2nd ಜೂನ್ ೨೦೧೮

ಪೇಟೆಂಟ್ ನೀತಿಯಲ್ಲಿ ಅಮೆರಿಕ ಹಸ್ತಕ್ಷೇಪ

ಮಾಧವ ಐತಾಳ

ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್‍ಮಾರ್ಕ್ ಕಚೇರಿ ಇತ್ತೀಚೆಗೆ ಪೇಟೆಂಟ್ ಕಾಯಿದೆಯ ಫಾರ್ಮ್ 27ನ್ನು ತೆಗೆದು ಹಾಕಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಇದೊಂದು ಒಳಸಂಚು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಕೈಗಾರಿಕಾ ಕಾರ್ಯನೀತಿ ಮತ್ತು ಉತ್ತೇಜನ ಮಂಡಳಿಯಡಿ ಕಾರ್ಯ ನಿರ್ವಹಿಸುವ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್‍ಮಾಕ್ರ್ಸ್‍ನ ಮಹಾ ನಿಯಂತ್ರಕರು ಮಾರ್ಚ್ 1, 2018ರಂದು ಫಾರ್ಮ್ 27ರ ಕುರಿತ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬೇಕೆಂದು ಭಾಗಿದಾರರಲ್ಲಿ ಕೋರಿದ್ದರು. ದೇಶದಲ್ಲಿ ಔಷಧ—ಉತ್ಪನ್ನವೊಂದಕ್ಕೆ ನೀಡಿರುವ ಪೇಟೆಂಟ್ ಏಕಸ್ವಾಮ್ಯ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವ ವಿವರವನ್ನು ಉತ್ಪಾದಕ ನೀಡುವುದನ್ನು ಫಾರ್ಮ್ 27 ಕಡ್ಡಾಯಗೊಳಿಸುತ್ತದೆ. ದೇಶಿ ಉತ್ಪಾದಕರಿಗೆ ಮಾತ್ರ ಅನ್ವಯಿಸುವ ಈ ಷರತ್ತು ಕುರಿತು ಅಮೆರಿಕ ಪ್ರತಿಕ್ರಿಯಿಸುವ ಅಗತ್ಯವೇ ಇರಲಿಲ್ಲ.

ಏನಿದು ಫಾರ್ಮ್ 27 ?

ಭಾರತೀಯ ಪೇಟೆಂಟ್ ಕಾಯಿದೆಯ ವಿಭಾಗ 146ರಡಿ ಬರುವ ಫಾರ್ಮ್ 27ರ ಪ್ರಕಾರ, ಔಷಧ ತಯಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲ ಭಾಗಿದಾರರು ‘ಪೇಟೆಂಟ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ’ ಎಂಬ ವಿವರ ನೀಡಬೇಕು. ಎಂದರೆ, ಪೇಟೆಂಟ್ ಪಡೆದ ಉತ್ಪನ್ನದ ಬೆಲೆ ಎಷ್ಟಿದೆ, ಅದನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆಯೇ ಅಥವಾ ಆಮದು ಮಾಡಿಕೊಳ್ಳಲಾಗುತ್ತಿದೆಯೇ ಮತ್ತು ದೇಶದ ಅಗತ್ಯಗಳನ್ನು ಪೂರೈಸುವಷ್ಟು ಉತ್ಪಾದನೆ ಮಾಡಲಾಗುತ್ತಿದೆಯೇ ಎಂಬ ವಿವರ ನೀಡಬೇಕಾದ್ದು ಕಡ್ಡಾಯ. ಒಂದುವೇಳೆ ಉತ್ಪನ್ನವನ್ನು ವಾಣಿಜ್ಯಿಕ ಮಟ್ಟದಲ್ಲಿ ಸ್ಥಳೀಯವಾಗಿ ಉತ್ಪಾದಿಸದೆ ಇದ್ದಲ್ಲಿ, ಪೇಟೆಂಟ್‍ನ್ನು ವಾಪಸ್ ಪಡೆಯಬಹುದು. ಇಲ್ಲವೇ ಬೇರೆ ವ್ಯಕ್ತಿ—ಸಂಸ್ಥೆಗೆ ‘ಕಡ್ಡಾಯ ಲೈಸೆನ್ಸ್’ ಕೊಟ್ಟು, ಉತ್ಪಾದನೆ ಮಾಡಲು ಹೇಳಬಹುದು.

