2nd May 2018

ಅಪರಿಚಿತರ ಆತಿಥ್ಯ ಕೌಚ್ ಸರ್ಫಿಂಗ್

ಸಹನಾ ಸಿ.ಜಿ

ಇದೊಂದು ರೀತಿಯ ಉಚಿತ ಆತಿಥ್ಯ ವ್ಯವಸ್ಥೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಆತಿಥ್ಯ ವ್ಯವಸ್ಥೆ ಇದೆ. ಅಲ್ಪ ಹಣದಲ್ಲಿ ಎಲ್ಲ ಖರ್ಚು ನಿಭಾಯಿಸಿ ದೇಶ ಸುತ್ತ ಬಯಸುವ ವಿದ್ಯಾರ್ಥಿಗಳ ಪಾಲಿಗಂತೂ ಇದು ವರದಾನವೇ ಸರಿ.

ಜರ್ಮನಿ—ಭಾರತ ಉನ್ನತ ವ್ಯಾಸಂಗ ವಿನಿಮಯ ಕಾರ್ಯಕ್ರಮದಲ್ಲಿ ಜರ್ಮನಿ ದೇಶದ ಡ್ಯುಸಲ್‍ಡೋಫ್ ನಗರದಲ್ಲಿ ನೆಲೆಸಿರುವ ನನಗೆ ಯುರೋಪನ್ನು ಸುತ್ತುವ ಅದಮ್ಯ ಆಸೆ. ಆದರೆ, ವಿದ್ಯಾರ್ಥಿ ಆದ ನಾನು ಸೀಮಿತ ಹಣದಲ್ಲಿ ಬದುಕನ್ನು ನಿರ್ವಹಿಸಬೇಕಿತ್ತು. ನನ್ನ ಖರ್ಚಿಗಾಗಿ ಸೀಮಿತವಾಗಿದ್ದ ಮಾಸಿಕ 730 ಯುರೋಗಳಲ್ಲಿ ಆದಷ್ಟು ಉಳಿಸಿ ತಿಂಗಳಿಗೆ ಒಂದಾದರೂ ಹೊಸ ಜಾಗ ನೋಡಲು ತೀರ್ಮಾನಿಸಿದ್ದೆ. ಪ್ರವಾಸ ಮಾಡಲು ಮುಂದಾಗುವ ನನ್ನಂತಹವರಿಗೆ ಯುರೋಪ್ ದೇಶಗಳಲ್ಲಿ ಎದುರಾಗುವ ಮೊದಲ ಅಡ್ಡಿ ದುಬಾರಿಯಾದ ಪ್ರಯಾಣ ವೆಚ್ಚ. ಇದನ್ನು ಹೇಗೋ ಕಡಿಮೆ ಮಾಡಿಕೊಂಡರು ವಸತಿ ಸಮಸ್ಯೆ ನಮ್ಮ ಪ್ರವಾಸದ ಆಸೆಯನ್ನು ಮುರುಟಿ ಹಾಕುತ್ತದೆ. ಇಲ್ಲಿ ಸುರಕ್ಷತೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿದಂತೆಲ್ಲ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. ಇದರ ಲೆಕ್ಕಾಚಾರ ಮುಗಿಸಿ ನಾನು ಯುರೋಪ್ ದೇಶ ನೋಡುವ ಕನಸು ಸಧ್ಯಕ್ಕೆ ಫಲಿಸದು ಎಂದು ಸುಮ್ಮನಾಗಿದ್ದೆ.

