾತ್ ನಾವು ಒಳಗೆ ಹೋದಾಗ ಅಜ್ಜಿ ಏನು ಮಾಡುತ್ತಿರುವಳೋ ಯಾರಿಗೆ ಗೊತ್ತು? ಅಕಸ್ಮಾತ್ ಕುಡಿಯುತ್ತಿದ್ದರೆ?

ಡಾ.ಬಸು ಬೇವಿನಗಿಡದ

ಡಾ.ಬಸು ಬೇವಿನಗಿಡದ ಅವರು ಕವಿ, ಕತೆಗಾರರು ಹಾಗೂ ಅನುವಾದಕರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯದ ಮೇಲೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ‘ಕನಸು’ ಮತ್ತು ‘ಇಳೆಯ ಅರ್ಥ’ ಅವರ ಕವನ ಸಂಕಲನಗಳು. ‘ತಾಯವ್ವ’, ‘ಬಾಳೆಯ ಕಂಬ’, ‘ಹೊಡಿ ಚಕ್ಕಡಿ’ ಹಾಗೂ ‘ಉಗುಳುಬುಟ್ಟಿ’ -ಇವು ಕಥಾ ಸಂಕಲನಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಸ್ಥೆಗಳ ಪುರಸ್ಕಾರ-ಬಹುಮಾನಗಳು ಸಂದಿವೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ.

ಅವ್ವ ಕೆಲಸಕ್ಕೆಂದು ಹೋದರೆ ಅಥವಾ ಬೇರೆ ಯಾವುದಾದರೂ ಕಾರ್ಯದಲ್ಲಿ ನಿರತಳಾಗಿದ್ದರೆ ಆಗ ಅಡಿಗೆಯನ್ನು ಅಜ್ಜಿಯೇ ಮಾಡುತ್ತಿದ್ದಳು. ಥೂ! ಅವಳು ಮಾಡುವ ಅಡಿಗೆಯನ್ನು ನಾನಂತೂ ಮುಟ್ಟುತ್ತಿರಲಿಲ್ಲ. ಚೂರೂ ರುಚಿಯಿಲ್ಲ. ಅದನ್ನ್ಯಾರು ತಿನ್ನುತ್ತಾರೆ? ಇದರ ಬಗ್ಗೆ ತಿಳಿದಿದ್ದ ನೋರಾ ನನಗೆ ಪಾಠ ಕಲಿಸಲೆಂದು ಅಜ್ಜಿ ಇದ್ದಾಗ ಬೇಕೆಂತಲೆ ಊಟಕ್ಕೆ ಕರೆದಳು. ನಾನು ತಪ್ಪಿಸಿಕೊಳ್ಳಲೆಂದು ಡೈನಿಂಗ್ ಟೇಬಲ್ಲಿನ ಕೆಳಗಡೆ ಅವಿತು ಕುಳಿತೆ. ಅಕ್ಕ ಬೈದು ಕರೆಯಲು ಬಂದರೆ ಅವಳನ್ನು ಹೆದರಿಸಲೆಂದು ಬ್ರೆಡ್ ಕತ್ತರಿಸುವ ಚಾಕುವನ್ನು ನನ್ನ ಕೈಯಲ್ಲಿ ಹಿಡಿದಿದ್ದೆ. ಅಜ್ಜಿಯನ್ನು ತಾನು ದ್ವೇಷಿಸುತ್ತಿರುವಂತೆ ನನ್ನ ಮುಂದೆ ನಾಟಕ ಮಾಡುವಳು. ಆದರೆ ನಿಜವಾಗಿಯೂ ಆಕೆ ಅಜ್ಜಿಯ ಪರ ವಕಾಲತ್ತು ವಹಿಸುತ್ತಿದ್ದಳು. ಅಪ್ಪ, ಅಜ್ಜಿ, ನೋರಾ ಒಂದು ಕಡೆಯಾದರೆ ನಾನು ಮತ್ತು ಅವ್ವ ಮತ್ತೊಂದು ಕಡೆ. ಊಟ ಮಾಡಲೇ ಬೇಕು ಎಂದು ನೋರಾ ನನ್ನನ್ನು ಅಲ್ಲಿ ಇಲ್ಲಿ ಹುಡುಕಿ ಕೊನೆಗೆ ನನ್ನ ಅಡಗುತಾಣವನ್ನು ಪತ್ತೆ ಹಚ್ಚಿದಳು. ‘ನನ್ನ ಸುದ್ದಿಗೆ ಬಂದಿಯಂದ್ರ ನಿನ್ನ ಬಿಡಂಗಿಲ್ಲ, ನೋಡು. ಸುಮ್ಮಸುಮ್ಮನ ನನ್ನ ಕಾಡಿಸಬ್ಯಾಡ...’ ಅವಳಿಗೆ ಆ ಬ್ರೆಡ್ ಕತ್ತರಿಸುವ ಚಾಕು ತೋರಿಸಿದೆ. ಅವಳು ಉಪಾಯವಿಲ್ಲದೆ ಸುಮ್ಮನೆ ತೆರಳಿದಳು.

ಅವ್ವ ಬರುವವರೆಗೂ ನಾನು ಟೇಬಲ್ ಅಡಿಯಲ್ಲಿಯೇ ಕುಳಿತಿದ್ದೆ. ಆಕೆ ಬಂದ ಮೇಲೆ ಅವಳೊಡನೆ ಊಟ ಮಾಡಿದೆ. ಆದರೆ ಅಪ್ಪ ಮನೆಗೆ ಬಂದ ಮೇಲೆ ಮನೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ನೋರಾ ಅಪ್ಪನ ಬಳಿ ದೂರು ಕೊಟ್ಟಳು: ‘ಅಪ್ಪಾ, ಅಪ್ಪಾ, ಜಾಕಿ ಇವತ್ತು ಏನು ಮಾಡಿದ ಗೊತ್ತೈತೇನು?’ ಅವಳು ಒಂದಕ್ಕೆ ಹತ್ತು ಸೇರಿಸಿ ಹೇಳಿದಳು. ಅಪ್ಪ ನನ್ನ ಚರ್ಮ ಕಿತ್ತು ಬರುವಂತೆ ಹೊಡೆದ. ಅವ್ವ ಅಡ್ಡ ಬಂದ ಮೇಲೆ ಸುಮ್ಮನಾದ. ಎಷ್ಟೋ ದಿನಗಳ ತನಕ ಅಪ್ಪ ನನ್ನೊಡನೆ ಮಾತಾಡಲಿಲ್ಲ. ಸಂತೋಷದ ಸಂಗತಿಯೆಂದರೆ ಅವ್ವ ಕೂಡ ನೋರಾಳೊಂದಿಗೆ ಹಲವು ದಿನ ಮಾತಾಡಲಿಲ್ಲ. ಅದು ಉಲ್ಟಾ ಕೂಡ ಆಯಿತು. ಮಾತನಾಡಬೇಡವೆಂದು ಅವ್ವನಿಗೆ ನಾನೇ ಹೇಳಿರಬಹುದೆಂದು ನೋರಾ ಕಲ್ಪಿಸಿಕೊಂಡಿರಲಿಕ್ಕೂ ಸಾಕು. ಅಂತೂ ಇಂತೂ ನನ್ನ ಹೃದಯದ ಮೇಲೆ ಆಗಿಂದಾಗ ಬರೆ ಎಳೆಯಲಾಗುತ್ತಿತ್ತು. ಇದೆಲ್ಲ ನಡೆದದ್ದು ಆ ಮುದುಕಿಯ ಕುಮ್ಮಕ್ಕಿನಿಂದಲೇ.

ನನಗೆ ಈಗಿರುವ ಸಂಕಷ್ಟಗಳು ಸಾಲದೆಂಬಂತೆ ನೋವಿನ ದೊಡ್ಡ ಮೂಟೆಯೊಂದು ನನ್ನ ಕಾಲುಗಳ ಹತ್ತಿರವೆ ಧೊಪ್ಪೆಂದು ಬಿದ್ದುಬಿಡಬೇಕೆ? ಅದನ್ನು ದಾಟಿ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಅದೇನೆಂದರೆ ಚರ್ಚಿನಲ್ಲಿ ನಾನು ನನ್ನ ಮೊದಲ ತಪ್ಪೊಪ್ಪಿಗೆಯನ್ನು ಮಾಡಬೇಕಿತ್ತು. ಪಾಪ ನಿವೇದನೆ ಮತ್ತು ಪ್ರಭುಭೋಜನ ಸಂಸ್ಕಾರದಲ್ಲಿ ಭಾಗವಹಿಸುವುದರ ಬಗ್ಗೆ ನನ್ನಲ್ಲಿ ಇನ್ನಿಲ್ಲದ ಹೆದರಿಕೆಯಿತ್ತು. ನಮ್ಮ ತಪ್ಪುಗಳನ್ನು ಪ್ರಭುವಿನಲ್ಲಿ ಹೇಳಿಕೊಳ್ಳುವುದಕ್ಕೆ ನಮ್ಮನ್ನೆಲ್ಲ ಸಿದ್ಧ ಮಾಡುತ್ತಿದ್ದ ರ್ಯಾನ್ ಎನ್ನುವ ನಮ್ಮ ಓಣಿಯ ವೃದ್ಧ ಮೇಡಮ್‍ನ್ನು ಕಂಡರೆ ನಮಗೆ ಅಪಾರ ಭೀತಿಯಿತ್ತು. ರ್ಯಾನ್ ನೋಡಲಿಕ್ಕೆ ನಮ್ಮ ಮನೆಯ ಅಜ್ಜಿಯ ತರಹವೇ ಇದ್ದಳು. ರ್ಯಾನ್ ಮೇಡಮ್ ತುಂಬ ಶ್ರೀಮಂತ ಹೆಂಗಸು ಅಂತ ಕಾಣುತ್ತದೆ. ವಿಶಾಲವಾದ ಮತ್ತು ಬಹು ಸುಂದರವಾದ ಮನೆಯಲ್ಲಿ ಇರುತ್ತಿದ್ದಳು. ದೊಗಳೆಯಾದ ಕಪ್ಪು ಮೇಲಂಗಿ ತೊಟ್ಟು, ತಲೆಗೆ ಟೋಪಿ ಹಾಕಿಕೊಂಡು ದಿನಾಲೂ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ನಮ್ಮ ಶಾಲೆಯ ಹತ್ತಿರ ಬರುತ್ತಿದ್ದಳು. ಅಷ್ಟೊತ್ತಿಗೆ ನಾವು ತಿರುಗಿ ಮನೆಗೆ ಹೋಗುವ ಅವಸರದಲ್ಲಿರುತ್ತಿದ್ದೆವು. ಆದರೆ ಈ ರ್ಯಾನ್ ಮೇಡಮ್ ಮಾತ್ರ ನಮ್ಮನ್ನೆಲ್ಲ ಅಡ್ಡಗಟ್ಟಿ ನರಕದ ಬಗ್ಗೆ ದೊಡ್ಡ ದೊಡ್ಡ ಪಾಠ ಮಾಡುತ್ತಿದ್ದಳು. ಇತರ ವಿಷಯಗಳ ಬಗ್ಗೆಯೂ ಆಕೆ ಹೇಳಿರಬೇಕು. ಆದರೆ ನಮಗೆ ನೆನಪಿನಲ್ಲಿ ಉಳಿಯುತ್ತಿದ್ದುದು ಆಕೆ ಬಣ್ಣಿಸುತ್ತಿದ್ದ ನರಕದ ಕಷ್ಟಗಳು ಮಾತ್ರ. ಅವಳ ಹೃದಯದಲ್ಲಿ ನರಕವೆಂಬುದು ಮಹತ್ವದ ಸ್ಥಾನ ಪಡೆದುಕೊಂಡಿತ್ತು ಎನ್ನುವುದಕ್ಕೆ ಆಕೆ ಬಣ್ಣಿಸುತ್ತಿದ್ದ ನರಕವೇ ಸಾಕ್ಷಿಯಾಗಿತ್ತು.

ಫ್ರ್ಯಾಂಕ್ ಓ’ಕಾನರ್

ಫ್ರ್ಯಾಂಕ್ ಓ’ಕಾನರ್‍ನನ್ನು ಐರ್‍ಲ್ಯಾಂಡಿನ ಚೆಕಾಫ್ ಎಂದು ಯೇಟ್ಸ್ ಕವಿ ಕರೆದಿದ್ದಾನೆ. ತನ್ನ ಸೂಕ್ಷ್ಮ ಸಂವೇದನೆ ಹಾಗೂ ವ್ಯಂಗ್ಯದಿಂದ ರಶಿಯಾವನ್ನು ಚೆಕಾಫ್ ಹೇಗೆ ತೆರೆದಿಟ್ಟನೋ ಹಾಗೆ ಫ್ರ್ಯಾಂಕ್ ಓ’ಕಾನರ್ ಕೂಡ ಐರ್‍ಲ್ಯಾಂಡಿನ ಒಳಹೊರಗನ್ನು ತುಂಬಿಕೊಡುತ್ತಾನೆ. ಐರ್‍ಲ್ಯಾಂಡ್‍ನಂತಹ ಒಂದು ಚಿಕ್ಕ ರಾಷ್ಟ್ರ ಜಗತ್ತು ಆಶ್ಚರ್ಯ ಪಡುವಂತಹ ಅನೇಕ ಲೇಖಕರನ್ನು ಕೊಟ್ಟಿದೆ. ‘ದಿ ಯೂಲಿಸಸ್’ ಎನ್ನುವ ಕಾದಂಬರಿಯ ಮೂಲಕ ಪ್ರಜ್ಞಾಪ್ರವಾಹ ಶೈಲಿಯನ್ನು ಮುನ್ನೆಲೆಗೆ ತಂದ ಕಾದಂಬರಿಕಾರ ಜೇಮ್ಸ್ ಜಾಯ್ಸ್, ‘ಆ್ಯಪಲ್ ಕಾರ್ಟ್’, ‘ಸೇಂಟ್ ಜೋನ್’ ಮುಂತಾದ ನಾಟಕಗಳ ಮೂಲಕ ವೈಚಾರಿಕತೆಯನ್ನು ಮುಂದೆ ಮಾಡಿದ ಬರ್ನಾರ್ಡ್ ಶಾ, ಸಾಂಕೇತಿಕತೆಯ ಸರದಾರನೆಂದೇ ಬಣ್ಣಿಸಲ್ಪಟ್ಟಿರುವ ಕವಿ ಯೇಟ್ಸ್, ಅಸಂಗತವಾದದ ಹರಿಕಾರ ಸ್ಯಾಮುವೆಲ್ ಬೆಕೆಟ್, ಸಣ್ಣ ಕತೆ ಮತ್ತು ಆತ್ಮಕಥನ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ ಫ್ರ್ಯಾಂಕ್ ಓ’ಕಾನರ್, ಮಹಿಳಾ ಸಂವೇದನೆಯನ್ನು ಹಿಗ್ಗಿಸಿದ ಮಾರಿನಾ ಕಾಕ್, ಆಗಸ್ಟಾ ಲೇಡಿ ಗ್ರೆಗರಿ- ಹೀಗೆ ಐರ್‍ಲ್ಯಾಂಡಿನ ಪ್ರಸಿದ್ಧ ಲೇಖಕರ ಪಟ್ಟಿ ದೊಡ್ಡದು. ಅನೇಕ ಲೇಖಕರು ಐರ್‍ಲ್ಯಾಂಡಿನಲ್ಲಿ ಹುಟ್ಟಿದರೂ ಮತ್ತು ಅನೇಕ ವರ್ಷ ಬದುಕಿ ಬಾಳಿದರೂ ಬ್ರಿಟನ್ ತಮ್ಮಿಂದ ಬೇರೆಯೆಂದು ತಿಳಿದಿರಲಿಲ್ಲ. ಬ್ರಿಟನ್, ಅಮೆರಿಕಾ, ಫ್ರಾನ್ಸ್‍ಗಳಲ್ಲಿ ಅವರು ಆರಾಮವಾಗಿ ಓಡಾಡಿಕೊಂಡಿದ್ದರು. ಐರ್‍ಲ್ಯಾಂಡಿನ ನಾಲ್ಕು ಜನ ಲೇಖಕರು ಸಾಹಿತ್ಯಕ್ಕಾಗಿ ನೋಬೆಲ್ ಬಹುಮಾನ ಪಡೆದಿದ್ದಾರೆ: ವಿಲಿಯಂ ಬಟ್ಲರ್ ಯೇಟ್ಸ್(1923), ಜಾರ್ಜ್ ಬರ್ನಾರ್ಡ್ ಶಾ(1925), ಸ್ಯಾಮುವೆಲ್ ಬೆಕೆಟ್(1969), ಸೀಯಸ್ ಹೀನೇ(1995). ಹೀನೆಯನ್ನು ಬಿಟ್ಟು ಉಳಿದ ಮೂವರು ಕ್ರೈಸ್ತ ಧರ್ಮದ ಪ್ರೊಟೆಸ್ಟಂಟ್ ಪಂಥಕ್ಕೆ ಸೇರಿದವರು ಮತ್ತು ಇವರೆಲ್ಲರೂ ಐರಲ್ಯಾಂಡ್ ಒಂದು ಸ್ವತಂತ್ರ ರಾಷ್ಟ್ರವಾಗಿರಬೇಕೆಂದು ಬಯಸಿದವರು.

