2nd June 2018

ಮಲೇಶಿಯಾಗೆ ಮತ್ತೊಮ್ಮೆ ಮಹಾಥಿರ್ ಮಹಮದ್

ಮಹಾಥಿರ್ ಮಹಮದ್ ತಾವು ಮುಂದಿನ ಒಂದು ಅಥವಾ ಎರಡು ವರ್ಷಗಳು ಮಾತ್ರ ಪ್ರಧಾನಿಯಾಗಿರುವುದಾಗಿ ಹೇಳಿದ್ದಾರೆ.

ತೊಂಬತ್ತೆರಡರ ಹರೆಯದ ಮಹಾಥಿರ್ ಮಹಮದ್ ಮತ್ತೊಮ್ಮೆ ಮಲೇಶಿಯಾದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ಸ್ವತಂತ್ರ ದೇಶವೊಂದರ ಸರಕಾರದ ಮುಖಂಡನಾಗಿ ಗದ್ದುಗೆಗೇರಿದ ಅತ್ಯಂತ ಹಿರಿಯನಾಗಿ ದಾಖಲೆ ಮಾಡಿದ್ದಾರೆ. 1957ರಲ್ಲಿ ಸ್ವತಂತ್ರವಾದ ಮಲಯಾ/ಮಲೇಶಿಯಾದ ಪ್ರಧಾನಿಯಾಗಿ ಮಹಾಥಿರ್ 1981 ರ ಜುಲೈನಿಂದ 2003ರ ಅಕ್ಟೋಬರ್‍ವರೆಗೂ ಅಧಿಕಾರದಲ್ಲಿದ್ದರು. 1957ರಿಂದಲೂ ‘ಬರಿಸನ್ ನ್ಯಾಶನಲ್’ ಒಕ್ಕೂಟವೇ ಮಲೇಶಿಯಾದಲ್ಲಿ ಅಧಿಕಾರದಲ್ಲಿತ್ತು. ಮಹಾಥಿರ್ ಕೂಡಾ ಇದೇ ಒಕ್ಕೂಟದ ಮುಖಂಡರಾಗಿ ಮಲೇಶಿಯಾದ ಪ್ರಧಾನಿಯಾಗಿದ್ದರು. ಆದರೆ 2003ರಿಂದ 2009ರವರೆಗೆ ಅಬ್ದುಲ್ಲಾ ಅಹಮದ್ ಬದಾವಿ ಮತ್ತು 2009ರಿಂದ 2018ರವರೆಗೆ ನಜಿಬ್ ರಜಾಕ್ ಅದೇ ‘ಬರಿಸನ್ ನ್ಯಾಶನಲ್’ ಸಮ್ಮಿಶ್ರ ಸರ್ಕಾರದ ನಾಯಕನಾಗಿ ಪ್ರಧಾನಿಯಾಗಿದ್ದರು. ಆದರೆ 2013ರಿಂದ ಇಲ್ಲಿಯವರೆಗೆ ನಜೀಬ್ ರಜಾಕ್ ತಮ್ಮ ಎದುರಾಳಿಗಳನ್ನು ಸದೆಬಡಿಯುವ ದಾರಿಯಲ್ಲಿ ಸಾಗಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿದ್ದರು. ವಿರೋಧಿ ನಾಯಕ ಹಾಗೂ ‘ಪಕಟನ್ ಹರಪನ್’ ಪಕ್ಷದ ಮುಖಂಡ ಅನ್ವರ್ ಇಬ್ರಾಹಿಮ್‍ರವರನ್ನು ಸಲಿಂಗಕಾಮಿ ಆರೋಪದ ಮೇಲೆ ಬಂಧಿಸಿ ಸೆರೆವಾಸಕ್ಕೆ ತಳ್ಳಿದ್ದರು.