ಹೀಗಿದ್ದಾಗ, ಇದೇ ಊರಿನಲ್ಲಿ ನೆಲೆಸಿರುವ ಭಾರತೀಯ ಗೆಳೆಯ ತಿಳಿಸಿದ ಮಾಹಿತಿಯೊಂದು ನನ್ನ ಪ್ರವಾಸದ ಆಸೆಯನ್ನು ಮತ್ತಷ್ಟು ಅರಳಿಸಿತು. ‘ಕೌಚ್ ಸರ್ಫಿಂಗ್’ ಎಂಬ ಪದ್ಧತಿಯ ಬಗ್ಗೆ ಅವರು ನನಗೆ ವಿವರಗಳನ್ನು ಹೇಳಿದರು. ಇದೊಂದು ರೀತಿಯ ಉಚಿತ ಆತಿಥ್ಯ ವ್ಯವಸ್ಥೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಆತಿಥ್ಯ ವ್ಯವಸ್ಥೆ ಇದೆ. ಯುರೋಪ್ ರಾಷ್ಟ್ರಗಳಲ್ಲಿ ತುಂಬಾ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿರುವ ಇದರ ಬಗ್ಗೆ ಆನ್‍ಲೈನ್‍ನಲ್ಲಿ ನನಗೆ ಸಂಪೂರ್ಣ ಮಾಹಿತಿ ಸಿಕ್ಕಿತು; ‘ಕೌಚ್ ಸರ್ಫಿಂಗ್’ ವೆಬ್ ಪ್ರವೇಶಿಸಿ ನನ್ನ ಪ್ರೊಫೈಲ್ ರೂಪಿಸಿಕೊಂಡೆನು. ನಂತರ ನಾನು ಹೋಗಬೇಕಿರುವ ನಗರದಲ್ಲಿ ಯಾರಾದರೂ ಉಚಿತ ಆತಿಥ್ಯ ಕಲ್ಪಿಸುವವರು ಇದ್ದಾರೆಯೇ ಎಂದು ಹುಡುಕಿದೆ. ಅಂತಹ ಐದು ಮಂದಿಗೆ ನನ್ನ ರಿಕ್ವೆಸ್ಟ್ ಕಳುಹಿಸಿದೆ. ನನ್ನ ಪ್ರೊಫೈಲ್ ಇಷ್ಟವಾದರೆ ಆತಿಥ್ಯ ನೀಡುವ ಜನ ಮುಂದೆ ಬರುತ್ತಾರೆ. ಇಲ್ಲವಾದರೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಈ ಮಧ್ಯೆ ನಾನು ನನ್ನ ಜರ್ಮನ್ ಭಾಷೆಯ ಪರೀಕ್ಷೆಗಾಗಿ 500 ಕಿ.ಮೀ. ದೂರವಿರುವ ವೈಡನ್ ನಗರಕ್ಕೆ ಹೋಗಲೇಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ವೈಡನ್ ಒಂದು ಪುಟ್ಟ ಪಟ್ಟಣ. ಇಲ್ಲಿ ಉಳಿಯಲು ಸರಿಯಾದ ವಸತಿ ವ್ಯವಸ್ಥೆ ಸಿಕ್ಕುತ್ತಿರಲಿಲ್ಲ. ಆಗ ನನಗೆ ‘ಕೌಚ್ ಸರ್ಫಿಂಗ್’ ಕಾಮಧೇನುವಾಗಿ ಕಂಡಿತು. ಭಾರತೀಯಳಾದ ನನಗೆ ಇದು ಮೊದಲ ಅನುಭವ. ನನಗೆ ಆತಿಥ್ಯ ಕಲ್ಪಿಸಲು ಒಪ್ಪಿದವರ ಬಗ್ಗೆ ಕುತೂಹಲ ಹಾಗೂ ಭಯ. ಒಂಭತ್ತು ಗಂಟೆಗಳ ಕಾಲ ರೈಲು ಪ್ರಯಾಣ ಮಾಡಿದ ನನ್ನನ್ನು ಸ್ವಾಗತಿಸಲು ಅತಿಥೇಯರಾದ ಕ್ಯಾರೋಲಿನಾ ಶಿಮೆಲ್ ಎಂಬ ನನ್ನ ವಯಸ್ಸಿನ ಹೆಣ್ಣುಮಗಳು ರೈಲು ನಿಲ್ದಾಣಕ್ಕೆ ಬಂದಿದ್ದರು. ಆಗ ಮಧ್ಯಾಹ್ನ 3 ಗಂಟೆ. ಅತಿ ಕಡಿಮೆ ಜನರು ಇರುವ ಪುಟ್ಟ ನಗರ ವೈಡನ್. ನಾನು ಉಳಿದಿರುವ ಮನೆಯಿಂದ ನನ್ನ ಪರೀಕ್ಷೆ ಬರೆಯುವ ಜಾಗಕ್ಕೆ ಕೇವಲ ಎರಡು ನಿಮಿಷಗಳ ಕಾಲ್ನಡಿಗೆ.

