2nd ಜೂನ್ ೨೦೧೮

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಡಾ.ಡಿ.ಸಿ.ನಂಜುಂಡ

ಎಷ್ಟೇ ಕಾಯ್ದೆ ಕಾನೂನುಗಳು ಇದ್ದರೂ, ವಿವಿಧ ರೀತಿಯ ವೈಜ್ಞಾನಿಕ ಸಂರಕ್ಷಣಾ ವಿಧಾನಗಳು ಲಭ್ಯವಿದ್ದರೂ ಮುಖ್ಯವಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಮ್ಮ ಖಾಸಗಿ ಮಾಹಿತಿಗಳು ಅನ್ಯರ ಪಾಲಾಗದಂತೆ ವ್ಯವಹರಿಸಬೇಕಾಗುತ್ತದೆ.

21ನೇ ಶತಮಾನ ಮಾಹಿತಿ ಯುಗ. ಇಂದು ಮಾಹಿತಿ ಅಥವಾ ದತ್ತಾಂಶವೇ ಒಂದು ರೀತಿಯಲ್ಲಿ ಕೋಟಿಕೋಟಿ ಬೆಲೆಬಾಳುವ ಆಸ್ತಿ. ಆಧುನಿಕ ಜಗತ್ತು ನಿಂತಿರುವುದು ವೈಜ್ಞಾನಿಕ ದತ್ತಾಂಶಗಳು ಮತ್ತು ವಿವಿಧ ರೀತಿಯ ಮಾಹಿತಿಯ ಆಧಾರದ ಮೇಲೆ. ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದಿಂದ ಇಂದು ಹೊಸ ರೀತಿಯ ಮಾಹಿತಿಗಳು ದತ್ತಾಂಶಗಳ ರೂಪದಲ್ಲಿ ಹೊರಬರುತ್ತಿವೆ. ಇಂತಹ ದತ್ತಾಂಶಗಳಿಂದ ಮನುಕುಲಕ್ಕೆ ಹೆಚ್ಚಿನ ರೀತಿಯಲ್ಲಿ ಉಪಯೋಗವಿದೆ ಮತ್ತು ಅಷ್ಟೇ ರೀತಿಯಲ್ಲಿ ಅನಾನುಕೂಲವಿದೆ. ಇಂತಹ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ವೈಜ್ಞಾನಿಕವಾಗಿ ಸಂರಕ್ಷಿಸದಿದ್ದರೆ ಸಮಾಜಘಾತಕ ಶಕ್ತಿಗಳ ಕೈಸೇರಿ ವ್ಯಕ್ತಿಗತವಾಗಿ ಮತ್ತು ಸಮುದಾಯಕ್ಕೆ ವಿವಿಧ ರೀತಿಯ ಹಾನಿಗಳುಂಟಾಗುವುದು ಖಂಡಿತ. ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಸೈಬರ್ ಅಪರಾಧಗಳು, ಫೇಸ್‍ಬುಕ್‍ನಿಂದ ಫೇಸ್ ಕಳೆದುಕೊಳ್ಳುತ್ತಿರುವ ಯುವ ಜನತೆ ಮತ್ತು ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಂಡು ದೇಶದ್ರೋಹದ ಚಟುವಟಿಕೆಗಳಲ್ಲಿ ಕೆಲವರು ಭಾಗಿಗಳಾಗುತ್ತಿರುವುದನ್ನು ಗಮನಿಸಬಹುದು.

ಹಾಗಾಗಿ ಪ್ರತಿ ಜನವರಿ 28ರಂದು ‘ವಿಶ್ವ ದತ್ತಾಂಶ ಸಂರಕ್ಷಣಾ ದಿನ’ ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ತಮಗೆ ಸಂಬಂಧಿಸಿದ ವಿವಿಧ ರೀತಿಯ ದತ್ತಾಂಶಗಳನ್ನು ಅಥವಾ ಕಂಪ್ಯೂಟರ್ ಮಾಹಿತಿಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸುವ ಕುರಿತು ಅರಿವು ಮೂಡಿಸುವುದು.

ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರ ಮುಂದುವರಿದಂತೆ ದಿನನಿತ್ಯ ಅಧಿಕ ಸಂಖ್ಯೆಯಲ್ಲಿ ಮಾಹಿತಿಗಳು ಹೊರಬರುತ್ತಿವೆ. ಅದೇ ರೀತಿಯಲ್ಲಿ ಇಂತಹ ಮಾಹಿತಿಗಳನ್ನು ಕದಿಯಲು ಹ್ಯಾಕರ್ಸ್‍ಗಳ ಪಡೆಯೇ ಸದಾ ಹೊಂಚುಹಾಕುತ್ತಿರುತ್ತದೆ. ನಮಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ವಿವರಗಳು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ವಿವರಗಳು, ಎ.ಟಿ.ಎಂ., ಚರಾಚರ ಆಸ್ತಿಗಳ ವಿವರಗಳು, ಹಣಕಾಸು ವಹಿವಾಟು, ವೈದ್ಯಕೀಯ ವಿವರಗಳು ಮತ್ತಿತ್ತರ ಖಾಸಗಿ ವಿವರಗಳು ತುಂಬಾ ಸೂಕ್ಷ್ಮವಾಗಿದ್ದು ಸೈಬರ್ ಕಳ್ಳರ ಪಾಲಾಗುವ ಸಾಧ್ಯತೆ ಸದಾ ಇರುತ್ತದೆ. ಒಂದೊಮ್ಮೆ ನಮ್ಮ ವೈಯಕ್ತಿಕ ಮತ್ತು ಹಣಕಾಸಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಇತರರ ಪಾಲಾದರೆ ನಮಗೆ ಊಹಿಸಲಾರದಷ್ಟು ನಷ್ಟ ಉಂಟಾಗುತ್ತದೆ. ನಮ್ಮ ಖಾಸಗಿ ಮಾಹಿತಿಗಳು ಹೊರಬಂದರೆ ಸಮಾಜದಲ್ಲಿ ನಮ್ಮ ಗೌರವ ಮಣ್ಣುಪಾಲಾಗುತ್ತದೆ.

ಮೇಲಿನ ಸಮಸ್ಯೆಗಳಿಂದ ಪಾರಾಗಲು ಇರುವ ಏಕೈಕ ಆಯ್ಕೆ ಎಂದರೆ ನಮಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಕೊಳ್ಳುವುದರ ಬಗ್ಗೆ ಸರಿಯಾದ ಅರಿವನ್ನು ಪಡೆಯುವುದು. ವೃತ್ತಿಯಲ್ಲಿರುವವರು, ವ್ಯಾಪಾರಿಗಳು, ಕಾರ್ಪೊರೇಟ್ ವೃತ್ತಿ ತಜ್ಞರು, ರಕ್ಷಣಾ ತಜ್ಞರು, ವಿಜ್ಞಾನಿಗಳು ಮತ್ತು ಸಾಮಾನ್ಯ ಜನರು ತಮಗೆ ಸಂಬಂಧಿಸಿದ ಮಾಹಿತಿಗಳು ವಿನಾಕಾರಣ ಆನ್—ಲೈನ್‍ನಲ್ಲಿ ಇದ್ದರೆ ತಕ್ಷಣ ಅದನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ಸಾಮಾಜಿಕ ತಾಣಗಳಲ್ಲಿ ಇರುವವರು ಸದಾ ಜಾಗೃತರಾಗಬೇಕಾಗಿರುತ್ತದೆ. ಆನ್‍ಲೈನ್ ವ್ಯವಹಾರದಲ್ಲಿ ಸದಾ ಅಸುರಕ್ಷತೆ ಇದ್ದೇಇರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ನಷ್ಟ ಖಂಡಿತ.

