2nd ಮೇ ೨೦೧೮

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಪೃಥ್ವಿದತ್ತ ಚಂದ್ರಶೋಭಿ

ಏಕೀಕರಣದ ನಂತರದ ಕರ್ನಾಟಕದ ರಾಜಕಾರಣದಲ್ಲಾಗಿರುವ ಮುಖ್ಯ ಬದಲಾವಣೆಗಳೇನು? ರಾಜಕೀಯ ಕೆಟ್ಟಿದೆ; ಪ್ರಾಮಾಣಿಕರು, ಬದ್ಧತೆಯಿರುವವರು ಹಾಗೂ ಜಾತಿ ರಾಜಕಾರಣ ಮಾಡದವರಿಗೆ ಇಂದಿನ ಚುನಾವಣಾ ರಾಜಕಾರಣದಲ್ಲಿ ಭಾಗವಹಿಸಲು ಸಾಧ್ಯವಿಲ್ಲ; ವಂಶಪಾರಂಪರ್ಯ ರಾಜಕಾರಣ, ಸ್ವಜನಪಕ್ಷಪಾತಗಳು ನಿಯಮವಾಗಿಬಿಟ್ಟಿವೆ; ಸರ್ಕಾರದ ಕೆಲಸಕಾರ್ಯಗಳಲ್ಲಿ ಭ್ರಷ್ಟತೆ ಮಿತಿಮೀರಿದೆ ಇತ್ಯಾದಿ ಹಳಹಳಿಕೆಯ ಮಾತುಗಳು ಸಾಧಾರಣವಾಗಿ ಎಲ್ಲೆಡೆಯೂ ಕೇಳಿಬರುತ್ತಿದೆ. ಇಂದಿನ ಈ ವಾಸ್ತವವನ್ನು ಗ್ರಹಿಸುವುದು ಹೇಗೆ? ಈ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ, ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿಯ ನಿರೂಪಣೆ —ಈ ಎರಡು ಆಯಾಮಗಳನ್ನು ಗಮನದಲ್ಲಿರಿಸಿಕೊಂಡು ಕಳೆದ ಆರು ದಶಕಗಳ ಕರ್ನಾಟಕದ ರಾಜಕಾರಣದ ಬಗ್ಗೆ ಕಥನವೊಂದನ್ನು ರೂಪಿಸುವ ಪ್ರಯತ್ನ ಇಲ್ಲಿದೆ.
ರಾಜಕೀಯ ಸಂಸ್ಕೃತಿಯೆಂದರೆ ರಾಜಕಾರಣದ ಅಲಿಖಿತ ನಿಯಮಗಳು ಮತ್ತು ಸಂಪ್ರದಾಯಗಳು, ರಾಜಕಾರಣಿಗಳ ಆದರ್ಶ—ಬದ್ಧತೆಗಳು ಹಾಗೂ ಅವರು ತಮ್ಮ ಕ್ಷೇತ್ರನಿವಾಸಿಗಳೊಡನೆ ಹೊಂದಿರುವ ಸಂಬಂಧ ಮುಂತಾದ ಅಂಶಗಳೆಂದು ಗ್ರಹಿಸಬಹುದು. ಸಾರ್ವಜನಿಕ ನೀತಿಯ ನಿರೂಪಣೆಯೆಂದರೆ ಸರ್ಕಾರಗಳು ತಳೆಯುವ ನೀತಿನಿಲುವುಗಳು, ಅವುಗಳ ಆಧಾರದ ಮೇಲೆ ರಚಿತವಾಗುವ ಶಾಸನಗಳು ಮತ್ತು ಅವುಗಳ ಅನುಷ್ಠಾನವೆನ್ನಬಹುದು. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಲ್ಲಾಗಿರುವ ಬದಲಾವಣೆಗಳು ಮತ್ತು ಪಲ್ಲಟಗಳ ಕಡೆಗೆ ಹೆಚ್ಚಿನ ಗಮನವನ್ನು ಹರಿಸಲಾಗಿದೆ.

ಈ ಲೇಖನದಲ್ಲಿ ನಾನು ಮೂರು ಅಂಶಗಳನ್ನು ಓದುಗರ ಮುಂದಿಡುತ್ತಿದ್ದೇನೆ. ಇವುಗಳಲ್ಲಿ ಮೊದಲನೆಯದು, ಏಕೀಕರಣದ ನಂತರ ಕರ್ನಾಟಕದಲ್ಲಿ ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿ ಆದ್ಯತೆಗಳ ವಿಚಾರದಲ್ಲಿ ಪ್ರಗತಿಪರ ಒಮ್ಮತ (ಪ್ರೋಗ್ರೆಸ್ಸಿವ ಕಾನ್ಸೆನ್ಸಸ್)ವೊಂದು ರೂಪುಗೊಂಡಿತು ಎನ್ನುವುದು. ಕನ್ನಡಕ್ಕೆ ಆದ್ಯತೆ, ಭೂಸುಧಾರಣೆ, ಜಾತಿ ಅಸಮಾನತೆಯ ಅರಿವು ಮತ್ತು ಮೀಸಲಾತಿ ಹಾಗೂ ಅಧಿಕಾರ ವಿಕೇಂದ್ರೀಕರಣಗಳೆಂಬ ನಾಲ್ಕು ಆಯಾಮಗಳಿರುವ ಈ ಪ್ರಗತಿಪರ ಒಮ್ಮತವು 1950—60ರ ದಶಕಗಳಲ್ಲಿ ಸಮಾಜವಾದಿ ಆಶಯಗಳ ಪ್ರಭಾವದಲ್ಲಿ ರೂಪುಗೊಂಡು, 1970—80ರ ದಶಕಗಳನ್ನು ನಡುಪಂಥೀಯ ನಿಲುವಿನ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳ ಸರ್ಕಾರಗಳ ಮೂಲಕ ಅನುಷ್ಠಾನಗೊಂಡಿತು ಎನ್ನುವ ವಾದವನ್ನು ಮುಂದಿಡುತ್ತಿದ್ದೇನೆ. ಆದರೆ ಈ ಒಮ್ಮತವು ಕಳೆದ ಶತಮಾನದ ಕಡೆಯ ಹೊತ್ತಿಗೆ ಕುಸಿದು, ತನ್ನ ಸೈದ್ಧಾಂತಿಕ ಮತ್ತು ನೈತಿಕ ಬಲವನ್ನು ಕಳೆದುಕೊಂಡಿತು. ನನ್ನ ಚರ್ಚೆಯ ಎರಡನೆಯ ಅಂಶವೆಂದರೆ ಈ ಪ್ರಗತಿಪರ ಒಮ್ಮತವು ಮರೆಯಾದ ನಂತರ ಕಳೆದ ಎರಡು ದಶಕಗಳಲ್ಲಿ ಯಾವುದೇ ವಿಚಾರಧಾರೆ—ಸಿದ್ಧಾಂತಗಳು ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿಗಳನ್ನು ಪ್ರಭಾವಿಸುತ್ತಿಲ್ಲ. ಈ ನಿರ್ವಾತದಲ್ಲಿ ಉದ್ಯಮಿ—ರಾಜಕಾರಣಿಗಳು ರಾಜ್ಯದ ರಾಜಕಾರಣವನ್ನು ನಿಯಂತ್ರಿಸಲು ಆರಂಭಿಸಿದರು. ಇವರ ಪ್ರಭಾವದಲ್ಲಿ ಸಾರ್ವಜನಿಕ ಒಳಿತು (ಪಬ್ಲಿಕ್ ಗುಡ್) ಎನ್ನುವುದು ಬಹುತೇಕ ಮರೆಯಾಗಿ, ಅದರ ಸ್ಥಳದಲ್ಲಿ ಉದ್ಯಮಿ—ರಾಜಕಾರಣಿಗಳ ಖಾಸಗಿ ಲಾಭವೆನ್ನುವುದು ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಮುಖ್ಯವಾಗಿದೆ. ಮೂರನೆಯದಾಗಿ, ಹೀಗೆ ಖಾಸಗಿ ಲಾಭವನ್ನು ಗುರಿಯಾಗಿಸಿಕೊಂಡಿರುವ ಉದ್ಯಮಿ—ರಾಜಕಾರಣಿಗಳು ತಮ್ಮ ಕ್ಷೇತ್ರದ ಜನರೊಡನೆ ಪಾಪ್ಯುಲಿಸಮ್ (ಜನಪ್ರಿಯ ರಾಜಕಾರಣ)ನ ಹೊಸ ರೂಪಗಳನ್ನು ಅನ್ವೇಷಿಸುತ್ತ, ರಾಜಕೀಯ ಸಂಸ್ಕೃತಿಯನ್ನೆ ಬದಲಾಯಿಸಿದ್ದಾರೆ. ಈ ಬೆಳವಣಿಗೆಗಳು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದೆ, ಬದಲಿಗೆ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಂಡುಬರುತ್ತಿದೆ. ಇಂತಹ ಬೆಳವಣಿಗೆಗಳು ಭಾರತದ ಇತರ ರಾಜ್ಯಗಳಲ್ಲಿಯೂ ಸಂಭವಿಸಿವೆಯಾದರೂ ಇಲ್ಲಿ ನಮ್ಮ ಗಮನವು ಕರ್ನಾಟಕದ ಬೆಳವಣಿಗೆಗಳನ್ನು ವಿವರಿಸುವುದಾಗಿದೆ.

ಈ ಮೇಲಿನ ಅಂಶಗಳು ಕರ್ನಾಟಕದ ರಾಜಕೀಯ ವಾಸ್ತವವನ್ನು ಸ್ಥೂಲವಾಗಿ ಹಿಡಿದಿಡಲು ನಾನು ಮಾಡುತ್ತಿರುವ ಸಮಕಾಲೀನ ಇತಿಹಾಸದ ರಚನೆಯ ಪ್ರಯತ್ನ. ಈ ಕಥನದ ಮೂಲಕ ಎಲ್ಲ ವಿದ್ಯಮಾನಗಳನ್ನೂ ನಾನು ವಿವರಿಸುತ್ತಿದ್ದೇನೆ ಎನ್ನುವ ದಾಷ್ಟ್ರ್ಯ ನನ್ನದಲ್ಲ. ಅದರಲ್ಲಿಯೂ ಕೇವಲ ಚುನಾವಣೆಗಳ ಫಲಿತಾಂಶಗಳನ್ನು ವಿವರಿಸಲು ಮತ್ತು ಆ ಮೂಲಕ ರಾಜಕಾರಣದಲ್ಲಿನ ಚಲನೆಗಳನ್ನು ವಿಶ್ಲೇಷಿಸಲು ನಾನು ಬಯಸುತ್ತಿಲ್ಲ. ಬದಲಿಗೆ ವಿಶಾಲನೆಲೆಯಲ್ಲಿ ರಾಜಕೀಯ ಇತಿಹಾಸದ ಮುಖ್ಯ ವಿದ್ಯಮಾನಗಳು ಮತ್ತು ಪಲ್ಲಟಗಳನ್ನು ಹಿಡಿದಿಡುವ ಉದ್ದೇಶ ನನ್ನದು. ಈ ವಿಶ್ಲೇಷಣೆಯಲ್ಲಿ ನಾನು ಮೇಲೆ ಗುರುತಿಸಿದಂತೆ ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿಯ ನಿರೂಪಣೆಗಳೆ ಮುಖ್ಯವಾಗಿವೆ.

1

ಕನ್ನಡ ಭಾಷೆಯನ್ನು ಮಾತನಾಡುವ ಜನರ ಪ್ರದೇಶಗಳ ಏಕೀಕರಣವಾಗಿ ವಿಶಾಲ ಕರ್ನಾಟಕ (1956ರಲ್ಲಿ ಮೈಸೂರು ಎಂಬ ಹೆಸರನ್ನು ಹೊಂದಿದ್ದ) ರಾಜ್ಯವು ರಚಿತವಾದುದು ನಮ್ಮ ಕಥನದ ಪ್ರಾರಂಭದ ಘಟ್ಟ. ಏಕೀಕರಣದ ನಂತರವೆ ಕನ್ನಡ ಭಾಷಿಕರ ರಾಜ್ಯವೊಂದರಲ್ಲಿನ ಪ್ರಜಾಸತ್ತಾತ್ಮಕ ರಾಜಕಾರಣದ ಸ್ವರೂಪವನ್ನು ಚರ್ಚಿಸಲು ಸಾಧ್ಯವಾಗುವುದು. ಕರ್ನಾಟಕವೆನ್ನುವ ಹೆಸರು 1973ರಲ್ಲಿ ಅಧಿಕೃತವಾಗಿ ಬಂದುದಾದರೂ ನಾನು ಮೊದಲನೆಯ ಭಾಗದಲ್ಲಿ ವಿಶ್ಲೇಷಣೆಯ ಅನುಕೂಲತೆಗಾಗಿ ಎಲ್ಲೆಲ್ಲಿ ಅವಶ್ಯಕವೊ ಅಲ್ಲಿ ಮೈಸೂರು ಮತ್ತು ಕರ್ನಾಟಕ ಎರಡೂ ಹೆಸರುಗಳನ್ನು ಬಳಸುತ್ತೇನೆ.

ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳ ರಾಜಕೀಯ ವಾಸ್ತವವನ್ನು ಗಮನಿಸಿ. ಚುನಾವಣಾ ರಾಜಕಾರಣ ಮತ್ತು ಸರ್ಕಾರದ ಸಾರ್ವಜನಿಕ ನೀತಿ ನಿರೂಪಣೆಗಳಲ್ಲಿ ಸಮಾಜದ ಎಲ್ಲ ವರ್ಗಗಳೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ರಾಜಕೀಯಶಾಸ್ತ್ರಜ್ಞ ಜೇಮ್ಸ್ ಮೇನರ್ ಮತ್ತು ಇ.ರಾಘವನ್ ಸರಿಯಾಗಿಯೆ ಗುರುತಿಸುವಂತೆ ಪ್ರಜಾಪ್ರಭುತ್ವವು ಆಳವಾಗಿ ನೆಲೆಯೂರಲು (Deepening of Democracy) ಸ್ವಾತಂತ್ರ್ಯಾನಂತರ ಹಲವು ದಶಕಗಳೇ ಬೇಕಾಗಿದ್ದವು. ಅಂದರೆ ಸ್ವಾತಂತ್ರ್ಯ ದೊರಕಿದ್ದು ಮತ್ತು ಪ್ರಜಾಪ್ರಭುತ್ವದ ಸ್ಥಾಪನೆಯಾಗಿದ್ದರಿಂದಲೇ ಪ್ರಜಾಸತ್ತಾತ್ಮಕ ಮನೋಭಾವವಾಗಲಿ, ಸಂಸ್ಕೃತಿಯಾಗಲಿ ಹುಟ್ಟಲಿಲ್ಲ. ಅದಕ್ಕಾಗಿ ನಿಧಾನಗತಿಯ ರಾಜಕೀಯ ಹೋರಾಟ, ಸುಧಾರಣೆಗಳು ಅಗತ್ಯವಾಗಿದ್ದವು.