ಈ ಪುಟ್ಟ ಮನೆಯನ್ನು ಆವರಿಸಿದ್ದ ಗುಲಾಬಿ ಬಣ್ಣದ ಹೂವಿನ ಬಳ್ಳಿಗಳು ಆತಂಕದ ನನ್ನ ಮನಸ್ಥಿತಿಯನ್ನು ತಿಳಿಗೊಳಿಸಲು ನೆರವಾದವು. ಮನೆಯ ಒಳಗೆ ಪ್ರವೇಶಿಸಿದ ಕೂಡಲೇ ಬೆಕ್ಕೊಂದು ನನ್ನ ಪಕ್ಕದಲ್ಲೇ ಇದ್ದ ಶಿಮೆಲ್ ಮೇಲೆ ಎಗರಿ ಚಿನ್ನಾಟವಾಡಿತು. ‘ಮೀಟ್ ಬ್ರುಸ್ಲಿ’ ಎಂದು ಆಕೆ ನನಗೆ ಬೆಕ್ಕನ್ನು ಪರಿಚಯಿಸಿದರು. ನಾನು ಇವರಿಗಾಗಿ ತಂದಿದ್ದ ಸೋಂಪಾಪುಡಿಯನ್ನು ನೀಡಿದಾಗ ಅವರು ಖುಷಿಗೊಂಡರು. ಈ ಮನೆ ಒಂದು ರೀತಿಯ ಸಾಂಪ್ರದಾಯಿಕ ಪಟಗಳು ಮತ್ತು ಕೆಲ ವಿಗ್ರಹಗಳಿಂದ ಶೋಭಿಸುತ್ತಿತ್ತು. ಈ ಪೈಕಿ ಬುದ್ಧನ ಪ್ರತಿಮೆ ಸಹ ಅಲ್ಲಿ ಕಂಡಿದ್ದು ನನ್ನ ಭಾರತೀಯತೆಯನ್ನು ಅರಳಿಸಿತ್ತು. ಹೀಗೆ ಮನೆ ನೋಡುತ್ತಾ ಇದ್ದಾಗ ಕೆರನಿಲಾಳ ಗೆಳೆಯ ಡೀಬೆಲ್ ಎಂಬ ಹುಡುಗ ನಮ್ಮನ್ನು ಸೇರಿಕೋಂಡನು. ಮೂವರು ಕೆಲ ಕಾಲ ಕುಶಲೋಪರಿ ಮಾತನಾಡಿ ವಿಶ್ರಾಂತಿ ನೆಪದಲ್ಲಿ ಚದುರಿ ಹೋದೆವು. ಅಲ್ಲಿಯೇ ಹಜಾರದಲ್ಲಿ (ಹಾಲ್) ನನಗೆ ಮಲಗಲು ಮೀಸಲಿದ್ದ ಹಾಸು ಬಂಡೆಯಂತಿದ್ದ ಸೋಫಾವನ್ನು ಇದೇ ವೇಳೆ ಪರಿಚಯಿಸಲಾಗಿತ್ತು.

‘ಕೌಚ್ ಸರ್ಫಿಂಗ್’ ಹುಟ್ಟಿದ್ದು ಹೇಗೆ?

