2nd ಜುಲೈ ೨೦೧೮

ನೀಟ್ ಪರೀಕ್ಷೆ
ಒಕ್ಕೂಟ ವಿರೋಧಿ ಹೆಜ್ಜೆ !

ವಸಂತ ಶೆಟ್ಟಿ

ನೀಟ್ ತರಹದ ಪರೀಕ್ಷೆಗಳಲ್ಲಿ ಇರುವ ನಿಜವಾದ ತೊಂದರೆ ಆಳದಲ್ಲಿ ಅವು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಶಿಥಿಲಗೊಳಿಸಿ ದೆಹಲಿಯಿಂದಲೇ ಎಲ್ಲವನ್ನೂ ನಿಯಂತ್ರಿಸಬೇಕು ಅನ್ನುವ ಶಕ್ತಿಗಳಿಗೆ ಬಲ ತುಂಬುತ್ತವೆ ಅನ್ನುವುದು. ನೀಟ್ ಮೂಲಕ ಕನ್ನಡಿಗರು ತಮ್ಮನ್ನು ತಾವೇ ಆಳಿಕೊಳ್ಳುವ ಸ್ವಾಯತ್ತೆಯಲ್ಲಿ ಒಂದಿಷ್ಟನ್ನು ಕಳೆದುಕೊಳ್ಳಲಿದ್ದಾರೆ ಅನ್ನುವುದನ್ನು ಗಮನಿಸಬೇಕಾದುದು ಈ ಹೊತ್ತಿನ ತುರ್ತಾಗಿದೆ.

ಭಾರತದಂತಹ ಹಲತನದ ಒಂದು ಒಕ್ಕೂಟದಲ್ಲಿ ಸರ್ಕಾರದ ನೀತಿ ನಿಯಮಗಳು ಈ ಹಲತನವನ್ನು ಪೊರೆಯುತ್ತಲೇ ದೇಶದ ಸಮಸ್ಯೆಗಳನ್ನು ಬಗೆಹರಿಸುವ ದಿಕ್ಕಿನಲ್ಲಿ ಇರಬೇಕೋ, ಇಲ್ಲವೇ ಈ ಹಲತನವನ್ನು ಒಂದು ಶಾಪದಂತೆ ಕಂಡು ಆದಷ್ಟು ಬೇಗ ಅದನ್ನು ಅಳಿಸಿಹಾಕಿ ಎಲ್ಲವನ್ನೂ ಒಂದೇ ತರವಾಗಿಸುವ ಹಾದಿಯಲ್ಲಿರಬೇಕೋ ಅನ್ನುವ ಪ್ರಶ್ನೆ ಒಂದು ಪ್ರಶ್ನೆಯಾಗಿಯೇ ಮುಂದುವರೆದಿದೆ. ಹೆಸರಿಗೆ ಭಾರತ ಒಂದು ಒಕ್ಕೂಟ ವ್ಯವಸ್ಥೆಯಾಗಿದ್ದರೂ ಸ್ವಾತಂತ್ರ್ಯ ಬಂದಾಗಿನಿಂದ ನಿರಂತರವಾಗಿ ರಾಜ್ಯಗಳ ಹಕ್ಕುಗಳನ್ನು, ಅಧಿಕಾರವನ್ನು, ಆರ್ಥಿಕ ಸ್ವಾಯತ್ತತೆಯನ್ನು ಕಿತ್ತುಕೊಳ್ಳುತ್ತ ರಾಜ್ಯಗಳನ್ನು ಗ್ಲೋರಿಫೈಡ್ ಮುನ್ಸಿಪಾಲಿಟಿ ಎಂಬಂತೆ ನಡೆಸಿಕೊಳ್ಳುವ ಕೆಲಸವನ್ನು ಲಾಗಾಯ್ತಿನಿಂದಲೂ ದೆಹಲಿ ಮಾಡುತ್ತ ಬಂದಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ “ಒಂದು ದೇಶ ಒಂದು ಪರೀಕ್ಷೆ” ಅನ್ನುವ ಹೆಸರಿನಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ಇಡೀ ದೇಶದಲ್ಲಿ ಜಾರಿಗೆ ಬಂದಿರುವ ನೀಟ್ ಅನ್ನುವ ಪ್ರವೇಶ ಪರೀಕ್ಷೆಯ ಏರ್ಪಾಡು. ಇದು ಜಾರಿಯಾಗಿ ಎರಡು ವರ್ಷದಲ್ಲಿ ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಇನ್ನಷ್ಟು ಹಣ ಮಾಡುವ ಸಾಧನ ನೀಟ್ ಒದಗಿಸುತ್ತದೆ ಅನ್ನುವ ಆರೋಪ ಅಕ್ಷರಶಃ ನಿಜವಾಗುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಹಳ್ಳಿಗಾಡಿನ, ಚಿಕ್ಕಪುಟ್ಟ ಪಟ್ಟಣದ ಮಕ್ಕಳ ಮೆಡಿಕಲ್ ಓದುವ ಕನಸಿಗೆ ನೀಟ್ ದೊಡ್ಡ ಹೊಡೆತವನ್ನೇ ಕೊಡುವುದರ ಮೂಲಕ ಆರೋಗ್ಯ ಸೇವೆಯನ್ನು ಎಲ್ಲೆಡೆ ಎಲ್ಲರಿಗೂ ಕಲ್ಪಿಸುವ ಆಶಯಕ್ಕೂ ಹಿನ್ನಡೆಯಾಗುತ್ತಿದೆ. ಹಾಗಿದ್ದರೆ ನೀಟ್ ತಂದೊಡ್ಡಿರುವ ಸಮಸ್ಯೆಗಳೇನು?

