2nd ಜುಲೈ ೨೦೧೮

ಜಮ್ಮು-ಕಾಶ್ಮೀರ ಮೈತ್ರಿ ಆಟ ಅಂತ್ಯ

ಮಾಧವ

ಜಮ್ಮು-ಕಾಶ್ಮೀರದಲ್ಲಿ ಮೈತ್ರಿಸರ್ಕಾರದಿಂದ ಬಿಜೆಪಿ ಹೊರನಡೆಯಲು ಇದ್ದದ್ದು ರಾಜಕೀಯ ಕಾರಣ. 2019ರ ಲೋಕಸಭೆ ಹಾಗೂ ಸನಿಹದಲ್ಲೇ ಇರುವ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಿಂದೂ ಮತಗಳ ಕ್ರೋಡೀಕರಣ. ಇದಕ್ಕಾಗಿ ಜಮ್ಮು-ಕಾಶ್ಮೀರದ ನಾಲ್ಕು ಸಂಸದರ ಸ್ಥಾನಗಳು ಹಾಗೂ ಅಧಿಕಾರವನ್ನೇ ಬಿಟ್ಟುಕೊಡಲು ಮುಂದಾಗಿದೆ.

ಚಕ್ರ ಮತ್ತೊಂದು ಸುತ್ತು ತಿರುಗಿದೆ. ಪಿಡಿಪಿ ಮತ್ತು ಬಿಜೆಪಿಯ ಮೈತ್ರಿ ಛಿದ್ರಗೊಂಡಿದ್ದು, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ. ರಮ್ಜಾನ್ ಕದನ ವಿರಾಮದ ಬಳಿಕ ನಡೆದ ಈ ಘಟನೆಯಿಂದ ರಾಜ್ಯ ಮತ್ತೊಮ್ಮೆ ರಾಜ್ಯಪಾಲರ ಆಡಳಿತ ಹಾಗೂ ಹಿಂಸಾಚಾರದ ಸುಳಿಗೆ ಸಿಲುಕುವ ಸಾಧ್ಯತೆ ಇದೆ.

ಇದರಿಂದ ಬಿಜೆಪಿ ಒಂದು ರಾಜ್ಯದಲ್ಲಿ ಆಡಳಿತ ಹಾಗೂ ಒಬ್ಬ ಜತೆಗಾರನನ್ನು ಕಳೆದುಕೊಂಡಿದೆ. ಪಕ್ಷ ಇತ್ತೀಚೆಗೆ ಚುನಾವಣೆಗಳಲ್ಲಿ ಸಾಲು ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ “ಉಗ್ರರ ಮೇಲೆ ಕಠಿಣ ಕಾರ್ಯನೀತಿ’ ಮೂಲಕ ರಾಷ್ಟ್ರೀಯ ಸುರಕ್ಷೆಗೆ ಆದ್ಯತೆ ನೀಡುತ್ತೇವೆ ಎಂದು ತೋರಿಸಿಕೊಳ್ಳುವ ಉದ್ದೇಶವಿದ್ದಂತಿದೆ. ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಢದ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವುದು ಬಿಜೆಪಿ ಲೆಕ್ಕಾಚಾರ. ಜಮ್ಮು-ಕಾಶ್ಮೀರದಲ್ಲಿ ಇರುವುದು ಕೇವಲ 4 ಲೋಕಸಭಾ ಸ್ಥಾನಗಳಾದ್ದರಿಂದ, ಆ ಬಗ್ಗೆ ಅದು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆರ್‍ಎಸ್‍ಎಸ್ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ತೆಗೆದುಹಾಕುವ ಸಾಧ್ಯತೆ ಕೂಡ ಇದೆ. ಕಾಶ್ಮೀರಿ ಪಂಡಿತರಿಗೆ ಸಣ್ಣ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿದರೂ, ಅದರಿಂದ ಬಿಜೆಪಿಗೆ ಲಾಭವಾಗಲಿದೆ.