ಈ ಪರಿಕಲ್ಪನೆ ಮೊಟ್ಟಮೊದಲಿಗೆ ಹೊಳೆದದ್ದು ಕೆಸ್ಸಿ ಫೆಂಟನ್ ಎಂಬ ಯುವಕನಿಗೆ. ಅದಕ್ಕೂ ಒಂದು ಕುತೂಹಲಕಾರಿ ಹಿನ್ನೆಲೆಯಿದೆ. ಇಪ್ಪತ್ತೈದರ ಹರೆಯದ ಈ ಯುವಕ ಆಗಿನ್ನೂ ಕಂಪ್ಯೂಟರ್ ಪ್ರೋಗ್ರಾಮರ್ ಅಗಿದ್ದ. ಒಂದು ದಿನ ಕಾರ್ಯನಿಮಿತ್ತ ಬೋಸ್ಟನ್ ನಗರದಿಂದ ಅಗ್ಗದ ವಿಮಾನದಲ್ಲಿ ಹೊರಟ ಈತ ಐಸ್‍ಲ್ಯಾಂಡ್‍ನಲ್ಲಿ ಇಳಿದ. ಆದರೆ ಉಳಿಯಲು ಒಂದು ತಾಣ ಸಿಗದೆ ಪರದಾಡಬೇಕಾಯ್ತು. ಕಿಲಾಡಿ ಫೆಂಟನ್ ಅದ್ಹೇಗೋ ಐಸ್‍ಲ್ಯಾಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಇಮೇಲ್ ವಿಳಾಸಗಳನ್ನು ಕದ್ದು ಸುಮಾರು 1500 ಜನರನ್ನು ಹೋಮ್‍ಸ್ಟೇ ಸೌಕರ್ಯಕ್ಕಾಗಿ ಸಂಪರ್ಕಿಸಿದ. ಈತನ ಮನವಿಗೆ ಪ್ರತಿಕ್ರಿಯಿಸಿದ ನೂರು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆಶ್ರಯ ನೀಡಲು ಮುಂದೆಬಂದರು. ಅಂತಿಮವಾಗಿ ಆತ ಒಬ್ಬ ಗಾಯಕನ ಮನೆಯಲ್ಲಿ ವಾಸ್ತವ್ಯ ಹೂಡಿದ.

ಫೆಂಟನ್ ತನ್ನ ಕಾರ್ಯ ಮುಗಿಸಿ ಬೊಸ್ಟನ್‍ಗೆ ಹಿಂದಿರುಗುವಾಗ ವಿಮಾನದಲ್ಲಿ ತನ್ನ ಪರದಾಟದ ಬಗ್ಗೆ ಹಾಗೇ ಮೆಲುಕುಹಾಕತೊಡಗಿದ. ಆಗಲೇ ಹೊಳೆದದ್ದು ‘ಕೌಚ್ ಸರ್ಫಿಂಗ್’. 1999ರ ಜೂನ್ 12 ರಂದು ಇದೇ ಹೆಸರಿನಲ್ಲಿ ಜಾಲತಾಣ ತೆರೆದು ಅಪರಿಚಿತರ ನಡುವಿನ ಆತಿಥ್ಯಕ್ಕೆ ಸೇತುವಾದ.

ನಾನು ಬ್ಯಾಗಿನಿಂದ ಬಟ್ಟೆಯನ್ನು ಹೊರ ತೆಗೆದ ಕೂಡಲೇ ಬ್ರುಸ್ಲಿ ಬೆಕ್ಕು ಚಂಗನೆ ನನ್ನ ಕಡೆ ಎಗರಿ ಬಂದು ನನ್ನ ಷೂ ಕೆರೆಯತೊಡಗಿತು. ಆರಂಭದಲ್ಲಿ ಇದನ್ನು ಸೋ ಕ್ಯೂಟ್ ಎಂದು ಹೊಗಳಿದ್ದ ನಾನು, ನಮ್ಮ ಮನೆಯ ಬೆಕ್ಕನ್ನು ಬೈದು ಓಡಿಸಿದ ರೀತಿಯಲ್ಲೇ ಇದನ್ನು ದೂರ ಗದುಮಿದ್ದೆ. ನಿಮಿಷಗಳು ಉರುಳಿದಂತೆ ನಾನು ಮನೆಯಲ್ಲೊಬ್ಬಳಾಗಿದ್ದೆ. ಸಾವಿರಾರು ಕಿಲೋಮೀಟರ್ ದೂರದಿಂದ ಬಂದ ಅಪರಿಚಿತರಿಗೆ ಅದ್ಯಾವ ಧೈರ್ಯದ ಮೇಲೆ ಮನೆಯಲ್ಲಿ ಆತಿಥ್ಯ ನೀಡಲು ಇವರು ಮುಂದಾಗಿದ್ದಾರೆ ಎಂದು ನಾನು ಅಚ್ಚರಿಗೊಂಡಿದ್ದೆ.

