2nd ಜೂನ್ ೨೦೧೮

ಉನ್ನತ ಶಿಕ್ಷಣ ಎತ್ತ ಸಾಗಿದೆ?

ಜ್ಞಾನಕೇಂದ್ರಿತ ನಾಗರಿಕತೆಯ ಸಮಯದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಜ್ಞಾನಸೃಷ್ಟಿ ಮತ್ತು ಪ್ರಸರಣಗಳ ಪ್ರಕ್ರಿಯೆಗಳ ಬಗ್ಗೆ ಹೆಚ್ಚು ಎಚ್ಚರದಿಂದ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ನಮಗಿದೆ.

ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಅಪಾರ ಹುರುಪು, ಸುಭದ್ರ ಬದುಕು ಕಟ್ಟಿಕೊಳ್ಳುವ ಆಸೆ — ಆಕಾಂಕ್ಷೆಗಳೊಡನೆ ಕೋಟ್ಯಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಾರಂಭಿಸಿದ್ದಾರೆ. ಯಾವ ಪದವಿ ಪಡೆದರೆ ಬದುಕು ಹಸನಾಗುತ್ತಿದೆ ಎನ್ನುವ ಪ್ರಶ್ನೆ ಮನೆಮನಗಳನ್ನು ಕಾಡುತ್ತಿದೆ.

ಮಾನವ ನಾಗರಿಕತೆ ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಭಾರತದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ನಮ್ಮ ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಪ್ರಪಂಚದ ಅರಿವನ್ನು ಕಟ್ಟಿಕೊಡುತ್ತಿವೆಯೇ? ಹೊಸದನ್ನು ಸೃಷ್ಟಿಸುವ ಶಕ್ತಿಯನ್ನು ನೀಡುತ್ತಿವೆಯೇ? ತಮ್ಮ ಸಮಾಜದ ಬಗ್ಗೆ ಹೊಂದಿರಬೇಕಾಗಿರುವ ಅವರು ನೈತಿಕ ಹೊಣೆಗಾರಿಕೆಯನ್ನು ಕಲಿಸುತ್ತಿವೆಯೇ? ಈ ಯಾವ ಪ್ರಶ್ನೆಗಳಿಗೂ ಸಮಾಧಾನಕರವಾದ, ಗುಣಾತ್ಮಕವಾದ ಉತ್ತರಗಳು ದೊರಕುವುದಿಲ್ಲ. ನಮ್ಮ ವಿದ್ಯಾರ್ಥಿಗಳು ಪಡೆಯುತ್ತಿರುವ ಪದವಿಗಳಿಗೆ ಸ್ಪಷ್ಟವಾದ ಶೈಕ್ಷಣಿಕ ಗುರಿಗಳಿರುವಂತೆಯೂ ತೋರುತ್ತಿಲ್ಲ. ಅಂದರೆ ಎರಡರಿಂದ ಐದು ವರ್ಷ ಅವಧಿಯ ಅಧ್ಯಯನದ ನಂತರ ಹೊರಬರುವ ಪದವೀಧರ ಏನನ್ನು ತಿಳಿದಿರಬೇಕು ಎಂದು ಕೇಳಿದರೆ ನೇರ, ಸರಳ ಮತ್ತು ಸ್ಪಷ್ಟ ವಿವರಣೆ ದೊರಕುವುದಿಲ್ಲ.

ಇಂದು ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ಬಿಕ್ಕಟ್ಟಿನಲ್ಲಿದೆ ಎನ್ನುವುದರ ಬಗ್ಗೆ ಯಾವುದೆ ಸಂಶಯವು ಬೇಡ. ಆದರೆ ನಾವು ಎದುರಿಸುತ್ತಿರುವ ಇತರೆ ಗಂಭೀರ ಸಮಸ್ಯೆಗಳಿಗೆ ಹೋಲಿಸಿದರೆ (ಉದಾಹರಣೆಗೆ ಹತ್ತಿರದ ಕ್ಷೇತ್ರವೇ ಆದ ಪ್ರಾಥಮಿಕ ಶಿಕ್ಷಣವನ್ನು ಪರಿಗಣಿಸಿ) ಉನ್ನತ ಶಿಕ್ಷಣ ಕ್ಷೇತ್ರವನ್ನು ಸರಿಮಾಡಬಹುದೇನೊ

ಎನ್ನುವ ಆಶಾವಾದವೂ ಇದೆ. ಅದಿರಲಿ. ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟನ್ನು ಎದುರಿಸಲು ವಾಸ್ತವಿಕ ನೆಲೆಯಲ್ಲಿ ಆ ಬಿಕ್ಕಟ್ಟನ್ನು ಅರಿಯುವ ಕೆಲಸವೂ ಮೊದಲು ಆಗಬೇಕು. ಈ ಕುರಿತಾಗಿ ಹೊಸ ಚರ್ಚೆಯೊಂದನ್ನು ಪ್ರಾರಂಭಿಸಲು ನಾವು ಮೂಲಭೂತವಾದ ಪ್ರಶ್ನೆಗಳನ್ನೆ ಕೇಳಿಕೊಳ್ಳಬೇಕಿದೆ.

  • ಭಾರತೀಯ ಸಮಾಜಕ್ಕೆ ಅಗತ್ಯವಿರುವ ಉನ್ನತ ಶಿಕ್ಷಣದ ಸ್ವರೂಪವೇನು?
  • ಎಷ್ಟು ಜನರಿಗೆ ಉನ್ನತ ಶಿಕ್ಷಣವನ್ನು ನಾವು ನೀಡಬೇಕು?
  • ಉನ್ನತ ಶಿಕ್ಷಣದಲ್ಲಿ ಖಾಸಗಿ ವಲಯವು ನಿರ್ವಹಿಸಬೇಕಾಗಿರುವ ಪಾತ್ರವೇನು?
  • ಈ ಕ್ಷೇತ್ರದ ನಿಯಂತ್ರಣ (Regulation) ಹೇಗೆ ನಡೆಯಬೇಕು?
  • ಮೀಸಲಾತಿಯ ಸ್ವರೂಪ ಹೇಗಿರಬೇಕು ಮತ್ತು ಪ್ರಮಾಣ ಎಷ್ಟಿರಬೇಕು?

ಇಂದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲಿಯೂ ಸಾರ್ವಜನಿಕ ವಲಯದ ಶಿಕ್ಷಣ ಸಂಸ್ಥೆಗಳಲ್ಲಿ, ಇರುವ ಮೂರು ಮುಖ್ಯ ಸಮಸ್ಯೆಗಳಾದ ಬೋಧಕರ ಅನಿಯಮತ ಮತ್ತು ಅಸಮರ್ಪಕ ನೇಮಕಾತಿ, ಶೈಕ್ಷಣಿಕ ಕಾರ್ಯಕ್ರಮಗಳ ಕಲಿಕಾ ಗುರಿಗಳ (learning objectives) ಕುರಿತಾದ ಅಸ್ಪಷ್ಟತೆ ಹಾಗೂ ಜಾತಿ ಮತ್ತು ಶ್ರೇಣೀಕೃತ ಮನೋಭಾವಗಳಿಂದ ಪ್ರಭಾವಿತವಾಗುವ ಸಾಮಾಜೀಕರಣಗಳನ್ನು ಸರಿಪಡಿಸುವುದು ಹೇಗೆ?

ಭಾರತೀಯ ಜ್ಞಾನಪರಂಪರೆಗಳು ಮತ್ತು ಕಲಿಕಾವಿಧಾನಗಳು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ಪಾತ್ರವನ್ನು ವಹಿಸಬಹುದು? ಗುರುಕುಲ ಪದ್ಧತಿಯಿಂದ ಯಾವ ಬಗೆಯ ಸಂಸ್ಥೆಗಳನ್ನು ಕಟ್ಟಲು ನಾವು ಸ್ಪೂರ್ತಿ ಪಡೆಯಬಹುದು?

1

ಗ್ರಹಾಂತರ ಅತಿಥಿಯೊಬ್ಬ ಭಾರತದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಬಗ್ಗೆ ಬರೆಯಬಹುದಾದ ವರದಿ ಕೆಳಕಂಡಂತೆ ಇರುತ್ತದೆ ಎನಿಸುತ್ತಿದೆ.

ಅಧ್ಯಾಪಕರು, ತರಗತಿ ಕೊಠಡಿಗಳು, ಗ್ರಂಥಾಲಯ ಮತ್ತು ಪ್ರಯೋಗಾಲಯಗಳಂತಹ ಮೂಲಸೌಕರ್ಯಗಳು ಕಡಿಮೆ ಯಿವೆ. ತರಗತಿಗಳು ಹಲವು ಬಾರಿ ನಡೆಯುವುದಿಲ್ಲ. ನಡೆದಾಗ ಪಾಠ—ಪ್ರವಚನಗಳ ಗುಣಮಟ್ಟ ಪ್ರಶ್ನಾರ್ಹವಾದುದು. ಅಧ್ಯಾಪಕರು ಪಾಠ ಮಾಡುವುದಕ್ಕಿಂತ ಆಡಳಿತಾತ್ಮಕ ಮತ್ತು ಪರೀಕ್ಷೆಗಳ ಸಂಬಂಧವಾದ ಚಟುವಟಿಕೆಗಳಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ತರಗತಿಯೊಳಗಿರುವ ಅಧ್ಯಾಪಕರಿಗೆ ಹೇಗೆ ಏನನ್ನು ಪಾಠ ಮಾಡಬೇಕು ಮತ್ತು ಕಲಿಕೆಯನ್ನು ಹೇಗೆ ಪರೀಕ್ಷಿಸ ಬೇಕು ಎನ್ನುವುದರ ಸ್ಪಷ್ಟತೆ ಇಲ್ಲ. ಆ ಕುರಿತಾದ ಎಲ್ಲ ನಿರ್ಧಾರಗಳನ್ನು ದೂರದಲ್ಲೆಲ್ಲೊ ಇರುವ, ಕೇವಲ ನಾಲ್ಕೈದು ಮಂದಿ ಮಾತ್ರ ಅಂಗವಾಗಿರುವ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿಗಳು ನಿರ್ಧರಿಸುತ್ತವೆ. ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆಗಳ ಸ್ವರೂಪವನ್ನು ಸಂಘಟಿಸುವಲ್ಲಿ ವಿದ್ಯಾರ್ಥಿಗಳಿಗಾಗಲಿ, ಅಧ್ಯಾಪಕರಿಗಾಗಲಿ ಯಾವ ಮಹತ್ವದ ಪಾತ್ರವೂ ಇಲ್ಲ. ಜ್ಞಾನ ಪ್ರಸರಣವೆನ್ನುವುದು ಅರ್ಥ ಕಳೆದುಕೊಳ್ಳುತ್ತಿದೆ. ಇದೆಲ್ಲ ಪಾಠ ಮಾಡಬೇಕೆಂದಿರುವ ಅಧ್ಯಾಪಕರ ಸಮಸ್ಯೆಯಾದರೆ, ಮತ್ತೆ ಹಲವರು ತರಗತಿಯೊಳಗೆ ಹೋಗುವ ಕಷ್ಟವನ್ನೆ ತೆಗೆದುಕೊಳ್ಳುವುದಿಲ್ಲ.

