2nd June 2018

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಡಾ.ವಿನಯಾ ಒಕ್ಕುಂದ

ಕವಿ ಈ ಕಥೆಯನ್ನು ಆರಂಭಿಸುವುದು, ಹೆಣ್ಣಿನ ಬಾಳಿನಲ್ಲಿ ಕಷ್ಟ ಪರಂಪರೆಗಳಿಗೊಂದು ಮುಕ್ತಾಯ ಎಂಬುದಿದೆಯೇ? ಎಂಬ ಅನಾದಿ ಪ್ರಶ್ನೆಯನ್ನು ಮುಂದಿಟ್ಟುಕೊಂಡು. ನೆಲಕುರುಳುವ ಸೀತೆ, ಎದ್ದಾಗ ಹೊಸ ನೋವಿನ ನೇಗಿಲಲಿ ಉತ್ತ ಹೊಸ ಹೆಣ್ಣಾಗಿದ್ದಳು. ಇಲ್ಲಿ ಕವಿ ವ್ಯವಸ್ಥೆಯ ನಿರಂತರ ದೌರ್ಜನ್ಯವನ್ನು ತಾಳುವ ಹೆಣ್ತನದ ತ್ರಾಣಕ್ಕೆ ಸೀತೆಯನ್ನು ಪ್ರತಿಮೆಯಾಗಿಸುತ್ತಾನೆ.

ಪ್ರಾಚೀನ ಕಾವ್ಯಗಳನ್ನು ಇಂದಿನ ಕಣ್ಣೋಟಕ್ಕೆ ಒಳಗು ಮಾಡಿದಾಗ ಕಥನದ ಹರವಿನಲ್ಲಿದ್ದ ಸಂಘರ್ಷದ ತರಂಗಗಳು ಗೋಚರಿಸುತ್ತವೆ. ಪ್ರಾಚೀನ ಕ್ಲಾಸಿಕ್ಸ್‍ಗಳಿಗೆ ಅಥದ್ದೊಂದು ತ್ರಾಣವಿದೆ. ಅವು ಮನುಷ್ಯ ಬದುಕನ್ನು, ಬೃಹತ್ ಕ್ಯಾನವಾಸಿನಲ್ಲಿ ಮೂಡಿಸುತ್ತವೆ. ನಿರ್ವಾಣವನ್ನು ಆತ್ಯಂತಿಕವಾಗಿ ಪ್ರತಿಪಾದಿಸುವ ಗೊಮ್ಮಟನಂತೆ. ಈ ಪಠ್ಯಗಳು ಮುನ್ನೆಲೆಗೆ ತರಲೆತ್ನಿಸಿದ ಅನೇಕ ಪ್ರಶ್ನೆಗಳನ್ನು ಕನ್ನಡ ಕಥನಪ್ರಿಯ ಓದುಕ್ರಮದ ಭರಾಟೆ ಅಂಚಿಗೆ ತಳ್ಳಿದಂತೆನಿಸುತ್ತದೆ. ಬಹುಓದುಗಳಿಗೆ ಒಳಗಾದ ಜನಪ್ರಿಯ ಪಠ್ಯ ಲಕ್ಷ್ಮೀಶನ ಜೈಮಿನಿಭಾರತ. ಕನ್ನಡಿಗರು ಕಥಾಕಾಲಕ್ಷೇಪಕ್ಕೆ, ಪಾಂಡಿತ್ಯ ಮೀಮಾಂಸೆಗೆ, ಮೌಲ್ಯನಿಷ್ಕರ್ಷೆಗೆ ಒರೆಗಲ್ಲಾಗಿ ಬಳಸಿದ ಕೃತಿಯಿದು.

ಸಂಸ್ಕೃತದಲ್ಲಿ ಜೈಮಿನಿಮುನಿ ರಚಿಸಿದ್ದ ಕೃತಿಯನ್ನು ಲಕ್ಷ್ಮೀಶ ಕನ್ನಡೀಕರಿಸಿದ್ದಾನೆ. ಈತ 16ನೇ ಶತಮಾನದ ಮಧ್ಯಭಾಗದಲ್ಲಿದ್ದ ದೇವಪುರದ ಲಕ್ಷ್ಮೀರಮಣನ ಪರಮಭಕ್ತ. ವಾರ್ಧಕ ಷಟ್ಪದಿಯಲ್ಲಿ ನೂರಾರು ಉಪಕಥೆಗಳನ್ನು ಪೋಣಿಸಿ, ಅವುಗಳ ಮೂಲಕವೂ ಕನ್ನಡಿಗರ ಜನಮಾನಸದಲ್ಲುಳಿದವನು. ಪ್ರಾಸಂಗಿಕವಾಗಿ, ಆದರೆ ಉದ್ದೇಶಿತವಾಗಿ ಸೀತಾಪರಿತ್ಯಾಗದ ಕಥನವನ್ನು ಆಯ್ದುಕಟ್ಟುತ್ತಾನೆ. ಸೀತೆಯ ಪಾತ್ರ ನಿರ್ವಚನದಲ್ಲಿ ಹೆಣ್ಣಿನ ಕುರಿತ ಆಧುನಿಕತೆಯ ಹೊಳಹುಗಳಿರುವ ಅಪರೂಪದ ಭಾಗವಿದು. ಲಂಕಾದಹನ ಮುಗಿದು ರಾಮ ಪಟ್ಟಾಭಿಷಿಕ್ತನಾಗಿದ್ದಾನೆ. ಸೀತಾ ಪರಿತ್ಯಾಗ, ಲವ—ಕುಶರ ಬೆಳವಣಿಗೆ, ರಾಮನ ಅಶ್ವಮೇದ, ರಾಮನ ಸಮಸ್ತ ಸೈನ್ಯವೇ ಲವಕುಶರಿಂದ ಸೋಲುವುದು, ಕೊನೆಯಲ್ಲಿ ಸೀತೆ—ರಾಮರು ರಾಜ್ಯದಾಳ್ವಿಕೆ ನಡೆಸುವ ಕಥಾಹಂದರವಿದು.