ವಿಶ್ವದಲ್ಲಿ ಸಾರ್ವಜನಿಕ ಮಾಹಿತಿಗಳು ವಿವಿಧ ರೀತಿಯಲ್ಲಿ ವಿವಿಧ ಉದ್ದೇಶಗಳಿಗೆ ಸರ್ಕಾರ ಅಥವಾ ಖಾಸಗಿ ಕ್ಷೇತ್ರದಲ್ಲಿ ಸದಾ ಬಳಕೆಯಾಗುತ್ತಿರುತ್ತದೆ. ಉದಾಹರಣೆ ವಸ್ತುಗಳನ್ನು ಖರೀದಿಸುವಾಗ ಬಳಸುವ ಕ್ರೆಡಿಟ್ ಕಾರ್ಡ್, ಹಣ ಪಡೆಯಲು ಉಪಯೋಗಿಸುವ ಎ.ಟಿ.ಎಂ. ಕಾರ್ಡ್, ಅಂತರ್ಜಾಲದ ಬಳಕೆ, ಖಾಸಗಿ ಆರೋಗ್ಯ ಮಾಹಿತಿ, ಇಮೇಲ್ ಮೂಲಕ ಪತ್ರ ವ್ಯವಹಾರ, ಫೇಸ್‍ಬುಕ್ ಚಾಟಿಂಗ್, ವಾಟ್ಸ್‍ಪ್ ಇತ್ಯಾದಿ. ಆದರೆ ಸಾಮಾನ್ಯ ಜನರಿಗೆ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಜೋಪಾನವಾಗಿ ಸಂರಕ್ಷಿಸಿಕೊಳ್ಳುವುದು ಅಥವಾ ಆ ದಿಕ್ಕಿನಲ್ಲಿ ತಮಗೆ ಇರುವ ಹಕ್ಕಿನ ಕುರಿತಾಗಿ ಯಾವುದೇ ತಿಳಿವಳಿಕೆ ಇರುವುದಿಲ್ಲ. ಒಂದೊಮ್ಮೆ ತಮ್ಮ ಮಾಹಿತಿಗೆ ಸಂಬಂಧಿಸಿದ ಹಕ್ಕುಗಳ ಉಲ್ಲಂಘನೆಯಾದರೆ ಅಥವಾ ನಷ್ಟ ಉಂಟಾದರೆ ಪರಿಹಾರ ಪಡೆಯುವ ಕುರಿತಾಗಿ ಯಾವುದೇ ಜ್ಞಾನ ಇರುವುದಿಲ್ಲ. ಅಮೆರಿಕಾ ಮತ್ತಿತ್ತರ ದೇಶಗಳಲ್ಲಿ ಸಾರ್ವಜನಿಕರ ಖಾಸಗಿ ಮಾಹಿತಿಗಳು ಸೋರಿಕೆಯಾದರೆ ಸರ್ಕಾರ ಅಥವಾ ಖಾಸಗಿ ಕ್ಷೇತ್ರಗಳು ಕೋಟ್ಯಾಂತರ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನೀತಿ ನಿಯಮಾವಳಿಯನ್ನು ಇನ್ನೂ ರಚಿಸಿಲ್ಲ. ಉದಾಹರಣೆಗೆ ಇತ್ತೀಚೆಗೆ ಆಧಾರ್ ಕಾರ್ಡ್ ವಿಚಾರದಲ್ಲಿ ಮತ್ತು ಮತಪಟ್ಟಿಯಲ್ಲಿ ಕಂಡುಬರುತ್ತಿರುವ ವಿವಿಧ ರೀತಿಯ ದುರ್ಬಳಕೆಯ ಆರೋಪಗಳು. ಇಂದು ಯಾವುದೇ ಮೊಬೈಲ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸೇಲ್ಸ್‍ಮೆನ್‍ಗಳಲ್ಲೂ ನಮ್ಮ ಆಧಾರ್‍ಗೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿರುವುದು ಅಚ್ಚರಿ ಎನಿಸಿದರೂ ಸತ್ಯ.

ದತ್ತಾಂಶ—ಮಾಹಿತಿ ಸೋರಿಕೆ ತಡೆಗೆ
ಹೊಸ ಕಾನೂನು ಬೇಕೆ?

ಮಾಹಿತಿ ಸೋರಿಕೆಯ ಘಟನೆಗಳು ಸಹಸ್ರಾರು ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ಹೊಸದಾಗಿ ‘ವೈಯಕ್ತಿಕ ದತ್ತಾಂಶ ರಕ್ಷಣಾ ಕಾನೂನು’ ಒಂದನ್ನು ರಚಿಸಲು ಮುಂದಾಗಿದೆ.

ಆಧಾರ್ ಸಂಬಂಧಿತ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಾನೊಂದು ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸುವುದಾಗಿ ಹೇಳಿತ್ತು. ಇದರಂತೆ ನಿವೃತ್ತ ನ್ಯಾಯಾಧೀಶ (ಕನ್ನಡಿಗ) ಬಿ.ಎನ್.ಶ್ರೀಕೃಷ್ಣರವರ ನೇತೃತ್ವದಲ್ಲಿ ಐದು ಮಂದಿ ಪರಿಣತರ ಸಮಿತಿಯೊಂದನ್ನೂ ರಚಿಸಿತ್ತು. ಈ ಸಮಿತಿಯು ಇದೀಗ 243 ಪುಟಗಳ ಶ್ವೇತಪತ್ರವೊಂದನ್ನು ಪ್ರಕಟಿಸಿರುವುದರ ಜೊತೆಗೆ ದತ್ತಾಂಶ ಹಾಗೂ ಮಾಹಿತಿ ಸೋರಿಕೆ ತಡೆಯಲು ಬೇಕಾದ ಕಾನೂನು ರಚನೆಗೆ ಪೂರಕವಾಗಿ 229 ಪ್ರಶ್ನೆಗಳಿಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಬಯಸಿದೆ. ಇದರೊಟ್ಟಿಗೆ ದತ್ತಾಂಶ ಸೋರಿಕೆಯ ಈ ವಿವಾದವು ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಪಟ್ಟಿದೆ.

