2nd June 2018

ಸಾಹಿತ್ಯಮನೆಯ ಸೋದರಮಾವ ಗಿರಡ್ಡಿ ಗೋವಿಂದರಾಜ

ಸುನಂದಾ ಕಡಮೆ

ಮನೆಯ ಹಿರಿ ಸೋದರಮಾವ ಏನು ಮಾಡಿದರೂ ಅದರಲ್ಲೊಂದು ತಪ್ಪನ್ನು ಹುಡುಕುವುದು ಸೋದರಿಯರ ಮಕ್ಕಳ ಸ್ವಭಾವ. ಎಲ್ಲ ಅಕ್ಕನ ಮಕ್ಕಳಿಗೂ ಸೋದರಮಾವನ ಮೇಲೇ ಕಣ್ಣು. ಅವನು ಮೊದಲು ಸರೀ ಇರಬೇಕು ಅಂತ ನಾವೆಲ್ಲ ಬಯಸುತ್ತಿರುತ್ತೇವೆ. ಯಾವುದೋ ಸಣ್ಣ ವೈಮನಸ್ಸಿಗೆ ಆತ ಮಾತಾಡಿಸಿದರೂ ಒಮ್ಮೊಮ್ಮೆ ನಾವೇ ಆಚೆ ಮುಖ ಹಾಕಿರುತ್ತೇವೆ. ಮಾತನಾಡಿಸದಿದ್ದರೆ, ಮಾವ ಮಾತನಾಡಿಸಲೇ ಇಲ್ಲ ಅಂತ ಮತ್ತೆ ಅವನನ್ನೇ ದೂರುತ್ತೇವೆ. ಮಾವ ಎಲ್ಲವನ್ನೂ ತಿಳಿದವ ಅಥವಾ ತಿಳಿದಿರಲೇಬೇಕು, ನಾವು ಮಕ್ಕಳು ತಪ್ಪು ಮಾಡಿದರೂ ಮಾವ ತಪ್ಪು ಮಾಡಬಾರದು ಎಂಬುದು ನಮ್ಮೊಳಗಿರುವ ಆ ಭಾವಕ್ಕೆ ಕಾರಣ.

ಮಾವ ಎಲ್ಲರಿಗೂ ಬೇಕು, ಅವನ ಮೇಲೆ ಎಲ್ಲರಿಗಿಂತ ಹೆಚ್ಚು ಕಕ್ಕುಲಾತಿ ನಮಗಿರುತ್ತದೆ, ತಂದೆಯ ನಂತರದ ಸ್ಥಾನ ಅವನಿಗೆ. ಮನೆಯಲ್ಲಿ ಏನೇ ಮಹತ್ವದ ಕಾರ್ಯ ನಡೆದರೂ ಎದುರಿಗೆ ಮಾವನಿರಲೇಬೇಕು. ಅಂದು ಊಟಕ್ಕೆ ಸ್ವಲ್ಪ ತಡವಾದರೂ ಮಾವನೇ ಕಾರಣ ಅಂತ ನಾವು ಹೇಳಿದರೆ ಬೈಸಿಕೊಳ್ಳಲು ಆತ ತಯಾರಾಗಿರಬೇಕು, ಮನೆಯ ಹೆಣ್ಣುಮಕ್ಕಳಿಗೆ ಮದುವೆಯ ವಯಸ್ಸಾದರೂ ಗಂಡು ಹುಡುಕಲು ಮಾವ ಆರಂಭಿಸಿಯೇ ಇಲ್ಲ ಅಂತ ನಾವು ಅಪವಾದ ಹೊರಿಸಿದರೂ ಅದನ್ನು ಹೊರಲು ಮಾವ ಸಿದ್ಧನಿರಬೇಕು. ಮಾವ ಮೇಲ್ವರ್ಗದವರ, ಉಳ್ಳವರ, ಬಂಡವಾಳಶಾಹಿಗಳ ಪರವಾಗಿದ್ದಂತೆ ಆಡುತ್ತಾನೆ ಅಂತ ನಾವೆಲ್ಲ ದೂರಿದರೂ ಆತ ಕೇಳಿಕೊಂಡು ಸುಮ್ಮನಿರಬೇಕು. ಇಂತೆಲ್ಲ ಹರಿಬರಿಯ ಭಿನ್ನಾಭಿಪ್ರಾಯಗಳ ನಡುವೆಯೂ ಮಾವ ನಮ್ಮ ಬಳಿ ನಗುತ್ತ ಮಾತಾಡಬೇಕು, ನಮ್ಮ ಬೇಕು ಬೇಡಗಳನ್ನು ಸಾಧ್ಯವಾದರೆ ಪೂರೈಸಬೇಕು. ಇಲ್ಲವೇ ಮೌನವಾಗಿ ಕೇಳಿಸಿಕೊಳ್ಳಲೇಬೇಕು ಎಂಬುದು ಒಂದು ಕೌಟುಂಬಿಕ ನೆಲೆಯಲ್ಲಿ ಸಾಮಾನ್ಯವಾಗಿರುವಂಥ ಸಂಗತಿ. ಅಂಥದೊಂದು ಸಾಹಿತ್ಯಕ ಮನೆಯ ಸ್ವಂತ ಸೋದರ ಮಾವನಂತಿದ್ದವರು ನಮ್ಮ ಅತ್ಯಂತ ಮಮತೆಯ ಗಿರಡ್ಡಿ ಸರ್.

