2nd June 2018

ರಾಜ್ಯಮಟ್ಟದಲ್ಲಿ ಉನ್ನತ ಶಿಕ್ಷಣದ ಆಡಳಿತ

ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ನಿರ್ವಹಣೆಗೆ ಇರುವ ಸಂಸ್ಥೆಗಳ ಪಟ್ಟಿ ದೊಡ್ಡದು. ಉನ್ನತ ಶಿಕ್ಷಣ ಇಲಾಖೆಯು ಒಟ್ಟಾರೆ ಜವಾಬ್ದಾರಿಯನ್ನು ಹೊಂದಿದ್ದರೆ, ಅದರಡಿಯಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು, ವಿಶ್ವವಿದ್ಯಾನಿಲಯ ಸುಧಾರಣಾ ಆಯೋಗ, ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಇತ್ಯಾದಿಗಳು ಕೆಲಸ ಮಾಡುತ್ತವೆ. ಅಲ್ಲದೆ ಕರ್ನಾಟಕ ಜ್ಞಾನ ಆಯೋಗವೂ ಸಹ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಗಾಗ ಶಿಫ಼ಾರಸುಗಳನ್ನು ಮಾಡುತ್ತದೆ. ಈ ಎಲ್ಲ ಸಂಸ್ಥೆಗಳೂ ನಿವೃತ್ತ ಕುಲಪತಿಗಳಿಗೆ ಹೊಸ ಖುರ್ಚಿಗಳನ್ನು ಒದಗಿಸುವ ಕೆಲಸವನ್ನೂ, ಅಧಿಕಾರಶಾಹಿಯ ಮತ್ತಷ್ಟು ಪದರಗಳನ್ನು ರೂಪಿಸುವ ಕೆಲಸವನ್ನು ಮಾಡಿವೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಎಲ್ಲ ಸಂಸ್ಥೆಗಳ ಪ್ರಭಾವ, ಅಧಿಕಾರವ್ಯಾಪ್ತಿ ಹೆಚ್ಚಾಗಿದೆ. ವಿಶ್ವವಿದ್ಯಾನಿಲಯಕ್ಕೆ ಮೂಲಭೂತವಾಗಿ ಬೇಕಾದ ಅಧ್ಯಾಪಕರ ಮತ್ತು ಕುಲಪತಿಗಳ ನೇಮಕಾತಿಗಳಂತಹ ಪ್ರಾಥಮಿಕ ಕೆಲಸಗಳನ್ನೆ ಮಾಡದಿದ್ದರೂ ಸಹ, ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯ ಅಪಹರಣಕ್ಕೆ ಸದಾ ಸನ್ನದ್ಧವಾಗಿಯೆ ಈ ಸಂಸ್ಥೆಗಳು ಕಾಯ್ದಿದ್ದವು. ಎರಡು ಮುಖ್ಯ ಉದಾಹರಣೆಗಳನ್ನು ಇಲ್ಲಿ ಗಮನಿಸಬೇಕು. ಮೊದಲಿಗೆ, ಎಲ್ಲ ಸರ್ಕಾರಿ ಕಾಲೇಜುಗಳಿಗೂ ನುರಿತ ಅಧ್ಯಾಪಕರ ಪಾಠಪ್ರವಚನಗಳ ವಿಡಿಯೊ ಒದಗಿಸುವ ಯೋಜನೆಯೊಂದು ನಡೆಯಿತು. ಇದರ ಶೈಕ್ಷಣಿಕ ಪರಿಣಾಮಗಳ ಬಗ್ಗೆ ಯೋಜನೆ ಅನುಷ್ಠಾನಗೊಳ್ಳುವಾಗಲೂ ಚರ್ಚೆಯಾಗಲಿಲ್ಲ, ನಂತರವೂ ಆಗಲಿಲ್ಲ.

