2nd ಜುಲೈ ೨೦೧೮

ಹೋರಾಟಗಾರ ಅಭ್ಯರ್ಥಿ
ಚುನಾವಣಾ ಬವಣೆ

ಶಾಂತಲಾ ದಾಮ್ಲೆ

ಭ್ರಷ್ಟ ರಾಜಕಾರಣದ ಬಗ್ಗೆ ಜನರ ಕೋಪತಾಪಗಳಿಗೆ ಕೊರತೆಯೇನಿಲ್ಲ. ಆದಾಗ್ಯೂ ಈ ವ್ಯವಸ್ಥೆಗೆ ಪರ್ಯಾಯ ನೀಡಲು ಮುಂದಾಗುವ ಹೋರಾಟಗಾರ ಅಭ್ಯರ್ಥಿ-ಸಂಘಟನೆಗಳನ್ನು ಮತದಾರರು ಏಕೆ ಬೆಂಬಲಿಸುವುದಿಲ್ಲ? ಕಳೆದ ಬಾರಿ ಸ್ವತಃ ಸೋಲುಂಡ ಅಭ್ಯರ್ಥಿಯ ಸ್ವಾನುಭವದ ಅವಲೋಕನ ಇಲ್ಲಿದೆ.

ನಾನು, ಅಶ್ವಿನ್ ಮಹೇಶ್, ರವಿ ಕೃಷ್ಣಾರೆಡ್ಡಿ ಸೇರಿದಂತೆ ಲೋಕಸತ್ತಾ ಪಕ್ಷದ ಕೆಲವು ಅಭ್ಯರ್ಥಿಗಳು 2013ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ 5000ದಿಂದ 12000 ಮತಗಳನ್ನು ಗಳಿಸಿದಾಗ ಸಾಮಾಜಿಕ ಹೋರಾಟಗಾರರಲ್ಲಿ ಸಣ್ಣ ಭರವಸೆ ಮೂಡಿತ್ತು. ಅಂತೆಯೇ, 2018ರಲ್ಲಿ ಆಪ್ ಅಭ್ಯರ್ಥಿಗಳು ಮತ್ತು ಪಕ್ಷೇತರರಾಗಿ ಸ್ಪರ್ಧಿಸಿದ್ದ ರವಿಕೃಷ್ಣಾರೆಡ್ಡಿ -ಇವರಲ್ಲಿ ಒಬ್ಬಿಬ್ಬರು ಗೆಲ್ಲಬಹುದೆಂದು ಭಾವಿಸಿದವರಿಗೆ ಭ್ರಮನಿರಸನವಾಗಿದೆ. ಇವರ ಪೈಕಿ ಯಾವ ಅಭ್ಯರ್ಥಿಗೂ 3000 ಮತಗಳು ಸಹ ಬಾರದಿರುವುದು ಆಘಾತ ತಂದಿದೆ; ಸಾಮಾಜಿಕ ಹೋರಾಟಗಾರರಿಗೆ ರಾಜಕೀಯದಲ್ಲಿ ಅವಕಾಶವೇ ಇಲ್ಲವೇನೋ ಎಂಬ ಪ್ರಶ್ನೆ, ಕಳವಳ, ನಿರಾಶೆಗೆ ಕಾರಣವಾಗಿದೆ.

ಹಾಗೆಂದು ಸಂಪೂರ್ಣ ನಿರಾಶರಾಗಬೇಕಿಲ್ಲ. ಪರಿವರ್ತನೆಯ ‘ಸಾಧ್ಯತೆ’ ಖಂಡಿತಾ ಇದೆ ಎಂದು ದೆಹಲಿಯಲ್ಲಿ ಆಪ್ ಮಾಡಿ ತೋರಿಸಿದೆ. ಪಂಜಾಬ್ ರಾಜ್ಯದಲ್ಲಿ ಸಹಾ 20 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ, ಪರಿವರ್ತನೆಯ ಕನಸನ್ನು ಜೀವಂತವಾಗಿಡುವಲ್ಲಿ ಪಾತ್ರ ವಹಿಸಿದೆ. ‘ಸಾಧ್ಯತೆ’ ಇದ್ದರೂ ಪರಿವರ್ತನೆಯ ‘ಸಂಭವನೀಯತೆ’ ಕಡಿಮೆಯಿದೆ ಎಂಬುದನ್ನು ಒಪ್ಪಲೇಬೇಕು. ಈ ಹಿನ್ನೆಲೆಯಲ್ಲಿ ಒಬ್ಬ ಪಕ್ಷೇತರ/ಹೋರಾಟಗಾರ ಅಭ್ಯರ್ಥಿಯ ಪೂರ್ವತಯಾರಿ ಹೇಗಿರಬೇಕು ಮತ್ತು ಎಡವಿದ್ದೆಲ್ಲಿ ಎಂದು ವಿಶ್ಲೇಷಿಸಬೇಕಿದೆ.

