2nd ಜುಲೈ ೨೦೧೮

ಬಿಜೆಪಿ ವಿರೋಧಿ
ಒಕ್ಕೂಟ ಸಾಧ್ಯವೇ?

ಎನ್.ಎಸ್.ಶಂಕರ್

ಮಂತ್ರಿಮಂಡಳ ರಚನೆಯಾಗಿ ಇನ್ನೂ ಎರಡು ದಿನವೂ ಆಗಿರಲಿಲ್ಲ. ಈ ಕಡೆ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಎಬ್ಬಿಸುತ್ತಿದ್ದ ದಾಂಧಲೆ ರಾಜ್ಯಾದ್ಯಂತ ಸುದ್ದಿಯ ಧೂಳು ಎಬ್ಬಿಸುತ್ತಿತ್ತು. ಸರ್ಕಾರವೇ ಮುಳುಗುತ್ತಿರುವ ದೋಣಿಯಂತೆ ಕಂಡು ಹಲವರಿಗೆ ಆತಂಕ, ಮತ್ತೆ ಕೆಲವರಿಗೆ ಆನಂದ. ಆ ಸಮಯದಲ್ಲಿ ಪಬ್ಲಿಕ್ ಟಿವಿಯ ‘ಜಸ್ಟಿಸ್ ರಂಗನಾಥ್’, ಒಂದೆರಡು ದಿನ ಕಾದು ನೋಡಿ ಸರ್ಕಾರವನ್ನೇ ವಜಾ ಮಾಡಲು ತಯಾರಾದಂತಿದ್ದರು!

ಒಂದಷ್ಟು ದಿನಗಳಲ್ಲಿ ಆರಂಭದ ಈ ತಳಮಳ ತಗ್ಗುವುದು ಸಹಜವೇ ಆಗಿತ್ತು. ಆದರೆ ಆ ದಿನಗಳಲ್ಲಿ ಕಂಡ ಮಾಧ್ಯಮಗಳ ಈ ‘ಉರಿವ ಮನೆಯಲ್ಲಿ ಗಳು ಹಿರಿಯುವ’ ಧೋರಣೆಯೇನೂ ಅನಿರೀಕ್ಷಿತವಲ್ಲ. ಅಧಿಕಾರ ಬಿಜೆಪಿಯ ಕೈತಪ್ಪಿ ಆ ಜಾಗದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಬಹುತೇಕ ಮಾಧ್ಯಮಗಳಿಗೆ, ಅದರಲ್ಲೂ ಟಿವಿ ಚಾನಲ್ಲುಗಳಿಗೆ ಬಿಸಿತುಪ್ಪವಾಗಿದ್ದು ಗುಟ್ಟೇನಲ್ಲ. ಅನೇಕ ವಾಹಿನಿಗಳ ಮಾಲೀಕರು ಅಧಿಕೃತವಾಗಿಯೇ ಬಿಜೆಪಿಯವರು. ಮಿಕ್ಕವರಲ್ಲಿಯೂ ಬಹುತೇಕ ಮಂದಿ ಪತ್ರಕರ್ತರು ಒಳಗೊಳಗೇ ಬಲಪಂಥೀಯ ಒಲವಿನವರು. ಅಂದ ಮೇಲೆ ಈ ಪ್ರತಿಕ್ರಿಯೆ ಸಹಜವೇ.

ಆದರೆ ಆರಂಭದ ದಿನಗಳಲ್ಲಿಯೇ ಇಂಥ ನಗ್ನ ‘ಅಧಿಕಾರ ದಾಹ’ ಕಂಡು ಪತ್ರಕರ್ತರಿರಲಿ, ಜನಕ್ಕೂ ರೋಸಿಹೋಗಿತ್ತು. ಈಗಲೂ ಈ ಸರ್ಕಾರ ಎಷ್ಟು ದಿನ/ ತಿಂಗಳು ಬಾಳಿಕೆ ಬರಬಹುದೆಂಬ ಲೆಕ್ಕಾಚಾರ ನಿಂತಿಲ್ಲ. ಬೇರೆಯವರಿರಲಿ, ಸ್ವತಃ ಕುಮಾರಸ್ವಾಮಿ, ‘ನನ್ನನ್ನು ಒಂದು ವರ್ಷವಂತೂ ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ’ ಎಂಬ ಅನುಮಾನಾಸ್ಪದ ಹೇಳಿಕೆ ಮೂಲಕ ತಮ್ಮ ಕುರ್ಚಿ ಅಭದ್ರ ಎಂಬ ಸಂದೇಶವನ್ನೇ ಕೊಟ್ಟಿದ್ದಾರೆ.

