2nd ಜೂನ್ ೨೦೧೮

ಉನ್ನತ ಶಿಕ್ಷಣದ ಭರವಸೆಯೇನು?

ಒಂದೆರಡು ವರ್ಷಗಳ ಹಿಂದೆ ಕರ್ನಾಟಕದ ಹಿರಿಯ ವಿಶ್ರಾಂತ ಕುಲಪತಿಗಳೊಬ್ಬರ ಜೊತೆಗೆ ಬೆಂಗಳೂರಿನ ಸಭೆಯೊಂದರಲ್ಲಿ ಬಿರುಸಿನ ಚರ್ಚೆಯಲ್ಲಿ ತೊಡಗಬೇಕಾಯಿತು. ಬೆಂಗಳೂರಿನ ಹೊಸ ವಿಶ್ವವಿದ್ಯಾನಿಲಯವೊಂದರ ’ಮುನ್ನೋಟ ದಾಖಲೆ’ಯನ್ನು ಚರ್ಚಿಸುತ್ತ, ವಿಶ್ರಾಂತ ಕುಲಪತಿಗಳು ಹೇಳಿದರು: ನಾವೇಕೆ ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ವಿಶ್ವವಿದ್ಯಾನಿಲಯಗಳೊಳಗೆ ಎಳೆದು ತರುತ್ತಿದ್ದೇವೆ? ಅವುಗಳೆಲ್ಲವನ್ನು ಸರ್ಕಾರಗಳು ನೋಡಿಕೊಳ್ಳುತ್ತವೆ ಬಿಡಿ!

ಕೆಲವು ನಿಮಿಷಗಳ ಕಾಲ ಅವರ ಮಾತುಗಳನ್ನು ಕೇಳಿದ ನಂತರ, ನಾನು ವಿನಯದಿಂದಲೇ ಅವರಿಗೆ ಆಧುನಿಕ ಭಾರತದಲ್ಲಿ ಉನ್ನತ ಶಿಕ್ಷಣದ ಭರವಸೆಯೇನು ಎನ್ನುವುದರ ಬಗ್ಗೆ ಕೆಲವು ಮಾತುಗಳನ್ನು ಹೇಳಬೇಕಾಯಿತು. ನಮ್ಮಲ್ಲಿ ವಿಶ್ವವಿದ್ಯಾನಿಲಯಗಳನ್ನು ವಸಾಹತುಶಾಹಿ ಸರ್ಕಾರ, ದೇಶಿ ಸಂಸ್ಥಾನಗಳು, ರಾಷ್ಟ್ರೀಯವಾದಿಗಳು ಹೀಗೆ ಹಲವು ಬಗೆಯ ಹಿನ್ನೆಲೆಯವರು ತಮ್ಮದೆ ಉದ್ದೇಶಗಳಿಗೆ ಸ್ಥಾಪಿಸಿದರು. ವಸಾಹತುಶಾಹಿ ಮತ್ತು ದೇಶಿ ಸಂಸ್ಥಾನಗಳ ವಿಶ್ವವಿದ್ಯಾನಿಲಯಗಳು ಆಧುನಿಕ ವೃತ್ತಿಗಳಲ್ಲಿ (ವಕೀಲರು, ವೈದ್ಯರು, ಅಧ್ಯಾಪಕರು, ಆಡಳಿತಗಾರರು, ಇಂಜಿನಿಯರುಗಳು ಇತ್ಯಾದಿ) ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದರೆ, ರಬೀಂದ್ರನಾಥ ಟಾಗೋರ್, ಪಂಡಿತ್ ಮಾಳವೀಯ, ಗಾಂಧೀಜಿ ಮೊದಲಾದವರು ಭಾರತಕ್ಕೆ ಅಗತ್ಯವಾದ ರೀತಿಯ ಹೊಸ ರಾಷ್ಟ್ರೀಯ ಸಮುದಾಯವನ್ನು ಕಟ್ಟುವ ಕನಸನ್ನು ಕಂಡರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಎರಡೂ ಆಶಯಗಳು ಒಂದು ರೀತಿಯಲ್ಲಿ ಒಟ್ಟಾಗಿ ಕೂಡಿದವು.

