2nd ಮೇ ೨೦೧೮

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಪುರುಷೋತ್ತಮ ಬಿಳಿಮಲೆ

ಏಕೀಕರಣದ ನಂತರದ ಕರ್ನಾಟಕದ ರಾಜಕಾರಣದಲ್ಲಾಗಿರುವ ಮುಖ್ಯ ಬದಲಾವಣೆಗಳೇನು? ರಾಜಕೀಯ ಕೆಟ್ಟಿದೆ; ಪ್ರಾಮಾಣಿಕರು, ಬದ್ಧತೆಯಿರುವವರು ಹಾಗೂ ಜಾತಿ ರಾಜಕಾರಣ ಮಾಡದವರಿಗೆ ಇಂದಿನ ಚುನಾವಣಾ ರಾಜಕಾರಣದಲ್ಲಿ ಭಾಗವಹಿಸಲು ಸಾಧ್ಯವಿಲ್ಲ; ವಂಶಪಾರಂಪರ್ಯ ರಾಜಕಾರಣ, ಸ್ವಜನಪಕ್ಷಪಾತಗಳು ನಿಯಮವಾಗಿಬಿಟ್ಟಿವೆ; ಸರ್ಕಾರದ ಕೆಲಸಕಾರ್ಯಗಳಲ್ಲಿ ಭ್ರಷ್ಟತೆ ಮಿತಿಮೀರಿದೆ ಇತ್ಯಾದಿ ಹಳಹಳಿಕೆಯ ಮಾತುಗಳು ಸಾಧಾರಣವಾಗಿ ಎಲ್ಲೆಡೆಯೂ ಕೇಳಿಬರುತ್ತಿದೆ. ಇಂದಿನ ಈ ವಾಸ್ತವವನ್ನು ಗ್ರಹಿಸುವುದು ಹೇಗೆ? ಈ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ, ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿಯ ನಿರೂಪಣೆ —ಈ ಎರಡು ಆಯಾಮಗಳನ್ನು ಗಮನದಲ್ಲಿರಿಸಿಕೊಂಡು ಕಳೆದ ಆರು ದಶಕಗಳ ಕರ್ನಾಟಕದ ರಾಜಕಾರಣದ ಬಗ್ಗೆ ಕಥನವೊಂದನ್ನು ರೂಪಿಸುವ ಪ್ರಯತ್ನ ಇಲ್ಲಿದೆ.
ರಾಜಕೀಯ ಸಂಸ್ಕೃತಿಯೆಂದರೆ ರಾಜಕಾರಣದ ಅಲಿಖಿತ ನಿಯಮಗಳು ಮತ್ತು ಸಂಪ್ರದಾಯಗಳು, ರಾಜಕಾರಣಿಗಳ ಆದರ್ಶ—ಬದ್ಧತೆಗಳು ಹಾಗೂ ಅವರು ತಮ್ಮ ಕ್ಷೇತ್ರನಿವಾಸಿಗಳೊಡನೆ ಹೊಂದಿರುವ ಸಂಬಂಧ ಮುಂತಾದ ಅಂಶಗಳೆಂದು ಗ್ರಹಿಸಬಹುದು. ಸಾರ್ವಜನಿಕ ನೀತಿಯ ನಿರೂಪಣೆಯೆಂದರೆ ಸರ್ಕಾರಗಳು ತಳೆಯುವ ನೀತಿನಿಲುವುಗಳು, ಅವುಗಳ ಆಧಾರದ ಮೇಲೆ ರಚಿತವಾಗುವ ಶಾಸನಗಳು ಮತ್ತು ಅವುಗಳ ಅನುಷ್ಠಾನವೆನ್ನಬಹುದು. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಲ್ಲಾಗಿರುವ ಬದಲಾವಣೆಗಳು ಮತ್ತು ಪಲ್ಲಟಗಳ ಕಡೆಗೆ ಹೆಚ್ಚಿನ ಗಮನವನ್ನು ಹರಿಸಲಾಗಿದೆ.