ಕನ್ನಡದ ಯಾವ ಕ್ಲಾಸಿಕ್ ಕೃತಿಯು ಜನಪದಕಥನ ಪರಂಪರೆಯನ್ನು, ಬಹುತ್ವದ ನಿಲುವುಗಳನ್ನು ಅಲಕ್ಷಿಸಿಲ್ಲ. ಜಗದೊಳೆನಿತೊ ರಾಮಾಯಣಂಗಳೊಳವು —ಎನ್ನುವುದು ಜನಜನಿತವಾದದ್ದು. ಆ ಎಲ್ಲ ಅಂತಃಸತ್ವವನ್ನು ಲಕ್ಷ್ಮೀಶ ತನ್ನ ಕಾವ್ಯದ ಸೆಲೆಯಾಗಿಸಿಕೊಂಡಿದ್ದಾನೆ. ವಾಲ್ಮೀಕಿಗೂ ರಾಮಾಯಣಕ್ಕೂ ಇರುವ ಕರುಳ ಸಂಬಂಧವನ್ನು ಅನಾವರಣಗೊಳಿಸುತ್ತಾನೆ. ‘ಭೂರಿ ಶೋಕಾರ್ತರಾಗಿರ್ದರಂಕಂಡು ಸುಮ್ಮನೆ ಪೊಪನಲ್ಲ’ದ ವಾಲ್ಮೀಕಿಯ ವ್ಯಕ್ತಿತ್ವವದು. ಸೀತೆಯನ್ನು ಕಾಪಿಟ್ಟ ವಾಲ್ಮೀಕಿಯೇ ಬರೆದ ರಾಮಾಯಣವನ್ನು ನಾವು ಓದುವ, ಓದಬೇಕಾದ ಕ್ರಮ ಬೇರೆ ಇದ್ದೀತು ಎಂಬ ಸೂಚನೆಯಿದು. ಇಂದಿಗೂ ಜನಪದ ಭಾಷೆಯಲ್ಲಿ ಘೋರವನ್ನು ರಾಮಾರಗುತವೆಂದೂ, ಅನಗತ್ಯವಾಗಿ ಸಂಬಂಧ ಹಳಸಿ ಬದುಕು ಮೂರಾಬಟ್ಟೆಯಾಗುವುದನ್ನು ರಾಮಾಯಣವೆಂದೂ ಕರೆಯುವ ಕ್ರಮವಿದೆ. ಇಂತಹ ನುಡಿಗಟ್ಟುಗಳ ಹುಟ್ಟು ಆ ಸ್ಮೃತಿಕೋಶದ ದಾಖಲೆಯಂತಿದೆ. ಕವಿ ಲಕ್ಷ್ಮೀಶ, ಕಾಡು ಬದುಕನ್ನು ಕಥನದ ಪಾತ್ರವಾಗಿಸುತ್ತಾನೆ. ಲಕ್ಷ್ಮಣನು ಸೀತೆಯನ್ನು ಪರಿತ್ಯಜಿಸಿ ಬರಲು ಹೊರಟ ಹಾದಿಯನ್ನು ತಡೆವಯತ್ನ ಮಾಡುವ ಖಗ—ಮೃಗಗಳು, ಶೋಕತಪ್ತೆಯಾದ ಸೀತೆಯನ್ನು ನೋಡಿ, ‘ಜಾನಕಿಯ ಶೋಕಂ ತಮ್ಮದೆಂದಾಕೆಯಂಗಮಂ ನೋಡಿ ನೋಡಿ’ ಸ್ತಬ್ಧವಾಗಿ ನಿಂತ ದುಂಬಿ, ನವಿಲು, ಕೋಗಿಲೆ, ಗಿಳಿ, ಹಂಸೆ, ಜಿಂಕೆ, ಆನೆ, ಚಮರೀಮೃಗ, ಸಿಂಹಗಳ ಅನ್ಯಾದೃಶ ಚಿತ್ರಣವನ್ನು ಕೊಡುತ್ತಾನೆ. ಮಾತಿಲ್ಲದ ಮೂಕ ಜೀವಿಗಳ ಸಂಕಟದೊಂದಿಗೆ ಸೀತೆಯ ಸಂಕಟವೂ ಹುರಿಗಟ್ಟುತ್ತದೆ. ಆ ಅಸಹಾಯಕ ತಪ್ತ ಜೀವಿಗಳ ಮೂಲಕ ಇಕ್ಷ್ವಾಕು ವಂಶದ ಶ್ರೀರಾಮಚಂದ್ರನ ಪಾತ್ರ ಕಣ್ಣಿಗೆಕಟ್ಟುತ್ತದೆ.

