2nd ಮೇ ೨೦೧೮

ಹವಾಮಾನ ವೈಪರೀತ್ಯ ಮತ್ತು ಸಾಹಿತ್ಯ: ಬೆಂಕಿ ಮತ್ತು ಹೆಪ್ಪುಹಿಮ

ನಾಗೇಶ ಹೆಗಡೆ

ಪರಮಾಣು ಬಾಂಬ್ ಸಿಡಿದರೆ ಅಥವಾ ಕ್ಷುದ್ರಗ್ರಹವೊಂದು ಭೂಮಿಗೆ ಢಿಕ್ಕಿ ಹೊಡೆದರೆ ಎಲ್ಲರ ಬದುಕೂ ಎರ್ರಾಬಿರ್ರಿ ಆಗುವಂತೆ ಇಡೀ ಜೀವಸಂಕುಲಕ್ಕೇ ಅಂಥದ್ದೊಂದು ಆತಂಕ ಎದುರಾಗಿದೆ. ‘ಯಾಕೆ ಸೃಜನಶೀಲ ಚಿಂತಕರು ಅದರ ಬಗ್ಗೆ ಮಾತನಾಡುತ್ತಿಲ್ಲ, ಬರೆಯುತ್ತಿಲ್ಲ, ನಾಟಕ— ಸಿನೆಮಾ ಮಾಡುತ್ತಿಲ್ಲ?’ —ಇದು ಘೋಷ್ ಕೇಳುವ ಪ್ರಶ್ನೆ.

ಭೂಗ್ರಹಕ್ಕೆ ಕಂಬಳಿ ಹೊದೆಸಿದ ಹಾಗೆ ಸೆಕೆ ಏರುತ್ತಿದೆ. ವಾಯುಮಂಡಲದ ಸಮತೋಲ ತಪ್ಪುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ, ಹಿಮಾಘಾತ, ದೂಳುಮೋಡ ಎಲ್ಲವೂ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಹೆಚ್ಚುತ್ತಲೇ ಹೋಗಲಿವೆ. ವಿಜ್ಞಾನಿಗಳು ಮೂವತ್ತು ವರ್ಷಗಳಿಂದ ಹೇಳುತ್ತ ಬಂದ ಸಂಗತಿ ನಿಜವಾಗುತ್ತಿದೆಯೆಂಬುದು ಜನಸಾಮಾನ್ಯರ ಅನುಭವಕ್ಕೂ ಬರುತ್ತಿದೆ. ಪತ್ರಿಕೆಗಳಲ್ಲೂ ಮತ್ತೆಮತ್ತೆ ಈ ವಿಷಯ ಚರ್ಚೆಗೆ ಬರುತ್ತಿದೆ. ಬಹುಪಾಲು ಎಲ್ಲ ದೇಶಗಳ ರಾಜಕೀಯ ಮುತ್ಸದ್ದಿಗಳೂ ಇದೊಂದು ಗಂಭೀರ ವಿಷಯವೆಂದು ಒಪ್ಪಿಕೊಂಡಿದ್ದಾರೆ. ವಿಶ್ವಸಂಸ್ಥೆಯಂತೂ ಬರಲಿರುವ ಬಿಸಿಪ್ರಳಯವನ್ನು ತಪ್ಪಿಸಲೆಂದು ಎಲ್ಲ ದೇಶಗಳ ಸಹಾಯ ಕೋರಿ ಎಷ್ಟೊಂದು ದೇಶದ ನಾಯಕರನ್ನು ಒಂದೆಡೆ ಗುಡ್ಡೆ ಹಾಕಿ, ಎಷ್ಟೊಂದು ಬಾರಿ ಸಮ್ಮೇಳನಗಳನ್ನು ಏರ್ಪಡಿಸಿ ಭೂಗ್ರಹದ ಸಮಸ್ತ ಜನರನ್ನು ಕ್ರಿಯಾಶೀಲ ಮಾಡಲು ಹೆಣಗುತ್ತಿದೆ.

ಎಲ್ಲರನ್ನೂ ತಟ್ಟುತ್ತಿರುವ ಈ ಗಂಭೀರ ಸಂಗತಿ ಕತೆ—ಕಾದಂಬರಿಗಳಲ್ಲಿ ಏಕೆ ಇನ್ನೂ ಬರುತ್ತಿಲ್ಲ?

