2nd May 2018

ಪ್ರಜಾಪ್ರಭುತ್ವ ಚುನಾವಣೆ ಮತ್ತು ಸಮಾಜಮುಖಿ

— ಚಾಣಕ್ಯ

‘ಸಮಾಜಮುಖಿ’ ಮಾಸಪತ್ರಿಕೆಯ ಕಳೆದ ಮೂರು ಸಂಚಿಕೆಗಳಲ್ಲಿ ಮುಂಬರುವ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಭವಿಷ್ಯದ ಕರ್ನಾಟಕದ ಪರಿಕಲ್ಪನೆಗಳು ಮತ್ತು ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ನಾವು ನಿರ್ವಹಿಸಬೇಕಿರುವ ಜವಾಬ್ದಾರಿಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ. ಆ ಚರ್ಚೆಗಳಿಗೆ ತಾತ್ವಿಕ ತಳಹದಿಯಾಗಿ ನಾವು ರೂಪಿಸಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮೂರು ಟಿಪ್ಪಣಿಗಳನ್ನು ಇಲ್ಲಿ ದಾಖಲಿಸುತ್ತಿದ್ದೇವೆ. ನಮ್ಮ ಮಾತುಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅಪಾರವಾದ ವಿಶ್ವಾಸ ಮತ್ತು ವಿಷಾದಗಳೆರಡೂ ಸಾಮಾನ್ಯವಾಗಿ ಏಕಕಾಲದಲ್ಲಿಯೇ ಕಂಡುಬರುತ್ತವೆ. ಈ ವೈರುಧ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಈ ಕೆಳಗಿನ ಟಿಪ್ಪಣಿಗಳು ಪ್ರಾಥಮಿಕವಾಗಿ ಗಮನ ಹರಿಸುತ್ತವೆ.

ಆದರ್ಶ ಮತ್ತು ಗುಮಾನಿ

ಪ್ರಜಾಪ್ರಭುತ್ವದ ಅರ್ಥ ಬಹಳ ಸರಳವಾದುದು. ಈ ವ್ಯವಸ್ಥೆಯಲ್ಲಿ ಸಾರ್ವಭೌಮತ್ವವು ಪ್ರಜೆಗಳಲ್ಲಿ ಇರುತ್ತದೆ. ಈ ಅರ್ಥದ ಸಂಕ್ಷಿಪ್ತ ಮತ್ತು ಸರಳವಾದ ತಾತ್ವಿಕ ವಿವರಣೆಯನ್ನು ಈ ಕೆಳಗಿನಂತೆ ರಚಿಸಿಕೊಳ್ಳಬಹುದು.

ಆಧುನಿಕಪೂರ್ವ ಯುಗದಲ್ಲಿ ಬಹುತೇಕ ಜಗತ್ತಿನ ಎಲ್ಲಾ ಕಡೆಗಳಲ್ಲಿ ಅಸ್ತಿತ್ವದಲ್ಲಿದ್ದ ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಭೌಮತ್ವವನ್ನು ಪ್ರಭುವಿನ ವ್ಯಕ್ತಿತ್ವ ಮತ್ತು ದೇಹಗಳಲ್ಲಿ ಗುರುತಿಸುತ್ತೇವೆ. ಸಾರ್ವಭೌಮತ್ವವು ಸಾಂಕೇತಿಕ ಮತ್ತು ವಾಸ್ತವಿಕ ಅಧಿಕಾರಗಳ ಎರಡು ಆಯಾಮಗಳನ್ನು ಹೊಂದಿರುತ್ತದೆ. ಸಾಂಕೇತಿಕವಾಗಿ ರಾಜನೊಬ್ಬನಲ್ಲಿಯೇ ಸಾರ್ವಭೌಮತ್ವವು ನೆಲೆಗೊಂಡಿದ್ದರೂ, ವಾಸ್ತವದಲ್ಲಿ ರಾಜನ ಜೊತೆಗೆ ಶಕ್ತ—ಬಲಗಳನ್ನು ಹೊಂದಿದ್ದ ಸಣ್ಣ ಗುಂಪೊಂದು ಅಧಿಕಾರವನ್ನು ಅನುಭವಿಸುತ್ತಿತ್ತು. ಅದಕ್ಕಾಗಿಯೆ ರಾಜಪ್ರಭುತ್ವವು ಸರ್ವಾಧಿಕಾರತ್ವ ಇಲ್ಲವೆ ಸ್ವಲ್ಪಜನಾಧಿಪತ್ಯ (ಆಲಿಗಾರ್ಕಿ)ಗಳಿರುವ ವ್ಯವಸ್ಥೆಯಾಗಿರುತ್ತದೆ.