1950 ಮತ್ತು 60ರ ದಶಕಗಳಲ್ಲಿ ವಿಶಾಲ ಮೈಸೂರು ರಾಜ್ಯದ ರಾಜಕಾರಣದ ಕೇಂದ್ರದಲ್ಲಿದ್ದವರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು. ಆ ವೇಳೆಗಾಗಲೆ ಈ ಎರಡೂ ಸಮುದಾಯಗಳು ಪಕ್ಷ ರಾಜಕಾರಣ ಮತ್ತು ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಭದ್ರವಾಗಿ ಬೇರು ಬಿಟ್ಟಿದ್ದವು. 20ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿಯೇ ಬ್ರಾಹ್ಮಣೇತರರ ಸಂಘಟನೆಗಳಡಿ ಲಿಂಗಾಯತ ಮತ್ತು ಒಕ್ಕಲಿಗರ ಸಾರ್ವಜನಿಕ ಚಟುವಟಿಕೆಗಳು ಪ್ರಾರಂಭವಾದವು. 1940ರ ವೇಳೆಗೆ ಈ ಎರಡೂ ಸಮುದಾಯಗಳು ಸ್ವಾತಂತ್ರ್ಯ ಚಳವಳಿ ಮತ್ತು ಏಕೀಕರಣ ಹೋರಾಟಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದವು. ಅಂದರೆ ಪ್ರಜಾಸತ್ತಾತ್ಮಾಕ ರಾಜಕಾರಣದಲ್ಲಿ ಪ್ರಾಬಲ್ಯ ಸಾಧಿಸಿದ್ದವು. ಹಾಗಾಗಿ ಇತರ ಹಿಂದುಳಿದ ವರ್ಗಗಳು ಮತ್ತು ದಲಿತರು ಕರ್ನಾಟಕದ ರಾಜಕಾರಣದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹಲವು ದಶಕಗಳೇ ಬೇಕಾದವು.

ಪ್ರಜಾಪ್ರಭುತ್ವೀಕರಣದ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, 1950 ಮತ್ತು 60ರ ದಶಕಗಳಲ್ಲಿ ವಿಶಾಲ ಮೈಸೂರು ರಾಜ್ಯದಲ್ಲಿ ಪ್ರಗತಿಪರ ಒಮ್ಮತವು ರೂಪುಗೊಳ್ಳಲು ಆರಂಭಿಸಿತು. ಈ ಪ್ರಗತಿಪರ ಒಮ್ಮತವೆಂದಾಗ ನಾನು ಸೂಚಿಸಬಯಸುವುದು ಒಂದು ಮುಖ್ಯವಾದ ಹೊಸ ಬೆಳವಣಿಗೆಯನ್ನು: ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕದ ಸಮಾಜದಲ್ಲಿ ಬದಲಾವಣೆಗಳಾಗಬೇಕು ಎನ್ನುವ ಅರಿವನ್ನು ಹೊಂದಿರುವ ಹೊಸ ಪ್ರಗತಿಪರ ಚಿಂತನೆ ರೂಪುಗೊಂಡಿತು. ಈ ಚಿಂತನೆಗೆ ಸ್ವಾತಂತ್ರ್ಯ ಚಳವಳಿ, ರಾಷ್ಟ್ರೀಯತೆಗಳ ಹಿನ್ನೆಲೆಯಿತ್ತು ಎನ್ನುವುದು ನಿಜವೆ. ಆದರೆ ನಮ್ಮ ಸಮಾಜದಲ್ಲಿ ಬದಲಾವಣೆಗಳ ಅವಶ್ಯಕತೆಯಿದೆ ಎಂದು ವಾದಿಸುವವರು ಎಲ್ಲರೂ ಒಂದೇ ಸೈದ್ಧಾಂತಿಕ ಹಿನ್ನೆಲೆಯವರು ಎಂದೇನಲ್ಲ. ನಾನು ಇಲ್ಲಿ ಸೂಚಿಸುತ್ತಿರುವ ಪ್ರಗತಿಪರ ಒಮ್ಮತವನ್ನು ರೂಪಿಸುವಲ್ಲಿ 1950—60ರ ದಶಕಗಳಲ್ಲಿ ಕರ್ನಾಟಕದಲ್ಲಿ ಕಂಡುಬರುವ ಸಮಾಜವಾದಿ ಚಿಂತನೆ ಮತ್ತು ರಾಜಕಾರಣಗಳ ಹೊಸ ಅಲೆಯು ನಿರ್ಣಾಯಕ ಪಾತ್ರವನ್ನು ವಹಿಸಿತು. ಈ ಸಮಯದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಅಧಿಕಾರದ ಹಂಚಿಕೆಗಳಲ್ಲಿ ಪ್ರಬಲ ಸಮುದಾಯಗಳೆ ಮುಂಚೂಣಿಯಲ್ಲಿದ್ದರೂ ಸಹ ಹೊಸ ವಿಚಾರಗಳು ಮತ್ತು ಸಾಧ್ಯತೆಗಳ ಮಂಥನವು ಸಹ ಇತರರಿಂದ ಪ್ರಾರಂಭವಾಯಿತು. ಅದರ ಫಲವಾಗಿ ಕರ್ನಾಟಕದಲ್ಲಿ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯಗಳಿರಲಿಲ್ಲ. ಜೊತೆಗೆ ಈಗ ರೂಪುಗೊಳ್ಳಬೇಕಿರುವ ಹೊಸಬಗೆಯ ಸಮಾಜವು ಹೇಗಿರಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಮೂಡಲಾರಂಭಿಸಿತು.

ಈ ಮೇಲೆ ಸಮಾಜವಾದಿ ಚಿಂತನೆ ಮತ್ತು ರಾಜಕಾರಣಗಳನ್ನು ಪ್ರಸ್ತಾಪಿಸಿದೆ. ಡಾ.ರಾಮಮನೋಹರ ಲೋಹಿಯಾ ನೇತೃತ್ವದ ಸಮಾಜವಾದಿ ಪಕ್ಷವು ನಾನು ಸೂಚಿಸುತ್ತಿರುವ ಪ್ರಗತಿಪರ ಒಮ್ಮತದ ಮುಖ್ಯ ಬೌದ್ಧಿಕ ಮತ್ತು ರಾಜಕೀಯ ಪ್ರೇರಣೆಯೆಂದರೆ ತಪ್ಪಾಗಲಾರದು. ಸಮಾಜವಾದಿ ಪಕ್ಷಕ್ಕೆ ಕರ್ನಾಟಕದಲ್ಲಿ ದೊರಕಿದ ಚುನಾವಣಾ ರಾಜಕೀಯದ ಯಶಸ್ಸು ಅಷ್ಟೇನು ಗಮನಾರ್ಹವಾದುದಲ್ಲ. ಸಮಾಜವಾದಿಗಳಿಗೆ ಹೋಲಿಸಿದಾಗ, ನೆರೆಯ ಕೇರಳ ಮತ್ತು ದೂರದ ಬಂಗಾಳದಲ್ಲಿ ಕಮ್ಯುನಿಸ್ಟರು ಗಟ್ಟಿಯಾದ ಸಂಘಟನೆಗಳನ್ನು ಕಟ್ಟಿದ್ದರು ಮತ್ತು ಸರ್ಕಾರಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕರ್ನಾಟಕದಲ್ಲಿ ಸಂಘಟನೆ ಮತ್ತು ಹೋರಾಟಗಳು ಗಮನಾರ್ಹ ಪ್ರಮಾಣದಲ್ಲಿ ಕಾಣಬರದಿದ್ದರೂ ಸಹ ಡಾ.ಲೋಹಿಯಾ ಮತ್ತು ಅವರ ಒಡನಾಡಿಗಳ ಪ್ರಭಾವದಿಂದ ಕರ್ನಾಟಕದಲ್ಲಿ ಹೊಸದೊಂದು ಪ್ರಗತಿಪರ ಚಿಂತನೆಯ ಪರಂಪರೆಯು ಹುಟ್ಟಿತ್ತು. ಸ್ವತಃ ಡಾ.ಲೋಹಿಯಾರವರೂ ಸಹ ಕರ್ನಾಟಕದಲ್ಲಿ 1950ರ ಮಧ್ಯಭಾಗದಲ್ಲಿಯೇ ಕರ್ನಾಟಕದ ರಾಜಕೀಯ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದು ಕಾಗೋಡು ಸತ್ಯಾಗ್ರಹದಿಂದ ಹಿಡಿದು ಕನ್ನಡದ ಚಿಂತಕರು ಮತ್ತು ಸಾಹಿತಿಗಳ ಜೊತೆಗಿನ ಒಡನಾಟದಲ್ಲಿ ಕಂಡುಬರುತ್ತದೆ. ಇವುಗಳ ಮೂಲಕ ವಿಶಾಲ ಮೈಸೂರು ಮತ್ತು ಕರ್ನಾಟಕಗಳಲ್ಲಿ ಯಾವ ಬಗೆಯ ರಾಜಕೀಯ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಹೊಸತನ ಕಾಣಲಾರಂಭಿಸಿತು.

ಡಾ.ಲೋಹಿಯಾ ಮತ್ತು ಅವರ ಸಮಾಜವಾದಿ ಚಿಂತನೆಗಳು ಇಲ್ಲಿ ಹೆಚ್ಚು ನೆಲೆಗೊಳ್ಳಲು ಕಾರಣಗಳೇನಿರಬಹುದು ಎನ್ನುವ ಚರ್ಚೆಯನ್ನು ನಾನು ಈ ಲೇಖನದಲ್ಲಿ ಮಾಡುತ್ತಿಲ್ಲ. ಬದಲಿಗೆ ವಿಶಾಲ ಮೈಸೂರು / ಕರ್ನಾಟಕಗಳಲ್ಲಿ ರೂಪುಗೊಂಡ ಪ್ರಗತಿಪರ ಒಮ್ಮತದ ನಾಲ್ಕು ಆಯಾಮಗಳನ್ನು ಓದುಗರ ಮುಂದಿಡಲು ಬಯಸುತ್ತೇನೆ. ಈ ನಾಲ್ಕೂ ಆಯಾಮಗಳು ಕರ್ನಾಟಕದಲ್ಲಿ ಅಸಮಾನತೆಯನ್ನು ಕಡಿಮೆ ಮಾಡಲು ಪ್ರಗತಿಪರರು ಕಂಡುಕೊಂಡ ದಾರಿಗಳು ಎನ್ನುವುದನ್ನು ಗುರುತಿಸಬೇಕು.

ಮೊದಲಿಗೆ ಕನ್ನಡಕ್ಕೆ ಪ್ರಾಧಾನ್ಯವನ್ನು ನೀಡಬೇಕು ಎನ್ನುವ ನಿಲುವು ಈ ಪ್ರಗತಿಪರ ಒಮ್ಮತದ ಮೊದಲನೆಯ ಆಯಾಮ. ಏಕೀಕರಣ ಚಳವಳಿಯು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿಯೇ ಹುಟ್ಟಿತ್ತಾದರೂ, ಏಕೀಕರಣ ಸಹ ಈ ಒಮ್ಮತದ ಬಹುಮುಖ್ಯ ಭಾಗ. ಬಹುಶಃ ಕನ್ನಡಿಗರಷ್ಟು ವಿಭಿನ್ನ ರಾಜಕೀಯ ಘಟಕಗಳ ಅಡಿಯಲ್ಲಿ ಹಂಚಿಹೋಗಿದ್ದ ಭಾಷಾ ಸಮುದಾಯ ಮತ್ತೊಂದಿರಲಿಲ್ಲ. ಹಾಗಾಗಿಯೆ ಕನ್ನಡ ಭಾಷಿಕರೆಲ್ಲರೂ ಒಂದು ರಾಜಕೀಯ ಘಟಕದ ಚೌಕಟ್ಟಿನಲ್ಲಿ ವಾಸವಾಗಿದ್ದರೆ, ಆಗ ಆಡಳಿತಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ಕನ್ನಡಿಗರಿಗೆ ನ್ಯಾಯ ದೊರಕುತ್ತದೆ ಎನ್ನುವ ಭಾವನೆ ಉತ್ಕಟವಾಗಿತ್ತು. ಕನ್ನಡದ ರಾಜ್ಯವೊಂದಿದ್ದರೆ ಸಾಲದು. ಆ ರಾಜ್ಯದ ಸಾರ್ವಜನಿಕ ಬದುಕಿನ ಎಲ್ಲ ಆಯಾಮಗಳಲ್ಲಿ ಕನ್ನಡಕ್ಕೆ ಆದ್ಯತೆ ದೊರಕಬೇಕು. ಕನ್ನಡವು ಶಿಕ್ಷಣ ಭಾಷೆಯಾಗಬೇಕು. ಜ್ಞಾನದ ಉತ್ಪಾದನೆ ಮತ್ತು ಪ್ರಸರಣಗಳು ಕನ್ನಡದಲ್ಲಿಯೇ ನಡೆಯಬೇಕು ಎನ್ನುವ ನಂಬಿಕೆಯೂ ಸಹ ಈ ಕಾಲದಲ್ಲಿ ಆಳವಾಗಿ ನೆಲೆಯೂರಿತು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಕುವೆಂಪು ಅವರು ಕನ್ನಡದಲ್ಲಿ ಉನ್ನತ ಶಿಕ್ಷಣವು ದೊರಕಬೇಕು ಎನ್ನುವ ಆಶಯವನ್ನು ಅನುಷ್ಠಾನಗೊಳಿಸಿದರು. ಈ ಹಿನ್ನೆಲೆಯಲ್ಲಿ ಇಂಗ್ಲೀಷ್ ಮತ್ತು ಹಿಂದಿಗಳ ಪ್ರಾಮುಖ್ಯವನ್ನು ಕಡಿಮೆ ಮಾಡುವುದು ಒಂದು ಚಳವಳಿಯೋಪಾದಿಯಲ್ಲಿ ಬೆಳೆಯಿತು.

