2nd ಜೂನ್ ೨೦೧೮

ಜೆ.ಎನ್.ಯು
ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಡಾ.ರಾಕೇಶ್ ಬಟಬ್ಯಾಲ್
ಅನುವಾದ: ಪೃಥ್ವಿದತ್ತ ಚಂದ್ರಶೋಭಿ

ನವದೆಹಲಿಯ ಜವಾಹರಲಾಲ್ ನೆಹ್ರೂ ವಿಶ್ವವಿದ್ಯಾ ನಿಲಯ (ಜೆ.ಎನ್.ಯು) ಭಾರತದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದು. 1969ರಲ್ಲಿ ಪಾರ್ಲಿಮೆಂಟಿನ ಕಾಯಿದೆಯ ಮೂಲಕ ಸ್ಥಾಪಿತವಾದ ಈ ವಿಶ್ವವಿದ್ಯಾನಿಲಯವು 1970ರ ದಶಕದ ಪ್ರಾರಂಭದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿವಿಧ ಜ್ಞಾನಶಿಸ್ತುಗಳಲ್ಲಿ ಆರಂಭಿಸಿತು. ಮೊದಲ ದಿನಗಳಿಂದಲೂ ಎಡಪಂಥೀಯ ಒಲವಿನ ಪ್ರಾಧ್ಯಾಪಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಜೆ.ಎನ್.ಯು. ಆ ಕಾರಣದಿಂದಲೇ ಕಳೆದ ಐದು ದಶಕಗಳಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದೆ.

ಹೀಗಿದ್ದಾಗ್ಯೂ ಜೆ.ಎನ್.ಯು. ಭಾರತದ ಎಲ್ಲ ವಿಶ್ವವಿದ್ಯಾನಿಲಯಗಳಿಗಿಂತ ಭಿನ್ನವಾದ ಶೈಕ್ಷಣಿಕ ಮತ್ತು ನಾಗರಿಕ ಸಂಸ್ಕೃತಿಯೊಂದನ್ನು ಕಟ್ಟಿಕೊಂಡಿದೆ. ಈ ಸಂಸ್ಕೃತಿಯ ಮುಖ್ಯ ಲಕ್ಷಣಗಳೆಂದರೆ ಶೈಕ್ಷಣಿಕ ವಿಚಾರಗಳಲ್ಲಿ ಅಧ್ಯಾಪಕರಿಗಿರುವ ಸ್ವಾಯತ್ತತೆ ಮತ್ತು ವಿಶ್ವವಿದ್ಯಾನಿಲಯದ ಆವರಣದೊಳಗಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಮುಕ್ತ ಚಿಂತನೆಗಳು.

ಹೀಗಾಗಿ ಜೆ.ಎನ್.ಯು.ನ ಪ್ರತಿಯೊಂದು ಶೈಕ್ಷಣಿಕ ವಿಭಾಗವೂ ತನ್ನದೆ ಆದ ಶೈಕ್ಷಣಿಕ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಿಕೊಂಡಿದೆಯಲ್ಲದೆ, ಅದರ ಬಗ್ಗೆ ದೂರುಗಳು ಬರದಂತೆ ಪಾರದರ್ಶಕವಾಗಿ ನಡೆದುಕೊಂಡಿದೆ. ಇನ್ನಷ್ಟು ಮುಖ್ಯವಾಗಿ ತರಗತಿಯೊಳಗೆ, ವಿದ್ಯಾರ್ಥಿನಿಲಯಗಳಲ್ಲಿ ಮತ್ತು ವಿಶ್ವವಿದ್ಯಾನಿಲಯದ ಆವರಣದೊಳಗಿನ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ತಮ್ಮ ಸರದಿಯನ್ನು ಕಾಯುವ, ಇತರರನ್ನು ಗೌರವ ಹಾಗೂ ಸೌಜನ್ಯಗಳಿಂದ ನಡೆಸಿಕೊಳ್ಳುವ ನಾಗರಿಕ ಸಂಸ್ಕೃತಿಯೂ ಇದೆ. ಜೆ.ಎನ್.ಯು. ಅನುಭವವನ್ನು ಪಡೆದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನುಭವದ ವೈಶಿಷ್ಟ್ಯವನ್ನು ಎಂದೂ ಮರೆಯುವುದಿಲ್ಲ.

ಈ ವಿಶಿಷ್ಟ ವಿಶ್ವವಿದ್ಯಾನಿಲಯದ ಇತಿಹಾಸವನ್ನು ಡಾ.ರಾಕೇಶ್ ಬಟಬ್ಯಾಲ್ ’ಜೆ.ಎನ್.ಯು: ದ ಮೇಕಿಂಗ್ ಆಫ಼್ ಎ ಯೂನಿವರ್ಸಿಟಿ’ (ಹಾರ್ಪರ್ ಕಾಲಿನ್ಸ್ ಪ್ರೆಸ್, 2014) ಎಂಬ ಕೃತಿಯಲ್ಲಿ ಪುನಾರಚಿಸಿದ್ದಾರೆ. ಜೆ.ಎನ್.ಯು.ನ ಇತಿಹಾಸ ವಿಭಾಗದ ಹಳೆಯ ವಿದ್ಯಾರ್ಥಿಯೂ ಆದ ಬಟಬ್ಯಾಲ್ ಪ್ರಸ್ತುತದಲ್ಲಿ ಜೆ.ಎನ್.ಯು.ನ ಸೆಂಟರ್ ಫ಼ಾರ್ ಮೀಡಿಯಾ ಸ್ಟಡೀಸ್‍ನಲ್ಲಿ ಮಾಧ್ಯಮಗಳ ಇತಿಹಾಸವನ್ನು ಬೋಧಿಸುತ್ತಾರೆ. ಅವರ ಕೃತಿಯ ಆಯ್ದ ಭಾಗಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟುಗಳನ್ನು ಚರ್ಚಿಸುತ್ತಿರುವ ಸಂದರ್ಭದಲ್ಲಿ ಜೆ.ಎನ್.ಯು.ನ ಅನುಭವಗಳ ಚರ್ಚೆ ಉಪಯುಕ್ತವಾಗುತ್ತದೆ ಎಂದು ಭಾವಿಸಿದ್ದೇವೆ.

ಜೆ.ಎನ್.ಯು. ಮಸೂದೆಯನ್ನು ಪರಿಚಯಿಸಿದ್ದು

1964ರ ಚಳಿಗಾಲದ ಒಂದು ಅಪರಾಹ್ನ, ಅಂದಿನ ಶಿಕ್ಷಣ ಸಚಿವ ಎಂ.ಸಿ. ಚಾಗ್ಲಾ ರಾಜ್ಯಸಭೆಯಲ್ಲಿ ಜೆ.ಎನ್.ಯು. ಮಸೂದೆಯನ್ನು ಮಂಡಿಸಿ, ಅದರ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದರು. ಕ್ಯಾಬಿನೆಟ್ ಸಚಿವರುಗಳ ಮನಸ್ಸಿನಲ್ಲಿ ಅತ್ಯಂತ ಶ್ರೇಷ್ಠವಾದ ಆದರ್ಶದ ವಿಶ್ವವಿದ್ಯಾನಿಲಯದ ಕಲ್ಪನೆಯೊಂದು ಮೂಡತೊಡಗಿತ್ತು. ಆಗ ಕಮ್ಯೂನಿಸ್ಟ್ ನಾಯಕ ಭೂಪೇಶ್ ಗುಪ್ತಾ ಈ ಚರ್ಚೆಯನ್ನು ವಾಸ್ತವಿಕ ಮತ್ತು ಪ್ರಾಯೋಗಿಕ ನೆಲೆಗೆ ಎಳೆದು ತಂದರು: ’.... ನಾವು ಇಲ್ಲಿ ಕೇಂಬ್ರಿಡ್ಜ್ ಮತ್ತು ಆಕ್ಸ್‌ವರ್ಡ್‌ಗಳನ್ನು ಹಾಗೂ ಪ್ರಿನ್ಸಟನ್ ಮತ್ತು ಹಾರ್ವರ್ಡಗಳನ್ನು ಕಟ್ಟಬೇಕಿಲ್ಲ,’ ಬದಲಿಗೆ, ’ನಮ್ಮ ಜನರಿಗೆ ಬೇಕಿರುವ, ನಮ್ಮ ಅಭಿವೃದ್ಧಿಗೆ ಬೇಕಿರುವ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳನ್ನು ಕಟ್ಟೋಣ ಹಾಗೂ ನಮ್ಮ ಭೌತಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಪುನಃ ಸೃಷ್ಟಿಸೋಣ.’

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂ.ಸಿ.ಚಾಗ್ಲಾ (1900—1981). ಬಾಂಬೆ ಹೈಕೋರ್ಟಿನ ಮೊದಲ ಭಾರತೀಯ ಮುಖ್ಯ ನ್ಯಾಯಮೂರ್ತಿಯಾದ ಚಾಗ್ಲಾ ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಿಗೆ ಭಾರತದ ರಾಯಭಾರಿಯಾಗಿಯೂ ಆಗಿದ್ದರು. 1963ರಲ್ಲಿ ಭಾರತಕ್ಕೆ ವಾಪಸಾಗುತ್ತಿದ್ದಂತೆಯೇ ಚಾಗ್ಲಾ ಅವರು ನೆಹರೂ ಅವರ ಆಹ್ವಾನದ ಮೇರೆಗೆ ಶಿಕ್ಷಣ ಸಚಿವರಾದರು. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಮರುಚಿಂತನೆ ಮಾಡಲು ನೇಮಕಗೊಂಡ ಕೊಠಾರಿ ಆಯೋಗವು ಚಾಗ್ಲಾ ಅವರು ತೆಗೆದುಕೊಂಡ ಕ್ರಮ. 1966ರಿಂದ 67ರವರಗೆ ವಿದೇಶಾಂಗ ಸಚಿವರೂ ಆಗಿದ್ದರು. ಜವಾಹರಲಾಲ್ ನೆಹರೂರ ಹೆಸರಿನಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಫಲಿಸುವಂತಹ ಉನ್ನತ ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕೆಂದು ಜೆ.ಎನ್.ಯು. ಮಸೂದೆಯನ್ನು ಸಿದ್ಧಪಡಿಸಿ, ಅದರ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡವರು ಎಂ.ಸಿ. ಚಾಗ್ಲಾ

ಜೆ.ಎನ್.ಯು. ಪ್ರಸ್ತಾವನೆಯನ್ನು ಭಾರತದ ಅಂದಿನ ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಚರ್ಚಿಸುವುದು ಅವಶ್ಯಕ ಎಂದು ಭೂಪೇಶ್ ಗುಪ್ತಾ ವಾದಿಸಿದರು. ಅವರ ಪ್ರಕಾರ ವಿಶ್ವವಿದ್ಯಾನಿಲಯಗಳ ಬಾಗಿಲುಗಳನ್ನು ’ಮೊದಲಿಗೆ ದುಡಿಯುವ ವರ್ಗಗಳ, ಕಾರ್ಮಿಕರ, ರೈತರ ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ’ ಮುಕ್ತವಾಗಿ ಇರಿಸಬೇಕು. ಇದಕ್ಕಾಗಿ ಉನ್ನತ ಶಿಕ್ಷಣವನ್ನು ಬಡವ ಮತ್ತು ಮಧ್ಯಮ ವರ್ಗಗಳ ಕೈಗೆಟಕುವಂತೆ ಇರಿಸಬೇಕು ಎಂದು ಗುಪ್ತಾ ಒತ್ತಿಹೇಳಿದರು. ನೆಹ್ರೂರ ಸಮಾಜವಾದಿ ವಿಚಾರಗಳು ಮತ್ತು ದೃಷ್ಟಿಕೋನಗಳನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಸಭಾ ಸದಸ್ಯರಲ್ಲಿ ಮನವಿ ಮಾಡುತ್ತ, ಜೆ.ಎನ್.ಯು. ಕುರಿತಾದ ಚರ್ಚೆಯು ಮೇಲ್ವರ್ಗಗಳಿಗಿಂತ ಆರ್ಥಿಕವಾಗಿ ಸಮಾಜದ ಕೆಳವರ್ಗಗಳ ಜನರ ಕಡೆಗೆ ಸರಿಯಲಿ ಎಂದು ಗುಪ್ತಾ ಹೇಳಿದರು.

ವಿಶ್ವವಿದ್ಯಾನಿಲಯಕ್ಕೆ ಇಡಲು ಪ್ರಸ್ತಾಪಿತವಾಗಿದ್ದ ಹೆಸರು ಪಾರ್ಲಿಮೆಂಟರಿ ಚರ್ಚೆಗಳ ಧ್ರುವೀಕರಣಕ್ಕೆ ಕಾರಣವಾಯಿತು. ನೆಹ್ರೂರವರ ಹೆಸರಿಡುವ ಬಗ್ಗೆ ಯಾವುದೆ ತಕರಾರನ್ನು ಗುಪ್ತಾ ಎತ್ತಲಿಲ್ಲ. ಅವರು ನೆಹ್ರೂರವರ ಸಮಾಜವಾದಿ ವಿಚಾರಗಳನ್ನು ಪ್ರಸ್ತಾಪಿಸಿ, ಅವುಗಳನ್ನು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಚರ್ಚಿಸಿದರು. ಸಮಾಜವಾದವನ್ನು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಮಾತ್ರವಲ್ಲ, ಬದಲಿಗೆ ವಿಶ್ವವಿದ್ಯಾನಿಲಯದ ತತ್ವಗಳು ಮತ್ತು ಆದರ್ಶಗಳ ಮೂಲಸೆಲೆಯಾಗಬೇಕು ಎಂದರು. ಗಂಭೀರವಾದ ಪ್ರಶ್ನೆಯೊಂದನ್ನು ಎತ್ತಿದ ಗುಪ್ತಾ, ದೇಶದಲ್ಲಿನ ಆರ್ಥಿಕ ಅಸಮಾನತೆಯನ್ನು ಗಮನಿಸಿದಾಗ ಬಡವರ್ಗಗಳ ಯುವಕ—ಯುವತಿಯರಿಗೆ ನಮ್ಮ ವಿಶ್ವವಿದ್ಯಾನಿಲಯಗಳನ್ನು ಪ್ರವೇಶಿಸಲು ಅವಕಾಶ ಮತ್ತು ಸಾಮಥ್ರ್ಯಗಳು ಇಲ್ಲ. ಹೀಗಿರುವಾಗ ಈ ಹೊಸ ವಿಶ್ವವಿದ್ಯಾನಿಲಯವು ಅವರಿಗೆ ಮುಕ್ತವಾಗಿರುತ್ತದೆಯೇ ಎನ್ನುವ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ದೊರಕಬೇಕು ಎಂದರು.

