2nd July 2018

ಬಡ್ತಿ ಮೀಸಲಾತಿ ವಿವಾದ
ಮತ್ತೊಂದು ತಿರುವು

ರಾಜ್ಯ ಸರಕಾರದ ಮುಂಬಡ್ತಿ ಮೀಸಲಾತಿ ಸಂರಕ್ಷಣಾ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಹಾಗೆಂದು ವಿವಾದ ಮುಗಿಯಿತೆಂದು ಭಾವಿಸಬೇಕಿಲ್ಲ. ಬಡ್ತಿ ಮೀಸಲಾತಿ ಪರ ಮತ್ತು ವಿರೋಧವಾಗಿ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಇದು ಮತ್ತೊಂದು ತಿರುವು ನೀಡಿದೆ, ಅಷ್ಟೇ.

ಮೀಸಲಾತಿ ಆಧಾರದಲ್ಲಿ 1978ರಿಂದ ಇದುವರೆಗೆÀ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರರು ಹಾಗೂ ಅಧಿಕಾರಿಗಳ ಸಾಂದರ್ಭಿಕ ಸೇವಾ ಹಿರಿತನವನ್ನು ಸಂರಕ್ಷಿಸುವ ರಾಜ್ಯ ಸರಕಾರದ ವಿಧೇಯಕಕ್ಕೆ ಕೊನೆಗೂ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ 2017ರ ಫೆಬ್ರುವರಿ 6 ರಂದು ಹೊರಡಿಸಿದ್ದ ಆದೇಶದಿಂದ ಹಿಂಬಡ್ತಿ ಹೊಂದುವ ಆತಂಕದಲ್ಲಿದ್ದ ಅಂದಾಜು 20 ಸಾವಿರಕ್ಕೂ ಅಧಿಕ ಪರಿಶಿಷ್ಟ ನೌಕರರು ಮತ್ತು ಅಧಿಕಾರಿಗಳು ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಇನ್ನೊಂದೆಡೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಶೇ.82 ರಷ್ಟು ವರ್ಗದವರದು. ದಶಕಗಳ ಕಾನೂನು ಹೋರಾಟದ ನಂತರ ನ್ಯಾಯ ಸಿಕ್ಕಿದೆ ಎಂದು ಇತರ ವರ್ಗದವರು ಖುಷಿಯಲ್ಲಿದ್ದರು. ಅಷ್ಟರಲ್ಲಿ ರಾಷ್ಟ್ರಪತಿಗಳು ರಾಜ್ಯ ಸರಕಾರದ ವಿಧೇಯಕಕ್ಕೆ ಅಂಗೀಕಾರ ಹಾಕುವ ಮೂಲಕ ಆ ಸಂಭ್ರಮ ಮಂಜಿನಂತೆ ಕರಗಿ ಹೋದಂತಾಗಿದೆ.

ಈ ಹಂತಕ್ಕೆ ಬರುವ ಮುನ್ನ ಈ ವಿವಾದ ಹಲವು ತಿರುವು ಪಡೆದಿದೆ. ಅವುಗಳತ್ತ ಮೊದಲು ಕಣ್ಣು ಹಾಯಿಸೋಣ. 2017ರ ಫೆಬ್ರುವರಿ 6 ರಂದು ಸುಪ್ರೀಂ ಕೋರ್ಟು ಬಡ್ತಿ ಮೀಸಲಾತಿಯನ್ನು ರದ್ದುಪಡಿಸಿದ್ದರಿಂದ ತೀವ್ರ ಆತಂಕಕ್ಕೆ ಒಳಗಾದ ಪರಿಶಿಷ್ಟರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೊರೆ ಹೋದರು. ಸುಪ್ರೀಂಕೋರ್ಟ್ ತೀರ್ಪಿನಿಂದ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಡ ಹೇರತೊಡಗಿದರು.

ಇನ್ನೊಂದೆಡೆ ದಶಕಗಳ ನಂತರ ತಮಗೆ ದೊರೆತ ನ್ಯಾಯವನ್ನು ಯಥಾವತ್ತಾಗಿ ಅನುಷ್ಠಾನ ಮಾಡಬೇಕೆಂದು ಶೇ.82 ರಷ್ಟು ದಲಿತೇತರ ವರ್ಗದವರೂ ರಾಜ್ಯ ಸರಕಾರವನ್ನು ಒತ್ತಾಯಿಸಿದರು. ಮುಂದೆ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದಿತ್ತು. ಇಂಥ ಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟರ ಪರ ನಿಂತರು.