ಪ್ರಗತಿಪರ ಒಮ್ಮತದ ಎರಡನೆಯ ಆಯಾಮವು ಭೂಸುಧಾರಣೆ ಅಥವಾ ಭೂಮಿಯ ಮರುಹಂಚಿಕೆಯ ಪ್ರಶ್ನೆ. ದೇಶದ ಇತರ ಭಾಗಗಳಿಗೆ ಹೋಲಿಸಿದಾಗ, ಭೂಹಿಡುವಳಿಗಳು ವಿಶಾಲ ಮೈಸೂರಿನ ಭಾಗಗಳಲ್ಲಿ ಬಹುಮಟ್ಟಿಗೆ ಸಣ್ಣದಾಗಿದ್ದವು. ಹಾಗಾಗಿ ಇದು ಜಮೀನುದಾರರರೆ ಪ್ರಬಲರಾಗಿದ್ದ, ಭೂಹಿಡುವಳಿಯಲ್ಲಿ ತೀವ್ರ ಅಸಮಾನತೆಯಿದ್ದ ರಾಜ್ಯವಾಗಿರಲಿಲ್ಲ. ಇದರ ನಡುವೆಯೂ ಗೇಣಿದಾರರಿಗೆ ಮತ್ತು ಭೂರಹಿತರಿಗೆ (ಅದರಲ್ಲಿಯೂ ಭೂಒಡೆತನವನ್ನು ಸಾಂಪ್ರದಾಯಿಕವಾಗಿ ಹೊಂದಿರದ ಕೆಳಜಾತಿಗಳವರಿಗೆ) ಭೂಮಿಯ ಒಡೆತನವನ್ನು ಕೊಡಬೇಕು ಎನ್ನುವ ಬಗ್ಗೆ ಈ ಕಾಲದಲ್ಲಿ ಗಂಭೀರ ಚರ್ಚೆ ಪ್ರಾರಂಭವಾಯಿತು ಎನ್ನುವುದಂತೂ ಸ್ಪಷ್ಟ. 1950ರ ದಶಕದ ಪ್ರಾರಂಭದ ಕಾಗೋಡು ಸತ್ಯಾಗ್ರಹ ಮತ್ತು ವಿನೋಬಾ ನೇತೃತ್ವದ ಭೂದಾನ ಚಳವಳಿಗಳು ಈ ವಿಚಾರದಲ್ಲಿ ಸಾರ್ವಜನಿಕ ಪ್ರಜ್ಞೆಯನ್ನು ವಿಸ್ತರಿಸಿದವು. 1961ರ ವೇಳೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವೆ ಮೊದಲ ಭೂಸುಧಾರಣೆಯ ಮಸೂದೆಯನ್ನು ಕಡಿದಾಳು ಮಂಜಪ್ಪನವರ ಮುಂದಾಳತ್ವದಲ್ಲಿ ರೂಪಿಸಿತು ಮತ್ತು ಅನುಷ್ಠಾನಗೊಳಿಸಿತು. ಇದರಿಂದಾದ ಸುಧಾರಣೆ ತುಂಬ ಸೀಮಿತವಾದುದು ಆದರೂ ಭೂಸುಧಾರಣೆಯು ಒಂದು ಗಂಭೀರವಾದ ಸವಾಲು ಎನ್ನುವುದನ್ನು ಎಲ್ಲ ಪಕ್ಷಗಳೂ ಗುರುತಿಸಿದ್ದವು. ಮುಂದೆ 1970ರ ದಶಕದಲ್ಲಿ ದೇವರಾಜ್ ಅರಸು ಸರ್ಕಾರವು ಹೆಚ್ಚು ವ್ಯಾಪಕವಾದ ಭೂಸುಧಾರಣೆಯ ನೀತಿಯನ್ನು ರೂಪಿಸಿತು. ಇಲ್ಲಿ ಕುತೂಹಲದ ವಿಚಾರವೆಂದರೆ ಕರ್ನಾಟಕದ ಭೂಸುಧಾರಣೆಯ ಸಾಧನೆಯ ದಾಖಲೆಯು ಎಡಪಂಥೀಯ ಸರ್ಕಾರಗಳಿದ್ದ ಕೇರಳ ಮತ್ತು ಪಶ್ಚಿಮ ಬಂಗಾಳಗಳಿಗೆ ಹೋಲಿಸಬಹುದಾಗಿದೆ ಎನ್ನುವುದು.

ನಮ್ಮ ಚರ್ಚೆಯ ಮೂರನೆಯ ಆಯಾಮವೆಂದರೆ ಜಾತಿಯನ್ನು ಅಸಮಾನತೆಯ ಬಹುಮುಖ್ಯ ಸೆಲೆಗಳಲ್ಲಿ ಒಂದು ಗುರುತಿಸಿ, ಅದರ ಬಗ್ಗೆ ಸಮಾಜದ ಪ್ರಜ್ಞೆಯನ್ನು ವಿಸ್ತರಿಸಿದುದು. ಜಾತಿವಿರೋಧಿ ಚಳವಳಿಗೆ ಹಿನ್ನೆಲೆಯಾಗಿ ಆಧುನಿಕಪೂರ್ವ ಕಾಲದ ಮತ್ತು ಆಧುನಿಕ ಕಾಲದ ಪ್ರಭಾವಗಳು ಹಲವಾರು ಇವೆ. ಎಲ್ಲರಿಗೂ ತಿಳಿದಿರುವ ಈ ಪರಂಪರೆಗಳನ್ನು ಹೆಸರಿಸಬೇಕಾದ ಅಗತ್ಯವಿಲ್ಲ. ಆದರೆ 1950—60ರ ದಶಕಗಳ ಕನ್ನಡದ ಪ್ರಗತಿಪರರು ಜಾತಿ ಮತ್ತು ಅಸಮಾನತೆಗಳ ನಡುವೆಯಿದ್ದ ಸಂಬಂಧವನ್ನು ಬಹಳ ಸ್ಪಷ್ಟವಾಗಿ ಗುರುತಿಸಿದರು. ಹೊಸದೊಂದು ನಾಗರಿಕ ಸಮಾಜವನ್ನು ಕಟ್ಟಲು ಜಾತಿವಿನಾಶದ ಅಗತ್ಯವಿದೆ ಎನ್ನುವ ವಾದವನ್ನೂ ಸಾಕಷ್ಟು ಪ್ರಬಲವಾಗಿಯೆ ಮಂಡಿಸಿದರು. ಇದರ ಅಂಗವಾಗಿಯೆ ಒಂದೆಡೆ ಅಂತರ್ಜಾತೀಯ ವಿವಾಹಗಳನ್ನು ಪೋಷಿಸುವ ಪ್ರಯತ್ನಗಳು ಚಳವಳಿಯೋಪಾದಿಯಲ್ಲಿ ನಡೆದರೆ, ಮತ್ತೊಂದೆಡೆ ಜಾತಿವ್ಯವಸ್ಥೆಯ ಐತಿಹಾಸಿಕ ದುಷ್ಪರಿಣಾಮಗಳನ್ನು ಸರಿಪಡಿಸಲು ಮೀಸಲಾತಿಯ ಅಗತ್ಯವಿದೆ ಎನ್ನುವ ಒಮ್ಮತ ಮೂಡಿತು. ಮೀಸಲಾತಿಯ ಪರವಾಗಿ ಆಗಲೆ ಸುಮಾರು 50 ವರ್ಷಗಳ ತಯಾರಿ ಮೈಸೂರು ದೇಶಿ ಸಂಸ್ಥಾನದಲ್ಲಿ ನಡೆದಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ನಾನು ಪ್ರಸ್ತಾಪಿಸುತ್ತಿರುವ ಒಮ್ಮತದ ನಾಲ್ಕನೆಯ ಆಯಾಮವು ಅಧಿಕಾರದ ವಿಕೇಂದ್ರೀಕರಣ ಅಥವಾ ಪಂಚಾಯತಿರಾಜ್ ವ್ಯವಸ್ಥೆ. ಗಾಂಧೀಜಿಯ ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಸಂಸದೀಯ ಪ್ರಜಾಪ್ರಭುತ್ವದೊಳಗೆ ತರುವ ಅಧಿಕಾರದ ವಿಕೇಂದ್ರೀಕರಣದ ಚರ್ಚೆಗಳು ವಿಶಾಲ ಮೈಸೂರಿನಲ್ಲಿ ಸಮಾಜವಾದಿಗಳು ಮತ್ತು ಗಾಂಧೀವಾದಿಗಳ ಪ್ರಭಾವದಡಿಯಲ್ಲಿ ಪ್ರಾರಂಭವಾದವು. ರಾಜ್ಯಸರ್ಕಾರವು ತನ್ನ ಅಧಿಕಾರದ ಒಂದು ಭಾಗವನ್ನು ಸ್ಥಳೀಯ ಸಂಸ್ಥೆಗಳಿಗೆ ಬಿಟ್ಟುಕೊಡಬೇಕು ಎನ್ನುವುದರ ಬಗ್ಗೆ ವೈಚಾರಿಕವಾಗಿ ಒಮ್ಮತ ರೂಪುಗೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹವಾದ ಅಂಶ.

ಈ ಮೇಲೆ ಪ್ರಸ್ತಾಪಿಸಿರುವ ಪ್ರಗತಿಪರ ಒಮ್ಮತವು ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿ ನಿರೂಪಣೆಗಳನ್ನು ಪ್ರಭಾವಿಸಿತು ಮಾತ್ರವಲ್ಲ, 1970 ಹಾಗೂ 80ರ ದಶಕಗಳಲ್ಲಿ ಪ್ರಮುಖವಾಗಿ ಅನುಷ್ಠಾನಗೊಂಡ ರಾಜ್ಯಸರ್ಕಾರದ ನೀತಿಗಳೆಂದರೆ ಈ ಮೇಲಿನವುಗಳೆ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಸರ್ಕಾರಗಳು ಕೈಗೊಂಡ ಎಲ್ಲ ಪ್ರಗತಿಪರ ಶಾಸನಗಳೂ ಸಹ ಪ್ರಗತಿಪರ ಒಮ್ಮತವು ಸಿದ್ಧಪಡಿಸಿದ್ದ ಭೂಮಿಕೆಯಿಂದ ಸಾಧ್ಯವಾದವುಗಳು. ಅಂದರೆ ಪ್ರಗತಿಪರ ಒಮ್ಮತವು ಅರಸು ಮತ್ತು ಹೆಗಡೆ ಇಬ್ಬರಿಗೂ ಹೊಸ ಸಾಧ್ಯತೆಗಳನ್ನು ಒದಗಿಸಿತ್ತು. ಹಾಗಾಗಿ ಭೂಸುಧಾರಣೆ, ಮೀಸಲಾತಿಯ ವಿಸ್ತರಣೆ, ಕನಿಷ್ಠ ವೇತನ, ಜೀತಪದ್ಧತಿ ಮತ್ತು ಮಲಹೊರುವ ಪದ್ಧತಿಗಳ ನಿಷೇಧ, ಸಾಲಮನ್ನಾ, ಗ್ರಾಮೀಣ ನಿವೇಶನ ಹಂಚುವ ಯೋಜನೆ, ವೃದ್ಧಾಪ್ಯ ವೇತನ, ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲ ಇತ್ಯಾದಿಗಳನ್ನು ಅರಸು ಜಾರಿಗೊಳಿಸಿದರು. ಈ ಕಾರ್ಯಕ್ರಮಗಳಿಗೆ ಇಂದಿರಾರ 20 ಅಂಶಗಳ ಕಾರ್ಯಕ್ರಮಗಳ ಹೊರಕವಚವಿದ್ದರೂ, ಅರಸು ಅವರಿಗೆ ಕರ್ನಾಟಕದಲ್ಲಿ ಸಹಾಯವಾಗಿದ್ದು ಈಗಾಗಲೆ ಪ್ರಸರಣದಲ್ಲಿದ್ದ ಸಮಾಜವಾದಿ ಆಶಯಗಳು. ಹಾಗೆಯೆ ಹೆಗಡೆಯವರ ಕಾಲದಲ್ಲಿ ಸಹ ಪ್ರಗತಿಪರ ಒಮ್ಮತವು ಪಂಚಾಯತ್ ರಾಜ್ ವ್ಯವಸ್ಥೆ, ಕನ್ನಡಕ್ಕೆ ವಿಶೇಷ ಆದ್ಯತೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿಸ್ತರಣೆಯ ಮೂಲಕ ಜಾರಿಗೊಂಡಿತು.