ಇನ್ನೊಂದೆಡೆ ಹೊಸಜ್ಞಾನ ಸೃಷ್ಟಿಯು ನಡೆಯುತ್ತಿಲ್ಲ. ಸಂಶೋಧನೆಯೆನ್ನುವುದು ಒಂದು ಅರ್ಥರಹಿತ ತಾಂತ್ರಿಕ ಆಚರಣೆಯ ರೂಪದಲ್ಲಿ ನಡೆಯುತ್ತಿದೆ. ಪಿ.ಹೆಚ್.ಡಿ. ಪದವಿಗಾಗಲಿ, ಹೊಸ ಪುಸ್ತಕಗಳು ಮತ್ತು ಲೇಖನಗಳನ್ನು ಬರೆದಾಗ ಆಗಲಿ ಬಹುತೇಕ ಮಟ್ಟಿಗೆ ಹೊಸ ಒಳನೋಟಗಳು, ತಿಳುವಳಿಕೆ ಮತ್ತು ಸಮಾಜಕ್ಕೆ ಉಪಯುಕ್ತವಾದ ಜ್ಞಾನ — ತಂತ್ರಜ್ಞಾನಗಳು ಹೊರಬರುತ್ತಿಲ್ಲ. ಭಾರತೀಯ ಭಾಷೆಗಳು ಜ್ಞಾನದ ಉತ್ಪಾದನೆಯ ಮತ್ತು ಪ್ರಸರಣದ ಸಾಧನಗಳಾಗುತ್ತಿಲ್ಲ. ಇಂಗ್ಲೀಷ್ ಮತ್ತು ಇತರ ಭಾಷೆಗಳಲ್ಲಿ ಹೊರಬರುತ್ತಿರುವ ಜ್ಞಾನವನ್ನು ಅನುಸಂಧಾನ ಮಾಡುವ ಉತ್ಸುಕತೆಯಾಗಲಿ, ಸಾಮಥ್ರ್ಯವಾಗಲಿ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ತುಂಬ ಸೀಮಿತ ಮಟ್ಟದಲ್ಲಿ ಮಾತ್ರ ಇದೆ. ಜ್ಞಾನಸೃಷ್ಟಿ ಮತ್ತು ಜ್ಞಾನ ಪ್ರಸರಣಗಳೆರಡಕ್ಕೂ ಲಾಯಕ್ಕಿಲ್ಲದವರನ್ನು ಬಹುಮಟ್ಟಿಗೆ ಉನ್ನತ ಶಿಕ್ಷಣ ಸಂಸ್ಥೆಗಳು ಉತ್ಪಾದಿಸುತ್ತಿವೆ. ಇಂತಹ ಪದವೀಧರರು ಬುದ್ಧಿವಂತರಲ್ಲ ಎನ್ನಲು ಸಾಧ್ಯವಿಲ್ಲ. ಅವರು ತಮ್ಮ ಜ್ಞಾನಶಿಸ್ತು (subject), ವೃತ್ತಿಪರತೆ ಮತ್ತು ನೈತಿಕ ಜವಾಬ್ದಾರಿಗಳಲ್ಲಿ ಸರಿಯಾದ ತರಬೇತಿ ಪಡೆಯುವ ಅವಕಾಶ ದೊರಕದ ನತಃದೃಷ್ಟರು.

ಉನ್ನತ ಶಿಕ್ಷಣ ಸಂಸ್ಥೆಗಳ ಒಳಗೆ ಇರುವವರು — ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳು, ಆಡಳಿತ ವರ್ಗದವರು ಇತ್ಯಾದಿ — ಜಾತಿ, ಧರ್ಮ ಮತ್ತು ಪ್ರದೇಶಗಳ ವಾಂಛಲ್ಯಗಳನ್ನು ಮೀರುವುದಿಲ್ಲ. ಅಧಿಕಾರದಲ್ಲಿರುವವರನ್ನು ಓಲೈಸುವ ಗುಣ ದಿನೆದಿನೆ ಹೆಚ್ಚುತ್ತಲೆ ಇದೆ. ಸ್ವತಂತ್ರವಾಗಿ ಯೋಚಿಸುವ, ಸರಿಯಲ್ಲದ್ದನ್ನು ಪ್ರತಿಭಟಿಸುವ ಗುಣ ಕ್ಷಿಪ್ರವಾಗಿ, ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಹೌದಪ್ಪಗಳು, ಕೆಲಸಗಳ್ಳರು ಹೆಚ್ಚಾಗುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಕೆಲಸ ಪಡೆದುಕೊಳ್ಳಬೇಕೆಂದರೆ ಬೌದ್ಧಿಕ ಹಾಗೂ ಶೈಕ್ಷಣಿಕ ಅರ್ಹತೆಗಳಿಗಿಂತ ಹಣ, ಜಾತಿ ಮತ್ತು ರಾಜಕೀಯ ಅಥವಾ ಧಾರ್ಮಿಕ ನಾಯಕರುಗಳ ಪ್ರಭಾವ ಇತ್ಯಾದಿಗಳು ಹೆಚ್ಚು ಮುಖ್ಯವಾಗುತ್ತಿವೆ. ಎಲ್ಲ ಹಂತದ ಕೆಲಸಗಳು ಬಹುಮಟ್ಟಿಗೆ ಬಿಕರಿಯಾಗುತ್ತಿವೆ. ಕೆಲವು ಕಡೆ ಪದವಿಗಳು ಸಹ ಮಾರಾಟಕ್ಕಿವೆ. ಉನ್ನತ ಶಿಕ್ಷಣ ಕ್ಷೇತ್ರದ ಭ್ರಷ್ಟತೆಯ ಸೊಗಡು ಎಲ್ಲೆಡೆ ಹರಡಿದೆ.

ಇದೆಲ್ಲದರ ಪರಿಣಾಮವೋ ಏನೊ ಸ್ವಾಯತ್ತತೆ ಎನ್ನುವುದು ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲ ವಲಯಗಳಿಂದ ಕಾಣೆಯಾಗುತ್ತಿದೆ. ಕಾಲೇಜುಗಳ ಮೇಲೆ ವಿಶ್ವವಿದ್ಯಾನಿಲಯಗಳು, ವಿಶ್ವವಿದ್ಯಾನಿಲಯಗಳ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಶಿಕ್ಷಣ ಇಲಾಖೆ ಗಳು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಮತ್ತಿತರ ನಿಯಂತ್ರಕ ಸಂಸ್ಥೆಗಳು ಸವಾರಿ ಮಾಡುತ್ತಿವೆ. ಯಾರೂ ಜವಾಬ್ದಾರರಲ್ಲದ, ಎಲ್ಲರೂ ಅತಂತ್ರರಾಗಿರುವ ವ್ಯವಸ್ಥೆಯೊಂದು ಇಲ್ಲಿ ಕಾಣಬರುತ್ತಿದೆ.

