2nd May 2018

ಗರ್ದಿ ಗಮ್ಮತ್ತು

ಎಸ್.ಬಿ.ಜೋಗುರ

ಅದೊಂದು ಲಟ್ಟಾ ಬಸರೀಗಿಡ. ತೀರಾ ಖಡಕ್ ಅಂದ್ರೆ ಖಡಕ್, ಅಂಥಾ ಉರಿಬಿಸಿಲು ಇರೋ ಸಿಂದಗಿಯಂಥಾ ಊರೊಳಗ ಬೇಸಿಗೆ ದಿನದೊಳಗ ಅದು ನೆರಳು ಕೊಡೋ ದೇವರ ಛತ್ರಿ ಇದ್ದಂಗ ಇತ್ತು. ಅಂಥಾ ಆ ದೇವರು ಹೆಣ್ಣು ದೇವರು ಅನ್ನೂವಂಗ ಆ ಗಿಡವು ಒಡಲೊಳಗ ಹೂವಾಗಿ, ಕಾಯಾಗಿ ಹಣ್ಣ ಬಿಡತಿತ್ತು. ಚಳಿಗಾಲದೊಳಗ ತುಸು ಹಚ್ಚಗ ಕವಳೀಕಾಯಿಯಂಗ ಕಾಣ್ತಾ ಇದ್ದದ್ದು ಬರಬರತಾ ಹಣ್ಣಾಗಿ ಕರ್ರಗೆ ಸಣ್ಣ ನೇರಳೆ ಹಣ್ಣು ಕಂಡಂಗ ಕಾಣ್ತಿತ್ತು. ಅದು ನನ್ನಂಥಾ ಚುಕ್ಕೋಳಗಿ ಪುಗ್ಸಟ್ಟೆ ಸಿಗೋ ಹಣ್ಣಾಗಿರತಿತ್ತು. ಅದರ ಸ್ವಾದ ಬಾಳ ರುಚಿರುಚಿಯಾಗಿರತಿತ್ತು.

ಓಣಿಯೊಳಗಿನ ಹತ್ತಾರು ಹುಡುಗರು ಅಲ್ಲಿ ಕೆಳಗೆ ಉದುರಿಬಿದ್ದ ಹಣ್ಣನ್ನು ಎತ್ತಿ ಬಾಯಿಗಿ ಹಾಕೋ ಮೊದಲೇ ಆ ಗಿಡದೊಳಗೇ ಗೂಡು ಕಟ್ಟಿರೋ ಕಾಗೆ, ಗುಬ್ಬಿ, ಕೋಗಿಲೆ, ಗಿಳಿ, ಚವಣಕ್ಕಿಯಂಥಾ ಹಕ್ಕಿಗಳು ನಸುಕಿನೊಳಗೇ ಹಿಂಡಿಂಡು ಹಣ್ಣ ಇರೋ ಟೊಂಗೆ ಮ್ಯಾಲ ಕುಂತು, ತಾಜಾ ತಾಜಾ ಹಣ್ಣ ಕಟೀತಿದ್ದವು. ಅವುಗಳ ಉಲುವೇ ಬಾಳ ಖುಷಿ ಕೊಡುವಂಗ ಇರತಿತ್ತು. ಅವು ಹಾರಾಡತಾ.. ಕೂಗತಾ.. ಹಾಡತಾ ಟೊಂಗೆದಿಂದ ಟೊಂಗೆಗೆ ಹಾರಿ ಕೂಡೋ ವ್ಯಾಳೆದೊಳಗ ಉದುರಿ ಬಿದ್ದದ್ದು ನಮ್ಮಂಥಾ ಚುಕ್ಕೋಳ ಪಾಲಿಗಿರತಿತ್ತು. ಸಿಂದಗಿ ಬಜಾರದೊಳಗ ಇಂಥಾ ಒಂದು ದೆವ್ವಿನಂಥಾ ಬಸರೀ ಗಿಡ ಅದೆಷ್ಟು ಮಂದಿಗಿ ಆಸರ ಆಗಿತ್ತು ಅನ್ನೂದು ನನಗ ಈಗಲೂ ನೆನಪೈತಿ.