ಭಾರತದಲ್ಲಿನ ಮತದಾನದ ವಿಷಯಗಳು ಮುನ್ನೆಲೆಗೆ ಬಂದದ್ದು 20ನೇ ಶತಮಾನದ ಎರಡನೇ ದಶಕದಲ್ಲಿ. ಈ ದಶಕವು ಆಧುನಿಕ ಭಾರತದ ಇತಿಹಾಸದ ದೃಷ್ಟಿಯಿಂದ ಬಹಳ ಮಹತ್ವವಾದುದು. ಗಾಂಧೀಜಿಯು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿ, ಜನನಾಯಕರಾಗಿ ಬೆಳೆಯುತ್ತಿದ್ದ ಕಾಲವದು. ಹಾಗೆಯೇ ಬಿ.ಆರ್.ಅಂಬೇಡ್ಕರ್ ಅವರು ಅಮೇರಿಕಾ ಮತ್ತು ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಭಾರತಕ್ಕೆ ಹಿಂದಿರುಗಿ, ದಲಿತರ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತಿ ಸವರ್ಣೀಯ ಹಿಂದೂಗಳ ಗಮನವನ್ನು ಶತಮಾನಗಳ ಅಸ್ಪೃಶ್ಯತೆಯ ಕಡೆಗೆ ಗಂಭೀರವಾಗಿ ಸೆಳೆದ ಪ್ರಮುಖ ಕಾಲಘಟ್ಟವಿದು. ಜೊತೆಗೆ ನಮಗೆಲ್ಲರಿಗೂ ತಿಳಿದಿರುವಂತೆ ಸ್ವಾತಂತ್ರ್ಯ ಹೋರಾಟವು ಖಚಿತವಾದ ರೂಪವನ್ನು ಪಡೆದುಕೊಂಡ ಕಾಲವೂ ಇದಾಗಿತ್ತು. ಇಂಥ ಪ್ರಮುಖ ಹಾಗೂ ನಿರ್ಣಾಯಕ ಕಾಲದಲ್ಲಿ ಒಂದೆಡೆ ಎಲ್ಲರೂ ಒಟ್ಟು ಸೇರಿ ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಚಳವಳಿ ನಡೆಸಬೇಕಾಗಿತ್ತು, ಇನ್ನೊಂದೆಡೆ ಭಾರತೀಯ ಸಮಾಜದಲ್ಲಿ ಹುದುಗಿದ್ದ ಈ ಕೆಳಗಿನ ಜಗಳಗಳನ್ನು ಅವರು ಸರಿ ಮಾಡಿಕೊಳ್ಳಬೇಕಾಗಿತ್ತು:

  1. ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವಣ ಜಗಳಗಳು.
  2. ಹಿಂದೂ ಮತ್ತು ಮುಸ್ಲಿಮರ ನಡುವಣ ಮತಭೇದಗಳು.
  3. ಜಾತಿ—ಜಾತಿಗಳ ನಡುವಣ ಸಂಘರ್ಷಗಳು.
  4. ಅತ್ಯಂತ ಅಮಾನವೀಯವಾದ ಅಸ್ಪೃಶ್ಯತೆಯ ಸಮಸ್ಯೆ.

ಮೇಲಿನ ನಾಲ್ಕು ವಿಚಾರಗಳು ಸ್ವಾತಂತ್ರ್ಯ ಹೋರಾಟವನ್ನು ಸುಲಭವಾಗಿ ದಿಕ್ಕೆಡಿಸಬಹುದಾಗಿತ್ತು. ಹಾಗಾಗಿ ಚಳವಳಿಯ ಮುಂಚೂಣಿಯಲ್ಲಿದ್ದ ನಾಯಕರು ಈ ಸಂಘರ್ಷಗಳನ್ನು ಗಮನಿಸಿ, ಅವುಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾ, ಅಂಥ ಸಮಸ್ಯೆಗಳನ್ನು ಸಂಘರ್ಷಾತೀತಗೊಳಿಸಬೇಕಾಗಿತ್ತು. ಇದು ಅಂದಿನ ತುರ್ತು ಅಗತ್ಯವೂ ಹೌದಾಗಿತ್ತು.