ಅಮೆರಿಕದ ತಕರಾರು ಏನೆಂದರೆ, ಭಾರತದಲ್ಲಿ ವ್ಯಾಪಾರ ಮಾಡುವಿಕೆ ಸುಲಭಗೊಳಿಸುವುದು, ಅನ್ವೇಷಕ ಪ್ರವೃತ್ತಿಯ ಉತ್ತೇಜನ, ಸ್ಟಾರ್ಟ್‍ಅಪ್ ಇಂಡಿಯಾದಂಥ ಉಪಕ್ರಮಗಳಿಗೆ ಪ್ರೋತ್ಸಾಹ, ದೇಶಿ ಬೌದ್ಧಿಕ ಹಕ್ಕು ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ವ್ಯವಸ್ಥೆಗೆ ಹೊಂದಿಸಲು ಹಾಗೂ ರಾಷ್ಟ್ರೀಯ ಬೌದ್ಧಿಕ ಹಕ್ಕು ಕಾರ್ಯನೀತಿಯನ್ನು ಸೃಷ್ಟಿಸಲು ಫಾರ್ಮ್ 27ರ ಕಡ್ಡಾಯ ಸಲ್ಲಿಕೆಯನ್ನು ತೆಗೆದುಹಾಕಬೇಕು. ಆದರೆ, ತಜ್ಞರು ಹೇಳುವುದೇ ಬೇರೆ. ‘ಅಮೆರಿಕ ಮೊದಲಿನಿಂದಲೂ ದೇಶಿ ಪೇಟೆಂಟ್ ಕಾನೂನನ್ನು ವಿರೋಧಿಸುತ್ತಿದ್ದು, ಇಂಥ ಅವಕಾಶಗಳನ್ನೆಲ್ಲ ಬಳಸಿಕೊಳ್ಳುತ್ತಿದೆ,’

ಚರ್ಚೆಗೆ ನಾಂದಿ ಹೇಗೆ?

ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ಸಂದರ್ಶಕ ಪ್ರೊಫೆಸರ್ ಶಂನದ್ ಬಷೀರ್ ಅವರು ಔಷಧಗಳ ಲಭ್ಯತೆಗೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಗತ್ಯ ಔಷಧಗಳು ಕೈಗೆಟಕುವ ಬೆಲೆಯಲ್ಲಿ, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಬೇಕು ಎನ್ನುವುದು ಅವರ ಕಾಳಜಿ. ಒಂದು ವೇಳೆ ಪೇಟೆಂಟ್ ಪಡೆದ ಔಷಧ/ಯಂತ್ರ/ಸಾಧನ ಸಾಕಷ್ಟು ಪ್ರಮಾಣದಲ್ಲಿ, ಸೂಕ್ತ ದರದಲ್ಲಿ ಲಭ್ಯವಾಗದಿದ್ದಲ್ಲಿ ಬೇರೆ ಕಂಪನಿಗಳಿಗೆ ‘ಕಡ್ಡಾಯ ಲೈಸೆನ್ಸ್’ ನೀಡುವ ಮೂಲಕ ಆ ಉತ್ಪನ್ನದ ತಯಾರಿಕೆಗೆ ವ್ಯಕ್ತಿ—ಸಂಸ್ಥೆಗೆ ಅನುಮತಿ ನೀಡಬೇಕು. ಇದರಿಂದ ಸಾರ್ವಜನಿಕರಿಗೆ ಅಗತ್ಯ ಔಷಧಗಳು ಲಭ್ಯವಾಗಿ, ಅವರ ಹಿತಾಸಕ್ತಿಯನ್ನು ಕಾಯ್ದುಕೊಂಡಂತೆ ಆಗಲಿದೆ ಎನ್ನುವುದು ಶಂನದ್ ಅವರ ಅರ್ಜಿಯ ವಾದ. ನೊವಾರ್ಟಿಸ್‍ನ ಗ್ಲೀವೆಕ್ ವಿವಾದದಲ್ಲೂ ಶಂನದ್ ಪ್ರಮುಖ ಪಾತ್ರ ವಹಿಸಿದ್ದರು.