ಈ ಪ್ರಶ್ನೆಯನ್ನು ಎತ್ತಿಕೊಂಡು ಅಮೆರಿಕದಲ್ಲಿ ನೆಲೆಸಿರುವ ಪ್ರಖ್ಯಾತ ಅನಿವಾಸಿ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್ ಬರೆದ ಪುಸ್ತಕದ ಹೆಸರು ‘ದಿ ಗ್ರೇಟ್ ಡಿರೇಂಜ್ಮೆಂಟ್’. ಸಕಲವೂ ಅಸ್ತವ್ಯಸ್ತ ಆಗುವುದಕ್ಕೆ ‘ಡಿರೇಂಜ್ಮೆಂಟ್’ ಎನ್ನುತ್ತಾರೆ. ಪರಮಾಣು ಬಾಂಬ್ ಸಿಡಿದರೆ ಅಥವಾ ಕ್ಷುದ್ರಗ್ರಹವೊಂದು ಭೂಮಿಗೆ ಢಿಕ್ಕಿ ಹೊಡೆದರೆ ಎಲ್ಲರ ಬದುಕೂ ಎರ್ರಾಬಿರ್ರಿ ಆಗುವಂತೆ ಇಡೀ ಜೀವಸಂಕುಲಕ್ಕೇ ಅಂಥದ್ದೊಂದು ಆತಂಕ ಎದುರಾಗಿದೆ. ‘ಯಾಕೆ ಸೃಜನಶೀಲ ಚಿಂತಕರು ಅದರ ಬಗ್ಗೆ ಮಾತನಾಡುತ್ತಿಲ್ಲ, ಬರೆಯುತ್ತಿಲ್ಲ, ನಾಟಕ—ಸಿನೆಮಾ ಮಾಡುತ್ತಿಲ್ಲ?’ ಇದು ಘೋಷ್ ಕೇಳುವ ಪ್ರಶ್ನೆ.

ಇದನ್ನು ಕೇಳಲು 275 ಪುಟಗಳ ಪುಸ್ತಕವನ್ನು ಬರೆಯಬೇಕಿತ್ತೆ, ಆ ಪುಸ್ತಕವನ್ನು ಪೆಂಗ್ವಿನ್ ಪ್ರಕಟಿಸಬೇಕಿತ್ತೆ? ಅದರ ಬಿಡುಗಡೆಗೆಂದು ದಿಲ್ಲಿ, ಮುಂಬೈ ಮಾಧ್ಯಮಗಳಲ್ಲಿ ಲೇಖಕರ ಸಂದರ್ಶನ ನಡೆಸಬೇಕಿತ್ತೆ? ಆ ಇಂಗ್ಲಿಷ್ ಪುಸ್ತಕ ಕುರಿತು ಭಾರತೀಯ ಭಾಷೆಗಳಲ್ಲಿ ಪರಿಚಯ ಪ್ರಕಟವಾಗಬೇಕಿತ್ತೆ ಎಂಬ ಪ್ರಶ್ನೆಗಳು ಏಳುತ್ತವೆ. ಹೌದು, ಅವೆಲ್ಲ ಆಗಬೇಕು. ಏಕೆಂದರೆ ಅಮಿತಾವ್ ಘೋಷ್ ನಮ್ಮ ಕಾಲದ ಬಹುದೊಡ್ಡ ಚಿಂತಕ, ಲೇಖಕ. ಅವರು ಬರೆದ ‘ಫ್ಲಡ್ ಆಫ್ ಫಾಯರ್’, ‘ರಿವರ್ ಆಫ್ ಸ್ಮೋಕ್’, ‘ದಿ ಹಂಗ್ರಿ ಟೈಡ್’, ‘ಕೋಲ್ಕತಾ ಕ್ರೊಮೊಸೋಮ್’ ಮುಂತಾದ ಪುಸ್ತಕಗಳು ಅಂತಾರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಖ್ಯಾತಿಯನ್ನೂ ಪ್ರಶಸ್ತಿಗಳನ್ನೂ ಪಡೆದಿವೆ. ಮಿಲಿಯನ್ ಡಾಲರ್ ಮೌಲ್ಯದ ಡ್ಯಾನ್ ಡೇವಿಡ್ ಪ್ರಶಸ್ತಿ, ಆರ್ಥರ್ ಕ್ಲಾರ್ಕ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಅವರ ಮುಡಿಗೇರಿವೆ. ಅಂಥವರು ಹವಾಮಾನ ಬದಲಾವಣೆ ಕುರಿತು ಬರೆದು ಸಾಹಿತ್ಯಲೋಕದಲ್ಲೇ ಮೊದಲಿಗರೆನಿಸಿದಾಗ ಚಿಂತಕರ ಗಮನ ಸೆಳೆಯುವುದು ಸಹಜವೇ.