ಅತ್ತ ನೇಪಥ್ಯದಲ್ಲಿ ಬಿಜೆಪಿ ಕಾಯುತ್ತಲೇ ಇದೆ...

ಈಗಿನ ರಾಜಕೀಯ ನಕಾಶೆಯಲ್ಲಿ ಕಾಣುತ್ತಿರುವ ಮತ್ತೊಂದು ಚಿತ್ರವೆಂದರೆ -ಹೊಸ ಸರ್ಕಾರದ ಪ್ರಮಾಣವಚನದ ದಿನ ಅನೇಕ ವಿರೋಧಿ ಮುಖಂಡರು ಸಮಾರಂಭಕ್ಕೆ ಹಾಜರಾಗಿ, 2019ರ ಲೋಕಸಭಾ ಚುನಾವಣೆಯ ದಿಕ್ಕುದೆಸೆಗಳನ್ನು ಸೂಚಿಸುವಂತೆ ಕಂಡಿದ್ದು. 1977ರಲ್ಲಿ ತುರ್ತುಸ್ಥಿತಿ ನಂತರ ವಿರೋಧ ಪಕ್ಷಗಳು ಸಮಗ್ರವಾಗಿ ಇಂದಿರಾ ಗಾಂಧಿಯವರ ಪದಚ್ಯುತಿಗೆ ಸಜ್ಜಾಗಿದ್ದ ರೀತಿಯಲ್ಲಿಯೇ, ಸದ್ಯಕ್ಕಂತೂ ಅಜೇಯರಾಗಿ ಕಾಣುತ್ತಿರುವ ‘ಹಿಂದೂ ಹೃದಯ ಸಾಮ್ರಾಟ’ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಎಲ್ಲ ವಿರೋಧ ಪಕ್ಷಗಳನ್ನೂ ಒಗ್ಗೂಡಿಸುವ ತವಕ ಕಾಣುತ್ತಿದೆ. ನೂತನ ರಾಜ್ಯ ಸರ್ಕಾರದ ಪ್ರಮಾಣ ವಚನದ ದಿನ ಒಟ್ಟಾದ ವಿರೋಧಿ ಮುಖಂಡರು ಅದೇ ಹಂಬಲಕ್ಕೆ ಮುನ್ನುಡಿ ಬರೆದಂತೆ ಕಂಡುಬಂದರು. ಆದರೆ ಮೈತ್ರಿ ಪಾಲುದಾರನಾದ ಕಾಂಗ್ರೆಸ್ ನಡವಳಿಕೆ ಮಾತ್ರ ವಿರುದ್ಧ ದಿಕ್ಕಿನಲ್ಲಿದ್ದಂತಿದೆ! ಮಂತ್ರಿಗಿರಿಗಾಗಿ ನಡೆದ ಗದ್ದಲ, ಮತ್ತೆ ರಾಜರಾಜೇಶ್ವರಿನಗರ ಹಾಗೂ ಜಯನಗರಗಳ ಉಪಚುನಾವಣೆಗಳಲ್ಲಿ ಪ್ರತ್ಯೇಕ ಸ್ಪರ್ಧೆ -ಒಟ್ಟಿನಲ್ಲಿ ಕಾಂಗ್ರೆಸ್ಸಿನ ಹೆಜ್ಜೆಗಳು ವಿರೋಧಿ ಒಕ್ಕೂಟದ ಆಶಯವನ್ನೇ ಅಪಹಾಸ್ಯ ಮಾಡಿದಂತಿದ್ದವು.

