2nd ಜುಲೈ ೨೦೧೮

ಕರ್ನಾಟಕ ಸರ್ಕಾರದ
ಹಣಕಾಸಿನ ನಿರ್ವಹಣೆ

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕದ ಸಾಧನೆಯು ಶ್ಲಾಘನಿಯವಾಗಿದೆ. ಇಲ್ಲಿ ಮಿತಿಗಳಿಲ್ಲ, ಎಲ್ಲವೂ ಸರಿಯಿದೆ ಎಂದೂ ತಿಳಿಯಬೇಕಾಗಿಲ್ಲ. ಮುಖ್ಯವಾಗಿ ಸರ್ಕಾರಿ ಇಲಾಖೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ವೆಚ್ಚ ಕಾರ್ಯಕ್ಷಮತೆ ಆತಂಕ ಹುಟ್ಟಿಸುವಷ್ಟು ಕೆಳಮಟ್ಟದಲ್ಲಿದೆ. ಇದರ ಬಗ್ಗೆ ಸರ್ಕಾರವು ಗಮನ ನೀಡುತ್ತಿಲ್ಲ. ಸಮಸ್ಯೆಗಳಿರುವುದು ಒಂದು ಸತ್ಯ ಸಂಗತಿ. ಅವುಗಳನ್ನು ಗುರುತಿಸಿ ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳದಿರುವುದು ಹೆಚ್ಚು ಅಪಾಯಕಾರಿ.

ಕಳೆದ ಹತ್ತಾರು ವರ್ಷಗಳಿಂದ ಕರ್ನಾಟಕ ಸರ್ಕಾರವು, ಅದರಲ್ಲೂ ಕಳೆದ ಐದು ವರ್ಷಗಳಲ್ಲಿ (2013-2018: ಸಿದ್ದರಾಮಯ್ಯ ಪರ್ವ) ಹಣಕಾಸನ್ನು ನಿರ್ವಹಿಸಿಕೊಂಡು ಬಂದಿರುವ ಕ್ರಮವೇನಿದೆ ಅದು ಅನುಕರಣೀಯವಾಗಿದೆ. ಈ ವಿಷಯದಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಹಣಕಾಸನ್ನು ಅತ್ಯಂತ ಜತನದಿಂದ ನಿರ್ವಹಿಸಿಕೊಂಡು ಬರುತ್ತಿವೆ. ಯಾವುದನ್ನು ನಾವು ವಿತ್ತೀಯ ಶಿಸ್ತು ಎಂದು ಕರೆಯುತ್ತಿದ್ದೇವೆಯೋ ಅದನ್ನು ಕರ್ನಾಟಕವು ಪಾಲಿಸಿಕೊಂಡು ಬರುತ್ತಿದೆ. ಹಾಗೆ ನೋಡಿದರೆ ಕೇಂದ್ರ ಸರ್ಕಾರವು ಇದರಲ್ಲಿ ಸೋಲುತ್ತಿದೆ (ಉದಾಹರಣೆಗೆ 2017-18ರಲ್ಲಿ ಅದು ನಿಗದಿಪಡಿಸಿದ್ದ ವಿತ್ತೀಯ ಕೊರತೆ ಗುರಿ ಒಟ್ಟು ಆಂತರಿಕ ಉತ್ಪನ್ನದ ಶೇ.3.2. ಆದರೆ ಅದನ್ನು ಈಗ ಶೇ.3.5ಕ್ಕೆ ಪರಿಷ್ಕರಿಸಲಾಗಿದೆ ಮತ್ತು 2018-19ಕ್ಕೆ ನಿಗದಿಪಡಿಸಿರುವ ವಿತ್ತೀಯ ಕೊರತೆ ಗುರಿ ಶೇ.3.2. ಇದನ್ನು ಅದಕ್ಕೆ ಪಾಲಿಸುವುದು ಕಷ್ಟಸಾಧ್ಯ ಎನ್ನಲಾಗಿದೆ. ವಿತ್ತೀಯ ಜವಾಬ್ದಾರಿ ಮತ್ತು ನಿರ್ವಹಣಾ ಅಧಿನಿಯಮ ನಿಗದಿಪಡಿಸಿರುವ ಗುರಿ ಶೇ.3. ರಾಜ್ಯಗಳಿಗೆ ವಿತ್ತೀಯ ಶಿಸ್ತಿನ ಬಗ್ಗೆ ಪಾಠ ಹೇಳುತ್ತಿರುವ ಕೇಂದ್ರ ತಾನು ಮಾತ್ರ ಅದನ್ನು ಪಾಲಿಸುತ್ತಿಲ್ಲ).

