2nd May 2018

ಹಣೆಬರಹವನ್ನೇ ಬದಲಿಸಲು ಹೊರಟ ಜೀನ್ ಎಡಿಟಿಂಗ್

ಟಿ.ಆರ್.ಅನಂತರಾಮು

ಜೀನ್ ಎಡಿಟಿಂಗ್ ಎಂಬುದು ಇತ್ತೀಚೆಗೆ ಬಹಳ ಚರ್ಚೆಗೆ, ಕುತೂಹಲಕ್ಕೆ, ಭರವಸೆಗೆ ಕಾರಣವಾಗಿದೆ. ಈಗ ನಿಮ್ಮ ದೇಹದಲ್ಲಿರುವ ಯಾವ ಜೀನ್‍ಗಳು ಚೆಲ್ಲಾಟವಾಡುತ್ತಿವೆ ಎನ್ನುವುದನ್ನು ಪತ್ತೆ ಹಚ್ಚಬಹುದು. ಇವುಗಳನ್ನು ಮುಂದಿನ ಪೀಳಿಗೆಗೆ ವರ್ಗಾವಣೆ ಯಾಗದಂತೆ ನಿರ್ನಾಮ ಮಾಡಲು ಸಾಧ್ಯ. ಹಾಗೆಯೇ ಕಾಯಿಲೆ ತರುವ ವಿಕೃತ ಜೀನ್‍ಗಳ ಮೇಲೆ ದಾಳಿ ಮಾಡಬಹುದು.

ಪತ್ರಿಕೆಯೊಂದು ಜನರನಾಡಿ ತಿಳಿಯಲು, `ನೀವು ಯಾವ ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ಆರಿಸುತ್ತೀರಿ’ ಎಂಬ ಪ್ರಶ್ನೆ ಕೇಳಿದರು. ಬಂದ ಉತ್ತರಗಳಲ್ಲಿ ಕೆಲವು ಬಹಳ ಸಿಟ್ಟಿನಿಂದ ಕೂಡಿದ್ದವು, ಹಲವು ಹತಾಶೆಯ ಪ್ರತೀಕವಾಗಿದ್ದವು. `ಯಾವ ನನ್ ಮಗ ಬಂದರೇನಂತೆ, ಕಿಸಿಯುವುದು ಅಷ್ಟರಲ್ಲೇ ಇದೆ’ —ಈ ಧಾಟಿಯ ಅಭಿಪ್ರಾಯಗಳು ಸಾವಿರಾರು ಬಂದಿದ್ದವು. ಇಂತಹ ಬೈಗಳು ಪತ್ರಿಕೆಯಲ್ಲಿ ಯಥಾವತ್ತಾಗಿ ಪ್ರಕಟವಾಗುವುದು ಸದಭಿರುಚಿಯ ಸಂಕೇತವಲ್ಲ. ಕೊನೆಗೆ ಸಂಪಾದಕರು ಮಾಡಿದ್ದಿಷ್ಟು: ಆ ವಾಕ್ಯದಲ್ಲಿದ್ದ `ನನ್ ಮಗ’ ಎಂಬ ಪದವನ್ನು ಕಿತ್ತು `ಯಾರು ಬಂದರೇನಂತೆ’ ಎಂದು ತಿದ್ದಿದ್ದರು. ಪತ್ರಿಕೆಯ ಘನತೆ ಉಳಿಯಿತು.

