2nd June 2018

ಒಂದು ಆನ್‍ಲೈನ್ ಕ್ರಾಂತಿ
ಫ್ಲಿಪ್‍ಕಾರ್ಟ್

ಇಮಾಮ್ ಗೋಡೆಕಾರ

ಇನ್ನು ಕೆಲವೇ ವರ್ಷಗಳಲ್ಲಿ ಬಡಬೋರೇಗೌಡನೂ ತನ್ನೆಲ್ಲಾ ಖರೀದಿಯನ್ನು ತನ್ನ ಮೊಬೈಲ್ ಫೋನ್ ಮುಖಾಂತರ ಅಮೆಝಾನ್ ಅಥವಾ ಫ್ಲಿಪ್‍ಕಾರ್ಟ್‍ನಲ್ಲಿಯೇ ಮಾಡಿದರೆ ಆಶ್ಚರ್ಯಪಡಬೇಕಿಲ್ಲ.

ಎಂಬತ್ತರ ದಶಕದಲ್ಲಿ ಬೆಂಗಳೂರಿನ ಅತಿದೊಡ್ಡ ವಾಣಿಜ್ಯ ಕಂಪನಿಗಳು ಯಾವುವು ಎಂದು ಯಾರಾದರೂ ಕೇಳಿದ್ದರೆ, ಬಿಇಎಲ್, ಹೆಚ್‍ಎಎಲ್, ಬಿಇಎಮ್‍ಎಲ್, ಐಟಿಐ, ಹೆಚ್‍ಎಮ್‍ಟಿ ಎಂಬ ಉತ್ತರ ತಕ್ಷಣಕ್ಕೆ ದೊರೆಯುತ್ತಿತ್ತು. ಮುಂದಿನ ಎರಡು ದಶಕಗಳಲ್ಲಿನ ಉದಾರವಾದಿ ಆರ್ಥಿಕ ನೀತಿಯಲ್ಲಿ ಈ ಎಲ್ಲಾ ಹಳೆಯ ಸರ್ಕಾರಿ ಸ್ವಾಮ್ಯದ ಕಂಪನಿಗಳು ನೇಪಥ್ಯಕ್ಕೆ ಸರಿದಿದ್ದವು. ಐಟಿಐ ಹಾಗೂ ಹೆಚ್‍ಎಮ್‍ಟಿ ಕಂಪನಿಗಳನ್ನು ಮುಚ್ಚಿ ಹಾಕಲಾಗಿತ್ತು. ನಂತರ ಸ್ವಲ್ಪ ದಿನಗಳ ಕಾಲ ಬೆಳಗಿದ ಬಿಪಿಎಲ್ ಹಾಗೂ ಯುಬಿ ಕಂಪನಿಗಳು ಬೆಂಗಳೂರಿನ ಹೆಸರನ್ನು ಉಳಿಸಿಕೊಂಡಿದ್ದವು. 90ರ ದಶಕದ ಕೊನೆಯ ವರ್ಷಗಳಲ್ಲಿ ಹಾಗೂ 2000ರ ಮೊದಲನೇ ದಶಕದಲ್ಲಿ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿಗಳು ಬೃಹದಾಕಾರವಾಗಿ ಬೆಳೆಯಲಾರಂಭಿಸಿದವು. ಈ ಒಂದೊಂದೂ ಕಂಪನಿಗಳಲ್ಲಿ ಒಂದರಿಂದ ಎರಡು ಲಕ್ಷ ಜನ ಉದ್ಯೋಗ ಪಡೆದಿದ್ದರು. ಇನ್‍ಫೋಸಿಸ್, ವಿಪ್ರೋ, ಹೆಚ್‍ಪಿ, ಓರಕಲ್ ಮತ್ತಿತರ ಕಂಪನಿಗಳ ಕೇಂದ್ರ ಸ್ಥಾನವೂ ಬೆಂಗಳೂರಿನಲ್ಲಿಯೇ ಇತ್ತು. ಜೊತೆಗೆ, ಟಿಸಿಎಸ್, ಹೆಚ್‍ಸಿಎಲ್ ಹಾಗೂ ಕಾಗ್ನಿಸೆಂಟ್ ಕಂಪನಿಗಳು ಕೂಡಾ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಅಸ್ತಿತ್ವವನ್ನು ಪಡೆದಿದ್ದವು. ಈ ಸಾಫ್ಟ್‌‍ವೇರ್ ಸೇವೆಯ ಕಂಪನಿಗಳು ಲಕ್ಷಾಂತರ ಕೋಟಿಗಳ ಲಾಭ ಹಾಗೂ ಸಾವಿರಾರು ಕೋಟಿಗಳಲ್ಲಿ ತೆರಿಗೆ ಕಟ್ಟುತ್ತಾ ಅತಿಕ್ಷಿಪ್ರವಾಗಿ ಘಟಿಸಿದ ಬೆಂಗಳೂರಿನ ಬೆಳವಣಿಗೆಗೆ ಕಾರಣವಾದವು. ಒಟ್ಟಾರೆಯಾಗಿ ಬೆಂಗಳೂರು ಸಿಲಿಕಾನ್ ವ್ಯಾಲಿಯೆಂಬ ಹೆಸರು ಪಡೆದು ನಗರದ ಆರ್ಥಿಕ ಪರಿಸ್ಥಿತಿಯನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದುಹೋಗಿತ್ತು.