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಹಣಕಾಸಿಗೆ ಸಂಬಂಧಿಸಿದಂತೆ ಇನ್ನಿಲ್ಲದ ಬಾಧೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಸಾಧನೆಯು ಶ್ಲಾಘನಿಯವಾಗಿದೆ. ಇಲ್ಲಿ ಮಿತಿಗಳಿಲ್ಲ, ಎಲ್ಲವೂ ಸರಿಯಿದೆ ಎಂದೂ ತಿಳಿಯಬೇಕಾಗಿಲ್ಲ. ಆದರೆ ಅದು ತನ್ನ ಇತಿಮಿತಿಯೊಳಗೆ ಶಿಸ್ತಿನಿಂದ ಹಣಕಾಸನ್ನು ನಿರ್ವಹಿಸಿಕೊಂಡು ಬರುತ್ತಿದೆ. ಅದು ಹಣಕಾಸಿಗೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಎದುರಿಸುತ್ತಿರುವ ಒಂದು ಸಮಸ್ಯೆಯೆಂದರೆ ಕರ್ನಾಟಕಕ್ಕೆ ತನ್ನ ಬಜೆಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಒದಗಿಸಿರುವ ಅನುದಾನವನ್ನು ಪೂರ್ಣವಾಗಿ ಬಳಸಿಕೊಳ್ಳವುದು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಪ್ರಬಂಧದಲ್ಲಿ ರಾಜ್ಯದ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಮೂರು ಸಂಗತಿಗಳನ್ನು ಚರ್ಚೆಗೆ ಒಳಪಡಿಸಲಾಗಿದೆ:

  1. ರಾಜ್ಯವು ವಿತ್ತೀಯ ಶಿಸ್ತನ್ನು ಹೇಗೆ ನಿರ್ವಹಿಸಿಕೊಂಡು ಬರುತ್ತಿದೆ ಎಂಬುದನ್ನು ಪರಿಶೀಲಿಸುವುದು.
  2. ಬಜೆಟ್ಟಿನಲ್ಲಿ ವಿವಿಧ ವಲಯಗಳಿಗೆ-ಅಂದರೆ ಸಾಮಾನ್ಯ ಸೇವೆ, ಆರ್ಥಿಕ ಸೇವೆ ಮತ್ತು ಸಾಮಾಜಿಕ ಸೇವೆಗಳಿಗೆ ಹೇಗೆ ಹಣಕಾಸನ್ನು ಒದಗಿಸುತ್ತಿದೆ ಮತ್ತು ವೆಚ್ಚವನ್ನು ನಿರ್ವಹಿಸುತ್ತಿದೆ ಎಂಬುದನ್ನು ವಿಶ್ಲೇಷಿಸುವುದು.
  3. ಕರ್ನಾಟಕ ಸರ್ಕಾರವು ಬಜೆಟ್ ಅನುದಾನವನ್ನು ಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ ಏಕೆ ಎಡವುತ್ತಿದೆ ಎಂಬುದನ್ನು ವಿಮರ್ಶಿಸುವುದು.

ಭಾಗ 1. ವಿತ್ತೀಯ ಶಿಸ್ತು

ವಿತ್ತೀಯ ಶಿಸ್ತನ್ನು ನಾಲ್ಕು ಮಾನದಂಡಗಳ ಮೂಲಕ ಮಾಪನ ಮಾಡಲಾಗುತ್ತದೆ. 1. ಬಜೆಟ್ಟಿನ ರಾಜಸ್ವ ಖಾತೆಯಲ್ಲಿ ಆಧಿಕ್ಯವನ್ನು ಸಾಧಿಸಿಕೊಳ್ಳುವುದು. 2. ವಿತ್ತೀಯ ಕೊರತೆಯು ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.3 ಮೀರಬಾರದು. 3. ಒಟ್ಟು ಹೊಣೆಗಾರಿಕೆಯು (ಸರ್ಕಾರದ ಸಾಲ) ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.25 ಮೀರಬಾರದು. 4. ಸಾಲದ ಬಡ್ಡಿ ಪಾವತಿಯು ರಾಜ್ಯದ ವಾರ್ಷಿಕ ರಾಜಸ್ವ ಸ್ವೀಕೃತಿಯ ಶೇ.10 ದಾಟಬಾರದು.

