2nd ಮೇ ೨೦೧೮

‘ಬ್ಲೇಡ್ ಕಂಪೆನಿ’
ನಿಷೇಧಕ್ಕೆ ನಿರ್ದಿಷ್ಟ ಕಾನೂನು

ಬಹಳಷ್ಟು ಜನರಿಗೆ ಹಣ ಕಳೆದುಕೊಂಡ ಎರಡು—ಮೂರು ತಿಂಗಳಲ್ಲಿ ಬುದ್ದಿ ಬಂದರೆ, ಹಲವರಿಗೆ ವರ್ಷಾನುಗಟ್ಟಲೆ ಬೇಕಾಗುತ್ತದೆ. ಈ ಸ್ಕೀಮಿನಲ್ಲಿ ಹಣ ಹೂಡಿದವರಲ್ಲಿ ಶೇ.99.99ರಷ್ಟು ಜನ ಹಣ ಕಳೆದುಕೊಳ್ಳುವುದು ಶತಸಿದ್ಧ.

ಅಮಾಯಕ ಬಳಕೆದಾರರ ಕಣ್ಣಿಗೆ ಮಣ್ಣೆರಚಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವ `ಪಿರಮಿಡ್ ಸ್ಕೀಮ್’, `ಚೈನ್ ಲಿಂಕ್’ ಮಾರ್ಕೆಟಿಂಗ್ ಸ್ಕೀಮುಗಳಂತಹ `ಪಾಂಝಿ’ ಯೋಜನೆಗಳಿಗೆ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಕೊಲ್ಕತ್ತದ ಶಾರದ—ನಾರದ ಯೋಜನೆಗಳಿಂದ ಹಿಡಿದು ದೇಶಾದ್ಯಂತ ಹಲವು ಬಗೆಯಲ್ಲಿ ಮುಸುಕು ಹಾಕಿಕೊಂಡು ಜನಸಾಮಾನ್ಯರ ಬಳಿ ಠೇವಣಿ, ಸದಸ್ಯತ್ವ, ಸಾಮಾನು ಮಾರಾಟ ಮುಂತಾದ ರೀತಿಯಲ್ಲಿ ಹಣ ದೋಚುತ್ತಿರುವ ಈ ಎಲ್ಲಾ `ಅನಿಯಂತ್ರಿತ ಠೇವಣಿ ಯೋಜನೆ’ಗಳ ನಿಷೇಧವನ್ನು ಈ ಕಾನೂನು ಉದ್ದೇಶಿಸಿದೆ. ಬ್ಲೇಡ್ ಸ್ಕೀಮುಗಳು ಅಥವಾ ಪಾಂಝಿ ಸ್ಕೀಮುಗಳೆಂದು ಕರೆಯಲಾಗುವ ಹಲವಾರು ಸ್ಕೀಮುಗಳು ಕರ್ನಾಟಕದಾದ್ಯಂತ ಇದ್ದು ನೂರಾರು ಕೋಟಿಗಳವರೆಗೆ ಬಡವರ ರಕ್ತ ಹೀರಿವೆ.