ಹೀಗೆ ಕಮ್ಯುನಿಸ್ಟರು ಹೊಸ ವಿಶ್ವವಿದ್ಯಾನಿಲಯವನ್ನು ವೈಜ್ಞಾನಿಕ ಸಮಾಜವಾದದ ಹಿನ್ನೆಲೆಯಲ್ಲಿ ನೋಡಲು ಬಯಸಿದರೆ, ಸಮಾಜವಾದಿಗಳು ಬೇರೆಯ ಕಾರಣಗಳಿಗೆ ಅಸುಂತುಷ್ಟರಾಗಿದ್ದರು. ಅಶೋಕ ಮೆಹ್ತಾ ಅವರು ಜೆ.ಎನ್.ಯು. ಪ್ರಸ್ತಾವನೆಯು ಯೋಜನಾ ಆಯೋಗದಲ್ಲಿ ಚರ್ಚಿತವಾಗಿಲ್ಲ ಎಂದು ಆಕ್ಷೇಪಿಸಿದರು. ಡಾ.ರಾಮಮನೋಹರ ಲೋಹಿಯಾ ನೆಹರೂರ ಹೆಸರಿನಲ್ಲಿ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸುವುದನ್ನೇ ಪ್ರತಿಭಟಿಸಿದರು. ಸಮಾಜವಾದಿಗಳ ಜೊತೆಗೆ ಕೆಲವರು ಕಮ್ಯುನಿಸ್ಟ್ ಸದಸ್ಯರು ಹಾಗೂ ಸ್ವತಂತ್ರ ಪಕ್ಷದ ಎನ್. ಜಿ. ರಂಗಾ ಮತ್ತಿತರರು ಹೊಸ ವಿಶ್ವವಿದ್ಯಾನಿಲಯದ ಉದ್ದೇಶ, ಸ್ಥಳ, ವಿಚಾರಧಾರೆ ಮತ್ತು ಹೆಸರು ಇವುಗಳೆಲ್ಲವನ್ನೂ ವಿರೋಧಿಸಿದರು.

ಈ ನಡುವೆ 1965ರ ಸೆಪ್ಟಂಬರ್ 20ರಂದು ಶಿಕ್ಷಣ ಖಾತೆಯ ಉಪಸಚಿವ ಶ್ರೀಭಕ್ತ ದರ್ಶನ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಚಾಗ್ಲಾರ ಮೂಲ ಮಸೂದೆಗಿಂತ ಭಿನ್ನವಾಗಿದ್ದರೂ, ಈ ಹೊಸ ಅವತರಣಿಕೆಯಲ್ಲಿ ಎರಡು ಅಂಶಗಳು ಸ್ಪಷ್ಟವಾಗಿದ್ದವು.

  1. ಹೊಸ ವಿಶ್ವವಿದ್ಯಾನಿಲಯವು ದೆಹಲಿ ವಿಶ್ವವಿದ್ಯಾನಿಲಯದ ಹೆಚ್ಚುವರಿ ವಿದ್ಯಾರ್ಥಿಗಳನ್ನು ನಿರ್ವಹಿಸುವ ಉದ್ದೇಶವನ್ನು ಹೊಂದಿತ್ತು. ಸ್ವಾತಂತ್ರ್ಯಾನಂತರದ ಎರಡು ವರ್ಷಗಳಲ್ಲಿ ದೆಹಲಿಯ ಜನಸಂಖ್ಯೆಯು ದೇಶವಿಭಜನೆಯ ಕಾರಣವಾಗಿ ದ್ವಿಗುಣಗೊಂಡಿತ್ತು. ಹಾಗಾಗಿ ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಪ್ರವೇಶಾತಿ ನಿರೀಕ್ಷಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿತ್ತು. 1947—48ರ ನಡುವೆ ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜುಗಳ ಸಂಖ್ಯೆಯು 7ರಿಂದ 35ಕ್ಕೂ ಮತ್ತು ವಿದ್ಯಾರ್ಥಿಗಳ ಸಂಖ್ಯೆಯು 4,583ರಿಂದ 30,640ಕ್ಕೆ ಹೆಚ್ಚಿತ್ತು. ಹಾಗಾಗಿ ಚಾಗ್ಲಾ ದೆಹಲಿಗೆ ಮತ್ತೊಂದು ವಿಶ್ವವಿದ್ಯಾನಿಲಯದ ಅಗತ್ಯವಿದೆ ಎಂದು ವಾದಿಸಿದರು. ಯು.ಜಿ.ಸಿ. ಸಹ ದೆಹಲಿಯಲ್ಲಿ ಮತ್ತೊಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಂತೆ ಶಿಫ಼ಾರಸು ಮಾಡಿತ್ತು.
  2. ಈ ಹೊಸ ವಿಶ್ವವಿದ್ಯಾನಿಲಯಕ್ಕೆ ಪಂಡಿತ್ ಜವಾಹರಲಾಲ್ ನೆಹ್ರೂ ಅವರ ಹೆಸರಿಡಬೇಕು.

ಎದ್ದುಕಾಣುವ ಬೌದ್ಧಿಕ ಗುಣಮಟ್ಟ

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಂಬಂಧಿಸಿದಂತೆ ಬಹಳ ಕುತೂಹಲಕರವಾದ ಅಂಶವೆಂದರೆ 1964ರಲ್ಲಿ ಮಸೂದೆ ಮಂಡನೆಯಾದ ನಂತರ ಸುಮಾರು ಐದು ವರ್ಷಗಳ ಕಾಲ ಪಾರ್ಲಿಮೆಂಟಿನಲ್ಲಿ ಹಾಗೂ ನಂತರ ಪಾರ್ಲಿಮೆಂಟಿನ ಜಂಟಿ ಸಮಿತಿಗಳಲ್ಲಿ ನಡೆದ ಸುದೀರ್ಘ ಚರ್ಚೆ. ಐದು ದಶಕಗಳ ನಂತರವೂ ಆ ಚರ್ಚೆಯ ಬೌದ್ಧಿಕ ಗುಣಮಟ್ಟ ನಮಗೆ ಎದ್ದು ಕಾಣುತ್ತದೆ. ಹಾಗೆಯೇ ನೆಹರೂ ಸೇರಿದಂತೆ ಎಲ್ಲರನ್ನೂ ಕಟುವಾದ ಟೀಕೆ—ವಿಮರ್ಶೆಗಳಿಗೆ ಒಳಗಾಗಿಸಿ, ಪಾರ್ಲಿಮೆಂಟ್ ಸದಸ್ಯರು ಪ್ರಜಾಸತ್ತಾತ್ಮಕ ಚರ್ಚೆಯ ಅತ್ಯುನ್ನತ ಸಂಪ್ರದಾಯಗಳನ್ನು ಎತ್ತಿಹಿಡಿದರು. ಇಂದು ಇಂತಹ ಮುಕ್ತ ಚರ್ಚೆಯಾಗಲಿ ಅಥವಾ ನಮ್ಮ ಕಾಲದ ನಾಯಕರುಗಳನ್ನೆ ವಿಮರ್ಶೆಗೊಳಪಡಿಸುವುದಾಗಲಿ ಅಸಾಧ್ಯವೆನಿಸುತ್ತದೆ.

ದೆಹಲಿ ನಗರಕ್ಕೆ ಎರಡನೆಯ ವಿಶ್ವವಿದ್ಯಾನಿಲಯವೆನ್ನುವಂತೆ ಮಂಡಿತವಾದ ಜೆ.ಎನ್.ಯು. ಮಸೂದೆಯು ಜಂಟಿ ಸಮಿತಿಯಲ್ಲಿ ನಡೆದ ಚರ್ಚೆಗಳ ಸಂದರ್ಭದಲ್ಲಿ ತನ್ನ ಅಂತಿಮ ಸ್ವರೂಪವನ್ನು ಪಡೆದುಕೊಂಡಿತು. ಈ ಸಮಿತಿಯ ಮುಂದೆ ದೇಶದ ಅತ್ಯಂತ ಗೌರವಾನ್ವಿತ ಶಿಕ್ಷಣ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಿದರು. ಮುಂದಿನ ಭಾಗದಲ್ಲಿ ಈ ಪ್ರಕ್ರಿಯೆಯ ಕೆಲವು ವಿವರಗಳನ್ನು ಗಮನಿಸೋಣ. ಜೆ.ಎನ್.ಯು. ಮಸೂದೆಯನ್ನು ಜಂಟಿ ಸಮಿತಿಯಲ್ಲಿ ಚರ್ಚೆಗೆ ಕೈಗೆತ್ತಿಕೊಂಡ ದಿನವೇ (ಆಗಸ್ಟ್ 31, 1965) ಭಾರತೀಯ ಸೈನ್ಯವನ್ನು 1965ರ ಪಾಕಿಸ್ತಾನದ ವಿರುದ್ಧದ ಯುದ್ಧಕ್ಕೆ ಸಜ್ಜುಗೊಳಿಸಲಾಯಿತು. ಜಂಟಿ ಸಮಿತಿಯಲ್ಲಿ ಪಾರ್ಲಿಮೆಂಟಿನ ಕೆಲವು ಅತ್ಯಂತ eಡಿuಜiಣe ಸದಸ್ಯರು ಇದ್ದರು. ಇವರುಗಳ ಪೈಕಿ ಗೋಪಾಲ್ ಸ್ವರೂಪ್ ಪಾಠಕ್ (ಮುಂದೆ ಭಾರತದ ಉಪರಾಷ್ಟ್ರಪತಿ), ಪ್ರೊ. ಮುಕುಟ್ ಬಿಹಾರಿ ಲಾಲ್ (ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯಶಾಸ್ತ್ರ ಪ್ರಾಧ್ಯಾಪಕ ಮತ್ತು ಹೆರಾಲ್ಡ್ ಲಾಸ್ಕಿಯವರ ವಿದ್ಯಾರ್ಥಿ), ಎನ್.ಜಿ. ರಂಗಾ, ಚಾವ್ಲಾ ಮತ್ತಿತರರು ಇದ್ದರು. ಸಮಿತಿಯು ವಿ.ಕೆ.ಆರ್.ವಿ.ರಾವ್, ಡಿ.ಎಸ್.ಕೊಠಾರಿ, ವಿ.ಎಸ್.ಝಾ ಸೇರಿದಂತೆ ಎಂಟು ಪರಿಣತರನ್ನು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿತು.

—ಅನುವಾದಕ

ಪಾರ್ಲಿಮೆಂಟಿನಲ್ಲಿ ಚರ್ಚೆಯು ಮಸೂದೆಯ ಬಗ್ಗೆ ತೀವ್ರವಾದ ಆಕ್ರಮಣದೊಡನೆಯೆ ಪ್ರಾರಂಭವಾಯಿತು. ಮಸೂದೆಯನ್ನು ’ಒಂದು ಕೆಟ್ಟ ಶಾಸನವೆಂದು ಮತ್ತು ಅದು ಹಲವಾರು ವಿಷಯಗಳನ್ನು ಅಸ್ಪಷ್ಟವಾಗಿಯೆ ಉಳಿಸಿತು’ ಎಂದು ಹೇಳಲಾಯಿತು. ಅಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಮಸೂದೆಗಳನ್ನು ಕೂಲಂಕುಶವಾಗಿ ಶಾಸನಸಭೆ ಮತ್ತು ಪಾರ್ಲಿಮೆಂಟುಗಳಲ್ಲಿ ಚರ್ಚಿಸುವುದು ಸಂಪ್ರದಾಯವಾಗಿತ್ತು. ಮಸೂದೆಯ ಸಂಕ್ಷಿಪ್ತತೆಯ ವಿರುದ್ಧ ಕೇಳಿಬಂದ ಪ್ರಬಲವಾದ ದನಿಯೆಂದರೆ ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದ ಎಮ್.ಎಸ್.ಅನೆಯವರದು. ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಜೆ.ಎನ್.ಯು. ಮಸೂದೆಯಲ್ಲಿ ವಿವರಗಳು ಇಲ್ಲದಿದ್ದ ಬಗ್ಗೆ ಅವರು ತೀವ್ರವಾಗಿ ಆಕ್ಷೇಪಿಸಿದರು.

