2nd ಜೂನ್ ೨೦೧೮

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಇಂದು ನಮಗೆ ಬೇಕಿರುವುದು ಸ್ವದೇಶಿ ಪ್ರೊ.ವನ್ನೆವರ್ ಬುಷ್ ಮತ್ತು ನಮ್ಮವರೇ ಆದ ಅಧ್ಯಕ್ಷ ಐಸೆನ್‍ಹೋವರ್. ಇಂಥವರು ನಮ್ಮಲ್ಲಿ ನಾಪತ್ತೆಯಾಗಿದ್ದಾರೆ. ನಾವು ಯಾವಾಗ ಇಂಥ ದೂರದರ್ಶಿತ್ವದ ರಾಜಕೀಯೇತರ ನಾಯಕರನ್ನು ಕಂಡುಕೊಳ್ಳುತ್ತೇವೆಯೋ, ಆಗ ದೇಶದ ಉಳಿದ ಸಮುದಾಯಗಳು ಒಟ್ಟಾಗುತ್ತವೆ ಹಾಗೂ ಶತಕೋಟಿ ಡಾಲರ್‍ಗಳ ದತ್ತಿಯನ್ನು ಸೃಷ್ಟಿಸುತ್ತವೆ. ಜಾಗತಿಕವಾಗಿ ಸ್ಪರ್ಧಾತ್ಮಕವಾದ ಪ್ರಾಧ್ಯಾಪಕರ ಸಮುದಾಯ ಸೃಷ್ಟಿಯಾಗಿ ಜಗತ್ತಿನೆಲ್ಲೆಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಒಂದೇ ಒಂದು ಬೆಂಕಿಯ ಕಿಡಿಗಾಗಿ ಕಾಯ್ದು ಕುಳಿತಿರುವ ತರಗೆಲೆಗಳಂತೆ ಭವಿಷ್ಯವು ನಮ್ಮ ಕಾಲಡಿಯಲ್ಲಿ ಚಟಚಟ ಎನ್ನುತ್ತಿದೆ.

ನಾನು ನನ್ನ ಜೀವನದಲ್ಲಿ ಅನುಭವಿಸಿದ ಅತ್ಯಂತ ವಿಸ್ಮಯಕರ ಅನುಭವವೆಂದರೆ, ತೀರಾ ಎಳೆಯ ವಯಸ್ಸಿನಲ್ಲಿಯೇ ದೇಶವನ್ನು ತೊರೆದು ಬೇರೆ ದೇಶದ ಅಜ್ಞಾತ ನಗರವೊಂದಕ್ಕೆ ತೆರಳಿದ್ದು. ಆ ನಗರದಲ್ಲಿ ಯಾರ ಪರಿಚಯವೂ ಇರಲಿಲ್ಲ. ನನ್ನ ಬಳಿ ಬಿಡಿಗಾಸು ಕೂಡ ಇರಲಿಲ್ಲ. ನಾನು ಬದುಕನ್ನು ಆರಂಭಿಸಿದ್ದು ಕಠಿಣ ಶ್ರಮ, ಚಾರಿತ್ರ್ಯ ಹಾಗೂ ಪ್ರಾಮಾಣಿಕತೆ ಎನ್ನುವ ಸಂಗಾತಿಗಳೊಡನೆ. ಬಹುತೇಕ ಪ್ರಕರಣಗಳಲ್ಲಿ ಇಂಥ ಬದಲಾವಣೆ ಅತ್ಯಂತ ಸಂಕಟದ್ದಾಗಿರುತ್ತದೆ. ಆದರೆ ನನಗೆ ಅದು ಸಂತಸದ ಮತ್ತು ಸುಖಕರ ವಿಷಯವಾಗಿತ್ತು. ಇದಕ್ಕೆ ಕಾರಣವೇನೆಂದರೆ ನಾನು ಮೊದಲ ಐದು ವರ್ಷದ ಶಿಕ್ಷಣಕ್ಕಾಗಿ ಸೇರಿದ ಶೈಕ್ಷಣಿಕ ಸಂಸ್ಥೆ.

ನಾನು ಸೇರಿದ್ದು ಜಗತ್ತಿನ ಅತ್ಯಂತ ಗೌರವಾನ್ವಿತ ಸಂಶೋಧನಾ ವಿಶ್ವವಿದ್ಯಾನಿಲಯವಾದ ಮೆಸ್ಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು. ‘ಎಮ್‍ಐಟಿ’ ಎಂದು ಪರಿಚಿತವಾದ ಈ ಸಂಸ್ಥೆ ನಿರಂತರವಾಗಿ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಅತಿಹೆಚ್ಚು ನೊಬೆಲ್ ಪುರಸ್ಕೃತರ ಸಂಖ್ಯೆಯಿಂದ ಹಿಡಿದು ವಾರ್ಷಿಕ ಸಂಶೋಧನಾ ಬಜೆಟ್‍ನ ಪ್ರಮಾಣದಲ್ಲಿ, ಹಾಲಿವುಡ್ ಚಲನಚಿತ್ರಗಳಲ್ಲಿನ ಉಲ್ಲೇಖಗಳಲ್ಲಿ, ಸೈನ್ಯ—ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮತ್ತು ಎಮ್‍ಐಟಿ ಕ್ಯಾಂಪಸ್‍ನಲ್ಲಿ ಆಡುವ ಆಟಗಳ ಸಂಖ್ಯೆಯಲ್ಲಿಯೂ ಕೂಡಾ ಅದರ ಸಾಧನೆ ಗಮನಾರ್ಹವಾದುದು. ಇಷ್ಟಲ್ಲದೆ ಎಂಐಟಿಯಲ್ಲಿ ನನಗೆ ಇಷ್ಟವಾದ ಇನ್ನೊಂದು ಅಂಶವೆಂದರೆ, ಸಾಮಾಜಿಕವಾಗಿ ದುರ್ಬಲವರ್ಗದ, ಬಡ ಆರ್ಥಿಕ ಹಿನ್ನೆಲೆಯ ಮತ್ತು ಅಲ್ಪಸಂಖ್ಯಾತ ಕೋಮುಗಳ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ.

