2nd ಜುಲೈ ೨೦೧೮

ರಾಜ್ಯಸರ್ಕಾರದ ಸಾಲದ ಮೊತ್ತ
ಅಪಾಯದತ್ತ?

ಸಾಲ ಪಡೆದ ಮೊದಲ ಕೆಲವು ವರ್ಷಗಳಲ್ಲಿ ಮರುಪಾವತಿಯ ಹೊರೆ ಕಡಿಮೆಯಿದ್ದರೂ ಮುಂದಿನ ವರ್ಷಗಳಲ್ಲಿ ಈ ಹೊರೆ ಕ್ರಮೇಣ ನುಂಗಲಾರದ ತುತ್ತಾಗಬಹುದು. ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಅಸಲು-ಬಡ್ಡಿ ಪಾವತಿಯ ಬಗ್ಗೆ ರಾಜ್ಯ ಖಚಿತವಾದ ಮತ್ತು ಕಾರ್ಯಸಾಧುವಾದ ಆಲೋಚನೆ ಹೊಂದಿರಬೇಕಾಗುತ್ತದೆ.

ಜುಲೈ ಸಂಚಿಕೆಯ ಮುಖ್ಯಚರ್ಚೆಯಾಗಿ ‘ಕರ್ನಾಟಕದ ಹಣಕಾಸು ಸ್ಥಿತಿಗತಿ’ ಯನ್ನು ನಾವು ಕೈಗೆತ್ತಿಕೊಂಡಿದ್ದೇವೆ ಎಂದು ನಿಮ್ಮ ಪತ್ರಿಕೆ ಪ್ರಸ್ತಾಪಿಸಿದಾಗ ನಮಗೆ ಕೇಳಿಬಂದ ಮುಖ್ಯಪ್ರಶ್ನೆಗಳು ಈ ಕೆಳಕಂಡಂತವು.

 1. ಕರ್ನಾಟಕದ ಹಣಕಾಸು ಸ್ಥಿತಿಗತಿ ಕೆಟ್ಟಿದೆಯೇ? ಕೆಟ್ಟಿದ್ದರೆ ಇದುವರೆಗೆ ಯಾರೂ ಈ ವಿಷಯವನ್ನು ಹೇಳಲೇ ಇಲ್ಲವಲ್ಲಾ?
 2. ಹಣಕಾಸು ಸ್ಥಿತಿಗತಿಗೆ ಏನಾಗಿದೆ? ಈಗ ಇದನ್ನು ಚರ್ಚಿಸುವ ಅಥವಾ ಪ್ರಸ್ತಾಪಿಸುವ ಔಚಿತ್ಯವಿತ್ತೇ?
 3. ಹೊಸ ಸರ್ಕಾರ ‘ಸಾಲಮನ್ನಾ’ ಘೋಷಣೆ ಮಾಡುವ ಸಂದರ್ಭದಲ್ಲಿ ಮಾತ್ರ ಹಣಕಾಸು ಸ್ಥಿತಿಗತಿಯ ಬಗ್ಗೆ ಏಕೆ ಚರ್ಚಿಸುತ್ತೀರಿ? ಇಲ್ಲಿಯವರೆಗೆ ಏಕೆ ಸುಮ್ಮನಿದ್ದೀರಿ?
 4. ಬೇರೆಲ್ಲಾ ರಾಜ್ಯಗಳೊಂದಿಗೆ ಹೋಲಿಕೆಯಲ್ಲಿ ಕರ್ನಾಟಕದ ಹಣಕಾಸು ಪರಿಸ್ಥಿತಿ ಚೆನ್ನಾಗಿಯೇ ಇದ್ದು ಯಾವುದೇ ‘ಸಾಲದ ಸುಳಿ’ಯ ಹೆದರಿಕೆ ಇಲ್ಲದಿದ್ದಾಗ ಈ ಚರ್ಚೆಯು ಕೇವಲ ಔಪಚಾರಿಕವೇ?

ಮೇಲ್ಕಂಡ ಎಲ್ಲಾ ಪ್ರಶ್ನೆಗಳು ಸಮಯೋಚಿತವೂ ಸಮಂಜಸವೂ ಆದುದರಿಂದ ಇವುಗಳನ್ನು ಉತ್ತರಿಸುವ ಹಾಗೂ ತನ್ಮೂಲಕ ಕರ್ನಾಟಕದ ಹಣಕಾಸು ಸ್ಥಿತಿಗತಿಯ ವಿಶ್ಲೇಷಣೆ ಮಾಡುವ ಅವಕಾಶ ನಮ್ಮ ಮುಂದಿದೆ. ಇದೇ ಸಂದರ್ಭದಲ್ಲಿ ಹಣಕಾಸು ವಿಷಯಕ್ಕೆ ಸಂಬಂಧಪಟ್ಟ ಅಂಕಿಅಂಶಗಳು ಮತ್ತು ಸಮೃದ್ಧಿಯ ಸಾಧಕ-ಬಾಧಕಗಳನ್ನೂ ಹೆಸರಿಸಬೇಕಿದೆ. ಮೊದಲಿಗೆ ಕರ್ನಾಟಕದ ಕೆಲವು ಪ್ರಮುಖ ಅಂಕಿಅಂಶಗಳನ್ನು ಟೇಬಲ್-1 ರಲ್ಲಿ ನೋಡಿ. ಕರ್ನಾಟಕದ ಒಟ್ಟು ಜನಸಂಖ್ಯೆ ಕೇವಲ 50 ವರ್ಷಗಳಲ್ಲಿ 2.35 ಕೋಟಿಯಿಂದ 2011ರಲ್ಲಿ 6.10 ಕೋಟಿಗೆ ಏರಿದೆ. ಇದರಂತೆಯೇ ಜನಸಂಖ್ಯೆಯ ಸಾಂದ್ರತೆ, ಅಕ್ಷರತೆಯೂ ಹೆಚ್ಚಾಗಿದೆ. 50 ವರ್ಷಗಳಲ್ಲಿ ನಗರೀಕರಣ ಶೇಕಡಾ 22.33 ರಿಂದ 38.70 ಗೆ ಏರಿದೆ. ಒಟ್ಟು ಆದಾಯ ಹಾಗೂ ತಲಾ ಆದಾಯಗಳೂ ಹೆಚ್ಚಾಗಿದೆ. 2017ರಲ್ಲಿ ವಾರ್ಷಿಕ ತಲಾ ಆದಾಯ 1.75 ಲಕ್ಷ ರೂಗಳಷ್ಟಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಜನಸಂಖ್ಯೆ ಮೂರುಪಟ್ಟು ಆಗುವಲ್ಲಿಗೆ ದಾಪುಗಾಲಿಟ್ಟಿದ್ದರೂ ರಾಜ್ಯದ ಸ್ಥೂಲ ವರಮಾನ ಮತ್ತು ಪ್ರಗತಿಯ ಮಾನಕಗಳೂ ಗುಣಾತ್ಮಕವಾಗಿವೆ.

