2nd ಮೇ ೨೦೧೮

ನಮಗೇಕೆ ಬೆಂಬಲಿಸಬೇಕು?
ಸಾಧನೆ ಮತ್ತು ಪರಂಪರೆಯ ಬೆಂಬಲ

ವಿ.ಆರ್.ಸುದರ್ಶನ್

ರಾಷ್ಟ್ರದ, ರಾಜ್ಯದ ಮತ್ತು ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಈ ಚುನಾವಣೆ ನಮಗೆ ಅವಕಾಶ ಮತ್ತು ಸವಾಲಾಗಿದೆ.

1885 ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಮತ್ತು ರಾಜಕೀಯ ಜನಾಂದೋಲನವಾಗಿ ಜನಜಾಗೃತಿ ಮೂಡಿಸಿದ, ಪ್ರಜಾಪ್ರಭುತ್ವ ಸ್ಥಾಪನೆ ಮಾಡಿದ ಹಾಗೂ ಜನಪರವಾದ ಸಂವಿಧಾನ ನೀಡಿದ ಸಂಸ್ಥೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಪರಂಪರೆ ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡಂತೆ ಅಭಿವೃದ್ಧಿ ಪರವಾದ ನವಭಾರತ ಮತ್ತು ನವಕರ್ನಾಟಕ ನಿರ್ಮಾಣ ಮಾಡುವ ಗುರಿ ಹೊಂದಿದೆ. ಈ ಪಕ್ಷ ವೈಜ್ಞಾನಿಕ, ಜಾತ್ಯಾತೀತ ಮನೋಭಾವನೆಯ ಸಮಾಜವಾದ, ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಮತ್ತು ಪ್ರಯತ್ನಗಳನ್ನು ಒಳಗೊಂಡಿದೆ.

ಈ ಪ್ರಯತ್ನಗಳಲ್ಲಿ ಕೀರ್ತಿಶೇಷರಾದ ಮೋಹನ್‍ದಾಸ್ ಕರಮ್‍ಚಂದ್ ಗಾಂಧಿ, ಪಂಡಿತ್ ನೆಹರು, ಡಾ.ಅಂಬೇಡ್ಕರ್, ಮೌಲಾನ ಅಬ್ದುಲ್ ಅಜಾದ್, ಸುಬಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಇಂದಿರಾ ಗಾಂಧಿ ಅವರ ಚಿಂತನೆಗಳು ಮತ್ತು ತ್ಯಾಗ ಸೇರಿವೆ. ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಬಹಳ ದೊಡ್ಡ ಪರಂಪರೆ.

2018ರ ಮೇ 12ನೇ ತಾರೀಖು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ. 2013ರಲ್ಲಿ ಎ.ಐ.ಸಿ.ಸಿ. ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಯು.ಪಿ.ಎ. ಸರ್ಕಾರದ ಪ್ರಧಾನಮಂತ್ರಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಸಹಕಾರದೊಂದಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರವರ ಪರಿಶ್ರಮದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂತು. ಇದರಲ್ಲಿ ಪಕ್ಷದ ಎಲ್ಲಾ ಹಿರಿಯ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಸಲಹೆ ಮತ್ತು ಶ್ರಮಗಳು ಬೆರೆತಿದ್ದವು. ಅಂದಿನ ಬಿ.ಜೆ.ಪಿ.ಯ ದುರಾಡಳಿತಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದ ಸರ್ಕಾರ ಸ್ಥಾಪನೆಗೆ ಕರ್ನಾಟಕದ ಮತದಾರರು ಅಶೀರ್ವದಿಸಿದರು.

2013ರ ಮೇ 13ನೇ ತಾರೀಖು ಕಾಂಗ್ರೆಸ್ ಶಾಸಕಾಂಗ ಪಕ್ಷ ಮತ್ತು ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸರ್ಕಾರ ಸ್ಥಾಪನೆಯಾಯಿತು. 2013ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ವಿವಿಧ ಇಲಾಖೆಗಳ ಮುಖಾಂತರ ಜಾರಿಗೆ ತರುವ ಪ್ರಯತ್ನವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟ ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಮುಂದುವರಿಸುತ್ತ ಬಂದಿದ್ದಾರೆ.