ಕವಿ ಈ ಕಥೆಯನ್ನು ಆರಂಭಿಸುವುದು, ಹೆಣ್ಣಿನ ಬಾಳಿನಲ್ಲಿ ಕಷ್ಟ ಪರಂಪರೆಗಳಿಗೊಂದು ಮುಕ್ತಾಯ ಎಂಬುದಿದೆಯೇ? ಎಂಬ ಅನಾದಿ ಪ್ರಶ್ನೆಯನ್ನು ಮುಂದಿಟ್ಟುಕೊಂಡು. ಎಲ್ಲವೂ ಮುಗಿದು, ರಾಮರಾವಣಾರಿಯಾಗಿ, ಪಟ್ಟಾಭಿಷಿಕ್ತನಾಗಿ, ವಂಶದ ವಾರಸುದಾರರಲಿಲ್ಲವೆಂದು ಪರಿತಪಿಸುವಾಗ, ಸೀತೆ ಗರ್ಭಿಣಿಯಾಗಿ, ಪುಂಸವನ ಕಾರ್ಯವೂ ಮುಗಿದು, ಜನರು ಹರ್ಷಚಿತ್ತರಾಗಿರುವಾಗ, ರಾಮನ್ಯಾಕೋ ಅಕಾರಣ ವ್ಯಾಕುಲಗೊಂಡಿದ್ದಾನೆ. ಅವನಿಗೆ ಜಾನಕಿ ಕಾಡೊಳಗೆ ದೇಸಿಗಳಂತೆ ಮರುಗುತ್ತಿರುವ ಕನಸಾಗುತ್ತದೆ. ಕನಸು ಒಳಿತಲ್ಲವೆಂದು ವಸಿಷ್ಠರು ಉಪಃಶಮನವನ್ನೂ ಮಾಡಿಸಿದ್ದಾರೆ. ಆದರೆ ಶ್ರೀರಾಮನಿಗೆ ಪ್ರಜೆಗಳು ತನ್ನ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದರೆಂದು ತಿಳಿದುಕೊಲ್ಳುವ ಆಸೆಯಾಗುತ್ತದೆ. ಒಬ್ಬ ದೂತ ‘ತರಣಿಯಂ ಕಾವಳ ಮುಸುಗಿದೊಡೇನು?’ಎಂದು ವ್ಯಂಗ್ಯವಾಡುತ್ತಾನೆ. ರಾಮನು ಒತ್ತಾಯಿಸಿದಾಗ, ಒಬ್ಬ ಮಡಿವಳನು ‘ಅಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ ಕೊಂಡಾಳುವವನಲ್ಲ’ ಎಂದ ಮಾತನ್ನು ತಿಳುಹುತ್ತಾನೆ. ರಾಮನೇಕೆ ಪುಂಸವನ ಸೀಮಂತದ ನಂತರ ವ್ಯಾಕುಲಗೊಂಡ? ರಾಮನ ಮನದೊಳಗೆ ಸುಳಿದ ಶಂಕೆ ಯಾವುದು? ಹೆಣ್ಣಿನಿಂದ ತಾಯ್ತನವನ್ನು, ತಾಯ್ತನಕ್ಕಾಗಿ ಅವಳ ಶೀಲಶುದ್ಧತೆಯನ್ನು ಬಯಸುವ ಪಿತೃಪ್ರಧಾನತೆ ಹೆಣ್ಣನ್ನು ಹಿಂಸೆಗೀಡು ಮಾಡುತ್ತದೆ ಮಾತ್ರವಲ್ಲ ತಾನೂ ನೋಯುತ್ತದೆ. ಸೀತೆಯ ಗರ್ಭಶುದ್ಧಿಯನ್ನು ಮನನ ಮಾಡುವ ಸಲುವಾಗಿಯೇ ಕವಿ, ಅವಳು ರಜಸ್ವಲೆಯಾದುದನ್ನೂ ‘ಸೀತಾ—ರಾಮನ ಭೋಗವನ್ನೂ ತನ್ನ ಸಂಕ್ಷಿಪ್ತ ಕಥನದಲ್ಲಿಯೂ ಒಡನುಡಿಯುತ್ತಾನೆ. ಪಿತೃಪ್ರಧಾನ ನೀತಿ ನಿಯಮಗಳು ಹೆಣ್ಣಿನ ದೇಹ, ನಡವಳಿಕೆಗಳ ಮೇಲೆ ಹಕ್ಕು ಚಲಾಯಿಸುತ್ತ ತನ್ನ ಸುಪರ್ದಿಯೊಳಗೇ ಇರಿಸಿಕೊಳ್ಳುತ್ತದೆ. ಆದರೆ, ಅವಳ ಮನಸ್ಸನ್ನು ಯಾವ ಕಾರಣಕ್ಕೂ ಅಧಿಕಾರ ಕೇಂದ್ರದೊಳಗೆ ತಂದುಕೊಳ್ಳಲಾರೆ ಎಂಬ ಅರಿವಿನಿಂದ ಕಂಗಾಲಾಗುತ್ತದೆ. ನೋಯುವ, ನೋಯಿಸುವ ಹಿಂಸಾಕಾಂಡ ಬೆಳೆಯುತ್ತದೆ.

