2nd ಜೂನ್ ೨೦೧೮

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ
ದೇವರ ದಾರಿ

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಅವರು ತಮ್ಮ ‘ಬುಗುರಿ’ ಸಂಕಲನದಲ್ಲಿ ವಿಶೇಷ ಎತ್ತರವನ್ನು ಏರಿದವರು. ಮುಂದೆ ನಿರೂಪಣಾ ಪ್ರಧಾನ ಗುಣದಿಂದಾಗಿ ತಮ್ಮ ಸಮಕಾಲೀನ ಕತೆಗಾರರಿಂದ ತಮ್ಮದೇ ಆದ ರೀತಿಯಲ್ಲಿ ಭಿನ್ನವಾಗಿ ಕಾಣುತ್ತಿರುವವರು. ಮೊದಲ ಸಂಕಲನದಲ್ಲೇ ಉನ್ನತ ಸಾಧನೆಯನ್ನು ಮಾಡಿದ ಕೃತಿಯೊಂದರ ನೆರಳು ಆ ಲೇಖಕನ ಇತರ ಕೃತಿಗಳ ಮೇಲೆ ಬೀಳುವುದು ಸಹಜವಾಗಿದೆ.

‘ದೇವರ ದಾರಿ’ ಡಾ.ಮೋಗಳ್ಳಿ ಗಣೇಶ್ ಅವರ ಆರನೆಯ ಕಥಾ ಸಂಕಲನ. ಬಹುಮುಖ ಪ್ರತಿಭೆಯ ಮೋಗಳ್ಳಿ ಸಣ್ಣ ಕಥೆಗಳಲ್ಲದೆ ಕಾದಂಬರಿ, ಕಾವ್ಯ, ವಿಮರ್ಶೆ, ವೈಚಾರಿಕ—ಸಂಶೋಧನ ಬರಹಗಳು ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ವಿಮರ್ಶೆ ವೈಚಾರಿಕ ಬರಹಗಳಲ್ಲಿ ಎಗ್ಗಿಲ್ಲದೆ ಧುಮುಗುಡುವ ಮೊಗಳ್ಳಿ ಸೃಜನಶೀಲ ಕೃತಿಗಳಲ್ಲಿ ತತ್ವಬದ್ಧ ಸಂಯಮಿ. ತಮ್ಮ ಮೊದಲ ಕಥಾ ಸಂಕಲನ ‘ಬುಗುರಿ’ಯಲ್ಲಿ ಕೆಸರು ಹಾಗೂ ತಿರುಗುವ ಬುಗುರಿಯ ಸಂಕೇತದ ಮೂಲಕ ಇದ್ದಲ್ಲೇ ಇದ್ದು ಸುತ್ತುತ್ತಿದ್ದರೂ ಪ್ರಗತಿಯ ಚಲನೆ ಇಲ್ಲದೆ ನಿಂತಲ್ಲೇ ನಿಂತಂತಿರುವ ತನ್ನ ಸಮಾಜದ ಚಲನರಹಿತ ಸ್ಥಿತಿಯನ್ನು ಪ್ರತಿಮಾತ್ಮಕವಾಗಿ ವಿವರಿಸಿದ್ದರು.