ಈಗ ಟೇಬಲ್-2 ನೋಡಿ. ಇದರಲ್ಲಿ ರಾಜ್ಯದ ಒಟ್ಟು ಹಣಮೂಲಗಳು ಮತ್ತು ಹಣದ ಅನ್ವಯಿಸುವಿಕೆಯ ಸ್ಥೂಲ ಚಿತ್ರಣ ಸಿಗುತ್ತದೆ. ವಿಧಾನಸಭೆಯಲ್ಲಿ ರಾಜ್ಯದ ವಿತ್ತಮಂತ್ರಿಯು ಈ ವರ್ಷ ತಾನು 1.97 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸು ತ್ತಿದ್ದೇನೆ ಎಂಬ ಹೇಳಿಕೆಯ ಹಿಂದಿನ ಅಂಕಿಅಂಶಗಳು ನಿಮಗಿಲ್ಲಿ ಸಿಗುತ್ತಿದೆ. ರಾಜ್ಯದ ರೆವಿನ್ಯೂ ಜಮೆ ರೂ.1.62 ಲಕ್ಷ ಕೋಟಿಗಳಿದ್ದರೆ ರೆವಿನ್ಯೂ ಖರ್ಚು ಕೂಡಾ ಅದೇ ಮಟ್ಟದಲ್ಲಿದೆ. ರಾಜ್ಯಸರ್ಕಾರ 2017-18ರಲ್ಲಿ ಮಾಡಿದ ಸಾಲ ರೂ.35,081 ಕೋಟಿಗಳಷ್ಟಿದೆ. ಹೀಗೆ ನಮ್ಮ ಸರ್ಕಾರವು ಹೂಡುತ್ತಿರುವ ಎಲ್ಲಾ ಬಂಡವಾಳವೂ ಕೂಡಾ ಸಾಲದಿಂದಲೇ ಬರುತ್ತಿದೆ. ಇಲ್ಲಿ ಸಂತಸದಾಯಕ ಸುದ್ದಿಯೆಂದರೆ ರಾಜ್ಯದ ರೆವಿನ್ಯೂ ಖರ್ಚು ಸಂಪೂರ್ಣವಾಗಿ ರೆವಿನ್ಯೂ ಮೂಲಗಳಿಂದಲೇ ಬರುತ್ತಿರುವುದು.

ರಾಜ್ಯದ ಒಟ್ಟು ಸಾಲದ ಪರಿಸ್ಥಿತಿ ಯನ್ನೊಮ್ಮೆ ಅವಲೋಕಿಸೋಣ. ಟೇಬಲ್-3 ರಲ್ಲಿ ಇದುವರೆಗಿನ ಸಾಲ ಮತ್ತು ಉಳಿಕೆ ಋಣಗಳ ನಿರೂಪಣೆಯಿದೆ. ಇದರಲ್ಲಿ ಬೇರೆಲ್ಲಾ ಅಂಕಿಅಂಶಗಳು ಮುಂದುವರೆದ ಆರೋಗ್ಯಕರ ಸ್ಥಿತಿಯಲ್ಲಿದ್ದರೂ, ರಾಜ್ಯವು ಹೆಚ್ಚಿನ ಬಡ್ಡಿದರದಲ್ಲಿ ಮುಕ್ತಮಾರುಕಟ್ಟೆಯಲ್ಲಿ ಮಾಡಿದ ಸಾಲವು 2015-16ರ ಸಾಲಿನಲ್ಲಿ ರೂ.84,333 ಕೋಟಿಯಿಂದ 2017-19ರಲ್ಲಿ ರೂ.1,37,780 ಕೋಟಿಗಳಾಗಲಿದೆ. ಇದನ್ನು ಸಂಪೂರ್ಣವಾಗಿ ಅನಾರೋಗ್ಯಕರ ಎಂದು ಹೇಳಲಾಗದಿದ್ದರೂ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಮಾಡಿರುವ ಬಂಡವಾಳ ಹೂಡಿಕೆಯ ತುಲನೆಯಲ್ಲಿ ಇದು ಚರ್ಚಾಗೆ ಗ್ರಾಸವಾಗಬೇಕಾಗುತ್ತದೆ. ಮುಕ್ತಮಾರುಕಟ್ಟೆಯಿಂದ ಮಾಡಿದ ಸಾಲದ ಪ್ರಮಾಣದಲ್ಲಿಯೇ ರಾಜ್ಯದ ಆದಾಯಮೂಲ ಸೃಷ್ಟಿಯ ಬಂಡವಾಳ ಹೂಡಿಕೆ ಇಲ್ಲದ ಕಾರಣ ಈ ಸಾಲದ ಹೊರೆ ಮುಂದಿನ ದಿನಗಳಲ್ಲಿ ಬಾಧೆಯಾಗಲಿದೆ. ರಾಜ್ಯದ ಹೆಚ್ಚುತ್ತಿರುವ ವರಮಾನ ಹೆಚ್ಚಿನ ಸಾಲ ಪಡೆಯಲು ಪೂರಕವಾಗಿದ್ದರೂ ಹೆಚ್ಚುತ್ತಿರುವ ಬಡ್ಡಿ ಮತ್ತು ಸಾಲ ಮರುಪಾವತಿಯ ಕ್ಯುಮುಲೇಟಿವ್ (ಸಂಚಿತ)ಹೊರೆಯನ್ನು ರಾಜ್ಯದ ನಾಗರಿಕರು ಪ್ರಶ್ನಿಸಲೇಬೇಕಾಗುತ್ತದೆ.

ಮತ್ತೊಮ್ಮೆ ಸಂಕ್ಷಿಪ್ತವಾಗಿ ಮರುವಿಂಗಡಿತ ರೆವಿನ್ಯೂ/ಕ್ಯಾಪಿಟಲ್ ರಸೀತಿ ಮತ್ತು ಖರ್ಚಿನ ಬಾಬತ್ತನ್ನು ನೋಡೋಣ. ಟೇಬಲ್-4 ರಲ್ಲಿ ಕಳೆದ ಆರು ವರ್ಷಗಳ ಚಿತ್ರಣ ನಿಮಗೆ ಸಿಗುತ್ತದೆ. ಈ ಟೇಬಲ್ಲಿನ ಮಾಹಿತಿಯಂತೆ ರಾಜ್ಯವು ಪಡೆದ ಸಾಲಗಳನ್ನು ಬಂಡವಾಳ ಹೂಡಿಕೆಗೇ ಬಳಸಿದ್ದರೂ ಸಾಲದ ಒಟ್ಟು ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿ ರಾಜ್ಯದ ಮೇಲೆ ಬಡ್ಡಿಯ ಹೊರೆ ಮತ್ತು ಸಾಲ ಮರುಪಾವತಿಯ ಹೊರೆ ಕಾಡುವ ದಟ್ಟ ಮುನ್ಸೂಚನೆಗಳಿವೆ. ಸಾಲ ಪಡೆದ ಮೊದಲ ಕೆಲವು ವರ್ಷಗಳಲ್ಲಿ ಮರುಪಾವತಿಯ ಹೊರೆ ಕಡಿಮೆಯಿದ್ದರೂ ಮುಂದಿನ ವರ್ಷಗಳಲ್ಲಿ ಈ ಹೊರೆ ಕ್ರಮೇಣ ನುಂಗಲಾರದ ತುತ್ತಾಗಬಹುದು. ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಅಸಲು-ಬಡ್ಡಿ ಪಾವತಿಯ ಬಗ್ಗೆ ರಾಜ್ಯ ಖಚಿತವಾದ ಮತ್ತು ಕಾರ್ಯಸಾಧುವಾದ ಆಲೋಚನೆ ಹೊಂದಿರಬೇಕಾಗುತ್ತದೆ. ಈ ದಿಕ್ಕಿನಲ್ಲಿ ಕೈಗೊಂಡ ನಿರ್ಣಯಗಳನ್ನೂ ರಾಜ್ಯಸರ್ಕಾರ ನಾಗರಿಕರ ಮುಂದೆ ಇಡಬೇಕಾದ ಹೊಣೆಗಾರಿಕೆಯನ್ನೂ ತೋರಿಸಬೇಕಿದೆ.

