2nd ಜೂನ್ ೨೦೧೮

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಭಾರತೀ ಮೈಸೂರು

ಪ್ರಾಕೃತಿಕ ಸಂಪನ್ಮೂಲಗಳು ಹೇರಳವಾಗಿದ್ದರೂ ನಮ್ಮ ಕನ್ನಡ ನೆಲದಲ್ಲಿ ನಮ್ಮನ್ನು ನಾವೇ ಹಾಳುಮಾಡಿಕೊಳ್ಳುತ್ತಿರುವುದು ಅಕ್ಷರಶಃ ಸತ್ಯ. ನಾವು ಮತ ನೀಡಿ ಗೆಲ್ಲಿಸಿದವರೇ ಎಲ್ಲಾ ಮಾಡಬೇಕೆಂದು ನಾವೇಕೆ ಅಂದುಕೊಳ್ಳುಬೇಕು?

ಜಪಾನ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಹೆಸರೇ ಹಿರೋಷಿಮಾ—ನಾಗಸಾಕೀ. 1947ರ ಆಗಸ್ಟ್ 9 ರಂದು ನಡೆದ ಆ ಐತಿಹಾಸಿಕ ಅಣುಬಾಂಬಿನ ಕರಾಳ ನೆನಪು ಅಷ್ಟು ಬೇಗ ಮಾಸುವುದಿಲ್ಲ. ನಾವು ಆ ದೇಶಕ್ಕೇ ಆ ಜಾಗಕ್ಕೇ ಹೋಗಬೇಕೆಂದಾಗ ಹೇಗಾಗಬಹುದು? ನನ್ನ ಮಗ ಜಪಾನಿಗೆ ಹೋಗಬೇಕೆಂದಾಗ ನಾನೂ ಹಾಗೇ ಆತಂಕ ಗೊಂಡಿದ್ದೆ. ಅಲ್ಲಿನ್ನೂ ಆ ಕರಾಳ ಛಾಯೆ ಇದೆಯಂತೆ. ಆ ಫುಜಿ ಪರ್ವತದಿಂದ ಲಾವಾರಸ ಹರಿಯುತ್ತಿರುವ ಭಾವ. ಅಲ್ಲಿಗೆ ಆರೇಳು ಸರ್ತಿ ಹೋಗಿಬಂದ ಮಗ, ‘ಅಲ್ಲೂ ಜನರಿದ್ದಾರೆ, ಸಂಸಾರಗಳಿವೆ, ನೆಮ್ಮದಿಯಿದೆ, ಸಂತೋಷವಿದೆ’ ಎಂದು ಮನವರಿಕೆ ಮಾಡಿದ.

ನಾನು ಜಪಾನ್‍ಗೆ ಬಂದಿರುವುದು ಇದು ಎರಡನೇ ಸಾರಿ. ಮೊದಲ ಸಲ ಬರೀ ಪ್ರವಾಸ ಅಷ್ಟೇ. ಯಾವುದೇ ದೇಶಕ್ಕೆ ಬರೀ ಪ್ರವಾಸಿಗರಾಗಿ ಬರುವುದಕ್ಕೂ ಅಲ್ಲೇ ಅವರ ಜೊತೆಯಲ್ಲೇ ಒಂದಾಗಿ ಇರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಎಷ್ಟೇ ಹೊಂದಿಕೊಂಡರೂ ಎರಡೂ ದೇಶಗಳ ಸಂಸ್ಕೃತಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಈ ದೇಶದಲ್ಲಿ ಎಂಥಾ ನಿಶ್ಶಬ್ದ ಎಂದರೆ ನನ್ನ ಕಿವಿ ಏನಾದ್ರೂ ಮುಚ್ಚಿ ಹೋಗಿದೆಯೇನೋ ಎನ್ನುವ ಅನುಮಾನ ಬರುವಷ್ಟು! ಎಲ್ಲಿ ನೋಡಿದರಲ್ಲಿ ರಸ್ತೆ ತುಂಬಾ ಫಳಫಳ ಹೊಳೆಯುವ ಕಾರುಗಳು ಓಡಾಡುತ್ತಿದ್ದರೂ ಒಂದೂ ಹಾರ್ನ್ ಶಬ್ದವಿಲ್ಲ. ಮನೆಯ ಮುಂದೆಯೂ ಪುಟ್ಟಪುಟ್ಟ ಕೈತೋಟ, ಬಣ್ಣಬಣ್ಣದ ಹೂವುಗಳು. ಮನೆಯ ಒಳಗಡೆ ಎಲ್ಲಾ ಆಧುನಿಕತೆಯ ಪ್ರತಿರೂಪ.! ಯಾವುದಕ್ಕೂ ಕೊರತೆಯಿಲ್ಲ. ಆರಾಮು ಜೀವನ.