ಹಾಗಾಗಿ ಅವರು ತುಂಬ ಗಂಭೀರವಾಗಿರುತ್ತಿದ್ದರು ಮತ್ತು ಎಡ ಬಲ ಎರಡೂ ಗುಂಪಿಗೆ ಅವರು ಆತ್ಮೀಯರಾಗಿದ್ದರು, ತಾನು ಯಾವ ಬದಿ ಮಾತಾಡಿದರೂ ಎರಡು ಗುಂಪುಗಳಲ್ಲಿ ಒಂದು ಗುಂಪಿನ ವಿರೋಧ ಎದುರಿಸಬೇಕಾ ಗುತ್ತದೆ ಎಂದರಿತ ಗಿರಡ್ಡಿಯವರು ‘ಮಧ್ಯಮ ಮಾರ್ಗ’ ಎಂಬ ತಮ್ಮ ಹೊಸ ಸಂಬಂಧದ ಎಳೆಯಿಂದ ಎರಡೂ ಗುಂಪನ್ನು ಒಂದಾಗಿಸಲು ಯತ್ನಿಸಿದರು. ಸೋದರ ಮಾವ ಒಳ್ಳೆಯದೇನನ್ನು ಮಾಡಲು ಹವಣಿಸಿದರೂ ಒಂದು ಸಂಶಯದ ದೃಷ್ಟಿಯನ್ನಿಟ್ಟುಕೊಂಡೇ ನಾವು ನೋಡುತ್ತೇವಲ್ಲವೇ. ಇಲ್ಲೂ ಆಗಿದ್ದು ಅದೇ.