ಈ ಚರ್ಚೆಗೆ ಪೂರಕವಾಗಿ ಕೆಲವು ಮಾಹಿತಿಗಳನ್ನು ನೀಡಲೇಬೇಕು. ಆಗಸ್ಟ್ 2017ರಲ್ಲಿ ಸುಪ್ರೀಂಕೋರ್ಟಿನ ಒಂಬತ್ತು ನ್ಯಾಯಾಧೀಶರ ಪೀಠವೊಂದು ಜಸ್ಟಿಸ್ ಕೆ.ಎಸ್.ಪುಟ್ಟಸ್ವಾಮಿ (ನಿವೃತ್ತ) ಪ್ರಕರಣದಲ್ಲಿ ಖಾಸಗಿತನದ ಹಕ್ಕು ಸಂವಿಧಾನದತ್ತ ಮೂಲಭೂತ ಹಕ್ಕೆಂದು ಐತಿಹಾಸಿಕ ನಿರ್ಣಯ ನೀಡಿದೆ. 547 ಪುಟಗಳ ಈ ತೀರ್ಪಿನಲ್ಲಿ ಸರ್ಕಾರಗಳು ನಾಗರಿಕರ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ಗೌರವಿಸಬೇಕೆಂದು ಹೇಳಿದೆ. ಆದರೆ ಖಾಸಗಿ ಸಂಸ್ಥೆಗಳ ಹಾಗೂ ಖಾಸಗಿ ವ್ಯಕ್ತಿಗಳ ನಡುವಿನ ಸಂದರ್ಭದಲ್ಲಿ ಹೇಗೆ ಈ ಖಾಸಗಿತನದ ಹಕ್ಕಿನ ಚಲಾವಣೆಯಾಗುತ್ತದೆಂಬುದನ್ನು ನೋಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಖಾಸಗಿ ಸಂಸ್ಥೆಗಳಿಂದ ದತ್ತಾಂಶ—ಮಾಹಿತಿ ಸೋರಿಕೆ ತಡೆಹಿಡಿಯಲು ಹಾಗೂ ಸಾಮಾನ್ಯ ಬಳಕೆದಾರರ ಖಾಸಗಿತನದ ಹಕ್ಕನ್ನು ಗೌರವಿಸಲು ಕಾಯಿದೆಯೊಂದನ್ನು ರೂಪಿಸುವ ಅಗತ್ಯವನ್ನು ಮನಗಂಡಿದೆ.

ಈ ದತ್ತಾಂಶ—ಮಾಹಿತಿ ಸೋರಿಕೆಯ ವಿರುದ್ಧದ ಖಾಸಗಿತನದ ಹಕ್ಕೆಂದರೆ, ಸಾಮಾನ್ಯ ಬಳಕೆದಾರರು ಹಲವಾರು ಅಂತರ್ಜಾಲ ತಾಣಗಳಲ್ಲಿ ಹಾಗೂ ಸೇವಾಸಂಸ್ಥೆಗಳಲ್ಲಿ ನೀಡಿರುವ ತಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯ ಬಯಸುವ ಹಕ್ಕು. ಇದರಲ್ಲಿ ಫೇಸ್‍ಬುಕ್, ಟ್ವಿಟ್ಟರ್ ಮುಂತಾದ ಆನ್‍ಲೈನ್ ಸೇವಾಸಂಸ್ಥೆಗಳು ತಮ್ಮ ಬಳಕೆದಾರರಿಂದ ಹಾಗೂ ಬಳಕೆದಾರರ ಬಗ್ಗೆ ಶೇಖರಿಸಿಟ್ಟುಕೊಂಡ ಮಾಹಿತಿಯನ್ನು ಬಳಕೆದಾರರ ಅನುಮತಿಯಿಲ್ಲದೆ ಬೇರೊಬ್ಬರೊಂದಿಗೆ ಹಂಚಿಕೊಳ್ಳುವುದು ಪ್ರತಿಬಂಧಿತವಾಗಿರುತ್ತದೆ. ಹಾಗೆಯೇ ಹಲವಾರು ವಾಣಿಜ್ಯ ಸಂಸ್ಥೆಗಳು ತಮ್ಮ ಸದಸ್ಯರ, ಬಳಕೆದಾರರ ಹಾಗೂ ಪರಿಚಿತರ ಪ್ರೊಫೈಲ್ ಮಾಹಿತಿಯನ್ನು ಲಾಭದ ಉದ್ದೇಶಕ್ಕೆ ಮಾರುವುದು ಅಥವಾ ಹಂಚಿಕೊಳ್ಳುವುದು ಕೂಡಾ ನಿರ್ಬಂಧಿತವಾಗುತ್ತದೆ.

ಇಲ್ಲಿಯವರೆಗೆ 2008ರ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆಯ ಅಡಿಯಲ್ಲಿ ಈ ಮಾಹಿತಿ ಖಾಸಗಿತನದ ಹಕ್ಕು ಕಾನೂನಿನ ರಕ್ಷಣೆಗೆ ಒಳಪಟ್ಟಿದೆ. ಈ ಕಾಯಿದೆಯಲ್ಲಿ ಸೂಕ್ಷ್ಮ ಮಾಹಿತಿ ಸೋರಿಕೆಗೆ ಕಾರಣವಾದ ಖಾಸಗಿ ಸಂಸ್ಥೆಗಳಿಂದ ಪರಿಹಾರ ಕೇಳುವ ಅವಕಾಶವಿದೆ.

