2nd ಜೂನ್ ೨೦೧೮

ಪೂರಕ ವಾತಾವರಣದ ಕೊರತೆ

ಡಾ.ಎಸ್.ಬಿ.ಜೋಗುರ

ಅಧ್ಯಾಪಕರ ಸಂಬಳವನ್ನು ಆತನ ವಯಸ್ಸು ಮತ್ತು ಸೇವಾ ಅವಧಿಯನ್ನು ಆಧರಿಸಿ ನಿಗದಿಪಡಿಸದೇ ಆತನ ಅಧ್ಯಯನ, ಸಂಶೋಧನೆ, ಬರವಣಿಗೆಯೊಂದಿಗೆ ಥಳಕು ಹಾಕಬೇಕು. ಇದಾಗದ ಹೊರತು ಗುಣಮಟ್ಟ ಸುಧಾರಣೆಯಾಗುವುದಿಲ್ಲ.

ಕಳೆದ ಎರಡು ದಶಕಗಳಿಂದಲೂ ನಾನು ಗಮನಿಸಿದ್ದೇನೆ. ಪ್ರತಿಷ್ಠಿತ ‘ಟೈಮ್ಸ್ ಹೈಯರ್ ಎಜುಕೇಶನ್’ ಸಂಸ್ಥೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳನ್ನು ಅಲ್ಲಿಯ ಗುಣಮಟ್ಟ ಮತ್ತು ಸಂಶೋಧನೆಯನ್ನು ಆಧರಿಸಿ ಅತ್ಯುನ್ನತವಾದವುಗಳನ್ನು ಶ್ರೇಣೀಕರಣ ಮಾಡುವ ಕ್ರಮವನ್ನು ಅನುಸರಿಸುತ್ತದೆ. ಪ್ರತಿವರ್ಷ ಮಾಡಲಾಗುವ ಈ ಶ್ರೇಣಿಕ್ರಮದಲ್ಲಿ ಭಾರತದ ಏಕೈಕ ವಿಶ್ವವಿದ್ಯಾಯವೂ ಟಾಪ್ ಟೆನ್ ಶ್ರೇಣಿಯಲ್ಲಿ ಬಂದ ಉದಾಹರಣೆಗಳಿಲ್ಲ. ಕೆಲ ಬಾರಿಯಂತೂ ಟಾಪ್ ಟೆನ್ ಬಿಡಿ, 300 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 299 ನೇ ಸ್ಥಾನ ಪಡೆಯದಿರುವ ಸ್ಥಿತಿಯೂ ಇದೆ.

2015—2016ನೇ ಸಾಲಿಗಾಗಿ ಮಾಡಲಾದ 500 ವಿಶ್ವವಿದ್ಯಾಲಯ ಗಳ ಶ್ರೇಣೀಕರಣದಲ್ಲಿ ನಮ್ಮ ದೇಶದ ಒಂದೇ ಒಂದು ವಿಶ್ವವಿದ್ಯಾಲಯ ಇಲ್ಲದಿರುವುದು ಆ ವಲಯದಲ್ಲಿ ಕಾರ್ಯ ನಿರ್ವಹಿಸುವವರ ಆತ್ಮಾವಲೋಕನಕ್ಕೆ ಕಾರಣವಾಗಬೇಕಿದೆ. ಕೇವಲ ಐಐಟಿ. ಮತ್ತು ಐ.ಐ..ಎಸ್.ಸಿ ಯಂಥಾ ಕೆಲ ತಾಂತ್ರಿಕ ಸಂಸ್ಥೆಗಳನ್ನು ಹೊರತು ಪಡಿಸಿದರೆ, ಒಂದೇ ಒಂದು ವಿಶ್ವವಿದ್ಯಾಲಯ ಟೈಮ್ಸ್ ಸಂಸ್ಥೆಯ ವಿಶ್ವದ ವಿಶ್ವವಿದ್ಯಾಲಯಗಳ ಶ್ರೇಣೀಕರಣದಲ್ಲಿ ಇಲ್ಲ. ಏಷ್ಯಾದಲ್ಲಿ ಸಿಂಗಾ ಪೂರದ ನ್ಯಾಶನಲ್ ವಿಶ್ವವಿದ್ಯಾಲಯ 26ನೇ ಸ್ಥಾನದಲ್ಲಿದ್ದರೆ, ಚೈನಾದ ಪೆಕಿಂಗ್ ಮತ್ತು ಶಿಂಗುವಾ ವಿಶ್ವವಿದ್ಯಾಲಯಗಳು 42 ಮತ್ತು 47ನೇ ಸ್ಥಾನದಲ್ಲಿವೆ. ಟೈಮ್ಸ್ ಸಂಸ್ಥೆ ಹೀಗೆ ವಿಶ್ವದ ವಿಶ್ವವಿದ್ಯಾಲಯಗಳಿಗೆ ದರ್ಜೆಯನ್ನು ಕೊಡುವಾಗ ಐದು ಪ್ರಮುಖ ಮಾನದಂಡಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ. ಬೋಧನೆ, ಸಂಶೋಧನೆ, ಪ್ರಮುಖ ಉಲ್ಲೇಖಗಳು, ಪೇಟೆಂಟ್ ಮೂಲಕ ಬರುವ ಆದಾಯ ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನ. ಸಣ್ಣಪುಟ್ಟ ಹದಿಮೂರು ಸೂತ್ರಗಳಿ ಗನುಗುಣವಾಗಿ ವಿಶ್ವವಿದ್ಯಾಲಯಗಳನ್ನು ಶ್ರೇಣೀಕರಿಸಿದರೂ ಅವು ಗಳನ್ನು ಇಡಿಯಾಗಿ ಈ ಐದು ಸಂಗತಿಗಳಿಗೆ ಒಳಪಡಿಸಿ ನೋಡುವ ಮೂಲಕ ಅಂಕಗಳನ್ನು ನೀಡಲಾಗುತ್ತದೆ.