ಪರಿಶಿಷ್ಟರಿಗೆ ಸಾಂದರ್ಭಿಕ ಸೇವಾ ಹಿರಿತನದೊಂದಿಗೆ ಬಡ್ತಿ ಮೀಸಲಾತಿ ನೀಡುವಾಗ ಮೀಸಲಾತಿಯಲ್ಲಿ ಕೊರತೆ ಇರಬೇಕು, ಅವರು ಸಾಮಜಿಕವಾಗಿ ಹಿಂದುಳಿದಿರಬೇಕು ಮತ್ತು ಮೀಸಲಾತಿ ನೀಡುವುದರಿಂದ ದಕ್ಷತೆ ಮೇಲೆ ದುಷ್ಪರಿಣಾಮ ಆಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದಕ್ಕೆ ಪೂರಕವಾಗಿ ಈಗಿನ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭ ಅವರಿಂದ ವರದಿ ಪಡೆಯಲಾಯಿತು.

ಬಳಿಕ ಪರಿಶಿಷ್ಟರ ಹಿತ ಕಾಯಲು ತಕ್ಷಣವೇ ಸುಗ್ರೀವಾಜ್ಞೆಯನ್ನು ಹೊರಡಿಸಲು ಸರಕಾರ ಮುಂದಾಯಿತು. ಆದರೆ ರಾಜ್ಯಪಾಲ ವಜುಭಾಯಿ ವಾಲಾ ವಿಧಾನಮಂಡಲದಲ್ಲೇ ಚರ್ಚಿಸಿ ಕಾನೂನು ರೂಪಿಸಿ ಎಂದು ಸುಗ್ರಿವಾಜ್ಞೆಯನ್ನು ವಾಪಸು ಕಳಿಸಿದರು. ನವೆಂಬರಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತ ವಿಧೇಯಕವನ್ನು ಮಂಡಿಸಿದ ಸರಕಾರ ವಿಧಾನಮಂಡಲದ ಅಂಗೀಕಾರ ಪಡೆದು ರಾಜ್ಯಪಾಲರಿಗೆ ಕಳುಹಿಸಿತು. ಸ್ವತಃ ಸಿದ್ದರಾಮಯ್ಯ ಅವರೇ ರಾಜ್ಯಪಾಲರನ್ನು ಭೇಟಿ ಮಾಡಿ ಮನವರಿಕೆ ಮಾಡುವ ಯತ್ನ ನಡೆಸಿದರು. ಆಗಲೂ ವಿಧೇಯಕಕ್ಕೆ ಸಹಿ ಹಾಕದ ರಾಜ್ಯಪಾಲರು ಇದೊಂದು ಸುಪ್ರೀಂ ಕೋರ್ಟಿನಿಂದ ತಿರಸ್ಕರಿಸಲ್ಪಟ್ಟ ಕಾನೂನಿನ ವಿಚಾರವೆಂದು 2017 ಡಿಸೆಂಬರ್ 16 ರಂದು ರಾಷ್ಟ್ರಪತಿಗಳ ಅಂಗಳಕ್ಕೆ ಎತ್ತಿ ಹಾಕಿದರು.

