2nd May 2018

ಮುಖ್ಯಮಂತ್ರಿ ಅಭ್ಯರ್ಥಿ
ಇವರು ಸಿದ್ದರಾಮಯ್ಯ

ಅರವತ್ತೊಂಬತ್ತು ವರ್ಷಗಳ ಸಿದ್ದರಾಮಯ್ಯನವರು ತಮ್ಮ ಮೂವತ್ತನೇ ವರ್ಷದಿಂದಲೇ ರಾಜಕೀಯ ಪ್ರವೇಶಿಸಿದರು. ಲೋಕದಳದ ಉಮೇದುವಾರಿಕೆಯಿಂದ ಮೊದಲ ಬಾರಿಗೆ 1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. ನಂತರ ಜನತಾಪಕ್ಷ ಸೇರಿ ಕನ್ನಡ ಕಾವಲು ಸಮೀತಿಯ ಅಧ್ಯಕ್ಷರೂ ಆಗಿದ್ದರು. 1985ರಲ್ಲಿ ಮತ್ತೆ ಗೆದ್ದು ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಮಂತ್ರಿಯಾದರು. 1989ರಿಂದ ದೇವೇಗೌಡರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯ, ಜೆ.ಎಚ್. ಪಟೇಲ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದರು. 2004ರ ಚುನಾವಣೆಯ ಜನತಾದಳದ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ದೇವೇಗೌಡರ ನೆರಳಲ್ಲಿ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಂಡ ಸಿದ್ದರಾಮಯ್ಯ ರಾಜ್ಯಮಟ್ಟದಲ್ಲಿ ತಮ್ಮ ಸಮುದಾಯದ ನಾಯಕರೂ ಆದರು. 2006ರಲ್ಲಿ ದೇವೇಗೌಡರ ಸಾಂಗತ್ಯ ತೊರೆದು ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯನವರು ಉಪಚುನಾವಣೆಯಲ್ಲಿ ಕೇವಲ 250 ಮತಗಳಿಂದ ಗೆದ್ದುಬಂದಿದ್ದು ಪವಾಡ ಸದೃಶ್ಯವೇ ಸರಿ. ನಾಯಕತ್ವದ ಅತೀವ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷದಲ್ಲಿ ಅನಾಯಾಸವಾಗಿ ನಾಯಕರಾದ ಸಿದ್ದರಾಮಯ್ಯನವರು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ತರುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕ ಒಟ್ಟು ಶೇಕಡಾ 35 ಮತಪ್ರಮಾಣಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸಮುದಾಯದ ಶೇ.5—6 ಸೇರಿಸಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. 2018ರ ಚುನಾವಣೆಯಲ್ಲಿ ತಮ್ಮನ್ನು ತಾವೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿರುವ ಸಿದ್ದರಾಮಯ್ಯನವರು ಮುಂದಿನ ವರ್ಷಗಳಲ್ಲಿ ಕರ್ನಾಟಕದ ರಾಜಕೀಯದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಯಾರಿಗೂ ಯಾವುದಕ್ಕೂ ಹೆದರದ ಗಂಡೆದೆ ಸಿದ್ದರಾಮಯ್ಯನವರದು. ದಕ್ಷಿಣ ಕರ್ನಾಟಕದಲ್ಲಿ ದೇವೇಗೌಡರಂತಹ ಚಾಣಾಕ್ಷ, ಬಲಾಢ್ಯ ನಾಯಕರನ್ನು ಎದುರು ಹಾಕಿಕೊಂಡೂ ಕರ್ನಾಟಕದ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ ಸಿದ್ದರಾಮಯ್ಯನವರು, ದೇವರಾಜ ಅರಸುರವರಂತೆ ತಾನೊಬ್ಬ ಹಿಂದುಳಿದ ವರ್ಗಗಳ ನಾಯಕನಾಗಬಯಸುವ ಬಯಕೆಯುಳ್ಳವರು. ತಮ್ಮನ್ನು ನಂಬಿದವರನ್ನು ಕೈಬಿಡದ ನಾಯಕರು. ಐದು ವರ್ಷಗಳ ಕಾಲ 120 ಶಾಸಕರ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿರುವ ಅದ್ವಿತೀಯ, ಅಪ್ರತಿಮ ನಾಯಕರು. ಯಾರನ್ನೂ ರಾಜಕೀಯವಾಗಿ ಮುಗಿಸಬೇಕೆನ್ನುವ ಇರಾದೆ ಹೊಂದದೆ ರಾಜೀಮನೋಭಾವ ಹೊಂದಿಯೂ, ತನ್ನತನ ಬಿಟ್ಟುಕೊಡದ ಗಟ್ಟಿಮನಸ್ಸಿನ ನಾಯಕರು. ಬಡವರ ಹಾಗೂ ದಮನಿತರ ಪರವಾಗಿ ಅಂತಃಕರಣವುಳ್ಳವರು. ಒಳ್ಳೆಯ ಕೆಲಸ ಮಾಡುವ ಮಂತ್ರಿಗಳ, ಶಾಸಕರ, ಅಧಿಕಾರಿಗಳ ಬೆನ್ನುತಟ್ಟಿ ಅವರಿಗೆ ರಕ್ಷಣೆ ಕೊಡುವ ಮನವುಳ್ಳವರು. ಕಾಂಗ್ರೆಸ್ ಸಿದ್ದಾಂತಕ್ಕಿಂತಲೂ ಮೂಲ ಜನತಾಪಕ್ಷದ ಜನಪರ ಸಮಾಜವಾದಿ ವಿಚಾರಧಾರೆಯ ಬಗ್ಗೆ ಒಲವುಳ್ಳವರು.

