2nd May 2018

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಪ್ರಸಾದ್ ನಾಯ್ಕ್

‘ಈ ಟ್ರೋಫಿಗಳನ್ನು ತಿನ್ನುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವಾ?’ ಅನ್ನುತ್ತಿದ್ದಾಳೆ ಆ ತಾಯಿ. ಮಗಳು ಚೆಸ್ ಕ್ರೀಡಾಕೂಟವೊಂದನ್ನು ಗೆದ್ದು ಬಂದಿದ್ದಾಳೆ. ಈ ಬಗ್ಗೆ ಆ ತಾಯಿಗೆ ಸಂತಸವಿಲ್ಲವೆಂದಲ್ಲ. ಆದರೆ ಯೋಚಿಸಲು ಅದಕ್ಕಿಂತಲೂ ಮುಖ್ಯವಾದ ಸಂಗತಿಗಳು ಅವಳಿಗೆ ಸಾಕಷ್ಟಿವೆ. ಅಲೆಮಾರಿ ಜೀವನ, ಕಿತ್ತುತಿನ್ನುವ ಬಡತನಗಳು ಕಂಗೆಡಿಸುತ್ತಿರುವಾಗ ಈ ಲೋಹದ ಟ್ರೋಫಿಗಳು ಅವಳನ್ನು ಹೇಗೆ ತಾನೇ ಸಂತೈಸಬಲ್ಲವು?

‘ಕಟ್ವೆ’ ಎಂಬ ಹೆಸರಿನ ಪ್ರದೇಶವೂ ಇದೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಎಲ್ಲರಿಗೂ ತಿಳಿದಿರಲು ಅದು ಯಾವ ರೀತಿಯಲ್ಲೂ ಅಂಥಾ ಮುಖ್ಯವಾದ ಪ್ರದೇಶವೂ ಅಲ್ಲ. ಆಫ್ರಿಕಾ ಖಂಡದ ಅತೀ ಬಡರಾಷ್ಟ್ರಗಳ ಪಟ್ಟಿಯಲ್ಲಿ ಬರುವ ಉಗಾಂಡಾದ ರಾಜಧಾನಿ ಕಂಪಾಲಾದಿಂದ ಸ್ವಲ್ಪ ದೂರದಲ್ಲಿದೆ ಈ ಕೊಳಚೆಪ್ರದೇಶ. ಆಫ್ರಿಕಾದ ಎಲ್ಲಾ ಕೊಳಚೆಪ್ರದೇಶಗಳಂತೆ ಇದೂ ಕೂಡ ಅತ್ಯಂತ ದಯನೀಯ ಸ್ಥಿತಿಯಲ್ಲಿರುವಂಥದ್ದು. ಗಲೀಜು, ನೊಣ, ಖಾಯಿಲೆಗಳಿಂದ ಹಿಡಿದು ವೇಶ್ಯಾವಾಟಿಕೆಗಳಂತಹ ಗಂಭೀರ ಅಪರಾಧಗಳನ್ನು, ಅಸಂಖ್ಯಾತ ಹರೆಯದ ಗರ್ಭಿಣಿ ಬಾಲಕಿಯರನ್ನು ತನ್ನೊಳಗಿರಿಸಿಕೊಂಡಿರುವ ಪುಟ್ಟ ನರಕವಿದು.