ರಾಜ್ಯಪಾಲರ ಆಡಳಿತದಿಂದಾಗಿ ಕೇಂದ್ರ ಸರ್ಕಾರವು ಉಗ್ರರು ಹಾಗೂ ಪ್ರತ್ಯೇಕತಾವಾದಿಗಳ ವಿರುದ್ಧ ಯುದ್ಧ ಆರಂಭಿಸುವ ಸಾಧ್ಯತೆ ಇದೆ. ಇದರಿಂದ ಸೇನೆಯಿಂದ ಹಿಂಸಾಚಾರ ಮತ್ತು ನಿಯಂತ್ರಣ ರೇಖೆ (ಎಲ್‍ಒಸಿ) ಯಲ್ಲಿ ಪರಿಸ್ಥಿತಿ ವಿಷಮಗೊಳ್ಳುವ ಆತಂಕವೂ ಹೆಚ್ಚಿದೆ. ಇತ್ತೀಚೆಗೆ ಪತ್ರಕರ್ತ ಶುಜತ್ ಬುಖಾರಿ ಅವರನ್ನು ನಗರದ ಕೇಂದ್ರ ಭಾಗದಲ್ಲೇ ಹತ್ಯೆಗೈಯ್ಯಲಾಗಿದೆ. ಹಿಂಸಾಚಾರ ಹೆಚ್ಚಳದ ಹಿನ್ನೆಲೆಯಲ್ಲಿ ಬಲಪ್ರಯೋಗದ ನೀತಿಯನ್ನು ರಾಜ್ಯದ ಬಹುತೇಕರು ಒಪ್ಪುತ್ತಾರೆ ಎನ್ನುವುದು ಕೇಂದ್ರದ ಲೆಕ್ಕಾಚಾರ.

ಜಮ್ಮು-ಕಾಶ್ಮೀರ ಭೌಗೋಳಿಕ ಹಾಗೂ ರಾಜಕೀಯವಾಗಿ ಮೂರು ಭಾಗವಾಗಿದೆ. ಹಿಂದೂ ಪ್ರಾಬಲ್ಯದ ಜಮ್ಮು, ಮುಸ್ಲಿಂ ಪ್ರಾಬಲ್ಯದ ಕಾಶ್ಮೀರ ಹಾಗೂ ಬೌದ್ಧ ಪಂಥೀಯರ ಲಡಾಖ್. ಮೃದು ಪ್ರತ್ಯೇಕತೆಯ ನಿಲುವಿನ ಪಿಡಿಪಿ ಹಾಗೂ ಹಿಂದೂ ರಾಷ್ಟ್ರೀಯವಾದದ ಬಿಜೆಪಿಯ ನಡುವಿನ ರಾಜಕೀಯ ಮೈತ್ರಿಯು ಎರಡು ಧ್ರುವಗಳ ಸಂಗಮದಂತೆ ಇತ್ತು.

ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರ ಕುರಿತು ಸ್ಪಷ್ಟ ನೀತಿಯೊಂದನ್ನು ರೂಪಿಸುವಲ್ಲಿ ವಿಫಲವಾಯಿತು. ಇದರಿಂದ ಜನ ಭ್ರಮನಿರಸನಗೊಂಡರು ಮತ್ತು ಹಿಂಸಾಚಾರ ಹೆಚ್ಚಿತು. ಮೈತ್ರಿ ಸರ್ಕಾರದ ಪಾಲುದಾರ ಹಾಗೂ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ, ತನ್ನ ಹೊಣೆಗಾರಿಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸಲಿಲ್ಲ. ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗದಿದ್ದರಿಂದ ಪ್ರಧಾನಿ ಮೋದಿ ಅವರು ಕೂಡ ಟೀಕೆ ಎದುರಿಸಬೇಕಾಗಿ ಬಂದಿತು. ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮೆಹಬೂಬಾ ಅವರ ಒತ್ತಡ ಕಾರಣ ಎಂದು ಬಿಜೆಪಿ ಈಗ ದೂರುತ್ತಿದೆ. ‘ಆಡಳಿತ ವೈಫಲ್ಯ, ಅಶಾಂತಿ-ಹಿಂಸಾಚಾರ ಹೆಚ್ಚಳ, ಅಭಿವ್ಯಕ್ತಿ ಸ್ವಾತಂತ್ರ್ಯ-ಮೂಲಭೂತ ಹಕ್ಕುಗಳ ದಮನ ಮತ್ತು ನಾಗರಿಕರ ಹತ್ಯೆಗೆ ಪಿಡಿಪಿ ಕಾರಣ. ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳುವುದು ರಾಜ್ಯದ ಜವಾಬ್ದಾರಿ. ಸೈನ್ಯ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದೆ,’ ಎಂದು ಬಿಜೆಪಿ ಹೇಳಿದೆ.