ಸಿದ್ದರಾಮಯ್ಯನವರ ಲೋಪವಿರುವುದು ಅವರ ನಿಲುವು ಅಥವಾ ವಿಚಾರಧಾರೆಯ ವಿಷಯದಲ್ಲಿ ಅಲ್ಲ. ಸಿದ್ದರಾಮಯ್ಯನವರು ಮೂಲತಃ ಸೋಮಾರಿ ಮತ್ತು ಉಡಾಫೆಯ ಮನುಷ್ಯ. ಜನಪರ ಕಾಳಜಿಯಿದ್ದರೂ ಅದನ್ನು ಕಾರ್ಯಗತಗೊಳಿಸಲು ಬೇಕಿರುವ ದುಡಿಮೆ, ಚಾಣಾಕ್ಷತನ ಮತ್ತು ಬದ್ಧತೆಯನ್ನು ಸಿದ್ದರಾಮಯ್ಯನವರು ತೋರಿಲ್ಲ. ಅಧಿಕಾರಿಗಳನ್ನು ಹುರಿದುಂಬಿಸಿ, ನಿರ್ದೇಶಿಸಿ, ಹದ್ದುಬಸ್ತಿನಲ್ಲಿಟ್ಟು ಅವರಿಂದ ಕೆಲಸಗಳನ್ನು ತೆಗೆಯುವ ತಾಳ್ಮೆ ಮತ್ತು ಗಂಭೀರತೆಯಿಲ್ಲ. ಮುಖ್ಯಮಂತ್ರಿ ಹುದ್ದೆಯ ಪ್ರಾಮುಖ್ಯತೆ ಮತ್ತು ರಾಜ್ಯದ ಅಭಿವೃದ್ಧಿಗೆ ತಮ್ಮ ಪದವಿಯ ಕೊಡುಗೆಯ ಅಗತ್ಯವನ್ನೇ ಸಿದ್ದರಾಮಯ್ಯನವರು ಅರಿಯಲಿಲ್ಲ. ಗ್ರಾಮೀಣಭಾಗದಿಂದ ಬಂದ ಕಾರಣದಿಂದಲೋ, ವಿದ್ಯಾರ್ಹತೆ, ಅನುಭವದ ಕೊರತೆಯಿಂದಲೋ ಅಥವಾ ಆಧುನಿಕ ಜಗತ್ತಿನ ಜೀವನಾನುಭವದ ಪರಿಚಯವಿಲ್ಲದ್ದರಿಂದಲೋ ಕರ್ನಾಟಕದಂತಹ ಉತ್ತಮ ರಾಜ್ಯವೊಂದರ ಮುಖ್ಯಮಂತ್ರಿ ಪದವಿಯನ್ನು ಸಿದ್ದರಾಮಯ್ಯನವರು ಅಲಂಕರಿಸಲೇ ಇಲ್ಲ. ಹುದ್ದೆಯ ಐದು ವರ್ಷಗಳನ್ನು ಕ್ಷುಲ್ಲಕ ಸ್ಪರ್ಧಾ ರಾಜಕೀಯದ ವಿಷಯಗಳನ್ನು ಕೆಣಕುತ್ತಾ ಕಳೆದುಬಿಟ್ಟರು. ರಾಜ್ಯದ ಅಭಿವೃದ್ಧಿಯ ವಿಷಯಕ್ಕೆ ಮುಖ್ಯಮಂತ್ರಿಯಾಗಿ ಯಾವುದೇ ಹೊಸತನ, ಶ್ರಮ ಅಥವಾ ಹುರುಪು ತೋರದೇ ಕಳೆದುಬಿಟ್ಟರು.

ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗದಿದ್ದರೂ, ಬಿಜೆಪಿ ವಿರೋಧ ಪಕ್ಷಗಳನ್ನು ರಾಜಕೀಯವಾಗಿ ಮುನ್ನಡೆಸಲು ಸಶಕ್ತರು. ಮುಖ್ಯಮಂತ್ರಿ ಕಛೇರಿಗಿಂತಲೂ ಕರ್ನಾಟಕದ ಹಳ್ಳಿ— ಹೋಬಳಿಗಳ ಬೀದಿಗಳಲ್ಲಿ ನಡೆಯುವ ರಾಜಕೀಯದಂತೆಯೇ ಹೆಚ್ಚು ಆರಾಮದಾಯಕವಾಗಿ ಕಾಣುವ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದರೆ ಆಶ್ಚರ್ಯಪಡಬೇಕಿಲ್ಲ.

ಇವರು ಬಿ.ಎಸ್.ಯಡ್ಯೂರಪ್ಪ

ಎಪ್ಪತ್ತೈದು ವಸಂತಗಳನ್ನು ಕಂಡಿರುವ ಯಡ್ಯೂರಪ್ಪನವರು 1970ರಿಂದ ಜನಸಂಘ, ಆರೆಸೆಸ್ ಮತ್ತು ಬಿಜೆಪಿಯೊಂದಿಗೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದವರಾದ ಯಡ್ಯೂರಪ್ಪ, ಶಿಕಾರಿಪುರದ ರೈಸ್ ಮಿಲ್ ಸಾಹುಕಾರರ ಮಗಳನ್ನು ಮದುವೆಯಾಗಿ ಶಿವಮೊಗ್ಗ ಜಿಲ್ಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1983ರಿಂದ ಶಿಕಾರಿಪುರದ ಶಾಸಕರಾಗಿ ಹಾಗೂ ಶಿವಮೊಗ್ಗ ಸಂಸದರಾಗಿ ಅಪಾರ ಅನುಭವ ಹೊಂದಿದ್ದಾರೆ. ಪಕ್ಷದ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಮೇ 2008ರಿಂದ ಜುಲೈ 2011ರವರೆಗೆ ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದರು. ನವೆಂಬರ್ 2012ರಲ್ಲಿ ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದ್ದ ಯಡ್ಯೂರಪ್ಪ 2014ರ ಜನವರಿಯಲ್ಲಿ ತಮ್ಮ ಪಕ್ಷವನ್ನು ಮಾತೃಪಕ್ಷಕ್ಕೆ ವಿಲೀನಗೊಳಿಸಿದ್ದರು. 2016ರ ಏಪ್ರಿಲ್‍ನಿಂದ ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ಯಡ್ಯೂರಪ್ಪ 2018ರ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿದ್ದಾರೆ.