ಚಾರಿತ್ರಿಕ ಹಿನ್ನೋಟದಲ್ಲಿ ನಮಗೆ ಪ್ರಗತಿಪರ ಒಮ್ಮತವು ಸುಸಂಬದ್ಧವಾಗಿ ಕಾಣುತ್ತದೆ. ಆದರೆ ಸಮಕಾಲೀನರಿಗೆ ಇದೊಂದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡ ಯಾವುದೆ ಒಂದು ಗುಂಪಿನ ಯೋಜಿತ ಪ್ರಕ್ರಿಯೆ ಎಂದು ಕಾಣುತ್ತಿರಲಿಲ್ಲ ಎಂದರೆ ತಪ್ಪಾಗಲಾರದು. ಶಾಂತವೇರಿ ಗೋಪಾಲಗೌಡರ ನೇತೃತ್ವದ ಲೋಹಿಯಾ ಸಮಾಜವಾದಿಗಳು ಮತ್ತು ಅವರ ಜೊತೆಗೆ ಒಡನಾಟವಿದ್ದ ಕನ್ನಡದ ಚಿಂತಕರು ಹಾಗೂ ಸಾಹಿತಿಗಳು ಪ್ರಗತಿಪರ ಒಮ್ಮತವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿದರು. ಆದರೆ ಇವರ ಜೊತೆಗೆ ರಾಷ್ಟ್ರೀಯ ಚಳವಳಿಯ ಹಿನ್ನೆಲೆಯಿದ್ದ ಗಾಂಧಿವಾದಿಗಳು, ಇತರ ಎಡಪಂಥೀಯ ಗುಂಪುಗಳು, ದಲಿತ—ಶೂದ್ರ ಚಳವಳಿಗಳು ಹೀಗೆ ಹಲವು ಗುಂಪುಗಳು ಒಮ್ಮತದ ರಚನೆಗೆ ಕೊಡುಗೆ ನೀಡಿದರು. ಈ ಗುಂಪುಗಳಿಗೆ ತಮ್ಮ ರಾಜಕೀಯ ತತ್ವಗಳು ಮತ್ತು ಕಾರ್ಯಕ್ರಮಗಳ ಆಧಾರದ ಮೇರೆಗೆ ಅಧಿಕಾರವನ್ನು ಗಳಿಸುವುದು ಬಹುಮಟ್ಟಿಗೆ ಅಸಾಧ್ಯದ ಮಾತಾಗಿತ್ತು. ಆದರೆ ಇವರ ಚಿಂತನೆಗಳು, ವಾದಗಳು ಮತ್ತು ಹೋರಾಟಗಳು ಸಾಧ್ಯತೆಯ ಪರಿಧಿಯನ್ನು ವಿಸ್ತರಿಸಿದವು.

ಪ್ರಗತಿಪರ ಒಮ್ಮತವು ಕರ್ನಾಟಕದ ಎಲ್ಲ ಜನರೂ ಒಪ್ಪಿದ ವಿಚಾರವೆಂದು ನಾನಿಲ್ಲಿ ವಾದಿಸುತ್ತಿಲ್ಲ. ಆದರೆ ಇದು ನಮ್ಮ (ಅದರಲ್ಲಿಯೂ ಸುಶಿಕ್ಷಿತರ) ಅರಿವಿನ, ಸಾಮಾನ್ಯ ತಿಳಿವಳಿಕೆಯ ಅಂಗವಾಯಿತು ಎನ್ನಬಹುದು. ಈ ಮೂಲಕ ಹೊಸ ಸಮಾಜದ ಪರಿಕಲ್ಪನೆಯೊಂದು (ಅದು ಸೀಮಿತವಾದುದು ಅಥವಾ ಅಸ್ಪಷ್ಟವಾದುದು ಎಂದರೂ ಸರಿಯೇ) ನಾಗರಿಕ ಸಮಾಜಕ್ಕೆ ಲಭ್ಯವಾಯಿತು. ಈ ಅರ್ಥದಲ್ಲಿ ಪ್ರಗತಿಪರ ಒಮ್ಮತವು 1960ರ ನಂತರದಲ್ಲಿ ರಾಜಕೀಯ ನೈತಿಕತೆಯ ಕೇಂದ್ರದಲ್ಲಿತ್ತು. ಅಂದರೆ ಅಧಿಕಾರವನ್ನು ಬಯಸುತ್ತಿದ್ದ ರಾಜಕೀಯ ನಾಯಕರುಗಳಿಗೆ ಈ ಒಮ್ಮತದಿಂದ ಹೊರಹೊಮ್ಮಿದ ಸಾರ್ವಜನಿಕ ಒಳಿತಿನ ಪರಿಕಲ್ಪನೆಯೊಂದು ಇತ್ತು. ಇದಕ್ಕೆ ಉದಾಹರಣೆಯಾಗಿ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಕಲ್ಯಾಣವನ್ನು ಮತ್ತು ರಾಮಕೃಷ್ಣ ಹೆಗಡೆಯವರು ಅಧಿಕಾರದ ವಿಕೇಂದ್ರೀಕರಣವನ್ನು ಪ್ರತಿಪಾದಿಸಿದ್ದನ್ನು ನೀಡಬಹುದು.

1990ರ ದಶಕದ ಕಡೆಯ ಹೊತ್ತಿಗೆ ಪ್ರಗತಿಪರ ಒಮ್ಮತವು ಬಿಕ್ಕಟ್ಟಿನಲ್ಲಿತ್ತು. ಈ ಬಿಕ್ಕಟ್ಟಿಗೆ ವಿವರಣೆಯಾಗಿ ಜಾಗತೀಕರಣವನ್ನಾಗಲಿ ಅಥವಾ ಭಾರತೀಯ ಜನತಾ ಪಕ್ಷದ ಏಳಿಗೆಯನ್ನು ಈ ಕಥನದಲ್ಲಿ ನಾನು ಮುಂದಿಡುತ್ತಿಲ್ಲ. ಈ ಪ್ರಬಂಧದ ಮುಂದಿನ ಎರಡು ಭಾಗಗಳಲ್ಲಿ ಈ ಎರಡು ವಿದ್ಯಮಾನಗಳಿಗೆ ಪ್ರಗತಿಪರ ಒಮ್ಮತದ ಬಿಕ್ಕಟ್ಟಿಗೂ ಇರುವ ಸಂಬಂಧದ ಕೆಲವು ಎಳೆಗಳು ಪ್ರಸ್ತಾಪವಾಗಲಿದೆ. ಆದರೆ ಈಗ ಎರಡು ಅಂಶಗಳನ್ನು ಗಮನಿಸಬೇಕು. ಮೊದಲಿಗೆ, ಕಳೆದ ದಶಕದಲ್ಲಿ ಪ್ರಗತಿಪರ ಚಿಂತನೆಗಳು ಮತ್ತು ಅವರು ಪ್ರಸ್ತಾಪಿಸುತ್ತಿರುವ ಬದಲಾವಣೆಗಳೆ ಅನಗತ್ಯ ಎನ್ನುವ ವಾದವನ್ನು ಬಲಪಂಥೀಯರು ಮುಂದಿಡುತ್ತಿದ್ದಾರೆ. ಹಾಗಾಗಿ ಪ್ರಗತಿಪರ ಬುದ್ಧಿಜೀವಿಗಳ ಮೇಲೆ ರಾಜಕಾರಣಿಗಳು, ಮಠಗಳ ಸ್ವಾಮಿಗಳು ಮತ್ತಿತರರು ದಾಳಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಎರಡನೆಯದಾಗಿ, ಪ್ರಗತಿಪರ ಒಮ್ಮತದ ಗುರಿಗಳು ಸಹ ಈಗ ತಮ್ಮ ಶಕ್ತಿ ಮತ್ತು ಸಾಧ್ಯತೆಗಳನ್ನು ಕಳೆದುಕೊಂಡು, ತಮ್ಮ ಮೂಲರೂಪದ ವಿಡಂಬನೆಗಳಾಗಿ ಪರಿವರ್ತಿತವಾಗಿವೆ.

2

ಪ್ರಗತಿಪರ ಒಮ್ಮತದ ನಂತರದ ಕರ್ನಾಟಕದ ರಾಜಕಾರಣದ ಮೇಲೆ ಸೈದ್ಧಾಂತಿಕ ಬದ್ಧತೆ ಅಥವಾ ವಿಚಾರಧಾರೆಗಳ ಪ್ರಭಾವವಿದೆ ಎಂದು ತೋರುತ್ತಿಲ್ಲ. ಇದು ಸಾಮಾಜಿಕ ನ್ಯಾಯದ ಮಾತುಗಳನ್ನಾಡುವ ಎಡಪಂಥೀಯ/ ನಡುಪಂಥೀಯರ ವಿಷಯದಲ್ಲಾಗಲಿ, ಹಿಂದುತ್ವದ ವಾದಗಳನ್ನು ಮುಂದಿಡುವ ಬಲಪಂಥೀಯರ ವಿಚಾರದಲ್ಲಾಗಲಿ ಸತ್ಯವೆನಿಸುತ್ತಿದೆ. ಇವರ ರಾಜಕೀಯ ಸಂಸ್ಕೃತಿಯನ್ನು ಮತ್ತು ಸಾರ್ವಜನಿಕ ನೀತಿ ನಿರೂಪಣೆಯನ್ನು ಪ್ರಭಾವಿಸುತ್ತಿರುವುದು ಕಳೆದ ಎರಡು ದಶಕಗಳಲ್ಲಿ ನಮಗೆ ಗೋಚರಿಸುವ ಹೊಸ ಮಾದರಿಯ ರಾಜಕಾರಣ. ಅದರ ಚರ್ಚೆಯನ್ನು ಎರಡನೆಯ ಭಾಗದಲ್ಲಿ ಮಾಡುತ್ತೇನೆ.

1970ರ ದಶಕದಲ್ಲಿ ದೇವರಾಜ್ ಅರಸು ಸರ್ಕಾರವು ಹೆಚ್ಚು ವ್ಯಾಪಕವಾದ ಭೂಸುಧಾರಣೆಯ ನೀತಿಯನ್ನು ರೂಪಿಸಿತು. ಇಲ್ಲಿ ಕುತೂಹಲದ ವಿಚಾರವೆಂದರೆ ಕರ್ನಾಟಕದ ಭೂಸುಧಾರಣೆಯ ಸಾಧನೆಯ ದಾಖಲೆಯು ಎಡಪಂಥೀಯ ಸರ್ಕಾರಗಳಿದ್ದ ಕೇರಳ ಮತ್ತು ಪಶ್ಚಿಮ ಬಂಗಾಳಗಳಿಗೆ ಹೋಲಿಸಬಹುದಾಗಿದೆ ಎನ್ನುವುದು.

ಕರ್ನಾಟಕದ ಹೊಸ ರಾಜಕಾರಣದ ಕೇಂದ್ರದಲ್ಲಿ ಇರುವುದು ಹೊಸ ಬಗೆಯ ರಾಜಕಾರಣಿ. ಈತ ಉದ್ಯಮಿಯೂ ಹೌದು. ಲಜ್ಜೆ, ಪ್ರಾಮಾಣಿಕತೆ, ಅಪೇಕ್ಷೆ ಮತ್ತು ಸಂಯಮಗಳು ಸರಿಯಾದ ಪ್ರಮಾಣದಲ್ಲಿ ಈ ಹೊಸ ಮಾದರಿಯ ರಾಜಕಾರಣಿಯಲ್ಲಿ ಇದೆ ಎಂದು ಹೇಳುವುದು ಕಷ್ಟವಾಗುತ್ತಿದೆ. ಇಂತಹ ಹೊಸ ರಾಜಕಾರಣಿಯ ಬಹುಮುಖ್ಯ ಗುಣವೆಂದರೆ ಸಾರ್ವಜನಿಕ ನೀತಿಯನ್ನು ತನ್ನ ಖಾಸಗಿ ಲಾಭಕ್ಕಾಗಿ ಬಳಸಿಕೊಳ್ಳುವುದು. ಆತನ ಚಟುವಟಿಕೆಗಳು ಸಾರ್ವಜನಿಕ ಒಳಿತಿನ ಯಾವುದೆ ಪರಿಕಲ್ಪನೆಯಿಂದ (ಅವುಗಳು ಜಾತಿ—ಧರ್ಮ— ಪ್ರದೇಶ ಇತ್ಯಾದಿ ಸಂಕುಚಿತ ನೆಲೆಯವುಗಳಾದರೂ ಆಗಿರಬಹುದು) ಪ್ರಭಾವಿತವಾಗಿವೆ ಎನಿಸುತ್ತಿಲ್ಲ. 2004ರ ನಂತರವಂತೂ ಕರ್ನಾಟಕದ ವಿವಿಧ ಸರ್ಕಾರಗಳ ಸಾರ್ವಜನಿಕ ನೀತಿಯು ಸಾರ್ವಜನಿಕ ಒಳಿತಿನ ಪರಿಕಲ್ಪನೆಯನ್ನು ಹೊಂದಿಲ್ಲವೆಂದೆ ಹೇಳಬೇಕು. ಇದು ಅತಿಶಯೋಕ್ತಿಯೆನಿಸಿದರೂ ಮುಂದಿನ ಭಾಗದಲ್ಲಿ ಈ ನನ್ನ ಹೇಳಿಕೆಗೆ ವಿವರಣೆಯನ್ನು ನೀಡುತ್ತೇನೆ.