ಮುಂದೆ ಕತೆಗಳನ್ನು ಬರೆಯುತ್ತಾ ಹೋದಂತೆ ಪ್ರತಿಮಾತ್ಮಕ ನೆಲೆಯಿಂದ ಮೊಗಳ್ಳಿ ನಿರೂಪಣಾತ್ಮಕ ಕ್ರಮದ ಕಡೆಗೆ ಚಲಿಸತೊಡಗಿದರು. ‘ದೇವರ ದಾರಿ’ ಈ ದೃಷ್ಟಿಯಲ್ಲಿ ನಿರೂಪಣಾ ಪ್ರಧಾನ (narratology ಎಂಬ ಅರ್ಥದಲ್ಲಿ) ಮಾರ್ಗದಲ್ಲಿ ಸಾಗಿರುವ ಸಾಧನೆಯನ್ನು ಸೂಚಿಸುವ ಕತೆಗಳ ಸಂಕಲನ. ಅವರಿಗೆ ಕಣ್ಣಿಗೆ ಕಾಣುವಂತೆ ಹೇಳಬಲ್ಲ ನಿರೂಪಣಾ ಶಕ್ತಿ ಇದೆ. ಆದರೆ ಅವರ ದಲಿತ ಪ್ರಜ್ಞೆ ಬಹುತೇಕ ಎಲ್ಲಾ ಕತೆಗಳನ್ನು ದಲಿತ ಸಂದರ್ಭದಲ್ಲೇ ವಿವರಿಸುತ್ತವೆ. ಅವರೊಳಗಿನ ಬಂಡಾಯ ಪ್ರಜ್ಞೆ ವಾಸ್ತವದ ಜೊತೆ ಆಶಯಗಳನ್ನು ಮೇಳೈಸುತ್ತದೆ. ಅವರು ವಿವರಿಸುವ ದಲಿತ ಸಂದರ್ಭಗಳು ಬಹುತೇಕ ತಮ್ಮ ಬಾಲ್ಯದಿಂದ ಪ್ರೇರಣೆ ಪಡೆದಂತೆ ಭಾಸವಾಗುತ್ತದೆ.

ಸಂಕಲನದ ಮೊದಲ ಕತೆ ‘ಮೂಗುಬೊಟ್ಟು’ ಇಡೀ ಕೌಟುಂಬಿಕ ಕ್ರೌರ್ಯವನ್ನು ಬಾಲಕನ ಕಣ್ಣಿನಿಂದ ಕಾಣಿಸುತ್ತದೆ. ತನಗೆ ಹೆಣ್ಣು ಕೊಟ್ಟ ಅತ್ತೆ ಮನೆಗೆ ಬರುವುದನ್ನು ಸಹಿಸದ ಅಪ್ಪ. ಮಗಳ ಮೇಲಿನ ಮೋಹದಿಂದ ತಾಯಿ ತಾನು ಸಾಕಿದ್ದ ಮೂರು ಆಡುಗಳಲ್ಲಿ ಒಂದನ್ನು ಮಾರಿ ಆ ಹಣದಿಂದ ಬಂಗಾರದ ಮೂಗುಬೊಟ್ಟನ್ನು ಕೊಂಡು ಊರ ಪರಿಚಿತ ಹೆಂಗಸೊಬ್ಬಳ ಮೂಲಕ ಅದನ್ನು ಮಗಳಿಗೆ ಕಳುಹಿಸಿಕೊಡುತ್ತಾಳೆ. ಅದನ್ನು ನೋಡಿದ ತಂದೆ ತನ್ನ ಹೆಂಡತಿಗೆ (ಬಾಲಕನ ತಾಯಿಗೆ) ಯಾರದೋ ಜೊತೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ. ಹೆಂಡತಿಗೆ ಹೊಡೆದು ಬಡಿದು ಮಾಡುತ್ತಾನೆ. ಮಳೆಯಲ್ಲಿ ಮಗನೊಡನೆ ಗಂಡನಿಗೆ ತನ್ನ ಸತ್ಯವನ್ನು ಅರುಹಲು ಹೋಗುವ ತಾಯಿಗೆ ಮತ್ತಷ್ಟು ಹೊಡೆತ. ಮಗನನ್ನು ಮನೆಗೆ ಕಳುಹಿಸಿದ ತಾಯಿ ಹೊಳೆ ನೀರಿನಲ್ಲಿ ಮುಖತೊಳೆದು ಆ ಮೂಗುಬೊಟ್ಟನ್ನು ಅಲ್ಲೆ ಬಿಸಾಡಿ ಮಗನನ್ನೂ, ಗಂಡನನ್ನೂ ತೊರೆದು ಹೊರಟು ಹೋಗುತ್ತಾಳೆ. ಕತೆ ಸಂಬಂಧಗಳ ಕ್ರೌರ್ಯವನ್ನು ಹಳ್ಳಿಯ ಕೃಷಿ ಮೂಲದ ವಿವರಗಳಲ್ಲಿ ಕಟ್ಟಿ ನಿರೂಪಿಸುತ್ತದೆ.