ಕರ್ನಾಟಕದ ಜನಸಂಖ್ಯೆ 6.5 ಕೋಟಿ. ಇದರಲ್ಲಿ 4.8 ಕೋಟಿ ಜನರಿಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳು ತಲುಪಿವೆ ಎನ್ನುವುದು ಸಮಾಧಾನ ಮತ್ತು ಹೆಮ್ಮೆ ತರುವಂತಹ ವಿಷಯವಾಗಿದೆ. ಉತ್ತಮ ಆಡಳಿತ, ನವಕರ್ನಾಟಕ ನಿರ್ಮಾಣದ ಗುರಿಯತ್ತ ಅನೇಕ ಕಾರ್ಯಕ್ರಮಗಳನ್ನ ಜಾರಿಗೆ ತರುವ ಪ್ರಯತ್ನವಾಗಿದೆ.

ಬಸವಣ್ಣ, ಕನಕದಾಸ, ಕುವೆಂಪು, ಮಹಾತ್ಮಾ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ, ಮತ್ತು ಡಿ.ದೇವರಾಜ್ ಅರಸು ಇವರೆಲ್ಲರ ವಿಚಾರಧಾರೆಗಳು ಸರ್ಕಾರದ ಮತ್ತು ಪಕ್ಷದ ಮೇಲೆ ಅಗಾಧವಾದ ಪ್ರಭಾವ ಬೀರಿವೆ. 2013ರಿಂದ 2018ರವರೆಗೆ ಸಿದ್ದರಾಮಯ್ಯರವರು ಮಂಡಿಸಿರುವ ರಾಜ್ಯದ ಎಲ್ಲಾ ಬಜೆಟ್‍ಗಳು ರಾಜ್ಯದ ಪ್ರಗತಿಗೆ ಅನುಕೂಲಕರವಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಾಡಲ್ ಆಪ್ ಡೆವೆಲೆಪ್‍ಮೆಂಟ್ ರಾಷ್ಟ್ರದಲ್ಲೇ ಹೆಚ್ಚು ಅಕರ್ಷಕವಾಗಿದೆ.

ಅನ್ನಭಾಗ್ಯ, ಕೃಷಿಭಾಗ್ಯ, ಶುದ್ಧ ಕುಡಿಯುವ ನೀರಿನ ಘಟಕ, ಪಶುಭಾಗ್ಯ, ಕ್ಷೀರಭಾಗ್ಯ, ವಿದ್ಯಾಶ್ರೀ, ವಸತಿಭಾಗ್ಯ, ನೀರಾವರಿಭಾಗ್ಯ, ಮನಸ್ವಿನಿ, ಮೈತ್ರಿ, ನಮ್ಮ ಮೆಟ್ರೋ, ನಿರ್ಮಲಭಾಗ್ಯ, ಸೌರ ಭಾಗ್ಯ, ಗ್ರಾಮ ಸ್ವರಾಜ್ಯ, ಪ್ರತಿಬಿಂಬ, ರೈತರು, ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ವಿಶೇಷವಾದ ಸವಲತ್ತು ಮತ್ತು ಕಾರ್ಯಕ್ರಮಗಳನ್ನ ಜಾರಿಗೊಳಿಸಲಾಗಿದೆ.