ಆಯಾ ಕ್ಷೇತ್ರದಲ್ಲಿ ಈಗಾಗಲೇ ನೆಲೆಗೊಂಡ ಪಕ್ಷಗಳಿಗೆ ಅವರದೇ ಆದ ದೃಢೀಕೃತ ಶೇ.10-20 ಮತದಾರರಿರುತ್ತಾರೆ. ಅಲ್ಲದೆ ಒಂದೆರಡು ತಿಂಗಳಿನಲ್ಲಿ ಎಲ್ಲರನ್ನೂ ತಲುಪಲು ಬೆಂಬಲಿಗರ ಪಡೆಯಿರುತ್ತದೆ. ಉದಾಹರಣೆಗೆ, ಆರ್.ಎಸ್.ಎಸ್. ಕಾರ್ಯಕರ್ತರು ಅಧಿಕೃತವಾಗಿ ಬಿಜೆಪಿ ಸದಸ್ಯರಲ್ಲದಿದ್ದರೂ ನಿರಂತರವಾಗಿ ಸ್ಥಳೀಯ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವುದರಿಂದ ಚುನಾವಣೆಯ ಕೊನೆಯ ಎರಡು ತಿಂಗಳಿನಲ್ಲಿ ಅವರನ್ನು ಚುನಾವಣಾ ತಂಡವಾಗಿ ಸಜ್ಜುಗೊಳಿಸುವುದು ಆ ಪಕ್ಷಕ್ಕೆ ಸುಲಭ. ಕಾಂಗ್ರೆಸ್, ಜೆಡಿಸ್ ಪಕ್ಷಗಳಿಗೂ ಅವರದೇ ಆದ ಬೆಂಬಲಿಗರ ಪಡೆಯಿದೆ. ಅದರಂತೆ ಅನೇಕ ಜಾತಿ, ಮತಗಳ ಸಂಘಟನೆಗಳು ಬೇರೆಬೇರೆ ಕಾರಣಗಳ ಮೂಲಕ ನಿರಂತರ ಸಂಪರ್ಕದಲ್ಲಿರುವುದರಿಂದ, ಆ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸುವುದು ನೆಲೆಗೊಂಡ ಪಕ್ಷಗಳಿಗೆ ಸುಲಭ.