ಇಲ್ಲಿ ಮ್ಯೋದೆನ್ ರೈಲು ನಿಲ್ದಾಣ, ಬಸ್ ನಿಲ್ದಾಣ ಎರಡೂ ಒಂದೇ ವೃತ್ತದಲ್ಲಿವೆ. ಆ ವೃತ್ತದಲ್ಲಿ ಚಿತ್ರಮಂದಿರ, ನಾಲ್ಕಾರು ಮಾಲುಗಳು (ಪುಟ್ಟದು, ದೊಡ್ಡದು, ತುಂಬಾ ದೊಡ್ಡದು) ಇವೆ. ಎಲ್ಲಾ ಕಡೆ ಬೇಕರಿಗಳಂತೆ ಕಾಣುವ ಮಾಲ್‍ಗಳಿರುತ್ತವೆ. ಅಲ್ಲಿ ಹುರಿದ ತರಕಾರಿ, ಮೀನು, ಲೆಟರ್ ಪ್ಯಾಡ್, ಹಣ್ಣುಗಳು, ಬಿಸಿಕಾಫಿ, ತಣ್ಣನೆ ಕಾಫಿ ಎಲ್ಲಾ ಸಿಗುತ್ತವೆ. ಇಲ್ಲಿ ಎಲ್ಲಾ ಕಡೆ ಒಂದೊಂದು ಯಂತ್ರ ಇರುತ್ತದೆ. ಅದರಲ್ಲೇ ನಮ್ಮ ಗ್ಯಾಸು, ವಿದ್ಯುತ್ತು, ನೀರು ಬಿಲ್ಲು ಪಾವತಿ ಮಾಡಬಹುದು. ಮಾಲ್‍ಗಳಲ್ಲಿ ತರಕಾರಿಗಳಂತೂ ವೈವಿಧ್ಯಮಯ. ವೈಜ್ಞಾನಿಕವಾಗಿ ಬೆಳೆಸುವುದರಿಂದಲೋ ಏನೋ ಎಲ್ಲಾ ತರಕಾರಿಗಳೂ ಆಕಾರದಲ್ಲಿ ನಮ್ಮ ತರಕಾರಿಗಳಿಗಿಂತ ತುಂಬಾ ದೊಡ್ಡವು. ಇಲ್ಲಿನ ತರಕಾರಿಗಳ ಅಚ್ಚುಕಟ್ಟತನ ನೋಡಿದರೇ ಅವರ ಕೃಷಿ ಪರಿಣತಿ ಅರ್ಥವಾಗುತ್ತದೆ. ಆಧುನಿಕತೆಯನ್ನು ಎಲ್ಲದರಲ್ಲಿ ಒಪ್ಪಿಕೊಳ್ಳುವ ಇವರು ಕೃಷಿಯಲ್ಲೂ ತಾಂತ್ರಿಕತೆಯನ್ನು ಬಳಸಿ ಅಗಾಧವಾಗಿ ಆಹಾರ ಪದಾರ್ಥಗಳನ್ನು ಬೆಳೆಯುತ್ತಾರೆ.

ಜಪಾನ್ ಮಾದರಿ ಹರತಾಳ!

ಮೊನ್ನೆ ಟೋಕಿಯೋದಲ್ಲಿ ಬಸ್ ಹರತಾಳ ಇತ್ತು. ಇಲ್ಲಿನ ಬಸ್ ಕಂಪನಿಯವರು ಚೆನ್ನಾಗಿ ಸರ್ವಿಸ್ ಕೊಡುತ್ತಿದ್ದರು. ಆದರೂ ಅದೇಕೋ ಸರಕಾರದವರು ಬೇರೆ ಕಂಪೆನಿಗೆ ಬಸ್ ಸೇವೆ ನೀಡಲು ಅನುಮತಿ ಕೊಟ್ಟಿದ್ದರಂತೆ. ತಮಗೇ ಆ ಪರವಾನಗಿ ಕೊಡಬೇಕೆಂದು ಚಾಲಕರು ಹರತಾಳ ನಡೆಸಿದರು.