ಆದರೆ ಈ ಕಾಯಿದೆಯು ಯಾವುದು ‘ಸೂಕ್ಷ್ಮ ಮಾಹಿತಿ’ಯೆಂಬ ಸ್ಪಷ್ಟ ವ್ಯಾಖ್ಯಾನ ನೀಡಿಲ್ಲ. ಹಾಗಾಗಿ ಮಾಹಿತಿ ಸೋರಿಕೆಯನ್ನು ಶಿಕ್ಷಾರ್ಹ ಅಪರಾಧವೆಂದು ಹೇಳಿದ್ದರೂ ಸೂಕ್ತ ಮತ್ತು ನಿರ್ದಿಷ್ಟ ಚೌಕಟ್ಟಿನಲ್ಲಿ ಅಪರಾಧದ ವಿವರಣೆಯಾಗದೆ, ಇದುವರೆಗೂ ಯಾರಿಗೂ ಜೈಲು ಶಿಕ್ಷೆಯಾದ ವರದಿಗಳಿಲ್ಲ. ಆದರೆ ಮಾಹಿತಿ ಸೋರಿಕೆಯ ಘಟನೆಗಳು ಸಹಸ್ರಾರು ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ಹೊಸದಾಗಿ ‘ವೈಯಕ್ತಿಕ ದತ್ತಾಂಶ ರಕ್ಷಣಾ ಕಾನೂನು’ ಒಂದನ್ನು ರಚಿಸಲು ಮುಂದಾಗಿದೆ. ಈ ಹೊಸ ಕಾನೂನಿನಲ್ಲಿ ಡೇಟಾ ಕಂಟ್ರೋಲರ್‍ನ (ದತ್ತಾಂಶ ನಿಯಂತ್ರಕ) ಜವಾಬ್ದಾರಿ ಮತ್ತು ಬಾಧ್ಯತೆಗಳನ್ನು ಸ್ಪಷ್ಟಪಡಿಸಲು ಉದ್ದೇಶಿಸಲಾಗಿದೆ. ಮೇಲಾಗಿ ಈ ದತ್ತಾಂಶ ನಿಯಂತ್ರಕರು ತಮ್ಮ ಕಾರ್ಯವ್ಯಾಪ್ತಿಯನ್ನು ಬೇರೆಯವರಿಗೆ ವರ್ಗಾಯಿಸದಿದ್ದಲ್ಲಿ ಅವರ ಬಾಧ್ಯತೆ ಮತ್ತು ಜವಾಬ್ದಾರಿಯನ್ನು ನಿಗದಿಪಡಿಸಲು ಉದ್ದೇಶಿಸಿದೆ.

ಆದರೆ ಈ ‘ವೈಯಕ್ತಿಕ ದತ್ತಾಂಶ ರಕ್ಷಣಾ ಕಾನೂನಿನ’ ನಿಯಮಗಳು ಸರ್ಕಾರಿ ಸಂಸ್ಥೆಗಳಿಗೆ ಹಾಗೂ ಖಾಸಗಿ ವಾಣಿಜ್ಯ ಸಂಸ್ಥೆಗಳಿಗೆ ಒಂದೇ ಮಾದರಿಯಲ್ಲಿ ಇರಬೇಕೇ ಎಂಬ ಚರ್ಚೆ ಕೂಡಾ ಆಗಬೇಕಿದೆ.

ಆಧಾರ್ ಹಾಗೂ ತೆರಿಗೆ ಮಾಹಿತಿಯಂತಹ ಸೂಕ್ಷ್ಮ ದತ್ತಾಂಶಗಳನ್ನು ಹೊಂದಿರುವ ಸರ್ಕಾರಿ ಸಂಸ್ಥೆಗಳ ಹೊಣೆಗಾರಿಕೆ ಹೆಚ್ಚೇ ಅಥವಾ ವಾಣಿಜ್ಯ ಉದ್ದೇಶಕ್ಕೆ ಸಂಗ್ರಹಿಸಲಾದ ಖಾಸಗಿ ಸಂಸ್ಥೆಗಳಿಂದ ಜರುಗಿದ ಮಾಹಿತಿ ಸೋರಿಕೆಯ ಪ್ರಮಾದ ಹೆಚ್ಚೇ ಎಂಬುದು ನಿರ್ಧಾರವಾಗಬೇಕಿದೆ. ಈ ವಿಷಯದಲ್ಲಿ ತನ್ನ 229 ಪ್ರಶ್ನೆಗಳಲ್ಲಿ ಜಸ್ಟಿಸ್ ಶ್ರೀಕೃಷ್ಣ ಪರಿಣತರ ಸಮಿತಿಯು ನಾಗರಿಕರಿಂದ ಹಾಗೂ ಮಾಹಿತಿ ತಂತ್ರಜ್ಞಾನದ ಬಳಕೆದಾರರಿಂದ ವಿಶದ ಪ್ರತಿಕ್ರಿಯೆ ಕೇಳಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕನ್ನಡಿಗರು ಕನ್ನಡಿಗನೊಬ್ಬನ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗೆ ತಮ್ಮ ಅನಿಸಿಕೆಗಳನ್ನು ನೀಡಬಹುದಾಗಿದೆ.