ಸಾಮಾನ್ಯವಾಗಿ ಪಕ್ಷೇತರ ಮತ್ತು ಹೊಸ ಪಕ್ಷಗಳ ಅಭ್ಯರ್ಥಿಗಳಿಗೆ ದೃಢೀಕೃತ ಮತದಾರರು ಇಲ್ಲದ ಕಾರಣ ಮೊದಲ 2000 ಮತಗಳ ಭರವಸೆ ಗಳಿಸುವುದೇ ಕಷ್ಟ. ಕನಿಷ್ಟ 20 ಕಾರ್ಯಕರ್ತರ ತಂಡ ಚುನಾವಣೆಗೆ 6 ತಿಂಗಳ ಮುಂಚೆ ಸಜ್ಜಾಗಿದ್ದರೆ ಮಾತ್ರ ಮುಂದಿನ ಹೆಜ್ಜೆ ಇಡುವುದು ಸೂಕ್ತ. ಚುನಾವಣೆಗೆ 4-5 ತಿಂಗಳು ಇರುವಾಗ ತಂಡದ ಸಂಖ್ಯೆ 100ಕ್ಕೆ ಮುಟ್ಟಿದರೆ ಮಾತ್ರ ಮುಂದಿನ 8000 ಮತಗಳನ್ನು ಗಳಿಸುವ ಎರಡನೇ ಹಂತವನ್ನು ತಲುಪಲು ಸಾಧ್ಯವಾಗುತ್ತದೆ. ಚುನಾವಣೆಯ ಕೊನೆಯ ಎರಡು ವಾರಗಳಲ್ಲಿ ಕನಿಷ್ಟ 800 ಬೆಂಬಲಿಗರು ಅಭ್ಯರ್ಥಿಯ ಪರವಾಗಿ ತಲಾ 100 ಕುಟುಂಬಗಳನ್ನು ಭೇಟಿಯಾಗಿ ಸಮರ್ಪಕವಾಗಿ ಮತಯಾಚನೆ ಮಾಡಿದರೆ ಮಾತ್ರ ಠೇವಣಿ ಉಳಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ನಿಜಕ್ಕೂ ಗೆಲ್ಲುವ ಸಾಧ್ಯತೆ ಹೆಚ್ಚಾಗಲು ಕನಿಷ್ಟ 500 ಪೂರ್ಣಕಾಲಿಕ ಕಾರ್ಯಕರ್ತರು 3 ತಿಂಗಳ ಕಾಲ ಸಂಘಟಿತವಾಗಿ ಪ್ರತಿದಿನ ಪ್ರಚಾರ ಮಾಡಬೇಕಾಗುತ್ತದೆ. ಈ ಸಂಕಲನದ ಜೊತೆಗೆ ಗುಣಾಕಾರದ ಪರಿಣಾಮ ತರಬಲ್ಲ, ಅಂದರೆ ತಮ್ಮತಮ್ಮ ಬಡಾವಣೆ ಅಥವಾ ಗುಂಪಿನ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವಂತಹ ನೂರಾರು ಬೆಂಬಲಿಗರ ಪಡೆಯೊಂದನ್ನು ಕಟ್ಟಬೇಕಾಗುತ್ತದೆ. ಇವೆರಡು ಸೇರಿದಾಗ ಮಾತ್ರ ಘಾತೀಯ ಪರಿಣಾಮ/ಅಲೆ ಸೃಷ್ಟಿಸಲು ಸಾಧ್ಯ.

ಮತಯಾಚನೆ ಯಶಸ್ವಿಯಾಗಲು ಒಬ್ಬ ಅಭ್ಯರ್ಥಿ ಕನಿಷ್ಟ 7 ಬಾರಿ ಪ್ರತಿ ಮತದಾರನ ಗಮನ ಸೆಳೆದಿರಬೇಕು ಎಂಬುದು ತಜ್ಞರ ಅಭಿಪ್ರಾಯ. ಇದನ್ನು ಸಾಧಿಸುವ ಬಗ್ಗೆ ಯೋಚಿಸಿ, ಯೋಜಿಸಿ, ನಿರ್ವಹಿಸುವುದು ಅತ್ಯಗತ್ಯ. ಎಂಟ್ಹತ್ತು ಪೂರ್ಣಾವಧಿ ಜನರಿರುವ ಸಮರ್ಥ ‘ಚುನಾವಣಾ ಯೋಜನಾ ತಂಡ’ವನ್ನು ಚುನಾವಣೆಗೆ ಒಂದು ವರ್ಷ ಮೊದಲೇ ಕಟ್ಟಬೇಕು. ಬಹುತೇಕ ಅಭ್ಯರ್ಥಿಗಳಿಗೆ ಒಂದು ವರ್ಷವಿರಲಿ, ಆರು ತಿಂಗಳು ಸಹ ಪೂರ್ಣಕಾಲಿಕ ಕಾರ್ಯಕರ್ತರು ಸಿಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಹಣದ ಕೊರತೆ. ಒಂದು ವರ್ಷ ತಮ್ಮ ಕೆಲಸಗಳನ್ನು ಬಿಟ್ಟು ತಮ್ಮದೇ ಖರ್ಚಿನಲ್ಲಿ ಇಡೀ ದಿನ ಕೆಲಸ ಮಾಡಲು ಬೇರೆಯವರಿಗಿರಲಿ, ಅಭ್ಯರ್ಥಿಯ ಮನೆಯವರಿಗೇ ಸಾಧ್ಯವಾಗುವುದಿಲ್ಲ. ಜೊತೆಗೆ ಸಂಬಳ ಕೊಟ್ಟರೂ ನುರಿತ ಸಿಬ್ಬಂದಿ ಸಿಗುವುದು ಕಷ್ಟ. ಮುಖ್ಯವಾಗಿ ಸರಿಯಾದ ‘ಕ್ಯಾಂಪೇನ್ ಮ್ಯಾನೇಜರ್’ ಒಬ್ಬರನ್ನು ನೇಮಕ ಮಾಡಬೇಕು. ಬಹುತೇಕ ಅಭ್ಯರ್ಥಿಗಳಿಗೆ ಇಷ್ಟೆಲ್ಲಾ ಮಾಡಬೇಕೆಂದೇ ಗೊತ್ತಿರುವುದಿಲ್ಲ. ಅನೇಕ ವಿದ್ಯಾವಂತ ಅಭ್ಯರ್ಥಿಗಳು ತಾವೇ ‘ಕ್ಯಾಂಪೇನ್ ಮ್ಯಾನೇಜರ್’ ಆಗಬಹುದು ಎಂದುಕೊಳ್ಳುತ್ತಾರೆ. ಇದು ಬಹುದೊಡ್ಡ ತಪ್ಪುನಡೆ.