ಏನಿದು ನೀಟ್?

ನೀಟ್ - ಇಲ್ಲವೇ ನ್ಯಾಶನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್ (ಎನ್.ಇ.ಇ.ಟಿ.) ಅನ್ನುವುದು ಭಾರತ ಒಕ್ಕೂಟದ ಎಲ್ಲ ರಾಜ್ಯಗಳಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಒಕ್ಕೂಟದಾದ್ಯಂತ ಒಂದೇ ದಿನ ನಡೆಯುವ ಪ್ರವೇಶ ಪರೀಕ್ಷೆಯಾಗಿದೆ. ಸಿ.ಬಿ.ಎಸ್.ಇ. ಸಿಲಾಬಸ್ ಆಧಾರಿತ ಈ ಪರೀಕ್ಷೆಯನ್ನು ಸಿ.ಬಿ.ಎಸ್.ಇ. ಸಂಸ್ಥೆಯೇ ನಡೆಸುತ್ತದೆ. ಪರೀಕ್ಷೆ ನಡೆಸುವುದು, ಫಲಿತಾಂಶ ಘೋಷಿಸುವುದು ಮತ್ತು ಆಲ್ ಇಂಡಿಯಾ ರ್ಯಾಂಕಿಂಗ್ ಅನ್ನು ಪ್ರತಿ ರಾಜ್ಯದಲ್ಲಿ ಸೀಟು ಹಂಚಿಕೆ ನಿಭಾಯಿಸುವ ಕೌನ್ಸೆಲಿಂಗ್ ಸಂಸ್ಥೆಗಳಿಗೆ ನೀಡುವ ಹೊಣೆಯನ್ನು ಸಿ.ಬಿ.ಎಸ್.ಇ.ಗೆ ನೀಡಲಾಗಿದೆ.