ಇಂದು ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಐರ್‍ಲ್ಯಾಂಡ್ ಒಂದು ಸ್ವತಂತ್ರ ರಾಷ್ಟ್ರವಾಗಿ ನಿರ್ಮಾಣವಾಗಿದ್ದೇ ಕುತೂಹಲಕರ ಸಂಗತಿಯಾಗಿದೆ. ಭಾರತದಿಂದ ಪಾಕಿಸ್ತಾನ ಉದಯವಾದಂತೆ ಬ್ರಿಟನ್‍ನಿಂದ ಐರ್‍ಲ್ಯಾಂಡ್ 1922ರಲ್ಲಿ ಬೇರೆಯಾಯಿತು. 1921ರಲ್ಲಿ ಐರ್‍ಲ್ಯಾಂಡ್ ವಿಭಜಿಸಲ್ಪಟ್ಟಿತು. ದಕ್ಷಿಣ ಐರ್‍ಲ್ಯಾಂಡ್ ಸ್ವತಂತ್ರ ದೇಶವಾಗಿ ಯುನೈಟಡ್ ಕಿಂಗಡಮ್‍ನಿಂದ ಹೊರಹೋದರೆ ಉತ್ತರ ಐರ್‍ಲ್ಯಾಂಡ್ ಎನ್ನುವ ಒಂದು ಸಣ್ಣಪ್ರದೇಶ ಇವತ್ತಿಗೂ ಬ್ರಿಟನ್ ದೇಶದ ಭಾಗವಾಗಿ ಉಳಿದಿದೆ. ಐರಿಶ್ ಹಾಗೂ ಇಂಗ್ಲಿಷ್‍ರ ಕದನಗಳು ಮತ್ತು ಜನರು ಪಟ್ಟ ಪಾಡನ್ನು ಫ್ರ್ಯಾಂಕ್‍ನ ಕತೆ-ಕಾದಂಬರಿಗಳಲ್ಲಿ ಕಾಣಬಹುದಾಗಿದೆ. ಫ್ರ್ಯಾಂಕ್ ಓ’ಕಾನರ್ ಐರಿಷ್ ರಿಪಬ್ಲಿಕನ್ ಆರ್ಮಿಯಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ. ಬ್ರಿಟಿಷ್ ಮತ್ತು ಐರಲ್ಯಾಂಡಿನ ನಡುವೆ ನಡೆದಿದ್ದ ಒಪ್ಪಂದವನ್ನು ವಿರೋಧಿಸಿ ನಡೆದ ಚಳವಳಿಯಲ್ಲಿ ಆತ ಪಾಲ್ಗೊಂಡಿದ್ದ. ಅದಕ್ಕಾಗಿ ಸ್ವಲ್ಪ ಸಮಯ ಕಾರ್ಕ್ ನಗರದ ಜೈಲಿನಲ್ಲಿ ಕೂಡ ಬಂಧಿಯಾಗಿದ್ದ.

ಓ’ಕಾನರ್‍ನ ಮೊದಲ ಹೆಸರು ಮೈಕಲ್ ಫ್ರಾನ್ಸಿಸ್ ಓ’ಡೋನೋವನ್ ಎಂದಿತ್ತು. ಐರಿಷ್ ಲೇಖಕನಾದ ಓ’ಕಾನರ್ ಹುಟ್ಟಿದ್ದು 1903ರಲ್ಲಿ, ಐರಲ್ಯಾಂಡಿನ ಕಾರ್ಕ್ ಎಂಬ ಪಟ್ಟಣದಲ್ಲಿ. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಆತ ರೇಲ್ವೆಯಲ್ಲಿ ಕಾರಕೂನನಾಗಿದ್ದ. ಹದಿನೈದನೇ ವಯಸ್ಸಿಗೆ ಐರಿಶ್ ಮಿಲಿಟರಿ ಸೇರಿದ್ದ. ಮುಂದೆ ಗ್ರಂಥಪಾಲಕನಾಗಿ, ಬರಹಗಾರನಾಗಿ ರೂಪುಗೊಂಡಿದ್ದು ಒಂದು ಕತೆ. ಅಮೆರಿಕೆಯ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗುವಷ್ಟು ಎತ್ತರಕ್ಕೆ ಆತ ಬೆಳೆದ. ತಾನು ಲೇಖಕನಾಗುವಲ್ಲಿ ತನ್ನ ತಾಯಿ ವಹಿಸಿದ ಪಾತ್ರವನ್ನು ತಾನೆಂದೂ ಮರೆಯಲಾರೆ ಎಂದು ಆತ ತನ್ನ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾನೆ. ಆತನ ಅಪ್ಪ ಒಬ್ಬ ಕುಡುಕನಾಗಿದ್ದ. ಅವ್ವ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತ ಮಗನನ್ನು ಬೆಳೆಸಿದಳು. ಅವಳಿಗೆ ಮತ್ತು ತನಗೆ ಆತ ಕೊಟ್ಟ ಹಿಂಸೆಯನ್ನು ತಾನು ಮರೆಯಲು ಸಾಧ್ಯವಿಲ್ಲ ಹಾಗೂ ಅಪ್ಪನನ್ನು ತಾನೆಂದೂ ಕ್ಷಮಿಸುವುದಿಲ್ಲ ಎಂದು ಓ’ಕಾನರ್ ಹೇಳುತ್ತಾನೆ. ಯೌವನದಲ್ಲಿ ತಾಯಿಗೆ ಅಪೆಂಡಿಕ್ಸ್ ಆಗಿದ್ದು ಅದನ್ನು ಅವಳು ತನ್ನ ವೃದ್ಧಾಪ್ಯದವರೆಗೂ ಯಾರಿಗೂ ಹೇಳಿರಲಿಲ್ಲ. ಡಾಕ್ಟರ್ ಹತ್ತಿರ ಹೋಗಲು ಅವಳ ಬಳಿ ಹಣವಿರಲಿಲ್ಲ ಮತ್ತು ಸಮಯವೂ ಇರಲಿಲ್ಲ ಎಂದು ಆತ ಬರೆಯುತ್ತಾನೆ.

ಐರಿಶ್ ಸಾಹಿತ್ಯದ ಬೋಧಕನಾಗಿ, ನಾಟಕ ನಿರ್ದೇಶಕನಾಗಿ, ಪ್ರಸಿದ್ಧ ಅಬ್ಬೆ ಥೇಟರ್‍ನ ನಿರ್ದೇಶಕರಲ್ಲೊಬ್ಬನಾಗಿ, ಕತೆಗಾರ-ಕಾದಂಬರಿಕಾರ-ಅನುವಾದಕನಾಗಿ ಓ’ಕಾನರ್ ಕಾಲಾತೀತ ಪ್ರಭಾವವನ್ನು ಬಿಟ್ಟು ಹೋಗಿದ್ದಾನೆ. ಅಮೆರಿಕೆಯ ‘ದಿ ನ್ಯೂಯಾರ್ಕ್‍ರ್’ ಪತ್ರಿಕೆಯಲ್ಲಿ ಆತನ ಕತೆಗಳು ಪ್ರಕಟವಾಗುತ್ತಿದ್ದ ಹಾಗೆ ದೊಡ್ಡ ಸಂಚಲನ ಸೃಷ್ಟಿಸುತ್ತಿದ್ದವು. ಅಮೆರಿಕೆಯ ಪ್ರಸಿದ್ಧ ‘ನ್ಯೂಯಾರ್ಕರ್’ನಲ್ಲಿ ಆತನ ಐವತ್ತಕ್ಕೂ ಹೆಚ್ಚು ಕತೆಗಳು ಪ್ರಕಟಗೊಂಡು ಆತನಿಗೆ ಪ್ರಸಿದ್ಧಿಯನ್ನು ತಂದವು. ಮುಂದೆ ಕೆಲಕಾಲ ಓ’ಕಾನರ್ ಅಮೆರಿಕೆಯಲ್ಲಿ ವಾಸವಾಗಿದ್ದ. ‘ಗೆಸ್ಟ್ಸ್ ಆಫ್ ದಿ ನೇಶನ್’, ‘ಬೋನ್ಸ್ ಆಫ್ ದಿ ಕಂಟೆನ್ಸನ್’, ‘ಡೊಮೆಸ್ಟಿಕ್ ರಿಲೇಶನ್ಸ್’, ‘ದಿ ಕಾರ್ನೆಟ್ ಪ್ಲೇಯರ್ ಹೂ ಬಿಟ್ರೇಡ್ ಐರಲ್ಯಾಂಡ್’ ಮುಂತಾದ ಕತಾ ಸಂಕಲನಗಳು, ‘ದಿ ಸೇಂಟ್ ಆ್ಯಂಡ್ ಮೇರಿ ಕೇಟ್’, ‘ಡಚ್ ಇಂಟೀರಿಯರ್’ ಮುಂತಾದ ಕಾದಂಬರಿಗಳು, ‘ಆ್ಯನ್ ಓನ್ಲಿ ಚೈಲ್ಡ್’ ಎನ್ನುವ ಆತ್ಮಕತೆ ಮತ್ತು ಹಲವು ಕವನ ಸಂಕಲನಗಳು ಆತನ ಬರಹದ ಮಹತ್ವವನ್ನು ಉಳಿಸಿವೆ. 1966ರಲ್ಲಿ ತನ್ನ 63ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಫ್ರ್ಯಾಂಕ್ ಓ’ಕಾನರ್ ಐರ್‍ಲ್ಯಾಂಡ್ ರಾಜಧಾನಿ ಡಬ್ಲಿನ್‍ನಲ್ಲಿ ನಿಧನನಾದ.

ಪ್ರೇತಲೋಕ ಮತ್ತು ಅಲ್ಲಿ ನಾವು ಅನುಭವಿಸಬೇಕಾದ ಪಡಿ ಪಾಟಲುಗಳನ್ನು ಆಕೆ ಬರೀ ಪಾಠ ಮಾಡಿ ಹೋಗುತ್ತಿರಲಿಲ್ಲ. ಅದಕ್ಕೆ ತಕ್ಕುದಾದ ಉದಾಹರಣೆಗಳನ್ನು ಕೂಡ ಕೊಡುತ್ತಿದ್ದಳು. ಒಂದು ಮೇಣದ ಬತ್ತಿ ಹಚ್ಚಿಕೊಂಡು ಅದನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳುವಳು. ತನ್ನ ಕಿಸೆಯೊಳಗಿಂದ ಹೊಚ್ಚಹೊಸ ಎಂಟಾಣೆಯ ನಾಣ್ಯ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಹಿಡಿದುಕೊಳ್ಳುವಳು. ಯಾವ ವಿದ್ಯಾರ್ಥಿ ತನ್ನ ಒಂದು ಬೆರಳನ್ನು ಐದು ನಿಮಿಷದವರೆಗೆ ಉರಿಯುವ ಆ ಮೇಣದ ಬತ್ತಿಯ ಮೇಲೆ ಹಿಡಿಯುತ್ತಾನೋ ಅವನಿಗೆ ಆ ನಾಣ್ಯವನ್ನು ಬಹುಮಾನವಾಗಿ ಕೊಡುತ್ತೇನೆಂದು ಹೇಳುವಳು. ಸ್ಕೂಲಿನ ಗಡಿಯಾರದ ಪ್ರಕಾರ ಐದೇ ಐದು ನಿಮಿಷ. ಅದು ಕೇವಲ ಒಂದೇ ಒಂದು ಬೆರಳು. ಶಾಲೆಯಲ್ಲಿ ಇತರ ವಿಷಯಗಳಿಗೆ ಕೈ ಎತ್ತಿದಂತೆ ಇಲ್ಲಿಯೂ ನಾನು ಮೊದಲು ಕೈ ಎತ್ತಿ ಈ ರ್ಯಾನ್ ಮೇಡಮ್‍ಳ ಪರೀಕ್ಷೆಯಲ್ಲಿ ಪಾಸಾಗಬೇಕು ಎಂಬ ಮನಸ್ಸು ಉಂಟಾಗುತ್ತಿತ್ತು. ಆದರೆ ಕ್ಷುಲ್ಲಕ ಎಂಟಾಣೆಯ ಆಸೆಗಾಗಿ ಹಾಗೆ ಮಾಡಿದ ಎಂಬ ಅಪಕೀರ್ತಿ ನನಗೆ ಬರಬಾರದು ಎಂದುಕೊಂಡು ಹಿಂದೆ ಸರಿಯುತ್ತಿದ್ದೆ. ಅವಳು ಎಷ್ಟೇ ಆಮಿಷ ಒಡ್ಡಿದರೂ ಯಾವ ಹುಡುಗನೂ ತನ್ನ ಬೆರಳು ಸುಟ್ಟುಕೊಳ್ಳಲು ಮುಂದೆ ಬರುತ್ತಿರಲಿಲ್ಲ.