ನಾನು ಹೇಳುತ್ತಿರುವುದು ಸತ್ಯವಾದರೆ ನಾವು ಇತ್ತೀಚಿನ ವರ್ಷಗಳಲ್ಲಿ ನೋಡುತ್ತಿರುವುದು ರಾಜಕಾರಣ ಮತ್ತು ಉದ್ದಿಮೆಗಳ ಗಣನೀಯ ಸಮ್ಮಿಳನ. ಇದನ್ನು ಗುರುತಿಸುವುದು ಎರಡು ಕಾರಣಗಳಿಂದ ಮುಖ್ಯವಾಗುತ್ತಿದೆ. ಒಂದೆಡೆ, ನಾನು ಮೇಲೆ ಹೇಳಿದ ಹೊಸ ಮಾದರಿಯ ಉದ್ಯಮಿ—ರಾಜಕಾರಣಿಯು ಸಾರ್ವಜನಿಕ ಜೀವನದ ಮುಂಚೂಣಿಗೆ ಬಂದಿದ್ದಾನೆ. ಮತ್ತೊಂದೆಡೆ, ಈ ಕಾಲದಲ್ಲಿ ಭ್ರಷ್ಟಾಚಾರವೂ ಸಹ ಹೊಸರೂಪಗಳಲ್ಲಿ ನಮ್ಮ ಮುಂದೆ ಅವತರಿಸುತ್ತಿದೆ. ಹೊಸ ರಾಜಕಾರಣಿ ಇತರರಿಂದ (ಬಹುಮುಖ್ಯವಾಗಿ ಉದ್ಯಮಿಗಳಿಂದ) ಅವರಿಗೆ ಅನುಕೂಲ ಮಾಡಿಕೊಡಲು ಲಂಚವನ್ನು ಕೇಳುತ್ತಿಲ್ಲ. ಬದಲಿಗೆ ತಾನೆ ಉದ್ಯಮಿಯಾಗಿ ಮುಂದಾಗುತ್ತಿದ್ದಾನೆ. ಈ ಹೊಸ ಬೆಳವಣಿಗೆಯಲ್ಲಿ ರಾಜಕಾರಣಿಯ ಜಾತಿ ಮತ್ತು ವರ್ಗದ ಹಿನ್ನೆಲೆಯು ಅಷ್ಟು ಮುಖ್ಯವಾಗುತ್ತಿಲ್ಲ. ಹಾಗಾಗಿಯೆ ಹೊಸ ಅವಕಾಶಗಳನ್ನು ಗುರುತಿಸಿದ ಸಾವಿರಾರು ಹಿಂದುಳಿದ ಜಾತಿ — ವರ್ಗಗಳಿಗೆ ಸೇರಿದವರೂ ತಾಲೂಕಿನಿಂದ ರಾಜ್ಯಮಟ್ಟದವರಗೆ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೆ ಇಂದಿನ ಭ್ರಷ್ಟಾಚಾರವು ಸಾರ್ವಜನಿಕ ನೀತಿಯನ್ನು ಖಾಸಗಿ ಲಾಭಕ್ಕಾಗಿ ರೂಪಿಸುವುದು ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಈ ಹೊಸ ಉದ್ಯಮಿ—ರಾಜಕಾರಣಿಯು ಮುಖ್ಯವಾಗಿ ಗಮನ ಹರಿಸಿರುವುದು ಪ್ರಭುತ್ವ—ಸರ್ಕಾರಗಳು ನಿಯಂತ್ರಿಸುವ ನೈಸರ್ಗಿಕ ಸಂಪನ್ಮೂಲಗಳ ಕಡೆಗೆ. ಇದರಲ್ಲಿ ರಿಯಲ್ ಎಸ್ಟೇಟ್, ವಿವಿಧ ಬಗೆಯ ಗಣಿಗಾರಿಕೆ (ಕಬ್ಬಿಣ, ಗ್ರಾನೈಟ್, ಕಲ್ಲು), ಮರಳು ಮತ್ತು ನೀರಿನ ಸುತ್ತಲಿನ ವಹಿವಾಟುಗಳು ಸೇರಿವೆ. ಈ ಉದ್ದಿಮೆಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿಗಳು ಬೇಕು ಹಾಗೂ ಇವುಗಳನ್ನು ನಡೆಸುವಾಗ ಸರ್ಕಾರದ ನಿಯಮ—ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಉದಾಹರಣೆಗೆ ಗಣಿಗಾರಿಕೆಗೆ ಸಂಬಂಧಿಸಿದ ಈ ಕೆಳಗಿನ ಚಟುವಟಿಕೆಗಳನ್ನು ಪರಿಗಣಿಸಿ: ಅನುಮತಿಯಿಲ್ಲದ ಜಾಗಗಳಲ್ಲಿ ಗಣಿಗಾರಿಕೆ ನಡೆಸುವುದು, ನಕಲಿ ಪರ್ಮಿಟ್ ಮತ್ತಿತರ ದಾಖಲಾತಿಗಳನ್ನು ಬಳಸುವುದು, ಸರಕುಪಟ್ಟಿಯಲ್ಲಿ ಕಡಿಮೆ ಲೆಕ್ಕ ನಮೂದಿಸುವುದು, ವಾಹನಗಳಲ್ಲಿ ಹೆಚ್ಚು ಅದಿರು ತುಂಬುವುದು ಇತ್ಯಾದಿ. ಇದೇ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಯ ಕೆಲವು ಸಾಮಾನ್ಯ ಅಭ್ಯಾಸಗಳನ್ನು ಗಮನಿಸಿ: ಖಾಸಗಿ ಬಡಾವಣೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಚಿಸುವುದು, ಸಣ್ಣ ಭೂಮಾಲೀಕರು ಮತ್ತು ವೃತ್ತಿಪರ ರಿಯಲ್ ಎಸ್ಟೇಟ್ ಕಂಪನಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವುದು, ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದು, ರೈತರಿಂದ ಅವರ ಪರವಾಗಿ ವ್ಯವಹರಿಸಲು ಅನುಮತಿ ಪಡೆಯುವುದು (ಜನರಲ್ ಪವರ್ ಆಫ಼್ ಅಟಾರ್ನಿ) ಇತ್ಯಾದಿ. ಈ ಯಾವ ವಿದ್ಯಮಾನಗಳು ಸಹ ಕನ್ನಡಿಗರಿಗೆ ಅಪರಿಚಿತವೇನಲ್ಲ. ಪ್ರತಿದಿನದ ಬದುಕಿನ ಸಂದರ್ಭದಲ್ಲಿಯೇ ಅವರಿಗೆ ಪರಿಚಿತವಾಗುತ್ತಿವೆ. ಗಮನಾರ್ಹವಾದ ವಿಚಾರವೆಂದರೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಮಾತ್ರವೆ ರಾಜಕಾರಣವನ್ನು ನಮ್ಮ ಕಣ್ಣ ಮುಂದೆಯೆ ಪ್ರವೇಶಿಸುತ್ತಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ಮತ್ತು ಬಳ್ಳಾರಿ ಈ ಪ್ರಕ್ರಿಯೆಯ ಅಧಿಕೇಂದ್ರಗಳಾಗಿ ಹೊರಹೊಮ್ಮಿವೆ.

1991ರ ನಂತರದ ಜಾಗತೀಕರಣ ಮತ್ತು ಅದರಲ್ಲಿಯೂ ವಿಸ್ತರಣೆಯಾಗುತ್ತಲೆ ಇರುವ ಐಟಿ ಕ್ಷೇತ್ರದ ಮುಖ್ಯ ಫಲಾನುಭವಿಯೆಂದರೆ ಬೆಂಗಳೂರು ನಗರ. ಹಾಗಾಗಿ ಈ ನಗರವು ಹಲವು ದಶಕಗಳಿಂದ ಏಷ್ಯಾದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಸೇರಿದೆ. 21ನೆಯ ಶತಮಾನದ ಮೊದಲ ದಶಕದಲ್ಲಿ ತನ್ನ ಜನಸಂಖ್ಯೆ ದುಪ್ಪಟ್ಟಾಗಿದ್ದನ್ನು ಬೆಂಗಳೂರು ಕಂಡಿತು. ಈ ಬೆಳವಣಿಗೆಯು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಅಸಾಮಾನ್ಯ ಲಾಭವನ್ನು ತಂದುಕೊಟ್ಟಿತು. ಉದಾಹರಣೆಗೆ ಜರ್ಮನ್ ಭೂಗೋಳಶಾಸ್ತ್ರಜ್ಞ ಕ್ರಿಸ್ಟೋಫ್ ಡಿಟ್ರಿಚ್ ನಗರದ ಕೇಂದ್ರದಿಂದ 30 ಕಿಮೀ ದೂರದಲ್ಲಿರುವ ಸರ್ಜಾಪುರದಲ್ಲಿ ಭೂಮಿಯ ಬೆಲೆ ಒಂದೇ ವರ್ಷದಲ್ಲಿ ಹತ್ತು ಪಟ್ಟು ಹೆಚ್ಚಾದುದನ್ನು ದಾಖಲಿಸುತ್ತಾರೆ. ಕಳೆದ ದಶಕದ ಮಧ್ಯಭಾಗದಲ್ಲಿ (2006—7ರ ಸರಿಸುಮಾರಿನಲ್ಲಿ) ಬೆಂಗಳೂರು ನಗರವು ಸುಮಾರು ನಾಲ್ಕು ಬಿಲಿಯನ್ ಡಾಲರುಗಳ ನೇರ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿತ್ತು ಎಂದೂ ಡಿಟ್ರಿಚ್ ಹೇಳುತ್ತಾರೆ. ಬೆಂಗಳೂರು ಹೀಗೆ ಕಳೆದ ಎರಡು ದಶಕಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಪಡೆಯುತ್ತಿದೆ ಮತ್ತು ತನ್ನ ಸ್ಥಳೀಯ ಮೂಲಗಳಿಗೆ ಇದರ ಗಣನೀಯ ಭಾಗವನ್ನು ವರ್ಗಾಯಿಸುತ್ತಿದೆ. ನಗರದ ವಿಸ್ತರಣೆ, ಮೂಲಸೌಕರ್ಯಗಳ ಸೃಷ್ಟಿ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿಯೂ ಖಾಸಗಿ ವಲಯದ ಪಾಲೇ ಹೆಚ್ಚಿನದು. 1990ಕ್ಕಿಂತ ಹಿಂದೆ ಸರ್ಕಾರದ ವಿವಿಧ ಏಜೆನ್ಸಿಗಳು ನಿರ್ವಹಿಸುತ್ತಿದ್ದ ಎಲ್ಲ ಜವಾಬ್ದಾರಿಗಳನ್ನೂ ಈಗ ಖಾಸಗಿ ವಲಯವು ನಿರ್ವಹಿಸುತ್ತಿದೆ. ಇದರ ನಿಯಂತ್ರಣ ಬಹುಪಾಲು ವೃತ್ತಿಪರ ರಾಜಕಾರಣಿಗಳ ಕೈಯಲ್ಲಿದೆ. ಇಲ್ಲವೆ ಮೊದಲಿನಿಂದಲೂ ರಿಯಲ್ ಎಸ್ಟೇಟಿನಲ್ಲಿ ತೊಡಗಿಸಿಕೊಂಡಿದ್ದ ಬಹುತೇಕರು ರಾಜಕಾರಣವನ್ನು ಪ್ರವೇಶಿಸಿದರು.

ಬೆಂಗಳೂರಿನ ಕಥನವನ್ನು ಕರ್ನಾಟಕದ ಇತರ ನಗರಗಳಲ್ಲಿಯೂ ನೋಡಬಹುದು. ಅಂದರೆ ಹೊರಗಿನ ಬಂಡವಾಳವು ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ರಿಯಲ್ ಎಸ್ಟೇಟ್ ಮೌಲ್ಯವು ರಾಜ್ಯದೆಲ್ಲೆಡೆ ಹೆಚ್ಚಾಗಿದೆ. ಹಾಗಾಗಿ ಬೆಂಗಳೂರಿನ ಆಚೆಗೂ ರಾಜ್ಯಾದ್ಯಂತ ಜಿಲ್ಲಾ—ತಾಲೂಕು ಕೇಂದ್ರಗಳಲ್ಲಿ ರಾಜಕಾರಣಿಗಳಿಗೆ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರವೇಶಿಸಲು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು ರಾಜಕಾರಣದ ಮುಖ್ಯವಾಹಿನಿಗೆ ಬರಲು ಆಸ್ಪದವಾಗಿದೆ.

ಇದಕ್ಕಿಂತ ನಾಟಕೀಯವಾದುದು ಬಳ್ಳಾರಿಯ ಆರ್ಥಿಕತೆ ಮತ್ತು ಪರಿಸರಗಳಲ್ಲಾಗಿರುವ ಬದಲಾವಣೆ. ಅಕ್ರಮ ಗಣಿಗಾರಿಕೆ ಮತ್ತು ಪರಿಸರ ನಾಶದ ಜೊತೆಗೆ ಬಳ್ಳಾರಿಯ ಬಹುಮುಖ್ಯ ಕೊಡುಗೆಯೆಂದರೆ ಕರ್ನಾಟಕದಲ್ಲಿ ಇಂದು ನೆಲೆಯೂಡಿರುವ ಹೊಸ ರಾಜಕೀಯ ಸಂಸ್ಕೃತಿಯ ಮಾದರಿಗಳನ್ನು ಮೊದಲು ಅನ್ವೇಷಿಸಿದ್ದು. 1999ರಲ್ಲಿ ಸೋನಿಯಾ ಗಾಂಧಿಯವರು ಬಳ್ಳಾರಿಯಿಂದ ಲೋಕಸಭಾ ಚುನಾವಣೆಗೆ ನಿಂತಾಗ ಈ ನಗರವು ರಾಷ್ಟ್ರದ ಪ್ರಜ್ಞೆಯನ್ನು ಪ್ರವೇಶಿಸಿತು. ಈ ಚುನಾವಣೆಯು ಜಿ.ಜನಾರ್ದನ ರೆಡ್ಡಿಯವರ ಏಳಿಗೆಗೂ ಕಾರಣವಾಯಿತು. ಆಗ ಸೋನಿಯಾರ ಪ್ರತಿಸ್ಪರ್ಧಿಯಾಗಿ ಚುನಾವಣೆಯ ಕಣಕ್ಕಿಳಿದ ಸುಷ್ಮಾ ಸ್ವರಾಜ್ ಅವರ ಚುನಾವಣಾ ಪ್ರಚಾರವನ್ನು ನಿರ್ವಹಿಸಿದವರು ಜನಾರ್ದನ ರೆಡ್ಡಿ. ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸೋಲಾದರೂ, ಬಳ್ಳಾರಿಯ ಬಿಜೆಪಿ ಘಟಕದಲ್ಲಿದ್ದ ರಾಜಕೀಯ ನಿರ್ವಾತವನ್ನು ರೆಡ್ಡಿ ಯಶಸ್ವಿಯಾಗಿ ತುಂಬಿದರು ಮತ್ತು ಕಾಂಗ್ರೆಸ್ಸಿಗೆ ದೊಡ್ಡ ಸವಾಲನ್ನೆ ಒಡ್ಡಿದರು.