2013ರಿಂದ ಐದು ವರ್ಷಗಳ ನಂತರ 2018ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯ ವೇಳೆಗೆ ಅನ್ವರ್ ಇಬ್ರಾಹಿಮ್‍ರವರ ‘ಪಕಟನ್ ಹರಪನ್’ ಪಕ್ಷವು ಪ್ರಖರ ಚುನಾವಣಾ ಪ್ರಚಾರ ಮಾಡಿತ್ತು. ಆದರೆ ತನ್ನ ಪಕ್ಷದ ಮುಖಂಡ ಜೈಲುವಾಸಿಯಾದ ಕಾರಣದಿಂದ ‘ಪಕಟನ್ ಹರಪನ್’ ಪಕ್ಷವು ಹಿಂದಿನ ಪ್ರಧಾನಿಯಾದ ಮಹಾಥಿರ್ ಮಹಮದ್‍ಗೆ ಚುನಾವಣೆಯ ನೇತೃತ್ವ ನೀಡಿ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಿತ್ತು. ಹೀಗೆ 92 ವರ್ಷದ ಹಳೆಯ ಹುಲಿ ಮಹಾಥಿರ್ ಮಹಮದ್ ತಮ್ಮದೇ ಹಳೆಯ ಪಕ್ಷ—ಒಕ್ಕೂಟ ‘ಬರಿಸನ್ ನ್ಯಾಶನಲ್’ ವಿರುದ್ಧ ಪ್ರಚಾರಕ್ಕಿಳಿದಿದ್ದರು.

222 ಸದಸ್ಯರುಳ್ಳ ಮಲೇಶಿಯಾ ಸಂಸತ್ತು ‘ದಿವಾನ್ ರಾಕ್ಯತ್’ನಲ್ಲಿ ಪಕಟನ್ ಹರಪನ್ ಪಕ್ಷ 113 ಸ್ಥಾನ ಗಳಿಸಿತ್ತು. ಎಂಟು ಸ್ಥಾನಗಳನ್ನು ಗಳಿಸಿದ್ದ ಸಬಾ ಹೆರಿಟೇಜ್ ಪಕ್ಷ ಕೂಡಾ ಆಡಳಿತಾರೂಢ ಒಕ್ಕೂಟ ಸೇರಿ ಸಂಸತ್ತಿನಲ್ಲಿ ಮಹಾಥಿರ್‍ರವರ ಸಂಖ್ಯೆ 121ಕ್ಕೆ ಏರಿತ್ತು. ಆದರೂ ಹಿಂದಿನ ಪ್ರಧಾನಿ ನಜಿಬ್ ರಜಾಕ್‍ರವರ ಬರಿಸನ್ ನ್ಯಾಶನಲ್ ಒಕ್ಕೂಟ 79 ಸ್ಥಾನಗಳನ್ನು ಗಳಿಸಿತ್ತು. ಚುನಾವಣೆಯ ನಂತರ ಶಾಂತಿಯುತವಾಗಿ ಸರ್ಕಾರ ಬದಲಾಗುವುದಿಲ್ಲವೆಂದು ಹೆದರಿದ್ದ ಭವಿಷ್ಯವಾಣಿಯನ್ನು ಸುಳ್ಳಾಗಿಸಿ ಮಹಾಥಿರ್ ಮಹಮದ್ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಗೊಂಡರು. ಮಲೇಶಿಯಾದ ಚುನಾವಣೆ 2018ರ ಮೇ 9ರಂದು ನಡೆದಿತ್ತು. ಮೇ 9ರ ತಡರಾತ್ರಿಯಿಂದ ಮೇ 10ರ ಬೆಳಿಗ್ಗೆಯವರೆಗೆ ಫಲಿತಾಂಶ ಹೊರಬಿದ್ದಿತ್ತು. ಆದರೆ ಪದಚ್ಯುತ ಪ್ರಧಾನಿ ನಜೀಬ್ ರಜಾಕ್ ಹೊಸ ಪ್ರಧಾನಿ ಆಯ್ಕೆಗೆ ಕಾಲೊಡ್ಡಿದ್ದರು. ಆಗ ಮೇ 10ರ ಸಂಜೆ 5.30ಕ್ಕೆ ಮಹಾಥಿರ್ ಮಹಮದ್ ಮಲೇಶಿಯಾದ ಈಗಿನ ರಾಜ ಯಾಂಗ್—ಡಿ—ಪೆರ್ತುವಾನ್—ಅಗಾಂಗ್ ರವರಿಗೆ ಸರ್ಕಾರ ರಚನೆಯ ವಿಳಂಬದ ಬಗ್ಗೆ ಟೀಕಿಸಿ ಮಲೇಶಿಯ ಅರಾಜಕ ಪರಿಸ್ಥಿತಿಗೆ ಇಳಿಯುವುದೆಂದು ಎಚ್ಚರಿಸಿದ್ದರು. ಇದರಿಂದ ಎಚ್ಚೆತ್ತ ರಾಜ ಮೇ 10ರ ರಾತ್ರಿ 9.30ಕ್ಕೆ ಮಹಾಥಿರ್ ಮಹಮದ್‍ರವರನ್ನು ಪ್ರಧಾನಿಯಾಗಿಸಿ ಪ್ರಮಾಣವಚನ ಬೋಧಿಸಿದ್ದರು. ಅನ್ವರ ಇಬ್ರಾಹಿಮ್‍ರವರ ಪತ್ನಿಯನ್ನು ದೇಶದ ಉಪ—ಪ್ರಧಾನಿಯನ್ನಾಗಿಯೂ ಆಯ್ಕೆ ಮಾಡಲಾಗಿತ್ತು. ನಂತರದ ಕೆಲವೇ ದಿನಗಳಲ್ಲಿ ಮಲೇಶಿಯಾದ ರಾಜನಿಂದ ಕ್ಷಮಾದಾನ ಪಡೆದ ಅನ್ವರ್ ಮೇ 15ರಂದು ಕಾರಾಗೃಹದಿಂದ ಬಿಡುಗಡೆಯಾಗಿ ದೇಶಕ್ಕೆ ‘ಹೊಸ ಬೆಳಗು’ ನೀಡುವ ಆಶ್ವಾಸನೆ ನೀಡಿದ್ದರು.

