2nd ಜೂನ್ ೨೦೧೮

ಅಹಿಂಸಾತ್ಮಕ ಸಂವಹನ

ಮಂಜುನಾಥ ಡಿ.ಎಸ್.

ಏನು ಸರಿಯಾಗಿದೆ ಎಂಬುದಕ್ಕಿಂತ ಏನು ಸರಿಯಿಲ್ಲ ಎಂಬುದನ್ನು ಗಮನಿಸುವುದು ಮನುಜರ ಸಾಮಾನ್ಯ ಗುಣ. ಏನು ತಪ್ಪಾಯಿತೆಂದು ಪರಿತಪಿಸುವುದಕ್ಕಿಂತ ಮುಂದೇನು ಮಾಡಬೇಕೆಂಬುದಕ್ಕೆ ಒತ್ತು ನೀಡುವುದರಿಂದ ಮನಸ್ಸು ಹಗುರವಾಗಿ ಅಹಿಂಸಾತ್ಮಕ ಸಂವಹನಕ್ಕೆ ಅಣಿಯಾಗುತ್ತದೆ.

ಡಾ.ಮಾರ್ಷಲ್ ಬಿ.ರೋಸೆನ್‍ಬರ್ಗ್ ವಿರಚಿತ ‘ನಾನ್ ವಯಲೆಂಟ್ ಕಮ್ಯುನಿಕೇಷನ್ —ಎ ಲಾಂಗ್ವೇಜ್ ಆಫ಼್ ಲೈಫ಼್’ ಕೃತಿಯನ್ನು ಓದುವಂತೆ ನನ್ನ ಮಗ ಒತ್ತಾಯಿಸಿದಾಗ ‘ಅಹಿಂಸೆಗೂ ಸಂವಹನಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ?’ ಎನಿಸಿತು. ಪುಸ್ತಕ ಓದಲಾರಂಭಿಸುತ್ತಿ ದ್ದಂತೆ, ‘ಪರರಿಗೆ ತೊಂದರೆ ಕೊಡುವುದು ಮತ್ತು ಅವರನ್ನು ನೋಯಿಸುವುದು ಹಿಂಸೆಯಾದರೆ, ನಮ್ಮ ಸಂವಹನದ ಸಿಂಹಪಾಲು ಹಿಂಸಾತ್ಮಕವಾಗಿರುವುದು’ ಎಂಬ ಲೇಖಕರ ಪ್ರತಿಪಾದನೆಯಿಂದ ನನ್ನ ಮನದಲ್ಲಿ ಮೂಡಿದ್ದ ಪ್ರಶ್ನೆಗೆ ಉತ್ತರ ದೊರಕಿತು. ಲೇಖಕರು ಶಾಲಾ ವಿದ್ಯಾರ್ಥಿಯಾಗಿದ್ದಾಗ, 1943ರ ಬೇಸಿಗೆಯಲ್ಲಿ ಕಣ್ಣಾರೆ ಕಂಡ ಹಿಂಸಾಚಾರ ಅವರಲ್ಲಿ ಹುಟ್ಟಿಸಿದ ಮೂಲಭೂತ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಅವರು ಕಂಡುಕೊಂಡ ಉತ್ತರಗಳನ್ನು ಈ ಕೃತಿಯಲ್ಲಿ ಓದುಗರ ಮುಂದಿಟ್ಟಿದ್ದಾರೆ. ‘ನೀವು ಮುಂದೆ ಹೇಳಲಿರುವುದು ನಿಮ್ಮ ಪ್ರಪಂಚವನ್ನು ಬದಲಿಸುತ್ತದೆ’ ಎಂಬ ಗಹನ ಸತ್ಯವನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದರು. ಸಂವಹನದಲ್ಲಿ ‘ಹಿಂಸೆ’ ನುಸುಳುವ ಕಾರಣಗಳನ್ನು ಆಳವಾಗಿ ಅಧ್ಯಯನ ಮಾಡಿ, ಸಂಘರ್ಷ ನಿವಾರಣೆಯ ಮಾರ್ಗೋಪಾಯಗಳನ್ನು