ಈ ಸಂದಿಗ್ಧಗಳಲ್ಲಿ ಒಂದೆಡೆ ಗಾಂಧೀಜಿ, ಇನ್ನೊಂದೆಡೆ ಅಂಬೇಡ್ಕರ್ ಇದ್ದರು. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿರುವ ಪ್ರಸ್ತುತ ಪುಸ್ತಕದ ಲೇಖಕ ರಾಜಶೇಖರ ವೂಂಡ್ರು ಅವರು ಭಾರತದ ರಾಷ್ಟ್ರೀಯ ಚಳವಳಿಯನ್ನು ಸರಳೀಕರಿಸಿ ನೋಡದೆ, ಅದರ ಸಂಕೀರ್ಣ ಸ್ವರೂಪವನ್ನು ಗುರುತಿಸಿರುವುದು ಸರಿಯಾದ ಕ್ರಮವಾಗಿದೆ. ಬ್ರಿಟಿಷರನ್ನು ಭಾರತದಿಂದ ಹೊರದಬ್ಬುವುದಷ್ಟೇ ಆ ಕಾಲದ ಚಳವಳಿಗಳ ಉದ್ದೇಶವಾಗಿರಲಿಲ್ಲ. ಭಾರತೀಯ ಸಮಾಜವನ್ನು ಪುನರ್‍ನಿರ್ಮಿಸುವ ಹೊಣೆಗಾರಿಕೆಯನ್ನು ಕೂಡಾ ಹೋರಾಟದ ಮುಂಚೂಣಿಯಲ್ಲಿರುವ ನಾಯಕರು ಹೊತ್ತುಕೊಳ್ಳಬೇಕಾಗಿತ್ತು. ಈ ನಾಯಕರಲ್ಲಿ ಬಹುತೇಕ ಜನರು, ಅಂಬೇಡ್ಕರ್ ಅವರೂ ಸೇರಿದಂತೆ, ತಾವು ವಿರೋಧಿಸುತ್ತಿರುವ ಬ್ರಿಟಿಷರ ಮೂಲ ಸಂಸ್ಥಾನವಾದ ಇಂಗ್ಲೆಂಡಿನಲ್ಲಿಯೇ ಶಿಕ್ಷಣ ಪಡೆದವರಾಗಿದ್ದರು. ಈ ಪಾಶ್ಚಾತ್ಯ ಶಿಕ್ಷಣವು ಅವರಿಗೆ ಆಧುನಿಕತೆಯ ಪಾಠವನ್ನು ಕಲಿಸಿಕೊಟ್ಟಿತ್ತು. ಮನುಕುಲದ ಅಭಿವೃದ್ಧಿಗೆ ಅಗತ್ಯವಾಗಿದ್ದ ಸ್ವಾತಂತ್ರ್ಯ, ಸಹೋದರತೆ ಮತ್ತು ಸಮಾನತೆಯನ್ನು ಇವರೆಲ್ಲ ಒಪ್ಪಿಕೊಂಡಿದ್ದರು. ಆದರೆ ಈ ಮೌಲ್ಯಗಳನ್ನು ಬೋಧಿಸಿದ ಬ್ರಿಟಿಷರು ಭಾರತದಲ್ಲಿ ನಡೆಸುತ್ತಿದ್ದ ಅನಾಹುತಗಳನ್ನು ಇವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಒಂದು ಕಡೆಯಿಂದ ಬ್ರಿಟಿಷರಿಂದ ಕಲಿಯುವುದು, ಇನ್ನೊಂದು ಕಡೆಯಿಂದ ಅವರನ್ನು ವಿರೋಧಿಸುವುದು ಈ ಎರಡೂ ಕೆಲಸಗಳನ್ನು ಸಮಾನವಾಗಿ ನಡೆಸಿಕೊಂಡು ಹೋಗುವ ನಿಪುಣತೆಯನ್ನು ಹಾಗೂ ಜಾಣತನವನ್ನು ನಮ್ಮ ರಾಷ್ಟ್ರೀಯ ನಾಯಕರು ತೋರಿಸಬೇಕಾಗಿತ್ತು. ವುಂಡ್ರೂ ಅವರು ಇಂಥ ಸಂಕೀರ್ಣ ಚರಿತ್ರೆಯನ್ನು ಕಟ್ಟಿಕೊಡುವುದರ ಜೊತೆಗೆ ಆ ಚಳವಳಿಯ ಇತರ ಸಂಕೀರ್ಣ ಮುಖಗಳ ಕಡೆಗೆ ಓದುಗರ ಗಮನ ಸೆಳೆಯುವುದರಿಂದಾಗಿ ಇದೊಂದು ಮುಖ್ಯ ಕೃತಿಯಾಗಿದೆ.