ಎವರ್‍ಗ್ರೀನಿಂಗ್

ಪೇಟೆಂಟ್ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಸೇರ್ಪಡೆಗೊಳಿಸಿದ ‘ಆ್ಯಂಟಿ ಎವರ್‍ಗ್ರೀನಿಂಗ್ ಪ್ರಾವಿಷನ್’ ಅಂದರೆ, ಸಣ್ಣ ಪುಟ್ಟ ಬದಲಾವಣೆ ಮೂಲಕ ಔಷಧದ ಪೇಟೆಂಟ್—ಲೈಸೆನ್ಸ್ ಅವಧಿಯ ವಿಸ್ತರಣೆ ತಡೆಯುವಿಕೆಯಿಂದ, ಔಷಧ ಕಂಪನಿಗಳು ಕಂಡುಕೊಂಡಿದ್ದ ಕಳ್ಳ ದಾರಿಯೊಂದು ಮುಚ್ಚಿಹೋಯಿತು. ಸೇರ್ಪಡೆಗೊಳಿಸಿದ 3(ಡಿ), 3(ಇ) ಮತ್ತು 3(ಐ) ವಿಭಾಗಗಳು ಹಾಗೂ ನೊವಾರ್ಟಿಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ, ಬ್ರೆಜಿಲ್, ಫಿಲಿಪೈನ್ಸ್, ಅರ್ಜೆಂಟೀನಾ, ದಕ್ಷಿಣ ಆಫ್ರಿಕ ಮತ್ತಿತರ ದೇಶಗಳಿಗೆ ಹೋಲಿಸಿದರೆ, ಔಷಧ ಉತ್ಪಾದನೆ/ಸಂಶೋಧನೆಯಲ್ಲಿ ಭಾರತ ಮುಂದಿದೆ. ಹೀಗಿದ್ದರೂ, ಭಾರತೀಯ ಪೇಟೆಂಟ್ ಕಚೇರಿ ನೀಡುತ್ತಿರುವ ಪೇಟೆಂಟ್‍ಗಳು ದೋಷಪೂರಿತವಾಗಿವೆ.

ಪೇಟೆಂಟ್ ಗಳಿಕೆ ಸರಳವಲ್ಲ

ಔಷಧ/ಉತ್ಪನ್ನ/ಯಂತ್ರವೊಂದರ ಅನ್ವೇಷಣೆ ಮತ್ತು ಅದರ ವಾಣಿಜ್ಯಿಕ ಉತ್ಪಾದನೆ ಸರಳ ವಿಷಯವಲ್ಲ. ಅದಕ್ಕೆ ಅಪಾರ ಬಂಡವಾಳ, ಪರಿಣತ ಮಾನವ ಸಂಪನ್ಮೂಲ ಹಾಗೂ ಸಮಯ ಬೇಕಾಗುತ್ತದೆ. ಅಷ್ಟರ ಬಳಿಕವೂ ಯಶಸ್ಸಿನ ಖಾತ್ರಿ ಇರುವುದಿಲ್ಲ. ಉತ್ಪನ್ನ ಮಾರುಕಟ್ಟೆಗೆ ಬಂದ ತಕ್ಷಣ ಅದನ್ನು ಯಾರಾದರೂ ನಕಲು ಮಾಡಿದಲ್ಲಿ, ಮೂಲ ಉತ್ಪಾದಕ ನೆಲ ಕಚ್ಚಬೇಕಾಗುತ್ತದೆ. ಅನ್ವೇಷಕ ಪ್ರವೃತ್ತಿಯನ್ನು ಪ್ರೋತ್ಸಾಹಿಸಲು, ನಕಲು ತಡೆಯಲು ಮತ್ತು ಹೂಡಿಕೆ ವಾಪಸ್ ಖಾತ್ರಿಗೊಳಿಸಲು ಪೇಟೆಂಟ್ ನೀಡಲಾಗುತ್ತದೆ. ಪೇಟೆಂಟ್ ಕಾಯಿದೆಯ ವಿಭಾಗ 83, ‘ಪೇಟೆಂಟ್ ಉತ್ಪನ್ನದ ಆಮದಿಗೆ ಸೀಮಿತವಾಗಬಾರದು, ಕೊರತೆಗೆ ಕಾರಣವಾಗಬಾರದು. ಪೇಟೆಂಟ್‍ದಾರನಿಗೆ ದೇಶಿ ಅಗತ್ಯಗಳನ್ನು ಪೂರೈಸಲು ಆಗದಿದ್ದಲ್ಲಿ, ಬೇರೆಯವರಿಗೆ ಕಡ್ಡಾಯ ಲೈಸೆನ್ಸ್ ನೀಡಲು ಯಾವುದೇ ಅಡ್ಡಿ ಇರುವುದಿಲ್ಲ’ ಎನ್ನುತ್ತದೆ.