ಸೂಚಿಸಿ, ‘ಅಹಿಂಸಾತ್ಮಕ ಸಂವಹನ’ದ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಹೃದಯಾಂತರಾಳದಿಂದ ಕೊಡುಗೆ ನೀಡುವುದರಿಂದ ಆರಂಭಿಸಿ ಮೆಚ್ಚುಗೆ ಸೂಚಿಸುವವರೆಗೆ ಹದಿನಾಲ್ಕು ಅಧ್ಯಾಯಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮಾನವೀಯತೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ನೀಡುವ ಉದ್ದೇಶದಿಂದ ಜನಿಸಿದ ಈ ಹೊಸ ಸಂವಹನ ಕಲೆಯಲ್ಲಿ ಹೊಸತೇನೂ ಇಲ್ಲ. ಚದುರಿಹೋಗಿದ್ದ ವಿಷಯಗಳನ್ನೆಲ್ಲ ಒಂದೆಡೆ ಕ್ರೋಢೀಕರಿಸಲಾಗಿದೆ. ಹೀಗೆಂದು ಲೇಖಕರು ಹೇಳಿಕೊಂಡಿದ್ದಾರಾದರೂ ಅವರ ದೃಷ್ಟಿಕೋನ ವಿಭಿನ್ನವೇ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಹಿಂಸಾತ್ಮಕ ಸಂವಹನವನ್ನು ಬಳಸಿಕೊಂಡು ಅವಶ್ಯಕತೆಗಳನ್ನು ಆಳವಾಗಿ ಅರಿತಾಗ ಬಾಂಧವ್ಯಗಳನ್ನು ಹೊಸಬೆಳಕಿನಲ್ಲಿ ನೋಡಲು ಸಾಧ್ಯವಾಗುತ್ತದೆ. ಇದರಿಂದ ಪರಸ್ಪರ ಗೌರವ ಮತ್ತು ಸಹಾನುಭೂತಿ ಹೆಚ್ಚಾಗಿ ಅಂತರಾಳದಿಂದ ನೀಡುವ ಪ್ರವೃತ್ತಿ ಬೆಳೆಯುತ್ತದೆ. ಸಂವಹನದಲ್ಲಿ ಹಿಂಸೆ ನುಸುಳುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಮೊದಲ ಅಧ್ಯಾಯದ ಅರಂಭದಲ್ಲಿಯೇ ‘ನನಗೆ ಜೀವನದಲ್ಲಿ ಬೇಕಾಗಿರುವುದು ಸಹಾನುಭೂತಿ’ ಎಂದು ತಿಳಿಸಿರುವ ಲೇಖಕರು ಸಂವಹನದಲ್ಲಿ ಸಹಾನುಭೂತಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸಿದ್ದಾರೆ. ಅರಿತುಕೊಂಡು ಆಲಿಸುವುದರ ಅಗತ್ಯ ಮತ್ತು ಅನುಕೂಲ ಗಳನ್ನೂ ವಿವರಿಸಿದ್ದಾರೆ. ಅವಲೋಕನ, ಭಾವನೆಗಳು, ಅವಶ್ಯಕತೆ ಮತ್ತು ಮನವಿ ಈ ನಾಲ್ಕು ಅಂಗಗಳನ್ನೊಳಗೊಂಡ ಅಹಿಂಸಾತ್ಮಕ ಸಂವಹನ ಪ್ರಕ್ರಿಯೆಯನ್ನು ಪರಿಚಯಿಸಿದ್ದಾರೆ.

