2nd ಜೂನ್ ೨೦೧೮

ಉತ್ತಮ? ಮಧ್ಯಮ? ಅಧಮ?
ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್

ಬಸವರಾಜ ಭೂಸಾರೆ

ವಿಶ್ವಮಾನ್ಯ ಡಾ.ಅಂಬೇಡ್ಕರ್ ಹೆಸರಿನಲ್ಲಿ ಆರಂಭಿಸಿರುವ ಬೇಸ್ ಸಂಸ್ಥೆ ಕೇವಲ ವಿಶಾಲ ಕಟ್ಟಡ ಮತ್ತು ಸುಂದರ ವ್ಯಕ್ತಿಗಳಿಂದ ಕೂಡಿದ್ದಾಗಬಾರದು. ತತ್ವ, ಸಿದ್ಧಾಂತದಡಿ ಮುನ್ನಡೆಯುವ ಬೌದ್ಧಿಕ ಪ್ರೌಢಿಮೆಯ ಒಂದು ಅಂದೋಲನವಾಗಬೇಕು ಹಾಗೂ ಜಾಗತಿಕ ಮಟ್ಟಕ್ಕೆ ಬೆಳೆಯಬೇಕೆಂಬುದು ಎಲ್ಲರ ಆಶಯ. ಆ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಈಗ ಅಧಿಕಾರಕ್ಕೆ ಬಂದಿರುವ ಹೊಸ ಸರಕಾರ ತ್ವರಿತವಾಗಿ ಕೈಗೊಳ್ಳಬೇಕಿದೆ.

ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೌದ್ಧಿಕ ಪ್ರೌಢಿಮೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿ ಅವರಲ್ಲೂ ಅರ್ಥಶಾಸ್ತ್ರದ ಜ್ಞಾನವನ್ನು ಬೆಳೆಸುವ ಮೂಲಕ ಅವರು ನಾಡಿನ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂಬ ಮಹತ್ತರ ಉದ್ದೇಶದೊಂದಿಗೆ ರಾಜ್ಯ ಸರಕಾರ ‘ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಯನ್ನು ಸ್ಥಾಪಿಸಿದೆ. ರಾಜ್ಯ ಸರಕಾರ ಈ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಸ್ವಾಯತ್ತ ಉನ್ನತ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಸಂಸ್ಥೆಯ ಸ್ಥಾಪನೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೈಗೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಎನ್ನಲಾಗಿದೆ. ರಾಜ್ಯದಲ್ಲಿ ಈಗಾಗಲೇ ವಿಜ್ಞಾನ, ತಂತ್ರಜ್ಞಾನ ಸಂಸ್ಥೆಗಳು ಹಾಗೂ ಭಾಷೆ, ಆರೋಗ್ಯ ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಹಲವು ಬಗೆಯ ವಿಶ್ವವಿದ್ಯಾಲಯಗಳು ಇವೆ. ಆದರೆ ಅವೆಲ್ಲವುಗಳಿಗಿಂತ ಬೇಸ್ ಸಂಸ್ಥೆ ಭಿನ್ನವಾದುದು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ಆರಂಭಿಸಿದ ಕಾರಣದಿಂದ ಮತ್ತು ಪಠ್ಯಕ್ರಮ, ಬೋಧನಾ ವಿಧಾನ, ಸಂಶೋಧನೆ ಮುಂತಾದ ದೃಷ್ಟಿಯಿಂದ ಮಹತ್ವದ ಸಂಸ್ಥೆ ಇದಾಗಿದೆ. ಈ ನಿಟ್ಟಿನಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯೊಂದಿಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ತರಬೇತಿ ವಿನಿಮಯ ಯೋಜನೆಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.