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಶಿಕ್ಷಣದಿಂದ, ಅದರಲ್ಲಿಯೂ ಉನ್ನತ ಶಿಕ್ಷಣದಿಂದ, ಭಾರತೀಯ ಸಮಾಜದ ಸುಧಾರಣೆಯು ಸಾಧ್ಯವಾಗುತ್ತದೆ ಎನ್ನುವ ಮೂಲ ನಂಬಿಕೆ ಎಲ್ಲರಲ್ಲಿಯೂ ಇತ್ತು. ಅಂದರೆ ವಿಶ್ವವಿದ್ಯಾನಿಲಯಗಳು ಕೇವಲ ಜ್ಞಾನ ಮತ್ತು ಕೌಶಲ್ಯಗಳ ಕೇಂದ್ರಗಳಾಗುವುದಿಲ್ಲ. ಅವುಗಳು ಜಾತಿ, ಧರ್ಮ, ಲಿಂಗ, ಪ್ರದೇಶ, ಭಾಷೆ ಇತ್ಯಾದಿ ಸಂಕುಚಿತತೆಗಳಿಂದ ಹೊರಬರುವ ಸಾಧನಗಳಾಗುತ್ತವೆ ಎನ್ನುವ ಆಶಾವಾದವಿತ್ತು. ವಿಶ್ವವಿದ್ಯಾನಿಲಯಗಳು ಕೇವಲ ಭಾರತದ ಸಾಮಾಜಿಕ ವಾಸ್ತವವನ್ನು ಪ್ರತಿಫಲಿಸುವ, ಪ್ರತಿನಿಧಿಸುವ ಸಂಸ್ಥೆಗಳಾಗಿ ಉಳಿಯುವುದಿಲ್ಲ. ಬದಲಿಗೆ ಆದರ್ಶದ ಆಧುನಿಕ ಭಾರತ ಹೇಗಿರಬೇಕೊ ಅಂತಹ ಪರಿಪೂರ್ಣ ಸಮಾಜದ ಕಡೆಗೆ ವಿಶ್ವವಿದ್ಯಾನಿಲಯಗಳು ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆ ಎನ್ನುವ ನಂಬಿಕೆ, ಬದ್ಧತೆ ಇತ್ತು. ವಿಶ್ವವಿದ್ಯಾನಿಲಯಗಳ ಮೂಲಕ ಕೇವಲ ನವಭಾರತ ನಿರ್ಮಾಣಕ್ಕೆ ಅಗತ್ಯವಾದ ಜ್ಞಾನ—ತಂತ್ರಜ್ಞಾನಗಳನ್ನು ಮಾತ್ರ ನಾವು ಉತ್ಪಾದಿಸುತ್ತಿಲ್ಲ. ಅವುಗಳ ಜೊತೆಗೆ ಹೊಸ ಭಾರತದ ಸಾಮಾಜಿಕತೆ ಮತ್ತು ಸಾಮರಸ್ಯಗಳು ಹೇಗಿರಬೇಕು ಎನ್ನುವುದನ್ನು ತೋರಿಸುವ ಸಮುದಾಯಗಳನ್ನು ವಿಶ್ವವಿದ್ಯಾನಿಲಯಗಳು ಕಟ್ಟಿ ತೋರಿಸುತ್ತವೆ ಎನ್ನುವ ಭರವಸೆ ಭಾರತದಲ್ಲಿತ್ತು. ಟಾಗೋರರ ಶಾಂತಿನಿಕೇತನ ಅಥವಾ ಗಾಂಧೀಜಿಯವರ ಗುಜರಾತ್ ವಿದ್ಯಾಪೀಠಗಳು ಇಂತಹ ಆಶಯವನ್ನು ಹೊತ್ತು ಪ್ರಾರಂಭವಾಗಿದ್ದವು.

ಹೀಗೆ ಇಂದು ಉನ್ನತ ಶಿಕ್ಷಣ ಸಂಸ್ಥೆಗಳ ವೈಫಲ್ಯ ಭಾರತದ ಸಮಸ್ಯೆಗಳಿಗೆ ಉತ್ತರವಾಗಬಹುದಾದ ಅಭಿವೃದ್ಧಿಯ ಮಾದರಿ ಅಥವಾ ತಂತ್ರಜ್ಞಾನಗಳನ್ನು ರೂಪಿಸಲಿಲ್ಲ ಎನ್ನುವುದಷ್ಟೆ ಅಲ್ಲ. ಬಹುಶಃ ಅದಕ್ಕಿಂತ ಮುಖ್ಯವಾಗಿ ಭಾರತಕ್ಕೆ ಮಾದರಿಯಾಗಬಹುದಾದ ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಗಳನ್ನು ಅರಿತ ನಾಗರಿಕ ಸಮಾಜವನ್ನು ವಿಶ್ವವಿದ್ಯಾನಿಲಯಗಳೊಳಗೆ ನಾವು ಕಟ್ಟಲಾಗಲಿಲ್ಲ ಎನ್ನುವುದು ತುಂಬ ವಿಷಾದದ ಸಂಗತಿ. ಸಾಮಾಜಿಕ ನ್ಯಾಯ ವಿಶ್ವವಿದ್ಯಾನಿಲಯಗಳೊಳಗೆ ಅನುಷ್ಠಾನಗೊಳ್ಳದಿದ್ದರೆ ಅದು ಮತ್ತೆಲ್ಲಿ ಆಗುವ ಭರವಸೆಯೂ ಇರುವುದಿಲ್ಲ.

