2nd ಜುಲೈ ೨೦೧೮

ಮಕ್ಕಳ ಶಿಕ್ಷಣದ ಹೊರೆ

ಸಂಜೋತಾ ಪುರೋಹಿತ್

ಅಮೆರಿಕನ್ ಶಾಲೆಗಳಲ್ಲಿರುವ ಸೌಲಭ್ಯಗಳು ಭಾರತದ ಶಾಲೆಗಳಿಗಿಂತ ನಿಸ್ಸಂದೇಹವಾಗಿಯೂ ಬಹುಪಾಲು ಅಧಿಕ. ಕ್ರೀಡೆಗಂತೂ ಅಮೆರಿಕೆಯಲ್ಲಿ ಎಲ್ಲಿಲ್ಲದ ಪ್ರಾಮುಖ್ಯ. ಎರಡೂ ದೇಶಗಳ ಶಿಕ್ಷಣ ಪದ್ಧತಿಯಲ್ಲಿರುವ ಸಾಮಾನ್ಯ ಸಂಗತಿಯೆಂದರೆ ಮಕ್ಕಳ ಮೇಲಿನ ಒತ್ತಡ!

ಇತ್ತೀಚಿನ ಒಂದು ಘಟನೆ. ಬೆಂಗಳೂರಿನ ಶಾಲೆಯೊಂದರಿಂದ ಪ್ರೀತಿ (ಹೆಸರು ಬದಲಾಯಿಸಲಾಗಿದೆ) ಎಂಬ ಹೆಸರಿನ ಹುಡುಗಿಯೊಬ್ಬಳು ಏಕಾಏಕಿ ಕಾಣೆಯಾಗುತ್ತಾಳೆ. ತಕ್ಷಣವೇ ಈ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ, ಸೋಶಿಯಲ್ ನೆಟ್ವರ್ಕಿಂಗ್ ಸೈಟ್ಗಳಲ್ಲಿ ಹರಿದಾಡತೊಡಗಿ ಜನರಲ್ಲಿ ಕಳವಳವನ್ನುಂಟು ಮಾಡುತ್ತದೆ.

ಬುಧವಾರ ಬೆಳಿಗ್ಗೆ ಪ್ರೀತಿಯ ಪೋಷಕರು ಆಕೆಯನ್ನು ಶಾಲಾ ವಾಹನದ ಹತ್ತಿರ ಬಿಟ್ಟಿರುತ್ತಾರೆ. ಆದರೆ ಇದರ ನಂತರ ಆಕೆ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ. ಬುಧವಾರ ಸಂಜೆ ಪೋಷಕರಿಗೆ ತಮ್ಮ ಮಗಳು ಕಾಣೆಯಾದ ಬಗ್ಗೆ ಗೊತ್ತಾಗುತ್ತದೆ. ವಿಚಾರಿಸಿ ನೋಡಿದಾಗ ಅವತ್ತು ಶಾಲೆಯಲ್ಲಿ ಆಕೆಯ ಹಾಜರಾತಿ ಇರುವುದಿಲ್ಲ. ಕೊನೆಯ ಬಾರಿ ಆಕೆಯನ್ನು ನೋಡಿದ್ದು ಶಾಲಾ ವಾಹನದ ಬಳಿ. ಪ್ರೀತಿಯ ತಂದೆ ಠಾಣೆಯಲ್ಲಿ ದೂರು ದಾಖಲಿಸುವುದಲ್ಲದೆ ಫೇಸ್ಬುಕ್ಕಿನಂತಹ ಜಾಲತಾಣಗಳ ಮೂಲಕ ತಮ್ಮ ಮಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಅತ್ಯಾಚಾರ, ಕೊಲೆ ಸುಲಿಗೆಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಪ್ರೀತಿ ಕಾಣೆಯಾದ ಸುದ್ದಿ ನಾನಾ ಭಯಮಿಶ್ರಿತ ಕುತೂಹಲಗಳಿಗೆ ಎಡೆ ಮಾಡಿ ಕೊಡುತ್ತದೆ.

