2nd ಜುಲೈ ೨೦೧೮

ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ.:
ಸಾಧ್ಯತೆ ಮತ್ತು ಸಮಸ್ಯೆ

ಡಾ.ರಂಗನಾಥ ಕಂಟನಕುಂಟೆ

ಪೂರ್ವ ಪ್ರಾಥಮಿಕ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ತೆರೆಯುವ ಯೋಚನೆ ಸರಿಯಾಗಿಯೇ ಇದೆ. ಆದರೆ ಸರ್ಕಾರ ಸೂಕ್ತ ಸಿದ್ಧತೆಯೊಂದಿಗೆ, ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಿ ಜಾರಿಗೊಳಿಸುವುದು ಉತ್ತಮ. ಅದಿಲ್ಲದೆ ಕೇವಲ ಬೋರ್ಡುಗಳನ್ನು ನೇತುಹಾಕುವುದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುವುದಿಲ್ಲ.

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ.) ತರಗತಿಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗೆಯೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವುದಾಗಿಯೂ ಹೇಳಿದ್ದಾರೆ. ಸದ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಂದರ್ಭದಲ್ಲಿ ಇದನ್ನು ಸ್ವಾಗತಿಸದೆ ಬೇರೆ ಮಾರ್ಗವಿಲ್ಲ.

ಈ ಹಿಂದೆ ಒಂದನೆಯ ತರಗತಿಯಿಂದ ಇಂಗ್ಲಿಷ್ ಅನ್ನು ಕಲಿಸುವ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಾಗ ಅದನ್ನು ವಿರೋಧಿಸಲಾಗಿತ್ತು. ಆದರೆ ಅಂತಹ ಪರಿಸ್ಥಿತಿ ಇಂದಿಲ್ಲ. ಯಾಕೆಂದರೆ, ಇಂದು ಶಿಕ್ಷಣದ ಆರಂಭವು ಒಂದನೆಯ ತರಗತಿಯಿಂದ ಆರಂಭವಾಗದೆ ಅದು ಪ್ಲೇ ಗ್ರೂಪ್‍ನಿಂದಲೇ ಆರಂಭವಾಗುತ್ತದೆ. ಖಾಸಗಿ ಶಾಲೆಗಳು ಈ ವಿಧಾನವನ್ನು ಅಳವಡಿಸಿಕೊಂಡು ದಶಕಗಳೇ ಕಳೆದಿವೆ. ಇದರಿಂದ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ನಡುವೆ ದೊಡ್ಡ ಕಂದರ ಹುಟ್ಟಿಕೊಂಡಿದೆ. ಇದು ಮಕ್ಕಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಮತ್ತು ಖಾಸಗಿ ಶಾಲೆಗಳಲ್ಲಿ ಕಲಿತ ಮಕ್ಕಳ ನಡುವೆ ದೊಡ್ಡ ಅಂತರ ಸೃಷ್ಟಿಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಒಂದನೆಯ ತರಗತಿಗೆ ಮಕ್ಕಳು ದಾಖಲಾಗುವ ಹೊತ್ತಿಗೆ ಖಾಸಗಿ ಶಾಲೆಗಳ ಮಕ್ಕಳು ಮೂರು ವರ್ಷಗಳ ‘ಕಲಿಕೆ’ಯನ್ನು ಮುಗಿಸಿರುತ್ತಾರೆ. ಹೀಗಿರುವಾಗ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಕಲಿಯದ ಮಗು ಖಾಸಗಿ ಶಾಲೆಗೆ ಸೇರಲು ಸಾಧ್ಯವಿಲ್ಲ. ಹಾಗೆಯೇ ಖಾಸಗಿ ಶಾಲೆಗಳಲ್ಲಿ ಕಲಿತ ಮಗು ಸರ್ಕಾರಿ ಶಾಲೆಗೆ ಸೇರಿದರೆ ಅಂತಹ ಮಗು ಈಗಾಗಲೇ ಮೂರು ವರ್ಷಗಳನ್ನು ಮುಗಿಸಿದ್ದು ಅದಕ್ಕೆ ಹೊಂದಿಕೆಯಾಗುವುದಿಲ್ಲ. ಇದು ಒಂದೇ ವಯೋಮಾನದ ಮಕ್ಕಳ ನಡುವೆ ಕಲಿಕೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗ ನಡುವೆ ತಾರತಮ್ಯವನ್ನು ಹುಟ್ಟಿಸಿದೆ. ಅಲ್ಲದೆ ಇದು ಸಮಾನ ಶಿಕ್ಷಣ ನೀತಿಗೆ ವಿರುದ್ಧವಾದುದು. ಅಲ್ಲದೆ ಸರ್ಕಾರಿ ಶಾಲೆಗಳು ಆಕರ್ಷಣೆ ಕಳೆದುಕೊಳ್ಳಲು ಇದೂ ಕಾರಣವಾಗಿದೆ. ಪರಿಣಾಮವಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿವೆ. ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಿದಂತೆ ಪೋಷಕರ ದುಡಿಮೆಯ ಹಣವು ನಿಧಾನವಾಗಿ ಖಾಸಗಿಯವರ ಪಾಲಾಗುತ್ತದೆ. ಜನರು ದುಡಿದು ದುಡಿದು ದಣಿಯುತ್ತಾರೆ. ಇದರಿಂದ ಮುಕ್ತಿ ದೊರೆಯಬೇಕಾದರೆ ಮಕ್ಕಳಿಗೆ ಉಚಿತ, ಸಮಾನ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವ ಅಗತ್ಯವಿದೆ. ಇದಲ್ಲದೆ ಸಾಮಾಜಿಕ ನ್ಯಾಯದ ಶಿಕ್ಷಣ ಮತ್ತು ಮೌಲ್ಯಗಳನ್ನು ಒಂದು ವ್ಯವಸ್ಥೆಯಾಗಿ ಜಾರಿಗೆ ತರುವ ಅಗತ್ಯವಿದೆ. ಅಂತಹ ವ್ಯವಸ್ಥೆಯಲ್ಲಿ ಬೆಳೆದ ಮಕ್ಕಳ ಆಲೋಚನೆಯ ರೀತಿಗೂ ತಾರತಮ್ಯದ ವ್ಯವಸ್ಥೆಯಲ್ಲಿ ಕಲಿತ ಮಕ್ಕಳ ಆಲೋಚನೆಯ ಕ್ರಮಕ್ಕೂ ವ್ಯತ್ಯಾಸವಿರುತ್ತದೆ.