ಭಾರತದ ಉನ್ನತ ಶಿಕ್ಷಣದ ವಲಯದಲ್ಲಿ ನಿರಂತರವಾಗಿ ಗುಣಮಟ್ಟದ ಬಗ್ಗೆ ಮಾತುಗಳು, ಚರ್ಚೆಗಳು, ಸಭೆಗಳು ನಡೆಯುತ್ತವಾದರೂ ಅವೆಲ್ಲವೂ ಬಹುತೇಕವಾಗಿ ಸೈದ್ಧಾಂತಿಕ ಮಟ್ಟದ ಚರ್ಚೆಗಳೇ ಹೊರತು ವಿಶ್ವವಿದ್ಯಾಲಯಗಳ ಆಂತರಿಕ ಗುಣಮಟ್ಟದಲ್ಲಿ ಗಣನೀಯ ಪ್ರಮಾಣದ ಬದಲಾವಣೆಯನ್ನು ತರುವ ಮಟ್ಟದಲ್ಲಿ ಅವು ಕೆಲಸ ಮಾಡಿದ ಉದಾಹರಣೆಗಳಿಲ್ಲ. ನಮ್ಮಲ್ಲಿಯ ಸಂಶೋಧನೆಗಳ ಕಳಪೆತನದ ಬಗ್ಗೆ ಅನೇಕ ಬಾರಿ ಚರ್ಚೆಗಳಾಗಿವೆ. ನಮ್ಮ ಅಧ್ಯಾಪಕರನ್ನು ರಚನಾತ್ಮಕವಾಗಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸುವ ಯತ್ನಗಳು ಕೂಡಾ ನಡೆಯಬೇಕಾದ ದೆಸೆಯಲ್ಲಿ ನಡೆದಿಲ್ಲ. ಕಲೆ ಮತ್ತು ಮಾನವಿಕ ವಿಭಾಗಗಳ ಸಂಶೋಧನೆಗಳಿಗಂತೂ ಸಾಕಷ್ಟು ಪ್ರಮಾಣದ ಪ್ರೋತ್ಸಾಹಗಳು ದೊರೆಯುತ್ತಿಲ್ಲ.

ಇನ್ನು ವಿಜ್ಞಾನ ವಿಭಾಗಗಳಿಗೆ ಉತ್ತೇಜನವಿದೆಯಾದರೂ ಅಲ್ಲಿ ನಡೆಯುವ ಸಂಶೋಧನೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮಟ್ಟದಲ್ಲಿ ಇದ್ದದ್ದು ಕಡಿಮೆ. ಹಾಗಾಗಿಯೇ ಡಾ.ಸಿ.ಎನ್.ಆರ್.ರಾವ್ ಹೇಳುವ ಹಾಗೆ ಇಡೀ ವಿಶ್ವದಲ್ಲಿ ವಿಜ್ಞಾನದ ವಲಯಕ್ಕೆ ಭಾರತೀಯರ ಕೊಡುಗೆ ಕೇವಲ 2.5 ಪ್ರತಿಶತ. ಚೈನಾ ದೇಶದೊಂದಿಗೆ ಹೋಲಿಸಿದರೆ ಅವರು ಜಾಗತಿಕ ಮಟ್ಟದಲ್ಲಿ ವಿಜ್ಞಾನದ ಕ್ಷೇತ್ರಕ್ಕೆ 15 ಪ್ರತಿಶತದಷ್ಟು ಕೊಡುಗೆಯನ್ನು ನೀಡಿದ್ದಾರೆ. ಅಮೆರಿಕಾದ ಕೊಡುಗೆ 16 ಪ್ರತಿಶತದಷ್ಟಿದೆ.