ಆಕೆ ಹೇಳುತ್ತಿದ್ದಳು: “ನೋಡಿದ್ರಾ ಮಕ್ಕಳೆ, ಬರೀ ಐದೇ ಐದು ನಿಮಿಷ, ಅದೂ ಒಂದೇ ಒಂದು ಬೆರಳನ್ನು ಸುಡಿಸಿಕೊಳ್ಳಲು ನೀವು ಇಷ್ಟು ಹೆದರ್ತೀರಿ. ಇಷ್ಟು ಒದ್ದಾಡ್ತೀರಿ. ಆದರ ನರಕ ಅನ್ನೋದು ಹೆಂಗೈತಿ ಗೊತ್ತೈತೇನು? ಅಲ್ಲಿ ಬರೇ ಬೆಂಕಿ, ಉರಿ. ಕೊತಕೊತ ಕುದಿಯೋ ನೀರು. ನಿಗಿನಿಗಿ ಅನ್ನೋ ಬೆಂಕಿ. ದಿನದ ಇಪ್ಪತ್ತನಾಲ್ಕು ತಾಸೂ ನಿರಂತರ ಕುದೀತಾ ಇರೋವಂತ ಕುಲುಮೆಗಳೊಳಗ ಜನ್ಮಜನ್ಮಾಂತರ ಸುಡಿಸಿಕೊಳ್ಳಬೇಕು. ನಿಗಿನಿಗಿ ಬೆಂಕಿಯೊಳಗ ಬರೀ ಒದ್ದಾಡೋದೇ ಒದ್ದಾಡೋದು. ಅಲ್ಲಿಯ ಕಷ್ಟಗಳಿಗೆ ಮುಕ್ತಾಯ ಅನ್ನೋದೇ ಇಲ್ಲ. ನಮ್ಮ ಜೀವನ ಹೀಂಗ ಮುಗಿದುಹೋಗ್ತದ. ಈ ಭೂಮಿ ಮ್ಯಾಲ ನಾವೇನು ಅನುಭವಿಸುತ್ತೇವಲ್ಲ, ಆ ಕಷ್ಟ-ನಷ್ಟಗಳು ಅವು ಏನೇನೂ ಅಲ್ಲ. ನರಕದೊಳಗಿನ ಕಷ್ಟಗಳಿಗೆ ಹೋಲಿಸಿದ್ರ ಭೂಮಿ ಮ್ಯಾಲಿನ ಕಷ್ಟಗಳು ಸಮುದ್ರದ ಒಂದು ಹನಿಗೆ ಸಮ...” ಅವಳು ನರಕವನ್ನು ಆ ರೀತಿ ಬಣ್ಣಿಸುವಾಗ ನಮಗೆ ಅಂಜಿಕೆಯಾಗುತ್ತಿತ್ತು. ಕುತೂಹಲ ಉಂಟಾಗುತ್ತಿತ್ತು. ಒಂದು ರೀತಿ ಮಜಾ ಅನಿಸುತ್ತಿತ್ತು. ಪಾಠದ ಕೊನೆಗೆ ಅವಳು ಆ ಹೊಚ್ಚ ಹೊಸ ಎಂಟಾಣೆಯ ನಾಣ್ಯವನ್ನು ತಿರುಗಿ ತನ್ನ ಜೇಬಿಗೆ ಸೇರಿಸುತ್ತಿದ್ದಳು. ಯಾರೂ ಮುಂದೆ ಬರಲಿಲ್ಲ, ದುಡ್ಡು ಪಡೆದುಕೊಳ್ಳಲಿಲ್ಲವೆಂಬ ಕೊರಗು ಅವಳಲ್ಲಿ ಉಂಟಾಗುತ್ತಿತ್ತೋ ಏನೋ? ಅಕಸ್ಮಾತ್ ಯಾವುದಾದರೂ ಒಬ್ಬ ವಿದ್ಯಾರ್ಥಿ ಮುಂದೆ ಬಂದು ಅದನ್ನು ಪಡೆದಿದ್ದರೆ ದುಡ್ಡು ಹೋಯಿತಲ್ಲ ಎಂದು ಪರಿತಪಿಸುತ್ತಿದ್ದಳೋ ಏನೋ, ಯಾರಿಗೆ ಗೊತ್ತು. ಆದರೆ ಧರ್ಮ, ಅಧರ್ಮ ಮುಂತಾಗಿ ಪಾಠ ಮಾಡುವ ಸಂತಳಾಗಿ ಎಂಟಾಣೆ ನಾಣ್ಯ ತನ್ನಿಂದ ಹೋಯಿತಲ್ಲ ಎಂಬ ನಿರಾಶೆ ಬಹುಶಃ ಅವಳನ್ನು ಬಾಧಿಸಲಾರದು ಎಂದು ನಾನು ಅಂದುಕೊಂಡೆ.

ಆ ನಟ್ಟನಡುರಾತ್ರಿ ಹೊರಗಡೆ ಕೋಳಿಯೊಂದು ಕೂಗಿದಂತಾಯಿತು. ಇದೇನು ರಾತ್ರಿಯ ಹೊತ್ತು ಕೋಳಿ ಕೂಗುವುದು ಅಪಶಕುನವೆನ್ನಿಸಿ ಪಾದ್ರಿ ತಿರುಗಿ ಆ ವ್ಯಕ್ತಿಯ ಕಡೆ ನೋಡಿದರು. ಅವರಿಗೆ ಪರಮಾಶ್ಚರ್ಯವಾಯಿತು. ಯಾಕೆಂದರೆ ಇದುವರೆಗೂ ತನ್ನ ಕಣ್ಣೆದುರಿದ್ದ, ತಾನು ಮಾತಾಡಿದ್ದ ವ್ಯಕ್ತಿ ಅಲ್ಲಿರಲಿಲ್ಲ.

ಮತ್ತೊಂದು ದಿನ ಆಕೆ ಒಬ್ಬ ಪಾದ್ರಿಯ ಕತೆ ಹೇಳಿದಳು. ಆ ಕತೆಯಂತೂ ನನ್ನನ್ನು ಅಲುಗಾಡಿಸಿಬಿಟ್ಟಿತು. ಅವಳಿಗೆ ಪರಿಚಿತನಾದ ಪಾದ್ರಿಯೊಬ್ಬರಿಗೆ ಒಂದು ದಿನ ಮಧ್ಯರಾತ್ರಿ ಏಕಾಏಕಿ ಎಚ್ಚರವಾಯಿತು. ಅವರು ಎದ್ದು ನೋಡುತ್ತಾರೆ. ಅವರ ಹಾಸಿಗೆಯ ಹತ್ತಿರ ಯಾರೋ ಒಬ್ಬರು ವಿನೀತರಾಗಿ ನಿಂತಿದ್ದಾರೆ. ಒಂದು ಕ್ಷಣ ಪಾದ್ರಿಗೆ ಜೀವ ಹೋದಂತಾಯಿತು. ಆದರೂ ಸಾವರಿಸಿಕೊಂಡರು. ನಿಧಾನಕ್ಕೆ ಆ ವ್ಯಕ್ತಿಯ ಹತ್ತಿರ ಹೋಗಿ ‘ಏನಪ್ಪಾ, ಯಾತಕ್ಕೆ ಬಂದಿದೀಯಾ?’ ಎಂದು ಕೇಳಿದರು. ಆ ವ್ಯಕ್ತಿ ತುಂಬ ವಿಧೇಯತೆಯಿಂದ ತಾನು ಪಾಪ ನಿವೇದನೆ ಮಾಡಲು ಬಂದಿರುವುದಾಗಿ ಹೇಳಿದ. ಅದಕ್ಕೆ ಪಾದ್ರಿ, ‘ನೋಡಿ, ಪಾಪಗಳ ನಿವೇದನೆಗೆ ಇದು ಸಮಯವಲ್ಲ. ಇಂತಹ ಮಧ್ಯರಾತ್ರಿಯಲ್ಲಿ ಮಾಡಲಾಗದು. ಮುಂಜಾನೆ ಮಾಡೋಣ, ಈಗ ಹೋಗು’ ಎಂದು ಪ್ರೀತಿಯಿಂದ ಹೇಳಿದರು. ಅದಕ್ಕೆ ಆ ವ್ಯಕ್ತಿ ಹೇಳಿದ: “ಪಾದ್ರಿಗಳೆ, ನನ್ನನ್ನು ದಯವಿಟ್ಟು ಕ್ಷಮಿಸಬೇಕು. ನಾನು ಹಿಂದೊಮ್ಮೆ ಬಂದು ನನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದೆ. ಆದರೆ ಆವಾಗ ನನ್ನ ಒಂದು ತಪ್ಪನ್ನು ನಾನು ಹೇಳಿರಲಿಲ್ಲ. ಅದನ್ನು ಬಾಯಿಬಿಟ್ಟು ಹೇಳಲಿಕ್ಕೆ ನನಗೆ ನಾಚಿಕೆಯಾಗಿತ್ತು. ಅಷ್ಟು ದೊಡ್ಡ ತಪ್ಪು ಮಾಡಿ ಅದನ್ನು ಹೇಳಿಕೊಳ್ಳುವುದು ನನಗೆ ನಾನೇ ಮಾಡಿಕೊಳ್ಳುವ ಅವಮಾನ ಎಂದು ಸುಮ್ಮನಾಗಿದ್ದೆ. ಆದರೆ ಆ ಸಮಯದಲ್ಲಿ ನನ್ನ ಪಾಪವೊಂದನ್ನು ಮುಚ್ಚಿಟ್ಟದ್ದಕ್ಕಾಗಿ ತುಂಬ ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಅದನ್ನು ಹೇಳಬೇಕಾಗಿತ್ತೆಂದು, ಅದಕ್ಕೆ ಪ್ರಭುವಿನ ಕ್ಷಮೆ ಕೇಳಬೇಕಾಗಿತ್ತೆಂದು ಆಮೇಲೆ ಅನಿಸಿ ಹಗಲು-ರಾತ್ರಿ ನಾನು ಬಳಲಿದ್ದೇನೆ.”

ಪಾದ್ರಿಯ ಮನ ನೊಂದಿತು. ಈ ವ್ಯಕ್ತಿ ದೊಡ್ಡ ತಪ್ಪು ಮಾಡಿದ್ದಾರೆಂದು ಅವರಿಗೆ ಮನವರಿಕೆಯಾಯಿತು. ಅಂದರೆ ನಮ್ಮ ಪಾಪಗಳನ್ನು ಹೇಳಿಕೊಳ್ಳುವಾಗ ಯಾವುದನ್ನೂ ಮುಚ್ಚಿಡಬಾರದು. ಮುಚ್ಚಿಟ್ಟು ಈ ಮನುಷ್ಯ ಪಾಪವೆಸಗಿದ್ದಾನೆ. ಹೋಗಲಿ, ಅವನ ತಪ್ಪೊಪ್ಪಿಗೆಗೆ ಅವಕಾಶ ಕೊಡೋಣವೆಂದು ಅವರು ಉಡುಪು ಧರಿಸುವುದಕ್ಕೆಂದು ಹೆಜ್ಜೆ ಇಟ್ಟರು. ಅಷ್ಟರಲ್ಲಿ ಆ ನಟ್ಟನಡುರಾತ್ರಿ ಹೊರಗಡೆ ಕೋಳಿಯೊಂದು ಕೂಗಿದಂತಾಯಿತು. ಇದೇನು ರಾತ್ರಿಯ ಹೊತ್ತು ಕೋಳಿ ಕೂಗುವುದು ಅಪಶಕುನವೆನ್ನಿಸಿ ಪಾದ್ರಿ ತಿರುಗಿ ಆ ವ್ಯಕ್ತಿಯ ಕಡೆ ನೋಡಿದರು. ಅವರಿಗೆ ಪರಮಾಶ್ಚರ್ಯವಾಯಿತು. ಯಾಕೆಂದರೆ ಇದುವರೆಗೂ ತನ್ನ ಕಣ್ಣೆದುರಿದ್ದ, ತಾನು ಮಾತಾಡಿದ್ದ ವ್ಯಕ್ತಿ ಅಲ್ಲಿರಲಿಲ್ಲ. ಕಟ್ಟಿಗೆಯ ತುಂಡುಗಳನ್ನು ಸುಡುವ ದಟ್ಟ ವಾಸನೆ ಅಲ್ಲಿ ಹಬ್ಬಿತು. ಆಮೇಲೆ ಫಾದರ್ ತಮ್ಮ ಹಾಸಿಗೆಯತ್ತ ನೋಡಿದಾಗ ಅವರ ಬೆಡ್‍ಶೀಟಿನ ಮೇಲೆ ಎರಡು ಕೈಗಳು ಸುಟ್ಟ ಗುರುತುಗಳಿದ್ದವು. ಸುಟ್ಟುಹೋಗುವಾಗ ಕ್ಷಮಿಸೆಂದು ಕೇಳಿದ ಕೈಗಳ ಗುರುತು! ನಮ್ಮ ಪಾಪ ನಿವೇದನೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೂ ಗುಲಗಂಜಿಯಷ್ಟು ತಪ್ಪಾದರೂ ಎಂತಹ ಕಠಿಣ ಶಿಕ್ಷೆ ಕಾದಿರುತ್ತದೆ ಎಂದು ಗೊತ್ತಾಯಿತಾ ಮಕ್ಕಳೆ ಎಂದು ರ್ಯಾನ್ ಮೇಡಮ್ ನಮಗೆ ವಿವರವಾಗಿ ಹೇಳುತ್ತಿದ್ದಳು. ಈ ಪಾದ್ರಿ ಮತ್ತು ಅವರ ಜೀವನದಲ್ಲಿ ನಡೆದ ಆ ಉದಾಹರಣೆಯಂತೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು.

ಅಕ್ಕ ನನ್ನ ಕೈ ಹಿಡಿದುಕೊಂಡಿದ್ದಳು. ತುಂಬ ಅಶಕ್ತನಾಗಿರುವ ರೋಗಿಯನ್ನು ದವಾಖಾನೆಗೆ ಒಯ್ದಂತೆ, ಬಲಿ ಕೊಡಲು ಕುರಿಯನ್ನು ಕರೆದುಕೊಂಡು ಹೋಗುತ್ತಿರುವಂತೆ ಆಕೆ ನನ್ನನ್ನು ಕರೆದೊಯ್ಯುತ್ತಿದ್ದಳು. ತಾನು ಕೂಡ ತೀರ ಸಪ್ಪೆ ಮುಖ ಮಾಡಿಕೊಂಡಿದ್ದಳು. ಅಂದರೆ ನನಗೇನೋ ಭಯಂಕರ ಕೇಡು ಉಂಟಾಗಲಿದೆ ಎನ್ನುವ ಭಾವ ಅವಳಲ್ಲಿತ್ತು.