2018ರ ಇಸವಿಯಲ್ಲಿ ಇಂದು ಬೆಂಗಳೂರಿನ ಅತಿದೊಡ್ಡ ಕಂಪನಿಗಳು ಯಾವುವು ಎಂದು ಯಾರಾದರೂ ಕೇಳಿದರೆ ಈ ಮೇಲೆ ಹೇಳಿದ ಕಂಪನಿಗಳ ಹೆಸರನ್ನು ಯಾರೂ ಹೇಳದೇ ಹೋದರೆ ಆಶ್ಚರ್ಯಪಡಬೇಕಿಲ್ಲ. ಬದಲಿಗೆ, ಫ್ಲಿಪ್‍ಕಾರ್ಟ್ ಹಾಗೂ ಅಮೆಝಾನ್ ಇಂಡಿಯಾಗಳು ಬೆಂಗಳೂರಿನ ಅತಿದೊಡ್ಡ ಕಂಪನಿಗಳೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ಈ ಎರಡೂ ದೇಶದ ಅತಿದೊಡ್ಡ ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗಳ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿದೆ. ಈ ಎರಡೂ ಕಂಪನಿಗಳ ಹುಟ್ಟು ಬೆಂಗಳೂರಿನಲ್ಲಿಯೇ ಆಗಿದೆ. ಅಮೆಝಾನ್ ಕಂಪನಿಯು ಮೂಲತಃ ಅಮೆರಿಕ ಸ್ವಾಮ್ಯದ ಭಾರತೀಯ ಅಂಗಸಂಸ್ಥೆಯಾಗಿದ್ದರೂ ಈ ಕಂಪನಿಯ ಶೇರುದಾರರಲ್ಲಿ ಎನ್.ಆರ್.ನಾರಾಯಣಮೂರ್ತಿ ಮತ್ತಿತರರಿದ್ದಾರೆ.