ಪೇಟೆಂಟ್ ಎಂದರೆ...

ಒಂದು ಉತ್ಪನ್ನ/ಅನ್ವೇಷಣೆಗೆ ಅನ್ವೇಷಕ/ಕಂಪನಿಗೆ ನೀಡುವ ಪರಮಾಧಿಕಾರ. ಪೇಟೆಂಟ್ ಪಡೆದಾತ ಉತ್ಪನ್ನವನ್ನು ಬೇರೆಯವರು ಉತ್ಪಾದಿಸದಂತೆ, ಮಾರದಂತೆ ಮತ್ತು ಬಳಸದಂತೆ ತಡೆಯಬಹುದು. ಪೇಟೆಂಟ್‍ನ್ನು ನಿರ್ದಿಷ್ಟ ಅವಧಿಗೆ ನೀಡಲಾಗುತ್ತದೆ. ಇಂಥ ಉತ್ಪನ್ನ—ಅನ್ವೇಷಣೆ ಹೊಸದಾಗಿರಬೇಕು(ಬೇರೆಡೆ ಲಭ್ಯವಿರಬಾರದು), ಸ್ಫುಟ(ವ್ಯಕ್ತ)ವಾಗಿರಬೇಕು(ಆ ಕ್ಷೇತ್ರದ ಕುಶಲ ವ್ಯಕ್ತಿಗೆ ಗೊತ್ತಿರಬಾರದು) ಮತ್ತು ಉದ್ಯಮದಲ್ಲಿ ಬಳಸುವಂತಿರಬೇಕು(ಸಮಾಜಕ್ಕೆ ಉಪಯುಕ್ತವಾಗಿರಬೇಕು).

ಭಾರತವು ಟ್ರಿಪ್ಸ್(ವ್ಯಾಪಾರಕ್ಕೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳು) ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ, ಅಂತಾರಾಷ್ಟ್ರೀಯ ಕಟ್ಟುಪಾಡುಗಳಿಗೆ ಬದ್ಧವಾಗಿರಬೇಕಾಗುತ್ತದೆ. ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಒ) ನವೆಂಬರ್ 14, 2001ರಂದು ಅಂಗೀಕರಿಸಿರುವ ದೋಹಾ ಘೋಷಣೆ ಪ್ರಕಾರ, ಟ್ರಿಪ್ಸ್ ಸದಸ್ಯರಾಷ್ಟ್ರಗಳು ನಾಗರಿಕರಿಗೆ ಅಗತ್ಯ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಲು ಪೇಟೆಂಟ್ ಹಕ್ಕುಗಳನ್ನು ಆಚೀಚೆ ಮಾಡಲು ಅವಕಾಶವಿದೆ. ಈ ಘೋಷನೆಯ ಖಂಡ 5(2), ಕಡ್ಡಾಯ ಲೈಸೆನ್ಸ್ ನೀಡಿಕೆಯನ್ನು ಹಾಗೂ ಇದಕ್ಕೆ ಯಾವ ಮಾನದಂಡ ಅನುಸರಿಸಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕನ್ನು ಸದಸ್ಯರಾಷ್ಟ್ರಗಳಿಗೆ ನೀಡುತ್ತದೆ. ಪೇಟೆಂಟ್‍ದಾರ ದೇಶದ ಅಗತ್ಯಗಳನ್ನು ಪೂರೈಸದಿದ್ದಲ್ಲಿ ಮತ್ತು ಹೆಚ್ಚು ದರ ವಿಧಿಸಿದಲ್ಲಿ ಸಾರ್ವಜನಿಕ ಆರೋಗ್ಯದ ಸಂರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ದೋಹಾ ಒಪ್ಪಂದ ಅನುಮತಿ ನೀಡುತ್ತದೆ. ಉತ್ಪನ್ನವೊಂದು ಸ್ಥಳೀಯವಾಗಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಮಾಹಿತಿ ಪಡೆಯುವಿಕೆಯನ್ನು ವಿಶ್ವ ವ್ಯಾಪಾರ ಸಂಘಟನೆ ಕೂಡ ನಿರ್ಬಂಧಿಸುವುದಿಲ್ಲ. ಅಲ್ಲದೆ, ಭಾರತೀಯ ಪೇಟೆಂಟ್ ಕಾಯಿದೆಯ ವಿಭಾಗ 146 ಕೊಡಮಾಡಿದ ಅಧಿಕಾರದ ಪ್ರಕಾರ, ಪೇಟೆಂಟ್ ನಿಯಂತ್ರಕರು ಪೇಟೆಂಟ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ವಿವರ ಕೋರಬಹುದು. ಮತ್ತು ಅಂಥ ವಿವರವನ್ನು ಬಹಿರಂಗಗೊಳಿಸಬಹುದು.