ಈ ಸ್ಕೀಮುಗಳ ಮಾಯಾಜಾಲ ಇಂತಿದೆ: ಮೊದಲಿಗೆ ನಿಮ್ಮನ್ನು ಆ ಸ್ಕೀಮಿನಲ್ಲಿ ಈಗಾಗಲೇ ಪಾಲ್ಗೊಂಡಿರುವ ನಿಮ್ಮ ಸ್ನೇಹಿತರೋ, ಸಹೋದ್ಯೋಗಿಯೋ, ಬಂಧುಗಳೋ ಸಂಪರ್ಕಿಸುತ್ತಾರೆ. ಕೇವಲ ಒಂದು ಅಥವಾ ಒಂದೂವರೆ ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ಜೀವನಪರ್ಯಂತ ಕುಳಿತು ಉಣ್ಣಬಹುದಾದ ಯೋಜನೆ ಇದೆಂದು ಮರುಳು ಮಾಡುತ್ತಾರೆ. ನಿಮ್ಮ ಬಳಿ ಹಣ ಪಡೆದುಕೊಂಡ ಮೇಲೆ ಅದಕ್ಕೆ ಸಮಾನ ಎಮ್‍ಆರ್‍ಪಿ ಬೆಲೆಯುಳ್ಳ ಸೋಪ್— ಶಾಂಪೂ ಮತ್ತಿತರ ಸಾಮಾನುಗಳನ್ನು ನೀಡುತ್ತಾರೆ. ಹಲವು ಬಾರಿ ಅಂತರರಾಷ್ಟ್ರೀಯ ಪ್ರವಾಸಿ ತಾಣಗಳನ್ನು ಬಳಸಿಕೊಳ್ಳಬಹುದಾದ ಸದಸ್ಯತ್ವವನ್ನೂ ನಿಮಗೆ ನೀಡುತ್ತಾರೆ. ಈ ಸಾಮಾನು—ಸದಸ್ಯತ್ವಗಳೆಲ್ಲವೂ ಬೋಗಸ್ ಆದರೂ ಕೊಟ್ಟಿರುವ ಹಣಕ್ಕೆ ಸಮನಾಗಿ ನೀವು ಸಾಮಾನು—ಸೇವೆಗಳನ್ನು ಕೊಂಡಿರುತ್ತೀರಿ. ಹಾಗಾಗಿ ಈ ಬ್ಲೇಡ್ ಸ್ಕೀಮಿನ ಕಂಪೆನಿಯ ಮೇಲೆ ನಿಮಗೆ ಮತ್ಯಾವುದೂ ಹಕ್ಕಿರುವುದಿಲ್ಲ.

ಆದರೆ ನಿಜವಾಗಿ ನೀವು ಹಳ್ಳಕ್ಕೆ ಬಿದ್ದಿರುವ ಕಾರಣ ಬೇರೆ. ಒಮ್ಮೆ ಈ ಬ್ಲೇಡ್ ಸ್ಕೀಮಿಗೆ ಸದಸ್ಯರಾದ ಮೇಲೆ ನೀವೂ ನಿಮ್ಮ ಸ್ನೇಹಿತ—ಬಂಧುಗಳನ್ನು ಸದಸ್ಯರನ್ನಾಗಿ ಮಾಡಿಸಿ, ಅವರು ಕಟ್ಟುವ ಠೇವಣಿಯ ಮೇಲಿನ ಶೇಕಡಾ 10ರಷ್ಟನ್ನು ಕಮಿಶನ್ ರೂಪದಲ್ಲಿ ಪಡೆಯುವ ಆಮಿಷವಿರುತ್ತದೆ. ಆದರೆ ನೀವು ಕೇವಲ ಎರಡು ಅಥವಾ ಮೂರು ಜನರನ್ನು ಮಾತ್ರ ಸ್ಕೀಮಿಗೆ ಪರಿಚಯಿಸಬಹುದು. ಆ ಇಬ್ಬರು/ಮೂವರು ಮತ್ತಿಬ್ಬರು/ ಮೂವರನ್ನು ಪರಿಚಯಿಸಬಹುದು. ಹೀಗೆಯೇ ಈ ಸ್ಕೀಮಿನ ಸದಸ್ಯರ ಸಂಖ್ಯೆ ಉಲ್ಟಾ ಪಿರಮಿಡ್‍ನಂತೆ ಬೆಳೆಯುತ್ತಾ ಹೋಗುವ ಸಾಧ್ಯತೆಯಿರುತ್ತದೆ. ಈ ಚೈನ್ ಲಿಂಕಿನ 10 ಅಥವಾ 12ನೆಯ ಲಿಂಕಿನವರೆಗೆ ನಿಮಗೆ ಕಮಿಶನ್ ಸಿಗುವ ಆಮಿಷವಿರುತ್ತದೆ. ಹೀಗೆ ಕಾಗದದ ಮೇಲೆ ನೀವು ನೂರಾರು ಜನರ ಠೇವಣಿಯ ಮೇಲಿನ ಕಮಿಶನ್ ಪಡೆಯಬಹುದಾಗಿರುತ್ತದೆ. ನೀವು ಕೇವಲ ಒಂದೂವರೆ ಲಕ್ಷ ಹಣ ಹೂಡಿಕೆ ಮಾಡಿ ಹತ್ತು ಲಕ್ಷಕ್ಕೂ ಮಿಗಿಲಾಗಿ ಹಣ ಗಳಿಸುವ ಆಮಿಷಕ್ಕೆ ಬೀಳುತ್ತೀರಿ. ಕೆಲವರು ಬೇರೆಯವರನ್ನು ನಂಬಿಸಿ ಸ್ಕೀಮಿಗೆ ಪರಿಚಯಿಸಲಾಗದ ಕಾರಣ ತಮ್ಮ ಹೆಂಡತಿ/ ಗಂಡನ/ತಂದೆತಾಯಂದಿರ ಹೆಸರಿನಲ್ಲಿಯೇ ಮತ್ತೊಮ್ಮೆ ಸ್ಕೀಮಿನಲ್ಲಿ ಹಣಹೂಡಿಕೆ ಮಾಡಿ ಡಬಲ್ ಮೋಹಕ್ಕೆ ಬಲಿಯಾಗಿ ಡಬಲ್ ಮೋಸ ಹೋಗುತ್ತಾರೆ. ಹೆಚ್ಚಿನವರು ದಾಕ್ಷಿಣ್ಯಕ್ಕೆ ಬಿದ್ದು ಹಣ ಹೂಡಿಕೆ ಮಾಡಿದರೂ ಬೇರೆಯವರಿಗೆ ಮರುಳು ಮಾಡಲಾಗದೆ ಚೈನ್‍ಲಿಂಕಿನ ಕೊಂಡಿ ಮುರಿಯುತ್ತಾರೆ.