2012ರಿಂದಲೇ ಈ ಪರೀಕ್ಷೆಯನ್ನು ತರಲು ಹೊರಟಿದ್ದ ಅಂದಿನ ಒಕ್ಕೂಟ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಡೆಯೊಡ್ಡಿತ್ತು. ಹಾಗೆ ತಡೆಯೊಡ್ಡಲು ಕಾರಣ ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ವಿರೋಧವಾಗಿತ್ತು. ಪಿ.ಯು.ಸಿ. ಹಂತದ ಸಿ.ಬಿ.ಎಸ್.ಇ. ಸಿಲಾಬಸ್ ಮತ್ತು ರಾಜ್ಯಗಳ ಸಿಲಾಬಸ್ ನಡುವಿನ ಅಗಾಧ ವ್ಯತ್ಯಾಸದ ಕಾರಣ ಈ ಪರೀಕ್ಷೆ ತಮ್ಮ ರಾಜ್ಯದ ಮಕ್ಕಳಿಗೆ ಅನ್ಯಾಯ ಮಾಡುತ್ತದೆ, ಅಲ್ಲದೇ ಈ ಪರೀಕ್ಷೆ ಕೇವಲ ಹಿಂದಿ/ಇಂಗ್ಲಿಷಿನಲ್ಲಿರುವುದು ಭಾಷಿಕವಾದ ಒಂದು ತಾರತಮ್ಯದ ಮೂಲಕವೂ ಅನ್ಯಾಯವೆಸಗುತ್ತಿದೆ ಅನ್ನುವುದು ಈ ರಾಜ್ಯಗಳು ಕೊಟ್ಟ ಪ್ರಮುಖ ಕಾರಣಗಳಾಗಿದ್ದವು. ಆಗ ತಡೆ ನೀಡಿದ್ದ ಸುಪ್ರೀಂ ಕೋರ್ಟ್ ಮುಂದೆ ಮನಸ್ಸು ಬದಲಾಯಿಸಿ 2016ರಿಂದ ನೀಟ್ ಪರೀಕ್ಷೆಗೆ ಅನುವು ಮಾಡಿಕೊಟ್ಟಿತ್ತು. ಇದನ್ನು ವಿರೋಧಿಸಿದ ಹಲವು ರಾಜ್ಯಗಳ ಒತ್ತಡಕ್ಕೆ ಮಣಿದ ಒಕ್ಕೂಟ ಸರ್ಕಾರ ಸುಗ್ರೀವಾಜ್ಞೆಯೊಂದರ ಮೂಲಕ ಈ ರಾಜ್ಯಗಳಿಗೆ ಒಂದು ವರ್ಷದ ವಿನಾಯಿತಿಯನ್ನು ಕೊಡಿಸಿತ್ತು ಆದರೆ 2017ರಿಂದ ಎಲ್ಲ ರಾಜ್ಯಗಳೂ ನೀಟ್ ಪರೀಕ್ಷೆಯ ಮೂಲಕವೇ ವೈದ್ಯಕೀಯ ಸೀಟುಗಳ ಹಂಚಿಕೆ ಮಾಡಬೇಕು ಅನ್ನುವ ಕಟ್ಟಪ್ಪಣೆಯ ನಿಲುವನ್ನು ದೆಹಲಿಯ ಸರ್ಕಾರ ತಳೆದಿತ್ತು. ಅಂತೆಯೇ ಕಳೆದ ವರ್ಷದಿಂದ ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಸೀಟುಗಳ ಹಂಚಿಕೆ ಶುರುವಾಗಿದೆ.

ನೀಟ್ ನಿಜಕ್ಕೂ ಬೇಕಾ?

ನೀಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಇಲಾಖೆಯಡಿ ಬರುವ ಸಿ.ಬಿ.ಎಸ್.ಇ. ಸಂಸ್ಥೆ ನಡೆಸುತ್ತದೆ. ಸಿ.ಬಿ.ಎಸ್.ಇ. ನಿಗದಿಪಡಿಸಿದ ಪಠ್ಯಕ್ರಮದ ಪ್ರಕಾರವೇ ಈ ಪರೀಕ್ಷೆ ನಡೆಯುತ್ತದೆ. ಇದು ಸಹಜವಾಗಿಯೇ ಭಾರತದ ದೊಡ್ಡ ದೊಡ್ಡ ಪಟ್ಟಣ, ನಗರಗಳಲ್ಲಿ ಹೆಚ್ಚಿನ ಎಣಿಕೆಯಲ್ಲಿರುವ ಸಿ.ಬಿ.ಎಸ್.ಇ. ಪಠ್ಯಕ್ರಮ ಆಧಾರಿತ ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ. ಇಂತಹ ಶಾಲೆಗಳಲ್ಲಿ ಹೆಚ್ಚಾಗಿ ಮೇಲ್ಮಧ್ಯಮ ವರ್ಗದ ಮಕ್ಕಳೇ ಕಲಿಯುತ್ತಿದ್ದಾರೆ ಅನ್ನುವುದನ್ನು ಇಲ್ಲಿ ಗಮನಿಸಬೇಕು. ಆದರೆ ಇಂದಿಗೂ ಕರ್ನಾಟಕದ ಬಹುತೇಕ ಪಿಯುಸಿ ವಿಜ್ಞಾನ ಕಾಲೇಜುಗಳಲ್ಲಿ ಕರ್ನಾಟಕ ಸರ್ಕಾರದ ಪಠ್ಯಕ್ರಮವೇ ಜಾರಿಯಲ್ಲಿದೆ.