ಯಡ್ಯೂರಪ್ಪನವರೊಬ್ಬ ಛಲಬಿಡದ ತ್ರಿವಿಕ್ರಮ. ಜನಸಂಘ ಹಾಗೂ ಬಿಜೆಪಿಗೆ ಕರ್ನಾಟಕದಲ್ಲಿ ಯಾವುದೇ ನೆಲೆಯಿಲ್ಲದ ಸಮಯದಲ್ಲಿ ಕೂಡ ಪಕ್ಷದ ತತ್ವಸಿದ್ಧಾಂತಗಳಿಗೆ ನಿಷ್ಠೆ ತೋರುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆ ಹಾಗೂ ಬೇರೂರುವಿಕೆಯ ಪೂರ್ಣ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಅಧಿಕಾರಕ್ಕಾಗಿ ಬೇರೆ ಪಕ್ಷ ಸೇರುವ ಹಲವಾರು ಅವಕಾಶಗಳ ನಡುವೆಯೂ ಯಡ್ಯೂರಪ್ಪ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆಂಬ ಛಲದಲ್ಲಿ ಅಕ್ಷರಶಃ ವಿಷಕಂಠನಾಗಿದ್ದಾರೆ. ಬಿಜೆಪಿಯ ಪುರೋಹಿತಶಾಹಿಗಳ ವಿರೋಧ, ಕುಹಕ ಹಾಗೂ ಕಡೆಗಣನೆಯ ಮಧ್ಯದಲ್ಲಿಯೂ ತಾಳ್ಮೆಗೆಡದೆ ಪಕ್ಷನಿಷ್ಠೆ ತೋರಿದ್ದಾರೆ. ತಮ್ಮ ನಲವತ್ತು ವರ್ಷಗಳ ರಾಜಕೀಯ ಹೋರಾಟಕ್ಕೆ ಅನ್ಯಾಯ ಆಗಿದೆಯೆಂದು ಪಕ್ಷ ತೊರೆದು ಕೆಜೆಪಿ ಕಟ್ಟಿದರೂ, ಹಳೆಯ ಪಕ್ಷದಿಂದ ಗೌರವಾನ್ವಿತ ಆಮಂತ್ರಣ ಬಂದ ತಕ್ಷಣದಲ್ಲಿ ಪಕ್ಷಕ್ಕೆ ಮರಳಿದ್ದಾರೆ.

ಯಡ್ಯೂರಪ್ಪನವರು ಸ್ವಾಮಿನಿಷ್ಠರು ಹೇಗೆಯೋ ಅದೇ ರೀತಿಯಲ್ಲಿ ಬೆಂಬಲಿಗರಿಗೆ ಜೀವ ಕೊಡುವ ನಂಬಲರ್ಹ ನಾಯಕರು. ತಾನು ಮೋಸ ಹೋದರೂ ಬೇರೆಯವರಿಗೆ ಮೋಸ ಮಾಡದ ಉದಾತ್ತ ನಾಯಕರು. ಕರ್ನಾಟಕದ ಜನತೆಗೆ ತಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಬೇಕೆನ್ನುವ ಮನಸ್ಸುಳ್ಳವರು. ವಿಶೇಷವಾಗಿ ರೈತರಿಗೆ ಹಾಗೂ ನಿರ್ಗತಿಕರಿಗೆ ‘ಏನನ್ನಾದರೂ ಒಳ್ಳೆಯದನ್ನು’ ಮಾಡಬೇಕೆನ್ನುವ ಹಂಬಲ ಉಳ್ಳವರು.