ಮಹರ್ ಜಾತಿಯಲ್ಲಿ ಹುಟ್ಟಿ ಬೆಳೆದ ಅಂಬೇಡ್ಕರ್ ಅವರಿಗೆ ಜಾತೀಯ ಅಸಮಾನತೆಯ ಕ್ರೌರ್ಯಗಳೆಲ್ಲಾ ಅನುಭವ ವೇದ್ಯವಾದ್ದರಿಂದ ಅವರು ಆ ವಿಷಯದಲ್ಲಿ ಅತ್ಯಂತ ಉಗ್ರವಾಗಿಯೇ ನಡೆದುಕೊಂಡರು. ಈ ಬಗೆಯ ಉಗ್ರತೆ ಗಾಂಧಿಯವರಲ್ಲಿ ಇರಲಿಲ್ಲವಾದ್ದರಿಂದ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಹಜವೇ ಆಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರನ್ನೂ ಜೊತೆ ಸೇರಿಸಿಕೊಂಡು ಹೋಗಬೇಕೆಂಬ ಹಠದಲ್ಲಿ ಗಾಂಧಿಯವರು ಸ್ಥಳೀಯವಾದ ಕೆಲವು ಸಮಸ್ಯೆಗಳನ್ನು ಗೌಣಗೊಳಿಸುತ್ತಿದ್ದರು. ಆದರೆ ಅಂಬೇಡ್ಕರ್ ಹಾಗೆ ಮಾಡುತ್ತಿರಲಿಲ್ಲ. ಅಸ್ಪೃಶ್ಯರ ಸಮಸ್ಯೆ ಪರಿಹಾರಕ್ಕೆ ಅವರು ಬ್ರಿಟಿಷರ ನೆರವು ಪಡೆಯಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಕಾಂಗ್ರೆಸ್ ಬಹಿಷ್ಕರಿಸಿದ ಸೈಮನ್ ಕಮಿಶನ್ ಮುಂದೆ ಅಂಬೇಡ್ಕರ್ ಅವರು ಹಾಜರಾದ್ದೇ ಇದಕ್ಕೆ ಸಾಕ್ಷಿ. ಆ ಕಾಲದಲ್ಲಿ ಅಂಬೇಡ್ಕರ್ ಅವರನ್ನು ಬ್ರಿಟಿಷರ ಏಜಂಟ್ ಅಂತಲೂ ಕರೆದು ಹೀಯಾಳಿಸಲಾಯಿತು. ಅಕ್ಟೋಬರ್ 2, 1930ರಂದು ಅಂಬೇಡ್ಕರ್ ಅವರು ಹೀಗೆ ಬರೆದರು— ‘ನಮಗೆ ನಿಮಗೆ ಅವಶ್ಯವಾಗಿರುವುದನ್ನು ಕೇಳುವುದರ ಜೊತೆಗೆ ಸ್ವಾತಂತ್ರ್ಯದ ಮಸೂದೆ ಎದುರಾದರೆ ನಾನದನ್ನು ಬೆಂಬಲಿಸುತ್ತೇನೆ. ಎಲ್ಲ ರೀತಿಯಿಂದಲೂ ಈ ದೇಶ ಪ್ರಗತಿಯಾಗಿ, ಈ ದೇಶ ಉಳಿದೆಲ್ಲ ದೇಶಗಳಿಗಿಂತ ಮುನ್ನಡೆಯಬೇಕು ಎಂದು ಕಾಂಗ್ರೆಸ್ ನಂತೆ ನನಗೂ ಅನ್ನಿಸುತ್ತದೆ.... ಹಿಂದೂ ಮುಸಲ್ಮಾನ ದಲಿತರಾದಿಯಾಗಿ ಎಲ್ಲರಿಗೂ ಸ್ವಾತಂತ್ರ್ಯ ಬೇಕಿದೆ’.