ಕರ್ನಾಟಕವು ಅತ್ಯಂತ ಜತನದಿಂದ ನಾಲ್ಕು ಸೂಚಿಗಳನ್ನು ಕಳೆದ ಹತ್ತಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆ. ಅನೇಕ ರಾಜ್ಯಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಇವುಗಳನ್ನು ಪಾಲಿಸುವುದು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ರಾಜಸ್ವ ಆಧಿಕ್ಯವು (ಸರ್‍ಪ್ಲಸ್) 2007-08ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಶೇ.1.77 ರಷ್ಟಿದ್ದುದು 2013-14ರಲ್ಲಿ ಶೇ.0.06 ಮತ್ತು 2016-17ರಲ್ಲಿ ಶೇ.0.12 ರಷ್ಟಾಗಿದೆ. ಒಟ್ಟಾರೆ ರಾಜಸ್ವ ಖಾತೆಯಲ್ಲಿ ಆಧಿಕ್ಯವನ್ನು ಕಾಯ್ದುಕೊಂಡು ಬರಲಾಗಿದೆ, ಕೊರತೆಗೆ ರಾಜ್ಯವು ಅವಕಾಶ ನೀಡಿಲ್ಲ. ಅದೇ ರೀತಿಯಲ್ಲಿ ವಿತ್ತೀಯ ಕೊರತೆಯು 2007-08 ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.2.5ರಷ್ಟಿದ್ದುದು 2013-14ರಲ್ಲಿ ಶೇ.2.84 ಮತ್ತು 2016-17ರಲ್ಲಿ ಅದು ಶೇ.2.56ರಷ್ಟಿತ್ತು. ಅಂದರೆ ಕಳೆದ 10 ವರ್ಷಗಳಲ್ಲಿ ರಾಜ್ಯವು ರಾಜಸ್ವ ಖಾತೆಯಲ್ಲಿ ಆಧಿಕ್ಯವನ್ನು ಕಾಯ್ದುಕೊಂಡು ಬರುತ್ತಿದೆ ಮತ್ತು ವಿತ್ತೀಯ ಕೊರತೆಯು ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.3ರ ಗಡಿಯನ್ನು ದಾಟದಂತೆ ನೋಡಿಕೊಂಡು ಬರುತ್ತಿದೆ. ಈ ಪ್ರಮಾಣವು ಶೇ.3 ಮೀರಬಾರದೆಂದು ಕೇಂದ್ರದ ಹಣಕಾಸು ಆಯೋಗಗಳು ನಿಗದಿಪಡಿಸಿವೆ. ಅದನ್ನು ರಾಜ್ಯ ಪಾಲಿಸಿಕೊಂಡು ಬರುತ್ತಿದೆ. ನಮ್ಮ ರಾಜ್ಯದ ಒಟ್ಟು ಹೊಣೆಗಾರಿಗೆ (ಸಾಲ) 2007-08 ರಲ್ಲಿ ರೂ.63844 ಕೋಟಿಯಿದ್ದುದು 2013-14ರಲ್ಲಿ ರೂ.138261 ಕೋಟಿಗೇರಿತು ಮತ್ತು 2016-17ರಲ್ಲಿ ಅದು ರೂ.221320 ಕೋಟಿಯಷ್ಟಿತ್ತು. ಬಜೆಟ್ ಅಂದಾಜಿನ ಪ್ರಕಾರ ಇದು 2018-19ರಲ್ಲಿ ರೂ.286694 ಕೋಟಿಯಾಗುತ್ತದೆ. ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಒಟ್ಟು ಹೊಣೆಗಾರಿಕೆ ಪ್ರಮಾಣ 2007-08 ರಲ್ಲಿ ಶೇ.29.90 ರಷ್ಟಿದ್ದುದು 2013-14ರಲ್ಲಿ ಅದು ಶೇ.22.98ಕ್ಕೆ ಮತ್ತು 2016-17ರಲ್ಲಿ ಶೇ.19.80ಕ್ಕಿಳಿದಿದೆ. ಅಂದರೆ 2013-14 ರಿಂದ ಸಾಲವು ರಾಜ್ಯದ ವರಮಾನದ ಶೇ.20 ರ ಗಡಿಯನ್ನು ಮೀರಿಲ್ಲ. ಇದರ ಪ್ರಮಾಣ 2018-19ರಲ್ಲಿಯೂ ಶೇ.20ರ ಸನಿಹದಲ್ಲಿರುತ್ತದೆ.

ಹಿಂದಿನ ಸರ್ಕಾರವನ್ನು ವಿರೋಧ ಪಕ್ಷಗಳು, ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ಮಿತಿಮೀರಿ ಸಾಲ ಮಾಡುತ್ತಿದೆ ಎಂದು ಅನವಶ್ಯಕವಾಗಿ ಜರಿಯುತ್ತಿದ್ದರು. ಈ ಸಾಲದ ಮೇಲಿನ ಬಡ್ಡಿ ಪಾವತಿಯು 2007-08ರಲ್ಲಿ ರಾಜ್ಯದ ರಾಜಸ್ವ ಸ್ವೀಕೃತಿಯ ಶೇ.10.95 ರಷ್ಟಿದ್ದುದು 2013-14 ರಲ್ಲಿ ಅದು ಶೇ.8.75ಕ್ಕೆ ಮತ್ತು 2016-17ರಲ್ಲಿ ಅದು ಶೇ.9ಕ್ಕಿಳಿದಿದೆ. ಅಂದರೆ ನಿಗದಿಪಡಿಸಿರುವ ಗಡಿಯಾದ ಶೇ.10ನ್ನು ಕರ್ನಾಟಕ ಕಳೆದ ಐದು ವರ್ಷಗಳಲ್ಲಿ ಮೀರಿಲ್ಲ.