ಆದರೆ ಮುಂದೆ ಅದೃಷ್ಟವಶಾತ್ ಹುಬ್ಬಳ್ಳಿಯ ರೈಲೊಂದರಲ್ಲಿ ಆಕೆ ಪತ್ತೆಯಾಗುತ್ತಾಳೆ. ಅವಳ ಪೋಷಕರ ಪುಣ್ಯವೋ ಅಥವಾ ಜನರ ಹಾರೈಕೆಯೋ ಪ್ರೀತಿ ಯಾವುದೇ ಅಪಾಯಗಳಿಲ್ಲದೆ ಸಿಕ್ಕಿದ್ದೊಂದು ನೆಮ್ಮದಿಯ ಸಂಗತಿ. ಆದರೆ ಈ ಘಟನೆಯು ನಮ್ಮನ್ನು ಹಲವು ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನಾವು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ, ನಮ್ಮ ಇಂದಿನ ಶಿಕ್ಷಣ ಪದ್ಧತಿ, ಪಠ್ಯಪುಸ್ತಕಗಳ ಹೊರೆ... ಹೀಗೆ ಹಲವು ವಿಷಯಗಳ ಕಡೆಗೆ ಗಮನ ಹರಿಸಬೇಕಾದ ಅವಶ್ಯಕತೆಯನ್ನು ತೋರಿಸುತ್ತಿದೆ. ಏಕೆಂದರೆ ಕಾಣೆಯಾಗಿದ್ದಕ್ಕೆ ಪ್ರೀತಿ ನೀಡಿದ ಕಾರಣ ಎಲ್ಲರನ್ನೂ ದಂಗುಬಡಿಸುವಂಥದ್ದು. ಪರೀಕ್ಷೆಯೊಂದರಲ್ಲಿ ಕಡಿಮೆ ಅಂಕಗಳು ಬಂದಿದ್ದಕ್ಕೆ ಅವಳ ತಾಯಿ ಬೈದಿದ್ದೇ ಮನೆಯವರಿಂದ, ಶಾಲೆಯಿಂದ ದೂರ ಓಡಿ ಹೋಗಲು ಮುಖ್ಯ ಕಾರಣವೆಂಬ ಸತ್ಯ ಈ ಪ್ರಕರಣದಲ್ಲಿ ಹೊರಬಿದ್ದಿತ್ತು.

ಈ 13 ವರುಷದ ಪುಟ್ಟ ಪೋರಿಯ ಮನದಲ್ಲಿ ಇಷ್ಟು ಸಣ್ಣ ವಿಷಯಕ್ಕೆ ಈ ತರಹದ ಭಾವನೆಗಳು ಬರುತ್ತಿವೆಯೆಂದಾದರೆ ನಾವೆಲ್ಲಿ ಎಡವುತ್ತಿದ್ದೇವೆ?

ಇವತ್ತು ನಮ್ಮ ಶಿಕ್ಷಣ ಪದ್ಧತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರೆ ಮಕ್ಕಳು ಶಾಲೆ, ಮನೆಪಾಠ, ಹೋಂವರ್ಕ್, ಅಸೈನ್ಮೆಂಟ್ ಇವುಗಳ ಮಧ್ಯೆ ಸಿಕ್ಕು ನಲುಗಿ ಹೈರಾಣಾಗುತ್ತಿದ್ದಾರೆ. ಆಡಿಕೊಂಡರೆ ಮನೆಯಲ್ಲೇ ವಿಡಿಯೋ ಗೇಮ್ ಅಥವಾ ಮೊಬೈಲ್ ಫೋನಿನಲ್ಲಿ ಒಂದಷ್ಟು ಗೇಮ್ಸ್ ಅಷ್ಟೇ. ನಮ್ಮ ತರಹ ಸಂಜೆ ಶಾಲೆ ಮುಗಿದ ಮೇಲೆ ಸ್ವಲ್ಪ ಹೊತ್ತು ಆಟವಾಡಿ, ನಂತರ ಕೈ ಕಾಲು ತೊಳೆದು, ದೇವರಿಗೆ ನಮಸ್ಕರಿಸಿ ಅಭ್ಯಾಸ ಮಾಡುವ ಪದ್ದತಿಯಂತೂ ಕನಸಿನ ಮಾತು. ಹೀಗಾಗಿ ದಿನನಿತ್ಯದ ಜೀವನ ನಡೆಸಲು ಬೇಕಾದ ಸಾಮಾನ್ಯಜ್ಞಾನ ಅಥವಾ ಕಾಮನ್ ಸೆನ್ಸ್ ನಮ್ಮ ಮಕ್ಕಳಲ್ಲಿ ಮರೆಯಾಗುತ್ತಿದೆ. ಮಕ್ಕಳು ಎಷ್ಟೇ ಜಾಣರಿರಬಹುದು ಆದರೆ ಜೀವನವನ್ನು ನಡೆಸಿಕೊಂಡು ಹೋಗುವ ಕುಶಲತೆ ಇಲ್ಲದ ವಿದ್ಯೆಯು ಬೆಲೆ ಬಾಳುವುದೇ?