ನಿರ್ಣಯ ಮತ್ತು ನಿಂದನೆಗಳು ಹಿಂಸೆಯನ್ನು ಪ್ರಚೋದಿಸುತ್ತವೆ. ಹಾಗಾಗಿ ಅವುಗಳನ್ನು ತೊರೆಯುವುದರಿಂದ ಅಹಿಂಸಾ ಸಂವಹನದ ಹಾದಿಯನ್ನು ಸುಗಮವಾಗಿಸಬಹುದು ಎಂದಿದ್ದಾರೆ. ಅವಲೋಕನ ಹಾಗೂ ನಿರ್ಣಯಗಳ ನಡುವಿನ ವ್ಯತ್ಯಾಸವನ್ನು ಅರಿಯಬೇಕೆಂದು ಎಚ್ಚರಿಸಿದ್ದಾರೆ. ಇವುಗಳ ಸಂಕರ ಸಂವಹನದಲ್ಲಿ ಅಡೆತಡೆಗಳನ್ನು ಒಡ್ಡುವುದೆಂದು ಹೇಳಿದ್ದಾರೆ. ರುತ್ ಬೆಬೆರ್‍ಮೆಯೆರ್ ವಿರಚಿತ ಸರಳ ಸುಂದರ ಕವನದ ಮೂಲಕ ತಮ್ಮ ವಾದಕ್ಕೆ ಬೆಂಬಲ ಪಡೆದುಕೊಂಡಿದ್ದಾರೆ. ವ್ಯಕ್ತಿಗಳ ನಡುವಣ ಹೋಲಿಕೆಯೂ ಒಂದು ವಿಧದ ತೀರ್ಮಾನವೇ ಆಗಿರುವುದರಿಂದ ಹೋಲಿಕೆಯ ಪ್ರವೃತ್ತಿಯನ್ನು ಬದಿಗಿರಿಸುವಂತೆ ಸೂಚಿಸಿದ್ದಾರೆ. ಪ್ರಶಂಸೆ ಸಹ ಒಂದು ರೀತಿಯ ನಿರ್ಣಯವೇ ಆಗಿರುವುದರಿಂದ ಮೆಚ್ಚುಗೆ ವ್ಯಕ್ತಪಡಿಸುವಾಗಲೂ ಎಚ್ಚರ ವಹಿಸಬೇಕೆಂಬ ಕಿವಿಮಾತು ಹೇಳಿದ್ದಾರೆ. ಭಾವನೆಗಳನ್ನು ಗುರ್ತಿಸಿ ವ್ಯಕ್ತಪಡಿಸುವ ಪರಿಯನ್ನು ಪರಿಚಯಿಸಿದ್ದಾರೆ. ಭಾವನೆಗಳು ಮತ್ತು ಆಲೋಚನೆಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಳ್ಳುವಂತೆ ಎಚ್ಚರಿದ್ದಾರೆ. ನೋವುಂಟುಮಾಡದೆ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಬಹುದಾದ ಸೂಕ್ತ ಆಂಗ್ಲ ಪದಗಳ ಪಟ್ಟಿಯನ್ನೂ ಸೇರಿಸಿದ್ದಾರೆ. ಅಭ್ಯಾಸಕ್ಕೆ ಅನುಕೂಲವಾಗುವಂತೆ ಹಲವಾರು ಸಂಭಾಷಣೆಗಳನ್ನು ಉದಾಹರಿಸಿದ್ದಾರೆ.