ಬೇಸ್ ಸಂಸ್ಥೆಯಲ್ಲಿ ಸದ್ಯ ಮೂರು ವರ್ಷದ ಅರ್ಥಶಾಸ್ತ್ರದ ಬಿಎಸ್ಸಿ ಆನರ್ಸ್ ಪದವಿ ಕೋರ್ಸನ್ನು ಆರಂಭಿಸಲಾಗಿದ್ದು, 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. 2018—19 ನೇ ಸಾಲಿಗೆ ಐದು ವರ್ಷಗಳ ಎಂ.ಎಸ್ಸಿ. ಇಂಟಿಗ್ರೇಟೆಡ್ ಕೋರ್ಸಿಗೆ ಪ್ರವೇಶ ನೀಡಲಾಗುತ್ತಿದೆ. ಈ ಸಂಸ್ಥೆಯ ಇನ್ನೊಂದು ವಿಶೇಷವೆಂದರೆ ರಾಜ್ಯದ ವಿದ್ಯಾರ್ಥಿಗಳಿಗಾಗಿ ಶೇ.60 ರಷ್ಟು ಸ್ಥಾನ ಮೀಸಲಿಡಲಾಗಿದೆ. ಉನ್ನತ ಶಿಕ್ಷಣ ಅರಸುವ ರಾಜ್ಯದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ! ಈಗ ಸೊಸೈಟಿ ಕಾಯ್ದೆಯಡಿ ನಡೆಯುತ್ತಿರುವ ಸಂಸ್ಥೆಗೆ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಲು ವಿಧೇಯಕವನ್ನು ರೂಪಿಸಲಾಗಿದೆ. ಇದಕ್ಕೆ ವಿಧಾನಮಂಡಲದ ಉಭಯ ಸದನಗಳ ಅಂಗೀಕಾರ ದೊರೆತಿದ್ದು ರಾಜ್ಯಪಾಲರು ಅಂಕಿತ ಹಾಕಬೇಕಿದೆ. ವಿಶ್ವವಿದ್ಯಾಲಯವಾಗಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸತೊಡಗಿದಾಗ ಇಲ್ಲಿ 1100 ವಿದ್ಯಾರ್ಥಿಗಳಿಗೆ ಅವಕಾಶವಾಗಲಿದೆ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಪದವಿ ನೀಡುವ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ನೀತಿ ನಿರೂಪಣೆ ಮಾಡುವುದು ಮತ್ತು ಖಾಸಗಿ ಸಂಸ್ಥೆಗಳಿಂದಲೂ ಯೋಜನೆಗಳನ್ನು ಪಡೆದು ನಿರ್ವಹಿಸುವ ಧ್ಯೇಯೋದ್ದೇಶ ಹೊಂದಿದೆ.

ಇಷ್ಟೆಲ್ಲ ವಿಶೇಷಗಳನ್ನು ಹೊಂದಿದ ಈ ಸಂಸ್ಥೆ ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು ಎನ್ನುವಂತೆ ಅಭಿವೃದ್ಧಿ ಹೊಂದಬೇಕಿತ್ತು. ಆದರೆ ಆಡಳಿತ ವೈಖರಿ ಕುರಿತಂತೆ ಆರಂಭದಿಂದಲೇ ಅಪಸ್ವರಗಳು ಎದ್ದಿವೆ. ಐ.ಎ.ಎಸ್. ಅಧಿಕಾರಿಗಳದೇ ದರ್ಬಾರು ಎನ್ನಲಾಗಿದ್ದು, ಸ್ವಜನ ಪಕ್ಷಪಾತದ ದೂರು ಕೇಳಿ ಬಂದಿದೆ.

