2nd ಮೇ ೨೦೧೮

ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್

ವ್ಲಾದಿಮಿರ್ ಪುಟಿನ್‍ರವರ ಟೀಕಾಕಾರರು ಹಲವರಿದ್ದಾರೆ. ಪ್ರಜಾಪ್ರಭುತ್ವವನ್ನು ಕೇವಲ ಕಾಗದದ ಮೇಲಷ್ಟೇ ಜಾರಿಗೊಳಿಸಿ, ರಷ್ಯಾ ದೇಶವನ್ನು ವಿರೋಧಿಗಳಿಲ್ಲದ ಸರ್ವಾಧಿಕಾರಿಯಂತೆ ಆಳುತ್ತಿದ್ದಾರೆಂದು ಟೀಕಿಸಲಾಗಿದೆ. ಆದರೆ ಪುಟಿನ್‍ರವರ ಸಮರ್ಥಕರೂ ಹಲವರಿದ್ದಾರೆ. ರಷ್ಯಾದಂತಹ ಬರ್ಬರ, ಅರಾಜಕ ಮತ್ತು ಊಳಿಗಮಾನ್ಯ ದೇಶದಲ್ಲಿ ಪುಟಿನ್ ಅವರಂತಹ ಸರ್ವಾಧಿಕಾರಿ ಆಡಳಿತವೇ ಸರಿಯೆಂದು ಹೇಳಲಾಗುತ್ತದೆ.

ತಮ್ಮ ನಾಲ್ಕನೇ ಅವಧಿಗೆ ವ್ಲಾದಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾಗಿದ್ದಾರೆ. 2018ರ ಮಾರ್ಚ್‍ನಲ್ಲಿ ನಡೆದ ಚುನಾವಣೆಯಲ್ಲಿ ಶೇಕಡಾ 76% ಮತ ಪಡೆದು ಪುಟಿನ್ 2024ರವರೆಗೆ ರಷ್ಯಾದ ಅಧ್ಯಕ್ಷರಾಗಿದ್ದಾರೆ. ಇದರಿಂದ ಪುಟಿನ್‍ರವರ ಕಬಂಧ ಬಾಹುಗಳು ರಷ್ಯಾ ದೇಶವನ್ನು ಮತ್ತಷ್ಟು ಗಟ್ಟಿಯಾಗಿ ಆಕ್ರಮಿಸಿದಂತೆ ಕಾಣುತ್ತಿವೆ.

ಮಾರ್ಚ್ 2018ರ ಚುನಾವಣೆಯ ಸಿಂಧುತ್ವದ ಬಗ್ಗೆ ರಷ್ಯಾದಲ್ಲಿ ಹಲವಾರು ಅಪಸ್ವರಗಳು ಎದ್ದಿವೆ. ಮಾಜಿ ವಿಶ್ವ ಚೆಸ್ ಛಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಸೇರಿದಂತೆ ಹಲವಾರು ವಿರೋಧಿ ಗಣ್ಯರು ಚುನಾವಣೆಯು ಏಕಪಕ್ಷೀಯವಾಗಿ ಭಯದ ನೆರಳಿನಲ್ಲಿ ಹಾಗೂ ದಬ್ಬಾಳಿಕೆಯ ವಾತಾವರಣದಲ್ಲಿ ನಡೆದಿದೆ ಎಂದು ಆಪಾದಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಹಲವಾರು ವಿರೋಧಿ ನಾಯಕರನ್ನು ಹಾಗೂ ವಿರೋಧ ವ್ಯಕ್ತಪಡಿಸಿದ ಹಲವಾರು ಬ್ಲಾಗ್‍ಗಳ ಲೇಖಕರನ್ನು ಕೂಡಾ ಬಂಧಿಸಲಾಗಿತ್ತು ಎಂದು ಉದಾಹರಿಸಿದ್ದಾರೆ. ಪುಟಿನ್‍ರವರ ರಷ್ಯಾದಲ್ಲಿ ಯವುದೇ ಮಾಧ್ಯಮ ಸಂಸ್ಥೆಯು ಪುಟಿನ್ ವಿರುದ್ಧ ಯಾವುದೇ ಲೇಖನ ಪ್ರಕಾಶನ ಮಾಡುವ ಸಾಧ್ಯತೆಯನ್ನೇ ಕಳೆದುಕೊಂಡಿದೆಯೆಂದೂ ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾಧ್ಯಮಗಳು ಪುಟಿನ್‍ರವರ ರಷ್ಯಾದಲ್ಲಿ ಪ್ರಜಾಪ್ರಭುತ್ವ ಕೇವಲ ತೋರಿಕೆಯ ಮಾತ್ರಕ್ಕೆ ಆಡಳಿತ ವ್ಯವಸ್ಥೆಯಾಗಿದೆಯೆಂದೂ, ಕಳೆದ ದಶಕದಿಂದಲೂ ರಷ್ಯಾ ಒಂದು ಸರ್ವಾಧಿಕಾರಿ ಆಡಳಿತವುಳ್ಳ ರಾಷ್ಟ್ರವಾಗಿದೆಯೆಂದೂ ಅಭಿಪ್ರಾಯ ಪಟ್ಟಿದ್ದಾರೆ.