ತುಸು ಕೆದಕಿ ನೋಡಿದರೆ, ಕಾಂಗ್ರೆಸ್ ತಾನಿನ್ನೂ ಅಖಿಲ ಭಾರತ ಮುಂದಾಳು ಪಕ್ಷವೆಂಬ ಭ್ರಮೆಯಿಂದ ಹೊರಗೆ ಬಂದಂತೆಯೇ ಕಾಣುತ್ತಿಲ್ಲ. ಜೊತೆಗೆ ಉಳಿದವರೆಲ್ಲರೂ ತನ್ನ ನಾಯಕತ್ವವನ್ನೇ ಒಪ್ಪಿಕೊಳ್ಳಬೇಕೆಂಬ ಎಳಸು ಹಟವೂ ಇದ್ದಂತಿದೆ. ಈಗ ದೆಹಲಿಯಲ್ಲಿ (ನಮ್ಮದೇ ರಾಜ್ಯದ ಕುಮಾರಸ್ವಾಮಿಯವರೂ ಸೇರಿದಂತೆ) ಎಲ್ಲ ಪಕ್ಷಗಳ ಮುಖಂಡರು, ಐಎಎಸ್ ಅಧಿಕಾರಿಗಳ ಮುಷ್ಕರದ ವಿರುದ್ಧ -ಅಂದರೆ ದೆಹಲಿ ಸರ್ಕಾರದ ಸ್ವಾಯತ್ತತೆಗಾಗಿ- ಅರವಿಂದ ಕೇಜ್ರಿವಾಲ್ ನಡೆಸುತ್ತಿರುವ ಧರಣಿಗೆ ಮುಂದಾಗಿ ಬೆಂಬಲ ಸೂಚಿಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ‘ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ ಟೀಂ’ ಎಂದು ಹಂಗಿಸುತ್ತ ವಾಸ್ತವ ಬಿಟ್ಟು ಅಂತರಿಕ್ಷದಲ್ಲಿ ನೇತಾಡುತ್ತಿರುವಂತಿದೆ.

ಇನ್ನು ಮುಂದೆಯಾದರೂ ಕಾಂಗ್ರೆಸ್ ತನ್ನ ಶಕ್ತಿ-ಮಿತಿಗಳನ್ನು ಅರಿತು ತಗ್ಗಿ ಬಗ್ಗಿ ನಡೆಯುವುದನ್ನು ರೂಢಿಸಿಕೊಳ್ಳದಿದ್ದರೆ, ಅಖಿಲ ಭಾರತ ಮಟ್ಟದಲ್ಲಿ ನಿಜಕ್ಕೂ ವಿರೋಧಿ ಒಕ್ಕೂಟ ಸಂಭವಿಸುವುದೇ ಕಷ್ಟ.

ಕಾಂಗ್ರೆಸ್ ತಾನಿನ್ನೂ ಅಖಿಲ ಭಾರತ ಮುಂದಾಳು ಪಕ್ಷವೆಂಬ ಭ್ರಮೆಯಿಂದ ಹೊರಗೆ ಬಂದಂತೆಯೇ ಕಾಣುತ್ತಿಲ್ಲ. ಜೊತೆಗೆ ಉಳಿದವರೆಲ್ಲರೂ ತನ್ನ ನಾಯಕತ್ವವನ್ನೇ ಒಪ್ಪಿಕೊಳ್ಳಬೇಕೆಂಬ ಎಳಸು ಹಟವೂ ಇದ್ದಂತಿದೆ. ಕಾಂಗ್ರೆಸ್ ತನ್ನ ಶಕ್ತಿ-ಮಿತಿ ಅರಿತು ನಡೆಯುವುದನ್ನು ರೂಢಿಸಿಕೊಳ್ಳದಿದ್ದರೆ, ನಿಜಕ್ಕೂ ಬಿಜೆಪಿ ವಿರೋಧಿ ಒಕ್ಕೂಟ ಸಂಭವಿಸುವುದೇ ಕಷ್ಟ.