ಬೇಸ್ ಸಂಸ್ಥೆಯ ರಚನೆಯ ಪ್ರಸ್ತಾವ ಬಂದಿದ್ದು ಜಿಂದಲ್ ಅಲ್ಯುಮಿನಿಯಮ್ ಸಂಸ್ಥೆಯಿಂದ. ಸೀತಾರಾಮ್ ಜಿಂದಲ್‍ರವರ ಕಲ್ಪನೆಯಂತೆ ಬೆಂಗಳೂರಿನಲ್ಲಿ ಅರ್ಥಶಾಸ್ತ್ರ ಅಧ್ಯಯನಕ್ಕೆ ಒಂದು ಸೆಂಟರ್ ಆಫ್ ಎಕ್ಸಲೆನ್ಸ್ ತೆರೆಯಬೇಕೆನ್ನುವ ಪ್ರಸ್ತಾವ ಮೊದಲು ಬಂದಿತ್ತು. ಈ ಸಂಸ್ಥೆಗೆ ಜಿಂದಲ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಬ ಹೆಸರಿಡಬೇಕೆಂಬ ಪ್ರಸ್ತಾವವೂ ಬಂತು. ಇದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜಮೀನು ಕೊಡುವ ಪ್ರಸ್ತಾವವೂ ಇತ್ತು. ಈ ಸಂಸ್ಥೆಗೆ ಜಿಂದಲ್ ಸಮುದಾಯ ಸಂಪೂರ್ಣವಾಗಿ ಹಣ ಸಹಾಯ ನೀಡಿ, ಜಾಗತಿಕ ಮಟ್ಟದ ಅಧ್ಯಯನ ಸಂಸ್ಥೆಯೊಂದನ್ನು ಕಟ್ಟುವ ಇರಾದೆ ಇತ್ತು. ಸರ್ಕಾರ ಜಿಂದಲ್ ಸಂಸ್ಥೆಯೊಂದಿಗೆ ಚರ್ಚಿಸಿ ಈ ಪ್ರಸ್ತಾವಕ್ಕೆ ಸೂಕ್ತ ಮಾರ್ಪಾಡುಗಳೊಂದಿಗೆ ಅನುಮತಿ ನೀಡಬಹುದಿತ್ತು. ಆದರೆ ಇಂತಹ ಪ್ರಸ್ತಾವಗಳಿಗೆ ಸಾಮಾನ್ಯವಾಗಿ ಬರುವ ಕುಹಕ ನುಡಿ ಹಾಗೂ ಪ್ರತಿರೋಧಗಳಿಗೆ ಕರ್ನಾಟಕ ಸರ್ಕಾರ ಮಣೆ ಹಾಕಿ ಖಾಸಗಿ—ಸರ್ಕಾರಿ ಸಹಭಾಗಿತ್ವದ ಪ್ರಸ್ತಾವಕ್ಕೆ ತಿಲಾಂಜಲಿ ನೀಡಿತ್ತು.

ಇದಕ್ಕೆ ಪರ್ಯಾಯವಾಗಿ ರಚನೆಯಾಗಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ ನೇತೃತ್ವದ ಸಮಿತಿಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿ, 75 ಕೋಟಿ ಕಾರ್ಪೊರೇಟ್ ನೆರವಿನೊಂದಿಗೆ ಒಟ್ಟು 350 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದರು. 2017ರ ಜನವರಿ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಸಹ ವಿಶ್ವದರ್ಜೆಯಲ್ಲಿ ಬೇಸ್ ಸಂಸ್ಥೆಯನ್ನು ಸ್ಥಾಪಿಸಲು ಅನುಮೋದನೆ ನೀಡಿತು. ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕೆಲಸಕ್ಕಾಗಿ ವಿಶೇಷಾಧಿಕಾರಿಯನ್ನಾಗಿ ಆರ್ಥಿಕ ತಜ್ಞರೂ ಆದ ಡಾ.ಅನೂಪ್ ಕೆ. ಪೂಜಾರಿ ಅವರನ್ನು ನೇಮಿಸಲಾಯಿತು. ಬೇಸ್ ಸಂಸ್ಥೆಯನ್ನು ಸ್ಥಾಪಿಸಲು ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ 43.45 ಎಕರೆ ಜಾಗವನ್ನು ನೀಡುವ ಜೊತೆಗೆ ವಿಶ್ವವಿದ್ಯಾಲಯದ ಆಡಳಿತ ಕಟ್ಟಡ, ವಿದ್ಯಾರ್ಥಿ ನಿಲಯ, ಮೂರು ಸೆಮಿನಾರ್ ಸಭಾಂಗಣಗಳು ಹಾಗೂ ಒಂದು ಮುಖ್ಯ ಸಭಾಂಗಣ ಸೇರಿದಂತೆ ವಿವಿಧ ಬಗೆಯ ಮೊದಲ ಹಂತದ ಕಾಮಗಾರಿಗಳಿಗೆ 150 ಕೋಟಿ ಹಣವನ್ನು ಮಂಜೂರು ಮಾಡಿತು. ಬಳಿಕ ಅದೇ ವರ್ಷ ಎಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನೋತ್ಸವದ ಸ್ಮರಣಾರ್ಥ ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದರು. ಕಟ್ಟಡ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಅರ್ಥಶಾಸ್ತ್ರಜ್ಞ ಅಂಬೇಡ್ಕರ್ !

ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಸಾಮಾನ್ಯ ಕಾನೂನು ಪಂಡಿತ, ದೀನ ದುರ್ಬಲರ ಬಾಳು ಬೆಳಗಿಸಿದ ಸಮಾಜ ಸುಧಾರಕ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಅವರೊಬ್ಬ ಅರ್ಥಶಾಸ್ತ್ರ ಪ್ರವೀಣರಾಗಿದ್ದರು ಎಂಬ ವಿಷಯ ಹೆಚ್ಚು ಪ್ರಚಾರ ಪಡೆದಿಲ್ಲ. ಡಾ.ಅಂಬೇಡ್ಕರ್ ಅವರು ನ್ಯೂಯಾರ್ಕಿನ ಕೋಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ಎರಡರಲ್ಲೂ ಎರಡೆರಡು ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಮಾತ್ರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಡಾಕ್ಟರೇಟ್ ಪದವಿಗಾಗಿ ಅವರು ಸಲ್ಲಿಸಿದ “ದಿ ರುಪಿ ಆ್ಯಂಡ್ ದಿ ಪ್ರಾಬ್ಲಂ: ಇಟ್ಸ್ ಓರಿಜಿನ್ ಆ್ಯಂಡ್ ಇಟ್ಸ್ ಸೊಲ್ಯೂಷನ್” ಎಂಬ ಪ್ರಬಂಧ ಎನ್ನುವುದು ಇಲ್ಲಿ ವಿಶೇಷ. ಡಾ.ಅಂಬೇಡ್ಕರ್ ಅವರ ಬುದ್ದಿಮತ್ತೆ ಮತ್ತು ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆವರಣದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರತಿಮೆ ರೂಪದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್!

ಇದಾದ ಕೆಲದಿನಗಳಲ್ಲೇ 2017—18ನೇ ಸಾಲಿನಿಂದಲೇ ತರಗತಿಗಳನ್ನು ಆರಂಭಿಸುವ ವಿಚಾರದಲ್ಲಿ ಸರಕಾರ ಮತ್ತು ವಿಶೇಷಾಧಿಕಾರಿ ಡಾ.ಅನೂಪ್ ಕೆ. ಪೂಜಾರಿ ಅವರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತು. ಇದೇ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಆರಂಭಿಸಲು ಡಾ.ಪೂಜಾರಿ ಒಪ್ಪದಿದ್ದಾಗ ಸರಕಾರ ಅವರನ್ನು ಬದಲಾಯಿಸಿ ಆರ್ಥಿಕ ತಜ್ಞರೂ ಆದ ಐಸೆಕ್‍ನ ನಿವೃತ್ತ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ ಅವರನ್ನು ಬೇಸ್‍ನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿತು. ಪಠ್ಯಕ್ರಮ ಸಿದ್ಧಗೊಂಡು, 2017ರ ಅಕ್ಟೋಬರ್ 28 ರಂದು ಖ್ಯಾತ ಅರ್ಥಶಾಸ್ತ್ರಜ್ಞರೂ ಆದ ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಮೊದಲ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ತರಗತಿಗಳು ಆರಂಭವಾದವು.