ರಾಜಪ್ರಭುತ್ವಕ್ಕೆ ಹೋಲಿಸಿದಾಗ ಪ್ರಜಾಪ್ರಭುತ್ವವು ಹೆಚ್ಚು ಸಂಕೀರ್ಣವಾದ ವ್ಯವಸ್ಥೆ. ಇದಕ್ಕೆ ಕಾರಣವಿಷ್ಟೆ. ಪ್ರಜಾಪ್ರಭುತ್ವದಲ್ಲಿ ಸಾರ್ವಭೌಮತ್ವವನ್ನು ಪ್ರಜೆಗಳಲ್ಲಿ ಗುರುತಿಸುವುದಾದರೆ, ಸಾಂಕೇತಿಕ ಮತ್ತು ವಾಸ್ತವ ನೆಲೆಗಳೆರಡರಲ್ಲಿಯೂ ಅಧಿಕಾರವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೇಗೆ ಮತ್ತು ಯಾರಿಗೆ ನೀಡುವುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಅಂದರೆ ರಾಜಪ್ರಭುತ್ವದಲ್ಲಿ ಪ್ರಭು ಮತ್ತು ಆತನ ಬೆಂಬಲಿಗರು ತಮ್ಮ ಶಕ್ತಿಸಾಮಥ್ರ್ಯಗಳಿಂದ ಅಧಿಕಾರವನ್ನು ಗಳಿಸಿಕೊಂಡಿರುತ್ತಾರೆ ಮತ್ತು ಚಲಾಯಿಸುತ್ತಾರೆ. ಅವರು ಹೀಗೆ ಅಧಿಕಾರವನ್ನು ಗಳಿಸಿಕೊಳ್ಳುವಾಗ ಮತ್ತು ಚಲಾಯಿಸುವಾಗ ಬಹುಪಾಲು ಯಾವ ನಿಯಮಗಳನ್ನೂ ಪಾಲಿಸಬೇಕಿಲ್ಲ. ಶಕ್ತಿ— ಸಂಪನ್ಮೂಲಗಳಿದ್ದವರು ರಾಜ್ಯ ಕಟ್ಟಿ ಅಧಿಕಾರ ಚಲಾಯಿಸುತ್ತಾರೆ. ಬಹುಮಟ್ಟಿಗೆ ಅಧಿಕಾರವು ವಂಶಪಾರಂಪರ್ಯವಾಗಿ ಮುಂದುವರೆಯುತ್ತದೆ. ಶಕ್ತಿ—ಸಂಪನ್ಮೂಲಗಳು ಲಭ್ಯವಿರುವ ಇತರರು ರಾಜನಿಗೆ ಸವಾಲು ಹಾಕಬಹುದು, ಹೊಸರಾಜ್ಯವೊಂದನ್ನು ಕಟ್ಟಲು ಪ್ರಯತ್ನಿಸಬಹುದು.

ಪ್ರಜಾಪ್ರಭುತ್ವದಲ್ಲಿ ಹಾಗಲ್ಲ. ಇಲ್ಲಿ ಪ್ರಜೆಗಳ ಅನುಮತಿಯೊಡನೆ ಅಧಿಕಾರವನ್ನು ಪಡೆಯಬೇಕು. ಅಧಿಕಾರದ ಅವಧಿ ಸೀಮಿತವಾಗಿರುತ್ತದೆ. ಅಧಿಕಾರವನ್ನು ವಂಶಪಾರಂಪರ್ಯವಾಗಿ ಉಳಿಸಿಕೊಳ್ಳುವಂತಿಲ್ಲ. ಅಧಿಕಾರವನ್ನು ಹೇಗೆ ಪಡೆಯಬೇಕು ಮತ್ತು ಹೇಗೆ ಚಲಾಯಿಸಬೇಕು ಎನ್ನುವುದಕ್ಕೆ ನಿಯಮಗಳಿವೆ. ಈ ಎಲ್ಲ ನಿರ್ಬಂಧಗಳನ್ನು ಹಾಕಿರುವುದಕ್ಕೆ ಕಾರಣವೆಂದರೆ ಪ್ರಜೆಗಳ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಬೇಕು ಎನ್ನುವ ಸದುದ್ದೇಶದಿಂದ.