ಪಕ್ಕದ ಮನೆಯ ಚಿರಾಗನಿಗೆ ಸಂಗೀತದಲ್ಲಿ ಆಸಕ್ತಿ. ಆದರೆ ಅವನಮ್ಮನಿಗೆ ಅದು ಇಷ್ಟವಿಲ್ಲ. ಮೊದಲು ಓದು, ಆಮೇಲೆ ಏನಾದರೂ ಮಾಡಿಕೊ ಎಂಬುದು ಅವರ ಸಿದ್ಧಾಂತ. ಯಾಕೆಂದರೆ ಅಕ್ಕನ ಮಗ ಇಂಜಿನಿಯರಿಂಗ್ ಕಲಿತು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಕೈತುಂಬಾ ಸಂಪಾದಿಸುತ್ತಿದ್ದಾನೆ. ತಮ್ಮ ಮಗ ಯಃಕಶ್ಚಿತ್ ಸಂಗೀತವನ್ನು ಕಲಿತು ಯಾರದೋ ಮುಂದೆ ಅವಕಾಶಕ್ಕಾಗಿ ಕೈಚಾಚುತ್ತಾ ಅಲೆಯುವುದನ್ನು ಆಕೆ ಹೇಗೆ ಸಹಿಸಿಯಾರು? ನಾವೆಲ್ಲಾ ಪೋಷಕರು ವಿಲಾಸ್ ನಾಯಕ್ ಅಥವಾ ರಘು ದೀಕ್ಷಿತ್ ತೆರೆಯ ಮೇಲೆ ಬಂದಾಗ ಕೈತಟ್ಟಿ ಸಂತೋಷ ಪಡುತ್ತೇವೆ. ಆದರೆ ನಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸುವಲ್ಲಿ ವಿಫಲರಾಗಿ ಅನಾವಶ್ಯಕವಾಗಿ ಮಕ್ಕಳ ಮೇಲೆ ಹೊರೆ ಹೊರೆಸುತ್ತಿದ್ದೇವೆ. ಎಲ್ಲಾ ಬೆರಳುಗಳೂ ಸಮನಾಗಿರುವುದಿಲ್ಲ. ಎಲ್ಲರಲ್ಲೂ ಅವರದೇ ಆದ ಬುದ್ದಿಮತ್ತೆಯಿರುತ್ತದೆ, ಚಾತುರ್ಯವಿರುತ್ತದೆ. ಎಲ್ಲರನ್ನೂ ಒಂದೇ ತರಹ ನೋಡಿದ್ದರೆ ರಾಮಾನುಜಂ, ರವಿವರ್ಮ, ಸರೋಜಿನಿ ನಾಯ್ಡು ಹೀಗೆ ವಿಭಿನ್ನ ಪ್ರತಿಭೆಗಳು ಜನ್ಮ ತಳೆಯಲು ಸಾಧ್ಯವಾಗುತ್ತಿರಲಿಲ್ಲ. ಬೇರೆಯವರ ಮಕ್ಕಳೊಂದಿಗೆ ಹೋಲಿಸದೆ ನಮ್ಮ ಮಕ್ಕಳ ನಿಜವಾದ ಸಾಮಥ್ರ್ಯವನ್ನು ಕಂಡುಕೊಂಡು ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಎಷ್ಟು ಚೆನ್ನ ಅಲ್ಲವೇ?