ಗ್ರಹಾಂತರ ಜೀವಿಗೆ ಸೋಜಿಗ ಮೂಡಿಸುವ ಪ್ರಶ್ನೆ ಇದು: ಭೂಮಿಯ ನಿವಾಸಿ ಸೇಪಿಯನ್ ಎಂಬ ಮನುಷ್ಯ ಸ್ವಭಾವತಃ ಕುತೂಹಲದ ಮತ್ತು ಬುದ್ಧಿವಂತಿಕೆಯ ಪ್ರಾಣಿ. ಹೀಗಿದ್ದರೂ ತನ್ನ ಉಳಿವಿನ ಪ್ರಶ್ನೆಯೇ ದೊಡ್ಡದಾಗಿ ಕಾಡುತ್ತಿರುವ ಸಂದರ್ಭದಲ್ಲಿ ತನ್ನೆಲ್ಲ ತಿಳುವಳಿಕೆ ಮತ್ತು ಜ್ಞಾನವನ್ನು ರೂಪಿಸುವ ಹಾಗೂ ಪ್ರಸರಿಸುವ ಶಿಕ್ಷಣ ಸಂಸ್ಥೆಗಳನ್ನೇಕೆ ಭಾರತದಲ್ಲಿ ಇಂತಹ ಬಿಕ್ಕಟ್ಟಿಗೆ ತಂದು ನಿಲ್ಲಿಸಿಕೊಂಡಿದ್ದಾನೆ?

2

ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕೆಂದರೆ ಎರಡು ಕಾರಣಗಳಿಂದ ಅದೇನು ಸುಲಭದ ಕೆಲಸವಲ್ಲ.

ಮೊದಲನೆಯದಾಗಿ, ಈ ಮೇಲಿನ ಚಿತ್ರಣವನ್ನು ಖಾಸಗಿ ಸಂಭಾಷಣೆಗಳಲ್ಲಿ, ಕೆಲವು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿಯೂ ಬಹುಪಾಲು ಎಲ್ಲರೂ ಒಪ್ಪುತ್ತಾರೆ. ಆದರೆ ಈ ವಾಸ್ತವವನ್ನು ಬದಲಿಸಲು, ಸುಧಾರಣೆ ಮಾಡಲು ಮೂಲಭೂತವಾದ ಬದಲಾವಣೆಗಳನ್ನು ಮಾಡಬೇಕೆಂದಾಗ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಇಂದು ಸವಲತ್ತುಗಳನ್ನು ಪಡೆದಿರುವವರನ್ನು ಅವರ ಸ್ಥಾನಗಳಿಂದ ತೆಗೆಯಲು ಸಾಧ್ಯವಿಲ್ಲ. ಅವರಿಂದ ಕೆಲಸ ತೆಗೆಸಿಕೊಳ್ಳುವುದೂ ಸಹ ಸುಲಭವಲ್ಲ. ಅವರಿಗೆ ಹೊಸದಾಗಿ ತರಬೇತಿ ಕೊಡುವುದೂ ಕಷ್ಟದ ಮಾತು. ಅವರೆಲ್ಲರೂ ನಿವೃತ್ತರಾಗುವ ತನಕ ಕಾದರೆ ತಡವಾಗುತ್ತದೆ.

ಎರಡನೆಯದಾಗಿ, ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಏಕರೂಪಿಯಾದವುಗಳಲ್ಲ. ಆದುದರಿಂದ ಇಡೀ ವ್ಯವಸ್ಥೆಗೆ ಒಂದೆ ಪರಿಹಾರವಿದೆ ಎಂದೂ ಅಲ್ಲ. ಅಕ್ಟೋಬರ್ 2017ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 857 ವಿಶ್ವವಿದ್ಯಾನಿಲಯಗಳಿವೆ. ಇವುಗಳ ಪೈಕಿ 47 ಕೇಂದ್ರೀಯ ವಿಶ್ವವಿದ್ಯಾನಿಲಯಗಳು (ಪಾರ್ಲಿಮೆಂಟಿನ ಮಸೂದೆಯಿಂದ ಸೃಷ್ಟಿಯಾದವುಗಳು), 138 ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ಸಂಸ್ಥೆಗಳು (ಇವುಗಳಲ್ಲಿ ಐಐಟಿ, ಐಐಎಂ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತಿತರ ಸಂಸ್ಥೆಗಳು ಸೇರಿವೆ), 367 ರಾಜ್ಯ ವಿಶ್ವವಿದ್ಯಾನಿಲಯಗಳು (ರಾಜ್ಯ ಶಾಸನಸಭೆಗಳ ಮಸೂದೆಯಿಂದ ಸೃಷ್ಟಿಯಾಗಿರುವಂತಹವು), 282 ಖಾಸಗಿ ವಿಶ್ವವಿದ್ಯಾನಿಲಯಗಳು (ಖಾಸಗಿ ನಿರ್ವಹಣೆಯ ಆದರೆ ರಾಜ್ಯ ಶಾಸನಸಭೆಗಳ ಮಸೂದೆಗಳಿಂದ ಪ್ರಾರಂಭವಾಗಿರುವಂತಹವು) ಮತ್ತು 123 ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯಗಳಿವೆ. ಈ ಸಂಸ್ಥೆಗಳ ಅಂಗವಾಗಿರುವ ಸುಮಾರು 40,000 ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಮೂರು ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಎಲ್ಲ ಸಂಖ್ಯೆಗಳು ಪ್ರತಿದಿನವೂ ಬದಲಾಗುವ ತಾತ್ಕಾಲಿಕ ಸಂಖ್ಯೆಗಳು. ಹಾಗಾಗಿ ಯು.ಜಿ.ಸಿ.ಯ ಅಂತರ್ಜಾಲ ತಾಣದಲ್ಲಿನ ಮಾಹಿತಿಯೂ ಕೂಡ ನಿಖರವಾಗಿರುವುದಿಲ್ಲ. ಈ ವಿವಿಧ ಬಗೆಯ ಉನ್ನತ ಶಿಕ್ಷಣ ಸಂಸ್ಥೆಗಳು ಬೇರೆಯವೆ ಆದ ಮತ್ತು ಅಸಮಾನವಾದ ಹಣಕಾಸಿನ ಮೂಲಗಳನ್ನು ಹೊಂದಿವೆ. ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಮತ್ತು ಅಧ್ಯಾಪಕರ ನೇಮಕಾತಿಯ ವ್ಯವಸ್ಥೆಗಳು ವಿಭಿನ್ನವಾಗಿರುತ್ತವೆ.

