2nd ಜೂನ್ ೨೦೧೮

ಅಸೆಂಬ್ಲಿ ಫಲಿತಾಂಶ ಪಕ್ಷ ರಾಜಕಾರಣದ ಪತನ

ಪ್ರೊ.ರವೀಂದ್ರ ರೇಷ್ಮೆ

ಸಮಯ—ಸಂದರ್ಭಕ್ಕೆತಕ್ಕಂತೆ ತಮ್ಮರಾಜೀ—ಕಬೂಲಿರಾಜಕಾರಣಕ್ಕೆ ಸಮರ್ಥನೆ ನೀಡುತ್ತಾಸಾಗಿರುವ ರಾಜ್ಯದ ಮೂರೂ ಪಕ್ಷಗಳುಅಸಲಿಗೆ ತಮ್ಮ ಮೂಲ ಸಿದ್ಧಾಂತ, ತತ್ವಮತ್ತು ಘೋಷಣೆಗಳನ್ನು ಮರೆತು ಪಕ್ಷರಾಜಕಾರಣದ ಚೌಕಟ್ಟನ್ನೇ ಶಿಥಿಲಗೊಳಿಸುತ್ತಾ ಸಾಗಿರುವುದು ನಮ್ಮಪ್ರಜಾಪ್ರಭುತ್ವದ ಅವನತಿಗೆ ಭಾಷ್ಯಬರೆದಂತಿದೆ.

ಈಗ್ಗೆ 21 ವರ್ಷಗಳ ಹಿಂದೆಯೇ, ಅಂದರೆ ಏಪ್ರಿಲ್ 11, 1997 ರಂದು ಲೋಕಸಭೆಯಲ್ಲಿ ಜರುಗಿದ ವಿಶ್ವಾಸಮತ ಯಾಚನೆಯ ಚರ್ಚೆಯಲ್ಲಿ ಮಾಜಿ ಪ್ರಧಾನಿ ಹಾಗೂ ಆವತ್ತು ಪ್ರಧಾನಮಂತ್ರಿ ಪದವಿಯಿಂದ ನಿರ್ಗಮಿಸಲಿದ್ದ ಹೆಚ್.ಡಿ.ದೇವೇಗೌಡರ ರಾಜಕೀಯ ಮಾರ್ಗದರ್ಶಿ ಚಂದ್ರಶೇಖರ್ ಇಂದಿನ ಅಸಂಗತ ರಾಜಕಾರಣದ ಮುನ್ಸೂಚನೆ ನೀಡಿದ್ದರು. “ಈ ಸೆಕ್ಯೂಲರ್—ಕಮ್ಯೂನಲ್ ಧೃವೀಕರಣದಿಂದಾಗಿ ಪಕ್ಷ ರಾಜಕಾರಣ ಪಕ್ಷಪಾತದ ರಾಜಕಾರಣವಾಗತೊಡಗಿದೆ. ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ತನ್ನ ಸಹಜ ಲಯವನ್ನು ಕಳೆದುಕೊಂಡುಬಿಟ್ಟಿದೆ. ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಸೂಕ್ಷ್ಮವಾದ ಸೈದ್ಧಾಂತಿಕ ಮತ್ತು ತಾತ್ವಿಕ ಭಿನ್ನಾಭಿಪ್ರಾಯದ ಗೆರೆಯೇ ಮಸಕಾಗಿಬಿಟ್ಟಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅವಕಾಶವಾದಿ ರಾಜಕಾರಣ ವಿಜೃಂಭಿಸತೊಡಗುತ್ತದೆ.” ಇವು ಆ ಹಿರಿಯ ಮುತ್ಸದ್ದಿ ಹಾಗೂ ಸ್ವತಂತ್ರ ಭಾರತದ ಪ್ರಜಾಪ್ರಭುತ್ವದಲ್ಲಿ ತಮ್ಮ ಧೀರೋದಾತ್ತ ನಿಲುವುಗಳಿಂದ ಸ್ಮರಣೀಯರಾಗುಳಿದ ಚಂದ್ರಶೇಖರ್ ಬಿತ್ತರಿಸಿದ ಎಚ್ಚರಿಕೆ ಯ ನುಡಿಗಳಾಗಿದ್ದವು.