ಬ್ಯಾರೇ ಊರಿಂದ ಸಿಂದಗಿ ಸಂತಿಗಿ ಬಂದವರು ಈ ಗಿಡದ ಬುಡಕ ತುಸು ಹೊತ್ತು ಕೂಡದೇ ಹೋಗ್ತಿರಲಿಲ್ಲ. ಅಂಥಾ ದಟ್ಟ ನೆರಳದು. ಬಟಾಬಯಲಿನ ಊರೊಳಗ ದೊಡ್ಡದೊಂದು ಛತ್ರಿ ಥರಾ ಆ ಗಿಡ ಇತ್ತು. ಆ ಬಸರೀಗಿಡ ನಮ್ಮ ಮನೀ ಮುಂದೇ ಇತ್ತು. ಹಿಂಗಾಗಿ ನಮಗ ಅದರ ಧರಕಾರ ಇರಲಿಲ್ಲ. ಹಿತ್ತಲ ಗಿಡ ಮದ್ದಲ್ಲ ಅಂತಾರಲ್ಲ ಹಂಗ. ನಮ್ಮ ಮನಿ ಅಂಗಳದಾಗ ನಿಂತು ಹಿಂಗೇ ಒಂದು ನಜರ ಆ ಕಡೆ ಬೀಸದರ ಸಾಕು, ಬಸರೀಗಿಡದ ನೆರಳಾಗ ನಡದಿರೋ ವ್ಯವಹಾgಗಳೆಲ್ಲಾ ಕಾಣತಿದ್ವು. ಆ ಗಿಡದ ನೆರಳಾಗ ಏನಿತ್ತು, ಏನಿಲ್ಲ ಅನ್ನೂದನ್ನ ನೆನಪ ಮಾಡಿಕೊಂಡರ, ಒಂದು ವಂಡರ್ ವಲ್ರ್ಡ್ ಬಿಚಗೋತೈತಿ.

ಆ ಜಗತ್ತು ಯಾವುದರೆ ಕಲಾತ್ಮಕ ಸಿನೇಮಾ ಮಾಡಾಕ ಸೆಟ್ ಹಾಕದಂಗ ಇರತಿತ್ತು. ಒಂದೂರ ಬದುಕಿನ ಭಾಗವೇ ಅಲ್ಲಿರತಿತ್ತು. ನೆಲದ ಮ್ಯಾಲ ಚಾಪೆ ಹಾಸ್ಗೊಂಡು ಅದರ ಮ್ಯಾಲ ಸಾಲಾಗಿ ಸೂಜಿ, ಡಬ್ಬಣ, ದಾರ, ಚಾವಿ, ಕನ್ನಡಿ, ಹಣಗಿ, ಚಿಮಣಿ, ಕಂದೀಲ ಮಾರೋ ಸಣ್ಣ ಸಣ್ಣ ಅಂಗಡಿಗಳು. ಕೂದಲಾ ತಗೊಂಡು ರಿಬ್ಬನ್, ಹೇರಪಿನ್ ಕೊಡೋ ಹುಡಗೇರು, ಚಿಲಮಿ ಸೇದಾಕ ಬೇಕಾಗೋ ಅಳ್ಳಿ ಗುಂತಿ ಹೊಂದಸಿ ಕುಂತವರು, ಮಧ್ಯಾಹ್ನಮಟ ಭಿಕ್ಷೆ ಬೇಡಿದ್ದನ್ನ ಅಲ್ಲೇ ಕುಂತು ಕಟದು, ಕೂಡಿದ ಚಿಲ್ರೆ ಲೆಕ್ಕಾ ಹಾಕವರು, ಆ ಸಣ್ಣಸಣ್ಣ ಅಂಗಡಿ ಹೆಂಗಸೂರು ವ್ಯಾಪಾರ ಇರಲಾರದಕ್ಕ ಒಬ್ಬರ ತೊಡೆ ಸಂದಿಯೊಳಗ ಇನ್ನೊಬ್ಬರು ಕುಂತಗೊಂಡು, ತಲಿಯೊಳಗಿನ ಹೇನು ಪತ್ತೆ ಹಚ್ಚವರು, ಢಣ.. ಢಣ ಅಂತ ಗಂಟೆ ಭಾರಿಸಿ, ಬೊಂಬಾಯಿ ಮಿಟಾಯಿ ಮಾರವರು, ಕೋಕಾದಂಥಾ ಡಬ್ಬಿಯೊಳಗ ಕೆಂಪು, ಹಸರ, ಹಳದೀ, ಕೇಸರಿ ಬಣ್ಣದ ‘ಗೇರೆ ಗೇರ ಥಂಡ್ ಗೇರ’ ಅಂತ ಲಾಲವಾಲಾ ಮಾರವರು, ಮೂರು ಕಲ್ಲಿನ ಒಲಿ ಮ್ಯಾಲ ಕಡಾಯಿ ಇಟಗೊಂಡು, ಸುಡೊ ಬಿಸಲೊಳಗ ಗರಂ ಭಜಿ ಮಾಡಿ ಮಾರವರು, ಒಂದು ಕಾಲು ಮಡಚಿ ಇನ್ನೊಂದು ಕಾಲು ಉದ್ದಕ ಚಾಚಿ, ತೊಡೆಮಟ ಪೈಜಾಮ್ ಏರಿಸಿ ತಾಳಿ, ಗುಂಡ, ಬೋರಮಳ ದಂಥಾ ಆಭರಣ ಘಟಾಯಿಸವರು, ರಮಿ ಆಡವರಂಗ ಸಾಲಾಗಿ ಎಲಿ ಜೋಡಸಕೊಂಡು ನೀರಾಗ ಅದ್ದಿ ಎಲಿ ಅಂಡಗಿ ಮ್ಯಾಲ ನೀರ ಚಿಮಕಸತಾ ಎಲಿ ಅಡಕಿ ಮಾರವರು, ಊರ ತುಂಬಾ ಅಡ್ಡಾಡಿ ತಮ್ಮತಮ್ಮ ಚಾಜದ ಮನಿಗಳಿಗಿ ಹೋಗಿ ಅವರವರ ಮನಿ ವಂಶಾವಳಿ ಹೇಳಿ ಅವರು ಕೊಟ್ಟಿರೋ ಬಟ್ಟೆಬರೆ ಜೊಡಿಸಿಕೊಳ್ಳೋ ಹೆಳವರು. ಇಲ್ಲೀಮಟ ನಿಂತ್ಗೊಂಂಡು ಟಳಂಗ್.. ಟಳಂಗ್.. ಅಂತ ತಾಳದ ಮ್ಯಾಲ ತಾಳ ಬಡದು, ತಲಿ ಮ್ಯಾಲಿನ ಟೋಪಿಗಿ ತುದಿಗಿರೋ ಗೊಂಡೆ ಅಲ್ಲಾಡಿಸಿ, ಸುಸ್ತ ಆಗಿ ಊಟಕ್ಕ ಕುಂತಿರೋ ಗರ್ದಿ ಗಮತ್ತು ತೋರಿಸೋ ಮನಸ್ಯಾ, ಮದುವಿಗಿ ಬಟ್ಟೆ ಖರೀದಿಸಿ ತಾಯಿ ಸೀರೆ, ಆಯಿ ಸೀರೆ, ಹುಡುಗೀ ಸೀರೆ, ಕೊಡಾ ಹೊರವಳ ಸೀರೆ ಎಲ್ಲಾ ಎಣಿಸಿ ಬ್ಯಾರೆಬ್ಯಾರೆ ಸಣ್ಣಸಣ್ಣ ಗಂಟ ಕಟಗೊಂಡು ಅಲ್ಲೇ ಕುಂತು ಹೊಂದಿಸಿಕೊಂಡು ಹೋಗೋ ಮದುವಿ ಮಂದಿ. ಇವೆಲ್ಲವುಗಳ ನಡುವ ಗಿಡದ ಬುಡಾನ್ನ ರಿಜರ್ವ ಮಾಡಿದಂಗೆ ಬರೊಬ್ಬರಿ ಗಿಡದ ಬೊಡ್ಡೆಗೆ ಬೆನ್ನ ಹಚ್ಚಿ ಕೌದಿ ಹೊಲಿಯೋ ಬೊಚ್ಚು ಬಾಯಿ ಮುದುಕಿ. ಇಂಥಾ ಹತ್ತಾರು ಕಟಿಪಿಟಿಗಳಿಗೆ ಆಸರ ಆಗಿರೋ ಆ ಬಸರೀ ಗಿಡದ ಬಗ್ಗೆ ಎಟ್ಟು ಹೇಳದರೂ ಕಡಿಮೇನೇ..

