2nd ಮೇ ೨೦೧೮

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ಕಾವ್ಯದಲ್ಲಿ ಬರುವ ರಾಮಚಂದ್ರ ಏಕಪತ್ನೀವ್ರತಸ್ಥನಲ್ಲ; ಆತನಿಗೆ ನಾಲ್ವರು ಪಟ್ಟಮಹಿಷಿಯರೂ, ಎಂಟು ಸಾವಿರ ಸಂಖ್ಯೆಯ ಅಂತಃಪುರ ವಾಸಿಗಳೂ ಉಂಟು!

ನಾಗಚಂದ್ರನು ತನ್ನ ಚಂಪೂ ಗ್ರಂಥಕ್ಕೆ ‘ರಾಮಚಂದ್ರ ಚರಿತ’ ಪುರಾಣವೆಂದು ಹೆಸರನ್ನಿಟ್ಟಿದ್ದರೂ, ಇದು ಸಾಮಾನ್ಯವಾಗಿ ಪಂಪ ರಾಮಾಯಣವೆಂದು ಪ್ರಸಿದ್ಧಿಗೊಂಡಿದೆ. ಇದರಲ್ಲಿಯ ಕಥೆಗೂ ವಾಲ್ಮೀಕಿಯ ರಾಮಾಯಣದ ಕಥೆಗೂ ಸಾಮಾನ್ಯವಾದ ಹೋಲಿಕೆಯಿದ್ದರೂ ಕೆಲವೆಡೆ ಬಹಳ ವ್ಯತ್ಯಾಸಗಳಿವೆ. ಕಥಾ ಸಂದರ್ಭವು ಜೈನ ಪದ್ಧತಿ ಅನುಸರಿಸಿರುವುದರಿಂದ ಜೈನ ಧರ್ಮವು ಅಲ್ಲಲ್ಲಿ ವರ್ಣಿತವಾಗಿದೆ. ಭಾಷೆಯು ನಿರ್ದುಷ್ಟವಾಗಿ, ಪ್ರೌಢವಾಗಿ, ಅಚ್ಚ ಹಳಗನ್ನಡ ಶೈಲಿಯುಲ್ಲಿ, ಸರಳವಾಗಿ ಇರುವುದರಿಂದ ಕವಿತೆಯು ಓದುಗರಿಗೆ ಬಹಳ ಆಪ್ತವಾಗುತ್ತದೆ.

ನಾಗಚಂದ್ರ ಸುಮಾರು ಕ್ರಿ.ಶ.1100ರಲ್ಲಿ ಬದುಕಿದ್ದ ಕವಿ. ಈತನಿಗೆ ‘ಅಭಿನವ ಪಂಪ’ ಎಂಬ ಬಿರುದಿದ್ದು, ಹೊಯ್ಸಳ ಬಲ್ಲಾಳನಿಂದ ಸನ್ಮಾನ ಪಡೆದಿದ್ದನೆಂದು ತಿಳಿದುಬರುತ್ತದೆ. ಅಭಿನವ ಪಂಪನ ದೇಶ, ವಂಶ ಯಾವುವೂ ಇವನ ಗ್ರಂಥಗಳಿಂದ ತಿಳಿದುಬರುವುದಿಲ್ಲ. ಆದರೆ ಅವನು ವಿಜಯಪುರಲ್ಲಿ ಮಲ್ಲಿನಾಥ ಜಿನಾಲಯವನ್ನು ಕಟ್ಟಿಸಿ ಮಲ್ಲಿನಾಥ ಪುರಾಣವನ್ನು ಬರೆದಂತೆ ಆ ಪುರಾಣದಲ್ಲಿ ಹೇಳಿದೆ. ಈ ವಿಜಯಪುರವು ಈಗಿನ ಬಿಜಾಪುರವಾಗಿರಬಹುದು. ಇವನಿಗೆ ಕವಿತಾಮನೋಹರ, ಭಾರತೀಕರ್ಣಪೂರ, ಸಾಹಿತ್ಯವಿದ್ಯಾಧರ ಮೊದಲಾದ ಬಿರುದುಗಳಿದ್ದವು.