ಮೇಲಾಗಿ, ಇತರ ಸಾಹಿತಿಗಳನ್ನು ಪ್ರಶ್ನಿಸಿದ್ದು ಈ ಪುಸ್ತಕದಲ್ಲಿ ಅಂತಸ್ರೋತವಾಗಿ ಅಲ್ಲಲ್ಲಿ ಬರುತ್ತದೆ ಅಷ್ಟೆ. ಘೋಷ್ ತಮ್ಮ ಈ ಕೃತಿಯಲ್ಲಿ ಹವಾಮಾನ ಬದಲಾವಣೆಯ ಭೂಗೋಲ, ಇತಿಹಾಸ ಕುರಿತು ತಲಸ್ಪರ್ಶಿ ಅಧ್ಯಯನ ಮಾಡಿದ್ದನ್ನು ತಾತ್ವಿಕ ನೆಲೆಯಲ್ಲಿ ಚರ್ಚಿಸಿದ್ದಾರೆ. ಮನುಷ್ಯನು ಪೃಥ್ವಿಯ ಮೇಲಿನ ಇತರೆಲ್ಲ ಶಕ್ತಿಗಳನ್ನೂ ಮೀರಿಸುವಷ್ಟು ಬೆಳೆಯತ್ತಿದ್ದಾಗ, ಈಗಿನ ಈ ಯುಗಕ್ಕೆ ಭೂವೈಜ್ಞಾನಿಕ ಪರಿಭಾಷೆಯಲ್ಲಿ `ಆಂಥ್ರೊಪೊಸೀನ್’ ಎಂಬುದಾಗಿ ಮೂರು ವರ್ಷಗಳ ಹಿಂದೆ ನಾಮಕರಣ ಮಾಡಿದ ಹೊಸದರಲ್ಲಿ, 2015ರಲ್ಲಿ ಘೋಷ್ ಅವರಿಗೆ ಷಿಕ್ಯಾಗೊ ವಿಶ್ವವಿದ್ಯಾಲಯದಲ್ಲಿ ನಾಲ್ಕು ಸರಣಿ ಉಪನ್ಯಾಸ ನೀಡಲು ಆಹ್ವಾನ ಬಂದಿತ್ತು. ಅದಕ್ಕೆ ನಡೆಸಿದ ಸಿದ್ಧತೆಯೇ ಈ ಕೃತಿಗೆ ಬುನಾದಿಯಾಗಿ, ನಂತರ ಫೋರ್ಡ್ ಫೌಂಡೇಶನ್ ನೆರವಿನಿಂದ ಪುಸ್ತಕ ರೂಪದಲ್ಲಿ ಹೊರಬಂದಿದೆ. ಭೂತಾಪ ಏರಿಕೆಯ ವಿಷಯವನ್ನು ಮಾಮೂಲು ವೈಜ್ಞಾನಿಕ ವಿವರಣೆಯ ಆಚೆಗೆ ಎಳೆತಂದು, ಮನುಷ್ಯನ ಬದುಕಿನ ಆರ್ಥಿಕ, ನೈತಿಕ, ರಾಜಕೀಯ ಮುಂತಾದ ಇತರೆಲ್ಲ ಆಯಾಮಗಳನ್ನೂ ಸೇರಿಸಿ ಸೈದ್ಧಾಂತಿಕ ಸ್ವರೂಪ ಕೊಟ್ಟಿದ್ದಾರೆ. ತಾಪಮಾನ ಏರಿಕೆಯ ಕಾರಣಗಳನ್ನು ಪಠ್ಯರೂಪದಲ್ಲಿ ಹೊಸದಾಗಿ ವಿವರಿಸುವ ಗೋಜಿಗೆ ಗ್ರಂಥಕರ್ತರು ಹೋಗಿಲ್ಲ. ಈಚಿನ ವರ್ಷಗಳಲ್ಲಿ ಘಟಿಸಿದ ಅನಿರೀಕ್ಷಿತ ಪ್ರಳಯಾಂತಕ ಪ್ರಕೃತಿ ವಿಕೋಪಗಳನ್ನು ಉದಾಹರಣೆಯಾಗಿ ಕೊಡುವಾಗಲೂ ಎಷ್ಟು ಜನ ಸತ್ತರು, ಎಷ್ಟು ಆಸ್ತಿಪಾಸ್ತಿ ನಷ್ಟವಾದವು ಎಂಬುದರ ವಿವರಗಳಿಗೆ ಹೋಗಿಲ್ಲ. ಅವೆಲ್ಲವೂ ಈ ಮೊದಲೇ ಗೊತ್ತಿದೆಯೆಂಬ ನೆಲೆಯಲ್ಲಿ ಮನುಷ್ಯನ ಅಸ್ತಿತ್ವದ ಹೊಸ ಬಗೆಯ ಸಂಘರ್ಷದಲ್ಲಿ ಎದುರಾಗುವ ಸವಾಲುಗಳು ಇಲ್ಲಿವೆ. ಸಾಹಿತ್ಯ, ಕಲೆಯಲ್ಲೆಲ್ಲ ಮನುಷ್ಯ ಸ್ವಾತಂತ್ರ್ಯವೇ ಕೇಂದ್ರೀಯ ಉದ್ದೇಶವಾಗಿದ್ದು, ಅದಕ್ಕೆ ತದ್ವಿರುದ್ಧವಾಗಿ, ಅತಿ ಸ್ವಾತಂತ್ರ್ಯದಿಂದಾಗಿಯೇ ಭೂಮಿಗೆ ಈ ಪರಿಸ್ಥಿತಿ ಬಂದಿದೆ ಎಂದು ಹೇಳುತ್ತ, ಹವಾಮಾನ ವೈಪರೀತ್ಯಕ್ಕೂ ಸಾಹಿತ್ಯಕ್ಕೂ ಅದರಿಂದಾಗಿಯೇ ಹೇಗೆ ಎಣ್ಣೆ ಸೀಗೇಕಾಯಿ ಸಂಬಂಧ ಏರ್ಪಟ್ಟಿದೆ ಎಂದು ವಾದಿಸುತ್ತಾರೆ.