ಎರಡನೆಯದಾಗಿ, 2017ರಲ್ಲಿ ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಏಕರೂಪದ ಶಾಸನವನ್ನೂ ರೂಪಿಸಲು ಮಸೂದೆಯನ್ನು ಮಂಡಿಸಲಾಯಿತು. ಅಂದಿನ ಶಿಕ್ಷಣ ಸಚಿವರು ವಿಶ್ವವಿದ್ಯಾನಿಲಯಗಳ ಸ್ವಾಯತ್ತ ಅಧಿಕಾರವನ್ನು ಕಿತ್ತುಕೊಂಡು, ಕಾಮಗಾರಿ ಮತ್ತು ನೇಮಕಾತಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ರಾಜ್ಯಮಟ್ಟದಲ್ಲಿ ಮಾಡುವ ದಿಕ್ಕಿನಲ್ಲಿ ಮಸೂದೆಯನ್ನು ರೂಪಿಸಿದರು. ಬಹುಶಃ ಹಿಂದೆಂದೂ ಸಚಿವರೊಬ್ಬರ ಸ್ವಗ್ರಹಿಕೆ ಮತ್ತು ಪೂರ್ವಾಗ್ರಹಗಳ ಆಧಾರದ ಮೇಲೆ ರೂಪುಗೊಂಡಿದ್ದ ಮಸೂದೆ ಶಿಕ್ಷಣಕ್ಷೇತ್ರದಲ್ಲಿ ಇರಲಿಲ್ಲ ಎನಿಸುತ್ತದೆ. ತಮ್ಮ ಇಲಾಖೆಯ ದೈನಂದಿನ ಕೆಲಸಗಳನ್ನು ಕಾಲಕಾಲಕ್ಕೆ ನಿರ್ವಹಿಸದಿದ್ದರೂ, ಎಲ್ಲ ಅಧಿಕಾರವನ್ನೂ ಕೇಂದ್ರೀಕರಿಸಿಕೊಳ್ಳುವ ದಾಷ್ಟ್ರ್ಯವನ್ನು ಅವರು ತೋರಿದಾಗ ಮತ್ತು ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು ದೂಷಿಸಿದಾಗ ಯಾವ ಪ್ರತಿಭಟನೆಯೂ ನಡೆಯದೆ ಇದ್ದುದು ಬಹುಶಃ ನಮ್ಮ ಸಮಯದ ಸಂಕೇತವೆಂದು ಕಾಣುತ್ತದೆ.

ಇದೆಲ್ಲದರ ನಡುವೆ 2016ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡನ್ನು ಸಹ ಬಿಡುಗಡೆ ಮಾಡಲಾಯಿತು. ವಿಶ್ವವಿದ್ಯಾನಿಲಯಗಳ ಅಧ್ಯಾಪಕರ ಭಾಗವಹಿಸುವಿಕೆಯೇ ಇಲ್ಲದೆ ಈ ನೀತಿಯನ್ನು ರೂಪಿಸಲಾಯಿತು. ಕೆಲವು ಉತ್ತಮ ಸಲಹೆಗಳೂ ಇರುವ ಈ ನೀತಿಗೆ ಸ್ಪಷ್ಟತೆಯಿಲ್ಲ, ವಾಸ್ತವದ ಬಿಕ್ಕಟ್ಟುಗಳ ಅರಿವಿಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಕಳೆದ ಐದು ವರ್ಷಗಳ ಕೇಂದ್ರೀಕರಣ ಪ್ರವೃತ್ತಿಯನ್ನು ಹೊಸ ಉನ್ನತ ಶಿಕ್ಷಣ ಸಚಿವರು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ 2017ರ ಕರ್ನಾಟಕ ವಿಶ್ವವಿದ್ಯಾನಿಲಯ ಮಸೂದೆಯನ್ನು ಕೈಬಿಟ್ಟು, ಅದರ ಬಗ್ಗೆ ಹೊಸ ಚರ್ಚೆಯೊಂದನ್ನು ಪ್ರಾರಂಭಿಸಬೇಕು. ಆದ್ಯತೆಯ ಮೇರೆಗೆ ಕುಲಪತಿಗಳ ನೇಮಕಾತಿಯನ್ನು ನಡೆಸಬೇಕು. ಬೋಧಕರ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಿ, ಜಗತ್ತಿನಾದ್ಯಂತ ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ಕನ್ನಡಿಗರಿಗೆ ಕರ್ನಾಟಕದಲ್ಲಿ ಅವಕಾಶಗಳನ್ನು ಕಲ್ಪಿಸಬೇಕು.