ಈ ಸ್ಕೀಮುಗಳ ಆಯೋಜಕರು ಈಗಾಗಲೇ ಸ್ಕೀಮಿಗೆ ಬಲಿಯದ ಕೆಲವು ಮಂದಿಯನ್ನು ಬ್ಯಾಂಕಾಕಿಗೋ, ಕೌಲಾಲಂಪುರಕ್ಕೋ ಕರೆದೊಯ್ದು ಮತ್ತಷ್ಟು ಮಿದುಳು ತೊಳೆಯುತ್ತಾರೆ. ಈ ರೀತಿಯಲ್ಲಿ ಬ್ರೇನ್‍ವಾಷ್ ಆದವರು ಯಾವ ಹಂತಕ್ಕೆ ಹೋಗುತ್ತಾರೆಂದರೆ ಸ್ಕೀಮಿನ ವಿರುದ್ಧ ಮಾತನಾಡುವ ಯಾರನ್ನಾದರೂ ಹೊಡೆಯುವ ಮಟ್ಟಕ್ಕೆ ಹೋಗುತ್ತಾರೆ. ಬಹಳಷ್ಟು ಜನರಿಗೆ ಹಣ ಕಳೆದುಕೊಂಡ ಎರಡು— ಮೂರು ತಿಂಗಳಲ್ಲಿ ಬುದ್ದಿ ಬಂದರೆ, ಹಲವರಿಗೆ ವರ್ಷಾನುಗಟ್ಟಲೆ ಬೇಕಾಗುತ್ತದೆ. ಈ ಸ್ಕೀಮಿನಲ್ಲಿ ಹಣ ಹೂಡಿದವರಲ್ಲಿ ಶೇಕಡಾ 99.99 ರಷ್ಟು ಜನ ಹಣ ಕಳೆದುಕೊಳ್ಳುವುದು ಶತಸಿದ್ಧ.

ಯಾರಿವನು `ಪಾಂಝಿ’?