ಈ ದೃಷ್ಟಿಯಿಂದ ನೋಡಿದಾಗ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಅಗತ್ಯವಿದೆ. ಅದು ಈಗಾಗಲೇ ತಡವಾಗಿದೆ. ಸದ್ಯ ಈಗಲಾದರೂ ಅದನ್ನು ಆರಂಭಿಸುವ ಮಾತನಾಡಿರುವುದು ಒಳ್ಳೆಯದೇ. ಈ ಸಮಸ್ಯೆಯನ್ನು ಅರಿತ ಕೆಲವರು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳನ್ನು ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಸ್ಥಳೀಯರ ನೆರವಿನಿಂದ ಮಕ್ಕಳ ಮನೆಯನ್ನು ಆರಂಭಿಸಿದ್ದರು. ಇದು ಒಳ್ಳೆಯ ಪರಿಣಾಮವನ್ನೇ ಬೀರಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿರುವ ಉದಾಹರಣೆಗಳಿವೆ. ಹಾಗಾಗಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ತೆರೆಯುವ ಯೋಚನೆ ಸರಿಯಾಗಿಯೇ ಇದೆ. ಅದನ್ನು ಕೂಡಲೇ ಜಾರಿಗೊಳಿಸಬೇಕು.

ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು. ಅದೇನೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂಬುದಕ್ಕೆ ಆಧಾರಗಳೇನು? ಅದು ಒಂದು ತಪ್ಪು ಕಲ್ಪನೆ. ಅಲ್ಲಿ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ ಎಂಬುದು ಒಂದು ಕಟ್ಟು ಕತೆ. ಅದನ್ನು ಚೆನ್ನಾಗಿ ನಂಬಿಸಲಾಗಿದೆ. ಅದನ್ನು ಎಲ್ಲರೂ ನಂಬಿದ್ದಾರೆ. ಕೆಲವು ಸಂಸ್ಥೆಗಳನ್ನು ಬಿಟ್ಟರೆ ಉಳಿದಂತೆ ಬಹುತೇಕ ಸಂಸ್ಥೆಗಳಲ್ಲಿ ಕಲಿಸುತ್ತಿರುವ ಕ್ರಮ ಸರ್ಕಾರಿ ಶಾಲೆಗಳಿಗಿಂತ ಭಿನ್ನವಾಗಿಲ್ಲ. ಅಂದರೆ ಅಲ್ಲಿಯೂ ಕಳಪೆ ಶಿಕ್ಷಣವನ್ನೇ ಕೊಡಲಾಗುತ್ತಿದೆ. ಆದರೆ ಅದನ್ನು ಯಾರೂ ಹೇಳುತ್ತಿಲ್ಲ.

ಖಾಸಗಿ ಅಂದ ಕೂಡಲೇ ಅದು ಗುಣಮಟ್ಟದಿಂದ ಕೂಡಿರುತ್ತದೆ ಎಂಬ ಭ್ರಮೆಯನ್ನು ಹುಟ್ಟಿಸಲಾಗಿದೆ. ಅಂದರೆ ಖಾಸಗಿ ಸಂಸ್ಥೆಗಳಲ್ಲಿ ಕಾಣಿಸುವ ಮೇಲ್ನೋಟದ ವ್ಯತ್ಯಾಸವೆಂದರೆ ಮೂಲಭೂತ ಸವಲತ್ತುಗಳು ಮತ್ತು ಆಡಳಿತ ವ್ಯವಸ್ಥೆ. ನಮ್ಮ ಸರ್ಕಾರಿ ಶಾಲೆಗಳ ಮುಖ್ಯ ಸಮಸ್ಯೆ ಎಂದರೆ ಮೂಲಭೂತ ಸೌಕರ್ಯಗಳ ಕೊರತೆ. ಮೊದಲಿಗೆ ಅಗತ್ಯವಿರುವ ಶಿಕ್ಷಕರೇ ಇರುವುದಿಲ್ಲ. ಇದ್ದರೂ ಆಡಳಿತಾತ್ಮಕ ಸಮಸ್ಯೆಗಳಿಂದ ನರಳುತ್ತಿರುತ್ತವೆ. ಶಿಕ್ಷಕರ, ಅಧಿಕಾರಶಾಹಿಯ ಮತ್ತು ನಮ್ಮ ಸರ್ಕಾರಗಳ ಉಪೇಕ್ಷೆಯಿಂದ ಶಿಕ್ಷಣ ವ್ಯವಸ್ಥೆ ದುರ್ಭಲವಾಗಿದೆ. ಇದನ್ನು ರಿಪೇರಿ ಮಾಡದ ಹೊರತು ಸರ್ಕಾರಿ ಶಿಕ್ಷಣ ವ್ಯವಸ್ಥೆ ಸರಿಯಾಗುವುದಿಲ್ಲ. ಇದು ಸರಿಯಾಗಬೇಕು. ಇದನ್ನು ಇಂದಿನ ಮಾರ್ಕೆಟ್ ಭಾಷೆಯಲ್ಲಿ ಹೇಳುವುದಾದರೆ ಸರ್ಕಾರಿ ಶಾಲೆಗಳ ಕುಸಿದಿರುವ ಬ್ರಾಂಡ್ ನೇಮ್ ಅನ್ನು ಮರುಗಳಿಸಿಕೊಳ್ಳಬೇಕಿದೆ. ಅದಕ್ಕೆ ಎಂದಾದರೂ ಇಂತಹ ಬ್ರಾಂಡ್ ನೇಮ್ ಇತ್ತೇ ಎಂಬ ಪ್ರಶ್ನೆಯೂ ಇದೆ.