ಅಂದು ಕೇವಲ 58 ಮಂದಿ ಜನತಾದಳ ಸದಸ್ಯ ಬಲದೊಂದಿಗೆ ಪ್ರಧಾನಿ ಪಟ್ಟಕ್ಕೇರಿದ್ದ ದೇವೇಗೌಡರ ಒಟ್ಟು 145 ಸಂಸದರ ಸಂಯುಕ್ತ ರಂಗ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಕಾಂಗ್ರೆಸ್ ಪಕ್ಷ ಏಕಾಏಕಿ ಬೆಂಬಲ ವಾಪಸ್ ಪಡೆಯುವ ತೀರ್ಮಾನ ಕೈಗೊಂಡು ಮೈತ್ರಿ ರಾಜಕಾರಣದ ಮತ್ತೊಂದು ಅಧ್ಯಾಯಕ್ಕೆ ತೆರೆ ಎಳೆದಿತ್ತು. ಬಹುಶಃ ಇವತ್ತು ಕರ್ನಾಟಕದಲ್ಲಿ ಮತ್ತೆ ಸೃಷ್ಟಿಯಾಗಿರುವ ಹಂಗ್ ಅಸೆಂಬ್ಲಿಯಲ್ಲೂ ಅಂದು ಸಂಸತ್ತಿನಲ್ಲಿ ಜರುಗಿದ ನಾಟಕೀಯ ಪ್ರಹಸನವೇ ಪುನರಾವರ್ತನೆಯಾಗತೊಡಗಿದೆ. ಅಂದು ರಾಷ್ಟ್ರಮಟ್ಟದಲ್ಲಿ ಕೋಮುವಾದಿ ಬಿ.ಜೆ.ಪಿ. ಪಕ್ಷವನ್ನು ಹೊರಗಿಡಲೆಂದೇ ನಿಚ್ಚಳ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ತನ್ನ ಕಡುವೈರಿಗಳಂತಿದ್ದ ಸುಮಾರು ಒಂದು ಡಜನ್ ಪ್ರತಿಪಕ್ಷಗಳ ಕೂಟಕ್ಕೆ ಬಾಹ್ಯ ಬೆಂಬಲ ನೀಡುವ ಮೂಲಕ ರಾಜಕೀಯ ಚೆಲ್ಲಾಟವಾಡತೊಡಗಿತ್ತು. ಇಂದೂ ಸಹ ಸ್ವಂತ ಬಲದಿಂದ ಸ್ಪಷ್ಟ ಬಹುಮತ ಪಡೆಯಲಿಕ್ಕಾಗದ ಕಾಂಗ್ರೆಸ್ ಪಕ್ಷ ಮತ್ತದೇ ಕೋಮುವಾದಿ ಪಕ್ಷವನ್ನು ಹೊರಗಿಡುವ ಅವಸರದಲ್ಲಿ ಕೇವಲ 38 ಸದಸ್ಯ ಬಲವುಳ್ಳ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆ.ಡಿ.ಎಸ್. ಪಕ್ಷಕ್ಕೆ ಸರ್ಕಾರ ರಚನೆಯ ಅಮೋಘ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಒಂದು ವ್ಯತ್ಯಾಸವೆಂದರೆ ಇಂದು ಬಾಹ್ಯ ಬೆಂಬಲದ ಬದಲು ನೂತನ ಸರ್ಕಾರದಲ್ಲಿ ಶೇ.60ರಷ್ಟು ಮಂತ್ರಿ ಪದವಿಗಳೊಂದಿಗೆ ಪ್ರಮುಖ ಪಾಲುದಾರ ಪಕ್ಷವಾಗಲಿದೆ.