ಇದನ್ನು ಗಮನಿಸಿದರೆ ಅಂಬೇಡ್ಕರ್ ಅವರ ನಿಲುವು ಸ್ಪಷ್ಟವಾಗುತ್ತದೆ. ಅವರ ಕನಸಿನ ಭಾರತದಲ್ಲಿ ದಲಿತರಾದಿಯಗಿ ಎಲ್ಲರೂ ಸ್ವತಂತ್ರರೇ ಹೌದು. ಇದಕ್ಕಾಗಿ ಅವರು ಎಲ್ಲ ಬಗೆಯ ಸಂಘರ್ಷಗಳಿಗೆ ಸಿದ್ಧರಾಗಿದ್ದರು. ಆದರೆ ಗಾಂಧಿಯವರು ಈ ಬಗೆಯ ಆಂತರಿಕ ಸಂಘರ್ಷಕ್ಕೆ ಸಿದ್ಧರಾಗಿರಲಿಲ್ಲ. ಇಂಥ ಸಂಘರ್ಷಗಳು ಬ್ರಿಟಿಷರ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತವೆ ಎಂದವರು ಗಾಢವಾಗಿ ನಂಬಿದ್ದರು. 1920ರ ನವಂಬರ 8ರಂದು ನಿಪ್ಪಾಣಿಯಲ್ಲಿ ನಡೆದ ಸಭೆಯೊಂದರಲ್ಲಿ ಗಾಂಧಿಯವರ ಸಮ್ಮುಖದಲ್ಲಿ ಸಭಿಕರಲ್ಲಿ ಒಬ್ಬನು ಬ್ರಾಹ್ಮಣರನ್ನು ಬಲವಾಗಿ ಟೀಕಿಸಿದರು. ಇಂಥ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅಸಹಕಾರ ಚಳವಳಿ ಹಾದಿ ತಪ್ಪಬಹುದಿತ್ತು. ಆದರೆ ದೂರಾಲೋಚನೆಯಿದ್ದ ಗಾಂಧೀಜಿ ಇದಕ್ಕೆ ಉತ್ತರಿಸಿದ್ದು ಹೀಗೆ— “ಶ್ರೀ ಮಾರುತಿ ರಾಯರು ಹೇಳಿದ್ದನ್ನೆಲ್ಲಾ ನಾನು ಎಚ್ಚರಿಕೆಯಿಂದ ಕೇಳಿದ್ದೇನೆ... ಲೋಕದಲ್ಲಿ ಇತರರ ಕೈಯಿಂದ ತಮ್ಮ ಪಾದ ತೊಳೆಸಿಕೊಂಡು ಅದನ್ನು ತೀರ್ಥ ಎಂದು ಕೊಡುವ ಬ್ರಾಹ್ಮಣರು ಇಲ್ಲವೇ ಇಲ್ಲ. ಜನರ ಅಜ್ಞಾನವನ್ನು ಆಧರಿಸಿ ಬರೆದ ಗ್ರಂಥಗಳು ಎಷ್ಟೋ ಹಿಂದು ಜನರಲ್ಲಿ ಧರ್ಮಗ್ರಂಥ ಎನಿಸಿಕೊಂಡಿವೆ. ಆದರೆ ಸತ್ಯ—ಅಸತ್ಯಗಳ ವಿವೇಚನೆ ಮಾಡಬೇಕು ನಾವು. ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ, ಅವರಿಂದ ದೂರ ಇರುವುದು ಆತ್ಮ ಘಾತಕತನ’ ಇದು ಗಾಂಧೀಜಿ ಸಂಘರ್ಷಮಯ ವಾತಾವರಣವನ್ನು ಸಂಘರ್ಷಾತೀತಗೊಳಿಸಿ ಚಳವಳಿ ಸ್ಥಗಿತವಾಗದಂತೆ ನೋಡಿಕೊಂಡ ರೀತಿ. ಇಂಥ ಬಿಕ್ಕಟ್ಟುಗಳು ಹಿಂದೂ ಮತ್ತು ಮುಸ್ಲಿಮರ ನಡುವೆಯೂ ಕಾಣಿಸಿಕೊಂಡದ್ದನ್ನು ಈ ಕೃತಿ ದಾಖಲಿಸುತ್ತದೆ.

ಭಾರತೀಯ ಚುನಾವಣಾ ಪದ್ಧತಿಯು ಬಗೆ ಬಗೆಯ ಪ್ರಯೋಗದ ಹಂತಗಳನ್ನು ದಾಟಿ ಇದೀಗ ಇಲೆಕ್ಟ್ರಾನಿಕ್ ಮತದಾನದವರೆಗೆ ತಲುಪಿದೆ. ಈ ಮತದಾನ ಪ್ರಕ್ರಿಯೆಯ ಮೊದಲ ಹಂತದ ಚರ್ಚೆಗಳಲ್ಲಿ ಭಾಗವಹಿಸಿದ ಬಿ.ಆರ್.ಅಂಬೇಡ್ಕರ್, ಗಾಂಧೀ ಮತ್ತು ಸರದಾರ್ ಪಟೇಲ್ ಅವರ ನಡುವೆ ನಡೆದ ಚರ್ಚೆ, ಸಂವಾದ ಮತ್ತು ಭಿನ್ನಾಭಿಪ್ರಾಯಗಳನ್ನು ಪ್ರಸ್ತುತ ಕೃತಿಯಲ್ಲಿ ರೋಚಕವಾಗಿ ವಿವರಿಸಲಾಗಿದೆ