ಇದೇ ತರ್ಕವನ್ನು, ಎಡಿಟಿಂಗ್ ಮಾದರಿಯನ್ನು ಜೀವಿವಿಜ್ಞಾನಕ್ಕೂ ಅನ್ವಯಿಸಬಹುದೇ? ಯಾಕಾಗಬಾರದು? ಹೀಗೆ ಯೋಚಿಸುವ ಮುನ್ನ ನಿಮ್ಮಲ್ಲೊಂದು ಕೋರಿಕೆ. ಕಾಯಿಲೆ ವಿಚಾರ ಬಂದಾಗ `ಪೂರ್ವಜನ್ಮದ ಕರ್ಮ’, `ಯಾರಿಗೆ ಹಿಂದೆ ಏನು ಮಾಡಿದ್ದೆನೋ’, `ಇದು ಜನ್ಮಕ್ಕಂಟಿದ ಶನಿ’ ಇಂಥ ಕರ್ಮಸಿದ್ಧಾಂತದ ಪ್ರಲಾಪವನ್ನು ನಿಮ್ಮ ಮನಸ್ಸಿನಿಂದ ಆಚೆ ನೂಕಿ. ಹೃದಯ ಅಥವಾ ಕ್ಯಾನ್ಸರ್ ರೋಗಿಗಳು ಡಾಕ್ಟರ್ ಮುಂದೆ ತಪಾಸಣೆಗೆ ಕೂತಾಗ, ಅವರನ್ನು ಕೇಳುವ ಮೊದಲ ಪ್ರಶ್ನೆ `ನಿಮ್ಮ ಮನೆಯಲ್ಲಿ ಯಾರಿಗಾದರೂ ಹಿಂದೆ ಇತ್ತೆ?’. ಹಾಗಿದ್ದರೆ ರೋಗಿಗಳು ಒಪ್ಪಿಕೊಳ್ಳಲೇಬೇಕು. ವೈದ್ಯರ ಬಳಿ ಮುಚ್ಚಿಡಲಾದೀತೆ? ಕೆಲವು ಕಾಯಿಲೆಗಳಂತೂ ವಂಶಪಾರಂಪರ್ಯವಾಗಿ ಬಂದ ಆಸ್ತಿ. ಇದನ್ನೇ `ಹಣೆಬರಹ’ ಎನ್ನುವುದು. ಈಗಿನ ಬಯೋ ಟೆಕ್ನಾಲಜಿ ಹೇಳುತ್ತಿದೆ ನಿಮ್ಮ ದೇಹದಲ್ಲಿರುವ ಜೀವಕೋಶದಲ್ಲಿ ಅಡಗಿರುವ ಯಾವ ಜೀನ್‍ಗಳು ಚೆಲ್ಲಾಟವಾಡುತ್ತಿವೆ ಎನ್ನುವುದನ್ನು ಪತ್ತೆ ಹಚ್ಚುವುದು ಕಷ್ಟವೇ ಅಲ್ಲ. ಮುಂದಿನ ಪೀಳಿಗೆಗೆ ವರ್ಗಾವಣೆಯಾಗದಂತೆ ನಿರ್ನಾಮ ಮಾಡಬಹುದು. ಕಾಯಿಲೆ ತರುವ ವಿಕೃತ ಜೀನ್‍ಗಳ ಮೇಲೆ ದಾಳಿ ಮಾಡಬಹುದು. ಇದೇನೂ ಪೊಳ್ಳು ಭರವಸೆಯಲ್ಲ. ಈಗಾಗಲೇ 21ನೇ ಶತಮಾನ ಸಂಶೋಧನೆಯಲ್ಲಿ ಭಾರಿ ಹೆಜ್ಜೆ ಇಟ್ಟಿದೆ. ಕಿವಿ, ಯಕೃತ್ತು, ಮೂಗು ಇಂಥವುಗಳನ್ನು ಲ್ಯಾಬ್‍ನಲ್ಲಿ ಬೆಳೆಯುವ ಕಾಲ ಬಂದೇಬಿಟ್ಟಿದೆ. ದೇಹವನ್ನೇ ಒಂದು ಯಂತ್ರ ಎನ್ನುವುದಾದರೆ ನಮಗೆ ಸುಲಭವಾಗಿ ಬಿಡಿಭಾಗಗಳು ಲಭ್ಯ. ಆಕರಕೋಶ ಅಂದರೆ ಇನ್ನೂ ಬೇರೆಬೇರೆ ಅಂಗಾಂಗಗಳನ್ನು ರೂಪಿಸಲು ವಿಭಜನೆಯಾಗಿರದ ಕೋಶ—ಅವನ್ನು ನಮಗೆ ಬೇಕಾದ ಅಂಗಾಂಗಗಳ ಬೆಳವಣಿಗೆಗೆ ಬಳಸಿಕೊಳ್ಳಬಹುದು. ಇವನ್ನೇ ಸ್ಟೆಮ್ ಸೆಲ್ಸ್ ಹೆಸರಿನಿಂದ ಕರೆಯುತ್ತೇವೆ.