ಅಲ್ಲದೆ ವ್ಯಕ್ತಿ ಆರಾಧನೆಯನ್ನು ಪ್ರೋತ್ಸಾಹಿಸುವ ಮಾದರಿಗಳನ್ನು ಹುಟ್ಟುಹಾಕುವ ಬಗ್ಗೆ ಲೋಕಸಭಾ ಸದಸ್ಯರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು ಮತ್ತು ಆ ಕಾರಣದಿಂದಲೇ ನೆಹರೂ ಅವರ ಹೆಸರನ್ನು ಹೊಸ ವಿಶ್ವವಿದ್ಯಾನಿಲಯಕ್ಕೆ ಇಡಲು ಒಪ್ಪಲಿಲ್ಲ. ಪಾರ್ಲಿಮೆಂಟರಿ ಪ್ರಕ್ರಿಯೆಗಳು ಮತ್ತು ಮೇಲುಸ್ತುವಾರಿ ಇಲ್ಲದೆ ಇರುವ ಸಂಸ್ಥೆಗಳನ್ನು ಕಟ್ಟುವ ವಿರುದ್ಧ ಈ ಚರ್ಚೆಯಲ್ಲಿ ಪ್ರಜಾಸತ್ತಾತ್ಮಕ ನಿಲುವುಗಳನ್ನು ಸದಸ್ಯರು ಅಭಿವ್ಯಕ್ತಿಸಿದರು. ಈಗಾಗಲೆ ನೆಹರೂರವರ ಹೆಸರಿನಲ್ಲಿ ಹಲವಾರು ಸಂಸ್ಥೆಗಳಿರುವ ಬಗ್ಗೆ ಸಹ ಅಸಮಾಧಾನವನ್ನೂ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯಕ್ಕೆ ನೆಹ್ರೂರ ಹೆಸರಿಡುವ ಬಗ್ಗೆ ವಿರೋಧವು ಹೆಚ್ಚುತ್ತಲೆ ಹೋಯಿತು. ವಿಶ್ವವಿದ್ಯಾನಿಲಯಗಳಿಗೆ ವ್ಯಕ್ತಿಗಳ ಹೆಸರನ್ನು ಇಡಬಾರದು ಎಂದು ಯು.ಜಿ.ಸಿ.ಯು ಆಗ ತಾನೆ ಹೊರಡಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಹಲವು ಖಂಡಿತವಾದಿ ಸದಸ್ಯರು ಪ್ರಸ್ತಾಪಿಸಿದರು. ರವಿಶಂಕರ ಶುಕ್ಲಾರ ಹೆಸರನ್ನು ಮಧ್ಯಪ್ರದೇಶದ ವಿಶ್ವವಿದ್ಯಾನಿಲಯವೊಂದಕ್ಕೆ ಇಡಲು ಯು.ಜಿ.ಸಿ.ಯಿಂದ ಒಪ್ಪಿಗೆ ದೊರೆಯದಿದ್ದಾಗ ಪಾರ್ಲಿಮೆಂಟ್ ನೆಹರೂರವರ ಹೆಸರಿನ ವಿಶ್ವವಿದ್ಯಾನಿಲಯವನ್ನು ಪಾರ್ಲಿಮೆಂಟ್ ಅಂಗೀಕರಿಸುತ್ತಿರುವ ವಿಪರ್ಯಾಸವನ್ನು ಖ್ಯಾತ ವಕೀಲ ಎಲ್.ಎಮ್. ಸಿಂಗ್ವಿ ಗುರುತಿಸಿದರು. ಒರಿಸ್ಸಾದ ಸಮಾಜವಾದಿ ಕಿಷನ್ ಪಟ್ನಾಯಕ್ ವಿಶ್ವವಿದ್ಯಾನಿಲಯವೊಂದಕ್ಕೆ ವ್ಯಕ್ತಿಯ ಹೆಸರಿಡುವುದನ್ನು ತೀವ್ರವಾಗಿ ವಿರೋಧಿಸಿದರು. ಜೆ.ಎನ್.ಯು. ಮಸೂದೆ ಕುರಿತಾದ ಚರ್ಚೆಯ ಮತ್ತೊಂದು ಆಯಾಮವು ಅದರ ತಾಂತ್ರಿಕ ಪ್ರಕ್ರಿಯೆಗಳ ಕುರಿತಾದುದು ಆಗಿತ್ತು. ಹೊಸ ವಿಶ್ವವಿದ್ಯಾನಿಲಯಕ್ಕೆ ಮಸೂದೆಯ ಮೂಲಕ ದೊರಕುತ್ತಿದ್ದ ಸ್ವಾಯತ್ತತೆಯ ಬಗ್ಗೆ ಪಾರ್ಲಿಮೆಂಟ್ ಸದಸ್ಯರುಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕಡೆಯದಾಗಿ, ಜೆ.ಎನ್.ಯು.ವನ್ನು ದೆಹಲಿಯಲ್ಲಿಯೇ ಸ್ಥಾಪಿಸುವುದರ ಬಗ್ಗೆ ಸಹ ಅಸಮ್ಮತಿ ವ್ಯಕ್ತವಾಯಿತು. ಹೊಸ ವಿಶ್ವವಿದ್ಯಾನಿಲಯವೊಂದನ್ನು ಸುಲಭವಾಗಿ ಪೋಷಿಸಬಲ್ಲ ಹಲವಾರು ನಗರಗಳು ಆ ವೇಳೆಗೆ ಭಾರತದಲ್ಲಿ ಮೂಡಿದ್ದವು. ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನುವ ಕಾರಣದಿಂದ ದೆಹಲಿಯಲ್ಲಿ ಹೊಸ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ತರ್ಕವನ್ನು ಸಮಾಜವಾದಿ ಪಕ್ಷದ ಕಿಷನ್ ಪಟ್ನಾಯಕ್ ತೀವ್ರವಾಗಿ ವಿರೋಧಿಸಿದರು ಮತ್ತು ಭಾರತದ ಇತರ ನಗರಗಳಲ್ಲಿಯೂ ಜನಸಂಖ್ಯಾ ಹೆಚ್ಚಳವಾಗಿದೆ ಎಂದು ವಾದಿಸಿದರು. ಇತರೆ ಹಲವು ಸದಸ್ಯರು ದೆಹಲಿಯಿಂದಾಚೆಗೆ ಈ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ನಗರ ಕೇಂದ್ರಿತ ವಿಶ್ವವಿದ್ಯಾನಿಲಯಕ್ಕಿಂತಲೂ ಗ್ರಾಮೀಣ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಂತೆ ಮತ್ತಷ್ಟು ಸದಸ್ಯರು ಸೂಚಿಸಿದರು.

ಹೀಗೆ ಮಸೂದೆಯ ವಿರುದ್ಧ ಆಕ್ರಮಕವಾಗಿ ಹಲವರು ಮಾತನಾಡಿದರೂ ಸಹ, ಈ ಚರ್ಚೆಗೆ ಒಂದು ಸೂಕ್ಷ್ಮವಾದ ಒಳ ಅಯಾಮವೂ ಇತ್ತು. ಅದೇನೆಂದರೆ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ ಒಂದು ದೊಡ್ಡದಾದ, ವಿನೂತನವಾದ ಮತ್ತು ಅನನ್ಯವಾದ ಸಂಸ್ಥೆಯೊಂದನ್ನು ಕಟ್ಟಲು ಪಾರ್ಲಿಮೆಂಟಿನ ಸದಸ್ಯರು ಬಯಸಿದರು. ಈ ಸಂಸ್ಥೆಯು ಕೇವಲ ದೆಹಲಿಯ ಎರಡನೆಯ ವಿಶ್ವವಿದ್ಯಾನಿಲಯವಾಗಿ ಆಗಲಿ, ದೆಹಲಿಯ ಜನಸಂಖ್ಯಾ ಸ್ಫೋಟಕ್ಕೆ ಸರಿಹೊಂದುವಂತಹ ಶೈಕ್ಷಣಿಕ ಸ್ಫೋಟವಾಗುವಂತಿರಲಿಲ್ಲ. ನೆಹರೂ ಇಡೀ ದೇಶಕ್ಕೆ ಮುಖ್ಯರಾದವರು ಆಗಿದ್ದರು. ಹಾಗಾಗಿ ಕೇವಲ ದೆಹಲಿಗೆ ಸೀಮಿತವಾಗುವಂತಹ ಸಂಸ್ಥೆಗೆ ನೆಹರೂರ ಹೆಸರನ್ನು ಮಿತಿಗೊಳಿಸಲು ಪಾರ್ಲಿಮೆಂಟಿನ ಸದಸ್ಯರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು.

ಸುದೀರ್ಘ ಚರ್ಚೆಯ ನಂತರ, ಎಲ್ಲರ ಟೀಕೆಗಳು ಮತ್ತು ಸಲಹೆಗಳ ನಂತರ 21 ಸೆಪ್ಟಂಬರ್ 1965ರಂದು ನಿರ್ಣಯವನ್ನು ಅಂಗೀಕರಿಸಲಾಯಿತು. ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಜೆ.ಎನ್.ಯು. ಮಸೂದೆಯ ಅಂತಿಮ ರೂಪವನ್ನು ತೀರ್ಮಾನಿಸಲು ಅದನ್ನು ಪಾರ್ಲಿಮೆಂಟಿನ ಜಂಟಿ ಸಮಿತಿಗೆ ಕಳುಹಿಸಲಾಯಿತು.

ಜೆ.ಎನ್.ಯು.ವನ್ನು ಒಂದು ಅನನ್ಯ ಸಂಸ್ಥೆಯನ್ನಾಗಿಸುವುದು

1964ರಲ್ಲಿ ರಾಜ್ಯಸಭೆಯಲ್ಲಿ ಜೆ.ಎನ್.ಯು. ಮಸೂದೆಯನ್ನು ಮಂಡಿಸಿದಾಗಿನಿಂದಲೂ ಈ ಹೊಸ ಸಂಸ್ಥೆಯನ್ನು ಅನನ್ಯವಾಗಿಸುವುದೆ ಮುಖ್ಯ ಉದ್ದೇಶವಾದುದರಿಂದ, ಜಂಟಿ ಸಮಿತಿಯಲ್ಲಿನ ಚರ್ಚೆಯೂ ಸಹ ಇತರೆ ವಿವರಗಳಿಗಿಂತೆ ಅನನ್ಯತೆಯ ಸುತ್ತಲೆ ಜರುಗಿತು. ಸಮಿತಿಯ ಮುಂದೆ ಮೊದಲು ಸಾಕ್ಷಿ ನೀಡಿದವರು ಪ್ರೊ.ವಿ.ಕೆ.ಆರ್.ವಿ.ರಾವ್. ಭಾರತದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲೊಬ್ಬರಾಗಿದ್ದ ಪ್ರೊ.ರಾವ್ ಅವರು ದೆಹಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ಮುಂದೆ 1969ರಲ್ಲಿ ಜೆ.ಎನ್.ಯು.ವಿನ ಸ್ಥಾಪನೆಯಾದಾಗ ಶಿಕ್ಷಣ ಸಚಿವರಾಗಿದ್ದರು ಮತ್ತು ಹೊಸ ವಿಶ್ವವಿದ್ಯಾನಿಲಯವನ್ನು ಅಧಿಕೃತವಾಗಿ ಉದ್ಘಾಟಿಸಿದರು ಕೂಡ.

ಜಿ.ಎಸ್. ಪಾಠಕ್ ತಮ್ಮ ಮೊದಲ ಪ್ರಶ್ನೆಯ ಮೂಲಕ ಸಮಿತಿಯ ಚರ್ಚೆಯ ಸ್ವರೂಪವನ್ನು ರೂಪಿಸಿದರು: ಪ್ರೊ. ರಾವ್ ಅವರ ಅಭಿಪ್ರಾಯದಲ್ಲಿ ಪ್ರಸ್ತಾಪಿತ ವಿಶ್ವವಿದ್ಯಾನಿಲಯದ ಅನನ್ಯತೆಯು ಏನು? ತಮ್ಮ ಸಮೃದ್ಧ ಅನುಭವದ ಹಿನ್ನೆಲೆಯಲ್ಲಿ ರಾವ್ ಅವರು ಜೆ.ಎನ್.ಯು.ನ ಅನನ್ಯತೆಯನ್ನು ಎರಡು ರೀತಿಯಲ್ಲಿ ವಿವರಿಸಿದರು. ಒಂದು ವಿಶ್ವವಿದ್ಯಾನಿಲಯವಾಗಿ ಜೆ.ಎನ್.ಯು. ದೇಶದ ಇತರ ಎಲ್ಲ ವಿಶ್ವವಿದ್ಯಾನಿಲಯಗಳಿಗಿಂತಲೂ ಭಿನ್ನವಾಗಿರಬೇಕು. ಹೀಗೆ ಅದರ ಸ್ವರೂಪವೇ ಅನನ್ಯವಾಗಿರಬೇಕು. ಮಿಗಿಲಾಗಿ, ಜವಾಹರಲಾಲ್ ನೆಹರೂ ಅವರ ಹೆಸರನ್ನು ಹೊಂದಿರುವ ವಿಶ್ವವಿದ್ಯಾನಿಲಯವು ಮೂರು ಮೂಲ ತತ್ವಗಳನ್ನು ತನ್ನದಾಗಿಸಿಕೊಂಡಿರಬೇಕು.: ರಾಷ್ಟ್ರೀಯ ಐಕ್ಯತೆ, ಯೋಗ್ಯ ಸಮಾಜದ ಸ್ಥಾಪನೆ ಮತ್ತು ಒಂದು ಸಾರ್ವತ್ರಿಕವಾದಂತಹ ತಾತ್ವಿಕತೆ. ಮುಂದುವರೆದು ಜೆ.ಎನ್.ಯು.ವಿನ ಅನನ್ಯತೆಯು ಚರ್ಚೆಯಾದಾಗ, ರಾವ್ ಅವರು ಶಿಪಾರಸ್ಸು ಮಾಡಿದ್ದು ಹಳೆಯ ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜುಗಳ ಮುಂದುವರೆದ ಭಾಗವಾಗಿದ್ದ ಹೊಸ ವಿಶ್ವವಿದ್ಯಾನಿಲಯವನ್ನಲ್ಲ. ಬದಲಿಗೆ ಅವರು ಸ್ಥಾಪಿಸಬೇಕು ಎಂದು ಹೇಳಿದ್ದು ಒಂದು ಸಂಯುಕ್ತ ಕೇಂದ್ರವನ್ನು ಹೊಂದಿದ್ದ ಸ್ನಾತಕೋತ್ತರ ವಿಶ್ವವಿದ್ಯಾನಿಲಯವನ್ನು.

ಹೀಗೆ ಸಾಕ್ಷಿ ನೀಡಿದ ಎಂಟು ಮಂದಿ ತಜ್ಞರೂ ಮಸೂದೆಯ ಮೂಲ ಸ್ವರೂಪಕ್ಕಿಂತ ಭಿನ್ನವಾದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂದು ವಾದಿಸಿದರು. ಅವರ ದೃಷ್ಟಿಯಲ್ಲಿ ಆಗ ಅಸ್ತಿತ್ವದಲ್ಲಿದ್ದ ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜುಗಳನ್ನು ಹೊಸ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿಸುವುದು ಅನಗತ್ಯವಾಗಿತ್ತು. ಈ ವಿಚಾರದಲ್ಲಿ ರಾವ್ ಅವರಂತೂ ಸ್ಪಷ್ಟವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ನೆಹರೂ ಅವರ ಹೆಸರಿನಲ್ಲಿ ಸ್ಥಾಪಿಸುವ ವಿಶ್ವವಿದ್ಯಾನಿಲಯಕ್ಕೆ ಗುಣಮಟ್ಟವಿಲ್ಲದಿರುವ ಕಾಲೇಜುಗಳನ್ನು ಅಂಗಸಂಸ್ಥೆಗಳಾಗಿಸಿದರೆ, ಅದೊಂದು ಮೂರನೆಯ ದರ್ಜೆಯ ವಿಶ್ವವಿದ್ಯಾನಿಲಯವಾಗುತ್ತದೆ ಎಂದು ಅವರು ವಾದಿಸಿದರು.

ವಿಶ್ವವಿದ್ಯಾನಿಲಯವೊಂದಕ್ಕೆ ಮಹತ್ವವನ್ನು ಒದಗಿಸುವುದು ಸ್ನಾತಕ ಪದವಿ ಶಿಕ್ಷಣವಲ್ಲ, ಬದಲಿಗೆ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯೆನ್ನುವುದು ರಾವ್ ಅವರಿಗೆ ತಿಳಿದಿತ್ತು. ಹೊಸ ವಿಶ್ವವಿದ್ಯಾನಿಲಯದ ಮುದ್ರೆಯಾಗಿ ಅಂತಹದೊಂದು ಅಧ್ಯಯನ ಮತ್ತು ಸಂಶೋಧನ ಕೇಂದ್ರವಿರಬೇಕೆಂದು ಅವರು ಬಯಸಿದರು. ಆದರೆ ಅವರಿಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಗು ಮತ್ತು ಜೀವಕಳೆ ಇರಬೇಕು ಎನ್ನುವುದರ ಅರಿವು ಸಹ ಇತ್ತು. ಹಾಗಾಗಿ ಅವರು ಒಂದು ಸಣ್ಣದಾದ ಸ್ನಾತಕ ಅಧ್ಯಯನ ವಿಭಾಗವೂ ಇರಬೇಕೆಂದು ಭಾವಿಸಿದರು. ಅದರಿಂದ ವಿಶ್ವವಿದ್ಯಾನಿಲಯಕ್ಕೆ ಬಹುಮುಖತೆ ಮತ್ತು ಹುರುಪು ಎರಡೂ ದೊರಕುತ್ತಿದ್ದವು.