ನಾವು ಆವಾಗ ಬಾಳ ಸಣ್ಣ ಹುಡುಗರು. ಎಟ್ಟು ಸಣ್ಣ ಹುಡುಗರಂದ್ರ ಮಣ್ಣಾಗೇ ಆಟಾ ಆಡೂ ವಯಸ್ಸು. ಯಾರಾದ್ರೂ ಪರಿಚಯವದವರು, ಸಂಬಂಧಿಗಳು ಐದು ಪೈಸೆ ಕೊಟ್ಟರ ಓಡಿ ಹೋಗಿ ನಾಲ್ಕು ಅಂಟಿಲೌಡಿ, ಹತ್ತು ಪೈಸೆ ಕೊಟ್ಟರ ಒಂದು ಲಾಲವಾಲಾ ತಿನ್ಕೊಂತ ಅದೇ ಆ ಬಸರೀ ಗಿಡದ ನೆರಳೊಳಗ ಗೋಲಿಗುಂಡ ಆಡಕೊಂಡು ಇದ್ದವರು. ಓಣ್ಯಾಗಿನ ವಯಸ್ಸಾಗಿರೋ ಮುದುಕರು ಅಲ್ಲೇ ತುಸು ಗಿಡದ ಕೆಳಗ ಅಡ್ಡಾಗಿದ್ದರ, ನಾವು ಆಡೊ ಗೋಲಿಗುಂಡು ಬುಳುಬುಳು ಅಂತ ಉಳ್ಳಾಡತಾ ಅವರ ದೋತರದೊಳಗ ಹೋಗಿ, ಗುಳುಗುಳಿಸಿ ಅವರ ನಿದ್ದಿ ಕೆಡಿಸಿ, ಅವರು ಎದ್ದು ಕುಂತು ನಮ್ಮ ಕಡೆ ನೋಡಿ ಸಿಟ್ಟೀಲೇ ‘ಏ ಕುರಸಾಲ್ಯಾಗೊಳೋ ನಿಮ್ಮಪ್ಪಗ ಹೇಳಿ ಎರಡು ಒದಸ್ತೀನಿ ನೋಡು’ ಅಂದಾಗ ತುಸು ದೂರ ಸರದು ಆಡತಿದ್ದವಿ. ಹಂಗ ಆಟ ಆಡಿ ಆಡಿ ಬೈಸಕೊಂಡು, ಬ್ಯಾಸರಾಗಿಂದ ಕಳ್ಳ ಬೆಕ್ಕಿನಂಗ ಹಗೂರಕ ಗರ್ದಿ ಗಮತ್ತು ಡಬ್ಬಿ ಸನ್ಯಾಕ ಹೋಗತಿದ್ದಿವಿ. ಆ ಸುಡು ಬಿಸಲಾಗ ಗಿರಾಕಿ ಇರಲಾರದ ಕಾರಣಕ್ಕ ಅಂವಾ ಮುಖದ ಮ್ಯಾಲ ಟವಲ್ ಹಾಕೊಂಡು ಒಂದು ಜೊಂಪು ನಿದ್ದೆ ಹೊಡಿಯುವಾಗ ನಾವು ಹಗೂರಕ ಆ ಗರ್ದಿ ಗಮ್ಮತ್ತಿನ ಎದುರುಬದಿ ಕೂಡಿಸಿರೋ ಡಬ್ಬಿ ಮುಚ್ಚಳಾನ್ನ ತಗೀತಿದ್ವಿ.

