2nd July 2018

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ
ಗಣಿ ಕಂಟಕ!

ಶ್ರೀಶೈಲ ಆಲದಹಳ್ಳಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಒಂದೇ ವಾರದಲ್ಲಿ ತಮ್ಮದೇ ಹೆಸರಿನ ದೇಗುಲಕ್ಕೆ ಧಕ್ಕೆ ತರುವ ಗಣಿಗಾರಿಕೆಗೆ ಪರವಾನಗಿ ಕೊಟ್ಟಿದ್ದಾರೆ. ವಿಪರ್ಯಾಸವೆಂದರೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇವಸ್ಥಾನದ ಸುತ್ತ ಗಣಿಗಾರಿಕೆ ನಿಷೇಧಿಸುತ್ತೇನೆಂದು ಇದೇ ದೇವಸ್ಥಾನದ ಆವರಣದಲ್ಲಿ ಶಾಸಕ ಕುಮಾರಸ್ವಾಮಿ ವಚನ ನೀಡಿದ್ದರು! ಮತ್ತೊಮ್ಮೆ ವಚನ ಭ್ರಷ್ಟರಾದರೇ?

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು 35000 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದ್ದು ಪಶ್ಚಿಮ ಘಟ್ಟದ ಪ್ರತಿರೂಪದಂತಿದೆ. ಸಮುದ್ರ ಮಟ್ಟದಿಂದ ಸುಮಾರು 3500 ಅಡಿ ಎತ್ತರದಲ್ಲಿರುವ ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಗಿರಿಯಲ್ಲಿದೆ ಕುಮಾರಸ್ವಾಮಿ-ಪಾರ್ವತಿದೇವಿ ದೇವಸ್ಥಾನ. ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಯಡಿ ಸಂರಕ್ಷಿಸಿರುವ ಈ ದೇಗುಲ ನಿರ್ಮಾಣವಾಗಿರುವುದು 8ನೇ ಶತಮಾನದಲ್ಲಿ. ಪೌರಾಣಿಕ ಹಿನ್ನೆಲೆಯುಳ್ಳ ಸ್ಕಂದಗಿರಿಯಲ್ಲಿ ಪ್ರತಿ ಎರಡೂವರೆ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಲಕ್ಷಾಂತರ ಭಕ್ತರು ಸೇರುತ್ತಾರೆ. 12 ವರ್ಷಗಳಿಗೊಮ್ಮೆ ಅರಳುವ ನೀಲಕುರಂಜಿ ಹೂವಿನ ಸಸ್ಯಪ್ರಭೇದವು ಸೇರಿದಂತೆ ಅಪರೂಪದ ಪ್ರಾಣಿಪಕ್ಷಿಗಳ ಸಂಕುಲ, ಶ್ರೀಗಂಧ, ರಕ್ತಚಂದನ, ಬೀಟೆ, ಹೊನ್ನೆ ಮರಗಳು, ಔಷಧೀಯ ಗಿಡಮೂಲಿಕೆಗಳು ಈ ಬೆಟ್ಟದಲ್ಲಿವೆ. ಹಾಗಾಗಿ ಇದು ಪ್ರವಾಸಿಗರ ಚಾರಣಿಗರ ನೆಚ್ಚಿನ ತಾಣ. ಜೊತೆಗೆ ಉತ್ಕೃಷ್ಟ ಕಬ್ಬಿಣದ ನಿಕ್ಷೇಪ ಹೊಂದಿರುವುದೇ ಈ ಬೆಟ್ಟಕ್ಕೆ ಕಂಟಕವಾಗಿದೆ.