ಮಹಾಥಿರ್ ಮಹಮದ್ ತಾವು ಮುಂದಿನ ಒಂದು ಅಥವಾ ಎರಡು ವರ್ಷಗಳು ಮಾತ್ರ ಪ್ರಧಾನಿಯಾಗಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ಅನ್ವರ್ ಇಬ್ರಾಹಿಮ್ ತಾವು ಸ್ವಲ್ಪ ಸಮಯ ತಮ್ಮ ಕುಟುಂಬದೊಂದಿಗೆ ಕಳೆದು ನಂತರ ಮತ್ತೊಮ್ಮೆ ಮಲೇಶಿಯಾ ಸಂಸತ್ತಿಗೆ ಆಯ್ಕೆಯಾಗಿ ಬರುವೆನೆಂದು ಹೇಳಿದ್ದಾರೆ. ಆದರೂ ಮುಂದಿನ ಒಂದೆರಡು ವರ್ಷಗಳಲ್ಲಿ ಹಳೆಯಹುಲಿ ಮಹಾಥಿರ್ ಮಹಮದ್ ತಮ್ಮ ಪ್ರಧಾನಿ ಹುದ್ದೆಯನ್ನು ‘ಪಕಟನ್ ಹರಪನ್’ ಪಕ್ಷದ ನೈಜ ಮುಖಂಡ ಅನ್ವರ್ ಇಬ್ರಾಹಿಮ್‍ರವರಿಗೆ ಬಿಟ್ಟುಕೊಡುವರೇ ಎಂದು ಕಾದುನೋಡಬೇಕಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018