ಭಾರತದಂಥ ದೇಶಗಳು ಟ್ರಿಪ್ಸ್ ಒಪ್ಪಂದಕ್ಕೆ ಸಹಿ ಹಾಕಿರುವುದು ತಂತ್ರಜ್ಞಾನ ವರ್ಗಾವಣೆಯ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು, ಜೀವರಕ್ಷಕ ಔಷಧಗಳಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಉತ್ತಮಗೊಳಿಸಿಕೊಳ್ಳಲು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು. ತಂತ್ರಜ್ಞಾನದ ಶೋಧನೆಗೆ ಹೆಚ್ಚು ಸಮಯ, ಹಣ ವ್ಯಯವಾಗುತ್ತದೆ. ಇದನ್ನು ಬಡ ದೇಶಗಳು ಭರಿಸಲಾರವು. ಪೇಟೆಂಟ್‍ದಾರರು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುವುದರಲ್ಲಿ ಯಾವುದೇ ವಿವೇಕ ಇಲ್ಲ. ಇದರಿಂದ ಮೂಲಸೌಕರ್ಯ ಅಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಸೃಜನಶೀಲತೆಗೆ ಧಕ್ಕೆ ಬರಲಿದೆ. ಹೀಗಾಗಿ, ತಂತ್ರಜ್ಞಾನದ ಉನ್ನತೀಕರಣ, ಅನ್ವೇಷಣೆಗೆ ಉತ್ತೇಜನ ಹಾಗೂ ವಿಜ್ಞಾನ ತಂತ್ರಜ್ಞಾನದ ಮುಂದೊತ್ತುವಿಕೆಗೆ ಫಾರ್ಮ್ 27 ಅಗತ್ಯವಿದೆ. ತಜ್ಞರ ಪ್ರಕಾರ, ಫಾರ್ಮ್ 27ರಲ್ಲಿ ಬಹುಮುಖ್ಯ ವಿವರಣೆಗಳು ಇಲ್ಲ. ಆದ್ದರಿಂದ, ಎಲ್ಲ ಭಾಗಿದಾರರ ಹಿತಾಸಕ್ತಿಗಳನ್ನು ಕಾಯುವಂತೆ ಫಾರ್ಮ್ 27ನ್ನು ಹಾಗೂ ಪೇಟೆಂಟ್‍ದಾರನಿಗೆ ವಿಧಿಸಿರುವ ಷರತ್ತುಗಳನ್ನು ಪರಿಷ್ಕರಿಸಬೇಕಿದೆ. ಈ ಷರತ್ತನ್ನು ಇನ್ನಷ್ಟು ಬಿಗಿಗೊಳಿಸಿದಲ್ಲಿ, ಪ್ರಬಲ ರಾಷ್ಟ್ರಗಳ ಮೂಗು ತೂರಿಸುವಿಕೆಯನ್ನು ತಡೆಯಬಹುದು.