ಆದರೆ ನಮ್ಮಲ್ಲಿಯಂತೆ ಇಲ್ಲಿ ಕಲ್ಲು ತೂರಾಟವಿರಲಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಯಾರೂ ಗಲಾಟೆ ಮಾಡಲಿಲ್ಲ, ಕೆಲಸ ನಿಲ್ಲಿಸಲಿಲ್ಲ, ಕಪ್ಪುಪಟ್ಟಿ ಧರಿಸಲಿಲ್ಲ. ಬದಲಾಗಿ ಸರಕಾರ ಒಪ್ಪುವ ತನಕ ಯಾವುದೇ ಸಾರ್ವಜನಿಕರಿಂದ ಪ್ರಯಾಣದರ ತೆಗೆದುಕೊಳ್ಳದೇ ಕೆಲಸ ಮಾಡುತ್ತಲೇ ಇದ್ದರು. ಎಲ್ಲಾ ಪ್ರಯಾಣಿಕರ ಟಿಕೆಟ್ ದರವನ್ನು ಕಂಪೆನಿಯೇ ಭರಿಸಿತು. ಅಂತಿಮವಾಗಿ ಸರಕಾರ ಬೇಡಿಕೆ ಒಪ್ಪಿಕೊಂಡು ಇವರಿಗೆ ಪರವಾನಗಿ ನೀಡಿತು. ಅಷ್ಟೇ ಅಲ್ಲ, ಹರತಾಳದ ಅವಧಿಯಲ್ಲಿ ಕಂಪೆನಿ ಭರಿಸಿದ ಸಾರ್ವಜನಿಕರ ಪ್ರಯಾಣದರವನ್ನು ಸರಕಾರವೇ ಪಾವತಿಸಿತು.

ಇಲ್ಲಿ ಯಾವುದರ ವಿರುದ್ಧವೇ ಪ್ರತಿಭಟನೆ, ಚಳವಳಿ ನಡೆಸಬೇಕಾದರೆ ಮೂರ್ನಾಲ್ಕು ಜನ ಪ್ರಮುಖರು ತೀರಾ ಮುಖ್ಯವಾದ ಸಾರ್ವಜನಿಕ ಸ್ಥಳಗಳಲ್ಲಿ ಕಾಲಿಗೆ ಸಿಕ್ಕಿಸಿದ ಫಲಕಗಳನ್ನು ಹಿಡಿದು ನಿಂತಿರುತ್ತಾರೆ. ಅದನ್ನು ಓದಿಯೇ ಪ್ರತಿಭಟನೆಯ ಕಾರಣ ತಿಳಿದುಕೊಳ್ಳಬೇಕು. ಇಲ್ಲಿ ಯಾರೂ ಘೋಷಣೆಗಳನ್ನು ಕೂಗುವುದಿಲ್ಲ.

ಸಾಮಾನ್ಯವಾಗಿ ಕೃಷಿನಿರತ ರೈತರಲ್ಲಿ ಮಹಿಳೆಯರೇ ಹೆಚ್ಚು. ಆದರೆ ಅವರೇ ಕಾರು ಡ್ರೈವ್ ಮಾಡಿಕೊಂಡು ಬೆಳೆದ ಪದಾರ್ಥಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ! ಇಲ್ಲಿ ನಮ್ಮಂತೆ ರಸ್ತೆಬದಿ ವ್ಯಾಪಾರ ಇಲ್ಲವೇ ಇಲ್ಲ. ಏನಿದ್ದರೂ ನೋಂದಾಯಿತ ಅಂಗಡಿಗಳಲ್ಲಿ ಮಾತ್ರ ವ್ಯವಹಾರ. ತಮಗೆ ಕೃಷಿಯಲ್ಲಿ ಬಂದಿರುವ ಪ್ರಶಸ್ತಿಗಳನ್ನೂ, ಎಷ್ಟು ವರ್ಷಗಳಿಂದ ಇದನ್ನು ಮಾರ್ಕೆಟ್ ಮಾಡುತ್ತಿದ್ದೇವೆಂದೂ ಪ್ರತಿ ಪೊಟ್ಟಣದ ಮೇಲೆ ಲೇಬಲ್ ಅಂಟಿಸಿರುತ್ತಾರೆ! ಆದರೂ ಇಲ್ಲೇಕೋ ನಮ್ಮಂತೆ ಮಸಾಲೆ ಪದಾರ್ಥಗಳು, ದ್ವಿದಳ ಧಾನ್ಯಗಳು ಇಲ್ಲ. ಸೋಯಾ ಅವರೆಯನ್ನು ತುಂಬಾ ಬೆಳೆಯುತ್ತಾರೆ.