ಕತೆ ತನಗೆ ಕಸುಬಲ್ಲ, ಅದೊಂದು ಬಿಡುಗಡೆಯ ಪಯಣ ಎನ್ನುವ ಮೊಗಳ್ಳಿ ‘ತನ್ನ ಮಾತು’ಗಳಲ್ಲಿ ಹೇಳಿಕೊಂಡಿರುವಂತೆ ‘ನಾನೆಲ್ಲೇ ಇರಲಿ; ನನ್ನ ಊರಕೇರಿಯ ಒಂದು ಕಾಲದ ಅನುಭವಗಳು ಆಗಾಗ ಮಳೆ ಬಂದಂತೆ ಭಾವದಲ್ಲಿ ಬಂದು ಮಿಡಿಯುತ್ತವೆ. ಅವುಗಳಿಂದಾಗಿಯೇ ನಾನು ನಾನಾಗಿರುವುದು.’ ಇದು ಅವರ ಬಾಲ್ಯದ ನೆನಪಿನ ಮೂಲ ಸೆಲೆ. ಜೀವನ ಹಾಗೂ ಕತೆಗಳು ಒಂದೇ ಸಲಕ್ಕೆ ಮುಗಿಯವು ಎಂಬ ಅರಿವಿರುವ ಈ ಲೇಖಕರಿಗೆ ಕಳೆದು ಹೋದ ಹಳೆಯದನ್ನೆಲ್ಲಾ ಮತ್ತೆ ಮತ್ತೆ ಕತೆ ಮಾಡುವುದು ಹಳವಂಡ ಎನಿಸಬಹುದೆಂಬ ಅರಿವಿದೆ. ಆದರೆ ಅವರ ಬಾಲ್ಯದ ಅನುಭವದಿಂದ ಮೊಗಳ್ಳಿಯವರಿಗೆ ಸಂಪೂರ್ಣ ಬಿಡುಗಡೆ ಇಲ್ಲ. ಹಳ್ಳಿ ಬದಲಾಗಿದೆ ನಿಜ. ಆದರೆ ಒಂದು ಕಾಲದ ಹಳ್ಳಿ, ಅದರ ಬದುಕು ಅಲ್ಲಿನ ಆಗುಹೋಗುಗಳು ಸಣ್ಣಪುಟ್ಟ ಬದಲಾವಣೆಗಳಿಂದ ಹಾಗೇ ಮುಂದುವರಿದಿದೆ, ಎಂದು ಮೊಗಳ್ಳಿ ನಂಬುತ್ತಾರೆ.