16 ಆಶ್ವಾಸಗಳಿರುವ ಈ ಕಾವ್ಯದಲ್ಲಿ ಕಂದ (1491), ಚಂಪಕಮಾಲೆ (281), ಮತ್ತೇಭವಿಕ್ರೀಡಿತ (238), ಉತ್ಪಲಮಾಲೆ (179), ಮಹಾಸ್ರಗ್ಧರಾ (79), ಶಾರ್ದೂಲ ವಿಕ್ರೀಡಿತ (40), ಸ್ರಗ್ಧರಾ (8), ಪೃಥ್ವಿ (9), ದೃತವಿಲಂಬಿತ (3), ಮಾಲಿನಿ (3), ಮಂದಾಕ್ರಾಂತ (2), ಸ್ವಾಗತ (2), ಹರಿಣಿ (2), ಅಕ್ಕರ, ಉತ್ಸಾಹ, ತರಳ, ನವನಳಿನ, ಮತ್ತಕೋಕಿಲ, ಮಲ್ಲಿಕಾಮಾಲೆ, ರಥೋದ್ಧತ, ಲಲಿತ ಇವೆಲ್ಲವೂ ಒಂದೊಂದು ಪದ್ಯಮಾತ್ರ ದೊರೆಯುವುವು. ಒಟ್ಟು ಪದ್ಯ ಸಂಖ್ಯೆ 2843.

ಪಂಪರಾಮಾಯಣದ ಕಥೆಯು ಸಾಮಾನ್ಯವಾಗಿ ವಾಲ್ಮೀಕಿ ರಾಮಾಯಣವನ್ನು ಹೋಲುವುದಾದರೂ ಇವೆರಡಕ್ಕೂ ಅನೇಕ ವ್ಯತ್ಯಾಸಗಳಿರುವುವು. ದಶರಥನ ಮಗ ರಾಮ, ಜನಕನ ಮಗಳು ಸೀತೆ, ಅವರಿಬ್ಬರೂ ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೋದರು. ರಾವಣ ಸೀತೆಯನ್ನು ಅಪಹರಿಸಿದ, ಸುಗ್ರೀವ ಹನುಮಾದಿಗಳೊಡನೆ ರಾಮ ಸಖ್ಯ ಬೆಳೆಸಿದ, ಅವರ ಸಹಾಯದಿಂದ ರಾವಣನನ್ನು ಕೊಂದು ಸೀತೆಯನ್ನು ಬಿಡಿಸಿತಂದರು. ಲೋಕದ ಅಪವಾದಕ್ಕಾಗಿ ಸೀತೆಯನ್ನು ರಾಮ ತ್ಯಜಿಸಿದ, ಲವಕುಶರೊಡನೆ ರಾಮಲಕ್ಷ್ಮಣರ ಯುದ್ಧವಾಯಿತು —ಮುಂತಾದ ಪ್ರಸಂಗಗಳು ಎರಡೂ ರಾಮಾಯಣದಲ್ಲಿ ಸಾಮಾನ್ಯವಾಗಿವೆ. ಆದರೆ ಪ್ರಸಂಗಗಳ ಕಾರ್ಯಕಾರಣಗಳು ತೀರಾ ಭಿನ್ನವಾಗಿವೆ. ರಾಮ, ಲಕ್ಷ್ಮಣ, ವಾಲಿ, ಸುಗ್ರೀವ, ಹನುಮಂತ, ಸೀತೆ, ರಾವಣ, ವಿಭೀಷಣ ಇತ್ಯಾದಿ ಮುಖ್ಯ ಪಾತ್ರಗಳನ್ನು ಈ ಪಂಪರಾಮಾಯಣದಲ್ಲಿ ಬೇರೆ ಸ್ವರೂಪದಲ್ಲಿಯೇ ಕಾಣುತ್ತೇವೆ. ಅನೇಕ ಮಂದಿಗೆ ಜಿನಮುನಿಗಳು ಜನ್ಮಾಂತರ ನಿರೂಪಣವನ್ನು ಮಾಡಿ ಇಹಲೋಕದಲ್ಲಿಯ ಆಸೆಗಳನ್ನು ತಪ್ಪಿಸಿ ದೀಕ್ಷೆಗೊಳ್ಳುವಂತೆ ಮಾಡುವರು. ಈ ಕಥೆಯಲ್ಲಿ ರಾಮನಿಗಿಂತ ಲಕ್ಷ್ಮಣನೇ ಮುಖ್ಯ ನಾಯಕನಾಗುತ್ತಾನೆ. ಈ ವ್ಯತ್ಯಾಸಗಳು ವಾಚಕರಿಗೆ ಕುತೂಹಲವನ್ನುಂಟುಮಾಡುತ್ತದೆ. ಅವುಗಳಲ್ಲಿ ಮುಖ್ಯವಾದ ಕೆಲವು ವ್ಯತ್ಯಾಸಗಳ್ನು ಇಲ್ಲಿ ಉಲ್ಲೇಖಿಸಬಹುದು.