ಒಂದೇ ಒಂದು ಮುಚ್ಚಳ ತಗಿಯೂದರೊಳಗ ಸಾಕು ಬೇಕಾಗತಿತ್ತು. ಆವಾಜ್ ಮಾಡದೇ ಒಬ್ಬೊಬ್ಬರು ಬಂದು ಶೋಲೇ ಸಿನೇಮಾದ ಹೇಮಾಮಾಲನಿನ ಪಾಳಿ ಪ್ರಕಾರ ನಾಕೈದು ಹುಡುಗರು ನೋಡತಿದ್ವಿ. ಇನ್ನೇನು ಹಗೂರಕ ಎರಡನೇ ಸೀನು ಗಬ್ಬರಸಿಂಗನ ಕುತಗಿಗಿ ಬಡಗಿ ಬಿಗದಿರೋ ಧರ್ಮೇಂದ್ರನ್ನ ಬಿಡಬೇಕು ಅನ್ನೂದರೊಳಗ ಸೌಂಡಾಗಿ ಅಂವಾ ಎದ್ದು ಕಲ್ಲು ತಗೊಂಡು ಒಗೀತಿದ್ದ. ಎಲ್ಲಾ ಹುಡುಗರು ಕಾಲು ಕಿತ್ಗೊಂಡು ಓಡತಿದ್ದರು. ನಾನಂತೂ ಸೀದಾ ಮನಿಯೊಳಗೇ ಜಿಗಿತಿದ್ದೆ. ಗರ್ದಿ ಗಮ್ಮತ್ತು ಆವಾಗ ಎಷ್ಟು ಪಾಪ್ಯುಲರ್ ಆಗಿತ್ತಂದ್ರ ಅದರೊಳಗ ತೋರಿಸೋ ಸೀನ್ ನೋಡೂದಕಿಂತಲೂ ಅಂವಾ ತಾಳ ಬಾರಸೋದು... ಗೊಂಬಿ ಕುಣಿಸೋದು ನೋಡೂದೇ ಒಂದು ಮಜಾ ಅನಸತಿತ್ತು. ಅದೊಂದು ದೊಡ್ಡ ಡಬ್ಬಿ ಅದಕ್ಕ ಸುತ್ತಾಲಕೂ ಚೆಂದಾಗಿ ಬಣ್ಣ ಬಳದಿರತಿದ್ದ. ಸಾಲಾಗಿ ಒಂದಷ್ಟು ಸಣ್ಣ ಸಣ್ಣ ಸಿನೆಮಾ ಹಿರೋ ಹಿರೋಯಿನ್‌ಗಳ ಫೊ಼ೕಟೊ ಹಚ್ಚಿರತಿದ್ದ. ತಲಿಯಂಗಿರೋ ಗರ್ದಿಗಮ್ಮತ್ತಿನ ಡಬ್ಬಿಗಿ ಕಣ್ಣ ಮಾಡದಂಗ ಹೊರಬದಿ ನಾಲ್ಕು ಗುಂಡಕಿರೋ ಡಬ್ಬಿಗಳನ್ನ ಹೊಂದಿಸಿ, ಅವುಗಳನ್ನು ಮುಚ್ಚಾಕ ಮತ್ತ ತೆರಿಯಾಕ ಬರುವಂಗ ಮಾಡಿರತಿದ್ದ.

ಪ್ರತಿ ಡಬ್ಬಿಯೊಳಗೆ ಒಂದೊಂದು ಗ್ಲಾಸು. ಆ ಡಬ್ಬಿ ಗ್ಲಾಸಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡ್ತಾ ಕೂತಕೋತಿದ್ವಿ. ಗರ್ದಿ ಗಮ್ಮತ್ತು ತೋರಸವನು ಡಬ್ಬಿ ನೆತ್ತಿ ಮ್ಯಾಲ ಒಂದು ತಾಳ ಫಿ಼ಕ್ಸ್ ಮಾಡಿರತಿದ್ದ. ಕೈಯಾಗ ಇನ್ನೊಂದು ತಾಳ ಹಿಡ್ಕೊಂಡು ಅದರ ಮುಖಕ್ಕ ಟಳಂಗ್.. ಟಳಂಗ್.. ಅಂತ ಹೊಡ್ಕೊಂತ ಒಂದೊಂದೆ ತಾಳ ಹಾಕತಾ ‘ಗರ್ದಿ ಗಮ್ಮತ್ತು ನೋಡ್ರಿ, ವಡ್ಡರ ನಾಗವ್ವ ನೋಡ್ರಿ, ಕಿತ್ತೂರ ಚನ್ನಮ್ಮ ನೋಡ್ರಿ, ಟಿಪ್ಪು ಸುಲ್ತಾನ ನೋಡ್ರಿ, ತಾಜ ಮಹಲ ನೋಡ್ರಿ, ಮೆಕ್ಕ ಮದಿನಾ ನೋಡ್ರಿ’ ಅಂತ ಒಂದೊಂದೇ ಚಿತ್ರ ಬಿಡತಾ ಹೋಗವನು. ಆ ಗ್ಲಾಸಲ್ಲಿ ಆ ಚಿತ್ರಗಳು ದೊಡ್ಡದಾಗಿ ಕಾಣತಿದ್ದವು. ನಮ್ಮಂಥಾ ಹುಡುಗರಿಗೆ ಖುಷಿಯೋ ಖುಷಿ.