ಇಂತಿಪ್ಪ ಕಟ್ವೆಯು ಹಠಾತ್ತನೆ ಸುದ್ದಿಯಾಗಿದ್ದು ಫಿಯೋನಾ ಮುಟೇಸಿ ಎಂಬ ಬಾಲಕಿಯೊಬ್ಬಳ ಅಸಾಮಾನ್ಯ ಸಾಧನೆಯಿಂದಾಗಿ. ಚಿಕ್ಕ ವಯಸ್ಸಿನಲ್ಲೇ ಚೆಸ್ ಲೋಕದಲ್ಲಿ ದಾಪುಗಾಲಿಕ್ಕುತ್ತಿರುವ ಈ ಬಾಲಕಿಯ ಕಥೆಯನ್ನು ಟಿಮ್ ಕ್ರಾಥರ್ಸ್ ಎಂಬ ಅಮೆರಿಕನ್ ಲೇಖಕರೊಬ್ಬರು ಕೃತಿಯಾಗಿಸಿ ಆಕೆಯನ್ನು ‘ಕಟ್ವೆಯ ರಾಣಿ’ ಎಂದು ಜಗತ್ತಿಗೆ ಪರಿಚಯಿಸಿದ್ದರು. ಇದಾದ ನಾಲ್ಕು ವರ್ಷಗಳಲ್ಲೇ ಫಿಯೋನಾಳ ಪ್ರೇರಣಾತ್ಮಕ ಜೀವನಗಾಥೆಯನ್ನು ಖ್ಯಾತ ನಿರ್ದೇಶಕಿ ಮೀರಾ ನಾಯರ್ ಸಾರಥ್ಯದಲ್ಲಿ ತೆರೆಗೆ ತಂದ ವಾಲ್ಟ್ ಡಿಸ್ನಿ ಪಿಕ್ಚರ್ಸ್ ಸಂಸ್ಥೆಯು ಇದೇ ಹೆಸರಿನಲ್ಲಿ ಫಿಯೋನಾಳ ಸತ್ಯಕಥೆಯನ್ನು ಒಂದು ಅದ್ಭುತವಾದ ದೃಶ್ಯಕಾವ್ಯವನ್ನಾಗಿಸಿತು.

‘ಕ್ವೀನ್ ಆಫ್ ಕಟ್ವೆ’ ಚಿತ್ರವು ಕಟ್ವೆಯ ಫಿಯೋನಾ ಮುಟೇಸಿಯೆಂಬ ಬಾಲಕಿಯೊಬ್ಬಳು ಚೆಸ್ ಲೋಕದಲ್ಲಿ ನೆಡುವ ಅಮೋಘ ಮೈಲುಗಲ್ಲುಗಳ ಯಶೋಗಾಥೆ. ಚಿತ್ರ ಶುರುವಾಗುವುದೇ ತೆರೆಯುತ್ತಿರುವ ಹೆಬ್ಬಾಗಿಲ ಹಿಂದಿನಿಂದ ಫಿಯೋನಾ ನಡೆದುಕೊಂಡು ಬರುವುದರೊಂದಿಗೆ. ಅವಳ ಪುಟ್ಟ ಕಣ್ಣುಗಳಲ್ಲಿ ಅದೆಂಥದ್ದೋ ಅಗಾಧವಾದ ಆತ್ಮವಿಶ್ವಾಸದ ಛಾಯೆ. ‘ನೀನು ಇಲ್ಲೇ ಇರಬೇಕಾದವಳು’, ಎನ್ನುತ್ತಿದ್ದಾನೆ ಫಿಯೋನಾಳ ಕೋಚ್ ರಾಬರ್ಟ್ ಕಟೆಂಡೆ. ಆತ ಹೇಳುತ್ತಿರುವುದು ಸತ್ಯ. ಇವುಗಳು ಫಿಯೋನಾಳ ಆರಂಭಿಕ ಹೆಜ್ಜೆಗಳಷ್ಟೇ. ಆಕೆ ಸಾಧಿಸಬೇಕಾಗಿರುವುದು ಇನ್ನೂ ಸಾಗರದಷ್ಟಿದೆ.