ದಶರಥನಿಗೆ ಕೌಸಲ್ಯೆ, (ಅಪರಾಜಿತೆ) ಕೈಕೆಯಿ, ಸುಮಿತ್ರೆಯರಲ್ಲದೇ ಸುಪ್ರಭೆಯೆಂಬ ನಾಲ್ಕನೆಯ ಹೆಂಡತಿ ಇದ್ದಾಳೆ. ನಾಲ್ವರಿಗೂ ಒಬ್ಬೊಬ್ಬ ಮಗ, ಶತ್ರುಘ್ನ ಸುಪ್ರಭೆಯ ಮಗ. ಸೀತೆ ಅಯೋನಿಜೆ ಅಲ್ಲ, ವಿದೇಹಿ ಅವಳನ್ನು ಹೆತ್ತಳು. ರಾವಣ ಕೈಲಾಸಪರ್ವತವನ್ನು ಎತ್ತಿದಾಗ ಉಂಗುಟದಿಂದ ಅದನ್ನೊತ್ತಿದ್ದವನು ಶಿವನಲ್ಲ, ವಾಲಿಭಟ್ಟಾರಕ. ರಾಮಚಂದ್ರ ಏಕಪತ್ನೀವ್ರತಸ್ಥನಲ್ಲ; ಆತನಿಗೆ ನಾಲ್ವರು ಪಟ್ಟಮಹಿಷಿಯರೂ, ಎಂಟು ಸಾವಿರ ಸಂಖ್ಯೆಯ ಅಂತಃಪುರ ವಾಸಿಗಳೂ ಉಂಟು.

ಇಲ್ಲಿ ಸೀತೆಯ ಕಾವಲಿಗಿದ್ದವನು ಲಕ್ಷ್ಮಣನಲ್ಲ. ರಾಮ ವಾಲಿಸುಗ್ರೀವರ ಜಗಳವಿಲ್ಲ; ಬದಲು ಸಾಹಸಗತಿಯೆಂಬ ಮಾಯಾವಿ ಸುಗ್ರೀವನ ರೂಪದಲ್ಲಿ ಅರಮನೆಯನ್ನು ಸೇರಿಕೊಂಡು ತಾರೆಯನ್ನೂ, ರಾಜ್ಯವನ್ನೂ ಎತ್ತಿಹಾಕಲು ಹವಣಿಸುತ್ತಾನೆ. ಆ ಮಾಯಾವಿ ಸುಗ್ರೀವನನ್ನು ರಾಮಚಂದ್ರ ಜಯಿಸಿಕೊಡುತ್ತಾನೆ. ಸಮುದ್ರಕ್ಕೆ ಸೇತು ಬಂಧನವಿಲ್ಲ. ಇಂದ್ರಜಿತು, ಕುಂಭಕರ್ಣ ಮೊದಲಾದವರು ಯುದ್ಧದಲ್ಲಿ ಸಾಯದೆ, ಸೆರೆಸಿಕ್ಕು ಕೊನೆಯಲ್ಲಿ ನಿರ್ವೇಗಪರವಾಗಿ ದೀಕ್ಷೆ ಹೊಂದುತ್ತಾರೆ. ಯುದ್ಧವನ್ನು ಗೆಲ್ಲುವ ಉದ್ದೇಶದಿಂದ ರಾವಣ ಯುದ್ಧದ ಮಧ್ಯದಲ್ಲಿಯೇ ಜಪಮಾಡಿ ಬಹುರೂಪಿಣಿ ವಿದ್ಯೆಯನ್ನು ಸಾಧಿಸುತ್ತಾನೆ. ಕೊನೆಯ ದರ್ಶನದಲ್ಲಿ ಸೀತೆಯ ಪತಿನಿಷ್ಠೆಯನ್ನು ಕಂಡು ರಾವಣನಿಗೆ ಪಶ್ಚಾತ್ತಾಪವಾಗಿ ವಿರಾಗ ಅಂಕುರಿಸುತ್ತದೆ. ರಾವಣನನ್ನು ಕೊಲ್ಲುವವನು ರಾಮನಲ್ಲ, ಲಕ್ಷ್ಮಣ. ರಾಮನು ಲೋಕಾಪವಾದಕ್ಕಾಗಿ ಸೀತೆಯನ್ನು ಅಡವಿಪಾಲು ಮಾಡಿದಾಗ, ಅವಳು ಋಷ್ಯಾಶ್ರಮದ ವನಕ್ಕೆ ತೊಟ್ಟಿಲುಕಟ್ಟಿ ಲವಕುಶರನ್ನಿಟ್ಟು ತೂಗುವುದಿಲ್ಲ. ವಜ್ರಜಂಘನ ಅರಮನೆಯಲ್ಲಿ ನಾಗೋಸಕ್ಕೆ ಕಟ್ಟಲಾಗಿದೆ ಲವಕುಶರ ತೊಟ್ಟಿಲು. ಅಲ್ಲಿಯೇ ಅವರು ಬೆಳೆದು ದೊಡ್ಡವರಾಗಿ ಮದುವೆಯೂ ಆಗುತ್ತಾರೆ. ಅಶ್ವಮೇಧದ ಮಾತಿಲ್ಲ. ನಾರದನಿಂದ ರಾಮನ ಕಥೆಯನ್ನು ಕೇಳಿ, ಕ್ರೋಧಿತರಾದ ಲವಕುಶರು ‘ನಮ್ಮ ತಾಯಿಗೆ ಇಷ್ಟು ತೊಂದರೆ ಕೊಟ್ಟ ರಾಮನನ್ನು ಒಂದು ಕೈ ನೋಡಿ ಬಿಡುತ್ತೇವೆ’ ಎಂದು ಯುದ್ಧಕ್ಕೆ ಹೊರಟು, ರಾಮಲಕ್ಷ್ಮಣರನ್ನು ಸೋಲಿಸುತ್ತಾರೆ. ಕೊನೆಗೆ ಸೀತೆ ಸಂಸಾರವನ್ನೊಲ್ಲದೆ ದೀಕ್ಷೆಗೊಂಡು ಮುನಿಸಭೆಯನ್ನು ಸೇರುತ್ತಾಳೆ.