ಅಸೆಂಬ್ಲಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೇವಲ 9 ಸದಸ್ಯರ ಕೊರತೆಯಿಂದಾಗಿ ಪಾಜಾಗಟ್ಟೆ ತಲುಪಲು ವಿಫಲವಾದ ರಾಜ್ಯ ಬಿಜೆಪಿ ಪಕ್ಷ ತನ್ನ ದುರದೃಷ್ಟಕ್ಕಾಗಿ ತಣ್ಣಗೆ ಹಳಹಳಿಸುವುದಷ್ಟೇ ಅಲ್ಲ, ಬಹಿರಂಗವಾಗೂ ತನ್ನ ಪ್ರತಿಸ್ಪರ್ಧಿ ಪಕ್ಷಗಳೆರಡರ ವಿರುದ್ಧವೂ ಬೇಕಾಬಿಟ್ಟಿಯಾಗಿ ಬೈಯುತ್ತಾ, ಹೀನಾಮಾನವಾಗಿ ಹಂಗಿಸುತ್ತಾ, ಗಾಂಧಿನಗರದ ಗಾಂಧಿ ಪ್ರತಿಮೆ ಎದುರೇ ಹತಾಶೆಯಿಂದ ಕಿರುಚಾಡತೊಡಗಿದೆ. ಒಂದು ವೇಳೆ ಇದೇ 38 ಸದಸ್ಯರುಳ್ಳ ಜೆಡಿಎಸ್ ಪಕ್ಷ ಕಾಂಗ್ರೆಸ್ಸಿನ ಬದಲು ತನ್ನ ಜೊತೆಗೇ ಕೈಜೋಡಿಸಲು ಮುಂದಾಗಿದ್ದರೆ ಅದುವರೆಗಿನ ಎಲ್ಲಾ ರಾಗ—ದ್ವೇಷ ಹಾಗೂ ತಿರಸ್ಕಾರವನ್ನು ಬದಿಗೊತ್ತಿ ಕಾಂಗ್ರೆಸ್ಸಿಗಿಂತ ಹೆಚ್ಚಿನ ಉತ್ಸಾಹದಿಂದ ಮತ್ತು ಭಾವೋದ್ವೇಗದಿಂದ ಕುಮಾರಸ್ವಾಮಿಯವರನ್ನು ಅಪ್ಪಿಕೊಳ್ಳಬಹುದಾಗಿದ್ದ ಬಿಜೆಪಿ ಪಕ್ಷದ ನಾಯಕರು ತಮ್ಮ ರಾಜಕೀಯ ವೈಫಲ್ಯದ ಕುರಿತು ಆತ್ಮಾವಲೋಕನ ಮಾಡಿಕೊಂಡಿದ್ದರೆ ಮರ್ಯಾದೆ ಉಳಿಯುತ್ತಿತ್ತು. ಆದರೀಗ ರಾಷ್ಟ್ರಮಟ್ಟದಲ್ಲಿ ಆಳುವ ಪಕ್ಷವಾಗಿರುವ ಬಿಜೆಪಿಯ ಕರ್ನಾಟಕ ಘಟಕದ ಮುಂದಾಳುಗಳು ತೀರಾ ಶಾಲಾ ಮಕ್ಕಳಂತೆ ಅರಚಾಡುವ ಮೂಲಕ ಸಾರ್ವಜನಿಕ ಸಭ್ಯತೆ, ಶಿಷ್ಟಾಚಾರಗಳನ್ನೇ ಗಾಳಿಗೆ ತೂರಿದ್ದಾರೆ.