ಈ ಮಧ್ಯೆ ಪರೀಕ್ಷಾ ನಿಯಂತ್ರಕರನ್ನಾಗಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ಪತ್ನಿ ಡಾ.ಮೇನಕಾ (ಎಂ.ಬಿ.ಎ, ಪಿಎಚ್.ಡಿ. ಪದವೀಧರೆ) ಅವರನ್ನು ನೇಮಿಸಲಾಯಿತು. ಅವರಿಗೆ ಈ ಕೆಲಸದಲ್ಲಿ ಅನುಭವ ಇಲ್ಲ; ಸ್ವಜನ ಪಕ್ಷಪಾತದ ಈ ಕ್ರಮ ಸರಿಯಲ್ಲ ಎಂದು ಸಂಸ್ಥೆಯ ನಿರ್ದೇಶಕ ಡಾ.ದೇಶಪಾಂಡೆ ಆಕ್ಷೇಪ ಎತ್ತಿದರು. ಇದು ನಿರ್ದೇಶಕರು ಮತ್ತು ಇತರರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಯಿತು. ಇವೆಲ್ಲದರ ಪರಿಣಾಮ ನಿರ್ದೇಶಕರಿಗೆ ಸರಿಯಾಗಿ ಸಂಬಳವನ್ನೂ ಕೊಡದೆ ಕಿರುಕುಳ ನೀಡಲಾಯಿತೆಂಬ ವರದಿಗಳಿವೆ. ಹಾಗಾಗಿ ನಿರ್ದೇಶಕರಾಗಿದ್ದ ಡಾ.ಆರ್.ಎಸ್.ದೇಶಪಾಂಡೆ ಮಾರ್ಚ್ 31ಕ್ಕೆ ಹುದ್ದೆ ತೊರೆದಿದ್ದು ಸದ್ಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ ಈ ಹೊಣೆ ವಹಿಸಿಕೊಂಡಿದ್ದಾರೆ. ಸಿ.ಇ.ಒ. ಎಂ.ಬಿ.ದ್ಯಾಬೇರಿಯವರು ತಮಗೆ ಓಡಾಡಲು 17 ಲಕ್ಷ ರೂಪಾಯಿ ವೆಚ್ಚದ ಕಾರು ಖರೀದಿಸಿದ್ದಾರೆಂದು ವರದಿಯಿದೆ. ಡಾ.ಮೇನಕಾ ಅವರಿಗೂ ಓಡಾಡಲು ವಾಹನ ಒದಗಿಸಲಾಗಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಡಾ.ಮೇನಕಾ ಅವರಿಗೆ ನೀಡಲಾಗಿದ್ದ ವಾಹನವನ್ನು ನಿಲ್ಲಿಸಲಾಯಿತು ಎನ್ನಲಾಗಿದೆ.

ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯನ್ನು ಆರಂಭಿಸುವ ವಿಚಾರ ಮೊದಲು ಹೊಳೆದದ್ದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎನ್.ಪ್ರಭುದೇವ ಅವರಿಗೆ. ಡಾ.ಪ್ರಭುದೇವ, ನಾನು ಮತ್ತು ಕೆಲವರು ಸೇರಿ ಜಿಂದಲ್ ಅವರ ನೆರವಿನೊಂದಿಗೆ ಬೆಂಗಳೂರಿನಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭಿಸಲು ಮಾಡಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಈ ಮಧ್ಯೆ, ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ಗೆ ಭೇಟಿ ನೀಡಿದಾಗ ಬೆಂಗಳೂರಿನಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಇಂಥ ಸಂಸ್ಥೆಯನ್ನು ಕರ್ನಾಟಕ ಸರಕಾರ ಆರಂಭಿಸುವುದಾದರೆ ಅದಕ್ಕೆ ಅಗತ್ಯ ಶೈಕ್ಷಣಿಕ ನೆರವು ನೀಡುವುದಾಗಿ ಎಲ್.ಎಸ್.ಇ. ಅವರಿಂದ ಭರವಸೆ ಪತ್ರ ಪಡೆದುಕೊಂಡು ಬಂದಿದ್ದರು. ಬಳಿಕ ಅದಕ್ಕೆ ಬೇಕಾದ ಪ್ರಸ್ತಾವನೆಯನ್ನು ಸಿದ್ಧಪಡಿಸುವಲ್ಲಿ ನಾನು ಪ್ರಮುಖ ಪಾತ್ರವಹಿಸಿದೆ. ಪಠ್ಯಕ್ರಮವನ್ನೂ ನಾನೇ ಸಿದ್ಧಪಡಿಸಿರುವೆ.