ಬಹಳ ಹಿಂದಿನಿಂದಲೂ ಸಂಡೂರು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಆದರೆ 2002-2009ರ ಅವಧಿಯಲ್ಲಿ ಕಬ್ಬಿಣದ ಅದಿರಿಗೆ ವಿದೇಶದಿಂದ ಅನಿರೀಕ್ಷಿತ ಬೇಡಿಕೆ ಬಂದು ಇಡೀ ಚಿತ್ರಣವೇ ಬದಲಾಗಿಹೋಯ್ತು. ಅಲ್ಲಿಯವರೆಗೆ ಕಾರ್ಮಿಕರಿಗೆ ಕೂಲಿ ಕೊಡಲಾಗದೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ ಗಣಿ ಮಾಲೀಕರು ಅಪಾರ ಹಣ ಎಣಿಸತೊಡಗಿದರು. ಅಕ್ರಮ ಗಣಿಗಾರಿಕೆ, ಕಾನೂನು ಉಲ್ಲಂಘನೆ, ಬೃಹತ್ ಯಂತ್ರಗಳ ಅಳವಡಿಕೆ, ಅಧಿಕಾರದ ದುರ್ಬಳಕೆ ಮೂಲಕ ಕೊಬ್ಬಿನಿಂತರು; ಗಣಿಗಾರಿಕೆ, ಹಣದೋಚುವಿಕೆ ಹೊರತಾಗಿ ಬೇರೆಲ್ಲಾ ಗೌಣವಾದವು. ಈ ಘಟ್ಟದಲ್ಲೇ ಹೆಚ್‍ಟಿ ಹೆಸರಿನ ಗಣಿಕಂಪನಿಯೊಂದು ಕುಮಾರಸ್ವಾಮಿ ಗುಡಿಯಿಂದ 600 ಮೀಟರು ದೂರದಲ್ಲಿ ಅದಿರಿಗೆ ಮುಗಿಬಿದ್ದರು. 2005ರಲ್ಲಿ ಎಚ್ಚೆತ್ತುಕೊಂಡ ಪರಿಸರಪ್ರೇಮಿ, ಸ್ವತಃ ಗಣಿ ಉದ್ಯಮಿ ಎಂ.ವೈ.ಘೋರ್ಪಡೆ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಗೆ ದೂರು ನೀಡಿದರು. ಪರಿಣಾಮವಾಗಿ ಕೇಂದ್ರ ಪುರಾತತ್ವ ಇಲಾಖೆಯು (ಸ್ಮಾರಕ ಸಂರಕ್ಷಣಾ ಕಾಯ್ದೆ -ರಾಜ್ಯದ 1978, -ಕೇಂದ್ರದ 1958ರ ಪ್ರಕಾರ) ಸಂರಕ್ಷಿತ ಸ್ಮಾರಕದ 2 ಕಿ.ಮೀ. ಸುತ್ತಳತೆಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿಮಾಡಿತು. ಆದರೆ ಗಣಿನಿಶೆಯಲ್ಲಿದ್ದ ರಾಜ್ಯ ಸರ್ಕಾರ ಈ ಆದೇಶವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಮುಂದೆ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯವು ಸುಪ್ರೀಂಕೋರ್ಟಗೆ ತೆಗೆದುಕೊಂಡು ಹೋಗುವುದರ ಮೂಲಕ ಅಕ್ರಮ ಗಣಿಗಾರಿಕೆಯ ಆರ್ಭಟ ಒಂದು ಹಂತಕ್ಕೆ ಬಂದು ನಿಂತಿತು. 2013ರಲ್ಲಿ ಹೊಸಪೇಟೆಯ ಜಂಬುನಾಥ ದೇವಸ್ಥಾನ ರಕ್ಷಣೆಯ ವಿಷಯದಲ್ಲಿ ಸುಪ್ರೀಂ ಕೋರ್ಟು ಒಂದು ಆದೇಶ ನೀಡಿ ಸಂರಕ್ಷಿತ ಸ್ಮಾರಕದ ಸುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿತು. ಜೊತೆಗೆ ಗಣಿ ಬಾಧಿತ ಪ್ರದೇಶದಲ್ಲಿನ ಎಲ್ಲಾ ಸ್ಮಾರಕಗಳನ್ನು ಅಧ್ಯಯನ ಮಾಡಿ ಒಂದು ವರ್ಷಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಯನ್ನೂ ರಚಿಸಿತು. ಆದರೆ ಈ ಕಮಿಟಿಯ ಕೆಲವು ಅಧಿಕಾರಿಗಳಿಗೆ ಗಣಿಹಣದ ಮುಂದೆ ನ್ಯಾಯಾಲಯದ ಆದೇಶಗಳು ಲೆಕ್ಕಕ್ಕಿಲ್ಲದಂತಾಯಿತು. ತಂಡದಲ್ಲಿದ್ದ ಪ್ರಾಮಾಣಿಕ ಅಧಿಕಾರಿಗಳಿಗೆ ಲಭಿಸಿದ್ದು ವರ್ಗಾವಣೆ ಭಾಗ್ಯ.