ಸಮೃದ್ಧಿಯ ಸಾಕಾರಕ್ಕೆ ಇಚ್ಛಾಶಕ್ತಿಯ ಕೊರತೆ

ದೇಶದ ಎಲ್ಲಾ ರಾಜ್ಯಗಳಿಗೆ ಹೋಲಿಕೆಯಲ್ಲಿ ಕರ್ನಾಟಕದ ಆರ್ಥಿಕ ಸಮೃದ್ಧಿಯ ಸಾಧ್ಯತೆಗಳು ಅತ್ಯಂತ ದಟ್ಟವಾಗಿವೆ. ತಮಿಳುನಾಡು ಮತ್ತು ಸ್ವಲ್ಪಮಟ್ಟಿಗೆ ಮಹಾರಾಷ್ಟ್ರವನ್ನು ಹೊರತುಪಡಿಸಿದರೆ, ರಾಜ್ಯವೊಂದರ ಸರ್ವಾಂಗೀಣ ಆರ್ಥಿಕ ಪ್ರಗತಿಗೆ ಬೇಕಾದ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸಾಂಸ್ಕೃತಿಕ ಪರಂಪರೆ ಕರ್ನಾಟಕಕ್ಕಿದೆ.

 • ರಾಜ್ಯದ ಎಲ್ಲಾ ಜಿಲ್ಲೆಗಳ ಭೂಮಿ ವಿವಿಧ ಕೃಷಿ-ತೋಟಗಾರಿಕೆ ಬೆಳೆಗಳಿಗೆ ಪ್ರಶಸ್ತವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಹೊರತುಪಡಿಸಿದರೆ ಬೇರೆಲ್ಲಾ ಜಿಲ್ಲೆಗಳಲ್ಲಿ ಮಳೆ-ಅಂತರ್ಜಲ-ನೀರಾವರಿ ಆಧಾರಿತ ಕೃಷಿಗೆ ಪೂರಕ ವಾತಾವರಣವಿದೆ. ನೀರಿನ ವೈಜ್ಞಾನಿಕ ಬಳಕೆಯಿಂದ ರಾಜ್ಯಾದ್ಯಂತ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳ ಕೃಷಿಯಿಂದ ಸ್ವಾವಲಂಬಿತ ಗ್ರಾಮೀಣ ಜೀವನದ ಸ್ಪಷ್ಟ ಸಾಧ್ಯತೆಯಿದೆ.
 • ಕಾರ್ಮಿಕರ ಸೈನ್ಯದಿಂದ ನಡೆಸಬಹುದಾದ ಬೃಹತ್ ಕೈಗಾರಿಕೆಗೆ ಕರ್ನಾಟಕ ರಾಜ್ಯ ಸೂಕ್ತ ಸ್ಥಳವಲ್ಲದಿದ್ದರೂ, ಆಧುನಿಕ ತಂತ್ರಜ್ಞಾನ ಅಧಾರಿತ ಉನ್ನತ ಮೌಲ್ಯದ ಪದಾರ್ಥಗಳ ಉತ್ಪನ್ನಕ್ಕೆ ಕರ್ನಾಟಕ ಅತಸೂಕ್ತ ತಾಣವಾಗಿದೆ. ವಾಹನಗಳ, ಎಲೆಕ್ಟ್ರಾನಿಕ್‍ಸಾÀಮಾನಗಳ ಮತ್ತು ವಿಲಾಸೀ ಪದಾರ್ಥಗಳ ತಯಾರಿಕೆಗೆ ರಾಜ್ಯವಿನ್ನೂ ತೆರೆದಿದೆ.
 • ಎಲ್ಲಕ್ಕಿಂತ ಮಿಗಿಲಾಗಿ, ಬೇರಾವ ರಾಜ್ಯಗಳಲ್ಲಿ ಸಾಧ್ಯವಿಲ್ಲವಾದ ಉನ್ನತ ಗುಣಮಟ್ಟದ ಸೇವಾ ಕ್ಷೇತ್ರದ ಅನುಕೂಲತೆ ಕರ್ನಾಟಕದಲ್ಲಿದೆ. ಸಾಫ್ಟ್‍ವೇರ್, ಬಯೋ ಟೆಕ್ನಾಲಜಿ, ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಆವಿಷ್ಕಾರ, ಡಿಜಿಟಲ್ ಈ-ಕಾಮರ್ಸ್ ಉದ್ಯಮ, ಉನ್ನತ ಶಿಕ್ಷಣ, ಸ್ಟಾರ್ಟ್ ಅಪ್ ಮತ್ತಿತರ ಉದ್ಯಮಗಳ ಕೇಂದ್ರ ಸ್ಥಾನಗಳು ಕೇವಲ ಬೆಂಗಳೂರಿನ ಪರಿಸರದಲ್ಲಿ ಮಾತ್ರ ಇರಲು ಸಾಧ್ಯ. ಕರ್ನಾಟಕದಲ್ಲಿ ದೊರೆಯುವ ಈ ಉತ್ಕೃಷ್ಟ ಮಾನವ ಸಂಪನ್ಮೂಲ ಏಷ್ಯಾದಲ್ಲಿ ಬೇರೆಲ್ಲೂ ದೊರೆಯದ ಪರಿಸ್ಥಿತಿಯಿದೆ.
 • ಬೇರೆಲ್ಲಾ ರಾಜ್ಯಗಳಿಗೆ ಹೋಲಿಕೆಯಲ್ಲಿ ರಾಜ್ಯದ ಕಾನೂನು ವ್ಯವಸ್ಥೆ, ಉದ್ಯಮಕ್ಕೆ ಪೂರಕ ನ್ಯಾಯಿಕ ವ್ಯವಸ್ತೆ, ಮೂಲ ಸೌಲಭ್ಯ ಮತ್ತು ತಂಪಾದ ಹವಾಮಾನದ ಕಾರಣದಿಂದ ಆಧುನಿಕ ಉದ್ಯಮ-ಸೇವೆಯ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕ ಸಾಕ್ಷಿಯಾಗಿದೆ. ಅತ್ಯುತ್ತಮ ಫಾರ್ಚೂನ್ 500 ಕಂಪನಿಗಳಲ್ಲಿ ಶೇಕಡಾ 80ರಷ್ಟು ಕರ್ನಾಟಕದಲ್ಲಿ ಶಾಖೆ ತೆರೆದಿವೆ. ಸಾಫ್ಟ್‍ವೇರ್ ಕ್ಷೇತ್ರದ ಮೌಲ್ಯಮಾಪನದ ಸಿಎಮ್‍ಎಮ್ ಲೆವೆಲ್-5 ರ ಹಂತದ ಕಂಪನಿಗಳಲ್ಲಿ ಶೇಕಡಾ 50 ರಷ್ಟು ಕರ್ನಾಟಕದಲ್ಲಿವೆ. ವಿಶ್ವದಲ್ಲಿಯೇ ಜೀವನ ಮತ್ತು ಉದ್ಯಮಕ್ಕೆ ಅತ್ಯುತ್ತಮ ನಗರವೆಂದು ಬೆಂಗಳೂರು ಹೆಸರು ಪಡೆದಿದೆ. ಕರ್ನಾಟಕದಿಂದಲೇ ಪ್ರತಿವರ್ಷ ಒಂದು ಲಕ್ಷ ಇಂಜಿನಿಯರಿಂಗ್ ಹಾಗೂ ಡಾಕ್ಟರೇಟ್ ಪದವೀಧರರು ಹೊರಹೊಮ್ಮುತ್ತಲಿದ್ದಾರೆ.
  ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳೊಂದಿಗೆ ಕರ್ನಾಟಕ ಒಂದು ಸಮೃದ್ಧ ರಾಜ್ಯವಾಗುವ ಎಲ್ಲಾ ಸಾಧ್ಯತೆಗಳನ್ನು ಹೊಂದಿದೆ. ಹತ್ತಿಪ್ಪತ್ತು ವರ್ಷ ಕರ್ನಾಟಕಕ್ಕೆ ಉತ್ತಮ ನಾಯಕತ್ವದ ಸರ್ಕಾರಗಳು ದೊರೆತರೆ ಈ ‘ಸಮೃದ್ಧಿಯ ಸಾಧ್ಯತೆ’ಗಳನ್ನು ಸಾಕಾರವಾಗಿಸಬಹುದಾದ ಎಲ್ಲ ಅವಕಾಶಗಳಿವೆ. ಕನ್ನಡಿಗರು ಈ ಸಾಧ್ಯತೆಯನ್ನು ಅರಿತರೆ, ತಮ್ಮನ್ನು ಆಳುವವರ ಮೇಲೆ ದುಂಬಾಲುಬಿದ್ದು ಅವಕಾಶವನ್ನು ಅನಿವಾರ್ಯವಾಗಿಸಿದಾಗಿನ ಪರಿಣಾಮವನ್ನು ತಮ್ಮ ಜೀವನದಲ್ಲಿಯೇ ಕಾಣಬಹುದು.