ಅಸಲಿಗೆ ಕಟ್ವೆಯೆಂಬ ಕೂಪಕ್ಕೆ ಚೆಸ್ ಅನ್ನು ಪರಿಚಯಿಸಿದ್ದೇ ಈ ರಾಬರ್ಟ್ ಕಟೆಂಡೆಯೆಂಬ ಉತ್ಸಾಹಿ ತರುಣ. ತನ್ನ ತಂದೆ ಯಾರೆಂದೇ ಗೊತ್ತಿಲ್ಲದ ಈತ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದ. ಆದರೆ ಯಾವ ಅಡೆತಡೆಗಳೂ ಕೂಡ ಆತನ ಆತ್ಮವಿಶ್ವಾಸವನ್ನು ಕೊಲ್ಲುವಂಥದ್ದಾಗಿರಲಿಲ್ಲ. ಒಳ್ಳೆಯ ಫುಟ್ಬಾಲ್ ಆಟಗಾರನಾಗಿದ್ದ ಈತನ ಪ್ರತಿಭೆಯನ್ನು ಗಮನಿಸಿದ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಈತನಿಗೆ ವಿದ್ಯಾರ್ಥಿವೇತನವನ್ನು ಕಲ್ಪಿಸಿಕೊಟ್ಟಿದ್ದರು. ಹೀಗೆ ಜೀವನದುದ್ದಕ್ಕೂ ವಿದ್ಯಾರ್ಥಿವೇತನಗಳ ಆಸರೆಯಲ್ಲೇ ಕಲಿಯುವ ಕಟೆಂಡೆ ಮುಂದೆ ಉತ್ತಮ ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿಯನ್ನೂ ಪಡೆಯುತ್ತಾನೆ. ಆದರೆ ಉಗಾಂಡಾದಲ್ಲಿ ಇಲ್ಲದ ಉದ್ಯೋಗಾವಕಾಶಗಳಿಂದಾಗಿ ಆತ ಕ್ರೀಡಾ ಮಂತ್ರಾಲಯದಲ್ಲಿ ತರಬೇತುದಾರನಾಗಿ ತಾತ್ಕಾಲಿಕವಾಗಿ ಸೇರಿಕೊಳ್ಳಬೇಕಾಗುತ್ತದೆ. ಈ ದಿನಗಳಲ್ಲೇ ಕಟ್ವೆಯ ಮಕ್ಕಳು ಫುಟ್ಬಾಲ್ ಆಡಲಾರರು ಎಂಬ ಸತ್ಯವು ಆತನಿಗೆ ತಿಳಿಯುತ್ತದೆ. ಏಕೆಂದರೆ ಆಟವಾಡುವ ಭರದಲ್ಲಿ ಕಾಲು ಮುರಿದುಕೊಂಡರೆ ವೈದ್ಯರ ಬಳಿ ಹೋಗಲು ಅವರ ಪೋಷಕರ ಬಳಿ ಹಣವಿಲ್ಲ. ಕಟ್ವೆಯ ಈ ಬಡಮಕ್ಕಳಿಗೆ ಚೆಸ್ ಅನ್ನು ಪರಿಚಯಿಸುವ ಅದ್ಭುತ ಉಪಾಯವೊಂದು ಆತನಿಗೆ ಹೊಳೆಯುವುದು ಆಗಲೇ.

ಪಾಳು ಬಿದ್ದ ಗೋದಾಮಿನಂತಿದ್ದ ಅಗಾಪೆ ಚರ್ಚಿನ ಪುಟ್ಟ ಖಾಲಿ ಕೋಣೆಯೊಂದರಲ್ಲಿ ಚೆಸ್ ಉತ್ಸಾಹಿಗಳ ಸೈನ್ಯ ತಯಾರಾಗುವುದು ಹೀಗೆ. ಮಕ್ಕಳ ಈ ಸೈನ್ಯಕ್ಕೆ ಕಟೆಂಡೆ ನಾಯಕ. ತನ್ನ ತಮ್ಮ ನಿತ್ಯವೂ ಗುಟ್ಟಾಗಿ ಎಲ್ಲಿಗೆ ಹೋಗುತ್ತಾನೆ ಎಂಬ ಕುತೂಹಲದಿಂದ ಅವನನ್ನು ಹಿಂಬಾಲಿಸುವ ಫಿಯೋನಾ ಒಂದು ದಿನ ಈ ಪುಟ್ಟ ಗೂಡಿಗೆ ಬಂದು ತಲುಪಿರುತ್ತಾಳೆ. ಕಪ್ಪು—ಬಿಳಿ ಚೌಕುಳಿಗಳಿದ್ದ ಆ ಬೋರ್ಡನ್ನು, ಹಳೆಯ ತರಹೇವಾರಿ ಆಕಾರದ ಕಾಯಿಗಳನ್ನು ಅವಳು ನೋಡಿದ್ದು ಅದೇ ಮೊದಲು. ಕಟೆಂಡೆ ಚೆಸ್ ಆಟವನ್ನು ಏಕಲವ್ಯನಂತೆ ಸ್ವತಃ ಕಲಿತವನಾಗಿದ್ದರೂ ಪರಿಣತಿಗೇನೂ ಕಮ್ಮಿಯಿಲ್ಲ. ಆಟವನ್ನು ಜೀವನದೊಂದಿಗೆ ಸಮೀಕರಿಸಿ ಮಕ್ಕಳಲ್ಲಿ ಚೆಸ್ ಪ್ರೀತಿಯನ್ನು ಹುಟ್ಟಿಸಬಲ್ಲಷ್ಟು ಉತ್ಸಾಹಿ ಆತ. ಇತ್ತ ಎಲ್ಲಾ ಮಕ್ಕಳು ಕಲಿಯುವ ವೇಗವೇ ಒಂದಾದರೆ ಫಿಯೋನಾಳ ವೇಗವೇ ಬೇರೆ. ಈ ಗುಂಪಿಗೆ ಸೇರಿದ ಒಂದೇ ವರ್ಷದಲ್ಲಿ ತನ್ನ ಕೋಚ್ ಅನ್ನು ಮಣಿಸಿ ವಿಜಯದ ನಗೆಯನ್ನು ಆಕೆ ಬೀರಿದಳು. ತನ್ನ ಎದುರಾಳಿಗಿಂತ ಬರೋಬ್ಬರಿ ಎಂಟು ಹೆಜ್ಜೆಗಳಷ್ಟು ಮುಂಚಿತವಾಗಿಯೇ ಊಹಿಸಿ ತನ್ನ ಕಾಯಿಗಳನ್ನು ನಡೆಸಬಲ್ಲ ಚತುರಮತಿ ಫಿಯೋನಾ.