ಇನ್ನು ಹಣದ ವಿಷಯಕ್ಕೆ ಬಂದರೆ ಚುನಾವಣಾ ಆಯೋಗ ನಿಗದಿ ಮಾಡಿರುವ ಖರ್ಚಿನ ಮಿತಿ (ಈ ಬಾರಿ 28 ಲಕ್ಷ) ನಾಮಪತ್ರ ಸಲ್ಲಿಸುವ ದಿನದಿಂದ ಅನ್ವಯವಾಗುತ್ತದೆ ಮತ್ತು ಮತ ಖರೀದಿಯಂತಹ ಅಕ್ರಮಗಳನ್ನು ಮಾಡದಂತಹ ಅಭ್ಯರ್ಥಿಗಳ ಪ್ರಚಾರಕ್ಕೆ ಅಷ್ಟು ಹಣ ಕೊನೆಯ ಒಂದು ತಿಂಗಳಿಗೆ ಸಾಕಾಗುತ್ತದೆ. ಪಕ್ಷೇತರ ಅಭ್ಯರ್ಥಿಗಳು ಸುಮಾರು ಒಂದು ವರ್ಷ ಮೊದಲೇ ಚುನಾವಣಾ ಅಭಿಯಾನ ಶುರುಮಾಡಬೇಕಾದ ಅನಿವಾರ್ಯತೆಯಿಂದ ಒಟ್ಟು ತಯಾರಿಗೆ ಸರಿಸುಮಾರು ಈ ಮಿತಿಯ ದುಪ್ಪಟ್ಟು ಹಣ ಬೇಕಾಗುತ್ತದೆ. 3-4 ಹಂತಗಳ ಪ್ರಚಾರವನ್ನು ಚುನಾವಣೆ ಘೋಷಣೆಗೆ ಮೊದಲೇ ಸೂಕ್ತವಾಗಿ ಮಾಡದೇ, ಕಡಿಮೆ ಹಣ ಖರ್ಚು ಮಾಡುವ, ಕಡಿಮೆ ಕಾಲ ಚುನಾವಣಾ ತಯಾರಿ ಮಾಡುವ ಹೊಸ ಅಭ್ಯರ್ಥಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಇನ್ನು ಅಷ್ಟು ಹಣ ಸಮಾಜ ಸುಧಾರಣೆಯ ಉದ್ದೇಶದಿಂದ ರಾಜಕೀಯ ಪ್ರವೇಶಿಸುವ ಅಭ್ಯರ್ಥಿಗಳ ಬಳಿ ಇರುವುದು ಕಡಿಮೆ. ಹೀಗಾಗಿ ಬೆಂಬಲಿಗರಿಂದ ದೇಣಿಗೆ ಸಂಗ್ರಹಿಸುವುದಕ್ಕಾಗಿಯೇ ವಿಶೇಷ ಯೋಜನೆ, ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತದೆ.