ಈ ಕಾಲದಲ್ಲಿಯೆ ಗಣಿಗಾರಿಕೆಯನ್ನೂ ರೆಡ್ಡಿ ಪ್ರವೇಶಿಸಿದರು. ಇದು ಚೈನಾ ಹೊಸನಗರಗಳನ್ನು ದೇಶಾದ್ಯಂತ ಕಟ್ಟುತ್ತಿದ್ದ ಕಾಲ. ಒಂದು ಅಂದಾಜಿನ ಪ್ರಕಾರ 2008ರ ಬೀಜಿಂಗ್ ಒಲಿಂಪಿಕ್ಸನ ಹಿಂದಿನ ಮೂರು ವರ್ಷಗಳಲ್ಲಿ ಚೈನಾ ದೇಶವು ಬಳಸಿದ ಕಾಂಕ್ರೀಟಿನ ಪ್ರಮಾಣವು ಅಮೆರಿಕಾ ದೇಶವು 20ನೆಯ ಶತಮಾನದುದ್ದಕ್ಕೂ ಬಳಸಿದ ಕಾಂಕ್ರೀಟಿಗೆ ಸಮ. ಚೀನಾದ ಅಗಾಧವಾದ ಕಬ್ಬಿಣದ ಅದಿರಿನ ಇಂಗಿಸಲಾಗದ ದಾಹವನ್ನು ಪೂರೈಸುವ ಸಾಹಸವನ್ನು ಮಾಡಿದವರಲ್ಲಿ ರೆಡ್ಡಿ ಮತ್ತು ಅವರ ಸಹಚರರು ಕೂಡ ಸೇರಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರಿನ ಸಾಗಾಣಿಕೆ ಇತ್ಯಾದಿ ಗುರುತರ ಆರೋಪಗಳು ರೆಡ್ಡಿ ಗುಂಪಿನ ಮೇಲಿದೆ. ಈ ಆರೋಪಗಳ ಸತ್ಯವೇನೆ ಇದ್ದರೂ ರೆಡ್ಡಿ ಗುಂಪು ಅಭೂತಪೂರ್ವ ಪ್ರಮಾಣದಲ್ಲಿ ಸಂಪತ್ತನ್ನು ಜಮಾಯಿಸಿತು ಎನ್ನುವುದರ ಬಗ್ಗೆ ಯಾವುದೆ ಅನುಮಾನಗಳಿಲ್ಲ. ಜೊತೆಗೆ ಈ ಸಂಪತ್ತನ್ನು ಯಾವುದೆ ಮಿತಿಯಿಲ್ಲದೆ ಚುನಾವಣಾ ರಾಜಕಾರಣಕ್ಕೆ ಬಳಸಲಾರಂಭಿಸಿದರು ಮಾತ್ರವಲ್ಲ, ಆ ಮೂಲಕ 2004ರ ಚುನಾವಣೆಯ ವೇಳೆಗೆ ರಾಜಕಾರಣದ ನಿಯಮಗಳನ್ನೆ ಬದಲಿಸಿಬಿಟ್ಟಿದ್ದರು. ಸುಲಭವಾಗಿ, ಕ್ಷಿಪ್ರವಾಗಿ ದೊರಕಿದ ಸಂಪತ್ತನ್ನು ಮತ್ತಷ್ಟು ಹಣವನ್ನು ಸಂಪಾದಿಸಲು ಅಗತ್ಯವಾಗಿದ್ದ ರಾಜಕೀಯ ಪ್ರಭಾವವನ್ನು ಗಳಿಸುವ ಉದ್ದೇಶದಿಂದ ನೀರಿನಂತೆ ಚೆಲ್ಲಿದರು. ಹಿಂಬಾಲಕರ ದೊಡ್ಡ ಪಡೆಯನ್ನು ಸಾಕಿದರು. ಮತದಾರರನ್ನು ಖರೀದಿ ಮಾಡುವ ಕೆಲಸ ಮಾಡಿದರು.

ನಾನು ಮೇಲೆ ಗುರುತಿಸಿದ ಬಗೆಯ ಉದ್ಯಮಿ—ರಾಜಕಾರಣಿ ಮಾದರಿಯ ಅತ್ಯುತ್ತಮ ಉದಾಹರಣೆಯೆಂದರೆ ಜನಾರ್ದನರೆಡ್ಡಿ. ಅವರಿಗೆ ಲಾಭಕರವಾಗುವ ಹಲವು ಸಾರ್ವಜನಿಕ ನೀತಿ ನಿರ್ಧಾರಗಳು ಮತ್ತು ಮಾರುಕಟ್ಟೆಯ ಬೆಳವಣಿಗೆಗಳು ಆಕಸ್ಮಿಕವಾಗಿಯೆ 1999— 2000ದ ಸಮಯದಲ್ಲಿ ಆದವು. ಉದಾಹರಣೆಗೆ ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಮತ್ತು ಖಾಸಗಿ ಭೂಮಿಯಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಯಿತು. ಕರ್ನಾಟಕ ಮತ್ತು ಆಂಧ್ರಪ್ರದೇಶಗಳೆರಡರಲ್ಲಿಯೂ ಸಕ್ರಿಯರಾಗಿದ್ದ ರೆಡ್ಡಿ ಆಂಧ್ರದ ಆಗಿನ ಮುಖ್ಯಮಂತ್ರಿ ರಾಜಶೇಖರರೆಡ್ಡಿಯವರ ಜೊತೆಗೂ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿದ್ದರು ಎನ್ನುವ ವರದಿಗಳಿವೆ. ಅದೇನೆ ಇರಲಿ ಅತಿ ಶೀಘ್ರದಲ್ಲಿಯೆ ಅವರು ಅತ್ಯಂತ ಶ್ರೀಮಂತರ ಪಟ್ಟಿಗೆ ಸೇರಿದರು. ಕರ್ನಾಟಕದ ಬಿಜೆಪಿಯ ಮುಖ್ಯ ನಾಯಕರಲ್ಲಿ ಒಬ್ಬರಾದರು ಮತ್ತು 2008ರ ಚುನಾವಣೆಯ ನಂತರ ಸಚಿವರೂ ಆದರು. 2010ರಲ್ಲಿ ಕರ್ನಾಟಕದ ಜಾಗತಿಕ ಬಂಡವಾಳಿಗರ ಸಮ್ಮೇಳನ ನಡೆದಾಗ, 30,000 ಕೋಟಿ ರೂಪಾಯಿಗಳ ಬಂಡವಾಳದ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಮುಂದೆ ಈ ಯೋಜನೆಯು ಹಲವಾರು ಕಾರಣಗಳಿಂದ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಕೆಲವೆ ವರ್ಷಗಳ ಗಣಿಗಾರಿಕೆಯು ಹತ್ತಾರು ಸಾವಿರ ಕೋಟಿಗಳ ಬಂಡವಾಳವನ್ನು ಹೂಡುವ ಎದೆಗಾರಿಕೆಯನ್ನು ರೆಡ್ಡಿಯವರಲ್ಲಿ ಬೆಳೆಸಿತ್ತು. ತಾನೂ ಸಹ ಜಿಂದಲ್ ಮತ್ತು ಮಿತ್ತಲರಂತಹ ಉದ್ಯಮಪತಿಗಳಿಗೆ ಸಮನಾಗಿ ಬೆಳೆಯಬಹುದು ಎನ್ನುವ ವಿಶ್ವಾಸವನ್ನು ಮೂಡಿಸಿತ್ತು.

ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಸರ್ಕಾರಗಳು ಕೈಗೊಂಡ ಎಲ್ಲ ಪ್ರಗತಿಪರ ಶಾಸನಗಳೂ ಸಹ ಪ್ರಗತಿಪರ ಒಮ್ಮತವು ಸಿದ್ಧಪಡಿಸಿದ್ದ ಭೂಮಿಕೆಯಿಂದ ಸಾಧ್ಯವಾದವುಗಳು. ಅಂದರೆ ಪ್ರಗತಿಪರ ಒಮ್ಮತವು ಅರಸು ಮತ್ತು ಹೆಗಡೆ ಇಬ್ಬರಿಗೂ ಹೊಸ ಸಾಧ್ಯತೆಗಳನ್ನು ಒದಗಿಸಿತ್ತು.

ಅಂದರೆ ಹೊಸ ಮಾದರಿಯ ಉದ್ಯಮಿ—ರಾಜಕಾರಣಿ ಇಂತಹದೊಂದು ಉದ್ದಿಮೆಯನ್ನು ನಡೆಸಲು ಬೇಕಿರುವ ಬಂಡವಾಳ, ತಾಂತ್ರಿಕ ಮತ್ತು ನಿರ್ವಹಣಾ ಕೌಶಲ್ಯ ಇತ್ಯಾದಿಗಳ ಬಗ್ಗೆ ಯಾವ ಸಂದೇಹವನ್ನೂ ಹೊಂದಿಲ್ಲ. ಈ ಕಾಲಘಟ್ಟದಲ್ಲಿ ರಿಯಲ್ ಎಸ್ಟೇಟ್ ಅಥವಾ ಗಣಿಗಾರಿಕೆಯಲ್ಲಿ ಹಣ ಮಾಡಿದ ನೂರಾರು ರಾಜಕಾರಣಿಗಳು ಹತ್ತು ಹಲವು ವಿಭಿನ್ನ ಕ್ಷೇತ್ರಗಳ ಉದ್ದಿಮೆಗಳನ್ನು ಪ್ರಾರಂಭಿಸಿದ, ಬಂಡವಾಳ ತೊಡಗಿಸಿದ ಕಥೆಗಳು ಬೆಂಗಳೂರಿನ ಮತ್ತು ರಾಜ್ಯದ ಪ್ರಮುಖ ನಗರಗಳ ಬೀದಿ—ಬೀದಿಗಳಲ್ಲಿ ಕೇಳಿಬರುತ್ತವೆ. ಬಹುತೇಕ ಉದ್ದಿಮೆಗಳ ಯಶಸ್ಸಿಗೆ ಯಾರಾದರೂ ರಾಜಕಾರಣಿಯ ಪಾಲುದಾರಿಕೆ ಅವಶ್ಯಕ ಎನ್ನುವ ಮಟ್ಟಿಗೆ ಈ ಹೊಸ ವಿದ್ಯಮಾನ ಬೆಳೆದಿದೆ.

ಈ ಹೊಸ ಮಾದರಿಯ ಉದ್ಯಮಿ—ರಾಜಕಾರಣಿಯನ್ನು ಅನುಸರಿಸಲೇಬೇಕಾದ ಅನಿವಾರ್ಯತೆ ರಾಜಕೀಯ ಆಕಾಂಕ್ಷೆಯುಳ್ಳ ಎಲ್ಲರಿಗೂ ಬಂದೊದಗಿದೆ. ಹಾಗಾಗಿ ಹಿಂದಿನ ತಲೆಮಾರಿನ ಹಲವಾರು ನುರಿತ ರಾಜಕಾರಣಿಗಳು ಬದಲಾದ ಈ ಸಂದರ್ಭದಲ್ಲಿ ಉದ್ಯಮಿಗಳಾಗಬೇಕಿರುವ ಅನಿವಾರ್ಯತೆಯನ್ನು ಅರಿತು, ನೈಸರ್ಗಿಕ ಸಂಪನ್ಮೂಲಗಳ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಲಾಭವನ್ನು ತರುವ ಉದ್ಯಮವಿಲ್ಲದಿದ್ದರೆ ರಾಜಕಾರಣದಲ್ಲಿ ಉಳಿಯಲು ಸಾಧ್ಯವಿಲ್ಲ ಎನ್ನುವ ಹಂತದಲ್ಲಿ ನಾವೀಗ ಇದ್ದೇವೆ. ಆದುದರಿಂದ ರಾಜಕಾರಣವನ್ನು ಪ್ರವೇಶಿಸುವವರು ಒಂದೇ ಹಿನ್ನೆಲೆಯವರು ಆಗಿರುತ್ತಾರೆ. ಇವರಲ್ಲಿ ಬಹುತೇಕರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ಮತ್ತು ಆ ಮೂಲಕ ಲಾಭವನ್ನು ಮಾಡಲಿಚ್ಛಿಸುವ ನೈತಿಕತೆಯವರೆ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಳ್ಳಾರಿಯಲ್ಲಿನ ಗಣಿಗಾರಿಕೆ ಬಹುಮಟ್ಟಿಗೆ ಕಡಿಮೆಯಾಗಿರಬಹುದು. ಆದರೆ ಅದು ಪ್ರಾರಂಭಿಸಿದ ರಾಜಕೀಯ ಮಾದರಿಯು ಗಟ್ಟಿಯಾಗಿ ಬೇರೂರಿದೆ ಮತ್ತು ಮುಂದುವರೆಯುತ್ತಿದೆ.

ಉದ್ಯಮಿ—ರಾಜಕಾರಣಿಗಳು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ ಎನ್ನುವುದು ನಿಜವಾದರೂ ಭಾರತೀಯ ಜನತಾ ಪಕ್ಷವು ಈ ಹೊಸಬಗೆಯ ರಾಜಕಾರಣಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದೆ. ಅದಕ್ಕೆ ಒಂದು ಕಾರಣ ಕರ್ನಾಟಕದಲ್ಲಿ ಇತ್ತೀಚಿಗೆ ಚಾಲ್ತಿಗೆ ಬಂದ ಪಕ್ಷವಾದುದರಿಂದ ಅದಕ್ಕೆ ಎಲ್ಲೆಡೆ ಎಲ್ಲ ಸಾಮಾಜಿಕೆ ಹಿನ್ನೆಲೆಯ ನಾಯಕರು ಮತ್ತು ಕಾರ್ಯಕರ್ತರು ಇರಲಿಲ್ಲ. ಹಾಗಾಗಿ ಆ ಪಕ್ಷದಲ್ಲಿ ಹೊಸಬರಿಗೆ, ಅದರಲ್ಲಿಯೂ ಇದುವರಗೆ ಹೆಚ್ಚಿನ ಪ್ರಾತಿನಿಧ್ಯ ಪಡೆದಿರದ ಹಿಂದುಳಿದ ಜಾತಿಗಳ ನಾಯಕರಿಗೆ, ಹೆಚ್ಚಿನ ಅವಕಾಶಗಳಿತ್ತು ಮತ್ತು ಬಿಜೆಪಿಯು ಅಂತಹವರನ್ನು ವಿಶೇಷವಾಗಿ ಪ್ರೋತ್ಸಾಹಿಸಿತು. ಶ್ರೀರಾಮುಲು ಈ ರೀತಿಯಲ್ಲಿ ಅವಕಾಶ ಪಡೆದವರಲ್ಲಿ ಪ್ರಮುಖರು. ಕರ್ನಾಟಕದಲ್ಲಿ ಇತ್ತೀಚಿನ ದಶಕಗಳಲ್ಲಿ ಬಿಜೆಪಿಗೆ ದೊರಕಿರುವ ಯಶಸ್ಸಿಗೆ, ಹಿಂದುತ್ವದಷ್ಟೆ ಅಥವಾ ಅದಕ್ಕಿಂತ ಹೆಚ್ಚಾಗಿ, ಈ ಹೊಸ ಮಾದರಿಯ ರಾಜಕಾರಣಿಗಳಿಗೆ ಅವಕಾಶಗಳನ್ನು ನೀಡಿದ್ದು ಕಾರಣವಾಗಿದೆ. ಕರ್ನಾಟಕದಲ್ಲಿ ಬಿಜೆಪಿಯ ಏಳಿಗೆಯನ್ನು ಪುನಾರಚಿಸುವ ಭವಿಷ್ಯದ ಇತಿಹಾಸಕಾರ ಈ ಅಂಶವನ್ನು ಖಚಿತವಾಗಿ ಗುರುತಿಸಬೇಕಾಗುತ್ತದೆ.