—ಡಾ.ಆರ್.ಎಸ್.ದೇಶಪಾಂಡೆ

ಆದರೆ ಈ ಎಲ್ಲಾ ಆರೋಪಗಳನ್ನು ಸಿ.ಇ.ಒ. ದ್ಯಾಬೇರಿ ಅವರು ಅಲ್ಲಗಳೆಯುತ್ತಾರೆ. ಡಾ.ಮೇನಕಾ ಅವರ ನೇಮಕ ಸ್ವಜನಪಕ್ಷಪಾತವಲ್ಲ. ಇದಕ್ಕೂ ಮೊದಲು ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಒಂಬತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಅರ್ಹತೆ ಆಧಾರದಲ್ಲೇ ನೇಮಕವಾಗಿದ್ದಾರೆ ಎಂಬುದು ಅವರ ಸ್ಪಷ್ಟಣೆ. ಆರ್.ಎಸ್.ದೇಶಪಾಂಡೆ ಅವರಿಗೆ ಸಂಬಳ ಕೊಟ್ಟಿಲ್ಲ ಎಂಬುದು ನಿಜವಲ್ಲ. ಐಸೆಕ್‍ನಲ್ಲಿ ಅವರು ಕೊನೆಯದಾಗಿ ಪಡೆದಿದ್ದ 1.69 ಲಕ್ಷ ರೂಪಾಯಿ ಸಂಬಳವನ್ನೇ ಇಲ್ಲೂ ನಿಗದಿ ಮಾಡಲಾಗಿತ್ತು. ಅದರಂತೆ ಅವರು ಕೆಲಸ ಮಾಡಿದ ಕೊನೆ ದಿನದವರೆಗೆ ಸಂಬಳ ಕೊಡಲಾಗಿದೆ ಎನ್ನುವ ದ್ಯಾಬೇರಿಯವರು, ತಾವು ಕಾರು ಖರೀದಿಸಿದ್ದು ನಿಜ, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಂಥ ಗಣ್ಯರು ಸಂಸ್ಥೆಗೆ ಭೇಟಿ ನೀಡುವಾಗ ಅವರನ್ನು ಕರೆತರಲು ಕಾರು ಅಗತ್ಯ ಎಂಬುದು ಅವರ ಸ್ಪಷ್ಟ ನುಡಿ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್

ಇದು ಆರಂಭಗೊಂಡಿದ್ದು ಫೆಬಿಯನ್ ಸೊಸೈಟಿಯ ನಾಲ್ವರು ಸದಸ್ಯರಿಂದ. ಶಿಕ್ಷಣದ ಮೂಲಕ ಪ್ರಜಾಸತ್ತಾತ್ಮಕ ಸಮಾಜವಾದದ ತತ್ವಗಳನ್ನು ಮುನ್ನೆಲೆಗೆ ತರುವ ಉದ್ದೇಶ ಹೊಂದಿದ್ದ ಸಿಡ್ನಿ ವೆಬ್, ಅವರ ಪತ್ನಿ ಬೀತ್ರೈಸ್ ವೆಬ್, ಗ್ರಹಾಂ ವಲ್ಲಾಸ್ ಎಂಬ ಮೂವರು ಸಮಾಜವಾದಿಗಳು ಹಾಗೂ ಖ್ಯಾತ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಅವರು 1895 ರಲ್ಲಿ ಸಮಾಜದ ಒಳಿತಿಗಾಗಿ ಲಂಡನ್ ನಗರದಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಇದರ ಪೂರ್ಣ ಹೆಸರು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್’. ಸಂಕ್ಷಿಪ್ತವಾಗಿ ಇದನ್ನು ಎಲ್.ಎಸ್.ಇ. ಎಂದು ಕರೆಯಲಾಗುತ್ತದೆ.