ಗಿರಡ್ಡಿ ಸರ್ ಅವರನ್ನು ನಾನು ಮೊದಲ ಬಾರಿ ಕಂಡದ್ದು 1997ರಲ್ಲಿ, ಅಂಕೋಲೆಯ ಅಂಬಾರಕೊಡ್ಲಿನಲ್ಲಿ ನಡೆದ ರಾಘವೇಂದ್ರ ಪ್ರಕಾಶನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ. ನಂತರ ಅವರ ವಾತ್ಸಲ್ಯ ತುಂಬಿದ ಬಂಧನದಿಂದ ಹೊರಬರಲಾಗಲೇ ಇಲ್ಲ. ಧಾರವಾಡದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಸಿಕ್ಕರೂ ನಮಸ್ಕಾರ ಅನ್ನದೇ ಮಾತನಾಡಿಸದೇ ಹೋದರೆ ಏನೋ ಕಳೆದುಕೊಂಡ ಅನುಭವ. ಅವರು ಯಾವ ಬಿಸಾಟೂ ಇಲ್ಲದೇ ಸಾಹಿತ್ಯಕ ರಚನೆಯ ಕುರಿತಾಗಿ ಹೇಳುವ ನಿಖರ ನೇರ ಸ್ಪಷ್ಟ ವಿಮರ್ಶೆಗಳು ನನಗೆ ಯಾವಾಗಲೂ ಪ್ರಿಯ. ಶುದ್ಧ ಸಾಹಿತ್ಯದ ವಿಷಯದಲ್ಲಿ ಯಾವುದೇ ರೀತಿಯ ರಾಜಿಯ ಮಾತು ಅವರು ಆಡುತ್ತಿರಲಿಲ್ಲ. ಅದು ಬಹಳಷ್ಟು ಸಲ ನನ್ನ ಬರಹಗಳ ಬೆಳವಣಿಗೆಗೆ ಕಾರಣವಾಗಿದ್ದಿದೆ. ಗಿರಡ್ಡಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಪ್ರಾದೇಶಿಕ ಸದಸ್ಯರಾಗಿದ್ದಾಗ ಮಹಿಳಾ ಬರಹಗಾರರಿಗಾಗಿ ಅಸ್ಮಿತೆ ಎಂಬ ಕಾರ್ಯಕ್ರಮಗಳನ್ನು ಹಲವೆಡೆ ನಡೆಸಿದ್ದರು. ನನ್ನನ್ನವರು ಶಿವಮೊಗ್ಗೆಯ ಕಾರ್ಯಕ್ರಮಕ್ಕೆ ಕರೆದೊಯ್ದಾಗ ಓದಿದ ‘ಚಿನ್ನಿದಾಂಡು’ ಎಂಬ ನನ್ನ ಕತೆಯ ಕುರಿತು ಅಂದು ಊಟಕ್ಕೆ ಕೂತಾಗ ‘ಕತೆಯಲ್ಲಿ ಬರುವ ನಾನು ಎಂಬ ಪಾತ್ರದ ಕುರಿತು ಹೆಚ್ಚು ಸಹಾನುಭೂತಿ ಬರುವ ಹಾಗೆ ಕತೆಯ ಒಕ್ಕಣೆಯಿದೆ, ಅದು ಬದಲಾಗಬೇಕು’ ಎಂಬ ಸಲಹೆ ಕೊಟ್ಟಿದ್ದರು. ನಾನು ಮನೆಗೆ ಬಂದು ಮಾಡಿದ ಮೊದಲ ಕೆಲಸ ಗಿರಡ್ಡಿಯವರು ಹೇಳಿದಂತೆ ಕತೆಯನ್ನು ತಿದ್ದಿದ್ದು. ನಂತರ ಓದಿದವರೆಲ್ಲ ಆ ಕತೆಯನ್ನು ಇಷ್ಟಪಟ್ಟದ್ದು ನನಗೆ ಹೊಸದೇ ಆದಂತಹ ವಿಶ್ವಾಸ ತುಂದಿತ್ತು. ನನ್ನ ಪ್ರತಿ ಪುಸ್ತಕವನ್ನು ಕಳುಹಿಸಿದಾಗಲೂ ಪುಟಪುಟವನ್ನೂ ಬಿಡದೇ ಓದಿ ಪತ್ರ ಮುಖೇನ ಪ್ರತಿಕ್ರಿಯಿಸುತ್ತಿದ್ದರು. ಪತ್ರ ಓದಿದಿರಾ, ಸರಿಯೆನಿಸಿತಾ ಅಂತ ತಪ್ಪದೇ ಕೇಳುತ್ತಿದ್ದರು.

ಕೆಲ ವರ್ಷಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆ ‘ಯಾವ ಜನ್ಮದ ಮೈತ್ರಿ’ ಎಂಬ ಅಂಕಣದಡಿ ಇಬ್ಬರು ಆತ್ಮೀಯ ಸ್ನೇಹಿತರ ಮಾತುಕತೆಯನ್ನು ನಡೆಸುತ್ತಿತ್ತು, ಅಂಥದೊಂದು ನಿರೂಪಣೆಯನ್ನು ನಾನು ಮಾಡುತ್ತಿದ್ದೆ. ಆ ಮಾತುಕತೆಗೆ ಅಂದು ಗಿರಡ್ಡಿಯವರು ಕಲಬುರ್ಗಿಯವರ ಮನೆಗೇ ಬಂದು ಕೂತರು. ಆ ಸಂದರ್ಭದಲ್ಲಿ ಇಬ್ಬರೂ ನನಗೆ ವೈಯಕ್ತಿಕವಾಗಿ ಇನ್ನಷ್ಟು ಹೆಚ್ಚು ಆತ್ಮೀಯರಾದರು.