ಆದರೂ ಮೇಲಿನ ಗ್ರಹಾಂತರ ಜೀವಿಯ ಚಿತ್ರಣ ಬಹುಮಟ್ಟಿಗೆ ಎಲ್ಲ ಬಗೆಯ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಆದರೆ ಅವುಗಳು ಹೆಚ್ಚು ನಿಖರವಾಗಿ ಪ್ರತಿಫಲಿಸುವುದು ದೇಶದ ಬಹುತೇಕ ಸಾಮಾನ್ಯ ಹಿನ್ನೆಲೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ರಾಜ್ಯ ವಿಶ್ವವಿದ್ಯಾನಿಲಯಗಳ ವಾಸ್ತವವನ್ನು. ಖಾಸಗಿ ಮತ್ತು ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯಗಳು ಕೆಲವು ಆಯ್ದ ವಿಷಯಗಳಲ್ಲಿ ತಕ್ಕ ಮಟ್ಟಿನ ಜ್ಞಾನ ಪ್ರಸರಣ ಸಾಮಥ್ರ್ಯವನ್ನು ಪಡೆದುಕೊಂಡಿವೆ. ಆದರೆ ಅವುಗಳು ಮೇಲಿನ ಇತರೆ ಸಮಸ್ಯೆಗಳಿಂದ ಪಾರಾಗಿಲ್ಲ. ಕೆಲವು ಹಳೆಯ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಹಲವಾರು ರಾಷ್ಟ್ರೀಯ ಮಹತ್ವ ಹೊಂದಿರುವ ಸಂಸ್ಥೆಗಳಲ್ಲಿ ತಕ್ಕ ಮಟ್ಟಿನ ಸ್ವಾಯತ್ತತೆ ಹಾಗೂ ಉತ್ತಮ ಬೋಧಕ ವರ್ಗ ಇಂದಿಗೂ ಇದೆ. ಆದರೆ ಈ ಸಂಸ್ಥೆಗಳು ತಮ್ಮನ್ನು ಸಾಮಾಜಿಕ ಹೊಣೆಗಾರಿಕೆ ಹೊಂದಿರುವ, ನಿರಂತರವಾಗಿ ಹೊಸ ಜ್ಞಾನವನ್ನು ಸೃಷ್ಟಿಸುವ ವಿಶ್ವಮಟ್ಟದ ಸಂಸ್ಥೆಗಳಾಗಿ ರೂಪಿಸಿಕೊಂಡಿವೆ ಎನ್ನುವುದು ಕಷ್ಟ. ಈ ಮಾತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ, ಕಾನಪುರದ ಐಐಟಿಗೆ ಅಥವಾ ಅಹಮದಾಬಾದಿನ ಐಐಎಂಗಳಂತಹ ಸಂಸ್ಥೆಗಳ ವಿಚಾರದಲ್ಲಿಯೂ ನಿಜವೆ. ಈ ಯಾವ ಸಂಸ್ಥೆಗಳೂ ಸಹ ಎಮ್.ಐ.ಟಿ. ಅಥವಾ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಂತೆ ನಿರಂತರವಾದ ಶೈಕ್ಷಣಿಕ ಶ್ರೇಷ್ಠತೆಯನ್ನು, ಸಾಮಾಜಿಕ ಪ್ರಸ್ತುತತೆಯನ್ನು ದಶಕಗಳು ಮತ್ತು ಶತಮಾನಗಳ ಕಾಲವ್ಯಾಪ್ತಿಯಲ್ಲಿ ಸಾಧಿಸಿಲ್ಲ.

ಹಾಗೆ ನೋಡಿದರೆ ಭಾರತೀಯ ಶಿಕ್ಷಣ ಸಂಸ್ಥೆಗಳು ಶ್ರೇಷ್ಠತೆಯನ್ನು ಸಾಧಿಸಿರುವ ಉದಾಹರಣೆಗಳು ಇಲ್ಲವೆಂದೆ ಹೇಳಬೇಕು. ಹಾಗಾಗಿಯೆ ಇಂದು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಯಾವ ವಿಶ್ವವಿದ್ಯಾನಿಲಯವೂ ಇಲ್ಲ. ಈ ಪಟ್ಟಿಯಲ್ಲಿ ಮೊದಲ 200 ಸ್ಥಳಗಳೊಳಗೆ ಒಂದಾದರೂ ಭಾರತೀಯ ಸಂಸ್ಥೆ ಕಾಣಸಿಗಬೇಕೆನ್ನುವ ಹಂಬಲ ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಾಡತೊಡಗಿದೆ. ಉದಾಹರಣೆಗೆ, 2015ರಲ್ಲಿ ಕೇಂದ್ರ ಸರ್ಕಾರವು ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರ಼ೇಮ್‌ವರ್ಕ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ಅಥವಾ ಎನ್.ಐ.ಆರ್.ಎಫ಼್.) ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಿ, ಎಲ್ಲ ವಿಶ್ವವಿದ್ಯನಿಲಯಗಳಿಗೆ ಶ್ರೇಯಾಂಕ ನೀಡಲಾರಂಭಿಸಿತು. ಹಿಂದೆ ಬೀಳಲು ಇಚ್ಛಿಸದ ಕರ್ನಾಟಕ ರಾಜ್ಯ ಸರ್ಕಾರವು ಸಹ ಹಿಂದೆ ತನ್ನ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಮಾಡಲು ತನ್ನದೆ ಆದ ಚೌಕಟ್ಟನ್ನು ರೂಪಿಸಿತು. ನಮ್ಮ ಮೌಲ್ಯಮಾಪನ ಮಾನದಂಡಗಳನ್ನು ರೂಪಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಮೂಲಭೂತವಾಗಿ ಯಾವ ಸುಧಾರಣೆಯನ್ನು ಮಾಡಲಾಯಿತು ಎನ್ನುವ ಪ್ರಶ್ನೆಗಳನ್ನು ಯಾರೂ ಕೇಳಲಿಲ್ಲ.