ಚಡ್ಡಿ ದೋಸ್ತರಿದ್ದರ ಒಬ್ಬ ರೊಕ್ಕ ಕೊಡೂದು ಹತ್ತು ಸೀನ್ ಗಳಲ್ಲಿ ಇಬ್ಬರೂ ಐದೈದು ಸೀನ್ ನೋಡೂದು. ‘ಗರ್ದಿ ಗಮ್ಮತ್ತು ನೋಡ್ರಿ’ ಅಂತ ಆ ಸಾಹೆಬಣ್ಣ ಬಾಳ ಗತ್ತೀಲೇ ಹೇಳವನು. ಡಬ್ಬಿ ಮ್ಯಾಲ ತಾಳ ಫಿ಼ಕ್ಸ್ ಮಾಡಿ ಕೈಯಲ್ಲೊಂದು ತಾಳ ಹಿಡದು ಟಳಂಗ್.. ಟಳಂಗ್ ಬಾರಸವನು. ಅವನು ಬಾರಸೋ ಆ ನಾದಕ್ಕೇ ನನ್ನಂಥಾ ಚುಕ್ಕೋಳು ಓಡಿ ಬರತಿದ್ದರು. ಅಂವಾ ತಲಿ ಮ್ಯಾಲೊಂದು ಬಣ್ಣ ಬಣ್ಣದ ಜೋಕರ್ ಟೋಪಿ ಹಾಕಿರತಿದ್ದ. ಅದರ ತುದಿಗಿ ಒಂದು ಗೊಂಡೆ ಬಿಟ್ಟಿರತಿದ್ದ. ‘ಗರ್ದಿ ಗಮ್ಮತ್ತು ನೋಡ್ರಿ’ ಅನ್ಕೊಂತೇ ತಲಿ ಮ್ಯಾಲಿನ ಗೊಂಡೆ ಅಲ್ಲಾಡಸವನು. ನಮಗ ಬಾಳ ಮಜಾ ಅನಸೂದು. ಹಂಗೇ ಹೇಳಕೊಂತ ಮ್ಯಾಲ ನಿಲ್ಲಸಿರೋ ಗೊಂಬೆ ಪರಕಾರ ಎತ್ತೂದು ಇಳಸೂದು ಮಾಡವನು. ಆವಾಗ ಇನ್ನೂ ಮಜಾ ಅನಸೋದು. ಅಂವಾ ಹಂಗ ಬಾರಸತಾ ಯಾವಾಗ ಗೊಂಬಿ ಡ್ರೆಸ್ ಮ್ಯಾಲ ಕೆಳಗ ಮಾಡ್ತಾನಂತ ಬಾಯಿ ತಕ್ಕೊಂಡು ನೋಡ್ಕೊಂತ ನಿಲ್ಲತಿದ್ದಿವಿ.

ಅದು ಆವಾಗ ನಮಗೆಲ್ಲಾ ಭಯಂಕರ ಮನರಂಜನೆ. ಸಂತಿ, ಜಾತ್ರೆಯೊಳಗ ಈ ಗರ್ದಿ ಗಮ್ಮತ್ತಿನವನ ತಾಳದ್ದೇ ಒಂದು ರಮಜು ಇರತಿತ್ತು. ಆ ತಾಳದ ಆವಾಜ್ ಮ್ಯಾಲೇ ಗರ್ದಿ ಗಮ್ಮತ್ತು ಬಂತು ಅಂತ ನಾವು ಜಿಕ್ಕೊಂತ ಓಡಿ ಹೋಗತಿದ್ದಿವಿ. ಆ ಗರ್ದಿ ಗಮ್ಮತ್ತಿನ ಡಬ್ಬಿನೇ ಬಾಳ ಮಜವಾಗಿರತ್ತಿತ್ತು. ಅದಕ್ಕ ಮಾಡಿರೋ ಡೆಕಾರೇಶನ್, ಡಿಜೈನ್, ಮ್ಯಾಲ ನಿಲ್ಲಿಸಿರೋ ಗೊಂಬೆ. ಒಳಗೆ ಚಿತ್ರಗಳನ್ನು ಎತ್ತುವ, ಇಳಿಸುವ ಕಸರತ್ತಿಗಾಗಿ ಕಟ್ಟಿ ಇಳಿಬಿಟ್ಟು ಸಿಕ್ಕಿಸಿದ ದಾರಗಳು. ಅದನ್ನು ಎಲ್ಲೆಂದರಲ್ಲಿ ನಿಲ್ಲಿಸಲು ಬರುವಂತೆ ಮಾಡಿಕೊಂಡ ಕಾಲುಗಳು, ತಾಳ ತಪ್ಪದಂಗ ಟಳಂಗ್.. ಟಳಂಗ್. ಅಂತ ಬಾರಿಸೋ ಆ ತಾಲೀಮು... ಅವೆಲ್ಲಾ ಈಗಲೂ ನನ್ನ ಕಣ್ಣ ಮುಂದ ಕಟ್ಟಿದಂಗಿದೆ. ಕಿವಿ ಬಾಜೂ ಸುತ್ತುವಂಗಿದೆ.