ಎಮ್‍ಐಟಿಯಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನು ಭಾರತದಲ್ಲಿ ರೂಪಿಸಬೇಕೆಂದರೆ ಅದಕ್ಕೆ ಅಗತ್ಯವಾಗಿ ಬೇಕಾದ ನಾಲ್ಕು ಬದಲಾವಣೆಗಳನ್ನು ನಾನಿಲ್ಲಿ ಹೇಳುತ್ತೇನೆ. ಈ ವಿಷಯದಲ್ಲಿ ನಾನು ನನಗೆ ಪರಿಚಿತ ಕ್ಷೇತ್ರವಾದ ವಿಜ್ಞಾನ—ತಂತ್ರಜ್ಞಾನ ಶಿಕ್ಷಣಕ್ಕೆ ಮಾತ್ರ ನನ್ನನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದೇನೆ.

1. ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ಮತ್ತು ಮೀಸಲಾತಿ ಒದಗಿಸುವುದರ ಜೊತೆಗೆ ಅವರನ್ನು ಅಂತಾರಾಷ್ಟ್ರೀಯವಾಗಿ ಸಮಗ್ರ ಅವಲೋಕನದ ಮೂಲಕ ಆಯ್ಕೆ ಮಾಡಿಕೊಳ್ಳಬೇಕು.

ಎಂಐಟಿ ಪ್ರತಿ ವರ್ಷ ಶೇ.8 ರಷ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಪದವಿಪೂರ್ವ ಹಂತದಲ್ಲಿ ಸೇರ್ಪಡೆಗೊಳಿಸಿಕೊಳ್ಳುತ್ತದೆ. ಈ ಆಯ್ಕೆ ಸುಲಭವಾದ ಕೆಲಸವೇನೂ ಅಲ್ಲ. ಇವರಲ್ಲಿ ಹೆಚ್ಚಿನವರು ದುಬಾರಿ ಕಾಲೇಜು ಶುಲ್ಕ ಹಾಗೂ ಅಮೆರಿಕದ ದುಬಾರಿ ಜೀವನ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದವರು. ಹೀಗಾಗಿ ಅವರಿಗೆ ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ಅಮೆರಿಕ ಸರ್ಕಾರ ಇಂಥ ವಿದ್ಯಾರ್ಥಿಗಳಿಗೆ ನೆರವಾಗಲು ಎಂಐಟಿಗೆ ಯಾವುದೇ ಬೆಂಬಲ ನೀಡುವುದಿಲ್ಲ. ಕಾಲೇಜು ತನ್ನ ಹಳೆಯ ವಿದ್ಯಾರ್ಥಿಗಳು ನೀಡಿದ ಹಣವನ್ನು ಬಳಸಿಕೊಂಡು ಇಂಥವರಿಗೆ ಆರ್ಥಿಕ ನೆರವು ನೀಡುತ್ತದೆ. ನಾನು ಬಹುತೇಕ ಸಂಪೂರ್ಣ ಶಿಷ್ಯವೇತನದ ನೆರವಿನಿಂದ ಹಾಗೂ ಜೀವನ ವೆಚ್ಚಕ್ಕೆ ಪಡೆದ ಸಾಲದಿಂದ ನನ್ನ ವಿದ್ಯಾರ್ಥಿ ಜೀವನ ಸಾಗಿಸಿದೆ. ಅದು ಸುಲಭ ಅಥವಾ ಅಗ್ಗವಾಗಿರದಿದ್ದರೂ, ಹೇಗೋ ನಿಭಾಯಿಸಿದೆ. ಐದು ವರ್ಷದಲ್ಲಿ ಒಟ್ಟು 1,70,000 ಡಾಲರ್ ದತ್ತಿ ನಿಧಿ ಹಾಗೂ 30,000 ಡಾಲರ್ ಸಾಲ ಪಡೆದಿದ್ದೆ. ನನ್ನ ಕಾಲೇಜು ಹೊರತುಪಡಿಸಿ ಬೇರೆ ಯಾರೂ ನನಗೆ ಇಂಥ ನೆರವು ನೀಡುವುದು ಸಾಧ್ಯವೇ ಇರಲಿಲ್ಲ. ಇದಕ್ಕಾಗಿ ನಾನು ಜೀವನಪರ್ಯಂತ ಕೃತಜ್ಞನಾಗಿರುತ್ತೇನೆ. ಈ ‘ಕೋಟಾ’ ವ್ಯವಸ್ಥೆ ಮತ್ತು ಹೊರ ದೇಶಗಳ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡುವ ವ್ಯವಸ್ಥೆ ಇಲ್ಲದೆ ಇದ್ದಲ್ಲಿ ನಾನು ಎಂಐಟಿ ಸೇರುವುದು ಸಾಧ್ಯವೇ ಇರಲಿಲ್ಲ.