ಚಾಗ್ಲಾರ ನಂತರ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ತ್ರಿಗುಣ ಸೇನ್ ಅವರು ರಾವ್‍ರ ನಂತರ ಸಾಕ್ಷ್ಯ ನೀಡಿದ್ದರು. ಅವರು ಸ್ಪಷ್ಟ ಪಡಿಸಿದ್ದು ಒಂದು ಬಹುಮುಖ್ಯ ಅಂಶವನ್ನು. ಅವರ ಪ್ರಕಾರ ಒಂದು ಅನನ್ಯ ವಿಶ್ವವಿದ್ಯಾನಿಲಯವನ್ನು ಕಟ್ಟಬಹುದು ಇಲ್ಲವೆ ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜುಗಳನ್ನು ಅಂಗಸಂಸ್ಥೆಗಳಾಗಿ ಹೊಂದಿರುವ ಸಂಸ್ಥೆಯನ್ನು ರೂಪಿಸಬಹುದು. ಎರಡೂ ಸ್ವರೂಪವನ್ನು ಹೊಂದಿರುವ ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ.

ಅದನ್ನು ರಾಷ್ಟ್ರೀಯ ಮಾಡೋಣ

ಭಾರತದಲ್ಲಿ ಮೊದಲ ಬಾರಿಗೆ ಸಮಗ್ರ ರಾಷ್ಟ್ರೀಯ ಸ್ವರೂಪವನ್ನು ಹೊಂದಿದ್ದ ಸಂಸ್ಥೆಯೊಂದನ್ನು ಕಲ್ಪಿಸಿಕೊಳ್ಳುವ ಕೆಲಸ ಈಗ ನಡೆಯಿತು. ಈ ಸಂಸ್ಥೆಯು ದೇಶದ ಎಲ್ಲ ಭಾಗಗಳು ಮತ್ತು ರಾಜ್ಯಗಳ ಜನರಿಗೆ ಯಾವುದೆ ಮಿತಿಯಿಲ್ಲದೆ ಪ್ರವೇಶಾವಕಾಶಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.

ಈ ಹೊಸ ಯೋಜನೆಯ ಪ್ರಕಾರ ಜೆ.ಎನ್.ಯು. ರಾಷ್ಟ್ರೀಯ ಐಕ್ಯತೆಯ ಹೊಸ ಪಥವನ್ನು ಸೃಷ್ಟಿಸಬೇಕಿತ್ತು. ಪ್ರಖ್ಯಾತ ಮತ್ತು ಶ್ರೇಷ್ಠ ಪ್ರಾಧ್ಯಾಪಕರನ್ನು ಹೊಂದಿದ್ದ ಬೋಧಕವರ್ಗವು ದೇಶದ ಎಲ್ಲ ಭಾಗಗಳಿಂದ ಉತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ ಎಂದು ವಿ.ಎಸ್.ಝಾ ಮತ್ತು ತ್ರಿಗುಣ ಸೇನ್ ಅಭಿಪ್ರಾಯಪಟ್ಟರು. ದೇಶದೆಲ್ಲಡೆಯ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುವ ಸ್ನಾತಕೋತ್ತರ ವಿಶ್ವವಿದ್ಯಾನಿಲಯವನ್ನು ಕಟ್ಟಬೇಕೆಂದು ಡಿ.ಎಸ್.ಕೊಠಾರಿಯವರು ವಾದಿಸಿದರು ಮತ್ತು ಅಂದಿನ ದೆಹಲಿ ವಿಶ್ವವಿದ್ಯಾನಿಲಯದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶವನ್ನು ಕೈಬಿಡಬೇಕೆಂದರು. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಮತ್ತಷ್ಟು ವಿಶ್ವವಿದ್ಯಾನಿಲಯಗಳು ಪ್ರಾರಂಭವಾಗುತ್ತವೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ ಕೊಠಾರಿಯವರು ಜೆ.ಎನ್.ಯು. ತನ್ನ ಕುರುಹು, ಲಕ್ಷಣ ಮತ್ತು ವ್ಯಕ್ತಿತ್ವಗಳನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕೆಂದರು. ಪ್ರತಿರಾಜ್ಯಕ್ಕೂ ಒಂದು ಕೋಟಾ ಒದಗಿಸುವ ಮೂಲಕ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳೂ ಜೆ.ಎನ್.ಯು.ನಲ್ಲಿ ಪ್ರಾತಿನಿಧ್ಯ ಪಡೆಯಬೇಕೆಂದು ವಿ.ಕೆ.ಅರ್.ವಿ. ರಾವ್ ಸಲಹೆ ನೀಡಿದರು. ಇದರಿಂದ ಹೊಸತಲೆಮಾರಿನವರಲ್ಲಿ ಸಹ ರಾಷ್ಟ್ರೀಯ ಸಮಗ್ರತೆ ಮತ್ತು ಐಕ್ಯತೆಗಳ ಹೊಸದೊಂದು ಭಾವನೆ ಮೂಡುತ್ತದೆ ಎನ್ನುವುದು ಅವರ ಚಿಂತನೆಯಾಗಿತ್ತು.

ಹೀಗೆ ಈ ಚರ್ಚೆಯಲ್ಲಿ ಎರಡು ವಿಚಾರಗಳು ಹೊರಹೊಮ್ಮಿದವು. 1. ಈ ಸಂಯುಕ್ತ ರಾಷ್ಟ್ರಮಟ್ಟದ ವಿಶ್ವವಿದ್ಯಾನಿಲಯದೊಳಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಭಾಷಾ ಸಂಸ್ಥೆಗಳು ಇರಬೇಕು. 2. ಜೆ.ಎನ್.ಯು.ವಿನ ವಿದ್ಯಾರ್ಥಿಗಳು, ಬೋಧಕರು ಮತ್ತು ಆಡಳಿತ ಮಂಡಳಿಗಳ ರಾಷ್ಟ್ರೀಯ ಏಕೀಕರಣ.

ಲೋಕಸಭೆಯಲ್ಲಿ ಈ ಹೊಸ ವಿಶ್ವವಿದ್ಯಾನಿಲಯದ ನೆಲೆಯ ಬಗ್ಗೆಯೂ ಗಂಭೀರ ಚರ್ಚೆಯಾಯಿತು. ಕೆಂಗಲ್ ಹನುಮಂತಯ್ಯನವರೂ ಸೇರಿದಂತೆ ಹಲವು ಸದಸ್ಯರು ಈ ವಿಶ್ವವಿದ್ಯಾನಿಲಯವನ್ನು ದಕ್ಷಿಣಭಾರತದಲ್ಲಿ ಎಲ್ಲಿಯಾದರೂ ಸ್ಥಾಪಿಸಬೇಕೆಂದು ನಿರ್ಣಯವನ್ನು ಮಂಡಿಸಿದರು. ಕೃಷ್ಣಪಾಲ್ ಸಿಂಗ್ ಎಂಬ ಮತ್ತೊಬ್ಬ ಸದಸ್ಯರು ಜೆ.ಎನ್.ಯು.ವನ್ನು ಯಾವುದೆ ರಾಜ್ಯದಲ್ಲಿರಲಿ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಬೇಕೆಂದು ವಾದಿಸಿದರು. ಪ್ರಕಾಶ್ ವೀರ್ ಶಾಸ್ತ್ರಿಯವರು ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ದೊರಕಬೇಕು ಎಂದರೆ ಎಸ್. ಕಂದಪ್ಪನ್ ಇದನ್ನು ಪ್ರಬಲವಾಗಿ ವಿರೋಧಿಸಿದರು.

ನಾವು ಚರ್ಚ್ ಒಂದನ್ನು ಸ್ಥಾಪಿಸುತ್ತಿದ್ದೇವೆಯೆ?

ಪ್ರಾರಂಭದಿಂದಲೂ ಹೊಸ ವಿಶ್ವವಿದ್ಯಾನಿಲಯದ ಹೆಸರಿನ ಬಗ್ಗೆ ರಾಜ್ಯಸಭಾ ಸದಸ್ಯರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಸಮಾಜವಾದಿಗಳು ಜವಾಹರಲಾಲರ ವಿಚಾರಗಳನ್ನು ಬೆಂಬಲಿಸುವವರು ಆಗಿರಲಿಲ್ಲ ಮತ್ತು ಅವರ ಹೆಸರನ್ನು ವಿಶ್ವವಿದ್ಯಾನಿಲಯಕ್ಕೆ ಇಡುವುದನ್ನು ವಿರೋಧಿಸುತ್ತಿದ್ದರು. ಜನಸಂಘವೂ ಸಹ ಇಂತಹುದೆ ಭಾವನೆಯನ್ನು ವ್ಯಕ್ತಪಡಿಸುತ್ತಿತ್ತು. ಆದರೆ ರಾಜಕೀಯವಾಗಿ ಪ್ರಬಲವಾಗಿರದ ಕಾರಣ ಜನಸಂಘದವರ ವಿರೋಧಕ್ಕೆ ಹೆಚ್ಚಿನ ತೂಕವಿರಲಿಲ್ಲ. ಭಾರತದ ಇತಿಹಾಸದಲ್ಲಿ ನೆಹರೂ ಮುಖ್ಯಭೂಮಿಕೆಯನ್ನು ನಿಭಾಯಿಸಿದ್ದರೂ, ಅವರಂತೆ ವಿಶ್ವವಿದ್ಯಾನಿಲಯಕ್ಕೆ ಹೆಸರನ್ನು ಇಡಬಹುದಾದ ದೊಡ್ಡ ಸಾಧಕರು ಹಲವರು ಇದ್ದರು ಎಂದು ಈ ಎರಡೂ ಗುಂಪುಗಳು ವಾದಿಸಿದವು.

ಆದರೆ ವಿಶ್ವವಿದ್ಯಾನಿಲಯದ ಹೆಸರಿನ ವಿಚಾರವನ್ನು ಸದ್ಯಕ್ಕೆ ಚರ್ಚಿಸದೆ, ಅದರ ಸ್ವರೂಪ ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಇತರೆ ವಿಷಯಗಳ (ಅಂದರೆ ರಾಷ್ಟ್ರೀಯ ಏಕತೆ, ಅಂಗಸಂಸ್ಥೆಗಳು ಮತ್ತು ಪಠ್ಯಕ್ರಮ) ಬಗ್ಗೆ ಪರಿಣಿತ ಶಿಕ್ಷಣತಜ್ಞರನ್ನು ಸಾಕ್ಷಿ ಒದಗಿಸಲು ಕರೆಯಲಾಯಿತು. ಇದರ ನಡುವೆ ಸಮಿತಿಯು ಈ ಕೆಳಗಿನ ಪಠ್ಯವಿದ್ದ ಶೆಡ್ಯೂಲ್ ಒಂದನ್ನು ಸೇರಿಸಿತು.

"ತನ್ನ ಹೆಸರಿಗೆ ಬೆಲೆಕೊಡುವಂತೆ, ಈ ವಿಶ್ವವಿದ್ಯಾನಿಲಯವು ಜವಾಹರಲಾಲ್ ನೆಹರೂ ಅವರು ನಂಬಿದ್ದ ಮತ್ತು ತಮ್ಮ ಜೀವಿತಾವಧಿಯಲ್ಲಿ ಅನುಷ್ಠಾನಗೊಳಿಸಲು ಶ್ರಮಿಸಿದ ತತ್ವಗಳು ಮತ್ತು ಮೌಲ್ಯಗಳು ಅಧ್ಯಯನಕ್ಕೆ ಪ್ರಯತ್ನಿಸುತ್ತದೆ. ಆ ಮೌಲ್ಯಗಳೆಂದರೆ ರಾಷ್ಟ್ರೀಯ ಏಕತೆ, ಸಾಮಾಜಿಕ ನ್ಯಾಯ, ಸೆಕ್ಯುಲರಿಸಮ್, ಪ್ರಜಾಸತ್ತಾತ್ಮಕ ಜೀವನಕ್ರಮ, ಅಂತರರಾಷ್ಟ್ರೀಯ ತಿಳುವಳಿಕೆ ಮತ್ತು ದೇಶದ ಸಮಸ್ಯೆಗಳನ್ನು ಬಗೆಹರಿಸಲು ವೈಜ್ಞಾನಿಕ ದಾರಿ."

ಪ್ರೊ. ಮುಕುಟ್ ಬಿಹಾರಿ ಲಾಲ್ ಮತ್ತು ಹೇಮ್ ಬರುವಾ ಈ ಶೆಡ್ಯೂಲಿನ ವಿರುದ್ಧ ದನಿಯೆತ್ತಿದರು. ಒಂದು ರಾಷ್ಟ್ರದ ವಿಚಾರಧಾರೆಯನ್ನು ಒಬ್ಬ ವ್ಯಕ್ತಿಯ ತತ್ವಗಳು ಮತ್ತು ಆದರ್ಶಗಳು ಎಂದು ಪ್ರತಿಬಿಂಬಿಸುವುದು ಸರಿಯಲ್ಲ ಎಂದು ಅವರು ವಾದಿಸಿದರು. ಅವರ ಪ್ರಕಾರ "ರಾಷ್ಟ್ರೀಯ ಮೌಲ್ಯಗಳನ್ನು ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ಯಾರೋ ಶ್ರೇಷ್ಠ ನಾಯಕರೊಬ್ಬರು ಅವುಗಳನ್ನು ಪ್ರತಿಪಾದಿಸಿದರು ಎನ್ನುವ ಕಾರಣದಿಂದಲ್ಲ. ಬದಲಿಗೆ ಈ ಮೌಲ್ಯಗಳು ರಾಷ್ಟ್ರದ ಒಳಿತನ್ನು ಮತ್ತು ವ್ಯಕ್ತಿತ್ವದ ಆರೋಗ್ಯಪೂರ್ಣ ಬೆಳವಣಿಗೆಗೆ ದಾರಿಮಾಡಿಕೊಡುತ್ತವೆ" ನೆಹರೂರವರನ್ನು ಆರಾಧನೆಯ ವಸ್ತುವಾಗಿ ಪರಿವರ್ತಿಸುವುದನ್ನು ಮತ್ತು ದೇಶಭಕ್ತಿಯ ಎಲ್ಲ ಗುಣಗಳನ್ನು ಅವರಲ್ಲಿಯೆ ಕಾಣುವುದನ್ನು ಲಾಲ್ ಮತ್ತು ಬರುವಾ ಬಲವಾಗಿ ವಿರೋಧಿಸಿದರು. ವಿಶ್ವವಿದ್ಯಾನಿಲಯವನ್ನು ಒಂದು ಚರ್ಚ್ ಆಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ಶೆಡ್ಯೂಲನ್ನು ಕೈಬಿಟ್ಟು, ವಿಶ್ವವಿದ್ಯಾನಿಲಯದ ಸಾಮಾಜಿಕ ಉದ್ದೇಶಗಳನ್ನು ಮಸೂದೆಯ ಮುಖ್ಯ ಭಾಗದಲ್ಲಿ ರಾಷ್ಟ್ರೀಯ ಗುರಿಗಳೆಂದು ವ್ಯಾಖ್ಯಾನಿಸುವಂತೆ ಇಬ್ಬರು ಸದಸ್ಯರೂ ಸಲಹೆ ನೀಡಿದರು.