ಆದರೆ ನಲವತ್ತು ವರ್ಷಗಳ ಕಾಲ ಕೇವಲ ವಿರೋಧಪಕ್ಷದಲ್ಲಿದ್ದು ಏಕಾಏಕಿ ಅಧಿಕಾರಕ್ಕೆ ಬಂದ ವರ್ಷಗಳಲ್ಲಿ ಯಡ್ಯೂರಪ್ಪನವರು ಮಾಡಿದ ತಪ್ಪುಗಳು ಅನೇಕ. ವಾಣಿಜ್ಯ—ಉದ್ಯಮ—ಕಾನೂನುಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದ ಹಲವಾರು ಲೋಪಗಳೂ ಘಟಿಸಿದ್ದವು. ಯಡ್ಯೂರಪ್ಪನವರು ಹಲವಾರು ಆಪಾದನೆ— ಮೊಕದ್ದಮೆ—ಜೈಲುವಾಸಗಳನ್ನೂ ಎದುರಿಸಬೇಕಾಯಿತು. ಅಧಿಕಾರದಲ್ಲಿದ್ದ ಸಮಯದಲ್ಲಿ ಜಾತೀಯತೆಯ ಆಪಾದನೆಗಳನ್ನು ಮೈಮೇಲೆ ಎಳೆದುಕೊಂಡರು. ಹಲವು ಸ್ವ—ನಿರ್ಮಿತ ನಾಯಕರಿಗೆ ಬಾಧಿಸುವ ‘ಪರ್ಸಿಕ್ಯೂಶನ್ ಕಾಂಪ್ಲೆಕ್ಸ್’ಗೆ ಕೂಡಾ ಯಡ್ಯೂರಪ್ಪನವರು ಶಿಕಾರಿ. ಆಪ್ತರ ಬಾಯಿಚಪಲಕ್ಕೆ ಈಡಾಗುತ್ತಾರೆ, ಅವರದು ‘ಹಿತ್ತಾಳೆ ಕಿವಿ’ ಎಂಬ ಆಪಾದನೆ ಯಡ್ಯೂರಪ್ಪನವರಿಗೆ ಸಲ್ಲುತ್ತದೆ.

ಎಲ್ಲ ಆಪಾದನೆಗಳ ಮಧ್ಯೆಯೂ ಯಡ್ಯೂರಪ್ಪನವರು ಕರ್ನಾಟಕದ ಉದಾತ್ತ ಹಾಗೂ ಸಂವೇದನಾಶೀಲ ಧೀಮಂತ ನಾಯಕರಲ್ಲಿ ಒಬ್ಬರು. 2008ರಿಂದ 13ರ ಸಮಯದಲ್ಲಿ ತಾವು ಮಾಡಿದ ಹಲವು ತಪ್ಪುಗಳಿಂದ ಪಾಠ ಕಲಿತವರಂತೆ ಕಾಣುತ್ತಿರುವ ಯಡ್ಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ ಕರ್ನಾಟಕ ಸರ್ಕಾರದಲ್ಲಿ ಜನಪರ ಆಡಳಿತ ಹಾಗೂ ಚೈತನ್ಯಶೀಲತೆ ಕಾಣಬಹುದು.