ಯಾರಿಗೂ ಬೇಡವಾದ ಹೊಣೆ !

‘ಕೋರ್ಟು ರಚಿಸಿದ ಅಧ್ಯಯನ ಸಮಿತಿ ಕರ್ನಾಟಕದಲ್ಲಿ ಗಣಿಗಾರಿಕೆಯಿಂದ ಅಳಿವಿನಂಚಿನಲ್ಲಿರುವ ಸ್ಮಾರಕಗಳ ಅಧ್ಯಯನ ಮಾಡಿ 9 ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಬೇಕು, ಇದನ್ನು ಸರ್ಕಾರಗಳು 3 ತಿಂಗಳೊಳಗೆ ಜಾರಿಗೊಳಿಸಬೇಕು’ -ಇದು ಹೊಸಪೇಟೆಯ ಜಂಬುನಾಥ ದೇವಸ್ಥಾನ ರಕ್ಷಣೆ ಆದೇಶದಲ್ಲಿನ ಸುಪ್ರೀಂ ಕೋರ್ಟಿನ ಸ್ವಷ್ಟನುಡಿ. ಆದರೆ ಆಗಿದ್ದೇನು? ಸುಪ್ರೀಂಕೋರ್ಟ್ ಆದೇಶ ಹಾಗೂ ಸ್ಥಳೀಯ ಸಂಘಟನೆಗಳ ಆಗ್ರಹದ ಮೇರೆಗೆ ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಯ ರೀಜನಲ್ ಡೈರೆಕ್ಟರ್ ಸತ್ಯಭಾಮ ನೇತೃತ್ವದ ತಂಡ ಕುಮಾರಸ್ವಾಮಿ ಗುಡಿ ಪ್ರದೇಶಕ್ಕೆ ಭೇಟಿ ನೀಡಿತ್ತು. ರಾಜ್ಯ ಪ್ರಾಚೀನ ಪುರಾತತ್ವ ಇಲಾಖೆ ಆಯುಕ್ತರಾದ ಮಂಜುಳ ನೇತೃತ್ವದ ತಂಡ ಕೂಡ ಪರಿಶೀಲನೆ ನಡೆಸಿತು. ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರು ಹೇಳುವಂತೆ, ‘ಕುಮಾರಸ್ವಾಮಿ ಮತ್ತು ಪಾರ್ವತಿ ಸ್ಮಾರಕಗಳು ನಮ್ಮ ಇಲಾಖೆ ನಿಯಂತ್ರಣದಲ್ಲಿ ಬರುವುದಿಲ್ಲ; ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯಡಿ ಬರುತ್ತವೆ. ಆದ್ದರಿಂದ ಗಣಿಗಾರಿಕೆಯಿಂದಾಗುವ ಹಾನಿಯ ವರದಿಯನ್ನು ನಾವು ಕೊಡಲು ಬರುವುದಿಲ್ಲ.’ ಈ ಬಗ್ಗೆ ಭಾ.ಪ್ರಾ.ಇಲಾಖೆ ರೀಜಿನಲ್ ಡೈರೆಕ್ಟರರನ್ನು ಕೇಳಿದರೆ, ‘ರಾಜ್ಯದಲ್ಲಿ ಗಣಿಗಾರಿಕೆಯಿಂದ ತೊಂದರೆಯಲ್ಲಿರುವ ಸ್ಮಾರಕಗಳ ಅಧ್ಯಯನ ಮಾಡುವುದು ರಾಜ್ಯ ಸರ್ಕಾರದ ಇಲಾಖೆ ಮತ್ತು ಸುಪ್ರೀಂ ಕೋರ್ಟ್ ರಚಿಸಿದ ಕಮೀಟಿಯ ಜವಾಬ್ದಾರಿ’ ಎಂದು ನುಣುಚಿಕೊಳ್ಳುತ್ತಾರೆ.