ಶಿಕ್ಷಣತಜ್ಞರ ಸಲಹೆಗಳ ಆಧಾರದ ಮೇಲೆ ಜಂಟಿ ಸಮಿತಿಯು ಹಲವಾರು ತಿದ್ದುಪಡಿಗಳನ್ನು ಮಾಡಿ ಪಾರ್ಲಿಮೆಂಟಿಗೆ ಕಳುಹಿಸಿತು. ತದನಂತರ ರಾಜ್ಯಸಭೆಯಲ್ಲಿ ನಡೆದ ಮೂರು ದಿನಗಳ ಸುದೀರ್ಘ ಚರ್ಚೆಯಲ್ಲಿ 174 ತಿದ್ದುಪಡಿಗಳನ್ನು ಸೂಚಿಸಲಾಯಿತು. ಅವುಗಳಲ್ಲಿ ಹಲವನ್ನು ಅಂಗೀಕರಿಸಲಾಯಿತು. ನೆಹರೂ ಅವರ ಹೆಸರನ್ನು ಇಡುವುದರ ವಿರುದ್ಧವಾಗಿಯೆ ಪ್ರಖ್ಯಾತ ಇತಿಹಾಸಕಾರ ಪ್ರೊ. ತಾರಾಚಂದ್ ಅವರು ಸಹ ವಾದಿಸಿದರು. ವಿಶ್ವವಿದ್ಯಾನಿಲಯಗಳು ಶಾಶ್ವತವಾಗಿ ಉಳಿಯುವ ಸಂಸ್ಥೆಗಳು ಮತ್ತು ಇವುಗಳನ್ನು ವ್ಯಕ್ತಿ ಆರಾಧನೆ ಸಂಪ್ರದಾಯಗಳ ಮೂಲಕ ವ್ಯಾಖ್ಯಾನಿಸಬಾರದು ಎಂದು ಅವರು ಪ್ರತಿಪಾದಿಸಿದರು.

ವ್ಯಕ್ತಿಗಳ ಹೆಸರನ್ನು ವಿಶ್ವವಿದ್ಯಾನಿಲಯಗಳಿಗೆ ಇಡಬಾರದು ಎನ್ನುವುದನ್ನು ತಾತ್ವಿಕವಾಗಿ ಒಪ್ಪಿದರೂ ಚಾಗ್ಲಾ ಅವರು ನೆಹರೂ ಅವರ ಹೆಸರನ್ನು ಹೊಸ ವಿಶ್ವವಿದ್ಯಾನಿಲಯಕ್ಕೆ ಇಡುವ ಬಗ್ಗೆ ಹಠ ಹಿಡಿದರು. ಮುಕುಟ್ ಬಿಹಾರಿ ಲಾಲ್ ಮತ್ತಿತರರು ಒಪ್ಪದಿದ್ದರೂ, ನೆಹರೂ ಅವರನ್ನು ಈ ತತ್ವಕ್ಕೆ ಅಪವಾದವಾಗಿಸಬೇಕೆಂದು ಚಾಗ್ಲಾ ಕೇಳಿದರು. ಹಲವು ದಶಕಗಳ ನಂತರ ಇಂದು ಈ ವಿಚಾರದ ಬಗ್ಗೆ ಮರುಚಿಂತನೆ ಮಾಡಿದಾಗ ನೆಹರೂ ಅವರ ಹೆಸರನ್ನು ಇಡದಿದ್ದರೆ ಒಳಿತಾಗುತ್ತಿತ್ತು ಎನಿಸುತ್ತದೆ. 1980ರ ದಶಕದ ನಂತರವಂತೂ ಹತ್ತಾರು ವಿಶ್ವವಿದ್ಯಾನಿಲಯಗಳನ್ನು ಸ್ಥಳೀಯ ಮತ್ತು ಪ್ರಾದೇಶಿಕ ನಾಯಕರುಗಳು ಹಾಗೂ ಧಾರ್ಮಿಕ ಗುರುಗಳ ಹೆಸರಿನಲ್ಲಿ ಸ್ಥಾಪಿಸಿರುವುದನ್ನು ನೋಡುತ್ತಿದ್ದೇವೆ. ಈ ಎಲ್ಲ ಚರ್ಚೆಯ ಹಿನ್ನೆಲೆಯಲ್ಲಿ ಮೇಲಿನ ಶೆಡ್ಯೂಲನ್ನು ತಿದ್ದುಪಡಿ ಮಾಡಲಾಯಿತು.

ಪ್ರಾಧ್ಯಾಪಕರನ್ನು ನಂಬೋಣ

ಪಾರ್ಲಿಮೆಂಟಿನ ಜಂಟಿ ಸಮಿತಿಯ ಚರ್ಚೆಯಲ್ಲಿ ಪ್ರಸ್ತಾಪಿತವಾದ ಮತ್ತೊಂದು ಪ್ರಮುಖ ವಿಚಾರವೆಂದರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಆಯ್ಕೆ ಮತ್ತು ಸಂಯೋಜನೆಗೆ ಕುರಿತಾದುದು. ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಅಪಾರ ಅನುಭವವನ್ನು ಹೊಂದಿದ್ದ ವಿ.ಎಸ್. ಝಾ ಅವರು ಅರ್ಹ ಮತ್ತು ಯೋಗ್ಯ ಅಧ್ಯಾಪಕರು ಇಲ್ಲದಿದ್ದರೆ ಈ ಹೊಸ ವಿಶ್ವವಿದ್ಯಾನಿಲಯಕ್ಕೆ ಯಾವುದೆ ಭವಿಷ್ಯ ಇರುವುದಿಲ್ಲ ಎಂದರು. ಇದಕ್ಕಾಗಿ ನೀತಿನಿರೂಪಕರು ವಿಶ್ವವಿದ್ಯಾನಿಲಯದ ಕುಲಪತಿಗೆ ತನ್ನ ಅಗತ್ಯಕ್ಕೆ ಸರಿಹೊಂದುವ ಪ್ರಾಧ್ಯಾಪಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು. ತಾಂತ್ರಿಕ ನೆಲೆಗಳಲ್ಲಿ ಕೆಲಸ ಮಾಡುವ ಆಯ್ಕೆ ಸಮಿತಿಗಳೊಡನೆ ಕುಲಪತಿಗಳು ಸೆಣಸುವಂತೆ ಆಗಬಾರದು ಎಂದೂ ವಾದಿಸಿದರು. "ನಾನು ಕುಲಪತಿಯಾದರೆ, ನನ್ನ ಆಸೆಯೇನೆಂದರೆ ನೀವು ನಾನು ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇನೆ ಎನ್ನುವ ನಂಬಿಕೆಯನ್ನು ಇಟ್ಟು, ನನ್ನನ್ನು ನನ್ನ ಪಾಲಿಗೆ ಬಿಡುತ್ತೀರಿ ಎನ್ನುವುದು" ಎಂದರು ಝಾ. ಪ್ರವಾದಿ ಗುಣವನ್ನು ಹೊಂದಿದ್ದ ಒಂದು ನೈತಿಕ ಹೇಳಿಕೆಯನ್ನು ಸಹ ಅವರು ನೀಡಿದರು: "ಆಯ್ಕೆ ಸಮಿತಿಗಳು ನ್ಯಾಯಬದ್ದತೆಯ ತಾಂತ್ರಿಕ ತೃಪ್ತಿಯನ್ನು ಮಾತ್ರ ಒದಗಿಸುತ್ತದೆ. ಆದರೆ ವಿಶ್ವವಿದ್ಯಾನಿಲಯಗಳಿಗೆ ನ್ಯಾಯಕ್ಕಿಂತಲೂ ಮಿಗಿಲಾದುದು ಆಗತ್ಯವಿದೆ."

ಆದರೆ ಹೀಗೆ ಕುಲಪತಿಗಳಲ್ಲಿ ಕುರುಡುನಂಬಿಕೆಯನ್ನು ಇಡುವುದು ದೀರ್ಘಾವಧಿಯಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎನ್ನುವ ಆತಂಕವನ್ನು ಬಕರ್ ಆಲಿ ಮಿರ್ಜ಼ಾ ವ್ಯಕ್ತಪಡಿಸಿದರು. ಆ ವಿಷಯದ ಕುರಿತಾಗಿ ಭಾಗಶಃ ತಮ್ಮ ಸಹಮತವನ್ನು ವ್ಯಕ್ತಪಡಿಸಿದ ಝಾ ಕುಲಪತಿಗಳಿಗೆ ತಕ್ಕಮಟ್ಟಿನ ಸ್ವಾಯತ್ತತೆ, ಸ್ವಾತಂತ್ರ್ಯಗಳನ್ನು ನೀಡಬೇಕೆಂದು ಒತ್ತಿಹೇಳಿದರು.

ರಾಜ್ಯಸಭೆಯ ಸದಸ್ಯರೆಲ್ಲರೂ ಪಕ್ಷಾತೀತವಾಗಿ ವಿಶ್ವವಿದ್ಯಾನಿಲಯದ ವಿಸಿಟರ್ (ಸಾಧಾರಣವಾಗಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಸಂದರ್ಭದಲ್ಲಿ ರಾಷ್ಟ್ರಪತಿಗಳು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ) ಅವರಿಗೆ ವಿಶ್ವವಿದ್ಯಾನಿಲಯದ ಕಾರ್ಯವೈಖರಿಯನ್ನು ವಿಮರ್ಶಿಸುವ ಅಧಿಕಾರವನ್ನು ನೀಡುವುದನ್ನು ವಿರೋಧಿಸಿದರು. ಶೈಕ್ಷಣಿಕ ಸಂಸ್ಥೆಗಳ ಹಿನ್ನೆಲೆಯಿಂದ ಬಂದಿದ್ದ ಎಮ್. ಬಿ. ಲಾಲ್, ಶಾರ್ದಾ ಭಾರ್ಗವ ಮತ್ತು ತಾರಾಚಂದ್ ತಿದ್ದುಪಡಿಗಳನ್ನೂ ಮಂಡಿಸಿದರು. ತಾರಾಚಂದ್ ಅವರಂತೂ ಪರಿಶೀಲನೆ ಮತ್ತು ತನಿಖೆಯ ಉಪವಾಕ್ಯ (clause) ವನ್ನು ಬಿಡುವಂತೆ ಸಲಹೆ ಮಾಡಿದರು. ಒಂದು ವಿಶ್ವವಿದ್ಯಾನಿಲಯವು ಕೇವಲ ತಂತ್ರಜ್ಞಾನದ ಸಂಸ್ಥೆಯಲ್ಲ ಅಥವಾ ಪ್ರಯೋಗಾಲಯವಲ್ಲ. ಬದಲಿಗೆ ಅದರೊಳಗೆ ಹಲವಾರು ಸಂಸ್ಥೆಗಳು ಮತ್ತು ವಿಭಾಗಗಳು ಇರುತ್ತವೆ. ಆದುದರಿಂದ ಒಬ್ಬಿಬ್ಬರಿಗೆ ಇಡೀ ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆಗಳನ್ನು ತನಿಖೆ ಮಾಡಿ, ವರದಿ ಮಾಡಲು ಸಾಧ್ಯವಿಲ್ಲ ಎಂದು ತಾರಾಚಂದ್ ವಾದಿಸಿದರು. ಮುಂದುವರೆದು ಈ ತನಿಖೆ—ಪರಿಶೀಲನೆಗಳ ಪ್ರಸ್ತಾವನೆಯನ್ನು ನೈತಿಕ ನೆಲೆಯಲ್ಲಿಯೂ ತಾರಾಚಂದ್ ಪ್ರಶ್ನಿಸಿದರು. ಅವರ ಪ್ರಕಾರ ಹೊರಗಿನ ಯಾರಿಂದಲೋ ವಿಶ್ವವಿದ್ಯಾನಿಲಯದ ಚಟುವಟಿಕೆಗಳನ್ನು ತನಿಖೆ ಮಾಡಲು ಒಪ್ಪುವುದು ಆತ್ಮಗೌರವಕ್ಕೆ ಧಕ್ಕೆಯಾದಂತೆ. ತಾನು ಒಂದು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸವನ್ನು ಬೋಧಿಸುತ್ತಿದ್ದರೆ ತನ್ನ ಕೆಲಸಕಾರ್ಯಗಳನ್ನು ಪರಿಶೀಲಿಸಲು ಯಾರನ್ನೂ ಬಿಡುವುದಿಲ್ಲ. ಅಂತಹ ಅವಮಾನವನ್ನು ಸಹಿಸುವ ಬದಲು ತಾನು ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.

ಈ ಚರ್ಚೆಯ ಮೂಲಕ ಸ್ವಾಯತ್ತತೆಯಿದ್ದ ಸಂಸ್ಥೆಯೊಂದನ್ನು ಕಟ್ಟುವ ಬಗ್ಗೆ ಇದ್ದ ಒಲವು ವ್ಯಕ್ತವಾಯಿತು ಮತ್ತು ಇಂತಹ ಸಂಸ್ಥೆಯನ್ನು ರೂಪಿಸಲು ಅಧ್ಯಾಪಕರನ್ನು ವಿಶ್ವವಿದ್ಯಾನಿಲಯದ ರಕ್ಷಕರನ್ನಾಗಿ ಮಾಡುವ ಮೂಲಕ ಸಾಧಿಸಬಹುದು. ಹಿರಿಯ ಪ್ರಾಧ್ಯಾಪಕರ ಮೇಲೆ ಆಪಾದನೆಗಳು ಕೇಳಿಬಂದಾಗ, ತಾರಾಚಂದ್ ರೊಚ್ಚಿಗೆದ್ದು ಬೋಧಕವರ್ಗವನ್ನು ಸಮರ್ಥಿಸಿಕೊಂಡರು: "ವಿಶ್ವವಿದ್ಯಾನಿಲಯದ ಅಧ್ಯಾಪಕರು ನಿಷ್ಕಲಂಕ ವ್ಯಕ್ತಿತ್ವದ ದೇವದೂತ (ಏಂಜೆಲ್)ರಲ್ಲ. ಅವರು ಅತಿಮಾನುಷರೂ ಅಲ್ಲ, ನಮ್ಮಂತೆ ಭಾರತೀಯರು. ನಾವು ಅವರನ್ನು ನಂಬದಿದ್ದರೆ, ಮತ್ತಾರನ್ನು ನಂಬುವುದು." ದೇಶದ ಯುವಜನರಲ್ಲಿ ಬೌದ್ಧಿಕತೆ ಮತ್ತು ನೈತಿಕತೆಗಳ ಅತ್ಯುನ್ನತ ಗುಣಮಟ್ಟವನ್ನು ಅಧ್ಯಾಪಕರು ಸೃಷ್ಟಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅಂತಹ ಅಧ್ಯಾಪಕರನ್ನು ನಂಬಲು ನಾವು ಸಿದ್ಧರಿಲ್ಲದಿರುವ ವ್ಯಂಗ್ಯವನ್ನು ತಾರಾಚಂದ್ ಗುರುತಿಸಿದರು. ಅವರ ದೃಷ್ಟಿಯಲ್ಲಿ ಬೋಧಕವರ್ಗವು ವಿಶ್ವವಿದ್ಯಾನಿಲಯದ ಆತ್ಮವಾಗಿತ್ತು. "ಒಂದು ವಿಶ್ವವಿದ್ಯಾನಿಲಯದ ವ್ಯಕ್ತಿತ್ವ ಮತ್ತು ಕಾರ್ಯವೈಖರಿ ಅಲ್ಲಿನ ಬೋಧಕವರ್ಗದವರ ಮೇಲೆ ಇರಿಸುವ ನಂಬಿಕೆಯ ಮೇಲೆ ನಿರ್ಭರವಾಗಿರುತ್ತದೆ." ಎಂದು ತಾರಾಚಂದ್ ವಾದಿಸಿದರು. ವಿಶ್ವವಿದ್ಯಾನಿಲಯಕ್ಕೆ ಬರುವ ವಿದ್ಯಾರ್ಥಿಗಳು ಮಕ್ಕಳಲ್ಲ, ಎರಡು ವರ್ಷಗಳಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಿದ್ಧರಾಗುವ ಪ್ರಬುದ್ಧರು. ಅವರನ್ನು ಹುಡುಗ—ಹುಡುಗಿಯರಂತೆ ನೋಡಬಾರದು ಎಂದು ಸ್ವತಃ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದ ತಾರಾಚಂದರಿಗೆ ಅವರ ಸ್ವಂತ ಅನುಭವದಿಂದಲೇ ತಿಳಿದಿತ್ತು. ಹಾಗಾಗಿ ವಿಶ್ವವಿದ್ಯಾನಿಲಯದೊಳಗೆ ಇಂತಹ ಯುವ ವಯಸ್ಕರು ತಮ್ಮ ಆಶೋತ್ತರಗಳನ್ನು ಅಭಿವ್ಯಕ್ತಿಸಲು ಅವಕಾಶವಿರುವ ಸಂಸ್ಥೆಗಳು — ವೇದಿಕೆಗಳನ್ನು ಕಟ್ಟಬೇಕು ಎಂದು ಅವರು ಸೂಚಿಸಿದರು.

