2nd ಜುಲೈ ೨೦೧೮

ಭಾರತದ ವಿದೇಶಾಂಗ ನೀತಿಯ ಶಾಂಗ್ರಿ-ಲಾ ತಿರುವು

ಮೋಹನದಾಸ್

ವಿದೇಶಾಂಗ ನೀತಿಯ ಈ ‘ತಿರುವು’ ತುಸು ಅನಿರೀಕ್ಷಿತವೂ, ಆದರೆ ಅಪೇಕ್ಷಣೀಯವೂ ಆಗಿದೆಯೆಂದು ವಿದೇಶಾಂಗ ನೀತಿಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಾಂಗ ನೀತಿ ರೂಪಿಸುವಲ್ಲಿ ‘ಕೇವಲ ಶಾಶ್ವತ ಹಿತಾಸಕ್ತಿಗಳಿರುತ್ತವೆಯೇ ಹೊರತು ಶಾಶ್ವತ ಮಿತ್ರರಲ್ಲ’ ಎಂಬ ಮಂತ್ರಕ್ಕೆ ಸಾಕ್ಷಿಯಾಗಿ ಪ್ರಧಾನಿ ಮೋದಿಯವರು ಸಿಂಗಪುರದ ಶಾಂಗ್ರಿ ಲಾ ಸಂವಾದದಲ್ಲಿ ಭಾರತದ ಅಲಿಪ್ತ ವಿದೇಶಾಂಗ ನೀತಿಯನ್ನು ಪ್ರತಿಪಾದಿಸಿದ್ದಾರೆ. ರಾಜಕೀಯ ಪಂಡಿತರು ಅಪೇಕ್ಷೆ ಪಟ್ಟಂತೆ ಭಾರತವಿನ್ನೇನು ಅಮೆರಿಕೆಯ ಬಾಲಂಗೋಚಿಯಾಗಿ ತನ್ನ ಇದುವರೆಗಿನ ರಷ್ಯಾ, ಚೀನಾ, ಯೂರೋಪ್ ರಾಷ್ಟ್ರಗಳ ನಡುವಿನ ಸ್ವತಂತ್ರ ದ್ವಿಪಕ್ಷೀಯ ಸಂಬಂಧಗಳಿಗೆ ತಿಲಾಂಜಲಿ ನೀಡುವುದೇನೋ ಅನ್ನಿಸಿತ್ತು. ದಶಕಗಳ ತನ್ನ ಅಲಿಪ್ತ ಧೋರಣೆಯನ್ನು ಬಿಟ್ಟು ಅಮೆರಿಕ-ಇಸ್ರೇಲ್ ಸಖ್ಯಕ್ಕಾಗಿ ತನ್ನ ವಿದೇಶಾಂಗ ನೀತಿಯನ್ನೇ ಬದಲಾಯಿಸಿಕೊಂಡಿದೆ ಎಂದು ಅನ್ನಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಮತ್ತು ಆಶ್ಚರ್ಯಜನಕವಾಗಿ ಪ್ರಧಾನಿ ಮೋದಿಯವರು ಭಾರತದ ದಶಕಗಳ ಅಲಿಪ್ತ ಮತ್ತು ಸಮಾನಾಂತರ ವಿದೇಶಾಂಗ ನೀತಿಯನ್ನು ತಮ್ಮ ಭಾಷಣದಲ್ಲಿ ಅತ್ಯಂತ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.