ಇಲ್ಲಿ ಸಾರ್ವಜನಿಕ ಜಾಗಗಳನ್ನು ಯಾರೂ ಬೇಕಾಬಿಟ್ಟಿ ಬಳಸುವಂತಿಲ್ಲ. ಪೋಸ್ಟರು, ಕರಪತ್ರ, ಬ್ಯಾನರು, ಭಿತ್ತಿಚಿತ್ರಗಳನ್ನು ಎಲ್ಲೆಂದರಲ್ಲಿ ಪ್ರದರ್ಶಿಸುವಂತಿಲ್ಲ, ಅಂಟಿಸುವಂತಿಲ್ಲ. ರೈಲುನಿಲ್ದಾಣದೆದುರು ಒಂದು ಫಲಕ ಇಟ್ಟಿರುತ್ತಾರೆ. ಯಾರೇ ಚುನಾವಣೆಗೆ ನಿಂತರೂ ಅದರಲ್ಲೇ ಅವರ ಪೋಸ್ಟರ್ ಅಂಟಿಸಬೇಕು. ಮನೆಮನೆಗೆ ಪೇಪರ್ ತಂದು ಎಸೆಯುವಂತಿಲ್ಲ. ಮೊದಲೇ ಅಂಚೆ ಇಲಾಖೆಯವರಿಗೆ ದುಡ್ಡು ಕಟ್ಟಿದ್ದರೆ ಅಂಚೆಯಲ್ಲಿ ದಿನಪತ್ರಿಕೆ ಬರುತ್ತದೆ. ಇಲ್ಲಿ ಚುನಾವಣಾ ಪ್ರಚಾರಕ್ಕೆ ತುಂಬಾ ನಿರ್ಬಂಧಗಳಿರುತ್ತವೆ. ಪ್ರತಿ ಪ್ರಜೆಯೂ ಮತ ಚಲಾಯಿಸುತ್ತಾರೆ. ಆದರೆ ಅದಕ್ಕಾಗಿ ಇಲ್ಲಿ ಸಾರ್ವಜನಿಕ ರಜೆ ಇರುವುದಿಲ್ಲ. ಬೆಳಿಗ್ಗೆ ಏಳರಿಂದ ರಾತ್ರಿ ಹತ್ತರವರೆಗೂ ಮತದಾನ ಮಾಡಲು ಅವಕಾಶವಿರುತ್ತದೆ. ಕೆಲಸದ ಮಧ್ಯದಲ್ಲೋ, ಊಟದ ಸಮಯದಲ್ಲೋ ವೋಟ್ ಮಾಡಿ ಬರುತ್ತಾರೆ. ಪ್ರತಿ ಕಚೇರಿಯಲ್ಲೂ ಮತಯಂತ್ರ ಇಟ್ಟಿರುತ್ತಾರೆ.

ನಾನು 2020ರ ಒಲಿಂಪಿಕ್ಸ್ ಮ್ಯಾರಥಾನ್ ಶುರುವಾದದ್ದನ್ನೂ ನೋಡಿದೆ. ಜಪಾನ್ ಅದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಅಂದು ದೊಡ್ಡ ಹಳೆಯ ದೇವಸ್ಥಾನದ ಮುಂದೆ ಒಂದು ದೊಡ್ಡ ಪೆಂಡಾಲು ಹಾಕಿದ್ದರು; ರಾಜಕಾರಣಿಗಳು ಬಂದು ಉದ್ಘಾಟಿಸಿದರು. ಅವತ್ತು ಮಾತ್ರ ಎರಡು ಮೈಕ್ ನೋಡಿದೆ. ಸುಮಾರು ಐದಾರು ಸಾವಿರ ಜನರು ಸೇರಿದ್ದರು. ಅಲ್ಲೊಂದು ಪೊಲೀಸ್ ಚೌಕಿ ಸಹಾ ಇದೆ. ಅಲ್ಲೂ ಬರೀ ಸಂಭ್ರಮ ಇರುತ್ತದೆಯೇ ಹೊರತು ಯಾವುದೇ ಕಿರುಚಾಟ ಗಲಾಟೆ ಇರುವುದಿಲ್ಲ.

ನಮ್ಮಲ್ಲಿದ್ದಂತೆ ಇಲ್ಲೂ ಸಂಸ್ಕೃತಿ, ಪರಂಪರೆ ಉಳಿಸಲು ತುಂಬಾ ಕಷ್ಟ ಪಡುತ್ತಾರೆ. ಪ್ರಾಕೃತಿಕ ವಿಕೋಪಗಳಿಂದ ಹಳೇ ಕಟ್ಟಡಗಳಿಗೆ ತೊಂದರೆಯಾದರೆ, ಎಷ್ಟೇ ಕಷ್ಟವಾದರೂ ಮೊದಲಿನಂತೆಯೇ ಕಟ್ಟುತ್ತಾರೆ. ಜಪಾನೀಯರು ನಿಜವಾಗ್ಲೂ ಪ್ರಾಣಿಪ್ರಿಯರು. ಇಲ್ಲಿ ಆನೆ, ಹುಲಿಯಂಥ ದೊಡ್ಡ ದೊಡ್ಡಪ್ರಾಣಿಗಳಿಲ್ಲ. ಆದರೆ ನಮ್ಮಲ್ಲಿದ್ದಂತೆ ಬೀದಿಬೀದಿಯಲ್ಲಿ ನಾಯಿ, ಹಸುಗಳು ತಿರುಗುವುದಿಲ್ಲ. ಪ್ರತಿ ಜೀವಿಗೂ ಆದ್ಯತೆ, ಗೌರವಗಳಿವೆ. ನಾಯಿ ಬೀದಿಗೆ ಬಂತು ಅಂದರೆ, ಅದರ ಒಡೆಯರಿದ್ದೇ ಇರುತ್ತಾರೆ. ಮೊನ್ನೆ ನಾವಿರುವ ಪ್ರದೇಶದಲ್ಲಿ ಒಬ್ಬರ ಮನೆಯಲ್ಲಿ ನಾಯಿ ತಪ್ಪಿಸಿಕೊಂಡಿತ್ತು. ಅದರ ಒಡೆಯ ಪೊಲೀಸ್ ಠಾಣೆಗೆ ಹೋಗಿ ನಾಯಿಯ ಭಾವಚಿತ್ರ ಸಮೇತ ದೂರು ಕೊಟ್ಟರು. ಅಂತೂ ಪೊಲೀಸರು ಎರಡು ದಿನದ ನಂತರ ನಾಯಿಯನ್ನು ಹುಡುಕಿ ಆ ಒಡೆಯನಿಗೆ ತಲುಪಿಸಿದರು. ಅವರ ಸಂಭ್ರಮ ನೋಡಬೇಕಿತ್ತು. ಇದು ಇಲ್ಲಿನ ಪೊಲೀಸರ ಕೆಲಸ ಈ ರೀತಿ!