ಉಪಮಾಲೋಲ ಲಕ್ಷ್ಮೀಶ ಶ್ರೀರಾಮನನ್ನು ಮತ್ತೆ ಮತ್ತೆ ಸರ್ಪಕ್ಕೆ ಹೋಲಿಸುತ್ತಾನೆ. ದೂತನಾಡಿದ ಮಾತನ್ನು ಕೇಳಿ ದಿಕ್ಕೆಟ್ಟ ರಾಮ ‘ಪೊಕ್ಕನಂತಃಪುರಕೆ ಪುತ್ತವುಗುವಹಿಷ್ಠನಂತೆ’. ತನ್ನ ಅಪಕೀರ್ತಿಯ ಸೇಡನ್ನು ತೀರಿಸಿಕೊಳ್ಳುವ ದುಮ್ಮಾನ ಮತ್ತು ಸರ್ಪದ ಕಾಯುವಿಕೆಯ ಹೋಲಿಕೆಯಿದು. ರಾಮ ಮಾತನಾಡಿದ್ದು ತನ್ನ ನಿರ್ಧಾರವನ್ನು ತಮ್ಮಂದಿರ ಮುಂದೆ ಪ್ರಕಟಿಸಲು. ‘ಸೀತೆಯಂ ಬಿಟ್ಟಿಲ್ಲದಿರೆ’ ಎಂದು ಘೋಷಿಸಲು. ನಿಂದೆಗೊಳಗಾದವಳನ್ನು ಬಿಡುವುದೇ ನಿಶ್ಚಯ ಎಂಬ ದೃಢನಿರ್ಧಾರವನ್ನು ಕದಲಿಸುವ ಶಕ್ತಿ ಸೋದರರ ಅನುನಯದ ನುಡಿಗಳಿಗೂ ಇರಲಿಲ್ಲ. ಸೋದರರು ಸೀತೆಯ ಅಗ್ನಿಪ್ರವೇಶ ಪರೀಕ್ಷೆಯನ್ನು ನೆನಪಿಸುತ್ತಾರೆ. ‘ಕರೆವ ಕಪಿಲೆಯನ್ನು ಕಾಡಿಗಟ್ಟುವರೇ?’ ಎಂದು ಇಕ್ಷ್ವಾಕು ವಂಶದ ಸಂತಾನದ ಆಮಿಷವನ್ನೊಡ್ಡುತ್ತಾರೆ. ಆದರೆ ರಾಮ, ಅಪಕೀರ್ತಿಗೆ ಅಂಜುತ್ತಾನೆ. ನಾಡಾಡಿಗಳ ನುಡಿಯ ಬಾಧೆಯನ್ನು ಪರಿಹರಿಸಿಕೊಳ್ಳುವ ಅನ್ಯಮಾರ್ಗಗಳಿರಲಿಲ್ಲವೇ? ತನ್ನ ಇದುವರೆಗಿನ ಚರಿತ್ರೆಯಲ್ಲಿ ತಾನು ಗೈದ ಕಾರ್ಯಗಳಲ್ಲಿ ಅಪವಾದಕ್ಕೊಳಗಾಗುವಂಥದ್ದೇನೂ ಇಲ್ಲವೇಇಲ್ಲ ಎಂದುಕೊಂಡಿದ್ದನೇ? ಜಾನಕಿಯನ್ನು ಬಿಟ್ಟು ಪೊರೆಬಿಟ್ಟ ಉರಗದಂತಿರುತ್ತೇನೆ ಎನ್ನುತ್ತಾನೆ. ಈ ಭಾವ ರಾಮನನ್ನು ಅದೆಷ್ಟು ತೀವ್ರವಾಗಿ ಬಾಧಿಸುತ್ತದೆಯೆಂದರೆ, ಏನಾದರೂ ಮಾಡಿ ಈಗಿಂದೀಗಲೇ ತನ್ನ ಉದ್ದೇಶ ಸಾಧಿತವಾಗಬೇಕೆಂದು ಹಂಬಲಿಸುತ್ತನೆ. ನೇರವಾಗಿ ಸೋದರ ಲಕ್ಷ್ಮಣನ ಹೆಗಲಿಗದನ್ನು ಹಾಕುತ್ತಾನೆ.