2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎ.ಐ.ಸಿ.ಸಿ. ಅಧ್ಯಕ್ಷರಾದ ದೇಶದ ಭವಿಷ್ಯದ ಆಶಾಕಿರಣ ರಾಹುಲ್‍ಗಾಂಧಿ ಅವರ ಜನಾಶೀರ್ವಾದ ಕಾರ್ಯಕ್ರಮಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರ 5 ವರ್ಷಗಳ ಸಾಧನಾ ಸಮಾವೇಶದ ಕಾರ್ಯಕ್ರಮಗಳು ಡಾ.ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಪರಿಣಾಮಕಾರಿಯಾದ ಸಂಘಟನೆಯ ಕಾರ್ಯಕ್ರಮಗಳು ನಮ್ಮೊಂದಿಗಿವೆ. ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ಅವರ ತಂಡದ ಉತ್ಸ್ಸಾಹ ಮತ್ತು ಕ್ರಿಯಾಶೀಲ ಸಹಯೋಗದೊಂದಿಗೆ, ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭೆಯಲ್ಲಿ ಗುಲಾಬ್ ನಬೀ ಅಜಾದ್ ಇವರೆಲ್ಲರ ಅನುಭವಗಳು ಜೊತೆಗಿವೆ. ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ ಒಳಗೊಂಡ ತಂಡ ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಸ್ಥಾಪನೆ ಮಾಡುವ ಬಹಳ ದೊಡ್ಡ ಜವಾಬ್ದಾರಿ ಹೊತ್ತಿದೆ. ರಾಷ್ಟ್ರದ, ರಾಜ್ಯದ ಮತ್ತು ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಈ ಚುನಾವಣೆ ನಮಗೆ ಅವಕಾಶ ಮತ್ತು ಸವಾಲಾಗಿದೆ. ಈ ಮೇಲ್ಕಂಡ ಎಲ್ಲಾ ಸಾಧನೆಗಳು ಮತ್ತು ಪರಂಪರೆಯ ಹಿನ್ನೆಲೆಗಳಲ್ಲಿ ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಸುವ ಅಗತ್ಯವಿದೆ ಮತ್ತು ವಿಶ್ವಾಸವಿದೆ.

* ವಿ.ಆರ್.ಸುದರ್ಶನ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು, ಮಾಜಿ ಸಭಾಪತಿಗಳು.

ಜನರ ಆಶೋತ್ತರಗಳಿಗೆ ಸ್ಪಂದಿಸುವ ಪಕ್ಷ

ಮಂಜುಳಾ ಸಿ.

ಸಾಮಾನ್ಯವಾಗಿ ರಾಜ್ಯಮಟ್ಟದಲ್ಲಿ ಪ್ರಣಾಳಿಕೆ ರಚಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿದೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೊಟ್ಟಮೊದಲಬಾರಿಗೆ ಕೇಂದ್ರದಲ್ಲಿ ಅಟಲ್‍ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಒಂದು ಸಂಚಲನ ಸೃಷ್ಟಿಯಾಯಿತು. ಸುವರ್ಣ ಅಷ್ಟಪಥ ರಸ್ತೆಯನ್ನು ದೇಶದ ಭೂಪಟಕ್ಕೆ ಹೂಮಾಲೆ ಹಾಕಿದ ರೀತಿಯಲ್ಲಿ ನಿರ್ಮಾಣ ಮಾಡಲಾಯಿತು. ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ಪ್ರತಿ ಹಳ್ಳಿಗಳ ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣವಾದವು. ಕೊಂಪೆಯಂತಿದ್ದ ಹಳ್ಳಿಗಳಲ್ಲಿ ಕಷ್ಟಪಟ್ಟು ಜೀವನ ಮಾಡುತ್ತಿದ್ದ ಗ್ರಾಮೀಣ ಜನ ಸ್ವಾತಂತ್ರ್ಯಾನಂತರ ಮೊದಲಬಾರಿಗೆ ಸುಂದರ ರಸ್ತೆಗಳಲ್ಲಿ ಸುಗಮವಾಗಿ ಓಡಾಡುವ ಸುಯೋಗ ಪಡೆದರು.