ಇಟಲಿ ಮೂಲದ ಚಾರ್ಲ್ಸ್ ಪಾಂಝಿ (Charles Ponzi) ಅಮೆರಿಕದ ಬಾಸ್ಟನ್ ನಗರದಲ್ಲಿ 1920ರ ಸಮಯದಲ್ಲಿ ತನ್ನದೇ ಆದ ಸ್ಕೀಮ್ ಒಂದನ್ನು ತೆರೆದು ಸಹಸ್ರಾರು ಜನರಿಗೆ ಮೊಸ ಮಾಡಿದ್ದ. 1919ರಲ್ಲಿ ಅಮೆರಿಕಕ್ಕೆ ಬರುವ ಮೊದಲೇ ಹಲವಾರು ಕ್ರಿಮಿನಲ್ ಹಗರಣಗಳಲ್ಲಿ ಜೈಲುವಾಸ ಅನುಭವಿಸಿದ್ದ ಪಾಂಝಿ ಅಮೆರಿಕನ್ನರಿಗೆ ಚಳ್ಳೆಹಣ್ಣು ತಿನ್ನಿಸಲು ಹೊಸ ಯೋಜನೆಯೊಂದನ್ನು ಹಾಕಿದ್ದ. ತಾನು ಇಟಲಿಯ ಕಡಿಮೆ ಬೆಲೆಯ ಡಿಸ್ಕೌಂಟೆಡ್ ಪೋಸ್ಟಲ್ ರಿಪ್ಲೇ ಕೂಪನ್‍ಗಳನ್ನು ಅಮೆರಿಕದಲ್ಲಿ ಮಾರಿ ಗಳಿಸಿದ ಹಣದಲ್ಲಿ ಜನರಿಗೆ ಲಾಭಾಂಶ ಕೊಡುವೆನೆಂದು ಆಸೆ ಹುಟ್ಟಿಸಿದ್ದ. 45 ದಿನಗಳ ಹೂಡಿಕೆಗೆ 50% ಲಾಭ ಹಾಗೂ 90 ದಿನಗಳ ಹೂಡಿಕೆಗೆ 100% ಲಾಭಾಂಶ ಕೊಡುವೆನೆಂದು ನಂಬಿಸಿ ಸಹಸ್ರಾರು ಜನರಿಂದ ಠೇವಣಿ ಸಂಗ್ರಹಿಸಿದ್ದ. ಆದರೆ ಅಸಾಧ್ಯವಾದಂತಹ ಯಾವುದೇ ಪೋಸ್ಟಲ್ ಕೂಪನ್‍ಗಳಲ್ಲಿ ಹಣ ಹೂಡದೇ, ಹೊಸದಾಗಿ ಬಂದ ಠೇವಣಿಗಳಿಂದ ಹಳೆಯ ಠೇವಣಿಗಳಿಗೆ ಲಾಭಾಂಶ ಕೊಡುವ ದಂಧೆ ನಡೆಸಿದ್ದ. ಆಮಿಷಕ್ಕೆ ಒಳಗಾದ ಜನರು ತಮ್ಮ ಲಾಭಾಂಶವನ್ನೂ ಒಯ್ಯದೆ ಮತ್ತೆ ತಮ್ಮ ಲಾಭಾಂಶವೂ ಸೇರಿದಂತೆ ಹಣ ಹೂಡಿಕೆ ಮಾಡಿದ್ದರು. 1920ರಲ್ಲಿಯೇ 20 ಮಿಲಿಯನ್ ಅಮೆರಿಕನ್ ಡಾಲರ್‍ಗಳನ್ನು ಸಂಗ್ರಹಿಸಿದ್ದ ಪಾಂಝಿಯ ಈ ಸ್ಕೀಮು ಬ್ಯಾಂಕುಗಳ ಹಾಗೂ ಪತ್ರಿಕೆಗಳ ತನಿಖಾವರದಿಗಳಿಂದ ಬಯಲಾಗಿತ್ತು. ಒಂದೇ ದಿನದಲ್ಲಿ ಬಾಸ್ಟನ್ ಮತ್ತಿತರ ಅಮೆರಿಕೆಯ ಸಹಸ್ರಾರು ಜನಗಳ ಮಿಲಿಯಾಂತರ ಡಾಲರ್‍ಗಳು ಕಳೆದುಹೋಗಿದ್ದವು.