ಈ ಎಲ್ಲ ಸಮಸ್ಯೆಗಳಿಗೆ ಕೇವಲ ಪೋಷಕರಷ್ಟೇ ಜವಾಬ್ದಾರರು ಎಂದು ಹೇಳಲಾಗುವುದಿಲ್ಲ. ಶಿಕ್ಷಣ ಪದ್ಧತಿಯು ಸಮನಾಗಿ ಈ ದುರ್ದೈವದ ಪರಿಸ್ಥಿತಿಗೆ ಕಾರಣ. ಹಿಂದೆಲ್ಲ ಗುರುಕುಲಗಳಿದ್ದವು. ಗುರುಶಿಷ್ಯರಲ್ಲಿ ಅವಿನಾಭಾವ ಸಂಬಂಧವಿತ್ತು. ತನ್ನೆಲ್ಲ ಜ್ಞಾನವನ್ನು ಧಾರೆ ಎರೆದು ಶಿಷ್ಯನನ್ನು ಅಣಿ ಮಾಡುತ್ತಿದ್ದ ಮಹಾನ್ ಗುರುಗಳಿದ್ದರು. ಹಾಗೆಯೇ ಗುರುಗಳಲ್ಲಿ ದೇವರನ್ನು ಕಾಣುತ್ತಾ ಗೌರವಿಸುತ್ತಾ ಪೂಜಿಸುತ್ತಿದ್ದ ಶಿಷ್ಯರಿದ್ದರು. ಆದರೆ ಇಂದು ಶಿಕ್ಷಣವೆಂಬುದು ಸಂತೆಯಲ್ಲಿ ಹರಾಜಿಗೆ ಮಾರುವ ವಸ್ತುವಾಗಿಬಿಟ್ಟಿದೆ. ನೀನೆಷ್ಟು ಜಾಸ್ತಿ ದುಡ್ಡು ಕೊಡುತ್ತಿಯೋ ಅಷ್ಟು ಜಾಸ್ತಿ ನಾನು ನಿನಗೆ ಕಲಿಸುತ್ತೇನೆ, ದುಡ್ಡಿಲ್ಲವೆಂದರೆ ನಮ್ಮ ಗೇಟಿನ ಹತ್ತಿರವೂ ಸುಳಿಯಬೇಡ ಎಂದು ಬೋರ್ಡ್ ಹಾಕಿಕೊಂಡಂತಿರುವ ಸೊ ಕಾಲ್ಡ್ ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣವೆಂಬುದು ಪ್ರತಿಷ್ಠೆಯಾಗಿಬಿಟ್ಟರೆ ಇದಕ್ಕಿಂತ ದೊಡ್ಡ ವಿಪರ್ಯಾಸವೇನಿದೆ!