ರಾಷ್ಟ್ರಮಟ್ಟದಲ್ಲಿ ಉನ್ನತ ಶಿಕ್ಷಣದ ಆಡಳಿತ

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯು.ಜಿ.ಸಿ.) ರಾಷ್ಟ್ರಮಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ನಿಯಂತ್ರಣಕ್ಕೆ ಇರುವ ಸಂಸ್ಥೆ. 1956ರಲ್ಲಿ ಸ್ಥಾಪಿತವಾದ ಯು.ಜಿ.ಸಿ. ಮುಖ್ಯವಾಗಿ ವಿಶ್ವವಿದ್ಯಾನಿಲಯಗಳಿಗೆ ಧನಸಹಾಯ ಮಾಡುವುದನ್ನೆ ಮುಖ್ಯವಾಗಿ ನಿರ್ವಹಿಸುತ್ತಿತ್ತು.

ಕಳೆದ ದಶಕದಲ್ಲಿ ಅದರ ಅಧಿಕಾರವ್ಯಾಪ್ತಿ ಎಲ್ಲ ಬಗೆಯ ವಿಶ್ವವಿದ್ಯಾನಿಲಯಗಳಿಗೂ ವಿಸ್ತರಿಸುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯವು ತನ್ನ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಯು.ಜಿ.ಸಿ. ಅಲ್ಲದೆ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 15 ಇತರೆ ಸಂಸ್ಥೆಗಳಿವೆ. ಆದರೆ ಇವುಗಳ ನಡುವೆ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿರುವುದು ಯು.ಜಿ.ಸಿ. ಮಾತ್ರ.

ಒಂದು ರೀತಿಯಲ್ಲಿ ದೆಹಲಿಯ ಇತರೆ ಅಧಿಕಾರಶಾಹಿ ಸಂಸ್ಥೆಗಳಂತೆ ಯು.ಜಿ.ಸಿ. ಸಹ ಕೆಲಸ ಮಾಡುತ್ತದೆ: ತನ್ನ ಕೆಳಗಿನವರನ್ನು ತುಣಿಯುವುದು ಮತ್ತು ಮೇಲಿನವರಿಗೆ ಸಲಾಮು ಹಾಕುವುದು. ಯು.ಜಿ.ಸಿ.ಯ ನೌಕರರು ಯಾವ ವಿಶ್ವವಿದ್ಯಾನಿಲಯದ ಕುಲಪತಿಗೂ ಬೆಲೆ ನೀಡುವುದಿಲ್ಲ. ಆದರೆ ಅದೆ ಯು.ಜಿ.ಸಿ.ಯ ಅಧ್ಯಕ್ಷ ಮಾನವ ಸಂಪನ್ಮೂಲ ಇಲಾಖೆಯ ಕಿರಿಯ ಐ.ಎ.ಎಸ್. ಅಧಿಕಾರಿಯು ದೂರವಾಣಿ ಕರೆ ಮಾಡಿದರೆ ಎದ್ದು ನಿಂತು ಮಾತನಾಡುತ್ತಾರೆ ಎನ್ನುವ ಕಥೆಗಳಿವೆ. ಯು.ಜಿ.ಸಿ.ಯಲ್ಲಿನ ಭ್ರಷ್ಟತೆಯ ಬಗ್ಗೆ ಸಹ ಮಾತುಗಳು ಕೇಳಿಬರುತ್ತವೆ. ಈ ನಡುವೆ ಯು.ಪಿ.ಎ. ಮತ್ತು ಎನ್.ಡಿ.ಎ. ಸರ್ಕಾರಗಳೆರಡೂ ಯು.ಜಿ.ಸಿ.ಯ ಜಾಗದಲ್ಲಿ ಮತ್ತಷ್ಟು ಅಧಿಕಾರವನ್ನು ಹೊಂದಿರುವ ಮತ್ತೊಂದು ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಆಗಾಗ ದನಿಯೆತ್ತಿದೆ.