ಭಾಗ 2. ಬಜೆಟ್ ನಿರ್ವಹಣೆ

ಕರ್ನಾಟಕದಲ್ಲಿ ಸರ್ಕಾರವು ಬಜೆಟ್ಟನ್ನು ಅದರ ಶುದ್ಧ ನೆಲೆಯಲ್ಲಿ ನಿರ್ವಹಿಸಿಕೊಂಡು ಬರುತ್ತಿದೆ. ಆದರೆ 2007-08ರಲ್ಲಿ ಅದನ್ನು ವಿಕೃತಗೊಳಿಸಲಾಯಿತು. ಬಜೆಟ್ಟಿನಲ್ಲಿ ಸಾರ್ವಜನಿಕ ರಾಜಸ್ವ ಸ್ವೀಕೃತಿ ಮತ್ತು ಸಾರ್ವಜನಿಕ ವೆಚ್ಚ ಎಂಬ ಎರಡು ಭಾಗಗಳಿರುತ್ತವೆ. ಬಿ.ಎಸ್.ಯಡಿಯೂರಪ್ಪ ಅವರು ‘ಕೃಷಿ ಬಜೆಟ್’ ಅನ್ನುವ ರಾಜಸ್ವ ಸ್ವೀಕೃತಿಯ ಭಾಗವಿಲ್ಲದ ಒಂದು ‘ಆವಿಷ್ಕಾರ’ವನ್ನು (ಹಾಗೆ ಕರೆಯುವುದಾದರೆ) ಮಾಡಿದ್ದರು. ಅದು ಪ್ರಧಾನವಾಗಿ ಬಜೆಟ್ಟಿನಲ್ಲಿನ ಎಲ್ಲ ಕೃಷಿ ಕಾರ್ಯಕ್ರಮಗಳನ್ನು ಕೂಡಿಸಿ ಸಿದ್ಧಪಡಿಸಿದ್ದ ಒಂದು ದಸ್ತಾವೇಜಾಗಿತ್ತು. ಅದಕ್ಕೆ ವೆಚ್ಚದ ಭಾಗವಿತ್ತೇ ವಿನಾ ಹಣಕಾಸು ಸಂಪನ್ಮೂಲದ ಭಾಗವಿರಲಿಲ್ಲ. ಅದನ್ನು ಬಜೆಟ್ ಎಂದು ಕರೆಯುವುದೇ ತಪ್ಪು. ಆದರೆ ಅವರು ಈಗಲೂ ಅದನ್ನೇ ಜಪಿಸುತ್ತಿದ್ದಾರೆ ಮತ್ತು ಅದರಿಂದ ತಾವು ರೈತಸ್ನೇಯಿಯಾಗಬಹುದು ಎಂದು ಭಾವಿಸಿದ್ದಾರೆ.

ಬಜೆಟ್ಟಿನಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಅದರಲ್ಲಿನ ವೆಚ್ಚದ ಭಾಗ. ನಮಗೆ ಅದರ ರಾಜಸ್ವದ ಭಾಗಕ್ಕಿಂತ ವೆಚ್ಚದ ಭಾಗ ಮುಖ್ಯ. ಏಕೆಂದರೆ ನಮ್ಮ ದೇಶದಲ್ಲಿ ಪ್ರತ್ಯಕ್ಷ ತೆರಿಗೆ ಕಟ್ಟುವವರ ಪ್ರಮಾಣ ಶೇ.3ರಿಂದ ಶೇ.4ರಷ್ಟು ಮಾತ್ರ. ಅಪ್ರತ್ಯಕ್ಷ್ಷ ತೆರಿಗೆಗಳನ್ನು ಎಲ್ಲರೂ ಕಟ್ಟುತ್ತಾರೆ. ಜನರ ದೃಷ್ಟಿಯಿಂದ ಬಜೆಟ್ಟಿನಲ್ಲಿ ವೆಚ್ಚದ ಭಾಗ ಮುಖ್ಯವೇ ವಿನಾ ತೆರಿಗೆ ಭಾಗವಲ್ಲ. ಕರ್ನಾಟಕದಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಒಟ್ಟು ಬಜೆಟ್ ವೆಚ್ಚದ ಪ್ರಮಾಣ 2007-08 ರಲ್ಲಿ ಶೇ.17.27 ರಷ್ಟಿದ್ದುದು 2016-17ರಲ್ಲಿ ಅದು ಶೇ.14.49ಕ್ಕಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಂಡವಾಳ ವೆಚ್ಚವು 2007-08 ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಶೇ.3.47 ರಷ್ಟಿದ್ದುದು 2016-17 ರಲ್ಲಿ ಅದು ಶೇ.2.69ಕ್ಕಿಳಿದಿದೆ. ಇವೆರಡು ಆರೋಗ್ಯಕರ ಬೆಳವಣಿಗೆಯಲ್ಲ.