ಹೀಗೆ ನಾವು ಪ್ರಜ್ಞಾಪೂರ್ವಕವಾಗಿಯೆ ಹಾಕಿಕೊಳ್ಳುವ ನಿರ್ಬಂಧಗಳು ಪ್ರಜಾಪ್ರಭುತ್ವವನ್ನು, ಅದರಲ್ಲಿಯೂ ಪ್ರಾತಿನಿಧ್ಯ ಪ್ರಜಾಪ್ರಭುತ್ವವನ್ನು, ಅತ್ಯಂತ ಸಂಕೀರ್ಣಗೊಳಿಸುತ್ತವೆ. ಪ್ರಜಾ ಪ್ರತಿನಿಧಿಗಳು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಆಯ್ಕೆಯಾಗಬೇಕು ಮತ್ತು ತಮ್ಮ ಕ್ಷೇತ್ರವಾಸಿಗಳ ಆಶೆ—ಅಗತ್ಯಗಳನ್ನು ಪೂರೈಸಬೇಕು. ಸಂವಿಧಾನವು ಇಂತಹ ಒಂದು ನಿಯಮ—ನಿರ್ಬಂಧಗಳಿರುವ ಚೌಕಟ್ಟು.

ಈ ಮೇಲಿನ ವಿವರಣೆಯ ಮೂಲಕ ಪ್ರಜಾಪ್ರಭುತ್ವದ ಬಹುಮುಖ್ಯ ಗುಣವೊಂದು ಅನಾವರಣಗೊಳ್ಳುತ್ತದೆ: ಅದೇನೆಂದರೆ ಪ್ರಜಾಪ್ರಭುತ್ವಕ್ಕಿರುವ ಎರಡು ಮುಖಗಳು. ಇವುಗಳಲ್ಲಿ ಮೊದಲನೆಯದು ಪ್ರಜೆಗಳಲ್ಲಿ ಸಾರ್ವಭೌಮತ್ವವನ್ನು ಗುರುತಿಸುವ, ನೆಲೆಗೊಳಿಸುವ ಆದರ್ಶದ ಮುಖ. ಪ್ರಭು ಒಬ್ಬ ವ್ಯಕ್ತಿ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನೂ ಸಹ ಪ್ರಭುವೆ.

ಈ ಆದರ್ಶದ ನೆಲೆಯ ಜೊತೆಗೆ ಇರುವ ಪ್ರಜಾಪ್ರಭುತ್ವದ ಮತ್ತೊಂದು ಮುಖವೆಂದರೆ ಗುಮಾನಿ. ಅಧಿಕಾರವನ್ನು ಚಲಾಯಿಸಲು ಆಯ್ಕೆಯಾಗುವ ಪ್ರತಿನಿಧಿಗಳು ಸರ್ವಾಧಿಕಾರಿಗಳಾಗಬಾರದು ಎಂದು ಅವರ ಪ್ರತಿಯೊಂದು ಚಟುವಟಿಕೆಯ ಬಗ್ಗೆಯೂ ಅನುಮಾನದಿಂದಲೇ ನೋಡುವ ಗುಣವೂ ಸಹ ಪ್ರಜಾಪ್ರಭುತ್ವದ ಮೂಲದಲ್ಲಿಯೇ ಇದೆ. ಪ್ರಜೆಗಳಲ್ಲಿ ಸಾರ್ವಭೌಮತ್ವವು ಉಳಿಯಬೇಕೆಂದರೆ ಸರ್ವಾಧಿಕಾರ ಅಥವಾ ಸ್ವಲ್ಪಜನಾಧಿಪತ್ಯಗಳು ಎಂದಿಗೂ ಸಂಭವಿಸದಂತೆ ಎಚ್ಚರ ವಹಿಸುವುದು, ಕಾರ್ಯನಿರತರಾಗುವುದು ಅನಿವಾರ್ಯ.

ಪ್ರಜಾಪ್ರಭುತ್ವದ ರಚನೆಯಲ್ಲಿಯೇ ಆದರ್ಶ ಮತ್ತು ಗುಮಾನಿಯ ಮುಖಗಳೆರಡೂ ಇರುತ್ತವೆ ಎನ್ನುವುದು ಮೊದಲನೆಯ ಟಿಪ್ಪಣಿಯ ಮುಖ್ಯ ಅಂಶ.