1966ರ ನವೆಂಬರ್ 16ರಂದು ಆ ವೇಳೆಗೆ ವಿದೇಶಾಂಗ ಸಚಿವರಾಗಿದ್ದ ಎಂ.ಸಿ. ಚಾಗ್ಲಾ ’ದೆಹಲಿಯಲ್ಲಿ ಹೊಸದೊಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ, ಸಂಯೋಜಿಸಲು ಜೆ.ಎನ್.ಯು. ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ರಾಜ್ಯಸಭೆಯಲ್ಲಿ ಮೊದಲು ಈ ಮಸೂದೆಯನ್ನು ಮಂಡಿಸಿ 23 ತಿಂಗಳುಗಳು ಕಳೆದಿದ್ದವು. ಅಂದು ಸಂಜೆ 5:30ಯ ವೇಳೆಗೆ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು. ಮಸೂದೆಯ ಬಗ್ಗೆ ಮಾತನಾಡಿದ ಹಿರಿಯ ನಾಯಕ ಕೆಂಗಲ್ ಹನುಮಂತಯ್ಯನವರು ಅದರ ಬಗ್ಗೆ ತಮಗೆ ಹಲವು ಸಮಸ್ಯೆಗಳಿದ್ದರೂ, ಚಾಗ್ಲಾ ಅವರ ನಿರ್ವಹಣಾ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಅವರನ್ನು ಶಿಕ್ಷಣ ಇಲಾಖೆಗೆ ವಾಪಸು ಕಳುಹಿಸುವುದು ಸೂಕ್ತ ಎಂದರು.

ಅಮರನಾಥ ವಿದ್ಯಾಲಂಕರ್: ಈ ವಿಶ್ವವಿದ್ಯಾನಿಲಯವು ಇತರ ಸಂಸ್ಥೆಗಳ ದೋಷಗಳನ್ನು ಹೊಂದದಂತೆ ಮತ್ತು ಅದೇ ತಪ್ಪುಗಳನ್ನು ಪದೆಪದೆ ಮಾಡುವುದನ್ನು ತಪ್ಪಿಸಲು ಪಾರ್ಲಿಮೆಂಟಿನ ಸದಸ್ಯರಾಗಿ ನಾವೇನು ಮಾಡಬಹುದು?

ವಿ.ಎಸ್. ಝಾ: ಅಗತ್ಯವಿರುವ ಹಣವನ್ನು ಒದಗಿಸಿ, ಸರಿಯಾದ ವ್ಯಕ್ತಿಗಳಿಗೆ ಅದರ ಜವಾಬ್ದಾರಿಯನ್ನು ನೀಡಿ ಮತ್ತು ಅದಕ್ಕೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿ. ಈ ಮೂರು ಕೆಲಸಗಳನ್ನು ಮಾಡಿ.

ಹೊಸಮಾದರಿಯ ಕುಲಪತಿ

ಜೆ.ಎನ್.ಯು. ಮಸೂದೆಯು ಪಾರ್ಲಿಮೆಂಟಿನಲ್ಲಿ ಚರ್ಚೆಯಾಗುತ್ತಿರುವಾಗ, ಶಿಕ್ಷಣ ಸಚಿವರು ಈ ಹೊಸ ವಿಶ್ವವಿದ್ಯಾನಿಲಯಕ್ಕೆ ಸ್ಥಾಪನೆಗೆ ಮೊದಲೆ ಕುಲಪತಿಯನ್ನು ನೇಮಿಸಲಾಗುವುದು ಹಾಗೂ ಅದೊಂದು ವಿಶಿಷ್ಟ ಮತ್ತು ಅಪರೂಪದ ಕ್ರಮವಾಗಲಿದೆ ಎಂದರು. ಅಂದರೆ ಕುಲಪತಿಯು ವಿಶ್ವವಿದ್ಯಾನಿಲಯವನ್ನು ಕ್ರಮೇಣವಾಗಿ ಪ್ರಾರಂಭಿಸುವ ಪ್ರಕ್ರಿಯೆಯ ಅಂಗವಾದರು. ಪಾರ್ಲಿಮೆಂಟ್ ಸದಸ್ಯರಿಂದ ಈ ಕ್ರಮಕ್ಕೆ ಸಹ ವಿರೋಧ ವ್ಯಕ್ತವಾದರೂ ಸಹ ಕುಲಪತಿಯು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಮತ್ತು ಅದರ ಶಾಸನಗಳನ್ನು ಮಾಡುವ ಮೂಲಕ ಹೊಸ ಸಂಸ್ಥೆಯ ಕೇಂದ್ರಬಿಂದುವಾದರು. ಯಾರಿಗೆ ಈ ಮೂಲಭೂತವಾಗಿ ಹೊಸದಾದ ಪ್ರಯೋಗವನ್ನು ನಡೆಸುವ ಹೊಣೆಗಾರಿಕೆಯನ್ನು ನೀಡಲಾಗುತ್ತದೆ ಎನ್ನುವ ಪ್ರಶ್ನೆಯು ಮಹತ್ವವನ್ನು ಪಡೆಯಿತು.

ಜೆ.ಎನ್.ಯು.ನ ಮೊದಲ ಕುಲಪತಿಯಾಗಿ ಜಿ.ಪಾರ್ಥಸಾರಥಿಯವರನ್ನು ಆರಿಸಲಾಯಿತು. ಪಾರ್ಥಸಾರಥಿಯವರ ಆಯ್ಕೆಯ ಕಥೆಯನ್ನು ಚಾಗ್ಲಾ ತಮ್ಮ ಅತ್ಮಕಥನದಲ್ಲಿ ದಾಖಲಿಸುತ್ತಾರೆ. 1969ರಲ್ಲಿ ಕೇಂದ್ರ ಸಚಿವರೊಬ್ಬರು ಏರ್ಪಡಿಸಿದ್ದ ಔತಣಕೂಟವೊಂದರಲ್ಲಿ ಚಾಗ್ಲಾ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಜೆ.ಎನ್.ಯು. ಕುಲಪತಿಗಳ ಆಯ್ಕೆಯ ಬಗ್ಗೆ ಕೇಳಿದರಂತೆ. ಆಗ ಶ್ರೀಮತಿ ಗಾಂಧಿಯವರು ಚಾಗ್ಲಾರ ಮನಸ್ಸಿನಲ್ಲಿ ಯಾರಾದರೂ ಅಭ್ಯರ್ಥಿಗಳಿದ್ದಾರೆಯೇ ಎಂದು ಕೇಳಿದಾಗ, ಅವರು ಪಾರ್ಥಸಾರಥಿಯವರ ಹೆಸರನ್ನು ಸೂಚಿಸಿದರು. ಔತಣಕೂಟದಲ್ಲಿಯೇ ಇದ್ದ ಪಾರ್ಥಸಾರಥಿಯವರ ಒಪ್ಪಿಗೆಯನ್ನು ಚಾಗ್ಲಾರವರು ಪಡೆದರು.

ಗೋಪಾಲಸ್ವಾಮಿ ಪಾರ್ಥಸಾರಥಿ ಭಾರತದ ಅತ್ಯುತ್ತಮ ರಾಜತಾಂತ್ರಿಕರಲ್ಲೊಬ್ಬರು. ಅದೆ ತಾನೆ ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ದೆಹಲಿಗೆ ವಾಪಸಾಗಿದ್ದರು. ಅವರ ತಂದೆ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ವಕೀಲರು, ಕಾಶ್ಮೀರದ ಮಾಜಿ ಪ್ರಧಾನಮಂತ್ರಿ ಮತ್ತು ವಿಶ್ವಸಂಸ್ಥೆಗೆ ಭಾರತದ ಮೊದಲ ಪ್ರತಿನಿಧಿಗಳಾಗಿದ್ದವರು. ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಪಾರ್ಥಸಾರಥಿಯವರು ನೆಹರೂರವರ ಆಹ್ವಾನದ ಮೇರೆಗೆ ವಿದೇಶಾಂಗ ಸಚಿವಾಲಯವನ್ನು ಸೇರಿ, ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅವರೊಬ್ಬ ನುರಿತ ಆಡಳಿತಗಾರರಾಗಿದ್ದರು ಎಂದು ಚಾಗ್ಲಾ ಅವರೆ ಹೇಳುತ್ತಾರೆ. ಮಿಗಿಲಾಗಿ ಅವರು ಶ್ರೀಮತಿ ಗಾಂಧಿಯವರು ನಂಬಿಕೆಯಿಟ್ಟಿದ್ದ ಅಧಿಕಾರಿವಲಯದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

1969ರ ಏಪ್ರಿಲ್ 28ರಂದು ಪಾರ್ಥಸಾರಥಿಯವರು ತಮ್ಮ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ಸಜ್ಜಾದಾಗ, ದೆಹಲಿಯ ಬೇಸಿಗೆಯ ಬಿಸಿಲು ಹೆಚ್ಚುತ್ತಿತ್ತು. ಅವರಿಗೆ ವಿಜ್ಞಾನಭವನ ಸಮುಚ್ಚಯದಲ್ಲಿ ಕಛೇರಿಯನ್ನು ನೀಡಲಾಯಿತು. ಪಾರ್ಥಸಾರಥಿಯವರು ಮೊದಲ ಮೂರು ತಿಂಗಳುಗಳನ್ನು ಶಿಕ್ಷಣ ಕ್ಷೇತ್ರದ ತಜ್ಞರೊಡನೆ ಸಮಾಲೋಚನೆ ನಡೆಸುವುದರಲ್ಲಿ ಕಳೆದರು. ಜುಲೈ—ಆಗಸ್ಟ್ ಹೊತ್ತಿಗೆ ಸರ್ಕಾರವು ಅವರ ತಂಡವನ್ನು ನೇಮಿಸಿತು. ಪಾರ್ಥಸಾರಥಿಯವರು ವಿಶ್ವವಿದ್ಯಾನಿಲಯ ಆಡಳಿತಕ್ಕೆ ಹೊಸಬರಾಗಿದ್ದರು. ಇದು ಅವರಿಗೆ ಎರಡು ಬಗೆಯ ಪರಿಣಾಮಗಳನ್ನು ಮಾಡಿತು. ಮೊದಲಿಗೆ, ದೇಶದೆಲ್ಲೆಡೆಯಿಂದ ಬಂದಿದ್ದ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಪರಿಣಿತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿದರು. ಎರಡನೆಯದಾಗಿ, ಅವರು ಸ್ವತಃ ಶೈಕ್ಷಣಿಕ ವಲಯದವರು ಆಗಿಲ್ಲದ ಕಾರಣದಿಂದ ತಮ್ಮ ಸ್ವಂತ ಅಭಿಪ್ರಾಯಕ್ಕಿಂತ ಶೈಕ್ಷಣಿಕ ವಿಚಾರಗಳಲ್ಲಿ ಇತರ ಪರಿಣಿತರ ಮೇಲೆ ನಿರ್ಭರರಾಗಬೇಕಿತ್ತು.

ಜೆ.ಎನ್.ಯು. ಮಸೂದೆಯಲ್ಲಿ ಶೈಕ್ಷಣಿಕ ಸಲಹಾ ಸಮಿತಿ ಮತ್ತು ನಿರ್ವಹಣಾ ಪರಿಷತ್ತುಗಳ ರಚನೆಗೆ ಅವಕಾಶವನ್ನು ಕಲ್ಪಿಸಿಕೊಳ್ಳಲಾಗಿತ್ತು ಮತ್ತು ಯಾರನ್ನು ಈ ಸಮಿತಿಗಳಿಗೆ ಹಾಕಬೇಕು ಎನ್ನುವ ಚರ್ಚೆಯೂ ಪ್ರಾರಂಭವಾಯಿತು. ಪಾರ್ಥಸಾರಥಿಯವರು ಪ್ರಾರಂಭಿಸಿದ ಹೊಸ ಯೋಜನೆಗಳಿಗೆ ಹಲವಾರು ಹಿರಿಯ ಬುದ್ಧಿಜೀವಿಗಳು ಈ ಎರಡು ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅದುವರಗೆ ಯಾವುದೆ ವಿಶ್ವವಿದ್ಯಾನಿಲಯಕ್ಕೆ ಆ ಪ್ರಮಾಣದ ಸ್ವಾಯತ್ತತೆಯನ್ನು ನೀಡಲಾಗಿರಲಿಲ್ಲ. ಹಾಗಾಗಿ ಪಾರ್ಥಸಾರಥಿಯವರಿಗೆ ಮತ್ತು ವಿಶ್ವವಿದ್ಯಾನಿಲಯಕ್ಕೆ ಸಲಹಾ ಸಮಿತಿಗಳ ಮಾರ್ಗದರ್ಶನ — ಸಹಕಾರಗಳು ಅಗತ್ಯವಾಗಿದ್ದವು.