3

ಹಿಂದಿನ ಭಾಗದಲ್ಲಿ ಹೊಸ ಉದ್ಯಮಿ—ರಾಜಕಾರಣಿಯು ತನ್ನ ಖಾಸಗಿ ಲಾಭವನ್ನೆ ಗುರಿಯಾಗಿಟ್ಟುಕೊಂಡು ಸರ್ಕಾರದ ಸಾರ್ವಜನಿಕ ನೀತಿಯನ್ನು ರೂಪಿಸಲು ಪ್ರಯತ್ನಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಒಳಿತಿನ ಪರಿಕಲ್ಪನೆಯಿರುವುದಿಲ್ಲ ಎನ್ನುವ ವಾದವನ್ನು ನಾನು ಮಂಡಿಸಿದ್ದೇನೆ. ಆದರೆ ಕೇವಲ ಲಾಭ ಮಾಡುವುದೊಂದೆ ಉದ್ದೇಶವಾದರೆ ರಾಜಕಾರಣಿಗೆ ಉಳಿವಿಲ್ಲ. ಅಂದರೆ ರಾಜಕಾರಣಿ ಕೇವಲ ಉದ್ಯಮಿ ಅಥವಾ ವರ್ತಕನಾಗಿ ಉಳಿಯಲು ಸಾಧ್ಯವಿಲ್ಲ. ಆದುದರಿಂದ ಹೊಸ ರಾಜಕಾರಣಕ್ಕೆ ಸಂಬಂಧಿಸಿದ ನನ್ನ ಎರಡನೆಯ ಪ್ರಮೇಯವನ್ನು ಹೀಗೆ ಹೇಳಬಹುದು: ರಾಜಕಾರಣಿ ಮತ್ತು ಜನರ ನಡುವಿನ ಸಂಬಂಧವೂ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಒಂದು ಹೊಸ ಬಗೆಯ ಪಾಪ್ಯುಲಿಸಮ್ (ಜನಪ್ರಿಯ ರಾಜಕಾರಣ) ನಮಗೆ ಗೋಚರಿಸುತ್ತದೆ.

ಈಗಿನ ರಾಜಕಾರಣಿಗಳ ನಡವಳಿಕೆಗಳನ್ನು ಸಿದ್ಧಾಂತಗಳು ಮತ್ತು ವಿಚಾರಧಾರೆಗಳು ಪ್ರಭಾವಿಸುತ್ತಿಲ್ಲ ಎಂದು ನಾನು ಮೇಲೆ ಹೇಳಿದೆ. ಹಾಗಾಗಿ ಈ ಹೊಸ ಪಾಪ್ಯುಲಿಸಮ್‍ಗೆ ಮಾದರಿಯಾಗಿರುವುದು ಆಧುನಿಕಪೂರ್ವ ಕಾಲದ ರಾಜ—ಮಹಾರಾಜರ ನಡವಳಿಕೆಗಳು. ಇವುಗಳಿನ್ನೂ ಜನಪದರ ನೆನಪಿನಲ್ಲಿ ಇರುವ ಕಾರಣದಿಂದ ಇರಬೇಕು. ರಾಜಕಾರಣಿ ಒಬ್ಬ ಉದಾರಿ ಪೋಷಕನಂತೆ ವರ್ತಿಸುತ್ತಾನೆ ಮತ್ತು ಆತನ ನಡವಳಿಕೆಯಲ್ಲಿ ಜನರಿಗೆ ಯಾವ ತಪ್ಪು ಕಾಣುತ್ತಿಲ್ಲ. ಹೊಸ ಉದ್ಯಮಿ — ರಾಜಕಾರಣಿ ತನ್ನ ಮನೆಯಲ್ಲಿ ನೂರಾರು ಜನರಿಗೆ ಪ್ರತಿನಿತ್ಯ ಊಟ ಹಾಕುತ್ತಾನೆ. ಕೆಲವು ಪ್ರಮುಖರ ಮನೆಗಳಲ್ಲಿ ದಿನವೂ 800ರಿಂದ 1000 ಸಾವಿರ ಜನರು ಊಟ ಮಾಡುತ್ತಾರೆ ಎಂದು ವೃತ್ತಪತ್ರಿಕೆಗಳೇ ವರದಿ ಮಾಡಿವೆ. ಇದಲ್ಲದೆ ನಿತ್ಯವೂ ಸಹಾಯ ಕೇಳಿ ಮನೆಗೆ ಬರುವವರಿಗೆ ಅಥವಾ ಕ್ಷೇತ್ರದಲ್ಲಿದ್ದಾಗ ಸಹಾಯ ಕೇಳುವವರಿಗೆ ಧನಸಹಾಯ ಮಾಡುವುದು. ಇದರ ಉದ್ದೇಶ ಆಸ್ಪತ್ರೆ ಖರ್ಚು, ಮಕ್ಕಳ ಶಾಲಾ ಫೀಸ್, ಶವಸಂಸ್ಕಾರ ಇತ್ಯಾದಿಗಳು. ಇದಲ್ಲದೆ ದೇವಸ್ಥಾನಗಳ ಜೀರ್ಣೋದ್ಧಾರ, ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಗ್ರಾಮ ಹಬ್ಬಗಳ ಆಚರಣೆ, ಬಸವಣ್ಣ ಅಥವಾ ಡಾ.ಅಂಬೇಡ್ಕರರಂತಹ ಸಾಂಸ್ಕೃತಿಕ ನಾಯಕರ ಜನ್ಮದಿನಾಚರಣೆ ಮುಂತಾದ ಸಮುದಾಯದ ಯೋಜನೆಗಳಿಗೂ ಹಣದ ಬೇಡಿಕೆಗಳಿರುತ್ತವೆ. ಕೆಲವು ಶಾಸಕರು ತಮ್ಮ ಮನೆಗಳಲ್ಲಿ ದರಪಟ್ಟಿಯನ್ನು ಹಾಕುತ್ತಾರೆ ಎನ್ನುವ ವದಂತಿಗಳೂ ಇವೆ.

ಶಾಂತವೇರಿ ಗೋಪಾಲಗೌಡರ ನೇತೃತ್ವದ ಲೋಹಿಯಾ ಸಮಾಜವಾದಿಗಳು ಮತ್ತು ಅವರ ಜೊತೆಗೆ ಒಡನಾಟವಿದ್ದ ಕನ್ನಡದ ಚಿಂತಕರು ಹಾಗೂ ಸಾಹಿತಿಗಳು ಪ್ರಗತಿಪರ ಒಮ್ಮತವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿದರು.

ಇಂತಹ ಕ್ರಮಗಳ ಜೊತೆಗೆ ಸಾವಿರಾರು ಬಟ್ಟೆ ಹೊಲೆಯುವ ಯಂತ್ರಗಳನ್ನು ಕೊಡುವುದು, ತೀರ್ಥಯಾತ್ರೆಗೆ ಉಚಿತವಾಗಿ ಕಳುಹಿಸುವುದು, ಗಂಗಾಜಲ ಮತ್ತು ಪ್ರಸಾದಗಳ ವಿತರಣೆ, ಯಶಸ್ವಿನಿಯಂತಹ ಸರ್ಕಾರಿ ಯೋಜನೆಗಳಿಗೆ ದಾಖಲಾತಿ, ಗೊಬ್ಬರ—ಬೀಜಗಳ ಪೂರೈಕೆಯಲ್ಲಿ ಬಿಕ್ಕಟ್ಟು ಮೂಡಿದಾಗ ಅವುಗಳನ್ನು ಉಚಿತವಾಗಿ ಹಂಚುವುದು. ಹೀಗೆ ಹತ್ತು ಹಲವು ಬಗೆಯ ಹಣಕಾಸಿನ ಹಂಚುವಿಕೆಯ ಕಥನಗಳನ್ನು ಕರ್ನಾಟಕದಾದ್ಯಂತ ಕೇಳಬಹುದು. ಪ್ರತಿದಿನವೂ ಕೆಲವು ಲಕ್ಷಗಳಷ್ಟು ಹಣ ಬೇಕಾಗುತ್ತದೆ. ಇದನ್ನು ನಿಭಾಯಿಸಲಾಗದ ರಾಜಕಾರಣಿಗಳು ತಮ್ಮ ಕ್ಷೇತ್ರಕ್ಕೆ ಅಪರೂಪಕ್ಕೊಮ್ಮೆ ಹೋಗುತ್ತಾರೆ. ರಾಜಕಾರಣ ಇಂದು ದುಬಾರಿಯಾದ ವ್ಯವಹಾರವಾಗಿದೆ. ಹಾಗಾಗಿ ಹಲವಾರು ರಾಜಕಾರಣಿಗಳು, ಸಚಿವರುಗಳೂ ಸೇರಿದಂತೆ, ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸಬಹುದೆ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುವುದನ್ನು ನಾನು ಗಮನಿಸಿದ್ದೇನೆ. ವಿರೋಧಪಕ್ಷಗಳ ನಾಯಕರುಗಳು ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸಬೇಕೆಂದರೆ ಸಂಪನ್ಮೂಲಗಳನ್ನು ಹೊಂಚಲಾಗದೆ, ಬೆಂಗಳೂರಿನಲ್ಲಿರುವುದೆ ಕ್ಷೇಮ ಎಂದು ಭಾವಿಸುತ್ತಾರೆ. ಇದನ್ನೆಲ್ಲ ತಿಳಿಯಲು ಹೆಚ್ಚಿನ ಸಂಶೋಧನೆಯ ಅಗತ್ಯವೂ ಇಲ್ಲ. ಒಂದೆರಡು ದಿನ ಕನ್ನಡದ ಸುದ್ದಿವಾಹಿನಿಗಳನ್ನು ನೋಡಿದರೆ ಸಾಕು. ಸ್ವತಃ ರಾಜಕಾರಣಿಗಳೆ ನಮಗೆ ಬೇಕಿರುವ ಎಲ್ಲ ಮಾಹಿತಿಯನ್ನು ನೀಡುತ್ತಾರೆ.

ನಾನು ಮೇಲೆ ಗುರುತಿಸಿದ ಈ ಹೊಸ ಮಾದರಿಯ ಪಾಪ್ಯುಲಿಸಮ್‍ನ ಗುರಿಯೂ ಸರಳವಾದುದು. ತನ್ನ ಸ್ವಂತ ಸಂಪತ್ತನ್ನು ಹಂಚುವ ಮೂಲಕ ರಾಜಕಾರಣಿಯು ತನ್ನ ಬೆಂಬಲಿಗರ ವೈಯಕ್ತಿಕ ನಿಷ್ಠೆಯನ್ನು ನಿರೀಕ್ಷಿಸುತ್ತಾನೆ. ಇಲ್ಲಿ ಪ್ರಭುತ್ವ — ಸರ್ಕಾರಗಳು ನಿರ್ವಹಿಸಬೇಕಾಗಿರುವ ಜವಾಬ್ದಾರಿಗಳು ಮುಖ್ಯವಾಗುತ್ತಿಲ್ಲ. ಹೀಗೆ ವೈಯಕ್ತಿಕ ನಿಷ್ಠೆಯನ್ನು ಕೇಂದ್ರದಲ್ಲಿ ಹೊಂದಿದೆ ಎನ್ನುವ ಕಾರಣದಿಂದಲೆ ಈ ಹೊಸ ಪಾಪ್ಯುಲಿಸಮ್ ಹಳೆಯ ರಾಜಸಂಸ್ಕೃತಿಯಿಂದ ಸ್ಫೂರ್ತಿ ಪಡೆದಿದೆ ಎನಿಸುತ್ತಿದೆ.

ಈ ಮಾತಿಗೆ ಪೂರಕವಾಗಿ ಇಂದು ರಾಜಕಾರಣದ ಚಟುವಟಿಕೆಗಳನ್ನು ಬಣ್ಣಿಸಲು ಬಳಸುವ ಭಾಷೆಯನ್ನೆ ಗಮನಿಸಿ. ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುವುದನ್ನು ‘ಪಟ್ಟಾಭಿಷೇಕ’ ಎಂದೆ ಪತ್ರಕರ್ತರು ವರ್ಣಿಸುತ್ತಾರೆ. ರಾಜಕಾರಣಿಗಳು ರಾಜತ್ವದ ಭಾಷೆ, ಆಚರಣೆಗಳು ಮತ್ತು ಸಂಕೇತಗಳನ್ನು ಬಳಸುವುದು ಸಾಮಾನ್ಯವಾಗುತ್ತಿದೆ. ಹಿಂದೆ ರಾಜಗುರುಗಳು ಮಹಾರಾಜನಿಗೆ ಮಾರ್ಗದರ್ಶನ ಮಾಡುತ್ತಿದ್ದಂತೆ, ಇಂದಿನ ಮಠಗಳ ಗುರುಗಳು ದಾರಿ ತೋರಿಸಬೇಕೆಂದು ಕೇಳಿದ (ಆ ಮೂಲಕ ತಮ್ಮನ್ನು ರಾಜಮಹಾರಾಜರಿಗೆ ಹೋಲಿಸಿಕೊಂಡ) ಮುಖ್ಯಮಂತ್ರಿಗಳನ್ನು ನಾವು ನೋಡಿದ್ದೇವೆ. ಹಳ್ಳಿಗಳಲ್ಲಿ ಬಡವರ ಸ್ಥಿತಿಗತಿಗಳನ್ನು ತಿಳಿಯಲು ಅವರ ಮನೆಗಳಲ್ಲಿ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು ಇದ್ದಾರೆ. ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಇರುವ ಈ ನಾಯಕರಿಗೆ ರಾಜ್ಯದ ವಾಸ್ತವವು ತಿಳಿದಿದೆ. ಆದರೂ ಸಹ ಅವರು ಮಹಾರಾಜರ ಹಾಗೆ ಪ್ರವಾಸ ಮಾಡುವ ಸಾಂಕೇತಿಕತೆಯನ್ನು ಪ್ರದರ್ಶಿಸಲು ಆಶಿಸುತ್ತಾರೆ.