ಜಾಗತಿಕ ಮಟ್ಟದಲ್ಲಿ ಶ್ರೇಣೀಕರಣದಲ್ಲಿ ಗುರುತಿಸಿಕೊಂಡ ವಿಶ್ವವಿದ್ಯಾಲಯಗಳು ಅಲ್ಲಿಯ ಅಧ್ಯಾಪಕರನ್ನು ಗಂಭೀರವಾದ ಅಧ್ಯಯನ, ಸಂಶೋಧನೆ, ಬರವಣಿಗೆಯಲ್ಲಿ ತೋಡಗಿಸುವ ಜೊತೆಗೆ ಅವುಗಳ ಮೂಲಕ ಆದಾಯದ ನಿರೀಕ್ಷೆಯಲ್ಲಿಯೂ ಇದ್ದಾರೆ. ನಮ್ಮಲ್ಲಿ ವಾತಾವರಣ ಸಂಪೂರ್ಣವಾಗಿ ಭಿನ್ನವಾಗಿದೆ. ನಮ್ಮ ದೇಶದ ಉನ್ನತ ಶಿಕ್ಷಣದ ವಲಯಗಳಲ್ಲಿ ಇಂದಿಗೂ 40 ಪ್ರತಿಶತದಷ್ಟು ಪ್ರಾಧ್ಯಾಪಕರ ಕೊರತೆ ಇದೆ. ಇನ್ನು ಇರುವ ಪ್ರಾಧ್ಯಾಪಕರಿಗೆ ಅಧ್ಯಯನ, ಸಂಶೋಧನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಅದಕ್ಕೆ ಪೂರಕವಾದ ಪರಿಸರವಿಲ್ಲ. ಇಲ್ಲವೇ ಆ ದೆಸೆಯಲ್ಲಿ ಒಂದು ಸೂಕ್ತವಾದ ಪರಿಸರವನ್ನು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ನಮ್ಮಲ್ಲಿ ಹೊರಬರುವ ಸಂಶೋಧನಾ ಪ್ರಬಂಧಗಳ ಗುಣಮಟ್ಟವೂ ಈಗೀಗ ತುಂಬಾ ಕಳಪೆಯಾಗುತ್ತಿದೆ.

ಹೀಗಿರುವಾಗಲೂ ನಮ್ಮಲ್ಲಿ ಹೊರಬರುವ ಸಂಶೋಧನೆಗಳ ಪ್ರಮಾಣ ಕಡಿಮೆಯೇ. ನಮ್ಮಲ್ಲಿ ವರ್ಷಕ್ಕೆ ಸುಮಾರು 8000 ಸಂಶೋಧನೆಗಳು ಜರುಗಿದರೆ, ಚೈನಾದಲ್ಲಿ ಆ ಪ್ರಮಾಣ ವರ್ಷಕ್ಕೆ 22 ಸಾವಿರದಷ್ಟಿವೆ. ನಮ್ಮಲ್ಲಿಯ ಸಂಶೋಧನೆಗಳು ಅವಶ್ಯಕತೆಯನ್ನು ಆಧರಿಸಿ ಜರುಗುವುದು ಕಡಿಮೆ.

ಹೀಗಾಗಿ ಪ್ರಧಾನಮಂತ್ರಿಯವರ ಹೆಸರಲ್ಲಿರುವ 100 ಶಿಷ್ಯವೇತನಗಳ ಪೈಕಿ ದಕ್ಕಿದ್ದು ಕೇವಲ 30 ಮಾತ್ರ. ಮಿಕ್ಕ ಸಂಶೋಧನಾ ವಿಷಯಗಳು ಅವಶ್ಯಕತೆಯನ್ನು ಆಧರಿಸಿಲ್ಲ ಎಂದರ್ಥ. ಸಂಶೋಧನೆಗಳು ಮುಗಿದ ಮೇಲೆ ಅವುಗಳಿಗೆ ಪೇಟೆಂಟ್ ಸಿಗುವಂತಾಗಬೇಕು. ಜಪಾನದಂತಹ ರಾಷ್ಟ್ರ 2011 ರಲ್ಲಿ ಈ ರೀತಿ ಪಡೆದ ಪೇಟೆಂಟ್‍ಗಳ ಸಂಖ್ಯೆ 2,38,323, ಅಮೇರಿಕಾ 2,24,525, ಚೈನಾ 1,72,113. ಆದರೆ ಭಾರತ ಪೇಟೇಂಟ್ ಪಡೆದದ್ದು 5170 ಮಾತ್ರ!