ಚೀನಾ ಬಗೆಗಿನ ಭಾರತದ ನೀತಿಯ ಸಂಕೀರ್ಣತೆಯನ್ನೂ ಮತ್ತು ಬಹುಪದರಗಳನ್ನೂ ಮೊದಿಯವರ ಭಾಷಣ ಗುರುತಿಸಿದೆ. ಚೀನಾ ಮತ್ತು ರಷ್ಯಾಗಳೊಡನೆ ವಿದೇಶಾಂಗ ವ್ಯವಹಾರಗಳಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸಂಬಂಧಗಳ ಪ್ರತಿಯೊಂದು ಆಯಾಮವನ್ನೂ ಅತ್ಯಂತ ಕುಶಲತೆ ಮತ್ತು ಪ್ರೌಢಿಮೆಯಿಂದ ನೋಡಬೇಕಿದೆಯೇ ಹೊರತು ದಶಕಗಳ ಹಿಂದಿನ ಶೀತಲಸಮರದ ಚೌಕಟ್ಟಿನಲ್ಲಿ ನೋಡಲಾಗದೆಂದೂ ಮೋದಿ ಸ್ಪಷ್ಟಪಡಿಸಿದ್ದಾರೆ. ಅತಿಥೇಯ ರಾಷ್ಟ್ರ ಸಿಂಗಪುರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ, “ಪ್ರತಿಯೊಂದು ರಾಷ್ಟ್ರವು ಬೇರೊಂದು ದೊಡ್ಡ ಶಕ್ತಿಶಾಲಿ ರಾಷ್ಟ್ರದ ಹಿಂದೆ ನಿಲ್ಲದೆ, ತನ್ನ ಮೌಲ್ಯಗಳೊಂದಿಗೆ ನಿಂತರೆ, ಅಂತರರಾಷ್ಟ್ರಿಯ ವಲಯದಲ್ಲಿ ಗೌರವ ಮತ್ತು ಹೆಸರು ಸಂಪಾದಿಸುತ್ತವೆ ಎಂಬುದನ್ನು ಸಿಂಗಪುರದ ನಡವಳಿಕೆ ತೋರಿಸುತ್ತದೆ. ರಾಷ್ಟ್ರಗಳು ಆಂತರಿಕ ವ್ಯವಹಾರದಲ್ಲಿ ವಿವಿಧತೆ ಮತ್ತು ಬಹುತ್ವವನ್ನು ಒಪ್ಪಿದರೆ, ಸ್ವಾಭಾವಿಕವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಎಲ್ಲರನ್ನು ಒಳಗೊಳ್ಳುವಿಕೆಯನ್ನು ಬಯಸುತ್ತವೆ” ಎಂದೂ ಮೋದಿ ಹೇಳಿದ್ದಾರೆ.

ಪ್ರಧಾನಿಯ ಈ ಶಾಂಗ್ರಿ ಲಾ ಭಾಷಣದಲ್ಲಿ ಹೊರಹೊಮ್ಮಿದ ವಿಶೇಷಾಂಶಗಳು ಎರಡು. ಮೊದಲನೆಯದಾಗಿ, ಇದು ಭಾರತದ ವಿದೇಶಾಂಗ ನೀತಿಯ ದಶಕಗಳ ನಿರಂತರತೆ ಮತ್ತು ಪ್ರಸಕ್ತ ವಿಶ್ವದಲ್ಲಿ ಭಾರತದ ಉಳಿವಿಗೆ ಮತ್ತು ಪ್ರಗತಿಗೆ ಪೂರಕವಾಗಿ ಸಮಾನಾಂತರ ಕಾಯ್ದುಕೊಳ್ಳುವ ನೀತಿಯನ್ನು ಮತ್ತೊಮ್ಮೆ ಹೇಳಿದೆ. ಎರಡನೆಯದಾಗಿ, ಅಮೆರಿಕ ಒಳಗೊಂಡು ತಾನು ಯಾವುದೇ ರಾಷ್ಟ್ರದ ಮೇಲೆ ಅವಲಂಬಿತವಲ್ಲವೆಂದೂ ಮತ್ತು ಇದು ಚೀನಾ-ರಷ್ಯಾಗಳ ಜಾಗತಿಕ ಸ್ಥಾನವನ್ನು ಕೆಣಕುವ ಇರಾದೆ ಹೊಂದಿಲ್ಲವೆಂದೂ ಸಾರಿಹೇಳುವ ಪ್ರಾಪಂಚಿಕ ನಿಲುವಾಗಿದೆ. ಈ ಭಾಷಣದ ನಂತರದಲ್ಲಿ ಜಾಗತಿಕವಾಗಿ ಭಾರತದ ನಿಲುವಿಗೆ ಇರುವ ಗೌರವ ಪುನರ್ ಸ್ಥಾಪಿತವಾಗಬಲ್ಲದಾದರೂ ಆಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತದ ಒಬ್ಬಂಟಿ ಸ್ಥಾನವನ್ನೂ ಪ್ರಧಾನಿಯ ಶಾಂಗ್ರಿ ಲಾ ಭಾಷಣ ಬಿಂಬಿಸುತ್ತದೆ.