ಅಂದಹಾಗೆ ಈ ಚುನಾವಣಾ ಕಾಳಗದಲ್ಲಿ ಭೀಕರವಾಗಿ ಹೋರಾಟ ನಡೆಸಿದ ಮೂರೂ ಪ್ರಮುಖ ಪಕ್ಷಗಳನ್ನು ನಮ್ಮ ರಾಜಕೀಯ ವಿಮರ್ಶಕರು ಗುರುತಿಸಿದ್ದಾದರೂ ಹೇಗೆ ನೋಡಿ: ಲಿಂಗಾಯಿತರ ಬೆಲ್ಟಲ್ಲಿ ಬಿಜೆಪಿ, ಒಕ್ಕಲಿಗ ಬೆಲ್ಟಲ್ಲಿ ಜೆಡಿಎಸ್ಸು ಮತ್ತು ಮುಸ್ಲಿಂ ಹಾಗೂ ದಲಿತರ ಬೆಲ್ಟಲ್ಲಿ ಕಾಂಗ್ರೆಸ್ಸು ತಮ್ಮ ಪ್ರಾಬಲ್ಯವನ್ನು ಮೆರೆದಿವೆ ಎಂದೇ ವ್ಯಾಖ್ಯಾನಿಸುವ ಮೂಲಕ ಈ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೆ ಅವುಗಳ ಸಿದ್ಧಾಂತಕ್ಕಿಂತ ಅವರ ಜಾತಿ ವೋಟು ಬ್ಯಾಂಕುಗಳೇ ನಿರ್ಣಾಯಕ ಎಂದು ವಿಶ್ಲೇಷಣೆ ಮಾಡಲಾಗಿದೆ. ಇಂತಹ ಜಾತಿ ಕೇಂದ್ರಿತ ವಿಶ್ಲೇಷಣೆ ಮತ್ತು ಅಭಿಪ್ರಾಯಗಳನ್ನು ನಮ್ಮ ರಾಜಕೀಯ ಪಕ್ಷಗಳೂ ಸಹ ತೀರಾ ಸಹಜ ಮತ್ತು ಸ್ವಾಭಾವಿಕವೆಂಬಂತೆ ಸ್ವೀಕರಿಸಿ ತೆಪ್ಪಗಾಗಿ ಕೂತಿವೆ. ಅಂದರೆ, ಕಾಂಗ್ರೆಸ್ಸು ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಜೆಡಿಎಸ್ ಎಂಬ ರಾಷ್ಟ್ರೀಯ ಅಧ್ಯಕ್ಷರ ನಾಯಕತ್ವದ ಪ್ರಾದೇಶಿಕ ಪಕ್ಷಕ್ಕೆ ತಮ್ಮವೇ ಘೋಷಿತ ತತ್ವ ಮತ್ತು ಸಿದ್ಧಾಂತಗಳಲ್ಲಿ ನಂಬಿಕೆ ಹೊರಟುಹೋದಂತಿದೆ.

ಹೀಗೆ ತಮ್ಮ ಘೋಷಿತ ತತ್ವಗಳಲ್ಲಿ ಪಕ್ಷಗಳಿಗೇ ನಿಷ್ಠೆ ಮಾಯವಾಗಿರುವಾಗ ಅವುಗಳ ಚಿಹ್ನೆಯ ಮೇಲೆ ಗೆದ್ದು ಬಂದಿರುವ ಎಮ್ಮೆಲ್ಲೇಗಳ ಪಕ್ಷನಿಷ್ಠೆಯೂ ಅನುಮಾನಾಸ್ಪದವಾಗಿಬಿಟ್ಟಿದೆ. ಪಕ್ಷಕ್ಕೆ ಅಂದರೆ ಪಕ್ಷದ ನಾಯಕತ್ವಕ್ಕೆ ತನ್ನ ಚುನಾಯಿತ ಶಾಸಕರಲ್ಲಿ ನಂಬಿಕೆ ಉಳಿದಿಲ್ಲ. ಇದಕ್ಕೆ ಪ್ರತಿಯಾಗಿ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರಿಗೆ ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ಉಳಿದಿಲ್ಲ. ತತ್ಪರಿಣಾಮವಾಗಿ ಮೈತ್ರಿ ಸರ್ಕಾರ ರಚನೆಯ ಪ್ರಯಾಸದುದ್ದಕ್ಕೂ ಕಾಂಗ್ರೆಸ್ಸು ಮತ್ತು ಜೆಡಿಎಸ್‍ನ 116 ಮಂದಿ ಶಾಸಕರು ತಮ್ಮತಮ್ಮ ಪಕ್ಷದ ಯಜಮಾನರ ಮೇಲುಸ್ತುವಾರಿಯಲ್ಲಿ ಐಷಾರಾಮಿ ಹೋಟೆಲ್ಲು ಹಾಗೂ ರೆಸಾರ್ಟ್‍ಗಳಲ್ಲಿ ವಾರಗಟ್ಟಲೇ ಒತ್ತೆಯಾಳುಗಳಾಗಿ ಉಳಿಯಬೇಕಾಗಿ ಬಂತು. ಫಲಿತಾಂಶ ಪ್ರಕಟಣೆಯ ದಿನವಾದ ಮೇ 15 ರಂದು ಮೂರೂ ಪಕ್ಷಗಳ ಮತ ಎಣಿಕೆಯ ಮುನ್ನೆಡೆ—ಹಿನ್ನೆಡೆ ಸೂಚ್ಯಂಕ ಇನ್ನೂ ಅಪೂರ್ಣವಾಗಿರುವಾಗಲೇ ಗೆಲ್ಲುವ ಸಾಧ್ಯತೆ ಇದ್ದ ಅಭ್ಯರ್ಥಿಗಳನ್ನೆಲ್ಲಾ ತುರ್ತಾಗಿ ಬೆಂಗಳೂರಿಗೆ ಧಾವಿಸುವಂತೆ ಬುಲಾವ್ ಹೋಗಿದ್ದರಿಂದ ಗೆದ್ದವರು ತಮ್ಮ ಮತಕ್ಷೇತ್ರಗಳ ಮತದಾರರ ಮುಖವನ್ನೂ ನೋಡಲಿಕ್ಕಾಗದಷ್ಟು ಅವಸರದಿಂದ ಓಡಿಬರುವಂತಾಯಿತು.