ಈ ಎಲ್ಲವುಗಳಿಗಿಂತ ದೊಡ್ಡ ಆಘಾತ ಕೊಡುವ ಉದಾಹರಣೆಯನ್ನು ಅವಳು ಆಮೇಲೆ ಹೇಳಿದಳು. ನಮ್ಮ ನೈತಿಕತೆಯನ್ನು ನಾವೇ ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕೆಂದು ನಮಗೆ ತಿಳಿಹೇಳಿದಳು. ಯಾವುದಾದರೂ ಕೆಟ್ಟ ಕೆಲಸಕ್ಕೆ ದೇವರ ಸಹಾಯವನ್ನು ನಾವು ಕೇಳುತ್ತಿದ್ದೇವೆಯೇ? ನಮ್ಮ ತಂದೆ-ತಾಯಿಗಳಿಗೆ ನಾವು ಸರಿಯಾದ ಗೌರವವನ್ನು ಕೊಡುತ್ತಿರುವೆವೋ, ಇಲ್ಲವೋ? (ತಂದೆ-ತಾಯಿ ಎಂದ ಕೂಡಲೆ ನಾನು ಆಗಿಂದಾಗ ಅವಳನ್ನು ಪ್ರಶ್ನಿಸಿದೆ: ‘ಮೇಡಮ್, ತಂದೆ-ತಾಯಿ ಎಂದರೆ ಇದರಲ್ಲಿ ನಮ್ಮ ಮನೆಯಲ್ಲಿನ ಅಜ್ಜಿಯನ್ನೂ ಹಿಡಿಯಬಹುದೇ?’ ಅವಳ ಉತ್ತರ ಹೌದು ಎಂದಾಗಿತ್ತು. ಅಜ್ಜಿ ಕೂಡ ಕುಟುಂಬದ ಸದಸ್ಯಳೆ ಅಲ್ಲವೆ? ಅದನ್ನು ಕೇಳಿ ನನ್ನ ಜಂಘಾಬಲವೇ ಉಡುಗಿತು). ನಮ್ಮ ನೆರೆಹೊರೆಯವರನ್ನು ನಾವು ನಮ್ಮಂತೆಯೇ ಪ್ರೀತಿಸುತ್ತಿರುವೆವೋ, ಇಲ್ಲವೋ? ಅಕಸ್ಮಾತ್ ನಾವು ನಮ್ಮ ನೆರೆಹೊರೆಯವರ ಸಂಪತ್ತನ್ನು ಕಂಡು ಕರಬುತ್ತಿದ್ದೇವೆಯೇ? (ರ್ಯಾನ್ ಮೇಡಮ್ ಹಾಗೆ ಹೇಳಿದ ಕೂಡಲೆ ನಾನು ಜಾಗೃತನಾದೆ. ಮನೆಯಲ್ಲಿ ಪ್ರತಿ ಶುಕ್ರವಾರ ಅಜ್ಜಿಯಿಂದ ಅಕ್ಕ ಪಡೆಯುತ್ತಿದ್ದ ಒಂದು ರೂಪಾಯಿಯ ಬಗ್ಗೆ ನಾನು ಆಗಿಂದಾಗ ಅಸೂಯೆ ಪಟ್ಟಿದ್ದು ನೆನಪಾಯಿತು. ಓಹ್! ಇಲ್ಲಿಯೂ ನಾನು ಫೇಲಾದೆ!) ಚರ್ಚಿನ ಈ ಮೇಡಮ್ ಹೇಳುವ ಸಂಗತಿಗಳಲ್ಲಿ ಒಂದನ್ನೂ ನಾನು ಪಾಸಾಗಲಾರೆ ಎಂಬ ಭಯ ನನ್ನನ್ನು ಕಾಡತೊಡಗಿತು. ಹಾಗೆ ನೋಡಿದರೆ ಬೈಬಲ್ಲಿನಲ್ಲಿರುವ ದೇವರು ಮೋಸೆಸ್‍ನಿಗೆ ಹೇಳಿದ ಎಲ್ಲ ಹತ್ತು ದೈವಿಕ ನಿಯಮಗಳನ್ನು ನಾನು ಮುರಿದಿರಬೇಕು ಎಂದೆನಿಸತೊಡಗಿತು. ಇದೆಲ್ಲ ಆಗುತ್ತಿರುವುದು ಮನೆಗೆ ಬಂದಿರುವ ಅಜ್ಜಿಯ ದೆಸೆಯಿಂದ. ಅವಳು ನಮ್ಮ ಮನೆಯಲ್ಲಿ ಇರುವತನಕ ನನ್ನಿಂದ ಒಂದೂ ಒಳ್ಳೆಯ ಕೆಲಸ ಆಗಲಾರದೇನೋ?

ಹೀಗಾಗಿ ತಪ್ಪೊಪ್ಪಿಗೆಯ ಮಾತು ಬಂತೆಂದರೆ ಸಾಕು ನನ್ನ ಜೀವವೇ ಹೊರಟುಹೋದಂತಾಗುತ್ತಿತ್ತು. ಆವತ್ತು ನಮ್ಮ ಇಡೀ ಕ್ಲಾಸಿನ ಹುಡುಗರು ಪಾಪ ನಿವೇದನೆಗೆಂದು ಚರ್ಚಿಗೆ ಹೋದರು. ನಾನು ಮಾತ್ರ ತಾಳಿಕೊಳ್ಳಲಾರದ ಹಲ್ಲುನೋವೆಂದು ನೆಪವೊಡ್ಡಿ ಮನೆಗೆ ಬಂದೆ. ನೂರಾರು ಹುಡುಗರ ಮಧ್ಯೆ ನಾನು ಹೋದರೆಷ್ಟು, ಬಿಟ್ಟರೆಷ್ಟು? ನನ್ನ ಗೈರು ಹಾಜರಿ ಯಾರ ಗಮನಕ್ಕೂ ಬರಲಿಕ್ಕಿಲ್ಲ. ನಾನು ಮನೆ ಮುಟ್ಟಿ ಅಬ್ಬಾ! ಎಲ್ಲ ಸುಸೂತ್ರ ಸಾಗಿತು, ಹೇಗೆ ನಾನು ತಿರುಮಂತ್ರ ಹಾಕಿದೆ ಎಂದು ನನ್ನ ಬೆನ್ನನ್ನು ನಾನೇ ಚಪ್ಪರಿಸಿಕೊಳ್ಳುವಷ್ಟರಲ್ಲಿ ಹುಡುಗನೊಬ್ಬ ಬಂದು ರ್ಯಾನ್ ಮೇಡಮ್ ಕೊಟ್ಟಿದ್ದು ಎಂದು ಒಂದು ಚೀಟಿ ಕೊಟ್ಟು ಹೋದ. ನೋಡಿದರೆ ನನ್ನ ತಪ್ಪೊಪ್ಪಿಗೆಯ ಸಮಯವನ್ನು ಶನಿವಾರ ನಿಗದಿಪಡಿಸಿರುವುದಾಗಿಯೂ ಮತ್ತು ಅಂದೇ ಉಳಿದ ಹುಡುಗರ ಜೊತೆ ನಾನು ಭೋಜನ ಸಂಸ್ಕಾರದಲ್ಲಿ ಭಾಗಿಯಾಗಬೇಕೆಂದೂ ತಿಳಿಸಲಾಗಿತ್ತು. ತಾನೊಂದು ಬಗೆದರೆ ದೈವವೊಂದು ಬಗೆಯಿತು! ಒಂದಾದ ಮೇಲೊಂದರಂತೆ ಬಂದು ಎರಗುತ್ತಿರುವ ಆಘಾತಗಳಿಂದ ನಾನು ಕಂಗೆಟ್ಟಿದ್ದೆ. ಈ ಆಘಾತಗಳಿಗೆಲ್ಲ ಕಳಸವಿಟ್ಟಂತೆ ಮತ್ತೂ ಒಂದು ದೊಡ್ಡ ಆಘಾತ ನನಗೆ ಬಂದು ಎರಗಿತು. ಆ ಘೋರವಾದ ವಿಷಯವೇನೆಂದರೆ ಆವತ್ತು ಚರ್ಚಿಗೆ ಅವ್ವ ನನ್ನೊಡನೆ ಬರಲು ಸಾಧ್ಯವಿರಲಿಲ್ಲ. ಆಕೆಗೆ ಅರ್ಜಂಟ್ ಬೇರೇನೋ ಕೆಲಸವಿತ್ತು. ಹೀಗಾಗಿ ನನ್ನ ವೈರಿಯಂತಿದ್ದ ಅಕ್ಕ ನೋರಾಳೊಂದಿಗೆ ನಾನು ಚರ್ಚ್ ಕಡೆಗೆ ಹೆಜ್ಜೆ ಹಾಕಬೇಕಾಯಿತು.

ತಮ್ಮನನ್ನು ಅಕ್ಕ ಪ್ರೀತಿಯಿಂದ ಕರೆದುಕೊಂಡು ಹೋಗುತ್ತಾಳೆಂದು ಅವ್ವ ನಂಬಿರಬೇಕು. ಆದರೆ ನೋರಾ ಎಷ್ಟೆಲ್ಲ ರೀತಿಯಲ್ಲಿ ನನ್ನನ್ನು ಕಾಡಿಸುತ್ತಾಳೆಂಬುದು ಅವ್ವನಿಗೆ ಗೊತ್ತಾಗುವುದಿಲ್ಲ. ಆಕೆ ನನ್ನನ್ನು ಗೋಳು ಹೊಯ್ದುಕೊಳ್ಳಲು ಹೊಸ ಹೊಸ ಅಸ್ತ್ರಗಳನ್ನು ಹುಡುಕುತ್ತಿದ್ದಳು. ಗುಡ್ಡದ ದಾರಿಯಲ್ಲಿ ನಾವು ನಡೆದು ಹೋಗುತ್ತಿರಬೇಕಾದರೆ ಅಕ್ಕ ನನ್ನ ಕೈ ಹಿಡಿದುಕೊಂಡಿದ್ದಳು. ತುಂಬ ಅಶಕ್ತನಾಗಿರುವ ರೋಗಿಯನ್ನು ದವಾಖಾನೆಗೆ ಒಯ್ದಂತೆ, ಬಲಿ ಕೊಡಲು ಕುರಿಯನ್ನು ಕರೆದುಕೊಂಡು ಹೋಗುತ್ತಿರುವಂತೆ ಆಕೆ ನನ್ನನ್ನು ಕರೆದೊಯ್ಯುತ್ತಿದ್ದಳು. ತಾನು ಕೂಡ ತೀರ ಸಪ್ಪೆ ಮುಖ ಮಾಡಿಕೊಂಡಿದ್ದಳು. ಅಂದರೆ ನನಗೇನೋ ಭಯಂಕರ ಕೇಡು ಉಂಟಾಗಲಿದೆ ಎನ್ನುವ ಭಾವ ಅವಳಲ್ಲಿತ್ತು. ಅವಳು ಹೇಳುತ್ತಿದ್ದ ಮಾತುಗಳಂತೂ ಅಳಿದುಳಿದ ನನ್ನ ಜೀವದ ಮೇಲೆ ಕಲ್ಲು ಒಗೆಯುವಂತಿದ್ದವು: “ಏಯ್, ಜಾಕಿ, ಖರೇನ ನನಗ ಬಾಳ ಕೆಟ್ಟ ಅನಿಸ್ತಾ ಇದೆ. ಯಾಕಂದ್ರ ನೀನು ನನ್ನ ತಮ್ಮ. ನಿನ್ನ ಸಲುವಾಗಿ ನನ್ನ ಕರುಳು ಚುರ್ ಅನ್ನಲಿಕ್ಕೆ ಹತ್ತೇದ. ನೀನು ಮಾಡಿದ ಎಲ್ಲ ಪಾಪಕೃತ್ಯಗಳು ನಿನಗ ಆ ಸಮಯದೊಳಗ ನೆನಪಾಗ್ತಾವೋ ಇಲ್ಲೋ ಅಂತ ನನಗ ಚಿಂತೆ ಆಗಲಿಕ್ಕೆ ಹತ್ತೇದ. ಯಾಕಂದ್ರ ಯಾವ ತಪ್ಪನ್ನೂ ನಾವು ಹೇಳದೇ ಬಿಡಬಾರದು. ಗೊತ್ತೈತೇನು? ಆವತ್ತು ಅಜ್ಜಿ ಕಾಲಿಗೆ ನಿನ್ನ ಕಾಲು ಬಡಿಸಿದ್ದೆಯಲ್ಲ, ಅದು ಹಿರಿಯರನ್ನ ಒದ್ದಂಗ. ಅವರಿಗೆ ಅಗೌರವ ತೋರಿಸಿದಂಗ, ಅದನ್ನೂ ಹೇಳಬೇಕು. ಅದು ನೆನಪೈತೋ, ಇಲ್ಲೋ?”

‘ಏಯ್, ಹೋಗೇ, ನನ್ನ ಕೈ ಬಿಡು. ನಾ ಯಾವ ಚರ್ಚಿಗೂ ಹೋಗಂಗಿಲ್ಲ, ಯಾವ ತಪ್ಪೊಪ್ಪಿಗೆಯನ್ನೂ ಮಾಡಂಗಿಲ್ಲ, ಹೋಗು. ನಿನ್ನ ಜೋಡಿ ನಾ ಬರಂಗಿಲ್ಲ, ಬಿಡು ನನ್ನ ಕೈ..’ ನಾನು ಅವಳಿಂದ ಕೊಸರಿಕೊಂಡು ಹಿಂದೆ ಉಳಿದೆ.

“ಓಹ್! ಜಾಕಿ, ಹಂಗ ಮಾಡಲಿಕ್ಕೆ ಬರ್ತದೇನೋ? ಅದಂತೂ ಖಂಡಿತಾ ಸಾಧ್ಯ ಇಲ್ಲ. ನೀನು ಈಗ ಹೋಗದಿದ್ರ ಪಾದ್ರಿಯೇ ನಮ್ಮ ಮನಿಗೆ ಬರ್ತಾರ. ನೀನು ಮನೇಲಿ ಇಲ್ಲ ಅಂತ ನಾ ಸುಳ್ಳು ಹೇಳಬೇಕಾ? ನಾನಂತೂ ಖಂಡಿತ ಸುಳ್ಳು ಹೇಳಂಗಿಲ್ಲ. ಯಾಕಂದ್ರ ನನಗೇನು ನೀನು ಒಳ್ಳೆಯದು ಮಾಡಿದೀ ಹೇಳು. ನಾನ್ಯಾಕ ನಿನಗ ಸಹಾಯ ಮಾಡಬೇಕು? ಆವತ್ತು ಬ್ರೆಡ್‍ಚಾಕುವಿನಿಂದ ನನ್ನನ್ನು ಕೊಲ್ಲಲಿಕ್ಕೆ ಬಂದಿದ್ದೆಲ್ಲಾ, ನೆನಪೈತೇನು? ನನ್ನ ವಿರುದ್ಧ ಎಷ್ಟೆಲ್ಲ ಕೆಟ್ಟ ಭಾಷೆಯನ್ನ ನೀನು ಬಳಸೀದೀ ಗೊತ್ತೈತೇನು? ನೀನು ಮಾಡಿದ ತಪ್ಪುಗಳನ್ನು ಎಣಿಸೋದು ಬಾಳ ಕಷ್ಟ. ಅಂದ ಮ್ಯಾಲ ಫಾದರ್ ಏನು ಹೇಳ್ತಾರ ಗೊತ್ತೈತೇನು? ನಿನ್ನ ಪಾಪ ನಿವೇದನೆ ತಮ್ಮಿಂದ ಸಾಧ್ಯ ಇಲ್ಲ ಅಂತ ಹೇಳಿ ಅವರ ಮ್ಯಾಲಿನ ಬಿಶಪ್ ಕಡೆ ಕಳಿಸೋದು ಗ್ಯಾರಂಟಿ..”

ಅವನ ಕಷ್ಟವನ್ನು ನನ್ನ ಕಣ್ಣಿಂದ ನೋಡಲಾಗಲಿಲ್ಲ. ಪಾಪ! ಅವನಿಗೂ ಒಬ್ಬ ಅಜ್ಜಿಯಿರಬೇಕು. ಅವನು ಅಷ್ಟು ನೋವಿನಿಂದ, ಹೃದಯ ಒಡೆದವರಂತೆ ಬಳಲುತ್ತಿರಬೇಕಾದರೆ ಖಂಡಿತ ಅವನಿಗೆ ಅಜ್ಜಿ ಇರಲೇಬೇಕು.