ಇದರಲಿ. ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದು ಮೋದಿ ಸರ್ಕಾರವು ಮತ್ತೊಂದು ಕಾರ್ಯಕ್ರಮವನ್ನು ರೂಪಿಸುತ್ತಿದೆ. ಇದರ ಪ್ರಕಾರ ದೇಶಾದ್ಯಂತ 10 ಸಾರ್ವಜನಿಕ ವಲಯದ ಮತ್ತು ಹತ್ತು ಖಾಸಗಿ ಸಂಸ್ಥೆಗಳನ್ನು ಆರಿಸಿ, ಅವುಗಳಿಗೆ ತಲಾ 1000 ಕೋಟಿ ಹಣ ಹಾಗೂ ಸಂಪೂರ್ಣ ಸ್ವಾಯತ್ತತೆಯನ್ನು ನೀಡಿ, ಆ ಮೂಲಕ ವಿಶ್ವಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ರೂಪಿಸಲು ನಿರ್ಧರಿಸಿದೆ. ಈ ಹೊಸ ಯೋಜನೆಯಲ್ಲಿ ಆಯ್ಕೆಯಾದ ವಿಶ್ವವಿದ್ಯಾನಿಲಯಗಳ ಮೇಲೆ ಯು.ಜಿ.ಸಿ.ಯ ನಿಯಂತ್ರಣವಿರುವುದಿಲ್ಲ. ಮೀಸಲಾತಿ ನಿಯಮಗಳು ಅನ್ವಯವಾಗುವುದಿಲ್ಲ. ಬೋಧಕ ಮತ್ತು ಬೋಧಕೇತರರ ಸಂಬಳ ಮತ್ತು ಭತ್ಯೆಗಳ ಮೇಲೆ ಮಿತಿಗಳಿರುವುದಿಲ್ಲ. ಈ ಸಂಸ್ಥೆಗಳು ಯಾವುದೆ ಶೈಕ್ಷಣಿಕ ಕಾರ್ಯಕ್ರಮವನ್ನು ಪ್ರಾರಂಭಿಸಬಹುದು ಹಾಗೂ ತನಗಿಚ್ಛೆ ಬಂದ ವಿದೇಶಿ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು.

ಈ ಹೊಸಯೋಜನೆಯ ಎರಡು ಅಂಶಗಳ ಬಗ್ಗೆ ಗಮನ ಹರಿಸೋಣ. ಮೊದಲಿಗೆ, ಕೇಂದ್ರ ಸರ್ಕಾರವು ನೀಡಲು ಉದ್ದೇಶಿಸಿರುವ 1000 ಸಾವಿರ ಕೋಟಿ ರೂಪಾಯಿಗಳು ದೊಡ್ಡಮೊತ್ತವೆನಿಸಬಹುದು. ಆದರೆ ಇಂದು ಜಾಗತಿಕ ಮಟ್ಟದ ಮುಖ್ಯ ವಿಶ್ವವಿದ್ಯಾನಿಲಯಗಳು 50,000 ಕೋಟಿಗಳಿಗಿಂತ ಹೆಚ್ಚಿನ ಇಡುಗಂಟನ್ನು ಹೊಂದಿವೆ ಮತ್ತು ಅವುಗಳ ಪ್ರತಿವರ್ಷದ ಆಯವ್ಯಯ 10,000 ಕೋಟಿಗಳನ್ನು ದಾಟುತ್ತದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇಡುಗಂಟು ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳಷ್ಟು ಇದೆ. ನಾವು ಬಡತನದಲ್ಲಿ ನಮ್ಮ ಸಂಸ್ಥೆಗಳನ್ನು ಕಟ್ಟುತ್ತೇವೆ ಮತ್ತು ನಡೆಸುತ್ತೇವೆ ಎಂದರೂ ಸಹ ಪ್ರತಿಸ್ಪರ್ಧಿಗಳಿಗಿಂತ ಒಂದು ನೂರು ಪಟ್ಟು ಕಡಿಮೆ ಸಂಪನ್ಮೂಲಗಳನ್ನು ಇಟ್ಟುಕೊಂಡು ಸ್ಪರ್ಧಿಸುವುದು ಕಷ್ಟ.

ಎರಡನೆಯದಾಗಿ, ಉತ್ಕೃಷ್ಟ ಗುಣಮಟ್ಟವನ್ನು ಸಾಧಿಸುವ ಸಲುವಾಗಿ ಆಯ್ದ ವಿಶ್ವವಿದ್ಯಾನಿಲಯಗಳ ಮೇಲೆ ಯಾವುದೆ ನಿಯಂತ್ರಣ ಮತ್ತು ದೇಶದ ಕಾನೂನುಗಳು (ಉದಾ. ಮೀಸಲಾತಿ) ಅನ್ವಯವಾಗುವುದಿಲ್ಲ ಎನ್ನುವುದಾದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಸಾಧಾರಣ ಗುಣಮಟ್ಟಕ್ಕೆ (mediocrity) ಈ ನಿಯಮಗಳೆ ಕಾರಣವೆ? ಹಾಗಾದರೆ ಈ ಇಪ್ಪತ್ತು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಏಕೆ ನಿಯಂತ್ರಕ ಸಂಸ್ಥೆಗಳಿಂದ ವಿನಾಯತಿ? ಇತರೆ ವಿಶ್ವವಿದ್ಯನಿಲಯಗಳಿಗೆ, ಕಾಲೇಜುಗಳಿಗೆ ಸ್ವಾಯತ್ತತೆಯ ಅಗತ್ಯವಿಲ್ಲವೆ?

3

ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಇಂದು ಮಾತ್ರ ಸಾಧಾರಣ ಗುಣಮಟ್ಟದವು ಎಂದಲ್ಲ. ಐತಿಹಾಸಿಕವಾಗಿ ಸಹ ಭಾರತದಲ್ಲಿ ಎಮ್.ಐ.ಟಿ., ಸ್ಟಾನಫ಼ರ್ಡ್ ಅಥವಾ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಂತಹ ಸಂಸ್ಥೆಗಳು ಯಾವಾಗಲೂ ಇರಲಿಲ್ಲ. ಕಲ್ಕತ್ತಾ, ಬಾಂಬೆ, ಮದ್ರಾಸ್ ವಿಶ್ವವಿದ್ಯಾನಿಲಯಗಳು ಸಾಧಾರಣ ಗುಣಮಟ್ಟದ ಸಂಸ್ಥೆಗಳೆ. ಸ್ವಾತಂತ್ರ್ಯಾನಂತರ ಸ್ಥಾಪಿತವಾದ ಅಥವಾ ಪ್ರಾಮುಖ್ಯತೆ ಪಡೆದ ಐಐಟಿ ಮತ್ತು ಐಐಎಮ್‍ಗಳಂತಹ ಸಂಸ್ಥೆಗಳು ಉತ್ತಮ ವಿದ್ಯಾರ್ಥಿಗಳನ್ನು ಹೊರತಂದಿದ್ದರೂ ಸಹ, ಅವುಗಳು ಭಾರತದ ಸಮಸ್ಯೆಗಳನ್ನು ಪರಿಹರಿಸುವ ಉಪಯುಕ್ತ ತಂತ್ರಜ್ಞಾನಗಳನ್ನು ಹೊರತರಲಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 2015ನೆಯ ಸಾಲಿನ ಘಟಿಕೋತ್ಸವ ಭಾಷಣ ಮಾಡುತ್ತ ಶ್ರೀ ನಾರಾಯಣಮೂರ್ತಿಯವರು 60 ವರ್ಷಗಳಲ್ಲಿ ಭಾರತದಲ್ಲಿ ಯಾವುದೆ ದೊಡ್ಡ ಅನ್ವೇಷಣೆಯಾಗಿಲ್ಲ ಎನ್ನುವುದನ್ನು ಗುರುತಿಸಿದರು. ಎಮ್.ಐ.ಟಿ. ಅಥವಾ ಸ್ಟಾನಫ಼ರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಇದಕ್ಕೆ ಪ್ರತಿಯಾಗಿ ಹತ್ತಾರು ಬಹುಮುಖ್ಯ ಅನ್ವೇಷಣೆಗಳಾಗಿರುವುದನ್ನು ಪಟ್ಟಿಮಾಡಬಹುದು.