ಯಾರಿಗೂ ಬೇಸರ ಇಲ್ಲ

ಮೈತ್ರಿ ಸರ್ಕಾರದ ಪತನಕ್ಕೆ ಹೆಚ್ಚಿನವರು ತಲೆಕೆಡಿಸಿಕೊಂಡಿಲ್ಲ. ಕಳೆದ ಮೂರು ವರ್ಷದಲ್ಲಿ ಹಲವು ಬಿಕ್ಕಟ್ಟುಗಳನ್ನು ಎದುರಿಸಿದ್ದ ಸರ್ಕಾರ, ಕಳೆದ ಏಪ್ರಿಲ್‍ನಲ್ಲಿ ಛಿದ್ರಗೊಳ್ಳುವ ಸುಳಿವು ಕಂಡುಬಂದಿತು. ಜಮ್ಮುವಿನ ಕಥುವಾದಲ್ಲಿ ನಡೆದ ಅತ್ಯಾಚಾರ ಹಾಗೂ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಪಿಡಿಪಿ ಸರ್ಕಾರವನ್ನು ತೊರೆಯುವ ಸಾಧ್ಯತೆ ಇತ್ತು. ಜಮ್ಮುವಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಮತ ಗಳಿಸಿದ್ದ ಬಿಜೆಪಿ, ಆಶ್ವಾಸನೆಯನ್ನು ಈಡೇರಿಸದ್ದರಿಂದ ಜನರ ಆಕ್ರೋಶ ಹಾಗೂ ಸ್ಥಳೀಯ ಮುಖಂಡರ ಪ್ರತಿರೋಧವನ್ನು ಎದುರಿಸುತ್ತಿತ್ತು. ಪರಿಸ್ಥಿತಿ ಕೈ ಮೀರಲು ಕಾರಣವಾದದ್ದು-ಕಥುವಾ ಜಿಲ್ಲೆಯಲ್ಲಿ ನಡೆದ ಗುಜ್ಜರ್ ಬಕ್ರೆವಾಲ್ ಸಮುದಾಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ.

ಹೊಸ ಸಂಘಟನೆ ಹಿಂದೂ ಏಕತಾ ಮಂಚ್ ಕೃತ್ಯ ಹಾಗೂ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿತು. ಬಿಜೆಪಿ ಸಚಿವರು ಕೇಂದ್ರದ ಆಣತಿಯಂತೆ ರಾಜೀನಾಮೆ ಕೊಟ್ಟರು. ಪಕ್ಷದ ಬೆಂಬಲಿಗರಾದ ಡೋಗ್ರಾಗಳ ಪ್ರತಿಷ್ಠೆಗೆ ಹೊಡೆತ ಬಿದ್ದಿತು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಬಿಜೆಪಿಗೆ ಬೇಡವಿತ್ತು. ಆದರೆ, ಇಂಥ ತ್ವೇಷಮಯ ಸನ್ನಿವೇಶದಲ್ಲಿ ಬೆಂಬಲ ಹಿಂಪಡೆದರೆ ದೇಶಕ್ಕೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದು ಕಾಯಲು ನಿರ್ಧರಿಸಿತು.

ಕಳೆದ ಮೇ ತಿಂಗಳಿನಲ್ಲಿ ಏಕಪಕ್ಷೀಯವಾಗಿ ಕದನ ವಿರಾಮವನ್ನು ಘೋಷಿಸಿದ್ದ ಕೇಂದ್ರ ಸರ್ಕಾರ, ರಮ್ಜಾನ್ ಹಬ್ಬದ ಬಳಿಕ ಅದನ್ನು ಹಿಂಪಡೆಯಿತು. ಮೆಹಬೂಬಾ ಮುಫ್ತಿ ಮತ್ತು ಪಿಡಿಪಿ, ಕದನ ವಿರಾಮವನ್ನು ಮುಂದುವರಿಸಬೇಕು. ಇದರಿಂದ ಉಗ್ರರು-ಪ್ರತ್ಯೇಕತಾವಾದಿಗಳ ಜೊತೆಗೆ ಮಾತುಕತೆ ಸಾಧ್ಯವಾಗಲಿದೆ ಎನ್ನುವ ನಿಲುವು ಹೊಂದಿದ್ದರು. ಇದು ಬಿಜೆಪಿಗೆ ಸಹ್ಯವಾಗಿರಲಿಲ್ಲ. ಆದರೆ, ಹುರ್ರಿಯತ್ ಮಾತುಕತೆಗೆ ಆಸಕ್ತಿ ತೋರಿಸಲಿಲ್ಲ ಹಾಗೂ ಉಗ್ರರು ಸೇನೆ-ಜನರ ವಿರುದ್ಧ ದಾಳಿ ಮುಂದುವರಿಸಿದರು.