ಸಾಲಿ ಸೂಟಿ ಕೊಟ್ರ ಮುಗೀತು ನಮ್ಮ ಕಿತಾಪತಿ ಸುರು ಆಗ್ತಿತ್ತು. ಬಿಸಿಲಲ್ಲಿ ಕನ್ನಡಿಯಿಟ್ಟು, ರಟ್ಟಿನ ನಡುವ ಒಂದು ಫಿ಼ಲ್‍ಂ ಸಿಕ್ಕಿಸಿ. ಆ ಬಿಸಿಲಿನ ಛಾಯೆಯೊಳಗ ಆ ರಟ್ಟ ಅಡ್ಡ ಹಿಡದು ಸಿನೇಮಾ ಮೂಡಿಸೋ ಪ್ರಯತ್ನ ಮಾಡಿ, ಅದು ಗ್ವಾಡಿ ಮ್ಯಾಲ ಮೂಡಿದಾಗ ಸಿಕ್ಕಾಪಟ್ಟೆ ಖುಷಿಯಾಗತಿತ್ತು. ಮನಿಯೊಳಗ ಅವ್ವ, ಅಕ್ಕ ‘ಹೋಗಿ ಹೋಗಿ ಆ ಕನ್ನಡಿಗ್ಯಾಕ ಬೆನ್ನ ಬಿದ್ದಿದಿ’ ಅಂಥ ಬೈದ ಮ್ಯಾಲೂ ಆ ಪ್ರಯೋಗ ಮಾಡೂದು ಬಿಟ್ಟಿರಲಿಲ್ಲ. ಅಂಥದೇ ಒಂದು ಪ್ರಯೋಗವನ್ನ ಮನೆಯ ಹಿಂದಿರೋ ದೇವಸ್ಥಾನದಲ್ಲಿ ಮಾಡಾಕ ಹೋಗಿ, ಹಗಲು ಹೊತ್ತಿನಲ್ಲಿ ದೇವರ ಬಾಗಿಲ ಹಾಕಿ, ಒಳಗೆ ಕುಳಿತು ಹೊರಗಿನಿಂದ ಬಾಗಿಲ ಕಿಂಡಿಯಿಂದ ತೂರಿ ಬರೋ ಕಿರಣಕ್ಕೆ ಅಡ್ಡಲಾಗಿ ಆ ಫಿ಼ಲ್‍ಂ ಹಿಡಿದು ದೇವರ ಮೂರ್ತಿಯ ನೆತ್ತಿಯ ಮ್ಯಾಲ ಸಿನೇಮಾ ಮೂಡಿಸುವಾಗ ಯಾರೋ ಭಕ್ತರು ಬಂದು ಬೈದು, ಎರಡೇಟು ಕೊಟ್ಟಾಗ ಸಿನೇಮಾ ಮೂಡಿಸೋ ಉಮೇದು ಜರ್ರನೇ ಇಳಿದು ಹೋದಂಗಿತ್ತು.