‘ಡಿರೇಂಜ್ಮೆಂಟ್’ನ ಮೊದಲರ್ಧ ಭಾಗ ಕಥಾರೂಪದಲ್ಲಿದೆ. ಅಂದರೆ ಕಾಲ್ಪನಿಕ ಕಥೆಯಲ್ಲ, ಬದಲಿಗೆ ನೈಜ ಘಟನೆಗಳನ್ನು ಆಧರಿಸಿ ಭೂತಾಪ ಏರಿಕೆಯ ವಿವಿಧ ಮಗ್ಗುಲುಗಳ ವಿಶ್ಲೇಷಣೆ ಇಲ್ಲಿದೆ. ಘೋಷ್ ಇಲ್ಲಿ ತನ್ನದೇ ಪೂರ್ವಿಕರು ಬಾಂಗ್ಲಾದೇಶದ ನೆರೆಹಾವಳಿಯಿಂದ ಬಚಾವಾಗಿ ಬಂದಿದ್ದನ್ನೂ ತಾನು ದಿಲ್ಲಿಯಲ್ಲಿ ಓದುತ್ತಿದ್ದಾಗ 1978ರಲ್ಲಿ ಖುದ್ದಾಗಿ ಅನುಭವಿಸಿದ ಪ್ರಚಂಡ ಸುಂಟರಗಾಳಿಯನ್ನೂ ವರ್ಣಿಸುತ್ತ ಕ್ರಮೇಣ ಸಾಹಿತ್ಯ ಲೋಕದಲ್ಲಿ ಬೇರೆಬೇರೆ ಕಾದಂಬರಿಕಾರರು, ಕವಿಗಳು, ನಾಟಕಕರ್ತರು ಬಣ್ಣಿಸುವ ನೈಸರ್ಗಿಕ ವಿಕೋಪಗಳನ್ನು ಪ್ರಸ್ತಾಪಿಸುತ್ತಾರೆ. ಹಾಗೆಯೇ ಅಂಡಮಾನ್, ನಿಕೊಬಾರ್ ದ್ವೀಪ ಸಮೂಹದಲ್ಲಿ ಡಿಸೆಂಬರ್ 2004ರಂದು ಅಪ್ಪಳಿಸಿದ ಸುನಾಮಿಯ ಪರಿಣಾಮಗಳನ್ನು ತಾನು ಪ್ರತ್ಯಕ್ಷ ನೋಡಿದ್ದನ್ನೂ ಬಣ್ಣಿಸುತ್ತಾರೆ ಆದಿವಾಸಿಗಳು ಬಚಾವಾಗಿದ್ದು, ಅದಕ್ಕೆ ತದ್ವಿರುದ್ಧವಾಗಿ ಕಡಲಂಚಿನಲ್ಲೇ ನೆಲೆಯೂರಿದ ಪ್ರತಿಷ್ಠಿತರು ಹಾಗೂ ಮಿಲಿಟರಿಯ ಉನ್ನತ ಅಧಿಕಾರಿಗಳು ಅತಿ ಹೆಚ್ಚು ಬೆಲೆ ತೆರಬೇಕಾಗಿ ಬಂತೆಂದು ವಿವರಿಸುತ್ತಾರೆ. ಜಗತ್ತಿನ ವಿವಿಧ ಸಂಸ್ಕೃತಿ, ಚಿಂತನೆಗಳಲ್ಲಿ ನಿಸರ್ಗದ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಯತ್ನಗಳ ಬಗ್ಗೆ ಹೇಳುತ್ತ, ಹೇಗೆ ನಾಗರಿಕತೆ ಬದಲಾದಂತೆ ನಮ್ಮೆಲ್ಲರ ಅಭಿವ್ಯಕ್ತಿ ತಂತ್ರವೂ ಬರಹದ ಮಾಧ್ಯಮದಿಂದ ದೂರವಾಗುತ್ತ ಹೋಗಿದ್ದಕ್ಕೇ ನಾಳಿನ ಅಪಾಯಗಳ ಕುರಿತಂತೆ ಸೃಜನಶೀಲ ಬರವಣಿಗೆಯಲ್ಲಿ ಬರಗಾಲ ಸೃಷ್ಟಿಯಾಗಿದೆ ಎನ್ನುತ್ತಾರೆ.

