2nd June 2018

ಇವನಾರವ ಇವನಾರವ ಇವನಾರವ ಎನ್ನಬೇಡಿ...!

ಮೋಹನದಾಸ್

2018ರ ಈ ಚುನಾವಣೆಯವರೆಗೆ ಯಾರೂ ಈ ಮಟ್ಟಕ್ಕೆ ಕರ್ನಾಟಕವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಲ್ಲ.

ಕರ್ನಾಟಕ ವಿಧಾನಸಭೆಯ ಚುನಾವಣಾ ಪ್ರಚಾರದ ಹಲವುಹತ್ತು ಪ್ರಮಾದ—ಅಪವಾದ—ವಿವಾದಗಳ ಬಗ್ಗೆ ನೀವು ಓದಿದ್ದೀರಿ. ಆದರೆ ಈ ಚುನಾವಣೆಯಲ್ಲಿ ಕರ್ನಾಟಕ ಹಾಗೂ ಕರ್ನಾಟಕ ಪರಂಪರೆಗೆ ಸಂದಾಯವಾದ ಮನ್ನಣೆ ಹಾಗೂ ಗೌರವವನ್ನು ನೀವು ಗಮನಿಸಿರಲಿಕ್ಕಿಲ್ಲ. ರಾಷ್ಟ್ರೀಯ ಪಕ್ಷಗಳಿಂದ, ಪಕ್ಷಗಳ ಮುಖಂಡರಿಂದ, ರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಂದ, ಇಂಗ್ಲಿಷ್—ಹಿಂದಿಯ ಪತ್ರಕರ್ತರಿಂದ ಮತ್ತು ದೇಶದ ಅತ್ಯುತ್ತಮ ಚಿಂತಕರಿಂದ ಮೊಟ್ಟಮೊದಲ ಬಾರಿಗೆ ಕನ್ನಡ ನಾಡಿನ ಇತಿಹಾಸ, ಸಾಹಿತಿ—ಸಂತರು, ಹಿರಿಯ ಚೇತನಗಳು, ಪಂಥಗಳು ಹಾಗೂ ಸ್ಥಳಪುರಾಣಗಳ ಬಗ್ಗೆ ವಿಶದವಾದ ಚರ್ಚೆ, ವಿಶ್ಲೇಷಣೆ ಮತ್ತು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕರ್ನಾಟಕದ ಚುನಾವಣೆಗಳಲ್ಲಿ ದೆಹಲಿಯ ನಾಯಕರು ಬಂದು ಪ್ರಚಾರ ಮಾಡುವುದು ವಿಶೇಷವೇನಲ್ಲ. ಹಿಂದೆಯೂ ಇಂದಿರಾಗಾಂಧಿ, ವಾಜಪೇಯಿ ಮತ್ತಿತರರು ಕರ್ನಾಟಕದಲ್ಲಿ ಪರಿಣಾಮಕಾರಿ ಚುನಾವಣಾ ಭಾಷಣ ಮಾಡಿದ್ದಾರೆ. ತಮ್ಮ ಮಾತುಗಳಿಂದ ಸಭಿಕರ ಮನ ಗೆದ್ದಿದ್ದಾರೆ, ಚಪ್ಪಾಳೆ ಗಿಟ್ಟಿಸಿದ್ದಾರೆ ಮತ್ತು ಚುನಾವಣೆ ಗೆದ್ದಿದ್ದಾರೆ. ದೆಹಲಿಯ ಪತ್ರಕರ್ತರೂ ಕರ್ನಾಟಕದ ರಾಜಕೀಯದಲ್ಲಿ ಹಳೇ ಮೈಸೂರಿನ ಒಕ್ಕಲಿಗರು ಹಾಗೂ ಉತ್ತರ ಕರ್ನಾಟಕದ ಲಿಂಗಾಯಿತರ ಬಗ್ಗೆ ಬರೆದಿದ್ದಾರೆ. ಆದರೆ 2018ರ ಈ ಚುನಾವಣೆಯವರೆಗೆ ಯಾರೂ ಈ ಮಟ್ಟಕ್ಕೆ ಕರ್ನಾಟಕವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಲ್ಲ. ಯಾರೂ ಇಷ್ಟು ಆಳವಾಗಿ ಇಳಿದು ಕರ್ನಾಟಕವನ್ನು ಪ್ರಭಾವಿಸಲು ಹೋಗಿಲ್ಲ. ಯಾರೂ ಇಷ್ಟು ಕವರೇಜ್ ನೀಡಿಲ್ಲ. ಉದಾಹರಣೆಗೆ ಈ ಕೆಳಗಿನ ವಿವರಗಳನ್ನು ನೋಡಿ:

  • ಪ್ರಧಾನಿ ಮೋದಿಯವರು ಕರ್ನಾಟಕದ ಮೂಲೆಮೂಲೆಗಳಿಗೆ ಭೇಟಿನೀಡಿದ ಪ್ರತಿಯೊಂದು ಪಟ್ಟಣದ ಸ್ಥಳಗರಿಮೆಯನ್ನು ಎತ್ತಿ ಹೇಳಿದ್ದಾರೆ. ಕೋಲಾರದ ಚಿನ್ನ, ಮಾವು, ರೇಷ್ಮೆ, ಹೈನುಗಾರಿಕೆಯಿಂದ ಹಿಡಿದು ಬೀದರಿನಲ್ಲಿ ಗುರುನಾನಕ್ ಕಟ್ಟಿದ ಗುರುದ್ವಾರದ ಮಹಿಮೆ ಹಾಡಿಹೊಗಳಿದ್ದಾರೆ. ಶರಣರ ವಚನಗಳ ಸಾರವನ್ನು ಹೇಳುವುದರ ಜೊತೆಗೆ ಜಗಜ್ಯೋತಿ ಬಸವಣ್ಣನ ಕ್ರಾಂತಿಕಾರಕ ಸಮಾಜಸುಧಾರಣೆಯ ಕಾಯಕವನ್ನು ಲಂಡನ್ನಿನ ವೆಸ್ಟ್‍ಮಿನಿಸ್ಟರ್ ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿಯೂ ಕೊಂಡಾಡಿದ್ದಾರೆ. ತಮ್ಮ ಪ್ರತಿಯೊಂದು ಭಾಷಣದಲ್ಲಿಯೂ ಆ ನಗರದ ಸ್ಥಳಪುರಾಣದ ಬಗ್ಗೆ ಆಳವಾದ ಅಧ್ಯಯನ ಮಾಡಿ ಮತದಾರರನ್ನು ಸೆಳೆಯಲು ಪರಿಣಾಮಕಾರಿ ಮಾತನ್ನಾಡಿದ್ದಾರೆ. ಪ್ರಾದೇಶಿಕ—ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಬೇಕಿರುವ ಪರಿಹಾರಗಳನ್ನು ಹೆಕ್ಕಿ ಹೇಳಿದ್ದಾರೆ.
  • ತಮ್ಮ ನಾಯಕನಿಗೆ ತಾವೇನು ಕಡಿಮೆ ಎಂಬಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುವೆಂಪು ಕವಿಶೈಲ, ಕೂಡಲಸಂಗಮ, ಬೇಂದ್ರೆ ನಿವಾಸ, ಉಡುಪಿ ಶ್ರೀಕೃಷ್ಣಮಠ ಹಾಗೂ ಕರ್ನಾಟಕದ ಇಪ್ಪತ್ತು—ಮೂವತ್ತು ಮಠಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
  • ಪ್ರಧಾನಿ ಮೋದಿಗೆ ಸರಿಸಾಠಿಯೆಂಬಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕದ ಹತ್ತಿಪ್ಪತ್ತು ದೇವಾಲಯ, ಮಸೀದಿ, ಇಗರ್ಜಿಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ಭಾಷಣಗಳಲ್ಲಿ ಬಸವಣ್ಣನ ವಚನಗಳನ್ನು “ಇವನಾರವ ಇವನಾರವ ಎನ್ನದಿರಿ, ಇವ ನಮ್ಮವ ಇವ ನಮ್ಮವ” ಎನ್ನುವಂತೆ ಉದ್ಧರಿಸಿದ್ದಾರೆ. ವಿಶ್ವೇಶ್ವರಯ್ಯನವರ ಹೆಸರನ್ನು ಕಷ್ಟಪಟ್ಟು ಉಚ್ಛರಿಸಿದ್ದಾರೆ. ದೇಶಕ್ಕೆ ಬೆಂಗಳೂರಿನ ಕೊಡುಗೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಚುನಾವಣಾ ಭಾಷಣಗಳಿಗೆ ಕರ್ನಾಟಕದ ಪರಂಪರೆಯನ್ನು ಓದಿತಿಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
  • ರಾಷ್ಟ್ರೀಯ ಸುದ್ದಿಮಾಧ್ಯಮಗಳು ಹಿಂದೆಂದೂ ನೀಡದ ಪ್ರಾಮುಖ್ಯ ನೀಡಿ ಕರ್ನಾಟಕದ ಚುನಾವಣೆ ಇಡೀ ದೇಶದ ರಾಜಕೀಯಕ್ಕೆ ದಿಕ್ಸೂಚಿ ಎನ್ನುವಂತೆ ಬಿಂಬಿಸಿದ್ದಾರೆ. ಇಂಗ್ಲಿಷ್ ಸುದ್ದಿ ಚಾನೆಲ್‍ಗಳಂತೂ ಕನ್ನಡ ಅಕ್ಷರಗಳಲ್ಲಿಯೇ ಶೀರ್ಷಿಕೆ ನೀಡಿ ಕರ್ನಾಟಕದ ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರತಿಯೊಂದು ಅಂಶದ ಬಗ್ಗೆ ಆಳವಾದ ವಿಶ್ಲೇಷಣೆ ಮಾಡಿವೆ. ಪ್ರಚಾರದ ವರದಿ ಮಾಡಲು ಎಲ್ಲಾ ಚಾನೆಲ್‍ಗಳು ತಮ್ಮ ಅತಿಮುಖ್ಯ ಆಂಕರ್‍ಗಳನ್ನು ಹಾಗೂ ಎಲ್ಲಾ ಹಿರಿಯ ವರದಿಗಾರರನ್ನು