ಲಕ್ಷ್ಮೀಶನ ಕಾವ್ಯ ‘ಸೀತಾ ಪರಿತ್ಯಾಗ’ ಎಂಬ ಭಾಷಿಕ ಚಮತ್ಕಾರವನ್ನು ಬಯಲುಗೊಳಿಸುತ್ತ, ಅದರೊಳಗಿನ ಕೊಲೆಗತ್ತಿಯನ್ನು ತೋರುವುದು ಲಕ್ಷ್ಮಣನ ಮೂಲಕ. ‘ಜನನಿಯಂಕೊಂದುಗ್ರಗತಿಯಪ್ಪುದೇಗೈವೆ?’ ಎಂದು ಬಳಲುತ್ತಾನೆ, ಅಳಲುತ್ತಾನೆ ಲಕ್ಷ್ಮಣ. ಕರ್ಮಣ್ಯೇ ವಅಧಿಕಾರಸ್ಥೇ ಮಾ ಫಲೇಶು ಕದಾಚನಾ’ ಎಂಬ ಗತ್ತಿನಲ್ಲಿ ರಾಮ ಸಾಂತ್ವನಿಸುತ್ತಾನೆ. “ನಿನಗೆ ದೋಷಮೆತಾನಿರಲ್ಕೆ?’ ಎಂದು ಒಂದು ರೀತಿಯಲ್ಲಿ ಕೊಲೆಯ ದೋಷದ ಭಾರವನ್ನು ರಾಮ ವಹಿಸಿಕೊಂಡ ಮೇಲೆಯೇ ಲಕ್ಷ್ಮಣನು ಒಲ್ಲದೆಯೂ ಒಪ್ಪಿಕೊಳ್ಳುವುದು. ಲಕ್ಷ್ಮಣನಿಂದ ವಿಷಯ ತಿಳಿದ ಜಾನಕಿ ಸಂಭ್ರಮಾನ್ವಿತೆ. ತನ್ನ ಅಭಿಷ್ಟ ಈಡೇರಿಸುತ್ತಿದ್ದಾನೆ ಪತಿ ಎಂಬ ಹರುಷ. ‘ಬನಕೆ ಪೊದಪೆನ್’ ಎಂಬ ಅವಳ ಸಂತಸಕ್ಕೆ ಲಕ್ಷ್ಮಣನ ಕಣ್ತುಂಬುತ್ತದೆ.

ಮಾರ್ಗದಲಿ ಕಾಣುತ್ತಿರುವ ದುರ್ನಿಮಿತ್ತಗಳಿಗೆ ಜಾನಕಿ, ರಾಮನಿಗೆ ಕೇಡಾಗದಿರಲೆಂದು ಹಂಬಲಿಸುತ್ತಾಳೆ. ಸೌಮಿತ್ರಿ, ಯುದ್ಧದಲ್ಲಿ ವೈರಿಗಳನ್ನು ಮಣಿಸುವ ರಥವೀಗ ‘ಕೋಮಲೆಯ ಕೊಲೆಗೆಲಸಕಾಯ್ತು!’ ಎಂದು ಮರುಗುತ್ತಾನೆ. ರಥ, ಅಪರಿಚಿತ ದಾರುಣ ದಟ್ಟಡವಿಗೆ ಮುನ್ನಡೆದಾಗ ಜಾನಕಿ ಬೆದರುತ್ತಾಳೆ. ‘ಇಲ್ಲಿಗೇಕೈತಂದೆ, ಸೌಮಿತ್ರಿ?’ ಎಂದು ಅಂಗಲಾಚುತ್ತಾಳೆ. ಜಾನಕಿಗೆ ಲಕ್ಷ್ಮಣನ ನಡತೆಯಲಿ ಸಂಶಯ ಕಾಣುತ್ತದೆ. ಆದರವಳು ರಾಮನನ್ನು ಸಂಶಯಿಸಳು. ಕಣ್ಣಾಲಿಗಳು ತುಂಬಿ, ವಿಷಯವನ್ನು ತಿಳಿಸುತ್ತಾನೆ ಲಕ್ಷ್ಮಣ. ‘ಬಿರುಗಾಳಿ ಪೊಡೆಯಲಿ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ’ ನೆಲಕುರುಳುವ ಸೀತೆ, ಎದ್ದಾಗ ಹೊಸ ನೋವಿನ ನೇಗಿಲಲಿ ಉತ್ತ ಹೊಸ ಹೆಣ್ಣಾಗಿದ್ದಳು. ಇಲ್ಲಿ ಕವಿ ವ್ಯವಸ್ಥೆಯ ನಿರಂತರ ದೌರ್ಜನ್ಯವನ್ನು ತಾಳುವ ಹೆಣ್ತನದ ತ್ರಾಣಕ್ಕೆ ಸೀತೆಯನ್ನು ಪ್ರತಿಮೆಯಾಗಿಸುತ್ತಾನೆ. ಕೈಗೆ ರಕ್ತ ಅಂಟದಂತೆ ಯಾಜಮಾನ್ಯ ಹುಶಾರಾಗಿ ನಡೆಸುವ ಕೊಲೆಗಡುಕತನವನ್ನು ಕಾಣುತ್ತಾಳೆ ಸೀತೆ. ‘ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ?’