ಕರ್ನಾಟಕದ ಈ ಸಲದ ಚುನಾವಣೆ ನಿಜಕ್ಕೂ ಇಡೀ ರಾಷ್ಟ್ರದ ಕುತೂಹಲವನ್ನು ಹಿಡಿದಿಟ್ಟಿದ್ದ ಹಣಾಹಣಿಯಾಗಿತ್ತು. ಮೋದಿ-ಶಾ ಅಶ್ವಮೇಧದ ಕುದುರೆಯನ್ನು ಕರ್ನಾಟಕ ಕಟ್ಟಿ ಹಾಕಬಲ್ಲುದೇ ಎಂಬ ರಾಷ್ಟ್ರೀಯ ಕುತೂಹಲದಲ್ಲಿ ರಾಷ್ಟ್ರದ ರಾಜಕೀಯ ಭವಿಷ್ಯವೇ ಅಡಗಿದಂತಿತ್ತು. ಒಂದೊಂದಾಗಿ ರಾಜ್ಯಗಳನ್ನು ಆಕ್ರಮಿಸಿಕೊಳ್ಳುತ್ತ ಸಾಗಿರುವ ಬಿಜೆಪಿ ಪಾಲಿಗೆ ಕರ್ನಾಟಕವೇ ದಕ್ಷಿಣದ ಹೆಬ್ಬಾಗಿಲು. ಅದರಲ್ಲೂ ಮುಂದಿನ ವರ್ಷವೇ ಲೋಕಸಭಾ ಚುನಾವಣೆ. ಚುನಾವಣೆ ಸಂದರ್ಭದಲ್ಲಿ ಅಧಿಕಾರದಲ್ಲಿರುವ ಪಕ್ಷ ಸಹಜವಾಗಿಯೇ ಸರ್ಕಾರಿ ಯಂತ್ರದ ಮೇಲೆ ನಿಯಂತ್ರಣ ಮತ್ತು ಹಣದ ಹರಿವುಗಳನ್ನು ದಕ್ಕಿಸಿಕೊಳ್ಳುತ್ತದೆ. ಆ ಕಾರಣಕ್ಕೇ ಇಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಚುನಾವಣಾ ಫಲಿತಾಂಶಗಳು ಬರತೊಡಗಿದಾಗ ಬಿಜೆಪಿಯೇ ಗದ್ದುಗೆಗೇರುವುದು ನಿಶ್ಚಿತ ಎನ್ನುವಂತಿತ್ತು. ಆದರೆ ಕಡೆ ಗಳಿಗೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಯಿತು. ಈಗಂತೂ ವಿರೋಧಿಗಳ ಮೈತಿ ಸರ್ಕಾರ.

ಇದೊಂದು ವಿದ್ಯಮಾನ ದಲ್ಲಿ ರಾಷ್ಟ್ರ ರಾಜಕಾರಣವನ್ನು ತಿದ್ದಿ ತೀಡುವ ಬೀಜಗಳಿವೆಯೇ?

ಹಾಗೆ ನೋಡಿದರೆ, ಬಿಜೆಪಿ ನಿಜಕ್ಕೂ ಅಜೇಯವೇನಲ್ಲ ಅನಿಸಲು ತುಸು ಹಿಂದೆಯೇ, ಗುಜರಾತು ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಶುರುವಾಯಿತು. ಕರ್ನಾಟಕಕ್ಕಿಂತಲೂ ಚಿಕ್ಕ ರಾಜ್ಯವಾದರೂ, ಅಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಿ, ಎರಡನೇ ಹಂತದ ಮತದಾನಕ್ಕೆ ಮುನ್ನ ಮೋದಿ ತಮ್ಮನ್ನು ಸೋಲಿಸಲು, ಮಾಜಿ ಪ್ರಧಾನಿ ಮನಮೋಹನ ಸಿಂಗ್‍ರೇ ಪಾಕಿಸ್ತಾನದ ಜೊತೆ ಸೇರಿ ಸಂಚು ಹೂಡಿದ್ದಾರೆಂಬ ಹಾಸ್ಯಾಸ್ಪದವಾದ, ಆದರೆ ಅಪಾಯಕಾರಿಯಾದ ಸುಳ್ಳಿನ ಮೊರೆ ಹೋಗಿದ್ದು... ಇಷ್ಟೆಲ್ಲ ಆದರೂ ಬಿಜೆಪಿಗೆ ಸಿಕ್ಕಿದ್ದು ಪ್ರಯಾಸದ ಗೆಲುವು. ಅದಾದ ಮೇಲೆ ಮುಂದಿನ ಉಪ ಚುನಾವಣೆಗಳಲ್ಲೆಲ್ಲ ಅನುಭವಿಸಿದ ಸೋಲುಗಳಲ್ಲೇ ವಿರೋಧಿಗಳನ್ನು ಒಗ್ಗೂಡಿಸುವ ಶಕ್ತಿವರ್ಧಕವಿತ್ತು. ಅದರಿಂದಾಗಿಯೇ ವಿರೋಧ ಪಕ್ಷಗಳು ಈಗ ಮಾಡಿರುವ ತೀರ್ಮಾನಗಳು:

- ಮೋದಿ ಗೆಲುವಿಗೆ ಕಡಿವಾಣ ಸಾಕಲು ಸಾಧ್ಯ.

- ಅದಕ್ಕಾಗಿ ವಿರೋಧಿಗಳು ಒಗ್ಗೂಡುವುದು ಅಗತ್ಯ.