ಗ್ರಂಥದ ಇನ್ನರ್ಧ ಭಾಗದಲ್ಲಿ ಕಾರ್ಬನ್ ಆರ್ಥಿಕತೆ, ಪ್ಯಾರಿಸ್ ಒಪ್ಪಂದ, ಧನಿಕ ರಾಷ್ಟ್ರಗಳ ದರ್ಪ— ಧಾಷ್ಟ್ರ್ಯಗಳ ನೆರಳಿನಲ್ಲಿ ಅವುಗಳ ವಿಕಾಸಪಥವನ್ನೇ ಬೆಂಬತ್ತಿದ ಏಷ್ಯದ ದೇಶಗಳ ಅಂಧಾನುಕರಣೆಯ ಕಥನಗಳಿವೆ. ಇಂದಿನ ತಂತ್ರಜ್ಞಾನಗಳೆಲ್ಲ ಪೃಥ್ವಿಗೇ ಮುಳುವಾಗುವ ಕಾರ್ಬನ್ (ತೈಲ ಮತ್ತು ಕಲ್ಲಿದ್ದಲಿನ) ಸಂಪನ್ಮೂಲವನ್ನೇ ಆಧರಿಸಿವೆ. ಕಳೆದ ಒಂದು ಶತಮಾನದ ಬೆಳವಣಿಗೆ ಹೇಗಿದೆಯೆಂದರೆ ಯಾರು ಕಾರ್ಬನ್ ಶಕ್ತಿಯನ್ನು ಬಾಚಿಕೊಳ್ಳುತ್ತಾರೋ ಅವರೇ ಬಲಿಷ್ಠರಾಗಿದ್ದಾರೆ. ಉತ್ತರದ ಶೀತ ಪ್ರದೇಶಗಳಲ್ಲಿ ವಾಸಿಸುವವರ ಮುಖ್ಯ ಗುರಿ ಏನಿತ್ತೆಂದರೆ ಹೇಗಾದರೂ ಮಾಡಿ ನಿಸರ್ಗವನ್ನು ಮಟ್ಟ ಹಾಕಬೇಕು; ಮೆಟ್ಟಿ ನಿಲ್ಲಬೇಕು. ಅದಕ್ಕೆ ಸೂಕ್ತವಾದ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಕಾರ್ಬನ್ ಸಂಪನ್ಮೂಲಗಳನ್ನು ಬಾಚಿಕೊಳ್ಳುವ ಧೋರಣೆ ಎರಡೂ ಹೆಚ್ಚುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ನಿಸರ್ಗದೊಂದಿಗೆ ಸಹಬಾಳ್ವೆ ನಡೆಸಬೇಕು ಎಂಬುದು ಏಷ್ಯನ್ ರಾಷ್ಟ್ರಗಳ ಮೂಲಧರ್ಮವಾಗಿದ್ದರೂ ಅದೂ ಈಗ ಬದಲಾಗಿದೆ. ಪಾಶ್ಚಿಮಾತ್ಯ ಸಮಾಜದಿಂದ ಪ್ರಭಾವಿತಗೊಂಡು, ಪ್ರಕೃತಿಯ ಕಟ್ಟುಪಾಡುಗಳನ್ನು ಮೀರಿ ಸುಖಿಸಬೇಕು ಎಂಬಲ್ಲಿಗೆ ಬಂದಿದೆ.