ಈ ಆಧುನಿಕ ಶಿಕ್ಷಣ ಪದ್ಧತಿಯ ಇನ್ನೊಂದು ದುಷ್ಟಮುಖವೆಂದರೆ ಹೋಂವರ್ಕ್. ಈತ್ತೀಚಿನ ದಿನಗಳಲ್ಲಿ ದಿನನಿತ್ಯದ ಹೋಂವರ್ಕ್ ಪ್ರಮಾಣವು ಅದೆಷ್ಟು ಹೆಚ್ಚಾಗಿದೆಯೆಂದರೆ ಪೋಷಕರು ಕೂಡ ಮಕ್ಕಳ ಜೊತೆಗೆ ಹೋಂವರ್ಕ್ ಮಾಡಲು ಕುಳಿತುಕೊಳ್ಳುವಂತಹ ಪರಿಸ್ಥಿತಿ. ಅಕಸ್ಮಾತ್ ಮುಗಿಸಲು ಸಾಧ್ಯವಾಗದಿದ್ದರೆ ಮಾರನೇ ದಿನ ಖಂಡಿತ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಅಷ್ಟೊಂದು ಭಯ! ನನಗೆ ಗೊತ್ತಿರುವ ಹುಡುಗಿಯೊಬ್ಬಳು ಐದನೇ ತರಗತಿಯಲ್ಲಿ ಓದುತ್ತಿದ್ದಳು. ಅವಳಿಗೆ ಆಗಾಗ ಹೊಟ್ಟೆನೋವು ಕಾಡುತ್ತಿತ್ತು. ಅವಳ ಪೋಷಕರು ಎಷ್ಟೊಂದು ವೈದ್ಯರಿಗೆ ತೋರಿಸಿದರೂ ಏನೂ ಪ್ರಯೋಜನವಾಗಿರಲಿಲ್ಲ ಯಾವುದೇ ಔಷಧಿ, ವೈದ್ಯೋಪಚಾರಗಳಿಂದಲೂ ಅವಳ ಸಮಸ್ಯೆಯನ್ನು ಬಗೆಹರಿಸಲು ಆಗಿರಲಿಲ್ಲ. ಹೀಗೆಯೇ ಎರಡು ತಿಂಗಳು ಕಳೆದಿದ್ದವು. ನಂತರ ಅವಳ ಪೋಷಕರು ಗಮನಿಸಿದ ಅಂಶವೇನೆಂದರೆ ಅವಳಿಗೆ ಶಾಲೆಯಲ್ಲಿ ಹೆಚ್ಚಿನ ಅಸೈನ್ಮೆಂಟ್, ಹೋಂ ವರ್ಕುಗಳನ್ನು ಕೊಟ್ಟಾಗ ಮಾತ್ರ ಈ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗೆ ಹಿಂಸೆ ಎನ್ನಿಸುವ ಶಿಕ್ಷಣದ ಹೊರೆ ನಮ್ಮ ಮಕ್ಕಳ ಮೇಲೆ ಯಾವ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ನಾವೆಲ್ಲಾ ಗಂಭೀರವಾಗಿ ಚಿಂತಿಸಬೇಕಾದ ದಿನಗಳು ಬಂದಿವೆ.