ಪ್ರಜಾಪ್ರಭುತ್ವದ ಅಣಕ

ಜ-ಕಾ ಸರ್ಕಾರ ಪ್ರಜಾಪ್ರಭುತ್ವದ ಅಣಕವಾಗಿರುವುದು ಇದೇ ಮೊದಲೇನೂ ಅಲ್ಲ. ಇಲ್ಲಿನ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ತೀರ ಕಡಿಮೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಉತ್ತಮ ಮತದಾನ ನಡೆದಿತ್ತು. ಕಳೆದ ಏಪ್ರಿಲ್‍ನಲ್ಲಿ ಶ್ರೀನಗರ ಲೋಕಸಭೆ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ, ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದರು. ಮರುಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.7.14 ಮತ್ತು ರಕ್ಷಣಾ ಬಲದ ಗುಂಡಿಗೆ ಎಂಟು ಮಂದಿ ಬಲಿಯಾಗಿದ್ದರು. ಅನಂತನಾಗ್‍ನಲ್ಲಿ ಮರುಚುನಾವಣೆಯನ್ನು ಮುಂದಕ್ಕೆ ಹಾಕಿದರೆ, ಬಡ್ಗಾಂಮ್‍ನ ಮರುಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆಯಿತು. ಇದಾದ ಒಂದು ವಾರದ ಬಳಿಕ ಸೈನಿಕ ಉಮ್ಮರ್ ಫಯಾಜ್ ಪಾರೆಯ ಗುಂಡುಗಳಿಂದ ತುಂಬಿಹೋದ ಶವ ಪತ್ತೆಯಾಯಿತು.

2014ರ ಚುನಾವಣೆ ವೇಳೆ ಬಿಜೆಪಿ ಹಾಗೂ ಆರ್‍ಎಸ್‍ಎಸ್‍ನ್ನು ಕಣಿವೆಯಿಂದ ಹೊರಗಿಡುವುದಾಗಿ ಪಿಡಿಪಿ ಹೇಳಿತ್ತು. ಆನಂತರ ಅದೇ ಪಕ್ಷದೊಡನೆ ಸರ್ಕಾರ ರಚಿಸಿತು. ಮೈತ್ರಿ ದಸ್ತಾವೇಜಿನಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ಹಾಗೂ ಸಶಸ್ತ್ರ ಪಡೆಗಳ(ವಿಶೇಷಾಧಿಕಾರ) ಕಾಯಿದೆಯನ್ನು ಹಂತಹಂತವಾಗಿ ಹಿಂಪಡೆಯುವ ಉಲ್ಲೇಖವಿತ್ತು. ಆದರೆ, ಅಂಗೀಕೃತ ಪಕ್ಷಗಳೊಂದಿಗೆ ಮಾತ್ರ ಮಾತುಕತೆ ನಡೆಸುವುದಾಗಿ ಬಿಜೆಪಿ ಹೇಳಿತು. ಸಶಸ್ತ್ರ ಪಡೆಗಳ(ವಿಶೇಷಾಧಿಕಾರ)ಕಾಯಿದೆ ವಾಪಸ್ ಪಡೆಯುವ ಬಗ್ಗೆ ಉಸಿರನ್ನೇ ಎತ್ತಲಿಲ್ಲ. ಪ್ರತಿಭಟನೆಯನ್ನು ದಮನಿಸಲು ಸೇನೆಯನ್ನು ಬಳಸಿದ್ದರ ಬಗೆಗೆ ಮೆಹಬೂಬಾ ಮುಫ್ತಿ ಧ್ವನಿಯನ್ನೇ ಎತ್ತಲಿಲ್ಲ.

ಈಗ ನ್ಯಾಷನಲ್ ಕಾನ್ಫೆರೆನ್ಸ್, ಕಾಂಗ್ರೆಸ್ ಮತ್ತು ಪಿಡಿಪಿ ಒಂದಾದರೆ ಮಾತ್ರ ನೂತನ ಸರ್ಕಾರ ರಚನೆಯಾಗಲಿದೆ. ಅಂಥ ಸಾಧ್ಯತೆ ತೀರ ಕಡಿಮೆ. ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ಒಂದೇ ಮತಬ್ಯಾಂಕ್ ಆಧರಿಸಿದ ರಾಜಕೀಯ ವಿರೋಧಿಗಳು. ಕಾಂಗ್ರೆಸ್ ಈಗಾಗಲೇ ಕೈಜೋಡಿಸುವಿಕೆಯ ಸಾಧ್ಯತೆಯನ್ನು ತಳ್ಳಿ ಹಾಕಿದೆ.