ನೊವಾರ್ಟಿಸ್‍ಗೆ ಲತ್ತೆ

ಭಾರತ ಮೊದಲು ಉತ್ಪನ್ನಗಳಿಗೆ ಪೇಟೆಂಟ್ ಕೊಡುತ್ತಿರಲಿಲ್ಲ. 1993ರಲ್ಲಿ ನೊವಾರ್ಟಿಸ್ ಕಂಪನಿಯು ಕ್ರಾನಿಕ್ ಮೈಲಾಯ್ಡ್ ಲ್ಯುಕೇಮಿಯಾ(ಅಸ್ಥಿಮಜ್ಜೆಯಲ್ಲಿ ಆರಂಭವಾಗುವ ರಕ್ತದ ಕ್ಯಾನ್ಸರ್)ಗೆ ಕೊಡುವ ಔಷಧ ಗ್ಲೀವೆಕ್(ಇಮಾಟಿನಿಬ್ ಮಿಸೈಲೇಟ್)ನ ಪೇಟೆಂಟ್‍ಗೆ ಅರ್ಜಿ ಸಲ್ಲಿಸಿತ್ತು. ಟ್ರಿಪ್ಸ್(ಟ್ರೇಡ್ ರಿಲೇಟೆಡ್ ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್) ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, 2005ರಲ್ಲಿ ಪೇಟೆಂಟ್ ಕಾನೂನಿನಲ್ಲಿ ತಿದ್ದುಪಡಿ ಆಯಿತು. ಆನಂತರ ಹಲವು ನಿಬಂಧನೆಗಳನ್ನು ವಿಧಿಸಿ, ಉತ್ಪನ್ನ ಪೇಟೆಂಟ್ ನೀಡಲಾಗುತ್ತಿತ್ತು. ಹೀಗಾಗಿ, ನೊವಾರ್ಟಿಸ್‍ನ ಅರ್ಜಿಯನ್ನು ‘ಮೇಲ್‍ಬಾಕ್ಸ್’ ನಲ್ಲಿ ಇಡಲಾಗಿತ್ತು. ನವೆಂಬರ್ 2003ರಲ್ಲಿ ನೊವಾರ್ಟಿಸ್ ಗ್ಲೀವೆಕ್‍ನ ಇಎಂಆರ್(ಎಕ್ಸ್‍ಕ್ಲೂಸಿವ್ ಮಾಕೆಂಟಿಂಗ್ ರೈಟ್ಸ್) ಪಡೆದುಕೊಂಡು, ಇಮಾಟಿನಿಬ್‍ನ್ನು ಬೇರೆ ಹೆಸರಿನಲ್ಲಿ ಮಾರುತ್ತಿದ್ದ ಕಂಪನಿಗಳ ಮೇಲೆ ನಿರ್ಬಂಧ ಹೇರಿತು.

ನೊವಾರ್ಟಿಸ್‍ನ ಗ್ಲೀವೆಕ್ ಬೆಲೆ ಮಾಸಿಕ 2,666 ಡಾಲರ್ ಇದ್ದರೆ, ದೇಶಿ ಕಂಪನಿಗಳ ಜನೆರಿಕ್ ಔಷಧದ ಬೆಲೆ 177 ರಿಂದ 266 ಡಾಲರ್ ಇತ್ತು! ನೊವಾರ್ಟಿಸ್‍ನ ಪೇಟೆಂಟ್‍ನ್ನು ದೇಶಿ ಕಂಪನಿಗಳು ಪ್ರಶ್ನಿಸಿದವು. ಭಾರತೀಯ ಪೇಟೆಂಟ್ ಕಚೇರಿ ಮತ್ತು ಮೇಲ್ಮನವಿ ಪ್ರಾಧಿಕಾರದ ತೀರ್ಪನ್ನು ನೊರ್ವಾಟಿಸ್ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿತು. ಗ್ಲೀವೆಕ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಉತ್ಪನ್ನದ ಬೇರೆ ರೂಪ ಎಂದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು. ಇದೊಂದು ಕ್ರಾಂತಿಕಾರಕ ತೀರ್ಪು.

ಒಂದು ವೇಳೆ ನೊವಾರ್ಟಿಸ್ ಗೆಲುವು ಸಾಧಿಸಿದ್ದರೆ, ಇಮಾಟಿನಿಬ್‍ನ್ನು ಬೇರೆ ಯಾವುದೇ ಕಂಪನಿಗಳು ಮಾರುವಂತಿರಲಿಲ್ಲ. ಮಾರಬೇಕಿದ್ದರೂ, ನೊವಾರ್ಟಿಸ್‍ನ ಅನುಮತಿ ಪಡೆದುಕೊಂಡು, ಕಂಪನಿಗೆ ರಾಜಧನ ನೀಡಬೇಕಾಗಿ ಬರುತ್ತಿತ್ತು. ರೋಗಿಗಳು ಔಷಧಕ್ಕಾಗಿ ಹಣದ ಹೊಳೆ ಹರಿಸಬೇಕಾಗಿ ಬರುತ್ತಿತ್ತು. ಅಷ್ಟಲ್ಲದೆ, ಬಹುರಾಷ್ಟ್ರೀಯ ಕಂಪನಿಗಳು ಈ ತೀರ್ಪಿನ ನೆಪದಲ್ಲಿ ತಮ್ಮ ಹಿಡಿತ ಬಿಗಿಗೊಳಿಸುತ್ತಿದ್ದವು.