ಭೌಗೋಳಿಕವಾಗಿ ನಮ್ಮ ಕರ್ನಾಟಕದಷ್ಟಿರುವ ಈ ದೇಶ ನಮ್ಮಂತೆಯೇ ರಾಜ್ಯಾವಾರು ವಿಂಗಡಣೆಯಾಗಿದೆ. ಆದರೂ ಇಲ್ಲಿ ಕಾನೂನಿಗೇ ಹೆಚ್ಚಿನ ಪ್ರಾಶಸ್ತ್ಯ. ಸಿಕ್ಕಸಿಕ್ಕ ಜಾಗಗಳಲ್ಲಿ ಮನೆಗಳನ್ನು ಕಟ್ಟುವ ಕೆಡಹುವ ಹಾಗಿಲ್ಲ. ಮನೆಗೆ ಬಳಸುವ ಬಣ್ಣದಿಂದ ಹಿಡಿದು ಎಲ್ಲದಕ್ಕೂ ಸರ್ಕಾರದ ನಿಯಂತ್ರಣ. ಇಲ್ಲಿ ನಮ್ಮಂತೆ ಖಾಸಗಿ ಬಡಾವಣೆಗಳು ಇಲ್ಲವೇ ಇಲ್ಲ. ನಮ್ಮಲ್ಲಿ ಖಾಸಗಿ ಬಡಾವಣೆ ನಿರ್ಮಿಸಿದವರ ಅಪ್ಪ—ಅಜ್ಜಂದಿರ ಹೆಸರಿರುವ ದೊಡ್ಡದೊಡ್ಡ ಬೋರ್ಡುಗಳು ಎಲ್ಲೆಲ್ಲೂ, ರಸ್ತೆಗಳ ಮಧ್ಯದಲ್ಲೂ ಕಾಣಸಿಗುತ್ತವೆ. ಇಲ್ಲಿ ಎಲ್ಲಾ ಕಾನೂನಿನಂತೆಯೇ ನಡೆಯಬೇಕು. ಶೌಚಾಲಯ, ಬಚ್ಚಲುಮನೆಯನ್ನು ಕೂಡಾ ನಿಯಮದಂತೆಯೇ ಕಟ್ಟಬೇಕು.

ಪ್ರಾಕೃತಿಕ ಸಂಪನ್ಮೂಲಗಳು ಹೇರಳವಾಗಿದ್ದರೂ ನಮ್ಮ ಕನ್ನಡ ನೆಲದಲ್ಲಿ ನಮ್ಮನ್ನು ನಾವೇ ಹಾಳುಮಾಡಿಕೊಳ್ಳುತ್ತಿರುವುದು ಅಕ್ಷರಶಃ ಸತ್ಯ. ನಾವು ಮತ ನೀಡಿ ಗೆಲ್ಲಿಸಿದವರೇ ಎಲ್ಲಾ ಮಾಡಬೇಕೆಂದು ನಾವೇಕೆ ಅಂದುಕೊಳ್ಳುಬೇಕು? ಪ್ರತಿಯೊಬ್ಬರೂ ಅವರವರ ಕರ್ತವ್ಯಗಳನ್ನು, ಜವಾಬ್ದಾರಿಗಳನ್ನು ಸೋಮಾರಿತನ ಬಿಟ್ಟು ನಿಭಾಯಿಸಬೇಕು. ನಾವು ಮತ ಕೊಟ್ಟು ಗೆಲ್ಲಿಸಿದವರಷ್ಟೇ ಸರ್ಕಾರವಲ್ಲ; ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ, ವ್ಯವಸ್ಥೆಯ ಭಾಗ ಎಂಬ ಅರಿವನ್ನು ಈ ದೇಶ ನನ್ನಲ್ಲಿ ಮೂಡಿಸಿತು.