ಐತಿಹಾಸಿಕ ಸವಾಲುಗಳು

ಮೊದಲನೆಯ ಟಿಪ್ಪಣಿ ಪ್ರಜಾಪ್ರಭುತ್ವದ ರಚನೆಯ ಬಗೆಗಿನ ತಾತ್ವಿಕ ಅಂಶವೊಂದನ್ನು ಹಿಡಿದಿಡುವ ಪ್ರಯತ್ನವಾದರೆ ಎರಡನೆಯ ಟಿಪ್ಪಣಿಯ ಉದ್ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕ ಅನುಭವದ ಐತಿಹಾಸಿಕ ಅವಲೋಕನವನ್ನು ಮಾಡುವುದು. ಈ ಅವಲೋಕನದ ಮೂಲಕ ನಮಗೆ ಪ್ರಜಾಪ್ರಭುತ್ವದ ಬಗ್ಗೆ ಪ್ರಾಯೋಗಿಕ ನೆಲೆಯಲ್ಲಿ ಚಿಂತಿಸುವ ಅವಕಾಶ ಲಭ್ಯವಾಗುತ್ತದೆ.

ಎರಡನೆಯ ಟಿಪ್ಪಣಿಯ ಚರ್ಚೆಗೆ ಪೂರಕವಾಗಿ ರಾಜಕೀಯಶಾಸ್ತ್ರಜ್ಞರಾದ ಕ್ರಿಸ್ಟೋಫರ್ ಅಚೆನ್ ಮತ್ತು ಲ್ಯಾರಿ ಬಾರ್ಟೆಲ್ಸ್ ಅವರ ಸಂಶೋಧನೆಯನ್ನು ಬಳಸಿಕೊಳುತ್ತಿದ್ದೇನೆ. ಅಚೆನ್ ಮತ್ತು ಬಾರ್ಟೆಲ್ಸ್ 2016ರಲ್ಲಿ ‘ಡೆಮಾಕ್ರಸಿ ಫ಼ಾರ್ ರಿಯಲಿಸ್ಟ್ಸ್: ವೈ ಎಲೆಕ್ಷನ್ಸ್ ಡು ನಾಟ್ ಪ್ರೊಡ್ಯೂಸ್ ರೆಸ್ಪಾನ್ಸಿವ್ ಗವರ್ನಮೆಂಟ್’ (ವಾಸ್ತವವಾದಿಗಳಿಗೆ ಪ್ರಜಾಪ್ರಭುತ್ವ: ಚುನಾವಣೆಗಳೇಕೆ ಪ್ರತಿಕ್ರಿಯಾಶೀಲವಾದ ಸರ್ಕಾರಗಳನ್ನು ಒದಗಿಸುವುದಿಲ್ಲ) ಎಂಬ ಶೀರ್ಷಿಕೆಯ ಬಹುಚರ್ಚಿತ ಕೃತಿಯೊಂದನ್ನು ಪ್ರಕಟಿಸಿದರು. ಪ್ರಜಾಪ್ರಭುತ್ವವು ಏಕೆ ಅತ್ಯುತ್ತಮ ಮಾದರಿಯ ಸರ್ಕಾರ ಎಂಬ ಪ್ರಶ್ನೆಗೆ ಇದುವರೆಗೆ ಲಭಿಸಿರುವ ಎಲ್ಲ ಸೈದ್ಧಾಂತಿಕ ಉತ್ತರಗಳನ್ನು ಐತಿಹಾಸಿಕ ಅನುಭವದ ನೆಲೆಯಲ್ಲಿ ವಿಶ್ಲೇಷಿಸುವ ಅಚೆನ್ ಮತ್ತು ಬಾರ್ಟೆಲ್ಸ್ ಆ ಉತ್ತರಗಳನ್ನು ಆಧಾರವಿಲ್ಲದ ಕಥನಗಳೆಂದು ತಳ್ಳಿಹಾಕುತ್ತಾರೆ. ಅಂದ ಮಾತ್ರಕ್ಕೆ ಇವರಿಬ್ಬರೂ ಪ್ರಜಾಪ್ರಭುತ್ವವನ್ನು ತಿರಸ್ಕರಿಸುತ್ತಾರೆ ಎಂದಲ್ಲ. ಮನುಷ್ಯರ ಸ್ವಭಾವ, ವರ್ತನೆ ಮತ್ತು ಆಯ್ಕೆಗಳನ್ನು ಮಾಡುವ ನೆಲೆಗಳ ವಾಸ್ತವಿಕತೆಯ ಆಧಾರದ ಮೇಲೆ ಪ್ರಜಾಪ್ರಭುತ್ವದ ವಾಸ್ತವವಾದಿ ಸಿದ್ಧಾಂತವನ್ನು ಕಟ್ಟುವುದು ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತುವುದು ಅವರ ಮುಖ್ಯ ಗುರಿ.