ಭಾರತೀಯ ಔಷಧ ಉತ್ಪಾದನೆ ಕ್ಷೇತ್ರವು ಜಾಗತಿಕವಾಗಿ ಮೂರನೇ ಸ್ಥಾನ ಹಾಗೂ ಮೌಲ್ಯದ ಲೆಕ್ಕದಲ್ಲಿ 14ನೇ ಸ್ಥಾನವನ್ನು ಪಡೆದಿದೆ.

ಒಟ್ಟು ವಹಿವಾಟು 21.04 ಶತಕೋಟಿ ಡಾಲರ್. ಈ ಅಭೂತಪೂರ್ವ ಬೆಳವಣಿಗೆ ಒಂದೇ ದಿನದಲ್ಲಿ ಆದದ್ದಲ್ಲ. ಔಷಧ ಉದ್ಯಮಕ್ಕೆ ಎದುರಾಗುವ ಅಡೆತಡೆಗಳನ್ನು ನಿಷ್ಕರುಣೆಯಿಂದ ನಿವಾರಿಸಬೇಕಿದೆ.

ಅಮೆರಿಕದ ದಾರಿ

‘ಅಮೆರಿಕ ಮೊದಲು’ ನೀತಿ ಮೂಲಕ ಆ ದೇಶ ಅನ್ವೇಷಣೆ—ಉದ್ಯಮವನ್ನು ಕಾಯ್ದುಕೊಂಡಿದೆ. ಆಮದು ಉಕ್ಕಿನ ಮೇಲೆ ಶೇ.25 ಸುಂಕ ಹೇರುತ್ತದೆ. ಉಕ್ಕು—ಅಲ್ಯುಮಿನಿಯಂನ ಆಮದು ತಡೆಗೆ ಸುಂಕ ಹೇರಲು ಗ್ಯಾಟ್‍ನ ವಿಧಿ 21 ನೀಡಿರುವ ಅವಕಾಶವನ್ನು ಬಳಸಿಕೊಂಡಿದೆ.

ಭಾರತ ಇದೇ ಷರತ್ತನ್ನು ಬಳಸಿಕೊಂಡು, ಅಮೆರಿಕದ ಕೈತಿರುಚುವಿಕೆ ಯನ್ನು ತಡೆಯಬೇಕಿದೆ. ಫಾರ್ಮ್ 27ಕ್ಕೆ ತಿದ್ದುಪಡಿ ತಂದು, ಇಂಥ ಏಕಪಕ್ಷೀಯ ನಿಲುವುಗಳಿಗೆ ಪ್ರತ್ಯುತ್ತರ ನೀಡಬಹುದಾಗಿದೆ.

ಸಿಪ್ಲಾದ ಅಗ್ಗಳಿಕೆ

1935ರಲ್ಲಿ ಡಾ.ಕೆ.ಎ.ಹಮೀದ್ ಅವರು ಆರಂಭಿಸಿದ ಕಂಪನಿ. ಅವರ ಪುತ್ರ ಯೂಸುಫ್ ಹಮೀದ್ ಕಂಪನಿಯ ಮುಖ್ಯಸ್ಥರಾಗಿದ್ದಾಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಏಡ್ಸ್ ರೋಗಿಗಳಿಗೆ ಆ್ಯಂಟಿರೆಟ್ರೋವೈರಲ್ ಔಷಧ(ಎಆರ್‍ಟಿ)ಗಳನ್ನು ಪೂರೈಸುವ ಮೂಲಕ ಲಕ್ಷಾಂತರ ಜನರ ಜೀವ ಕಾಯ್ದರು. ಈ ಜನರಿಕ್ ಔಷಧಗಳ ಬೆಲೆ ಅತ್ಯಂತ ಕನಿಷ್ಠ ಇತ್ತು(ವಾರ್ಷಿಕ 350 ಡಾಲರ್). ಇದರಿಂದ ಬಡ ರೋಗಿಗಳಿಂದ ಹಣ ಹೀರುತ್ತಿದ್ದ ಅಮೆರಿಕ ಇನ್ನಿತರ ದೇಶಗಳ ಕಣ್ಣು ಕೆಂಪಗಾಯಿತು.