ನಮಗಿಂದು ಹೊಸರಕ್ತ ಬೇಕು. ವೃತ್ತಿಪರ ಶಿಕ್ಷಣ ತಜ್ಞರು ಬೇಕು. ಇಲ್ಲದಿದ್ದರೆ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಮತ್ತಷ್ಟು ಕುಸಿಯುತ್ತದೆ.

ನೇಮಕಾತಿ ಸಮಸ್ಯೆ

ನೇಮಕಾತಿಯ ಸಮಸ್ಯೆ ಎರಡು ರೀತಿಯದು. ಮೊದಲನೆಯದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಬರುವ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ನಿಯಮತವಾಗಿ ನೇಮಕಾತಿ ನಡೆಯುತ್ತಿಲ್ಲ. ದಶಕಕ್ಕೆ ಒಂದು ಬಾರಿಯೂ ನೇಮಕಾತಿ ಮಾಡದಿರುವುದು ಕರ್ನಾಟಕದಲ್ಲಿಯಂತೂ ಸಾಮಾನ್ಯ ಸಂಪ್ರದಾಯವಾಗಿಬಿಟ್ಟಿದೆ. ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ಬೋಧಕರ ನೇಮಕಾತಿಯಾಗದಿದ್ದರೆ, ವಿಶ್ವವಿದ್ಯಾನಿಲಯಗಳು ತಮ್ಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಉತ್ತಮ ವಿದ್ವಾಂಸರನ್ನು ಪ್ರಾಧ್ಯಾಪಕರನ್ನಾಗಿ ಆಹ್ವಾನಿಸುವ ಸ್ವಾತಂತ್ರ್ಯವನ್ನು ಸಹ ವಿಶ್ವವಿದ್ಯಾನಿಲಯಗಳಿಗೆ ನೀಡಬೇಕು. ವಿಶ್ವವಿದ್ಯಾನಿಲಯಗಳ ಆಡಳಿತವೂ ಸಹ ವಿಶೇಷ ಪರಿಣತಿಯನ್ನು ನಿರೀಕ್ಷಿಸುತ್ತದೆ. ಆದುದರಿಂದ ನಿಯಮಿತವಾಗಿ ಬೋಧಕೇತರ ವರ್ಗದವರನ್ನೂ ನೇಮಕ ಮಾಡಿ, ಅವರುಗಳು ಸಹ ಅನುಭವ ಪಡೆಯುವುದು ಅತ್ಯಗತ್ಯ. ಈಗ ದಶಕಗಳ ಕಾಲ ಅತಿಥಿ ಉಪನ್ಯಾಸಕರು ಮತ್ತು ದಿನಗೂಲಿ ನೌಕರರ ಮೂಲಕ ಬೋಧನೆ ಮತ್ತು ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಅಸಮಂಜಸ ಮಾತ್ರವಲ್ಲ, ಉನ್ನತ ಶಿಕ್ಷಣ ಸಂಸ್ಥೆಗಳ ದೃಷ್ಟಿಯಿಂದ ದುರಂತವೇ ಸರಿ. ಎಲ್ಲಕ್ಕಿಂತ ಮಿಗಿಲಾಗಿ, ಕುಲಪತಿಗಳು ಮತ್ತು ಇತರೆ ಶಾಸನಬದ್ಧ ಅಧಿಕಾರಿಗಳನ್ನು ಸಹ ಯಾವುದೆ ವಿಳಂಬವಿಲ್ಲದೆ ನೇಮಿಸಬೇಕು. ಇಂದು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿಯೇ ವರ್ಷಗಟ್ಟಲೆ ಕುಲಪತಿಗಳ ಹುದ್ದೆ ಖಾಲಿಯಾಗಿರುತ್ತಿದೆ.