ನೀಟ್ ಎಷ್ಟು ನೀಟು?

ಒಮ್ಮೆ ನೀಟ್ ಬಂದರೆ ರಾಜ್ಯಗಳಲ್ಲಿ ನಡೆಯುವ ಪರೀಕ್ಷೆ ಅಕ್ರಮಗಳು ನಡೆಯಲ್ಲ, ಇಡೀ ದೇಶಕ್ಕೆ ಒಂದೇ ಪರೀಕ್ಷೆ ನಡೆಯುವುದರಿಂದ ಪ್ರತಿ ರಾಜ್ಯದಲ್ಲೂ ಪರೀಕ್ಷೆ ಬರೆಯುವ ಪಾಡು ವಿದ್ಯಾರ್ಥಿಗಳಿಗೆ ತಪ್ಪಲಿದೆ ಅನ್ನುವ ಹಿತಕರ ವಾದವನ್ನು ನೀಟ್ ಸಮರ್ಥಕರು ನೀಡುತ್ತ ಬಂದಿದ್ದರು. ಆದರೆ ಎರಡು ವರ್ಷಗಳಲ್ಲಿ ಕಂಡಂತೆ ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆಗಳು, ಹಿಂದಿ-ಇಂಗ್ಲಿಷಿನ ಪ್ರಶ್ನೆ ಪತ್ರಿಕೆಗಳಿಗೂ ಅನುವಾದ ಮಾಡಲ್ಪಟ್ಟ ಬೆಂಗಾಲಿ, ಗುಜರಾತಿ, ತಮಿಳು ಪ್ರಶ್ನೆ ಪತ್ರಿಕೆಗಳಿಗೂ ವ್ಯತ್ಯಾಸ ಕಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ತಮಿಳುನಾಡಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರಾಜಸ್ಥಾನದ ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಿದ್ದು ಸೇರಿದಂತೆ ಅನೇಕ ಎಡವಟ್ಟುಗಳು ನಡೆದಿವೆ. ಇಂತಹ ತೊಂದರೆಗಳು ಮುಂಚಿನಂತೆ ಯಾವುದೋ ಒಂದು ರಾಜ್ಯದ ಮಕ್ಕಳಿಗಷ್ಟೇ ತೊಂದರೆ ಮಾಡದೇ ಎಲ್ಲ ರಾಜ್ಯದ ಮಕ್ಕಳಿಗೂ ತೊಂದರೆ ಮಾಡುವ ಸ್ಥಿತಿ ನಾವು ನೋಡಬಹುದಾಗಿದೆ.

ಇದೆಲ್ಲ ಒಂದು ತೂಕವಾದರೆ ಕೋಚಿಂಗ್ ಕೇಂದ್ರಗಳು ದೊಡ್ಡ ಮಟ್ಟದಲ್ಲಿ ಹಣ ಸುಲಿಗೆ ಮಾಡಲು ನೀಟ್ ಅನುಕೂಲ ಕಲ್ಪಿಸಿದೆ. ಈ ಬಾರಿ ಆಯ್ಕೆಯಾದ ಮೊದಲ ನೂರು ಜನರಲ್ಲಿ ಐವತ್ತೊಂದು ಮಕ್ಕಳು ರಾಜಸ್ಥಾನದ ಕೋಟಾದಲ್ಲಿರುವ ತರಬೇತಿ ಕೇಂದ್ರಕ್ಕೆ ಸೇರಿದವರು ಅನ್ನುವ ಮಾಹಿತಿ ನೋಡಿದರೆ ಒಂದು ವ್ಯವಸ್ಥಿತವಾದ ಕೋಚಿಂಗ್ ಮಾಫಿಯಾ ಈಗ ತಲೆ ಎತ್ತಿ ನಿಂತಿದೆ ಅನ್ನಿಸುತ್ತೆ. ಗ್ರಾಮೀಣ ಬ್ಯಾಂಕುಗಳ ನೇಮಕಾತಿಯಲ್ಲೂ ಸ್ಥಳೀಯವಾಗಿ ನಡೆಯುತ್ತಿದ್ದ ಆಯ್ಕೆ ಪ್ರಕ್ರಿಯೆ ತಡೆದು ಅದರ ಸ್ಥಳದಲ್ಲಿ ತರಲಾದ ಐ.ಬಿ.ಪಿ.ಎಸ್. ಪರೀಕ್ಷೆಗಳು ಇಂದು ಇಂತಹುದೇ ಕೋಚಿಂಗ್ ಮಾಫಿಯಾವನ್ನು ಪೊರೆಯುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಮೂಲೆ ಮೂಲೆಯ ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡವೂ ಇಲ್ಲ, ಕನ್ನಡಿಗರೂ ಇಲ್ಲ ಅನ್ನುವ ಸ್ಥಿತಿ ಎದುರಾಗಿದೆ.

