2nd ಜೂನ್ ೨೦೧೮

ಪರ್ಯಾಯ ಪ್ರಜಾ ಪ್ರಣಾಳಿಕೆಗಳು

‘ಸಮಾಜಮುಖಿ’ ಮಾಸಪತ್ರಿಕೆಯ ಐದನೇ ಸಂಚಿಕೆಯನ್ನು ಬೆಂಗಳೂರಿನ ಗಾಂಧಿಭವನದ ಬಾಪು ಸಭಾಂಗಣದಲ್ಲಿ 2018ರ ಮೇ 3ರಂದು ಬಿಡುಗಡೆ ಮಾಡಲಾಯಿತು. ಸಮಾಜಮುಖಿ ಮತ್ತು ವಿವಿಧ ಸ್ವಯಂಸೇವಾ ಸಂಘಟನೆಗಳ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 15ನೇ ಕರ್ನಾಟಕ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ‘ಪರ್ಯಾಯ ಪ್ರಜಾ ಪ್ರಣಾಳಿಕೆ’ಗಳನ್ನು ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಪರ್ಯಾಯ ಪ್ರಜಾಪ್ರಣಾಳಿಕೆಗಳನ್ನು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯನವರು ‘ಸರ್ಕಾರ ರಚನೆಯಾಗುವಾಗ ಸಮಾಜದ ಎಲ್ಲ ಸ್ತರಗಳ ಪ್ರತಿನಿಧಿಗಳಿರುವುದನ್ನು ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆಯನ್ನು ಖಾತರಿ ಮಾಡಿಕೊಳ್ಳಲೇಬೇಕು’ ಎಂದು ಹೇಳಿದರು. ರಾಜಕೀಯ ಪಕ್ಷಗಳು ಹೊರಡಿಸುವ ಚುನಾವಣಾ ಪ್ರಣಾಳಿಕೆಗಳು ಮತ್ತು ನಿರ್ದಿಷ್ಟವಾದ ವಿವಿಧ ವಿಚಾರಗಳನ್ನು ಕುರಿತು ಸಿದ್ಧವಾಗುವ ಪರ್ಯಾಯ ಪ್ರಣಾಳಿಕೆಗಳನ್ನು ಕುರಿತು ಸಾರ್ವಜನಿಕ ತುಲನೆ ಮತ್ತು ಚರ್ಚೆ ಇಂದಿನ ಅತ್ಯಾವಶ್ಯಕತೆ ಎಂದು ಹೇಳಿದ ವೆಂಕಟಾಚಲಯ್ಯ ನವರು, ರಾಜಕೀಯ ಪಕ್ಷಗಳೆದುರು ತಮ್ಮ ಹಕ್ಕು ಆವಶ್ಯಕತೆಗಳಿಗಾಗಿ ಒತ್ತಾಯಿಸುವುದು ನ್ಯಾಯಬದ್ಧವಾಗಿದೆ ಎಂದರು.