ಜೈವಿಕ ತಂತ್ರಜ್ಞಾನ ನೇರವಾಗಿ ವಿಕೃತ ಅಥವಾ ಹೆಚ್ಚುವರಿ ಜೀನ್‍ಗಳಿರುವ ನಿರ್ದಿಷ್ಟ ಭಾಗವನ್ನೇ ಕತ್ತರಿಸುವಲ್ಲಿ ಯಶಸ್ಸು ಸಾಧಿಸಿದೆ. ಜೀನ್‍ಗಳನ್ನು ತಿದ್ದಬಹುದು, ತೀಡಬಹುದು, ಹೊಸತನ್ನು ಸೇರಿಸಬಹುದು, ಬೇಡವಾದ್ದನ್ನು ಕಳಚಬಹುದು. ಯಾವ ಕಾಯಿಲೆಗೆ ನಿರ್ದಿಷ್ಟ ಜೀನ್ ಕಾರಣವಾಗುತ್ತದೋ, ಅದರ ನಿರ್ದಿಷ್ಟ ಭಾಗವನ್ನು ನಿಯಂತ್ರಿಸಬಹುದು. ಕತ್ತರಿ ಎಂದರೆ ನಾವು ಬಳಸುವ ಕತ್ತರಿಯಲ್ಲ. ಅದು ಅಣು ಹಂತದಲ್ಲಿ ರಿಪೇರಿ ಮಾಡಬೇಕಾದ ಕಾರ್ಯ.

ಅಂತರಿಕ್ಷದಲ್ಲಿ ಪರಿಭ್ರಮಿಸುತ್ತಿರುವ ಪ್ರಬಲ ದೂರದರ್ಶಕಗಳಿಂದ ನಮ್ಮ ಬ್ರಹ್ಮಾಂಡದ ಆಚೆಗಿರುವ ಹಲವು ಬ್ರಹ್ಮಾಂಡಗಳನ್ನೂ ವಿಶ್ವದಲ್ಲಿ ಜರಗುತ್ತಿರುವ ನಕ್ಷತ್ರಗಳ ಹುಟ್ಟು, ಸಾವು, ಸಮಾಧಿಗಳನ್ನೂ ನೋಡುತ್ತ ಜಗತ್ತನ್ನೇ ವಿಸ್ಮಯಪಡಿಸುತ್ತಿದ್ದಾರೆ ಖಭೌತ ವಿಜ್ಞಾನಿಗಳು. ಅದರಾಚೆಗೆ ಏನಿದೆ ಎಂದು ತಡಕುವ ದೂರದರ್ಶಕಗಳ ಸೃಷ್ಟಿಯೇ ಇಂದು ಸ್ಪರ್ಧಾತ್ಮಕ ಪ್ರಪಂಚವಾಗಿದೆ. ಹಾಗೆಯೇ ನಮ್ಮ ದೇಹದ ಒಳಗಡೆಯೇ ದೊಡ್ಡ ಬ್ರಹ್ಮಾಂಡವಿದೆ. ಅದನ್ನು ಇಣುಕಿ ನೋಡಲು ನಮ್ಮ ಸಾಧಾರಣ ಕಣ್ಣು ಸಾಲದು, ಸೂಕ್ಷ್ಮದರ್ಶಕಗಳ ನೆರವು ಬೇಕು. ದೇಹದೊಳಗಿನ ಪ್ರತಿ ಬಿಡಿಭಾಗಗಳು, ಅಲ್ಲಿ ನಡೆಯುತ್ತಿರುವ ಅಸಂಖ್ಯ ರಾಸಾಯನಿಕಗಳ ಪ್ರಕ್ರಿಯೆಗಳು, ಬ್ಯಾಕ್ಟೀರಿಯ ಮತ್ತು ವೈರಸ್‍ಗಳು ಸೃಷ್ಟಿಸಿರುವ ರಣಾಂಗಣ ಎಲ್ಲವನ್ನೂ ಗಮನಿಸಿ ನೋಡುತ್ತಿದ್ದಾರೆ ವಿಜ್ಞಾನಿಗಳು. ದೇಹವೆಂದರೆ ಅದು ರಾಸಾಯನಿಕ ಕಾರ್ಖಾನೆ ಎನ್ನುವುದು ಇವರ ಲೆಕ್ಕ. ನಮ್ಮ ಹಿಂದಿನವರು ಗಾತ್ರದ ಲೆಕ್ಕ ಕೊಡಲು ಅಣು, ರೇಣು, ತೃಣಕಾಷ್ಠ ಎಂಬ ಮಾನಕ ಬಳಸುತ್ತಿದ್ದರು. ಅಣುವೇ ಅತ್ಯಂತ ಚಿಕ್ಕದು. ವಿಜ್ಞಾನದಲ್ಲಿ ಪರಮಾಣುಗಳನ್ನು ನೋಡುವ ಅವಕಾಶವನ್ನು ಎಂದೋ ಕಲ್ಪಿಸಿಕೊಂಡಾಗಿದೆ. ಈ ಚರ್ಚೆಯನ್ನು ಒಂದು ಅರೆಘಳಿಗೆ ಬದಿಗಿಡೋಣ. ನೇರವಾಗಿ ಜೀವ ಕೋಶಗಳ ವಿಚಾರಕ್ಕೆ ಬರೋಣ. ದೇಹದಲ್ಲಿರುವ ಕೋಶಗಳದ್ದೇ ದೊಡ್ಡ ಪ್ರಪಂಚ. ಪ್ರತಿ ಮನುಷ್ಯನ ದೇಹದಲ್ಲಿ 37 ಟ್ರಿಲಿಯನ್ (37,000,000,000,000) ಕೋಶಗಳು ಇವೆಯೆಂದು ಲೆಕ್ಕ ಒಪ್ಪಿಸಿದ್ದಾರೆ. ಇವುಗಳನ್ನೆಲ್ಲ ಒಂದೊಂದೇ ಎಣಿಸುವುದು ಅಸಾಧ್ಯದ ಮಾತು. ಒಂದು ಜೀವನವಂತೂ ಸಾಲದು.

ಈ ಕೋಶಗಳನ್ನೇ ದೇಹಕಟ್ಟುವ ಇಟ್ಟಿಗೆ ಎಂದು ರೂಪಕವಾಗಿ ಹೇಳುವುದುಂಟು. ಇಟ್ಟಿಗೆಯೊಳಗಿನ ಜಗತ್ತಿನಲ್ಲಿ ಏನೇನಿದೆ? ಅದೇ ಒಂದು ಕೋಟೆ. ಕೋಟೆಯೊಳಗೆ ಇರುವ ರಾಜಕುಮಾರ ಯಾರು— ನ್ಯೂಕ್ಲಿಯಸ್. ಅದರೊಳಗೆ X ರೂಪದಲ್ಲಿ ಕಾಣುವ ವರ್ಣತಂತುಗಳು ಇವೆ. ಇವು ಪ್ರತಿವ್ಯಕ್ತಿಯಲ್ಲೂ 46 ಅಂದರೆ ಅಪ್ಪನಿಂದ 23, ಅಮ್ಮನಿಂದ ಬಳುವಳಿಯಾಗಿ ಬಂದ 23 ವರ್ಣತಂತುಗಳಿರುತ್ತವೆ— ನಮ್ಮ ಋಣದ ಪ್ರಾರಂಭ ಇದು. ನೇರ ಕಣ್ಣಿಗೆ ಗೋಚರಿಸುವುದಿಲ್ಲ, ವಿಶೇಷ ಸೂಕ್ಷ್ಮದರ್ಶಕಗಳೇ ಬೇಕು. ಈ ವರ್ಣತಂತುಗಳು (ಕ್ರೋಮೋಜೋಮ್ಸ್) ಯಾವು ದರಿಂದಾಗಿವೆ? ಡಿ.ಎನ್.