ಇವರು ಹೆಚ್.ಡಿ.ಕುಮಾರಸ್ವಾಮಿ

ಐವತ್ತೆರಡರ ಹರೆಯದ ಹೆಚ್.ಡಿ.ಕುಮಾರಸ್ವಾಮಿಯವರು ರಾಜಕೀಯ ಕುಟುಂಬದಿಂದ ಬಂದ ಕಾರಣದಿಂದ ಹುಟ್ಟಿನಿಂದಲೇ ರಾಜಕೀಯ ಪ್ರವೇಶಿಸಿದರು ಎಂದು ಹೇಳಬೇಕು. ತಂದೆ ದೇವೇಗೌಡರ ಮೂರನೇ ಮಗನಾಗಿ ಬೆಳೆದ ಕುಮಾರಸ್ವಾಮಿ, ಅಧಿಕೃತವಾಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕುವ ಮೊದಲು ಚಲನಚಿತ್ರ ನಿರ್ಮಾಣ, ಹಂಚಿಕೆ, ಪ್ರದರ್ಶನದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿ 1996ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಮತ್ತು 1999ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡು ಹಿನ್ನಡೆ ಅನುಭವಿಸಿದ್ದರು. 2004ರಲ್ಲಿ ರಾಮನಗರ ಕ್ಷೇತ್ರದಿಂದ ಮತ್ತೆ ಗೆದ್ದು ಬಂದ ಕುಮಾರಸ್ವಾಮಿ ತಮ್ಮ ತಂದೆಯ ವಿರುದ್ಧವೇ ಬಂಡೆದ್ದು 2006ರಲ್ಲಿ ಬಿಜೆಪಿ ಜೊತೆ ಕೈಗೂಡಿಸಿ ಮುಖ್ಯಮಂತ್ರಿಯಾದರು. ತಮ್ಮ 20 ತಿಂಗಳುಗಳ ಕಾಲಾವಧಿಯಲ್ಲಿ ತಮ್ಮ ಚುರುಕುತನ, ಗ್ರಾಮವಾಸ್ತವ್ಯ ಹಾಗೂ ಜನಪ್ರಿಯ ಆಡಳಿತ ಶೈಲಿಯಿಂದ ಎಲ್ಲರ ಮನ ಗೆದ್ದಿದ್ದರು. ಆದರೆ 20 ತಿಂಗಳ ನಂತರ ತಾವೇ ನೀಡಿದ್ದ ವಾಯಿದೆಯಂತೆ ಬಿಜೆಪಿಯ ಯಡ್ಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡದೆ ತಾವು ಮುಖ್ಯಮಂತ್ರಿಯಾಗಿ ಗಳಿಸಿದ್ದ ಜನಮನ್ನಣೆ ಕಳೆದುಕೊಂಡರು. ‘ವಚನಭ್ರಷ್ಟ’ರೆಂಬ ಅಪಖ್ಯಾತಿಗೆ ಗುರಿಯಾದರು. 1998ರಲ್ಲಿ ಪಕ್ಷದ ಹೀನಾಯ ಸೋಲಿಗೂ ಕಾರಣರಾದರು. ಅಂದಿನಿಂದಲೂ ತಮ್ಮ ಕುಟುಂಬಕ್ಕೆ ಅಂಟಿಕೊಂಡಿರುವ ‘ನಂಬಿಕೆದ್ರೋಹ’ ಮತ್ತು ‘ರಾಜಕೀಯ ಭಸ್ಮಾಸುರ’ ಕುಖ್ಯಾತಿಯಿಂದ ಹೊರಬರಲು ಕುಮಾರಸ್ವಾಮಿ ಇನ್ನಿಲ್ಲದ ಪ್ರಯತ್ನ ಪಟ್ಟಿದ್ದಾರೆ. ಆದರೆ 2014ರ ಚುನಾವಣೆಯ ಹೀನಾಯ ಸೋಲು ಮತ್ತು ಜೆಡಿಎಸ್ ಶಾಸಕರ ವಲಸೆಯ ಕಾರಣದಿಂದ ಕುಮಾರಸ್ವಾಮಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗಿಲ್ಲ. 2018ರ ಚುನಾವಣೆಯಲ್ಲಿ 50 ಸ್ಥಾನಗಳನ್ನಾದರೂ ಪಡೆದು ಮತ್ತೆ ಮುಖ್ಯಮಂತ್ರಿ ಪದವಿ ಪಡೆಯುವ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿರುವ ಕುಮಾರಸ್ವಾಮಿ ತಮ್ಮ ವಿನ್ಯಾಸದಲ್ಲಿ ಯಶಸ್ಸು ಕಂಡರೆ ಯಾರೂ ಅಚ್ಚರಿಪಡಬೇಕಾಗಿಲ್ಲ.