ಅಭಿವೃದ್ಧಿಯ ದೃಷ್ಟಿಯಿಂದ ಬಂಡವಾಳ ವೆಚ್ಚವು ನಿರ್ಣಾಯಕವಾದುದು. ಆದರೆ ಅದರಲ್ಲಿ ತೀವ್ರ ಕಡಿತ ಉಂಟಾಗಿದೆ. ಸರ್ಕಾರ ಇದರ ಕಡೆಗೆ ಗಮನ ನೀಡುವ ಅಗತ್ಯವಿದೆ. ಸರ್ಕಾರದ ಸಹಾಯಧನದ ಮೇಲಿನ ವೆಚ್ಚ 2014-15ರಲ್ಲಿ ರೂ.15334 ಕೋಟಿಯಷ್ಟಿದ್ದುದು 2016-17ರಲ್ಲಿ ಅದು ರೂ.19033 ಕೋಟಿಗೇರಿದೆ. ಸಹಾಯಧನ ಅನ್ನುವುದು ಬಡವರಿಗೆ ಮಾತ್ರ ಎಂದು ಅನೇಕರು ಭಾವಿಸಿದ್ದಾರೆ. ಇದು ಸರಿಯಲ್ಲ. ಒಟ್ಟು ಸಹಾಯಧನದಲ್ಲಿ ವಿದ್ಯುಚ್ಛಕ್ತಿ ಮೇಲಿನ ಸಹಾಯಧನದ ಪ್ರಮಾಣ 2014-15ರಲ್ಲಿ ಶೇ.40.43 ರಷ್ಟಿದ್ದುದು 2016-17 ರಲ್ಲಿ ಅದು ಶೇ.45.42ಕ್ಕೇರಿದೆ. ಉಳ್ಳವರೂ ಸಹಾಯಧನದ ಅನುಕೂಲ ಪಡೆಯುತ್ತಿದ್ದಾರೆ (ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಾಯಕರೊಬ್ಬರು ಸಹಾಯಧನ ಆಧಾರಿತ ಅನ್ನಭಾಗ್ಯವನ್ನು ಜಾರಿಗೊಳಸಿದಾಗ ಅದನ್ನು ತೆರಿಗೆದಾರರ ಹಣದ ಲೂಟಿ ಎಂದು ತಮ್ಮ ಉಗ್ರ ಕೋಪವನ್ನು ಹೊರಗೆಡವಿದ್ದರು. ಆದರೆ ವಿದ್ಯುಚ್ಛಕ್ತಿ ಮೇಲಿನ ಸಬ್ಸಿಡಿಯನ್ನು ಮಾತ್ರ ಅವರು ಟೀಕಿಸಿಲ್ಲ).

ಇದೇ ರೀತಿ ವೇತನ ಮತ್ತು ನಿವೃತ್ತಿ ವೇತನಗಳ ಒಟ್ಟು ವೆಚ್ಚ 2016-17 ರಲ್ಲಿ ರೂ.41104 ಕೋಟಿ. ಇದು ಆರನೆಯ ವೇತನ ಆಯೋಗದ ಶಿಫಾರಸ್ಸುನಂತೆ ಹೆಚ್ಚುವರಿ ರೂ.10508 ಕೋಟಿ ಸೇರಿಸಿದರೆ ಒಟ್ಟು ವೇತನದ ವೆಚ್ಚ 2018-19 ರಲ್ಲಿ ರೂ.59636 ಕೋಟಿಯಾಗುತ್ತದೆ. ಸರ್ಕಾರದ 2018-19ರ ಒಟ್ಟು ರಾಜಸ್ವ ಸ್ವೀಕೃತಿ ರೂ.2.09 ಲಕ್ಷ ಕೋಟಿ. ಇದರಲ್ಲಿ ವೇತನ ಮತ್ತು ಪಿಂಚಣಿ ಭಾಗ ಶೇ.28ರಷ್ಟಾಗುತ್ತದೆ. ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಸಾಮಾಜಿಕ ವೆಚ್ಚದ ಪಾಲು 2012-13 ರಲ್ಲಿ ಶೇ.6.53 ರಷ್ಟಿದ್ದುದು 2015-16ರಲ್ಲಿ ಅದು ಶೇ.7.06 ಕ್ಕೇರಿದೆ. ಈ ವಲಯದ ಮುಖ್ಯವಾದ ಎರಡು ಬಾಬ್ತುಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಈ ದೃಷ್ಟಿಯಿಂದ ಸಾಮಾಜಿಕ ವೆಚ್ಚದಲ್ಲಿ ಏರಿಕೆಯು ಸ್ವಾಗತಾರ್ಹ ಸಂಗತಿಯಾಗಿದೆ. ಇದೇ ರೀತಿ 2012-13ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಅಭಿವೃದ್ಧಿ ವೆಚ್ಚದ ಪಾಲು ಶೇ.13.02 ರಷ್ಟಿದ್ದುದು 2015-16ರಲ್ಲಿ ಶೇ.13.65ಕ್ಕೇರಿದೆ. ತಲಾ ಅಭಿವೃದ್ಧಿ ವೆಚ್ಚ 2014-15ರಲ್ಲಿ ರಾಜ್ಯದಲ್ಲಿ ರೂ.13928ರಷ್ಟಿದ್ದರೆ ರಾಷ್ಟ್ರಮಟ್ಟದಲ್ಲಿ ಇದು ರೂ.10437ರಷ್ಟಿತ್ತು. ತಲಾ ಅಭಿವೃದ್ಧಿ ವೆಚ್ಚ ಗುಜರಾತಿನಲ್ಲಿ ರೂ.12546, ಮಹಾರಾಷ್ಟ್ರದಲ್ಲಿ ರೂ.11450 ಮತ್ತು ತಮಿಳುನಾಡಿನಲ್ಲಿ ರೂ.13036ರಷ್ಟಿತ್ತು. ಹೀಗೆ ಕರ್ನಾಟಕವು ಹಣಕಾಸು ಬಾಬತ್ತನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಇದನ್ನು ರಾಜ್ಯವು ಮುಂದುವರಿಸಿಕೊಂಡು ಹೋಗಬೇಕಾಗಿದೆ.