ಕಳೆದ ಕೆಲವಾರು ತಿಂಗಳುಗಳಿಂದ ಭಾರತದ ಈ ಕುತೂಹಲಕಾರಿ ವಿದೇಶಾಂಗ ನಡೆಯ ತಯ್ಯಾರಿ ನಡೆಯುತ್ತಿದ್ದರೂ ಇದಕ್ಕೆ ತಕ್ಷಣದ ಕಾರಣವಾಗಿ ಅಮೆರಿಕದ ಅಧ್ಯಕ್ಷ ತಿಕ್ಕಲು ದೊರೆ ಡಾನಲ್ಡ್ ಟ್ರಂಪ್‍ರವರ ಹೇಳಿಕೆಗಳು ಪ್ರಚೋದನೆಯಂತಿವೆ. ಅಮೆರಿಕ ಮತ್ತು ಭಾರತದ ಸಂಬಂಧಗಳು ಎಷ್ಟೇ ಚೆನ್ನಾಗಿದ್ದರೂ ಹಾಗೂ ಪರಸ್ಪರ ನಾಗರಿಕ ಸಂಬಂಧಗಳು ಮತ್ತು ವಿನಿಮಯಗಳು ಎಷ್ಟೇ ಮಧುರವಾಗಿದ್ದರೂ, ಸಂಕಟದ ಸಮಯದಲ್ಲಿ ಅಮೆರಿಕವನ್ನು ನಂಬಲಾರದ ಸ್ಥಿತಿ ಒದಗಿದೆ. ಅಮೆರಿಕಾದಿಂದ ನೂರಾರು ಬಿಲಿಯನ್ ಡಾಲರ್‍ಗಳ ರಕ್ಷಣಾ ಸಾಮಗ್ರಿಗಳನ್ನು ಕೊಳ್ಳುತ್ತಿದ್ದರೂ ಮತ್ತು ಅಮೆರಿಕದ ಗೂಗಲ್, ಫೇಸ್‍ಬುಕ್, ಟ್ವಿಟ್ಟರ್, ಅಮೆಝಾನ್, ವಾಲ್‍ಮಾರ್ಟ್, ಮೈಕ್ರೋಸಾಫ್ಟ್, ಆಪಲ್ ಮತ್ತಿತರ ದಿಗ್ಗಜಗಳಿಗೆ ಮುಕ್ತ ಮಾರುಕಟ್ಟೆ ಒದಗಿಸಿದ್ದರೂ ಅಧ್ಯಕ್ಷ ಟ್ರಂಪ್‍ರವರ ಬೇಜವಾಬ್ದಾರಿ ಕೊಂಕು ನುಡಿಗೆ ಬಾರತ ಬೇಸತ್ತಿತ್ತು. ಮೇಲಾಗಿ ತನ್ನ ವೈಯಕ್ತಿಕ ಹಿತಾಸಕ್ತಿಗಳಿಗೆ ತನ್ನ ಮಿತ್ರದೇಶಗಳನ್ನು ಯಾವುದೇ ಸಮಯದಲ್ಲಾದರೂ ‘ಕೈಬಿಡುವ’ ಟ್ರಂಪ್‍ರವರ ಹೇಳಿಕೆಗಳಿಂದಲೂ ಭಾರತಕ್ಕೆ ಗಲಿಬಿಲಿಯಾಗಿತ್ತು.