ಈಗಿನ ಅಧಿಕಾರರೂಢ ಸಮ್ಮಿಶ್ರ ಸರ್ಕಾರದ ಚುನಾವಣಾ ಭರವಸೆಯಂತೆ ಮತ್ತು ಸ್ಥೂಲ ಅಂದಾಜಿನಂತೆ 53,000 ಕೋಟಿ ರೂಗಳ ಒಟ್ಟು ಸಾಲಮನ್ನಾ ಹೊರೆಯನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಈ ಸಾಲಮನ್ನಾ ಹೊರೆಯನ್ನು ಎರಡು ವರ್ಷಗಳ ಕಾಲದಲ್ಲಿ ಮಾಡಲಾಗುವುದು ಎಂದುಕೊಂಡರೂ ಪ್ರತಿವರ್ಷ 26,500 ಕೋಟಿ ರೂಗಳ ಹೊರೆಯನ್ನು ರಾಜ್ಯ ಸರ್ಕಾರ ಹೊರಬೇಕಾಗುತ್ತದೆ. ಹೀಗೆ ಮಾಡಬೇಕಾದಲ್ಲಿ ರಾಜ್ಯ ಸರ್ಕಾರದ ಮುಂದಿರುವ ಆಯ್ಕೆಗಳಲ್ಲಿ (ಮೊದಲನೆಯದಾಗಿ) 2018-19ರ ಮತ್ತು 2019-20ರ ಆರ್ಥಿಕ ವರ್ಷಗಳಲ್ಲಿ ಕನಿಷ್ಠಪಕ್ಷ 25,000 ಕೋಟಿ ರೂಗಳಷ್ಟು ಹೆಚ್ಚುವರಿ ಸಾಲವನ್ನು ಮುಕ್ತಮಾರುಕಟ್ಟೆಯಲ್ಲಿ ಪಡೆಯುವುದು. ಇದರಿಂದ ಈಗಿನ ಸಾಲದ ಹೊರೆಗೆ 53,000 ಕೋಟಿ ಸೇರಿ ಒಟ್ಟು ಸಾಲ/ದಾಯಿತ್ವದ ಮೊತ್ತ ಅಪಾಯದಂಚಿನ ನಾಲ್ಕು ಲಕ್ಷ ಕೋಟಿ ದಾಟಬಹುದು. (ಎರಡನೆಯದಾಗಿ) ರಾಜ್ಯ ಸರ್ಕಾರವು 2018-19ರ ಮತ್ತು 2019-20ರಲ್ಲಿನ ಕ್ಯಾಪಿಟಲ್ ಹೂಡಿಕೆಯ ಆಸೆಗೆ ತಿಲಾಂಜಲಿ ನೀಡಿ ಹೂಡಿಕೆಗಾಗಿ ಮೀಸಲಿಟ್ಟ ಈ ಹಣವನ್ನು ಸಂಪೂರ್ಣವಾಗಿ ಸಾಲಮನ್ನಾ ಘೋಷಣೆ ಈಡೇರಿಕೆಗೆ ಬಳಸಬಹುದು.

ಮೇಲಿನ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದು ಅನಿವಾರ್ಯ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಸರ್ಕಾರದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಲಮನ್ನಾ ಜಾರಿಗೆ ಹಣ ಹೊಂದಿಸಲಾಗುವುದು ಎಂದೂ ಹೇಳಿದ್ದಾರೆ. ಈ ಹೇಳಿಕೆ ಕೇವಲ ಬಾಯುಪಚಾರದ ಮತ್ತು ತೋರಿಕೆಯ ಹೇಳಿಕೆಯಷ್ಟೇ. ಸರ್ಕಾರಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಈಗಿರುವ ರೆವಿನ್ಯೂ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡುವುದು ಅಸಾಧ್ಯ. ಎಷ್ಟೇ ಉಳಿತಾಯದ ಹೋರಾಟ ಮಾಡಿದರೂ ಒಂದೆರಡು ಸಾವಿರ ಕೋಟಿ ರೂಗಳ ಖರ್ಚು ಉಳಿಸಬಹುದಷ್ಟೇ. ಹೀಗೆ ಕುಮಾರಸ್ವಾಮಿಯವರ ಸಾಲಮನ್ನಾ ಕ್ರಮ ಕರ್ನಾಟಕ ಸರ್ಕಾರದ ಕೊರಳಿಗೆ ಉರುಳಾಗುವ ಸಂಭವನೀಯತೆ ಸ್ಪಷ್ಟವಾಗಿದೆ.