ಕರ್ನಾಟಕದ ಅಸೆಂಬ್ಲಿ ಚುನಾವಣೆಯನ್ನು ತಮ್ಮ ರಾಜಕೀಯ ಅಸ್ಮಿತೆ ಉಳಿಸಿಕೊಳ್ಳುವ ಅಂತಿಮ ಅವಕಾಶವೆಂದೇ ಭಾವಿಸಿದ ಕಾಂಗ್ರೆಸ್ ವರಿಷ್ಠ ನಾಯಕತ್ವ ಹಿಂದೆ—ಮುಂದೆ ನೋಡದೇ 3ನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷದ ನಾಯಕತ್ವದೆದುರು ತೀರಾ ಮಂಡಿಯೂರಿ ಕುಳಿತು ಬೆಂಬಲ ಘೋಷಿಸಿದ್ದು, ಆ ಪಕ್ಷದ ದಯನೀಯ ಮನಃಸ್ಥಿತಿಯ ಪ್ರತಿಬಿಂಬದಂತಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಈ ನರೇಂದ್ರ ಮೋದಿ ಎಂಬ ಒಂದು ಮಧ್ಯಮ ಗಾತ್ರದ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪ್ರಾದೇಶಿಕ ನಾಯಕನೊಬ್ಬ ಗುಜರಾತ್ ಮಾಡೆಲ್ ಎಂಬ ಹೆಸರಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ಸನ್ನು ಕೇವಲ 44 ಸ್ಥಾನಗಳ ಹೀನಾಯ ಸ್ಥಿತಿಗೆ ದೂಡಿದಾಗಿನಿಂದಲೂ ಆ ಪಕ್ಷದ ನಾಯಕತ್ವ ತನ್ನ ಅದುವರೆಗಿನ ರಾಜಕೀಯ ಗೊಂದಲಗಳ ಜೊತೆಗೆ ಮೂಲ ಅಸ್ತಿತ್ವ ಕುರಿತಂತೆಯೇ ಕಳವಳ ಪಡುವಂತಾಯಿತು.