ನಾನು ಕಂಡಂತೆ ಮೈಸೂರಿನ ನಮ್ಮ ಮನೆಯ ಆಸುಪಾಸಿನಲ್ಲಿ ಈ ಹದಿನೈದು ವರ್ಷಗಳಲ್ಲೇ ಸುಮಾರು ಇಪ್ಪತ್ತು ಹೊಸ ದೇವಸ್ಥಾನಗಳಾಗಿವೆ. ಅದನ್ನು ಬಿಟ್ಟು ಮೊದಲು ಶಾಲೆಗಳನ್ನು ತೆರೆಯಬೇಕು. ಶಾಲೆ—ಕಾಲೇಜುಗಳು ಬರೀ ಡಾಕ್ಟರ್ ಇಂಜಿನಿಯರ್ ತಯಾರಿಸುವ ಕಾರ್ಖಾನೆಗಳಾಗದೇ ಕಲಿಯಬೇಕಾದ ಅಷ್ಟೂ ಸಾಹಿತ್ಯ, ಸಂಗೀತ, ಲಲಿತ ಕಲೆಗಳನ್ನು ಕಲಿಸುವ ಶಾಲೆಗಳಾಗಬೇಕು. ವಿದ್ಯಾಭ್ಯಾಸವನ್ನು ಸುಲಭ ಮಾಡಬೇಕು. ಮಕ್ಕಳಿಗೆ ಮನೆಯ ಹತ್ತಿರವೇ ಶಾಲೆಗಳನ್ನು ಜಾಸ್ತಿ ಮಾಡಿ ಅನುದಾನವನ್ನು ಸರ್ಕಾರವೇ ಕೊಡಬೇಕು. ಕಟ್ಟಡ ಶುಲ್ಕದ ಹೆಸರಿನಲ್ಲಿ ಪೋಷಕರನ್ನು ಸುಲಿಯುವ ಕಾರ್ಯ ಮೊದಲು ನಿಲ್ಲಬೇಕು. ಖಾಸಗಿ ಶಾಲೆ, ಖಾಸಗಿ ಬಡಾವಣೆಗಳನ್ನು ತಡೆಹಿಡಿದರೆ ನಾವು ಅರ್ಧ ಸರಿಯಾದಂತೆ.

ನಾವು ಹೀಗೆ...!

ಮೊನ್ನೆಯಂತೂ ಒಂದು ಬೆಕ್ಕಿಗೆ ಬೆಲ್ಟ್ ಹಾಕಿ ವಾಕಿಂಗ್ ಮಾಡಿಸುವವರನ್ನು ಕಂಡೆ.! ನಾಯಿ, ಬೆಕ್ಕುಗಳು ವಾಯುವಿಹಾರಕ್ಕೆ ಬಂದರೂ ಅವು ಎಲ್ಲೂ ಗಲೀಜುಮಾಡುವಂತಿಲ್ಲ. ಅವುಗಳ ಮಾಲೀಕರು ಅದಕ್ಕೆಂದೇ ಒಂದು ಬ್ಯಾಗ್ (ಕಸದ ಚೀಲ) ಹಿಡಿದುಕೊಂಡೇ ಬಂದಿರುತ್ತಾರೆ. ಅದರಲ್ಲಿ ಒಂದು ಪುಟ್ಟ ಪ್ಲಾಸ್ಟಿಕ್ ಮೊರ, ಪೊರಕೆ ಇರುತ್ತವೆ. ಸಾಕುಪ್ರಾಣಿಯ ವಿಸರ್ಜನೆಯನ್ನು ಗುಡಿಸಿ ತಾನೇ ತಂದಿರುವ ಬ್ಯಾಗ್‍ಗೆ ಹಾಕಿಕೊಂಡು ತಮ್ಮ ಮನೆ ಕಸದಪುಟ್ಟಿಯಲ್ಲಿಯೇ ಹಾಕುತ್ತಾರೆ.

ನಾನು ಮೈಸೂರಿನಲ್ಲಿ ದಿನವೂ ಬೆಳಗಿನ ಜಾವ ಎದ್ದು ಬಾಗಿಲ ಮುಂಭಾಗದಲ್ಲಿ ತೊಳೆದು ನೀಟಾಗಿ ರಂಗೋಲಿ ಇಟ್ಟು ಒಳಗೆ ಬರುತ್ತೇನೆ. ಆದರೆ ಎಂಟು ಘಂಟೆಯಷ್ಟೊತ್ತಿಗೆ ಬೇರೆ ಮನೆಯವರು ತಮ್ಮ ನಾಯಿಯನ್ನು ವಾಕಿಂಗಿಗೆ ಕರೆತಂದು ನಮ್ಮ ಮನೆ ಬಾಗಿಲಿನಲ್ಲಿ ಗಲೀಜು ಮಾಡಿಸಿರುತ್ತಾರೆ!