ಈ ವೇಳೆಯಲ್ಲಿ, ತಮಗೆ ನ್ಯಾಯ ದಕ್ಕಿಸಿಕೊಳ್ಳಲು ಮುಂದಾದ ಶೇ.82ರಷ್ಟು ವರ್ಗದವರು ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ಸರಕಾರದ ಮೇಲಿನ ಒತ್ತಡವನ್ನು ಹೆಚ್ಚಿಸಿದರು. ಚುನಾವಣೆಗೂ ಮುನ್ನ ಪರಿಶಿಷ್ಟರಿಗೆ ಹಿಂಬಡ್ತಿ ನೀಡುವುದನ್ನು ತಡೆಯಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಏನೆಲ್ಲಾ ಕಸರತ್ತು ನಡೆಸಿತು. ಆದರೆ ಅವೆಲ್ಲವೂ ವ್ಯರ್ಥವಾಗಿ ಚುನಾವಣೆ ಹೊಸ್ತಿಲಲ್ಲಿ ನಿಂತಾಗ ತನ್ನ ಆದೇಶವನ್ನು ಜಾರಿಗೊಳಿಸಲೇಬೇಕೆಂದು ಸುಪ್ರೀಂ ಕೋರ್ಟ್ ಕಟ್ಟಾಜ್ಞೆ ನೀಡಿತು. ಪರಿಣಾಮ ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಹಿಂಬಡ್ತಿ-ಮುಂಬಡ್ತಿ ನೀಡಿಕೆ ಪ್ರಕ್ರಿಯೆ ಜಾರಿಯಾಗಿದೆ. ಉಳಿದ ಇಲಾಖೆಗಳಲ್ಲೂ ಜಾರಿಯಾಗುವ ಹಂತದಲ್ಲಿದ್ದಾಗಲೇ ರಾಷ್ಟ್ರಪತಿಗಳು ರಾಜ್ಯ ಸರಕಾರದ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಸಿದ್ದರಾವiಯ್ಯ ನೇತೃತ್ವದ ಸರಕಾರದ ಸಂಪೂರ್ಣ ಬೆಂಬಲದ ಹೊರತಾಗಿಯೂ ಪರಿಶಿಷ್ಟರು ಇದಕ್ಕಾಗಿ ಆರು ತಿಂಗಳು ಕಾಯಬೇಕಾಯಿತು.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಬಡ್ತಿಯಲ್ಲಿ ಮೀಸಲಾತಿ ಹಾಗೂ ಸಾಂದರ್ಭೀಕ ಸೇವಾ ಹಿರಿತನದೊಂದಿಗೆ ಬಡ್ತಿ ಮೀಸಲಾತಿ ನೀಡುವ ವಿಚಾರ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಲ್ಲಿ ಒಂದು ರೀತಿಯ ಸಾಮಾಜಿಕ ವರ್ಗ ಸಂಘರ್ಷಕ್ಕೆ ಕಾರಣವಾದಂತೆ ಭಾಸವಾಗುತ್ತಿದೆ. ಈ ಸಂಬಂಧ ನಡೆದ ಕಾನೂನು ಹೋರಾಟ ಬಹು ದೀರ್ಘವಾದುದು. ಈ ವಿವಾದ ಅನೇಕ ರಾಜ್ಯಗಳ ವಿಧಾನ ಮಂಡಲ ಮತ್ತು ಸಂಸತ್ತಿನ ಉಭಯ ಸದನಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಘಟಾನುಘಟಿ ನಾಯಕರು ವಿವಾದ ಬಗೆಹರಿಸುವ ಪ್ರಯತ್ನ (ಕೆಲವರು ಮೇಲ್ನೋಟಕ್ಕೆ) ನಡೆಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳ ಹೈಕೋರ್ಟ್‍ಗಳು ಹತ್ತಾರು ತೀರ್ಪು ನೀಡಿವೆ. ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವೇ ಹಲವು ಬಾರಿ ಐತಿಹಾಸಿಕ ತೀರ್ಪು ನೀಡಿದೆ. ಇದೇ ವಿಚಾರವಾಗಿ ನಾಲ್ಕು ಸಂವಿಧಾನ ತಿದ್ದುಪಡಿಗಳೂ ಆಗಿವೆ. ಆದಾಗ್ಯೂ ವಿವಾದ ಕೊನೆಗೊಂಡಿಲ್ಲ. ಇದುವರೆಗೆ ನಡೆದ ಬೆಳವಣಿಗೆಗಳು ಸಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳ ಕುರಿತೇ ಒಂದು ರೀತಿಯ ಗೊಂದಲ ಉಂಟು ಮಾಡಿವೆ.

ರಾಜ್ಯ ಸರಕಾರದ ಕಾನೂನನ್ನು ಮತ್ತೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಅಹಿಂಸಾ ಸಂಘಟನೆ ಮುಂದಾಗಿದೆ. ಪರಿಶಿಷ್ಟರೂ ಇಷ್ಟಕ್ಕೆ ಸುಮ್ಮನಾಗದೆ ಎಲ್ಲಾ ವರ್ಗದ ಹುದ್ದೆಗಳಿಗೂ ಬಡ್ತಿ ಮೀಸಲಾತಿಗೆ ಅವಕಾಶ ನೀಡುವ ಸಂವಿಧಾನದ 77ನೇ ತಿದ್ದುಪಡಿಯನ್ನು ಜಾರಿಗೊಳಿಸಬೇಕೆಂದು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಹಾಗಾಗಿ ವಿವಾದ ಸದ್ಯ ಮುಗಿಯುವಂತೆ ಕಾಣುತ್ತಿಲ್ಲ.

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

June 2018

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

May 2018

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

May 2018

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

April 2018

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

April 2018

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

March 2018

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

March 2018

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

February 2018