ಈಗ ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರಪಂಚದ ಅತ್ಯುನ್ನತ 10 ವಿಶ್ವವಿದ್ಯಾಲಯಗಳಲ್ಲಿ ಈ ಸಂಸ್ಥೆ ಸ್ಥಾನ ಪಡೆದಿದೆ. ಎಲ್ಲಾ ವಿಷಯಗಳ ವಿಶ್ವವಿದ್ಯಾಲಯಗಳ ರ್ಯಾಂಕ್ ಪಟ್ಟಿಯನ್ನು ಪರಿಗಣಿಸಿದಾಗಲೂ ಜಗತ್ತಿನ ಅಗ್ರ ಪಂಕ್ತಿಯ 50 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಇದೆ. ಇದುವರೆಗೆ ಈ ವಿಶ್ವವಿದ್ಯಾಲಯದಲ್ಲಿ ಓದಿದ 52 ವಿದ್ಯಾರ್ಥಿಗಳು ವಿವಿಧ ದೇಶಗಳ ಮುಖ್ಯಸ್ಥರಾಗಿದ್ದಾರೆ. ಅಂದರೆ ರಾಷ್ಟ್ರಾಧ್ಯಕ್ಷ ಅಥವಾ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಲ್ಲಿ ಓದಿದ 31 ಗಣ್ಯರು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವಿಶ್ವವಿದ್ಯಾಲಯದಲ್ಲಿ ಓದುವುದೇ ಜೀವಮಾನದ ಹೆಮ್ಮೆ ಎನ್ನುವಷ್ಟರ ಮಟ್ಟಿಗೆ ಸಂಸ್ಥೆ ಬೆಳೆದು ನಿಂತಿದೆ. ಇಂಥ ಸಂಸ್ಥೆಯಲ್ಲಿ ಓದಿದ ಮೊದಲ ಭಾರತೀಯ ಅಂದರೆ ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್! ಇವರ ನಂತರ ಭಾರತದ ರಾಷ್ಟ್ರಪತಿಯಾಗಿದ್ದ ಕೆ.ಆರ್.ನಾರಾಯಣನ್ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮತ್ರ್ಯ ಸೇನ್ ಇಲ್ಲಿ ಓದಿದ ಪ್ರಮುಖ ಭಾರತೀಯರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಸೇರಿದಂತೆ ಒಟ್ಟು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಾರೆ. 1600ಕ್ಕೂ ಹೆಚ್ಚು ಪ್ರಾಧ್ಯಾಪಕರು ಒಳಗೊಂಡಂತೆ 3300 ಸಿಬ್ಬಂದಿ ಕೆಲಸ ಮಾಡುತ್ತಾರೆ. ಈ ಸಂಸ್ಥೆಯಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು ಹಾಗೂ ಅಂತರ್ ರಾಷ್ಟ್ರೀಯ ಸಂಬಂಧಗಳು ಸೇರಿದಂತೆ 27 ವಿಷಯ ವಿಭಾಗಗಳಿವೆ. ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಇಲ್ಲಿ ಪ್ರದಾನ ಮಾಡಲಾಗುತ್ತದೆ.

ಹೊಸ ನಿರ್ದೇಶಕರ ನೇಮಕಕ್ಕೆ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಇದೇ ವೇಳೆ ಸಂಸ್ಥೆಯ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದ್ದು ಅರ್ಥಶಾಸ್ತ್ರಜ್ಞ ಮಾಂಟೆಕ್‍ಸಿಂಗ್ ಅಹ್ಲುವಾಲಿಯಾ, ಆರ್.ಬಿ.ಐ. ನಿವೃತ್ತ ಗವರ್ನರ್ ಸಿ.ರಂಗರಾಜನ್, ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಮುಂತಾದ ಗಣ್ಯರು ಮಂಡಳಿಯಲ್ಲಿದ್ದಾರೆ.