ನಾನು ಇಷ್ಟೆಲ್ಲಾ ಹೇಳಿ ಇಲ್ಲಿ ನ್ಯೂನತೆಗಳೇ ಇಲ್ಲವೆಂದು ಘೋಷಿಸಲಾರೆ! ಭೂಮಿಯೊಳಗಿನ ಲಾವಾರಸದಂತೆ ಒಳಗೊಳಗೇ ನೋಯುವ, ಸುಡುವ ತಾಪಗಳೆಷ್ಟೋ... ಹೊರಗಿನವಳಾದ ನನಗೆ ಗೊತ್ತಿಲ್ಲ! ಇಲ್ಲಿ ಸಂಸಾರದ ಜವಾಬ್ದಾರಿಗಳನ್ನು ಹೆಣ್ಣು ಮಕ್ಕಳೇ ನಿಭಾಯಿಸುತ್ತಾರಂತೆ. ನಮ್ಮಲ್ಲಿ ಮಕ್ಕಳು ಏನಾದರೂ ತಪ್ಪು ಮಾಡಿದರೆ, ‘ಅವರಮ್ಮ ಕಲಿಸಿರುವ ಬುದ್ಧಿ’ ಎಂದು ಬಯ್ದಂತೆ ಇಲ್ಲೂ ಏನೇ ಅಪರಾಧವನ್ನು ಯಾರೇ ಮಾಡಿದರೂ ‘ತಾಯಿ ಕಲಿಸಿರುವ ಬುದ್ಧಿ’ ಎನ್ನುತ್ತಾರೆ.

ಇಲ್ಲಿನವರು ಮದುವೆಯನ್ನು ತುಂಬಾ ಮುಂದೂಡುತ್ತಾರಂತೆ. ಮಕ್ಕಳು ತುಂಬಾ ಕಮ್ಮಿ. ಎಲ್ಲಾ ಮಕ್ಕಳಿಗೂ ಸರ್ಕಾರದಿಂದ ಪೂರ್ತಿ ಉವಿತ ಶಿಕ್ಷಣ. ಬಾಲ್ಯದಿಂದ ಒಡನಾಡಿಯಾಗಿದ್ದವರು ಸ್ನೇಹಿತರಾಗಿ ಮದುವೆಯಾಗಿ, 100—120 ವರ್ಷ ಜೊತೆಯಾಗಿರುವವರೇ ಹೆಚ್ಚು ಜನರಿದ್ದಾರೆ. ನಮ್ಮಲ್ಲಿ ಮದುವೆಗೆಂದು ಕಾಂಜೀವರಂ ಸೀರೆಗೆ, ಊಟಕ್ಕೆ ಖರ್ಚಿಗೆ ಹೆದರುವಂತೆ ಇಲ್ಲೂ ಇವರ ಸಾಂಪ್ರದಾಯಿಕ ಉಡುಗೆ—ತೊಡುಗೆಯ ವಿಪರೀತ ಖರ್ಚಿಗೆ ಹೆದರಿ ಮದುವೆಯನ್ನೇ ಮಾಡಿಕೊಳ್ಳದೆ, ಸಂಗಾತಿಗಳ ಹೆಸರನ್ನು ನೋಂದಣಿ ಮಾಡಿಸಿ ನೂರಾರು ವರ್ಷ ಜೊತೆಯಲ್ಲಿರುವುದಕ್ಕೆ ಕಾನೂನಿನ ಸಮ್ಮತಿಯಿದೆಯಂತೆ.!

ಪ್ರಕೃತಿ ಜಪಾನ್‍ಗೆ ವಿರುದ್ಧವಾಗಿದೆ. ಇಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚು. ಜನರು, ಸರ್ಕಾರ, ಪ್ರಕೃತಿಯನ್ನು ಉಳಿಸಲು ಹೋರಾಡುತ್ತಾರೆ. ಇಷ್ಟೆಲ್ಲಾ ಹೇಳಿ ಇಲ್ಲಿನ ಬಹು ಮುಖ್ಯವಾದ ಮೌಂಟ್ ಫುಜಿಯ ಬಗ್ಗೆ ಹೇಳದಿದ್ದರೆ ಹೇಗೆ? ನಾನೂ ಎರಡು ಸಾರಿ ಆ ‘ಬೆಳ್ಳಿ ಬೆಟ್ಟ’ ನೋಡಿ ಬಂದೆ. ರಮ್ಯತೆಯ ತಾಣ. ಅಲ್ಲೂ ಅದೇ ಅಗಾಧ ಮೌನ. ಒಂದು ಸಣ್ಣ ಕಾಗದದ ಚೂರೂ ಇಲ್ಲದಂತೆ ಅಚ್ಚುಕಟ್ಟು. ಹಸಿರು ಪರ್ವತಶ್ರೇಣಿಗಳ ಮಧ್ಯೆ ಬೆಳ್ಳಿಯಂತೆ ಕಂಗೊಳಿಸುವ ಬೆಟ್ಟ, ಬಿಳಿ ಬಟ್ಟೆಗಳನ್ನು ಹಾಕಿಕೊಂಡ ಪರ್ವತಾರೋಹಿಗಳು. ಜಪಾನೀಯರು ಅದನ್ನು ದೇವರೆಂದು ಪೂಜಿಸಿ ಪ್ರಾರ್ಥಿಸುತ್ತಾರೆ. ನಮ್ಮಲ್ಲಿನ ಚಂದಮಾಮ ಕಥೆಗಳಂತೆ ಮಕ್ಕಳಿಗೆ ಆ ಬೆಟ್ಟದ ಬಗ್ಗೆ ತುಂಬಾ ಕಥೆಗಳಿವೆ, ಉಪಕಥೆಗಳಿವೆ. ಆ ಹೆಸರಿನ ಸಿಹಿ ತಿಂಡಿಗಳಿವೆ.,