ಸ್ಪಲ್ಪ ಮಟ್ಟಿನ ವರ್ಚಸ್ಸು, ಜನಪ್ರಿಯತೆ ಇರುವ ಅಭ್ಯರ್ಥಿಗಳು ಕೆಲವೊಮ್ಮೆ ವ್ಯವಸ್ಥಿತ ತಯಾರಿಯ ಅವಶ್ಯಕತೆ ಇಲ್ಲ ಎಂದು ನಂಬಿರುತ್ತಾರೆ. ನಿಜಕ್ಕೂ ಜನಪ್ರಿಯತೆ ಎಂಬುದು ಮರೀಚಿಕೆ. ಕ್ಷೇತ್ರದ ಸುಮಾರು ಅರ್ಧಕ್ಕೂ ಹೆಚ್ಚು ಮತದಾರರು ಸೀರಿಯಲ್, ಕ್ರಿಕೆಟ್, ಸಿನಿಮಾ ಹಾಡುಗಳನ್ನು ಬಿಟ್ಟರೆ ಟಿವಿಯಲ್ಲಿ ಬೇರೆ ವಿಷಯಗಳನ್ನು ನೋಡುವುದೇ ಇಲ್ಲ! ಏಕೆಂದರೆ ಬಹಳಷ್ಟು ಜನರಿಗೆ ರಾಜಕೀಯ ಪರಿವರ್ತನೆ, ಅಧಿಕಾರ, ಆಡಳಿತ, ಸಾಮಾಜಿಕ ಸುಧಾರಣೆ ಇವೆಲ್ಲಾ ಆಸಕ್ತಿಯ ವಿಷಯವೇ ಅಲ್ಲ!

ಇನ್ನು ಸಾಮಾಜಿಕ ಮಾಧ್ಯಮದ ಜನಪ್ರಿಯತೆ, ವಿದೇಶಗಳಲ್ಲಿ ನೆಲೆಸಿರುವ ಬೆಂಬಲಿಗರಿಂದ ದೇಣಿಗೆ ಸಂಗ್ರಹಕ್ಕೆ ಹೆಚ್ಚು ಸಹಾಯವಾಗುತ್ತದೆಯೇ ಹೊರತು ನಿರ್ದಿಷ್ಟ ಕ್ಷೇತ್ರದ ಜನತೆಯ ಮತಯಾಚನೆಗೆ ಸಹಾಯವಾಗುವುದಿಲ್ಲ. ವಾಟ್ಸಾಪ್ ಮೂಲಕ ಪರಿಣಾಮಕಾರಿಯಾಗಿ ಮತದಾರರನ್ನು ತಲುಪಲು ಸಾಧ್ಯವಿದೆಯಾದರೂ, ಸರಿಯಾದ ರೀತಿಯಲ್ಲಿ ಬಳಸಲು ನಿರ್ದಿಷ್ಟ ಜವಾಬ್ದಾರಿ ಹೊತ್ತ ತಂಡವೇ ಬೇಕಾಗುತ್ತದೆ. ಪಕ್ಷೇತರ ಅಭ್ಯರ್ಥಿಗಳಿಗೆ ಸಾಮಾಜಿಕ ಮಾಧ್ಯಮಕ್ಕೆ ಮುಡಿಪಾಗಿಡುವಷ್ಟು ಕಾರ್ಯಕರ್ತರು ಸಿಗುವುದೇ ಅಪರೂಪ.

ಕ್ಯಾಂಪೇನ್ ಪ್ಲಾನ್ ಎಂದರೇನು?