‘ಪ್ರಜಾಪ್ರಭುತ್ವವಾದಿಗಳು ಬಹಳ ಸಮಯದಿಂದಲೂ ಮನುಷ್ಯನ ಘನತೆಗೆ ಸ್ವಯಮಾಡಳಿತ ಅಗತ್ಯವಿದೆ ಎನ್ನುತ್ತಲೇ ಬಂದಿದ್ದಾರೆ. ಜನರು ತಮ್ಮ ನಾಯಕರನ್ನು ಚುನಾವಣೆಗಳಲ್ಲಿ ಆರಿಸಬೇಕು ಮತ್ತು ಅವರ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಎಚ್ಚರ ವಹಿಸಬೇಕು. ಮತದಾರರನ್ನು ಪ್ರತಿನಿಧಿಸಬೇಕೆ ಹೊರತು ಅವರನ್ನು ಆಳಬಾರದು.... ಉತ್ತಮ ನಾಗರಿಕರು ತಮ್ಮ ಸರ್ಕಾರದ ಚಿಂತನಶೀಲ ಮೇಲ್ವಿಚಾರಣೆಯನ್ನು ಮಾಡುತ್ತಾರೆ. ರಾಜರು, ಕುಲೀನವರ್ಗದವರು ಮತ್ತು ಸರ್ವಾಧಿಕಾರಿಗಳ ಅತಿರೇಕಗಳನ್ನು ತೊಡೆಯಲಾಗುತ್ತದೆ. ಪ್ರಜಾಪ್ರಭುತ್ವದ ಉತ್ತಮ ಮೌಲ್ಯ—ಅಭ್ಯಾಸಗಳು ಪ್ರಬುದ್ಧ ಮತದಾರರು ಹೊಂದಿರುವ ಮೌಲ್ಯಗಳ ಮೂಲಕ ಆಚರಣೆಗೆ ಬರುತ್ತವೆ. ತಪ್ಪುಗಳಾಗುತ್ತವೆ ಆದರೆ ಅವು ಜನರ ತಪ್ಪುಗಳೇ ಆಗಿರುತ್ತವೆ. ಹಾಗಾಗಿ ಅವುಗಳನ್ನು ತಕ್ಷಣ ಗುರುತಿಸಿ, ಸರಿಪಡಿಸಲಾಗುವುದು. ಬಹುತೇಕ ಸಮಯಗಳಲ್ಲಿ ಪ್ರಜಾಪ್ರಭುತ್ವ ಸರ್ಕಾರವು ಬಹಳ ಒಳ್ಳೆಯ ಸರ್ಕಾರವೇ ಆಗಿರುತ್ತದೆ.... ಸರ್ಕಾರವು ತನ್ನ ಅಧಿಕಾರವನ್ನು ಕೇವಲ ಜನರ ಅನುಮತಿಯಿಂದ ಮಾತ್ರವಲ್ಲ, ಜೊತೆಗೆ ಅವರ ರಾಜಕೀಯ ತೀರ್ಪುಗಳಿಂದ ಪಡೆಯುತ್ತದೆ’

ಪ್ರಜಾಪ್ರಭುತ್ವದ ಪರವಾದ ಈ ವಾದವನ್ನು ಅಚೆನ್ ಮತ್ತು ಬಾರ್ಟೆಲ್ಸ್ ವಾಸ್ತವದಲ್ಲಿ ಸಾಬೀತು ಮಾಡಲಾಗದ ಜನಪದ (ಫೊ಼ೕಕ್) ಸಿದ್ಧಾಂತವೆಂದು ಟೀಕಿಸುತ್ತಾರೆ. ಚುನಾವಣೆಗಳು ಮತ್ತಿತರ ಸಂದರ್ಭಗಳಲ್ಲಿ ಮತದಾರರ ಆಯ್ಕೆ ಮತ್ತು ನಡವಳಿಕೆಗಳು ಈ ಜನಪದ ಸಿದ್ಧಾಂತದಲ್ಲಿರುವಂತೆ ಇರುವುದಿಲ್ಲ. ಅವರಿಗೆ ಸರಿಯಾದ ರಾಜಕೀಯ ಆಯ್ಕೆ ಮತ್ತು ನಿರ್ಧಾರಗಳನ್ನು ಮಾಡಲು ಅಗತ್ಯವಿರುವ ಸಾರ್ವಜನಿಕ ನೀತಿಯ ಕುರಿತಾದ ಮಾಹಿತಿಯಾಗಲಿ, ಅದರ ಬಗ್ಗೆ ಯೋಚಿಸಲು ತರಬೇತಿಯಾಗಲಿ ಇರುವುದಿಲ್ಲ. ಹಾಗಾಗಿ ಮತದಾನದ ಸಂದರ್ಭದಲ್ಲಿ ಮತದಾರನ ಆಯ್ಕೆಯನ್ನು ಪ್ರಭಾವಿಸುವುದು ಜನಾಂಗ, ಧರ್ಮ ಮತ್ತು ವರ್ಣ ಇತ್ಯಾದಿಗಳು ಎಂದು ಅಚೆನ್ ಮತ್ತು ಬಾರ್ಟೆಲ್ಸ್ ವಾದಿಸಿದರು. ಅಂದರೆ ಯಾವುದೇ ಸಾರ್ವಜನಿಕ ನೀತಿಯ ವಿಚಾರಕ್ಕಿಂತ ಐಡೆಂಟಿಟಿ ಎನ್ನುವುದು ರಾಜಕೀಯ ನಿರ್ಧಾರಗಳಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ಅವರು ಗುರುತಿಸಿದರು. ಹಾಗಾಗಿಯೆ ಹಿಟ್ಲರನಂತಹವರು ಸಹ ಚುನಾವಣೆಗಳಲ್ಲಿ ಆಯ್ಕೆಯಾಗಲು ಸಾಧ್ಯವಾಯಿತು ಎಂದೂ ಅಚೆನ್ ಮತ್ತು ಬಾರ್ಟೆಲ್ಸ್ ಹೇಳಿದರು.