ಹಾಗಾದರೆ ಜಾಗತೀಕರಣ, ಉದಾರಿಕರಣ ಆಧುನೀಕರಣ ಯುಗದಲ್ಲಿ ಆನ್‍ಲೈನ್‍ನಲ್ಲಿ ನಮ್ಮ ಮಾಹಿತಿಗಳು ಅಷ್ಟೊಂದು ಅಸುರಕ್ಷಿತವೇ? ಖಂಡಿತ ಇಲ್ಲ. ಆನ್‍ಲೈನ್‍ನಲ್ಲಿ ಖಂಡಿತವಾಗಿಯು ನಮಗೆ ಸಂಬಂಧಿಸಿದ ಮಾಹಿತಿಗಳು (ಏನಾದರೂ ಇದ್ದಲ್ಲಿ) ಸಂರಕ್ಷಿತವಾಗಿರುತ್ತದೆ. ವಿವಿಧ ಹಂತಗಳಲ್ಲಿ ತಂತ್ರಜ್ಞಾನ ಬಳಸಿ ಇವುಗಳ ಸಂರಕ್ಷಣೆಗೆ ಸಂಬಂಧಿಸಿದವರು ಹಲವಾರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಾರೆ. ಸಾರ್ವಜನಿಕರ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಸೋರಿಕೆಯಾಗದಂತೆ ಸದಾ ಜಾಗರೂಕತೆ ವಹಿಸಿರುತ್ತಾರೆ. ಉದಾಹರಣೆಗೆ ಬ್ಯಾಂಕಿಂಗ್ ಕ್ಷೇತ್ರ; ಹ್ಯಾಕರ್ಸ್‍ಗಳಿಗೆ ಮಾಹಿತಿಗಳು ಸುಲಭವಾಗಿ ದಕ್ಕದಂತೆ ವೈಜ್ಞಾನಿಕ ರಕ್ಷಣಾ ಕ್ರಮಗಳನ್ನು ಕೈಗೊಂಡಿರುತ್ತಾರೆ. ಆದರೂ ಇವೆಲ್ಲದರ ನಡುವೆಯು ಸಾರ್ವಜನಿಕರು ಸಹ ಜಾಗರೂಕರಾಗಿರಬೇಕಾಗಿರುತ್ತದೆ. ತಮಗೆ ಸಂಬಂಧಿಸಿದಂತೆ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮಾಹಿತಿಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ಅಥವಾ ಆನ್‍ಲೈನ್‍ನಲ್ಲಿ ದೊರಕುವಂತೆ ಮಾಡಬಾರದು. ಇಂತಹ ವಿಚಾರಗಳಲ್ಲಿ ಆಪತ್ತು ಸದಾ ಇರುತ್ತದೆ. ಇಲ್ಲಿ ಸದಾ ಜಾಗೃತಿಯೇ ಸರಿಯಾದ ಮದ್ದು.

ಆನ್‍ಲೈನ್‍ನಲ್ಲಿ ಮಾಹಿತಿಗಳು ಸುಲಭವಾಗಿ ದೊರಕುತ್ತಿರುವುದರಿಂದ ಇಂದು ಸೈಬರ್ ಕ್ರೈಂ ಹೆಚ್ಚಾಗಿ ಎಲ್ಲೆಡೆ ವರದಿಯಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಮುಗ್ಧ ಜನರು ಬಲಿಯಾಗುತ್ತಿದ್ದಾರೆ. ಫೋನ್‍ನಲ್ಲಿ ಅಪರಿಚಿತರಿಗೆ ನೀಡುವ ಎ.ಟಿ.ಎಂ. ಕಾರ್ಡ್‍ನ ಮಾಹಿತಿಯಿಂದ ಲಕ್ಷಾಂತರ ರೂಪಾಯಿಗಳನ್ನು ಕ್ಷಣಾರ್ಧದಲ್ಲಿ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದು ಸಾಕಷ್ಟಿವೆ. ಅಮೆರಿಕಾ, ಲಂಡನ್‍ನಲ್ಲಿ ಕುಳಿತುಕೊಂಡು ವಂಚಕರು ಇಲ್ಲಿಯ ನಮ್ಮ ಹಣವನ್ನು ಲಪಟಾಯಿಸುವ ಪ್ರಸಂಗಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ವಂಚಕರ ದೊಡ್ಡ ಜಾಲವೇ ಇದರ ಹಿಂದೆ ಇವೆ. ಸಾರ್ವಜನಿಕರು ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಸೈಬರ್ ಪೊಲೀಸ್ ಸಹ ಇಲ್ಲಿ ಅಸಹಾಯಕರಾಗುತ್ತಾರೆ.