ಎಂಐಟಿಯಂಥ ಕಾಲೇಜುಗಳು ನನ್ನಂಥ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದಾದರೂ ಏಕೆ ಎಂದು ನಾನು ಆಗಾಗ ಆಶ್ಚರ್ಯ ಪಡುವುದಿದೆ. ಇದಕ್ಕೆ ಕಾನೂನಿನ ಬೆಂಬಲವೇನೂ ಇಲ್ಲ. ಬದಲಿಗೆ ಅಮೆರಿಕ ಸರ್ಕಾರ ಇದಕ್ಕೆ ವಿರುದ್ಧದ ಕಾನೂನನ್ನು ಬಹಳಷ್ಟು ಕಠಿಣಗೊಳಿಸಿದೆ. ಇದು ಆರ್ಥಿಕವಾಗಿ ಸುಲಭವಾದದ್ದೂ ಅಲ್ಲ. ಆದರೆ ಎಂಐಟಿಯಂಥ ಕಾಲೇಜುಗಳು ಜಗತ್ತಿನ ಎಲ್ಲೆಡೆಯಿಂದ ಅತ್ಯುತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ತಮ್ಮ ಧ್ಯೇಯ ಎಂದು ನಂಬುತ್ತವೆ. ಅಂಥ ವಿದ್ಯಾರ್ಥಿಗಳು ಎಲ್ಲೇ ಇರಬಹುದು ಅಥವಾ ಯಾವುದೇ ಭಾಷೆ ಮಾತನ್ನಾಡುತ್ತಿರಬಹುದು. ಜೊತೆಗೆ ಈ ವಿದ್ಯಾರ್ಥಿಗಳ ಸೇರ್ಪಡೆಗೆ ಏಕೈಕ ಎನ್ನಬಹುದಾದ ಒಂದೇ ಮಾನದಂಡದ ಪ್ರವೇಶ ಪರೀಕ್ಷೆಯೊಂದನ್ನು ಎಮ್‍ಐಟಿ ಹೊಂದಿಲ್ಲ. ಬದಲಿಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಯನ್ನು ಸಮಗ್ರವಾಗಿ ಪರಿಗಣಿಸುತ್ತವೆ. ಆತ ಎಲ್ಲಿಂದ ಬಂದಿದ್ದಾನೆ, ಆತನ ಶೈಕ್ಷಣಿಕ ದರ್ಜೆ ಏನು, ಆತನನ್ನು ಶಿಫಾರಸು ಮಾಡಿದವರು ಯಾರು, ಹೈಸ್ಕೂಲ್‍ನಲ್ಲಿ ಆತನ ಸಾಧನೆಯೇನು ಎಂದೆಲ್ಲ ಪರಿಶೀಲಿಸುತ್ತವೆ. ಮೌಲ್ಯಮಾಪನ ಹಾಗೂ ಶಿಫಾರಸುದಾರರಂತೆ ಕಾರ್ಯ ನಿರ್ವಹಿಸಲು ಹಳೆಯ ವಿದ್ಯಾರ್ಥಿಗಳ ನೆರವು ಪಡೆಯುತ್ತದೆ. ಎಲ್ಲೆಡೆಯಿಂದ ಪ್ರತಿಭೆಗಳನ್ನು ಆಕರ್ಷಿಸುವ ಅತ್ಯುತ್ತಮ ವ್ಯವಸ್ಥೆ ಅದು.

ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಇದನ್ನು ಅನುಸರಿಸಬೇಕು. ಇವು ದೇಶದೊಳಗಿನ ಪ್ರತಿಭೆ ಹುಡುಕುವುದಕ್ಕೆ ಸೀಮಿತವಾಗಬೇಕಿಲ್ಲ. ಹಿಂದೂ ಮಹಾಸಾಗರದ ಚರಿತ್ರೆಯಲ್ಲಿ ಭಾರತದ ಪ್ರಭಾವ ಕುರಿತ ಹಲವು ಉದಾಹರಣೆಗಳು ಹರಡಿಕೊಂಡಿವೆ. ದಕ್ಷಿಣ ಆಫ್ರಿಕದ ಡರ್ಬಾನ್‍ನಿಂದ ಕೀನ್ಯಾದ ಮೊಂಬಾಸದವರೆಗೆ, ಓಮನ್‍ನ ಮಸ್ಕತ್‍ನಿಂದ ಇರಾನ್‍ನ ಟೆಹ್ರಾನ್‍ವರೆಗೆ, ಬಾಂಗ್ಲಾದ ಚಿತ್ತಗಾಂಗ್‍ನಿಂದ ಮಲೇಷ್ಯಾದ ಮಲಕ್ಕಾ ಮತ್ತು ಇಂಡೋನೇಷ್ಯಾದ ಬಾಲಿಯವರೆಗೆ ಹಿಂದೂ ಮಹಾಸಾಗರದ ಇಡೀ ಕರಾವಳಿಯು ಭಾರತದೊಡನೆ ಸ್ವಾಭಾವಿಕ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿತ್ತು. ಭಾರತದ ಪ್ರಭಾವವು ಉತ್ತರದಲ್ಲಿ ಉಜ್ಬೆಕಿಸ್ಥಾನದಿಂದ ಕೇಂದ್ರ ಏಷ್ಯಾ ಹಾಗೂ ಪಶ್ಚಿಮದಲ್ಲಿ ಉತ್ತರ ಆಫ್ರಿಕದ ಮೊರಕ್ಕೋವರೆಗೆ ವ್ಯಾಪಿಸಿತ್ತು. ಈ ಎಲ್ಲ ಪ್ರಾಂತ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಇವೆ. ನಮ್ಮ ದೇಶವನ್ನು ಈ ಎಲ್ಲರನ್ನೂ ಆಕರ್ಷಿಸುವ ಶೈಕ್ಷಣಿಕ ಅಯಸ್ಕಾಂತವಾಗಿ ಮಾಡಬೇಕಿದೆ. ಶತಮಾನಗಳ ಹಿಂದೆ ಭಾರತವು ಅಂಥ ಒಂದು ಅಯಸ್ಕಾಂತವಾಗಿತ್ತು.

ಇಂಥ ಅಂತರರಾಷ್ಟ್ರೀಯ ಸಂಪರ್ಕಗಳ ಮೌಲ್ಯ ಕಿರಿದಾದುದಲ್ಲ. ನಾನು ಶಿಕ್ಷಣಕ್ಕಾಗಿ ಅಮೆರಿಕದಲ್ಲಿ ಹಲವು ವರ್ಷಗಳನ್ನು ಕಳೆಯಬೇಕಾಗಿ ಬಂದಂತೆ, ಇವರು ಕೂಡ ಭಾರತದಲ್ಲಿ ಬಂದು ನೆಲೆಸುತ್ತಾರೆ ಮತ್ತು ಇಲ್ಲಿನ ಮೌಲ್ಯಗಳಿಗೆ ಒಗ್ಗಿಕೊಳ್ಳುತ್ತಾರೆ. ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಆರಂಭಗೊಂಡ ಯಾವುದೇ ಮೂರು ಸ್ಟಾರ್ಟ್‍ಅಪ್‍ಗಳಲ್ಲಿ ಒಂದರ ಸಂಸ್ಥಾಪಕ ಹೆಚ್ಚಿನ ಶಿಕ್ಷಣಕ್ಕಾಗಿ ಬೇರಾವುದೋ ದೇಶದಿಂದ ಅಮೆರಿಕಕ್ಕೆ ಬಂದವರಾಗಿದ್ದಾರೆ. ಇದೇ ರೀತಿ ನಾವು ಜಗತ್ತಿನ ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಲು ಸಾಧ್ಯವಿಲ್ಲವೇ? ಬೆಂಗಳೂರಿನ ಸ್ಟಾರ್ಟ್‍ಅಪ್‍ಗಳಲ್ಲಿ ಆಫ್ರಿಕದ ಸಹಸಂಸ್ಥಾಪಕರು ಇರಬಾರದೇಕೆ?