ಕುಮಾರಸ್ವಾಮಿ ಮೂಲತಃ ಒಬ್ಬ ಒಳ್ಳೆಯ ವ್ಯಕ್ತಿ, ಸ್ನೇಹಿತ. ದೇವೇಗೌಡರ ಕುಟುಂಬದಲ್ಲಿ ಯಾರನ್ನಾದರು ನಂಬಬಹುದಾದರೆ ಅದು ಕುಮಾರಸ್ವಾಮಿಯವರನ್ನು ಮಾತ್ರ. ದಿನ—ರಾತ್ರಿಯಿಡೀ ಕೆಲಸ ಮಾಡುವ, ಜನರನ್ನು ಸೇರಿಸುವ, ರಾಜಕೀಯ ವ್ಯೂಹರಚನೆ ಮಾಡುವ ಹಾಗೂ ಕ್ಷಿಪ್ರ ನಿರ್ಣಯ ತೆಗೆದುಕೊಳ್ಳುವ ಅರ್ಹತೆ ಕುಮಾರಣ್ಣನಿಗಿದೆ. ಎಲ್ಲರ ಬಳಿ ಸಹಜವಾಗಿ ಬೆರೆತು, ಎಲ್ಲರೊಡನೆ ಅಣ್ಣ—ತಮ್ಮ—ಮಿತ್ರ ಬಾಂಧತ್ವ ಸಾಧಿಸುವ ನಿರರ್ಗಳತೆಯಿದೆ. ಉದ್ಯಮ, ವ್ಯಾಪಾರದ ಪರಿಚಯವಿದ್ದು ರಾಜ್ಯದ ಅಭಿವೃದ್ಧಿ ಅಗತ್ಯಗಳ ಬಗ್ಗೆ ಸಾಕಷ್ಟು ಅರಿವಿದೆ. ತಂದೆಯಷ್ಟು ಅನುಭವ, ಚಾಣಾಕ್ಷತನ, ಮುತ್ಸದ್ದಿತನವಿಲ್ಲವಾದರು ತಂದೆ ಮಾತಿನ ಮರ್ಮ ಅರಿಯುವ ಬುದ್ಧಿವಂತಿಕೆಯಿದೆ. ಸಾಧನೆಗೆ ಬೇಕಾದ ತಂಡಕಟ್ಟುವ ನಾಯಕಗುಣವಿದೆ. ರಾಜಕೀಯದಲ್ಲಿ ಸ್ವಾಭಾವಿಕ ಏಳುಬೀಳುಗಳನ್ನು ಹಿಂದಿಕ್ಕಿ ಎಲ್ಲವನ್ನು ಸರಿಪಡಿಸಿಕೊಳ್ಳುವ ಚಿಕಿತ್ಸಕ ಗುಣವಿದೆ. ಎಲ್ಲರನ್ನೂ ‘ಬ್ರದರ್’ ಮಾಡಿಕೊಂಡು ಮುನ್ನುಗ್ಗುವ ಛಾತಿಯಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಒಬ್ಬ ನಾಯಕನಿಗೆ ಬೇಕಾದ ಬಹುತೇಕ ಗುಣಗಳಿವೆ.