ಫ್ಲಿಪ್‍ಕಾರ್ಟ್‍ನ ಕಥೆ ಇನ್ನೂ ರೋಚಕವಾಗಿದೆ. ವ್ಯಾಪಾರಿ ಕುಟುಂಬದ ಹಿನ್ನೆಲೆಯ ಸಚಿನ್ ಬನ್ಸಲ್ ಹಾಗೂ ಬಿನ್ನಿ ಬನ್ಸಲ್ ಎಂಬ ಇಬ್ಬರು ಮಾಜಿ ಅಮೆಝಾನ್ ಉದ್ಯೋಗಿಗಳು 2007ರಲ್ಲಿ ಪ್ರಾರಂಭಿಸಿದ ಈ ಸಂಸ್ಥೆ ಮೊದಲು ಅಂತರ್ಜಾಲದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಕಂಪನಿಯಾಗಿತ್ತು. ಮೊದಲ ಎರಡು ಮೂರು ವರ್ಷಗಳಲ್ಲಿಯೇ ಪುಸ್ತಕಗಳ ಜೊತೆಯಲ್ಲಿ ಬಳಕೆದಾರರಿಗೆ ಬೇಕಾದ ಎಲ್ಲ ಸ್ಟೇಷನರಿ ಮತ್ತಿತರ ಸಾಮಾನುಗಳನ್ನು ಪೂರೈಕೆ ಮಾಡುವುದರೊಂದಿಗೆ ತನ್ನ ಜಾಲವನ್ನು ಗಣನೀಯವಾಗಿ ವಿಸ್ತರಿಸಿಕೊಂಡಿತ್ತು. ನಂತರದಲ್ಲಿ ಅಮೆಝಾನ್ ಮಾದರಿಯಲ್ಲಿ ಬಳಕೆದಾರರಿಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಸರಬರಾಜು ಮಾಡುವ ಒನ್‍ಸ್ಟಾಪ್ ಆನ್‍ಲೈನ್ ಅಂಗಡಿಯಾಗಿ ತನ್ನನ್ನು ತಾನು ಮಾರ್ಪಾಡು ಮಾಡಿಕೊಂಡಿತ್ತು. ಆದರೆ ವಹಿವಾಟಿನ ಮೊದಲ ವರ್ಷಗಳಲ್ಲಿ ಬಳಕೆದಾರರನ್ನು ಆನ್ ಲೈನ್ ಅಂಗಡಿಗೆ ಆಕರ್ಷಿಸಲು ಫ್ಲಿಪ್‍ಕಾರ್ಟ್ ಎಲ್ಲಾ ಸಾಮಾನುಗಳ ಮೇಲೆ ರಿಯಾಯಿತಿ ನೀಡ ಬೇಕಾಗುತ್ತಿತ್ತು. ಕೆಲವೊಮ್ಮೆ ತಾನು ಖರೀ ದಿಸಿದ ದರ ಕ್ಕಿಂತಲೂ ಕಡಿಮೆ ದರದಲ್ಲಿ ಸಾಮಾನು ಮಾರಾಟ ಮಾಡಿ ನೂರಾರು ಕೋಟಿ ರೂಗಳ ನಷ್ಟ ಮಾಡಿಕೊಂಡಿತ್ತು. 2014—15ರಲ್ಲಿ ರೂ.10,240 ಕೋಟಿ ವಹಿವಾಟಿನ ಮೇಲೆ ರೂ.2,583 ಕೋಟಿ ರೂಗಳ ನಷ್ಟವಾಗಿದ್ದರೆ, 2016—17ರಲ್ಲಿ ರೂ.19,854 ಕೋಟಿಗಳ ವಹಿವಾಟಿನ ಮೇಲೆ ರೂ.8,771 ಕೋಟಿ ನಷ್ಟ ಮಾಡಿಕೊಂಡಿತ್ತು.

ಹಾಗಾದರೆ ಈ ನಷ್ಟವನ್ನು ಯಾರು ಭರಿಸುತ್ತಾರೆನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಫ್ಲಿಪ್‍ಕಾರ್ಟ್ ಕಂಪನಿಯು ಬೆಳೆಯುತ್ತಾ ಹೋದಂತೆ ಅದರ ಶೇರುಗಳ ಮೌಲ್ಯವೂ ಏರುತ್ತಾ ಹೋಗಿದೆ. ಏರಿದ ಶೇರುಗಳ ಮೌಲ್ಯವನ್ನು ಆಧರಿಸಿ ಕಂಪನಿಯು ಹೊಸ ಹೂಡಿಕೆದಾರರಿಗೆ ಹೆಚ್ಚಿನ ಬೆಲೆಯಲ್ಲಿ ತನ್ನ ಶೇರುಗಳನ್ನು ಹಂಚಿಕೆ ಮಾಡಿದೆ. ಇದರಂತೆ ಮೊದಲು ಹಣ ಹೂಡಿದ್ದ ಅಕ್ಸೆಲ್ ಪಾರ್ಟ್‍ನರ್ಸ್ ಹಾಗೂ ಟೈಗರ್ ಕ್ಯಾಪಿಟಲ್ ಮುಂತಾದ ‘ಏಂಜೆಲ್’ ಹೂಡಿಕೆದಾರರು ಬಂಡವಾಳದ ನೂರಾರು ಪಟ್ಟು ಲಾಭ ಪಡೆದು ಕಂಪನಿಯಿಂದ ಹೊರಬಿದ್ದಿದ್ದರು. ನಂತರದಲ್ಲಿ ಜಪಾನಿನ ‘ಸಾಫ್ಟ್ ಬ್ಯಾಂಕ್’ ಕೂಡಾ ತನ್ನ ಹೂಡಿಕೆಯ ಬಿಲಿಯಾಂತರ ಹಣದ ಮೇಲೆ ಕೇವಲ ಆರೆಂಟು ತಿಂಗಳಲ್ಲಿ ಒಂದೂವರೆ ಪಟ್ಟು ಲಾಭ ಗಳಿಸಿತು. ಫ್ಲಿಪ್‍ಕಾರ್ಟ್ ಕಂಪನಿಗೆ ಹೊಸ ಹೂಡಿಕೆದಾರರಿಂದ ಕೆಲವು ಬಿಲಿಯಾಂತರ ಡಾಲರ್‍ಗಳ ಹೂಡಿಕೆ ದಕ್ಕಿತ್ತು.