ಇವೆಲ್ಲವುಗಳ ನಡುವೆ ಒಂದು ಮಾತನ್ನು ನೆನಪಿಡಬೇಕು. ಕಳೆದ ಎರಡು—ಮೂರು ದಶಕಗಳಲ್ಲಿ ಯು.ಜಿ.ಸಿ.ಯು ಬಹುಮಟ್ಟಿಗೆ ಸಾಧಾರಣ ಗುಣಮಟ್ಟವನ್ನು ಮಾತ್ರ ಪ್ರೋತ್ಸಾಹಿಸುವ ತಾಂತ್ರಿಕ ನಿಯಮಾವಳಿಗಳನ್ನು ರೂಪಿಸುತ್ತ ಕಾಲಕಳೆದಿದೆ. ಶೈಕ್ಷಣಿಕವಾಗಿ ನವೀನತೆಯನ್ನು ತರುವ ಯಾವ ಕ್ರಮವನ್ನೂ ಸಾವಯವವಾಗಿ ವಿಶ್ವವಿದ್ಯಾನಿಲಯಗಳೆ ರೂಪಿಸುವಂತಹ ವ್ಯವಸ್ಥೆಗೆ ಒಂದು ಎಂದೂ ಮಣೆಹಾಕಿಲ್ಲ. ಮೂರು ಸರಳ ಉದಾಹರಣೆಗಳನ್ನು ಇಲ್ಲಿ ನೀಡಬಹುದು. ನಾಲ್ಕು ವರ್ಷಗಳ ಸ್ನಾತಕ ಪದವಿಯನ್ನು ದೆಹಲಿ ವಿಶ್ವವಿದ್ಯಾನಿಲಯ ನೀಡಲು ಇಚ್ಛಿಸಿದಾಗ ಯು.ಜಿ.ಸಿ. ಅನುಮತಿ ನೀಡಲಿಲ್ಲ. ಬೋಧಕ ವರ್ಗದವರ ಅರ್ಹತೆ ಮತ್ತು ಶೈಕ್ಷಣಿಕ ಸಾಧನೆ ಸೂಚ್ಯಂಕಗಳು ವಿಶ್ವವಿದ್ಯಾನಿಲಯ ವ್ಯವಸ್ಥೆಗೆ ಇನ್ನಿಲ್ಲದಷ್ಟು ಹಾನಿಯನ್ನು ಮಾಡಿವೆ. ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದ ಪದವಿಗಳ ಮತ್ತು ಅಂಕಪಟ್ಟಿಗಳ ಮಾರಾಟವನ್ನು ಅದಕ್ಕೆ ತಡೆಯಲು ಸಾಧ್ಯವಾಗಿಲ್ಲ.

ಇನ್ನು ಉನ್ನತ ಶಿಕ್ಷಣದ ನೀತಿಯನ್ನು ರಾಷ್ಟಮಟ್ಟದಲ್ಲಿ ರೂಪಿಸುವ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಎಲ್ಲ ರಾಜಕೀಯ ಪಕ್ಷಗಳಿಗೂ ಪೊಲಿಟಿಕಲ್ ಫ಼ುಟಬಾಲ್ ಇದ್ದಂತೆ. ಎಲ್ಲ ದಿಕ್ಕುಗಳಲ್ಲಿಯೂ ಒದೆಯಲು. ಎಲ್ಲ ಪ್ರಣಾಳಿಕೆಗಳಲ್ಲಿಯೂ ಶ್ಲಾಘನೀಯವಾದ ಗುರಿಗಳಿರುತ್ತವೆ. ಉದಾಹರಣೆಗೆ, ಮೋದಿ ಸರ್ಕಾರವೂ ಸಹ ಉತ್ತಮ ವಿಶ್ವವಿದ್ಯಾನಿಲಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಕಾರ್ಯಕ್ರಮಗಳನ್ನು ರೂಪಿಸಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಇಲಾಖೆಯು ಸುದ್ದಿಯಲ್ಲಿ ಇದ್ದುದು ಅನಗತ್ಯ ವಿವಾದಗಳಿಂದ. ಹೀಗಾಗಿ ಗಮನಾರ್ಹವಾದ ಸಾಧನೆ ಕಂಡುಬರುವುದಿಲ್ಲ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