ಕತೆಗಾರನ ಮಾನಸಿಕ ಲೋಕಕ್ಕೂ ನಿಜಜೀವನದ ವಾಸ್ತವ ಲೋಕಕ್ಕೂ ನಡುವೆ ಬಿರುಕು ಹುಟ್ಟುವುದು ಇಂತಹ ಸಂದರ್ಭಗಳಲ್ಲಿ. ಇಂದು ನಾವು ತಿಳಿದಿರುವಂತೆ ಕರ್ನಾಟಕದ ಹಳ್ಳಿಗಳು ಸಣ್ಣಪುಟ್ಟ ಬದಲಾವಣೆಗಳಿಂದ ಹೆಚ್ಚಿನ ಆಘಾತಕ್ಕೂ, ವಿಘಟನೆಗೂ ಒಳಗಾಗಿವೆ. ಲೇಖಕನ ಬಾಲ್ಯದ ಮನೋಲೋಕಕ್ಕೂ, ವಾಸ್ತವ ಲೋಕಕ್ಕೂ ನಡುವೆ ಸೇತುವೆ ಕಟ್ಟುವುದು ಬರಹಗಾರನ ಸೃಜನಶೀಲ ಕಲ್ಪನಾ ಶಕ್ತಿ. ಮೊಗಳ್ಳಿಯವರ ನಿರೂಪಣೆಗೆ ಅಂತಹ ಕಲ್ಪನಾ ಶಕ್ತಿ ಇದೆ. ಆದರೆ ಅವರ ತಾತ್ವಿಕತೆ ಬಾಲ್ಯದ ಲೋಕ ಸಂದರ್ಭವನ್ನು ಇಂದಿನ ಬದಲಾವಣೆಗಳೊಂದಿಗೆ ವಿಸ್ತರಿಸಿ ವ್ಯಾಪಿಸಿಕೊಳ್ಳಲು ಬಿಡುವುದಿಲ್ಲ. ತಕ್ಷಣದ ಸಮಾಜ ಮತ್ತು ಅಲ್ಲಿಂದ ಬಿಡುಗಡೆಗೆ ದಾರಿ ಹುಡುಕುವುದರಲ್ಲಿ ಅವು ತೃಪ್ತಿ ಕಾಣುತ್ತವೆ. ಪ್ರತಿಮೆಗಳ ಬಳಕೆಯಿಂದ ತಾತ್ವಿಕತೆಯ ಸೂಚನೆ ಸುಲಭವಾಗುತ್ತದೆ. ‘ಬುಗುರಿ’ಯ ಪ್ರತಿಮಾ ವಿಧಾನವನ್ನು ಬಿಟ್ಟು ದಲಿತ—ಬಂಡಾಯಗಳ ‘ನಿರೂಪಣಾ’ ವಿಧಾನವನ್ನು ಆರಿಸಿಕೊಂಡ ಮೊಗಳ್ಳಿಯವರು ತಾತ್ವಿಕ ವಿಸ್ತಾರಕ್ಕಿಂತ ಆಶಯ ಸಾಕಾರಕ್ಕೆ ‘ದೇವರ ದಾರಿ’ಯ ಕಥೆಗಳಲ್ಲಿ ಪ್ರಯತ್ನಿಸುತ್ತಾರೆ.

