2nd May 2018

ತೇಲುವ ಊರಿನ ಕಣ್ಮರೆ!

ರಾಜು ಹೆಗಡೆ

ಲಾಂಚಿನ ಮೇಲೆ ಬರೋದು ಇಷ್ಟೇ ಅಲ್ಲ. ಪೇಪರ್, ಪೋಸ್ಟು ಇತ್ಯಾದಿ. ಟಾಪಿನ ಮೇಲಿನ ಡ್ರೈವರ್ ಕೆಳಗೆ ಎಸೆಯುತ್ತಿದ್ದ. ಅದು ಹಾರಿ ಹೊಳೆಯಲ್ಲಿ ಬೀಳದೇ ಇರುವುದು ಪುಣ್ಯ. ಮೀನಿನ ವ್ಯಾಪಾರವೂ ಇಲ್ಲಿ ನಡೆಯುತ್ತಿತ್ತು.

ಈಗ ಅಹ್ಮದ, ಕೃಷ್ಣ ಎಲ್ಲ ಎಲ್ಲಿಗೆ ಹೋಗಿರಬಹುದು? ಮಿಷನ್ನು ಮಾರಿ, ಹಲಗೆಯನ್ನೆಲ್ಲ ಬಿಡಿಸಿ ದಡದ ಮೇಲೆ ಎಸೆದಿರಬಹುದೇ? ಕೆಳಗೆ, ಹಿಂದೆ ಕುಳಿತು ಗಂಟೆ ಅವಾಜಿಗೆ ಅನುಗುಣವಾಗಿ ಮಿಷನ್ನು ನಡೆಸುತ್ತಿದ್ದನಲ್ಲ, ಅವನ ಹೆಸರು ಮರೆತುಹೋಗಿದೆ —ಅವನನ್ನು ಕೆಲಕಾಲ ಹೊನ್ನಾವರ ಸರ್ಕಲ್ ಹತ್ತಿರ ಇರುವ ಹಣ್ಣಿನ ಅಂಗಡಿಯಲ್ಲೆಲ್ಲೋ ನೋಡಿದ ನೆನಪು. ಅದು ಇತ್ತೀಚೆಗಲ್ಲ, ಸುಮಾರು ವರ್ಷಗಳ ಹಿಂದೆ. 20—30 ವರ್ಷ ಇಡೀ ದಿನ ಶರಾವತಿ ಹೊಳೆಯಲ್ಲಿ ಇದ್ದ ಇವರೆಲ್ಲ ಎಲ್ಲಿ ಹೋದರು? ಕೇರಳದ ಮಂದಿ ಎಲ್ಲಾದರೂ ಸೆಟ್ಲಾಗಿ ಆರಾಮಾಗಿ ಇದ್ದುಬಿಡುತ್ತಾರೆ, ನಾವು ಮುಂಚಿನಿಂದಲೂ ಇಲ್ಲೇ ಇದ್ದವರು ಎಂಬಷ್ಟು ಸಹಜವಾಗಿ. ಅವರಿಗೆ ಈಗ ನಮ್ಮ ಹೊಳೆ ನೆನಪಾಗಬಹುದೇ?

ನಮ್ಮೂರ ದಾಸಪೈರ ಅಂಗಡಿಯ ಹತ್ತಿರ ಸಂಜೆ, ಮುಂಜಾನೆಯ ಟೈಮಿನಲ್ಲಿ ಜನರ ಓಡಾಟದ ಗಡಿಬಿಡಿ ಹೆಚ್ಚಾಗುತ್ತಿತ್ತು. ಹೊಳೆ ದಂಡೆಯ ಮೇಲಿರುವ ಅವರ ಅಂಗಡಿಯ ಹತ್ತಿರವೇ ಲಾಂಚಿನ ಧಕ್ಕೆ (ನಿಲ್ದಾಣ) ಇತ್ತು. ಧಕ್ಕೆ ಎಂದರೆ ಮತ್ತೇನಲ್ಲ. ಮೂರು ನಾಲ್ಕು ಮರದ ತುಂಡುಗಳನ್ನು ಜೋಡಿಸಿ ಇಟ್ಟಿದ್ದರು. ಅದಕ್ಕೆ ತಾಗಿ ಲಾಂಚು ನಿಲ್ಲುತ್ತಿತ್ತು. ವಿಮಾನಿಗೆಲ್ಲ `ಪ್ಯಾಡ್’ ಇದ್ದ ಹಾಗೆ, ಲಾಂಚಿಗೆ ಇಳಿಯಲು ಅನುಕೂಲವಾಗಲೆಂದು ಲಾರಿ ಟೈಯರ್ ಹಾಗೂ ಹಿಡಿದುಕೊಳ್ಳಲು ಹಗ್ಗ ಇಟ್ಟಿದ್ದರು.