ಇಂದಿನ ರಾಜಕಾರಣದಲ್ಲಿ ಕಾಣುವ ರಾಜಸಂಸ್ಕೃತಿಯ ಮತ್ತೊಂದು ಮುಖ್ಯ ಆಯಾಮವೆಂದರೆ ವಂಶಪಾರಂಪರ್ಯ ಆಡಳಿತ. ಬಹುತೇಕ ರಾಜಕಾರಣಿಗಳು ತಮ್ಮ ಕುಟುಂಬದ ಸದಸ್ಯರನ್ನು ಸಹ ತಮ್ಮ ವೃತ್ತಿಗೆ ಇಳಿಸುತ್ತಿದ್ದಾರೆ. ಇದು ವೃತ್ತಿಪರ ಪಕ್ಷಗಳಲ್ಲಿ ಮಾತ್ರ ಕಾಣಬರುತ್ತಿದೆ ಎಂದಲ್ಲ. ಸ್ವರಾಜ್ ಇಂಡಿಯಾ ಪಕ್ಷದಂತಹ ಪರ್ಯಾಯ ರಾಜಕಾರಣವನ್ನು ಬೆಳೆಸಲು ಆಶಿಸುತ್ತಿರುವ ಹೊಸ ಪಕ್ಷಕ್ಕೂ ಕುಟುಂಬದ ಅಭ್ಯರ್ಥಿಗಳೆ ಅನಿವಾರ್ಯವಾಗುತ್ತಿದ್ದಾರೆ. ಮೇಲುಕೋಟೆ ಶಾಸಕ ಮತ್ತು ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರು ಇತ್ತೀಚೆಗೆ ತೀರಿಕೊಂಡಾಗ, ಆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಅವರ ಪುತ್ರನೆ ಚುನಾವಣಾ ಕಣಕ್ಕಿಳಿಯಬೇಕು. ನಾಲ್ಕು ದಶಕಗಳ ರೈತಚಳವಳಿಯ ನಂತರವೂ ಸಹ ಕುಟುಂಬದಾಚೆಗಿನ ಕಾರ್ಯಕರ್ತರನ್ನು ಬೆಳೆಸಲು ಸಾಧ್ಯವಾಗಿಲ್ಲ. ಹೀಗಾದರೆ ಸ್ವರಾಜ್ ಪಕ್ಷವು ಸಾಂಪ್ರದಾಯಿಕ ರಾಜಕಾರಣಿಗಳನ್ನು ಟೀಕಿಸುವುದಕ್ಕೆ ಅರ್ಥವಾದರೂ ಏನಿದೆ?

ಬೆಂಗಳೂರಿನ ಕಥನವನ್ನು ಕರ್ನಾಟಕದ ಇತರ ನಗರಗಳಲ್ಲಿಯೂ ನೋಡಬಹುದು. ಅಂದರೆ ಹೊರಗಿನ ಬಂಡವಾಳವು ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ರಿಯಲ್ ಎಸ್ಟೇಟ್ ಮೌಲ್ಯವು ರಾಜ್ಯದೆಲ್ಲೆಡೆ ಹೆಚ್ಚಾಗಿದೆ. ಹಾಗಾಗಿ ಬೆಂಗಳೂರಿನ ಆಚೆಗೂ ರಾಜ್ಯಾದ್ಯಂತ ಜಿಲ್ಲಾ—ತಾಲೂಕು ಕೇಂದ್ರಗಳಲ್ಲಿ ರಾಜಕಾರಣಿಗಳಿಗೆ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರವೇಶಿಸಲು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು ರಾಜಕಾರಣದ ಮುಖ್ಯವಾಹಿನಿಗೆ ಬರಲು ಆಸ್ಪದವಾಗಿದೆ.

ಇಂದಿನ ಪಾಪ್ಯುಲಿಸಮ್ಮಿನಲ್ಲಿ ಯಾವುದೆ ಸೈದ್ಧಾಂತಿಕತೆಯಿಲ್ಲ. ಇಂದಿನ ರಾಜಕಾರಣಿಗಳಿಗೆ ಯಾವುದೆ ರಾಜಕೀಯ ಮೌಲ್ಯಗಳಿಗೆ ಬದ್ಧತೆಯಿಲ್ಲದ ಕಾರಣ ಅವರು ಪಕ್ಷದಿಂದ ಪಕ್ಷಕ್ಕೆ ಅವಕಾಶಗಳ ಹುಡುಕಾಟದಲ್ಲಿ ಚಲಿಸುತ್ತಾರೆ. ತನ್ನ ಬೆಂಬಲಿಗರ ನಿಷ್ಠೆಯನ್ನು ತನ್ನ ಸಂಪತ್ತಿನ ಹಂಚಿಕೆಯ ಮೂಲಕ ಗಳಿಸಿರುವುದರಿಂದ ಪಕ್ಷದ ಕಡೆಗೆ ನಿಷ್ಠೆಯಿಂದ ಇರಬೇಕಾದ ಅವಶ್ಯಕತೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಹ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ ಎನ್ನುವಂತೆಯೂ ಇಲ್ಲ. ಇದು ಕರ್ನಾಟಕದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಸಂದರ್ಭದಲ್ಲಿ ನಿಜ. ತಮ್ಮದು ನಿರ್ದಿಷ್ಟ ವಿಚಾರಧಾರೆ ಮತ್ತು ಸೈದ್ಧಾಂತಿಕ ಬದ್ಧತೆಯಿರುವ ಪಕ್ಷವೆಂದು ಹೇಳಿಕೊಂಡರೂ ಸಹ ತಕ್ಷಣದ ರಾಜಕೀಯ ಲಾಭಕ್ಕಾಗಿ ಎಲ್ಲ ತತ್ವಗಳನ್ನು ಮೂರೂ ಪಕ್ಷಗಳು ತ್ಯಜಿಸುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ರಾಜಕಾರಣದಲ್ಲಿ ಪಾಪ್ಯುಲಿಸಮ್‍ನ ಬಳಕೆ ಹೊಸದೇನಲ್ಲ. ಆದರೆ ಇಂದಿನ ಈ ಹೊಸ ಪಾಪ್ಯುಲಿಸಮ್ ಹಿಂದಿನವುಗಳಿಂದ ಭಿನ್ನವಾಗಿದೆ. ಹಲವು ದಶಕಗಳ ಹಿಂದೆ ಅರಸು ಹಿಂದುಳಿದ ವರ್ಗಗಳ ರಾಜಕಾರಣದ ಬಗ್ಗೆ, ಹೆಗಡೆಯವರು ಮೌಲ್ಯಾಧಾರಿತ ರಾಜಕಾರಣದ ಕುರಿತಾಗಿ ಅಥವಾ ದೇವೇಗೌಡರು ರೈತರು ಮತ್ತು ನೀರಾವರಿಯ ಬಗ್ಗೆ ಹಾಗೂ ಎಸ್.ಎಮ್.ಕೃಷ್ಣರವರು ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಅವರೆಲ್ಲರ ಮನಸ್ಸಿನಲ್ಲಿ ಒಂದು ಸಾಮಾಜಿಕ ದರ್ಶನ ಮತ್ತು ಸಾರ್ವಜನಿಕ ಒಳಿತಿನ ಪರಿಕಲ್ಪನೆಯಿತ್ತು. ಅದರ ಬಗ್ಗೆ ನಾವು ಚರ್ಚೆ ಮಾಡಬಹುದು. ಮುಂದುವರೆದು ಜಗಳವಾಡಬಹುದು. ಆದರೆ ಇಂದು ಬಹುಪಾಲು ಸಾರ್ವಜನಿಕ ಒಳಿತಿನ ಕಲ್ಪನೆ ಮರೆಯಾಗಿದೆ. ಮೂಲಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳು ಯಾರಾದರೂ ಉದ್ಯಮಿ—ರಾಜಕಾರಣಿಯ ಖಾಸಗಿ ಲಾಭದ ಉದ್ದೇಶದಿಂದ ಮಾತ್ರ ರೂಪುಗೊಳ್ಳುತ್ತದೆ. ಇದಲ್ಲದೆ ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳೆನ್ನುವ ಹೆಸರಿನಲ್ಲಿ ವ್ಯಕ್ತಿಗಳಿಗೆ, ವಿವಿಧ ಗುಂಪುಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ನೇರವಾಗಿ ಸರ್ಕಾರದ ಹಣವನ್ನು ವರ್ಗಾಯಿಸುವ ಕೆಲಸಗಳನ್ನು ಮಾಡುತ್ತಿವೆ. ಹಾಗಾಗಿಯೆ ಜಾತಿ ಮಠಗಳು ಮತ್ತು ಸಂಘಟನೆಗಳಿಗೆ ಸರ್ಕಾರದ ಆಸ್ತಿಪಾಸ್ತಿಗಳ ವರ್ಗಾವಣೆ, ಯಥೇಚ್ಛವಾದ ಧನಸಹಾಯ ಇತ್ಯಾದಿಗಳು ನಡೆಯುತ್ತಿವೆ. ಇವೆಲ್ಲವೂ ಮತದಾರನ ನಿಷ್ಠೆಯನ್ನು ತಾತ್ಕಾಲಿಕವಾಗಿಯಾದರೂ ಗಳಿಸಲು ಮಾಡುತ್ತಿರುವ ಪ್ರಯತ್ನಗಳು

ಉದ್ಯಮಿ—ರಾಜಕಾರಣಿ ಮಾದರಿಯ ಅತ್ಯುತ್ತಮ ಉದಾಹರಣೆಯೆಂದರೆ ಜನಾರ್ದನರೆಡ್ಡಿ. ಅವರಿಗೆ ಲಾಭಕರವಾಗುವ ಹಲವು ಸಾರ್ವಜನಿಕ ನೀತಿ ನಿರ್ಧಾರಗಳು ಮತ್ತು ಮಾರುಕಟ್ಟೆಯ ಬೆಳವಣಿಗೆಗಳು ಆಕಸ್ಮಿಕವಾಗಿಯೆ 1999—2000ದ ಸಮಯದಲ್ಲಿ ಆದವು.

ಈ ಮೇಲಿನ ಕಥನವನ್ನು ಬಣ್ಣಿಸುವಾಗ, ಹಳೆಯ ರಾಜಕೀಯ ಯೋಜನೆಗಳು (ಉದಾಹರಣೆಗೆ ಸಾಮಾಜಿಕ ನ್ಯಾಯ ಅಥವಾ ಆರ್ಥಿಕ ಸಮಾನತೆಯನ್ನು ಸಾಧಿಸುವುದು ಇತ್ಯಾದಿಗಳು) ಇಂದು ಸಂಪೂರ್ಣವಾಗಿ ಮರೆಯಾಗಿವೆ ಎಂದು ಹೇಳುತ್ತಿಲ್ಲ. ಜೊತೆಗೆ ಹಳೆಯ ಮಾದರಿಯ ರಾಜಕಾರಣಿಗಳು ಇಂದು ಇಲ್ಲ ಎಂದೂ ವಾದಿಸುತ್ತಿಲ್ಲ. ಬದಲಿಗೆ ಅಂತಹ ಯೋಜನೆಗಳಿಗೆ ಮತ್ತು ರಾಜಕಾರಣಿಗಳಿಗೆ ಇಂದು ಲಭ್ಯವಿರುವ ರಾಜಕೀಯ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಲು ಬಯಸುತ್ತೇನೆ.

4

ನಾವು ಇಂದು ಕರ್ನಾಟಕದಲ್ಲಿ ಎದುರಿಸುತ್ತಿರುವ ರಾಜಕೀಯ ವಾಸ್ತವವು ಭಯಾನಕವಾದುದು ಎಂದು ವಿಶೇಷವಾಗಿ ಹೇಳಬೇಕಿಲ್ಲ. ನಮ್ಮ ದುರಾದೃಷ್ಟವೆಂದರೆ ಭೂಮಿಯ ಮೇಲೆ ನಮ್ಮ ಬದುಕು ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ, ಮನುಷ್ಯನ ಅಗತ್ಯಗಳನ್ನು ಸೀಮಿತಗೊಳಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಇರುವಾಗಲೆ ನಮ್ಮ ರಾಜಕಾರಣದ ನಿಯಂತ್ರಣವನ್ನು ದುರಾಸೆಯ ಹೊಟ್ಟೆಬಾಕರು ಪಡೆದಿದ್ದಾರೆ. ಕೆಲವು ದಶಕಗಳ ಹಿಂದಿನಂತೆ ವಿಭಿನ್ನ ವೃತ್ತಿ ಹಿನ್ನೆಲೆಯ, ಜ್ಞಾನ—ಕೌಶಲ್ಯ—ನೈಪುಣ್ಯವಿರುವ ಜನರು ರಾಜಕೀಯವನ್ನು ಪ್ರವೇಶಿಸಲು ಆಗುತ್ತಿಲ್ಲ. ಹಿಂದೆಂದಿಗಿಂತಲೂ ಇಂದು ರಾಜಕಾರಣದಲ್ಲಿ ಎಲ್ಲ ಜಾತಿ—ಧರ್ಮಗಳ ಜನರಿದ್ದಾರೆ, ನಿಜ. ಆದರೆ ಅವರಲ್ಲಿ ಬಹುತೇಕರ ನೈತಿಕತೆ ಸಾರ್ವಜನಿಕ ಒಳಿತಿಗೆ ಹೊರತಾದುದು ಆಗಿದೆ. ಈ ವಾಸ್ತವವನ್ನು ಬದಲಿಸುವುದು ಅನಿವಾರ್ಯ. ಅದಕ್ಕೆ ಹೊಸದೊಂದು ಪ್ರಗತಿಪರ ಒಮ್ಮತವನ್ನು ಕಟ್ಟುವ ಕಾಲ ಬಂದಿದೆ.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