ಸ್ವಾತಂತ್ರ್ಯ ಚಳವಳಿಯು ಅಸ್ಪೃಶ್ಯತೆಗೆ ಹೇಗೆ ಪ್ರತಿಕ್ರಿಯಿಸಿತೆಂಬುದನ್ನು ಅರ್ಥಮಾಡಿಕೊಳ್ಳಲು ಈ ಕೃತಿ ವಿಶೇಷ ನೆರವು ನೀಡುತ್ತದೆ. ಗಾಂಧೀಜಿಯಂತೂ ಅಸ್ಪೃಶ್ಯತೆಗೆ ಬದ್ಧ ವಿರೋಧಿಯಾಗಿದ್ದರು. ಆದರೆ ಅವರ ಅನುಯಾಯಿಗಳಲ್ಲಿ ಕೆಲವರಿಗಾದರೂ ಈ ವಿಷಯದಲ್ಲಿ ಗೊಂದಲವಿತ್ತು. ಆದರೆ ಅಂಬೇಡ್ಕರ್ ಅವರಲ್ಲಿ ಅಂತಹ ಯಾವ ಗೊಂದಲವೂ ಇರಲಿಲ್ಲ, ಮತ್ತು ಅವರ ಹೋರಾಟದ ಹಾದಿ ನಿಚ್ಚಳವಾಗಿತ್ತು. 1936ರಲ್ಲಿ ಅವರು ಹೀಗೆ ಬರೆದರು— ‘ಜಾತಿಯಿಂದಾಗಿ ಹಿಂದುಗಳ ನೈತಿಕತೆ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿಯು ‘ಸಾರ್ವಜನಿಕ ಭಾವನೆ’ಯನ್ನು ನಾಶ ಪಡಿಸಿ, ಹೃದಯ ವೈಶಾಲ್ಯವನ್ನು ಹಾಳುಮಾಡಿದೆ. ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. ಹಿಂದೂವಿನ ಹೊಣೆಗಾರಿಕೆ ಮತ್ತು ಸಮಾಜ ಅವನ ಜಾತಿಗೆ ಸೀಮಿತವಾಗಿದೆ. ಸದ್ಗುಣ ಹಾಗೂ ನೀತಿ ಎರಡೂ ಜಾತೀಯತೆಯ ಮುಷ್ಟಿಯಲ್ಲಿ ಸಿಕ್ಕಿಕೊಂಡಿದೆ. ಸಹಾನುಭೂತಿ ಯಾರಿಗೆ ಅವಶ್ಯಕವೋ ಅವರಿಗದು ಸಿಗುತ್ತಿಲ್ಲ’.

ಹೀಗೆ ಜಾತಿ ಮತ್ತು ಅದನ್ನು ಸಮರ್ಥಿಸಲು ಹುಟ್ಟಿಕೊಂಡ ಧಾರ್ಮಿಕ ಪಠ್ಯಗಳ ಬಗ್ಗೆ ತೀವ್ರ ಆಕ್ರೋಶವನ್ನು ಪ್ರಕಟಿಸುವ ಅಂಬೇಡ್ಕರ್ ಅವರು ದಲಿತರನ್ನು ಮುಖ್ಯವಾಹಿನಿಗೆ ತರಲು ಮಾಡಿದ ನಿರಂತರ ಪ್ರಯತ್ನಗಳ ಜೊತೆಗೆ ಅವರ ಪ್ರಯತ್ನಗಳಿಗೆ ಅಡ್ಡಿಯಾಗಿದ್ದ ಅಂಶಗಳನ್ನು ಲೇಖಕರು ಪ್ರಸ್ತುತ ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಅಂಬೇಡ್ಕರ್ ಅವರು ದಲಿತರಿಗೆ ನೀಡಬೇಕಾದ ಮತಾಧಿಕಾರದ ಬಗ್ಗೆ 1919ರಷ್ಟು ಹಿಂದೆಯೇ ಕೆಲಸ ಮಾಡಲು ಆರಂಭಿಸಿರುವುದು. ಅದೇ ವರ್ಷ ಜನವರಿ 22ರಂದು ಮತಾಧಿಕಾರದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಸೌತ್ ಬರೋ ಸಮಿತಿಯ ಮುಂದೆ ಹಾಜರಾಗಿದ್ದ ಅವರು, ‘ನಿಜವಾದ ಅರ್ಥದಲ್ಲಿ ಜನತಾ ಪ್ರತಿನಿಧಿಗಳ ಸರಕಾರ ರಚನೆಗೊಳ್ಳಬೇಕಾದರೆ ಅಸ್ಪೃಶ್ಯರಿಗೆ ಅವರ ಜನಸಂಖ್ಯೆಯ ಪ್ರಮಾಣದಲ್ಲಿ ಪ್ರಾತಿನಿಧ್ಯ ಕೊಡುವುದು ಅವಶ್ಯಕ’ ಎಂದು ಹೇಳಿದ್ದಲ್ಲದೆ, ಅಸ್ಪೃಶ್ಯರಿಗೆ ಒಟ್ಟು ಒಂಬತ್ತು ಸ್ಥಾನಗಳನ್ನು ನೀಡಬೇಕೆಂದು ಅಗ್ರಹಿಸಿದ್ದರು.