ನಮ್ಮೂರಿಗೆ ಲಾಂಚು ಬರುವಾಗ ನಮ್ಮೂರಿಗೆಂದೇ ಬರಬೇಕಾಗಿತ್ತು. ಉಳಿದ ಊರಿನ ಬಂದರೆಲ್ಲ ಅದು ಹೋಗುವ ದಾರಿಯಲ್ಲಿದ್ದವು. ಹೀಗಾಗಿ ಅವರಿಗೆ ನಿಲ್ಲಿಸಲು ತ್ರಾಸೇನೂ ಆಗುತ್ತಿರಲಿಲ್ಲ. ಆದರೆ ನಮ್ಮೂರಿಗೆ ಹಾಗಾಗಿರಲಿಲ್ಲ. ನಮ್ಮೂರಿನ ಹತ್ತಿರ ಹೊಳೆಯ ನಡುವೆ ಪುಟ್ಟ ಕುರ್ವೆ (ನಡುಗಡ್ಡೆ) ಇದೆ. ಕುರ್ವೆ ಆಚೆಬದಿಯಿಂದ ಲಾಂಚು ಹೋಗುವ ದಾರಿ. ಇಲ್ಲಿ ನೀರು ಕಮ್ಮಿ ಇದೆ ಎಂದೋ, ಆಚೆಗೆ ಮತ್ತೆರಡು ಬಂದರಿದೆ ಎಂದೋ ಆ ದಾರೀಲೇ ಹೋಗುತ್ತಿದ್ದರು. ಇದರಿಂದ ನಮ್ಮೂರಿಗೆ ಬರಬೇಕೆಂದರೆ ಸ್ಪೆಷಲ್ಲಾಗಿ ತಿರುಗಿಸಿಕೊಂಡು ಬರಬೇಕಾಗಿತ್ತು. ಆದರೆ ಒಂದು ದಿನವೂ ತಪ್ಪದೆ ಇಲ್ಲಿ ನಿಲ್ಲಿಸುತ್ತಿದ್ದರು. ಯಾವಾಗಲೂ ಇಲ್ಲಿ ಜನ, ಸಾಮಾನು ತುಂಡ್ ತುದಿ ಇರಲಿಲ್ಲ.

ಲಾಂಚ್ ಎಂದರೆ ಏನು ಎಂಬುದನ್ನು ಸ್ವಲ್ಪ ಹೇಳಬೇಕು. ಸಮುದ್ರ ಬದಿಗೆ ಮೀನು ಲಾಂಚ್ ಇರುತ್ತದೆ. ಅದು ಚಿಕ್ಕದು. ಇಂಥದ್ದು ಈಗ ಊರೂರಿಗೆ ಒಂದಾಗಿದೆ. ಇದು ಹಾಗಲ್ಲ ಅಂಥ ಲಾಂಚಿನ ಹತ್ತುಪಾಲು ದೊಡ್ಡದು. ಸುಮಾರು ಹಡಗಿನ ಹಾಗೆ. ನೂರು ಇನ್ನೂರು ಜನ ಆರಾಮವಾಗಿ ಕುಳಿತುಕೊಂಡು ಹೋಗಬಹುದಿತ್ತು. ಇದಕ್ಕೆ ಮಾಳಿಗೆ ಬೇರೆ ಇತ್ತು. ಇದರ ಚಾರ್ಜ್ ಹೆಚ್ಚು. ಅಲ್ಲಿ ಬಸ್ಸಿನ ಸೀಟಿನಂತಹ ಸೀಟು. ಕನ್ನಡಿ ಕಿಟಕಿ, ಎದುರಿಗೆ ಒಂದು ಟೇಬಲ್ಲು, ಅದರ ಮೇಲೆ ಇಸ್ಪಿಟಿನ ಕಟ್ಟು. ಉಮೇದಿಯಿದ್ದವರು ಹೊನ್ನಾವರಕ್ಕೆ ಆಡತಾನೇ ಹೋಗಬಹುದಾಗಿತ್ತು. ನಮ್ಮೂರಿಂದ ಹೊನ್ನಾವರಕ್ಕೆ ಹೋಗಲು ಕನಿಷ್ಟವೆಂದರೆ ಮೂರು ತಾಸು ಬೇಕಿತ್ತು. ಗೇರುಸೊಪ್ಪಾದಿಂದ ಬರುವವರಿಗೆ ಸುಮಾರು ಅರ್ಧ ದಿನವೇ ಬೇಕಿತ್ತು. ಆದರೆ ಗಡಬಡೆಯೇನಿಲ್ಲ, ತೇಲುವ ಊರಿನ ಹಾಗೆ. ಮಾತುಕತೆ ಆಡುತ್ತ, ಕವಳ ಹಾಕುತ್ತ, ಆಚೆಈಚೆ ನೋಡುತ್ತ, ಜಾಗವಿದ್ದರೆ ಮಲಗಿ ನಿದ್ದೆ ಮಾಡುತ್ತ, ಆಕಳಿಸುತ್ತ, ಬೇಕಿದ್ದರೆ ಇಸ್ಪಿಟ್ ಆಡುತ್ತ, ನಿನ್ನೆಯ ಸಂಯುಕ್ತ ಕರ್ನಾಟಕ ಓದುತ್ತ... ಈ ಜಗತ್ತು ಎಷ್ಟು ಸಹಜ ಚಲನಶೀಲ!

ಮೊದಲಿಗೆ ದಿನಕ್ಕೆ ನಾಲ್ಕು ಟ್ರಿಪ್ ಹೋಗೋದು ಬರೋದು. ದಿನಾಲು ಬೆಳಿಗ್ಗೆ 7 ಗಂಟೆಗೆ ಹಾಜರ್. ಅವರಿಗೇನು ಚಕ್ಕಿಂಗ್ ಇನಿಸ್ಟೆಕ್ಟರ್ ಇರಲಿಲ್ಲ. ಇದರ ಯಜಮಾನ ಕೇರಳದಲ್ಲಿ ಇರುತ್ತಿದ್ದ. ಆದರೆ ಎಷ್ಟು ನಿಯತ್ತು. ಪ್ರತಿದಿನ ಗೇರುಸೊಪ್ಪಾದಲ್ಲಿ 4 ಗಂಟೆಗೇ ಏಳುತ್ತಿರಬೇಕು. ಅಲ್ಲಿ ಖಾಲಿ ಇರುವ ಲಾಂಚು ಮುಂದೆ ಮುಂದೆ ಬಂದಂತೆ ಜನರನ್ನು, ಅವರು ತಂದ ಲಗೇಜನ್ನು (ಅಡಿಕೆಮೊಟ್ಟೆ, ಬಾಳೆಕಾಯಿ, ಬೆಲ್ಲದ ಮಡಿಕೆ ಎಲ್ಲ) ತನ್ನ ಭೀಮನಂಥ ಹೊಟ್ಟೆಯಲ್ಲಿ ತುಂಬಿಕೊಂಡು ಡುಗುಡುಗು ಮುಂದುವರಿಯುತ್ತಿತ್ತು. ಪ್ರತಿ ಬಂದರು ಬಂದಾಗೂ ತುಸು ದೂರದಲ್ಲೆ ಮಿಷನ್ ಬಂದ ಮಾಡಿ ಹತ್ತಿರವಾದಾಗ ಜಲ್ಲಿನಿಂದ ನಿಲ್ಲಿಸಬೇಕು. ಎಷ್ಟು ದೊಡ್ಡ ಲಾಂಚು ಕ್ಷುಲ್ಲಕ ದೋಣಿಯಂತೆ ಜಲ್ಲಿನಿಂದ ನಿಲ್ಲುವದೆಂದರೇನು!