ಅಮೆರಿಕೆಯ ಫೆಡರಲ್ ಮತ್ತು ಸ್ಟೇಟ್ ಮೊಕದ್ದಮೆಗಳೆರಡರಲ್ಲಿಯೂ ಶಿಕ್ಷೆಗೆ ಒಳಗಾದ ಪಾಂಝಿ 1934ರವರೆಗೂ ಹಲವಾರು ಕಾರಾಗೃಹಗಳಲ್ಲಿ ಕಾಲ ಕಳೆದಿದ್ದ. ಅನಂತರ ಗಡಿಪಾರಾದ ಪಾಂಝಿ, ಇಟಲಿ ಹಾಗೂ ಬ್ರೆಝಿಲ್‍ಗಳಲ್ಲಿಯೂ ತನ್ನ ಹಲವಾರು ಹೊಸ ಸ್ಕೀಮುಗಳ ಮುಖಾಂತರ ಜನರಿಗೆ ಮೋಸ ಮಾಡಲು ಪ್ರಯತ್ನಿಸಿದ್ದ. ಕಡೆಗೆ 1949ರಲ್ಲಿ ಬ್ರೆಝಿಲ್‍ನ ರಿಯೋ ಡಿ ಜನೇರೋದಲ್ಲಿ ಅನಾಥನಾಗಿ ಪಾಂಝಿ ಸತ್ತ.

1920ರಲ್ಲಿ ಅಮೆರಿಕದಲ್ಲಿ ಕುಖ್ಯಾತನಾದ ಈ ಪಾಂಝಿಯ ಸತ್ಯಕಥೆಯಿಂದ ಇಂದಿಗೂ ಕೂಡಾ ಯಾವುದೇ ಹೊಸ ಠೇವಣಿಯಿಂದ ಹಳೆಯ ಠೇವಣಿಗಳಿಗೆ ಲಾಭಾಂಶ ನೀಡುವ ಯೋಜನೆಗಳಿಗೆ ಪಾಂಝಿ ಸ್ಕೀಮ್ ಎಂದೇ ಹೇಳಲಾಗುತ್ತದೆ. ತನ್ನ ಕುಖ್ಯಾತಿಯಿಂದಲಾದರೂ ಸರಿ, ಚಾಲ್ರ್ಸ್ ಪಾಂಝಿ ತನ್ನ ಹೆಸರನ್ನು ಅಜರಾಮರನಾಗಿಸಿದ್ದ.

ಈಗಿರುವ ಕಾನೂನುಗಳಡಿಯಲ್ಲೇ ಈಗಾಗಲೇ ಈ ತೆರನಾದ ಹಲವಾರು ಸ್ಕೀಮುಗಳ ಆಯೋಜಕರನ್ನು ಜೈಲಿಗೆ ಕಳುಹಿಸಲಾಗಿದೆ. ಕೊಲ್ಕತ್ತದ ಶಾರದ ಸ್ಕೀಮಿನ ನಿರ್ದೇಶಕರೆಲ್ಲರೂ ಜೈಲುವಾಸ ಅನುಭವಿಸಿದ್ದಾರೆ. ಮುಂಬಯಿಯ ಕ್ಯು—ನೆಟ್‍ನ ಮೈಕೇಲ್ ಫೆರೇರಾ (ಬಿಲಿಯರ್ಡ್ಸ್ ವಿಶ್ವ ಛಾಂಪಿಯನ್)ರವರನ್ನು ಆರು ತಿಂಗಳ ಕಾಲ ಜೈಲಿನಲ್ಲಿರಿಸಿ ಮುದಿವಯಸ್ಸಿನ ಕಾರಣಕ್ಕೆ ಬೇಲ್ ನೀಡಿ ಕಳುಹಿಸಲಾಗಿದೆ. ನ್ಯಾಯಾಲಯಗಳಲ್ಲಿ ಈಗಾಗಲೇ ಹಲವಾರು ಪ್ರಕರಣಗಳಿವೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಪೊಲೀಸ್— ನ್ಯಾಯಾಲಯಗಳೂ ಈ ವಂಚಕರ ಅನ್ಯಾಯದ ಹಣಕ್ಕೆ ಬಲಿಯಾಗಿ ಮೊಕದ್ದಮೆಗಳನ್ನು ಬದಿಗೆ ಸರಿಸಿದ ಆರೋಪವೂ ಇದೆ.