2016ರಲ್ಲಿ ಜನ ರಸ್ತೆಗಿಳಿದಾಗ, ಅವರಿಗೆ ಎದುರಾಗಿದ್ದು ಬಂದೂಕು. 2017, 2018ರಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಗಳಲ್ಲಿ ನಾಗರಿಕರು ಹೆಚ್ಚು ಸಂಖ್ಯೆಯಲ್ಲಿ ಮೃತಪಟ್ಟರು. ಮೆಹಬೂಬಾ ಹಲವು ಬಾರಿ ದಿಲ್ಲಿಗೆ ಪ್ರಯಾಣ ಬೆಳೆಸಿ, ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಪ್ರಾರ್ಥಿಸಿದರೂ, ಪ್ರಯೋಜನ ಆಗಿರಲಿಲ್ಲ. ಬದಲಿಗೆ ಕೈ ತಿರುಚುವಿಕೆಯನ್ನು ಮುಂದುವರಿಸಿದ ಕೇಂದ್ರ ಸರ್ಕಾರ, ಸೇನಾಧಿಕಾರಿಯೊಬ್ಬ ನಾಗರಿಕನೊಬ್ಬನನ್ನು ಜೀಪಿನ ಎದುರು ಗುರಾಣಿಯಂತೆ ಕಟ್ಟಿ ಚಲಾಯಿಸಿದ್ದನ್ನೂ ಸಮರ್ಥಿಸಿಕೊಂಡಿತು. ಜತೆಗೆ, ನಿಯಂತ್ರಣ ರೇಖೆ ಬಳಿ ಸರ್ಜಿಕಲ್ ದಾಳಿ ನಡೆಸಿತು. ಮೇ ತಿಂಗಳಿನಲ್ಲಿ ಕೇಂದ್ರ ಕದನವಿರಾಮ ಘೋಷಿಸಿದಾಗ, ಮುಖ್ಯಮಂತ್ರಿ ಕೃತಜ್ಞತೆ ಸೂಚಿಸಿದ್ದರು. ಆದರೆ, ಕೇಂದ್ರದ ಆಲೋಚನೆ ಬೇರೆಯೇ ಇದ್ದಿತ್ತು.

ಪ್ರತಿರೋಧ ಹೆಚ್ಚಳ

ಬಿಜೆಪಿಗೆ ಮತ ಚಲಾಯಿಸಿದ್ದ ಜಮ್ಮು, ಲಡಾಖ್ ಹಾಗೂ ಪಿಡಿಪಿಗೆ ಮತ ಚಲಾಯಿಸಿದ್ದ ಕಾಶ್ಮೀರ ಕಣಿವೆಯಲ್ಲಿ ಪ್ರತಿರೋಧ ಗರಿಗಟ್ಟಿಕೊಳ್ಳುತ್ತಿತ್ತು. ಫೆಬ್ರವರಿ 2019ರಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚೆಂದರೆ, ಸೆಪ್ಟೆಂಬರ್-ಅಕ್ಟೋಬರ್‍ವರೆಗೆ ಅಧಿಕಾರದಲ್ಲಿ ಇರುತ್ತಿತ್ತೇನೋ? ಕಳೆದ ವಾರ ಸಚಿವರು ಹಾಗೂ ರಾಜ್ಯ ಬಿಜೆಪಿ ಮುಖಂಡರನ್ನು ದಿಲ್ಲಿಗೆ ಕರೆಸಿಕೊಂಡ ಪಕ್ಷದ ಮಹಾ ಕಾರ್ಯದರ್ಶಿ ರಾಮ್‍ಮಾಧವ್, ಚರ್ಚೆ ನಡೆಸಿದರು. ಜೂನ್ 23 ರಂದು ಜನಸಂಘದ ಸಂಸ್ಥಾಪಕ ಶಾಮಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸುವುದಿತ್ತು. ಅಷ್ಟರವರೆಗೆ ಕಾಯಲು ಇಚ್ಛಿಸದ ಬಿಜೆಪಿ, ಬೆಂಬಲ ಹಿಂಪಡೆಯಿತು.