ಅಟಲ್ ಬಿಹಾರಿ ವಾಜಪೇಯಿ ಅವರ ಗರಡಿಯಲ್ಲಿ ಬೆಳೆದ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಕಾರ್ಯಕರ್ತರು ಕರ್ನಾಟಕದಲ್ಲಿ ಪಕ್ಷಕ್ಕೆ ಅಧಿಕಾರ ಸಿಕ್ಕಾಗ ಅದೇ ಮಾದರಿಯ ಅಭಿವೃದ್ಧಿಯನ್ನು ಇಲ್ಲಿ ಮಾಡಿ ತೋರಿಸಿದರು. ಯಡಿಯೂರಪ್ಪ ಹೋದಲ್ಲೆಲ್ಲ ಏನಾದರೊಂದು ಅಭಿವೃದ್ಧಿ ಕೆಲಸ ಆಗುತ್ತದೆ ಎಂಬ ಭರವಸೆಯನ್ನು ನಾಡಿನ ಜನರಲ್ಲಿ ಮೂಡಿಸಿದರು. ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ನಗರವಾಗಿದ್ದು ವಿಶ್ವದರ್ಜೆಯ ಎಲ್ಲ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಿಜೆಪಿ ಒತ್ತು ನೀಡಿತು.

ಜಗತ್ತು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಅದರೊಂದಿಗೆ ನಾವು ಸ್ಪರ್ಧಿಸಬೇಕಾದರೆ ಆ ಮಟ್ಟಕ್ಕೆ ನಮ್ಮಲ್ಲೂ ಮೂಲಸೌಕರ್ಯಗಳು ಬೆಳೆಯಬೇಕೆಂಬ ಹಿನ್ನೆಲೆಯಲ್ಲಿ ಮುಂಬೈ ಹಾಗೂ ದೆಹಲಿಯಲ್ಲಿ ಜಾರಿಯಲ್ಲಿದ್ದ ಮೆಟ್ರೋ ರೈಲು ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಮೊದಲು ಅನುಷ್ಠಾನ ಮಾಡಿದ್ದು ಬಿಜೆಪಿ. ಮೆಟ್ರೋ ಯೋಜನೆಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುದಾನ ನೀಡಿತು. ಹೀಗೆ ಜನರು ಬಯಸುವ, ಜನರಿಗೆ ಅಗತ್ಯವಿರುವ ಮತ್ತು ಜನಮಾನಸದಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡುವ ಪಕ್ಷವಾಗಿ ಬಿಜೆಪಿ ಬೆಳೆದು ಬಂದಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಹಾಗೂ ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೂಡ ದೇಶದ ಹಿತ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಲವು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಕರ್ನಾಟಕದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮೋದಿ ನಿರ್ದೇಶನದಂತೆ ಕೆಲಸ ಮಾಡುವ ಪಣ ತೊಟ್ಟಿದ್ದಾರೆ.

ಇನ್ನು, ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಆರಂಭದ ಮೂರುವರೆ ವರ್ಷ ಟೇಕಾಫ್ ಆಗಿಲ್ಲ ಅನ್ನುವಂತಹ ಭಾವನೆ ರಾಜ್ಯದ ಜನರಲ್ಲಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಶಿವಮೊಗ್ಗ ಭಾರಿ ಅಭಿವೃದ್ಧಿಯನ್ನು ಕಂಡಿತು. ಹಾಗೆಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅದೇ ರೀತಿಯ ಅಭಿವೃದ್ಧಿ ಮೈಸೂರಿನಲ್ಲಿ ಆಗುತ್ತದೆ ಎಂದು ಅಲ್ಲಿನ ಜನ ಕಾತರಗೊಂಡಿದ್ದರು. ಆದರೆ ಸಿದ್ದರಾಮಯ್ಯ ತಮ್ಮ ತವರೂರಿನ ಜನರ ಆಶೋತ್ತರಗಳನ್ನು ಈಡೇರಿಸುವಲ್ಲೂ ವಿಫಲರಾದರು.