ಈ ವಂಚಕರ ಜಾಲಕ್ಕೆ ಕಡುಶಿಕ್ಷೆ ನೀಡಲು ಕೇಂದ್ರ ಸರ್ಕಾರ ಈ ಹೊಸ ಕಾನೂನನ್ನು ತರಲಿದೆ. ಕ್ಯಾಬಿನೆಟ್‍ನಲ್ಲಿ ಈಗಾಗಲೇ ಪಾರಿತವಾಗಿರುವ ಈ ಕಾನೂನು ಸಂಸತ್ತಿನ ಅಂಗೀಕಾರಕ್ಕೆ ಕಾದು ಕುಳಿತಿದೆ. ಕೇಂದ್ರ ಸರ್ಕಾರವು ಈಗಾಗಲೇ 187 ಬ್ಲೇಡ್ ಕಂಪೆನಿಗಳ ವ್ಯವಹಾರದ ಮೇಲೆ ತನಿಖೆ ಪ್ರಾರಂಭಿಸಿದೆ. ಈ ಕಾನೂನಿನ ಪರಿಧಿಗೆ ಠೇವಣಿ ಪಡೆದು ಶೇಕಡಾ 15ರಿಂದ 20ರವರೆಗೆ ಲಾಭಾಂಶ ನೀಡುವ ಭರವಸೆ ನೀಡುವ ಹಣಕಾಸು ಸಂಸ್ಥೆಗಳು/ಆಭರಣ ಕಂಪೆನಿಗಳು ಹಾಗೂ ನೀವು ನೀಡಿದ ಠೇವಣಿ ಹಣದಿಂದ ಬೀಟೆ—ಮತ್ತಿ ಮರ ಬೆಳೆಸಿ ಲಾಭಾಂಶ ನೀಡುವ ಆಮಿಷವೊಡ್ಡುವ ಕಂಪೆನಿಗಳೂ ಸೇರಿವೆ. ಗ್ಯಾರಂಟಿ ಬಡ್ಡಿ/ಲಾಭಾಂಶದ ಭರವಸೆ ನೀಡುವ ರಿಯಲ್ ಎಸ್ಟೇಟ್ ಕಂಪೆನಿಗಳೂ ಈ ಹೊಸ ಕಾನೂನಿನ ಪರಿಧಿಗೆ ಬರಲಿವೆ.

ಈ `ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನಿ’ನ ಆಡಳಿತಾತ್ಮಕ ಸಂಸ್ಥೆಗಳು ಯಾವುವೆಂದು ಇನ್ನೂ ನಿರ್ಧಾರವಾಗಬೇಕಿದೆ. ಹಾಗೆಯೇ ಈ ಕಾನೂನಿನಡಿ ತನಿಖಾ ಸಂಸ್ಥೆಗಳಿಗೆ ಯಾವ ತೆರನಾದ ವಿಚಾರಣೆಯ ಹಕ್ಕುಗಳನ್ನು ನೀಡಲಾಗುತ್ತದೆ ಹಾಗೂ ಕಾನೂನಿನಡಿ ದೋಷಿಗಳಿಗೆ ಯಾವ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ದೇಶದ ಅಮಾಯಕರ ಹಾಗೂ ಜನಸಾಮಾನ್ಯರ ಕಷ್ಟದ ಗಳಿಕೆಯನ್ನು ದೋಚುತ್ತಿರುವ ಈ ಬ್ಲೇಡ್ ಕಂಪೆನಿಗಳ ನಿಷೇಧಕ್ಕೆ ನಿರ್ದಿಷ್ಟ ಕಾನೂನು ಮಾಡುತ್ತಿರುವುದಂತೂ ಸ್ವಾಗತಾರ್ಹ ಹೆಜ್ಜೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