ಎ. (ಡಿ ಆಕ್ಸಿ ರೈಬೋ ನ್ಯೂಕ್ಲಿಯಿಕ್ ಆಸಿಡ್) ಎಂಬ ರಾಸಾಯನಿಕದಿಂದ. ಇದು ತಿರುಚಿದ ಏಣಿಯಂತೆ ಎರಡು ಎಳೆಗಳಿಂದಾದದ್ದು. ಬೇಕಾದರೆ ಹಾವುಗಳು ಕೂಡಿಕೊಳ್ಳುವ ಚಿತ್ರವನ್ನು ಕಲ್ಪಿಸಿಕೊಳ್ಳಿ. ಏಣಿಯೆಂದರೆ ಮೆಟ್ಟಿಲು ಇರಲೇಬೇಕು. ಅವು ಡಿ.ಎನ್.ಎ. ಎಳೆಯಲ್ಲೂ ಇವೆ. ಇವೇ ಅಡಿನೈನ್(ಎ), ಗ್ವಾನಿನ್(ಜಿ), ಸೈಟೋಸಿನ್(ಸಿ) ಮತ್ತು ಥೈಮಿನ್(ಟಿ) —ಇವೆಲ್ಲವೂ ನೈಟ್ರೋಜನ್ ಪ್ರತ್ಯಾಮ್ಲಗಳೇ. ಇವನ್ನು ಎಣಿಸುವುದೂ ಅಷ್ಟೇ ಕಷ್ಟ. ಮೂರು ಶತಕೋಟಿ ಎನ್ನುತ್ತಾರೆ ಜೀವವಿಜ್ಞಾನಿಗಳು. ವಿಜ್ಞಾನದ ಪರಿಭಾಷೆಯಲ್ಲಿ ಇವು `ಬೇಸ್ ಪೇರ್’. ಎರಡು ತುದಿಯಿಂದ ಜೋಡಿಸಿಕೊಂಡರೆ ಅದು ಒಂದು ಮೆಟ್ಟಿಲು. ಇವುಗಳಲ್ಲೂ ಬಂಧದ ಒಲವುಂಟು. ‘ಎ’ ಕೂಡಿಕೊಳ್ಳುವುದು ‘ಟಿ’ ಯೊಂದಿಗೆ ಮಾತ್ರ, ‘ಸಿ’ ಕೂಡಿಕೊಳ್ಳುವುದು ‘ಜಿ’ಯೊಂದಿಗೆ ಮಾತ್ರ. ಇದೇ ಕ್ರಮ. ಸಂಗೀತ ಕಲಿಯುವಾಗ ಸ ರಿ ಗ ಮ ಪ ದ ನಿ ಸ ಎಂಬ ಸಪ್ತ ಸ್ವರದಿಂದಲೇ ಪ್ರಾರಂಭಿಸುತ್ತೇವೆ ಅಲ್ಲವೆ? ಸ ಗ ಮ ರಿ ಎಂದಲ್ಲ. ಇವು ಡಿ.ಎನ್.ಎ. ಎಳೆಯುದ್ದಕ್ಕೂ ಪುನರಾವರ್ತಿಸುತ್ತಲೇ ಇರುತ್ತವೆ. ಈ ಕ್ರಮದಲ್ಲಿ ಏರುಪೇರಾದರೆ ಅವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆ ಕಾಯಿಲೆ ತರಬಹುದು. ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ವಾಕ್ಯವನ್ನು ಗಮನಿಸಿ: ‘God is No Where’ ಎಂಬುದನ್ನು ನೀವು ‘God is now here’ ಎಂದು ಬದಲಿಸಬಹುದಲ್ಲ. ವ್ಯಾಕರಣ ಸರಿಯಾಗಿದೆ, ಪದಗಳೂ ಸರಿಯಾಗಿವೆ. ಆಗಿರುವುದು ಅಕ್ಷರ ಪಲ್ಲಟ. W ಎಲ್ಲಿಗೆ ಹೋಗಿದೆ ನೋಡಿ.