ಕಯ್ಯಾರೆಖಡ್ಗಮಂಕೊಟ್ಟು, ತನ್ನರಸಿಯಂ
‘ಹೊ’ಯ್ಯೆಂದು ಪೇಳ ‘ದಡವಿಗೆ ಕಳುಹಿ ಬಾ’ ಯೆಂದ

ನಯ್ಯಯ್ಯೋರಾಘವಂಕಾರುಣ್ಯನಿಧಿ’ ಎಂದಳಲ್ದಳಂಭೋಜನೇತ್ರೆ ||

ಜಾನಕಿಯ ಈ ಪ್ರಶ್ನೆಗಳಲ್ಲಿ ಯಾಜಮಾನ್ಯದ ಧರ್ಮತಂತ್ರಗಳೆಲ್ಲ ಅಡಗಿವೆ. ಮದುವೆಯಾದಂದಿನಿಂದ ಇಂದಿನವರೆಗಿನ ಚಿತ್ರಣಗಳು ಅವಳ ಮನಸ್ಸಿನಲ್ಲಿ ಹಾದುಹೋಗಿವೆ. ಇಷ್ಟೆಲ್ಲ ಆದಮೇಲೂ ‘ತನ್ನಲ್ಲಿ ಅಪರಾಧವನ್ನು ಕಾಣಿಸಿದನೇ?’ ಎಂಬ ಅಚ್ಚರಿ ಕಾಡುತ್ತದೆ. ಹೆಣ್ಣು ತನ್ನೊಳಗೆ ಸ್ಥಾಪಿಸಿಕೊಳ್ಳುವ ವ್ಯಕ್ತಿತ್ವಗಳು, ಸಂಬಂಧಗಳು, ಭಾವನೆಗಳು ಮತ್ತು ವ್ಯವಸ್ಥೆ ಅದನ್ನು ನಿರ್ವಚಿಸಿಕೊಳ್ಳುವ ವಿಧಾನದಲ್ಲಿರುವ ತೀವ್ರವಾದ ಬಿರುಕನ್ನು ಸೀತೆಯ ಸ್ಮೃತಿಗಳ ಮೂಲಕ ಕಾವ್ಯ ನಿರೂಪಿಸುತ್ತದೆ. ಸೀತೆಯ ಮನಸ್ಸಿನಲ್ಲಿ ಸ್ಥಾಪಿತನಾದ ಮೋಹನ ರಾಮನೇ ಬೇರೆ, ಅವನನ್ನು ಅಗಲಿರಲಾರಳು. ತನ್ನನ್ನು ಆಪಾದಿಸಿ ಛೀಃಕರಿಸಿ ಹತ್ಯೆಗೆಳೆಸಿದ ನಿಜದ ರಾಮನೇ ಬೇರೆ. ಈ ಎರಡು ಛಿದ್ರ ಬಿಂಬಗಳೀಗ ಅವಳ ಅಂತರಂಗದಲ್ಲಿ ಮೂರ್ತಿಭವಿಸಬೇಕು. ಈ ಘನತರ ತೊಡಕನ್ನವಳು ಅರಗಿಸಿಕೊಳ್ಳಬೇಕು. ರಾಮ, ಈ ಸ್ಥಿತಿಯಲ್ಲಿ ನಿರಾಕರಿಸಿರುವುದು ಬರೀ ತನ್ನನ್ನು ಮಾತ್ರವಲ್ಲ. ತನ್ನೊಡಲಲ್ಲಿರುವ ಜೀವವನ್ನೂ. ತನ್ನ ಈ ತ್ಯಾಜ್ಯ ಸ್ಥಿತಿಗೆ ಮೂಕವಾಗಿ ಒಪ್ಪಿರುವ, ಅತ್ತೆ ಮೈದುನ ಪರಿವಾರದ ನೆನಪಾಗುತ್ತದೆ. ತನ್ನದು ಎಂದುಕೊಂಡ ಇಡೀ ಜಗತ್ತೇ ಕಳೆದುಹೋದ ದಿಗ್ಭ್ರಮೆಗೆ ಒಳಗಾಗುತ್ತಾಳೆ. ‘ಪಾವಗಿದ ಪಸುಳೆವೊಲ್’ ಎನ್ನುತ್ತಾನೆ ಕವಿ. ಎಳೆಯ ಮಗು, ಹೆಡೆಯಾಡಿಸುವ ಸರ್ಪವನ್ನು ಪ್ರೀತಿಯಿಂದ ಹಿಡಿಯುವಂತೆ ಜಾನಕಿ ರಾಮನ ಕೈಹಿಡಿದಳೆಂದು ಕವಿ ಕಣ್ಣೀರಾಗುತ್ತಾನೆ. ಮಗುವಿನಂತಹ ಮುಗ್ಧ ಸೀತೆ, ಬದುಕಿನ ಕಡುಕಷ್ಟದ ಪರೀಕ್ಷೆಯ ಹಾದಿಯಲ್ಲಿಯೂ ರಾಮನನ್ನು ನಂಬಿ ಬಂದ ಸೀತೆ, ಈಗ ಪುಟ್ಟಪೂರ ಬದಲಾಗುತ್ತಾಳೆ. ಅವಳೀಗ ಸತಿ ಮಾತ್ರವಲ್ಲ, ತಾಯಿ. ತನ್ನ ಒಡಲ ಜೀವದ ಜವಾಬ್ದಾರಿಕೆಯನ್ನು ಹೊತ್ತ ತಾಯಿ. ಲೋಕವೀಗ ಬೇರೆಯೇ ಆಗಿ ಕಾಣುವ ಗಳಿಗೆಯಿದು. ಮೃದುಲವಾಗಿದ್ದವಳು ಜಿಗುಟಾಗುತ್ತಾಳೆ, ವ್ಯಂಗ್ಯವಾಡುತ್ತಾಳೆ. ರಾಮನನ್ನು ಅಳೆದು ತೂಗಿಟ್ಟು ನಿಸೂರಾಗುತ್ತಾಳೆ. ಏಕೆ ನಿಲ್ಲುತ್ತೀ? ಲಕ್ಷ್ಮಣಾ ನಡೆ. ತಡಮಾಡಿದರೆ ರಾಮ ಕೋಪಿಸಲಿಕ್ಕಿಲ್ಲವೇ? “ನೆರವುಂಟುತನಗೀ ಕಾಡೊಳುಗ್ರಜಂತುಗಳಲ್ಲಿ: ರಘುನಾಥನೇಕಾಕಿಯಾಗಿರ್ಪನು” ಎನ್ನುತ್ತಾಳೆ. ರಾಮನ ವ್ಯಕ್ತಿತ್ವದ ದೌರ್ಬಲ್ಯವನ್ನು ಹೀಗಲ್ಲದೆ ಇನ್ನು ಹೇಗೆ, ಸೀತೆಯಲ್ಲದೆ ಇನ್ನಾರು ಹೇಳಬಲ್ಲರು?