1990ರ ದಶಕದಲ್ಲಿ ರಷ್ಯಾದ ಗೂಢಚಾರಿ ಸಂಸ್ಥೆ ಕೆಜಿಬಿಯ ಹಿರಿಯ ಅಧಿಕಾರಿಯಾಗಿದ್ದ ಪುಟಿನ್, ಬರ್ಲಿನ್ ಗೋಡೆ ಪತನದ ಸಮಯದಲ್ಲಿ ಪೂರ್ವಜರ್ಮನಿಯಲ್ಲಿ ನಿಯುಕ್ತರಾಗಿದ್ದರು. 1999ರವರೆಗೆ ಹಲವಾರು ಸರ್ಕಾರಿ ಹುದ್ದೆಗಳಲ್ಲಿದ್ದ ಪುಟಿನ್ 1999ರ ಆಗಸ್ಟ್‍ನಲ್ಲಿ ಅಂದಿನ ಅಧ್ಯಕ್ಷ ಬೋರಿಸ್ ಯೆಲ್ಟ್ಸಿನ್‍ರವರ ಪ್ರಧಾನಮಂತ್ರಿ ಹಾಗೂ ಉತ್ತರಾಧಿಕಾರಿಯಾದರು. ಮುಂದಿನ ಒಂದೇ ವರ್ಷದಲ್ಲಿ ಯೆಲ್ಟ್ಸಿನ್‍ರವರಿಂದ ತೆರವಾದ ಅಧ್ಯಕ್ಷಗಿರಿಗೆ ಚುನಾಯಿತರಾದ ಪುಟಿನ್ 2000ರಿಂದ 2004ರವರೆಗೆ ಮತ್ತು 2004ರಿಂದ 2008ರವರೆಗೆ ಎರಡು ಅವಧಿಯನ್ನು ರಷ್ಯಾದ ಅಧ್ಯಕ್ಷರಾಗಿ ಪೂರೈಸಿದರು.