ಕಳಿಸಿವೆ. ಹಲವಾರು ಬಾರಿ ಸಮೀಕ್ಷೆಗಳನ್ನು ಮಾಡಿ ಯಾರು ಗೆಲ್ಲುವರೆಂದು ಭವಿಷ್ಯ ನೀಡಿವೆ. ಚುನಾವಣೆಯ ಹಾಗೂ ಮತಎಣಿಕೆಯ ದಿನಗಳಂದು ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಹಲವು ಸಮಸ್ಯೆಗಳಾದ ಕಾವೇರಿ ನದಿನೀರು ಹಂಚಿಕೆ, ಮಹದಾಯಿ, ಕೆಜಿಎಫ್, ಬೆಂಗಳೂರು ಸಂಚಾರ ದಟ್ಟಣೆ, ಗಣಿಗಾರಿಕೆ ಹಾಗೂ ಕೃಷಿವಲಯದ ಬಿಕ್ಕಟ್ಟಿನ ಬಗ್ಗೆ ವಿಶೇಷ ವರದಿ ಮಾಡಿದ್ದಾರೆ.
  • ರಾಷ್ಟ್ರೀಯ ಸುದ್ದಿಮಾಧ್ಯಮಗಳು ಮತ್ತು ನಿಯತಕಾಲಿಕಗಳು ಕರ್ನಾಟಕದ ಜಾತಿ ಸಮೀಕರಣದ ಬಗ್ಗೆ ಅತ್ಯಂತ ಕೂಲಂಕಷ ವಿಶ್ಲೇಷಣೆ ನಡೆಸಿವೆ. ನಮಗೇ ತಿಳಿಯದಿದ್ದ ಮ್ಯಾಸ—ಊರು ನಾಯಕರ ಬಗ್ಗೆಯಾಗಲಿ, ನಾಥ ಪರಂಪರೆಯ ಮಠಗಳ ಬಗ್ಗೆಯಾಗಲಿ ಮತ್ತು ಜಾತಿ ಸಮೀಕ್ಷೆಯ ಅಪ್ರಕಟಿತ ವಿಶೇಷಗಳ ಬಗ್ಗೆಯಾಗಲಿ ಸಂಶೋಧನೆಯ ಬೆಳಕು ಚೆಲ್ಲಿವೆ. ಇನ್ನೂ ಕೆಲವು ಸಮೀಕ್ಷೆಗಳು ಕರ್ನಾಟಕದಾದ್ಯಂತ 75,000ಕ್ಕೂ ಹೆಚ್ಚು ಮತದಾರರನ್ನು ಕಂಡು ಜನಮನದ ಇಂಗಿತ ಅರಿಯಲು ಅಧ್ಯಯನ ಮಾಡಿವೆ.
  • 2018ರ ಚುನಾವಣೆ ಕರ್ನಾಟಕದ ಹಲವಾರು ಪಂಡಿತರಿಗೆ ಇನ್ನಿಲ್ಲದ ವೇದಿಕೆ ಒದಗಿಸಿದೆ. ಸಂದೀಪ್ ಶಾಸ್ತ್ರಿ, ರಾಮಕೃಷ್ಣ ಉಪಾಧ್ಯ, ಚಂದನ್ ಗೌಡ, ಹರೀಶ್ ಬಿಜೂರ್, ಬ್ರಿಜೇಶ್ ಕಾಳಪ್ಪ, ತನ್ವೀರ್ ಅಹಮದ್, ಮೋಹನ್‍ದಾಸ್ ಪೈ ಮತ್ತಿತರ ಹಲವಾರು ಪರಿಣತರು ರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಗೆ ತಮ್ಮ ಜ್ಞಾನ ಧಾರೆಯೆರೆದಿದ್ದಾರೆ. ಕರ್ನಾಟಕದ ರಾಜಕೀಯದ ಬಗ್ಗೆ ಸ್ವಲ್ಪವಾದರೂ ತಿಳಿದಿದ್ದು ನಿರರ್ಗಳವಾಗಿ ಇಂಗ್ಲಿಷ್/ಹಿಂದಿ ಮಾತನಾಡುವ ಯಾರಿಗೇ ಆದರೂ ಕರೆದು ಮಣೆ ಹಾಕುವಷ್ಟು ಮಟ್ಟಿಗೆ ಪರಿಣತರ ಅಭಾವ ತಲೆದೋರುವಂತೆ ಮಾಡಿದ್ದಾರೆ.
  • ಹಿಂದೆಂದೂ ಇಲ್ಲದಷ್ಟು ಮಟ್ಟಿಗೆ ಕರ್ನಾಟಕದ ಬಗ್ಗೆ ಕುತೂಹಲ ಮೂಡಲು ಕೆಲವು ಕಾರಣಗಳಿವೆ. ಇಂಗ್ಲಿಷ್ ಸುದ್ದಿಮಾಧ್ಯಮಗಳ ಅತಿದೊಡ್ಡ ವೀಕ್ಷಕ ಬಳಗ ಬೆಂಗಳೂರು ಮತ್ತು ಕರ್ನಾಟಕದ ಇತರೆ ಭಾಗಗಳಲ್ಲಿದೆ. ಮೇಲಾಗಿ ದೇಶದೆಲ್ಲೆಡೆಯ ಶ್ರೀಮಂತ ಕುಟುಂಬಗಳ ಯಾರಾದರೂ ಕಸಿನ್—ಆಂಟ್—ನೀಸ್ ಒಬ್ಬರು ಬೆಂಗಳೂರಿನಲ್ಲಿ ಇರುತ್ತಾರೆ. ಇವು ಬೆಂಗಳೂರು—ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳು ದೇಶದೆಲ್ಲೆಡೆಯ ಜನರ ಗಮನ ಸೆಳೆಯಬಲ್ಲ ಬಲವಾದ ಕಾರಣಗಳಾಗಿವೆ. ಹೀಗಾಗಿ ಬೇರಾವ ರಾಜ್ಯದ ಚುನಾವಣೆಗೆ ಮೀರಿದ ಸಮಯ—ಪ್ರಾಮುಖ್ಯವನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕರ್ನಾಟಕದ ಚುನಾವಣೆಗೆ ನೀಡಿವೆ. ಒಬ್ಬ ಹಿರಿಯ ವಿಶ್ಲೇಷಕರಂತೂ ಬೆಂಗಳೂರಿನ ಕೊಡುಗೆಯನ್ನು ಎತ್ತಿಹೇಳುತ್ತಾ, ದೇಶದ ಅತಿಮುಖ್ಯ ನಗರ ಬೆಂಗಳೂರು ಆಗಿದ್ದು ಇದು ರಾಷ್ಟ್ರದ ರಾಜಧಾನಿಯಾಗಲು ಯೋಗ್ಯ ನಗರವೆಂದೂ ಹೇಳಿದ್ದಾರೆ.