ಶೈಕ್ಷಣಿಕ ಸಲಹಾ ಸಮಿತಿಗೆ ಚಾಗ್ಲಾ ಅವರು ಅಂದಿನ ಕಾಲದ ಭಾರತೀಯ ಶೈಕ್ಷಣಿಕ ಮತ್ತು ಸಾಂಸ್ಥಿಕ ಬದುಕಿನಲ್ಲಿದ್ದ ಈ ಕೆಳಗಿನ ಅತ್ಯುತ್ತಮ ಮನಸ್ಸುಗಳನ್ನು ಆರಿಸಿದರು : ಎಂ.ಜಿ.ಕೆ.ಮೆನನ್, ನಿರ್ದೇಶಕರು, ಟಾಟಾ ಇನ್ಸ್ಟಿಟ್ಯೂಟ್ ಆಫ಼್ ಫ಼ಂಡಮೆಂಟಲ್ ರಿಸರ್ಚ್, ಬಾಂಬೆ; ವಿ. ರಾಮಲಿಂಗಸ್ವಾಮಿ, ನಿರ್ದೇಶಕರು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ಼್ ಮೆಡಿಕಲ್ ಸೈನ್ಸಸ್, ನವದೆಹಲಿ; ಎಮ್. ಎನ್. ಶ್ರೀನಿವಾಸ್, ಸಮಾಜಶಾಸ್ತ್ರಜ್ಞರು; ಕೆ.ಎನ್. ರಾಜ್, ಅರ್ಥಶಾಸ್ತ್ರಜ್ಞ, ದೆಹಲಿ ಸ್ಕೂಲ್ ಆಫ಼್ ಎಕನಾಮಿಕ್ಸ್ ಹಾಗೂ ಸರ್ವೆಪಲ್ಲಿ ಗೋಪಾಲ್, ಇತಿಹಾಸ ತಜ್ಞ ಮತ್ತು ಆಕ್ಸಫ಼ರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ. ನಿರ್ವಹಣಾ ಸಮಿತಿಯಲ್ಲಿ ನೂರುಲ್ ಹಸನ್, ಇತಿಹಾಸಕಾರ ಮತ್ತು ಶಿಕ್ಷಣ ಸಚಿವ; ರಾಜಾರಾಮಣ್ಣ, ಅಣುವಿಜ್ಞಾನಿ; ಎಸ್.ಎಮ್. ಖತ್ರೆ, ಡೆಕ್ಕನ್ ಕಾಲೇಜು, ಪೂನಾ; ಪಿ.ಎನ್. ಧರ್, ನಿರ್ದೇಶಕರು, ಇನ್ಸ್ಟಿಟ್ಯೂಟ್ ಆಫ಼್ ಎಕನಾಮಿಕ್ ಗ್ರೋತ್ ಮತ್ತು ಎಮ್. ಎಸ್. ಸ್ವಾಮಿನಾಥನ್, ನಿರ್ದೇಶಕರು, ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್, ದೆಹಲಿ ಮೊದಲಾದವರು ಇದ್ದರು.

ಈ ಎರಡೂ ಸಮಿತಿಗಳು ದೆಹಲಿ ಕೇಂದ್ರಿತವಾಗಿದ್ದವು ಹಾಗೂ ಕಲಕತ್ತಾ ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರಾತಿನಿಧ್ಯ ಇಲ್ಲಿ ಕಡಿಮೆಯಿತ್ತು ಎನ್ನುವ ದೂರುಗಳು ಕೇಳಿಬಂದವು. ತತ್ವಶಾಸ್ತ್ರ ಮತ್ತು ಗಣಿತಶಾಸ್ತ್ರಗಳಂತಹ ಕ್ಷೇತ್ರಗಳ ಗಣ್ಯರನ್ನು ಈ ಸಮಿತಿಗಳಲ್ಲಿ ಸೇರಿಸಿದ್ದರೆ ಮತ್ತು ವಿಶ್ವವಿದ್ಯಾನಿಲಯದ ಪ್ರಾರಂಭದಲ್ಲಿಯೇ ಆ ವಿಷಯಗಳ ಕಾರ್ಯಕ್ರಮಗಳನ್ನು ಶುರು ಮಾಡಿದ್ದರೆ ಒಳಿತಾಗುತ್ತಿತ್ತು ಎಂದೂ ಹೇಳಲಾಯಿತು.

ಇಂತಹ ಟೀಕೆಗಳ ನಡುವೆಯೂ, ಈ ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದವು ಮತ್ತು ಹೊಸ ವಿಶ್ವವಿದ್ಯಾನಿಲಯಕ್ಕೆ ಹಲವು ಕಾಲ ಉಳಿಯಬಲ್ಲ ಮತ್ತು ಅದೇ ಸಮಯದಲ್ಲಿ ಬದಲಾವಣೆಗಳಿಗೂ ಆಸ್ಪದ ಕೊಡುವ ಉತ್ತಮ ಶೈಕ್ಷಣಿಕ ವ್ಯವಸ್ಥೆಗಳನ್ನು ರೂಪಿಸಿದವು. ಪ್ರಾರಂಭದಲ್ಲಿಯೇ ಈ ಸಮಿತಿಗಳು ಎರಡು ಮುಖ್ಯ ತತ್ವಗಳನ್ನು ರೂಪಿಸಿಕೊಂಡಿತು.

  1. ದೇಶದ ಹೊರಗಿನ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿದ್ದ ಶ್ರೇಷ್ಠ ವಿದ್ವಾಂಸರಿಗೆ ಆಕರ್ಷಕವಾದ ಕರಾರುಗಳ ಮೂಲಕ ನೇಮಕಾತಿಯನ್ನು ಮಾಡುವುದು. 1960ರ ದಶಕದಲ್ಲಿ ಪ್ರತಿಭಾ ಪಲಾಯನವು ಹೆಚ್ಚಿದ್ದ ಸಂದರ್ಭದಲ್ಲಿ ಇದು ಭಾರತಕ್ಕೆ ಹಿಂದಿರುಗಲು ಬಯಸುತ್ತಿದ್ದವರಿಗೆ ಒಳ್ಳೆಯ ಅವಕಾಶಗಳನ್ನು ಒದಗಿಸಿತು.
  2. ಬೋಧನೆ ಮತ್ತು ಸಂಶೋಧನೆಗಳ ನಡುವೆ ಯಾವುದೆ ಭೇದವನ್ನು ಮಾಡಬಾರದೆಂದು ಸಮಿತಿಯು ತೀರ್ಮಾನಿಸಿತು. ಒಂದು ವಿಭಾಗಕ್ಕೆ ಒಂದಕ್ಕಿಂತ ಹೆಚ್ಚು ಮಂದಿ ಪ್ರಾಧ್ಯಾಪಕರನ್ನು ನೇಮಿಸಬೇಕು ಎನ್ನುವ ಮತ್ತೊಂದು ಸಲಹೆಯನ್ನು ಮಾಡಲಾಯಿತು. ಇದರಿಂದ ಹೆಚ್ಚು ಸಂಖ್ಯೆಯ ಪ್ರತಿಭಾವಂತರಿಗೆ ಪ್ರಾಧ್ಯಾಪಕ ಮಟ್ಟದಲ್ಲಿ ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಲು ಸಾಧ್ಯವಾಯಿತು.

ಪ್ರಾಧ್ಯಾಪಕರಿಗೆ ಹುಡುಕಾಟ

ಪಾರ್ಥಸಾರಥಿಯವರು ಸಮಯವನ್ನು ವ್ಯರ್ಥ ಮಾಡದೆ ವಿವಿಧ ವಿಭಾಗಗಳು ಮತ್ತು ಶಾಲೆಗಳನ್ನು ಪ್ರಾರಂಭಿಸಲು ಬೇಕಿದ್ದ ವ್ಯಕ್ತಿಗಳನ್ನು ಸಂಪರ್ಕಿಸಲು ಆರಂಭಿಸಿದರು. ಸ್ಟ್ಯಾಚೂಟ್ 28ರ ಪ್ರಕಾರ ವಿಶೇಷ ನೇಮಕಾತಿಯ ವಿಧಾನವೊಂದಕ್ಕೆ ಅವಕಾಶವಿತ್ತು. ಹಲವಾರು ಬಾರಿ ಸಮರ್ಥ ಮತ್ತು ಹಿರಿಯ ಪ್ರಾಧ್ಯಾಪಕರು ಸಂದರ್ಶನಕ್ಕೆ ಬರಲು ಹಿಂಜರಿಯುತ್ತಾರೆ ಎಂದು ಪಾರ್ಲಿಮೆಂಟಿನ ಜಂಟಿ ಸಮಿತಿ ಮತ್ತು ಅದಕ್ಕೆ ಸಾಕ್ಷ್ಯ ನೀಡಿದ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಹಾಗಾಗಿ ಚಾವ್ಲಾ ಅವರು ಪ್ರಾಧ್ಯಾಪಕ, ರೀಡರ್ ಮತ್ತು ಅಧ್ಯಾಪಕ ಹುದ್ದೆಗಳಿಗೆ ಆಹ್ವಾನದ ರೂಪದಲ್ಲಿ ಉತ್ತಮ ವಿದ್ವಾಂಸರನ್ನು ನೇಮಕ ಮಾಡುವ ಅವಕಾಶವೊಂದನ್ನು ಕಲ್ಪಿಸಿದ್ದರು.

ಮೊದಲ ನೇಮಕಾತಿಗಳ ಪಟ್ಟಿಯಲ್ಲಿದ್ದ ಹೆಸರುಗಳಲ್ಲಿ ಮುಖ್ಯವಾದುದು ಮೂನಿಸ್ ರಾಜ಼ಾ ಅವರದ್ದು. ಭೂಗೋಳಶಾಸ್ತ್ರ ಪರಿಣಿತರಾದ ರಾಜ಼ಾ ಶ್ರೀನಗರದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರನ್ನು ಯಾವುದೆ ವಿಭಾಗಕ್ಕೆ ನೇಮಿಸದೆ, ವಿಶೇಷ ಯೋಜನಾ ಅಧಿಕಾರಿಯಾಗಿ ಎರಡು ವರ್ಷಗಳ ಅವಧಿಗೆ ತೆಗೆದುಕೊಳ್ಳಲಾಯಿತು. ಅಲಿಗಡ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದ ರಾಜ಼ಾ ಕಮ್ಯುನಿಸ್ಟ್ ಚಳುವಳಿಯಲಿ ಸಕ್ರಿಯರಾಗಿದ್ದರು. ದೂರದ ಮತ್ತು ಅಷ್ಟೇನು ಹೆಸರುವಾಸಿಯಲ್ಲದ ಸಂಸ್ಥೆಯಲ್ಲಿದ್ದ ರಾಜ಼ಾ ಪಾರ್ಥಸಾರಥಿಯವರ ದೃಷ್ಟಿಗೆ ಬೀಳಲು ಸಾಧ್ಯವಿರಲಿಲ್ಲ. ಬಹುಶಃ ಶಿಕ್ಷಣ ಸಚಿವ ನೂರುಲ್ ಹಸನರ ಶಿಫ಼ಾರಸಿನ ಮೇರೆಗೆ ಅವರ ನೇಮಕಾತಿಯಾಗಿರಬೇಕು. ಇದಾದ ಮೇಲೆ ಎರಡನೆಯ ಸುತ್ತಿನ ನೇಮಕಾತಿಗಳನ್ನು ರಷ್ಯನ್ ಅಧ್ಯಯನ ಕೇಂದ್ರಕ್ಕೆ ಮಾಡಲಾಯಿತು.

ಜೆ.ಎನ್.ಯು ವ್ಯಕ್ತಿತ್ವಕ್ಕೆ ಪೂರಕ ಅಂಶ

ಪ್ರಾರಂಭದಲ್ಲಿ ದೆಹಲಿಯ ಎರಡನೆಯ ವಿಶ್ವವಿದ್ಯಾನಿಲಯವಾಗಿ ಜೆ.ಎನ್.ಯು. ಅನ್ನು ಕಲ್ಪಿಸಿಕೊಳ್ಳಲಾಗಿತ್ತು. ಈ ಹೊಸ ವಿಶ್ವವಿದ್ಯಾನಿಲಯಕ್ಕೆ ದೆಹಲಿಯ ಕಾಲೇಜುಗಳನ್ನು ಅಂಗಸಂಸ್ಥೆಯಾಗಿ ಪರಿವರ್ತಿಸುವ ಜೊತೆಗೆ ಐಐಟಿ, ದೆಹಲಿ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ಼್ ಮೆಡಿಕಲ್ ಸೈನ್ಸಸ್, ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ಼್ ಇಂಡಿಯಾ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಮಾಸ್ ಕಮ್ಯುನಿಕೇಷನ್, ಇನ್ಸ್ಟಿಟ್ಯೂಟ್ ಆಫ಼್ ಇಂಟರನ್ಯಾಷನಲ್ ಸ್ಟಡೀಸ್ ಇತ್ಯಾದಿ ಹಲವಾರು ಸಂಸ್ಥೆಗಳನ್ನು ಜೆ.ಎನ್.ಯು.ವಿನ ಅಂಗವಾಗಿಸುವ ಪ್ರಸ್ತಾವನೆಯಿತ್ತು. ಈ ಹೊಸ ವಿಶ್ವವಿದ್ಯಾನಿಲಯವನ್ನು ಹೊಸಬಗೆಯ ರಾಷ್ಟ್ರೀಯ ವಿಶ್ವವಿದ್ಯನಿಲಯವಾಗಿ ರೂಪಿಸಲು ನಿರ್ಧರಿಸಿದ ನಂತರವೂ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸೇರಿದ ದೆಹಲಿಯ ಅತ್ಯುತ್ತಮ ಸಂಸ್ಥೆಗಳನ್ನು ಜೆ.ಎನ್.ಯು.ಗೆ ಸೇರಿಸುವ ನಿರ್ಧಾರ ಬದಲಾಗಿರಲಿಲ್ಲ. ಆದರೆ 1970ರ ದಶಕದ ಪ್ರಾರಂಭದಲ್ಲಿ ಜೆ.ಎನ್.ಯು. ಪ್ರಾರಂಭವಾದ ನಂತರ ಈ ಮೇಲೆ ಹೆಸರಿಸಿದ ಸಂಸ್ಥೆಗಳು ತಮ್ಮ ಸ್ವಾಯತ್ತತೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡವು. ಒಂದು ರೀತಿಯಲ್ಲಿ ಒಂದೆ ಆವರಣವಿದ್ದ ಸ್ನಾತಕೋತ್ತರ ವಿಶ್ವವಿದ್ಯಾನಿಲಯವಾಗಿ ತನ್ನದೆ ಆದ ವ್ಯಕ್ತಿತ್ವವನ್ನು ಜೆ.ಎನ್.ಯು. ಬೆಳಸಿಕೊಳ್ಳಲು ಇದು ಸಹ ಸಹಕಾರಿಯಾಯಿತು.