ಭಾವನೆಗಳನ್ನು ಅದುಮಿಟ್ಟುಕೊಳ್ಳುವುದರಿಂದ ಅಡ್ಡಪರಿಣಾಮಗಳು ಉಂಟಾಗುವುದನ್ನು ತಿಳಿಸಿ ಭಾವನೆಗಳನ್ನು ವ್ಯಕ್ತಪಡಿಸುವುದರ ಮಹತ್ವವನ್ನು ಮನಗಾಣಿಸಿದ್ದಾರೆ. ಜೊತೆಗೆ ಸಂವಹನ ನಡೆಸುತ್ತಿರುವ ವ್ಯಕ್ತಿಯಿಂದ ಏನನ್ನು ಅಪೇಕ್ಷಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಬೇಕಾದದ್ದು ಅತ್ಯಂತ ಅಗತ್ಯವೆಂಬುದನ್ನು ವಿವರಿಸಿದ್ದಾರೆ. ಮನವಿಗಳು ಒತ್ತಾಯದಂತೆ ಭಾಸವಾಗದಿರುವಂತೆ ಜವಾಬ್ದಾರಿ ವಹಿಸಬೇಕೆಂಬ ಎಚ್ಚರಿಕೆ ನೀಡಿದ್ದಾರೆ. ಮನವಿ ಮಾಡುವಾಗ ಸಕರಾತ್ಮಕ ಭಾಷೆ ಬಳಸಬೇಕೆಂಬ ಸಲಹೆಯನ್ನೂ ನೀಡಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಏನು ಕೇಳುತ್ತಿದ್ದೇವೆಂಬ ಅರಿವು ಸಹ ಇರುವುದಿಲ್ಲ. ಏನು ಬೇಕೆಂದು ಸ್ಪಷ್ಟವಿದ್ದಾಗ ಸಂವಹನ ಪ್ರಕ್ರಿಯೆ ಯಶಸ್ವಿಯಾಗುವ ಸಂಭಾವ್ಯತೆ ಹೆಚ್ಚಾಗುವುದೆಂದು ತಿಳಿಯಪಡಿಸುತ್ತಾರೆ. ಸಂವಹನದಲ್ಲಿ (ಆತ್ಮ—ಸಹಾನುಭೂತಿಯೂ ಸೇರಿದಂತೆ) ಸಹಾನುಭೂತಿಯ ಮಹತ್ವದೊಡನೆ ಆತ್ಮದ್ವೇಷದ ಅಡ್ಡ ಪರಿಣಾಮಗಳನ್ನೂ ಪರಿಚಯಿಸಿದ್ದಾರೆ. ಸಂವಹನ ನಡೆಸುತ್ತಿರುವ ವ್ಯಕ್ತಿಯ ಭಾವನೆಗಳು ಮತ್ತು ಅಗತ್ಯಗಳನ್ನು ಆಲಿಸುವುದರಿಂದಲೇ ನಾವು ಬಹಳಷ್ಟು ಹೇಳಿರುತ್ತೇವೆ ಎಂಬ ಸೂಕ್ಷ್ಮತೆಯನ್ನು ಗಮನಕ್ಕೆ ತಂದಿದ್ದಾರೆ.

‘ವ್ಯಕ್ತಿಗಳಲ್ಲಿ ಗೊಂದಲ ಸೃಷ್ಟಿಸುವುದು ವಸ್ತುಗಳಲ್ಲ; ಅವುಗಳನ್ನು ಅವರು ನೋಡುವ ಬಗೆ’ ಎಂಬ ಹೇಳಿಕೆಯನ್ನು ಉದ್ಧರಿಸಿ ನಮ್ಮ ಭಾವನೆಗಳಿಗೆ ನಾವು ಜವಾಬ್ದಾರರಾಗಬೇಕೆಂದು ತಿಳಿಸಿದ್ದಾರೆ. ಕೋಪದ ಮೂಲ ನಮ್ಮ ಆಲೋಚನೆಯಲ್ಲಿರುವುದರಿಂದ ಅದನ್ನು ಬದಲಿಸಿಕೊಳ್ಳುವ ಪರಿಯನ್ನು ಪರಿಚಯಿಸಿದ್ದಾರೆ. ಆಂತರಿಕ ಸಂಘರ್ಷದ ನಿವಾರಣೆಗೆ ಅಹಿಂಸಾತ್ಮಕ ಸಂವಹನ ನೆರವಾಗುತ್ತದೆಂಬ ವಿಶ್ವಾಸ ಲೇಖಕರದು. ನಮ್ಮ ವೈಯಕ್ತಿಕ ಭಾವನೆಗಳು ಮತ್ತು ಅವಶ್ಯಕತೆಗಳನ್ನು ಸಹಾನುಭೂತಿಯಿಂದ ಆಲಿಸಿ, ಅರಿತುಕೊಂಡು ಅವುಗಳನ್ನು ಪೂರೈಸುವುದರಿಂದ ಖಿನ್ನತೆಯನ್ನು ನಿವಾರಿಸಬಹುದೆಂಬುದು ಅವರ ಪ್ರತಿಪಾದನೆ. ಏನು ಸರಿಯಾಗಿದೆ ಎಂಬುದಕ್ಕಿಂತ ಏನು ಸರಿಯಿಲ್ಲ ಎಂಬುದನ್ನು ಗಮನಿಸುವುದು ಮನುಜರ ಸಾಮಾನ್ಯ ಗುಣ. ಏನು ತಪ್ಪಾಯಿತೆಂದು ಪರಿತಪಿಸುವುದಕ್ಕಿಂತ ಮುಂದೇನು ಮಾಡಬೇಕೆಂಬುದಕ್ಕೆ ಒತ್ತು ನೀಡುವುದರಿಂದ ಮನಸ್ಸು ಹಗುರವಾಗಿ ಅಹಿಂಸಾತ್ಮಕ ಸಂವಹನಕ್ಕೆ ಅಣಿಯಾಗುತ್ತದೆ.