ನೀಟ್ ಪರೀಕ್ಷೆಗಾಗಿಯೇ ತರಾತುರಿಯಲ್ಲಿ ಪಿಯುಸಿ ಪಠ್ಯಕ್ರಮವನ್ನು ಸಿ.ಬಿ.ಎಸ್.ಇ. ಮಟ್ಟಕ್ಕೇರಿಸುವ ನಿಲುವನ್ನು ಕರ್ನಾಟಕದ ಹಿಂದಿನ ಸರ್ಕಾರ ಕೈಗೊಂಡಿತ್ತು. ಆದರೆ ಶಿಕ್ಷಕರಿಗೆ ಸೂಕ್ತ ತರಬೇತಿಯ ಕೊರತೆ, ಪಿಯುಸಿ ಮಟ್ಟಕ್ಕಿಂತ ಹಿಂದಿನ ತರಗತಿಗಳಲ್ಲಿನ ಪಠ್ಯಕ್ರಮದಲ್ಲಿನ ವ್ಯತ್ಯಾಸದಿಂದಾಗಿ ಈ ನಡೆ ಯಶಸ್ವಿಯಾಗಿಲ್ಲ. ಹೀಗಾಗಿ ಹಳ್ಳಿಗಾಡಿನ, ಕನ್ನಡ ನಾಡಿನ ಚಿಕ್ಕಪುಟ್ಟ ಊರುಗಳಲ್ಲಿನ ಮಕ್ಕಳು ವೈದ್ಯರಾಗುವ ಕನಸಿಗೆ ದೊಡ್ಡ ಹೊಡೆತವನ್ನೇ ನೀಟ್ ನೀಡುತ್ತಿದೆ. ಯಾಕೆಂದರೆ ಇವರು ಎಂದಿಗೂ ಪಟ್ಟಣದ ಸಿ.ಬಿ.ಎಸ್.ಇ. ವ್ಯವಸ್ಥೆಯಲ್ಲಿ ಪಳಗಿದ ಮಕ್ಕಳ ಎದುರು ಸ್ಪರ್ಧಿಸಿ ಗೆಲ್ಲಲಾರರು. ಹೀಗಾಗಿ ಕರ್ನಾಟಕದಲ್ಲಿನ ವೈದ್ಯಕೀಯ ಸೀಟುಗಳು ಹೆಚ್ಚಿನ ಪ್ರಮಾಣದಲ್ಲಿ ನಗರಪ್ರದೇಶದ ಮಕ್ಕಳ ಕೈವಶವಾಗುವ ಸಾಧ್ಯತೆ ಈಗ ಕಂಡು ಬರುತ್ತಿದೆ. ಅಲ್ಲದೇ ನಗರ ಪ್ರದೇಶದ ಸಿ.ಬಿ.ಎಸ್.ಇ ಶಾಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡೇತರರ ಮಕ್ಕಳು ಓದುತ್ತಿದ್ದು, ಅವರು ರಾಜ್ಯದ ಕೋಟಾದಡಿಯಲ್ಲೇ ಸೀಟುಗಳನ್ನು ಪಡೆಯುತ್ತಿರುವುದರಿಂದ ಕನ್ನಡದ ಮಕ್ಕಳಿಗೆ ಅಲ್ಲೂ ಅನ್ಯಾಯವಾಗುತ್ತಿದೆ.

ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ನುರಿತ ವೈದ್ಯರ ಕೊರತೆಯಿಂದಾಗಿ ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ. ನಕಲಿ ಡಾಕ್ಟರುಗಳ ಹಾವಳಿಯೂ ಗ್ರಾಮೀಣ ಭಾಗದಲ್ಲೇ ಹೆಚ್ಚು. ಸಣ್ಣ ಊರು, ಪಟ್ಟಣಗಳ ಮಕ್ಕಳು ವೈದ್ಯಕೀಯ ಓದುವಂತಾದರೆ ಅವರು ಮರಳಿ ಹಳ್ಳಿಯಲ್ಲಿ ಸೇವೆ ಸಲ್ಲಿಸುವ ಸಾಧ್ಯತೆ ಹೆಚ್ಚು. ಆದರೆ ಆ ಸಾಧ್ಯತೆಗೆ ನೀಟ್ ಹೊಡೆತ ನೀಡುತ್ತಿದೆ. ಇನ್ನೊಂದೆಡೆ ನೀಟ್ ಪರೀಕ್ಷೆಯ ಪರವಿರುವವರು ನೀಟ್ ಬಂದರೆ ರಾಜ್ಯಗಳು ನಡೆಸುವ ಪ್ರವೇಶ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಕಡಿಮೆಯಾಗುವುದು, ಸಿ.ಬಿ.ಎಸ್.ಇ. ಪಠ್ಯಕ್ರಮ ರಾಜ್ಯದ ಪಠ್ಯಕ್ರಮಕ್ಕಿಂತ ಶ್ರೇಷ್ಠ ಎಂದೆಲ್ಲ ವಾದಿಸುತ್ತಾರೆ. ಈ ವಾದಗಳು ಅರೆಬೆಂದ ವಾದಗಳೇ ಸರಿ. ಎಲ್ಲೋ ಕೆಲ ರಾಜ್ಯಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮವಾದರೆ ಅದನ್ನೇ ನೆಪವಾಗಿಟ್ಟುಕೊಂಡು ಚೆನ್ನಾಗಿ ನಡೆಯುತ್ತಿದ್ದ ಅನೇಕ ರಾಜ್ಯಗಳ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಕರ್ನಾಟಕದ ಸಿ.ಇ.ಟಿ, ಕೆಲವು ಸಮಸ್ಯೆಗಳ ನಡುವೆಯೂ, ಕಳೆದ ಎರಡು ದಶಕಗಳಿಂದ ಲಕ್ಷಾಂತರ ಸಾಮಾನ್ಯ ಕನ್ನಡಿಗರ ವೈದ್ಯರಾಗುವ, ಇಂಜಿನಿಯರು ಗಳಾಗುವ ಕನಸನ್ನು ನನಸಾಗಿ ಸಿತ್ತು. ಆದರೆ ಇಂದು ಅದು ಕೇವಲ ಅಂಕಪಟ್ಟಿ ಪಡೆದು ಕೌನ್ಸೆಲಿಂಗ್ ನಡೆಸುವ ಮಟ್ಟಕ್ಕೆ ತನ್ನ ಪಾತ್ರವನ್ನು ಸೀಮಿತಗೊಳಿಸಿಕೊಳ್ಳುವ ಹಾಗಾಗಿದೆ. ನೆಗಡಿ ಬಂದರೆ ಮೂಗನ್ನೇ ಕುಯ್ಯುವುದು ಅಂದರೆ ಇದೇನಾ?