ಅಂದರೆ ನಮ್ಮ ರಾಜ್ಯದಲ್ಲಿ ಅರಂಭದಿಂದಲೂ ಶಿಕ್ಷಣ ಕ್ಷೇತ್ರವನ್ನು ಉಪೇಕ್ಷೆ ಮಾಡುತ್ತಲೇ ಬರಲಾಗಿದೆ. ಇದರಿಂದಲೇ ಖಾಸಗಿ ಕ್ಷೇತ್ರ ಬೆಳೆಯಲು ಸಾಧ್ಯವಾಯಿತು. ಈ ನಡುವೆ ಹೊಸ ಆರ್ಥಿಕ ನೀತಿಗಳ ಪರಿಣಾಮವಾಗಿ ಶಿಕ್ಷಣವನ್ನು ಖಾಸಗೀಕರಿಸುವ ಪ್ರಯತ್ನ ಹೆಚ್ಚಾದ ಕಾರಣ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಿ ಸರ್ಕಾರಿ ಶಾಲೆಗಳ ಮೌಲ್ಯ ನಾಶವಾಗಿದೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದು ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದಿದೆ. ಒಂದೆಡೆ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದು. ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದು. ಜೊತೆಗೆ ಅವುಗಳನ್ನು ಉಳಿಸಲು ಕ್ರಮ ಕೈಗೊಳ್ಳುವ ಮಾತನಾಡುವುದು. ಇವೆಲ್ಲ ಗೊಂದಲದ ಮತ್ತು ಇಬ್ಬಂದಿತನದ ನಡತೆಗಳು. ಈ ಗೊಂದಲದಲ್ಲಿಯೇ ಮುಳುಗಿರುವ ನಮ್ಮ ಸರ್ಕಾರಿ ಶಾಲೆಗಳು ಯಾವತ್ತೂ ಸುಧಾರಿಸುವ ದಾರಿಯಲ್ಲಿ ನಡೆದಂತೆ ಕಾಣುವುದಿಲ್ಲ. ಹಾಗಾಗಿ ಸರ್ಕಾರಿ ಶಾಲೆಗಳಿಗೆ ಅಂಟಿಕೊಂಡಿಸುವ ಈ ಸಮಸ್ಯೆಗಳನ್ನು ಮೊದಲು ನಿವಾರಿಸಬೇಕಿದೆ. ಅದನ್ನು ಮಾಡದ ಹೊರತು ಯಾವ ಬದಾಲಾವಣೆಯನ್ನೂ ಕಾಣಲು ಸಾಧ್ಯವಿಲ್ಲ. ಈ ಪೂರ್ವಪ್ರಾಥಮಿಕ ಶಾಲೆಗಳದು ಅದೇ ಕತೆಯಾಗುತ್ತದೆ.

ಈ ನಡುವೆ ನಮ್ಮ ಸಮಾಜದಲ್ಲಿ ಒಂದು ದೊಡ್ಡ ವiಧ್ಯಮ ವರ್ಗ ಬೆಳೆದಿದ್ದು ಅದು ಒಂದು ಬಗೆಯ ವರ್ಗ ಸಂಸ್ಕೃತಿಯನ್ನು ಆಚರಿಸಲು ಬಯಸುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸುವುದು ಆ ವರ್ಗಕ್ಕೆ ಒಂದು ಪ್ರತಿಷ್ಠೆಯ ಸಂಗತಿ. ಅದಕ್ಕೆ ತಾನು ಯಾವ ಶಾಲೆಗೆ ಮಕ್ಕಳನ್ನು ಕಳಿಸುತ್ತೇನೆ ಎಂಬುದು ಮುಖ್ಯವಾಗುತ್ತದೆ; ಮಕ್ಕಳನ್ನು ಶಾಲೆಗೆ ಕಳಿಸುವ ವಾಹನ, ಸಮವಸ್ತ್ರ, ಊಟ-ಉಪಾಹಾರ ಅಲ್ಲಿನ ಸಾಂಸ್ಕೃತಿಕ ವಾತಾವರಣ ಇತ್ಯಾದಿ ಎಲ್ಲವೂ ಗಣನೆಗೆ ಬರುತ್ತವೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಬೇಕು. ಈ ವರ್ಗವನ್ನು ಬಿಟ್ಟು ಸಮಾಜ ಹಿಂದುಳಿದ ವರ್ಗಕ್ಕೆ ಮಾತ್ರ ಆದ್ಯತೆ ನೀಡಿ ಬೆಳೆಸುವುದೆಂದರೆ, ಅದನ್ನು ಇರುವಂತೆ ಬಿಟ್ಟರೆ ಅದು ವರ್ಗ ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಎಲ್ಲಿಯವರೆಗೂ ಈ ವರ್ಗ ವ್ಯತ್ಯಾಸವನ್ನು ಉಳಿಸಲಾಗುತ್ತದೆಯೋ ಅಲ್ಲಿಯವರೆಗೂ ಶೈಕ್ಷಣಿಕ ಅಸಮಾನತೆ ಇರುತ್ತದೆ. ಎಲ್ಲ ವರ್ಗದ ಮಕ್ಕಳು ಸಮಾನವಾಗಿ ಕಲಿಯುವ ಪರಿಸರವನ್ನು ಸೃಷ್ಟಿಸಬೇಕಿರುವುದು ಸರ್ಕಾರದ ಕೆಲಸ. ಈ ದೃಷ್ಟಿಯಲ್ಲಿ ಸದ್ಯ ಇರುವ ಅಂತರವನ್ನು ತೊಡೆದು ಹಾಕಲು ಪೂರ್ವಪ್ರಾಥಮಿಕ ತರಗತಿಗಳನ್ನು ಆರಂಭಿಸುವುದು ಉತ್ತಮ ಹೆಜ್ಜೆ. ಆದರೆ ಮೇಲೆ ಹೇಳಿದಂತೆ ಅದಕ್ಕೆ ಇರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ನಿವಾರಿಸಿದಾಗ ಮಾತ್ರ ಸದ್ಯದ ಸಮಸ್ಯೆ ಬಗೆ ಹರಿಸಲು ಸಾಧ್ಯ. ಮತ್ತು ಸರ್ಕಾರಿ ಸಂಸ್ಥೆಗಳ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ನಿವಾರಿಸಲು ಸಾಧ್ಯ.