ಇಲ್ಲಿ ಇಲಾಖೆಗಳ, ಅಧಿಕಾರಿಗಳ, ರಾಜಕಾರಣಿಗಳ ದನಿ-ಧಾಟಿ ಬೇರೆಬೇರೆ. ಆದರೆ ಉದ್ದೇಶ ಒಂದೇ: ಗಣಿಲಾಬಿ ಹಿತಾಸಕ್ತಿಯ ರಕ್ಷಣೆ!

ಗಣಿ ಉದ್ಯಮದ ಹೆಸರಿನಲ್ಲಿ ಪ್ರಕೃತಿ ವಿನಾಶಕ್ಕೆ ಕೈಜೋಡಿಸಿದವರಲ್ಲಿ ಪಕ್ಷಭೇದವಿಲ್ಲ. ಈ ವಿಷಯದಲ್ಲಿ ಎಲ್ಲರದೂ ಸಮಾನ ಕೊಡುಗೆ. ಹಿಂದೆ ಜಿಂದಲ್ ಕಂಪನಿಗೆ ಅನುಕೂಲ ಕಲ್ಪಿಸಲು 20 ಕೋಟಿ ರೂಪಾಯಿ ಪಡೆದ ಆರೋಪ ಹೊತ್ತಿದ್ದರು ಬಿಜೆಪಿಯ ಯಡಿಯೂರಪ್ಪ. ಗಣಿ ಲೂಟಿಕೋರರ ವಿರುದ್ಧ ತೊಡೆತಟ್ಟಿದ ಸಮಾಜವಾದಿ ಸಿದ್ರಾಮಯ್ಯ ಮುಖ್ಯಮಂತ್ರಿಯಾದ ಕೂಡಲೇ ಕುಮಾರಸ್ವಾಮಿ ದೇವಸ್ಥಾನದ ರಕ್ಷಣೆಗಿದ್ದ 1978ರ ದೇವರಾಜ ಅರಸು ಸರ್ಕಾರದ ಸುತ್ತೋಲೆಯನ್ನು ಹಿಂಪಡೆದರು. ಆ ಮೂಲಕ ಗಣಿ ಉದ್ಯಮಗಳಿಗೆ ಪರವಾನಗಿ ನೀಡಲು ನೆರವಾದರು. ಇದೀಗ ಅತೀವ ದೈವಭಕ್ತ ಕುಟುಂಬದ ಎಚ್.ಡಿ.ಕುಮಾರಸ್ವಾಮಿ ಸರದಿ. ಇವರು ಪ್ರಮಾಣವಚನ ಸ್ವೀಕರಿಸಿದ ಒಂದೇ ವಾರದಲ್ಲಿ ಕುಮಾರಸ್ವಾಮಿ ದೇಗುಲಕ್ಕೆ ಕಂಟಕವಾಗಿರುವ ಹೆಚ್.ಟಿ. ಗಣಿಪ್ರದೇಶದಲ್ಲಿ ಅದಿರು ಉತ್ವಾದನೆಗೆ ಜಿಂದಲ್ ಕಂಪನಿಗೆ ಸರ್ಕಾರ ಪರವಾನಗಿ ಕೊಟ್ಟಿದೆ. ವಿಪರ್ಯಾಸವೆಂದರೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇವಸ್ಥಾನದ ಸುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಕುಮಾರಸ್ವಾಮಿ ಬೆಟ್ಟದ ಮೇಲಿನ ಅತ್ಯಾಚಾರ ತಡೆಯುತ್ತೇನೆಂದು ಇದೇ ದೇವಸ್ಥಾನದ ಆವರಣದಲ್ಲಿ ಕುಮಾರಸ್ವಾಮಿ ವಚನ ನೀಡಿದ್ದರು.