ಕರ್ನಾಟಕದ ತಳವಿಲ್ಲದ ಬಾವಿಗಳು

ಕರ್ನಾಟಕದ ಕೆಲವು ಸರ್ಕಾರಿ ಉದ್ದಿಮೆಗಳ ದುರುಪಯೋಗ ಮತು ಭ್ರಷ್ಟಾಚಾರದ ಕಾರಣದಿಂದ ಸರಿಸುಮಾರು 25,000 ಕೋಟಿ ರೂಗಳಷ್ಟು ಅತ್ಯಮೂಲ್ಯ ತೆರಿಗೆ ಸಂಪನ್ಮೂಲ ಮತ್ತು ಉಚಿತ ನೈಸರ್ಗಿಕ ಸಂಪತ್ತು ಕೊಳ್ಳೆಹೋಗುತ್ತಿದೆ. ಸರ್ಕಾರಕ್ಕೆ ಲಾಭದಾಯಕ ಗಳಿಕೆಯ ಉದ್ಯಮಗಳಾಗಬೇಕಿದ್ದ ಈ ಸ್ವಾಯತ್ತ ಸಂಸ್ಥೆಗಳು ಈಗಲೂ ಸರ್ಕಾರದಿಂದ ಸಬ್ಸಿಡಿ ಪಡೆಯುವ ಬಿಳಿಯಾನೆಗಳಾಗಿವೆ. ಕರ್ನಾಟಕದ ತಳವಿಲ್ಲದ ಬಾವಿಗಳಾಗಿವೆ.

ಇದೇ ಸಮಯದಲ್ಲಿ ಕಳೆದ ಆರೇಳು ವರ್ಷಗಳ ಕಾಲ ಸಾಲ ಮತ್ತು ಬಡ್ಡಿಯ ಹೊರೆಯನ್ನು ಟೇಬಲ್-5 ರಲ್ಲಿ ನೋಡೋಣ. ಸಿದ್ದರಾಮಯ್ಯನವರ ಐದು ವರ್ಷಗಳ ಕಾಲದಲ್ಲಿ ಸಾಲದ ಪ್ರಮಾಣ ಮೂರು ಪಟ್ಟು ಮೇಲೇರಿದ್ದರೆ ಇದಕ್ಕೆ ಸಮಾನ ಅನುಪಾತದಲ್ಲಿ ಬಡ್ಡಿಯ ಹೊರೆಯೂ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ತೆಗೆದುಕೋಡ ಹೆಚ್ಚಿನ ಸಾಲದ ಕಾರಣದಿಂದ ಮುಂದಿನ ವರ್ಷಗಳಲ್ಲಿ ಕಟ್ಟಬೇಕಾದ ಬಡ್ಡಿಯ ಮೊತ್ತವೂ ಹೆಚ್ಚಲಿದೆ. ಈ ಸಂದರ್ಭದಲ್ಲಿ ಆರ್‍ಬಿಐ ಹಾಗೂ ಕೇಂದ್ರ ಸರ್ಕಾರಗಳ ಕ್ರಮಗಳಿಂದ ಕಳೆದ ಐದು ವರ್ಷಗಳಲ್ಲಿ ಬಡ್ಡಿದರವು ಶೇಕಡಾ ಎರಡರಿಂದ ಮೂರರವರೆಗೆ ಕಡಿಮೆಯಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಕರ್ನಾಟಕದ ಉದಾಸೀನತೆಗೆ ಸೊರಗಿದ ಐ.ಟಿ.ಉದ್ಯಮ

ಕರ್ನಾಟಕದಲ್ಲಿ 3,500ಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಇವುಗಳು ಪ್ರತಿ ವರ್ಷ ರೂ 2,20,000 ಕೋಟಿ ರೂಗಳಷ್ಟು ಮೌಲ್ಯದ ಸೇವೆಗಳನ್ನು ರಫ್ತು ಮಾಡುತ್ತಿವೆ ಮತ್ತು ದೇಶಕ್ಕೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಗಳಿಸುತ್ತಿವೆ. ನೇರವಾಗಿ 10 ಲಕ್ಷಕ್ಕೂ ಹೆಚ್ಚಿನ ಉದ್ಯೋಗಸ್ಥರು ಈ ಐಟಿ ಕ್ಷೇತ್ರದಲ್ಲಿದ್ದರೆ, ಪರೋಕ್ಷವಾಗಿ 30 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಈ ಉದ್ಯಮದ ಮೇಲೆ ನಿರ್ಭರವಾಗಿವೆ. ಕರ್ನಾಟಕದ ಒಟ್ಟಾರೆ ಜಿಡಿಪಿಯಲ್ಲಿ ಶೇಕಡಾ 25ರಷ್ಟು ಕೇವಲ ಐಟಿ ಉದ್ಯಮದಿಂದ ಬರುತ್ತಿದೆ. ದೇಶದ ಒಟ್ಟು ಐಟಿ ಸೇವೆಗಳ ರಫ್ತಿನಲ್ಲಿ ಕರ್ನಾಟಕದ ಪಾಲು ಶೇಕಡಾ 38 ರಷ್ಟಿದೆ.

ಈಗ ಹೇಳಿ, ಕರ್ನಾಟಕ ಸರ್ಕಾರದಿಂದ ಈ ಚಿನ್ನದ ಮೊಟ್ಟೆಯಿಡುವ ಕೋಳಿಗೆ ನೀಡಿರುವ ಸಮ್ಮಾನಗಳೇನು?