ಈ ಮಧ್ಯೆ ಅಮೆರಿಕೆಯ ದೈತ್ಯ ‘ವಾಲ್‍ಮಾರ್ಟ್’ ಭಾರತದ ಮಾರುಕಟ್ಟೆಯ ಪ್ರವೇಶಕ್ಕೆ ಕಾದು ಕುಳಿತಿತ್ತು. ಮೆಟ್ರೋ ‘ಕ್ಯಾಶ್ ಅಂಡ್ ಕ್ಯಾರಿ’ ಮಾದರಿಯಲ್ಲಿ ಸಗಟು ವ್ಯಾಪಾರ ಮಳಿಗೆ ತೆರೆದಿದ್ದರೂ ಭಾರತದಲ್ಲಿನ ಚಿಲ್ಲರೆ ಮಾರಾಟದ ಆಕರ್ಷಣೆ ವಾಲ್‍ಮಾರ್ಟ್‍ನ್ನು ಬಿಟ್ಟಿರಲಿಲ್ಲ. ಇದೀಗ 16 ಬಿಲಿಯನ್ ಅಮೆರಿಕನ್ ಡಾಲರ್ ನೀಡಿ ಫ್ಲಿಪ್‍ಕಾರ್ಟ್‍ನ ಶೇಕಡಾ 77ರಷ್ಟು ಶೇರುಗಳನ್ನು ವಾಲ್‍ಮಾರ್ಟ್ ಖರೀದಿಸಿದೆ. ಇದರಿಂದ ಫ್ಲಿಪ್‍ಕಾರ್ಟ್ ಉದ್ಯಮವನ್ನು 21 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ರೂ.1.38 ಲಕ್ಷ ಕೋಟಿ) ಮೌಲ್ಯದ್ದೆಂದು ಒಪ್ಪಲಾಗಿದೆ. ವಾಲ್‍ಮಾರ್ಟ್ ತನ್ನೊಂದಿಗೆ ಗೂಗಲ್ ಮಾಲೀಕ ಕಂಪನಿ ಆಲ್ಫಬೆಟ್ ಲಿಮಿಟೆಡ್ ಅನ್ನೂ ಹೂಡಿಕೆದಾರನಾಗಿ ತಂದಿದೆ. ಈ ವಾಲ್‍ಮಾರ್ಟ್+ಗೂಗಲ್ ಜೋಡಿ ಫ್ಲಿಪ್‍ಕಾರ್ಟ್‍ನ ಭಾರತದ ವ್ಯವಹಾರಕ್ಕೆ ಸದ್ಯಕ್ಕೆ 2 ಬಿಲಿಯನ್ ಅಮೆರಿಕನ್ ಡಾಲರ್ ಹಣ ನೀಡಿ ಅಮೆಝಾನ್‍ನೊಂದಿಗಿನ ಸ್ಪರ್ಧೆಗೆ ಕಳೆಕಟ್ಟಿದೆ.

ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಐದಾರು ಕೋಟಿ ರೂಗಳ ಬಂಡವಾಳ ಹೂಡಿಕೆಯಿಂದ ಶುರುವಾದ ಫ್ಲಿಪ್‍ಕಾರ್ಟ್ ಇಂದು ರೂ.1.38 ಲಕ್ಷ ಕೋಟಿ ರೂಗಳ ಮೌಲ್ಯದ ಉದ್ಯಮವಾಗಿದೆ. ಬೆಂಗಳೂರಿನ ಸ್ಟಾರ್ಟ್‍ಅಪ್ ಹಾಗೂ ಹೂಡಿಕೆಯ ವಾತಾವರಣಕ್ಕೆ ಗರಿ ಮೂಡಿಸಿದೆ. ಈ ಕಂಪನಿಯ ಮೂಲ ಸ್ಥಾಪಕ ಸಚಿನ್ ಬನ್ಸಲ್ ಈಗಾಗಲೇ ಕಂಪನಿಯಲ್ಲಿ ತನ್ನ ಶೇಕಡಾ 5.5 ಶೇರುಗಳನ್ನು ಮಾರಿ ರೂ.7,000 ಕೋಟಿಗಳನ್ನು ತಮ್ಮ ಬ್ಯಾಂಕಿನ ಖಾತೆಗೆ ತುಂಬಿಸಿಕೊಂಡಿದ್ದಾರೆ. ಫ್ಲಿಪ್‍ಕಾರ್ಟಿನ ಹಲವಾರು ಉದ್ಯೋಗಿಗಳು ತಮಗೆ ನೀಡಿದ್ದ ಬಳುವಳಿ ಶೇರುಗಳನ್ನು ಮಾರಿ ಕೋಟ್ಯಾಧಿಪತಿಗಳಾಗಿದ್ದಾರೆ. ಫ್ಲಿಪ್‍ಕಾರ್ಟಿನ ಕಥೆ ಬೆಂಗಳೂರಿನ ಸಾಫ್ಟ್‍ವೇರ್ ವಲಯದಲ್ಲಿ ಹೊಸ ದಂತಕಥೆಯಾಗಿದೆ.

ವಾಲ್‍ಮಾರ್ಟ್ ಕಂಪನಿಯು ಭಾರತದ ಸಣ್ಣ ಕಿರಾಣಿ ಅಂಗಡಿಗಳಿಗೂ ಕೂಡ ಅತ್ಯಂತ ಕಡಿಮೆ ದರದಲ್ಲಿ ಸಗಟು ಸಮಾನು ಪೂರೈಕೆ ಮಾಡುವುದಾಗಿ ಹೇಳಿಕೊಂಡಿದೆ. ಮೇಲಾಗಿ ತನ್ನ ಶೀತಲ ಕೇಂದ್ರಗಳ ಜಾಲದಿಂದ ಭಾರತದ ರೈತರಿಂದ ನೇರವಾಗಿ ಹಣ್ಣು—ತರಕಾರಿ ಖರೀದಿಸಿ ದೇಶಿ ಹಾಗೂ ವಿದೇಶಿ ಮಾರುಕಟ್ಟೆಗಳೆರಡರಲ್ಲಿಯೂ ಮಾರಾಟ ಮಾಡುವುದಾಗಿ ಹೇಳಿದೆ. ಈ ಮುಖಾಂತರ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳನ್ನು ನಿವಾರಣೆ ಮಾಡಿ ಸಣ್ಣ ರೈತರಿಗೆ ಹೆಚ್ಚಿನ ಬೆಲೆ ನೀಡಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕು ಒದಗಿಸುವುದಾಗಿಯೂ ಹೇಳಿಕೊಂಡಿದೆ. ಅದೇನೇ ಆದರೂ ಭಾರತದ ಗ್ರಾಹಕರಿಗೆ ಮತ್ತೊಮ್ಮೆ ಅಮೆಝಾನ್ ಹಾಗೂ ಫ್ಲಿಪ್‍ಕಾರ್ಟ್‍ಗಳ (ವಾಲ್‍ಮಾರ್ಟ್+ಗೂಗಲ್) ನಡುವಿನ ಕದನದಲ್ಲಿ ಭಾರಿ ರಿಯಾಯಿತಿ ಬೆಲೆ ಸಿಗುವುದರೊಂದಿಗೆ ಸಾಮಾನುಗಳ ಚಿಲ್ಲರೆ ಬೆಲೆ ಶೇಕಡಾ 5ರಿಂದ 10ರಷ್ಟು ಕಡಿಮೆಯಾಗಲಿದೆ. ಇದರಿಂದ ಆಕರ್ಷಿತನಾಗಿ ಇನ್ನು ಕೆಲವೇ ವರ್ಷಗಳಲ್ಲಿ ಬಡಬೋರೇಗೌಡನೂ ತನ್ನೆಲ್ಲಾ ಖರೀದಿಯನ್ನು ತನ್ನ ಮೊಬೈಲ್ ಫೋನ್ ಮುಖಾಂತರ ಅಮೆಝಾನ್ ಅಥವಾ ಫ್ಲಿಪ್‍ಕಾರ್ಟ್‍ನಲ್ಲಿಯೇ ಮಾಡಿದರೆ ಆಶ್ಚರ್ಯಪಡಬೇಕಿಲ್ಲ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018