ಹೊಸ ಹೊಸ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳನ್ನು ಆರಂಭಿಸುವುದು ಪ್ರಗತಿಪರ ಲಕ್ಷಣವೇ ಆದರೂ ಮೊದಲು ಅವುಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ದಿಕ್ಕಿನತ್ತ ಯೋಚಿಸಬೇಕು. ಇಲ್ಲದಿದ್ದರೆ ಅಧ್ಯಾಪಕರಾದವರು ಸಂಶೋಧನೆ, ಬರವಣಿಗೆ ಮತ್ತು ಅಧ್ಯಯನಗಳನ್ನು ಹೊರತುಪಡಿಸಿ ಮಿಕ್ಕೆಲ್ಲವುಗಳನ್ನೂ ಮಾಡಬೇಕಾಗುತ್ತದೆ. ಆಗ ಈ ಸಮಾಜ ಅಧ್ಯಾಪಕರಿಗೆ ಯು.ಜಿ.ಸಿ. ‘ಇಷ್ಟು’ ಸಂಬಳ ಕೊಡುತ್ತಿದೆ ಎನ್ನುವ ಮೂದಲಿಕೆಯ ಮಾತುಗಳು ಮಾತ್ರ ಉಳಿಯುತ್ತವೆಯೇ ಹೊರತು ನಮ್ಮ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಕನಸಿನ ಮಾತಾಗುತ್ತದೆ. ಅಧ್ಯಾಪಕರ ಸಂಬಳವನ್ನು ಆತನ ವಯಸ್ಸು ಮತ್ತು ಸೇವಾ ಅವಧಿಯನ್ನು ಆಧರಿಸಿ ನಿಗದಿಪಡಿಸದೇ ಆತನ ಅಧ್ಯಯನ, ಸಂಶೋಧನೆ, ಬರವಣಿಗೆಯೊಂದಿಗೆ ಥಳಕು ಹಾಕಬೇಕು. ಇದಾಗದ ಹೊರತು ಗುಣಮಟ್ಟ ಸುಧಾರಣೆಯಾಗುವದಿಲ್ಲ.

ಒಟ್ಟಾರೆ ಅಧ್ಯಯನದಿಂದ ವಿಮುಖನಾದವನಿಗೆ, ಏನನ್ನೂ ಸಂಶೋಧನೆ ಮಾಡದಿರುವವನಿಗೆ, ಒಂದೇ ಒಂದು ಲೇಖನವನ್ನು ಬರೆಯದಿರುವವನಿಗೆ ಹಾಗೂ ಹತ್ತಾರು ಗ್ರಂಥ ಪ್ರಕಟಣೆ, ಅಧ್ಯಯನ, ಸಂಶೋಧನೆ ಮಾಡಿದವನಿಗೆ ಒಂದೇ ವೇತನ ಎಂದಾಗ ಅಕಾಡೆಮಿಕ್ ಕ್ರಿಯಾಶೀಲತೆ ಸಾಧ್ಯವಾಗುವುದಾದರೂ ಹೇಗೆ? ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಹಂತದಲ್ಲಿರುವ ಅಧ್ಯಾಪಕರು ನಿರಂತರವಾದ ಅಧ್ಯಯನ, ಬೋಧನೆ, ಗುಣಮಟ್ಟದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ, ತೊಡಗಿಸುವ ವಾತಾವರಣ ನಿರ್ಮಾಣಗೊಳ್ಳದ ಹೊರತು ಗುಣಮಟ್ಟ ಎನ್ನುವುದು ಕೇವಲ ವೇದಿಕೆಯ ಮಾತಾಗಬಹುದೇ ಹೊರತು ಅಳವಡಿಕೆಯಾಗದು.

*ಲೇಖಕರ ಹುಟ್ಟೂರು ವಿಜಯಪುರ ಜಿಲ್ಲೆಯ ಸಿಂದಗಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಗ್ರಾಮೀಣ ಯುವಕರು ಮತ್ತು ಬದಲಾವಣೆ ವಿಷಯದಲ್ಲಿ ಸಂಶೋಧನೆ. ಸಮಾಜಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ 32 ಕೃತಿಗಳು, 6 ಕಥಾ ಸಂಕಲನಗಳು, 5 ಅಂಕಣ ಬರಹಗಳ ಸಂಕಲನಗಳು, 1 ಕಾದಂಬರಿ ಪ್ರಕಟವಾಗಿವೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