ನನಗೇ ಪಾಠ ಮಾಡುತ್ತಾಳಲ್ಲ, ಈ ನೋರಾ. ಈಕೇಗೇನು ಗೊತ್ತಿದೆ ಮಹಾ! ಏನು ಹೇಳಬೇಕೆಂದು ನನಗೆ ಹೇಳಿಕೊಡುತ್ತಿದ್ದಾಳೆ! ನನಗೆ ನೆನಪಿರುವ ನನ್ನ ತಪ್ಪುಗಳು ಆಕೆಗೆಲ್ಲಿ ನೆನಪಿವೆ? ಅಕಸ್ಮಾತ್ ನನ್ನ ತಪ್ಪುಗಳನ್ನು ನಾನು ತೋಡಿಕೊಂಡರೂ ನಾನು ಹೇಳುವ ಅರ್ಧದಷ್ಟನ್ನಾದರೂ ಆಕೆ ಹೇಳಲಾರಳು. ನಾನು ಯಾಕೆ ಹೇಳುತ್ತಿಲ್ಲವೆಂದು ನನಗೆ ಗೊತ್ತಿದೆ. ಇವರೆಲ್ಲರು ಮಾಡಿದ ಹಿಂಸೆ ಎಷ್ಟೊಂದು ಇದೆ. ರ್ಯಾನ್ ಮೇಡಮ್ ಹೇಳಿದ ಪಾದ್ರಿ ಕತೆಯಲ್ಲಿನ ವ್ಯಕ್ತಿ ತಪ್ಪು ತಪ್ಪಾಗಿ ಪಾಪ ನಿವೇದನೆ ಮಾಡಿದ್ದರಲ್ಲಿ ಅರ್ಥವಿದೆ. ಯಾಕೆಂದರೆ ಜನ ಅವನಿಗೆ ಅಷ್ಟೊಂದು ಹಿಂಸೆ ಕೊಟ್ಟಿರಬಹುದು! ನೋರಾ ನನಗೆ ಕೊಡುತ್ತಿರುವ ಹಾಗೆ! ಆಕೆ ಮುಂದೆ ಮುಂದೆ ನಡೆಯುತ್ತಿದ್ದಳು. ನಾನು ಅವಳ ಹಿಂದೆ ನಡೆಯುತ್ತಿದ್ದೆ. ನಾನು ಹಾದು ಹೋಗುತ್ತಿರುವ ಬೆಟ್ಟ, ಅದರ ಇಳಿಜಾರಿನ ಕೊನೆಗಿರುವ ಚರ್ಚ್, ನಡುನಡುವೆ ಮನೆಗಳು, ಮನೆಗಳ ಸಂದಿನಿಂದ ದೂರದಲ್ಲಿ ಕಾಣುತ್ತಿರುವ ಮುಗಿಲು, ಬೆಳಗಿನ ಬಿಸಿಲಲ್ಲಿ ಹೊಳೆಯುತ್ತಿರುವ ನದಿ ಮತ್ತು ಅದರ ಸುತ್ತಮುತ್ತಲಿನ ಗುಡ್ಡ-ಬೆಟ್ಟ ನನಗೆ ತುಂಬ ಸಂತೋಷ ನೀಡಿದವು. ಆಡಮ್‍ನಿಗೆ ಕೊನೆಯ ಬಾರಿ ಸ್ವರ್ಗದ ತುಣುಕುಗಳು ಕಂಡಂತೆ ನನಗೆ ಆ ದೃಶ್ಯಗಳು ಕಂಡವು.

ಯಾವಾಗ ನಾವು ಚರ್ಚಿನ ಆವರಣದೊಳಗೆ ಕಾಲಿಟ್ಟೆವೋ ಆವಾಗ ನೋರಾ ಮಾತನಾಡುವ ಭಾಷೆ ಇದ್ದಕ್ಕಿದ್ದಂತೆ ಬದಲಾಯಿತು. ನಾನು ದಾರಿಯಲ್ಲಿ ಕೈ ಕೊಟ್ಟು ಹಿಂದಕ್ಕೆ ಹೋಗಬಹುದೆಂದು ಹೆದರಿ ಇಷ್ಟೊತ್ತಿನತನಕ ನನ್ನನ್ನು ಬೈಯ್ಯದೆ ಸುಮ್ಮನಿದ್ದಳೆಂದು ಕಾಣುತ್ತದೆ. ನಾನು ಮನೆಯಲ್ಲಿ ನೋಡುತ್ತಿದ್ದ ನೋರಾ ಆಗಿ ಈಗ ಅವಳು ಬದಲಾಗಿದ್ದಳು. ಥೂ! ಇವಳು ಅಕ್ಕ ಅಲ್ಲ, ಒಂದು ದೆವ್ವ! ನಾವು ಚರ್ಚಿನ ಬಾಗಿಲ ಒಳಗೆ ಹೆಜ್ಜೆ ಇಡುತ್ತಿರುವಂತೆ ಅಂದಳು: “ಹ್ಹ..ಹ್ಹ.. ಜಾಕಿ, ಅಂತೂ ಬಂದೆಯಲ್ಲ, ಇನ್ನು ನೋಡುವಂತೆ. ನಿನ್ನಂತಹ ಉಡಾಳಗ ಇಲ್ಲಿ ಅಗದೀ ಸರಿಯಾದ ಶಿಕ್ಷೆ ಕೊಡತಾರ.”

ಅವಳಿಗೆ ಯಾಕೆ ಹೆದರಬೇಕು? ಹೇಗೂ ನ್ಯಾಯ-ಅನ್ಯಾಯವನ್ನು ನಿರ್ಧರಿಸುವ ಅಂಗಳದಲ್ಲಿ ಬಂದು ಬಿದ್ದಿರುವೆನೆಂದುಕೊಂಡು ನಾನು ಮನಸ್ಸನ್ನು ಸಾವರಿಸಿಕೊಳ್ಳತೊಡಗಿದೆ. ಚರ್ಚಿನ ಒಳಗೆ ಕಾಲಿಟ್ಟ ಕೂಡಲೆ ಹಲವು ಬಣ್ಣದಿಂದ ಕೂಡಿದ್ದ ಗಾಜಿನ ಕದ ನನ್ನ ಹಿಂದೆಯೇ ಮುಚ್ಚಿಕೊಂಡಿತು. ಹೊರಗಿನ ಸೂರ್ಯನ ಬೆಳಕಿನಿಂದ ಒಳಗಿನ ನಸುಗತ್ತಲೆಗೆ ನನ್ನ ಕಣ್ಣುಗಳು ಹೊಂದಿಕೊಳ್ಳತೊಡಗಿದವು. ಇಷ್ಟೊತ್ತಿನತನಕ ಹೊರಗಿನ ಗಾಳಿ ಸಿಳ್ಳು ಹಾಕುತ್ತಿದ್ದರೆ ಈಗ ಒಳಗಿನ ಮೌನ ನಾನು ಹೆಜ್ಜೆ ಇಟ್ಟಂತೆಲ್ಲ ಕರ್ ಕರ್ ಎಂದು ಮಂಜುಗಡ್ಡೆ ಸೀಳಿದಂತೆ ಸೀಳತೊಡಗಿತ್ತು. ಪಾಪ ನಿವೇದನೆಯ ದೊಡ್ಡ ಕಪಾಟಿನ ಮುಂದೆ ನಾನು ಮತ್ತು ನೋರಾ ಕುಳಿತೆವು. ಅವಳು ನನ್ನ ಮುಂದೆ ಇದ್ದಳು! ಆದರೆ ಅವಳಿಗೆ ಯಾವುದೇ ಹೆದರಿಕೆ ಇದ್ದಂತಿರಲಿಲ್ಲ. ಅವಳಿಗಿಂತ ಮುಂದೆ ಕೆಲವು ಮುದುಕಿಯರು ಇದ್ದರು. ನಾನೇ ಕಡೆಗೆ ಇದ್ದೆ. ಬೇಕಾದರೆ ಈಗಲೂ ಇಲ್ಲಿಂದ ತಪ್ಪಿಸಿಕೊಂಡು ಓಡಬಹುದು! ಅಷ್ಟರಲ್ಲಿ ಜೀವನದಲ್ಲಿ ತೀವ್ರ ನಿರಾಶನಾದ ವ್ಯಕ್ತಿಯೊಬ್ಬ ಬಂದು ನನ್ನ ಪಕ್ಕ ಕುಳಿತ. ಓಹ್! ನಾನು ಓಡಿಹೋಗುವ ದಾರಿ ಮುಚ್ಚಿಬಿಟ್ಟಿತು! ಅವನನ್ನು ದಾಟಿ ಹೋಗಲಿಕ್ಕಾಗುತ್ತದೆಯೇ? ಅವನನ್ನು ನೋಡಿದರೆ ಪಾಪ ಅನ್ನಿಸುತ್ತಿತ್ತು. ಅಷ್ಟು ಕಳೆಗುಂದಿದ್ದ. ಅವನು ಕೈಕಟ್ಟಿ, ಕಣ್ಣಲ್ಲಿ ನೀರು ತುಂಬಿಕೊಂಡು ಮೇಲೆ ಮಾಳಿಗೆ ಕಡೆ ನೋಡುತ್ತ ಏನನ್ನೋ ವಟಗುಟ್ಟುತ್ತಿದ್ದ. ಅವನು ಏನು ಹೇಳುತ್ತಿದ್ದಾನೆ, ಯಾವ ಪಾಪ ಮಾಡಿದ್ದಾನೆ, ಯಾವ ಪ್ರಾರ್ಥನೆ ಸಲ್ಲಿಸುತ್ತಿದ್ದಾನೆ ಎಂದು ತಿಳಿಯಲಿಲ್ಲ. ಅವನ ಕಷ್ಟವನ್ನು ನನ್ನ ಕಣ್ಣಿಂದ ನೋಡಲಾಗಲಿಲ್ಲ. ಪಾಪ! ಅವನಿಗೂ ಒಬ್ಬ ಅಜ್ಜಿಯಿರಬೇಕು. ಅವನು ಅಷ್ಟು ನೋವಿನಿಂದ, ಹೃದಯ ಒಡೆದವರಂತೆ ಬಳಲುತ್ತಿರಬೇಕಾದರೆ ಖಂಡಿತ ಅವನಿಗೆ ಅಜ್ಜಿ ಇರಲೇಬೇಕು. ಆದರೂ ಅವನ ಸ್ಥಿತಿ ನನಗಿಂತ ಒಳ್ಳೆಯದೇ ಇದೆ. ಯಾಕೆಂದರೆ ಅವನು ಒಬ್ಬನೆ ಚರ್ಚಿಗೆ ಬಂದು ತನ್ನ ಪಾಪನಿವೇದನೆ ಮಾಡಿಕೊಳ್ಳುವಷ್ಟು ಶಕ್ತನಾಗಿದ್ದಾನೆ! ನಾನು ನನ್ನ ತಪ್ಪುಗಳನ್ನು ಸರಿಯಾಗಿ ಹೇಳುವ ತ್ರಾಣವಿಲ್ಲದವನು. ತಪ್ಪು ತಪ್ಪೊಪ್ಪಿಗೆ ಮಾಡಿಕೊಂಡು ಮಧ್ಯರಾತ್ರಿಯಲ್ಲಿ ಪಾದ್ರಿಯನ್ನು ಎಬ್ಬಿಸುವವನು ನಾನು! ಫಾದರ್‍ಗೆ ರಾತ್ರಿಯ ಹೊತ್ತು ತೊಂದರೆ ಕೊಟ್ಟು ನೋಡನೋಡುವಷ್ಟರಲ್ಲಿ ಸುಟ್ಟು ಬೂದಿಯಾಗುವವನು ನಾನು! ಜನರ ಮಂಚ, ಖುರ್ಚಿಗಳ ಮೇಲೆ ಕುಳಿತು ಅಲ್ಲಿಂದ ಕೆಲಸಮಯದ ನಂತರ ಅವು ಸುಟ್ಟ ವಾಸನೆ ಬರುವಂತೆ ಮಾಡಿಕೊಳ್ಳುವ ಪಾಪಿ ನಾನು!

ನಾನು ಹೀಗೆಲ್ಲ ವಿಚಾರ ಮಾಡುತ್ತಿರಬೇಕಾದರೆ ನೋರಾಳ ಪಾಳಿ ಬಂದುಬಿಟ್ಟಿತು. ಅವಳು ಒಳಗೆ ಹೋದಳು. ಒಳಗಡೆಯಿಂದ ಏನೋ ಧಡ್ ಎಂದು ಆವಾಜ್ ಬಂದಂತೆ ಆಯಿತು. ಅದು ಬಹುಶಃ ಪಾದ್ರಿಗಳ ಧ್ವನಿಯಿರಬೇಕು. ಫಾದರ್ ಧ್ವನಿ ಎಷ್ಟು ಕರ್ಕಶವಿದೆಯಲ್ಲ ಎನಿಸಿತು. ನಂತರ ಇವಳ ಧ್ವನಿ ಸಣ್ಣಗೆ ಕೇಳಿಬಂತು. ಬೆಣ್ಣೆ ಕೂಡ ಅವಳ ಬಾಯಿಯಲ್ಲಿ ಕರಗಲಾರದು ಎನ್ನುವಂತೆ ನೋರಾ ಮಾತನಾಡಿದಳು. ಅಕ್ಕ ಎಷ್ಟೊಂದು ಸೋಗು ಹಾಕುತ್ತಾಳೆ. ಮತ್ತೊಂದು ಧಡ್ ಎನ್ನುವ ಶಬ್ದ. ಅವಳು ಹೊರಗೆ ಬಂದಳು. ತಲೆ ಕೆಳಗೆ ಹಾಕಿಕೊಂಡು, ಕೈಗಳನ್ನು ವಿಧೇಯತೆಯಿಂದ ಹೊಟ್ಟೆಯ ಹತ್ತಿರ ಜೋಡಿಸಿಕೊಂಡು ಜಗತ್ತಿನ ಮುಗ್ಧತೆಯೇ ನಡೆದು ಬರುತ್ತಿರುವಂತೆ ಆಕೆ ನಡೆದು ಬಂದು ಆಚೆ ಬದಿ ನಿಂತಳು. ಓಹ್! ದೇವರೆ! ಹೆಂಗಸರು ಇಷ್ಟೊಂದು ಮೋಸ ಮಾಡಬಲ್ಲರೆ! ಭಕ್ತಿ ಮತ್ತು ವಿಧೇಯತೆಗಳ ಪ್ರತಿರೂಪದಂತೆ ನೋರಾ ನಿಂತಿದ್ದಳು. ಅವಳ ಈಗಿನ ಭಂಗಿಗೂ ಕೆಲಹೊತ್ತಿನ ಹಿಂದೆ ನನ್ನನ್ನು ನಡೆಸಿಕೊಂಡು ಬರುತ್ತಿರುವಾಗ ನನ್ನೊಡನೆ ಆಕೆ ನಡೆದುಕೊಂಡ ರಾಕ್ಷಸಿ ಪ್ರವೃತ್ತಿಗೂ ಎಷ್ಟೊಂದು ಅಂತರ! ಎಲ್ಲ ಧಾರ್ಮಿಕ ವ್ಯಕ್ತಿಗಳು ಹೀಗೆಯೇ ಇರುತ್ತಾರೇನೋ ಎಂದು ನನಗೆ ಒಂದು ಕ್ಷಣ ಸೋಜಿಗವಾಯಿತು. ಮುಂದಿನ ಸರದಿ ನನ್ನದು. ನಾನು ಕನ್ಫೆಶನ್ ಬಾಕ್ಸ್‍ನೊಳಗೆ ಹೋದಕೂಡಲೇ ಅದು ತನ್ನಷ್ಟಕ್ಕೆ ತಾನು ಬಾಗಿಲು ಹಾಕಿಕೊಂಡಿತು. ಒಳಗಡೆ ನೋಡಿದರೆ ಕಗ್ಗತ್ತಲು. ಪಾದ್ರಿಯಾಗಲಿ, ಬೇರೆ ಯಾರೇ ಆಗಲಿ ಕಾಣಿಸುತ್ತಿಲ್ಲ. ನನಗೆ ತುಂಬ ಹೆದರಿಕೆಯಾಯಿತು. ಆ ಕತ್ತಲೆಯಲ್ಲಿ ದೇವರು ಮತ್ತು ನಾನು ಇಬ್ಬರೆ ಇದ್ದೇವೆ ಎಂದುಕೊಂಡೆ. ನನ್ನ ತಪ್ಪುಗಳನ್ನು ಯಾವ ರೀತಿ ಒಪ್ಪಿಸಬೇಕೆಂದು ಕ್ಷಣಕ್ಷಣಕ್ಕೂ ನನಗೆ ಹೆದರಿಕೆಯಾಗುತ್ತಿತ್ತು. ಒಂದು ಗೋಡೆಯ ಮುಂದೆ ಮಂಡಿಯೂರಿ ಹೇಳಿದೆ: ‘ತಂದೆಯೇ, ನನ್ನ ಪಾಪಗಳನ್ನು ಮನ್ನಿಸು. ಇದು ನನ್ನ ಮೊದಲ ಪಾಪ ನಿವೇದನೆ.’ ಮರಳಿ ಯಾವ ಉತ್ತರವೂ ಇಲ್ಲ. ಯಾರೂ ಏನೂ ಹೇಳುತ್ತಿಲ್ಲ. ಕೆಲವು ಕ್ಷಣ ಕಾಯ್ದೆ. ನಂತರ ಇನ್ನೊಂದು ಗೋಡೆಯ ಮುಂದೆ ಮಂಡಿಯೂರಿ ಪ್ರಾರ್ಥಿಸಿದೆ. ಅಲ್ಲಿಯೂ ಏನೂ ಆಗಲಿಲ್ಲ. ಯಾರದೇ ಮಾತಿಲ್ಲ, ಸದ್ದಿಲ್ಲ.