ನನ್ನ ಮಾತಿನ ಅರ್ಥ ನಾವು ಪಶ್ಚಿಮದ ವಿಶ್ವವಿದ್ಯಾನಿಲಯಗಳಂತಹ ಸಂಸ್ಥೆಗಳನ್ನೆ ಕಟ್ಟಬೇಕು ಎನ್ನುವುದಲ್ಲ. ಉತ್ಕೃಷ್ಟತೆಗೆ ನಮ್ಮದೆ ಆದ ವ್ಯಾಖ್ಯೆಯನ್ನು ನಾವು ಕೊಟ್ಟುಕೊಳ್ಳಬಹುದು. ಉದಾಹರಣೆಗೆ ಈ ಎರಡು ಸರಳ ಮಾನದಂಡಗಳನ್ನು ಪರಿಗಣಿಸಿ. ಮೊದಲಿಗೆ ಉತ್ತಮ ಬೌದ್ಧಿಕ ಜ್ಞಾನವನ್ನು ಸೃಜಿಸಿವುದು. ಈ ಕೆಲಸ ತತ್ವಶಾಸ್ತ್ರ, ಖಗೋಳಶಾಸ್ತ್ರ, ಜೀವಶಾಸ್ತ್ರ, ಸಾಹಿತ್ಯ ಅಥವಾ ಇತಿಹಾಸ ಮೊದಲಾದ ಯಾವುದೆ ವಿಷಯದಲ್ಲಿ ಆಗಬಹುದು. ಎರಡನೆಯದಾಗಿ, ನಮ್ಮ ಸಮಾಜಕ್ಕೆ ಅಗತ್ಯವಿರುವ ಪ್ರಾಯೋಗಿಕ ಜ್ಞಾನ ಮತ್ತು ತಂತ್ರಜ್ಞಾನಗಳನ್ನು ಉತ್ಪಾದಿಸುವುದು. ಇಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಮತ್ತು ವಸತಿಗಳನ್ನು ಎಲ್ಲರಿಗೂ ಒದಗಿಸಲು ಅಗತ್ಯವಿರುವ ತಂತ್ರಜ್ಞಾನಗಳನ್ನು ಉದಾಹರಣೆಯಾಗಿ ಪರಿಗಣಿಸಿ. ಇಂತಹ ಸಾಧನೆಗಳನ್ನು ಮಾಡುವುದಿರಲಿ, ಸವಾಲುಗಳನ್ನು ಕೈಗೆತ್ತಿಕೊಳ್ಳುವ ಕಷ್ಟವನ್ನೂ ತೆಗೆದುಕೊಳ್ಳದ ಉನ್ನತ ಶಿಕ್ಷಣ ಸಂಸ್ಥೆಗಳೆ ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿಗೆ ಇವೆ.

ಈ ಪರಿಸ್ಥಿತಿಗೆ ಇರಬಹುದಾದ ಒಂದು ಕಾರಣವೆಂದರೆ ಉನ್ನತ ಶಿಕ್ಷಣ ಕ್ಷೇತ್ರದ ಬಗ್ಗೆ ಆಧುನಿಕ ಭಾರತೀಯರಿಗೆ ಇರುವ ಅಸ್ಪಷ್ಟತೆ ಮತ್ತು ದ್ವಂದ್ವ ನೀತಿ. ಶಿಕ್ಷಣದಿಂದಲೇ ನಮ್ಮ ಉದ್ಧಾರ ಸಾಧ್ಯ ಎನ್ನುವ ನಂಬಿಕೆ ಗಾಢವಾಗಿ ಸಮಾಜದ ಎಲ್ಲ ವರ್ಗಗಳಲ್ಲಿ ಬೇರೂರಿದ್ದರೂ ಸಹ, ಉನ್ನತ ಶಿಕ್ಷಣ ಸಂಸ್ಥೆಗಳೆಡೆಗೆ ಮೂರು ಬಗೆಯ ಅಪನಂಬಿಕೆಗಳು ಇತಿಹಾಸದುದ್ದಕ್ಕೂ ಕೆಲಸ ಮಾಡುತ್ತ ಬಂದಿವೆ.