ಕಡೆಗೆ ಕರುಣಾಳು ರಾಘವನಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ
ದೊಡಲಂ ಪೊರೆವುದೆನ್ನೊಳಪರಾಧಮುಂಟು...

ಎನ್ನುವಾಗ ಸೀತೆ ಏಕಾಂಗಿನಿಯಲ್ಲ. ಹೆಣ್ಣಾಗಿ ಹುಟ್ಟಿದ್ದೇ ಕಡುಪಾಪವಾದವರ ಪ್ರತಿನಿಧಿ. ಹೆಣ್ತನದ ಕಡುವ್ಯಂಗ್ಯದಲಿ ಗಂಡಾಳಿಕೆಯನ್ನು ಪ್ರಶ್ನಿಸುವ ದನಿ. ಹೆಣ್ಣ ಕಣ್ಣಿಂದ ಲೋಕವನ್ನು ಪರಾಂಬರಿಸುವ ಬಗೆ, ನ್ಯಾಯ ಅನ್ಯಾಯಗಳ, ಹಕ್ಕುಬಾಧ್ಯತೆಗಳ ಹಂಗಿಲ್ಲದೆ ಪರಿತ್ಯಜಿಸಬಲ್ಲ ವಸ್ತುವಾದವಳಿನ್ನು ಮೌನಿಯಾಗುತ್ತಾಳೆ. ಅಳಲನ್ನು ಮೀರುತ್ತಾಳೆ. ತನ್ನ ಮಕ್ಕಳಿಗಾಗಿ ಬದುಕುತ್ತಾಳೆ ಹಂಗು ಹರಿದುಕೊಂಡವಳಂತೆ. ಲವ—ಕುಶರ ಬೆಳವಿಗೆಯೊಳಗೆ ಸೀತೆಯಿದ್ದಾಳೆ. ಅವರು ಅಶ್ವಮೇಧದ ಅಶ್ವವನ್ನು ಕಟ್ಟಿ, ರಘುರಾಮನನ್ನೂ ಒಳಗೊಂಡೆಲ್ಲರನ್ನೂ ಜಯಿಸಿದಾಗ, ಆ ಗೆಲುವು ಸೀತೆಯದು. ಸೀತೆಯದು ಮಾತ್ರ. ಅದಕ್ಕೆ ಕವಿ ‘ಜಾನಕಿಯ ಸುತನ ಬಾಣಾವಳಿಯ ಹಾವಳಿಯನೇನೆಂಬೆ!’ ಎಂದು ಉದ್ಗರಿಸುತ್ತಾನೆ. ಸೀತಾಕುಮಾರಕರ ಯುದ್ಧ ನೈಪುಣ್ಯಕ್ಕೆ ಬೆರಗಾದ ರಘುರಾಮ, ವಾಲ್ಮೀಕಿಗಳು ‘ಇವರು ನಿನ್ನ ಮಕ್ಕಳು’ ಎಂದಾಗ; ‘ಸೀತೆ ಕುಮಾರರ ಪಡೆದುದೆಂತು?’ ಎಂದು ಲಕ್ಷ್ಮಣನನ್ನು ಪ್ರಶ್ನಿಸುತ್ತಾನೆ. ಸೀತೆಯನ್ನು ಕಾಡಿಗಟ್ಟಿದರಾಮ, ಅಂದುಕೊಂಡಿದ್ದಾದರೂ ಏನು? ಅವಳು ಬದುಕುವುದು ಅಸಂಭವ ಎಂದಲ್ಲವೇ? ತನ್ನ ಕೃತ್ಯದ ಬಗ್ಗೆ ಅವನಿಗೆ ವಿಪರೀತದ ಸಿಗ್ಗಿದೆಯೇ? ನೋವಿದೆಯೇ? ಮಕ್ಕಳನ್ನು ಇಷ್ಟೊಂದು ಸಮರ್ಥರನ್ನಾಗಿ ಬೆಳೆಸಿದವಳ ಬಳಿ, ತಪ್ಪೊಪ್ಪಿಕೊಳ್ಳಲು ಹಾತೊರೆಯುತ್ತಾನೆಯೇ? ಮಕ್ಕಳನ್ನು ಅಯೋಧ್ಯೆಗೆ ಕರೆದೊಯ್ಯಲು ಇರುವ ಧಾವಂತ ಸೀತೆಯ ವಿಷಯದಲ್ಲಿಲ್ಲ. ಅಂದು ಲಂಕೆಯಲ್ಲಿ ರಾವಣನಳಿದ ಮೇಲೆ, ರಾಮ ಅಶೋಕವನಕೆ ಧಾವಿಸಲಿಲ್ಲ. ವಿಭೀಷಣನ ಬಳಿ ನಿರೂಪ ಅಟ್ಟಿದ್ದ. ಆಯ್ಕೆಯನ್ನು ಅವಳಿಗೇ ಬಿಡಲಾಗಿತ್ತು. ಅದೆಂಥ ಕ್ರೂರ ವಿನೋದ! ಇಂದೂ... ಸೀತೆಯನ್ನು ಪರಿಗ್ರಹಿಸಲು ಸಮ್ಮತಿಸುತ್ತಾನೆ. ವಾಲ್ಮೀಕಿಗಳು ಜನಕನ ಸ್ಥಾನದಲ್ಲಿ ನಿಂತು, ಸೀತೆಯನ್ನು ರಥದಲ್ಲಿ ಅಯೋಧ್ಯೆಗೆ ಕರೆದೊಯ್ಯುತ್ತಾರೆ. ಸೀತಾ—ರಾಮರು ಮುಂದೆ ಅಶ್ವಮೇಧಯಾಗವನ್ನು ಪೂರೈಸಿ ‘ಸುಖ’ವಾಗಿ ಬಾಳುತ್ತಾರೆ.