ಮನೆಯಲ್ಲಿ ಹುಡುಗನಾದ ನನಗೆ ಏನೇನೂ ಕಿಮ್ಮತ್ತು ಇರಲಿಲ್ಲ. ಎಲ್ಲ ಅಕ್ಕರೆಯನ್ನು ಅಕ್ಕ ಒಬ್ಬಳೇ ಪಡೆಯುತ್ತಿದ್ದಳು. ನಾಟಕ ಮಾಡುವುದರಲ್ಲಿ ಕೂಡ ಅಕ್ಕ ನಂಬರ್ ಒನ್ ಇದ್ದಳು. ನಾನು ಮತ್ತು ಅವ್ವ ಅಜ್ಜಿಯ ಸ್ವಭಾವವನ್ನು ಟೀಕಿಸುತ್ತಿದ್ದರೆ ನೋರಾ ಮಾತ್ರ ಒಳಗೊಂದು, ಹೊರಗೊಂದು ಮಾಡುತ್ತ ಅಜ್ಜಿಯ ಹತ್ತಿರ ಅವಳ ತರಹವೇ ಇದ್ದು ಆಕೆ ಇಲ್ಲದಾಗ ಹೀಯಾಳಿಸುತ್ತಿದ್ದಳು.

ಆಮೇಲೆ ನಾನು ತಲೆಯೆತ್ತಿ ನೋಡಿದೆ. ನನ್ನ ತಲೆಯಿಂದ ನನ್ನಷ್ಟು ಎತ್ತರದ ಮೇಲೆ ಹಲಗೆಗಳಿಂದ ಮಾಡಿದ ಅಂದವಾದ ಒಂದು ಗೂಡು ಇತ್ತು. ದೊಡ್ಡವರ ಎದೆಯ ಎತ್ತರಕ್ಕೆ ಅದು ಇತ್ತು. ದೊಡ್ಡವರು ಅದರ ಮೇಲೆ ತಮ್ಮ ಮೊಣಕೈಗಳನ್ನು ಊರಿ ಆ ಕಡೆಯಿರುವ ಪಾದ್ರಿಗೆ ನಿವೇದನೆ ಮಾಡಬೇಕಾದ ಸ್ಥಳವೆಂದು ಕಾಣುತ್ತದೆ. ಆದರೆ ನನಗದು ಗೊತ್ತಾಗಲಿಲ್ಲ. ನಾನು ನನ್ನ ಗೊಂದಲದಲ್ಲಿ ಮೊಣಕಾಲೂರಿ ಪ್ರಾರ್ಥಿಸಬೇಕಾದ ಸ್ಥಳ ಅದೇ ಎಂದು ತಪ್ಪಾಗಿ ತಿಳಿದೆ. ಕಿಟಕಿಯಂತೆ ಇದ್ದ ಅದು ನನ್ನಿಂದ ಎತ್ತರವಿತ್ತು. ಗಿಡ-ಮರಗಳನ್ನು ಏರಿ ಅನುಭವವಿದ್ದ ನಾನು ಅದನ್ನು ಒಂದೇ ಸಲಕ್ಕೆ ಏರಿಬಿಟ್ಟೆ. ಏರಿದ್ದೇನೋ ಆಯಿತು. ಆದರೆ ಅಲ್ಲಿ ನಿಲ್ಲುವುದಕ್ಕೆ ಕಷ್ಟವಾಗುತ್ತಿತ್ತು. ಹಾಗೂ ಹೀಗೂ ಹೊಂದಿಸಿಕೊಂಡು ಅಲ್ಲಿ ನಾನು ಮೊಣಕಾಲುಗಳನ್ನೇನೋ ಊರಿದೆ. ಆದರೆ ಹಿಡಿದುಕೊಳ್ಳಲು ಏನೂ ಇರಲಿಲ್ಲ. ಆಮೇಲೆ ಗೋಡೆಗೆ ಬಡಿದಿದ್ದ ಮರದ ಚಿತ್ತಾರದ ಒಂದು ಪಟ್ಟಿಯಿತ್ತು. ಅದನ್ನು ಹಿಡಿದುಕೊಂಡು ಕುಳಿತು ಮತ್ತೆ ನಾನು ನನ್ನ ಪಾಪಗಳನ್ನು ಕ್ಷಮಿಸಲು ಕೋರಿಕೊಂಡೆ. ಈ ಸಲ ಸ್ವಲ್ಪ ಜೋರಾಗಿ ಹೇಳಿದ್ದೆ. ಆಚೆ ಕಡೆ ಈಗ ಏನೋ ಸ್ವಲ್ಪ ನಡೆಯುತ್ತಿದೆ ಎನ್ನುವುದು ಗಮನಕ್ಕೆ ಬಂತು. ಬೋಲ್ಟ್‍ಗಳನ್ನು ಸರಿಸುವ, ತೆರೆಯುವ ಶಬ್ದ. ಗಾಜಿನ ಒಂದು ಫಡಕ ಜೋರಾಗಿ ಹಿಂದಕ್ಕೆ ಸರಿದಂತಾಯಿತು. ನಾನು ಕೂತಿದ್ದ ಕಿಟಕಿಯಲ್ಲಿ ಬೆಳಕು ಹರಿಯಿತು. ಆ ಕಡೆಯಿಂದ ‘ಯಾರದು ಅಲ್ಲಿ? ಯಾವ ಹುಚ್ಚ ಅಲ್ಲಿ ಹತ್ತಿರುವುದು?’ ಎಂಬ ಕರ್ಕಶ ಧ್ವನಿ ಕೇಳಿಬಂತು.

“ಫಾದರ್, ನಾನು” ನಾನು ತಡವರಿಸುತ್ತ ಜೋರಾಗಿಯೇ ಹೇಳಿದೆ. ಯಾಕೆಂದರೆ ಅವರು ಮತ್ತೆ ಹೋದುಗೀದಾರು, ಅಲ್ಲಿಂದ ಮರೆಯಾದಾರು ಎನ್ನುವ ಹೆದರಿಕೆ. ಆ ಧ್ವನಿ ಬರುತ್ತಿದ್ದುದು ನಾನು ಮೊಣಕಾಲೂರಿದ್ದ ಕಿಟಕಿಯ ಕೆಳಗಡೆಯಿಂದ. ಅಂದರೆ ಅವರ ತಲೆ ನನ್ನ ಮಂಡಿಯೂರಿದ ಜಾಗಕ್ಕೆ ಸಮನಾಗಿತ್ತು ಎನ್ನಬಹುದು. ಆವಾಗ ನಾನು ಮತ್ತೆ ಗಟ್ಟಿಯಾಗಿ ಕಿಟಕಿಯನ್ನು ಅಲ್ಲಿ ಇಲ್ಲಿ ಹಿಡಿದುಕೊಂಡು ಕೆಳಗಡೆ ಬಗ್ಗಿ ನೋಡಿದೆ. ಅಲ್ಲಿ ಫಾದರ್ ನಿಂತಿದ್ದಾರೆ. ಯಾರು ಎಂದು ಪರೀಕ್ಷಿಸಲು ಅವರು ಒಂದು ಫಡಕವನ್ನು ತೆಗೆದು ತಮ್ಮ ಗೋಣನ್ನು ಹೊರಗೆ ಹಾಕಿದ್ದಾರೆ. ನಾನು ಮತ್ತೊಂದು ಫಡಕಿನಿಂದ ಅವರನ್ನು ನೋಡಿದೆ. ಅದು ಒಂಥರಾ ನೆಲದ ಮೇಲೆ ನಿಂತಿದ್ದ ಅವರನ್ನು, ನಾನು ಬುಡಮೇಲಾಗಿ ಅಂದರೆ ಮುಖ ಕೆಳಗೆ-ಕಾಲು ಮೇಲೆ ಮಾಡಿ ನೋಡುತ್ತಿರುವಂತೆ ಅನಿಸಿತು. ಇದೊಂದು ವಿಚಿತ್ರ ರೀತಿಯ ಪಾಪ ನಿವೇದನೆಯಾಯಿತು ಎಂದು ಆ ಘಳಿಗೆ ಅನಿಸಿತಾದರೂ ಮರುಕ್ಷಣವೇ ಹಾಗೆ ಯೋಚಿಸುವುದು ತಪ್ಪೆನಿಸಿತು.

ನಾನು ನಿವೇದಿಸಿಕೊಂಡೆ: “ತಂದೆಯೇ, ನನ್ನ ತಪ್ಪುಗಳನ್ನು ಮನ್ನಿಸಿ. ಇದು ನನ್ನ ಮೊದಲ ನಿವೇದನೆ.” ನಾನು ಮತ್ತಷ್ಟು ಬೆಳಕಿಗೆ ಸರಿದು ಫಾದರ್ ಅವರಿಗೆ ಕಾಣಿಸಿಕೊಂಡೆ.

‘ಯಾರು ನೀನು? ಮೇಲೆ ಹತ್ತಿ ಅಲ್ಲೇನು ಮಾಡುತ್ತಿರುವೆ?’ ಫಾದರ್ ಒಮ್ಮೆಲೆ ಚೀರಿದರು. ಆ ಥರ ಅವರು ಜೋರು ಮಾಡುತ್ತಾರೆಂದಾಗಲಿ, ತಪ್ಪೊಪ್ಪಿಗೆ ಇಷ್ಟೆಲ್ಲ ಕಷ್ಟಮಯವಾಗಿರುತ್ತದೆಯೆಂಬ ಅಂದಾಜಾಗಲಿ ಇರದ ನಾನು ಒಮ್ಮೆಗೆ ಬೆದರಿದೆ. ಚಿತ್ತಾರದ ಕೆತ್ತನೆ, ಕಿಟಕಿ ಚೌಕಟ್ಟುಗಳನ್ನು ಹಿಡಿದುಕೊಂಡಿದ್ದ ನನಗೆ ಗಾಬರಿಯೆನಿಸಿ ನಾನು ಒಮ್ಮೆಲೆ ಆಯತಪ್ಪಿ ಬಿದ್ದುಬಿಟ್ಟೆ. ನಾನು ಎಷ್ಟು ವೇಗವಾಗಿ, ಎಷ್ಟು ಬಿರುಸಿನಿಂದ ಹಾಗೂ ಹೇಗೆ ಬಿದ್ದನೆಂದರೆ ಕನ್ಫೆಶನ್ ಬಾಕ್ಸ್‍ನ ಬಾಗಿಲಿಗೆ ನಾನು ಬಾಣದಂತೆ ಜೋರಾಗಿ ಬಡಿದು, ಅದು ತೆರೆದುಕೊಂಡು, ಅಲ್ಲಿಂದ ಹೊರಗೆ ಜನರು ಕಾಯುತ್ತಿದ್ದ ಕಾರಿಡಾರ್‍ನಲ್ಲಿ ಬೆನ್ನು ಕೆಳಗಾಗಿ ಬಿದ್ದಿದ್ದೆ. ಮಂದಿ ಎಲ್ಲರೂ ಓಹ್, ಏನಾಯಿತೆಂದು ಎಂದು ಎದ್ದುನಿಂತರು. ಮಾಳಿಗೆಯ ಒಂದು ಜಂತಿ ಕತ್ತರಿಸಿ ಬಿದ್ದಿತೇನೋ ಎಂದು ಅವರು ಹೆದರಿ ನನ್ನತ್ತ ನೋಡಿದರು. ಅಷ್ಟರಲ್ಲಿ ನಿವೇದನಾ ರೂಮಿನ ನಡುವಿನ ಬಾಗಿಲು ತೆಗೆದು ಫಾದರ್ ತಮ್ಮ ಚೌಕಟೋಪಿಯನ್ನು ಹಿಂದಕ್ಕೆ ಸರಿಸುತ್ತ ಹೊರಗೆ ಬಂದರು. ಅವರು ವ್ಯಗ್ರರಾದಂತಿತ್ತು. ಆಚೆ ಕಡೆ ಪ್ರಾರ್ಥನೆ ಮಾಡುತ್ತಿದ್ದ ನೋರಾ ಓಹ್, ದೇವರೆ! ಎಲ್ಲಿದ್ದರೂ ಇವನದು ಇದೇ ಕತೆ ಎನ್ನುತ್ತ ಅಲ್ಲಿ ಒಮ್ಮಿಂದೊಮ್ಮೆಲೆ ಪ್ರತ್ಯಕ್ಷಳಾದಳು.

“ನೀನು ಇಷ್ಟು ಉಡಾಳ ಎಂದು ಗೊತ್ತಿರಲಿಲ್ಲ? ನೀ ಹೀಗೆ ಮಾಡಿಯೇ ಮಾಡ್ತೀ ಅಂತ ನಮಗ ಮೊದಲೇ ಗೊತ್ತಾಗದಿದ್ದದ್ದು ನಮ್ಮ ತಪ್ಪು. ನಮ್ಮ ಮನೆತನದ ಮರ್ಯಾದಿ ತೆಗೆದುಬಿಟ್ಟಿ..” ಆಕೆ ಒದರುತ್ತ ಮೇಲೇಳುತ್ತಿದ್ದ ನನ್ನ ಕಪಾಳಕ್ಕೆ ತನ್ನ ಉದ್ದ ಕೈಬೀಸಿ ಹೊಡೆದುಬಿಟ್ಟಳು. ಆ ಏಟಿಗೆ ನನ್ನ ಗಲ್ಲ ಹಾಗೂ ಕಿವಿ ಮರಗಟ್ಟಿದವು. ನಾನು ಸುಮ್ಮನಿದ್ದುದನ್ನು ನೋಡಿದ ಜನ ನನಗೆ ಜಾಸ್ತಿ ಪೆಟ್ಟು ಬಿದ್ದಿಲ್ಲವೆಂದು ಭಾವಿಸಿರಬೇಕು. ಆದರೆ ನನ್ನ ಜೀವ ಹೋಗುತ್ತಿತ್ತು. ನಾನು ಉಲ್ಟಾ ಜೋರಾಗಿ ಚೀರಿಬಿಟ್ಟೆ.