ನಮ್ಮೂರಿನ ನರಸಿಂಹ ಹೆಗಡೆಯವರು ಅಲ್ಲಿಂದ ಒಂದು ತಾಸಿನಷ್ಟು ದೂರದಲ್ಲಿರುವ ಬೇರಂಕಿಯಲ್ಲಿ ಸೊಸೈಟಿಯ ಸೆಕ್ರೆಟರಿ ಆಗಿದ್ದರು. ಪ್ರತಿದಿನ ಬೆಳಿಗ್ಗೆ —ಆದಿತ್ಯವಾರ ಒಂದನ್ನು ಬಿಟ್ಟು— ತಪ್ಪದೇ ಹೋಗುವವರು. ಆದರೆ ದಿನಾಲೂ ಕೊಂಚ ತಡವಾಗಿ ಎದ್ದು ಗಡಿಬಿಡಿಯಲ್ಲಿ ಚಾ ಕುಡಿದು ಮುಂಡನ್ನು ಉಟ್ಟುಕೊಳ್ಳುತ್ತ ಗದ್ದೆ ಹಾಳಿಯ ಮೇಲೆ ಓಡಿ ಬರುವುದು ರಂಜನೀಯ ದೃಶ್ಯವಾಗಿತ್ತು. ಅವರು ಲಾಂಚಿನವರಿಗೆ ಎಷ್ಟು ಆಪ್ತರಾಗಿದ್ದರೆಂದರೆ ಬರುವುದು ತಡವಾದರೂ ಪೋಂಕ್ ಪೋಂಕ್ ಹಾರ್ನ ಮಾಡುತ್ತ ಕಾಯುತ್ತಿದ್ದರು.

ಅಯ್ಮದ್ —ಅಂದರೆ ಅವನ ಹೆಸರು ಅಹ್ಮದ್ ಎಂದಿರಬಹುದು. ಅವನು ಸಪೂರಾಗಿ ಬೆಳ್ಳಗೆ ಚಂದವಾಗಿದ್ದ. ಗರಿಗರಿ ಇಸ್ತ್ರಿ ಹೊಡೆದ ಬೆಳ್ಳಗಿನ ಲುಂಗಿ, ಅಂಗಿ ಹಾಕಿಕೊಳ್ಳುತ್ತಿದ್ದ. ಸ್ವಲ್ಪ `ಅಮಸಾಣಿ’ ಕಳೆಯೂ ಇತ್ತು. ದುಡ್ಡುಗಿಡ್ಡು ಕೊಡುವಲ್ಲಿ ಹೆಚ್ಚು ಕಡಿಮೆಯಾದರೆ ಬಯ್ದಂತೆ ಮಾತಾಡುತ್ತಿದ್ದ. ಜನರ ಮುಖ ನೋಡುವುದು ಕಡಿಮೆ. ಆದರೆ ಕೃಷ್ಣ ಹಾಗಿರಲಿಲ್ಲ. ಹೆಸರಿಗೆ ತಕ್ಕಹಾಗೆ ಕಪ್ಪಾಗಿ, ದೊಡ್ಡ ಠೊಣಪನ ಹಾಗಿದ್ದ. ಮಕ್ಕಳ ಕಂಡರೆ ಚೂಟುತ್ತ, ನಗುತ್ತಿದ್ದ. ಹಿಂದೆ ಅವನು ಮಿಲ್ಟ್ರಿಯಲ್ಲಿ ಇದ್ದ ಎನ್ನುತ್ತಿದ್ದರು. ಇವರಿಬ್ಬರೂ ಟಿಕೆಟ್ ಕೊಡುವವರಾಗಿದ್ದರು.