ಹಿರೋಷಿಮ ನೋಡಿ ಬಂದೆವು. ನಾಗಸಾಕಿಗೆ ಹೋಗಲಾಗಿಲ್ಲ. ಹಿರೋಷಿಮದಲ್ಲಿ ದೊಡ್ಡ ಸಂಗ್ರಹಾಲಯವಿದೆ. ಆಗಸ್ಟ್ 6, 1945ರ ಅಣುಬಾಂಬಿನ ಸಂಕಟಗಳನ್ನೂ, ನೋವುಗಳನ್ನೂ ಯಥಾವತ್ತಾಗಿ ಸಂಗ್ರಹಿಸಿಟ್ಟಿದ್ದಾರೆ. ಅದನ್ನು ನೋಡಿದವರಾರೂ ಶಾಂತಿಮಂತ್ರ ಜಪಿಸದೇ ಬರುವುದಿಲ್ಲ. ನಾವೂ ಅಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ ನನ್ನ ಒಂದು ಮಿನಿಯೇಚರ್ ವರ್ಣಚಿತ್ರ ಇಟ್ಟು ಬಂದಿದ್ದೇವೆ.

ಪ್ರಪಂಚದ ಅತಿ ಶ್ರೇಷ್ಠ ಚಿತ್ರ ನಿರ್ದೇಶಕ ‘ಅಖಿರ ಕುರಸವ’ರ ಚಲನಚಿತ್ರಗಳನ್ನು ಮಗನೊಡನೆ ನೋಡುತ್ತಿರುತ್ತೇನೆ. ಅವರ ಮೊದಲ ಮೂಕಿ ಚಲನಚಿತ್ರ ತೆಗೆದ ಜಾಗಕ್ಕೂ ಎಲಿವೇಟರ್‍ನಲ್ಲಿ ಕರೆದುಕೊಂಡು ಹೋಗಿದ್ದ. ಅಲ್ಲಿ 3 ಡಿಗ್ರಿ ಸೆಲ್ಸಿಯಸ್ ಇತ್ತು. ಅಲ್ಲಿನ ಚಳಿಗಾಳಿಗೆ ನಿಲ್ಲಲೂ ಕಷ್ಟವಾಗುತಿತ್ತು. ಅದು ಹೇಗೆ ಸೆಟ್ ಹಾಕಿ ಚಿತ್ರ ತೆಗೆದರೋ? ಈಗಲೂ ಅಲ್ಲಿ ಕೆಂಡದ ಅಗ್ಗಿಷ್ಟಿಕೆಗಳಿವೆ. ಇನ್ನು ನನಗೆ ತುಂಬ ಇಷ್ಟವಾದ ಆರ್ಟ್‍ಗ್ಯಾಲರಿಗಳಿಗೆ ಹೋಗಲಾಗಿಲ್ಲ. ನಾನು ಖಂಡಿತಾ ನಿಯಮಿತ ಬರಹಗಾರಳಲ್ಲ. ತೀರಾ ಹತ್ತಿರದಿಂದ ನೋಡಿದ, ಅನುಭವಿಸಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ, ಅಷ್ಟೇ.

*ಲೇಖಕರು ಕಲೆ, ಸಾಹಿತ್ಯ, ಸಂಸ್ಕøತಿ, ನಾಟಕಗಳಲ್ಲಿ ಅಪಾರ ಅಭಿರುಚಿಯುಳ್ಳ ಗೃಹಿಣಿ, ಮೈಸೂರಿನವರು. ಪ್ರಸ್ತುತ ಮಗನೊಂದಿಗೆ ಜಪಾನಿನಲ್ಲಿ ವಾಸ. ಅಲ್ಲಿಂದ ಹೊರನೋಟ ಬೀರಿದ್ದಾರೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