ಆಗ ಫಾದರ್ “ಏನಿದು, ಗದ್ದಲ? ಯಾರು ನೀನು? ಆ ಹುಡುಗನಿಗೆ ಯಾಕೆ ಹೊಡಿತೀಯ” ಎನ್ನುತ್ತ ನೋರಾಳನ್ನು ನನ್ನಿಂದ ದೂರ ತಳ್ಳಿದರು. “ಪಾಪ! ಬಿದ್ದಿರುವ ಆ ಮಗುವಿಗೆ ಹಾಗೆ ರಪ್ಪಂತ ಹೊಡೆಯಲು ನಿನಗೆ ನಾಚಿಕೆ ಆಗುವುದಿಲ್ಲವೆ? ಗುಳ್ಳೆ ನರಿಯಂಥವಳೆ!” ಆಕೆಯನ್ನು ಮನಸೋ ಇಚ್ಛೆ ಬೈದರು. ಗುಳ್ಳೆನರಿಯಂತಹ ಅವಳ ಗುಣಗಳನ್ನು ಮೊಟ್ಟಮೊದಲ ಸಲ ಫಾದರ್ ಅವರು ಸರಿಯಾಗಿ ಗುರುತಿಸಿದ್ದರು.

‘ಇಂತಹ ಉಡಾಳ ತಮ್ಮ ಇರಬೇಕಾದರೆ ನಾನು ಏನು ಮಾಡಬೇಕು ಫಾದರ್? ಹೇಗೆ ನನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು?’ ಅವಳು ಅಳುತ್ತ ಹೇಳಿದಳು.

ಬೆಣ್ಣೆ ಕೂಡ ಅವಳ ಬಾಯಿಯಲ್ಲಿ ಕರಗಲಾರದು ಎನ್ನುವಂತೆ ನೋರಾ ಮಾತನಾಡಿದಳು. ಅಕ್ಕ ಎಷ್ಟೊಂದು ಸೋಗು ಹಾಕುತ್ತಾಳೆ. ಮತ್ತೊಂದು ಧಡ್ ಎನ್ನುವ ಶಬ್ದ. ಅವಳು ಹೊರಗೆ ಬಂದಳು. ತಲೆ ಕೆಳಗೆ ಹಾಕಿಕೊಂಡು, ಕೈಗಳನ್ನು ವಿಧೇಯತೆಯಿಂದ ಹೊಟ್ಟೆಯ ಹತ್ತಿರ ಜೋಡಿಸಿಕೊಂಡು ಜಗತ್ತಿನ ಮುಗ್ಧತೆಯೇ ನಡೆದು ಬರುತ್ತಿರುವಂತೆ ಆಕೆ ನಡೆದು ಬಂದು ಆಚೆ ಬದಿ ನಿಂತಳು. ಓಹ್! ದೇವರೆ! ಹೆಂಗಸರು ಇಷ್ಟೊಂದು ಮೋಸ ಮಾಡಬಲ್ಲರೆ!

“ಈಗ ಸುಮ್ಮನೆ ಹೋಗು, ನಿನಗೆ ಕೊಟ್ಟಿರುವ ದಂಡನೆಯ ಪದ್ಯಗಳನ್ನು ಮುಗಿಸಹೋಗು.” ಅವಳು ಮುಖ ಸಣ್ಣದು ಮಾಡುತ್ತ ಹೋದಳು. ಪಾದ್ರಿಗಳು ನನ್ನ ಕಡೆಗೆ ನೋಡಿ, “ನಿವೇದನೆ ಮಾಡಿಕೊಳ್ಳಬೇಕೆಂದು ಬಂದಿರುವೆಯೇನೋ ಹುಡುಗ?”

‘ಹೌದು, ಫಾದರ್.’

“ಓಹ್! ಇಷ್ಟು ಬಲಿಷ್ಠನಾಗಿರುವ ಮತ್ತು ಇಷ್ಟೆಲ್ಲ ಗದ್ದಲ ಸೃಷ್ಟಿಸುವ ನೀನು ಬಹಳಷ್ಟು ತಪ್ಪುಗಳನ್ನು ಮಾಡಿರಬೇಕು! ಬಂದಿರುವುದು ಮೊದಲ ಸಲನಾ?”

‘ಹೌದು, ಫಾದರ್’

“ಹಾಗಿದ್ದರೆ ಸರಿಯಾಯಿತು ಬಿಡು, ಇವತ್ತು ನನ್ನ ಸಮಯ ಸರಿಯಿಲ್ಲವೆಂದು ಕಾಣುತ್ತದೆ. ನಿನ್ನ ತಪ್ಪುಗಳನ್ನೆಲ್ಲ ಹೇಳಿ ಮುಗಿಸಲು ಎಷ್ಟು ಸಮಯ ಬೇಕೋ ಯಾರಿಗ್ಗೊತ್ತು? ಏಯ್ ಹುಡುಗ, ಒಂದು ಕೆಲಸ ಮಾಡು. ನೀನು ಸ್ವಲ್ಪ ಹೊತ್ತು ಕಾಯ್ತೀಯ. ಪಾಪ! ಇಲ್ಲಿ ಹಿರಿಯರಿದ್ದಾರಲ್ಲ, ಅವರದ್ದನ್ನು ಮೊದಲು ಮುಗಿಸಿಬಿಡುತ್ತೇನೆ. ಅವರ ಮುಖಗಳನ್ನ ನೋಡಿದರೆ ಅವರು ಹೆಚ್ಚು ಹೇಳುವುದೇನೂ ಇರಲಿಕ್ಕಿಲ್ಲ..” ಓಹ್! ನನ್ನ ಮುಖ ನೋಡಿದರೆ ನನ್ನಲ್ಲಿರುವ ತಪ್ಪುಗಳ ಲೆಕ್ಕ ಪಾದ್ರಿಗೆ ಗೊತ್ತಾಗುವಂತಿದೆ.

ಆದರೂ ಖುಶಿಯಾಯಿತು. ಯಾಕೆಂದರೆ ಸ್ವಲ್ಪ ಉಸಿರಾಡಲು ಸಮಯ ಸಿಕ್ಕಿತ್ತು. ಈಗಿಂದೀಗಲೇ ಬೀಳುತ್ತಿದ್ದ ಬೀಸುವ ದೊಣ್ಣೆ ಸದ್ಯ ತಪ್ಪಿತೆಂದು ಮನಸ್ಸಿಗೆ ಆನಂದವಾಯಿತು. ‘ಆಯ್ತು ಫಾದರ್, ನಾ ಇಲ್ಲೆ ಕೂತಿರ್ತೀನಿ.’

ಫಾದರ್ ಹಿಂದುಗಡೆಯಿಂದ ನೋರಾ ನನ್ನನ್ನು ಅಣುಕಿಸಿದಳು. ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಫಾದರ್ ತುಂಬ ಒಳ್ಳೆಯವರಂತೆ ನನಗೆ ಕಂಡರು. ಏಳು ವರ್ಷದವನಾದ ನಾನು ಮೊದಲ ಬಾರಿ ಬರುತ್ತಿದ್ದೇನೆ. ನನ್ನಲ್ಲಿ ಹೇಳುವುದಕ್ಕೆ ಬಹಳಷ್ಟು ಇರುತ್ತದೆ ಎನ್ನುವುದನ್ನು ಪಾದ್ರಿಗಳು ಎಷ್ಟು ಸರಳವಾಗಿ ಪತ್ತೆ ಹಚ್ಚಿದರೆಂದು ಖುಶಿಯಾಯಿತು. ಅವರ ಜಾಣತನದ ಬಗ್ಗೆ ಹೆಮ್ಮೆಯಾಯಿತು. ವಾರ ವಾರ ಬರುವವರಲ್ಲಿ ಏನು ಇರುತ್ತದೆ? ಅದಕ್ಕೆ ನನ್ನನ್ನು ಕೊನೆಗೆ ಕರೆದಿದ್ದಾರೆ! ಸ್ವಲ್ಪ ಹೊತ್ತು ಕೂತಿರುವಂತೆ ಧೈರ್ಯ ಬಂತು. ಅಜ್ಜಿಯ ಪ್ರಕರಣವೊಂದನ್ನು ಬಿಟ್ಟರೆ ನನ್ನ ತಪ್ಪುಗಳು ಕೂಡ ಅಂತಹ ಮಹಾನ್ ತಪ್ಪುಗಳೇನಲ್ಲ ಎನಿಸತೊಡಗಿತು.

ಸ್ವಲ್ಪ ಸಮಯದ ನಂತರ ಫಾದರ್ ಹೊರಗೆ ಬಂದರು. ಅವರೇ ನನ್ನನ್ನು ನಿವೇದನಾ ಕೊಠಡಿಯೊಳಗೆ ಕರೆದೊಯ್ದರು. ಅವರು ಆ ಕಡೆ ಕೂತರು.

‘ಹೇಳೋ ಹುಡುಗಾ, ಮನೇಲಿ ನಿನ್ನ ಏನಂತ ಕರೀತಾರೆ?’

‘ಜಾಕಿ ಅಂತ ಫಾದರ್.’

‘ಏನು, ನಿನ್ನ ಗಲಾಟೆ ಏನು? ಯಾವ ತೊಂದರೆ?’

ನನ್ನೊಳಗೆ ಕುದಿಯುತ್ತಿದ್ದ ಸಂಗತಿಯ್ನನು ಆದಷ್ಟು ಬೇಗ ಹೇಳಿಬಿಡಬೇಕಿತ್ತು: “ನಮ್ಮ ಅಜ್ಜಿಯನ್ನು ಕೊಂದುಬಿಡಬೇಕೆಂದು ತೀರ್ಮಾನ ಮಾಡಿದ್ದೆ. ಅದಕ್ಕಾಗಿ ಎಲ್ಲ ತಯಾರಾಗಿದ್ದೆ.”

‘ಹಾಂ!’ ಫಾದರ್ ಒಂದು ಕ್ಷಣ ವಿಚಲಿತರಾದರು. ಮತ್ತೆ ಹೇಳಿದರು, ‘ಅಲ್ಲಪ್ಪಾ, ನಿನ್ನಂತಹ ಸಣ್ಣ ಹುಡುಗರ ತಲೆಯಲ್ಲಿ ಅಂತಹ ಕೆಟ್ಟ ವಿಚಾರ ಬರಬಾರದಲ್ಲ, ಯಾಕೆ ನೀನು ಆ ತರಹ ಯೋಚಿಸಿದೆ?’

“ನಮ್ಮ ಅಜ್ಜಿ ತುಂಬ ಕೆಟ್ಟವಳು ಫಾದರ್, ಆಕೆ ಕುಡೀತಾಳೆ ಫಾದರ್..” ನನ್ನ ತಾಯಿ ಒಂದು ಸಲ ಅವಳ ಕುಡಿತದ ಚಟದ ಬಗ್ಗೆ ಹೇಳುತ್ತ ಅದೊಂದು ದೊಡ್ಡ ಪಾಪ ಎಂದು ಬಣ್ಣಿಸಿದ್ದು ನೆನಪಿಗೆ ಬಂತು. ಇದನ್ನು ಬಹಿರಂಗ ಮಾಡುವುದರಿಂದ ಫಾದರ್ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ತಳೆಯಬಹುದೆಂದು ಅನಿಸಿತು.

‘ಹೌದಾ?’ ಫಾದರ್ ಆಶ್ಚರ್ಯಪಟ್ಟರು.

“ಅಷ್ಟೇ ಅಲ್ಲ, ಫಾದರ್, ನಶ್ಯ ಕೂಡ ಏರಿಸುತ್ತಾಳೆ. ಮತ್ತು ಬರಿಗಾಲಲ್ಲಿ ಸುತ್ತುತ್ತಾಳೆ. ಅವಳನ್ನು ಕಂಡರೆ ನನಗೆ ಇಷ್ಟ ಇಲ್ಲ ಎಂದು ಅವಳಿಗೆ ಗೊತ್ತು. ಮತ್ತೇನು ಗೊತ್ತಾ ಫಾದರ್, ನೋರಾಗೆ ಪ್ರತಿವಾರ ದುಡ್ಡು ಕೊಡುತ್ತಾಳೆ. ನನಗೆ ನಯಾಪೈಸೆ ಕೂಡ ಕೊಡೋದಿಲ್ಲ, ಮುದುಕಿ. ಅಜ್ಜಿ ಮತ್ತು ಅಕ್ಕ ಸೇರಿ ನನ್ನ ಹೃದಯದ ಮೇಲೆ ನೂರಾರು ಬಾರಿ ಬರೆ ಎಳೆದರು ಫಾದರ್. ಅದಕ್ಕೆ ನನ್ನ ಮೈ ಎಷ್ಟು ಉರಿಯಿತೆಂದರೆ ಅವಳನ್ನು ಕೊಂದುಬಿಡಬೇಕೆಂದು ತೀರ್ಮಾನಿಸಿದೆ.”

‘ಕೊಂದ ಮೇಲೆ ಸತ್ತ ದೇಹವನ್ನು ಏನು ಮಾಡುತ್ತಿದ್ದಿ?’ ಪಾದ್ರಿ ಆಸಕ್ತಿಯಿಂದ ಕೇಳಿದರು.

“ದೇಹವನ್ನು ತುಂಡು ತುಂಡು ಮಾಡಿ, ನನ್ನ ಎರಡು ಗಾಲಿಯ ಟ್ರಾಲಿ ಇದೆಯೆಲ್ಲ ಅದರಲ್ಲಿ ತುಂಬಿಕೊಂಡು ಹೋಗಬೇಕೆಂದು ಮಾಡಿದ್ದೆ!”

‘ಅಯ್ಯೋ ಹುಡುಗನೆ, ಎಷ್ಟೆಲ್ಲ ಕೆಟ್ಟ ಕೆಟ್ಟ ಆಲೋಚನೆ ಮಾಡಿರುವಿಯಲ್ಲೋ? ಹಾಗಿದ್ದರೆ ನಿಜವಾಗಿಯೂ ನೀನೊಬ್ಬ ಕೆಟ್ಟ ಹುಡುಗ.’

“ಹೌದು ಫಾದರ್, ನಾನೊಬ್ಬ ಕೆಟ್ಟ ಹುಡುಗ ಅಂತ ನನಗೆ ಗೊತ್ತಿದೆ. ಅದಷ್ಟೇ ಅಲ್ಲ, ನೋರಾಳನ್ನು ಕೂಡ ಬ್ರೆಡ್ ಕತ್ತರಿಸುವ ಚಾಕುವಿನಿಂದ ಇರಿದು ಕೊಲ್ಲಬೇಕೆಂದು ಮಾಡಿದ್ದೆ.”

‘ನೋರಾ ಅಂದರೆ! ಇದೇ ಈಗ ನಿನಗೆ ಹೊಡೆದಳಲ್ಲ ಆ ಹುಡುಗಿ, ಅವಳೇನಾ?’

“ಹೌದು ಫಾದರ್.”