2. ಅಧ್ಯಾಪಕರ ಆಯ್ಕೆ, ಬಡ್ತಿ ಪ್ರಕ್ರಿಯೆಗಳು ಮೀಸಲಾತಿ ಮತ್ತು ಜ್ಯೇಷ್ಠತೆಯನ್ನು ಆಧರಿಸ ಕೂಡದು; ಪ್ರತಿಭೆ, ಕೇವಲ ಪ್ರತಿಭೆ ಮಾತ್ರ ಮಾನದಂಡವಾಗಿರಬೇಕು.

ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರ ಆಯ್ಕೆಯ ವೇಳೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಮತ್ತು ಜ್ಯೇಷ್ಠತೆಗೆ ಏಕೆ ಅಷ್ಟೊಂದು ಪ್ರಾಶಸ್ತ್ಯ ಕೊಡುತ್ತಾರೆ ಎನ್ನುವುದು ನನಗೆ ಈವರೆಗೆ ಗೊತ್ತಾಗಿಲ್ಲ. ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಬೇಕೆಂದರೆ ನಾವು ಅತ್ಯುತ್ತಮ ಗುಣಮಟ್ಟದ ಶಿಕ್ಷಕರನ್ನು ಆಯ್ಕೆ ಮಾಡಬೇಕಾಗುತ್ತದೆ. ನೀವು ಮೀಸಲಾತಿ ಮತ್ತು ಸಬಲಗೊಳಿಸುವಿಕೆಯನ್ನು ಅತ್ಯಂತ ಗಾಢವಾಗಿ ನಂಬಿದ್ದರೂ ಅತ್ಯುತ್ತಮ ಗುಣಮಟ್ಟದ ಶಿಕ್ಷಕರು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಸಮಾಜವನ್ನು ಸರಿಗೊಳಿಸುವುದಕ್ಕಿಂತ ಉತ್ತಮ ಮಾರ್ಗ ಯಾವುದಾದರೂ ಇದೆಯೇ? ಇದರಲ್ಲಿ ಶಿಕ್ಷಕರ ಹಿನ್ನೆಲೆ ಅಥವಾ ಅವರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಪರಿಗಣಿಸಬಾರದು. ನಾನು ಶೂದ್ರ ಜಾತಿಗೆ ಸೇರಿದವನು. ಆದರೆ ನಾನು ಸರಸ್ವತಿಯನ್ನು ಓಲೈಸುತ್ತಿರುವಾಗ ಆಕೆಗೆ ಜಾತಿಯೊಂದು ಇದೆ ಎಂದು ನನಗೆ ಅನ್ನಿಸುವುದಿಲ್ಲ.

ಶಿಕ್ಷಕರ ಆಯ್ಕೆಯಲ್ಲಿ ಪ್ರತಿಭೆಗೆ ಮನ್ನಣೆ ನೀಡದ ಇಂಥ ಪಕ್ಷಪಾತದಿಂದ ಉತ್ತಮ ಶಿಕ್ಷಕರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಹಾಗೂ ಇದರಿಂದ ದೇಶದ ಹಲವು ಪೀಳಿಗೆಗಳ ವಿದ್ಯಾರ್ಥಿಗಳಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಎಂಐಟಿಯಲ್ಲಿ ನನಗೆ ಪಾಠ ಹೇಳಿದ್ದ ಭಾರತದ ಹಲವು ಪ್ರೊಫೆಸರ್‍ಗಳು ಪ್ರಾಯಶಃ ಸ್ವದೇಶದಲ್ಲಿ ಪ್ರಾಧ್ಯಾಪಕ ಹುದ್ದೆಗಾಗಿ ಪ್ರಯತ್ನಿಸಿದ್ದರೇನೋ? ಪ್ರತಿಭೆಯೊಂದನ್ನೇ ಮಾನದಂಡವಾಗಿ ಪರಿಗಣಿಸಿ 10,000 ಶಿಕ್ಷಕರನ್ನು ಸೃಷ್ಟಿಸಲು ನಮಗೆ ಸಾಧ್ಯವಾಗಿಲ್ಲದ ಕಾರಣ ಕೋಟಿಗಟ್ಟಲೆ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಬೇಕೇ? ಜಾತಿ ಮತ್ತು ಜ್ಯೇಷ್ಠತೆಯನ್ನು ಆಧರಿಸಿ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಆಗ ನಾವು ವಿಶ್ವ ಮಟ್ಟದ ತಂಡಗಳೊಂದಿಗೆ ಸೆಣಸುವುದು ಸಾಧ್ಯವೇ? 16 ವರ್ಷದ ಸಚಿನ್ ರಮೇಶ್ ತೆಂಡೂಲ್ಕರ್ ಎಂಬ ಬ್ರಾಹ್ಮಣ ಬಾಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರುವುದು ಸಾಧ್ಯವಿತ್ತೇ? ಪ್ರಾಯಶಃ ಆತ ಅಮೆರಿಕದ ತಂಡದಲ್ಲಿ ಆಡುತ್ತಿದ್ದನೇನೋ?