ರಾತ್ರಿ ಮೂರು ಮಂದಿ ಮಾತನಾಡುತ್ತಾ ಊಟ ಮುಗಿಸಿದೆವು. ನಾನು ಹಜಾರದಲ್ಲಿ ಮಲಗಿದಾಗ ಮತ್ತೆ ಆತಂಕ, ಗಾಬರಿ ಕೆಲಕಾಲ ನಿದ್ದೆಗೆ ಜಾರಲು ಅಡ್ಡಿಪಡಿಸಿತು. ಹಜಾರದಲ್ಲಿದ್ದ ಹೀಟರ್ ಅನ್ನು ನಿಯಂತ್ರಿಸಲು ನನಗೆ ಗೊತ್ತಾಗದ ಕಾರಣ ಇಡೀ ರಾತ್ರಿ ನಾನು ಅತಿಶಾಖದಲ್ಲೇ ನಿದ್ರೆ ಮಾಡಬೇಕಾಯಿತು. ಮರುದಿನ ಮುಂಜಾನೆ ಬ್ರೆಡ್ ಜಾಮ್ ನಾಷ್ಟ ಮುಗಿಸಿ ಪರೀಕ್ಷೆ ಹಾಲ್‍ನತ್ತ ಹೊರಟೆನು. ನಾನು ಪರೀಕ್ಷೆ ಮುಗಿಸಿ ಮನೆಗೆ ಬಂದಾಗ ಕೆರೆನಿಲಾ ಮತ್ತು ಶಿಬೆಲ್ ನನ್ನ ದಾರಿಯನ್ನೇ ಕಾಯುತ್ತಿದ್ದರು. ಎಲ್ಲರೂ ಮನೆಯಿಂದ ಆಚೆ ಹೋದೆವು. ಅಲ್ಲಿ ಫಿಜಾ ಸವಿಯುತ್ತಾ ಪುಟ್ಟ ಪಟ್ಟಣವನ್ನು ನನಗೆ ಪರಿಚಯಿಸಿದರು. ಈ ವೇಳೆ ನಾವು ಜರ್ಮನಿಯ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ದೀರ್ಘಕಾಲ ಚರ್ಚೆ ನಡೆಸಿದೆವು. ಕಡೆಯದಾಗಿ ಇವರಿಬ್ಬರೂ ನನ್ನನ್ನು ಡುಸೆಲ್‍ಡ್ರಾಫ್ ನಗರಕ್ಕೆ ಹೊರಡುವ ರೈಲು ಹತ್ತಿಸಿ ತಮ್ಮ ಕರ್ತವ್ಯ ಮುಗಿಸಿದ ಆನಂದದಿಂದ ಕೈಬೀಸಿ ಬೀಳ್ಕೊಟ್ಟರು. ದೂರದ ಊರಿಗೆ ಪರೀಕ್ಷೆ ಬರೆಯುವ ಸಲುವಾಗಿ ಪರಿಚಿತರ ಮನೆಗೆ ಬಂದಂತಹ ಅನುಭವ ನನಗೆ ಆಗಿತ್ತು.

ಪರವೂರಿನಿಂದ ಬರುವ ಅಪರಿಚಿತರಿಗೆ ಉಚಿತವಾಗಿ ಆತಿಥ್ಯ ಕಲ್ಪಿಸುವ ಈ ಪದ್ಧತಿ ಭಾರತದಲ್ಲೂ ಇದೆಯೋ ಎಂದು ಕುತೂಹಲದಿಂದ ನಾನು ವೆಬ್ ಶೋಧನೆ ಮಾಡಿದಾಗ ಯಾವುದೇ ಸಕಾರಾತ್ಮಕ ಫಲಿತಾಂಶ ಸಿಕ್ಕಲಿಲ್ಲ. ಭಾರತದಲ್ಲಿ ಉಚಿತ ಆತಿಥ್ಯ ಕಲ್ಪಿಸುವವರನ್ನು ಹುಡುಕುವ ವ್ಯವಸ್ಥೆ ಇದೆಯಾದರೂ ಎರಡೂ ಕಡೆಯಿಂದ ಪರಸ್ಪರ ನಂಬಿಕೆಯನ್ನು ಉಳಿಸಿಕೊಳ್ಳುವ ವ್ಯಕ್ತಿಗಳು ಸಿಕ್ಕುತ್ತಾರೆ ಎಂಬುದು ಅನುಮಾನ. ಅನೇಕ ಜನರು ನಮ್ಮಂತಹ ಹುಡುಗಿಯರ ಪ್ರೊಫೈಲ್ ನೋಡಿ ನಮ್ಮ ಮನೆಯಲ್ಲಿ ಉಳಿದುಕೊಳ್ಳಿ ಎಂದು ಹುಸಿ ಆಹ್ವಾನ ನೀಡಿದ ಅನೇಕ ಕೀಟಲೆ ಪ್ರಸಂಗಗಳು ವರದಿಯಾಗಿರುವುದು ನನ್ನ ಗಮನಕ್ಕೆ ಬಂತು. ಈ ಬಗ್ಗೆ ಯಾವುದೇ ಸ್ಪಷ್ಟತೆ ಗೋಚರವಾಗದೆ ನಿರಾಸೆಯಿಂದ ಸುಮ್ಮನಾದೆ.