ಪರ್ಯಾಯ ಪ್ರಜಾ ಪ್ರಣಾಳಿಕೆಗಳನ್ನು ಹೊರತರುವಂತಹ ಪ್ರಯತ್ನಗಳು ಅಷ್ಟಕ್ಕೇ ನಿಲ್ಲದೆ ಸರ್ಕಾರ ರಚನೆಯಾದ ಮೇಲೂ ಅನುಸರಣೆ ಮಾಡಬೇಕು ಎಂದ ಎಂ.ಎನ್.ವೆಂಕಟಾಚಲಯ್ಯನವರು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡು ಆಡಳಿತದ ಮೇಲೆ ಕಣ್ಗಾವಲು ಇಡದಿದ್ದರೆ ಸಂವಿಧಾನವೇ ಹಾದಿತಪ್ಪಬಹುದು ಎಂದರು. ಪ್ರಜಾಪ್ರಭುತ್ವವೆಂಬುದು ಕೇವಲ ಮತಗಳಿಕೆಗೆ ಸೀಮಿತವಾಗಿ, ಕಡಿಮೆ ಪ್ರಮಾಣದ ಮತಪಡೆದವರು ಕೂಡಾ ಆಡಳಿತ ನಡೆಸುವಂತಾಗಿರುವುದು ಪರಿಸ್ಥಿತಿಯ ವ್ಯಂಗ್ಯ ಎಂದು ವೆಂಕಟಾಚಲಯ್ಯನವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ‘ಸಮಾಜಮುಖಿ’ ಪತ್ರಿಕೆಯ ಸಂಪಾ ದಕೀಯ ಸಲಹೆಗಾರರಾದ ಪೃಥ್ವಿದತ್ತ ಚಂದ್ರಶೋಭಿ, ‘ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿರುವ ಸಂಕ್ರಮಣ ಕಾಲದಲ್ಲಿರುವ ನಾವು, ವಿವಿಧ ರೀತಿಯ ಒತ್ತಡಗಳು, ಸೆಳೆತಗಳಿಗೆ ಬಲಿಯಾಗಿ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವಿವಿಧ ಗುಂಪುಗಳು ತಮ್ಮತಮ್ಮ ಕ್ಷೇತ್ರದಲ್ಲಿನ ವಿಚಾರಗಳನ್ನು ಕುರಿತು ಆಳವಾದ ಅಧ್ಯಯನ ಚಿಂತನೆ ನಡೆಸಿ, ರಾಜಕೀಯ ಪಕ್ಷಗಳು ಗಮನ ಕೊಡಲೇಬೇಕಿರುವಂತಹ ಮತ್ತು ಮುಂದೆ ಆಡಳಿತಕ್ಕೆ ಬಂದಾಗ ತಮ್ಮ ಯೋಜನೆ, ಕಾರ್ಯಕ್ರಮಗಳಲ್ಲಿ ಪ್ರಜೆಗಳ ಹಿತದೃಷ್ಟಿಯಿಂದ ಅಳವಡಿಸಿಕೊಳ್ಳಲೇಬೇಕಿರುವ ಪರ್ಯಾಯ ಪ್ರಜಾ ಪ್ರಣಾಳಿಕೆಗಳನ್ನು ಸಿದ್ಧಪಡಿಸಿರುವುದು ಸ್ವಾಗತಾರ್ಹ’ ಎಂದರು.

ವಿವಿಧ ವಿಚಾರಗಳನ್ನು ಕುರಿತು 15 ಸ್ವಯಂಸೇವಾ ಸಂಘಟನೆಗಳು ಮತ್ತು ಒಕ್ಕೂಟಗಳು ಸಿದ್ಧಪಡಿಸಿರುವ ಹಾಗೂ ರಾಜಕೀಯ ಪಕ್ಷಗಳಿಗೆ ತಲುಪಿಸಲಾಗಿರುವ ಪ್ರಜಾ ಪರ್ಯಾಯ ಪ್ರಣಾಳಿಕೆಗಳ ಮುಖ್ಯಾಂಶಗಳನ್ನು ವಿಚಾರಸಂಕಿರಣದಲ್ಲಿ ಮಂಡಿಸಲಾಯಿತು: ನಾಗರಿಕ ಸಮಾಜ ವೇದಿಕೆಯ ಪ್ರಣಾಳಿಕೆ; ಮಾನವ ಹಕ್ಕುಗಳ ಪ್ರಣಾಳಿಕೆ; ಕರ್ನಾಟಕ ಯುವ ನಾಗರಿಕ ವೇದಿಕೆ; ಮಕ್ಕಳ ಹಕ್ಕುಗಳ ಪ್ರಣಾಳಿಕೆ; ದುಡಿಯುವ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳ ಪ್ರಣಾಳಿಕೆ; ಗುಣಮಟ್ಟದ ಮಕ್ಕಳ ಪೋಷಣೆಗಾಗಿ ಆಗ್ರಹಗಳು; ಸುಸ್ಥಿರತೆ ಬದ್ಧತೆ; ವಲಸೆ ಕಾರ್ಮಿಕರ ಪ್ರಣಾಳಿಕೆ; ಅನುಸೂಚಿತ ಜಾತಿಯವರ (ಪರಿಶಿಷ್ಟ ಜಾತಿ) ಪ್ರಣಾಳಿಕೆ; ಗ್ರಾಮ ಸ್ವರಾಜ್ಯದ ಪರಿಣಾಮಕಾರಿ ಅನುಷ್ಟಾನಕ್ಕೆ ಪ್ರಣಾಳಿಕೆ; ಕೆರೆಗಳ ರಕ್ಷಣೆಗಾಗಿ ಆಗ್ರಹಗಳು; ಉದ್ಯಾನವನಗಳ ರಕ್ಷಣೆಗಾಗಿ ಆಗ್ರಹಗಳು; ಅಂಗವಿಕಲರಿಗಾಗಿ ವಿಶೇಷ ಯೋಜನೆಗಳ ಪ್ರಣಾಳಿಕೆ.