ಹವಾಮಾನ ವೈಪರೀತ್ಯದ ಅಪಾಯ ಇಡೀ ಭೂಮಿಯನ್ನೇ ಆವರಿಸುತ್ತಿದೆಯಾದರೂ ಅತಿ ಹೆಚ್ಚಿನ ಸಂಕಷ್ಟ ಅತಿ ಹೆಚ್ಚು ಜನಸಾಂದ್ರತೆ ಇರುವ ಚೀನಾ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮುಂತಾದ ಏಷ್ಯನ್ ರಾಷ್ಟ್ರಗಳಿಗೇ ತಟ್ಟಲಿದೆ. ಆದರೆ ವಿಪರ್ಯಾಸ ಏನೆಂದರೆ ಭೂಮಿಯ ತಾಪಮಾನ ಏರುತ್ತಿದೆ ಬದಲಾಗೋಣ ಎಂದು ಕೂಗಿ ಹೇಳಬೇಕಾದವರಲ್ಲಿ ಸ್ವರವೇ ಹೊರಡುತ್ತಿಲ್ಲ. ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎಲ್ಲವೂ ಅಪಾಯದ ಹೊಸ್ತಿಲಲ್ಲಿದ್ದರೂ ಅವರ ರಾಷ್ಟ್ರೀಯ ಧೋರಣೆಗಳಲ್ಲಿ ಮತ್ತು ದೂರಗಾಮೀ ಯೋಜನೆಗಳಲ್ಲಿ ಬಿಸಿಪ್ರಳಯದ ಪ್ರಸ್ತಾಪವೇ ಇಲ್ಲ. ಭಾರತದಲ್ಲೂ ಇದೇ ವಿಪರ್ಯಾಸ ಕಾಣುತ್ತಿದೆ. ಸಮಾಜದ ಎಲ್ಲ ಸ್ತರಗಳಲ್ಲೂ ರಾಜಕೀಯ ಪ್ರವೇಶಿಸಿದೆ; ಎಷ್ಟೊಂದು ವಿಷಯಗಳ ಬಗ್ಗೆ ಜನಸಾಮಾನ್ಯರು ಬೀದಿಗೆ ಬರುತ್ತಿದ್ದಾರೆ— ಟಿವಿ ಚಾನೆಲ್ ಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಿರುತ್ತದೆ. ಎಲ್ಲರೂ ತಂತಮ್ಮ ಧರ್ಮ, ಜಾತಿ, ಭಾಷೆ, ಲೈಂಗಿಕ ಸಮಾನತೆ, ಇತ್ಯಾದಿ ಅಸ್ಮಿತೆಗಳ ಬಗೆಗೇ ಹೆಚ್ಚಾಗಿ ಕಾದಾಡಲೆಂದೇ ರಾಜಕೀಯ ಶಕ್ತಿಯೆಲ್ಲ ವಿನಿಯೋಗವಾಗುತ್ತಿದೆ ವಿನಾ ಬರಲಿರುವ ಮಹಾನ್ ಸಂಕಷ್ಟದ ಬಗ್ಗೆ ದೊಡ್ಡ ಸ್ವರವೇ ಏಳುತ್ತಿಲ್ಲ. ಅದರ ಪರಿಣಾಮವನ್ನು ಕಥೆ ಕಾದಂಬರಿಗಳಲ್ಲೂ ನೋಡಬಹುದು. ‘ಕಾರ್ಬನ್ ಡೈಆಕ್ಸೈಡ್ 400 ಪಿಪಿಎಮ್ ತಲುಪಿದಾಗ ನೀವೆಲ್ಲಿದ್ದಿರಿ?’ ಅಥವಾ (ಅಂಟಾಕ್ರ್ಟಿಕಾದ ‘ಲಾರ್ಸೆನ್ ಸಿ ಹಿಮಖಂಡ ಹೋಳಾದಾಗ ನೀವೆಲ್ಲಿದ್ದಿರಿ?’ ಎಂಬ ಪ್ರಶ್ನೆಗಿಂತ ‘ಬರ್ಲಿನ್ ಗೋಡೆ ಬೀಳುವಾಗ ನೀವೆಲ್ಲಿದ್ದಿರಿ?’ ಎಂಬ ಪ್ರಶ್ನೆಯೇ ಮಹತ್ವದ್ದಾಗುತ್ತದೆ.