ಮೊದಲಿಗೆ, ವಿಶ್ವವಿದ್ಯಾನಿಲಯಗಳು ವಸಾಹತುಶಾಹಿ ಮೂಲದ ಸಂಸ್ಥೆಗಳು ಮತ್ತು ಅವುಗಳ ಮೂಲಕ ಪ್ರಸರಣವಾಗುವ ಜ್ಞಾನವೂ ಸಹ ಅನಧಿಕೃತವಾದುದು ಎನ್ನುವ ನಂಬಿಕೆ ನಮ್ಮ ಮನಸ್ಸುಗಳಲ್ಲಿ ಬೇರೂರಿದೆ. ಈ ಮಾತು ಬಲಪಂಥೀಯರು ಭಾರತೀಯ ಇತಿಹಾಸದ ವಿಚಾರದಲ್ಲಿ ಮತ್ತು ಎಲ್ಲ ವರ್ಗದವರೂ ಅರ್ಥಶಾಸ್ತ್ರದ ವಿಚಾರದಲ್ಲಿ ಪದೆಪದೆ ಪ್ರಸ್ತಾಪಿಸುತ್ತಾರೆ. ಇಂತಹ ಅನುಮಾನಗಳು ಸರಿಯಿರಬಹುದು ಮತ್ತು ಸಹಜವೂ ಹೌದು. ಆದರೆ ಆಳವಾದ ಬೌದ್ಧಿಕತೆಯಿರುವ ಪರ್ಯಾಯಗಳನ್ನು ನಾವು ಇದುವರೆಗೂ ಒದಗಿಸಲಾಗಿಲ್ಲ. ಇದು ಸಂಸ್ಥೆಗಳ ವಿಷಯದಲ್ಲಿಯೂ ಹಾಗೂ ವಿಚಾರಗಳ ಮಟ್ಟದಲ್ಲಿಯೂ ನಿಜ. ನಮ್ಮ ಎಲ್ಲ ವೈಫಲ್ಯಗಳಿಗೂ ವಸಾಹತುಶಾಹಿಯನ್ನೂ, ಪಶ್ಚಿಮದ ಜ್ಞಾನವನ್ನೂ ದೂರುತ್ತ ಬಹಳ ಕಾಲ ಇರಲು ಸಾಧ್ಯವಿಲ್ಲ.

ಎರಡನೆಯದಾಗಿ, ಜ್ಞಾನ ಮತ್ತು ಸಾಂಸ್ಥಿಕ ರೂಪ ಇವೆರಡನ್ನು ರೂಪಿಸಲೂ ಭಾರತೀಯ ಪರಂಪರೆಯೊಳಗೆ ಪರ್ಯಾಯಗಳಿವೆ ಎನ್ನುವ ನಂಬಿಕೆ ನಮ್ಮಲ್ಲಿ ಬೇರೂರಿದೆ. ಹಾಗಿದ್ದರೆ ಅವುಗಳನ್ನು ಹೊರತರುವ ಕೆಲಸವನ್ನು ಮಾಡಬೇಕಾಗಿತ್ತು. ಇದುವರೆಗೆ ನಮಗೆ ಅದು ಸಾಧ್ಯವಾಗಿಲ್ಲ. ಭಾರತೀಯ ಜ್ಞಾನಪರಂಪರೆಗಳ ಬಗ್ಗೆ ಮಾತನಾಡುವ ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸಹ ಆಧುನಿಕ ಪಾಶ್ಚಿಮಾತ್ಯ ಜ್ಞಾನ ಆಧಾರಿತ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನಗಳ ಸಂಸ್ಥೆಗಳನ್ನೆ ನಡೆಸುತ್ತಿವೆ ಎನ್ನುವುದನ್ನು ನಾವು ಕಾಣಬಹುದು. ಹಾಗಾಗಿಯೆ ದೇಶಿ ನೆಲೆಯಲ್ಲಿ ರೂಪುಗೊಂಡಿರುವ ಅಭಿವೃದ್ಧಿಯ, ಇತಿಹಾಸ ರಚನೆಯ ಅಥವಾ ವೈದ್ಯಕೀಯ ಜ್ಞಾನದ ಮಾದರಿಗಳಾಗಲಿ ಇದುವರೆಗೆ ಹೊರಹೊಮ್ಮಿಲ್ಲ.

ಮೂರನೆಯದಾಗಿ, ವಿಶ್ವವಿದ್ಯಾನಿಲಯಗಳು ಮೇಲ್ವರ್ಗದ ಸಂಸ್ಥೆಗಳು, ಅನುಪಯುಕ್ತ ಜ್ಞಾನವನ್ನು ಪ್ರಸರಿಸುವ ಕೆಲಸವನ್ನು ಮಾಡುತ್ತವೆ. ಈ ಮಾತಿನ ಅರ್ಥವೆಂದರೆ ವಿಶ್ವವಿದ್ಯಾನಿಲಯಗಳು ಪ್ರತಿದಿನದ ಬದುಕಿನಿಂದ ದೂರವಿವೆ. ಜನರ ನಡುವೆ ಕಂಡುಬರುವ ಪ್ರತಿದಿನದ ಬದುಕಿಗೆ ಉಪಯುಕ್ತವಾದ ಪ್ರಾಯೋಗಿಕ ಜ್ಞಾನದ ಜೊತೆಗೆ ಯಾವುದೆ ಅರ್ಥಪೂರ್ಣ ಸಂಬಂಧವನ್ನು ಹೊಂದಿಲ್ಲ. ಇಂತಹ ಐವರಿ ಟವರ್ ಸಂಸ್ಥೆಗಳು ಭಾರತದಂತಹ ಬಡದೇಶಕ್ಕೆ ಅಗತ್ಯವಿಲ್ಲ ಎನ್ನುವ ಮಾತು ಸಹ ಆಗಾಗ್ಯೆ ಕೇಳಿಬರುತ್ತದೆ.

ಈ ಸಂಶಯದ ಮಾತುಗಳ ಸರಿತಪ್ಪುಗಳ ವಿಶ್ಲೇಷಣೆಯನ್ನು ನಂತರ ಮಾಡಬಹುದು. ಆದರೆ ನಮಗೆ ಉತ್ತರ ಬೇಕಾಗಿರುವುದು ಒಂದು ಸರಳ ಪ್ರಶ್ನೆಗೆ: ಯಾವ ಬಗೆಯ ವಿಶ್ವವಿದ್ಯಾನಿಲಯಗಳು ನಮಗೆ ಬೇಕು? ಅವುಗಳು ಏನನ್ನು ಮಾಡಬೇಕೆಂದು ನಾವು ಬಯಸುತ್ತೇವೆ? ಇಂದಿನ ಸಂಕೀರ್ಣ ಪ್ರಪಂಚದಲ್ಲಿ ವಿಶ್ವವಿದ್ಯಾನಿಲಯಗಳೆ ನಮಗೆ ಬೇಡ ಎನ್ನುವ ಲಕ್ಷುರಿ ನಮಗಿಲ್ಲ. ಹಾಗಾಗಿ ಸರಳವಾದ, ಮೂಲಭೂತ ಪ್ರಶ್ನೆಗಳನ್ನು ಕೇಳುತ್ತ ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಯ ಕೆಲಸವನ್ನು ಕೈಗೆತ್ತಿಕೊಳ್ಳಬೇಕು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