ಮತದಾರರು ಜಾತಿ—ಧರ್ಮಗಳ ಆಧಾರದ ಮೇಲೆ ಮತ ಹಾಕುತ್ತಾರೆ. ಅವರಿಗೆ ತಮ್ಮ ಪಕ್ಷಗಳ ಬಗ್ಗೆ ಕುರುಡು ನಂಬಿಕೆ— ನಿಷ್ಠೆಗಳಿವೆ. ಬಹುತೇಕ ಸರ್ಕಾರಗಳು ಹಾಗೂ ಅವುಗಳನ್ನು ನಡೆಸುವ ರಾಜಕಾರಣಿಗಳು ಭ್ರಷ್ಟರು ಎನ್ನುವ ವಾಸ್ತವಿಕ ನೆಲೆಯ ತಿಳಿವಳಿಕೆಯನ್ನು ಕರ್ನಾಟಕದ ಮತದಾರನಿಗೆ ತಿಳಿಸಲು ರಾಜಕೀಯಶಾಸ್ತ್ರದ ಸಿದ್ಧಾಂತಗಳ ಅಗತ್ಯವಿಲ್ಲ. ಇವು ಎಲ್ಲರಿಗೂ ಗೊತ್ತಿರುವ ವಿಚಾರಗಳೇ.

ಹಾಗಾದರೆ ನಮ್ಮ ಮಿತಿಗಳ ನಡುವೆಯೇ ವಾಸ್ತವಿಕ ನೆಲೆಯಲ್ಲಿ ಯಾವ ಬಗೆಯ ಪ್ರಜಾಪ್ರಭುತ್ವವನ್ನು ನಾವು ಹೇಗೆ ಕಲ್ಪಿಸಿಕೊಳ್ಳಬಹುದು? ಅಂತಹ ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸುವುದು ಹೇಗೆ? ಈ ಪ್ರಶ್ನೆಗಳಿಗೆ ಸುಲಭವಾದ ಉತ್ತರಗಳಿಲ್ಲ. ಮಿಗಿಲಾಗಿ ಇವು ಕೇವಲ ಸೈದ್ಧಾಂತಿಕ ಪ್ರಶ್ನೆಗಳಲ್ಲ, ಬದಲಿಗೆ ನಿರ್ದಿಷ್ಟ ಘಟ್ಟಗಳಲ್ಲಿ ನಮ್ಮ ಮುಂದೆ ಎದುರಾಗುವ ಐತಿಹಾಸಿಕ ಪ್ರಶ್ನೆಗಳು ಸಹ.