ಶಿಕ್ಷಕರ ಆಯ್ಕೆಯಲ್ಲಿ ಸಬಲೀಕರಣ/ಮೀಸಲಾತಿ ಮತ್ತು ಜ್ಯೇಷ್ಠತೆಯನ್ನು ನಾವು ಅನಗತ್ಯವಾಗಿ ಇಲ್ಲಿಯವರೆಗೆ ಅವಲಂಬಿಸಿದ್ದೇವೆ ಎನ್ನುವುದು ನನ್ನ ದೃಢ ನಂಬಿಕೆ. ಭಾರತದ ಅತ್ಯುತ್ತಮ 50 ಕಾಲೇಜುಗಳಲ್ಲಿ ತಲಾ 200 ಶಿಕ್ಷಕರನ್ನು ಪ್ರತಿಭೆಯನ್ನು ಮಾತ್ರವೇ ಪರಿಗಣಿಸಿ ಆಯ್ಕೆ ಮಾಡಬೇಕು. ಜಾಗತಿಕ ಪ್ರಕಟಣೆಗಳು ಸೇರಿದಂತೆ ಜಾಗತಿಕ ಸಮ್ಮೇಳನಗಳಲ್ಲಿ ಸಾಧನೆ ಮತ್ತು ಅತ್ಯುನ್ನತ ವಿಜ್ಞಾನಿಗಳೊಂದಿಗೆ ಸಹಭಾಗಿತ್ವಕ್ಕೆ ಶೇ.50 ಅಂಕ ಹಾಗೂ ಉಳಿದ ಶೇ.50 ಅಂಕವನ್ನು ದೇಶಿ ಸಮ್ಮೇಳನಗಳು ಮತ್ತು ಪ್ರಕಟಣೆ/ಸಹಭಾಗಿತ್ವಕ್ಕೆ ನೀಡಬೇಕು. ನಾವು ಈ ಕ್ರಿಕೆಟ್ ತಂಡದ ರಚನೆಗೆ ವಿದೇಶಗಳಲ್ಲಿ ಸಾಧನೆಗೆ ಶೇ.50 ಹಾಗೂ ಸ್ವದೇಶದಲ್ಲಿ ಸಾಧನೆಗೆ ಶೇ.50 ಅಂಕ ನೀಡುವ ಮೂಲಕ ಆಯ್ಕೆ ಮಾಡಬೇಕು. ಆಗ ಮಾತ್ರ ನಾವು ಜಗತ್ತಿನ ಶ್ರೇಷ್ಠ ತಂಡಗಳನ್ನು ಸೋಲಿಸಬಲ್ಲ ತಂಡವನ್ನು ಕಟ್ಟಲು ಸಾಧ್ಯ. ಇದರ ಉದಾಹರಣೆಗಳಿಗಾಗಿ ನಾವು ಬೇರೆಡೆ ನೋಡಬೇಕಿಲ್ಲ. ಸಿಂಗಪೂರ ಮತ್ತು ಚೀನಾದ ವಿಶ್ವವಿದ್ಯಾಲಯಗಳು ಪ್ರತಿಭೆಯನ್ನು ಮಾತ್ರವೇ ಆಧರಿಸಿ ಅತ್ಯುತ್ತಮ ಪ್ರೊಫೆಸರ್‍ಗಳನ್ನು ಆಯ್ಕೆ ಮಾಡಿವೆ. ಇದರಿಂದಷ್ಟೇ ವಿದ್ಯಾರ್ಥಿಗಳು ಮತ್ತು ಜನರು ಅತ್ಯುತ್ತಮ ಶಿಕ್ಷಕರಿಂದ ಕಲಿಯಲು ಸಾಧ್ಯವಾಗುತ್ತದೆ.

3. ಹಳೆಯ ವಿದ್ಯಾರ್ಥಿಗಳಿಂದ ಕೋಶನಿಧಿ ಸಂಗ್ರಹ: ಸರ್ಕಾರ/ಸ್ಟಾಕ್ ಮಾರುಕಟ್ಟೆಗಳಿಂದ ವಿಮುಕ್ತಿ.

ಭಾರತದಲ್ಲಿ ಉನ್ನತ ಶಿಕ್ಷಣದ ದುರದೃಷ್ಟಕರ ಸಂಗತಿ ಎಂದರೆ ಹಳೆಯ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಕಾಲೇಜುಗಳಿಗೆ ಏನೇನೂ ನೆರವು ನೀಡುವುದಿಲ್ಲ. ಐಐಟಿಯಲ್ಲಿ ವ್ಯಾಸಂಗ ಮಾಡಿದವರು ತಮ್ಮ ಕಾಲೇಜು ಇಲ್ಲವೇ ಹಾಸ್ಟೆಲ್‍ಗೆ ನೆರವು ನೀಡುತ್ತಾರೆ ಎನ್ನುವುದು ನಿಜ. ಆದರೆ ಶ್ರೀಮಂತ ಭಾರತೀಯರ ದೇಣಿಗೆಯಲ್ಲಿ ಹೆಚ್ಚು ಪಾಲು ಹೋಗುವುದು ಧಾರ್ಮಿಕ ಸಂಸ್ಥೆಗಳಿಗೆ. ಭಾರತವು ಜಗತ್ತಿನ ಅತ್ಯಂತ ಶ್ರೀಮಂತ ಧಾರ್ಮಿಕ ಸಂಸ್ಥೆಗಳನ್ನು ಹೊಂದಿರುವ ಕುಖ್ಯಾತಿ ಪಡೆದುಕೊಂಡಿದೆ (ಉದಾಹರಣೆಗೆ: ತಿರುಪತಿ ದೇವಸ್ಥಾನ). ಅದೇ ರೀತಿಯಲ್ಲಿ ಜಗತ್ತಿನ ಅತ್ಯಂತ ಕಡಿಮೆ ಅನುದಾನ ಪಡೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಇಲ್ಲಿವೆ. ನೆಹರೂ ಅವರ ಮಾತನ್ನು ಬೇರೆ ರೀತಿ ಹೇಳಬಹುದಾದರೆ, ಕಾಲೇಜುಗಳು ಆಧುನಿಕ ಭಾರತದ ದೇವಾಲಯಗಳಾಗಬೇಕಿದೆ. ನಾವೆಲ್ಲರೂ ಶಿಕ್ಷಣ ಪಡೆದ ಸಂಸ್ಥೆಗಳಿಗೆ ನೆರವಾಗಿ ನಮ್ಮ ಸಂಸ್ಕೃತಿಯಲ್ಲಿರುವ ‘ಗುರುದಕ್ಷಿಣೆ’ ತತ್ವಕ್ಕೆ ಮತ್ತೆ ಚೈತನ್ಯ ತುಂಬಬೇಕಿದೆ.