ವಿಸ್ಮಯವೆಂದರೆ ಈ ಡಿ.ಎನ್.ಎ. ಅಣು ನಕಲಾಗುತ್ತ ಹೋಗುತ್ತದೆ. ಎಲ್ಲೂ ಸ್ಪೆಲ್ಲಿಂಗ್ ಮಿಸ್ಟೇಕ್ ಆಗದಂತೆ, ವ್ಯಾಕರಣ ದೋಷವಿದ್ದರೆ ಅದರ ಸಮೇತ! ನಮ್ಮೆಲ್ಲರ ಗುಣಗಳನ್ನು ನಿರ್ಧರಿಸುವುದು ಡಿ.ಎನ್.ಎ.ಯ ಒಂದು ಭಾಗ, ಅವೇ ಜೀನ್‍ಗಳು. ಅಪ್ಪನ ಹುಳುಕಲ್ಲು ಮಕ್ಕಳಿಗೆ ಬಂದರೆ ಅದರ ಹಿಂದೆ ಜೀನ್‍ಗಳ ಕೈವಾಡವಿದೆ. ಹಾಗಾದರೆ ಅಪ್ಪನ ಹುಳುಕಲ್ಲಿಗೆ ಕಾರಣವಾದ ಆ ಜೀನ್ ಪತ್ತೆಮಾಡಿ, ಅದನ್ನು ತೊಡೆದುಹಾಕಿದರೆ ಮುಂದೆ ಅದು ವಂಶಪಾರಂಪರ್ಯವಾಗಿ ಬರುವುದು ನಿಲ್ಲುತ್ತದೆ ಅಲ್ಲವೆ? ಮನುಷ್ಯನ ಪ್ರತಿ ಕೋಶದಲ್ಲೂ 20,000 ದಿಂದ 25,000 ಜೀನ್‍ಗಳಿರುತ್ತವೆ ಎಂಬುದು ಒಂದು ಲೆಕ್ಕ. ಈ ಪೈಕಿ ಶೇ.99 ಭಾಗ ಎಲ್ಲರಲ್ಲೂ ಅದೇ ಜೀನ್, ಅದೇ ಕ್ರಮ. ಆದರೆ ಉಳಿದ ಶೇ. 1 ಭಾಗ ಎಂಥ ಬದಲಾವಣೆ ತರುತ್ತದೆ ನೋಡಿ. ನಾನು ನಿಮ್ಮಂತಿಲ್ಲ, ನಿಮ್ಮಂತೆ ಇನ್ನೊಬ್ಬರಿಲ್ಲ. ಆದರೂ ನಾವೆಲ್ಲ ಮನುಷ್ಯರೇ.