‘ದೇವರ ದಾರಿ’ ಸಂಕಲನದಲ್ಲಿರುವ ಎಲ್ಲಾ 19 ಕತೆಗಳೂ ಒಂದಲ್ಲ ಒಂದು ರೀತಿ ಸಾಮಾಜಿಕ ಅಸಮಾನತೆ, ಶೋಷಣೆ ಹಾಗೂ ಕ್ರೌರ್ಯಗಳ ವಿರುದ್ಧ ದನಿ ಎತ್ತುತ್ತವೆ.

ಸಂಕಲನಕ್ಕೆ ಹೆಸರು ನೀಡಿದ ‘ದೇವರ ದಾರಿ’ ಕತೆ ಇದ ಕ್ಕೊಂದು ಉತ್ತಮ ಉದಾಹರಣೆ. ನಾಲ್ಕು ಜನ ಗಂಡು ಮಕ್ಕಳು ನಿಷ್ಪ್ರಯೋಜಕರು. ಗಂಡ ಉಪಯೋಗಕ್ಕೆ ಬಾರದವ. ಹೆರಿಗೆಗೆ ಬಂದ ಹೆಂಡತಿಯನ್ನು ಬಿಟ್ಟು ಅಳಿಯ ಇನ್ನೊಬ್ಬಳೊಡನೆ ಕೂಡಿಕೆ ಮಾಡಿಕೊಳ್ಳುವ ಸುದ್ದಿ ತಿಳಿದ ತಾಯಿ ಬಾಣಂತಿ ಮಗಳನ್ನು ಕಟ್ಟಿಕೊಂಡು ಅಳಿಯನ ಮನೆಗೆ ದಿನವಿಡೀ ನಡೆದು ದಣಿದ ಪಯಣದಲ್ಲಿ ತಲುಪುತ್ತಾಳೆ. ಹಾಗೆ ಬಸವಳಿದು ತಲುಪಿದಾಗ ಅಳಿಯ ಅತ್ತೆಯನ್ನು ಹೊರದೂಡಿ ಮನೆ ಮೆಟ್ಟಲು ಹತ್ತಬಾರದೆಂದು ಹೆಂಡತಿಗೆ ತಾರಾಮಾರಾ ಹೊಡೆಯುತ್ತಾನೆ. ಸೇರಿದವರಾರೂ ಮಾತನಾಡುವುದಿಲ್ಲ. ಹೊಡೆಯುವವನ ಶ್ರೀಮಂತಿಕೆ ಎದುರು ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಆದರೆ ಕೂಡಿಕೆ ಮಾಡಿಕೊಳ್ಳಲು ಬಂದ ವಸಂತಳಿಗೆ ಈ ಕ್ರೌರ್ಯವನ್ನು ತಡೆಯಲಾಗುವುದಿಲ್ಲ. ಇಂತಹ ಕ್ರೂರಿ ಗಂಡನ ಜೊತೆ ಕೂಡಿಕೆಯಿಂದ ಬಾಳಿ ಬದುಕುವುದು ಸಾಧ್ಯವಿಲ್ಲ ಎಂದು ಅವಳು ಮನೆ ಒಳಗಿಂದ ಹೊರಬರುತ್ತಾಳೆ. ಪೆಟ್ಟು ತಿಂದು ಬಿದ್ದಿದ್ದ ಬಾಣಂತಿ ಹೆಂಡತಿ, ಹಸುಗೂಸು ಮತ್ತು ಪ್ರಾಯ ಇಳಿದ ಅತ್ತೆ ಎಲ್ಲರನ್ನೂ ಕರಕೊಂಡು ಕೂಡಿಕೆ ಮಾಡಬೇಕಾದ ಗಂಡನನ್ನು ಬಿಟ್ಟು ಅಲ್ಲಿಂದ ಹೊರನಡೆಯುತ್ತಾಳೆ. ‘ನಡೀರಿ ದೇವರ ದಾರೀಲಿ. ಜೀವನ ಸಾಗ್ಸುಕೆ ನೂರಾರ್ ದಾರಿ ಅವೆ. ನಮ್ಮನ್ನ ಯಾರೂ ಯೇನೂ ಮಾಡುಕಾಗುದಿಲ್ಲ’ ಎಂದು ವಸಂತ ಅವರನ್ನು ಕಟ್ಟಿಕೊಂಡು ಹೊರಡುತ್ತಾಳೆ. ಆಶಯ ಪ್ರಧಾನವಾದ ಮನಸ್ಸಿಗೆ ಲೋಕವನ್ನು ಇರುವಂತೆ ನೋಡುವುದಕ್ಕಿಂತ ಇರಬೇಕಾದಂತೆ ಕಾಣುವುದು ಮುಖ್ಯವಾಗುತ್ತದೆ. ವಸಂತಳ ಅಂತಹ ಕ್ರಿಯೆಗಳು ಹಾಗೂ ಆ ಕ್ಷಣದ ಮನಃಪರಿವರ್ತನೆ ಸಾಧ್ಯವೆ? ಅದಕ್ಕೆ ಬೇಕಾದ ಮಾನಸಿಕ ತಯಾರಿ ಕತೆಯೊಳಗೆ ಬೆಳೆಯುತ್ತಾ ಬಂದಿದೆಯೇ ಮುಂತಾದ ಪ್ರಶ್ನೆಗಳು ಆಶಯ ಬದ್ಧ ನಿರೂಪಣೆಗೆ ಪ್ರಧಾನ ಅನಿಸುವುದಿಲ್ಲ.