ರಾಷ್ಟ್ರದ ರಾಜಕೀಯ ರಾಜಧಾನಿ ದೆಹಲಿಯೇ ಆಗಿದ್ದರೂ, ದೇಶದ ವಿಜ್ಞಾನ—ತಂತ್ರಜ್ಞಾನದ, ಸಂಗೀತ—ನೃತ್ಯದ, ಊಟ—ಉಪಚಾರದ, ಶಿಕ್ಷಣ—ಆರೋಗ್ಯಸೇವೆಗಳ ಹಾಗೂ ಸ್ಟಾರ್ಟ್ ಅಪ್—ಸ್ಟಾಂಡ್ ಅಪ್ ರಾಜಧಾನಿಯಾಗಿ ಈಗಾಗಲೇ ಬೆಂಗಳೂರು ಸರ್ವಸಮ್ಮತ ನಗರವಾಗಿರುವುದರಲ್ಲಿ ಸಂದೇಹವಿಲ್ಲ. ಈ ಚುನಾವಣೆಯ ನೆಪದಲ್ಲಿಯಾದರೂ ದಶಕಗಳ ನಂತರ ಕರ್ನಾಟಕದ ಹಾಗೂ ಬೆಂಗಳೂರಿನ ಬಗ್ಗೆ ಸಿಕ್ಕ ಮನ್ನಣೆ ಕನ್ನಡಿಗರ ಮನ ಮುದಗೊಳಿಸಿರುವುದಕ್ಕೆ ಯಾರದ್ದೂ ಆಕ್ಷೇಪವಿಲ್ಲ.

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

June 2018

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

May 2018

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

May 2018

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

April 2018

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

April 2018

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

March 2018

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

March 2018

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

February 2018