ಅಮಿತಾವ್ ಘೋಷ್ ಈ ಯಾವುದನ್ನೂ ಇಷ್ಟು ಸರಳವಾಗಿ ಹೇಳುತ್ತಿಲ್ಲ ಅನ್ನಿ. ರಾಜಕೀಯ ನೈತಿಕತೆಯ ಬಗ್ಗೆ, ಸೋವಿಯತ್ ರಷ್ಯದಲ್ಲಿ ಸೋಲ್ಝನಿತ್ಸಿನ್ ಅಥವಾ ಇಂಡೊನೇಶ್ಯದ ಪ್ರಮೀದ್ಯ ಅನಂತ ಟೋಯರ್ ಅಂಥವರನ್ನು ಆಯಾ ಕಾಲದ ಪ್ರಭುತ್ವ ಅಟ್ಟಾಡಿಸಿದ ಬಗ್ಗೆ, ಸಾತ್ರ್ರೆಯ ನಿರ್ವಸಾಹತೀಕರಣದ ಬಗ್ಗೆ, ವಿದ್ಯಾರ್ಥಿ ಚಳವಳಿಗಳ ಬಗ್ಗೆ ಟಿಪ್ಪಣಿ ಮಾಡುತ್ತಲೇ ತೈಲಕ್ಕಾಗಿ ಇರಾಕ್ ಮೇಲಿನ ದಾಳಿಯನ್ನೂ ಮುಂಬೈ ಅತಿವೃಷ್ಟಿಯನ್ನೂ ಮಾವೊತ್ಸೆ ತುಂಗನ ‘ಪ್ರಕೃತಿಯ ಮೇಲೆ ಸಮರ’ವನ್ನೂ ಓತಪ್ರೋತವಾಗಿ ಹೆಣೆಯುತ್ತ ಹೋಗುತ್ತಾರೆ. ಇತಿಹಾಸ, ಭೂಗೋಲ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಯುದ್ಧ, ವಿಜ್ಞಾನ, ಧರ್ಮಶಾಸ್ತ್ರ, ಸಾಹಿತ್ಯ, ಮನೋವಿಜ್ಞಾನ, ಗಾಂಧೀ ಚಿಂತನೆ, ಮಿಲಿಟರಿ ಗೂಢಚರ್ಯೆ, ಆದಿವಾಸಿ ಸಂಸ್ಕೃತಿ ಹೀಗೆ ಹತ್ತಾರು ವಿಷಯಗಳಲ್ಲಿ ಪರಿಣತಿ ಸಾಧಿಸಿದವರಿಗಷ್ಟೆ ಎಟಕಬಹುದಾದ ಸಂಕೀರ್ಣ ನಿರೂಪಣೆ ಇಲ್ಲಿದೆ.