ಅಂದಹಾಗೆ ಇಂಥಾ ತರಹೇವಾರಿ ಸಮಸ್ಯೆಗಳು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಆದರೆ ಅಮೆರಿಕಾದ ಶಿಕ್ಷಣ ಪದ್ಧತಿಗೆ ಹೋಲಿಸಿದರೆ ನಮ್ಮಲ್ಲಿ ಬುಲ್ಲೀಂಗ್ ಅಥವಾ ಪೀಡಕ ಪ್ರವೃತ್ತಿಗಳು ತೀರಾ ಇಲ್ಲವೆನ್ನುವಷ್ಟು ಕಮ್ಮಿ. ಅಮೆರಿಕಾದಲ್ಲಿ ಪ್ರತೀ ವರ್ಷ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳು ನೀಡುವ ಹಿಂಸೆಯನ್ನು ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೇವಲ ಬುಲ್ಲೀಂಗ್ ಪ್ರಕರಣಗಳನ್ನಷ್ಟೇ ಗಮನಿಸಿದರೂ ಅಂದಾಜು 83% ಬಾಲಕಿಯರು ಮತ್ತು 79% ಬಾಲಕರು ತಮಗಾಗಿರುವ ಅನುಭವಗಳ ಬಗ್ಗೆ ಆಡಳಿತ ಮಂಡಳಿಗೆ ದೂರು ಸಲ್ಲಿಸುತ್ತಾರೆ ಎಂದು ‘ಬ್ಯುಸಿನೆಸ್ ಇನ್ಸೈಡರ್’ ಎರಡು ವರ್ಷಗಳ ಹಿಂದೆಯೇ ಪ್ರಕಟಿಸಿತ್ತು. ಬುಲ್ಲೀಂಗ್ ಪ್ರಕರಣಗಳು ಮಕ್ಕಳಲ್ಲಿ ಹುಟ್ಟಿಸುವ ತೀವ್ರ ಮಾನಸಿಕ ಒತ್ತಡಗಳು ದೈಹಿಕ ಅನಾರೋಗ್ಯಕ್ಕೂ, ಒಟ್ಟಾರೆ ಕಲಿಕೆಯ ಸಾಮಥ್ರ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ನ್ಯಾಷನಲ್ ಎಜುಕೇಷನ್ ಅಸೋಸಿಯೇಷನ್ ಗುರುತಿಸಿತ್ತು. ಇನ್ನು ಈಗಾಗಲೇ ಇದ್ದ ಬುಲ್ಲೀಂಗ್ ಪ್ರಕರಣಗಳಿಗೆ ಸೈಬರ್ ಬುಲ್ಲೀಂಗ್ ಪ್ರಕರಣಗಳೂ ಸೇರಿಕೊಂಡು ಮಕ್ಕಳ ಆತ್ಮಹತ್ಯೆಗಳು ಹೆಚ್ಚಾಗಿದ್ದವು. ಹೀಗೆ ಕ್ರಮೇಣ ಅಮೆರಿಕನ್ ಶಾಲೆಗಳು ಈ ಸವಾಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವಿಫಲರಾದಂತೆ ಕಂಡಾಗ ದೊಡ್ಡಮಟ್ಟದಲ್ಲಿ ಟೀಕೆಗೊಳಗಾಗಿದ್ದನ್ನೂ ನಾವು ಸ್ಮರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಲ ಅಮೆರಿಕನ್ ಶಾಲೆಗಳು ಖಾಸಗಿ ಏಜೆನ್ಸಿಗಳ ನೆರವನ್ನು ಪಡೆದುಕೊಂಡು ವಿದ್ಯಾರ್ಥಿಗಳ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ನಿಗಾ ಇಡುವ ಬಗ್ಗೆಯೂ ಗಂಭೀರವಾಗಿ ಯೋಚಿಸಿದ್ದವು. ಹೀಗೆ ಭಾರತದ ಶಾಲೆಗಳಲ್ಲಿ ಒಂದು ಕಾಲದಲ್ಲಿ ರ್ಯಾಗಿಂಗ್ ಸಮಸ್ಯೆಯು ಎಡೆಬಿಡದೆ ಕಾಡಿದಂತೆ ಬುಲ್ಲೀಂಗ್ ಪ್ರಕರಣಗಳು ಅಮೆರಿಕನ್ ವಿದ್ಯಾಸಂಸ್ಥೆಗಳಲ್ಲಿ ಬಹುದೊಡ್ಡ ತಲೆನೋವಾಗಿ ಪರಿಣಮಿಸಿವೆ. ಇದು ಅಮೆರಿಕನ್ ಶಿಕ್ಷಣ ವ್ಯವಸ್ಥೆಯ ಸದ್ಯದ ತುರ್ತೂ ಹೌದು.

ಇನ್ನು ಸೌಲಭ್ಯಗಳನ್ನು ಪರಿಗಣಿಸಿದರೆ ಅಮೆರಿಕನ್ ಶಾಲೆಗಳಲ್ಲಿರುವ ಸೌಲಭ್ಯಗಳು ಭಾರತದ ಶಾಲೆಗಳಿಗಿಂತ ನಿಸ್ಸಂದೇಹವಾಗಿಯೂ ಬಹುಪಾಲು ಅಧಿಕ. ಕ್ರೀಡೆಗಂತೂ ಅಮೆರಿಕೆಯಲ್ಲಿ ಎಲ್ಲಿಲ್ಲದ ಪ್ರಾಮುಖ್ಯ. ಸುಸಜ್ಜಿತ ಕ್ರೀಡಾಂಗಣಗಳು, ಕ್ರೀಡಾ ಮೀಸಲಾತಿ, ಪ್ರತಿಭೆಗೆ ತಕ್ಕ ಪ್ರೋತ್ಸಾಹ ಎಲ್ಲವೂ ಇಲ್ಲಿ ವಿಪುಲವಾಗಿದೆ. ಹಾಗೆ ನೋಡಿದರೆ ನಮ್ಮ ಮತ್ತು ಇವರ ಶಿಕ್ಷಣ ಪದ್ಧತಿಯಲ್ಲಿರುವ ಸಾಮಾನ್ಯ ಸಂಗತಿಯೆಂದರೆ ಒತ್ತಡ. ಇಲ್ಲಿ ಕೂಡ ಮಕ್ಕಳಿಗೆ ಹೋಂವರ್ಕ್, ಅಸೈನ್ಮೆಂಟ್‍ಗಳ ಒತ್ತಡವು ಕಮ್ಮಿಯೇನಿಲ್ಲ. ಹೇಗೆ ಯೋಚಿಸಬೇಕೆಂದು ಹೇಳಿಕೊಡದೆ ಯಾವುದನ್ನು ಯೋಚಿಸಬೇಕೆಂದು ಮಾತ್ರ ಕಲಿಸುವ ಸಿದ್ಧಸೂತ್ರದ ಮಾದರಿಗಳು ಇಲ್ಲೂ ಸೇರಿದಂತೆ ಪ್ರಸ್ತುತ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದೆ.