ಈಗ ಕೇಳಿಬಂದಿರುವ ಆರೋಪ ಮತ್ತು ಭಿನ್ನಾಭಿಪ್ರಾಯಗಳು ಸಣ್ಣವಾದರೂ ಯಾವುದೇ ಅಪಸ್ವರಕ್ಕೆ ಆಸ್ಪದವಾಗದಂತೆ ಆಡಳಿತಗಾರರು ನಿಗಾವಹಿಸುವ ಅಗತ್ಯವಿದೆ. ಇದೆಲ್ಲಕಿಂತ ಮುಖ್ಯವಾಗಿ ಬೇಸ್ ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಅಗತ್ಯವಿರುವ ತಜ್ಞರೇ ಇಲ್ಲವಾಗಿದೆ. ಸದ್ಯ ನಾಲ್ವರು ಗುತ್ತಿಗೆ ಪ್ರಾಧ್ಯಾಪಕರಿಂದ ಮತ್ತು ಕೆಲವು ಅತಿಥಿ ಉಪನ್ಯಾಸಕರಿಂದ ಪಾಠ ಮಾಡಿಸಲಾಗುತ್ತಿದೆ. ಈ ರೀತಿಯ ವ್ಯವಸ್ಥೆಯಿಂದ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ಸಾಧ್ಯವಿಲ್ಲ. ಸಾಮಾನ್ಯ ಪ್ರಾಧ್ಯಾಪಕರಿಂದ ಪಾಠ ಮಾಡಿಸುವುದಾದರೆ ವಿದ್ಯಾರ್ಥಿಗಳು ಇಲ್ಲಿಗೇಕೆ ಬರಬೇಕು? ಈಗಾಗಲೇ ಇರುವ ವಿಶ್ವವಿದ್ಯಾಲಯಗಳಲ್ಲಿ ಓದಬಹುದಲ್ಲ ಎಂಬ ಪ್ರಶ್ನೆಗಳೆದ್ದಿವೆ. ಜಾಗತಿಕ ಗುಣಮಟ್ಟದ ಸಂಸ್ಥೆಯೆಂದರೆ, ಆ ಗುಣಮಟ್ಟದ ನೈಪುಣ್ಯವಿರುವ ಮುಖ್ಯಸ್ಥರು ಮತ್ತು ತಜ್ಞ ಪ್ರಾಧ್ಯಾಪಕರು ಇಲ್ಲಿರಬೇಕು. ಆದರೆ ಅದಾವುದೂ ಇಲ್ಲಿ ಸದ್ಯ ಕಾಣುತ್ತಿಲ್ಲ. ಅರೆಕಾಲಿಕ ಉಪನ್ಯಾಸಕರಿಂದ ಪಾಠ ಮಾಡಿಸಿ ಬಿಎಸ್‍ಸಿ ಎಂಎಸ್‍ಸಿ ಪದವಿ ನೀಡುವುದಕ್ಕೆ ಈಗಿರುವ ವಿಭಜಿತ ಬೆಂಗಳೂರು ವಿಶ್ವವಿದ್ಯಾನಿಲಯದ ಮೂರು ವಿಭಾಗಗಳು ಸಾಕಲ್ಲವೇ ಎಂಬ ಸಹಜ ಪ್ರಶ್ನೆಯೂ ಎದ್ದಿದೆ. ಕಳಪೆ ಗುಣಮಟ್ಟದ ಕಾಲೇಜೊಂದನ್ನು ಕಟ್ಟಿ, ಅದೇ ಪಠ್ಯಕ್ರಮದ ಹಾಗೂ ಅದೇ ಪ್ರವಚಕರ ಅಡಿಯಲ್ಲಿ ಪರೀಕ್ಷೆ ನಡೆಸಿ ಡಿಗ್ರಿ ನೀಡುವುದಾದರೆ ಅದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಾಗಲಾರದು. ಹೀಗೆ ಮಾಡಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಎಂಬ ಕಲ್ಪನೆಗೂ ಅವಮಾನ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