ನೇಮಕಾತಿಯ ಎರಡನೆಯ ಸಮಸ್ಯೆ ಯೋಗ್ಯ ಅಭ್ಯರ್ಥಿಗಳ ಆಯ್ಕೆ ಆಗದಿರುವುದು. ಇದಕ್ಕೆ ಹಲವು ಕಾರಣಗಳಿವೆ. ಇಂದು ಹಣ, ರಾಜಕೀಯ ಪ್ರಭಾವ ಮತ್ತು ಜಾತಿಬೆಂಬಲವಿಲ್ಲದೆ ಯಾವುದೆ ಹಂತದ ನೇಮಕಾತಿಯೂ ಆಗುತ್ತಿಲ್ಲ ಎನ್ನುವುದು ಒಂದು ದೊಡ್ಡ ಸಮಸ್ಯೆ. ಇದಕ್ಕಿಂತ ಮಿಗಿಲಾಗಿ ನೇಮಕಾತಿಯ ಪ್ರಕ್ರಿಯೆ, ಮಾನದಂಡಗಳು ಮತ್ತು ವಿವಿಧ ಬಗೆಯ ಮೀಸಲಾತಿಯನ್ನು ಅನುಷ್ಠಾನಗೊಳಿಸುತ್ತಿರುವ ವಿಧಾನಗಳು ತೊಡಕಿನವು ಮತ್ತು ಅರ್ಥಹೀನವಾದವು ಆಗಿವೆ. ಉದಾಹರಣೆಗೆ, ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ವರ್ಷಗಟ್ಟಲೆ ನೇಮಕಾತಿಗೆ ಸಂಬಂಧಿಸಿದ ಕಡತಗಳು ಕುಳಿತುಬಿಡುತ್ತವೆ. ಇದರಿಂದ ನೇಮಕಾತಿ ಪ್ರಕ್ರಿಯೆಯೇ ಪ್ರಾರಂಭವಾಗುವುದಿಲ್ಲ.

ಒಂದು ವೇಳೆ ನೇಮಕಾತಿ ಪ್ರಕ್ರಿಯೆ ಶುರುವಾದರೆ ಇಂದಿನ ದಿನಗಳಲ್ಲಿಯಂತೂ ಎಲ್ಲರ ಒಲವು ಸಾಮಾನ್ಯ ಪ್ರವೇಶ ಪರೀಕ್ಷೆಯ ಕಡೆಗೆ ಇದೆ. ಆದರೆ ಒಬ್ಬ ಅಧ್ಯಾಪಕನನ್ನು ಕೇವಲ ಬಹುಆಯ್ಕೆಯ ಪ್ರಶ್ನೆಗಳಿರುವ ಒಂದು ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡುವುದು ಹೇಗೆ? ಒಂದೆ ವಾಕ್ಯವನ್ನು ಬರೆಯದ ಮತ್ತು ಮಾತನಾಡದ ಅಭ್ಯರ್ಥಿಯ ಅರ್ಹತೆಯನ್ನು ಅಳೆಯುವುದಾದರೂ ಹೇಗೆ ಎನ್ನುವ ಪ್ರಶ್ನೆಯೇ ಸಾವಿರಾರು ಅಧ್ಯಾಪಕರನ್ನು ಆಯ್ಕೆ ಮಾಡುವ ಆಡಳಿತಗಾರರ ಮನಸ್ಸಿನಲ್ಲಿ ಮೂಡುತ್ತಿಲ್ಲ. ಈಗಂತೂ ರಾಜ್ಯದಲ್ಲಿ ಪ್ರಾಧ್ಯಾಪಕರ ಪದವಿಗೂ ಇಂತಹುದೆ ಪರೀಕ್ಷೆಗಳನ್ನು ಮಾಡಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ.