ಪ್ರತಿ ಅಧ್ಯಾಯದ ಅಂತ್ಯದಲ್ಲಿ ಅಭ್ಯಾಸಕ್ಕೆ ಅನುಕೂಲವಾಗುವಂತೆ ಉದಾಹರಣೆಗಳನ್ನು ನೀಡಿ ಓದುಗರ ಕಲಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸಿದ್ದಾರೆ. ತಮ್ಮ ಭಾವನೆಗಳು ಹಾಗೂ ದೃಷ್ಟಿಕೋನಗಳನ್ನು ಪುಷ್ಟೀಕರಿ ಸಲು ಲೇಖಕರು ಕೆಲವು ಕವನಗಳನ್ನು ಬಳಸಿಕೊಂಡಿರುವುದು ಗಮನಾರ್ಹ. ಇವು ವಿಶೇಷವಾಗಿ ಓದುಗರ ಮೆಚ್ಚುಗೆ ಗಳಿಸುತ್ತವೆ. ಸಾಮರ್ಥ್ಯವರ್ಧನೆ, ತೃಪ್ತಿಕರ ಬಾಂಧವ್ಯ, ಮತ್ತು ಸರ್ವರ ಅನುಕೂಲಕ್ಕಾಗಿ ಸಂಪನ್ಮೂಲಗಳ ಹಂಚಿಕೆ ಈ ಮೂರು ಆಶಯಗಳನ್ನು ಅಹಿಂಸಾತ್ಮಕ ಸಂವಹನ ಪೂರೈಸುತ್ತದೆ.

‘ನಾನು’ ಹೋದರೆ ಹೋದೇನು ಎಂಬ ಆಧ್ಯಾತ್ಮಿಕ ದೃಷ್ಟಿಕೋನ ಈ ಹೊತ್ತಿಗೆಯಲ್ಲಿ ಧ್ವನಿಸಿದೆ. ಈ ಪುಸ್ತಕವನ್ನು ಅಧ್ಯಯನ ಮಾಡಿ, ಆರ್ಥೈಸಿಕೊಂಡು, ಕಲಿಕೆಯನ್ನು ನಿತ್ಯದ ನಡಾವಳಿಗಳಲ್ಲಿ ಅಳವಡಿಸಿಕೊಂಡರೆ ಕೌಟುಂಬಿಕ, ಸಾಮಾಜಿಕ ಮತು ವೃತ್ತಿಜೀವನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ. ಒಟ್ಟಾರೆ, ಹೊಸ ಮೌಲ್ಯವನ್ನು ಹುಟ್ಟುಹಾಕುವ ಪ್ರಯತ್ನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