ಕಳೆದ 4 ದಶಕ ಗಳಿಂದ ಕಾಂಗ್ರೆಸ್ ಪಕ್ಷ ವಿವಿಧ ಕಾಲಘಟ್ಟಗಳಲ್ಲಿ ಸಿಲುಕುತ್ತಾ ಬಂದ ಗೊಂದಲಗಳ ಪರಿಯನ್ನೇ ಒಮ್ಮೆ ನೆನಪಿಸಿಕೊಂಡು ನೋಡುವಾ: 1975—77ರಲ್ಲಿ ಇಂದಿರಾ ಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿ ಯಿಂದಾಗಿ ಕಾಂಗ್ರೆಸ್ಸು ಸಂಸದೀಯ ಪ್ರಜಾಪ್ರಭುತ್ವ ಕುರಿತಂತೆಯೇ ಗೊಂದಲಕ್ಕೀಡಾಯಿತು. ಮುಂದೆ 1984ರಲ್ಲಿ ಪಂಜಾಬಿನ ಖಲೀಸ್ತಾನಿ ಹಿಂಸಾಚಾರ, ಇಂದಿರಾಗಾಂಧಿಯ ಹತ್ಯೆ ಹಾಗೂ ಇದಕ್ಕೆ ಪ್ರತೀಕಾರ ರೂಪದಲ್ಲಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ಅಮಾಯಕ ಸಿಖ್ಖರ ಹತ್ಯಾಕಾಂಡದ ನಂತರ ತನ್ನ ಅಚ್ಚುಮೆಚ್ಚಿನ ಆದರ್ಶ ವಾದ ಸೆಕ್ಯುಲರಿಸಮ್ ಬಗ್ಗೆಯೇ ಗೊಂದಲ ಪಡು ವಂತಾಯಿತು.

1989ರಲ್ಲಿ ಬೋಫೋರ್ಸ್ ಫಿರಂಗಿ ಹಗರಣವನ್ನು ಬಯಲಿಗೆಳೆದು ಕಾಂಗ್ರೆಸ್‍ನಿಂದ ಸಿಡಿದುಹೋದ ವಿ.ಪಿ.ಸಿಂಗ್ ಜಾರಿಗೊಳಿಸಿದ ಮಂಡಲ್ ಮೀಸಲಾತಿಯಿಂದಾಗಿ ಕಾಂಗ್ರೆಸ್ ಪಕ್ಷ ತನ್ನ ಸಾಮಾಜಿಕ ನ್ಯಾಯದ ತತ್ವದ ಬಗ್ಗೆಯೇ ಅತೀವ ಗೊಂದಲ ಮತ್ತು ಆತಂಕದಲ್ಲಿ ಮುಳುಗುವಂತಾ ಯಿತು. ಹಾಗೆಯೇ, 1992 ಡಿಸೆಂಬರ್ 6ರಂದು ಸಂಘ ಪರಿ ವಾರದ ಕರ ಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಮೇಲೆ ಆವತ್ತಿನ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ವಿಚಾರದಲ್ಲಿ ತಳಮಳಗೊಳ್ಳುವಂತಾಯಿತು. ಇಷ್ಟೇಅಲ್ಲ, 1991 ಜುಲೈನಲ್ಲಿ ಅಲ್ಪ ಬಹುಮತದ ಕಾಂಗ್ರೆಸ್ ಸರ್ಕಾರದ ಪ್ರಧಾನಿಯಾಗಿ ಅವತರಿಸಿದ ಪಿ.ವಿ.ನರಸಿಂಹರಾವ್ ಸಂಪುಟದ ಅರ್ಥ ಸಚಿವರಾಗಿ ಡಾ.ಮನಮೋಹನ್ ಸಿಂಗ್ ಜಾರಿಗೊಳಿಸಿದ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯಿಂದಾಗಿ ಕಾಂಗ್ರೆಸ್ಸು ಇಂದಿರಾಜಿ ಕಾಲದ ಗರೀಬಿ ಹಟಾವೋ ರಾಜಕೀಯದ ಬಗ್ಗೆಯೇ ಅನುಮಾನಪಡುವಂತಾಯಿತು.