- ಮತ್ತು ಅಂಥ ಒಕ್ಕೂಟವೂ ಕಾರ್ಯಸಾಧ್ಯ.

ದೇಶದ ಈಗಿನ ಒಟ್ಟು ವಾತಾವರಣ ಈ ತಿಳಿವಳಿಕೆಯ ಸುತ್ತ ಕಾರ್ಯಪ್ರವೃತ್ತವಾದಂತಿದೆ. ಅಂತೂ 2019ರಲ್ಲಿ ನಿಜಕ್ಕೂ ಮೋದಿ ನೇತೃತ್ವದ ಶಕ್ತಿಗೆ ಕಡಿವಾಣ ಬೀಳುವುದೇ? ಆ ತೀರ್ಪಿಗೆ ಇನ್ನೂ ಸಮಯವಿದೆ.

ವಿರೋಧಿಗಳೆಲ್ಲರೂ ಒಂದಾಗಿ 2019ರಲ್ಲಿ ಅಧಿಕಾರಕ್ಕೇರುತ್ತಾರೆ ಎಂದೇ ಭಾವಿಸೋಣ. ಅಷ್ಟಕ್ಕೂ ಹಲವಾರು ಪಕ್ಷಗಳ ಕಿಚಡಿ ಸರ್ಕಾರ ಭಾರತಕ್ಕೆ ಹೊಸದೇನಲ್ಲ. ವಾಜಪೇಯಿ ನೇತೃತ್ವದಲ್ಲಿ ಬಂದ ಎನ್‍ಡಿಎ ಸರ್ಕಾರವಾಗಲೀ, ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಾಗಲೀ -ಹತ್ತಾರು ಪಕ್ಷಗಳ ಒಕ್ಕೂಟಗಳೇ. ಆದ್ದರಿಂದ ನಮ್ಮ ದೇಶದಲ್ಲಿ ವೈವಿಧ್ಯಮಯ ನಿಲುವು ದೃಷ್ಟಿಕೋನಗಳ ಪಕ್ಷಗಳು ಒಗ್ಗೂಡಿ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ’ ವೇದಿಕೆ ನಿರ್ಮಿಸಿಕೊಂಡು ಅಧಿಕಾರ ಹಿಡಿಯುವುದು ಹೊಸದೂ ಅಲ್ಲ, ವಿಲಕ್ಷಣವೂ ಅಲ್ಲ, ಸಮಸ್ಯೆಯೂ ಅಲ್ಲ.

ಮುಖ್ಯ -ಇಷ್ಟು ಕಾಲದ ಬಲಪಂಥೀಯ ರಾಜಕಾರಣ ದೇಶದ ನರನಾಡಿಗಳಲ್ಲಿ ತುಂಬಿರುವ ವಿಷದ ನಿವಾರಣೆ ಹೇಗೆ ಎನ್ನುವುದೇ ದೊಡ್ಡ ಸವಾಲು. ಈ ನೆಲದಲ್ಲಿರುವ ಸಕಲ ಸಮಸ್ತರಿಗೂ ಸೇರಿದ ನಾಡಿದು ಎಂಬುದೇ ನಮ್ಮ ಸಂವಿಧಾನದ ಮೂಲ ಸ್ತೋತ್ರ. ನಾವು ಕನ್ನಡಿಗರು ಸಹ ಕರ್ನಾಟಕವನ್ನು ನಮ್ಮ ನಾಡದನಿ ಕುವೆಂಪು ಮೂಲಕ ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿಯೇ ಕಂಡರಿಸಿದ್ದೇವೆ. ಸ್ವತಃ ಮೋದಿಯವರೇ ಮಾತೆತ್ತಿದರೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರ ಜಪಿಸುತ್ತಾರೆ! ಆದರೆ ಅವರ ಪರಿವಾರ ಅನುಸರಿಸುತ್ತ ಬಂದ ರಾಜಕಾರಣ ವಿರುದ್ಧ ದಿಕ್ಕಿನದು.