ತಮ್ಮ ಮೊದಲ ಎಂಟು ವರ್ಷಗಳ ಅಧ್ಯಕ್ಷೀಯ ಅವಧಿಯಲ್ಲಿ ರಷ್ಯಾದ ಅಭೂತಪೂರ್ವ ಆರ್ಥಿಕ ಅಭಿವೃದ್ಧಿಗೆ ಪುಟಿನ್ ಕಾರಣರಾದರು. ರಷ್ಯಾದ ಉದಾರವಾದಿ ಹಾಗೂ ಕಮ್ಯುನಿಸ್ಟ್ ವಿರೋಧಿಗಳನ್ನು ಬಗ್ಗು ಬಡೆದರು. ಸ್ವತಂತ್ರ ಟೀಕಾಕಾರರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಯಿತು ಅಥವಾ ಯಾವುದಾದರೂ ಆಪಾದನೆಯ ಮೇಲೆ ಜೈಲಿಗೆ ತಳ್ಳಲಾಯಿತು. ಹೀಗೆ 2008ರ ಸಮಯಕ್ಕೆ ಪುಟಿನ್ ರಷ್ಯಾದ ಸರ್ವಾಧಿಕಾರಿಯಾಗಿದ್ದರು. ಆದರೆ ಅಂದಿನ ರಷ್ಯಾದ ಸಂವಿಧಾನ ಅಧ್ಯಕ್ಷ ಪದವಿಗೆ `ಎಡಬಿಡದೆ’ ಕೇವಲ ಎರಡು ಅವಧಿಗಳ ಮಿತಿಯನ್ನು ವಿಧಿಸಿತ್ತು. ಹೀಗಾಗಿ ಪುಟಿನ್ ದಿಮಿತ್ರಿ ಮೆದ್ವೆದೇವ್‍ರವರನ್ನು ಅಧ್ಯಕ್ಷರನ್ನಾಗಿಸಿ ತಾವು ದೇಶದ ಪ್ರಧಾನಮಂತ್ರಿಯಾಗಿದ್ದರು. 2008ರಿಂದ 2012ರವರೆಗೆ ಪ್ರಧಾನಿಯಾಗಿದ್ದರೂ ರಷ್ಯಾದ ಸರ್ವ ಅಧ್ಯಕ್ಷೀಯ ಅಧಿಕಾರವೆಲ್ಲವೂ ಪುಟಿನ್‍ರವರ ಕೈಯಲ್ಲಿತ್ತು. 2012ರಲ್ಲಿ ಅಧ್ಯಕ್ಷೀಯ ಅವಧಿಯನ್ನು ನಾಲ್ಕು ವರ್ಷಗಳಿಂದ ಆರು ವರ್ಷಕ್ಕೆ ಏರಿಸಿ ಪುಟಿನ್ ಮತ್ತೊಮ್ಮೆ ಅಧ್ಯಕ್ಷರಾದರು. ಈಗ ಆರು ವರ್ಷಗಳ ನಂತರ ಚುನಾವಣೆಯೆಂಬ ಔಪಚಾರಿಕತೆ ಮುಗಿಸಿ ಪುಟಿನ್ ತಮ್ಮ ನಾಲ್ಕನೇ ಅವಧಿಯಲ್ಲಿ 2018ರಿಂದ 2024ರವರೆಗೆ ಮತ್ತೆ ಅಧ್ಯಕ್ಷಗಾದಿಗೆ ಏರಿದ್ದಾರೆ. ಈ ಮೊದಲು ಪ್ರಧಾನಿಯಾಗಿದ್ದ ಮೆದ್ವೆದೇವ್ ಅವರನ್ನೇ ಮತ್ತೆ ಪ್ರಧಾನಿಯನ್ನಾಗಿ ಪುಟಿನ್ ಆಯ್ಕೆ ಮಾಡಿಕೊಂಡಿದ್ದಾರೆ. ಮಾರ್ಚ್ 2018ರ ಚುನಾವಣೆಗೆ ಮೊದಲು ಪ್ರಧಾನಿ ಮೆದ್ವೆದೇವ್‍ರವರು ಮತ್ತೊಮ್ಮೆ ಸಂವಿಧಾನ ರಚಿಸಲು `ಸಂವಿಧಾನ ರಚನಾಸಭೆ’ಯನ್ನು ಘಟಿಸಿದ್ದಾರೆ. ಮುಂದೆ ಬರುವ ಹೊಸ ಸಂವಿಧಾನದಲ್ಲಿ ಎರಡು ಅವಧಿಯ ಸೀಮಿತಾವಧಿಯ ಮಿತಿಯನ್ನೂ ಕಿತ್ತುಹಾಕಬಹುದೆಂದು ಎಣಿಸಲಾಗಿದೆ.