ವರ್ತಮಾನದಲ್ಲಿ ಮೋದಿಯಂತಹ ಮೋದಿಯೇ ಧರ್ಮ ಬಿಟ್ಟು ಡೆವೆಲಪ್‍ಮೆಂಟ್ ಅಜೆಂಡಾ ಹಿಡಿದುಕೊಂಡು ತನ್ನ ಮಾತೃಪಕ್ಷಕ್ಕೆ ಪ್ರಚಂಡ ಬಹುಮತದ ಗೆಲುವು ತಂದುಕೊಟ್ಟದ್ದಷ್ಟೇ ಅಲ್ಲ, ಒಂದಾದ ಮೇಲೊಂದರಂತೆ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ, ಬಿಜೆಪಿ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೊರಟಮೇಲಂತೂ ಕಾಂಗ್ರೆಸ್ಸು ತನ್ನ ರಾಜಕೀಯ ತಂತ್ರ, ಚುನಾವಣಾ ಪ್ರಣಾಳಿಕೆ, ಪಕ್ಷದ ಸಂಘಟನಾತ್ಮಕ ಸ್ವರೂಪ ಹಾಗೂ ತನ್ನ ಸರ್ವೋಚ್ಚ ನಾಯಕತ್ವದ ಗೆಲ್ಲುವ ಸಾಮಥ್ರ್ಯದ ಬಗ್ಗೆಯೇ ವಿಶ್ವಾಸ ಕಳೆದುಕೊಂಡು ಪರದಾಡುವಂತಾಗಿದೆ. ಇಂತಹ ಕರುಣಾಜನಕ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಅಸೆಂಬ್ಲಿಯಲ್ಲಿ 78 ಸ್ಥಾನಗಳನ್ನು ಪಡೆದು ಗೌರವಾನ್ವಿತ ವಿರೋಧ ಪಕ್ಷವಾಗಿ ಕುಳಿತುಕೊಳ್ಳುವ ರಾಜಮಾರ್ಗ ಲಭ್ಯವಿತ್ತು. ಆದರೆ ಅಧಿಕಾರ ಕೈತಪ್ಪುವ ಆತಂಕದಿಂದಾಗಿ ತನ್ನ ಅರ್ಧಕ್ಕಿಂತ ಕಡಿಮೆ ಸ್ಥಾನ ಗಳಿಸಿದ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಶರಣಾಗತಿಯೇ ಹೆಚ್ಚು ಸುರಕ್ಷಿತ ತಂತ್ರವೆನಿಸಿಬಿಟ್ಟಿತು.

ಅಂದಹಾಗೆ, ಕಾಂಗ್ರೆಸ್ಸಿನ ಸೋಲಿಗೆ ಹಳೇ ಮೈಸೂರಿನ ಒಕ್ಕಲಿಗರಲ್ಲಿ ಸಿದ್ರಾಮಯ್ಯ ವಿರುದ್ಧ ಜಾತಿ ಅಸಹನೆಯ ಬಿರುಗಾಳಿಯನ್ನೇ ಬಿತ್ತಿದ ಜೆಡಿಎಸ್ ಪ್ರಚಾರ ತಂತ್ರವೇ ಕಾರಣವೆಂದು ಜಗಜ್ಜಾಹೀರಾದ ಮೇಲೂ ಆ ಪಕ್ಷವನ್ನು ಸೆಕ್ಯೂಲರ್ ಎಂದು ಪರಿಭಾವಿಸಿ ಮೈತ್ರಿ ಸರ್ಕಾರ ರಚಿಸಲು ಕೈಜೋಡಿಸಿದ್ದು ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಆತ್ಮವಂಚನೆಯ ರಾಜಕಾರಣದ ಪ್ರತೀಕವೆಂದೇ ವ್ಯಾಖ್ಯಾನಿಸಬೇಕಾಗಿದೆ. ಹಾಗೆಯೇ 4 ವರ್ಷಗಳ ನಂತರವೂ ಮೋದಿಯ “ಸಬ್ ಕೆ ಸಾಥ್, ಸಬ್ ಕಾ ವಿಕಾಸ್” ಎಂಬ ಹೊಸ ಶೈಲಿಯ ರಾಜಕೀಯ ಪರಿಭಾಷೆಯನ್ನು ಅರ್ಥಮಾಡಿಕೊಳ್ಳದ ರಾಜ್ಯದ ಬಿಜೆಪಿ ನಾಯಕತ್ವ ಈಗಲೂ ಸಹ ತನ್ನ ಹಿಂದೂ ಉಗ್ರಗಾಮಿತ್ವ ಹಾಗೂ ಲಿಂಗಾಯಿತರ ಜಾತಿ ಬಲಪ್ರದರ್ಶನದ ದೇಶಾವರಿ ರಾಜಕೀಯವನ್ನೇ ನೆಚ್ಚಿಕೊಂಡಿರುವುದು ಅದರ ವೈಚಾರಿಕ ಮತ್ತು ಭೌತಿಕ ದಿವಾಳಿತನದ ಪುರಾವೆಯಂತಿದೆ.