‘ಅವಳನ್ನು ನೋಡಿದರೆ ಅನಿಸುತ್ತದೆ ಬಿಡು. ಅವಳು ಮಾಡುವ ಕೆಲಸಕ್ಕೆ ಯಾರಾದರೂ ಒಂದು ದಿನ ಪ್ರತೀ ಕಾರದ ಆ ಕೆಲಸ ಮಾಡ ಬಹುದು. ನಿನ್ನನ್ನು ನೋಡಿದರೆ ತುಂಬ ಧೈರ್ಯ ವಂತ ಹುಡುಗನಂತೆ ಕಾಣಿಸುತ್ತಿಯಪ್ಪ. ಖುಶಿಯಾಯಿತು, ನಿನ್ನನ್ನು ನೋಡಿ. ಇರಲಿ. ಈಗ ನಾನು ಹೇಳ್ತಾ ಇದ್ದೇನಲ್ಲ, ಅದು ನಿನ್ನಲ್ಲೇ ಇರಲಿ, ಯಾರ ಮುಂದೆಯೂ ಬಾಯಿ ಬಿಡಬೇಡ ಮತ್ತೆ. ನಿನ್ನ ಮನಸ್ಸಿನಲ್ಲಿ ಹೇಗೆ ಅನೇಕ ಜನರನ್ನು ಮುಗಿಸಿಬಿಡಬೇಕೆಂಬ ವಿಚಾರ ಬಂತೋ ಹಾಗೆ ನನಗೂ ಕೂಡ ಅನೇಕ ಸಲ ಅನ್ನಿಸಿದೆ. ಎಷ್ಟೋ ಜನರಿಗೆ ನಾನು ಪಾಠ ಕಲಿಸಬೇಕಿತ್ತು. ಆದರೆ ಏನು ಮಾಡುವುದು? ಪೊಲೀಸನವರು ಮತ್ತು ನ್ಯಾಯಾಲಯದವರು ನಮ್ಮನ್ನು ಗಲ್ಲಿಗೇರಿಸುತ್ತಾರೆ. ಗಲ್ಲಿಗೇರಿಸಿ ಕೊಂಡು ಸಾಯುವುದೇ? ಅಬ್ಬಾ, ಅದಂತೂ ತುಂಬ ಕೆಟ್ಟದ್ದು. ಅಯ್ಯೋ, ಕೊರಳಿಗೆ ಹಗ್ಗ ಬಿಗಿದು ಸಾಯಿಸುವುದನ್ನು ನೆನೆಸಿಕೊಂಡರೆ ತುಂಬ ಭಯವಾಗುತ್ತದೆ!’

“ಹೌದಾ ಫಾದರ್!” ಗಲ್ಲಿಗೇರಿಸುವುದರ ಬಗ್ಗೆ ನನಗೆ ಬಹಳಷ್ಟು ಕುತೂಹಲವಿತ್ತು. ಅದನ್ನು ನೋಡಬೇಕೆಂಬ ದೊಡ್ಡ ಆಸೆಯಿತ್ತು. ಆದರೆ ಯಾರ ಎದುರೂ ಹೇಳಿರಲಿಲ್ಲ. “ಫಾದರ್, ನೀವು ಯಾರಿಗಾದರೂ ಹಗ್ಗ ಬಿಗಿದು ಸಾಯಿಸುವುದನ್ನು ನೋಡಿದ್ದಾರಾ?”

‘ಓಹ್! ಬೇಕಾದಷ್ಟು. ಡಜನಗಟ್ಟಲೆ ನೋಡಿದ್ದೇನೆ. ಅವರೆಲ್ಲ ಸಾಯುವಾಗ ದುಃಖದಿಂದ ಜೋರಾಗಿ ಅರಚುವುದನ್ನು ನನ್ನಿಂದ ನೋಡಲಾಗಲಿಲ್ಲ. ಅವರ ರೋದನವನ್ನು ಸಹಿಸಲಾಗಲಿಲ್ಲ.’

“ಹೌದಾ ಫಾದರ್!” ನನಗೆ ತುಂಬ ಹೆದರಿಕೆಯಾಯಿತು.

‘ಹೌದು ಮಗು, ಅಂತಹ ಸಾವು ಯಾರಿಗೂ ಬರಬಾರದು. ಗಲ್ಲಿಗೇರಿಸಲ್ಪಟ್ಟವರಲ್ಲಿ ಕೆಲವರು ತಮ್ಮ ಅಜ್ಜಿಯನ್ನು ಕೊಂದು ಬಂದವರಿದ್ದರು. ಅವರು ಸಾಯುವಾಗ ಹೇಳಿದ್ದು- ಅಷ್ಟು ಕ್ಷುಲ್ಲಕ ಕೆಲಸವನ್ನು ತಾವು ಮಾಡಬಾರದಾಗಿತ್ತೆಂದು. ಅಜ್ಜಿಯನ್ನು ಕೊಂದಿದ್ದಕ್ಕೆ ಅವರು ತುಂಬ ಪಶ್ಚಾತ್ತಾಪಪಟ್ಟರು.’

ಫಾದರ್ ಹಿಂದುಗಡೆಯಿಂದ ನೋರಾ ನನ್ನನ್ನು ಅಣುಕಿಸಿದಳು. ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಫಾದರ್ ತುಂಬ ಒಳ್ಳೆಯವರಂತೆ ನನಗೆ ಕಂಡರು. ಏಳು ವರ್ಷದವನಾದ ನಾನು ಮೊದಲ ಬಾರಿ ಬರುತ್ತಿದ್ದೇನೆ. ನನ್ನಲ್ಲಿ ಹೇಳುವುದಕ್ಕೆ ಬಹಳಷ್ಟು ಇರುತ್ತದೆ ಎನ್ನುವುದನ್ನು ಪಾದ್ರಿಗಳು ಎಷ್ಟು ಸರಳವಾಗಿ ಪತ್ತೆ ಹಚ್ಚಿದರೆಂದು ಖುಶಿಯಾಯಿತು.

ಫಾದರ್ ಆಮೇಲೆ ನನ್ನೊಂದಿಗೆ ತುಂಬ ಶಾಂತವಾಗಿ ಮಾತನಾಡಿದರು. ಸುಮಾರು ಹತ್ತು ನಿಮಿಷ ಹೇಗೆ ಕಳೆಯಿತೋ ಗೊತ್ತಾಗಲಿಲ್ಲ. ಅದನ್ನು-ಇದನ್ನು ಹೇಳಿ ನನ್ನನ್ನು ಬೀಳ್ಕೊಡಲೋ ಏನೋ ಹೊರಗಡೆ ಕಾರಿಡಾರ್‍ನಲ್ಲಿ ನನ್ನೊಡನೆ ನಡೆದುಬಂದರು. ಅವರ ಸಂಗದಿಂದ ಅಷ್ಟು ಬೇಗ ನಿರ್ಗಮಿಸುವುದು ನನಗೆ ಬೇಕಾಗಿರಲಿಲ್ಲ. ಸ್ವಲ್ಪ ಸಮಯದಲ್ಲಿಯೇ ಅವರನ್ನು ಅಷ್ಟು ಹಚ್ಚಿಕೊಂಡುಬಿಟ್ಟಿದ್ದೆ. ನಾನು ನನ್ನ ಜೀವನದಲ್ಲಿ ನೋಡಿದ ತುಂಬ ವಿಶಿಷ್ಟ ವ್ಯಕ್ತಿಯಾಗಿ ಫಾದರ್ ನನಗೆ ಕಾಣಿಸಿದರು. ನಾನು ಈಗ ಹೊರಗಿನ ಬಯಲನ್ನು ದಿಟ್ಟಿಸಿದೆ. ಅಂಗಳದಲ್ಲಿ ಚರ್ಚಿನ ನೆರಳನ್ನು ದಾಟಿ ಬಿದ್ದಿದ್ದ ಬಿಸಿಲು ನನ್ನಡೆಗೆ ಬರುತ್ತಿರುವಂತೆ ಅನಿಸಿತು. ದಂಡೆಯಲ್ಲಿ ನಿಂತಾಗ ಸಮುದ್ರದ ತೆರೆಗಳು ಭಸ್ಸನೆ ಸಾಗಿ ಬರುತ್ತಿರುವಂತೆ ಬೆಳಕು ಈಗ ನನ್ನೆಡೆಗೆ ಧಾವಿಸುತ್ತಿರುವಂತೆ ನನಗೆ ಕಾಣಿಸಿತು. ಚರ್ಚಿನಲ್ಲಿದ್ದ ನೀರವ ಮೌನ ನಿಧಾನವಾಗಿ ಕರಗುತ್ತಿತ್ತು. ರಸ್ತೆಯಲ್ಲಿನ ಗದ್ದಲ, ವಾಹನಗಳ ಸದ್ದು ಕೇಳುತ್ತಿದ್ದಂತೆ ನನ್ನ ಹೃದಯ ಗರಿಗೆದರಿತು. ಮೇಡಮ್ ರ್ಯಾನ್‍ಳ ಕತೆಯಲ್ಲಿನ ವ್ಯಕ್ತಿಯಂತೆ ನನ್ನ ಪಾಪಕ್ಕಾಗಿ ನಾನು ರಾತ್ರಿಯ ಹೊತ್ತು ಸಾಯುವುದಿಲ್ಲವೆಂದು ನನಗೀಗ ಖಾತ್ರಿಯಾಗಿತ್ತು. ಅಕಸ್ಮಾತ್ ನಾನು ಹಾಗೆ ಸತ್ತಿದ್ದರೆ ನನ್ನ ತಾಯಿಯ ಮಂಚದ ಮೇಲೆ ಸುಟ್ಟ ಗುರುತುಗಳು ಕಾಣಿಸಿಕೊಂಡು ಮೊದಲೇ ಬಸವಳಿದಿರುವ ಅವಳು ಮತ್ತಷ್ಟು ಹೈರಾಣಾಗುತ್ತಿದ್ದಳು. ಸದ್ಯ, ಅದು ತಪ್ಪಿತಲ್ಲ, ಖುಶಿಯಾಯಿತು.

ನೋರಾ ನನ್ನ ಸಲುವಾಗಿ ಹೊರಗೆ ಕಾಯುತ್ತಿದ್ದಳು. ಫಾದರ್ ನನ್ನ ಜೊತೆ ಬರುವುದನ್ನು ಯಾವಾಗ ಅವಳು ನೋಡಿದಳೋ ಆವಾಗ ಅವಳು ಮತ್ತಷ್ಟು ಕ್ರುದ್ಧಳಾದಳು. ಅವರೊಂದಿಗೆ ನಡೆದು ಬರುವ ಅದೃಷ್ಟ ತನಗೆ ಸಿಗಲಿಲ್ಲವೆಂದು ಆಕೆ ಒಳಗೊಳಗೆ ನೊಂದುಕೊಂಡಿರಬೇಕು.

‘ಹಲೋ ಜಾಕಿ, ಫಾದರ್ ನಿನಗ ಏನು ದಂಡನೆ ಕೊಟ್ಟರು?’

“ಮೇರಿ ಮಾತೆಯ ಮೂರು ಪ್ರಾರ್ಥನೆ ಹೇಳು ಅಂದರು.”

‘ಅಷ್ಟೇನಾ? ಹಂಗಿದ್ರ ಅವರ ಮುಂದೆ ನೀನು ನಿನ್ನ ಯಾವ ತಪ್ಪನ್ನೂ ಹೇಳಿರಲಿಕ್ಕಿಲ್ಲ.’

“ಇಲ್ಲಪಾ, ನಾನು ನನ್ನ ಎಲ್ಲಾ ತಪ್ಪು ತೋಡಿಕೊಂಡೇನಿ. ಎಲ್ಲಾನೂ ಬಿಡಿಸಿಹೇಳೇನಿ..”

‘ಅಜ್ಜಿ ಮತ್ತು ಇತರ ಎಲ್ಲರ ಜೋಡಿ ನೀನು ಹೆಂಗ ನಡಕೊಂಡೀದಿ ಅನ್ನೋದನ್ನ ಎಲ್ಲ ಬಿಡಿಸಿಹೇಳಿ ದಿಯೋ, ಇಲ್ಲೋ? ನೀನು ಹೇಳಿದಿಯೋ ಇಲ್ಲೋ ಅಂತ ನನಗ ಸಂಶಯ ಬರಲಿಕ್ಕೆ ಹತ್ತೇತಿ. ನನಗ ಚಾಕು ಚುಚ್ಚ ಲಿಕ್ಕೆ ಬಂದಿದ್ದೆಲ್ಲ- ಅದು ನೆನಪಾ ತಿಲ್ಲೋ? ..ಖರೇ ಹೇಳು.’

ಮನೆಗೆ ಹೋಗಿ ಅಪ್ಪ-ಅವ್ವನ ಎದುರು ಚಾಡಿ ಹೇಳುವುದಕ್ಕೆ ಅವಳು ತಯಾರಾಗುತ್ತಿದ್ದಳು. ನನ್ನ ಪಾಪ ನಿವೇದನೆಯನ್ನು ನಾನು ಸರಿಯಾಗಿ ಮಾಡಿಲ್ಲ ಎಂದು ದೂರುವುದು ಅವಳಿಗೆ ಬೇಕಾಗಿತ್ತು.

“ನಾ ಎಲ್ಲಾ ಹೇಳೇನಿ. ಚೂರೂ ಬಿಡಲದಂಗ.. ಗೊತ್ತಾತೇನು?”

‘ಅಷ್ಟಾಗಿನೂ ನಿನಗ ಬರೇ ಮೂರೇ ಮೂರು ಮೇರಿ ಪ್ರಾರ್ಥನೆ ಹೇಳಲಿಕ್ಕೆ ಹೇಳಿದ್ರಾ?’

“ಹೌದು.” ನಾನು ಎದೆಯುಬ್ಬಿಸಿ ಹೇಳಿದೆ.

ಅವಳು ನಂಬದವರಂತೆ ಕಬ್ಬಿಣದ ರೇಲಿಂಗ್‍ನಿಂದ ಇಳಿದು ನನ್ನೊಡನೆ ನಡೆಯತೊಡಗಿದಳು. ನಾವು ಮನೆಯತ್ತ ಕೆಲವು ಹೆಜ್ಜೆಗಳನ್ನು ಇಟ್ಟಿರಬೇಕು. ನೋರಾಗೆ ಏನೋ ಸಂದೇಹ ಬಂದಿತು. ನನ್ನಡೆಗೆ ಗುಮಾನಿಯಿಂದ ನೋಡಿ ಕೇಳಿದಳು: ‘ಬಾಯಿಯೊಳಗ ಏನದು? ಏನೋ ಸೀಪತಾ ಇದೀಯ?’

“ಪೆಪ್ಪರಮೆಂಟು. ಎಷ್ಟು ಮಸ್ತ್ ಐತಿ, ಗೊತ್ತೇನು?

‘ಯಾರು ಫಾದರ್ ಕೊಟ್ಟರಾ?’

“ಹೌದು.” ನಾನು ತಣ್ಣಗೆ ಹೇಳಿದೆ.

ಅವಳ ಕಣ್ಣಿಂದ ದಳದಳ ನೀರು ಇಳಿದವು. ನೋರಾ ದೊಡ್ಡದಾಗಿ ಅಳುತ್ತಲೆ ಹೇಳಿದಳು: ‘ಕೆಲವರು ಏನೇ ಕೆಟ್ಟದ್ದನ್ನು ಮಾಡಿದರೂ ಅವರ ನಸೀಬು ಚೆನ್ನಾಗಿನೇ ಇರ್ತದ. ಈ ಕಾಲದಲ್ಲಿ ಒಳ್ಳೆಯವರಾಗಿ ಇರಬಾರದು. ಅದಕ್ಕ ನಾನೇ ಉದಾಹರಣೆ. ನಾನೂ ನಿನ್ನಂಗ ಪಾಪಿ ಆಗಿರಬೇಕಾಗಿತ್ತು!’

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