ನಂತರ ಗಿರಡ್ಡಿಯವರು 2013ರಲ್ಲಿ ‘ಧಾರವಾಡ ಸಾಹಿತ್ಯ ಸಂಭ್ರಮ’ ಆರಂಭಿಸಿದಾಗ ವಿದ್ಯಾರ್ಥಿಗಳಿಗೆ ಪ್ರವೇಶ ಫೀ ಇಟ್ಟ ಸಲುವಾಗಿ ನಮ್ಮ ಪ್ರಗತಿಪರರ ತಂಡ ಅದನ್ನು ವಿರೋಧಿಸಿದ್ದೆವು. ನಂತರ 2014ರಲ್ಲಿ ಪ್ರಜಾವಾಣಿ ನನ್ನಿಂದ ಗಿರಡ್ಡಿಯವರ ಸಂದರ್ಶನ ಮಾಡಿಸಿತ್ತು. ಆಗ ಅವರು ಸಂಭ್ರಮಕ್ಕೆ ವಿರೋಧಿಸಿದ ಒಂದು ಗುಂಪಿನ ಮೇಲೆ ಕೋಪದಿಂದ ಮಾತಾಡಿದ್ದರು. ಅದನ್ನು ನಾನು ಬರೆದುಕೊಳ್ಳಲಿಲ್ಲ. ಆ ಸಂದರ್ಶನ ಪ್ರಕಟವಾದ ಮಾರನೇ ದಿನ ಒಂದು ಕಾರ್ಯಕ್ರಮದಲ್ಲಿ ಸಿಕ್ಕು, ‘ನಾನು ಹೇಳಿದ ಎಲ್ಲವನ್ನೂ ನೀವು ಬರೆದು ಕಳಿಸಿಲ್ಲ ಅನಿಸುತ್ತದೆ’ ಅಂತ ವಿನಯದಿಂದಲೇ ವಿಚಾರಿಸಿಕೊಂಡಿದ್ದರು. ಆಗಲೂ ನಾನು ತಲೆತಗ್ಗಿಸಿದೆ. ಕರುಳ ಸಂಬಂಧಿಯಾದ ಈ ಸೋದರಮಾವನಿಗೆ ಮುಖದ ಮೇಲೆ ಹೊಡೆದಂತೆ ವಿರೋಧಿಸುವುದು ಹೇಗೆ?

ನನ್ನ ಮಗಳ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಬಂದಾಗ ಫೋನ್ ಮಾಡಿ ಅವಳಿಗೂ ಹೇಳಿ ಅಂತ ಸಂತೋಷ ಹಂಚಿಕೊಂಡಿದ್ದರು. 2014ರ ಸಾಹಿತ್ಯ ಸಂಭ್ರಮಕ್ಕೆ ಬಂದು ಕತೆ ಓದಿ ಅಂತ ಕೇಳಿದ್ದರು. ಕ್ಷಮಿಸಿ ಸರ್, ನಾನು ಅದೇ ವೇಳೆಯಲ್ಲಿ ಮಗಳ ಬಳಿ ಹೋಗಬೇಕು ಅಂತ ಸುಳ್ಳು ಹೇಳಿ ತಪ್ಪಿಸಿಕೊಂಡೆ. ನಂತರ ಅದೇ ದಿನ ನಮ್ಮ ಎಐಡಿಎಸ್ಸೊ ನಡೆಸಿದ ಯುವ ಜನೋತ್ಸವದಲ್ಲಿ ನಾನು ಪಾಲ್ಗೊಂಡಿದ್ದು, ‘ಸಂಭ್ರಮ’ದ ಸುದ್ದಿಯ ಪಕ್ಕವೇ ನಮ್ಮದೂ ಸಣ್ಣ ಸುದ್ದಿ ಪ್ರಕಟವಾಗಿತ್ತು. ಅವೆಲ್ಲ ಗಮನಿಸಿದರೂ ಕೇಳುವ ಪೈಕಿಯಲ್ಲ ಅವರು. ಮೌನವೇ ಅವರ ಉತ್ತರ. ಅದೇ ವರ್ಷ ಪ್ರಜಾವಾಣಿ ಅವರ ಒಂದು ಸಂದರ್ಶನವನ್ನು ನನ್ನ ಬಳಿಯೇ ಮಾಡಿಸಿದ್ದರು. ಆಗ ‘ನಮ್ಮವರು ಅಂತ ತಿಳಿದಿದ್ದ ನಿಮ್ಮಂಥವರೂ ನನ್ನ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು ನನಗೆ ನೋವಿನ ಸಂಗತಿ’ ಅಂತ ಒಂದೇ ಮಾತು ಹೇಳಿದರು, ನಾನು ಏನು ಹೇಳಲೂ ತೋಚದೆ ತಲೆತಗ್ಗಿಸಿದೆ.

ಎಡ ಬಲ ಎರಡೂ ಗುಂಪಿಗೆ ಅವರು ಆತ್ಮೀಯರಾಗಿದ್ದರು, ತಾನು ಯಾವ ಬದಿ ಮಾತಾಡಿದರೂ ಎರಡು ಗುಂಪುಗಳಲ್ಲಿ ಒಂದು ಗುಂಪಿನ ವಿರೋಧ ಎದುರಿಸಬೇಕಾಗುತ್ತದೆ ಎಂದರಿತ ಗಿರಡ್ಡಿಯವರು ‘ಮಧ್ಯಮ ಮಾರ್ಗ’ ಎಂಬ ತಮ್ಮ ಹೊಸ ಸಂಬಂಧದ ಎಳೆಯಿಂದ ಎರಡೂ ಗುಂಪನ್ನು ಒಂದಾಗಿಸಲು ಯತ್ನಿಸಿದರು.