ಎಂ.ವೈ.ಘೋರ್ಪಡೆ ಪರಿಸರ ಕಾಳಜಿ

ಒಂದು ಹಂತದಲ್ಲಿ ಅಕ್ರಮ ಗಣಿಗಾರಿಕೆಯ ತೀವ್ರತೆಗೆ ಸ್ಕಂದಗಿರಿಯ ಐತಿಹಾಸಿಕ ಸ್ಮಾರಕಗಳು ಸೋರತೊಡಗಿದವು. ಇದರಿಂದ ತೀವ್ರವಾಗಿ ನೊಂದುಕೊಂಡ ಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕ, ಸಂಡೂರು ರಾಜವಂಶಸ್ಥ ಎಂ.ವೈ,ಘೋರ್ಪಡೆ ತೀವ್ರ ಕಳವಳಕ್ಕೊಳಗಾದರು. ಇದೇ ವೇಳೆ ಕುಮಾರಸ್ವಾಮಿ ದೇವಸ್ಥಾನದಿಂದ 350 ಮೀಟರ್ ದೂರದಲ್ಲಿ ತಮ್ಮ ಮಗ ಕಾರ್ತಿಕ್ ಘೋರ್ಪಡೆ ಗಣಿಗಾರಿಕೆ ಪ್ರಾರಂಭಿಸಿದ್ದು ಅವರ ಗಮನಕ್ಕೆ ಬಂತು. ಕೂಡಲೇ ಮಗನಿಗೆ ಗದರಿ, ತಿಳಿಹೇಳಿ ಗಣಿ ಬಂದ್ ಮಾಡಿಸಿದ್ದರು. ಅಲ್ಲದೆ 2005ರಲ್ಲಿ ದೇವಸ್ಥಾನದಿಂದ 600 ಮೀಟರ್ ಅಂತರದಲ್ಲಿರುವ ಗಣಿಯನ್ನು ನಿಲ್ಲಿಸುವಂತೆ ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ದೂರು ನೀಡಿದರು. ನವ ಶ್ರೀಮಂತ ಗಣಿ ಉದ್ಯಮಿಗಳು ಕುಮಾರಸ್ವಾಮಿ ದೇವರ ದರ್ಶನಕ್ಕೆ ಹೆಲಿಕಾಪ್ಟರ್‍ನಲ್ಲಿ ಆಗಮಿಸುವುದನ್ನು ಘೋರ್ಪಡೆ ವಿರೋಧಿಸಿದರು. ಇದರಿಂದ ಸ್ಮಾರಕದ ಸೌಂದರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ ಬೆಟ್ಟದಲ್ಲಿನ ವನ್ಯಜೀವಿಗಳ ನೆಮ್ಮದಿಗೆ ಭಂಗವಾಗುತ್ತದೆಂಬುದು ಅವರ ವಾದ. ಕೊನೆಗೆ ಭಾ.ಪ್ರಾ.ಪು. ಇಲಾಖೆ ಈ ದೇವಸ್ಥಾನದ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟವನ್ನು ನಿಷೇಧಿಸಿತು. ಇದು ಘೋರ್ಪಡೆ ಅವರ ಪರಿಸರದ ವಿಷಯದಲ್ಲಿ ರಾಜಿರಹಿತ ಕಾಳಜಿಗೆ ದ್ಯೋತಕ.