ಪಕ್ಷೇತರ ಮತ್ತು ಹೊಸ ಪಕ್ಷಗಳ ಅಭ್ಯರ್ಥಿಗಳಲ್ಲಿ ಹೆಚ್ಚಿನವರಿಗೆ ‘ಕ್ಯಾಂಪೇನ್ ಪ್ಲಾನ್’ ತಯಾರಿಸಬೇಕು ಎಂಬ ಅರಿವು ಸಹ ಇಲ್ಲ. ಸಾಮಾಜಿಕ ಹೋರಾಟಗಾರರೂ ಸೇರಿದಂತೆ ಅನೇಕರು ಈ ಹಂತದಲ್ಲಿಯೇ ಎಡವುತ್ತಾರೆ. ‘ಕ್ಯಾಂಪೇನ್’ ಗೆ ಸೂಕ್ತವಾದ ಕನ್ನಡ ಪದವೂ ಚಾಲ್ತಿಯಲ್ಲಿಲ್ಲ. ‘ಅಭಿಯಾನ’ ಎನ್ನಬಹುದಾದರೂ ಅನೇಕರು ಚಳವಳಿ, ಹೋರಾಟದ ರೀತಿಯಲ್ಲಿ ಯೋಜಿಸುವುದೇ ‘ಕ್ಯಾಂಪೇನ್ ಪ್ಲಾನ್’ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಇನ್ನಿತರರು ಕ್ಯಾಂಪೇನ್ ಮತ್ತು ‘ಕ್ಯಾನ್ವಾಸ್’ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸುತ್ತಾರೆ. ‘ಕ್ಯಾನ್ವಾಸ್’ ಎಂದರೆ ‘ಮತಯಾಚನೆ’ -ಅದು ಚುನಾವಣೆ ಪ್ರಚಾರದ ಒಂದು ಭಾಗ ಮಾತ್ರ.

ಗೆಲ್ಲಲು ಬೇಕಾದ ಮತಗಳೆಷ್ಟು ಎಂದು ಅರಿಯುವುದು ಯೋಜನೆ ತಯಾರಿಕೆಯ ಮೊದಲ ಹೆಜ್ಜೆ. ನಿಗದಿತ ಮತಗಳಿಕೆಗೆ ಪ್ರಚಾರತಂಡದಲ್ಲಿ ಕನಿಷ್ಟ ಎಷ್ಟು ಜನರಿರಬೇಕು ಎಂದು ಲೆಕ್ಕ ಹಾಕುವುದು ಎರಡನೇ ಹೆಜ್ಜೆ. ಒಟ್ಟು ಚುನಾವಣಾ ತಯಾರಿಯ ಸಂಕೀರ್ಣತೆಯನ್ನು ಪೂರ್ಣವಾಗಿ ಅರ್ಥಮಾಡಿಕೊಂಡು. ಯೋಜನಾ ತಂಡ, ಪ್ರಚಾರ ಕಾರ್ಯತಂತ್ರ, ಕಾರ್ಯಕರ್ತರ ನೇಮಕ, ಮತಯಾಚನೆ, ಬಜೆಟ್ ಇತ್ಯಾದಿ ವಿವರಗಳುಳ್ಳ ಲಿಖಿತ ಕಾರ್ಯಯೋಜನೆಗೆ ‘ಕ್ಯಾಂಪೇನ್ ಪ್ಲಾನ್’ ಎನ್ನಬಹುದು.

ಚುನಾವಣಾ ಆಯೋಗದ ನಿಯಮಗಳೂ ಹೋರಾಟಗಾರ ಅಭ್ಯರ್ಥಿಗಳಿಗೆ ಪೂರಕವಾಗಿಲ್ಲ. ಈ ನಿಟ್ಟಿನ ಮುಖ್ಯ ಸಮಸ್ಯೆ ಚಿಹ್ನೆಯನ್ನು ನಿಗದಿ ಮಾಡಿದ ನಂತರ ಕೇವಲ 18-20 ದಿನಗಳು ಮಾತ್ರ ಪ್ರಚಾರಕ್ಕೆ ಸಿಗುವುದು. ಚಿಹ್ನೆ ಸಿಗುವ ಮುಂಚೆಯೇ ಮತದಾರರನ್ನು ಸಾಕಷ್ಟು ಸೆಳೆದು, ಚಿಹ್ನೆ ಸಿಕ್ಕ ನಂತರ ಮತ್ತೊಮ್ಮೆ ಭೇಟಿಯಾಗಬೇಕು. ಪ್ರತಿ ಬೂತಿನಲ್ಲಿ 5-6 ಕಾರ್ಯಕರ್ತರು ತಯಾರಾಗಿರದಿದ್ದರೆ, ಗೆಲ್ಲಲು ಬೇಕಾದ 200 ಮತದಾರರ ಮನೆಗಳನ್ನು ಗುರುತಿಸದಿದ್ದರೆ ಗೆಲ್ಲುವುದಿರಲಿ, ಗೌರವಯುತ ಮತ ಗಳಿಸಲೂ ಸಾಧ್ಯವಿಲ್ಲ.