ಪ್ರಜಾಪ್ರಭುತ್ವವು ನಮ್ಮ ಮುಂದಿರುವ ಆಯ್ಕೆಗಳಲ್ಲಿ ಉತ್ತಮವಾದುದು ಎನ್ನುವುದನ್ನೂ, ಅದರಿಂದ ಆಗುವ ಹತ್ತಾರು ಲಾಭ—ಅನುಕೂಲಗಳನ್ನು ನಾವು ಗುರುತಿಸಬಹುದು ಎನ್ನುವುದೆಲ್ಲವೂ ನಿಜವೆ. ಹೀಗಿದ್ದಾಗಲೂ ಈ ಮೇಲಿನ ಪ್ರಶ್ನೆಗಳು ನಮ್ಮ ಮುಂದಿರುವ ನಿರ್ದಿಷ್ಟ ಐತಿಹಾಸಿಕ ಸವಾಲುಗಳು ಎನ್ನುವುದನ್ನು ನಾವು ಅರಿಯಬೇಕು ಮತ್ತು ಇವುಗಳಿಗೆ ನಮ್ಮ ಸಮಾಜದೊಳಗಿನಿಂದ ಸಾಮೂಹಿಕವಾಗಿ ಉತ್ತರಗಳನ್ನು ಕಂಡುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಾನು ಮೊದಲನೆಯ ಟಿಪ್ಪಣಿಯಲ್ಲಿ ಪ್ರಸ್ತಾಪಿಸಿದ ಪ್ರಜಾಪ್ರಭುತ್ವದ ಆದರ್ಶದ ಮತ್ತು ಗುಮಾನಿಯ ಮುಖಗಳೆರಡರ ಅರಿವನ್ನು ಇಟ್ಟುಕೊಂಡೇ ಕಾರ್ಯಪ್ರವೃತ್ತರಾಗಬೇಕು.

ಹಿತಾಸಕ್ತಿಯ ರಾಜಕಾರಣ.

ಎರಡನೆಯ ಟಿಪ್ಪಣಿಯಲ್ಲಿ ನಾವು ಕಲ್ಪಿಸಿಕೊಂಡಿರುವ ಪ್ರಜಾಪ್ರಭುತ್ವ ಪರಿಕಲ್ಪನೆಗಳಿಗೂ ವಾಸ್ತವದ ಆಚರಣೆಗಳಿಗೂ ಇರುವ ಅಂತರದತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಯಿತು. ಮೂರನೆಯ ಟಿಪ್ಪಣಿಯಲ್ಲಿ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ನಾವು ಆಚರಿಸುವ ಸೀಮಿತ ಅರ್ಥದ ಪ್ರಜಾಪ್ರಭುತ್ವಕ್ಕೆ ಸಹ ವಾಸ್ತವಿಕ ನೆಲೆಯಲ್ಲಿರುವ ಅಪಾಯಗಳ ಬಗ್ಗೆ ಗಮನ ಹರಿಸೋಣ.

ಇತಿಹಾಸದುದ್ದಕ್ಕೂ ಪ್ರಜಾಪ್ರಭುತ್ವದ ರಾಜಕಾರಣವನ್ನು ಪ್ರಭಾವಿಸಿರುವುದು ಹಿತಾಸಕ್ತಿಯ ರಾಜಕಾರಣ. ಇಂತಹ ಹಿತಾಸಕ್ತಿಗಳು ವೈಯಕ್ತಿಕ ನೆಲೆಯಲ್ಲಿ ಕೆಲಸಮಾಡಬಹುದು ಅಥವಾ ಗುಂಪಿನ ನೆಲೆಯಲ್ಲಿ (ಅಂದರೆ ಜಾತಿ, ಧರ್ಮ ಮತ್ತು ವರ್ಗಗಳ) ಇರಬಹುದು. ಆದರೆ ಇಂದು ಕರ್ನಾಟಕದಲ್ಲಿ ಜಾತಿ—ಧರ್ಮಗಳಾಚೆಗೆ ನಮ್ಮ ಸಮುದಾಯಗಳನ್ನು, ಹಿತಾಸಕ್ತಿಗಳನ್ನು ಕಲ್ಪಿಸಿಕೊಳ್ಳಲಾಗದಿರುವ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದೇವೆ. ನಮ್ಮೆಲ್ಲರ ರಕ್ಷಣೆ ಮತ್ತು ಅಭಿವೃದ್ಧಿ ಸ್ವಜಾತಿ—ಸ್ವಧರ್ಮೀಯರಿಂದ ಮಾತ್ರ ಸಾಧ್ಯ ಎನ್ನುವ ನಂಬಿಕೆಯನ್ನೂ, ಅದನ್ನು ಪೋಷಿಸುವ ವಾಸ್ತವವನ್ನೂ ರೂಪಿಸಿಕೊಂಡಿದ್ದೇವೆ. ಕೆಲವು ಬಗೆಯ ಐಡೆಂಟಿಟಿ ರಾಜಕಾರಣಗಳು ನಿರ್ದಿಷ್ಟ ಐತಿಹಾಸಿಕ ಘಟ್ಟಗಳಲ್ಲಿ ಅನಿವಾರ್ಯ ಮತ್ತು ಅಪೇಕ್ಷಣೀಯವೂ ಇರಬಹುದು. ಉದಾಹರಣೆಯಾಗಿ ಕರ್ನಾಟಕದ ಏಕೀಕರಣ ಮತ್ತು ದಲಿತ ಚಳವಳಿಗಳನ್ನು ಇಲ್ಲಿ ಗುರುತಿಸಬಹುದು. ಆದರೆ ನಾನು ಮೇಲೆ ಗುರುತಿಸಿದ ರೀತಿಯ ನಿರ್ದಿಷ್ಟ ಬಗೆಯ ಐಡೆಂಟಿಟಿ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ವಾಸ್ತವದ ಹೊಣೆಗಾರಿಕೆಯನ್ನು ಮತದಾರರು ಮತ್ತು ರಾಜಕೀಯ ಪಕ್ಷಗಳೆರಡೂ ಹೊರಬೇಕಿದೆ. ಕರ್ನಾಟಕ ರಾಜ್ಯದ ಸಾಮುದಾಯಿಕ ಹಿತಾಸಕ್ತಿಯ ಬಗ್ಗೆ ಯೋಚಿಸುವುದಾದರೆ ಈ ಮೇಲಿನ ವಾಸ್ತವವನ್ನು ಮೀರುವ ಪ್ರಯತ್ನವನ್ನೂ ಸಹ ಈ ಎರಡೂ ಗುಂಪುಗಳು ಮಾಡಬೇಕಿದೆ.