2013ರಲ್ಲಿ ಸುಪ್ರೀಂಕೋರ್ಟ್ ಹೊಸಪೇಟೆ ಜಂಬುನಾಥ ದೇವಸ್ಥಾನ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಗಣಿ ಪ್ರದೇಶದಲ್ಲಿನ ಅವಸಾನದ ಅಂಚಿನಲ್ಲಿರುವ ಸಂರಕ್ಷಿತ ಸ್ಮಾರಕಗಳಿಗೆ ಗಣಿಯಿಂದಾಗುವ ಹಾನಿಯನ್ನು 9 ತಿಂಗಳಲ್ಲಿ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಕಮಿಟಿಗೆ ನಿರ್ದೇಶನ ನೀಡಿತ್ತು. ಹಾಗೆಯೇ ಕೇಂದ್ರದ ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಗಳು ತಮ್ಮದೇ ಆದ ಒಂದು ಕಮಿಟಿಯನ್ನು ರೂಪಿಸಿಕೊಂಡು ಗಣಿ ಪ್ರದೇಶದಲ್ಲಿರುವ ಸ್ಮಾರಕಗಳ ರಕ್ಷಣೆಯನ್ನು ಮಾಡುವಂತೆ ಆದೇಶಿಸಿತ್ತು. ಅದರಂತೆ 2014ರೊಳಗಾಗಿ ಗಣಿ ಪ್ರದೇಶದಲ್ಲಿರುವ ಸಂರಕ್ಷಿತ ಸ್ಮಾರಕಗಳನ್ನು ಗಣಿಗಳಿಂದ ರಕ್ಷಿಸುವ ಅಧ್ಯಯನ ಕಾರ್ಯ ಮುಗಿಯಬೇಕಿತ್ತು. ಆದರೆ 5 ವರ್ಷಗಳು ಕಳೆದರೂ ಸ್ಮಾರಕಗಳ ಅಧ್ಯಯನ ತಂಡಕ್ಕೆ ಸರಿಯಾಗಿ ಅಧಿಕಾರಿಗಳನ್ನು ನೇಮಿಸದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಮಾರಕಗಳ ಬದಲು ಗಣಿಮಾಲೀಕರ ರಕ್ಷಣೆಗೆ ನಿಂತಿವೆ.

ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿರುವ ಕುಮಾರಸ್ವಾಮಿ ಐತಿಹಾಸಿಕ ಸ್ಮಾರಕವು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕದ ಪಟ್ಟಿಯಲ್ಲಿದೆ. ತಜ್ಞರ ತಂಡವು ಅಧ್ಯಯನಕ್ಕೆ ಬಂದು ವರದಿಯನ್ನು ನೀಡುವವರೆಗೆ ಸ್ವಾಮಿಮಲೈ ಬೆಟ್ಟದಲ್ಲಿ ಯಾವುದೇ ತೆರನಾದ ಗಣಿಗಾರಿಕೆಗಳಿಗೆ ಪರವಾನಿಗೆ ನೀಡಬಾರದೆಂದು ಭಾ.ಪ್ರಾ.ಪು. ಇಲಾಖೆಯ ಅಧೀಕ್ಷಕರು ಬೆಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ನವೆಂಬರ್ 2015ರಲ್ಲಿ ಪತ್ರ ಬರೆದಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳದ ಗಣಿ ಇಲಾಖೆಯು ಗಣಿಗಾರಿಕೆಗೆ ಹಸಿರು ನಿಶಾನೆ ತೋರಿಸಿದೆ.

* ಲೇಖಕರು ಅಪಾರ ಪರಿಸರ ಪ್ರೀತಿಯುಳ್ಳ ಸಾಮಾಜಿಕ ಹೋರಾಟಗಾರರು. ಜನ ಸಂಗ್ರಾಮ ಪರಿಷತ್ ಸಂಘಟನೆಯ ಕ್ರಿಯಾಶೀಲ ಪದಾಧಿಕಾರಿ. ಜನಪರ ಬರವಣಿಗೆ ಹವ್ಯಾಸ.

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

June 2018

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

May 2018

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

May 2018

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

April 2018

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

April 2018

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

March 2018

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

March 2018

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

February 2018