ಈ ಪರಿಣತಿಯನ್ನು ಫಿಯೋನಾ ತನ್ನ ಪರಿಶ್ರಮ ಮತ್ತು ಆಸಕ್ತಿಯಿಂದ ಪಡೆದುಕೊಂಡಿದ್ದಳೇ ಹೊರತು ಯಾವುದೇ ಚೆಸ್ ಸಂಬಂಧಿ ಪುಸ್ತಕಗಳಿಂದಲ್ಲ. ಅಸಲಿಗೆ ಆ ದಿನಗಳಲ್ಲಿ ಅಕ್ಷರಜ್ಞಾನವೇ ಅವಳಿಗಿರಲಿಲ್ಲ. ಕಿತ್ತು ತಿನ್ನುವ ಬಡತನದಿಂದಾಗಿ ಅವಳ ಶಾಲಾಕಲಿಕೆಗೆ ಕಲ್ಲುಬಿದ್ದಿತ್ತು. ತಂದೆ ಏಡ್ಸ್ ಮಹಾಮಾರಿಗೆ ಯಾವತ್ತೋ ಬಲಿಯಾಗಿದ್ದ. ಸಹೋದರಿ ಯಾವುದೋ ಖಾಯಿಲೆಯಿಂದಾಗಿ ಮೃತಳಾಗಿದ್ದಳು. ಫಿಯೋನಾಳ ತಾಯಿ ನಕ್ಕು ಹೇರಿಯೆಟ್ ಕೂಡ ಸ್ವತಃ ಏಡ್ಸ್ ರೋಗಿ. ಆದರೆ ಆಕಾಶಭೂಮಿ ಒಂದು ಮಾಡಿಯಾದರೂ ಕಷ್ಟಪಟ್ಟು ದುಡಿದು ತನ್ನ ಮಕ್ಕಳನ್ನು ಬೆಳೆಸುವವಳು. ಪ್ರಾಣಹೋದರೂ ಅಡ್ಡದಾರಿಗಿಳಿಯಲು ನಿರಾಕರಿಸುವವಳು. ಮುಂಜಾನೆ ಐದಕ್ಕೆ ಎದ್ದು ಕುಡಿಯಲು ಶುದ್ಧ ನೀರು ತರುವುದರಿಂದ ಹಿಡಿದು, ದಿನವಿಡೀ ಮೆಕ್ಕೆಜೋಳದ ವ್ಯಾಪಾರ, ಅಮ್ಮನೊಂದಿಗೆ ಮನೆಕೆಲಸ, ಇಬ್ಬರು ತಮ್ಮಂದಿರನ್ನು ನೋಡಿಕೊಳ್ಳುವುದು... ಹೀಗೆ ಎಲ್ಲವೂ ಫಿಯೋನಾಳ ಜವಾಬ್ದಾರಿಯೇ. ಪರಿಸ್ಥಿತಿಗಳು ಹೀಗಿದ್ದಾಗ ಫಿಯೋನಾಳಂತಹ ಬಾಲಕಿಯಾಗಲಿ, ಅವಳ ತಾಯಿಯಾಗಲಿ ಉಜ್ವಲ ಭವಿಷ್ಯದ ಕನಸನ್ನು ಹೇಗೆ ತಾನೇ ಕಾಣಬಹುದಿತ್ತು? ಆದರೆ ಕಟೆಂಡೆ ಅವಳಲ್ಲಿ ಭರವಸೆಯ ಹಣತೆಯನ್ನು ಹಚ್ಚಿದ್ದ. ಚೆಸ್ ಅವಳ ಜೀವಿತಕ್ಕೊಂದು ಕಾರಣವನ್ನು ನೀಡಿತ್ತು.