ಅಯ್ಮದ ಕೆಲ ಕಾಲದ ನಂತರ ಮಾಯವಾದ. ಆಗ ಇನ್ನು ಲಾಂಚ್ ಚೆನ್ನಾಗಿಯೇ ನಡೆಯುತ್ತಿತ್ತು. ಅವನೇನೋ ಎರಡೆರಡು ಟಿಕೆಟ್ ಪುಸ್ತಕ ಮಾಡಿಕೊಂಡಿದ್ದನಂತೆ. ಒಂದನ್ನು ಮಾತ್ರ ಯಜಮಾನರಿಗೆ ತೋರಿಸಿ ಲೆಕ್ಕ ಒಪ್ಪಿಸುತ್ತಿದ್ದನಂತೆ. ಮತ್ತೊಂದರ ದುಡ್ಡೆಲ್ಲ ಅವನ ಕಿಸೆಗೆ. ಇದನ್ನು ಒಮ್ಮೆ ಲಾಂಚಿನಲ್ಲೇ ಇದ್ದ ಅವರ ಪೈಕಿಯವ ಪತ್ತೆಹಚ್ಚಿ ಹೇಳಿದನಂತೆ. ಅವರು ಹಿಡಿದು ಕೆಲಸದಿಂದ ತೆಗೆದುಹಾಕಿದರಂತೆ. ಸರಿಯಾಯ್ತು ಅವನಿಗೆ! ಕೃಷ್ಣನ ಮೇಲೂ ಕೆಲವು ಆಪಾದನೆಗಳಿದ್ದವು. ಆದರೆ ಅದು ದುಡ್ಡಿಗೆಗಿಡ್ಡಿಗೆ ಸಂಬಂಧಿಸಿದ್ದಲ್ಲ. ನನಗೆ ನಮ್ಮೂರಿನ ಮೋಹನ ಒಮ್ಮೆ ಹೇಳಿದ. ಅವನಿಗೆ ಸಲಿಂಗ ರತಿ —ಆಗ ಈ ಹೆಸರು ಗೊತ್ತಿರಲಿಲ್ಲ— ಚಟವಿದೆ ಎಂದು. ಅವನ ಜೊತೆ ಯಾರೋ ಒಬ್ಬ ಯಾವಾಗೋ ರೂಮಿನಲ್ಲಿ ಮಲಗಿದ್ದಾಗ... ಆಗ ಇಂಥ ಸುದ್ದಿಯನ್ನೆಲ್ಲ ನಾವು ಖಾಸಾ ದೋಸ್ತರ ಜೊತೆ ಮಾತಾಡಿಕೊಳ್ಳುತ್ತಿದ್ದೆವು... ನನಗದು ವಿಚಿತ್ರ ರೋಮಾಂಚನ ಉಂಟುಮಾಡಿತ್ತು.

ಲಾಂಚ್ ನಡೆಸಲು ಮತ್ತೂ ರಾಶಿ ಜನ ಇದ್ದರು. ಮುಂದೆ ಟಾಪಿನ ಮೇಲಿರುವ ಪೆಟ್ಟಿಗೆಯಂತಹ ರೂಮಿನಲ್ಲಿ ಒಬ್ಬ ಡ್ರೈವರ. ಅವನ ಹತ್ತಿರ ಸ್ಟೇರಿಂಗು, ಮಿಷನ್ ಬಂದ ಮಾಡುವುದು, ಚಾಲು ಮಾಡುವುದು ಅವನಲ್ಲ. ಅವನ ಹತ್ತಿರ ಗಂಟೆಗೆ ಕಟ್ಟಿದ ದಾರವಿತ್ತು. ಒಂದು ಸಲ ಡಣ್ ಮಾಡಿದರೆ ಕೆಳಗಿದ್ದವ ಮಿಶನ್ ಬಂದ್ ಮಾಡಬೇಕು. ಎರಡು ಹೊಡೆದರೆ ಚಾಲು ಮಾಡುವುದು. ಮೂರು ಹೊಡೆದರೆ ಜೋರು ಮಾಡುವುದು. ಎಲ್ಲರಿಗೂ ಸ್ನಾನ, ಸಂಡಾಸು, ಅಡಿಗೆ ಎಲ್ಲ ಅಲ್ಲೇ. ಹಿಂದು ಬದಿಗೆ ಮೀನು ಕೊಚ್ಚಿ ಬೀಸು ಕಲ್ಲಿನಲ್ಲಿ ಬೀಸಿ, ಘಮಘಮ ಬೆಳ್ಳುಳ್ಳಿ ಪರಿಮಳದಲ್ಲಿ ಒಬ್ಬ ಅಡುಗೆ ಮಾಡುತ್ತಿದ್ದ. ಒಬ್ಬ ಹಗ್ಗ ಕಟ್ಟಿದ ಬಕೇಟಿನಲ್ಲಿ ನೀರು ಮೊಗೆದುಕೊಂಡು ಬಸಬಸನೆ ಮೀಯುತ್ತಿದ್ದ. ಇದಾವುದೂ ಸಂಬಂಧವೇ ಇಲ್ಲದಂತೆ ಜನ ಅವರವರ ಲೋಕದಲ್ಲಿ ಕುಳಿತು ಹೋಗುತ್ತಿದ್ದರು.