ಭಾಗ 3. ವೆಚ್ಚ ನಿರ್ವಹಣೆಯಲ್ಲಿನ ವೈಫಲ್ಯಗಳು

ಕರ್ನಾಟಕವು ಹಣಕಾಸಿನ ನಿರ್ವಹಣೆಯಲ್ಲಿ ಎದುರಿಸುತ್ತಿರುವ ಒಂದು ಸಮಸ್ಯೆಯೆಂದರೆ ಬಜೆಟ್ಟಿನಲ್ಲಿ ನೀಡಲಾದ ಅನುದಾನವನ್ನು ಪೂರ್ಣವಾಗಿ ಉಪಯೋಗಿಸುವುದು ಇಲಾಖೆಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಣಕಾಸಿನ ನಿರ್ವಹಣೆಯ ಫಲಶೃತಿಯು ತೃಪ್ತಿಕರವಾಗಿ ಉಂಟಾಗುತ್ತಿಲ್ಲ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಪರಿಶೀಲಿಸಬಹುದಾಗಿದೆ. ಒಂದು ವರದಿಯ ಪ್ರಕಾರ 2017-18ನೆಯ ಸಾಲಿನ ಬಜೆಟ್ಟಿನ ಅನುದಾನದಲ್ಲಿ ಡಿಸೆಂಬರ್ 2017ರವರೆಗೆ ಶೇ.90ರಷ್ಟು ವೆಚ್ಚ ಮಾಡಿರುವ ಇಲಾಖೆಗಳು ಆರು, ಶೇ.75ರಿಂದ ಶೇ.90ರಷ್ಟು ವೆಚ್ಚ ಮಾಡಿರುವ ಇಲಾಖೆಗಳು ಹದಿನಾರು, ಶೇ.75ರಿಂದ ಶೇ.50ರಷ್ಟು ವೆಚ್ಚ ಮಾಡಿರುವ ಇಲಾಖೆಗಳು ಹನ್ನೆರಡು ಮತ್ತು ಶೇ.50ಕ್ಕಿಂತ ಕಡಿಮೆ ವೆಚ್ಚ ಮಾಡಿರುವ ಇಲಾಖೆಗಳು ಐದು. ಈ ಇಲಾಖೆಗಳಿಗೆ ಒಟ್ಟು ಬಜೆಟ್ ಅನುದಾನ 2017-18ರಲ್ಲಿ ರೂ.195852 ಕೋಟಿ. ಇದರಲ್ಲಿ ಡಿಸೆಂಬರ್ 2017ರವರೆಗೆ ವೆಚ್ಚವಾದ ಮೊತ್ತ ರೂ.107597 ಕೋಟಿ. ಅಂದರೆ ಒಟ್ಟು ವೆಚ್ಚದ ಕಾರ್ಯಕ್ಷಮತೆ ಶೇ.55. ವಿಶೇಷ ಕಾರ್ಯಕ್ರಮಗಳ ವೆಚ್ಚದ ಸಾಧನೆಯನ್ನು ಕೋಷ್ಟಕ 2ರಲ್ಲಿ ನೀಡಲಾಗಿದೆ.