ಜೈವಿಕ ತಂತ್ರಜ್ಞಾನ ನೇರವಾಗಿ ವಿಕೃತ ಅಥವಾ ಹೆಚ್ಚುವರಿ ಜೀನ್‍ಗಳಿರುವ ನಿರ್ದಿಷ್ಟ ಭಾಗವನ್ನೇ ಕತ್ತರಿಸುವಲ್ಲಿ ಯಶಸ್ಸು ಸಾಧಿಸಿದೆ. ಜೀನ್‍ಗಳನ್ನು ತಿದ್ದಬಹುದು, ತೀಡಬಹುದು, ಹೊಸತನ್ನು ಸೇರಿಸಬಹುದು, ಬೇಡವಾದ್ದನ್ನು ಕಳಚಬಹುದು. ಯಾವ ಕಾಯಿಲೆಗೆ ನಿರ್ದಿಷ್ಟ ಜೀನ್ ಕಾರಣವಾಗುತ್ತದೋ, ಅದರ ನಿರ್ದಿಷ್ಟ ಭಾಗವನ್ನು ನಿಯಂತ್ರಿಸಬಹುದು. ಕತ್ತರಿ ಎಂದರೆ ನಾವು ಬಳಸುವ ಕತ್ತರಿಯಲ್ಲ. ಅದು ಅಣು ಹಂತದಲ್ಲಿ ರಿಪೇರಿ ಮಾಡಬೇಕಾದ ಕಾರ್ಯ. ಆದ್ದರಿಂದಲೇ ಅಣು ಹಂತದ ಕತ್ತರಿಯನ್ನೇ ಬಳಸಬೇಕು. ಇದಕ್ಕಾಗಿಯೇ ಕೆಲವು ಬಗೆಯ ಕಿಣ್ವಗಳು (ಎನ್‍ಜೈಮ್ಸ್) ಎಡಿಟಿಂಗ್‍ಗೆ ಒದಗಿಬರುತ್ತವೆ. ಇಂಥ ಅಸಾಮಾನ್ಯ ಕೆಲಸಕ್ಕೆ ವಿಜ್ಞಾನಿಗಳಿಗೆ ಪ್ರೇರಣೆ ಹೇಗೆ ಬಂತು? ಅದು ನಿಸರ್ಗದಿಂದಲೇ, ನಿರಂತರ ಅವಲೋಕನದಿಂದಲೇ. ಬ್ಯಾಕ್ಟೀರಿಯ ಗೊತ್ತಲ್ಲ? ಇವು ನಮಗೆ ಒಳಿತು ಮಾಡುವುದುಂಟು, ಕಾಯಿಲೆಯನ್ನೂ ತರುವುದುಂಟು. ಇವುಗಳಿಗೂ ಒಂದು ಬಾಧೆ ಬರುತ್ತದೆ. ಅದು ಇವುಗಳ ದೇಹವನ್ನೇ ಪ್ರವೇಶಿಸುವ ವೈರಸ್‍ಗಳಿಂದ. ಈ ವೈರಸ್‍ಗಳಾದರೋ ಸ್ವತಂತ್ರ ಬದುಕು ಸಾಗಿಸಲಾರವು. ಅವಕ್ಕೆ ಆಶ್ರಯಜೀವಿ ಬೇಕೇಬೇಕು. ವಿಜ್ಞಾನಿಗಳು ಒಂದು ವಿಶೇಷ ವಿದ್ಯಮಾನವನ್ನು ಗಮನಿಸುತ್ತಲೇ ಇದ್ದರು. ವೈರಸ್‍ಗಳು ಬ್ಯಾಕ್ಟೀರಿಯದೊಳಗೆ ಪ್ರವೇಶಿಸುತ್ತಲೇ ಅವುಗಳ ಡಿ.ಎನ್.ಎ.ಯ ಒಂದು ತುಣುಕನ್ನು ಎಗರಿಸಿಬಿಡುತ್ತವೆ. ಅದನ್ನು ಬಳಸಿ ಆರ್.ಎನ್.ಎ.(ರೈಬೋ ನ್ಯೂಕ್ಲಿಯರ್ ಆಸಿಡ್) ಎಂಬ ತುಂಡನ್ನು ಉತ್ಪಾದಿಸುತ್ತವೆ ಮತ್ತೆ ವೈರಸ್ ದಾಳಿಮಾಡಿದರೆ ಈ ಅಸ್ತ್ರ ಬಿಡುತ್ತವೆ. ಅವು ವೈರಸ್‍ನ ಡಿ.ಎನ್.ಎ.ಯನ್ನು ಕತ್ತರಿಸಿಬಿಡುತ್ತವೆ. ಮುಗಿಯಿತು ವೈರಸ್‍ಗಳ ಕತೆ. ಹೀಗಿದೆ ನೋಡಿ ಬದುಕುವ ಕಲೆ.