ಬಾಬರಿ ಮಸೀದಿ ಧ್ವಂಸದ ನಂತರ ದೇಶದ ವಿಭಜನಕಾರಿ ರಾಜಕಾರಣಕ್ಕೆ ವಿಧ್ವಂಸಕ ಮುಖ ಪ್ರಾಪ್ತಿಯಾದರೆ, 2002ರ ಗುಜರಾತ್ ನರಮೇಧದ ನಂತರ ಕೊಲೆಗಡುಕತನಕ್ಕೆ ದೇಶಭಕ್ತಿಯ ಹೊಳಪು ನೀಡಲಾಯಿತು. (ನಮ್ಮಲ್ಲೇ ಎಸ್.ಎಲ್.ಭೈರಪ್ಪನವರು ನೇರಾನೇರ ದ್ವೇಷದ ಪ್ರಣಾಳಿಕೆ ಇಟ್ಟುಕೊಂಡು ‘ಆವರಣ’ ಎಂಬ ಕಾದಂಬರಿ ಹೆಸರಿನ ಕರಪತ್ರ ಬರೆಯುವಂತಾದದ್ದೂ ಕೂಡ, ಗುಜರಾತ್ ಮಾರಣಹೋಮ ಸೃಷ್ಟಿಸಿದ ನಿರ್ಭಿಡೆಯ ಹತ್ಯಾಸಂಸ್ಕೃತಿಯ ಪರಿಣಾಮವಾಗಿಯೇ ಎಂಬುದನ್ನು ನೆನೆಯಬೇಕು.) ಅದರ ಪರಿಣಾಮವಾಗಿಯೇ ಈಗ ಬೀದಿ ದೊಂಬಿಗಳ ನೆಪದಲ್ಲಿ ನಡೆಯುವ ಹತ್ಯಾಕಾಂಡಗಳು, ನಿತ್ಯದ ಸಹಜ ವಿದ್ಯಮಾನಗಳಾಗಿವೆ, ಅನ್ನುವುದಕ್ಕಿಂತ ಅವಕ್ಕೆ ಜನಸಾಮಾನ್ಯರ ಅಂಗೀಕಾರ ದೊರೆತಿದೆ ಎಂಬುದೇ ಹೆಚ್ಚು ಆತಂಕಕಾರಿಯಾದದ್ದು. ಕ್ಷುಲ್ಲಕ ಕಾರಣಕ್ಕೆ ಒಂದಷ್ಟು ಜನ ಸೇರಿ ಯಾರನ್ನೋ ಬಹಿರಂಗವಾಗಿ ಹೊಡೆದು ಸಾಯಿಸುವುದು ವೀರೋಚಿತವಾದ ಧೀರೋದಾತ್ತವಾದ ಕೈಂಕರ್ಯವಾಗಿ ಕಾಣಿಸುತ್ತಿದೆ. ಯಾವ ಹಿನ್ನೆಲೆಯೂ ಬೋಧನೆಯೂ ಪ್ರಚೋದನೆಯೂ ಇಲ್ಲದೆಯೇ ಜನಸಾಮಾನ್ಯರಲ್ಲಿ ತಾನೇ ತಾನಾಗಿ ಮುಸ್ಲಿಂ ವಿರೋಧಿ ಪೂರ್ವಗ್ರಹ ತುಂಬಿಕೊಳ್ಳುತ್ತಿದೆ....

ಅಂತೂ ದೇಶ ಮಾನಸಿಕವಾಗಿ ಮತ್ತೊಮ್ಮೆ ಸೀಳಿಹೋಗುತ್ತಿದೆ.

ಅದಕ್ಕೇ, ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗುತ್ತಿರುವ ಬಲಪಂಥೀಯ ಅಸಹನೆಯನ್ನು ಮೆಟ್ಟಿ ವಿರೋಧಿ ಒಕ್ಕೂಟ ಅಧಿಕಾರಕ್ಕೆ ಬರುವುದೇ ಆದರೆ -ಆ ಸರ್ಕಾರದ ಮುಂದಿನ ಅತಿ ಮುಖ್ಯ ಸವಾಲು ಆಡಳಿತ ಅಲ್ಲವೇ ಅಲ್ಲ; ಈ ನಂಜಿನ ವಾತಾವರಣವನ್ನು ಕರಗಿಸಿ ಒಡೆದ ಮನಸ್ಸುಗಳಿಗೆ ಮತ್ತೆ ಹೊಲಿಗೆ ಹಾಕುವುದೇ ಅದರ ಮುಂದಿನ ಪ್ರಧಾನ ಸವಾಲು.

*ಲೇಖಕರು ಮೂಲತಃ ಪಾಂಡವಪುರದವರು. ವಿಜ್ಞಾನ ಪದವಿ ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಗತಿಪರ ಪತ್ರಕರ್ತರಾಗಿ, ಬರಹಗಾರರಾಗಿ, ಸಿನಿಮಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