ಸಿದ್ದಾರಾಮಯ್ಯ ಅವರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪೊಲೀಸ್ ಅಧಿಕಾರಿಗಳ ಪತ್ನಿಯರಿಂದ ಹಿಡಿದು ಸಾಮಾನ್ಯ ಮಹಿಳೆಯರ ಮಾಂಗಲ್ಯ ಸರಗಳ್ಳತನ ವ್ಯಾಪಕವಾಗಿ ನಡೆದರೂ ಈ ಸರಕಾರ ಸ್ಪಂದನೆಯನ್ನು ತೋರುತ್ತಿಲ್ಲ. ಕಾನೂನಿನ ಭಯವಿಲ್ಲದಂತೆ ಕೊಲೆಗಳು ನಡೆಯುತ್ತಿವೆ. ಲೋಕಾಯುಕ್ತರ ಕಚೇರಿಗೇ ನುಗ್ಗಿ ಕೊಲೆಗೆ ಯತ್ನ ಮಾಡಿದ್ದಿರಬಹುದು, ಗೌರಿ ಕೊಲೆ ಆಗಿರಬಹುದು ಹೀಗೆ ಸಮಾಜ ದಲ್ಲಿ ಅಪರಾಧಿ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿದ್ದರೂ ಅವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಈ ಸರಕಾರ ಕೈಗೊಳ್ಳುತ್ತಿಲ್ಲ.

ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿರಿಯ ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲಿನ ಹಲ್ಲೆಯಲ್ಲಿ ಭಾಗಿಯಾದ ಅಪರಾಧಿಗಳಿಗೆ ಇದುವರೆಗೆ ಶಿಕ್ಷೆಯಾಗಿಲ್ಲ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಜೊತೆ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಆ ಅಧಿಕಾರಿ ಮುಖ್ಯಮಂತ್ರಿ ಚೇಲಾ ಮರಿಗೌಡ ಎಂಬುವರ ವಿರುದ್ಧ ದೂರು ಕೊಟ್ಟರೂ ಅಪರಾಧಿಯನ್ನು ಬಂಧಿಸಲಿಲ್ಲ. ಹೈಕೋರ್ಟು ಮಧ್ಯಪ್ರವೇಶ ಮಾಡಿದ ಮೇಲೆ ಮರಿಗೌಡನನ್ನು ಬಂಧಿಸಲಾಯಿತು. ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಮಲ್ಲಿಕಾರ್ಜುನ್ ಬಂಡೆ ಅವರ ಹತ್ಯೆ ಘಟನೆಯ ಕುರಿತು ಸರಿಯಾದ ತನಿಖೆ ನಡೆಯಲೇ ಇಲ್ಲ.

ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದಾಗ್ಯೂ ಸಿದ್ದಾರಾಮಯ್ಯ ಸರಕಾರ ಅವುಗಳ ನಿವಾರಣೆಗೆ ಮುಂದಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಬರ ಬಂದು ಮೂರು ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡರೂ ಈ ಸರಕಾರ ರೈತರು, ಬಡವರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಇಂಥ ಸಂದರ್ಭದಲ್ಲಿ ಸಹಜವಾಗಿ ಬದಲಾವಣೆ ಬೇಕಾಗಿದೆ. ಅಂಥ ಬದಲಾವಣೆ ನೀಡಲು ಬಿಜೆಪಿ ಸಿದ್ಧಗೊಂಡಿದೆ.

ಸಾಮಾನ್ಯವಾಗಿ ರಾಜ್ಯಮಟ್ಟದಲ್ಲಿ ಪ್ರಣಾಳಿಕೆ ರಚಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿದೆ. ನಮ್ಮ ನಾಯಕರು ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಹೋಗಿ, ಸಭೆ ಸಂವಾದಗಳನ್ನು ನಡೆಸಿ ಅಲ್ಲಿನ ಜನಸಾಮಾನ್ಯರ ಮತ್ತು ರೈತರ ಸಮಸ್ಯೆಗಳನ್ನು ಕೇಳಿ ಅವುಗಳ ನಿವಾರಣೆ ನಿಟ್ಟಿನಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ. ಬಿಜೆಪಿ ಆಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಜನಸಾಮಾನ್ಯರಿಗೆ ರಕ್ಷಣೆ ಒದಗಿಸುವುದು ಹಾಗೂ ಮಹಾದಾಯಿ ನದಿಯಿಂದ ತಕ್ಷಣ ಆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಈ ಎಲ್ಲ ಕಾರಣಗಳಿಗಾಗಿ ರಾಜ್ಯದ ಜನತೆ ಬಿಜೆಪಿಗೆ ಅಧಿಕಾರ ಕೊಡುವ ಭರವಸೆ ಇದೆ.