ರಾಮಚಂದ್ರ ಜಿನಪದವನ್ನು ಹೊಂದುವ ಪ್ರಸಂಗ ಪಂಪ ರಾಮಾಯಣದಲ್ಲಿ ವಿಶಿಷ್ಟವಾದುದು. ರಾಮಚಂದ್ರನಿಗೆ ತನ್ನ ತಮ್ಮನಾದ ಲಕ್ಷ್ಮಣನ ಮೇಲೆ ಅತಿಯಾದ ಮೋಹವಿರುವುದರಿಂದ ಆತನಿಗೆ ವೈರಾಗ್ಯ ತಲೆದೋರುವುದೇ ಇಲ್ಲ. ಮಾನವ ಜನ್ಮದ ಪರಮ ಉದ್ದೇಶವಾದ ಮೋಕ್ಷದ ಕಲ್ಪನೆ ಅವನಲ್ಲಿ ಸುಳಿಯುವುದೇ ಇಲ್ಲ. ಇದರಿಂದ ಚಿಂತಿತರಾದ ದೇವತೆಗಳು ಮಾಯಾತಂತ್ರವನ್ನು ಹೂಡಿ ಲಕ್ಷ್ಮಣ ಸಾಯುವಂತೆ ಮಾಡುತ್ತಾರೆ. ಆತನ ಮೇಲಿನ ಮೋಹಾತಿರೇಕದಿಂದ ರಾಮ, ಲಕ್ಷ್ಮಣನ ಹೆಣವನ್ನು ಆರು ತಿಂಗಳವರೆಗೆ ಹೆಗಲ ಮೇಲೆ ಹೊತ್ತು ತಿರುಗುತ್ತಾನೆ. ಅದು ಹೆಣ, ಲಕ್ಷ್ಮಣನಲ್ಲ ಎಂಬ ಅರಿವು ರಾಮನಿಗೆ ಉಂಟಾಗುವಂತೆ ದೇವತೆಗಳು ಅನೇಕ ತಂತ್ರಗಳನ್ನು ಎಸಗುತ್ತಾರೆ. ಆಗ ರಾಮನಿಗೆ ಮುತ್ತಿದ ಮೋಹಾಂಧಕಾರ ಹರಿದು ಲಕ್ಷ್ಮಣನ ಕಳೇಬರಕ್ಕೆ ಅಗ್ನಿಸಂಸ್ಕಾರವಾಗುತ್ತದೆ. ಕೊನೆಗೆ ರಾಮ ದೀಕ್ಷೆಗೊಂಡು, ಉಗ್ರೋಗ್ರತಪವನ್ನು ಆಚರಿಸಿ ಜಿನಪದವನ್ನು ಹೊಂದುತ್ತಾನೆ.

ಇವೆಲ್ಲಾ ಕಾರಣಗಳಿಂದ ಪಂಪರಾಮಾಯಣವು ಕನ್ನಡದಲ್ಲಿ ಇದುವರೆಗೆ ದೊರೆತಿರುವ ವಿಶಿಷ್ಟ ಕಾವ್ಯಗಳಲ್ಲೊಂದೆಂದು ನಿಸ್ಸಂಶಯವಾಗಿ ಹೇಳಬಹುದು.

* ಲೇಖಕರು ಮೂಲತಃ ದಕ್ಷಿಣಕನ್ನಡದ ಕಡಬ ಗ್ರಾಮದವರು. ರೆವೆರೆಂಡ್ ಕಿಟ್ಟೆಲ್ ಕುರಿತ ಮಹಾಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು, ಪ್ರಸ್ತುತ ಬೆಂಗಳೂರಿನ ಸಂತ ಜೋಸೆಫರ ಸಂಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