ನನ್ನ ಕಾಲೇಜು ಎಂಐಟಿಯನ್ನೇ ತೆಗೆದುಕೊಳ್ಳಿ. ಹಲವು ವರ್ಷದಿಂದ ಅದು ತನ್ನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದು, ಆ ಮೊತ್ತ ಈಗ 15 ಶತಕೋಟಿ ಡಾಲರ್ (ಸುಮಾರು ಒಂದು ಲಕ್ಷ ಕೋಟಿ ರೂ.) ಆಗಿದೆ. ಅದರಲ್ಲಿ ಖರ್ಚಿಗೆಂದು ವರ್ಷಕ್ಕೆ ಶೇ.5 ರಷ್ಟು ಬಳಸಿದರೂ ಈ ಮೊತ್ತ 5,000 ಕೋಟಿ ರೂ. ಆಗಲಿದೆ. ಇದರಿಂದ ಸಂಶೋಧನೆ, ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸೇರಿದಂತೆ ಸಂಸ್ಥೆಯ ಅರ್ಧದಷ್ಟು ವೆಚ್ಚವನ್ನು ಭರಿಸಬಹುದಾಗಿದೆ. ಇದರಿಂದ ಜಗತ್ತಿನೆಲ್ಲೆಡೆಯ ಶ್ರೇಷ್ಠ ಪ್ರತಿಭೆಗಳನ್ನು ಎಂಐಟಿ ಆಕರ್ಷಿಸುತ್ತದೆ. ಇದರಿಂದ ಕಾಲೇಜಿನ ದೈನಂದಿನ ವ್ಯವಹಾರಗಳಲ್ಲಿ ಸರ್ಕಾರ ಮತ್ತು ಸ್ಟಾಕ್ ಮಾರ್ಕೆಟ್ ಸೇರಿದಂತೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ತೆರನಾದ ಆರ್ಥಿಕ ಸ್ವಾತಂತ್ರ್ಯ ಕಾಲೇಜೊಂದಕ್ಕೆ ತುಂಬುವ ಆತ್ಮವಿಶ್ವಾಸ ದೊಡ್ಡದು ಮತ್ತು ಇಂತಹ ಸಂಪನ್ಮೂಲವು ಶಿಕ್ಷಣಕ್ಕೆ ನೀಡಬಹುದಾದ ಕಾಣಿಕೆ ಕೂಡ ದೊಡ್ಡದು. ಇನ್ನೊಂದು ಉದಾಹರಣೆಯನ್ನು ಗಮನಿಸಿ. ನಾನು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ‘ಓಪನ್ ಕೋರ್ಸ್‍ವೇರ್’ ಎಂಬ ಕಾರ್ಯಕ್ರಮವೊಂದನ್ನು ಆರಂಭಿಸಲಾಯಿತು. ಇದರಡಿ ಎಂಐಟಿಯ ತರಗತಿಗಳಲ್ಲಿ ನಡೆಯುತ್ತಿದ್ದ ಪಾಠ, ಶಿಕ್ಷಕರು ನೀಡುತ್ತಿದ್ದ ಟಿಪ್ಪಣಿ, ಮನೆ ಪಾಠ ಇತ್ಯಾದಿ ಸೇರಿದಂತೆ ಎಲ್ಲವನ್ನೂ ದಾಖಲಿಸಿ, ಅಂತರ್ಜಾಲದಲ್ಲಿ ಅಳವಡಿಸಲಾಯಿತು. ಇದನ್ನು ಯಾವುದೇ ಶುಲ್ಕ ನೀಡದೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿಯೊಬ್ಬ ಬಳಸಿಕೊಳ್ಳಬಹುದಿತ್ತು. ವಿವರಕ್ಕೆ: http://ocw.mit.edu ನೋಡಿ. ಇಂಥ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯವೊಂದು ಹೆಚ್ಚು ಕಾಲ ನಡೆಸಲು ಸಾಧ್ಯವಾಗುವುದು ಸ್ವಾತಂತ್ರ್ಯ ಹಾಗೂ ಆರ್ಥಿಕ ಭದ್ರತೆ ಇದ್ದಾಗ ಮಾತ್ರ.

4. ರಕ್ಷಣಾ ಕ್ಷೇತ್ರದಿಂದ ಭಾರಿ ಬೆಂಬಲ ಸೇರಿದಂತೆ ಸರ್ಕಾರದಿಂದ ಸ್ಪರ್ಧಾತ್ಮಕ ದತ್ತಿಗಳು.

ನಾನು ಈ ಮೊದಲೇ ಉಲ್ಲೇಖಿಸಿದ ಮೂರು ಸವಾಲುಗಳನ್ನು ಪರಿಹರಿಸಬಹುದು. ಉದಾರಮನಸ್ಸಿನ ಖಾಸಗಿ ವ್ಯಕ್ತಿಗಳು ಒಟ್ಟಾಗಿ ಸೇರಿದಲ್ಲಿ ಇದಕ್ಕೆ ಪರಿಹಾರ ಸಾಧ್ಯವಿದೆ ಮತ್ತು ಪ್ರಾರಂಭಿಕ ಮೊತ್ತವೆಂದು 500 ದಶಲಕ್ಷದಿಂದ 1 ಶತಕೋಟಿ ಡಾಲರ್(ಸುಮಾರು 3,500 ರಿಂದ 7,000 ಕೋಟಿ ರೂ.) ಸಂಗ್ರಹಿಸಬಹುದು. ಆದರೆ ದೊಡ್ಡ ಸಮಸ್ಯೆಯೇನೆಂದರೆ, ಇಂತಹ ಉನ್ನತ ಶಿಕ್ಷಣ ಸಂಸ್ಥೆಯನ್ನು ಸರ್ಕಾರದ ಆರ್ಥಿಕ ನೆರವು ಅಥವಾ ರಕ್ಷಣಾ ಕ್ಷೇತ್ರದ ನೆರವು ಇಲ್ಲದೆ ಮುನ್ನಡೆಸುವುದು ಸಾಧ್ಯವಿಲ್ಲ. ಎಂಐಟಿಯಂಥ ಬಲಿಷ್ಠ ಸಂಸ್ಥೆ ಕೂಡ ತನ್ನ ಆಂತರಿಕ ಸಂಪನ್ಮೂಲದಿಂದ ಅರ್ಧದಷ್ಟು ವೆಚ್ಚವನ್ನು ಮಾತ್ರ ಭರಿಸಬಲ್ಲುದು. ಉಳಿದರ್ಧ ವೆಚ್ಚಕ್ಕಾಗಿ ಎನ್‍ಎಸ್‍ಎಫ್(ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ)ದಂಥ ಸಂಸ್ಥೆಗಳನ್ನು ಆಶ್ರಯಿಸಬೇಕಾಗುತ್ತದೆ. ಅಲ್ಲದೆ ರಕ್ಷಣಾ ಇಲಾಖೆ ಜೊತೆಗೆ ಸಂಶೋಧನೆ ಸಹಭಾಗಿತ್ವ ಮಾಡಿಕೊಳ್ಳಬೇಕಾಗುತ್ತದೆ. ಇಂಥ ಸಹಭಾಗಿತ್ವದಿಂದ ಅಮೆರಿಕಕ್ಕೆ ಅಪಾರ ಲಾಭವಾಗಿದೆ.