ಫಲಿತಾಂಶದಲ್ಲಿ ಮೂರನೇ ಸ್ಥಾನ ಪಡೆದರೂ ಮುಖ್ಯಮಂತ್ರಿ ಪದವಿಯ ಜಾಕ್‍ಪಾಟ್ ಗಿಟ್ಟಿಸಿದ ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷದ ಸೆಕ್ಯೂಲರ್ ಮಾದರಿಗಳನ್ನು ನೆನಪಿಸಿಕೊಳ್ಳಿ: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೇವಲ 14 ಸ್ಥಾನಗಳನ್ನು ಪಡೆದರೂ 76 ಸದಸ್ಯ ಬಲವುಳ್ಳ ಕಾಂಗ್ರೆಸ್‍ನೊಂದಿಗೆ ಕೂಡಾವಣೆ ಮಾಡಿಕೊಂಡು ಸೆಕ್ಯೂಲರಿಸಮ್ಮಿನ ಬಾವುಟ ಹಾರಿಸುವುದು. ಆದರೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ಸನ್ನು ಹೊರಗಿಡಲು ಬಿಜೆಪಿಯೊಂದಿಗೆ ಕೈಜೋಡಿಸಿ, ಹಿಂದುತ್ವದ ಹಿರಿಮೆಯನ್ನು ಎತ್ತಿಹಿಡಿಯುವುದು!! ಈ ರೀತಿ ಸಮಯ—ಸಂದರ್ಭಕ್ಕೆ ತಕ್ಕಂತೆ ತಮ್ಮ ರಾಜೀ—ಕಬೂಲಿ ರಾಜಕಾರಣಕ್ಕೆ ಸಮರ್ಥನೆ ನೀಡುತ್ತಾ ಸಾಗಿರುವ ರಾಜ್ಯದ ಮೂರೂ ಪಕ್ಷಗಳು ಅಸಲಿಗೆ ತಮ್ಮ ಮೂಲ ಸಿದ್ಧಾಂತ, ತತ್ವ ಮತ್ತು ಘೋಷಣೆಗಳನ್ನು ಮರೆತು ಪಕ್ಷ ರಾಜಕಾರಣದ ಚೌಕಟ್ಟನ್ನೇ ಶಿಥಿಲಗೊಳಿಸುತ್ತಾ ಸಾಗಿರುವುದು ನಮ್ಮ ಪ್ರಜಾಪ್ರಭುತ್ವದ ಅವನತಿಗೆ ಭಾಷ್ಯ ಬರೆದಂತಿದೆ.

*ಲೇಖಕರು ಸಸ್ಯಶಾಸ್ತ್ರ ವಿಷಯದ ನಿವೃತ್ತ ಪ್ರಾಧ್ಯಾಪಕರು. ಹವ್ಯಾಸಿ ಪತ್ರಕರ್ತರಾಗಿ ಲಂಕೇಶ್ ಪತ್ರಿಕೆಗಾಗಿ ಅನೇಕ ತನಿಖಾವರದಿಗಳನ್ನು ಮಾಡಿದ್ದಾರೆ. ರಾಜಕೀಯ ಆಗುಹೋಗುಗಳನ್ನು ಅಧಿಕಾರಯುತವಾಗಿ ವಿಶ್ಲೇಷಿಸಬಲ್ಲರು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