ಒಂದು ವಿಭಾಗಕ್ಕೆ ಯಾವ ವಿಷಯಗಳಲ್ಲಿ ಪರಿಣತಿ ಹೊಂದಿರುವವರು ಅಗತ್ಯ ಎನ್ನುವ ಚರ್ಚೆ ವಿಭಾಗದ ಮಟ್ಟದಲ್ಲಾಗಲಿ, ವಿಶ್ವವಿದ್ಯಾನಿಲಯದೊಳಗಾಗಲಿ ನಡೆದಿರುವುದನ್ನು ನಾನು ಇದುವರೆಗೆ ಕೇಳಿಲ್ಲ. ಎಲ್ಲ ವಿಶ್ವಮಟ್ಟದ ಸಂಸ್ಥೆಗಳಲ್ಲಿ ನೇಮಕಾತಿಯ ಪ್ರಕ್ರಿಯೆಯಲ್ಲಿ ಮೊದಲನೆಯ ಪ್ರಶ್ನೆ ನಿರ್ದಿಷ್ಟ ಪರಿಣತಿಯದು. ಅದರ ತೀರ್ಮಾನವಾದ ನಂತರ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂಶೋಧನೆ ಮತ್ತು ಬೋಧನಾ ಸಾಮಥ್ರ್ಯಗಳ ಪರೀಕ್ಷೆಯನ್ನು ಹಲವಾರು ಹಂತಗಳಲ್ಲಿ ನಡೆಯಬೇಕು. ಈ ಎಲ್ಲ ಹಂತಗಳಲ್ಲಿ ವಿಭಾಗದ ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ.

ಬಹುತೇಕ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಇಂದಿನ ದಿನಗಳಲ್ಲಿ ಅಧ್ಯಾಪಕರ ನೇಮಕಾತಿಯನ್ನು ವಿಭಾಗದ ಮಟ್ಟದಲ್ಲಿಯೆ ಪ್ರಾರಂಭಿಸುತ್ತಿದ್ದಾರೆ. ಇಂತಹ ವ್ಯವಸ್ಥೆ ಭಾರತದ ಬಹುತೇಕ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಇಲ್ಲ. ಈ ಸಂಸ್ಥೆಗಳಲ್ಲಿ ಗುಣಮಟ್ಟದ ಕುಸಿತಕ್ಕೆ ಈ ಮೇಲಿನ ಸಮಸ್ಯೆಗಳು ಬಹುಮುಖ್ಯ ಕಾರಣವೆಂದರೆ ತಪ್ಪಾಗದು. ಉತ್ತಮ ಬೋಧಕರ ನೇಮಕಾತಿಯಾಗದೆ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಉಳಿಗಾಲವಿಲ್ಲ. ಕರ್ನಾಟಕದ ಸಂದರ್ಭದಲ್ಲಿ ಇದಕ್ಕೊಂದು ಸರಳವಾದ ಸೂತ್ರವಿದೆ. ಅದೇನೆಂದರೆ ಸಾಧ್ಯವಾದಷ್ಟೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಬೇಕು.