 • ಈ ಐಟಿ ಕಂಪನಿಗಳು ಬೆಂಗಳೂರಿನ ಸುತ್ತಮುತ್ತ ತಮ್ಮ ಕಛೇರಿ-ಕ್ಯಾಂಪಸ್‍ಗಳನ್ನು ತೆಗೆಯಲು ಸರ್ಕಾರ ಜಮೀನು ಒದಗಿಸುತ್ತಿಲ್ಲ. ಬೆಂಗಳೂರಿನ ಸುತ್ತಮುತ್ತ ರಂಪ ರಗಳೆಯಾಗಿರುವ ಜಮೀನಿನ ವಿವಾದಗಳ ಮಧ್ಯೆ ಯಾವುದೇ ಖಾಸಗಿಯವರು ಜಮೀನು ಕೊಂಡು ಅದರ ಭೂಪರಿವರ್ತನೆ ಮಾಡಿಸಬಲ್ಲ ಸಾಧ್ಯತೆಗಳೂ ಕಾಣುತ್ತಿಲ್ಲ. ಅಮೆರಿಕದ ಸಿಲಿಕಾನ್ ವ್ಯಾಲಿಯಿಂದ ಹೊರಗೆ ಅತ್ಯಂತ ಭರವಸೆಯ ಬೆಂಗಳೂರಿನಲ್ಲಿ ಕಾಲಿಡಲು ಈ ಐಟಿ ಉದ್ಯಮಕ್ಕೆ ಜಾಗವೇ ಇಲ್ಲ.
 • ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಈ ಐಟಿ ಉದ್ಯೋಗಿಗಳು ದಿನಕ್ಕೆ ಎರಡು ಮೂರು ಘಂಟೆ ರಸ್ತೆಯ ಮೇಲೆಯೇ ಕಳೆದು ತಮ್ಮ ಉಪಯುಕ್ತತೆ, ಪ್ರೊಡಕ್ಟಿವಿಟಿ ಹಾಗೂ ನೆಮ್ಮದಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಿದೆ. ಈ ಉದ್ಯೋಗಿಗಳಿಗೆ ಬೇಕಿರುವ ಸಣ್ಣ-ಪುಟ್ಟ ಸೌಲಭ್ಯಗಳಿಗೂ ಸರ್ಕಾರಿ ಯಂತ್ರ ಅಡ್ಡಕತ್ತರಿಯಿಟ್ಟಿದೆ.
 • 1999 ರಿಂದ 2004 ರವರೆಗೆ ಅಧಿಕಾರದಲ್ಲಿದ್ದ ಎಸ್ಸೆಮ್ ಕೃಷ್ಣರವರ ಸರ್ಕಾರದ ನಂತರದಲ್ಲಿ ಯಾವುದೇ ಸರ್ಕಾರವೂ ಗಂಭೀರ ವಾಗಿ ಈ ಐಟಿ ಉದ್ಯಮದ ಕಷ್ಟ ಕಾರ್ಪಣ್ಯ ಕೇಳಿ ಅವರ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ಕೇಂದ್ರದ ಮತ್ತು ರಾಜ್ಯದ ಉದಾಸೀನ ನಡವಳಿಕೆಗಳ ಮಧ್ಯೆ ಈ ಉದ್ಯಮಗಳು ಈ ರಾಜ್ಯಕ್ಕೆ ಸಂಬಂಧಪಟ್ಟ ಆರ್ಥಿಕತೆಯ ಭಾಗವೇ ಅಲ್ಲವೇನೋ ಎಂಬಂತೆ ನಿರ್ಲಿಪ್ತವಾಗಿವೆ. ಯಾವುದೇ ಸರ್ಕಾರ ದಿಂದ ಏನಾದರೂ ಕೇಳಿ ಏನು ಸುಖ ಎಂದು ತಮ್ಮ ವಾಣಿಜ್ಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿವೆ.
  ನಿಜಕ್ಕೂ ಭಾರತ ಮತ್ತು ಕರ್ನಾಟಕ ಸರ್ಕಾರಗಳು ಐಟಿ ಉದ್ಯಮಕ್ಕೆ ಪೂರಕವಾಗಿ ನಡೆದುಕೊಂಡಿದ್ದರೆ ಈ ಉದ್ಯಮದ ಕೊಡುಗೆ ಕರ್ನಾಟಕದ ಜಿಡಿಪಿಯ ಕೇವಲ ಶೇಕಡ 25 ರಷ್ಟಿರುತ್ತಿರಲಿಲ್ಲ. ಅದರ ಅನುಪಾತ ಎಷ್ಟಾಗಬಹುದಿತ್ತೆಂಬ ಗ್ರಹಿಕೆಯೂ ನಮ್ಮಲ್ಲಿಲ್ಲ.

ಈಗ ಕರ್ನಾಟಕದ ಆದಾಯ ಮೂಲಗಳನ್ನು ನೋಡೋಣ. ಟೇಬಲ್-6 ರಲ್ಲಿ ಕಳೆದ ಎಂಟು ವರ್ಷಗಳ ತೆರಿಗೆ ಮತ್ತಿತರ ಆದಾಯ ಮೂಲಗಳ ಚಿತ್ರಣವಿದೆ. ಕರ್ನಾಟಕದ ತೆರಿಗೆ ರಾಜಸ್ವವು ಸುಮಾರು ಶೇಕಡಾ 10ರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ತೆರಿಗೆ ಸಂಗ್ರಹದ ಬೆಳವಣಿಗೆ ರಾಜ್ಯದ ಅಗತ್ಯಗಳಿಗೆ ಅನುಗುಣವಾಗಿ ಕನಿಷ್ಠವೆಂದರೂ ಶೇಕಡಾ 15 ರ ಅನುಪಾತದಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುವ ಅಗತ್ಯವಿದೆ. ಈ ಅನಿವಾರ್ಯತೆಯನ್ನು ಸಮ್ಮಿಶ್ರ ಸರ್ಕಾರ ಆದಷ್ಟು ಬೇಗ ಅರಿತರೆ ಒಳ್ಳೆಯದು.

ಹೊಸ ಜಿಎಸ್‍ಟಿ ತೆರಿಗೆ ಕಾನೂನಿನ ಅನುಷ್ಠಾನದಲ್ಲಿ ತೆರಿಗೆ ಸಂಗ್ರಹ ಯಾವುದೇ ಕಾರಣಕ್ಕೆ ಏರುಪೇರಾದರೂ ರಾಜ್ಯದ ಆರ್ಥಿಕ ಸ್ಥಿತಿಗತಿ ಅಪಾಯದೆಡೆಗೆ ದೂಡಲ್ಪಡುತ್ತದೆ. ತೆರಿಗೆಯೇತರ ರಾಜಸ್ವ ಸಂಗ್ರಹವಂತೂ ಸ್ಥಗಿತವಾಗಿರುವಂತೆ ಕಾಣಿಸುತ್ತಿದೆ. ಕೇಂದ್ರ ತೆರಿಗೆಯ ಪಾಲಿನ ಆರೋಗ್ಯಕರ ಬೆಳವಣಿಗೆ ಹಾಗೂ ಕೇಂದ್ರೀಯ ಸಹಾಯಧನದ ಭರವಸೆಯಲ್ಲಿ ರಾಜ್ಯದ ಬಜೆಟ್ ಖರ್ಚುಗಳನ್ನು ಸರಿದೂಗಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಅಬಕಾರಿ ಆದಾಯ, ಸ್ಟಾಂಪ್ಸ್-ರೆಜಿಸ್ಟ್ರೇಶನ್ ಹಾಗೂ ಸಾರಿಗೆ ತೆರಿಗೆಗಳು ಕಳೆದ ಕೆಲವಾರು ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆ ಕಂಡಿರುವುದನ್ನು ನೋಡಿದ್ದೇವೆ. ಸಾರಿಗೆ ಹಾಗೂ ಅಬಕಾರಿ ಮೂಲಗಳಿಂದ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ತಮ್ಮದೇ ಆದ ಸ್ವಪ್ರೇರಿತ ಕಡಿವಾಣಗಳಿವೆ.

ಸರ್ಕಾರಕ್ಕೆ ಆದಾಯ ಗಳಿಸಬೇಕಿದ್ದ ಈ ಸೇವಾಉದ್ಯಮಗಳು ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದಿಂದ ಪಡೆದ ಸಬ್ಸಿಡಿಯ ವಿವರಗಳು ಈ ಕೆಳಕಂಡಂತಿವೆ.

ಆರ್ಥಿಕ ವರ್ಷ / ಕೋಟಿ ರೂಗಳಲ್ಲಿ.