ಇಂತಹುದೇ ಇನ್ನೊಂದು ಆಶಯ ಬದ್ಧ ನಿರೂಪಣೆ ‘ದೇವರ ಮರ’ ಎಂಬ ಕತೆಯಲ್ಲೂ ಕಾಣಬಹುದು. ಎರಡು ಧರ್ಮಗಳ ಜನರು ಮಾರಿಗುಡಿಯ ಮರದ ನೆಪದಲ್ಲಿ ಕೊಂದು ಕತ್ತರಿಸುವ ಸರ್ವನಾಶಕ್ಕೂ ತಯಾರಾಗುತ್ತಾರೆ. ಸಾಬರ ಮುಖಂಡರು ಹಾಗೂ ದೊಡ್ಡಗೌಡರ ಗುಂಪು ಎರಡಾಗಿ ಹೋರಾಟಕ್ಕೆ ತಯಾರಾಗುತ್ತದೆ. ದಲಿತ ಕೇರಿಯವರು ಯಾರ ಕಡೆಗೆ? ಹೊಲೇರ ಮಾರ ಇಬ್ಬರ ಕಡೆಗೂ ಸೇರದೆ ನ್ಯಾಯಪಕ್ಷಪಾತಿಯಾಗಿ ಶೋಷಿತ ಬಡವರ ಪರವಾಗಿ ನಿಲ್ಲುತ್ತಾನೆ. ಹೊಲಗೇರಿಗೆ ಬೆಂಕಿ ಇಕ್ಕುತ್ತಾರೆ. ಆದರೂ ಅಹಿಂಸೆ ಬಿಡದ ದಲಿತ ನಾಯಕ ಮಾರ ಇಡೀ ಸಮಾಜದ ಸಮತೋಲನವನ್ನು ಕಾಯ್ದು, ತನ್ನ ಜನರನ್ನು ಕಕ್ಷಿಗೆ ಒಳಗಾಗಿದ್ದ ದೇವರ ಮರದ ಕೆಳಗೆ ಕರೆತರುತ್ತಾನೆ. ಈ ತ್ಯಾಗದಿಂದಾಗಿ ‘ಊರು ನಾಳಿನ ಕಾಲದ ಅಲೆಗೆ ಮುಂದಾಗುತ್ತಿತ್ತು.’ ಆಶಯ ಸಿದ್ಧಿಯ ಮತ್ತೊಂದು ಕತೆ ಇದು.

‘ದೇವರ ದಾರಿ’ ಸಂಕಲನದಲ್ಲಿರುವ ಎಲ್ಲಾ 19 ಕತೆಗಳೂ ಒಂದಲ್ಲ ಒಂದು ರೀತಿ ಸಾಮಾಜಿಕ ಅಸಮಾನತೆ, ಶೋಷಣೆ ಹಾಗೂ ಕ್ರೌರ್ಯಗಳ ವಿರುದ್ಧ ದನಿ ಎತ್ತುತ್ತವೆ. ಮೊಗಳ್ಳಿ ಗಣೇಶ್ ಅವರು ತಮ್ಮ ‘ಬುಗುರಿ’ ಸಂಕಲನದಲ್ಲಿ ವಿಶೇಷ ಎತ್ತರವನ್ನು ಏರಿದವರು. ಮುಂದೆ ನಿರೂಪಣಾ ಪ್ರಧಾನ ಗುಣದಿಂದಾಗಿ ತಮ್ಮ ಸಮಕಾಲೀನ ಕತೆಗಾರರಿಂದ ತಮ್ಮದೇ ಆದ ರೀತಿಯಲ್ಲಿ ಭಿನ್ನವಾಗಿ ಕಾಣುತ್ತಿರುವವರು. ಮೊದಲ ಸಂಕಲನದಲ್ಲೇ ಉನ್ನತ ಸಾಧನೆಯನ್ನು ಮಾಡಿದ ಕೃತಿಯೊಂದರ ನೆರಳು ಆ ಲೇಖಕನ ಇತರ ಕೃತಿಗಳ ಮೇಲೆ ಬೀಳುವುದು ಸಹಜವಾಗಿದೆ. ಮೊಗಳ್ಳಿ ಅವರದು ಒಮ್ಮೆಗೇ ಮುಗಿಯದ ಪಯಣ. ಅವರ ಕತೆಗಳೂ ಅವರ ಈ ಬದುಕಿನ ಸಂಗಾತಿಗಳು. ಹಾಗಾಗಿ ತಮ್ಮ ಇಂದಿನ ಜೀವನಾನುಭವವನ್ನು ಸತತವಾಗಿ ಬಾಲ್ಯದ ನೆನಪಿನಲ್ಲಿ ಪರೀಕ್ಷಿಸಿಕೊಳ್ಳುವುದು ಅವರ ಕಥಾ ಪ್ರಯಾಣದ ವಿಧಾನವೂ ಆಗಿದೆ.

(ಪುಸ್ತಕ ವಿವರ: ದೇವರ ದಾರಿ, ಲೇ: ಮೊಗಳ್ಳಿ ಗಣೇಶ್, ಪುಟ: 224, ಬೆಲೆ: 240, ಪ್ರಕಟಣೆ: 2017 ಪ್ರ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ 577203, ಮೊ. 9449174662)

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