ಹೀಗೆ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಭಾರತ, ಅಮೆರಿಕಗಳೆರಡೂ ತಮ್ಮ ತಮ್ಮ ನೆಲೆಯಲ್ಲಿ ವಿಶಿಷ್ಟವಾಗಿದ್ದರೂ ಎದುರಿಸಬೇಕಾಗಿರುವ ಸವಾಲುಗಳ ಗಂಭೀರತೆಯು ಸಾಕಷ್ಟಿದೆ. ಪರೀಕ್ಷಾ ಫಲಿತಾಂಶಗಳನ್ನೂ ಸೇರಿದಂತೆ ತರಹೇವಾರಿ ಕಾರಣಗಳಿಂದಾಗಿ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುವ, ಸಾವಿನ ಕದ ತಟ್ಟುವ ಮಕ್ಕಳ ಸಂಖ್ಯೆಯು ನಮ್ಮಲ್ಲೂ ಕಮ್ಮಿಯೇನಿಲ್ಲ. ಪ್ರೀತಿಯ ಹಾಗೆ ನಮ್ಮ ಮಕ್ಕಳು ಬೇಸತ್ತು ಮನೆ, ಶಾಲೆ ಬಿಟ್ಟು ಹೋಗುವ ಮೊದಲು ಅವರ ಶಾಲೆ, ಸ್ನೇಹಿತರ ಬಳಗ, ಶಿಕ್ಷಕರ ಕಡೆಗೆ ಆಗಾಗ ಗಮನ ಹರಿಸೋಣ. ಮಕ್ಕಳು ನಮಗೆ ಹೇಳಲಾಗದಿರುವ ಯಾವುದಾದರೂ ಸಮಸ್ಯೆಯಿಂದ ಒದ್ದಾಡುತ್ತಿದ್ದರೆ ಸ್ನೇಹಿತರಂತೆ ಅವರಿಗೆ ಜೊತೆಯಾಗಿ ಸಮಸ್ಯೆ, ಸವಾಲುಗಳನ್ನು ಪರಿಹರಿಸಬೇಕಿದೆ. ಅವರಿಗೆ ತಪ್ಪು ಮಾಡಬೇಡ ಎಂದು ಹೇಳುವ ಮೊದಲು ನಾವು ಸ್ವತಃ ಹಾದಿತಪ್ಪದೆ ಅವರಿಗೆ ಮಾರ್ಗದರ್ಶಕರಾಗಬೇಕು.

*ಲೇಖಕಿಯ ಸ್ವಂತ ಊರು ಧಾರವಾಡ. ದಾವಣಗೆರೆ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಪದವಿ ಪಡೆದು, ಪ್ರಸ್ತುತ ಅಮೆರಿಕಾದಲ್ಲಿ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದಾರೆ. ಹವ್ಯಾಸಿ ಬರಹಗಾರ್ತಿ; ಚೊಚ್ಚಲ ಕಾದಂಬರಿ ‘ಸಂಜೀವಿನಿ’ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