ಹಾಗಾಗಿ ತೆರಿಗೆ ಸಂಗ್ರಹದ ಸಂಪೂರ್ಣ ಹೊರೆ ರಾಜ್ಯ ಜಿಎಸ್‍ಟಿ ಇಲಾಖೆಯ ಮೇಲೆ ಬೀಳಲಿದೆ. ಈ ಜಿಎಸ್‍ಟಿ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಅನೇಕಾನೇಕ ಸುಧಾರಣೆಯ ಸಾಧ್ಯತೆಗಳು ಮತ್ತು ಸೋರಿಕೆ ತಡೆಗಟ್ಟುವಲ್ಲಿ ದಕ್ಷತೆ ತೋರುವ ಅವಶ್ಯಕತೆಯಿದೆ. ಹೆಚ್ಚಿನ ಸಂಪನ್ಮೂಲ ಸಂಗ್ರಹದ ಆಸೆ ಇಟ್ಟುಕೊಂಡಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ರಾಜ್ಯ ಜಿಎಸ್‍ಟಿ ಇಲಾಖೆಯ ಕಾಯಕಲ್ಪಕ್ಕೆ ತಕ್ಷಣ ಸನ್ನದ್ಧರಾಗಬೇಕಾಗುತ್ತದೆ. ಆದರೆ ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಮುಖ್ಯಮಂತ್ರಿಯ ನಿರ್ಧಾರದಿಂದ ಪೂರ್ಣ ಪ್ರಮಾಣ/ಬಿಡುವಿನ ನಾಯಕನೊಬ್ಬನ ಕೊರತೆ ಉಂಟಾಗಿರುವುದೂ ಕಾಣಿಸುತ್ತಿದೆ.

2018-19 ರ ರಾಜ್ಯ ಮುಂಗಡಪತ್ರದಲ್ಲಿ ಹಣದ ಮೂಲ ಹಾಗೂ ಖರ್ಚಿನ ಬಾಬತ್ತುಗಳ ಶೇಕಡಾವಾರು ಪ್ರಮಾಣವನ್ನು ನೋಡಿ. ಈ ಟೇಬಲ್-8 ರಲ್ಲಿ ನೀಡಿರುವಂತೆ ಒಟ್ಟು ಬಜೆಟ್ ಸಂಗ್ರಹದ ಶೇಕಡಾ 22 ರಷ್ಟು ಭಾಗ ಸಾಲಮೂಲಗಳಿಂದಲೇ ಬಂದಿದೆ. ಹಾಗೆಯೇ ಬಜೆಟ್ ವ್ಯಯದ ಶೇಕಡಾ 13 ರಷ್ಟು ಸಾಲ ಮರುಪಾವತಿ ಮತ್ತು ಬಡ್ಡಿಯ ಹೊರೆಗೆ ಮೀಸಲಾಗಿದೆ. ಸಾಲಮೂಲದ ಮತ್ತು ಸಾಲಸೇವೆಯ (ಡೆಟ್ ಸರ್ವಿಸಿಂಗ್) ನಡುವಣ ಈ ಶೇ.9ರ ಅಂತರ ಅನಪೇಕ್ಷಿತ ಹೊರೆಯಾಗಿದೆ. ಈ ಪ್ರಮಾಣ ಈಗಾಗಲೇ ಅಪಾಯದ ಅಂಚಿನಲ್ಲಿದ್ದು ಇದು ಪ್ರತಿಕೂಲವಾಗಿ ಮುಂದುವರೆದರೆ ರಾಜ್ಯ ಬಜೆಟ್ ಪ್ರಕ್ರಿಯೆಯ ಮೇಲೆ ಕರಿನೆರಳು ಬೀರಬಹುದು.

ಇನ್ನು ರಾಜ್ಯ ಬಜೆಟ್‍ನಲ್ಲಿ ವಿವಿಧ ಕ್ಷೇತ್ರಗಳಿಗೆ ನೀಡಲಾಗುವ ಪಾಲಿನ ಪ್ರಮಾಣವನ್ನು 2018-19 ರ ಬಜೆಟ್ ಬಿಡುಗಡೆಯಲ್ಲಿ ನೋಡೋಣ. ಈ ಟೇಬಲ್-9 ರಲ್ಲಿ ವಿವಿಧ ಇಲಾಖೆ-ಆದ್ಯತೆಗಳಿಗೆ ನೀಡಿರುವ ಬಿಡುಗಡೆಗಳನ್ನು ನೋಡೋಣ. ಸಾರಿಗೆ, ವಿದ್ಯುತ್ ಮತ್ತಿತರ ಆರ್ಥಿಕ ವಲಯಗಳು ಸರ್ಕಾರದಿಂದ ಹಣ ಕೇಳದಂತೆ ಹಾಗೂ ಸರ್ಕಾರಕ್ಕೆ ಪೂರಕವಾಗಿ ರಾಜಸ್ವ ಸಂಗ್ರಹ ಮಾಡುವ ಇಲಾಖೆಗಳಾಗಿರಬೇಕು. ಶಿಕ್ಷಣ, ಕೃಷಿ, ಸಮಾಜಕಲ್ಯಾಣ ಮತ್ತಿತರ ಇಲಾಖೆಗಳ ಕಾರ್ಯವೈಖರಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ತೆರಿಗೆ ಹಣದ ಸದ್ಬಳಕೆಯಾಗುವಂತೆ ಮಾಡಬೇಕು. ಈ ‘ಸಾರ್ವಜನಿಕ ಒಳಿತು’ ಮತ್ತು ‘ಉತ್ತಮ ಆಡಳಿತ’ದ ಸೂತ್ರಗಳು ಕೇವಲ ಪುಸ್ತಕ-ಚರ್ಚೆಗಳಿಗೆ ಮೀಸಲಾಗದೆ ವಿಧಾನ-ವಿಕಾಸಸೌಧಗಳ ಆಡಳಿತ ಮಂತ್ರಗಳಾಗಬೇಕು.

ಮಾತಿಗೆ ತಪ್ಪಿದ ಮಗ?

ತಾವು ಚುನಾವಣೆಯಲ್ಲಿ ಗೆದ್ದುಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ತಮ್ಮ ಪಕ್ಷದ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಆದರೆ ಮಿತ್ರಪಕ್ಷಗಳ ಒಡಗೂಡಿ ತಾವು ಸ್ಪರ್ಧಿಸಿದ್ದ 224 ಸ್ಥಾನಗಳ ಪೈಕಿ ಕುಮಾರಸ್ವಾಮಿಗೆ ದಕ್ಕಿದ್ದು ಕೇವಲ 38 ಸ್ಥಾನಗಳು. ಹೀಗೆ ಕರ್ನಾಟಕದ ಜನತೆಯು ಕುಮಾರಸ್ವಾಮಿಯವರ ಸಾಲಮನ್ನಾ ಘೋಷಣೆಯನ್ನು ತಿರಸಕರಿಸಿದ್ದಾರೆ ಎಂಬಂತೆಯೇ ಚುನಾವಣಾ ನಿರ್ಣಯ ಹೊಮ್ಮಿದೆ. ಇದಕ್ಕೆ ಪರ್ಯಾಯವಾಗಿ ನಾವು ಚಿಂತಿಸುವುದಾದರೆ, ಕರ್ನಾಟಕದ ಮತದಾರರು ಈ ಸಾಲಮನ್ನಾ ಘೋಷಣೆಯನ್ನು ಚುನಾವಣಾ ವಿಷಯವೆಂದು ಗಂಭೀರವಾಗಿ ನಂಬಲೇ ಇಲ್ಲವೆಂದು ಹೇಳಬಹುದು. ರಾಜ್ಯದ ಚುನಾವಣೆಗಳು ಜಾತಿ, ಧರ್ಮ, ಹಣ ಹಾಗೂ ಯಾವ ರಾಜಕಾರಣಿ ಸರಿ ಯಾರು ತಪ್ಪು ಎಂಬ ಆಧಾರದ ಮೇಲೆ ಆಗಿದೆಯೇ ಹೊರತು ಸಾಲಮನ್ನಾ ಅಥವಾ ವೃದ್ಧಾಪ್ಯ ವೇತನದಂತಹಾ ಭರವಸೆಗಳ ಮೇಲೆ ಅಲ್ಲ. ಆದಾಗ್ಯೂ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳು ಆಯಾ ಪಕ್ಷಗಳ ಮೇಲೆ ಉತ್ತರದಾಯಿತ್ವ ಹೇರುತ್ತವೆ. ಈಗಾಗಲೇ ಒಮ್ಮೆ ಬಿಜೆಪಿಗೆ ನೀಡಿದ ‘ವಚನ ಭ್ರಷ್ಟ’ನೆಂಬ ಹಣೆಪಟ್ಟಿ ಹೊಂದಿರುವ ಕುಮಾರಸ್ವಾಮಿ ಈಗ ಮತ್ತೊಮ್ಮೆ ಕಾಂಗ್ರೆಸ್ ಜೊತೆಗೂಡಿ ‘ಮಾತಿಗೆ ತಪ್ಪಿದ ಮಗ’ನಾಗುವರೋ ಎಂದು ನೋಡಬೇಕಿದೆ.

ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಹಾಗೂ ಹಣಕಾಸು ಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ನೀತಿ ಮತ್ತು ಆಡಳಿತಗಳಿಂದ ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿಗತಿಯ ಮೇಲಿನ ಪರಿಣಾಮದ ಬಗ್ಗೆ ಸಂಕ್ಷಿಪ್ತವಾಗಿಯಾದರೂ ಹೇಳಬೇಕು. ಸಿದ್ದರಾಮಯ್ಯನವರು ಆಯವ್ಯಯ ಸರಿದೂಗಿಸುವಲ್ಲಿ ಕರ್ನಾಟಕ ಸರ್ಕಾರ ಮಾಡಬಹುದಾದ ಸಾಲದ ಮಿತಿಯನ್ನು ಕೊನೆಯ ಎರಡು ವರ್ಷಗಳಲ್ಲಿಯಾದರೂ ದಾಟಿದ್ದಾರೆ. ಈ ಸಾಲ ಮರುಪಾವತಿ ಮತ್ತು ಬಡ್ಡಿಯ ದಾಯಿತ್ವ ಮುಂದಿನ ವರ್ಷಗಳಲ್ಲಿ ರಾಜ್ಯದ ಮೇಲಿನ ಹೊರೆಯಾಗಲಿದೆ ಹಾಗೂ ಮುಂದಿನ ಹಣಕಾಸು ಸಚಿವರಿಗೆ ತಲೆಬೇನೆಯಾಗಲಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಸಾಲದಿಂದ ಪಡೆದ ಹಣವು ಗುರುತರವಾಗಿ ಯಾವುದೇ ಆಸ್ತಿಮೂಲ ಮತ್ತು ಆದಾಯ ಮೂಲಗಳಾದ ಮೂಲಭೂತ ಸೌಕರ್ಯಗಳ ಮೇಲೆ ಆಗಿಲ್ಲ. ಇದರಿಂದ ಮಾಡಿದ ಸಾಲವು ಬಜೆಟ್ ಖರ್ಚನ್ನು ಸರಿದೂಗಿಸುವ ಮಟ್ಟದಲ್ಲಿದೆಯೇ ಹೊರತು ಯಾವುದೇ ಉದ್ದೇಶಿತ ಗುಣಾತ್ಮಕ ಹೂಡಿಕೆಯನ್ನು ಬಯಸಿಲ್ಲ. ಈ ವಿಷಯದಲ್ಲಿ ಸಿದ್ದರಾಮಯ್ಯನವರು ಯಾವುದೇ ಹೊಸತನವಿಲ್ಲದ ಅಥವಾ ‘ಔಟ್ ಆಫ್ ದಿ ಬಾಕ್ಸ್’ ಆಲೋಚನೆಯಿಲ್ಲದ ತೇಪೆಹಾಕುವ ಸಾಧಾರಣ ಕೆಲಸವನ್ನೇ ಮಾಡಿದ್ದಾರೆ.

ಐದು ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಹಾಗೂ ಬೃಹತ್ ಬಂಡ ವಾಳ ಹೂಡಿಕೆಯ ಯಾವುದೇ ಒಂದು ಯೋಜನೆಯನ್ನೂ ಪ್ರಾರಂಭ ಮಾಡದ ಅಪಕೀರ್ತಿಯೂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಆದರೂ ಸಿದ್ದರಾಮಯ್ಯನವರು ಅತಿಯಾಗಿ ದುಂದುವೆಚ್ಚ ಮಾಡಲಿಲ್ಲ; ‘ಸಾಲ ಮಾಡಿಯಾದರೂ ಮೃಷ್ಟಾನ್ನ ಭೋಜನ ಮಾಡಬೇಕೆನ್ನುವ’ ಇರಾದೆಯನ್ನು ತೋರಲಿಲ್ಲ.

ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿದ ಸಾಲದ ಪ್ರಮಾಣ ಮತ್ತು ಕೆಲವು ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ವಿತ್ತೀಯ ಸ್ಥಿತಿಗತಿಯ ಬಗ್ಗೆ ಕಾಳಜಿ ಮೂಡಿಸುವಂತಹ ಪರಿಸ್ಥಿತಿ ಮೂಡಿಸಿದ್ದರೂ, ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಚಿಂತಾಕ್ರಾಂತ ಪರಿಸ್ಥಿತಿ ಯನ್ನೇನೂ ಸಿದ್ದರಾಮಯ್ಯನವರು ತಂದೊಡ್ಡಿಲ್ಲ.

ಹಾಗೆಂದು ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ನಾವು ನಿರುಮ್ಮಳರಾಗಿರಬಹುದು ಎಂದೇನಿಲ್ಲ. ಒಂದೆರಡು ವರ್ಷಗಳಲ್ಲಿನ ತಪ್ಪು ನಿರ್ಣಯ-ನಡವಳಿಕೆಗಳು ಹಣಕಾಸಿನ ಸ್ಥಿತಿಯ ಮೇಲೆ ಹಿಮ್ಮೆಟ್ಟಲಾಗದ ಪ್ರತಿಕೂಲ ಪರಿಣಾಮ ಬೀರಬಲ್ಲದು. ರಾಜ್ಯ ಸರ್ಕಾರದ ಇಂತಹ ಆರ್ಥಿಕ ನಿರ್ಣಯಗಳ ಬಗ್ಗೆ ನಾಗರಿಕರು ಸದಾ ಜಾಗರೂಕ ರಾಗಿರಬೇಕಾಗುತ್ತದೆ. ಅದು ನಮ್ಮ ಆಶಯ.

-ಸಮಾಜಮುಖಿ ಬಳಗ

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