ಪ್ರಜಾ ಪ್ರಣಾಳಿಕೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಐಸೆಕ್‍ನ ನಿವೃತ್ತ ನಿರ್ದೇಶಕರಾದ ಆರ್.ಎಸ್.ದೇಶಪಾಂಡೆಯವರು, ‘ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳು ಅನೇಕ ಬಾರಿ ಅನುಸರಣೆಯಿಲ್ಲದೆ ಅರ್ಥ ಕಳೆದುಕೊಳ್ಳುತ್ತವೆ, ಹೀಗಾಗಿ ಚುನಾ ಯಿತ ಸರ್ಕಾರದೊಡನೆ ಅನುಸರಣೆ ನಡೆಸಲು ಸಾಂಸ್ಥಿಕ ವ್ಯವಸ್ಥೆಗಳನ್ನು ಮಾಡಬೇಕು ಹಾಗೂ ಚುನಾಯಿತ ಪ್ರಜಾಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸೂಕ್ಷ್ಮಗೊಳಿಸಬೇಕು’ ಎಂದರು. ಈ ಹಿಂದೆ ಪ್ರಜಾಪ್ರಣಾಳಿಕೆಗಳನ್ನು ಸಿದ್ಧ ಪಡಿಸಿದ್ದು ಮತ್ತು ಚುನಾಯಿತ ಪ್ರಜಾಪ್ರತಿನಿಧಿಗಳ ಕಾರ್ಯನಿರ್ವಹಣೆ ಕುರಿತು ನಡೆಸಿದ ಮೌಲ್ಯಮಾಪನಗಳನ್ನು ನೆನಪಿಸಿಕೊಂಡ ದಕ್ಷ್ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ನರಸಪ್ಪನವರು, ‘ಚುನಾಯಿತ ಪ್ರತಿನಿಧಿಗಳನ್ನು ಹಾಗೂ ಆಡಳಿತದಲ್ಲಿರುವ ಮತ್ತು ವಿರೋಧ ಪಕ್ಷವಾಗುವ ರಾಜಕೀಯ ಪಕ್ಷಗಳ ಮೌಲ್ಯಮಾಪನವನ್ನು ವಾರ್ಷಿಕವಾಗಿ ನಡೆಸುವ ವ್ಯವಸ್ಥೆಯನ್ನು ನಾವು ಮಾಡಬೇಕಿದೆ’ ಎಂದು ಸಲಹೆ ನೀಡಿದರು. ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿವೃತ್ತ ಅಧ್ಯಕ್ಷರಾದ ನೀನಾ ನಾಯಕ್ ಅವರು ಪ್ರತಿಕ್ರಿಯಿಸಿ, ‘ಪ್ರಜೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಂಶೋಧನೆ ಆಧರಿಸಿದ ಪ್ರಕ್ರಿಯೆಗಳನ್ನು ಸರ್ಕಾರ ಮತ್ತು ಸ್ವಯಂಸೇವಾ ಸಂಘಟನೆಗಳು ಜಂಟಿಯಾಗಿ ಕೈಗೊಳ್ಳಬೇಕಿದೆ’ ಎಂದರು.

ವಿಚಾರ ಸಂಕಿರಣದಲ್ಲಿ ವಿವಿಧ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು, ಪತ್ರಿಕಾಬಳಗ, ಸಂಶೋಧಕರು, ವಿದ್ಯಾರ್ಥಿಗಳು, ಸಾಮಾಜಿಕ ಚಿಂತಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್‍ನ ವ್ಯವಸ್ಥಾಪಕ ನಿರ್ದೇಶಕ ವಾಸುದೇವ ಶರ್ಮಾ ಎನ್.ವಿ. ವಂದಿಸಿದರು.

ಸಮಾಜಮುಖಿ ಲೋಕಾರ್ಪಣೆ

ಫೆಬ್ರವರಿ ೨೦೧೮