* ಮಂಜುಳಾ ಅವರು ಬಿಜೆಪಿ ರಾಜ್ಯ ವಕ್ತಾರರು.

ಪ್ರಾದೇಶಿಕ ಪಕ್ಷದ ಸರ್ಕಾರ ಅನಿವಾರ್ಯ

ರಮೇಶ್‍ಬಾಬು

ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕ ರಾಜ್ಯದ ಭಾಷೆ, ಜಲ ಮತ್ತು ನೆಲದ ಸಂರಕ್ಷಣೆ ಸಾಧ್ಯವಿಲ್ಲವೆಂಬುದು ಕನ್ನಡಿಗರಿಗೆ ಮನವರಿಕೆ ಆಗಿದೆ.

ಮೇ 12, 2018ರಂದು ಕರ್ನಾಟಕದ ವಿಧಾನಸಭೆಗೆ 15ನೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಸ್ವತಂತ್ರ್ಯಾನಂತರ 1952ರಲ್ಲಿ ಸಾರ್ವತ್ರಿಕ ಚುನಾವಣೆಯ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಬಹುತೇಕ ಅಧಿಕಾರವನ್ನು ಅನುಭವಿಸಿರುತ್ತದೆ. ಅದೇರೀತಿ ಒಂದು ಬಾರಿ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಅಧಿಕಾರವನ್ನು ಅನುಭವಿಸಿರುತ್ತದೆ. ಜನತಾ ಪರಿವಾರವು 1983, 1985, 1994ರಲ್ಲಿ ಅಧಿಕಾರ ನಡೆಸಿದ್ದು, 2004ರಿಂದ 2008ರವರೆಗೆ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶವಾಗಿರುತ್ತದೆ. ಪ್ರಾದೇಶಿಕ ಸೊಗಡುತನದ ಮೂಲಕ 1999ರಲ್ಲಿ ಜನತಾದಳ(ಜಾ) ಪಕ್ಷವಾಗಿ ಹೊರಹೊಮ್ಮಿದ ಜೆ.ಡಿ.ಎಸ್. ಇದುವರೆಗೆ ತನ್ನ ಸ್ವಂತ ಬಲದ ಮೇಲೆ ಸ್ವತಂತ್ರವಾದ ಸರ್ಕಾರವನ್ನು ರಚಿಸಲು ಸಾಧ್ಯವಾಗಿರುವುದಿಲ್ಲ.

ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕ ರಾಜ್ಯದ ಭಾಷೆ, ಜಲ ಮತ್ತು ನೆಲದ ಸಂರಕ್ಷಣೆ ಸಾಧ್ಯವಿಲ್ಲವೆಂಬುದು ಕನ್ನಡಿಗರಿಗೆ ಮನವರಿಕೆ ಆಗಿದೆ. ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ನಾಯಕತ್ವ ಹೊರ ಹೊಮ್ಮಲು ಅವಕಾಶ ಇಲ್ಲದೇ ಇರುವುದರಿಂದ ಬರುವ ಚುನಾವಣೆಯಲ್ಲಿ ಪ್ರಾದೇಶಿಕ ನಾಯಕತ್ವದ ಸರ್ಕಾರ ಸ್ಥಾಪನೆಗೆ ಕನ್ನಡಿಗರು ಒಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನೀರಿನ ವಿಚಾರ ಬಂದ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಮೌನಕ್ಕೆ ಶರಣಾಗುತ್ತವೆ ಇಲ್ಲವೇ ಅವಕಾಶವಾದದ ನೀತಿಗೆ ಮುಂದಾಗುತ್ತವೆ. ಅದೇರೀತಿ ಬೆಳಗಾವಿಯ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಲಿ, ಗೋವಾದ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಲಿ, ಅಥವಾ ಗಡಿಭಾಗದ ಕನ್ನಡಿಗರ ಹಿತರಕ್ಷಣೆಗಾಗಲಿ ಎಂದೂ ಸಹ ರಾಷ್ಟ್ರೀಯ ಪಕ್ಷಗಳು ಧ್ವನಿಯನ್ನು ಎತ್ತಿರುವುದಿಲ್ಲ. ಅವರ ಎಡಬಿಡಂಗಿತನ ಮತ್ತು ಪ್ರಾದೇಶಿಕ ಹಿತಾಸಕ್ತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ನಿಚ್ಚಳವಾಗಿದೆ. ರಾಷ್ಟ್ರೀಯ ಪಕ್ಷಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಕಪಟ ನಾಟಕವಾಡುತ್ತವೆ.

ಸ್ವತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ರಸ್ತೆ ಸಾರಿಗೆ ಹಾಗೂ ರೈಲ್ವೆ ಯೋಜನೆಗಳಲ್ಲಿ ಅನ್ಯಾಯವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುವ ವಾರ್ಷಿಕ ಅನುದಾನಗಳು ಅಲ್ಪ ಪ್ರಮಾಣದಲ್ಲಿರುತ್ತವೆ. ಅಷ್ಟೇ ಅಲ್ಲ, ಜನಸಂಖ್ಯೆಗೆ ಅನುಗುಣವಾಗಿ ದೊರೆಯಬೇಕಾದ ಪಾರ್ಲಿಮೆಂಟ್ ಮತ್ತು ರಾಜ್ಯಸಭೆಯ ಸ್ಥಾನಗಳು ಅನುಪಾತಕ್ಕೆ ಅನುಗುಣವಾಗಿ ದೊರಕಿರುವುದಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವಲ್ಲಿ ವಿಳಂಬ ಮಾಡುವುದರ ಜೊತೆಗೆ ಇಲ್ಲಿಯವರೆಗೆ ಅನುದಾನಗಳು ಸಮರ್ಪಕವಾಗಿ ಬಿಡುಗಡೆ ಆಗಿರುವುದಿಲ್ಲ. ಕೇಂದ್ರದ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಾರಿಗೆ, ವಿದ್ಯುತ್ ಹಾಗೂ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಶೋಷಣೆ ಮಾಡಿಕೊಂಡು ಬರಲಾಗುತ್ತಿದೆ. ಹಾಗಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ನಾಯಕತ್ವಕ್ಕೆ ಬೆಂಬಲ ನೀಡುವುದರ ಮೂಲಕ ಕನ್ನಡಿಗರು ತಮ್ಮ ಸ್ವಾಭಿಮಾನದ ಪ್ರತಿಭಟನೆಯನ್ನು ಸಾಬೀತುಪಡಿಸಲು ಅಣಿಯಾಗಿದ್ದಾರೆ.

ಕರ್ನಾಟಕ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಯೋಜನೆ, ಯುವಕರಿಗೆ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಸ್ವಾವಲಂಬನೆಯ ಯೋಜನೆಗಳು, ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆ, ಕೃಷಿಗೆ ಪೂರಕವಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ನೀರಿನ ಸಮರ್ಪಕ ಹಾಗೂ ಸದ್ಬಳಕೆಯ ಮೂಲಕ ವೈಜ್ಞಾನಿಕ ಕೃಷಿ ಬೆಳವಣಿಗೆ, ಪಶುಸಂಗೋಪನೆ ಮತ್ತು ಗುಡಿ ಕೈಗಾರಿಕೆ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿ, ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರ ವೇತನ ತಾರತಮ್ಯದ ನಿವಾರಣೆಯ ಮೂಲಕ ಸೇವಾ ಭದ್ರತೆ ನೀಡುವುದು, ನಗರ ಪ್ರದೇಶದಲ್ಲಿ ಕೆಳವರ್ಗದವರಿಗೆ ಸೂರು ದೊರಕಿಸುವಿಕೆ ಮುಂತಾದವು ನಮ್ಮ ಪಕ್ಷದ ಆದ್ಯತೆಯ ಯೋಜನೆಗಳಾಗಿವೆ.