ಐಡೆಂಟಿಟಿ ರಾಜಕಾರಣದ ಜೊತೆಗೆ ಕಳೆದ ದಶಕದಲ್ಲಿ ಮರೆಯಾಗಿರುವುದು ಸಾರ್ವಜನಿಕ ಒಳಿತು (ಪಬ್ಲಿಕ್ ಗುಡ್) ಎನ್ನುವ ಸರ್ಕಾರದ ನೀತಿಯನ್ನು ರೂಪಿಸುವ ಪರಿಕಲ್ಪನೆ. ಇಂದು ಸಾರ್ವಜನಿಕ ಒಳಿತು ಎಲ್ಲಿಯಾದರೂ ಅನುಷ್ಠಾನಗೊಂಡರೆ ಅದು ಸೀಮಿತ ಮಟ್ಟದಲ್ಲಿ ಐಡೆಂಟಿಟಿ ರಾಜಕಾರಣದೊಳಗೆ ಮಾತ್ರ. ಅಂದರೆ ಜಾತಿ ಸಮುದಾಯಗಳಿಗೆ ಅನುಕೂಲಕರವಾಗಬಹುದಾದ ರೀತಿಯ ನೀತಿಗಳು ಆಗೊಮ್ಮೆ, ಈಗೊಮ್ಮೆ ಅನುಷ್ಠಾನಗೊಳ್ಳುತ್ತಿವೆ. ಮಿಕ್ಕಂತೆ ಅಭಿವೃದ್ಧಿಯ ಹೆಸರಿನಲ್ಲಿ ರೂಪುಗೊಳ್ಳುತ್ತಿರುವ ನೀತಿಗಳು ಅಧಿಕಾರಸ್ಥರ ಖಾಸಗಿ ಹಿತಾಸಕ್ತಿಗಳು, ಖಾಸಗಿ ಲಾಭ ಇವುಗಳ ಲೆಕ್ಕಾಚಾರದಲ್ಲಿ ರೂಪುಗೊಳ್ಳುತ್ತಿದೆ.

ಉದ್ದೇಶರಹಿತ ಐಡೆಂಟೆಟಿ ರಾಜಕಾರಣ ಮತ್ತು ಸಾರ್ವಜನಿಕ ಒಳಿತಿನ ಪರಿಕಲ್ಪನೆಯಿಲ್ಲದ, ಖಾಸಗಿ ಲಾಭದ ಲೆಕ್ಕಾಚಾರದಲ್ಲಿಯೇ ರೂಪುಗೊಂಡಿರುವ ಸಾರ್ವಜನಿಕ ನೀತಿಗಳು ಇಂದು ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಆಚರಣೆಗೆ ಇರುವ ಅತಿದೊಡ್ಡ ಕಂಟಕಗಳು. ಇವುಗಳನ್ನು ಕರ್ನಾಟಕದ ಪ್ರಜ್ಞಾವಂತ ಮತದಾರ ಮೀರುವ ಪ್ರಯತ್ನವನ್ನು ಇಂದು ಮಾಡಬೇಕಿದೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018