1920ರಲ್ಲಿ ನಾಗಪುರದಲ್ಲಿ ನಡೆದ ಬಹಿಷ್ಕೃತ ಸಮಾಜ ಪರಿಷತ್ತಿನ ಸಮಾವೇಶದಲ್ಲಿ ‘ಅಸ್ಪೃಶ್ಯರ ಪ್ರತಿನಿಧಿಗಳು ಅಸ್ಪೃಶ್ಯರ ವತಿಯಿಂದಲೇ ಕೌನ್ಸಿಲ್‍ಗೆ ಆಯ್ಕೆಯಾಗಿ ಹೋಗಬೇಕೆಂಬ’ ಪ್ರಮುಖ ನಿರ್ಣಯವೊಂದನ್ನು ಅಂಗೀಕರಿಸಲಾಯಿತು. ಅಂಬೇಡ್ಕರ್ ಅವರ ನ್ಯಾಯಬದ್ಧ ಕೋರಿಕೆಯನ್ನು ಕಾಂಗ್ರೆಸ್ಸಾಗಲೀ ಗಾಂಧಿಯವರಾಗಲೀ ಗಂಭೀರವಾಗಿ ಪರಿಗಣಿಸದೇ ಇದ್ದಾಗ ಅವರು ನೇರವಾಗಿ ಗಾಂಧಿಯವರ ಮೇಲೆ ಆಕ್ರಮಣ ಆರಂಭಿಸಿದರು. 1925ರ ಏಪ್ರಿಲ್ 10—11ರಂದು ಬೆಳಗಾವಿಯ ನಿಪ್ಪಾಣಿಯಲ್ಲಿ ನಡೆದ ಬಹಿಷ್ಕೃತ ಹಿತಕಾರಿಣಿ ಸಭಾದ ಮೂರನೆಯ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು, ‘ಗಾಂಧೀಜಿ ಹಿಂದೂ ಮುಸಲ್ಮಾನ್ ಐಕ್ಯ ಹಾಗೂ ಖಾದಿ ಪ್ರಸಾರಕ್ಕೆ ಎಷ್ಟು ಮಹತ್ವ ಕೊಡುತ್ತಾರೋ ಅಷ್ಟು ಮಹತ್ವವನ್ನು ಅಸ್ಪೃಶ್ಯತಾ ನಿವಾರಣೆಗೆ ಕೊಡುವುದಿಲ್ಲ’ ಎಂದು ಗುಡುಗಿದರು. 1926ರ ಮೇ ತಿಂಗಳಲ್ಲಿ ಅವರು ಅಸ್ಪೃಶ್ಯರ ಕೈಯಲ್ಲಿ ಇರಬೇಕಾದ ಅಧಿಕಾರ ಮತ್ತು ಸಂಪತ್ತಿನ ಬಗೆಗೆ ಮಾತಾಡಿದ್ದರು. ಅಂಬೇಡ್ಕರ್ ಅವರ ಈ ಬಗೆಯ ಕೆಲಸಗಳು ಒಂದು ನಿರ್ಣಾಯಕ ಹಂತ ತಲುಪಿದ್ದು 1928ರಲ್ಲಿ. ಆಗ ಕಾಂಗ್ರೆಸ್ ಬಹಿಷ್ಕರಿಸಿದ್ದ ಸೈಮನ್ ಕಮಿಷನ್ ಇದಿರು ಹಾಜರಾದ ಅವರು ಮುಂಬಯಿ ವಿಧಾನಸಭೆಯಲ್ಲಿರುವ 140 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಅಸ್ಪೃಶ್ಯರಿಗಾಗಿ ಮೀಸಲಿಡುವ ಬೇಡಿಕೆಯನ್ನು ಮುಂದಿಟ್ಟರು. 1930ರಲ್ಲಿ ಲಂಡನ್‍ನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಅವರು ಮಾಡಿದ ಭಾಷಣವು ಬ್ರಿಟಿಷ್ ಅಧಿಕಾರಿಗಳು ಮೊದಲ ಬಾರಿಗೆ ಅಸ್ಪೃಶ್ಯರ ಬಗೆಗೆ ಗಂಭೀರವಾಗಿ ಯೋಚಿಸುವಂತೆ ಮಾಡಿತು. 1931ರ ಹೊತ್ತಿಗೆ ಅಂಬೇಡ್ಕರ್ ಅವರು, ‘ಭಾರತದ ಭಾವೀ ಸಂವಿಧಾನದಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಪ್ರತಿನಿಧೀಕರಣ ಅವಕಾಶವಿಲ್ಲವೆಂದಾದರೆ ನಾನು ಅಂತಹ ಯಾವ ಸಮಿತಿಯಲ್ಲೂ ಭಾಗವಹಿಸುವುದಿಲ್ಲ’ ಎಂದು ಘೋಷಿಸಿದರು. ಇಂಥ ಅನೇಕ ಹೋರಾಟಗಳ ಪರಿಣಾಮವಾಗಿ 1932ರ ಪೂನಾ ಒಪ್ಪಂದದ ಹೊತ್ತಿಗೆ 71ರ ಬದಲು 148 ಜಾಗಗಳನ್ನು ಅಸ್ಪೃಶ್ಯರಿಗೆ ಕೊಡಿಸುವಲ್ಲಿ ಅಂಬೇಡ್ಕರ್ ಯಶಸ್ವಿಯಾದರು. ಆದರೆ ತಮ್ಮ ಪ್ರತಿನಿಧಿಗಳನ್ನು ತಾವೇ ಚುನಾಯಿಸುವ ಹಕ್ಕನ್ನು ಮಾತ್ರ ಅವರು ಕಳಕೊಂಡರು.