ವ್ಲಾದಿಮಿರ್ ಪುಟಿನ್‍ರವರ ಟೀಕಾಕಾರರು ಹಲವರಿದ್ದಾರೆ. ಪ್ರಜಾಪ್ರಭುತ್ವವನ್ನು ಕೇವಲ ಕಾಗದದ ಮೇಲಷ್ಟೇ ಜಾರಿಗೊಳಿಸಿ, ರಷ್ಯಾ ದೇಶವನ್ನು ವಿರೋಧಿಗಳಿಲ್ಲದ ಸರ್ವಾಧಿಕಾರಿಯಂತೆ ಆಳುತ್ತಿದ್ದಾರೆಂದು ಟೀಕಿಸಲಾಗಿದೆ. ಕೆಲವೇ ಕೆಲವು ಕಂಪೆನಿಗಳಿಗೆ ರಷ್ಯಾದ ನೈಸರ್ಗಿಕ ಸಂಪತ್ತೆಲ್ಲವನ್ನೂ ಬರೆದುಕೊಟ್ಟು ಕೃತಕವಾಗಿ ಬಂಡವಾಳಶಾಹಿ ಸಾಮ್ರಾಜ್ಯವನ್ನು ಸ್ಥಾಪಿಸಲಾಗಿದೆ ಎಂದೂ ದೂರಲಾಗಿದೆ. ತನ್ನ ಗೂಢಚಾರಿ ಹಾಗೂ ಮಾಹಿತಿ ಜಾಲದಿಂದ ಉಳಿದ ಪ್ರಜಾಪ್ರಭುತ್ವ ದೇಶಗಳ ರಾಜಕೀಯ ವ್ಯವಸ್ಥೆಯನ್ನು ಪ್ರಭಾವಿಸಲು ಯತ್ನಿಸುತ್ತಿದ್ದಾರೆಂದು ಆಪಾದಿಸಲಾಗಿದೆ. ರಷ್ಯಾದ ಸರ್ಕಾರ ಒಂದು ಮಾಫಿಯಾ ಜಾಲದಂತೆ ಕೆಲಸ ಮಾಡುತ್ತಿದೆಯೆಂದೂ ಹೇಳಲಾಗುತ್ತಿದೆ.

ಆದರೆ ಪುಟಿನ್‍ರವರ ಸಮರ್ಥಕರೂ ಹಲವರಿದ್ದಾರೆ. ರಷ್ಯಾದಂತಹ ಬರ್ಬರ, ಅರಾಜಕ ಮತ್ತು ಊಳಿಗಮಾನ್ಯ ದೇಶದಲ್ಲಿ ಪುಟಿನ್ ಅವರಂತಹ ಸರ್ವಾಧಿಕಾರಿ ಆಡಳಿತವೇ ಸರಿಯೆಂದು ಹೇಳಲಾಗುತ್ತದೆ. ತನ್ನ ಇತಿಹಾಸದಲ್ಲಿ ಹಿಂದೆಂದೂ ಪ್ರಜಾಪ್ರಭುತ್ವವನ್ನೇ ಕಾಣದ ರಷ್ಯಾ ದೇಶದಲ್ಲಿ ತಕ್ಷಣ ಪ್ರಜಾಪ್ರಭುತ್ವದ ಯಶಸ್ಸು ಕಾಣಬಯಸುವುದು ಅಸಹಜ ಎಂದೂ ಹೇಳುತ್ತಾರೆ. ಸಾಮಾನ್ಯರಿಗೆ ನಾಗರಿಕ ಸ್ವಾತಂತ್ರ್ಯ ಹಾಗೂ ನೈಜ ಪ್ರಜಾಪ್ರಭುತ್ವ ನೀಡದಿದ್ದರೂ, ಪುಟಿನ್ ತಮ್ಮ ಆರ್ಥಿಕ ಸುಧಾರಣೆಗಳಿಂದ ನಿಧಾನವಾಗಿಯಾದರೂ ಸುಶಿಕ್ಷಿತ ಬಹುಸಂಖ್ಯಾತ ಮಧ್ಯಮವರ್ಗವನ್ನು ಸೃಷ್ಟಿಸುತ್ತಿದ್ದಾರೆಂದು ಸಮಜಾಯಿಷಿ ನೀಡಲಾಗುತ್ತದೆ. ಹೇಗೆಯೇ ಆದರೂ ರಷ್ಯಾದಲ್ಲಿ ಪುಟಿನ್‍ರವರ ಆಡಳಿತವನ್ನು 2020ರ ದಶಕದುದ್ದಕ್ಕೂ ನಾವು ಕಾಣಬಹುದಾದ ಪೂರ್ಣ ಸಾಧ್ಯತೆಗಳಿವೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