ಕವಿ ಲಕ್ಷ್ಮೀಶ, ಕಥನದುದ್ದಕ್ಕೂ ಸೀತೆಯನ್ನು ಫೋಕಸ್ ಮಾಡುತ್ತಾನೆ. ರಾಮಲೀಲೆಯಲಿ ಅವಳು ಕರಗಿ ಹೋಗುವುದಿಲ್ಲ. ಅನ್ಯಾಯವನ್ನು ವೃಥಾ ಆಪಾದನೆಯನ್ನು, ಹತ್ಯೆಯ ಪ್ರಯತ್ನವನ್ನು ದೃಢವಾಗಿ ಎದುರಿಸುತ್ತ; ತನ್ನನ್ನೇ ತಾನು ಮರುಜನ್ಮ ಕೊಟ್ಟುಕೊಂಡ ಸೀತೆಯನ್ನು ಕಟೆದು ನಿಲ್ಲಿಸುತ್ತಾನೆ. ಅವಳು ರಾಮನ ನೆರಳಲ್ಲ. ರಾಮ ಸೀತೆಯ ಹಂಗಿಗ. ಸೀತೆಯಲ್ಲಿ ಅವಳು ಪ್ರಕೃತಿ ಸ್ವಯಂಭೂ. ಎಲ್ಲ ಅನ್ಯಾಯವನ್ನೂ ಕಣ್ಣೀರಿಟ್ಟು ಸಂಭಾಳಿಸಿಕೊಂಡು ಮತ್ತೆ ಮರುಹುಟ್ಟು ಪಡೆವ ಮಹಾನ್ ಶಕ್ತಿ. ಎಷ್ಟೆಲ್ಲ ಒಳನೋಟಗಳು ಲಕ್ಷ್ಮೀಶನಲ್ಲಿ. ಆ ಕಾಲದಲ್ಲೇ ಹೊಸ ಹೆಣ್ಣಿನ ನಿರ್ವಚನದಂತಿದ್ದಾಳೆ ಲಕ್ಷ್ಮೀಶನ ಸೀತೆ.

* ಕುಮಟಾ ತಾಲೂಕಿನ ನಾಡುಮಾಸ್ಕೇರಿಯ ಲೇಖಕಿ ತಮ್ಮ ಕವಿತೆ, ಕಥೆ, ಸ್ತ್ರೀವಾದಿ ಚಿಂತನೆಗಳ ಮೂಲಕ ನಾಡಿಗೆ ಪರಿಚಿತರು. ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರು, ಧಾರವಾಡದಲ್ಲಿ ವಾಸ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018