ಉದಾಹರಣೆಗೆ, ಎಂಐಟಿ ವಿಶ್ವವಿದ್ಯಾಲಯವು ಪ್ರಧಾನ ಪಾತ್ರ ವಹಿಸಿದ್ದ ಅಮೆರಿಕದ ರಕ್ಷಣಾ ಇಲಾಖೆಯ ಯೋಜನೆಯಾದ ‘ಅರ್ಪಾನೆಟ್’ನಿಂದ ಆಧುನಿಕ ಇಂಟರ್‍ನೆಟ್ ಶೋಧನೆಯಾಯಿತು. ರೆಡಾರ್‍ಗಳು, ಲೇಸರ್‍ಗಳು, ಸೆಮಿ ಕಂಡಕ್ಟರ್‍ಗಳು, ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಇವೆಲ್ಲವೂ ರಕ್ಷಣಾ ಇಲಾಖೆಯ ಅನುದಾನದಿಂದ ಮತ್ತು/ಇಲ್ಲವೇ ಎನ್‍ಎಸ್‍ಎಫ್ ದತ್ತಿಯಿಂದ ಸೃಷ್ಟಿಯಾದಂಥವು. ನಾನು ಪ್ರತಿದಿನ ಕಾಲೇಜಿಗೆ ಹೋಗುವಾಗ ಮಾರ್ಗದಲ್ಲಿ ಸಿಗುತ್ತಿದ್ದ ಸಣ್ಣದೊಂದು ಕಟ್ಟಡದಲ್ಲಿ ಅಮೆರಿಕದ ಶೇ.20 ರಷ್ಟು ಅತ್ಯುತ್ತಮ ಭೌತಶಾಸ್ತ್ರಜ್ಞರು(ಇವರಲ್ಲಿ 9 ನೊಬೆಲ್ ಪುರಸ್ಕೃತರೂ ಇದ್ದರು) ಕೆಲಸ ಮಾಡುತ್ತಿದ್ದರು. ಇದರ ಹೆಸರು— ಕಟ್ಟಡ 20. ವಿವರಕ್ಕೆ: https://en.wikipedia.org/wiki/Building_20.

ದುರದೃಷ್ಟವಶಾತ್ ಭಾರತದಲ್ಲಿ ದತ್ತಿ ನೀಡುವ ಸಂಸ್ಥೆಗಳು ಹಣಕಾಸಿನ ವಿಷಯದಲ್ಲಿ ಸಾಕಷ್ಟು ಬಲಿಷ್ಠವಾಗಿಲ್ಲ ಅಥವಾ ಚೀನಾ ಇಲ್ಲವೇ ಅಮೆರಿಕದಂತೆ ಶಿಕ್ಷಣ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಭಾರತದಲ್ಲಿ ದತ್ತಿ ನೀಡುವ ಪ್ರಕ್ರಿಯೆಯು ರಾಜಕೀಯದಿಂದ ಹೆಚ್ಚು ಪ್ರೇರಿತವಾಗಿದ್ದು ಮತ್ತು ಅರ್ಹತೆಯನ್ನು ಆಧರಿಸಿಲ್ಲ. ಇಂಥ ವಾತಾವರಣದಲ್ಲಿ ನೈಜ ಉತ್ಕೃಷ್ಟತೆ ಇಲ್ಲವೇ ರಚನಾತ್ಮಕ ಚಿಂತನೆಗೆ ಹೆಚ್ಚು ಪುರಸ್ಕಾರ ಸಿಗುವುದಿಲ್ಲ. ಬೇಸರದ ಸಂಗತಿಯೆಂದರೆ, ಭಾರತದ ರಕ್ಷಣಾ ಕ್ಷೇತ್ರ ಇಲ್ಲವೇ ರಕ್ಷಣಾ ಸಂಸ್ಥೆಗಳು ಕಾಲೇಜುಗಳೊಂದಿಗೆ ಯಾವುದೇ ಸಂಪರ್ಕ ಹೊಂದಿರುವ ಇತಿಹಾಸವಿಲ್ಲ. ರಕ್ಷಣಾ ಸಂಶೋಧನೆಗೆ ನೀಡಿದ ಬಜೆಟ್‍ನ್ನು ದುಂದುವೆಚ್ಚದ ಸರ್ಕಾರಿ ಸಂಸ್ಥೆಗಳಿಗೆ ಇಲ್ಲವೇ ಬೇರೆ ದೇಶಗಳಿಂದ ದುಬಾರಿ ಶಸ್ತ್ರಾಸ್ತ್ರ ಖರೀದಿಗೆ ಬಳಸಲಾಗುತ್ತದೆ. ರಕ್ಷಣಾ ವೆಚ್ಚದ ಭಾರಿ ಹೆಚ್ಚಳ ಮತ್ತು ಶಕ್ತಿ ವರ್ಧನೆಯು ಉನ್ನತ ಶಿಕ್ಷಣ ಇಲ್ಲವೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಿಲ್ಲ. ಇದೊಂದು ದುರದೃಷ್ಟಕರ ವಿಷಯವಾಗಿದ್ದು ಇದನ್ನು ಬದಲಿಸಲು ಮುಂಗಾಣ್ಕೆಯ ಮುತ್ಸದ್ದಿಗಳ ಅಗತ್ಯವಿದೆ.