ನೀಟ್ ಮತ್ತು ಕೇಂದ್ರೀಕರಣ

ನೀಟ್ ತರಹದ ಪರೀಕ್ಷೆಗಳಲ್ಲಿ ಇರುವ ನಿಜವಾದ ತೊಂದರೆ ಆಳದಲ್ಲಿ ಅವು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಶಿಥಿಲಗೊಳಿಸಿ ದೆಹಲಿಯಿಂದಲೇ ಎಲ್ಲವನ್ನೂ ನಿಯಂತ್ರಿಸಬೇಕು ಅನ್ನುವ ಶಕ್ತಿಗಳಿಗೆ ಬಲ ತುಂಬುತ್ತವೆ ಅನ್ನುವುದು. ಸಿ.ಬಿ.ಎಸ್.ಇ. ಅನ್ನುವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದ್ದೇ ಒಕ್ಕೂಟ ಸರ್ಕಾರದ ಬೇರೆಬೇರೆ ಇಲಾಖೆಗಳಲ್ಲಿ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ನೌಕರರ ಮಕ್ಕಳ ಕಲಿಕೆಗೆ ಒಂದೇ ವ್ಯವಸ್ಥೆ ಬೇಕು ಅನ್ನುವ ಕಾರಣಕ್ಕೆ. ಹಾಗಿದ್ದರೆ ಇಂದು ನಾಯಿಕೊಡೆಗಳಂತೆ ಏಳುತ್ತಿರುವ ಸಿ.ಬಿ.ಎಸ್.ಇ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೆಲ್ಲ ವರ್ಗಾವಣೆಗೊಳಗಾಗುವ ನೌಕರರ ಮಕ್ಕಳೇ? ಇಂತಹ ಶಾಲೆಗಳಿಗೆ ಅನುಮತಿ ನೀಡಬೇಕಿದ್ದ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಿದ್ದು ಯಾಕೆ? ಇಂತಹ ಪ್ರಶ್ನೆಗಳನ್ನು ಈಗ ಎತ್ತಬೇಕಿದೆ.

ಅಲ್ಲದೆ ಸಿ.ಬಿ.ಎಸ್.ಇ. ಶಾಲೆಗಳಲ್ಲಿ ಕಲಿಸುವ ಸಮಾಜವಿಜ್ಞಾನದ ಪಠ್ಯ ಉತ್ತರ ಭಾರತದ ಇತಿಹಾಸವನ್ನೇ ಇಡೀ ಭಾರತದ ಇತಿಹಾಸವೆಂಬಂತೆ ಬಿಂಬಿಸುತ್ತದೆ ಅನ್ನುವ ಗುರುತರ ಆರೋಪಗಳಿವೆ. ಅಲ್ಲಿ ಕನ್ನಡಿಗರ ಇತಿಹಾಸವೂ ಇಲ್ಲ, ಕರ್ನಾಟಕದ ಬಗ್ಗೆ ನಯಾ ಪೈಸೆ ಮಾಹಿತಿಯೂ ಇಲ್ಲ. ಎಳೆಯ ಮಕ್ಕಳಿಗೆ ನಾಡು-ನುಡಿಯ ಪರಿಚಯವೇ ಇರದ ಇತಿಹಾಸವೊಂದನ್ನು ಕಲಿಸುವುದು ಅವರನ್ನು ಅವರ ಕನ್ನಡದ ಬೇರಿನಿಂದಲೇ ದೂರ ಮಾಡುವ ಕೆಟ್ಟ ಕೆಲಸವಾಗುವುದಿಲ್ಲವೇ? ಸಿ.ಬಿ.ಎಸ್.ಇ. ಶಾಲೆಗಳಲ್ಲಿ ಇಂಗ್ಲಿಷ್ ಜೊತೆ ಸಂಸ್ಕೃತ ಮತ್ತು ಹಿಂದೀಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಹೊರಟಿರುವಾಗ ಅಲ್ಲಿ ಕನ್ನಡವನ್ನು ಒಂದು ಭಾಷೆಯಾಗಿಯೂ ಕಲಿಯುವ ಸಾಧ್ಯತೆಯಿಲ್ಲ ಅನ್ನುವುದು ನಮ್ಮನ್ನು ಇನ್ನಿಲ್ಲದಂತೆ ಕಾಡಬೇಕಾದ ವಿಷಯವಲ್ಲವೇ?