ಭೂಮಿಗೆ ಬಂದ ಸಂಕಷ್ಟವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಎರಡು ಮಹತ್ವದ ದಾಖಲೆಗಳು 2015ರಲ್ಲಿ ಸೃಷ್ಟಿಯಾದವು. ಒಂದು, ವ್ಯಾಟಿಕನ್ ಧರ್ಮಗುರು ಪೋಪ್ ಅವರು ಮನುಕುಲದ ಭವಿಷ್ಯದ ನಡೆಯ ಬಗ್ಗೆ ಹೊರಡಿಸಿದ ಧರ್ಮಾದೇಶ; ಇನ್ನೊಂದು, ಪ್ಯಾರಿಸ್ ಶೃಂಗಸಭೆಯಲ್ಲಿ 196 ದೇಶಗಳು ಸಹಿ ಹಾಕಿದ ಒಪ್ಪಂದ. ಇವೆರಡನ್ನೂ ಆಳವಾಗಿ ಅಧ್ಯಯನ ಮಾಡಿದ ಘೋಷ್, ಅವುಗಳ ಹೋಲಿಕೆಯಲ್ಲಿ ತಮ್ಮ ಅಧ್ಯಯನಶೀಲತೆಯ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಜಂಟಿಯಾಗಿ ರೂಪಿಸಿದ ಪ್ಯಾರಿಸ್ ಒಪ್ಪಂದ ಹೇಗೆ ಹೆಜ್ಜೆಹೆಜ್ಜೆಗೂ ಕೃತಕತೆಯನ್ನು, ಅರೆಮನಸ್ಸಿನ, ಅಡ್ಡಗೋಡೆಯ ಮನಸ್ಥಿತಿಯನ್ನು ಮೆರೆಯುತ್ತದೆ ಎಂಬುದನ್ನು ಹೇಳುತ್ತ, ಧರ್ಮಗುರುವಿನ ಆದೇಶದಲ್ಲಿ ಕಂಡುಬರುವ ಸಮಗ್ರ ಜೀವಲೋಕದ ಉಳಿವಿಗಾಗಿ ಪ್ರಾಮಾಣಿಕ ಚಿಂತನೆ, ಮನುಷ್ಯನ ಹಾದಿ ತಪ್ಪಿದ ನಡವಳಿಕೆ ಹಾಗೂ ಕುಸಿಯುತ್ತಿರುವ ನೈತಿಕ ನೆಲೆಗಟ್ಟಿನ ಬಗ್ಗೆ ಕಳಕಳಿಯನ್ನು ತುಲನಾತ್ಮಕವಾಗಿ ಓದುಗರ ಮುಂದಿಡುತ್ತಾರೆ. ಮಾನವ ಚಟುವಟಿಕೆಯ ಎಲ್ಲ ಆಯಾಮಗಳೂ ಭ್ರಷ್ಟವಾಗುತ್ತಿರುವಾಗ ಜಾತ್ಯತೀತ ನಾಗರಿಕ ಸಂಘಟನೆಗಳು ಹಾಗೂ ಧಾರ್ಮಿಕ ನಾಯಕತ್ವ ಎರಡೂ ಜಂಟಿಯಾಗಿ ನಿಂತರೇನೇ ಈ ಮಹಾಪ್ರಳಯದಿಂದ ಮನುಕುಲವನ್ನು ಬಚಾವು ಮಾಡಲು ಸಾಧ್ಯ ಎಂಬ ನಿಲುವಿಗೆ ಬಂದು ನಿಲ್ಲುತ್ತಾರೆ.

(ಪುಸ್ತಕ ವಿವರ: ‘ದಿ ಗ್ರೇಟ್ ಡಿರೇಂಜ್ಮೆಂಟ್: ಹವಾಮಾನ ಬದಲಾವಣೆ ಮತ್ತು ಅನೂಹ್ಯ’ ಅಮಿತಾವ್ ಘೋಷ್, ಪೆಂಗ್ವಿನ್ ರಾಂಡಮ್ ಹೌಸ್, ಪುಟಗಳು 275, ಪ್ರಕಟನೆ: 2016)

* ಉತ್ತರ ಕನ್ನಡದ ಬಕ್ಕೆಮನೆ ಗ್ರಾಮದಲ್ಲಿ ಜನಿಸಿದ ಲೇಖಕರು ಖರಗ್‍ಪುರ ಐಐಟಿಯಲ್ಲಿ ಎಂಎಸ್ಸಿ, ನವದೆಹಲಿಯ ಜೆ.ಎನ್.ಯು.ದಲ್ಲಿ ಎಂ.ಫಿಲ್. ಮುಗಿಸಿದ್ದಾರೆ. ಅವರು ಪರಿಸರ ಅಧ್ಯಯನ, ಕಳಕಳಿ, ಬರವಣಿಗೆಗೆ ಬದ್ಧರು.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