ಇನ್ನು ಇಂಗ್ಲಿಷ್ ಅನ್ನು ಕಲಿಸುವ ವಿಚಾರವು ಅಷ್ಟೇ. ಅದನ್ನು ಒಂದು ಭಾಷೆಯಾಗಿ ಕಲಿಸುವ ಹಂತದಲ್ಲಿ ಮಕ್ಕಳಲ್ಲಿ ಸಂವಹನದ ಇಂಗ್ಲಿಷ್ ಕೌಶಲ್ಯಗಳನ್ನು ಬೆಳೆಸುವ ಬೋಧನಾ ವಿಧಾನವನ್ನು ಅಳವಡಿಸಿಕೊಂಡು ಮೊದಲು ಮಕ್ಕಳು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಲಿಸಬೇಕು. ನಂತರವೇ ಬರಹಕ್ಕೆ ಆದ್ಯತೆ ಕೊಡಬೇಕು. ಅಂದರೆ ಪಠ್ಯದ ಕಂಠಪಾಠ ಮತ್ತು ಪರೀಕ್ಷೆಯಲ್ಲಿ ಅಂಕ ಗಳಿಸುವ ಮೊದಲು ಮಕ್ಕಳು ಇಂಗ್ಲಿಷ್ ನಲ್ಲಿ ಮಾತನಾಡಲು ಮುಂದಾಗಬೇಕು. ಇದೇ ಇಂದಿನ ಇಂಗ್ಲಿಷ್ ಕಲಿಕೆಯ ಅಗತ್ಯ.