ಆದರೆ ಕೆಲವು ತಜ್ಞರ ಪ್ರಕಾರ ಎಲ್ಲಾ ಸಂದರ್ಭದಲ್ಲೂ ನಮ್ಮ ಖಾಸಗಿ ಮಾಹಿತಿ ಬಹಿರಂಗವಾಗುತ್ತದೆ ಎನ್ನುವಂತಿಲ್ಲ. ಅಂತಹ ಸಾಧ್ಯತೆಗಳು ಈಗ ಕಡಿಮೆ ಆಗುತ್ತಿದೆ. ಇಂದಿನ ಹಲವಾರು ಕಿರು ತಂತ್ರಾಂಶಗಳು ವಿವಿಧರೀತಿಯಲ್ಲಿ ಸುರಕ್ಷಿತವಾಗಿವೆ. ಆ್ಯಪ್‍ಗಳಲ್ಲಿ ಸಂಗ್ರಹಿತ ಮಾಹಿತಿಯನ್ನು ಸುಲಭವಾಗಿ ಕದಿಯಲು ಸಾಧ್ಯವಿಲ್ಲ. ಇದರಲ್ಲಿ ಎಂಡು ಟು ಎಂಡ್ ತಂತ್ರಜ್ಞಾನ ಅಳವಡಿಕೆಯಾಗಿರುತ್ತದೆ. ಇಂದಿನ ಹಲವಾರು ಐ—ಫೋನ್‍ಗಳು ವಿವಿಧ ರೀತಿಯಲ್ಲಿ ಸುರಕ್ಷಿತವಾಗಿವೆ. ಆದರೂ ತಜ್ಞರ ಪ್ರಕಾರ ಟಚ್ ಫೋನ್‍ಗಳ ಬಗ್ಗೆ ಬಳಕೆದಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ತಾಂತ್ರಿಕವಾಗಿ ಸಂಕೀರ್ಣವಾಗಿರುವ ಯಾರೂ ಊಹಿಸಲಾಗದ ಪಾಸ್‍ವರ್ಡ್ ಬಳಸಬೇಕಾಗುತ್ತದೆ. ಆ್ಯಪ್ ಇನ್‍ಸ್ಟಾಲ್ ಮಾಡಿಕೊಳ್ಳುವಾಗ ಎಲ್ಲಾ ಖಾಸಗಿ ಮಾಹಿತಿಯನ್ನು ನೀಡಬೇಕೆ ಅಥವಾ ಬೇಡವೆ ಎಂಬುದನ್ನು ನಾವು ನಿರ್ಧರಿಸಬೇಕಾಗುತ್ತದೆ. ಮೊಬೈಲ್ ಎಸ್.ಎಂ.ಎಸ್. ಸಂದೇಶವನ್ನು ಸಹ ಇಂದು ಹಲವಾರು ತಂತ್ರಜ್ಞಾನ ಬಳಸಿ ಕದ್ದು ಪಡೆಯಬಹುದಾಗಿದೆ. ಇದಕ್ಕೆ ಇತ್ತೀಚೆಗೆ ಬ್ರಿಟನ್‍ನಲ್ಲಿ ಬೆಳಕಿಗೆ ಬಂದ ಘಟನೆಯೇ ಸಾಕ್ಷಿ. ಸಾಮಾಜಿಕ ಜಾಲತಾಣಗಳನ್ನು ನಾವು ಮನಬಂದಂತೆ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂದು ವೈಫೈ ತಂತ್ರಜ್ಞಾನ ಸಹ ಅಷ್ಟೇನು ಸುರಕ್ಷಿತವಲ್ಲ ಎನ್ನುತ್ತಾರೆ ತಜ್ಞರು.