ಇಲ್ಲಿಯೂ ಸಹ ‘ಕೌಚ್ ಸರ್ಫಿಂಗ್’ ಸೇವೆಯನ್ನು ಪಡೆಯುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ. ಅದರಲ್ಲೂ ನಮ್ಮಂತಹ ಹುಡುಗಿಯರು ಉಚಿತ ಆತಿಥ್ಯ ನೀಡುವ ಅಪರಿಚಿತರ ಬಗ್ಗೆ ಮತ್ತೆಮತ್ತೆ ಪರಿಶೀಲಿಸಿ ನೋಡುವುದು ಅತಿ ಮುಖ್ಯ. ನಾವು ಹೋಗಬೇಕೆಂದು ನಿರ್ಧರಿಸಿದ ಮನೆಯವರ ಹಿನ್ನೆಲೆ ಇಷ್ಟವಾದರೆ, ಅಲ್ಲಿ ಈ ಹಿಂದೆ ಉಳಿದವರು ತಿಳಿಸಿದ ಅಭಿಪ್ರಾಯ ಪುಟವನ್ನು ಒಮ್ಮೆ ಸೂಕ್ಷ್ಮವಾಗಿ ನೋಡಬೇಕು. ಸಾಧ್ಯವಾದರೆ ಆತಿಥ್ಯ ಪಡೆದವರಲ್ಲಿ ಹೆಣ್ಣು ಮಕ್ಕಳು ಇದ್ದರೆ ಅವರ ಸಂಪರ್ಕ ಸಾಧಿಸಿ ನೇರ ಅಭಿಪ್ರಾಯ ಪಡೆಯಬೇಕು. ಮೊದಲ ಆಯ್ಕೆಯಲ್ಲಿ ಸಾಧ್ಯವಿದ್ದಷ್ಟು ತುಂಬು ಕುಟುಂಬದ ಮನೆಯನ್ನು ಆರಿಸಿಕೊಂಡರೆ ಒಳ್ಳೆಯದು. ಈ ಸೇವೆ ಕಲ್ಪಿಸುವ ಕುಟುಂಬವು ವಿದೇಶ ಪ್ರವಾಸ ಮಾಡಿ ಇದರ ಬಗ್ಗೆ ಪ್ರಭಾವಿತರಾಗಿದ್ದರೆ ಅಂತಹವರನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಅಂತಹವರಿಗೆ ಪ್ರವಾಸಿಗರ ಬವಣೆ ಮತ್ತು ಆತಂಕಗಳು ಚೆನ್ನಾಗಿ ಅರ್ಥವಾಗುತ್ತವೆ.

ದೇಶ ವಿದೇಶ ತಿರುಗಲು ಇರುವ ಇಂತಹ ಸುಲಭ ಮಾರ್ಗಗಳನ್ನು ಬಳಸಿಕೊಳ್ಳಲು ನೀವೂ ನೆರವಾದರೆ ನಾನು ಮತ್ತಷ್ಟು ದೇಶಗಳನ್ನು ಸುತ್ತಲು ಅನುಕೂಲವಾಗುತ್ತದೆ. ನೀವೂ ‘ಕೌಚ್ ಸರ್ಫಿಂಗ್’ ಬಳಸಿ, ಜಗತ್ತನ್ನು ಸುತ್ತಿ, ಜನರೊಂದಿಗೆ ಬೆರೆತು ವಿಶ್ವಮಾನವರಾಗಿ.

* ಲೇಖಕಿ ತುಮಕೂರಿನ ಎಸ್.ಐ.ಟಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ, ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ಹೋದಾಗಿನ ಅನುಭವ ಹಂಚಿಕೊಂಡಿದ್ದಾರೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018