ಈ ಸಂಗತಿಯನ್ನು ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇದರ ಮೂಲದಲ್ಲಿ ಆಡಳಿತ ನಿರ್ವಹಣೆಯ ಸಂಗತಿಯೂ ಇದೆ ಮತ್ತು ರಾಜಕಾರಣದ ಸಂಗತಿಯೂ ಇದೆ. ಮುಖ್ಯವಾಗಿ ವಿಶೇಷ ಕಾರ್ಯಕ್ರಮಗಳ ವೆಚ್ಚ ಕಾರ್ಯಕ್ಷಮತೆಯು ಆತಂಕಕಾರಿಯಾಗಿ ಕೆಳಮಟ್ಟದಲ್ಲಿದೆ; ಅವುಗಳ ನಿರ್ವಹಣೆಯು ಅತ್ಯಂತ ಕೆಳಮಟ್ಟದಲ್ಲಿದೆ.

ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ವಂಚಿತರಾದ ಮತ್ತು ಸಮಾಜದ ಅಂಚಿನಲ್ಲಿ ಬದುಕು ದೂಡುತ್ತಿರುವ ವರ್ಗಗಳ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ನಮಗೆ ದಕ್ಷತೆಯಿಂದ ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ. ಈ ವಿಶೇಷ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಉದ್ದೇಶವನ್ನು ಗುರಿಯಾಗಿಟ್ಟುಕೊಂಡಿರುವ ಕಾರ್ಯಕ್ರಮಗಳಾಗಿವೆ. ಇದಕ್ಕೆ ಒಂದು ಮುಖ್ಯ ಕಾರಣ ರಾಜಕಾರಣಿಗಳ ಹಸ್ತಕ್ಷೇಪ. ರಾಜಕಾರಣಿಗಳು ತಮಗೆ ಆದ್ಯತೆಯೆನಿಸಿದ ಕಾಮಗಾರಿಗಳನ್ನು ಮಾತ್ರ ಆಯ್ಕೆ ಮಡಿಕೊಳ್ಳುತ್ತಾರೆ. ಆದರೆ ಅವುಗಳನ್ನು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಮಾನದಂಡಗಳಲ್ಲಿ ಮಂಜೂರು ಮಾಡುವುದು ಸಾಧ್ಯವಾಗುವುದಿಲ್ಲ. ಆಡಳಿತ ನಿರ್ವಹಣೆಗಾರರು ಅದಕ್ಕೆ ತಡೆಯೊಡ್ಡುತ್ತಾರೆ. ಇದು ಬಗೆಹರಿಯಲು ಸಾಕಷ್ಟು ಸಮಯ ಹಿಡಿಯುತ್ತದೆ.

ಎರಡನೆಯದಾಗಿ ಬಜೆಟ್ ಅನುದಾನದ ವೆಚ್ಚದ ಕ್ರಮಗಳು ವರ್ಷದ ಜೂನ್-ಜುಲೈ ತಿಂಗಳುಗಳಲ್ಲಿ ಆರಂಭವಾಗುತ್ತವೆ. ಅವುಗಳಿಗೆ ಸಂಬಂಧಿಸಿದ ಪ್ರಾಥಮಿಕ ಅಗತ್ಯಗಳನ್ನು ಪೂರೈಸುವುದಕ್ಕೆ ಒಂದು ತಿಂಗಳಾದರೂ ಬೇಕಾಗುತ್ತದೆ. ಈ ಮಧ್ಯೆ ಕಾಂಟ್ರಾಕ್ಟುಗಳ ಬಗ್ಗೆ ರಾಜಕಾರಣಿಗಳ ಹಸ್ತಕ್ಷೇಪ ಅರಂಭವಾಗುತ್ತದೆ. ಇದರಿಂದ ಮತ್ತಷ್ಟು ಕಾಲ ವಿಳಂಬವಾಗುತ್ತದೆ. ಇನ್ನು ಯೋಜನೆಯ ಅನುಷ್ಠಾನಕ್ಕೆ ಸಮಯವೆಲ್ಲ್ಲಿರುತ್ತದೆ! ಈ ಬಗ್ಗೆ ಸರ್ಕಾರ ತೀವ್ರ ಗಮನ ಹರಿಸಬೇಕು.

ಸಂವಿಧಾನ ಪರಿಚ್ಛೇದ 371ಜೆ ಪ್ರಕಾರ ಬಜೆಟ್ಟಿನಲ್ಲಿ ನೀಡಲಾದ ಅನುದಾನದಲ್ಲಿ ವೆಚ್ಚದ ಪ್ರಮಾಣ ನಂಬಲಾರದಷ್ಟು ಕೆಳಮಟ್ಟದಲ್ಲಿದೆ. ಈ ಮಂಡಳಿಯಡಿಯಲ್ಲಿ 2013ರಿಂದ 2018ರವರೆಗೆ ಮಂಜೂರಾದ ಕಾಮಗಾರಿಗಳು 12870. ಪೂರ್ಣಗೊಂಡ ಕಾಮಗಾರಿಗಳು 6054 (ಶೇ47.7). ಹೀಗಾದರೆ ಪ್ರಾದೇಶಿಕ ಅಸಮಾನತೆಯನ್ನು ಹೇಗೆ ನಿವಾರಣೆ ಮಾಡುವುದು?