ಈಗಿನ್ನೂ ಇಂಥ ಪ್ರಯೋಗಗಳು ಲ್ಯಾಬ್ ಮಟ್ಟದಲ್ಲಿ ನಡೆಯುತ್ತಿವೆ. ಉಪ್ಪು—ನೀರು, ಇವೆರಡರ ಪ್ರಮಾಣದಲ್ಲಿ ಏರುಪೇರಾದರೆ ಸಿಸ್ಟಿಕ್ ಫೈಬ್ರಾಸಿಸ್ ಎನ್ನುವ ತೊಂದರೆ ಕಾಣಿಸಿಕೊಳ್ಳುತ್ತದೆ. ಅಂದರೆ ಪ್ರೊಟೀನ್ ಉತ್ಪಾದನೆಯ ಕೊರತೆ. ಇದರಿಂದಾಗಿ ಶ್ವಾಸನಾಳಗಳ ಲೋಳೆರಸ, ಮೇದೋಜೀರಕ ಗ್ರಂಥಿಯ ಜೀರ್ಣರಸ, ಕಣ್ಣೀರು ಸ್ರವಿಕೆಯಲ್ಲಿ ಅಡಚಣೆ ಇವೆಲ್ಲ ಉಂಟಾಗಿ ಸುಲಭವಾಗಿ ವ್ಯಕ್ತಿ ಸೋಂಕು ರೋಗಕ್ಕೆ ಬಲಿಯಾಗುವುದುಂಟು. ಸಹಸ್ರಾರು ವರ್ಷಗಳಿಂದ ಕಾಕೇಶಿಯಸ್ ಮತ್ತು ಯಹೂದಿ ಜನಾಂಗ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಒಂದೇ ಒಂದು ಜೀನ್ ವಿಕೃತಿಯಿಂದಾಗಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ; ಅಂಥ ಜೀನನ್ನು ಗುರುತಿಸಿದ್ದಾರೆ. ಅದಕ್ಕೇ ಕತ್ತರಿ ಹಾಕಿದರೆ? ಇದರಲ್ಲಿ ಸಫಲವಾಯಿತೆಂದರೆ ಮುಂದಿನ ಗುರಿ ಕ್ಯಾನ್ಸರ್‍ಕಾರಕ ಜೀನ್, ಎಚ್.ಐ.ವಿ.ಗೆ ಕಾರಣವಾಗುವ ಜೀನ್, ಹೃದಯ— ಮಿದುಳು ಕಾಯಿಲೆಗೆ ಕಾರಣವಾಗುವ ಜೀನ್ ಪತ್ತೆಮಾಡುವುದು ಈ ತಂತ್ರಜ್ಞಾನದಲ್ಲಿ ಕಷ್ಟವೇನಲ್ಲ. ಅಂದರೆ ಜೀನ್‍ಗಳ ಬೇಟೆ. ವಿಜ್ಞಾನಿ ಸೃಷ್ಟಿಕರ್ತನಲ್ಲ, ನಿಜ, ಆದರೆ ಸೃಷ್ಟಿಯನ್ನು ಅರ್ಥಮಾಡಿಕೊಳ್ಳುವ ದೆಸೆಯಲ್ಲಿ ಚಿಂತಿಸುವವನು, ಮುನ್ನಡೆಯುವವನು. ಅಂಥ ಹೆಜ್ಜೆಗಳು ಮನುಕುಲಕ್ಕೆ ಒಳಿತುಮಾಡುವುದಾದರೆ ಇನ್ನೇನು ಬೇಕು? ಸಮಾಜಮುಖಿಯಲ್ಲದ ವಿಜ್ಞಾನ ಸಪ್ತಪಾಪಗಳಲ್ಲಿ ಒಂದೆಂದು ಗಾಂಧಿ ಎಂದೋ ನುಡಿದಿದ್ದರು.

*ಲೇಖಕರು ಭೂವಿಜ್ಞಾನಿಗಳು, ಸಂಶೋಧಕರು, ಸಂಕೀರ್ಣ ವಿಜ್ಞಾನವನ್ನು ಕಸ್ತೂರಿಕನ್ನಡದಲ್ಲಿ ನಿರೂಪಿಸಬಲ್ಲರು. ತುಮಕೂರು ಜಿಲ್ಲೆಯ ತಾಳಗುಂದ ಹುಟ್ಟೂರು.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018