ಪಿಡಿಪಿ ಮತ್ತು ಬಿಜೆಪಿ ಮೈತ್ರಿಯಿಂದ ಚುನಾವಣಾ ರಾಜಕೀಯದ ಬಗ್ಗೆಯೇ ಜನ ಭ್ರಮನಿರಸನಗೊಂಡಿದ್ದಾರೆ. ರಾಜ್ಯ ಪ್ರಚೋದಿತ ಹಿಂಸಾಚಾರ ಹಾಗೂ ಅಶಾಂತಿ ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಆಯ್ಕೆಯಾದ ಸರ್ಕಾರ ಇಲ್ಲವೇ ಹೇರಿದ ಸರ್ಕಾರ, ಯಾವುದೇ ಇರಲಿ, ಜನ ಅವುಗಳಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಇದು ಬಿಜೆಪಿ-ಪಿಡಿಪಿ ಮೈತ್ರಿಯ ವೈಫಲ್ಯಕ್ಕೆ ಹಿಡಿದ ಕನ್ನಡಿ.

ರಾಜ್ಯಪಾಲರ ಆಡಳಿತ

ಕೇಂದ್ರದ ಸರ್ಕಾರದ ಕೈ ತಿರುಚುವಿಕೆ ಹಾಗೂ ಕೈಗೊಂಬೆ ರಾಜ್ಯ ಸರ್ಕಾರಕ್ಕಿಂತ ರಾಜ್ಯಪಾಲರ ಆಡಳಿತವೇ ಉತ್ತಮ ಎನ್ನುವವರೂ ಇದ್ದಾರೆ. ರಾಜ್ಯದಲ್ಲಿ ಸದ್ಯ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಈ ರಾಜ್ಯದಲ್ಲಿ ದೀರ್ಘ ಕಾಲ ರಾಜ್ಯಪಾಲರ ಆಡಳಿತ ಸಾಮಾನ್ಯವಾಗಿ ಬಿಟ್ಟಿದೆ.

1977ರಿಂದ ಏಳು ಬಾರಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿದೆ. 1977ರಲ್ಲಿ ಶೇಖ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫೆರೆನ್ಸ್‍ಗೆ ಕಾಂಗ್ರೆಸ್ ಬೆಂಬಲ ಹಿಂಪಡೆದುಕೊಂಡಿದ್ದರಿಂದ, ರಾಜ್ಯಪಾಲರ ಆಡಳಿತ ಆರಂಭಗೊಂಡಿತು. 1980ರಲ್ಲಿ ಗುಲಾಮ್ ಮೊಹಮದ್ ಶಾ ಅವರ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಹಿಂಪಡೆದುಕೊಂಡಾಗ, ಜಗ್‍ಮೋಹನ್ ಕೈಗೆ ಆಡಳಿತ ಸಿಕ್ಕಿತು. 1990-96ರಲ್ಲಿ ಉಗ್ರವಾದಿಗಳ ಹಾವಳಿ ತೀವ್ರಗೊಂಡಾಗ, ಚುನಾವಣೆಯನ್ನು ನಡೆಸದೆ, ರಾಜ್ಯಪಾಲರ ಆಡಳಿತವನ್ನು ಹೇರಲಾಯಿತು. ಜೂನ್ 21, 1990ರಲ್ಲಿ ಜಗ್‍ಮೋಹನ್ ಅವರ 2ನೇ ಅಧಿಕಾರಾವಧಿ ಆರಂಭವಾಯಿತು. ಐದು ತಿಂಗಳಲ್ಲಿ ಅಂತ್ಯಗೊಂಡ ದುರಾಡಳಿತದಲ್ಲಿ ಅವರ ಅಟ್ಟಹಾಸ ಮೇರೆ ಮೀರಿತ್ತು. ಮುಫ್ತಿ ಮೊಹಮದ್ ಸಯೀದ್ ಅವರ ಮರಣದ ನಂತರ 2016ರಲ್ಲಿ ಅಧಿಕಾರ ವಹಿಸಿಕೊಂಡ ರಾಜ್ಯಪಾಲ ಎನ್.ಎನ್.ವೋಹ್ರಾ ಬಗ್ಗೆ ಉತ್ತಮ ಅಭಿಪ್ರಾಯವಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