ಬೆಳಿಗ್ಗೆ ಹೋಗುವ ಗಡಿಬಿಡಿಯಾದರೆ, ಸಂಜೆ ಇನ್ನಷ್ಟು ಸಂಭ್ರಮ. ನಮ್ಮೂರಲ್ಲಿ ಲಾಂಚಿಗೆ ಸಾಮಾನು ಬರುತ್ತದೆ, ಪೇಪರ್ ಬರುತ್ತದೆ, ನೆಂಟರು ಬರುತ್ತಾರೆ ಎಂದು ಮತ್ತು ಹೀಗೆ ಬರುವವರ ನೋಡಲೆಂದು ಸುಮಾರು ನಾಲ್ಕು ಗಂಟೆಯಿಂದಲೇ ಜನ ಜಮಾಯಿಸುತ್ತಿದ್ದರು. ಧಕ್ಕೆ ಮೇಲೆ ಕೈಕಾಲು ಹಾಕಲು ಜಾಗವಿರುತ್ತಿರಲಿಲ್ಲ. ದೂರದಲ್ಲಿ ತ್ರಾಸಿಕರವಾಡಿ ಹತ್ತಿರ ಬರುವಾಗಲೇ ಲಾಂಚು ಕಾಣುತ್ತಿತ್ತು. 5 ಗಂಟೆಗೆ ಹಾಜರು. ಚಳಿಗಾಲ, ಬೇಸಿಗೆಕಾಲ ಉಪ್ಪೊಣಿ, ಗೇರುಸೊಪ್ಪಾಗಳಲ್ಲಿ ಆಟ (ಯಕ್ಷಗಾನ)ವಿದ್ದರೆ ಅದರ ಪ್ರಚಾರದ ಮೈಕ್ ಇರುತ್ತಿತ್ತು: `ಬನ್ನಿರಿ! ನೋಡಿರಿ!! ಆನಂದ ಪಡೆಯಿರಿ!! ಚಿಟ್ಟಾಣಿಯವರ ಮನ ತಣಿಸುವ ಕೀಚಕ, ಜಲವಳ್ಳಿಯವರ ಭೀಮ, ಗಪ್ಪಣ್ಣಿಯವರ ನಕ್ಕುನಗಿಸುವ ಹಾಸ್ಯ’ —ಊರಿನ ಮೂಲೆಮೂಲೆಗೆ ಬಡಿದು ಪ್ರತಿಧ್ವನಿಸುತ್ತಿತ್ತು. ಲಾಂಚಿನ ಮಾಳಿಗೆ ಮೇಲೆ ಕುಳಿತು ಪ್ರಚಾರ ಮಾಡುತ್ತಿದ್ದ ವ್ಯಕ್ತಿ ಅರಿಶಿಣ, ಕೆಂಪು ಬಣ್ಣದ ಹ್ಯಾಂಡ್ ಬಿಲ್‍ಗಳನ್ನು ಪ್ರತಿ ಬಂದರಿನಲ್ಲೂ ಒಂದಿಷ್ಟು ಒಗೆಯುತ್ತಿದ್ದ. ನಾವೆಲ್ಲ ಮಕ್ಕಳು ಮೈಮೇಲೆ ಬಿದ್ದು ಹಿಡಿದು ಓಡುತ್ತಿದ್ದೆವು. ಆಗಲೇ ನಮ್ಮೊಳಗೆ ಆಟ ಕುಣಿಯುತ್ತಿತ್ತು.

ಲಾಂಚಿನ ಮೇಲೆ ಬರೋದು ಇಷ್ಟೇ ಅಲ್ಲ. ಪೇಪರ್, ಪೋಸ್ಟು ಇತ್ಯಾದಿ. ಟಾಪಿನ ಮೇಲಿನ ಡ್ರೈವರ್ ಕೆಳಗೆ ಎಸೆಯುತ್ತಿದ್ದ. ಅದು ಹಾರಿ ಹೊಳೆಯಲ್ಲಿ ಬೀಳದೇ ಇರುವುದು ಪುಣ್ಯ. ಮೀನಿನ ವ್ಯಾಪಾರವೂ ಇಲ್ಲಿ ನಡೆಯುತ್ತಿತ್ತು. ಟಾಪಿನ ಮೇಲೆ ಕೆಲವರು ಮೀನು ಮಾರುವ ಗಡತರ ಹೆಂಗಸರು ಕುಳಿತಿರುತ್ತಿದ್ದರು. ಅವರು ಬಂಗಡೆ, ತಾರ್ಲೆ... ಹೀಗೆ ಹೆಸರು ಹೇಳಿ ರೇಟು ಹೇಳುವುದು, ಕೆಳಗಿದ್ದವರು ಬಹಳ ಚೌಕಾಸಿ ಮಾಡದೇ ಖರೀದಿಸುವುದು, ಇವರು ತೆಂಗಿನ ನಾರು ಅಥವಾ ಬಾಳೆಪಟ್ಟೆ ಬಳ್ಳಿಗೆ ಮೀನುಗಳ ಸರಮಾಡಿ ಕೆಳಗೆ ಒಗೆಯುವುದು.