ಖಾಸಗಿ—ಸಾರ್ವಜನಿಕ ಪ್ರಶ್ನೆ

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಅವಕಾಶವಿರಬಾರದು, ಏಕರೂಪದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಇರಬೇಕು ಎನ್ನುವ ಪ್ರಬಲವಾದ ವಾದವೊಂದನ್ನು ಬಹಳ ಕಾಲದಿಂದ ಮಾಡಲಾಗುತ್ತಿದೆ. ಇದು ಎಡಪಂಥೀಯ ನೆಲೆಯಿಂದ ಮಾಡಲಾಗಿರುವ ವಾದ. ನಮ್ಮ ಪ್ರಸ್ತುತ ಚರ್ಚೆಯಲ್ಲಿ ಖಾಸಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗೆ ಅವಕಾಶವಿರಬೇಕೆ ಎನ್ನುವ ಪ್ರಶ್ನೆ ಒಂದು ಮುಖ್ಯ ಪ್ರಶ್ನೆ. ಇಂದು ಸುಮಾರು ಮುನ್ನೂರರಷ್ಟು ಖಾಸಗಿ ವಿಶ್ವವಿದ್ಯಾನಿಲಯಗಳಿವೆ. ಇವುಗಳಲ್ಲಿ ಬಹುಪಾಲು ಕಳೆದ ಎರಡು ದಶಕಗಳಲ್ಲಿ ಸ್ಥಾಪಿತವಾಗಿರುವಂತಹವು.

ಖಾಸಗಿ ವಿಶ್ವವಿದ್ಯಾನಿಲಯಗಳು ಲಾಭ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿರುವ ವಾಣಿಜ್ಯ ಸಂಸ್ಥೆಗಳು ಎನ್ನುವುದು ನಿಜ. ಇತ್ತೀಚೆಗಂತೂ ದೇಶದ ಮುಖ್ಯ ಕಾರ್ಪೋರೇಟ್ ಸಂಸ್ಥೆಗಳೆಲ್ಲವೂ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿವೆ ಎನ್ನುವುದು ನಿಜವೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ತೀವ್ರ ಕುಸಿತದ ಜೊತೆ ಜೊತೆಗೆ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ನಾವು ಉತ್ತಮ ಅಭ್ಯಾಸಗಳು ಎನ್ನುವ ಹಲವಾರು ಚಟುವಟಿಕೆಗಳು ನಡೆಯುತ್ತಿವೆ. ಉದಾಹರಣೆಗೆ, ತರಗತಿಯಲ್ಲಿ ಪಾಠ ಮಾಡುವ ಅಧ್ಯಾಪಕರಿಗೆ ಸ್ವಾಯತ್ತತೆ ನೀಡಿ, ಅವರನ್ನು ಕಲಿಕಾ ಮತ್ತು ಪರೀಕ್ಷಾ ಕೆಲಸಗಳ ಕೇಂದ್ರದಲ್ಲಿ ಇರಿಸಲಾಗುತ್ತಿದೆ. ಈ ಬಗೆಯ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ 99.5% ಅಧ್ಯಾಪಕರಿಗೆ ದೊರೆಯುವುದಿಲ್ಲ.

ನಾನು ಹೇಳಬಯಸುವುದು ಇಷ್ಟೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ನಾವು ಕಾಣಬಯಸುವ ಎಲ್ಲ ಬಗೆಯ ಸುಧಾರಣೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸ್ವಂತ ಹಿತಾಸಕ್ತಿಯ ಕಾರಣದಿಂದಾಗಿ ಅಳವಡಿಸಿಕೊಂಡಿವೆ. ಹಾಗಾಗಿ ಶಿಕ್ಷಕರ ನೇಮಕಾತಿ, ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನಗಳ ತೀರ್ಮಾನಗಳು, ಕಲಿಕಾ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಎಲ್ಲವೂ ವಿಭಾಗದ ಮಟ್ಟದಲ್ಲಿ, ಅಧ್ಯಾಪಕರ ನೇರ ಪಾಲುದಾರಿಕೆಯಲ್ಲಿ ನಡೆಯುತ್ತಿವೆ. ನಾವು ಬಯಸುವ ಎಲ್ಲ ಬಗೆಯ ನವೀನ ಪ್ರಯೋಗಗಳು ಇಂದು ಖಾಸಗಿ ಸಂಸ್ಥೆಗಳಲ್ಲಿ ನಡೆಯುತ್ತಿವೆ. ಇಂತಹ ಯಾವ ಪ್ರಯೋಗವೂ ಯಾವುದೆ ಸಾರ್ವಜನಿಕ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತದೆ ಎನ್ನುವ ವಿಶ್ವಾಸ ನನಗಿಲ್ಲ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018