ನಮ್ಮ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ಹಿಂದೆ ತಮಗೆ ದೊರೆತ 20 ತಿಂಗಳ ಅಲ್ಪಾವಧಿಯಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರವನ್ನು ಗ್ರಾಮಗಳಿಗೆ ಕೊಂಡೊಯ್ದ ಸತ್ಯವನ್ನು ಎಲ್ಲರೂ ಇಂದಿಗೂ ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಅದೇರೀತಿ ಸಾರಾಯಿ ನಿಷೇಧ, ಲಾಟರಿ ನಿಷೇಧ, ಜನತಾ ದರ್ಶನ, ಜನರ ಬಳಿಗೆ ಸರ್ಕಾರ ಇತ್ಯಾದಿ ಕಾರ್ಯಕ್ರಮಗಳು ಇಂದಿಗೂ ಜನಮನದಲ್ಲಿ ಉಳಿದಿರುತ್ತದೆ. ಅದೇ ಕಾರಣಕ್ಕಾಗಿ ಮೇಲಿನ ಎಲ್ಲಾ ಯೋಜನೆಗಳು ಕುಮಾರಸ್ವಾಮಿರವರ ಆದ್ಯತಾ ಯೋಜನೆಗಳಾಗಿದ್ದು, ಜನಮನ ತಲುಪುವ ಆ ಮೂಲಕ ಪ್ರಾದೇಶಿಕ ನಾಯಕತ್ವಕ್ಕೆ ಒತ್ತು ನೀಡುವ ಕಾಯಕಲ್ಪ ನಮ್ಮದಾಗಿರುತ್ತದೆ. ಅವರ ಭಾವನೆಗಳಿಗೆ ಪೂರಕವಾಗಿ, ಅವರ ಆಶಯಗಳಿಗೆ ಅನುಗುಣವಾಗಿ ಸರಳವಾದ, ಜನಪರವಾದ ಹಾಗೂ ಪಾರದರ್ಶಕವಾದ ಗಟ್ಟಿಧ್ವನಿಯ ಪ್ರಾದೇಶಿಕ ನಾಯಕತ್ವದ ಸರ್ಕಾರದ ಮೂಲಕ ಇಲ್ಲಿನ ಭಾಷೆ, ಜಲ ಮತ್ತು ನೆಲಗಳಿಗೆ ಒತ್ತು ನೀಡುವ ನಿಲುವು ನಮ್ಮದಾಗಿದೆ. ಈ ಬಾರಿ ಕರ್ನಾಟಕದ ಜನ ಜೆ.ಡಿ.ಎಸ್. ಪಕ್ಷಕ್ಕೆ ಆಶೀರ್ವಾದ ಮಾಡುವುದರ ಮೂಲಕ ಹೆಚ್.ಡಿ.ಕುಮಾರಸ್ವಾಮಿರವರ ನಾಯಕತ್ವದ ಸರ್ಕಾರ ರಚನೆಗೆ ಬೆಂಬಲಿಸುತ್ತಾರೆಂಬ ಆಶಯ ನಮ್ಮದಾಗಿರುತ್ತದೆ.

* ರಮೇಶ್‍ಬಾಬು ಅವರು ಜೆ.ಡಿ.ಎಸ್. ಪಕ್ಷದ ವಿಧಾನ ಪರಿಷತ್ ಸದಸ್ಯರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