ಕುಮಾರಸ್ವಾಮಿಯವರ ಅವಿಭಾಜಿತ ಕುಟುಂಬವೇ ಅವರ ಆಸ್ತಿ ಮತ್ತು ಋಣಭಾರ. ಪ್ರಭಾವಿ ಸಮುದಾಯವೊಂದರ ಪ್ರಶ್ನಾತೀತ ನಿಷ್ಠೆ ಮತ್ತು ಬೆಂಬಲ ದೊರೆತಿದ್ದರೂ ‘ನಂಬಿಕೆದ್ರೋಹ’ದ ನಾಯಿನೆರಳು ಕುಮಾರಸ್ವಾಮಿಯವರನ್ನು ಬಿಟ್ಟಿಲ್ಲ. ತಮ್ಮ ಎಡಬಲದ ರಾಜಕೀಯ ಮುಖಂಡರನ್ನೇ ತಮ್ಮ ಬಳಿ ಇಟ್ಟುಕೊಳ್ಳಲಾಗದ ವಿಚಿತ್ರ ರಾಜಕೀಯ ದುರಾದೃಷ್ಟ ಕುಮಾರಸ್ವಾಮಿಯವರನ್ನು ಕಾಡಿದೆ. 2018ರ ಚುನಾವಣೆಯಲ್ಲಿ 50 ಸ್ಥಾನಗಳನ್ನು ಪಡೆದರೂ, ಐದು ವರ್ಷಗಳ ಕಾಲ ಆ ಸಂಖ್ಯೆಯನ್ನು ಉಳಿಸಿಕೊಂಡು ಹೋಗುತ್ತಾರೆನ್ನುವ ಖಾತ್ರಿಯಲ್ಲಿ ಕಾಂಚಾಣದ ನೃತ್ಯದ ಮುಂದೆ ಪಾರಾಗುತ್ತಾರೆನ್ನುವ ದುರ್ಬಲತೆಯ ದೂರೂ ಇದೆ. ಹೆಚ್ಚೇನೂ ವಯಸ್ಸಾಗಿಲ್ಲದಿದ್ದರೂ ಅರೋಗ್ಯವನ್ನು ಸರಿಯಾಗಿ ನೋಡಿಕೊಂಡಿಲ್ಲ. ಅವರ ಮನೆಯ ಒಳಗಿನಿಂದಲೇ ಅವರನ್ನು ಪದಚ್ಯುತಗೊಳಿಸಿ ಮುಂದಿನ ಪೀಳಿಗೆಯ ಪರ್ಯಾಯ ನಾಯಕತ್ವವನ್ನು ಬೆಳಸಬೇಕೆನ್ನುವ ಹುನ್ನಾರವಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ನಾಣ್ಣುಡಿಯಂತೆ ಕುಮಾರಸ್ವಾಮಿಯವರು ತಮ್ಮ ನೆರಳನ್ನೂ ನಂಬಲಾಗದ ಪರಿಸ್ಥಿತಿಯಿದೆ.

ಆದರೂ ಕುಮಾರಸ್ವಾಮಿಯವರ ನಾಯಕತ್ವ ಗುಣ ಮತ್ತು ರಾಜಕೀಯ ಚೈತನ್ಯಶೀಲತೆ ಅವರ ಕೈಹಿಡಿಯುವ ಸಂಭವವಿದೆ. ಹಿಂದಿನ ತಪ್ಪುಗಳನ್ನು ಮರೆಮಾಚುವಂತೆ ದಕ್ಷಿಣ ಕರ್ನಾಟಕದ ಧೃವೀಕೃತ ಸನ್ನಿವೇಶ ಕುಮಾರಸ್ವಾಮಿಯವರಿಗೆ ಮತ್ತೊಮ್ಮೆ ರಾಜಕೀಯ ಶಕ್ತಿಯನ್ನು ಧಾರೆಯೆರೆಯುವ ದಟ್ಟ ಸಾಧ್ಯತೆಗಳಿವೆ. ಈ ಬಾರಿ ದೊರಕಬಹುದಾದ ರಾಜಕೀಯ ಅವಕಾಶವನ್ನು ಕಳೆದುಕೊಂಡರೆ ಕುಮಾರಸ್ವಾಮಿಯಷ್ಟು ಅವಿವೇಕಿ ಹಾಗೂ ನತದೃಷ್ಟ ಕರ್ನಾಟಕದ ರಾಜಕೀಯದಲ್ಲಿ ಬೇರೊಬ್ಬರಿಲ್ಲ ಎಂದು ಹೇಳಬೇಕಾಗುತ್ತದೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018