ಹೀಗೆ ಕೆಟೆಂಡೆಯ ಮಾರ್ಗದರ್ಶನದಲ್ಲಿ ಫಿಯೋನಾಳ ಚೆಸ್ ಪಯಣವು ಕ್ರಮೇಣ ವೇಗವನ್ನು ಪಡೆದುಕೊಳ್ಳುತ್ತದೆ. ‘ದ ಪಯನೀರ್ಸ್’ ಎಂದು ಕರೆದುಕೊಳ್ಳುವ ಕೆಟೆಂಡೆಯ ನೇತೃತ್ವದ ಈ ಕೊಳಚೆಪ್ರದೇಶದ ಚಿಣ್ಣರು ಶಹರಕ್ಕೆ ಹೋಗಿ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿಗಳನ್ನು ಮಣಿಸಿ ಬರುತ್ತಾರೆ. 2007ರಲ್ಲಿ ಉಗಾಂಡಾದ ಮಹಿಳಾ ಜೂನಿಯರ್ಸ್ ಚಾಂಪಿಯನ್ಶಿಪ್ ನಲ್ಲಿ ಪ್ರಶಸ್ತಿಯನ್ನು ಗೆದ್ದಾಗ ಫಿಯೋನಾಗೆ ಹನ್ನೊಂದರ ಪ್ರಾಯ. ಗೆಲುವಿನ ಈ ಓಟವು 2008, 2009ರಲ್ಲೂ ಮುಂದುವರಿಯುತ್ತದೆ. 2010ರಲ್ಲಿ ನಿಧಿಯ ಕೊರತೆಯಿಂದಾಗಿ ಉಗಾಂಡಾದ ಚೆಸ್ ಫೆಡೆರೇಷನ್ ಸ್ಪರ್ಧೆಯನ್ನೇ ರದ್ದು ಮಾಡಿತ್ತು. ಹಾಗೇನಾದರೂ ಆಯೋಜಿಸಿದ್ದೇ ಆದಲ್ಲಿ ಸತತ ನಾಲ್ಕನೇ ಬಾರಿ ಅವಳು ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಿದ್ದಳೋ ಏನೋ. ಆಫ್ರಿಕಾ ಮಕ್ಕಳ ಚೆಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಉಗಾಂಡಾದ ಪ್ರತಿನಿಧಿಯಾಗಿ ಇಬ್ಬರು ಚಿಣ್ಣರೊಂದಿಗೆ ತೆರಳಿದ್ದ ಫಿಯೋನಾ ಸ್ವದೇಶವನ್ನು ಬಿಟ್ಟು ಸುಡಾನಿಗೆ ಹೋಗಿದ್ದು, ವಿಮಾನದಲ್ಲಿ ಕೂತಿದ್ದು, ಕೊಳಚೆಪ್ರದೇಶದಿಂದ ಹೊರತಾದ ಜಗತ್ತನ್ನು ನೋಡಿದ್ದು ಅದೇ ಮೊದಲು. ಒಂದಿಷ್ಟು ತುತ್ತು ಹೊಟ್ಟೆಗೆ ಬಿದ್ದರೆ ಅದೇ ಅದೃಷ್ಟ ಎನ್ನುವಂತಿದ್ದ ಅವಳು ಭೋಜನಕ್ಕೆ `ಮೆನು’ ಎಂಬ ಆಯ್ಕೆಗಳೂ ಇರುತ್ತವೆ ಎಂಬುದನ್ನು ಕಂಡಾಗ ಸಹಜವಾಗಿಯೇ ಅಚ್ಚರಿಗೊಳಗಾಗಿದ್ದಳು. ಮುಂದೆ ರಷ್ಯಾದ ಸೈಬೀರಿಯಾದಲ್ಲಿ ಆಯೋಜಿಸಲಾಗಿದ್ದ ವಿಶ್ವ ಚೆಸ್ ಒಲಿಂಪಿಯಾಡ್ ನಲ್ಲೂ ಆಕೆ ಆಫ್ರಿಕಾವನ್ನು ಪ್ರತಿನಿಧಿಸುತ್ತಾಳೆ.