ಪ್ರತಿದಿನವೂ ಗೇರುಸೊಪ್ಪಾದಿಂದ ಹೊರಟ ಇದು ಸರಳಿಗೆ, ಮಾವಿನಹೊಳೆ, ಸಂಶಿ, ಉಪ್ಪೋಣಿ, ಮಾಗೋಡು, ಬೇರಂಕಿ, ಮೂಡ್ಕಣಿ, ಇಡಗುಂಜಿ, ಚಿಕಣಿಮುಲ್ಲೆ ದಾಟಿದಾಗ ದೂರದಲ್ಲಿ ಉದ್ದವಾದ ಶರಾವತಿ ಸೇತುವೆ. ಅದರ ಮೇಲೆ ಇರುವೆಯಂತೆ ಓಡಾಡುವ ಬಸ್ಸು, ಲಾರಿ, ಕಾರು ಕಾಣಿಸುತ್ತ ಹತ್ತಿರ ಹತ್ತಿರವಾಗಿ ಸೇತುವೆ ದೊಡ್ಡದಾಗಿ ನಮ್ಮ ಲಾಂಚು ಆ ಸೇತುವೆಯ ಎರಡು ದೊಡ್ಡ ಕಂಬಗಳ ನಡುವೆ ಭರ್‍ಭರ್ ಎನ್ನುತ್ತಾ ನುಗ್ಗಿ ಆಚೆ ಹೋದಾಗ ಹೊನ್ನಾವರ ದಡವನ್ನು ಪ್ರತ್ಯಕ್ಷವಾಗಿಸುತ್ತಿತ್ತು. ಅಲ್ಲಿ ಚಿತ್ರವಿಚಿತ್ರ ಶಬ್ದ, ವಾಸನೆ ಎಲ್ಲರಲ್ಲಿ ಆಕ್ರಮಿಸುತ್ತಿದ್ದವು. ಲಾಂಚು ನಿಧಾನವಾಗಿ ಹೋಗಿ ಸುತ್ತಮುತ್ತಲಿರುವ ಪುಟ್ಟ ದೋಣಿಗಳ ನಡುವೆ ಮಹಾರಾಜನಂತೆ ನಿಂತಾಗ ಇಸ್ಪೀಟು ಆಟ ಬಂದಾಗಿ, ನಿದ್ದೆಯಲ್ಲಿದ್ದವರು ಎಚ್ಚೆತ್ತು ಇಳಿಯಲು ರೆಡಿಯಾಗುತ್ತಿದ್ದರು.

ನಾನು ದೊಡ್ಡವನಾದಂತೆ ಲಾಂಚಿನ ತಿರುಗಾಟ ಕಡಿಮೆಯಾಗುತ್ತ ಬಂತು. ಚಿಕ್ಕವರಿದ್ದಾಗ ಬಸ್ಸಿಗೆ ಹೋಗುವುದು ಅಪರೂಪ. ಅವುಗಳ ಸಂಖ್ಯೆ ಕಡಿಮೆಯಿತ್ತು ಮತ್ತು ನಮ್ಮೂರಿಂದ ಬಸ್ಸಿಗೆ ಹೊಗಲು ದೋಣಿ ದಾಟಿ ಮತ್ತಷ್ಟು ನಡೆಯಬೇಕಿತ್ತು. ಅಲ್ಲಿ ಯಥಾ ಪ್ರಕಾರ ಕಾಯಬೇಕು. ಆಮೇಲೆ ಕ್ರಮೇಣ ಬಸ್ಸಿನ ಸಂಖ್ಯೆ ಹೆಚ್ಚಾಯಿತು. ಜನ ಕಷ್ಟಪಟ್ಟಾದರೂ ಅದಕ್ಕೇ ಹೋಗುತ್ತಿದ್ದರು. ಸ್ಟ್ಯಾಂಡಿಗೆ ಹೋಗುವವರೆಗೆ ಕಷ್ಟವಾದರೂ ಹೋದಮೇಲೆ ಎರಡು ತಾಸಿಗೆ ಹೊನ್ನಾವರವನ್ನು ಮುಟ್ಟಬಹುದಿತ್ತು.