ಪೂನಾ ಒಪ್ಪಂದದ ಆನಂತರ ಅಂಬೇಡ್ಕರ್ ಅವರು ಹಿಂದಿರುಗಿ ನೋಡಲೇ ಇಲ್ಲ. 1944ರ ಹೊತ್ತಿಗೆ ಅವರು ಭಾರತದ ಅಧಿಕಾರ ಹಸ್ತಾಂತರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಮಾತ್ರ ಹಸ್ತಾಂತರ ಆದರೆ ಸಾಲದು, ಅದರಲ್ಲಿ ಶೋಷಿತರಿಗೂ ಅವಕಾಶವಿರಬೇಕೆಂದು ಹೇಳಿದರು. ಈ ಮಾತು ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇರುವ ಭಿನ್ನ ದೃಷ್ಟಿಕೋನವನ್ನು ಸ್ಪಷ್ಟವಾಗಿ ದಾಖಲಿಸುತ್ತದೆ. 1946ರ ದಶಂಬರ 9ರಿಂದ 1950ರ ಜನವರಿ 24ರ ವರೆಗೆ ನಡೆದ ಭಾರತದ ಸಂವಿಧಾನ ಕುರಿತ ಚರ್ಚೆಗಳ ಮುಂಚೂಣಿಯಲ್ಲಿ ಇದ್ದ ಅಂಬೇಡ್ಕರ್ ಅವರು ಅಸ್ಪೃಶ್ಯರ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಿರಂತರವಾಗಿ ನಡೆದುಕೊಂಡದ್ದನ್ನು ಈ ಕೃತಿ ಸೂಕ್ಷ್ಮವಾಗಿ ದಾಖಲಿಸುತ್ತದೆ. ಈ ಹಂತದಲ್ಲಿ ಸರ್ದಾರ್ ಪಟೇಲ್ ಅವರಂತಹ ರಾಷ್ಟ್ರೀಯವಾದಿಗಳಿಗೂ ಅಂಬೇಡ್ಕರ್ ಅವರು ಮುಖಾಮುಖಿಯಾದ ಬಗೆಯನ್ನು ಲೇಖಕ ವೂಂಡ್ರೂ ಅವರು ಚರ್ಚಿಸಿದ್ದಾರೆ.

ಹೀಗೆ ಈ ಕೃತಿಯು ಅಂಬೇಡ್ಕರ್ ಅವರನ್ನು ಕೇಂದ್ರದಲ್ಲಿರಿಸಿಕೊಂಡು ಭಾರತದ ಚುನಾವಣಾ ಪದ್ಧತಿಯು ರೂಪುಗೊಳ್ಳುತ್ತಾ ಬಂದಿರುವ ಐತಿಹಾಸಿಕ ಪ್ರಕ್ರಿಯೆಯನ್ನು ಸೊಗಸಾಗಿ ದಾಖಲಿಸಿಸುತ್ತದೆ. ಹಾಗೆಯೇ ಅಸ್ಪೃಶ್ಯತೆಯ ವಿಷಯಕ್ಕೆ ಬಂದಾಗ ಸವರ್ಣೀಯರು ಹೇಗೆ ಒಂದು ಬಗೆಯ ಸಂಕೋಚಕ್ಕೆ ಒಳಗಾಗುತ್ತಾರೆ ಎಂಬುದನ್ನು ಗಾಂಧೀಜಿ ಮತ್ತು ಪಟೇಲ್ ಅವರನ್ನು ಉಲ್ಲೇಖಿಸಿ ಓದುಗರಿಗೆ ಮನಗಾಣಿಸುತ್ತದೆ.

ರಾಷ್ಟ್ರೀಯತೆಯ ಬಗೆಗೆ ಹೊಸ ರೀತಿಯ ಚರ್ಚೆಗಳು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಈ ಕೃತಿಯ ಓದು ಬಹಳ ಮುಖ್ಯವಾದುದು.

(ಕೃತಿ ವಿವರ: ‘Ambedkar, Gandhi and Patel: The Making of India’s Electoral System’; Raja Sekhar Vundru, Bloomsbury, Rs.499 )

* ಲೇಖಕರು ಮೂಲತಃ ಪುತ್ತೂರು ಬಳಿಯ ಪಂಜ ಗ್ರಾಮದವರು, ಪ್ರಸ್ತುತ ನವದೆಹಲಿಯ ಜವಾಹರಲಾಲ್ ನೆಹರೂ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