ಡಿಸ್ನಿ ಸಂಸ್ಥೆಯು ಇಂಥದ್ದೊಂದು ಚಿತ್ರವನ್ನು ಈ ಹಿಂದೆ ತಂದಿಲ್ಲವಾದ್ದರಿಂದ ಅವರಿಗೂ ಇದೊಂದು ಸವಾಲಾಗಿದ್ದು ಸತ್ಯ. ಆದರೆ ಚಿತ್ರತಂಡದಲ್ಲಿ ಮೀರಾ ನಾಯರ್ ಅವರಂತಹ ಅನುಭವಿ ನಿರ್ದೇಶಕಿಯಲ್ಲದೆ ಲುಪಿತಾ ನ್ಯೋಂಗೋ, ಡೇವಿಡ್ ಒಯೆಲೋವೋರಂತಹ ಅದ್ಭುತ ತಾರಾಗಣವೂ ತಯಾರಾಗಿ ನಿಂತಿತ್ತು. ಹೀಗಾಗಿ ಯೋಜನೆಯು ನೆಲಕಚ್ಚುವ ಮಾತೇ ಇರಲಿಲ್ಲ. ಫಿಯೋನಾಳ ತಾಯಿಯ ಪಾತ್ರವನ್ನು ನಿರ್ವಹಿಸಿರುವ ನ್ಯೋಂಗೋ ಮೊಟ್ಟಮೊದಲ ಬಾರಿಗೆ ಚಿತ್ರಕಥೆಯನ್ನು ಓದಿದಾಗ ಭಾವುಕರಾಗಿ ಕಣ್ಣೀರು ಹಾಕಿದ್ದರಂತೆ. ಫಿಯೋನಾಳ ಪಾತ್ರವನ್ನು ನಿರ್ವಹಿಸಿರುವ ಬಾಲಕಿ ಮದೀನಾ ನಲ್ವಾಂಗಾರಷ್ಟೇ ನ್ಯೋಂಗೋ, ಒಯೆಲೋವೋರ ಅಭಿನಯವೂ ಕೂಡ ಅಪಾರವಾದ ಪ್ರಶಂಸೆಯನ್ನು ಪಡೆದುಕೊಂಡಿತು. ಈ ಪಾತ್ರಗಳು ಅದೆಷ್ಟು ಅದ್ಭುತವಾಗಿ ತೆರೆಗೆ ಬಂದಿವೆಯೆಂದರೆ ಪ್ರೇಕ್ಷಕರನ್ನು ಇವರು ನಗಿಸಬಲ್ಲರು, ಭಾವುಕರಾಗಿಸಬಲ್ಲರು, ರೋಮಾಂಚನವನ್ನು ತರಬಲ್ಲವರು. ಟೊರಾಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಕಂಡ ಈ ಚಿತ್ರವು ಲಂಡನ್, ತೈಪೆ, ಬ್ರಿಸ್ಬೇನ್ ಏಷ್ಯಾ ಸ್ಪೆಸಿಫಿಕ್ ಚಿತ್ರೋತ್ಸವಗಳಲ್ಲಿ ಪ್ರದರ್ಶನವನ್ನು ಕಂಡಿದ್ದಲ್ಲದೆ ವಿಶ್ವದಾದ್ಯಂತ ಹಲವಾರು ಪುರಸ್ಕಾರಗಳನ್ನೂ, ನಾಮನಿರ್ದೇಶನಗಳನ್ನೂ ತನ್ನದಾಗಿಸಿಕೊಂಡಿತು.