ಇಷ್ಟೆಲ್ಲಾ ಸರಿಯಾಗಿ ನಿರ್ವಹಿಸುವುದು ಅನಿವಾರ್ಯವಷ್ಟೇ ಹೊರತು ಗೆಲ್ಲುವ ಸಾಧ್ಯತೆಯನ್ನು ತಲುಪಲು ಇವಿಷ್ಟೇ ಸಾಲದು. ಕೆಲವು ಕ್ಷೇತ್ರಗಳಲ್ಲಿ ಜನರಿಗೆ ವಿವಿಧ ಸಮಸ್ಯೆಗಳಿರುತ್ತವೆ. ಜನರ ಮನಸ್ಸಿನಲ್ಲಿ ಭರವಸೆ ಹುಟ್ಟಿಸುವಂತಹ ನಿರ್ದಿಷ್ಟ ಸಭೆಗಳನ್ನು ಮಾಡಬೇಕಾಗುತ್ತದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮತ ಬರುವ ಸಾಧ್ಯತೆ ಹೆಚ್ಚಾಗಿರುವ ಬಡಾವಣೆಗಳಲ್ಲಿ, ನಿರ್ದಿಷ್ಟ ಗುಂಪುಗಳೊಂದಿಗೆ ಹೆಚ್ಚು ಸಮಯ, ಗಮನ ಹರಿಸಬೇಕಾಗುತ್ತದೆ. ಚುನಾವಣೆ ಘೋಷಣೆಯಾಗುವ ಹೊತ್ತಿಗೆ ತಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆಯೆಂದು ಮತದಾರರಿಗೆ ನಂಬಿಕೆ ಬಂದರೆ ಮಾತ್ರ ಹೆಚ್ಚಿನ ಮತಗಳನ್ನು ಗಳಿಸಲು ಸಾಧ್ಯ. ಇಲ್ಲದಿದ್ದರೆ, ಅಷ್ಟು ದಿನ ಬೆಂಬಲಿಸಿದವರಲ್ಲಿ ಅರ್ಧದಷ್ಟು ಜನರೂ ಮತ ಹಾಕಲು ಹಿಂಜರಿಯುತ್ತಾರೆ. ಅಭ್ಯರ್ಥಿಗಳ ಅಥವಾ ಪಕ್ಷಗಳ ನಿಯಂತ್ರಣದಲ್ಲಿರದ ಹಲವು ಆಗುಹೋಗುಗಳು ಸಹಾ ಕ್ಷೇತ್ರದ ಮತದಾರರ ನಿರ್ಣಯದ ಮೇಲೆ ಪರಿಣಾಮ ಬೀರುತ್ತವೆ.

ಈಗ ನನ್ನ ಮುಂದಿರುವ ಪ್ರಶ್ನೆ :

ನಾನು ಆಕ್ರೋಶ, ಅಸಹನೆಗಳಿಲ್ಲದ ಮೆತ್ತನೆಯ ಧ್ವನಿಯ ವ್ಯಕ್ತಿಯಾಗಬೇಕೋ ಅಥವಾ ಅದೇ ಕೆಚ್ಚು, ಆತ್ಮಗೌರವದಿಂದ ನನಗನ್ನಿಸಿದ ಕೆಟ್ಟದ್ದರ ವಿರುದ್ಧ ಅಸಹನೆಯಿಂದ ಗಟ್ಟಿ ಧ್ವನಿಯಲ್ಲಿ ಮುನ್ನುಗ್ಗಬೇಕೊ?