—ಅನುವಾದಕ

ಇತಿಹಾಸ ವಿಭಾಗಕ್ಕೆ ಎಸ್. ಗೋಪಾಲ್, ರೊಮಿಲಾ ಥಾಪರ್ ಮತ್ತು ಸತೀಶ್ ಚಂದ್ರ ಅವರುಗಳಿಗೆ ಆಹ್ವಾನ ದೊರಕಿತು. ಗೋಪಾಲ್ ಅವರು ಆಧುನಿಕ ಭಾರತದ ಇತಿಹಾಸದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು ಮತ್ತು ಆಕ್ಸಫ಼ರ್ಡಿನಲ್ಲಿ ಬೋಧಿಸುತ್ತಿದ್ದರು. ಜೆ.ಎನ್.ಯು. ರಚನೆಯಲ್ಲಿ ಸಹ ಭಾಗಿಯಾಗಿದ್ದ ಕಾರಣ, ಅವರ ಸ್ಥಾನಮಾನ ವಿಶೇಷವಾದುದು ಆಗಿತ್ತು. ರೊಮಿಲಾ ಥಾಪರ್ ಎ.ಎಲ್.ಭಾಷಮ್ ಅವರ ಮಾರ್ಗದರ್ಶನದಲ್ಲಿ ಲಂಡನ್ನಿನಲ್ಲಿ ತರಬೇತಿ ಪಡೆದಿದ್ದರು. ಪ್ರಾಚೀನ ಭಾರತದ ಇತಿಹಾಸದ ಅಧ್ಯಯನಕ್ಕೆ ಹೊಸದಾದ ಮತ್ತು ಮುಕ್ತವಾದ ಅಧ್ಯಯನ ಮಾದರಿಯನ್ನು ಥಾಪರ್ ಪ್ರತಿಪಾದಿಸುತ್ತಿದ್ದರು. ಅವರ ಮಾದರಿಯು ಅಂದು ಅಸ್ತಿತ್ವದಲ್ಲಿದ್ದ ಇಂಡಾಲಜಿ ಮತ್ತು ಪ್ರಾಚೀನ ಇತಿಹಾಸ ಅಧ್ಯಯನ ವಿಭಾಗಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಅಶೋಕ ಮತ್ತು ಮೌರ್ಯ ಸಾಮ್ರಾಜ್ಯಗಳ ಮೇಲೆ 1958ರಲ್ಲಿ ಥಾಪರ್ ಅವರು ಮಾಡಿದ ಸಂಶೋಧನೆ ಮತ್ತು ಪ್ರಾಚೀನ ಭಾರತದ ಬಗ್ಗೆ ಬರೆದ ಪುಸ್ತಕ ಪ್ರಾಚೀನ ಭಾರತದ ಇತಿಹಾಸ ಅಧ್ಯಯನಕ್ಕೆ ಹೊಸ ಆಯಾಮವನ್ನು ಒದಗಿಸಿದ್ದವು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅವರ ಜನಪ್ರಿಯತೆ ಮತ್ತು ದೆಹಲಿಯ ಗಣ್ಯ ಬೌದ್ಧಿಕವಲಯಗಳಲ್ಲಿ ಅವರಿಗಿದ್ದ ಸ್ಥಾನಮಾನ ಥಾಪರರಿಗೆ ಜೆ.ಎನ್.ಯು. ಸೇರುವಂತೆ ಆಹ್ವಾನ ದೊರಕಿಸಿದವು. ಸತೀಶ್ ಚಂದ್ರ ಅವರು ಅಲಹಾಬಾದ್ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿದಾರ್ಥಿ. ಅಲ್ಲಿ ತಾರಾಚಂದ್ ಈಶ್ವರ ಪ್ರಸಾದ್ ಮತ್ತಿತರ ಪ್ರಮುಖ ಇತಿಹಾಸಕಾರರು ಬೋಧಿಸುತ್ತಿದ್ದರು ಎನ್ನುವುದನ್ನು ಸ್ಮರಿಸಬಹುದು. 1959ರಲ್ಲಿ ಅಲಿಗಡ್ ವಿಶ್ವವಿದ್ಯಾನಿಲಯದಲ್ಲಿ ರೀಡರ್ ಆಗಿ ಅವರು ಸೇರಿದ್ದರು ಮತ್ತು ಅವರ ’ಪಾರ್ಟಿ ಅಂಡ್ ಪಾಲಿಟಿಕ್ಸ್ ಇನ್ ಮಿಡೀವಲ್ ಇಂಡಿಯಾ’ ಮಧ್ಯಕಾಲೀನ ಇತಿಹಾಸದ ಮೇಲಿನ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿತ್ತು. 1970ರ ಹೊತ್ತಿಗೆ ಅವರು ಮಧ್ಯಕಾಲೀನ ಇತಿಹಾಸದ ಮುಖ್ಯ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ರಾಜಾಸ್ಥಾನ ವಿಶ್ವವಿದ್ಯಾನಿಲಯದಲ್ಲಿ ಆಗ ಕೆಲಸ ಮಾಡುತ್ತಿದ್ದ ಅವರು ಪ್ರಾದೇಶಿಕ ಇತಿಹಾಸಗಳ ಅಧ್ಯಯನಕ್ಕೆ ಮಹತ್ವ ನೀಡಿದ್ದರು. ಅವರಿಗೆ ಇಲ್ಲಿ ದೊರೆತ ಆಹ್ವಾನವು ಬಹುಶಃ ಸಚಿವ ನೂರುಲ್ ಹಸನ್ ಅವರಿಗೆ ಇತಿಹಾಸ ವಿಭಾಗವನ್ನು ಗಟ್ಟಿಗೊಳಿಸುವ ಉದ್ದೇಶವನ್ನು ತೋರಿಸುತ್ತದೆ.

ಪಾರ್ಥಸಾರಥಿಯವರು ಜೆ.ಎನ್.ಯು.ಗೆ ತರಬಯಸಿದವರಲ್ಲಿ ಪ್ರಮುಖರು ಸಿ.ಎನ್.ಆರ್. ರಾವ್. ಕಾನ್ಪುರದ ಐಐಟಿಯಲ್ಲಿ 28ನೆಯ ವಯಸ್ಸಿನಲ್ಲಿಯೇ ಪ್ರಾಧ್ಯಾಪಕರಾಗಿದ್ದ ರಾವ್ ರಸಾಯನಶಾಸ್ತ್ರದ ಅತ್ಯುತ್ತಮ ವಿಜ್ಞಾನಿಗಳಲ್ಲೊಬ್ಬರು. ಆದರೆ ರಾವ್ ಸೇರಿದಂತೆ ಇ.ಸಿ.ಜಿ. ಸುದರ್ಶನ್, ಡಾ.ಗೋವಿಂದಜೀ ಮತ್ತು ಎಸ್.ಕೆ.ಮಲ್ಹೋತ್ರ ಮತ್ತಿತರ ವಿಜ್ಞಾನಿಗಳನ್ನು ಜೆ.ಎನ್.ಯು.ಗೆ ತರಲು ಪಾರ್ಥಸಾರಥಿಯವರಿಗೆ ಸಾಧ್ಯವಾಗಲಿಲ್ಲ.

ರಾಜಕೀಯ ಶಾಸ್ತ್ರ ವಿಭಾಗಕ್ಕೆ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ರಷೀದುದ್ದೀನ್ ಖಾನ್ ಅವರನ್ನು ಕರೆತರಲಾಯಿತು. ಅವರು ಇರಾಕ್ ಮೇಲೆ ಪರಿಣತಿಯನ್ನು ಹೊಂದಿದ್ದರೂ, ಭಾರತದ ರಾಜಕಾರಣದ ಮೇಲೆಯೂ ಬರೆದಿದ್ದರು. ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದ ಅವರನ್ನು ರಾಜ್ಯಸಭೆಗೂ ನಾಮಕರಣ ಮಾಡಲಾಗಿತ್ತು. ಅವರನ್ನು ಸ್ಕೂಲ್ ಆಫ಼್ ಸೋಷಿಯಲ್ ಸೈನ್ಸಸನಲ್ಲಿ ರಾಜಕೀಯ ಶಾಸ್ತ್ರ ವಿಭಾಗವನ್ನು ಪ್ರಾರಂಭಿಸಲು ನೇಮಿಸಲಾಯಿತು. ಆದರೆ ಅವರ ರಾಜಕೀಯ ಚಟುವಟಿಕೆಗಳು ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಬರಬಾರದೆನ್ನುವ ವಿಶೇಷ ಸೂಚನೆಯನ್ನು ಅವರಿಗೆ ನೀಡಲಾಯಿತು.

ಸಾಕಷ್ಟು ಚರ್ಚೆಯ ನಂತರ ಪ್ರೊ. ಯೋಗೇಂದ್ರ ಸಿಂಗ್ ಅವರನ್ನು ಸಮಾಜಶಾಸ್ತ್ರ ವಿಭಾಗಕ್ಕೂ, ಭಭಾನಿ ಸೇನ್‍ಗುಪ್ತ ಅವರನ್ನು ಅಂತರರಾಷ್ಟ್ರೀಯ ರಾಜಕೀಯ ಅಧ್ಯಯನ ವಿಷಯಕ್ಕೂ, ರಣಧೀರ್ ಸಿಂಗ್ ಅವರನ್ನು ರಾಜಕೀಯ ಶಾಸ್ತ್ರದಲ್ಲಿಯೂ ಮತ್ತು ದೇಬಬರ್ ಮುಖರ್ಜಿ ಅವರನ್ನು ಸಮುದಾಯ ಆರೋಗ್ಯ ವಿಷಯದಲ್ಲಿಯೂ ನೇಮಿಸಲಾಯಿತು. ಒಂದು ವರ್ಷದೊಳಗೆ ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ತಜ್ಞ ಬಿಪನ್ ಚಂದ್ರ ಅವರನ್ನೂ ಜೆ.ಎನ್.ಯು.ಗೆ ಆಹ್ವಾನಿಸಲಾಯಿತು.

ಪಾರ್ಥಸಾರಥಿಯವರು ಸ್ವತಃ ತಾವೆ ನೇಮಕಾತಿಗೆ ಪರಿಗಣಿಸಲ್ಪಡುತ್ತಿದ್ದವರ ಅರ್ಹತೆಯನ್ನು ಖಚಿತ ಪಡಿಸಿಕೊಳ್ಳಲು ಬಯಸುತ್ತಿದ್ದರು. ಕೇವಲ ಆಯ್ಕೆ ಸಮಿತಿಯ ಶಿಫ಼ಾರಸನ್ನು ಒಪ್ಪಲು ಅವರು ಸಿದ್ದರಿರಲಿಲ್ಲ. ಬಹುತೇಕ ಎಲ್ಲ ನೇಮಕಾತಿಗಳು ದೇಸಿ ಬುದ್ಧಿಜೀವಿಗಳು ಮತ್ತು ವಿದ್ವಾಂಸರ ಗುಂಪಿನಿಂದಲೇ ಆದವು. 1960ರ ದಶಕದ ಮಧ್ಯಭಾಗದ ನಂತರ ಬಹುತೇಕ ಎಲ್ಲ ವಿದ್ವಾಂಸರು ಎಡಪಂಥೀಯ ಹಿನ್ನೆಲೆಯವರೆ ಆಗಿದ್ದರು. ಹಲವಾರು ನೇಮಕಾತಿಗಳಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ಼್ ಇಂಡಿಯಾದ ಸಂಬಂಧ ಇರುವುದನ್ನು ಕಾಣಬಹುದು. ದೇಶದ ಹಲವಾರು ಪ್ರಮುಖ ವಿದ್ವಾಂಸರು (ವಿಜ್ಞಾನಿಗಳು ಮತ್ತು ಸಮಾಜವಿಜ್ಞಾನಿಗಳು ಸೇರಿದಂತೆ) ಕಮ್ಯುನಿಸ್ಟ್ ಪಕ್ಷಗಳ ಸದಸ್ಯರಾಗಿದ್ದರು. ಕೆಲವು ನೇಮಕಾತಿಗಳ ಬಗ್ಗೆ ಟೀಕೆ ಮಾಡಲು ಸಾಧ್ಯವಿದ್ದರೂ, ಜೆ.ಎನ್.ಯು. ಸೇರಿದ ಬಹುತೇಕ ವಿದ್ವಾಂಸರು ತಮ್ಮ ಕಾಲದ ಅತ್ಯುತ್ತಮರಾಗಿದ್ದರು. ವಿಶ್ವವಿದ್ಯಾನಿಲಯದ ಇತಿಹಾಸವನ್ನು ನೋಡಿದರೆ ಇವರೆಲ್ಲರೂ ಒಂದು ಉತ್ತಮ ಜ್ಞಾನಪರಂಪರೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು ಎಂದರೆ ತಪ್ಪಾಗಲಾರದು.

ಹೊಸ ವಿಶ್ವವಿದ್ಯಾನಿಲಯಕ್ಕೆ ಮೊದಲು ನೇಮಕವಾದವರು ವಿಜ್ಞಾನ ಭವನದಿಂದಲೆ ಕಾರ್ಯ ನಿರ್ವಹಿಸಿದರು. ಹೊಸ ಕಾರ್ಯಕ್ರಮಗಳು ಪ್ರಾರಂಭವಾದಂತೆ ವಿಶ್ವವಿದ್ಯಾನಿಲಯವು ದಕ್ಷಿಣ ದೆಹಲಿಯಲ್ಲಿದ್ದ ನ್ಯಾಷನಲ್ ಅಕಾಡೆಮಿ ಆಫ಼್ ಎಜುಕೇಷನ್ ಆವರಣಕ್ಕೆ ವರ್ಗಾಂತರಗೊಂಡಿತು. ಈ ಹೊಸ ಆವರಣವು ಜೆ.ಎನ್.ಯು.ಗಾಗಿ ಮೀಸಲಿಡಲಾಗಿದ್ದ ಸ್ಥಳದ ಪಕ್ಕದಲ್ಲಿಯೇ ಇದ್ದಿತು. ಅರಾವಳಿಯ ಈ ಭಾಗದಲ್ಲಿ ಬದುಕು ತ್ರಾಸದಾಯಕವಾಗಿದ್ದರೂ ಸಹ ಸಾಮುದಾಯಿಕ ಬದುಕು ಮತ್ತು ಹೊಸದೇನನ್ನೊ ಸೃಷ್ಟಿಸಬೇಕೆನ್ನುವ ಆಕಾಂಕ್ಷೆಗಳು ಎಲ್ಲರಲ್ಲಿಯೂ ಉತ್ಸಾಹವನ್ನು ತುಂಬಿತು. ಪ್ರತಿಯೊಂದು ಹೊಸ ನೇಮಕಾತಿಯಾದಂತೆ, ಹೊಸಬರು ವಿಶ್ವವಿದ್ಯಾನಿಲಯದ ಆವರಣವನ್ನು ಪ್ರವೇಶಿಸಲು ಆರಂಭಿಸಿದರು ಮತ್ತು ಸಾಮುದಾಯಿಕ ಜೀವನದ ಹೊಸ ತತ್ವಗಳನ್ನು ರೂಪಿಸ ತೊಡಗಿದರು.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