ಸರ್ಕಾರಿ ಶಾಲೆಗಳ ಮುಖ್ಯ ಸಮಸ್ಯೆ ಎಂದರೆ ಈ ಬಗೆಯ ಬೋಧನೆಯ ವಿಧಾನಕ್ಕೆ ಆದ್ಯತೆ ನೀಡದಿರುವುದು ಮತ್ತು ಮಕ್ಕಳು ಇಂಗ್ಲಿಷ್‍ನಲ್ಲಿ ಮಾತನಾಡುವ ಪರಿಸರವನ್ನು ಸೃಷ್ಟಿಸದೆ ಇರುವುದು. ಅದರಲ್ಲಿಯೂ ಹಳ್ಳಿಗಳ ಮಕ್ಕಳಿಗೆ ಇಂಗ್ಲಿಷ್ ಪರಿಸರವೇ ಇಲ್ಲದ ಕಾರಣ ಅವರಿಗೆ ಇಂಗ್ಲಿಷ್ ಕಲಿಕೆ ಮತ್ತೂ ಕಷ್ಟವಾಗಿರುತ್ತದೆ. ಇಂತಹ ಪರಿಸರದಲ್ಲಿ ಇಂಗ್ಲಿಷ್ ಕಲಿಕೆಗೆ ಬೇಕಾದ ಪೂರಕ ಪರಿಸರವನ್ನು ಇಂಗ್ಲಿಷ್ ಕಲಿಸುವ ತರಗತಿಗಳಲ್ಲಿ ರೂಪಿಸಬೇಕಾಗುತ್ತದೆ. ಇದಕ್ಕೆ ಮೊದಲು ಶಿಕ್ಷಕರನ್ನು ಸಜ್ಜುಗೊಳಿಸಬೇಕಿದೆ. ಖಾಸಗಿ ಶಾಲೆಗಳು ಈ ಸಮಸ್ಯೆಯನ್ನು ನಿವಾರಿಸಿಕೊಂಡಿರುವುದೇ ಸರ್ಕಾರಿ ಶಾಲೆಗಳನ್ನು ಹಿಂದಿಕ್ಕಲು ಕಾರಣವಾಗಿದೆ. ಇಂಥ ಸಮಸ್ಯೆಯನ್ನು ಬಹಳ ಕಾಲದಿಂದಲೂ ಬಗೆಹರಿಸದೆ ಇರುವ ಕಾರಣಕ್ಕೆ ಇಂದು ಶೈಕ್ಷಣಿಕ ಅಸಮಾನತೆ ರೂಪುಗೊಳ್ಳಲು ಕಾರಣವಾಗಿದೆ. ಇಂಥ ಅವಕಾಶವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಉದ್ಯಮಿಗಳು ಶಿಕ್ಷಣವನ್ನು ಮಾರಾಟದ ಸರಕಾಗಿಸಿದ್ದಾರೆ. ಮಾರುಕಟ್ಟೆಯು ಇಂಗ್ಲಿಷ್ ಬೇಡಿಕೆ ಮುಂದಿಟ್ಟಿರುವುದರಿಂದ ಜನರು ಅದರ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಜನರನ್ನು ಹೊರತರುವ ಹೊಣೆ ಸರ್ಕಾರದ ಮೇಲೆ ಇದೆ.

ಹಾಗಾಗಿ ಸದಾಶಯದಿಂದ ಆರಂಭಿಸುವ ಯೋಜನೆಗಳನ್ನು ಸರ್ಕಾರ ಸೂಕ್ತ ಸಿದ್ಧತೆಯೊಂದಿಗೆ, ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಿ ಜಾರಿಗೊಳಿಸುವುದು ಉತ್ತಮ. ಅದಿಲ್ಲದೆ ಕೇವಲ ಬೋರ್ಡುಗಳನ್ನು ನೇತುಹಾಕುವುದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುವುದಿಲ್ಲ. ಈ ಬಗೆಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಶಿಕ್ಷಣ ಕ್ಷೇತ್ರದ ಅಧಿಕಾರಿಗಳು, ಶಿಕ್ಷಕರು ಗಮನಹರಿಸಬೇಕು. ಆಗ ಮಾತ್ರವೇ ಸರ್ಕಾರದ ಈ ಯೋಜನೆ ಯಶಸ್ವಿಯಾಗಲು ಸಾಧ್ಯ.

*ಲೇಖಕರು ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ಬೆಂಗಳೂರು ವಿ.ವಿ.ಯಿಂದ ಎಂ.ಎ., ಹಂಪಿ ಕನ್ನಡ ವಿ.ವಿ.ಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ನಾಲ್ಕು ಕವನ ಸಂಕಲನಗಳು ಹೊರಬಂದಿವೆ. ಓದಿನ ಜಾಡು, ಸೇನೆಯಿಲ್ಲದ ಕದನ, ಜನರವ್ಯಾಕರಣ, ಜನಭಾಶೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷ, ಅರಿವಿನ ಅಡಿಗೆ ಪ್ರಕಟಿತ ಲೇಖನಗಳ ಸಂಕಲನಗಳು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