ಒಮ್ಮೆ ಸಿ.ಬಿ.ಎಸ್.ಇ. ಪಠ್ಯಕ್ರಮದಲ್ಲಿ ಓದಿದರೆ ಮಾತ್ರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಸಾಧ್ಯ ಅನ್ನುವ ಅಭಿಪ್ರಾಯ ಪಾಲಕರಲ್ಲಿ ಮೂಡಿದರೆ ಗುಣಮಟ್ಟ ಎಷ್ಟೇ ಚೆನ್ನಾಗಿದ್ದರೂ ರಾಜ್ಯ ಪಠ್ಯಕ್ರಮದ ಶಾಲೆ/ಕಾಲೇಜುಗಳನ್ನು ಯಾರಾದರೂ ಕೇಳುವರೇ? ರಾಜ್ಯ ಪಠ್ಯಕ್ರಮದಿಂದ ಸಿ.ಬಿ.ಎಸ್.ಇ.ಯತ್ತ ನಡೆಯಬಹುದಾದ ವಲಸೆ ರಾಜ್ಯ ಸರ್ಕಾರದ ಕೈಯಲ್ಲಿರುವ ಶಿಕ್ಷಣ ಇಲಾಖೆಯನ್ನೇ ಹಂತ ಹಂತವಾಗಿ ಬಲಹೀನಗೊಳಿಸುವ ಅಪಾಯವನ್ನು ನಾವು ಮನಗಾಣಬೇಕಿದೆ. ನೀಟ್ ಮೂಲಕ ಕನ್ನಡಿಗರು ತಮ್ಮನ್ನು ತಾವೇ ಆಳಿಕೊಳ್ಳುವ ಸ್ವಾಯತ್ತೆಯಲ್ಲಿ ಒಂದಿಷ್ಟನ್ನು ಕಳೆದುಕೊಳ್ಳಲಿದ್ದಾರೆ ಅನ್ನುವುದನ್ನು ಗಮನಿಸಬೇಕಾದುದು ಈ ಹೊತ್ತಿನ ತುರ್ತಾಗಿದೆ.

ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಒಯ್ಯುವುದು ಕೆಲಸ ಸರಳ ಅನ್ನಿಸುವಂತೆ ಮಾಡಿದರೂ ಒಂದು ಸಣ್ಣ ಎಡವಟ್ಟು ಹೇಗೆ ಎಲ್ಲವನ್ನೂ ಹಾಳು ಮಾಡುತ್ತದೆಯೋ ಕೇಂದ್ರೀ ಕರಣದ ಇಂತಹ ನಡೆಗಳು ಅದನ್ನೇ ಮಾಡುತ್ತವೆ. ಕರ್ನಾ ಟಕದಲ್ಲಿ ಹಿಂದಿನಿಂದಲೂ ನಮ್ಮ ಚಿಂತಕ ವಲಯದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಯ ಕುರಿತು ವಿಚಾರ ಸ್ಪಷ್ಟತೆ ಇಲ್ಲದೇ ಇರುವುದು ಇಂತಹ ಸಮಸ್ಯೆಗಳನ್ನು ಮೂಲದಲ್ಲೇ ಕಂಡು ಪರಿಹರಿಸುವ ಅವಕಾಶ ಇಲ್ಲದಂತಾಗಿಸಿದೆ. ಇದಕ್ಕೆ ಕರ್ನಾಟಕ ಕೇಂದ್ರಿತವಾದ ರಾಜಕಾರಣದ ಚಿಂತನೆಯೇ ಒಂದು ಪರಿಹಾರ ಒದಗಿಸಬಲ್ಲದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು, ಯಾವಾಗ ಅನ್ನುವುದು ತಿಳಿಯದು.

* ಲೇಖಕರು ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಐಟಿ ಸಂಸ್ಥೆಯೊಂದರ ಉದ್ಯೋಗಿ, ಅಂಕಣಕಾರರು. ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಕ್ರಿಯಾಶೀಲರು. ಬಸವನಗುಡಿಯಲ್ಲಿ ಕನ್ನಡ, ಕರ್ನಾಟಕ ಕೇಂದ್ರಿತವಾದ ಪುಸ್ತಕಗಳಿಗೇ ಮೀಸಲಾದ ಮುನ್ನೋಟ ಮಳಿಗೆ ಸ್ಥಾಪಿಸಿ ನಾಡುನುಡಿ ಕುರಿತ ಮಾತುಕತೆಗೆ ವೇದಿಕೆ ಕಲ್ಪಿಸಿದ್ದಾರೆ. ‘ಕರ್ನಾಟಕವೊಂದೇ’, ‘ಕನ್ನಡ ಜಗತ್ತು’ ಪ್ರಕಟಿತ ಕೃತಿಗಳು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