ಕ್ರಮೇಣ ಲಾಂಚಿಗೂ ಸುರಳೀತವಾಗಿ ಹೊಗಲು ಹೊಳೆ ನೀರು ಸಾಕಾಗಲಿಲ್ಲ. ಮಣ್ಣೂ ತುಂಬಿ ಅಲ್ಲಿ ಲಾಂಚಿನ ಅಡಿಯಲ್ಲಿರುವ ಫ್ಯಾನಿಗೆ ಸಿಗುತ್ತಿತ್ತು. ಭರತದ ನೀರು ಬರುವವರೆಗೆ 1—2 ತಾಸು ಕಾಯಬೇಕಿತ್ತು. ಕೆಲವರು ಹಳೆ ಮಂದಿ ಇಸ್ಪೀಟ್ ಆಡುತ್ತ, ಪೊಕಳೆ ಹೊಡೆಯುತ್ತ ಕಾಯುತ್ತಿದ್ದರು. ಉಳಿದವರು `ಸಾಯಲಪ್ಪ! ನನಗಿವತ್ತು ಅರ್ಜಂಟಿತ್ತು’ ಎಂದು ಬೇಸರ ಪಟ್ಟುಕೊಂಡು ಬಸ್ ಹತ್ತುತ್ತಿದ್ದರು. ಮೊದಮೊದಲು ಆಗಾಗ ಹೀಗಾದರೆ ನಂತರ ದಿನವೂ ಇದೇ ಕತೆಯಾಯಿತು. ಭರತದಲ್ಲಿ ಮಾತ್ರ ಚಲಿಸಲು ಸಾಧ್ಯವಾಯಿತು. ಹೆಚ್ಚಿನ ಜನ ಇದರ ಸಹವಾಸವನ್ನೇ ಬಿಟ್ಟರು. ಎಲ್ಲಾದರೂ ಸಾಮಾನು ಸಂಗ್ರಹವಿದ್ದರೆ ಇದರ ಮೇಲೆ ಹೇರಿ, ಅವರು ಮಾತ್ರ ದೋಣಿ ದಾಟಿ ಬಸ್ ಹಿಡಿಯುತ್ತಿದ್ದರು. ಕಾಲ ಕಳೆದಂತೆ ಇದೂ ಇಲ್ಲದಾಯಿತು. ಚಿಕ್ಕಚಿಕ್ಕ ಮಿಷನ್ ದೋಣಿಗಳು ಊರಿಗೊಂದರಂತೆ ಬಂದವು. ಅದು ಇದಕ್ಕಿಂತ ಅನುಕೂಲ. ಹೀಗಾಗಿ ಲಾಂಚು ಒಂದೆರಡು ವರ್ಷ ಖಾಲಿಖಾಲಿ ತಿರುಗಿತು. ಅವುಗಳ ಸಂಖ್ಯೆ 4 ಇದ್ದದ್ದು ಎರಡಾಗಿ ನಿಂತು ಹೋಯಿತು. ಇವೆಲ್ಲ ಜನರಿಗೆ ಎಷ್ಟು ಒಗ್ಗಿತ್ತೆಂದರೆ, ನಾಳೆಯಿಂದ ಲಾಂಚಿನ ಸಂಚಾರ ಬಂದಾಗುತ್ತದೆ ಎಂದು ಗೊತ್ತಾದಾಗ ಯಾರಿಗೂ ಏನೂ ಅನಿಸಿದ ಹಾಗೆ ಕಾಣಲಿಲ್ಲ.

ಒಂದು ಕಾಲದಲ್ಲಿ ಈ ಹೊಳೆಯ ಎರಡೂ ದಡಗಳಲ್ಲಿ ಜೀವತಂದ, ಜೀವನದ ಭಾಗವೇ ಆಗಿದ್ದ ಇದು ಇನ್ನುಮುಂದೆ ಶಾಶ್ವತವಾಗಿ ಇಲ್ಲವಾಗುತ್ತದೆ ಎಂದಾಗ ಯಾರಿಗೂ ಏನೂ ಅನಿಸದಿದ್ದುದನು ನೋಡಿದರೆ ಯಾಕೋ ಈ ಯಂತ್ರದ ಬೆಳವಣಿಗೆಯ ಬಗ್ಗೆ ತಣ್ಣಗೆ ಭಯವಾಗುತ್ತದೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018