ಇಂದು ಚೆಸ್ ಫಿಯೋನಾಳಿಗೆ ಅನ್ನ, ಅಕ್ಷರ, ಖ್ಯಾತಿ, ಸೂರು... ಹೀಗೆ ಎಲ್ಲವನ್ನೂ ಕೊಟ್ಟಿದೆ. ಇದರಲ್ಲಿ ಫಿಯೋನಾಳ ಪರಿಶ್ರಮದ ಪಾಲು ಎಷ್ಟಿದೆಯೋ ಅಷ್ಟೇ ಶ್ರೇಯಸ್ಸು ಅವಳ ತಾಯಿಯ ತ್ಯಾಗ ಮತ್ತು ಗುರುವಿನ ಛಲಕ್ಕೆ ಸಲ್ಲುತ್ತದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆಡುವ ಇತರ ದೇಶಗಳ ಮಕ್ಕಳೊಂದಿಗೆ ಹೋಲಿಸಿ ನೋಡಿದರೆ ಫಿಯೋನಾಳ ಆಟದ ಮಟ್ಟವು ಕೊಂಚ ಕಮ್ಮಿಯೆಂದು ಅನ್ನಿಸಬಹುದು. ಆದರೆ ಉಗಾಂಡಾದ ಕಟ್ವೆಯಂತಹ ಕೊಂಪೆಯಲ್ಲಿದ್ದುಕೊಂಡು, ಆಹಾರ—ಅಕ್ಷರ—ಆರೋಗ್ಯ—ಸೂರಿನ ಭದ್ರತೆಯಿಲ್ಲದೆ, ಉಳಿವು ಎಂಬುದೇ ನಿತ್ಯದ ಸವಾಲಾಗಿದ್ದ ಸ್ಥಿತಿಯಲ್ಲಿ ಫಿಯೋನಾಳ ಸಾಧನೆಯನ್ನು ನಾವು ನೋಡುವುದಾದರೆ ಆಕೆ ನಿಜಕ್ಕೂ ಓರ್ವ ಸಾಹಸಿಯೇ. ಇದು ಫಿಯೋನಾಳನ್ನು ಚೌಕುಳಿಯಾಟದಲ್ಲಿ ಎದುರಿಸಿರುವ ಇತರ ದೇಶಗಳ ಖ್ಯಾತ ಆಟಗಾರ್ತಿಯರ ಅಭಿಪ್ರಾಯವೂ ಹೌದು.

ಮಗಳು ಆಕಾಶದೆತ್ತರದ ಕನಸನ್ನು ಕಾಣುವಾಗ ‘ಬೇಡ ಮಗಳೇ, ನಿರಾಶೆಯಾದೀತು’ ಎಂದು ಕಾಳಜಿಯಿಂದ ಹೇಳುವ ಫಿಯೋನಾಳ ತಾಯಿ, ತಾನು ಕುಸಿದೇಹೋದೆ ಎಂದು ಫಿಯೋನಾ ಕೈಚೆಲ್ಲಿದಾಗಲೆಲ್ಲಾ ಅವಳಲ್ಲಿ ಇನ್ನಿಲ್ಲದ ಆತ್ಮವಿಶ್ವಾಸವನ್ನು ತುಂಬುವ ಕೋಚ್ ಕಟೆಂಡೆ, ಮಗಳಿಂದಾಗಿ ಸಿಗುವ ಸುಣ್ಣಬಣ್ಣ ಬಳಿದ ಗಟ್ಟಿಮುಟ್ಟಾದ ಮನೆಯನ್ನು ನೋಡುತ್ತಾ ಕಣ್ತುಂಬಿಕೊಳ್ಳುವ ತಾಯಿ, ಗುರುವಿನ ಜೀವನಪ್ರೀತಿಯನ್ನು ತನ್ನಲ್ಲಿ ತುಂಬಿಕೊಂಡು ಕೆಂಡಹಾಸಿದ ದಾರಿಯಲ್ಲೂ ಧೈರ್ಯವಾಗಿ ಮುನ್ನುಗ್ಗುವ ಫಿಯೋನಾ... ಇಂಥಾ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗುವುದಕ್ಕಾದರೂ ಈ ಚಿತ್ರವನ್ನು ನೋಡಬೇಕು. ಮುಟೇಸಿ, ಕಟೆಂಡೆ, ನಕ್ಕುರವರ ಅಗಾಧ ಜೀವನಪ್ರೀತಿಯಲ್ಲಿ ಒಂದಿಷ್ಟಾದರೂ ನಮಗೆ ದಕ್ಕಬೇಕು.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018