ಕೊನೆಯ ಷರಾ

ಅನೇಕ ಅಧ್ಯಯನಗಳು ಹಾಗೂ ಆರ್ಥಿಕ ಇಲಾಖೆಯ ಅಂಕಿಅಂಶಗಳು ಸ್ಪಷ್ಟಪಡಿಸುತ್ತಿರುವಂತೆ ರಾಜ್ಯದ ತೆರಿಗೆ ಸಂಗ್ರಹವು ಒಂದು ರೀತಿ ಸ್ಥಿರಗತಿಯಲ್ಲಿ ಬೆಳೆಯುತ್ತಿದೆ. ಅದರಲ್ಲಿ ತೀವ್ರ ಏರಿಕೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಜಿ.ಎಸ್.ಟಿ. ಜಾರಿಗೆ ಬಂದ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಬೇಕಾಗಿದೆ. ಉದಾಹರಣೆಗೆ ರಾಜ್ಯದಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ರಾಜ್ಯ ಸ್ವಂತ ತೆರಿಗೆ ಸಂಗ್ರಹದ ಪ್ರಮಾಣ 2013-14ರಲ್ಲಿ ಶೇ.10.40ರಷ್ಟಿತ್ತು. ಇದು 2016-17ರಲ್ಲಿ ಶೇ.7.42ಕ್ಕಿಳಿದಿದೆ. ರಾಜ್ಯಕ್ಕೆ ಕೇಂದ್ರದಿಂದ ಬರುತ್ತಿದ್ದ ಅನುದಾನ ಮತ್ತು ವರ್ಗಾವಣೆಗಳ ಒಟ್ಟು ಪ್ರಮಾಣ 2007-08 ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.4.35ರಷ್ಟಿತ್ತು. ಇದು 2016-17ರಲ್ಲಿ ಶೇ.3.97ಕ್ಕೆ ಕುಸಿದಿದೆ. ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಒಟ್ಟು ವಾರ್ಷಿಕ ವೆಚ್ಚದ ಪ್ರಮಾಣ (ರಾಜಸ್ವ ವೆಚ್ಚ + ಬಂಡವಾಳ ವೆಚ್ಚ) 2007-08ರಲ್ಲಿ ಶೇ.21.9ರಷ್ಟಿದ್ದುದು 2016-17ರಲ್ಲಿ ಅದು ಶೇ.14.49ಕ್ಕಿಳಿದಿದೆ. ಇವೆಲ್ಲವೂ ರಾಜ್ಯವು ಹಣಕಾಸು ಸ್ಥಿತಿಗತಿಗೆ ಸಂಬಂಧಿಸಿದಂತೆ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಸೂಚಿಸುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಇಲಾಖೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ವೆಚ್ಚ ಕಾರ್ಯಕ್ಷಮತೆ ಆತಂಕ ಹುಟ್ಟಿಸುವಷ್ಟು ಕೆಳಮಟ್ಟದಲ್ಲಿದೆ. ಇದರ ಬಗ್ಗೆ ಸರ್ಕಾರವು ಗಮನ ನೀಡುತ್ತಿಲ್ಲ. ಸಮಸ್ಯೆಗಳಿರುವುದು ಒಂದು ಸತ್ಯ ಸಂಗತಿ. ಅವುಗಳನ್ನು ಗುರುತಿಸಿ ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳದಿರುವುದು ಹೆಚ್ಚು ಅಪಾಯಕಾರಿ. ಈ ಬಗ್ಗೆ ಸರ್ಕಾರ, ಶಾಸಕರು, ನಾಗರಿಕ ಸಮಾಜ ಮತ್ತು ಅಭಿವೃದ್ಧಿ ಅಧಿಕಾರಿಗಳು ಗಮನ ನೀಡುವ ಅಗತ್ಯವಿದೆ.

*ಲೇಖಕರು ಸಮಾಜ ವಿಜ್ಞಾನಿ; ಮಾನವ ಅಭಿವೃದ್ಧಿ, ಬಜೆಟ್ ಅಧ್ಯಯನ, ಲಿಂಗ ಸಂಬಂಧಗಳು ಮತ್ತು ವಚನ ಸಂಸ್ಕೃತಿ ಕುರಿತಂತೆ ಸಂಶೋಧನೆ ನಡೆಸಿದ್ದಾರೆ. ನಿವೃತ್ತಿ ನಂತರ ನಾಲ್ಕನೇ ರಾಜ್ಯ ಹಣಕಾಸು ಆಯೋಗದಲ್ಲಿ ಸಮಾಲೋಚಕರಾಗಿದ್ದರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