ಟ್ರಂಪ್‍ರವರ ರಿಪಬ್ಲಿಕನ್ ಸರ್ಕಾರವು ಹೆಚ್-1ಬಿ ವೀಸಾದ ವಿಷಯದಲ್ಲಿ ಹಾಗೂ ಅಮೆರಿಕೆಯ ಉತ್ಪನ್ನಗಳ ಮೇಲೆ ಭಾರತದ ಸುಂಕದ ವಿಷಯದಲ್ಲಿ ಕೂಡಾ ಪರಸ್ಪರ ತಾಕಲಾಟವಿತ್ತು. ಮೇಲಾಗಿ ಸಂಪೂರ್ಣವಾಗಿ ಅಮೆರಿಕೆಯ ತೆಕ್ಕೆಗೆ ಸರಿದರೆ ರಷ್ಯಾ ಹಾಗು ಚೀನಾ ರಾಷ್ಟ್ರಗಳು ಭಾರತದೊಂದಿಗಿನ ತಮ್ಮ ಸಂಬಂಧಗಳನ್ನು ಇನ್ನಷ್ಟು ಕಡುವಾಗಿಸುವ ಸಾಧ್ಯತೆಯ ಮುನ್ನೋಟದಲ್ಲಿ ಭಾರತವು ಸದ್ಯಕ್ಕೆ ತನ್ನ ನಂಬುಗೆಯ ಅಲಿಪ್ತ ವಿದೇಶಾಂಗ ನೀತಿಗೆ ಮರಳುವ ನಿರ್ಣಯ ತೆಗೆದುಕೊಂಡಿರಬಹುದು. ಸೇನಾಸಾಮಾನು ಸರಬರಾಜು ಖಚಿತಪಡಿಸಿಕೊಳ್ಳುವ ಮತ್ತು ಅನಗತ್ಯವಾಗಿ ಚೀನಾದೊಂದಿಗೆ ಸೈನ್ಯಕಲಹದ ಸಾಧ್ಯತೆಯನ್ನು ಹೋಗಲಾಡಿಸಲೂ ಕೂಡಾ ಭಾರತ ತನ್ನ ನೀತಿಯಲ್ಲಿ ವ್ಯಾವಹಾರಿಕತೆ ತೋರಬೇಕಾದ ಅನಿವಾರ್ಯತೆಯಿದೆ.

ವಿದೇಶಾಂಗ ನೀತಿಯ ಈ ‘ತಿರುವು’ ತುಸು ಅನಿರೀಕ್ಷಿತವೂ, ಆದರೆ ಅಪೇಕ್ಷಣೀಯವೂ ಆಗಿದೆಯೆಂದು ವಿದೇಶಾಂಗ ನೀತಿಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ಅಲಿಪ್ತ ವಿದೇಶಾಂಗ ನೀತಿಯಿಂದ ಭಾರತವು ಯಾರನ್ನೂ ಒಲಿಸುವ ಗೋಜಿಲ್ಲದೆ, ಬೇರೆಲ್ಲಾ ಬಲಿಷ್ಠ ರಾಷ್ಟ್ರಗಳು ಭಾರತವನ್ನು ಒಲಿಸಿಕೊಳ್ಳಲು ಸಾಹಸಪಡಬೇಕಾದ ಸಾಧ್ಯತೆಯನ್ನೂ ಇವರು ಎತ್ತಿ ಹೇಳಿದ್ದಾರೆ. 1950ರ ದಶಕದಲ್ಲಿ ಜವಾಹರಲಾಲ್ ನೆಹರೂ ಮತ್ತು 2000ರ ದಶಕದ ಮಧ್ಯಭಾಗದಲ್ಲಿ ಮನಮೋಹನ್ ಸಿಂಗ್ ಪ್ರತಿಪಾದಿಸಿದ್ದ ಈ ‘ಅಲಿಪ್ತ-ಎಲ್ಲರಿಗೂ ಆಪ್ತ’ ವಿದೇಶಾಂಗ ನೀತಿಯಿಂದ ಮುಂದಿನ ವರ್ಷಗಳಲ್ಲಿ ಭಾರತಕ್ಕೆ ಸಲ್ಲುವ ಮನ್ನಣೆ ಹಾಗೂ ಉಪಯುಕ್ತತೆಯನ್ನು ಮುಂದಿನ ಒಂದೆರಡು ವರ್ಷಗಳಲ್ಲಿಯೇ ಕಾಣಬಹುದಾಗಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