ಎಂಐಟಿ ಅಮೆರಿಕಕ್ಕೆ ಮುಂದಾಳತ್ವವನ್ನು ಒದಗಿಸಿಕೊಟ್ಟಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕದ ಪರಮಾಣು ಯೋಜನೆಗೆ ಹಣಕಾಸು ನೆರವು ಸೇರಿದಂತೆ ಯುದ್ಧ ಕಾಲದ ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥ ರಾಗಿದ್ದವರು ಎಂಐಟಿಯ ಡೀನ್ ಪ್ರೊ.ವನ್ನೆವರ್ ಬುಷ್. ವಿಜ್ಞಾನಿ, ಉದ್ಯಮಿ, ಆಡಳಿತಗಾರನೂ ಆಗಿದ್ದ ಪ್ರೊ.ಬುಷ್ ಒಬ್ಬ ಅಸಾಧಾರಣ ವ್ಯಕ್ತಿ. ಅಮೆರಿಕದ ಸೇನೆ ಒಟ್ಟಾಗಿ ಕೆಲಸ ಮಾಡುವಂತೆ ಮಾಡುವಲ್ಲಿ ಅವರು ಯಶಸ್ಸಾದರು.

ಎಂಐಟಿ ಅಮೆರಿಕಕ್ಕೆ ಮುಂದಾಳತ್ವವನ್ನು ಒದಗಿಸಿಕೊಟ್ಟಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕದ ಪರಮಾಣು ಯೋಜನೆಗೆ ಹಣಕಾಸು ನೆರವು ಸೇರಿದಂತೆ ಯುದ್ಧ ಕಾಲದ ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥ ರಾಗಿದ್ದವರು ಎಂಐಟಿಯ ಡೀನ್ ಪ್ರೊ.ವನ್ನೆವರ್ ಬುಷ್. ವಿಜ್ಞಾನಿ, ಉದ್ಯಮಿ, ಆಡಳಿತಗಾರನೂ ಆಗಿದ್ದ ಪ್ರೊ.ಬುಷ್ ಒಬ್ಬ ಅಸಾಧಾರಣ ವ್ಯಕ್ತಿ. ಅಮೆರಿಕದ ಸೇನೆ ಒಟ್ಟಾಗಿ ಕೆಲಸ ಮಾಡುವಂತೆ ಮಾಡುವಲ್ಲಿ ಅವರು ಯಶಸ್ಸಾದರು. ಅವರು ಹೇಳುತ್ತಿದ್ದುದು ಏನೆಂದರೆ, “ನಾನು ಮಾಡಿದ ಮುಖ್ಯವಾದ ಕೆಲಸವೆಂದರೆ, ಅಮೆರಿಕದ ಸೈನ್ಯ ಮತ್ತು ನೌಕಾದಳ ಪರಸ್ಪರ ತಾವು ಏನು ಮಾಡುತ್ತಿದ್ದೇವೆ ಎಂದು ಮತನಾಡಿಕೊಳ್ಳುವಂತೆ ಮಾಡಿದ್ದು”. ಭಾರತದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ! ಪ್ರೊ.ಬುಷ್ ಯುದ್ಧಾನಂತರ “ಸೈನ್ಸ್: ದ ಎಂಡ್‍ಲೆಸ್ ಫ್ರಾಂಟಿಯರ್” ಎಂಬ ಪುಸ್ತಕ ಬರೆದರಲ್ಲದೆ, ಅಮೆರಿಕ ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಮುಂದುವರಿಸಬೇಕು ಹಾಗೂ ಎಂಐಟಿ ಮತ್ತು ಇನ್ನಿತರ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ಐಸೆನ್‍ಹೋವರ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅವರ ಮನವೊಲಿಕೆ ಸಾಮಥ್ರ್ಯ ಎಷ್ಟಿತ್ತೆಂದರೆ, ಅಮೆರಿಕ ಸರ್ಕಾರವು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ, ಡಿಎಆರ್‍ಪಿಎ(ಡಿಫೆನ್ಸ್ ಆಂಡ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ) ಸೇರಿದಂತೆ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಲು ಅವರು ಕಾರಣವಾದರು. ಇವೆಲ್ಲವೂ ಉನ್ನತ ಶಿಕ್ಷಣದಲ್ಲಿ ಅಮೆರಿಕ ಮೇಲುಗೈ ಸಾಧಿಸಲು ನೆರವಾದವು.

ಇಂದು ನಮಗೆ ಬೇಕಿರುವುದು ಸ್ವದೇಶಿ ಪ್ರೊ.ವನ್ನೆವರ್ ಬುಷ್ ಮತ್ತು ನಮ್ಮವರೇ ಆದ ಅಧ್ಯಕ್ಷ ಐಸೆನ್‍ಹೋವರ್. ಇಂಥವರು ನಮ್ಮಲ್ಲಿ ನಾಪತ್ತೆಯಾಗಿದ್ದಾರೆ. ನಾವು ಯಾವಾಗ ಇಂಥ ದೂರದರ್ಶಿತ್ವದ ರಾಜಕೀಯೇತರ ನಾಯಕರನ್ನು ಕಂಡುಕೊಳ್ಳುತ್ತೇವೆಯೋ, ಆಗ ದೇಶದ ಉಳಿದ ಸಮುದಾಯಗಳು ಒಟ್ಟಾಗುತ್ತವೆ ಹಾಗೂ ಶತಕೋಟಿ ಡಾಲರ್‍ಗಳ ದತ್ತಿಯನ್ನು ಸೃಷ್ಟಿಸುತ್ತವೆ. ಜಾಗತಿಕವಾಗಿ ಸ್ಪರ್ಧಾತ್ಮಕವಾದ ಪ್ರಾಧ್ಯಾಪಕರ ಸಮುದಾಯ ಸೃಷ್ಟಿಯಾಗಿ ಜಗತ್ತಿನೆಲ್ಲೆಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಒಂದೇ ಒಂದು ಬೆಂಕಿಯ ಕಿಡಿಗಾಗಿ ಕಾಯ್ದು ಕುಳಿತಿರುವ ತರಗೆಲೆಗಳಂತೆ ಭವಿಷ್ಯವು ನಮ್ಮ ಕಾಲಡಿಯಲ್ಲಿ ಚಟಚಟ ಎನ್ನುತ್ತಿದೆ.

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

* ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿಯವರು ಎನ್.ಆರ್.ನಾರಾಯಣಮೂರ್ತಿ ಮಾಲೀಕತ್ವದ ಕೆಟಮರಾನ್ ವೆಂಚರ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಮೆರಿಕದ ಬಾಸ್ಟನ್ ನಗರದಲ್ಲಿದ್ದಾರೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