ಗರ್ದಿ ಗಮ್ಮತ್ತಿನಲ್ಲಿ ನೋಡೋ ಚಿತ್ರಗಳು ದೊಡ್ಡದಾಗಿ ಕಾಣುತ್ತಿದ್ದವು. ಅದರಲ್ಲೂ ಅವನು ಒಂದೊಂದು ಚಿತ್ರವನ್ನು ಕುರಿತು ಹೇಳೋ ರೀತಿನೇ ಬಾಳ ಮಜ ಅನಿಸತಿತ್ತು. ಇಂಥಾ ಗರ್ದಿ ಗಮ್ಮತ್ತು ಈಗ ಕೇವಲ ನನ್ನಂಥವರ ನೆನಪು ಮಾತ್ರ. ಆ ಭಯಂಕರ ಬಿಸಿಲಲ್ಲೂ ಕೆಲವರು ಕರಡಿಗಳನ್ನು ಹಿಡಕೊಂಡು ಆಡಸಲಿಕ್ಕೆ ಬರವರು. ಅವರೂ ಮಧ್ಯಾಹ್ನದ ಹೊತ್ತಲ್ಲಿ ಈ ಬಸರೀಗಿಡದ ಕೆಳಗ ಬಂದು ಊಟ ಮಾಡತಿದ್ದರು. ಅಂಥಾ ಆ ಬಸರೀ ಗಿಡ ಮುಂದ ನಾನು ಹೈಸ್ಕೂಲ ಬರೂ ಮಟ ಮಂಗ ಮಾಯ ಆಯ್ತು. ಅದು ಇರೋ ಜಾಗದೊಳಗ ಎರಡು ಮೂರು ಅಂಗಡಿಗಳು ತಲಿ ಎತ್ತಿದವು. ಬಸರೀಗಿಡ ಹೋದ ಮ್ಯಾಲ ನಮಗೆಲ್ಲಾ ಏನೋ ಒಂದು ದೊಡ್ಡ ಇಮಾರತು ಕಳಕೊಂಡಂಗ ಅನಸ್ತು.

ಆ ಜಾಗ ಬಾಳ ಬಣಬಣ ಆಗಿತ್ತು. ಓಣಿ ಜನರು, ಅದರ ನೆರಳಿಗಿ ಆಸರೆ ಪಡಿಯವರು, ಅಲ್ಲಿ ಕುಂತು ತರಾವರಿ ವ್ಯವಹಾರ ಮಾಡವರು ‘ಎಂಥಾ ಗಿಡ ಕಡಿಸಿಬಿಟ್ಟರು’ ನೋಡ್ರಿ ಅನ್ಕೊಂತ ಹಳಾಳಿ ಮಾಡ್ತಾ ಹೋಗವರು. ಬಸರೀಗಿಡ ಕಡದು, ಕೆಳಗ ಉರುಳಿಸಿ ವಾರಗಟ್ಟಲೆ ಅದನ್ನ ಕತ್ತರಿಸಿ, ಸಣ್ಣಸಣ್ಣ ತುಂಡು ಮಾಡಿ, ಟ್ರ್ಯಾಕ್ಟರದೊಳಗ ಹೇರಕೊಂಡು ಹೋಗೂ ಮುಂದ ನನಗಂತೂ ಬಾಳ ಬ್ಯಾಸರಾಗಿತ್ತು. ಅಂಥಾ ದೊಡ್ಡ ಗಿಡ ವಾರದೊಳಗ ಇತ್ತೋ ಇಲ್ಲೋ ಅನ್ನೂವಂಗ ಆಗಿತ್ತು. ಆಮ್ಯಾಗ ನಮ್ಮ ಮನಿ ಕಡಿ ಗರ್ದಿ ಗಮ್ಮತ್ತು ಬರೂದೂ ಕಡಿಮಿ ಆಯ್ತು. ಅಲ್ಲಿ ಎದ್ದಿರೋ ಅಂಗಡಿಗಳ ಬೆನ್ನ ಮ್ಯಾಲ ಸಿನೇಮಾ ಪೋಸ್ಟರ್ ಗಳು ಕಾಣಾಕ ಸುರು ಆಯ್ತು. ಊರು ಬಯಲಾಗ್ತಾ ಬಂತು.. ಬದಲಾಗ್ತಾ ಬಂತು.. ಎಷ್ಟು ಬದಲಾಯ್ತು ಅಂದ್ರೆ ಅಂಥಾ ಆ ಲಟ್ಟಾ ಗಿಡ ಅಲ್ಲಿತ್ತು ಅನ್ನೋ ಯಾವ ಗುರುತೂ ಈಗಲ್ಲಿ ಉಳಿದಿಲ್ಲ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018