ಆನ್‍ಲೈನ್ ವ್ಯವಹಾರವಿಲ್ಲದೆ ಇಂದಿನ ಪ್ರಪಂಚವನ್ನು ಊಹಿಸಿಕೊಳ್ಳಲು ಅಸಾಧ್ಯ. ಎಲ್ಲಾ ರೀತಿಯ ವ್ಯವಹಾರಗಳು ಕ್ರಮೇಣ ಡಿಜಿಟಲೀಕರಣಗೊಳ್ಳುತ್ತಿವೆ. ಸರ್ಕಾರದ ಮಟ್ಟದಲ್ಲಿ ಎಲ್ಲಾ ವ್ಯವಹಾರಗಳು ಕಾಗದ ರಹಿತವಾಗುತ್ತಿವೆ. ಭಾರತದ ಸಂವಿಧಾನದಲ್ಲಿ ಅನುಚ್ಛೇದ 21ರಲ್ಲಿ ಸಾರ್ವಜನಿಕರ ಮಾಹಿತಿಗಳು ಖಾಸಗಿತನದ ವ್ಯಾಪ್ತಿಗೆ ಬರುತ್ತದೆ. 2000 ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದ ಸಂಗ್ರಹಿತ ಮಾಹಿತಿಗಳು ಸುರಕ್ಷಿತವಾಗಿರುವಂತೆ ಕಾನೂನಿನ ಮಾನ್ಯತೆ ನೀಡಲಾಗಿದೆ. 2006ರಲ್ಲಿ ಖಾಸಗಿ ದತ್ತಾಂಶಗಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಸಾರ್ವಜನಿಕರ ಆನ್‍ಲೈನ್ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡರೆ 1 ಕೋಟಿವರೆಗೂ ದಂಡ ವಿಧಿಸಬಹುದಾಗಿದೆ. ಈ ಕಾಯ್ದೆ ಅಡಿಯಲ್ಲಿ ಹ್ಯಾಕಿಂಗ್‍ನ್ನು ಸಹ ಸಂಪೂರ್ಣವಾಗಿ ಅಪರಾಧ ಎಂದು ಪರಿಗಣಿಸಲಾಗಿದೆ. ಬಿ.ಪಿ.ಓ. ಕಂಪನಿಗಳು ಸಹ ಐ.ಎಸ್.ಒ. ರಕ್ಷಣಾ ಮಾನದಂಡವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ವಿವಿಧ ರೀತಿಯ ಕಾಲ್‍ಸೆಂಟರ್‍ಗಳನ್ನು ಇದರ ಅಡಿಯಲ್ಲಿ ತರಲಾಗಿದೆ. ಆದರೆ ತಜ್ಞರ ಪ್ರಕಾರ ಈ ಕಾಯ್ದೆಗಳು ಸರಿಯಾಗಿ ರಚಿತವಾಗಿಲ್ಲ ಮತ್ತು ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಎಷ್ಟೇ ಕಾಯ್ದೆ ಕಾನೂನುಗಳು ಇದ್ದರೂ ವಿವಿಧ ರೀತಿಯ ವೈಜ್ಞಾನಿಕ ಸಂರಕ್ಷಣಾ ವಿಧಾನಗಳು ಲಭ್ಯವಿದ್ದರೂ ಮುಖ್ಯವಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಮ್ಮ ಖಾಸಗಿ ಮಾಹಿತಿಗಳು ಅನ್ಯರ ಪಾಲಾಗದಂತೆ ವ್ಯವಹರಿಸಬೇಕಾಗುತ್ತದೆ. ಅದೇ ರೀತಿ ಸರಕಾರ ಮತ್ತು ಖಾಸಗಿ ಕ್ಷೇತ್ರಗಳು ಸಹ ಸಾರ್ವಜನಿಕರಿಗೆ ಸಂಬಂಧಿಸಿದ ಖಾಸಗಿ ಮಾಹಿತಿಗಳು ಅತ್ಯಂತ ಸುರಕ್ಷಿತವಾಗಿರುವಂತೆ ಕಾಪಾಡಿಕೊಳ್ಳಬೇಕಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಬಳಕೆದಾರರು ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಆ ತಂತ್ರಜ್ಞಾನದಲ್ಲಿ ಇರುವ ಅಪಾಯವನ್ನು ಗ್ರಹಿಸುವುದರಲ್ಲಿ ಸೋಲುತ್ತಾರೆ.

* ಲೇಖಕರು ಮಾನವಶಾಸ್ತ್ರ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯ ದಿಂದ ಪಿ.ಹೆಚ್.ಡಿ ಪಡೆದಿದ್ದಾರೆ. ಮೂಲತಃ ಕುಶಾಲನಗರದವರು, ಪ್ರಸ್ತುತ ಮೈಸೂರು ವಿವಿಯ ಸಾಮಾಜಿಕ ಒಳಗೊಳ್ಳುವಿಕೆ—ಹೊರಗುಳುವಿಕೆ ನೀತಿ ಅಧ್ಯಯನ ಕೇಂದ್ರದಲ್ಲಿ (ಸಿ.ಎಸ್.ಎಸ್.ಇ.ಐ.ಪಿ.) ಸಹ ಪ್ರಾಧ್ಯಾಪಕರು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