-ರವಿ ಕೃಷ್ಣಾರೆಡ್ಡಿ
(ಜಯನಗರದಲ್ಲಿ ಸೋತ ಹೋರಾಟಗಾರ)

ಚುನಾವಣಾ ತಯಾರಿ ಬ್ರಹ್ಮವಿದ್ಯೆಯಲ್ಲ. ಆದರೆ ನಮ್ಮ ದೇಶದಲ್ಲಿ ‘ಚುನಾವಣಾ ಯೋಜಕರು’ ಎಂಬ ಸರಿಯಾದ ಹುದ್ದೆಗಳು ಸೃಷ್ಟಿಯಾಗಿಲ್ಲ. ಪಾಶ್ಯಾತ್ಯ ದೇಶಗಳಲ್ಲಿ ಅಭ್ಯರ್ಥಿ, ಕ್ಯಾಂಪೇನ್ ಮ್ಯಾನೇಜರ್, ದೇಣಿಗೆ ಎತ್ತುವ ವಿಧಾನ, ಮತಯಾಚನೆ ವಿಧಾನ ಇವನ್ನೆಲ್ಲಾ ಕಲಿಸುವ ತರಬೇತಿ ಶಿಬಿರಗಳಿವೆ, ಅನೇಕ ಪುಸ್ತಕಗಳಿವೆ. ಅಲ್ಲಿ ತಾವು ನಂಬಿರುವ ಮೌಲ್ಯಗಳನ್ನು ಬೆಂಬಲಿಸುವ ಅಭ್ಯರ್ಥಿಗೆ ದೇಣಿಗೆ ಎತ್ತಿ ಸಹಾಯ ಮಾಡುವುದಕ್ಕೆ ಹಲವಾರು ಸಂಸ್ಥೆಗಳು ಮುಂದೆ ಬರುತ್ತವೆ. ಯೇಲ್ ಎಂಬ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಂತೂ ಮಹಿಳೆಯರಿಗೆಂದೇ ವಿಶೇಷ ತರಬೇತಿ ಶಿಬಿರ ನಡೆಸುತ್ತದೆ. ನಮ್ಮಲ್ಲಿ ಇಂತಹ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆದರೆ ಮಾತ್ರ ಸಾಮಾಜಿಕ ಕಾರ್ಯಕರ್ತರು, ಆಪ್ ನಂತಹ ಪಕ್ಷಗಳು ಗೆಲ್ಲುವ ಸಂಭವನೀಯತೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿ ಸೃಷ್ಟಿಯಾದಾಗ, ಈಗ ಚಾಲ್ತಿಯಲ್ಲಿರುವ ಪಕ್ಷಗಳು ಸಹ ತಮ್ಮ ಹಾದಿ ಬದಲಿಸಿಕೊಂಡು ಹೊಸ ಕಾಲದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲು ಶುರುಮಾಡುತ್ತವೆ. ಅಂತೆಯೇ ರಾಜಕೀಯ ಪರಿವರ್ತನೆಯ ಪ್ರಯತ್ನಗಳು ನಿಲ್ಲಬಾರದು; ನಿರಾಶರಾಗದೇ, ಜಾಣ್ಮೆ, ಕೌಶಲ್ಯಗಳನ್ನು ಅಳವಡಿಸಿಕೊಂಡು ಸಮಾನ ಮನಸ್ಕರೊಡನೆ ಕೈಜೋಡಿಸಿ ಮುಂದುವರೆಯುವುದು ಅನಿವಾರ್ಯ.

* ಲೇಖಕರು ಸಾಮಾಜಿಕ ಚಿಂತಕಿ, ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಹಸಂಚಾಲಕಿ, ‘ಅವಳ ಹೆಜ್ಜೆ’ ಸಾಮಾಜಿಕ ಉದ್ಯಮದ ಸ್ಥಾಪಕಿ. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ., ಅಮೆರಿಕಾದ ವರ್ಜೀನಿಯಾ ಯುನಿವರ್ಸಿಟಿಯಿಂದ ಎಂ.ಬಿ.ಎ. ಪದವಿ ಪಡೆದಿದ್ದಾರೆ. ಭಾರತದಲ್ಲಿ 4 ವರ್ಷ, ಅಮೆರಿಕದಲ್ಲಿ 12 ವರ್ಷ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿ ರಾಜಕೀಯ-ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಭಾರತಕ್ಕೆ ಮರಳಿದ್ದಾರೆ. 2013ರಲ್ಲಿ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