ದಿನಕಳೆದಂತೆ ಹೊಸ ಔಷಧಗಳ ಅಭಿವೃದ್ಧಿ ಕಠಿಣವಾಗುತ್ತಿದೆ. ಹೀಗಾಗಿ, ಕಂಪನಿಗಳು ಪೇಟೆಂಟ್ ಏಕಸ್ವಾಮ್ಯ ಮತ್ತು ಎವರ್‍ಗ್ರೀನಿಂಗ್ ಮೂಲಕ ಹಿಡಿತ ಮುಂದುವರಿಸಲು ಹೆಣಗುತ್ತಿದ್ದು, ಇದು ಜನಾರೋಗ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿಕರ. ದೇಶದ ಸ್ವಾಯತ್ತೆ ಕಂಪನಿಗಳ ಲಾಭಕ್ಕಿಂತ ಪರಮೋಚ್ಚವಾದುದು. ಅಂತೆಯೇ, ವ್ಯಾಪಾರ ಒಪ್ಪಂದಗಳು ಕೂಡ ದೇಶಕ್ಕಿಂತ ದೊಡ್ಡದಲ್ಲ.

ಸಂವಿಧಾನದ ವಿಧಿ 21ರಡಿ ನಾಗರಿಕರ ರಕ್ಷಣೆ ಸರ್ಕಾರದ ಹೊಣೆ. ಔಷಧವೊಂದರ ಪೇಟೆಂಟ್ ಪಡೆದವರ ರಕ್ಷಣೆಗಿಂತ ಪ್ರಜೆಗಳ ರಕ್ಷಣೆ ಸರ್ಕಾರಕ್ಕೆ ಮುಖ್ಯವಾಗಬೇಕು. ಪೇಟೆಂಟ್‍ದಾರರು ತಮ್ಮ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಂದರೆ, ಪೇಟೆಂಟ್‍ಗಳು ಅನ್ವೇಷಣೆಯನ್ನು ಉತ್ತೇಜಿಸುವ ಜತೆಜತೆಗೆ ತಂತ್ರಜ್ಞಾನವನ್ನು ಸಾಮಾಜಿಕ—ಆರ್ಥಿಕ ಕಲ್ಯಾಣಕ್ಕಾಗಿ ಬಳಸಬೇಕು. ಜನತೆಯ ಮತ್ತು ಪೇಟೆಂಟ್‍ದಾರನ ಹಿತಾಸಕ್ತಿಯನ್ನು ಸಮತೋಲ ಗೊಳಿಸಬೇಕಾಗುತ್ತದೆ. ಅಮೆರಿಕ ತನ್ನ ಉದ್ಯಮ—ಅನ್ವೇಷಕರನ್ನು ರಕ್ಷಿಸಿಕೊಳ್ಳಲು ಬಳಸಿದ ಒಳದಾರಿಗಳನ್ನು ಹಾಗೂ ಡಬ್ಲ್ಯುಟಿಒ, ಟ್ರಿಪ್ಸ್ ಮತ್ತು ದೋಹಾ ಘೋಷಣೆಯಲ್ಲಿ ಜನಾರೋಗ್ಯ ಮತ್ತು ಸ್ವಾಯತ್ತೆಯನ್ನು ಕಾಯ್ದುಕೊಳ್ಳಲು ಇರುವ ಮಾರ್ಗಗಳನ್ನು ನಾವು ಬಳಸಿಕೊಳ್ಳಬೇಕಿದೆ.

*ಲೇಖಕರು ಮೂಲತಃ ಗೋರೂರು ಗ್ರಾಮದವರು. ವೃತ್ತಿನಿರತ ಪತ್ರಕರ್ತರಾಗಿ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ವಿಜ್ಞಾನ, ಪರಿಸರ, ಮಾನವ ಹಕ್ಕು ವಿಷಯಗಳ ಬಗ್ಗೆ ವಿಶೇಷ ಒಲವು.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