ಅಮೆರಿಕೆಯ ಕವಿಯಿತ್ರಿ ಶಶಿಕಲಾ ಚಂದ್ರಶೇಖರ್ ಹುಬ್ಬಳ್ಳಿಗೆ ಬಂದಾಗ ಗಿರಡ್ಡಿಯವರ ಮನೆಗೆ ಕರೆದೊಯ್ದಿದ್ದೆ. ಗಿರಡ್ಡಿ ದಂಪತಿಗಳು ರೊಟ್ಟಿ ಊಟ ಹಾಕಿ ಉಪಚರಿಸಿದ್ದರು. ಊಟಕ್ಕೆ ಕೂತಾಗ ಗಿರಡ್ಡಿಯವರು, ‘ನಿಮ್ಮ ಮನೆ ಏನು ನಮ್ಮ ಸಾಹಿತಿಗಳಿಗೆ ಒಂದು ಜಂಕ್ಷನ್ ಆಗಿಬಿಟ್ಟಿದೆಯಲ್ಲ’ ಅಂತ ತಮಾಷೆ ಮಾಡಿದ್ದರು. ಟಿ.ಪಿ.ಅಶೋಕ ಅವರು ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ನಿನಾಸಂ ಕಥಾ ಕಮ್ಮಟ ನಡೆಸಿದಾಗ ನಾನೊಂದು ಕತೆ ಓದಿದ್ದೆ. ಅವರ ಜೊತೆ ನನ್ನನ್ನು ಮನೆ ತಲುಪಿಸುವ ನೆಪದಲ್ಲಿ ನಮ್ಮ ಮನೆಗೂ ಬಂದಿದ್ದರು. ಮೊನ್ನೆ ಮೊನ್ನೆ ಗೊರವರ ಸಂಪಾದಕೀಯದಲ್ಲಿ ಹೊರಬಂದ ಸಂಗಾತದ ಬಿಡುಗಡೆಯಲ್ಲಿ ಅವರ ಜೊತೆ ವೇದಿಕೆಯಲ್ಲಿದ್ದೆ. ಗಿರಡ್ಡಿಯವರು ಇನ್ನೂ ಬಹುಕಾಲ ನಮ್ಮೊಂದಿಗಿರಬೇಕಿತ್ತು. ನಮ್ಮ ಅನಿಸಿಕೆಗಳಲ್ಲಿ ಅಂತರವಿದ್ದರೂ ಕಕ್ಕುಲಾತಿಯ ಸಂಬಂಧದಲ್ಲಿ ಯಾವುದೇ ಗೋಡೆಯಿರಲಿಲ್ಲ. ಇಂದು ಗಿರಡ್ಡಿಯವರು ನಮ್ಮ ಜೊತೆಗಿಲ್ಲ ಎಂಬುದನ್ನು ಬುದ್ದಿ ಒಪ್ಪಿಕೊಂಡರೂ ಕರುಳಿಗೆ ಸಹನವಾಗುತ್ತಿಲ್ಲ. ಅವರ ಅಗಲಿಕೆಯ ನೋವು ಮನದ ಮೂಲೆಯಲ್ಲಿ ಅಂಥದೊಂದು ಶೂನ್ಯವನ್ನು ಸೃಷ್ಟಿಸಿದೆ.

*ಕವಿಯಿತ್ರಿ, ಕಥೆಗಾರ್ತಿ, ಕಾದಂಬರಿಗಾರ್ತಿ, ಅಂಕಣಗಾರ್ತಿ ಮತ್ತು ಮಕ್ಕಳ ಕಾದಂಬರಿಯನ್ನೂ ಬರೆದಿದ್ದಾರೆ. ಕೆಲಕತೆಗಳು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಕೊಂಕಣಿ ಹಾಗೂ ಹಿಂದಿ ಭಾಷೆಗೆಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದಿದ್ದಾರೆ. ಮೂಲತಃ ಉತ್ತರ ಕನ್ನಡದವರು, ಈಗ ಹುಬ್ಬಳ್ಳಿಯಲ್ಲೇ ನೆಲೆ.

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

June 2018

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

May 2018

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

May 2018

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

April 2018

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

April 2018

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

March 2018

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

March 2018

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

February 2018